ಶಿವಶರಣರ ಸಂದೇಶ

 ಹರ್ಡೆಕರ ಮಂಜಪ್ಪನವರು

 

ಈ ಪ್ರಪಂಚದಲ್ಲಿ ಮನುಷ್ಯನು ಸುಖ ಶಾಂತಿಗಳಿಂದ ಜೀವಿಸಬೇಕೆಂದು ಅನೇಕ ಮಹಾತ್ಮರು ಪ್ರತಿಯೊಂದು ಕಾಲದಲ್ಲಿಯೂ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆ ಎಲ್ಲ ಪ್ರಯತ್ನಗಳೂ ಮನುಷ್ಯ ಜಾತಿಯ ಸುಖಸಮಾಧಾನಗಳನ್ನು ಹೆಚ್ಚಿಸಲು ಕಾರಣವಾಗಿಯೂ ಪರಿಣಮಿಸಿದವು. ಆದರೆ ಆ ಸುಖಶಾಂತಿಗಳು ಮಾತ್ರ ಸ್ಥಿರಗೊಳ್ಳಲಿಲ್ಲ ಮತ್ತು ಸ್ಥಿರಗೊಳ್ಳುವುದೂ ಇಲ್ಲ. ಏಕೆಂದರೆ, ಮನುಷ್ಯ ಪ್ರಾಣಿಯು ಬೇರೆ ಪ್ರಾಣಿಗಳಂತೆ ಕ್ಲೃಪ್ತವಾದ ಇಚ್ಛಾಸ್ಥಿತಿ ಪರಿಮಿತಿಗಳಿಂದ ಕೂಡಿರುವುದಿಲ್ಲ. ಆದುದರಿಂದ ಸುಖ ಶಾಂತಿಗಳನ್ನು ಪ್ರಸ್ಥಾಪಿಸಲು ಯಾವಾಗಲೂ ಸಾಧನೋಪಾಯಗಳನ್ನು ವ್ಯತ್ಯಸ್ತಗೊಳಿಸುತ್ತಿರಬೇಕಾಗುತ್ತದೆ. ಒಂದು ಕಾಲದಲ್ಲಿ ಅವಶ್ಯಕವೆಂದು ಏರ್ಪಟ್ಟ ಸಾಧನೋಪಾಯಗಳು ಇನ್ನೊಂದು ಕಾಲದಲ್ಲಿ ಅನಾವಶ್ಯಕವಾಗಿ ಪರಿಣಮಿಸುತ್ತವೆ. ಒಂದು ಪ್ರಸಂಗದಲ್ಲಿ ಸುಖ ಶಾಂತಿಗಳನ್ನುಂಟು ಮಾಡಿದ ನಿಯಮಾಚಾರಗಳು ಇನ್ನೊಂದು ಪ್ರಸಂಗದಲ್ಲಿ ದುಃಖ ಅಶಾಂತತೆಗಳನ್ನೇ ಉಂಟು ಮಾಡುತ್ತವೆ. ಆದುದರಿಂದ ಒಂದು ಸಮಯದಲ್ಲಿ ಯಾವ ಆಚಾರ ವಿಚಾರಗಳನ್ನು ಜನಾಂಗದಲ್ಲುಂಟುಮಾಡುವುದು ಮಹತ್ಕಾರ್ಯವಾಗಿ ಪರಿಣಮಿಸುತ್ತದೆಯೋ ಅವೇ ಆಚಾರ ವಿಚಾರಗಳನ್ನು ಇನ್ನೊಂದು ಸಮಯದಲ್ಲಿ ನಿವಾರಣೆ ಮಾಡುವುದು ಮಹತ್ಕಾರ್ಯವಾಗಿ ಪರಿಣಮಿಸುವುದು. ಈ ಪ್ರಕಾರ ಮನುಷ್ಯಜಾತಿಯ ಸುಖಶಾಂತಿಗಳಿಗಾಗಿ ಕಾಲ ಭಿನ್ನತ್ವದಂತೆ ಕಾರ್ಯ ಭಿನ್ನತ್ವವೂ ಅವಶ್ಯಕವಾಗಿ ಸಂಭವಿಸುವುದು.

ಬಾಲ್ಯದಲ್ಲಿ ಉಪಯೋಗಿಸಿದ ಉಡಿಗೆ ತೊಡಿಗೆಗಳನ್ನೇ ಯೌವನದಲ್ಲಿಯೂ ಉಪಯೋಗಿಸಲಿಕ್ಕೆ ಬರುತ್ತದೆಯೇ?   ಶೀತಕಾಲದಲ್ಲಿ ಉಪಯೋಗಿಸುತ್ತಿದ್ದ ಬಟ್ಟೆಗಳನ್ನು ಬೇಸಿಗೆಯ ಕಾಲದಲ್ಲಿಯೂ ಉಪಯೋಗಿಸಬಹುದೇ? ಕಾಲ ಸ್ಥಿತಿಗಳಂತೆ ಇವುಗಳನ್ನು ಬೇರೆ ಮಾಡುವುದೇ ಹೇಗೆ ಕ್ಷೇಮಕರವಾಗಿದೆಯೋ ಹಾಗೆಯೇ ಕಾಲಸ್ಥಿತಿಗಳಿಗನುಗುಣವಾಗಿ ಸಾಧನೋಪಾಯಗಳನ್ನು ಭಿನ್ನಗೊಳಿಸುವುದೇ ಜನಾಂಗದ ಸುಖಶಾಂತಿಗಳಿಗೆ ಕಾರಣವಾಗಿದೆ. ಮನುಷ್ಯನು ಕಾಲಸ್ಥಿತಿಗಳಿಗನುಸರಿಸಿ ತನ್ನ ಉಡುಪಿನಲ್ಲಿ ಎಷ್ಟೇ ವ್ಯತ್ಯಸ್ತ ಮಾಡಿಕೊಂಡರೂ ಬಟ್ಟೆಯು ಮಾತ್ರ ಹೇಗೆ ಬೇಕೇ ಬೇಕಾಗಿದೆಯೋ ಹಾಗೆಯೇ ಜನಾಂಗದ ಸುಖಶಾಂತಿಗಳಿಗಾಗಿ ಎಷ್ಟೋ ಭಿನ್ನ ಪ್ರಯತ್ನಗಳು ನಡೆದರೂ ಅವುಗಳಿಗೆಲ್ಲ ಮೂಲ ಭೂತವಾದ ನೈತಿಕ ಬಲವು ಮಾತ್ರ ಬೇಕೇ ಬೇಕಾಗುತ್ತದೆ.

ಭಗವಾನ್ ಬುದ್ಧದೇವರು ಎರಡು ಸಾವಿರ ವರ್ಷಗಳ ಪೂರ್ವದಲ್ಲಿ ಮಾಡಿದ ಧರ್ಮ ಪ್ರಸಾರವಾಗಲಿ, ಹನ್ನೆರಡನೆಯ ಶತಮಾನದಲ್ಲಿ ಮಹಾನುಭಾವರಾದ ಬಸವಣ್ಣನವರು ಮಾಡಿದ ಸಮಾಜ ಸುಧಾರಣೆಯಾಗಲಿ, ಈ ಇಪ್ಪತ್ತನೆಯ ಶತಮಾನದಲ್ಲಿ ಮಹಾತ್ಮಾ ಗಾಂಧಿಯವರು ಮಾಡುತ್ತಿರುವ ರಾಜಕೀಯ ಕ್ರಾಂತಿಯಾಗಲಿ ಎಷ್ಟೇ ಭಿನ್ನ ಸ್ವರೂಪದವುಗಳಾಗಿ ತೋರಿದರೂ ಅವುಗಳ ಸಾಧನೋಪಾಯಗಳು ಎಷ್ಟೇ ವ್ಯತ್ಯಸ್ತವಾಗಿದ್ದರೂ ಅವುಗಳಲ್ಲೆಲ್ಲಾ ಮನುಷ್ಯ ಜಾತಿಯ ಸುಖಶಾಂತಿಗಳಿಗೆ ಮೂಲಾಧಾರವಾದ ಸಮಾನತ್ವ ಮತ್ತು ಸ್ವಾತಂತ್ರ್ಯ ತತ್ವಗಳು ಮಾತ್ರ ಸಂಪೂರ್ಣವಾಗಿ ಇದ್ದೇ ಇವೆ. ಈ ಉಭಯ ತತ್ವಗಳು ಧಾರ್ಮಿಕ ವಿಷಯದಲ್ಲಾಗಲಿ ಅಥವಾ ಸಾಮಾಜಿಕ ವಿಷಯದಲ್ಲಾಗಲಿ, ಇಲ್ಲವೆ ರಾಜಕೀಯ ಸಂಗತಿಗಳಲ್ಲಾಗಲಿ ಯಾವ ಪ್ರಮಾಣದಂತೆ ಕಡಿಮೆಯಾಗುತ್ತವೆಯೋ ಆ ಪ್ರಮಾಣ ದಂತೆ ಜನಾಂಗದಲ್ಲಿ ಸುಖಶಾಂತಿಗಳೂ ಕಡಿಮೆಯಾಗುತ್ತವೆ. ಆಗ ಈ ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನು ಜನಾಂಗದಲ್ಲಿ ಪುನಃ ಪ್ರಸ್ತಾಪಿಸಲು ಮಹಾಮಹಾ ವಿಭೂತಿಗಳು ಆಗಿನ ಸ್ಥಿತಿಗನುಗುಣವಾದ ಭಿನ್ನ ಭಿನ್ನ ಬಾಹ್ಯ ಸಾಧನೋಪಾಯಗಳಿಂದ ಪ್ರಯತ್ನಿಸುತ್ತಾರೆ. ಏಕೆಂದರೆ, ಸಮಾನತ್ವ ಮತ್ತು ಸ್ವಾತಂತ್ರ್ಯ ಗಳಲ್ಲಿಯೇ ಸುಖ ಮತ್ತು ಶಾಂತಿಗಳಿವೆಯೆಂಬುದು ಮನುಷ್ಯ ಜಾತಿಯ ಬಹುಕಾಲದ ಅನುಭವದಿಂದ ಸಿದ್ಧವಾದ ಸಂಗತಿಯಾಗಿದೆ.

ಈ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ವ್ಯಕ್ತಿಗೆ ಹೇಗೆ ಪ್ರಾಪ್ತವಾಗುತ್ತವೆ? ಇವುಗಳನ್ನು ಜನಾಂಗದಲ್ಲಿ ಹೇಗೆ ಪ್ರಸ್ತಾಪಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ನಮ್ಮ ಶಿವಶರಣರ ಸಂದೇಶವೇ ಉತ್ತರವಾಗಿದೆ. ದೇಶ, ಜಾತಿ, ಉದ್ಯೋಗ, ಸಂಪತ್ತು ಮೊದಲಾದ ಕೃತ್ರಿಮ ಸಾಧನ ಸೌಲಭ್ಯಗಳಿಂದ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ವ್ಯಕ್ತಿಗೆ ಪ್ರಾಪ್ತವಾಗಬಾರದು. ಒಂದು ದೇಶದವರೆಂದಾಗಲಿ ಅಥವಾ ಒಂದು ಜಾತಿಯವರೆಂದಾಗಲಿ ಇಲ್ಲವೆ ಉದ್ಯೋಗ ಸಂಪತ್ತುಗಳ ಬಲದಿಂದಾಗಲಿ ಶ್ರೇಷ್ಠ ಕನಿಷ್ಠರೆಂದು ಎಣಿಸಬಾರದು. ಮನುಷ್ಯನಿಗೆ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ಆತನಲ್ಲಿರುವ ನೈತಿಕ ಬಲದಿಂದಲೇ ಪ್ರಾಪ್ತವಾಗಬೇಕು. ಈ ನೈತಿಕ ಬಲವನ್ನು ಪ್ರಪಂಚದಲ್ಲಿ ಪ್ರಸ್ತಾಪಿಸುವವರೇ ಮನುಷ್ಯ ಜಾತಿಯ ಸುಖಶಾಂತಿಗಳನ್ನು ಹೆಚ್ಚಿಸುತ್ತಾರೆ. ಒಂದು ವ್ಯಕ್ತಿಯಲ್ಲಾಗಲಿ ಅಥವಾ ಒಂದು ಜನಾಂಗದಲ್ಲಾಗಲಿ ನೈತಿಕ ಬಲವಿಲ್ಲದಿದ್ದರೆ ಆ ವ್ಯಕ್ತಿಯು ಅಥವಾ ಜನಾಂಗವು ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನನುಭವಿಸಲು ಅಧಿಕಾರಿಯಲ್ಲ. ಈ ಸಮಾನತ್ವ ಮತ್ತು ಸ್ವಾತಂತ್ರ್ಯ ಗಳಿಲ್ಲದಿದ್ದ ಮೇಲೆ ಸುಖ ಮತ್ತು ಶಾಂತಿಗಳು ದೊರೆಯುವುದೆಂತು? ಆದಕಾರಣ ಯಾವ ವ್ಯಕ್ತಿಯು ಅಥವಾ ಜನಾಂಗವು ಸುಖ ಮತ್ತು  ಶಾಂತಿಗಳನ್ನಪೇಕ್ಷಿಸುತ್ತದೆಯೋ ಸುಖಶಾಂತಿಗಳು ಐಹಿಕವಾದವುಗಳೇ ಇರಲಿ ಅಥವಾ ಪಾರಲೌಕಿಕವಾದವುಗಳೇ ಇರಲಿ, ಮೊದಲು ನೈತಿಕ ಬಲವನ್ನು ಸಂಪಾದಿಸಬೇಕು. ಆ ನೈತಿಕ ಬಲದ ನ್ಯೂನಾಧಿಕಗಳ ಮೇಲಿಂದಲೇ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ಪ್ರಾಪ್ತವಾಗ ಬೇಕು. ಈ ನೈತಿಕ ಬಲದ ವಿನಾ ಮನುಷ್ಯನಿಗೆ ಇಹಲೋಕದ ಸುಖಶಾಂತಿಗಳೇ ದೊರೆಯದಿದ್ದ ಮೇಲೆ ಪರಲೋಕದ ಮಾತೇಕೆ ? ನೈತಿಕ ಬಲವಿಲ್ಲದವರಿಗೆ ಸುಖಶಾಂತಿಗಳಿಲ್ಲವೆಂಬುದೇ ನಮ್ಮ ಶಿವಶರಣರ ಸಂದೇಶವು, ನೈತಿಕ ಬಲವಿಲ್ಲದವರಿಗೆ ಮನುಷ್ಯರೇ ಮೆಚ್ಚದಿರುವಾಗ ಶಿವನು ಮೆಚ್ಚುವನೇ? ಶಿವನನ್ನು ಒಲಿಸಿಕೊಳ್ಳ ಬೇಕೆಂಬುವವರು ಮೊದಲು ನೈತಿಕ ಬಲಶಾಲಿಗಳಾಗಬೇಕು. ಆದುದರಿಂದ ಮಹಾನುಭಾವರಾದ ಬಸವಣ್ಣನವರು ಈ ಪ್ರಕಾರ ಮನುಷ್ಯಜಾತಿಗೆ ತಮ್ಮ ಸಂದೇಶವನ್ನು ಸೂಚಿಸಿದ್ದಾರೆ.

ಕಳಬೇಡ ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯವ ನುಡಿಯಲು ಬೇಡ. ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವ ನೊಲಿಸುವ ಪರಿ.

ಸತ್ಯ, ಅಹಿಂಸೆ, ಅಸ್ತೇಯ ಮೊದಲಾದ ನೈತಿಕ ಆಚರಣೆಗಳೇ ಸದಾಚಾರಗಳು. ಇವುಗಳಿಂದಲೇ ಮನುಷ್ಯನು ಪವಿತ್ರನೂ, ಪ್ರತಾಪಿಯೂ ಆಗುತ್ತಾನೆ. ಇವುಗಳ ವಿನಾ ಯಾವ ಸುಖಶಾಂತಿಗಳೂ ದೊರೆಯುವುದಿಲ್ಲ. ಕಳ್ಳತನ, ಸುಳ್ಳು, ಮೋಸ, ವ್ಯಭಿಚಾರಾದಿ ದುರಾಚಾರಗಳಲ್ಲಿರುವವರು ಎಷ್ಟೇ ಪೂಜೆ, ಜಪ, ತಪಗಳನ್ನು ಮಾಡಿದರೂ ವ್ಯರ್ಥವೇ ಸರಿ. ಅವರು ಯಾವ ಜಾತಿಯಲ್ಲಿ ಹುಟ್ಟಿದರೂ ಎಂಥ ಉದ್ಯೋಗ ಮಾಡುತ್ತಿದ್ದರೂ, ಎಷ್ಟು ಧನಿಕರಾಗಿದ್ದರೂ ಮನುಷ್ಯವರ್ಗದಲ್ಲಿ ಅತ್ಯಂತ ಕೀಳು ಸ್ಥಿತಿಯಲ್ಲಿರತಕ್ಕವರೇ ಸರಿ. ಇಂತಹ ನೈತಿಕ ಬಲವಿಲ್ಲದ ಅನಾಚಾರಿಗಳಿಗೆ ಶಿವನು ಒಲಿಯುವುದಿಲ್ಲವೆಂಬುದೇ ಶಿವಶರಣರ ಸಂದೇಶವು. ಆದುದರಿಂದ ಮಹಾಶಿವ ಶರಣರಾದ ಸಕಳೇಶ ಮಾದರಸರು ಈ ಪ್ರಕಾರ ಹೇಳಿದ್ದಾರೆ.

ಜನಮೆಚ್ಚಿ ಶುದ್ಧನಲ್ಲದೆ, ಮನಮೆಚ್ಚಿ ಶುದ್ಧನಲ್ಲವಯ್ಯ, ನುಡಿಯಲ್ಲಿ ಜಾಣನಲ್ಲದೆ ನಡೆಯಲ್ಲಿ ಜಾಣನಲ್ಲವಯ್ಯ, ವೇಷದಲ್ಲಿ ಅಧಿಕನಲ್ಲದೆ ಭಾಷೆಯಲ್ಲಿ ಅಧಿಕನಲ್ಲವಯ್ಯ. ಧನ ದೊರಕದೆ ನಿಸ್ಪೃಹನಲ್ಲದೆ ಧನದೊರಕಿ ನಿಸ್ಪೃಹನಲ್ಲವಯ್ಯ. ಏಕಾಂತದ್ರೋಹಿ. ಗುಪ್ತಪಾತಕಿ. ಯುಕ್ತಿ ಶೂನ್ಯಂಗೆ ಸಕಳೇಶ್ವರ ದೇವರು ಒಲಿ ಒಲಿ ಎಂದರೆ ಎಂತೊಲಿವನಯ್ಯ?

ಇದರ ಮೇಲಿಂದ ನೈತಿಕ ಬಲವಿಲ್ಲದವರ ಧರ್ಮಾಚಾರಗಳು ಡಂಭಾಚಾರಗಳಾಗಿಯೇ ಪರಿಣಮಿಸುತ್ತವೆಂದು ಶಿವಶರಣರು ಸ್ಪಷ್ಟವಾಗಿ ಹೇಳಿರುತ್ತಾರೆಂದು ಗೊತ್ತಾಗುವುದಿಲ್ಲವೇ ಧಾರ್ಮಿಕ ಶಕ್ತಿಯನ್ನೂ ಸುಖಾನಂದಗಳನ್ನು ಹೊಂದಲಪೇಕ್ಷಿಸುವ ಪ್ರತಿಯೊಂದು ವ್ಯಕ್ತಿಯೂ ಮೊದಲು ನೈತಿಕಚಾರನಿಷ್ಟನಾಗಲೇ ಬೇಕೆಂಬುದು ಸ್ಪಷ್ಟವಾಗುವುದಿಲ್ಲವೇ? ನಾವು ನಾನಾ ಅನೀತಿಗಳಿಂದ ಆಚರಿಸುತ್ತ ಧಾರ್ಮಿಕ  ವೇಷಭಾಷೆಗಳಿಂದ ಶೋಭಾಯಮಾನರಾದರೆ ಫಲವೇನು? ಶಿವನು ಮೆಚ್ಚುವನೇ? ಜನರನ್ನು ಮೋಸಗೊಳಿಸಿ ಧಾರ್ಮಿಕರೆಂದು ಹೇಳಿಸಿಕೊಳ್ಳುವುದೇ ಕಷ್ಟವಾಗಿರುವಾಗ ಶಿವನನ್ನು ಮೋಸಗೊಳಿಸುವ ಹವ್ಯಾಸವೇಕೆ? ಮಹಾನುಭಾವರಾದ ಬಸವಣ್ಣನವರು ಹೇಳಿರುವುದೇನಂದರೆ

ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ. ಪಾಪಿ ಹೂವನೇರಿಸಿದರೆ ಮಸೆದಾಯುಧದ ಗಾಯ. ಕೂಪರನಾರನೂ ಕಾಣೆ, ಮಾದರ ಚೆನ್ನಯ್ಯನಲ್ಲಿದೆ. ಕೂಪರನಾರನೂ ಕಾಣೆ ಡೋಹರ ಕಕ್ಕಯ್ಯನಲ್ಲದೆ. ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ ನಿಮ್ಮ ಪತ್ತಿಗರಿವರಯ್ಯ ಕೂಡಲಸಂಗಮದೇವ.

ಹೆಚ್ಚಿನ ಕುಲದವರೆಂದಾಗಲಿ ಹೆಚ್ಚು ಶಿವಪೂಜೆಯನ್ನು ಮಾಡುತ್ತಾರೆಂದಾಗಲಿ ಶಿವನು ಪ್ರೀತಿಸುವುದಿಲ್ಲ. ಮಾದಾರ ಚೆನ್ನಯ್ಯನವರೇ ಮೊದಲಾದ ಮಹಾಶಿವ ಶರಣರು ನೈತಿಕ ಬಲಶಾಲಿಗಳಾಗಿ ಶಿವನನ್ನು ಪೂಜಿಸಿದ್ದರಿಂದಲೇ ಆತನ ಪ್ರೀತಿಗೆ ಪಾತ್ರರಾದರು. ಕೋಪ ಪಾಪಗಳಿಂದ ಕೂಡಿದವರು ಯಾವ ಕುಲದವರಾಗಲಿ, ಅವರು ಎಂತಹ ವೈಭವದಿಂದ ಪೂಜೆಗಳನ್ನು ಮಾಡಲಿ., ಶಿವನಿಗೆ ಶಸ್ತ್ರದಿಂದ ಗಾಯಮಾಡಿದಂತೆಯೂ ಆತನ ಮೇಲೆ ರಕ್ತದ ಅಭಿಷೇಕವನ್ನು ಮಾಡಿದಂತೆಯೂ ಆಗುತ್ತದೆಂದು ಮಹಾನುಭಾವರಾದ ಬಸವಣ್ಣನವರು ಹೇಳಿರುವುದನ್ನು ನೋಡಿದರೆ ನಾವು ಮೊದಲು ನೈತಿಕ ಬಲಶಾಲಿಗಳಾಗಲು ಪ್ರಯತ್ನಿಸಬೇಕೆಂಬುದು ಗೊತ್ತಾಗುವುದಿಲ್ಲವೇ? ಪ್ರತಿನಿತ್ಯ ಎಷ್ಟು ಮಡಿಯಿಂದ ಲಿಂಗಪೂಜೆ ಮಾಡುತ್ತಿದ್ದರೂ ಅದರ ಫಲ ಪದಗಳು ಮಾತ್ರ ದೊರೆಯದಿರುವುದಕ್ಕೆ ಕಾರಣವೇನು ? ಪೂಜೆ ಮಾಡುವ ಕೈಗಳು ಪರಧನ ಪರದಾರಾದಿಗಳನ್ನು ಮುಟ್ಟಿ ಮಲಿನವಾಗಿರುವುದರಿಂದಲ್ಲವೆ ? ಮಂತ್ರವನ್ನುಚ್ಚರಿಸುವ ನಾಲಿಗೆಯು ಅಸತ್ಯ ದುರ್ಭಾಷಣಾದಿಗಳಿಂದ ಮೈಲಿಗೆಯಾಗಿರುವುದರಿಂದಲ್ಲವೇ ? ಆದಕಾರಣ ಮೊದಲು ನೈತಿಕ ಬಲಶಾಲಿಗಳಾಗಿರೆಂದೇ ಶಿವಶರಣರು ಸಾರಿಸಾರಿ ಹೇಳುತ್ತಿದ್ದಾರೆ.

ಮೊಟ್ಟೆ ಮೊಟ್ಟೆ ಪುಷ್ಪ ಪತ್ರೆಯ ತಂದು ಒಟ್ಟಿ ಒಟ್ಟಿ ಲಿಂಗವ ಪೂಜಿಸಿದಡೇನು? ತನುಮನಧನವ ಕೊಟ್ಟು ಹಿಂಗದನ್ನಕ್ಕರ? ಹುಸಿ, ಕಳವು, ಪರದಾರ, ವ್ಯಾಪಾರದಲ್ಲಿ ಹರಿದಾಡುವ ಮರುಳಬುದ್ಧಿಯ ದುರಾಚಾರಿಗಳಿಗೆ ದೂರವಾಗಿಪ್ಪನು ನೋಡಾ ನಮ್ಮ ಅಖಂಡೇಶ್ವರ.

ಪತ್ರೆ ಪುಷ್ಪಗಳನ್ನು ಕೂಡಿಸುವುದು ಸುಲಭ ಆದರೆ ಸತ್ಯ, ಶಮೆ, ದಮೆಗಳಿಂದ ಕೂಡಿದವರಾಗುವುದು ಕಠಿಣ. ಈ ಕಠಿಣ ಕಾರ್ಯವನ್ನು ಮಾಡದೆ ಸುಖಶಾಂತಿ ಗಳೆಂಬ ಹೆಚ್ಚಿನ ಫಲಗಳನ್ನು ಹೊಂದುವುದು ಶಕ್ಯವೇ? ಯಥೇಚ್ಛವಾಗಿ ಪತ್ರೆ ಪುಷ್ಪ ಗಳಿಂದ ಲಿಂಗಪೂಜೆಯನ್ನು ಮಾಡಿದ ಮಾತ್ರದಲ್ಲಿ ಶಿವನು ಮೆಚ್ಚುತ್ತಿದ್ದರೆ ಸತ್ಯಾದಿ ನೈತಿಕ ಆಚರಣೆಗಳನ್ನು ಆಚರಿಸಲು ಯಾರು ತಾನೇ ಪ್ರಯತ್ನಿಸುತ್ತಿದ್ದರು? ಶಿವಶರಣರಾದರೂ ಇಷ್ಟು ಒತ್ತಾಯದಿಂದ ನೈತಿಕ ಆಚರಣೆಗಳ ಕಡೆಗೆ ಲಕ್ಷಿಸಲು ಏಕೆ ಹೇಳುತ್ತಿದ್ದರು. ಮನುಷ್ಯನು ನೈಹಿಕ ಸಾಮರ್ಥ್ಯವನ್ನು ಹೊಂದಲು ಪ್ರಯತ್ನಿಸದೆ ಬಾಹ್ಯ ಡಂಭಾಚಾರಗಳಿಗೇನೇ ಮೋಸಹೋಗಿ ತನ್ನ ಜನ್ಮವನ್ನು ವ್ಯರ್ಥ ಮಾಡಿ ಕೊಳ್ಳಬಾರದೆಂಬ ಉದ್ದೇಶದಿಂದಲೇ ಶಿವಶರಣರು ಈ ಪ್ರಕಾರ ತೀಕ್ಷ್ಣವಾಣಿಯಿಂದ ಜನಾಂಗವನ್ನು ಎಚ್ಚರಗೊಳಿಸಿದ್ದಾರಲ್ಲವೇ? ಈಗ ನಾವು ಶಿವಶರಣರ ಸಂದೇಶವನ್ನು ಲಕ್ಷಿಸದ ಬಾಹ್ಯಾಡಂಬಾಚಾರಗಳಿಗೆ ಮರುಳರಾಗಿ ಅಧೋಗತಿ ಗೀಡಾಗುತ್ತಲಿದ್ದೇವೆ. ನಮ್ಮಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಮೊದಲಾದ ಯಾವ ಸಂಗತಿಗಳೂ ಫಲಕಾರಿಯಾಗದಿರುವುದಕ್ಕೆ ನಮ್ಮ ನೈತಿಕ ನಿರ್ಬಲತೇಯೇ ಮುಖ್ಯ ಕಾರಣವಾಗಿದೆ.

ಬಹು ಜನರು ಬಾಹ್ಯಾಡಂಬರದ ಅಚರಣೆಗಳಲ್ಲಿಯೇ ಮಗ್ನರಾಗಿದ್ದಾರೆಯೇ ವಿನಾಹ ತಮ್ಮ ನೈತಿಕ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾ ಇಲ್ಲ. ಪೂಜೆ, ಜಪ, ತಪ, ಅನುಷ್ಠಾನಗಳೆಂಬ ಬಾಹ್ಯ ವೇಷಭಾಷೆಗಳಿಗೆ ಮರುಳಾಗುವವರೇ ಸಮಾಜದಲ್ಲಿ ಹೆಚ್ಚಿರುವುದರಿಂದ ಧಾರ್ಮಿಕ ನಿಜಶಕ್ತಿಯನ್ನು ಹೊಂದುವ ಉತ್ಕಟೇಚ್ಛೆಯೇ ಉಂಟಾಗುತ್ತಾ ಇಲ್ಲ. ಜನಾಂಗದಲ್ಲಿ ವ್ಯಾಪಿಸಿರುವ ಈ ಮಲಿನಾಚಾರ ವಿಚಾರಗಳು ನಿವಾರಣೆಯಾಗಬೇಕಾದರೆ ಶಿವಶರಣರ ಸಂದೇಶವನ್ನು ನಾವು ಕೇಳಿ ಆಚರಿಸಬೇಕು.

ಉದಯದಲೆದ್ದು ಗಡಗಡನೆ ನಡುಗುತ ಹೋಗಿ, ಹೂಗಿಡವ ಪತ್ರೆಯ ಕಡಿವ ದೃಢಗೇಡಿಗಳಿರಾ ನೀವು ಕೇಳಿರಿ. ಅದು ಕಡುಪಾಪವಲ್ಲವೆ? ನಿಮಗೆ ನಡುಗಿರೋ. ಪರಧನ ಪರಸ್ತ್ರೀಯರಿಗೆ ನಡುಗಿರೊ. ಕೊಲೆ, ಹುಸಿ, ಕಳವು, ಪರದಾರ ಕಾಂಕ್ಷೆಗೆ ನಡುಗಿರೋ. ಹರನಿಂದೆ ಗುರುನಿಂದೆ, ಶಿವನಿಂದೆ ಕೇಳಲಾರವೆಂದು ನಡುಗಿರೊ. ಶಿವಾಚಾರಕ್ಕೆ ನಡುಗದೆ ಮಹಾಚಳಿಗೆ ನಡುಗಿ ಹೂವಿನ ಗಿಡವ ತರಿವ ಕಡುಪಾಪಿಗಳಿರಾ, ನಿಮಗೆ ಮೃಡನ ಪೂಜೆ ಎಲ್ಲಿಯದೂ ಇಲ್ಲ. ನಿಮಗೆ ಅಖಂಡ ಪರಿಪೂರ್ಣ ಘನಲಿಂಗ ಗುರುಚೆನ್ನಬಸವೇಶ್ವರ ಸಾಕ್ಷಿಯಾಗಿ.

ಸತ್ಯ ಪ್ರಿಯರಿಗೆ ಅಮೃತಪ್ರಾಯರಾಗಿಯೂ ಡಾಂಭಿಕರಿಗೆ ಶೂಲದಂತೆಯೂ ಇರುವ ಈ ದಿವ್ಯ ಸಂದೇಶವು ನೈತಿಕ ಬಲವನ್ನು ಹೆಚ್ಚಿಸಿಕೊಳ್ಳುವ ನಮ್ಮನ್ನು ಜಾಗೃತಗೊಳಿಸುವುದಿಲ್ಲವೆ? ಶಿವಶರಣರು ಶಿವಪೂಜಕರಿಗೇನೇ ಈ ಪ್ರಕಾರ ನೈತಿಕ ಸಾಮರ್ಥ್ಯವನ್ನು ಸಂಪಾದಿಸಲು ಸೂಚಿಸಿದ್ದಾರೆಂದು ತಿಳಿಯಬಾರದು. ಜಪ, ತಪ, ಭಕ್ತಿ ಕರ್ಮ, ಜ್ಞಾನ, ಯೋಗ ಮೊದಲಾದ ಧಾರ್ಮಿಕ ಭಿನ್ನ ಭಿನ್ನ ಆಚರಣೆಗಳನ್ನು ಆಚರಿಸುವವರಿಗೂ ಕೂಡ ಇದೇ ಪ್ರಕಾರ ಮೊದಲು ನೀತಿಯಿಂದ ನಡೆಯುವುದನ್ನು ಕಲಿಯಿರೆಂತಲೂ ನೀತಿಯ ಬಲವಿಲ್ಲದೆ ಧಾರ್ಮಿಕ ಆಚರಣೆಗಳನ್ನು ಆಚರಿಸುವುದರಿಂದ ನಿಜವಾದ ಫಲಪ್ರಯೋಜನಗಳು ಪ್ರಾಪ್ತವಾಗುವುದಿಲ್ಲವೆಂತಲೂ ಬಹಳವಾಗಿ ಹೇಳಿದ್ದಾರೆ.

ಶಿವನೇ ದೈವ. ಕೊಲ್ಲದಿರ್ಪುದೆ ಧರ್ಮ, ಅಧರ್ಮದಿಂದ ಬಂದುದನ್ನೊಲ್ಲದಿಪ್ಪುದೆ ನೇಮ. ಆಶೆಯಿಲ್ಲದಿಪ್ಪುದೆ ತಪ. ರೋಷವಿಲ್ಲದಿಪ್ಪುದೆ ಜಪ.  ವಂಚನೆ ಇಲ್ಲದಿಪ್ಪುದೆ ಭಕ್ತಿ. ಹೆಚ್ಚು ಕುಂದಿಲ್ಲದಿಪ್ಪುದೆ ಸಮಯಾಚಾರ. ಇದು ಸತ್ಯ. ಶಿವಬಲ್ಲ. ಶಿವನಾಣೆ ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.

ತಪವೆತ್ತ ಹೆರರ ಕೇಡಿಂಗೆ ಬಗೆಯುವುದೆತ್ತ. ಜಪವೆತ್ತ ಶರಣರ ಮೇಲೆ ಅನೃತವ ನುಡಿವುದೆತ್ತ? ಪಂಚಾಚಾರವೆತ್ತ ಪಾತಕಕ್ಕೆ ಮನ ಬಗೆವುದೆತ್ತ.? ಇಂತೀ ಹೊರಬಳಿಕೆಯ ಲೋಕರಂಜನೆಯಲ್ಲಿಪ್ಪವರಿಗೆ ನಾನಂಜುವೆ. ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ ನೀನು ಅಂಜಿದೂರದಲ್ಲಿ ಓಡುವೆ.

ಮನುಷ್ಯನು ಪಾರಲೌಕಿಕ ಸುಖಶಾಂತಿಗಳನ್ನು ಹೊಂದಲು ಆತನು ಯಾವ ಧರ್ಮ ಮತ ಪಂಥವನ್ನನುಸರಿಸಿ ಪೂಜೆ ಕರ್ಮಂಗಳನ್ನು ಮಾಡಬೇಕಾದರೂ ಮೊದಲು ನೈತಿಕ ಬಲಶಾಲಿಯಾಗುವುದು ಅತ್ಯಾವಶ್ಯಕವಾಗಿದೆಯೆಂದೇ ಶಿವರಣರಣರು ಸಾರಿ ಸಾರಿ ಹೇಳಿದ್ದಾರೆಂಬುದು ಈ ವರೆಗಿನ ವಿವೇಚನೆಯಿಂದ ಸ್ಪಷ್ಟವಾಗುವುದಿಲ್ಲವೆ? ಇದೇ ಶಿವಶರಣರ ದಿವ್ಯ ಸಂದೇಶವು. ಈ ನೈತಿಕ ಬಲವು ಕೇವಲ ಪಾರಮಾರ್ಥಿಕ ಸುಖಶಾಂತಿಗಳಿಗೇನೇ ಬೇಕೆಂದಲ್ಲ. ಐಹಿಕ ಸುಖಶಾಂತಿಗಳಿಗೂ ಈ ನೈತಿಕ ಬಲವೇ ಮುಖ್ಯವಾಗಿದೆ.

ಭಗವಾನ್ ಬುದ್ಧ ದೇವರು ಧಾರ್ಮಿಕ ಕ್ರಾಂತಿಯನ್ನು ಮಾಡಿದಾಗ ಸತ್ಯ ಅಹಿಂಸಾದಿ ನೈತಿಕ ತತ್ವಗಳನ್ನೇ ಮುಖ್ಯವಾಗಿಟ್ಟುಕೊಂಡಿದ್ದರು. ಈಗ ಮಹಾತ್ಮಾ ಗಾಂಧಿಯವರು ರಾಜಕೀಯ ಕ್ರಾಂತಿಯನ್ನು ಮಾಡುತ್ತಿರುವಾಗಲೂ ಕೂಡ ಸತ್ಯ ಅಹಿಂಸಾದಿ ನೈತಿಕ ಆಚರಣೆಗಳನ್ನೇ ಮುಖ್ಯವಾಗಿಟ್ಟಿಲ್ಲವೇ? ಮಹಾನುಭಾವರಾದ ಬಸವಾದಿ ಶಿವಶರಣರು ಕೂಡಾ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಯನ್ನುಂಟು ಮಾಡಲು ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯಾದಿ ನೈತಿಕ ಮಹಾತತ್ವಗಳನ್ನೇ ಜನಾಂಗಕ್ಕೆ ಬೋಧಿಸಿ ಅವುಗಳಿಂದಲೇ ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನು ಪ್ರಸ್ತಾಪಿಸಿ ಸುಖಶಾಂತಿಗಳನ್ನುಂಟು ಮಾಡಿದರು.

ಶಿವಶರಣರ ಈ ದಿವ್ಯ ಸಂದೇಶದ ಸತ್ಯತೆಯು ಮಹಾತ್ಮಾಗಾಂಧಿಯವರು ಈಗಿನ ಪ್ರಯತ್ನದಿಂದ ಸಕಲರಿಗೂ ಸ್ಪಷ್ಟವಾಗುವಂತಿದೆ. ಯಾರು ನೈತಿಕ ಬಲಶಾಲಿಗಳೋ ಅವರೇ ಧರ್ಮಾತ್ಮರು. ಅವರೇ ಲೋಕಸೇವೆಗೆ ಅರ್ಹರು. ಅವರೇ ಲೋಕಪೂಜ್ಯರು. ಅವರನ್ನೇ ಪ್ರಪಂಚವು ಹಿಂಬಾಲಿಸುತ್ತದೆ. ಅವರ ವಾಣಿಯೇ ದೇವವಾಣಿಯು, ಆದುದರಿಂದ ನಮ್ಮ ಶರಣರು ಈ ಪ್ರಕಾರ ಹೇಳಿದ್ದಾರೆ.

ಶಮೆ, ದಮೆ, ವಿವೇಕ, ವೈರಾಗ್ಯ, ಪರಿಪೂರ್ಣ, ಭಾವ ಶಾಂತಿ, ಕಾರುಣ್ಯ ಶ್ರದ್ದೆ ಸತ್ಯ, ಸದ್ಭಕ್ತಿ ಶಿವಜ್ಞಾನ, ಶಿವಾನಂದ, ಉದಯವಾದ ಮಹಾಭಕ್ತನ ಹೃದಯದಲ್ಲಿ ಶಿವನಿಪ್ಪ. ಆತನ ದರ್ಶನ, ಸ್ಪರ್ಶನ, ಸಂಭಾಷಣೆಯಿಂದ ಕೇವಲ ಮುಕ್ತಿಯಪ್ಪುದು ತಪ್ಪದಯ್ಯ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ.

ಆದಕಾರಣ ನೈತಿಕ ತತ್ವಗಳನ್ನು ಆಚರಣೆಯಲ್ಲಿ ತಂದ ಮಹಾತ್ಮರು ಧರ್ಮಾಚಾರಗಳನ್ನು ಆಚರಿಸಿದಾಗಲೇ ಅವುಗಳ ದಿವ್ಯ ತೇಜವು ಪ್ರಕಟವಾಗುತ್ತದೆ. ಲಿಂಗಪೂಜೆ, ಜಪ, ತಪಾದಿಗಳ ಮಹತ್ವವು ಆಗಲೇ ವ್ಯಕ್ತವಾಗುತ್ತದೆ. ಈ ಪ್ರಕಾರ ನೈತಿಕ ಮತ್ತು ಧಾರ್ಮಿಕ ಬಲಗಳುಳ್ಳವರೇ ಜಗತ್ತಿನಲ್ಲಿ ಅವತಾರಿ ಪುರುಷರೆಂದು ಎಣಿಸಲ್ಪಡುತ್ತಿದ್ದಾರೆ. ಯಾವ ಮಹನೀಯರಲ್ಲಿ ಯಾವ ಪ್ರಮಾಣದಿಂದ ಉಭಯಶಕ್ತಿಗಳು ಇರುತ್ತವೆಯೋ ಆ ಪ್ರಮಾಣದಿಂದ ಅವರು ಲೋಕವಂದ್ಯರೂ ಲೋಕೋದ್ಧಾರಕರೂ ಆಗುತ್ತಾರೆ. ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳವರು ಶಿವಶರಣರ ಸಂದೇಶದಂತೆ ನೈತಿಕ ಮತ್ತು ಧಾರ್ಮಿಕ ಬಲಗಳನ್ನು ಹೊಂದಿದ ಮಹಾವಿಭೂತಿಗಳಾಗಿದ್ದುದರಿಂದಲೇ ಸಮಾಜೋದ್ಧಾರದ ಅನೇಕ ಮಹತ್ಕಾರ್ಯಗಳು ಜರುಗಿ ಸಮಾಜಕ್ಕೆ ಆ ಮಹಾಪೂಜ್ಯಪಾದರು ಅತ್ಯಂತ ವಂದ್ಯರಾದರು ಶಿವಶರಣರ ಈ ದಿವ್ಯ ಸಂದೇಶವನ್ನು ತೇಜೋಮಯವಾದ ಈ ಸತ್ಯ ಸಂದೇಶವನ್ನು, ನಿರ್ದಾಕ್ಷಿಣ್ಯದ ಈ ಸ್ಪಷ್ಟ ಸಂದೇಶವನ್ನು, ಕೇಳಿ ಜಾಗೃತರಾಗಿ ತಮ್ಮಲ್ಲಿ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬುದೇ ಇಂತಹ ಮಹಾವಿಭೂತಿಗಳ ಸ್ಮಾರಕದ ಉದ್ದೇಶವಾಗಿದೆ. ಈ ಉದ್ದೇಶವು ನೆರವೇರುವಂತೆ ನಮ್ಮಲ್ಲಿ ನೈತಿಕ ಬಲವು ಹೆಚ್ಚಿ ಆ ಮೂಲಕ ಸಮಾಜದಲ್ಲಿ ಸಮಾನತ್ವ ಮತ್ತು ಸ್ವಾತಂತ್ರ್ಯಗಳುಂಟಾಗಿ ಸುಖಶಾಂತಿಗಳು ನೆಲೆಸುವ ಸುಸಮಯವು ಜಾಗ್ರತೆ ಪ್ರಾಪ್ತವಾಗಲಿ.

ಸಮಾಪ್ತಿ

Related Posts