ಬಾಲಲೀಲಾ ಮಹಾಂತ ಶಿವಯೋಗಿಗಳವರ ಕೈವಲ್ಯ ದರ್ಪಣ

ಲೇಖಕರು: ಶ್ರೀ ಕೆ. ವಿ. ಬಾಳಿಕಾಯಿ

 

ವೀರಶೈವ ಧರ್ಮವು ಬಹು ಪ್ರಾಚೀನವಾದುದು. ಷಟ್‌ಸ್ಥಲಗಳ ಮೂಲಕ ಮಾನವನನ್ನು ಮಹಂತನನ್ನಾಗಿ ಮಾಡುವ ದಿವ್ಯಾಮೃತ. ಅಲ್ಲಿಂದ ಇಲ್ಲಿಯವರೆಗೆ ಈ ವಿಶಾಲ ಧರ್ಮದಲ್ಲಿ ಅನೇಕ ಮಹಾತ್ಮರು, ಶಿವಶರಣರು ಆಗಿಹೋಗಿದ್ದಾರೆ. ಎಲ್ಲರ ತತ್ತ್ವಗಳನ್ನು ಕಂಡಾಗ, ಕಂಡು ಉಂಡಾಗ ಬಹಿರಂಗ ಸಂಗ ಬಿಟ್ಟು ಅಂತರಂಗದ ಜ್ಯೋತಿ ತಾನೇ ತಾನಾಗಿ ದೇದೀಪ್ಯಮಾನವಾಗಿ ಬೆಳಗುತ್ತದೆ. ಇಂತಹ ಮಹಾತ್ಮರಲ್ಲಿ ಮುಳಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಒಬ್ಬರಾಗಿದ್ದಾರೆ.

ಈ ಶಿವಯೋಗಿಗಳ ಬಗೆಗೆ ಐತಿಹಾಸಿಕವಾದ ಚಾರಿತ್ರ್ಯವು ನಮಗೆ ಸಾಕಷ್ಟು ಲಭ್ಯ ವಾಗಿಲ್ಲ. ಅಲ್ಲಲ್ಲಿ ಪ್ರಚಲಿತವಿದ್ದ ಅಂಶಗಳನ್ನು ಗಮನಿಸಿ ಇವರ ಚರಿತ್ರೆಯನ್ನು ಹೇಳ ಬೇಕಾಗುತ್ತದೆ. ಈ ಮಹಾತ್ಮರು ೧೯ನೆಯ ಶತಮಾನದ ಮೊದಲ ಪಾದದಲ್ಲಿ ಬಾಳಿ ಬೆಳಗಿದರು.  ಮುಳಗುಂದದ ಕಲ್ಮಠದ ಮಹಾಂತ ಶಿವಯೋಗಿಗಳು ಬಿಜಾಪುರ ಜಿಲ್ಲೆಯ ಯರನಾಳ ಗ್ರಾಮದ ಹಿರೇಮಠದ ಸದ್ಭಕ್ತ ದಂಪತಿಗಳಿಗೆ ಗಂಡುಮಗುವನ್ನು ಆಶೀರ್ವದಿಸಿದರು. ಆತನೇ ಮುಂದೆ ಬಾಲಲೀಲಾ ಮಹಾಂತ ಶಿವಯೋಗಿಯೆಂದು ಪ್ರಸಿದ್ಧವಾದನು.

 

ತಮ್ಮ ಚಿಕ್ಕ ವಯಸ್ಸಿನಲ್ಲೇ ತಾಯಿ-ತಂದೆಯನ್ನು ಬಿಟ್ಟು ಸದ್ಗುರುಗಳನ್ನು ಹುಡುಕುತ್ತ ಲಿಂಗನಾಯಕನಹಳ್ಳಿಗೆ ಬಂದು ಅಲ್ಲಿ ಶ್ರೀ ಚೆನ್ನವೀರ ಸ್ವಾಮಿಗಳ ಶಿಷ್ಯರಾಗಿ ಶಿವಯೋಗ ಸಾಧನವನ್ನು ಪಡೆದು ಜ್ಞಾನನಿಧಿಯಾಗಿ ದೇಶಸಂಚಾರ ಮಾಡುತ್ತ, ಬಾಲಲೀಲೆಗಳನ್ನು ತೋರುತ್ತ ಭಕ್ತರನ್ನು ಶಿವಭಕ್ತಿಯಲ್ಲಿ ನಡೆಸುತ್ತ ಅವರನ್ನು ಉದ್ಧರಿಸಿದರು.

 

ಈ ಮಹಾತ್ಮರು ರಚಿಸಿದ ಕೃತಿಯೇ ‘ಕೈವಲ್ಯ ದರ್ಪಣ’, ಕೈವಲ್ಯವೆಂದರೆ ಮೋಕ್ಷ ದರ್ಪಣವೆಂದರೆ ಕನ್ನಡಿ, ಮೋಕ್ಷವನ್ನು ತೋರಿಸುವ ಕನ್ನಡಿ. ಇದೊಂದು ಬಿಡಿಪದ್ಯಗಳ ಸಂಕಲನ. ಇದರ ಮಹಿಮೆಯನ್ನು ಎಷ್ಟು ವರ್ಣಿಸಿದರೂ ತೀರದು. ಶ್ರೀಗಳವರ ಆತ್ಮಧ್ವನಿಯೇ ಈ ಪದ್ಯಗಳಲ್ಲಿ ಗುಂಜಾರವ ಮಾಡಿದಂತೆ ಆಗುತ್ತದೆ. ಒಂದೊಂದು ಪದ್ಯವೂ ಸಾಧಕನಿಗೆ ಸಾಧನೆಯ ಸೋಪಾನ. ಎಲ್ಲ ಪದ್ಯಗಳ ಸೌಂದರ್ಯವನ್ನು ವಿವರಿಸಿ ಹೇಳುವುದು ಈ ಲೇಖನಕ್ಕೆ ಮೀರಿದ ಮಾತು.

ವೀರಶೈವ ಧರ್ಮದ ಅಷ್ಟಾವರ್ಣಗಳಲ್ಲಿ ಮೊದಲನೆಯ ಸ್ಥಾನ ಗುರುವಿನದು,.’ನ ಗುರೋರಧಿಕಂ’ ಎನ್ನುವ ಮಾತಿನಂತೆ, ಗುರುವಿಗಿಂತ ಹಿರಿದಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಅದನ್ನೇ ‘ಪಾಲಿಸೈ ಪರಮ ಶ್ರೀ ಗುರುನಾಥ ದಯೆಯಿಂದ ಎನ್ನುವ ಪದ್ಯದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಈ ಪದ್ಯದ ಭಾವ ಅಲೌಕಿಕ ಮತ್ತು ಇವರು ಪರಮಾತ್ಮನಲ್ಲಿ ಮೊರೆಯಿಡುವ ರೀತಿಯಂತು‌ ಅನ್ಯಾದೃಶ,. ಸಾಕು ಪರಿಹರಿಸು ಎನ್ನ ದೇಹದ ದುರ್ಗುಣಗಳನ್ನು ನೂಕು ನುಗ್ಗನು ಮಾಡಿ ಕಾಡುತಿಹವು”, ದೇಹದ ಒಳಗಿರುವ ಚೇಳು, ಹಾವು, ಹುಲಿ, ಕರಡಿಗಳೆಂಬ ದುರ್ಗುಣಗಳ ಬಾಧೆಯನ್ನು ಪರಿಹರಿಸು ದೇವಾ ಎಂದು ಬೇಡಿಕೊಳ್ಳುತ್ತಾರೆ. ಇಂಥಹ ಪದಗಳು ನಮ್ಮ ನಿತ್ಯಮಂತ್ರಗಳಾಗ ಬೇಕಾಗಿವೆ. ‘ಮನಸ್ಸೆಂಬ ಮಂಗವು ವಿಷಯದ ಇಂದ್ರಿಯದ ಶಾಖೆ ಶಾಖೆಗಳು ಹಾರುತಿದೆ, “ಕಂದನೆನ್ನನು ಸಲಹೋ ಗುರು ಮಹಾಂತಲಿಂಗ” ಎಂದು ಆರ್ತರಾಗಿ ಕೇಳುತ್ತಾರೆ. ಅದೇ ರೀತಿಯಾಗಿ ಲಿಂಗದ ಮಹಿಮೆಯನ್ನು ಕೊಂಡಾಡಿದ್ದಾರೆ. ಜಂಗಮದ ಮಹತಿಯನ್ನಂತೂ ಅವರ ಬಾಯಿಂದಲೇ ಕೇಳಬೇಕು.

 

ಜಂಗಮವೆ ಪರದೈವ ಜಗಮವೆ ಪರವಸ್ತು

ಜಂಗಮವೆ ಪರಮ ಪಾವನಮೂರ್ತಿಯು||

ಜಂಗಮದ ಪಾದವನು| ಪಿಂಗದಲ್ಲಿ ನೆನೆ ಮನವೆ

ಭಂಗಗೊಳಿಪುದು ಭವದ ಬೇರುಗಳನ್ನು       ||೧||

ಜಗಮವೆ ಜಗದೊಡೆಯ |ಜಂಗಮವೆ ಜಗಭರಿತ

ಜಂಗಮವೆ ಸಾಕ್ಷಾತ್ ಲಿಂಗಮೂರ್ತಿ |

ಜಂಗಮದ ಪಾದವನು| ಅಂಗ ಮನ ಪ್ರಾಣದಲಿ|

ಸಂಗೊಳಿಸು ಕಂಡೆಯ ಲೆ ಚಿತ್ತವೇ     ||೨||

 

ಮತ್ತೊಂದು ಪದ್ಯದಲ್ಲಿ ಸುಖಭೋಗ ದೊರೆಯುವ ಮಹಾಹಾದಿಯನ್ನೇ ಹೇಳಿ ಕೊಟ್ಟಿದ್ದಾರೆ.  ಅದು ತುಂಬಾ ಪ್ರಚಲಿತವಾಗಿರುವ ಪದ್ಯ ಎರಡು ಮಾಣಿಕ್ಯದ ಮಾತುಗಳು. ಹರಪೂಜೆ ಗುರುಸೇವೆ ಇಲ್ಲದೇ ಸುಖಭೋಗಗಳು ದೊರೆಯಲಾರದು. ಇದೇ ಪದ್ಯದ ಕೆನೆಯಲ್ಲಿ ‘ನರಪಾಪ ಪ್ರಣ್ಯವನು ನರರ ಸೆರಗಿನಲಿ ಹಾಕಿ ಗುರು ಮಹಾಂತ ಲಿಂಗ ತಾ ಮರೆಯಾಗಿರುತಿರುವ. ಅವರವರ ಪಾಪಪುಣ್ಯಗಳಿಗೆ ಅವರವರೇ ‘ಬಾದ್ಧಸ್ಥರು.ʼಉದ್ಧರೇತ್ ಆತ್ಮಾನಾ’ ‘ಆತ್ಮನಂ ಎಂಬ ಗೀತೆಯ ಮಾತು ಇಲ್ಲಿ ಪ್ರಸ್ತುತ

ವೀರಶೈವ ಸಿದ್ಧಾಂತದಲ್ಲಿ ಜಗತ್ತು ಮಿಥ್ಯೆಯಲ್ಲ ಜಗತ್ತು ಸತ್ಯವಾದುದು. ಪ್ರಪಂಚ ದಿಂದ ಪಾರಮಾರ್ಥದ ಕಡೆಗೆ ಸಾಗುವ ಮಹತ್ತಿನ ಹಾದಿ ಇದರಲ್ಲಿ ಅಡಕವಾಗಿದೆ. ಪ್ರಪಂಚಕ್ಕೆ ವಿಮುಖವಾಗುವುದು ಸಲ್ಲ.  ಅದನ್ನೇ ಪೂಜ್ಯ ಶ್ರೀಗಳವರು,

 

 ಸಂಸಾರದೊಳಗೆ ಸದ್ಗತಿಯುಂಟು ಕೇಳ್ ಮಗನೆ |

ಬಸವಾದಿ ಪ್ರಮಥರಿಗೇನಿದ್ದಿಲ್ಲವೇ ||

ಎನ್ನುವ ಪದ್ಯದಲ್ಲಿ ಮೋಕ್ಷದ ದಾರಿಯನ್ನು ಅತ್ಯಂತ ಸುಲಭವಾಗಿ ತಿಳಿಸಿಕೊಟ್ಟಿದ್ದಾರೆ.

 

ಇನ್ನೊಂದು ಪದ್ಯದಲ್ಲಿ ಶಿವಯೋಗಿಯ ಇರುವಿಕೆಯನ್ನು ಅತ್ಯಂತ ಹೃದ್ಯವಾಗಿ ಹೇಳಿದ್ದಾರೆ. ಆ ಶಿವಯೋಗಿಯ ಸ್ವರೂಪವನ್ನು ನೆನಸಿಕೊಂಡಾಗ ಆಗುವ ಆನಂದ ಅವರ್ಣನೀಯ.

 

ಶಿವಯೋಗಿ ಸಾಕ್ಷಾತ್ | ಶಿವನಾದ ಕಾರಣದಿ|

ಅವನಿಭೋಗಗಳವಗೆ ತೃಣಗಾಂಬುವು ||

‘ಏಕಂ ಸದ್ವಿಪ್ರಾಃ ಬಹುಧಾ ವದಂತಿ’ ಎನ್ನುವ ಮಾತಿನಂತೆ ದೇವನು ಒಬ್ಬನೇ. ಏಕದೇವನ ಇರುವಿಕೆಯನ್ನು ಎಲ್ಲರಿಗೂ ಅತ್ಯಂತ ಸುಲಭವಾಗಿ ತಿಳಿಯುವ ರೀತಿಯಲ್ಲಿ ಅರುಹಿದ್ದಾರೆ.

 

ಅವರವರ ಭಕ್ತಿಗೆ ಅವರವರ ಭಾವಕ್ಕೆ |

ಅವರವರ ತೆರನಾಗಿ ಇರುತಿಹನು ಶಿವಯೋಗಿ

 

ಈ ಪದ್ಯದ ಭಾವವನ್ನು ನಾವು ಸಂಪೂರ್ಣವಾಗಿ ಅರಿತು ಅನುಭವಿಸಿದ್ದಾದರೆ ನಾವು ಪೂರ್ಣ ನೆಮ್ಮದಿಯಿಂದ ಬಾಳಬಹುದಲ್ಲವೇ!

 

ಇವರು ತಮ್ಮ ಮಂಗಳಾರತಿ ಪದ್ಯದಲ್ಲಿ ಪರಮಾತ್ಮನನ್ನು ವರ್ಣಿಸಿದ ರೀತಿ ಅತ್ಯದ್ಭುತ. ವೇದೋಪನಿಷತ್ತುಗಳಲ್ಲಿ ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ.  ಅದನ್ನೇ ನಮ್ಮ ಸಿರಿಗನ್ನಡದಲ್ಲಿ ಈ ಮಹಾಶಿವಯೋಗಿಗಳು ಎಲ್ಲರಿಗೂ ಸುಲಭಗ್ರಾಹ್ಯವಾಗುವ ರೀತಿಯಲ್ಲಿ ವರ್ಣಿಸಿದ್ದಾರೆ.

 

ಬೇಕು ಬೇಡಂಬೆರಡು ಭವಬೀಜಗಳ ಹುಲಿದು|

ಲೋಕದೊಳಗಿದ್ದು ಇಲ್ಲದ ಮಹಿಮೆಗೆ

ಭಂಗಾರ ಕಬ್ಬುನವು ಹಿರಿಕಿಗಿದು ಸಮಗಂಡ |

ಲಿಂಗ ಮಹಂತೇಶ ಮಹಾ ಜಗತ್ಪುತ್ರಗೆ

 

ಅತ್ಯಂತ ಕ್ಲಿಷ್ಟವಾದ ವಿಷಯವನ್ನು ಅತ್ಯಂತ ಸುಲಭವಾಗಿ ತಿಳಿಸುವ ರೀತಿ ಜ್ಞಾನಿಗಳಿಗೆ ಮಾತ್ರ ಸಾಧ್ಯ. ಮತ್ತೊಂದು ಪದ್ಯದಲ್ಲಿ ಭಕ್ತಿಯ ಹಿರಿಮೆಯನ್ನು ಕೊಡಮಾಡಿದ್ದಾರೆ. ‘ಸೆಡವು ಬಿಗುವಿನ ಭಕ್ತಿ ಹಿಡಿಯಬೇಡೆಂದು ನಮ್ಮೊಡೆಯ ಹೇಳಿದನು ಕೇಳಯ್ಯ’ ಭಕ್ತಿಯಲ್ಲಿ ಸಂಪೂರ್ಣ ಸಮರ್ಪಣ ಭಾವವಿರಬೇಕು. ಆ ಸಮರ್ಪಣ ಭಾವವಿರುವಾಗ `ಗುರು ತಂದೆ ಕಾಯುವಾ’, ಮತ್ತೊಂದು ಪದ್ಯದಲ್ಲಿ ಶ್ರೀಗಳು ಶಿವನ್ನು ಮಾತನಾಡಿಸುವ ರೀತಿಯನ್ನು ನೋಡಬೇಕು.

 

 ಗುರುವೆ ನೀ ಮಾತನಾಡೊ ಸುರತರು ಕಲ್ಪತರುವೆ ನೀ ಮಾತನಾಡೊ|

ಸುರರ ದೇವರ್ಕಳ ಒಡೋಲಗದೊಳು ಮೆರೆವೆ ನೀ ಮಾತನಾಡೋ ||||

 

ಲಿಂಗವೆ ಮಾತನಾಡೊ ಶ್ರೀಗುರು ಮಹಂ

ಲಿಂಗವೆ ಮಾತನಾಡೋ ||

ಸಂಗನ ಶರಣರ ಅಂಗೈಯೊಳಿರುವಂಥ|

ಲಿಂಗವೆ ಮಾತನಾಡೋ   ||೧||

 

ಈ ಮಾತನ್ನು ಕೇಳಿದಾಗ ಗುರುಲಿಂಗವು ಸಾಕ್ಷಾತ್ ಎದುರಿಗೆ ನಿಂತಿರುವ ಹಾಗೆ ಭಕ್ತರಿಗೆ ಭಾಸವಾಗುತ್ತದೆ.

ಒಟ್ಟಾರೆಯಾಗಿ ಈ ಶಿವಯೋಗಿಗಳವರ ‘ಕೈವಲ್ಯ ದರ್ಪಣ’ವೆಂಬ ಕೃತಿರತ್ನ ನಮ್ಮ ಸಾಹಿತ್ಯದ ಅಮೂಲ್ಯ ಕೃತಿಗಳಲ್ಲಿ ಒಂದಾಗಿದೆ. ಇದರ ವಿಷಯದ ಹರಹು ಬಹು ವಿಸ್ತಾರವಾದದ್ದು. ಶೈಲಿಯಂತೂ ಪಂಡಿತ ಪಾಮರರಿಗೂ ಹೃದ್ಯ. ಸಾಹಿತ್ಯಜ್ಞರಿಗೂ ಇಲ್ಲಿ ಅಲಂಕಾರಗಳ ರಸದೌತಣವಿದೆ. ಉದಾಹರಣೆಗೆ ಯಮಕಾಲಂಕಾರವು ಎಷ್ಟು ಸಹಜವಾಗಿ ಬಂದಿದೆ ನೋಡಿ.

 

ಪುಣ್ಯದಿಂದಲಿ ಆನೆ ಕುದುರೆಯು| ಪುಣ್ಯದಿಂದಲಿ ರಥ ಪದಾತಿಯು

ಪುಣ್ಯದಿಂದಲಿ ಸರ್ವಸಿದ್ಧಿಯು ಕೇಳು ಪುಣ್ಯತ್ಮ ||

ಪುಣ್ಯದಿಂದಲಿ ಅನ್ನ ವಸ್ತ್ರವು |ಪುಣ್ಯದಿಂದಲಿ ದಂಡು ಮಾರ್ಬಲ |

ಪುಣ್ಯದಿಂದಲಿ ಸರ್ವಸಿದ್ಧಿಯು ಕೇಳು ಪುಣ್ಯಾತ್ಮ ||

 

ಎಲ್ಲೂ ಕ್ಲಿಷ್ಟತೆಯ ಸುಳಿವಿಲ್ಲ. ಮಾನವನಿಗೆ ಅತ್ಯಂತ ಸರಳವಾಗಿ ಸಾಧನಾ ಮಾರ್ಗವನ್ನು ತಿಳಿಸಿದೆ ಈ ಕೃತಿರತ್ನ, ಇದರಲ್ಲಿಯ ತತ್ತ್ವಗಳು ನಮ್ಮ ದಾರಿದೀಪಗಳಾಗಬೇಕು. ಶಿವನೇ ತಾನಾದ ಈ ಮಹಾಶಿವಯೋಗಿಯು ಮನುಕುಲದ ಕಲ್ಯಾಣಕ್ಕಾಗಿ ಈ ಕೃತಿಯನ್ನು ನೀಡಿ ನಮ್ಮನ್ನು ಧನ್ಯರಾಗಿಸಿದ್ದಾರೆ. ಈ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಯ ದಿವ್ಯ ಪಾದಪದ್ಮಗಳಲ್ಲಿ ನನ್ನ ದೀರ್ಘದಂಡ ನಮನಗಳು.

Related Posts