ಲೇಖಕರು : ಪೂಜ್ಯ ಶ್ರೀ.ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು.ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
ಇಂದಿನ ವೈಜ್ಞಾನಿಕಯುಗದಲ್ಲಿ ಧರ್ಮ ತನ್ನ ನೈಜ ಅರ್ಥವನ್ನು ಕಳೆದುಕೊಂಡು ತಪ್ಪು ತಪ್ಪಾಗಿ ಅರ್ಥೈಸಲ್ಪಡುತ್ತಿದೆ. ಅಜ್ಞಾನ ಅಂಧಶ್ರದ್ಧೆಯಿಂದಾಗಿ ಧರ್ಮವು ಜಾತೀಯ ಸಂಘಟನೆಯಾಗಿ, ಗೊಡ್ಡು ಸಂಪ್ರದಾಯವಾಗಿ ಅವಹೇಳನಕ್ಕೆ ಗುರಿಯಾಗುತ್ತಿದೆ. ಅನೇಕ ವಿದ್ಯಾವಂತರು, ಪ್ರಗತಿಪರ ವಿಚಾರವುಳ್ಳವರು ನಾವು ಇಂಥ ಧರ್ಮಕ್ಕೆ ಸೇರಿದವರು ಅಥವಾ ಧಾರ್ಮಿಕರು ಎಂದು ಹೇಳಿಕೊಳ್ಳಬಯಸುವುದಿಲ್ಲ. ಹಾಗೆ ಹೇಳಿದರೆ ಪ್ರಗತಿಶೀಲರು ಎನಿಸಿಕೊಳ್ಳಲಾರೆವು ಎಂದು ಭಾವಿಸುತ್ತಾರೆ. ಧರ್ಮವನ್ನು ಸರಿಯಾಗಿ ಅರ್ಥೈಸದಿರುವುದು ಹಾಗು ನಿಜಾಚರಣೆಗಿಂತ ಬಾಹ್ಯ ಆಡಂಬರಕ್ಕೆ ವಿಶೇಷ ಮಹತ್ವ ಕೊಡುವುದು ಈ ಅವಾಂತರಕ್ಕೆ ಕಾರಣವಾಗಿದೆ.
ವಾಸ್ತವದಲ್ಲಿ ಧರ್ಮ ಅತ್ಯಂತ ವಿಶಾಲವಾದ ಅರ್ಥವನ್ನು ಹೊಂದಿದೆ. ಪ್ರಾಣಿದಯೆ, ಅಂತಃಕರಣ, ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ, ಸೇವಾಮನೋಭಾವಗಳಲ್ಲಿ ಅದು ಸದಾ ಅಣುರಣಿಸುತ್ತದೆ. ಅದೊಂದು ಜೀವನಪದ್ಧತಿ ಹಾಗೆಯೇ ಆದರ್ಶ ನಡವಳಿಕೆ. ನಮ್ಮ ನೆರೆಹೊರೆಯವರನ್ನು ಅರ್ಥಮಾಡಿಕೊಂಡು, ಅವರೊಡನೆ ಹೊಂದಿಕೊಂಡು ಬಾಳುವುದೇ ಧರ್ಮ. ಇದನ್ನು ಬಿಟ್ಟು ಕೇವಲ ಪೂಜೆ, ಜಪತಪಾದಿ ಕರ್ಮಗಳೇ ಧರ್ಮವೆಂದು ಭಾವಿಸುವುದು ತಪ್ಪು. ಅಹಿಂಸಾಪರವಾದ, ನೀತಿಯುತವಾದ ಸಾತ್ವಿಕ ಬದುಕು ನಮ್ಮದಾಗಬೇಕು. ‘ದಯವಿಲ್ಲದ ಧರ್ಮ ಅದಾವುದಯ್ಯಾ?’ ಎಂದು ಬಸವಣ್ಣನವರು ಕೇಳುವಲ್ಲಿ ಇದೇ ಅರ್ಥ ಧ್ವನಿತವಾಗಿದೆ. ನೊಂದವರ ನೋವಿನಲ್ಲಿ ಭಾಗಿಯಾಗಿ ನಮ್ಮ ಕೈಲಾದಮಟ್ಟಿಗೆ ಅವರ ದುಃಖ ಶಮನಗೊಳಿಸುವುದು, ದೀನ ದಲಿತರ ಬದುಕಿಗೆ ಆಸರೆಯಾಗಿ ನಿಲ್ಲುವುದೇ ಧರ್ಮ. ಅದು ಬರೀ ಉಪದೇಶದ ಮಾತಲ್ಲ; ಚರ್ಚೆಯ ವಿಷಯವೂ ಅಲ್ಲ. ಮಾನವೀಯತೆಯನ್ನು ಅರಿತು ಆಚರಿಸುವುದೇ ಧರ್ಮ, ಅದಕ್ಕಾಗಿಯೇ ‘ಧರ್ಮಂಚರ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಉದಾಹರಣೆಗಾಗಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿದೆ ಎಂದು ಭಾವಿಸೋಣ. ಆಗ ನಾವು ತಕ್ಷಣ ವೈದ್ಯರಲ್ಲಿ ಅವನನ್ನು ಕರೆದುಕೊಂಡು ಹೋಗುತ್ತೇವೆ. ವೈದ್ಯರು ಅವನ ಶರೀರದಲ್ಲಿ ಪ್ರವೇಶವಾಗಿರುವ ಗುಂಡನ್ನು ತಕ್ಷಣ ಹೊರತಗೆದು ಸರಿಯಾದ ಔಷಧೋಪಚಾರ ಮಾಡುವುದೇ ಧರ್ಮ. ಅದು ಬಿಟ್ಟು, ನಿನಗೆ ಗುಂಡು ಹೊಡೆದ ವ್ಯಕ್ತಿ ಯಾರು? ಅವನ ವಯಸ್ಸೆಷ್ಟು? ಅವನು ಎಷ್ಟು ಎತ್ತರವಾಗಿದ್ದ? ಅವನ ಬಣ್ಣ ಯಾವುದಿತ್ತು? ಹೀಗೆಲ್ಲ ಚರ್ಚಿಸುತ್ತ ಕುಳಿತುಕೊಳ್ಳುವುದು ಧರ್ಮವಾದೀತೆ ?
ಜಗತ್ತಿನಲ್ಲಿ ಇಂದು ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣ. ಬಾಹ್ಯ ಆಡಂಬರಕ್ಕೆ, ಅಂಧಾನುಕರಣೆಗೆ ಧರ್ಮದಲ್ಲಿ ಸ್ಥಳವಿಲ್ಲ. ಆದರೆ ದುರದೃಷ್ಟದಿಂದ ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಧರ್ಮ ಸುಲಿಗೆಯ ಸಾಧನವಾಗಿ ಮಾರ್ಪಟ್ಟು ಅನಾದರಣೆಗೆ ಕಾರಣವಾಗಿದೆ. ಧರ್ಮ ಯಾವಾಗಲೂ ಜ್ಞಾನಿಯಲ್ಲಿ ಜನಿಸಿ, ಅನುಭಾವಿಯಲ್ಲಿ ಬೆಳೆದು ಪುರೋಹಿತಶಾಹಿಯ ಜನರಲ್ಲಿ ಅವಸಾನ ಹೊಂದುತ್ತದೆ. ಜಗತ್ತಿನ ಪ್ರತಿಯೊಂದು ಧರ್ಮದಲ್ಲಿ ಪುರೋಹಿತಶಾಹಿಯ ಕೈವಾಡ ಇದ್ದೇ ಇದೆ. ಬೌದ್ಧಧರ್ಮ ಭಾರತದಿಂದ ಹೊರಹೋಗುವಲ್ಲಿ, ಕ್ರಿಸ್ತ ಶಿಲುಬೆಗೇರುವಲ್ಲಿ, ಬಸವಣ್ಣನವರ ಕ್ರಾಂತಿ ವಿಫಲವಾಗುವಲ್ಲಿ, ಅವರ ಕೈವಾಡ ಸ್ಪಷ್ಟವಾಗಿದೆ. ಧರ್ಮ ಧರ್ಮಗಳಲ್ಲಿ ಭೇದ ಹುಟ್ಟಿಸಿ, ಧರ್ಮದ ಹೆಸರಿನಲ್ಲಿ ಕೊಲೆ ಸುಲಿಗೆಗಳಿಗೆ ಕಾರಣರಾದವರು ಇದೇ ಜನ. ಮನುಷ್ಯ ಧರ್ಮಾಭಿಮಾನಿ ಯಾಗಿರಬೇಕು ಎಂದಾಗ ಅಂಧಾಭಿಮಾನಿಯಾಗಬೇಕು ಎಂದು ಅರ್ಥವಲ್ಲ. ಭೂಮಿ ತನ್ನ ಅಕ್ಷದ ಸುತ್ತ ತಿರುಗುತ್ತ ಸೂರ್ಯನ ಸುತ್ತ ತಿರುಗುತ್ತಿರುವುದರಿಂದಲೇ ಹಗಲು, ರಾತ್ರಿಗಳು ಋತುಮಾನಗಳು ಸಾಧ್ಯವಾಗುತ್ತಿವೆ. ಇಲ್ಲದಿದ್ದರೆ ಹವಾಮಾನ ವೈಪರೀತ್ಯಗಳುಂಟಾಗಿ ಭೂಮಿಯ ನಾಶಕ್ಕೆ ಕಾರಣವಾಗುತ್ತಿತ್ತು. ಹಾಗೆಯೇ ವ್ಯಕ್ತಿ ಸ್ವಧರ್ಮ ನಿಷ್ಠೆಯುಳ್ಳವನಾಗಿರುವಂತೆ ಪರಧರ್ಮ ಸಹಿಷ್ಣುವಾದಾಗ ತಾನೂ ಬದುಕುತ್ತಾನೆ: ಇನ್ನೊಬ್ಬರನ್ನು ಬದುಕಿಸುತ್ತಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಧರ್ಮವಿದೆ. ರಾಜಧರ್ಮ, ಪ್ರಜಾಧರ್ಮ, ಅಧ್ಯಾಪಕ ಧರ್ಮ, ಸೈನಿಕಧರ್ಮ ಇತ್ಯಾದಿ. ಅವರವರ ಧರ್ಮ ಪರಿಪಾಲನೆಯಲ್ಲಿಯೇ ಅವರವರ ಅಭ್ಯುದಯವೂ ಸೇರಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಅರ್ಥಾತ್ ಕರ್ತವ್ಯಪ್ರಜ್ಞೆಯನ್ನು ಅರಿತು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ಮಾಡುತ್ತ ಇಹಪರಗಳಲ್ಲಿ ಶ್ರೇಯಸ್ಸನ್ನು ಪಡೆಯಲು ಸಾಧ್ಯವಿದೆ.