ನಿತ್ಯ ಸ್ಮರಣೆ, ನಿತ್ಯ ಧ್ಯಾನ .! ಲೇಖಕ: ಶ್ರೀಕಂಠ.ಚೌಕೀಮಠ

ಇಂದಿಗೆ ಸರಿಯಾಗಿ ೪೫ ವರ್ಷಗಳ ಹಿಂದಿನ ಅವಿಸ್ಮರಣೀಯ ಘಟನೆಯ ಮೆಲಕು.(1980)

ಶ್ರೀ ಮನ್ನಿರಂಜನ ಜಗದ್ಗುರು ತೋಂಟದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಪಟ್ಟಾಧಿಕಾರ ರಜತ ಮಹೋತ್ಸವ ಅಭಿನಂದನ ಗ್ರಂಥದಲ್ಲಿ ಬರೆದ “ಪಟ್ಟಾಧ್ಯಕ್ಷರಿಗೆ ಪಂಚ ಪತ್ರ ಲೇಖನದ ನಾಲ್ಕನೆಯ ಪತ್ರದಿಂದ ಆಯ್ದುಕೊಂಡ ಸಾಲುಗಳು……

(ಪೂಜ್ಯ ಶ್ರೀ ಸಿಂದಗಿ ಪಟ್ಟಾಧ್ಯಕ್ಷರಿಗೆ ಆರೋಗ್ಯದಲ್ಲಿ ತೊಂದರೆಯಾದ ಸಂಧರ್ಭ)

“ಇಂದಿನ ಈ ಪಾರ್ಶ್ವವಾಯುವಿನಂತಹ ಸ್ಥಿತಿಯಲ್ಲೂ ನಿಮ್ಮ ನಿಷ್ಠೆ ಹಿಮಾಚಲ. ಅಚಲ.

 ದೇಹ ಬಹಿರಂಗದ ಪ್ರಜ್ಞೆ ಕಳೆದುಕೊಂಡರೂ ನಿಮ್ಮ ಕೈ ಸದಾ ಕೊರಳ ಇಷ್ಟಲಿಂಗವನ್ನು ನೇವರಿಸುತ್ತಿತ್ತು.

ಮೊನ್ನೆ ಆಸ್ಪತ್ರೆಗೆ ನಿಮ್ಮನ್ನು ಕಾಣಲು ಬಂದಿದ್ದೆನಲ್ಲ, ಅಂದಿಗೆ ಪ್ರಜ್ಞೆ ಮಾತು ಮೌನವಾಗಿ, ಹದಿನೈದು-ಇಪ್ಪತ್ತು, ದಿನಗಳೇ ಸಂದಿದ್ದವು.

 ಅಂದು ನಿಮ್ಮ ಆರಾಧ್ಯ ದೈವ  ಕುಮಾರೇಶನ ಸ್ಮರಣದಿನ.

ನಾನು ನಿಮ್ಮ ಕಿವಿಯ ಸಮೀಪ, “ ಬುದ್ದೀ, ಇಂದು ಕುಮಾರೇಶ್ವರನ  ಪುಣ್ಯತಿಥಿ ” ಎಂದು ಹೇಳಿದಾಗ ಇಪ್ಪತ್ತು ದಿನಗಳಿಂದ ತೆರೆಯದ ಕಣ್ಣು ತೆರೆದದ್ದು, ಕಣ್ಣಿನಲ್ಲಿ ಹೊಸ ಬೆಳಕು ಕಂಡದ್ದು, ಏಳಲಾರದ ಕೈ ತನಗೆ ತಾನೇ ಎದ್ದು ನಮಿಸಿದ್ದು, ಮುಖದ ತುಂಬ ಸಂತೃಪ್ತಿಯ ಸಾರ್ಥಕತೆಯ ನಗೆ ತೇಲಿದ್ದು ಅದೊಂದು ರೋಮಾಂಚನ, ಹೃದಯಸ್ಪರ್ಶಿ ಅನುಭವ.”

ಈ ಸಾಲುಗಳನ್ನು ಓದುತ್ತ ಹೋದಂತೆ ಅನಿಸಿದ್ದು,

ಶ್ರೀ ಶಿವಯೋಗಮಂದಿರದ ಗುರು-ಶಿಷ್ಯ ಪರಂಪರೆಯ ಅವಿನಾಭಾವ ಸಂಬಂಧಗಳು- ಅವು ಪವಾಡಗಳಲ್ಲ ! ಅವು ನಿಜಜೀವನದ ವಸ್ತು ಸ್ಥಿತಿಗಳು !!.

ಪ್ರಚಾರವನ್ನು ಬಯಸದ ಮಹಾಸಂತನ  ೯೫ನೆಯ ಪುಣ್ಯ ಸ್ಮರಣೆಯ ಪವಿತ್ರ ದಿನವಿಂದು ಕಾರುಣಿಕ ಯುಗಪುರುಷ  ಸಮಾಜ ಸಂಜೀವಿನಿಯ  ಪರಮಪೂಜ್ಯ  ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ ಸ್ಮರಣೆ  ಕೇವಲ ಒಂದು ದಿನದ ಸ್ಮರಣೆಯಲ್ಲ ಅವರ ಸ್ಮರಣೆ ನಮ್ಮ ನಿತ್ಯ ಸ್ಮರಣೆ, ನಮ್ಮ ನಿತ್ಯ ಧ್ಯಾನ .

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

 

 

Related Posts