ಲೇಖಕರು :
ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
ಶ್ರೀ ಗುರುವೇ ಎನಗೆ ಕಾಯವು, ಶ್ರೀ ಗುರುವೇ ಎನಗೆ ಪ್ರಾಣವು ಶ್ರೀ ಗುರುವೇ ಎನಗೆ ಇಹವು, ಶ್ರೀ ಗುರುವೇ ಎನಗೆ ಪರವು, ಶ್ರೀಗುರುವೇ ಎನಗೆ ಗತಿಯು, ಶ್ರೀ ಗುರುವೇ ಎನಗೆ ಮತಿಯು, ಶ್ರೀ ಗುರುಪಾದವೇ ಎನಗೆ ಘನತರ ಮುಕ್ತಿಗೆ ಕಾರಣವೂ ಗುಹೇಶ್ವರಾ ಇದು ಸತ್ಯ, ಇದು ಸತ್ಯ.
19ನೇ ಶತಮಾನದಲ್ಲಿ ಭಾರತದ ಧಾರ್ಮಿಕ ಕ್ಷಿತಿಜದಲ್ಲಿ ನೂರಾರು ನಕ್ಷತ್ರಗಳು ಮೂಡಿ ಅತ್ಯಂತ ಪ್ರಖರವಾದ ತೇಜಸ್ಸನ್ನು ಹೊಂದಿ, ಪ್ರಕಾಶಮಾನವಾಗಿ ಬೆಳಗಿ ನಾಡನ್ನೆಲ್ಲ ಪವಿತ್ರಗೊಳಿಸಿದವು. ಅಂತಹ ದಿವ್ಯ ಪ್ರಭೆಯನ್ನು ಬೀರಿರುವ ದಿಟ್ಟ ಚೇತನಗಳ ಸಾಲಿನಲ್ಲಿ ಅತ್ಯಂತ ಪ್ರಖರವಾಗಿ ಬೆಳಗಿದ ಮಹಾಜ್ಯೋತಿ ಮತ್ತು ಈ ಲೋಕವು ಕಂಡರಿಯದ ಕೇಳರಿಯದ ಮಹಾಮೇರು ವ್ಯಕ್ತಿತ್ವವನ್ನು ಹೊಂದಿರುವವರು ಶ್ರೀ ಹಾನಗಲ್ಲಕುಮಾರ ಶಿವಯೋಗಿಗಳು. ಕಲ್ಯಾಣಕ್ರಾಂತಿಯ ನಂತರ ಇಂದಿನವರೆಗೆ (800 ವರ್ಷಗಳವರೆಗೆ) ಮರೆಯಾಗಿ ಹೋಗುತ್ತಿದ್ದ ಬಸವಾದಿ ಶರಣರ ತತ್ವಗಳನ್ನು, ಸಂದೇಶಗಳನ್ನು ಮತ್ತು ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವುದಲ್ಲದೇ ಉಳಿಸಿ-ಬೆಳೆಸಿ ದಂತಹ ಪೂಜ್ಯರಲ್ಲಿ ಅಗ್ರಗಣ್ಯರು.
ವೀರಶೈವ ಸಮಾಜದ ಇತಿಹಾಸ ಮತ್ತು ಧರ್ಮಗಳು ವಿಶ್ವಮಾನ್ಯತತ್ವಗಳನ್ನು ಮೌಲ್ಯಗಳನ್ನು ಒಳಗೊಂಡಿದ್ದು ವಿಶ್ವಮಾನ್ಯ ನೆಲೆಗಟ್ಟಿನಲ್ಲಿ ಈ ತತ್ವಗಳನ್ನು ಬಿತ್ತರಿಸುವ ಸಾಧನೆಗಳೇ ಪತ್ರಿಕೆಗಳು ಎಂಬುದನ್ನರಿತ ಶಿವಯೋಗಿಗಳು ಅನೇಕ ಪತ್ರಿಕೆಗಳನ್ನು ಪ್ರಾರಂಭಿಸಿದರು ಪ್ರೋತ್ಸಾಹಿಸಿದರು ಪ್ರೇರೇಪಿಸಿದರು. ಇಷ್ಟೇಅಲ್ಲದೆ ಧಾರ್ಮಿಕವಾಗಿ ಸಾಮಾಜಿಕ ವಾಗಿ ಸಾಂಸ್ಕೃತಿಕವಾಗಿ ವೈಚಾರಿಕವಾಗಿ ನೈತಿಕವಾಗಿ ಸಮಾಜವನ್ನು ಮೇಲೆತ್ತಿದರು.
ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಪ್ರೋತ್ಸಾಹ ಮತ್ತು ಪ್ರೇರಣೆಯ ಮೂಲಕ ಡಾ|| ಫ ಗು.ಹಳಕಟ್ಟಿ ಯವರು ತಮ್ಮ “ಶಿವಾನುಭವ” ಪತ್ರಿಕೆ, ಶಿರಸಿಯ ಶ್ರೀ ಗುರುಮೂರ್ತಿ ಶಾಸ್ತ್ರಿಯವರು “ಶಿವಪ್ರತಾಪ” ಪತ್ರಿಕೆ ಮತ್ತು ಶ್ರೀ ಶಿವಲಿಂಗ ಶಾಸ್ತ್ರಿಗಳ “ಧರ್ಮತರಂಗಿಣಿ” ಪತ್ರಿಕೆಯಂತೆ ಶ್ರೀ ಚನ್ನಮಲ್ಲಿಕಾರ್ಜುನರು ತಮ್ಮ “ಸದ್ಧರ್ಮ ದೀಪಿಕೆ” ಪತ್ರಿಕೆಯನ್ನು ಮುವತ್ತೊಂದು ವರ್ಷಗಳವರೆಗೆ ನಮ್ಮ ಶರಣ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ವಿಶೇಷವೆಂದರೆ ಈ ಪತ್ರಿಕೆಯು ನೂರು ವರ್ಷಗಳ ಹಿಂದೆ ವಿದೇಶದಲ್ಲಿಯೂ ಸಹಿತ ಮಾನ್ಯತೆಯನ್ನು ಪಡೆದಿತ್ತು.(ಇಷ್ಟೇ ಅಲ್ಲದೆ ಶ್ರೀ ಕುಮಾರ ಶಿವಯೋಗಿಗಳು “ಮೈಸೂರು ಸ್ಟಾರ್” ಮತ್ತು “ಕರ್ನಾಟಕ ಟೈಮ್ಸ್” ಪತ್ರಿಕೆಗಳಿಗೂ ಆರ್ಥಿಕವಾದ ನೆರವನ್ನು ಇತ್ತ ಸಂಗತಿ ತಿಳಿದು ಬರುತ್ತದೆ.)
ಶ್ರೀ ಚನ್ನಮಲ್ಲಿಕಾರ್ಜುನರು ವಿದ್ರೂಪವಾಗಿದ್ದರೂ ಅದಮ್ಯ ಚೈತನ್ಯ ಉಳ್ಳವರಾಗಿದ್ದರು, ಆಚಾರ-ವಿಚಾರ ಸಂಪನ್ನರು, ಶರಣ ಸಂಸ್ಕೃತಿಯ ಪರಿಪಾಲಕರಾಗಿದ್ದು ಎಲೆಮರೆಯ ಕಾಯಿಯಂತೆ ಇವರ ಜೀವನವಿತ್ತು. ಶ್ರೀ ಕುಮಾರ ಮಹಾಶಿವಯೋಗಿಗಳೆಂದರೆ ಇವರಿಗೆ ಪಂಚಪ್ರಾಣ. ಶ್ರೀ ಮಲ್ಲಿಕಾರ್ಜುನರು ಅನೇಕ ವಚನ ಗ್ರಂಥಗಳನ್ನು ಸಂಶೋಧನಾತ್ಮಕ ಗ್ರಂಥಗಳನ್ನು, ಸ್ತೋತ್ರ ಸಾಹಿತ್ಯ ತ್ರಿಪದಿ ಷಟ್ಪದಿ ಕಂದ-ಪದ್ಯ ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಇಂಗ್ಲಿಷ್ ಸಂಸ್ಕೃತ ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದಿದ್ದ ಮಲ್ಲಿಕಾರ್ಜುನರು ಶ್ರೀ ಕುಮಾರ ಮಹಾಶಿವಯೋಗಿಗಳವರ ಮಾರ್ಗದರ್ಶನದಲ್ಲಿ ಶಿವಾನುಭವ ಶಾಸ್ತ್ರದ ಆಳವಾದ ಜ್ಞಾನವನ್ನು ಪಡೆದರು. ಶಿವಾನುಭವವನ್ನು ಹೇಳಲು ಕುಳಿತರೆ ದೊಡ್ಡ ದೊಡ್ಡ ಪಂಡಿತರಿಗೆ ಅರ್ಥವಾಗದಂತಹ ಗಹನ ತತ್ವಗಳನ್ನು ಸಿದ್ಧಾಂತಗಳನ್ನು ಸರಳವಾಗಿ ತಿಳಿಸುವಂತಹ ಕಲೆಯನ್ನು ಹೊಂದಿದ್ದರು ಮತ್ತು ಕಬ್ಬೂರು ಶರಣರೊಡನೆ, ಗುತ್ತಲದ ಅಗಡಿ ಮಠದ ಶ್ರೀ ನಿ ಪ್ರ ರುದ್ರಸ್ವಾಮಿಗಳು ಮತ್ತು ಹಾನಗಲ್ಲ ಕುಮಾರ ಶಿವಯೋಗಿಗಳೊಂದಿಗೆ ಶಿವಾನುಭವದ ಗಹನ ತತ್ವಗಳನ್ನು ಮೇಲಿಂದ ಮೇಲೆ ಚರ್ಚಿಸುತ್ತಿದ್ದರು.1904 ರಲ್ಲಿ ಪ್ರಾರಂಭವಾದ ಅಖಿಲ ಭಾರತ ವೀರಶೈವ ಮಹಾಸಭೆಯ ಮತ್ತು 1909 ರಲ್ಲಿ ಪ್ರಾರಂಭವಾದ ಶಿವಯೋಗ ಮಂದಿರದ ಸ್ಥಾಪನೆಯ ಸಮಾರಂಭಗಳಿಗೆ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೊಂದಿಗೆ ಹೋಗಿ ಎಲ್ಲೆಡೆ ಅನುಭಾವ, ಪ್ರವಚನಗಳನ್ನು ನೀಡುತ್ತಿದ್ದರು. 1924ರಲ್ಲಿ ಜರುಗಿದ “ಪರಳಿಯ ವ್ಯಾಜ್ಯ”ದಲ್ಲಿ ಕುಮಾರ ಶಿವಯೋಗಿಗಳವರ ಕೋರಿಕೆಯ ಮೇರೆಗೆ ತಾವು ಅಧ್ಯಯನ ಮಾಡಿ ಸಂಗ್ರಹಿಸಿದ ಅನೇಕ ದಾಖಲೆಗಳನ್ನು ಒದಗಿಸಿ ಕೊಟ್ಟರು.
ಶ್ರೀ ಕುಮಾರ ಶಿವಯೋಗಿಗಳವರ ಅನುಗ್ರಹದಿಂದ ಸದ್ಧರ್ಮ ದೀಪಿಕೆ ಎಂಬ ಪತ್ರಿಕೆಯನ್ನು ಆರಂಭಿಸಿದಂತಹ ಶ್ರೀ ಚನ್ನಮಲ್ಲಿಕಾರ್ಜುನರಿಗೆ ಬಾಲ್ಯದಲ್ಲಿಯೇ ಸಿಡುಬು ರೋಗದಿಂದ ಕಣ್ಣಿನಲ್ಲಿ ಹೂ ಬಿದ್ದು ಅದು ಬರುಬರುತ್ತಾ ಬಹಳ ಬಾಧೆ ನೀಡಲಾರಂಭಿಸಿತು. ಸಾಲದ್ದಕ್ಕೆ ಜನರು ಇದು ಒಂದು ಕಣ್ಣಿಂದ ಇನ್ನೊಂದು ಕಣ್ಣಿಗೆ ಹಬ್ಬಿ ಎರಡು ಕಣ್ಣುಗಳು ಹೋಗುತ್ತವೆ ಎಂದು ಮಾತನಾಡಲಾರಂಭಿಸಿದರು.
ಇದರಿಂದ ಶ್ರೀ ಚನ್ನಮಲ್ಲಿಕಾರ್ಜುನರು ಚಿಂತೆಗೊಳಗಾದರು.
ಹೀಗೆ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಒಮ್ಮೆ ಶಿರಾಳಕೊಪ್ಪಕ್ಕೆ ದಯಮಾಡಿಸಿದರು. ಆ ಸಂದರ್ಭದಲ್ಲಿ ಶ್ರೀಗಳು ಚೆನ್ನಮಲ್ಲಿಕಾರ್ಜುನರ ಆರೋಗ್ಯವನ್ನು ವಿಚಾರಿಸಿ ದಾಗ ತಮಗಾದ ಕಣ್ಣಿನ ತೊಂದರೆಯನ್ನು ನಿವೇದಿಸಿ ಕೊಂಡರು. ಆಗ ಶ್ರೀಗಳು “ನಿಮ್ಮ ಕಣ್ಣುಗಳಿಗೆ ಏನೂ ಆಗುವುದಿಲ್ಲ ಯೋಚನೆ ಮಾಡಬೇಡಿ, ಶಿವನ ಸೇವೆಯನ್ನು ಮನಮುಟ್ಟಿ ಮಾಡಿ, ಶಿವ ನಿಮಗೆ ಒಳಿತನ್ನು ಮಾಡುತ್ತಾನೆ” ಎಂದು ಶ್ರೀ ಚನ್ನಮಲ್ಲಿಕಾರ್ಜುನರ ಕಣ್ಣಿನತ್ತಲೆ ದೃಷ್ಟಿನೆಟ್ಟು ಒಂದು ಕ್ಷಣ ದೃಷ್ಟಿಸಿದ್ದರು. ಆ ಒಂದು ದಿವ್ಯದೃಷ್ಟಿಗೆ ಶ್ರೀ ಚೆನ್ನಮಲ್ಲಿಕಾರ್ಜುನರ ದೃಷ್ಟಿಬಾಧೆ ನೀಗಿ ತಮ್ಮ ಜೀವಿತದ ಅಂತ್ಯದವರೆಗೂ ಮತ್ತೆ ಯಾವ ಬಾಧೆಯೂ ಉಂಟಾಗಲಿಲ್ಲ.(ಇದು ಶಿವಯೋಗ ಮಂದಿರದ ಬೆಳಗು ಪತ್ರಿಕೆಯಲ್ಲಿ ಉಲ್ಲೇಖವಿದೆ.)
. ಧರ್ಮ ಸಾಹಿತ್ಯ ಸಂಸ್ಕೃತಿಗಳ ಸಮುನ್ನತಿಗಾಗಿ ಶ್ರಮಿಸಿದಂತಹ ಮತ್ತು ಶರಣರ ಬಾಳನ್ನು ಬದುಕಿರುವ ಶ್ರೀ ಚನ್ನಮಲ್ಲಿಕಾರ್ಜುನರು ಒಬ್ಬ ಅಪರೂಪದ ಸಾಹಿತಿ, ಲೇಖಕ, ಸಂಶೋಧಕ, ಶರಣ. ಇಂತಹ ಎಷ್ಟೋ ಮಹನೀಯರು ಧರ್ಮದ ಏಳಿಗೆಗಾಗಿ ಸಂಘಟನೆಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದಾರೆ ಇಂತಹ ಮಹನೀಯರ ಬದುಕು ನಮಗೂ ನಿಮಗೂ ಆದರ್ಶವಾಗಬೇಕು. ಇತಿಹಾಸದ ಪುಟಗಳಲ್ಲಿ ಮರೆಯಾಗಿರುವ ಇಂತಹ ಅನೇಕ ಮಹನೀಯರಿಂದ ನಮ್ಮ ದೇಶದ, ನಮ್ಮರಾಷ್ಟ್ರದ, ನಮ್ಮ ನಾಡಿನ ಸಂಸ್ಕೃತಿ ಉತ್ಕೃಷ್ಟವಾಗಿದೆ, ಉಜ್ವಲವಾಗಿದೆ ಮತ್ತು ಉತ್ತರೋತ್ತರವಾಗಿ ಬೆಳೆಯಲಿದೆ, ಇಂತಹ ಸಾವಿರಾರು ಮಕ್ಕಳನ್ನು ಹೆತ್ತ ಭೂಮಿ ಹೊತ್ತ ನಾಡು ಪುಣ್ಯದಾಲಯ, ಇಂತಹ ಭೂಮಿಯಲ್ಲಿ ಉದಿಸಿದ ನಾವೆಲ್ಲರೂ ಧನ್ಯರು. ತಮಗೆಲ್ಲರಿಗೂ ಧನ್ಯವಾದಗಳು.