ರೇಣುಕಾಚಾರ್ಯ :ಜಗದ್ಗುರು ರೇಣುಕಾಚಾರ್ಯ ಜಯಂತಿ

ಮಾಹಿತಿ ಆಧಾರ:  ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ರೇಣುಕಾಚಾರ್ಯರು ವೀರಶೈವ ಪಂಚಾಚಾರ್ಯರಲ್ಲೊಬ್ಬರು. ಅವರು ಕೈಲಾಸದ ಪ್ರಮಥರಲ್ಲಿ ಒಬ್ಬರು. ಪಾಲ್ಕುರಿಕೆ ಸೋಮನಾಥನ ಗಣಸಹಸ್ರದಲ್ಲಿ ಪ್ರಮಥಗಣರಲ್ಲಿ ಇವರ ಉಲ್ಲೇಖವಿದೆ. ಇವರನ್ನು ಕುರಿತು ಸಂಸ್ಕೃತದಲ್ಲಿ ರೇಣುಕಾಗಸ್ತ್ಯ ಎಂಬ ಗ್ರಂಥವಿದೆ. ಇದರಲ್ಲಿ ವೀರಶೈವ ಏಕೋತ್ತರ ಷಟ್‍ಸ್ಥಲಗಳನ್ನು ವಿಸ್ತಾರವಾಗಿ ನಿರೂಪಿಸಲಾಗಿದೆ.

ಆಗಮಗಳ ಪ್ರಕಾರ ರೇಣುಕಾಚಾರ್ಯರು ಈಗಿನ ಆಂಧ್ರ ಪ್ರಾಂತ್ಯದಲ್ಲಿನ ಕೊಲ್ಲಿಪಾಕಿ ಎಂಬಲ್ಲಿ ಜನಿಸಿದರು. ಇವರು ಮಲಯಾಚಲದಲ್ಲಿ ಅಗಸ್ತ್ಯರಿಗೆ  ತತ್ತ್ವೋಪದೇಶ ಮಾಡಿದರೆಂಬ ಹೇಳಿಕೆ ಇದೆ. ಅನಂತರ ಲಂಕೆಗೆ ಹೋಗಿ ರಾವಣನ ತಮ್ಮ ವಿಭೀಷಣನ ಇಷ್ಟದಂತೆ ಮೂರುಕೋಟಿ ಲಿಂಗಗಳನ್ನು ಸ್ಥಾಪಿಸಿದರಂತೆ. ಇವರ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಚೋಳರೇಣುಕ ಸಂವಾದ ಗ್ರಂಥ ಸಂಸ್ಕೃತದಲ್ಲಿದೆ. ಇದನ್ನು ರೇಣುಕಾಚಾರ್ಯರ ಅವತಾರವೆನಿಸಿದ ರೇವಣಸಿದ್ಧರು (12ನೆಯ ಶತಮಾನ) ಕಂಚಿಯ ರಾಜೇಂದ್ರ ಚೋಳನಿಗೆ ಉಪದೇಶಿಸಿದ ಗ್ರಂಥವೆಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ರೇಣುಕಾಚಾರ್ಯ (ಸಿದ್ಧರೇವಣ)ರನ್ನು ಮಹಾನ್ ಸಿದ್ಧಪುರುಷರೆಂದು  ಉಲ್ಲೇಖಿಸಲಾಗಿದೆ.

ರೇಣುಕಾಚಾರ್ಯರನ್ನು ಪುರಾಣದೊಂದಿಗೆ ಬೆಸೆದಿರುವುದರಿಂದ  ಚಾರಿತ್ರಿಕವಾಗಿ ಇವರ ಬಗ್ಗೆ ಖಚಿತವಾದ ವಿಚಾರಗಳು ಲಭ್ಯವಾಗಿಲ್ಲ. ಅನೇಕ ವೀರಶೈವ ಮಠಗಳಲ್ಲಿ ರೇಣುಕಾಚಾರ್ಯರ ಲಿಂಗೋದ್ಭವಲೀಲೆಯ ಮೂರ್ತಿಪೂಜೆ ನಡೆಯುತ್ತಿದೆ.

ರೇವಣಸಿದ್ಧ

ರೇವಣಸಿದ್ಧ ಸು.10-12ನೆಯ ಶತಮಾನದಲ್ಲಿ ಕಲ್ಯಾಣದ ಪರಿಸರದಲ್ಲಿ ಜನ್ಮವೆತ್ತಿ ವಿಭೂತಿಪುರುಷರಾಗಿ ಮೆರೆದು ಸಮಾಜಸೇವೆ ಸಲ್ಲಿಸಿ ಬಯಲಾದರೆನ್ನಲಾದ ಪ್ರಸಿದ್ಧ ವೀರಶೈವ ಆಚಾರ್ಯರು. ಇವರ ಜೀವನದ ಚಾರಿತ್ರಿಕ ಅಂಶಗಳು ಪೌರಾಣಿಕಾಂಶಗಳೊಂದಿಗೆ ಬೆರೆತು ಮಸುಕಾಗಿವೆ. ಸಂಪ್ರದಾಯದ ಪ್ರಕಾರ ರೇವಣಸಿದ್ಧರು ವೀರಶೈವ ಪಂಚಾಚಾರ್ಯರಲ್ಲೊಬ್ಬರು. ಸು. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ಸಿದ್ಧರೇವಣ, ರೇವಣಾಚಾರ್ಯರನ್ನು (ರೇಣಕಾಚಾರ್ಯ) ಮಹಾನ್ ಸಿದ್ಧಪುರುಷರೆಂದು ಉಲ್ಲೇಖಿಸಲಾಗಿದೆ. ಇವರನ್ನು ಕೈಲಾಸದ ಪ್ರಮಥ ರೇಣುಕನೊಂದಿಗೆ ಹೋಲಿಸಲಾಗಿದೆ. ಬಸವಾದಿಗಳಿಗೆ ಸಮಕಾಲೀನರಾಗಿದ್ದು ಧರ್ಮಗುರು ವೆನಿಸಿದ್ದ ರೇವಣಸಿದ್ಧರೇ ಈ ಸಿದ್ಧರೇವಣ್ಣ. ಆದರೆ ಸಿದ್ಧರಾಮ, ಆದಯ್ಯ ಇವರ ವಚನಗಳಲ್ಲಿ ರೇವಣಸಿದ್ಧರ ಉಲ್ಲೇಖವಿದೆ. ಶಿವತತ್ತ್ವರತ್ನಾಕರದ ಕರ್ತೃ ಬಸವಭೂಪಲನು ರೇವಣಸಿದ್ಧೇಶ್ವರರು ಶೃಂಗೇರಿಯ ಪ್ರಸಿದ್ಧ ಚಂದ್ರಮೌಳೀಶ್ವರ ಲಿಂಗದ ದಾತೃವೆಂದು ಉಲ್ಲೇಖಿಸಿದ್ದಾನೆ.

ಹರಿಹರಾದಿಗಳು ತಿಳಿಸುವಂತೆ ರಾಜೇಂದ್ರ ಚೋಳ ರೇವಣಸಿದ್ಧರ ಸಮಕಾಲೀನ.

ಬಸವಣ್ಣನವರ ಅನಂತರ ವೀರಶೈವಧರ್ಮದ ಪುನರುಜ್ಜೀವನವನ್ನು ಕೈಗೊಳ್ಳಲು ಧಾರ್ಮಿಕ ಕ್ರಾಂತಿಯನ್ನು ಮುಂದುವರಿಸಲು ವೀರಶೈವರು ರುದ್ರಮುನಿಯನ್ನು ನಾಯಕನನ್ನಾಗಿ ಆರಿಸಿದರಂತೆ. ಆ ರುದ್ರಮುನಿ ರೇವಣಸಿದ್ಧರ ಔರಸಪುತ್ರ. ಈ ಸಂಗತಿ ಚಾರಿತ್ರಿಕವಾದ್ದು. ಕಲ್ಯಾಣದ ಬಿಲ್ವವನದ ಮಧ್ಯೆ ಈಗಲೂ ಇರುವ ರುದ್ರಮುನಿ ಗುದ್ದುಗೆ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಲ್ಯಾಣದ ಸಮೀಪದಲ್ಲಿ ಸಿದ್ಧಗಿರಿಯೆಂದು ಹೆಸರಾದ ತಾಣ ಈ ರೇವಣಸಿದ್ಧರ ತಪೋಭೂಮಿ ಎನ್ನಲಾಗಿದೆ. ಇವಲ್ಲದೆ ರೇವಣಸಿದ್ಧ ಗದ್ದುಗೆ, ರುದ್ರಮುನಿಗದ್ದುಗೆ ಎಂಬ ತೋರು ಗದ್ದುಗೆಗಳು ಕರ್ನಾಟಕದಲ್ಲಿ ಅನೇಕವಿವೆ. ಬೆಂಗಳೂರು ತಾಲ್ಲೂಕಿನ ರಾಮನಗರದ ಬಳಿ ಇರುವ ರೇವಣಸಿದ್ಧೇಶ್ವರ ಬೆಟ್ಟ ಆ ಭಾಗದಲ್ಲಿ ಪವಿತ್ರ ಕ್ಷೇತ್ರವಾಗಿ ಇಂದಿಗೂ ಪ್ರಸಿದ್ಧವಿದೆ. ರೇವಣಸಿದ್ಧರಿಂದ ರಚಿತವಾದ ಗ್ರಂಥಗಳ ಬಗ್ಗೆಯಾಗಲೀ ಅವರ ವೈಯಕ್ತಿಕ ಜೀವನದ ಹೆಚ್ಚಿನ ವಿವರಗಳಾಗಲೀ ತಿಳಿದುಬಂದಿಲ್ಲ.

Related Posts