ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಶ್ರೀ ಮಲ್ಲಿಕಾರ್ಜುನದೇವರು, ಬಿ. ಎ., ಆನಂದಪುರಂ,

( ಪೂಜ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು

ಬೆಕ್ಕಿನ ಕಲ್ಮಠ ಶಿವಮೊಗ್ಗ ಹುಬ್ಬಳ್ಳಿಯ ವ್ಯಾಸಂಗ ಸಮಯದಲ್ಲಿ ಬರೆದಿದ್ದು)

ʼʼಮರ್ತ್ಯಲೋಕದ ಮಹಾಮನೆ ಹಾಳಾಗಬಾರದೆಂದು ಕರ್ತನಟ್ಟಿದನಯ್ಯ ಒಬ್ಬ ಶಿವಶರಣನ, ಆ ಶರಣ ಬಂದು ಶಿವಪುರವ ಕೈಲಾಸ ಮಾಡಿ ರುದ್ರಗಣ, ಪ್ರಮಥಗಣಂಗರೆಲ್ಲರ ಹಿಡಿತಂದು, ಅಸಂಖ್ಯಾತರೆಂದು ಹೆಸರಿಟ್ಟು ಕರೆದು, ಭಕ್ತಿಯ ಕುಳಸ್ಥಳವ ಶೈತದೃಷ್ಟ ಪವಾಡದಿಂದ ಮೆರೆದು ತೋರಿ, ಜಗವರಿಯ ಶಿವಾಚಾರದ ಧ್ವಜವನೆತ್ತಿಸಿ, ಮರ್ತ್ಯಲೋಕ ಶಿವಲೋಕವೆರಡಕ್ಕೆ

ನಿಚ್ಚಣಿಕೆಯಾದನು……. ನೋಡಾ ಸಿದ್ದರಾಮಯ್ಯ

ಇದು ಪ್ರಭುದೇವರ ವಚನ; ಬಸವಣ್ಣನವರನ್ನು ಕುರಿತದ್ದು. ಇಂದಿಗೆ ಎಂಟು ನೂರು ವರ್ಷಗಳಾಚೆ : ಇಂದು ಪ್ರಗತಿ, ಕ್ರಾಂತಿ ಅನ್ನುವುದೆಲ್ಲ ಬಸವಣ್ಣನವರ ನೇತೃತ್ವದಲ್ಲಿ ನಡೆಯಿತು; ಅದೊಂದು ವಿಸ್ಮಯಕಾರಕ ಕ್ರಾಂತಿ, ಕನ್ನಡ ನಾಡಿನಲ್ಲಿ,  ಕನ್ನಡಿಗರಿಂದ, ಕನ್ನಡದ ಮೂಲಕ, ಬರಿ ಹನ್ನೆರಡು ವರ್ಷಗಳಲ್ಲಿ ಈ ಕ್ರಾಂತಿ : ಧರ್ಮ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಹೊಸ ಜೀವ ತುಂಬಿತು; ಈ ನಾಡು ಬೆಳಗಿನ ಭೂಮಿಯಾಯಿತು. ಚಂದನದ ಸನ್ನಿಧಿಯಿಂದ ಬೇವು- ಬೆಬ್ಬುಲಿ ಮರಗಳು ಪರಿಮಳಿತವಾಗುವಂತೆ : ಶರಣರ ಸಂಗದಿಂದ ಪಾಮರರು ಪೂತಾತ್ಮರಾದರು, ಕೀಳು ಕಸಬು ಕಾಯಕವಾಯಿತು. ಜನವಾಣಿ ದೇವವಾಣಿಯಾಯಿತು, ಹಾಳು ಹೆಣ್ಣು ಕಪಿಲಸಿದ್ಧ ಮಲ್ಲಿಕಾರ್ಜುನವಾಯಿತು, ಕತ್ತಲೆ ಸತ್ತು ಬೆಳಕು ಬೀದಿವರಿಯಿತು. ಇದರಿಂದ ಪ್ರಪಂಚವೇ ಬೆರಗಾಗಿ, ಕನ್ನಡ ನಾಡನ್ನು ನೋಡುವಂತಾಯಿತು.

ಇಂತಹದೇ ಒಂದು ಪ್ರಸಂಗ : ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ, ಇಪ್ಪತ್ತನೇ ಶತಮಾನದ ಪೂರ್ವಾರ್ಧದ ಸಂಕ್ರಮಣ ಕಾಲದಲ್ಲಿ ನಡೆಯಿತು. ೧೨ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣ ಅಧ್ವರ್ಯುವಾದರೆ, ಈ ಕಾಲದಲ್ಲಿ ಒಬ್ಬ ವೀರ ಸನ್ಯಾಸಿಯ ನೇತೃತ್ವದಲ್ಲಿ ನಾಡು ಹೊಸ ಬೆಳಗನ್ನು ಕಂಡಿತು. ಆ ಸನ್ಯಾಸಿಯ ಪ್ರೇರಣೆಯಿಂದ ಸತ್ತಂತವರು ಬಡಿದೆಚ್ಚತ್ತರು, ಕಚ್ಚಾಡುವವರು ಒಲಿದು ಒಂದಾದರು, ಒಟ್ಟಿಗೆ ಬಾಳುವ ಹದನನು ಕಲಿತರು. ಆ ಮಹಾನುಭಾವ ಭಕ್ತಿಯಲ್ಲಿ ಬಸವಣ್ಣನಾಗಿ, ಜ್ಞಾನದಲ್ಲಿ ಚನ್ನಬಸವಣ್ಣನಾಗಿ, ವೈರಾಗ್ಯದಲ್ಲಿ ಪ್ರಭುದೇವನಾಗಿ, ಉಳಿದ ಕಾಯಕಂಗಳಲ್ಲಿ ಶಿವಶರಣರಂಶನಾಗಿ ಕಂಗೊಳಿಸಿದ ಆ ಕಾರುಣ್ಯಮೂರ್ತಿಯೇ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು.

* ಭೂತಿ, ವಿಭೂತಿಯಾಯಿತು ʼʼ :

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಳ್ಳಿಯಲ್ಲಿ, ಬಡ ಕುಟುಂಬದಲ್ಲಿ ಬಸವಯ್ಯ- ನೀಲಮ್ಮ ದಂಪತಿಗಳ ಚಿದ್ಗರ್ಭದಿಂದ, ಕ್ರಿ. ಶ. ೧೮೬೭ ರಲ್ಲಿ ಶ್ರೀಗಳು ಜನಿಸಿದರು. ಬಡತನದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಹಾಲಯ್ಯ : ʼʼಜಗತ್ತೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬʼʼ ಎಂಬ ಉದಾತ್ತ ತತ್ತ್ವವೇ ಮೂರ್ತಿವೆತ್ತಂತಿದ್ದ ಈ ಮಹಾನುಭಾವ, ಒಂದು ಕುಟುಂಬದ ಉದ್ಧಾರಕ್ಕೆ ಹೇಗೆ ನಿಂತಾನು. ಮನೆಯನ್ನು ತೊರೆದು, ಹುಬ್ಬಳ್ಳಿಗೆ ಬಂದು, ಆರೂಢಮಠದಲ್ಲಿದ್ದು, ಶಾಸ್ತ್ರಾಭ್ಯಾಸ ಮಾಡಿ, ಮುಂದೆ ಎಳಂದೂರು ಬಸವಲಿಂಗ ಸ್ವಾಮಿಗಳ ಶಿಷ್ಯತ್ವವನ್ನು ಪರಿಗ್ರಹಿಸಿ, ವಿದ್ಯಾ ವಿನಯಸಂಪನ್ನನಾಗಿ, ಯೋಗಾಸನ ಬಲ್ಲಿದನಾಗಿ ನಂತರದ, ದೀರ್ಘಕಾಲದ ತಪಸ್ಸಿನ ಪ್ರಭಾವ ಎಲ್ಲೆಡೆ ಚಲ್ಲವರಿಯಿತು. ಹಾನಗಲ್ಲ ವಿರಕ್ತ ಮಠ ಇವರ ಬರವನ್ನು ಹಾರೈಸಿತ್ತು. ಹಿರಿಯರ ಕೋರಿಕೆಯ ಮೇರೆಗೆ ಅಧಿಕಾರವನ್ನು ಹೊಂದಿ, ಹಾಲಯ್ಯ : ಹಾನಗಲ್ಲ ಕುಮಾರ ಸ್ವಾಮಿಗಳಾದರು. ಭೂತಿ, ವಿಭೂತಿಯಾಯಿತು.

 ಹಾನಗಲ್ಲ ಕುಮಾರ ಶಿವಯೋಗಿಗಳು : ಸಮಾಜಕ್ಕೊಂದು ಪರಿವರ್ತನೆಯ ಕಾಲ. ಅವರ ವಿದ್ಯುತ್ ಸ್ಪರ್ಷದಿಂದ ಸತ್ತಂತಿರುವವರು ಮರು ಹುಟ್ಟು ಪಡೆದರು, ಮೂಕರಾದವರು ವಾಗ್ಮಿಗಳಾದರು, ಪಾಪಿಗಳು ಪವಿತ್ರರಾದರು, ಕುರುಡರಿಗೆ ಕಣ್ಣು ಬಂದಿತು, ದುರ್ಬಲರು ಭೀಮ ಬಲರಾದರು. ಅವರದು ಅದ್ಭುತ ಶಕ್ತಿ; ಅದು ನಾಡಿಗೆ ನಾಡನ್ನೇ ಹಿಡಿದೆತ್ತಿತು. ಅವರು ಗೈದ ಮಹತ್ತರ ಕಾರ್ಯಗಳಲ್ಲಿ : ಅಖಿಲ ಭಾರತ ವೀರಶೈವ ಮಹಾ ಸಭೆ ಹಾಗೂ ಶಿವಯೋಗ ಮಂದಿರಗಳ ಸ್ಥಾಪನೆ ಪ್ರಮುಖವಾದವುಗಳು. ಇವೆರಡೂ ವೀರಶೈವ ಸಮಾಜ ಪುರುಷನ ಶ್ವಾಸಕೋಶಗಳು.

*ʼʼ ವೀರಶೈವ ಮಹಾ ಸಭೆ ʼʼ:

ಪಾಶ್ಚಾತ್ಯ ಶಿಕ್ಷಣದ ಯಾವ ಗಾಳಿಯ ಸೋ೦ಕಿಲ್ಲದ ಶ್ರೀಗಳು, ಯಾವ ಸಮಾಜದಲ್ಲಿ ಸಾರ್ವಜನಿಕ ಸಮ್ಮೇಲನ ನಡೆಯದಿದ್ದ ಕಾಲದಲ್ಲಿ, ೬೫ ವರ್ಷಗಳ ಹಿಂದೆ ಜನಾಂಗವು ಮಲಗಿದ್ದ ಕಾಲದಲ್ಲಿ, ಸಮಾಜಕ್ಕೊಂದು ವ್ಯವಸ್ಥಿತ ಸಂಘಟಿತ ರೂಪ ಕೊಡಲು, ನವ ಚೈತನ್ಯ ತುಂಬಲು ಏಕಮೇವ ಸಾಧನವಾದ, ಅಖಿಲ ಭಾರತ ವೀರಶೈವ ಮಹಾ ಸಭೆಯನ್ನು ಸಮಾಜದ  ಪ್ರಮುಖರನ್ನೊಳಗೊಂಡು ೧೯೦೪ರಲ್ಲಿ ಧಾರವಾಡದಲ್ಲಿ ಸ್ಥಾಪಿಸಿ, ಪ್ರಥಮ ಅಧಿವೇಶನ ನಡೆಸಿದುದು ನಿಜಕ್ಕೂ ಅಚ್ಚರಿಯನ್ನುಂಟುಮಾಡುವದು ಮತ್ತು ಶ್ರೀಗಳಲ್ಲಿದ್ದ ಅದ್ವಿತೀಯವಾದ ಮುಂದಾ ಲೋಚನೆಯ ದ್ಯೋತಕವಾದುದು. ಈ ಮಹಾ ಸಭೆಯಿಂದ ಆದ ಪ್ರಯೋಜನಗಳು ಅನೇಕ. ಲಿಂಗಾಯತ ವಿದ್ಯಾವರ್ಧಕ ಪಂಡ ಏರ್ಪಟ್ಟು, ವೀರಶೈವರಿಗೆ ಇಂಗ್ಲೀಷ್  ವಿದ್ಯಾಭ್ಯಾಸಕ್ಕೆ ಸಹಾಯವಾಯಿತು; ವೀರಶೈವರ ಅಭಿವೃದ್ಧಿಗೆ ನಿಧಿ ಏರ್ಪಟ್ಟಿತ್ತು. ಒಟ್ಟಿನಲ್ಲಿ ಸಮಾಜದ ಸರ್ವತೋಮುಖ ಜಾಗ್ರತಿಗೆ ಸಹಕಾರಿಯಾಯಿತು.

“ʼ ಶಿವಯೋಗಮಂದಿರ ʼʼ :

ಸಮಾಜದ ಪ್ರಗತಿಯನ್ನು ಬಯಸುವ ಕುಮಾರ ಶಿವಯೋಗಿಗಳು, ವೀರಶೈವ ಆಚಾರ ವಿಚಾರಗಳು ಶುದ್ಧವಾಗಿ ಇರಬೇಕಾದರೆ, ಸಮಾಜದ ಉದ್ಧಾರಕ್ಕಾಗಿಯೇ ತಮ್ಮನ್ನು ಮುಡುಪಾಗಿಡಬಲ್ಲ, ಶಿವಯೋಗಿ ಸಿದ್ಧರ ಸಮೂಹವೊಂದು ಸಿದ್ಧವಾಗುವ ವರೆಗೆ, ಸಮಾಜದ ಉದ್ಧಾರ ಸಾಧ್ಯವಿಲ್ಲವೆಂದು ಮನಗಂಡಿದ್ದರು. ಗುರು. ಜಂಗಮರು ; ತಜ್ಞರೂ, ಸುಶುಕ್ಷಿತರು, ನಡೆ ನುಡಿ ಗಳಲ್ಲಿ ಶುದ್ಧರೂ, ಶಿವಯೋಗದಲ್ಲಿ ನಿಷ್ಠರೂ ಆಗಿರಬೇಕೆಂದೂ, ಪ್ರತಿಭಾಶಾಲಿ ಭಕ್ತರನ್ನು, ಶಿವಾನು ಭವಿಗಳನ್ನು ತಯಾರು ಮಾಡುವ ಘನವಾದ ಉದ್ದೇಶ ಈಡೇರಬೇಕಾದರೆ, ಒಂದು ಯೋಗ ಮಂದಿರ ಸ್ಥಾಪಿಸಬೇಕೆಂದು ಸಂಕಲ್ಪಿಸಿ, ಒ೦ಟಮುರಿ ದೇಸಾಯರ ಅಧ್ಯಕ್ಷತೆಯಲ್ಲಿ ನಡೆದ ನಾಲ್ಕನೆ ಅಧಿವೇಶನದಲ್ಲಿ ನಿಶ್ಚಯಿಸಲಾಯಿತು. ಇಲಕಲ್ಲ ವಿಜಯ ಮಹಾಂತಸ್ವಾಮಿಗಳು ತೋರಿದ ಕೊಟ್ಟೂರು ಬಸವೇಶ್ವರ ತಪೋವನ, ಬನಶಂಕರಿ-ಮಹಾಕೂಟ ಇವುಗಳ ಮಧ್ಯದಲ್ಲಿ, ಮಲಾಪಹಾರಿ ದಂಡೆಯ ಮೇಲೆ ಕ್ರಿ. ಶ. ೧೯೦೯ ರಲ್ಲಿ ಶಿವಯೋಗ ಮಂದಿರ ಸ್ಥಾಪನೆಯಾಯಿತು.

 ಇಂದಿನಿಂದ, ಕುಮಾರ ಶಿವಯೋಗಿಗಳ ಕಾರ್ಯಕ್ಷೇತ್ರ ಸಮಾಜವಾದರೆ : ಕೇಂದ್ರ ಬಿಂದು ಶಿವಯೋಗಮಂದಿರವಾಯಿತು. ವಟುಗಳು ಬಂದರು, ಯೋಗಪಟುಗಳಾಗತೊಡಗಿದರು; ಜನತೆಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಕೈದೀವಿಗೆಯಾದರು. ಕುಮಾರ ಶಿವಯೋಗಿ ಗಳು ಯಾವ ಪೀಠಕ್ಕೂ ಜಗದ್ಗುರುಗಳಾಗಲಿಲ್ಲ; ಆದರೆ, ಜಗದ್ಗುರುಗಳಂಥವರನ್ನು ತಯಾರು ಮಾಡುವ ಸಂಸ್ಥೆ ಕಟ್ಟಿದರು. ಧರ್ಮ ಪ್ರಸಾರಕ್ಕೆ ಯೋಗ್ಯ ಸಾಧನ : ಕೀರ್ತನ, ಪುರಾಣ. ಇಂತಹ ಕಲೆಯನ್ನು  ಪುನರುಜೀವನಗೊಳಿಸುವದರೊಂದಿಗೆ, ಅನೇಕ ಅಂಗಹೀನ ಬಡ ಮಕ್ಕಳಿಗೆ ಕಲ್ಯಾಣವಾಗುವದೆಂದು ತಿಳಿದರು. ಶಾಸ್ತ್ರಕಾರರು, ಕವಿಗಳು, ಗವಾಯಿಗಳು, ವೈದ್ಯರೂ, ಸಿದ್ಧರೂ, ಭಕ್ತರೂ, ಮುಕ್ತರೂ ಸಾಲು ಸಾಲಾಗಿ ಶಿವಯೋಗ ಮಂದಿರವೆಂಬ ಗರಡೀ ಮನೆಯಿಂದ ಹೊರಬಂದರು. ಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಇಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ಗ್ರಂಥ ಸಂಗ್ರಹ, ಹುಳಹತ್ತಿ ಹಾಳಾಗುತ್ತಿದ್ದ ತಾಡವೋಲೆಗಳನ್ನು ಸಂಗ್ರಹಿಸಿ ಸಂಶೋಧಿಸಿದರು. ಶಿವಯೋಗಮಂದಿರ ಶಿವ ಜೀವೈಕ್ಯ ವಿದ್ಯೆಯ ಕೇಂದ್ರವಾಯಿತು. ಭಸ್ಮಲಿಂಗಗಳ ತಯಾರು ಮಾಡಿದರು. ಕೃಷಿ ಸಂವರ್ಧನ, ಪಶು ಸಂಗೋಪನ, ಗ್ರಾಮೋದ್ಯೋಗಗಳ ಪುನರುತ್ಥಾನ, ಖಾದಿ ಪ್ರೋತ್ಸಾಹ, ಒಂದೇ ಎರಡೇ, ಹೀಗೆ ರಾಷ್ಟ್ರ ನಿರ್ಮಾಣಕಾರ ಭರದಿಂದ ಸಾಗಿತು. ಸಂಸ್ಥೆಯಿಂದ ಪತ್ರಿಕೆಗಳು ಪ್ರಕಟವಾದವು. ವ್ಯಾಪಾರ, ಉದ್ದಿಮೆ, ಎಲ್ಲ ರಂಗದಲ್ಲಿ ಕೈಯಾಡಿಸಿದ ಮಹಾಗಾರುಡಿಗರಾದ, ಕುಮಾರ ಶಿವಯೋಗಿಗಳಿಂದ ಒಟ್ಟಿನಲ್ಲಿ ಹೊಸ ಹುಟ್ಟೋಂದು ತಲೆದೋರಿತು.

ಲಿಂಗವನ್ನಿ ಲಿಂಗೈಕ್ಯವೆನ್ನಿʼʼ:

ಕುಮಾರ ಶಿವಯೋಗಿಗಳು ಏನು ಮಾಡಿದ್ದಾರೆ ಏನ್ನ ಬೇಕಿಲ್ಲ; ಏನು ಮಾಡಿಲ್ಲ ಎಂದು ಕೇಳಬೇಕು. ನಡೆಗಲಿಸಿದ, ನುಡಿಗಲಿಸಿದ, ಉಡಗಲಿಸಿದ, ಉಣಗಲಿಸಿದ ಏನೆಲ್ಲವನ್ನೂ ಅರುಹಿ, ಇಲ್ಲಿ ಸಲ್ಲಿ, ಎಲ್ಲೆಲ್ಲಿಯೂ ಸಲ್ಲುವ ಬಲ್ಲಿದರನ್ನಾಗಿಸಿದ ಜನತೆಯನ್ನು, ಅವರು ಪವಾಡಗಳನ್ನು ಮಾಡಲಿಲ್ಲ; ಅವರ ಜೀವನವೇ ಒಂದು ದೊಡ್ಡ ಪವಾಡ. ಅವರ ಜೀವನವೇ ತೆರೆದಿಟ್ಟ ಪುಸ್ತಕ.

 ಸಮಗ್ರ ಅರವತ್ತೂರು ವರ್ಷದ ತಮ್ಮ ಜೀವಿತ ಕಾಲದಲ್ಲಿ : ನಾಡು, ನುಡಿ, ಧರ್ಮ, ಸಮಾಜ ಇವುಗಳ ಚಿಂತನೆಯಲ್ಲಿ ಸ್ವಸ್ವಾಸ್ಥ್ಯವನ್ನು ಗಮನಿಸದೆ, ಅವಿಶ್ರಾಂತವಾಗಿ ದುಡಿದು, ಮೈ ಮುಪ್ಪಾಗಿದ್ದರೂ ಮನ ಮುಪ್ಪಾಗದ ತೇಜಸ್ವಿ ಶಿವಯೋಗಿಗಳು, ಕಾಯಿಲೆಯಿಂದ ಹಾಸಿಗೆ ಹಿಡಿದಾಗಲೂ, ಲೋಕದ ಲೋಗರ ಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದರು. ಆರೋಗ್ಯದ ಬಗ್ಗೆ  ವಿಚಾರಿಸಿದಾಗ ನೊಂದು : ʼʼ ನನ್ನ ಆರೋಗ್ಯ ಏನು ಮಾಡ್ತಿರಿ, ಸಮಾಜದ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಿರಿ; ಎಚ್ಚರಾಗಿ ಜಾಗ್ರತೆ ಗುರಿಯನ್ನು ಸಾಧಿಸಿರಿ ʼʼಎನ್ನುತ್ತಿದ್ದರು. ಕೊನೆಯಲ್ಲೂ ಈ ಸಮಾಜ, ಸಮಾಜ ” ಎಂದು ಕನವರಿಸುತ್ತಿದ್ದುದಲ್ಲದೆ, ಅವಶ್ಯ ಬಿದ್ದರೆ ಮತ್ತೊಮ್ಮೆ ಜನ್ಮವೆತ್ತುವೆನೆಂದು ನುಡಿದ ಆ ಜ್ಯೋತಿ, ಮಹಾ ಜ್ಯೋತಿಯಲ್ಲಿ ಒಡವೆರೆದು ಒಂದಾಗಿ, ನಾಡ ನಂದಾದೀಪವಾಗಿ ಎಲ್ಲರ ಹೃನ್ಮಂದಿರದಲ್ಲಿ ಬೆಳಗುತ್ತಿದೆ.

Related Posts