ಕವಿರತ್ನ ದ್ಯಾಂಪುರ ಚನ್ನಕವಿಗಳು
ಶಾರ್ದೂಲ ವಿಕ್ರೀಡಿತ :
ಶ್ರೀಮನ್ನಿತ್ಯ ನಿರಂಜನ ಪ್ರಭು ಕುಲಾಂಭೋರಾಶಿ ರಾಕಾಸುಧಾ
ಧಾಮಂ ಧರ್ಮಸುಧಾರಕವ್ರಜಲಲಾಮಂ ದಿವ್ಯ ಶೀಲಾನ್ವಿತಂ
ಕಾಮಕ್ಲೇಶ ವಿಭಂಗನೂರ್ಜಿತ ಕೃಪಾಪಾಂಗಂ ಪ್ರಬೋಧಾಕರಂ
ಪ್ರೇಮಂದಾಳ್ಧೆನಗೀಗೆ ಭಕ್ತಿ ಪದಮಂ ನಿಚ್ಚಂ ಕುಮಾರೇಶ್ವರಂ ||೧||
ಚಂಪಕಮಾಲಾ :
ಅನುಪಮ ಜಂಗಮಾಶ್ರಮಕೆ ಸಲ್ಲುವ ಲಾಂಛನವಾ ಪವಿತ್ರ ಲಾಂ
ಛನಕೊರೆಯಪ್ಪ ವರ್ತನಮದಕ್ಕೆಣೆಯಾಗುವ ಚಿತ್ತ ವೃತ್ತಿಯಾ
ಮನಸಿಗೆ ತಕ್ಕ ದಿವ್ಯ ಶಿವಲಿಂಗದ ಪೂಜೆಯದಕ್ಕೆ ಸಲ್ವ ಚಿ –
ದ್ಘನತರ ಶಾಂತಿ ನಿನ್ನೊಳೊಡಮೂಡಿದುದೈ ಜಗದೇಕನಾಯಕಾ ||೨||
ಮತ್ತೇಭವಿಕ್ರೀಡಿತ :
ಘನದುಃಖಾನಲನಿಂದ ಬೇವ ಜನರಂ ಕಂಡಾತ್ಮದೊಳ್ಕಂದಿ ಸು-
ಮ್ಮನೆ ಗೋಳಾಡುವದೇತಕೆ ನೀವು ಶಿವಲಿಂಗಾರಾಧನಂ ಗೈಯಿರೈ
ಮನಮಂ ನೋಯಿಪ ಕಷ್ಟಗಳ್ತೊಲಗಿ ತಾನೇ ಸೌಖ್ಯವೈತರ್ಪುದೆಂ –
ದನುವಿಂ ಬೋಧಿಸಿ ಕಾಯ್ದೆ ಕಕ್ಕುಲತೆಯಿಂ ಶ್ರೀಮತ್ಕುಮಾರೇಶ್ವರಾ ||೩||
ಶಿವಲಿಂಗಾರ್ಚನೆಗೈದೆ ಮಾಣದೆ ಚಿದಾನಂದಾರ್ಥಮಿ ಪೂಜೆಯೇ
ಶಿವಯೋಗೋತ್ಸವಮೆಂದು ನಂಬಿ ಶಿವಭಾವಂ ಬೆತ್ತು ನೀನಾವಗಂ
ಕವಿದೀ ಕ್ಷುತ್ತೃಷೆಯಂ ನಿವಾರಿಪ ನಿಮಿತ್ತಂ ಪೂಜೆಯಂ ಮಾಡದೆ
ಶಿವಯೋಗೀಶ್ವರನೆಂದು ಕೀರ್ತಿವಡೆದೈ ಶ್ರೀಮತ್ಕುಮಾರೇಶ್ವರಾ ||೪||
ಶಿವಲಿಂಗಾರ್ಚನೆ ರೋಗಕೌಷಧಮಿದೇ ಚಿಂತಾಲತಾಛೇದಕಂ
ಶಿವಲಿಂಗಾರ್ಚನೆ ಸರ್ವಸಿದ್ಧಿದಮಿದೇ ಸಾಯುಜ್ಯಭಾಗ್ಯಾಯನಂ
ಶಿವಲಿಂಗಾರ್ಚನೆ ಸತ್ಕೃತಾರ್ಥತೆಯಿದೇ ಸಂತೋಷ ಜನ್ಮಾಲಯಂ
ಶಿವಲಿಂಗಾರ್ಚನೆ ಗೈವುದಾಗಳೆನುತಂ ಪೇಳ್ದೈ ಕುಮಾರೇಶ್ವರಾ ||೫||
ನಿನ್ನಂತೆಮ್ಮಯ ಧರ್ಮದುನ್ನತಿಗೆ ಯತ್ನ೦ಗೈದರಾರ್ನ್ಯಾಯದಿಂ
ನಿನ್ನಂತೆಮ್ಮಭಿಮಾನದಗ್ಗಳಿಕೆಯಿಂದಾತ್ಮಾರ್ಪಣಂ ಗೈದರಾರ್
ನಿನ್ನಂ ಪೋಲ್ವ ಶಿವಾನುಭಾವಿಗಳದಾರ್ನೀನೇ ವಿರಕ್ತೋತ್ತಮಂ
ನಿನ್ನಿಂದಾದುದು ಮಂಗಲೋದಯಮೆಲೈ ಶ್ರೀಮತ್ಕುಮಾರೇಶ್ವರಾ ||೬||
ಅನುರಾಗಂಮಿಗೆ ಚಿತ್ಕಲಾತ್ಮಕ ಮಹಾಲಿಂಗಾನುಸಂಧಾನದಿಂ
ದನಿಶಂ ಭಾಸುರಲಿಂಗವಾಗಿ ಪೊರೆದೈ ಸದ್ಧರ್ಮಮಂ ಯತ್ನದಿಂ
ನಿನಗಿನ್ನೆತ್ತಣ ಹುಟ್ಟು ಸಾವು ಮಲಮಾಯಾಮುಖ್ಯಪಾಶವ್ರಜಂ
ಘನಯೋಗಾಭ್ಯುದಯ ಪ್ರಭಾವವಿದು ಕೇಳ್ ಶ್ರೀಮತ್ಕುಮಾರೇಶ್ವರಾ ||೭||
ಬೇಡುವದಲ್ಲ ಮಂದಿಯನು ಧರ್ಮಸುಧಾರಣೆಗಾಗಿ ದೇವರಂ
ಬೇಡುವದೊಳ್ಳಿತಾವನಿತು ಶಕ್ತಿ ಸಮನ್ವಿತರಲ್ಲ ಮಾಳ್ಪುದೇಂ
ನೀಡುವ ಜಂಗಮರ್ನರರ ಬೇಡುವದೆತ್ತಣ ಸುದ್ದಿಯೆಂದು ನೀ-
ನಾಡುತಲಿರ್ದೆ ಮುಚ್ಚಿಕೊಳದಾತ್ಮ ನಿರೀಕ್ಷಣೆಯಿಂ ಚರಾಧಿಪ ||೮||
ನಿನ್ನಯ ಜನ್ಮವೇ ಜಗದೊಳಿಲ್ಲದನರ್ಘ್ಯ ಪವಿತ್ರ ಜನ್ಮವೈ
ನಿನ್ನಯ ಪುಣ್ಯ ಜೀವನವೆ ಧರ್ಮಸುಧಾರಣ ಭಾಗ್ಯ ಜೀವನಂ
ನಿನ್ನಮಲಪ್ರಯತ್ನವೆ ಮಹೇಶ ಮತೋತನ್ನತಿಯುತ್ ಪ್ರಯತ್ನವೈ
ನಿನ್ನಯ ಪೇರ್ಮೆಯಂ ಪಡೆವರಾರು ಧರಾತಲದೊಳ್ಚರಾಧಿಪ ||೯||
ಎಮ್ಮ ಸಮಾಜವೆಂದಿಗೆ ಸುಧಾರಿಪುದಾವ ಮಹಾತ್ಮನಳ್ಕರಿಂ
ದೆಮ್ಮ ಸಮಾಜದೇಳ್ಗೆಯನು ಮಾಡುವನೈ ಸಿರಿವಿದ್ಯೆಯುದ್ಯಮಂ
ಎಮ್ಮ ಸಮಾಜದೊಳ್ಬೆಳೆಯಲಾವುದುಪಾಯಮದೆಂತು ಕಾಣ್ಬುದೋ
ಎಮ್ಮ ಸಮಾಜಸೇವೆ ಕೃತಕೃತ್ಯತೆಯೆಂದು ನೆಗಳ್ದೆ ಜಂಗಮಾ ||೧೦||
ನೀನೆ ದಯಾಳು ನಿನ್ನ ವಚನಂ ನಿಗಮಾಗಮದರ್ಥಸಾರವೈ
ನೀನೆ ವಿರಾಗಿ ನಿನ್ನತುಲ ಶೀಲವೆ ಸತ್ಪ್ರಮಥೇಂದ್ರ ಸಮ್ಮತಂ
ನೀನೆ ಗುಣಾಬ್ಧಿ ನಿನ್ನ ಮಲವೃತ್ತಿಯೆ ಲೋಕವಿತಾನಪಾವನಂ
ನೀನೆ ವಿಚಾರಿ ನಿನ್ನ ಸರಿಯಾರು ವಿರಾಟ್ಪುರದೀಶಯೋಗಿಯೆ ||೧೧||
ಚಂಪಕಮಾಲಾ :
ಬೆಳಿಸುವಳೂಡಿ ಮಾತೆ ಮಗನಾವಗನಾತಗೆ ಪೇಳ್ದು ಬುದ್ಧಿಯಂ
ಕಲಿಸುವನಯ್ಯನೊಲ್ದು ಮಗನೆಂಬ ಮರುಂಕದೊಳನ್ಯ ಪುತ್ರರಂ
ಬಳೆಯಿಸಿ ಬುದ್ಧಿಗೊಟ್ಟು ಶಿವಯೋಗ ಸುಧಾರಸ ಪಾನದಿಂ ಕರಂ
ಸಲಹಿದೆ ನೀನೆ ಮಾತೆ ಪಿತರೈ ವಟು ವರ್ಗಕೆ ಯೋಗಿವಲ್ಲಭ ||೧೨||
ವಿತತ ಶಿವಾನುಭವ ಸುಖಚರ್ಚೆಯ ನಿನ್ನಯ ವೃತ್ತಿಯಾಗಿ ಸ-
ನ್ನುತ ಶಿವಲಿಂಗದರ್ಚನೆಯ ಸುವ್ರತಮಾಗಿರುತಿರ್ದುಮೊಳ್ಪಿನಿಂ
ಮತಹಿತ ಕಾರ್ಯಮಂ ಬಿಡದೆ ನೀನದರೊಳ್ನೆರೆನೋಡಿ ಮಾಡಿದೈ
ಕ್ಷಿತಿಯೊಳು ನಿನ್ನ ಜಾಣ್ಮೆಯಿದು ಚಿದ್ಘನರೂಪ ಸದಾಶಿವಪ್ರಭು ||೧೩||
ಉತ್ಪಲ ಮಾಲಾ :
ಕಾಯವಿಕಾರವಿಲ್ಲ ಮನದುಲ್ಬಣವಿಲ್ಲ ಮದಾಳಿಯಿಲ್ಲವಾ
ವಾಯುಗುಣಂಗಳಿಲ್ಲ ನಿಖಿಲೇಂದ್ರಿಯ ಚೇಷ್ಟೆಗಳಿಲ್ಲವಾವಗಂ
ಮಾಯೆಯ ಕಾಟವಿಲ್ಲ ವಿಷಯಂಗಳ ಲಾಲಸೆಯಿಲ್ಲ ಜೀವನಾ-
ಪಾಯಮದಿಲ್ಲ ನಿನ್ನೊಳೆ ಮಹಾಪ್ರಭುಲಿಂಗ ಕುಮಾರಯೋಗಿಯೆ ||೧೪||
ನಿನ್ನಯ ಮೂರ್ತಿಯನ್ನೆರಡು ಕಣ್ಣೊಳು ಕಟ್ಟಿಹುದಾರ್ಯ ಚೆಲ್ವಿನಿಂ
ನಿನ್ನಯ ತತ್ವಪೂರಿತ ಮೃದೂಕ್ತಿಗಳೆನ್ನ ವಿಚಾರಭಾವದೊಳ್
ಸನ್ನುತ ಶಾಂತಿಯಂ ಕುಡುತಲಿರ್ಪುವು ನಿನ್ನಯ ರೀತಿನೀತಿಗಳ್
ನನ್ನಿಯೊಳೆನ್ನನೆಚ್ಚರಿಪವಾತ್ಮದೆ ನಿಂದು ಕುಮಾರಯೋಗಿಯೆ ||೧೫||
ನಿನ್ನನು ಪಾಡುವೀರಸನೆ ನಿನ್ನದು ದೇವ ಮಹಾನುಭಾವ ಕೇ-
ಳ್ನಿನ್ನನು ಜಾನಿಪೀ ಮನವೆ ನಿನ್ನದು ನೋಡು ತ್ರಿತಾಪಲೋಪಕ
ನಿನ್ನಯ ರೂಪಮಂ ತಿಳಿವ ಮನ್ಮತಿ ನಿನ್ನದು ಲಿಂಗಭಾವವೇ
ನಿನ್ನದು ನಿನ್ನದಯ್ಯ ಕರುಣಾಳು ಕುಮಾರ ಮಹಾಯತೀಶ್ವರಾ ||೧೬||
ಕಂದ :
ಪೂಜಾರ್ಪಣಾನುಭವಮಂ
ರಾಜಿತಶಿವಭಾವ ಪೂರ್ಣಮೆನೆ ಮಾಡುತ್ತಂ
ಓಜೆಮಿಗೆ ಬಾಳ್ದಯತಿಕುಲ
ರಾಜಂ ನೀನಲ್ತೆ ಯೋಗನಿಷ್ಠ ಕುಮಾರಾ ||೧೭||
ಚರದೇವ ನಿನ್ನ ನಾಮಂ
ವರಮಂತ್ರಂ ನಿನ್ನ ರೂಪವೀಶ್ವರರೂಪಂ
ಪುರುಷಾರ್ಥಕಾರಣಂ ನಿ-
ನ್ನುರುತರ ಕರುಣಾಕಟಾಕ್ಷದೀಧಿತಿ ಯತಿಪ ||೧೮||
ಚಂಪಕ ಮಾಲಾ
ಘನತರಮುಕ್ತಿಗಿಂದ ಸ್ವಸಮಾಜದ ಸೇವೆಯೆ ಶ್ರೇಷ್ಠವೆಂದು ನೀ-
ನನವರತಂ ಸಮರ್ಪಿಸಿದೆ ನಿನ್ನ ಸಮಾಜಕೆ ಸರ್ವ ವಸ್ತುವಂ
ಕೊನೆಯೊಳು ನಮ್ಮ ಧರ್ಮ ಸುಸಮಾಜ ಸಮಾಜ ಸಮಾಜವೆಂದು ಬ-
ಲ್ಕನವರಿಸುತ್ತಲಿರ್ದೆ ಶಿವಧರ್ಮ ಸಮಾಜದ ನೇಹಮೆಂತುಟೊ ||೧೯||
ಕಂದ :
ಜಯ ಪರತರಚಿತ್ಸುಖಮಯ
ಜಯಜಯ ನೀರಂಜನಾಲಮಾನ್ವದೇವ
ಜಯ ವೀರಶೈವ ಬಾಂಧವ
ಜಯಜಯ ಲಿಂಗಾಂಗ ಸಾಮರಸ್ಯ ರಸಜ್ಞ
– ಶ್ರೀ ಚೆನ್ನಕವಿ