ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಧಾರವಾಹಿ: ಭಾಗ-35 :

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

  

ಶಿಖೆಯೊಳು* ತ್ರಿದಳ | ವ್ಯಾಪಕನಾದ ಬಸವನಾ

ಮಕದ ನಿಶ್ಶೂನ್ಯ – ಸುಕಳಾಲಿಂಗವ ತೋ |

ರ್ದಕಳಂಕ ಗುರುವೆ ಕೃಪೆಯಾಗು    ||೧೪೬||

 

ಬ್ರಹ್ಮರಂಧ್ರದ ಮುಂದೆ ಶಿಖಾಚಕ್ರವು ಗೋಚರವಾಗುತ್ತದೆ. ಇದು ಎಂಟನೆಯದು. ಶಿಖಾಚಕ್ರವು ಪಶ್ಚಿಮ ಶಿಖೆಯ ಮೇಲ್ಬಾಗದಲ್ಲಿರುವದು. ಇದುವೆ ಎಲ್ಲ ಚಕ್ರಗಳಿಗಿಂತ ಉನ್ನತಸ್ಥಾನವನ್ನು ಆಕ್ರಮಿಸಿದೆ. ಇದು ಮಸ್ತಕದ ಸ್ವಲ್ಪು ಹಿಂಬದಿಗೆ ಇರುವದು. ಈ ಶಿಖಾಚಕ್ರದ ದ್ಯೋತಕವೆಂಬಂತೆ ವೈದಿಕ ಸಂಪ್ರದಾಯದಲ್ಲಿ ಶಿಖೆ ಅಥವಾ ಚಂಡಿಕೆಯನ್ನು ಬಿಡುತ್ತಾರೆ. ಈ ಚಕ್ರವು ಮೂರು ದಳಗಳಿಂದ ವಿರಾಜಮಾನವಾಗಿದೆ. ತ್ರಿದಳಗಳಿಂದ ಕೂಡಿದ ಬಿಲ್ವದಲವು ಶಿವನಿಗೆ ಪ್ರಿಯವಾಗಿರುವಂತೆ ಈ ತ್ರಿದಳ ವ್ಯಾಪಕವೆನಿಸಿದ ಶಿಖಾಚಕ್ರವು ನಿಃಶೂನ್ಯ ಸುಕಳಾಲಿಂಗಕ್ಕೆ ಸಂಪ್ರೀತವಾಗಿದೆ. ಈ ತ್ರಿದಳಚಕ್ರದಲ್ಲಿ ಬಸವ” ಎಂಬ ಮಂತ್ರಾಕ್ಷರಗಳು ಶೋಭಿಸುತ್ತವೆ. ಇವು ನಿರಂಜನ ಪ್ರಣವಗಳು.

 

‘ಬಸವ’ ಇದು ವ್ಯಕ್ತಿಯ ಹೆಸರಲ್ಲ. ಈ ‘ಬಸವಾ’ಕ್ಷರಗಳು ಮಹಾಮಂತ್ರವಾಗಿದೆ. ಅದುಕಾರಣ ಇವುಗಳ ಅರ್ಥ ಅನಂತವಾಗಿದೆ. ಶಿಖಾಚಕ್ರ ಹಾಗೂ ನಿಶ್ಶೂನ್ಯ ಬ್ರಹ್ಮ ಮತ್ತು ‘ಬಸವ’ ತತ್ತ್ವದ ಮಹತ್ವವನ್ನು ೮೪ನೇಯ ತ್ರಿಪದಿಯ ವ್ಯಾಖ್ಯಾನದಲ್ಲಿ ಅವಲೋಕಿಸಬಹುದು.

ಶಿಖಾಚಕ್ರದಲ್ಲಿ ತ್ರಿದಳಗಳಲ್ಲಿ ಪರಿಶೋಭಿಸುವ ಬಸವಾಕ್ಷರ ಮಹತ್ವವನ್ನು ಶರಣರೂ, ಕವಿಗಳೂ, ಬಹುವಾಗಿ ಬಣ್ಣಿಸಿದ್ದಾರೆ. ಮಾಯಾ ಕೋಲಾಹಲಿಗಳೂ, ಶೂನ್ಯ ಸಿಂಹಾಸನಾಧಿಪತಿಗಳೂ ನಿರಂಜನ ಜಗದ್ಗುರು ಪ್ರಭುದೇವರು –

 

ಬಸವಗುರುವು ಎನ್ನ ಕರಸ್ಥಲದ ಲಿಂಗದ

ಆದಿಯನರುಹಿ ತೋರಿದ ಕಾರಣ ಗುಹೇಶ್ವರ ಲಿಂಗದ

ನಿಲವ ನಿನ್ನಿಂದಲರಿದೆನು

ಬ ಎಂಬಲ್ಲಿ ಭವ ಹರಿಯಿತು

ಸ ಎಂಬಲ್ಲಿ ಸರ್ವಜ್ಞಾನಿಯಾದೆನು

ವ ಎಂದು ವಚಿಸುವ ಚೈತನ್ಯಾತ್ಮಕನಾದನು.

ಇಂತೀ ಬಸವಾಕ್ಷರತ್ರಯವು ಎನ್ನ ಸರ್ವಾಂಗದಲ್ಲಿ

ತೊಳಗಿಬೆಳಗುವ ಭೇದವನರಿದು ಆನು

ಬಸವ ಬಸವ ಎನುತಿರ್ದೆನು.

 

ಶಿವಯೋಗಿ ಸಿದ್ಧರಾಮೇಶ್ವರರು ರಚಿಸಿದ ಬಸವಸ್ತೋತ್ರ ತ್ರಿವಿಧಿಯಲ್ಲಿ –

 

ಬಸವ ಬಸವಾ ಬಸವ ಬಸವೇಶ ಬಸವರಸ ಬಸವಯ್ಯ

ನಿಮ್ಮಡಿಗೆ ಶರಣು ಶರಣು

ಬಸವ ಬಸವಾಲಿಂಗ ಬಸವಪ್ಪ ಬಸವೇಶ ಬಸವಯ್ಯ

ಶರಣೆಂಬೆ ಯೋಗಿನಾಥ |

ಬಸವ ಭಕ್ತಿಯ ಬೀಜ, ಬಸವ ಯುಕ್ತಿಯ ಬೀಜ

ಬಸವಪ್ಪ ನಿಮ್ಮಡಿಗೆ ಶರಣು ಶರಣು

 

ಮೋಳಿಗೆಯ ಮಾರಯ್ಯನವರು

ಬ ಎಂಬಲ್ಲಿ ಬಳಿಸಂದೆನು

ಸ ಎಂಬಲ್ಲಿ ಸಯವಾದೆನು

ವ ಎಂಬಲ್ಲಿ ನಿರವಯನಾದೆನು

ನಿಃಕಳಂಕ ಮಲ್ಲಿಕಾರ್ಜುನ ಬಸವಣ್ಣನ ನಿಜಪದದಲ್ಲಿ

ಸಂದಿಲ್ಲದೆ ಬೆರಸಿ ನಮೋ ನಮೋ ಎಂಬ ಹಂಗಳಿದುಳಿದೆನು

 

ಗಣದಾಸಿ ವೀರಣ್ಣನವರು

“ಬ ಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ

ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ವನಿರ್ಣಯಂ||ʼʼ

ಮತ್ತು – ಎನ್ನ ಪಶ್ಚಿಮದಲ್ಲಿ ನಿರಂಜನ ಪ್ರಣಮವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಶಿಖೆಯಲ್ಲಿ ಬಸವಾಕ್ಷರ ತ್ರಯವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಬ್ರಹ್ಮರಂಧ್ರದಲ್ಲಿ ಅ-ಉ-ಮ ಅಕ್ಷರತ್ರಯವಾಗಿ

ಪ್ರಸಾದ ಪಂಚಾಕ್ಷರಿಯಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಆಜ್ಞೆಯಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ

 

ಎಂದು ಮುಂತಾಗಿ ಸುದೀರ್ಘವಚನವನ್ನೇ ರಚಿಸಿದ್ದಾರೆ. ಶ್ರೀ ಶೀಲವಂತಯ್ಯನವರು ತಮ್ಮ ತ್ರಿವಿಧಿಯ ಆತ್ಮಲಿಂಗ ಪ್ರಣವ ಸಂಯೋಗಸ್ಥಲದಲ್ಲಿ ಬಸವಾಕ್ಷರ ಮಹತ್ವವನ್ನು ಕೆಳಗಿನಂತೆ ವಿವರಿಸಿದ್ದಾರೆ.

 

“ವೃತ್ತ ಗೋಳಕ ಮುಖ್ಯ ನಿತ್ಯ ಬಸವಾಕ್ಷರವು |

ಮತ್ತೆ ಗುರು-ಲಿಂಗ-ಚರ ತ್ರಿವಿಧ ಬಸವನ ಹಸ್ತದಲಿ

ಕಂಡು ಸುಖಿಯಾದೆ

ಆವಾತನ ಮುಖದಲ್ಲಿ ತೀವಿ ಬಸವಾಕ್ಷರವು ಸಾವಧಾನದೊಳು

ವಚಿಸುತ್ತಿರಲದುವೆ ಗುರುದೇವನಿಹತಾಣವಿದನರಿ

ಬಸವನ ನೆನೆ ಮನವೆ ಬಸವಾ ಎನು ನಾಲಿಗೆಯೆ

ಬಸವನ ಪಾದ ಪೂಜೆ ಮಾಡೈಕರವೆ ಬಸವ, ಗುರುಲಿಂಗ ಚರವೆಂದು

ನಿತ್ಯ ನಿಷ್ಕಲದಿಂದ ಚಿತ್ತು ಬಸವಾಕ್ಷರವು

ಮತ್ತೆ ಚಿತ್ ಪ್ರಣವ ಪರಶಕ್ತಿ  ತ್ರೈಮಾತ್ರೆ ವ್ಯಕ್ತದಿಂ ಪ್ರಣವ ಗುರುಲಿಂಗ

 

ಹರಿಹರ ದೇವನ ರಗಳೆ ಕಾವ್ಯಗಳಲ್ಲಿ

 

ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆಕೇಳ್

ಬಸವನ ರೀತಿ ರೀತಿ ಬಸವಣ್ಣನ ಕಿಂಕರವೃತ್ತಿ ವೃತ್ತಿ ಮೇಣ್

ಬಸವನ ಬಟ್ಟೆ ಬಟ್ಟೆ ಬಸವಣ್ಣನ ಬಿಂಕದ ಭಾಷೆ ಭಾಷೆ ಹೋ

ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೇ ನೇಮವುರ್ವಿಯೊಳ್ || ೧ ||

 

ಶ್ರೀ ಪಾಲ್ಕುರಿಕೆಯ ಸೋಮನಾಥರು

 

ಬಾಗುರು ಬಹುಳ ಬ್ರಹ್ಮ | ಸಾಗುರು ಸಾಕಾರ ತತ್ವ ಸಂಘದ ಫಲವೈ

ವಾಗುರು ವಚನ ಮಹತ್ವ | ಕ್ಕಾಗರ ಬಸವಾಕ್ಷರತ್ರಯಂ ಬಸವೇಶಾ

ಬಾ ಎನೆ ಬಂಧನವಳಿವುದು | ಸಾಯೆನೆ ಸಕಲಸಾಯುಜ್ಯ ಸಂಪದಮಕ್ಕುಂ |

ವಾ ಎನೆ ನಿರವಯ ಪದಮಂ | ಮಾಯೆಯ ರಹಿತಂ ಬಸವನೆ ನಿಮ್ಮಯ ನಾಮಂ

ಪ್ರಣವದ ಬಳ್ಳಿ ಬ ಕಾರಂ | ಪ್ರಣವದ ನಾದಾನುಸಾರ ಸಾರ ಸಕಾರಂ |

ಪ್ರಣವದ ಬಿಂದು ವಕಾರಂ | ಪ್ರಣವಂ ಬಸವಾಕ್ಷರ ತ್ರಯಂ ಬಸವೇಶಾ

ಮರೆದೊಮ್ಮೆ ಬಸವ ಎಂದೊಡೆ | ಮರುಜನ್ಮಗಳಲ್ಲಿ ದುರಿತ ವಿಘ್ನಗಳಿಲ್ಲೈ

ಕರಿಗೊರಲನೊಲಿದು ಸಲಹುವ | ಬರಿಜಿಹ್ವೆಯೊಳಿರದೆ ಬಸವನಾಮವ ಜಪಿಸಿ

 

ಸಪ್ತಕಾವ್ಯದ ಗುರುಬಸವದೇವರ ‘ವೃಷಭ ಗೀತೆ’ ಯಲ್ಲಿ –

 

ಬಸವನೆಂದು ಕಂಡು ಪಿರಿಯ |

ಬಸವನೆಂದು ಲೋಕಬಂಧು |

ಬಸವನೆಂದು ಷಟ್‌ಸ್ಥಲ ಸಮಗ್ರ ಸಾರದ |

ಬಸವನೆಂದು ಮತ್ಸಮಸ್ತ |

ಬಸವನೆಂದು ಧರ್ಮರೂಪ

ಬಸವನೆಂದು ಭಜಿಸಿ ಭಜಿಸಿ ಬಾಳ್ವನವ ಕೃತಾರ್ಥನೂ ||

 

ಪ್ರೌಢದೇವರಾಯನ ಮಹಾಕಾವ್ಯವನ್ನು ರಚಿಸಿದ ಅದೃಶ್ಯಕವಿಯು-

 

ಬಸವನೆಂದರೆ ಪಾಪ ದೆಶೆಗಟ್ಟು ಹೋಗುವದು.

ಬಸವನೆಂದೆಂಬ ಮೂರಕ್ಕರದ ಘನತೆಯನು |

ಉಸುರಲೆನ್ನಳವಲ್ಲ ಫಣಿರಾಜಗರಿದರಿದು ಬಸವ ಭವ ಭಯನಾಶವೂ |

 

ಷಡಕ್ಷರದೇವರು “ಬಸವರಾಜ ವಿಜಯ’ದಲ್ಲಿ –

 

ಬಸವನ ನಾಮಂ ಸ್ಮರಿಸುತುಂ ಬಸವೇಶನ ಕಿರ್ತನಂಗಳಂ |

ಪಸರಿಸಿ ಪಾಡುತುಂ ಬಸವನುಜ್ವಲ ಮೂರ್ತಿಯನೊಲ್ದು ಜಾನಿಸು,

ತ್ತೆಸೆವ ನರಂಗೆ ಜನ್ಮತತಿಯುಂಟೆ ಜಡಸ್ಥಿತಿಯುಂಟೆ ಪಾತಕ |

ಪ್ರಸರಮದುಂಟೆ ಮೃತ್ಯುಭಯಮುಂಟೆ ಮದಾಂಧತೆಯುಂಟೆ

ಧಾತ್ರಿಯೋಳ್ ||

 

ಎಂದುಮುಂತಾಗಿ ವರ್ಣಿಸಿದ ಮಹಾನುಭಾವರ ನುಡಿಗಳಿಂದ ಬಸವಾಕ್ಷರ ಮಂತ್ರದ ಮಹತ್ವ ಮನನವಾಗದೇ ಇರದು.

 

ನಿಶ್ಶೂನ್ಯಲಿಂಗ : ‘ಶಿಖಾಚಕ್ರವೇ ನೆಲೆ, ಮಂತ್ರ ನಿಷ್ಪತ್ತಿಯೆ ಕಲೆ; ಉನ್ಮನಿಯ ಮುಖ, ನಿಶ್ಶೂನ್ಯಾಕಾರ, ಅಗಮ್ಯರೂಪು, ತ್ರಿದಳಯುಕ್ತ ನಿಃಕಲ ಪದ್ಮವೇ ಪೀಠ, ಇದು ಸುಜ್ಞಾನಕ್ಕೆ ಸುಜ್ಞಾನವಾಗಿದೆ”. ಎಂದು ನವಲಿಂಗ ಸಾಹಿತ್ಯದಲ್ಲಿ ನಿಶ್ಶೂನ್ಯಲಿಂಗದ

ವರ್ಣನೆಯನ್ನು ಮಾಡಿದ್ದಾರೆ.

 

ಓ ಕಳಂಕರಹಿತನಾದ ಪರಮಗುರುವೆ ! ಶಿಖಾಚಕ್ರದ ಮಹಾಜ್ಯೋತಿ ಪ್ರಕಾಶದಿಂದ ಕೂಡಿದ ನಿಶ್ಶೂನ್ಯ ಸತ್ಕಳಾ ಲಿಂಗವನ್ನು ತೋರಿಸಿ ಉದ್ಧರಿಸಿರುವೆ. ಆ ಲಿಂಗವನ್ನು ಪೂಜಿಸಿ ಧನ್ಯನಾಗುವ ಶಕ್ತಿಯನ್ನೀಡಿ ಕಾಪಾಡು

 

ಮಂಜುಳಮಾದೇಕ ದಳ | ಕಂಜದೊಳೋಂ ಹ ಪ್ರಣವ

ವ್ಯಂಜನವಿಲ್ಲದ ನಿರಂಜನ ಲಿಂಗವನು

ರಂಜಿಸುವ ಗುರುವೆ ಕೃಪೆಯಾಗು   ||೧೪೭||

 

ಮಸ್ತಕದ ಹಿಂಭಾಗದಲ್ಲಿಪ್ಪುದೇ ಏಕದಳಪದ್ಮ. ಅದಕ್ಕೆ ಪಶ್ಚಿಮ ಚಕ್ರವೆಂದು ಹೆಸರು. ಪಶ್ಚಿಮಾಗ್ರವೆಂತಲೂ ಇನ್ನೊಂದು ನಾಮ. ಸಣ್ಣಮೆದುಳೇ ಪಶ್ಚಿಮ ಚಕ್ರವು . ಸ್ಪಟಿಕದಂತೆ ಶುಭ್ರವೂ ಮನೋಹರವೂ ಆಗಿದೆ. ಈ ಚಕ್ರದಲ್ಲಿ ಮಹಾ ಪ್ರಣವ ವೆನಿಸಿದ ‘ಹ್’ ಕಾರ ಮಂತ್ರ ಮೂರ್ತಿಯಾದ ನಿರಂಜನಲಿಂಗವು ಪರಿಶೋಭಿಸು ವದೆಂದು ಬೋಧಿಸಿದ ಗುರುಕೃಪೆ ಅಪಾರವಾದುದು. ಈ ನಿರಂಜನ ಲಿಂಗವು ವಾಙ್ಮನಕ್ಕೆ ಅಗೋಚರವಾದುದು. ಇಂಥ ಅವಾಚ್ಯವಾದ ನಿರಂಜನ ಬ್ರಹ್ಮವನ್ನೇ ಸದ್ಗುರುವು ತನ್ನ ಶುದ್ಧಭಾವದಲ್ಲಿ ಭಾವಿಸಿ ಸಂಸ್ಕರಿಸಿ ಭಾವಲಿಂಗವನ್ನಾಗಿಸುವನು. ಈ ಭಾವಲಿಂಗವೇ ಇಷ್ಟಲಿಂಗದಲ್ಲಿ ನಿರಂಜನಲಿಂಗವಾಗಿ ತೋರುವದು.

ನಿರಂಜನಲಿಂಗ : ಪಶ್ಚಿಮಚಕ್ರವೆ ನೆಲೆ; ಶಿವಾದ್ವೈತವೆ ಕಳೆ, ನಿರಂಜನಾಕಾರ, ಅವಿರಳರೂಪು, ಏಕದಳ, ನಿರಾಳಪದ್ಮವಾಸ, ಜ್ಞಾನಶ್ಶೂನ್ಯ” ಎಂದು ನವಲಿಂಗ ಸಾಹಿತ್ಯಕಾರರು ನಿರಂಜನಲಿಂಗದ ನಿರೂಪಣೆ ಮಾಡಿದ್ದಾರೆ.

 

ಈ ಪಶ್ಚಿಮಚಕ್ರದ ವಿವರವನ್ನು ೮೩ನೆಯ ತ್ರಿಪದಿಯಲ್ಲಿ ನೋಡಬಹುದು. ನಿರಂಜನಲಿಂಗವೇ ಪರಾತ್ಪರ ವಸ್ತುವೆನಿಸಿದೆ. ಇಂಥ ನಿರಂಜನಲಿಂಗವನ್ನು ತೋರಿಸಿ ಪರಿರಂಜಿಸುವ ಗುರುವಿನ ಇರುವೆ ವರ್ಣನಾತೀತವಾದುದು.

Related Posts