ಹಾನಗಲ್ಲ ಕುಮಾರಸ್ವಾಮಿಗಳ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ •

ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಸಮಾಜದ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸಿದ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ನಮ್ಮ ನಾಡಿನ ಶ್ರೇಷ್ಠ ಪದಕಾರರಲ್ಲಿ ಒಬ್ಬರಾಗಿದ್ದರು . ಸಮಾಜದ ಸೇವೆಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದ ಅವರು ಬರೆದುದು ತುಂಬ ಕಡಿಮೆ. ನಂತರದ ಪೀಳಿಗೆಯವರು ಅವುಗಳನ್ನು  ಸಂಗ್ರಹಿಸಿ ಉಳಿಸಿಕೊಂಡಿರುವುದು ಇನ್ನೂ ಕಡಿಮೆ.  ಆದರೆ ಬರೆದಷ್ಟು ಮಾತ್ರ ಅರ್ಥಪೂರ್ಣ ಹಾಗು ಸತ್ವಪೂರ್ಣ . ಅವರು ಬರೆದ, ಪದ್ಯಗಳಲ್ಲಿ ಪ್ರಮಥರನ್ನು ಮಹಾತ್ಮರನ್ನು ಕುರಿತು ಬರೆದ ಸ್ತುತಿ ಪರ ಪದ್ಯಗಳೇ ಅಧಿಕ . ಶಿವಯೋಗ ಅಥವಾ ಶಿವಯೋಗಿ ಅಂಕಿತದಲ್ಲಿ ತಮ್ಮ ಪದ್ಯಗಳನ್ನು ನಾಡಿಗೆ ನುಡಿಕಾಣಿಕೆಯಾಗಿ ಸಮರ್ಪಿಸಿದ್ದ ಅವರು ಆಶು ಕವಿತ್ವ ಹೊಂದಿದ್ದರು . ಹಾಗೆಯೇ ಅವರು ತಮ್ಮ ಪದ್ಯಗಳಲ್ಲಿ ಬಸವಾದಿ ಪ್ರಮಥರ ತತ್ವ ಮತ್ತು ಮೌಲ್ಯಗಳನ್ನು ತುಂಬಿ ಅವುಗಳನ್ನು ಸತ್ವಪೂರ್ಣವಾಗಿಸಿರುವುದು ಬಹು ವಿಶೇಷ. ಪ್ರಸ್ತುತ ಅವರ ಆಶು ಕವಿತ್ವದ ನಿಷ್ಪತ್ತಿಯಾಗಿರುವ ಒಂದು ಪದ್ಯವನ್ನು ಕುರಿತು ಇಲ್ಲಿ  ವಿವೇಚಿಸಲಾಗಿದೆ . ಜಂಗಮ ಶ್ರೇಷ್ಠರು , ಶಿವಯೋಗಿ ನಾಮಾಂಕಿತರೂ ಆಗಿದ್ದ  ಅಥಣಿ ಗಚ್ಚಿನಮಠದ ಪೂಜ್ಯ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಲಿಂಗದೇಹಕ್ಕೆ ಮಂಗಳ ಸ್ತುತಿ – ಗೈದ ಸಂದರ್ಭದ ಪದ್ಯವಿದು .

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ .

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ      ॥ ಪ ॥

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

 ಚೆಂದವನರಿದನುಷ್ಠಾನಿಪ ಶಿವಸ್ವಯಗೆ    ॥ ೧ ॥

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ  ॥ ೨ ॥

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ .

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ    ॥ ೩ ॥

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ   ॥ ೪ ॥

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‌ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ    ॥ ೫ ॥

ನಾಲ್ಕು ನಾಲ್ಕು ಸಾಲುಗಳ ಒಂದು ಪಲ್ಲವಿ ಮತ್ತು ಐದು ನುಡಿಗಳ ಒಟ್ಟು ಇಪ್ಪತ್ನಾಲ್ಕು ಸಾಲುಗಳಲ್ಲಿ ರಚಿತವಾದ ಈ ಪದ್ಯದ ಪ್ರತಿಯೊಂದು ನುಡಿಯಲ್ಲಿರುವ ಸಾಲುಗಳ ಎರಡನೆಯ ಅಕ್ಷರ ಪ್ರಾಸದಿಂದ ಕೂಡಿದೆ . ಹಾಗೆಯೇ ಇಡೀ ಪದ್ಯವು ಛಂದೋಲಯ ಬದ್ಧವಾಗಿದೆ . ಪದ್ಯದ ಪಲ್ಲವಿಯಲ್ಲಿ ದೃಷ್ಟಿಯೋಗದ ಮೂಲಕ ಶಿವಯೋಗವನ್ನು ಸಾಧಿಸಿದ ಪರಮ ಶಿವಯೋಗಿಗೆ ಮಂಗಲವಾಗಲಿ ಎಂದು ಹೇಳುತ್ತಾ ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಾಮಹಿಮರು ಪೂಜ್ಯಶ್ರೀ ಮುರುಘೇಂದ್ರ ಶಿವಯೋಗಿಗಳು ಎಂಬ ತಮ್ಮ ಭಾವವನ್ನು ಅಭಿವ್ಯಕ್ತಗೊಳಿಸಿದ್ದಾರೆ . ನಂತರದ ಮೂರು ನುಡಿಗಳಲ್ಲಿ ಸ್ವಯ , ಚರ ಮತ್ತು ಪರ ಜಂಗಮದ ಲಕ್ಷಣಗಳನ್ನು ವಿವರಿಸುತ್ತ ನಾಲ್ಕು ಮತ್ತು ಐದನೆಯ ನುಡಿಗಳಲ್ಲಿ ಅಥಣಿಯ ಶಿವಯೋಗಿಗಳು ಲಿಂಗಾಯತ ಧರ್ಮದ ಮತ್ತು ಬಸವಾದಿ ಪ್ರಮಥರು ಆಚರಿಸಿ ತೋರಿದ ಅಷ್ಟಾವರಣ , ಪಂಚಾಚಾರ , ಷಟ್‌ಸ್ಥಲಗಳನ್ನು ಸಾಧಿಸಿ ತಮ್ಮಲ್ಲಿರುವ ಅನುಪಮ ಸದ್ಭಕ್ತಿಯ ಫಲವಾಗಿ ಜಂಗಮ ಶ್ರೇಷ್ಠರಾದ ಬಗೆಯನ್ನು , ಎಲ್ಲದಕ್ಕೂ ರಾಮಬಾಣದಂತಿರುವ ಬಸವಾದಿ ಪ್ರಮಥರ ನಾಮವನ್ನು ಪರಮ ಪ್ರೇಮದಿಂದ ಉಚ್ಚರಿಸುತ್ತ ಗೆಲ್ಲಲು ಕಷ್ಟ   ಸಾಧನವಾದ ಮಾಯೆಯನ್ನು ಗೆಲಿದ ಬಗೆಯನ್ನು ಹೃದಯಂಗಮವಾಗಿ  ಬಣ್ಣಿಸಿದ್ದಾರೆ .ಭಕ್ತಾದಿ ಐಕ್ಯ ಸ್ಥಲ ದ ವರೆಗಿನ ಅಧ್ಯಾತ್ಮ ಸಾಧನೆಯನ್ನು ಪೂರ್ಣಗೊಳಿಸಿ ಷಟ್ಸ್ಥಲ ಬ್ರಹ್ಮಿ ಗಳೇ ತಾವಾದ ಮತ್ತು ಪರಶಿವನಲ್ಲಿ ಬೆರೆಸಿ ಬೇರಾಗದ ಸ್ಥಿತಿ ಯನ್ನು   ಹೊಂದಿದ ಮುರುಘ ಶಿವಯೋಗಿಗೆ . ಮಂಗಲವಾಗಲಿ ಎಂದು ಪದ್ಯವನ್ನು ಪೂರ್ಣಗೊಳಿಸಿದ್ದಾರೆ .

ಪ್ರಸ್ತುತ ನಾವು ಇಲ್ಲಿ ವಿವರಿಸಬೇಕಾಗಿರುವುದು ಪೂಜ್ಯಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ ಎಂಬ ವಿಷಯವನ್ನು ಕುರಿತು , ಜಂಗಮ ತತ್ವದ ಸ್ವಯ , ಚರ ಮತ್ತು ಪರ ಎಂಬ ಪ್ರಮುಖ ಭೇದಗಳು ಪ್ರಸ್ತುತ ಪದ್ಯದ ಮೊದಲಿನ ಮೂರು ನುಡಿಗಳಲ್ಲಿ ಸುಭಗ ಸುಂದರವಾಗಿ , ಅರ್ಥಪೂರ್ಣವಾಗಿ ಮೂಡಿಬಂದಿವೆ . ಈ ಮೂರು ಭೇದಗಳನ್ನು ಅರಿಯುವ ಮತ್ತು ವಿಶ್ಲೇಷಿಸುವ ಮೊದಲು ಲಿಂಗಾಯತ ಧರ್ಮದ ತತ್ವವಾಚಕ ಪದಗಳಲ್ಲಿ ಒಂದಾಗಿರುವ ‘ ಜಂಗಮ’ದ ಬಗ್ಗೆ ಸ್ಕೂಲವಾಗಿಯಾದರೂ ತಿಳಿದುಕೊಳ್ಳುವುದು ಅತ್ಯವಶ್ಯವೆನಿಸುತ್ತದೆ .

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಕ್ಕೆ ವಿಶಿಷ್ಟ ಸ್ಥಾನವಿದೆ . ಗುರು , ಲಿಂಗ ,  ಜಂಗಮ , ವಿಭೂತಿ , ರುದ್ರಾಕ್ಷಿ , ಮಂತ್ರ , ಪಾದೋದಕ ಮತ್ತು ಪ್ರಸಾದ ಎಂಬ   ಎಂಟು ತತ್ವಗಳೇ ಅಷ್ಟಾವರಣಗಳು . ಇವುಗಳಲ್ಲಿ ‘ ಗುರು , ಲಿಂಗ , ಜಂಗಮ ‘ ಗಳು ಲಿಂಗಾಯತ ಉಪಾಸಕನ ಉಪಾಸ್ಯ ಮೂರ್ತಿಗಳು , ವಿಭೂತಿ , ರುದ್ರಾಕ್ಷಿ ಮತ್ತು ಮಂತ್ರ ಇವು ಉಪಾಸನೆಯ ಸಾಧನಗಳಾದರೆ ಪಾದೋದಕ , ಪ್ರಸಾದಗಳು ಉಪಾಸನೆಯ ಫಲಗಳೆಂದು ಕೀರ್ತಿತವಾಗಿವೆ . ಇವು ಕೇವಲ ಬಹಿರಾಡಂಬರದ ವಸ್ತುಗಳಲ್ಲ , ಲಿಂಗಾಯತ ಸಾಧಕನನ್ನು ಲೌಕಿಕ ವಿಷಯ ವ್ಯಾಮೋಹಗಳಿಂದ ರಕ್ಷಿಸುವ ಕವಚ ( ಆವರಣ ) ಗಳಾಗಿವೆ . ಇವುಗಳಲ್ಲಿ ಗುರು ಲಿಂಗ ಜಂಗಮ ಈ ಮೂರು ಒಬ್ಬನೇ ಪರಶಿವನ ಭೇದಗಳೇ ಆಗಿದ್ದರೂ ಕರ್ತವ್ಯ ಭೇದದಿಂದ ಪ್ರತ್ಯೇಕತೆಯನ್ನು ಹೊಂದಿದ ವಿಶಿಷ್ಟ ತತ್ವಗಳಾಗಿವೆ . ಗುರು ಸಾಧಕನ ಅಜ್ಞಾನವನ್ನು ಕಳೆದು , ಅವನದೇ ಚೈತನ್ಯವಾದ ಪರಶಿವ ಕಳೆಯನ್ನು ಇಷ್ಟಲಿಂಗ ರೂಪದಲ್ಲಿ ಸಾಧಕನ ಕೈಗಿತ್ತು ಮಾರ್ಗದರ್ಶಕನೆನಿಸುತ್ತಾನೆ . ಕರಸ್ಥಲದಲ್ಲಿ ವಿರಾಜಮಾನವಾದ ಇಷ್ಟಲಿಂಗ ( ಲಿಂಗ ) ವು ದೃಷ್ಟಿಯೋಗ ಮತ್ತು ಶಿವಯೋಗದ ಸಾಧನವಾಗಿ ಅದರಲ್ಲೂ ವಿಶೇಷವಾಗಿ ಸಾಧಕನ ಆರಾಧ್ಯ ಮೂರ್ತಿಯಾಗಿ ಪೂಜೆಗೊಳ್ಳುತ್ತದೆ . ಇನ್ನು ಜಂಗಮದ ಕರ್ತವ್ಯ ತುಂಬ ವಿಶಿಷ್ಟ.‌ “ ಗುರುವಿನ ಗುರು ಜಂಗಮ ಇಂತೆಂದುದು ಕೂಡಲಸಂಗನ ವಚನ “  ಎಂದು ಧರ್ಮಗುರು ಬಸವಣ್ಣನವರು ಹೇಳುವ ಮೂಲಕ ಜಂಗಮದ ಸ್ಥಾನವನ್ನು ನಿರ್ದೇಶಿಸಿದ್ದಾರೆ . ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುವುದು , ಭಕ್ತರ ಭಕ್ತಿಯನ್ನು ಪರೀಕ್ಷಿಸಿ ತಪ್ಪಿದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಸುವುದು ಜಂಗಮನ ಕರ್ತವ್ಯ , ಜಂಗಮ ಎಂಬುದು ಮಾರ್ಗದರ್ಶನ ಮಾಡುವುದು , ಸಂದರ್ಭ ಬಂದರೆ ದಂಡಿಸಿಯಾದರೂ ಸನ್ಮಾರ್ಗದಲ್ಲಿ ಮುನ್ನೆಡೆಸುವದು ಜಂಗಮನ ಕರ್ತವ್ಯ. ಜಂಗಮ ಎಂಬುದು ಇಂದಿನ ಜಾತಿವಾಚಕ ಪದವಲ್ಲ , ಅದೊಂದು ಆಧ್ಯಾತ್ಮಿಕ ನಿಲವು , ಅನುಭಾವದ ಉನ್ನತಾವಸ್ಥೆ ಎಂದು ಹೇಳಬಹುದು . ಜಾತಿ , ಕುಲ , ದೇಶ , ಕಾಲಗಳ ಯಾವ ಪರಿಮಿತಿಗೂ ಸೀಮಿತವಾಗದೆ ತನ್ನ ಸಾಧನೆಯಿಂದ ಜಗದ್ಭರಿತನಾಗಿ ಬೆಳೆದ ಚೇತನವೇ ಜಂಗಮ , ಭಕ್ತೋದ್ದಾರ ಮತ್ತು ಸಮಾಜ ಕಲ್ಯಾಣ ಇವು ಜಂಗಮನ ಕಾಯಕಗಳು . ಚಲನಶೀಲತೆ ಅರ್ಥಾತ್ ಕ್ರಿಯಾಶೀಲತೆ ಜಂಗಮನ ಪ್ರಮುಖ ಲಕ್ಷಣಗಳಲ್ಲೊಂದು . ಅವನಿಗೆ ಅಂಗವಿದ್ದರೂ ಅಂಗದ ಬಯಕೆಗಳಿಲ್ಲ . ಆಶೆ ಆಮಿಷಗಳಿಲ್ಲ . ಅವನು ಜ್ಞಾನ ಆನಂದಗಳ ಮೂರ್ತಿಯಾಗಿರುವನು . ಕೇವಲ ಕಾವಿಬಟ್ಟೆ , ವಿಭೂತಿ , ರುದ್ರಾಕ್ಷಿಮಾಲೆ ಧರಿಸಿದವರು , ಕೈಯಲ್ಲಿ ಜೋಳಿಗೆ ದಂಡ ಹಿಡಿದವರು ಜಂಗಮರಲ್ಲ . ಅವರು ಕೇವಲ ವೇಷಧಾರಿಗಳಷ್ಟೆ, ದೇಹಭಾವವನ್ನಳಿದು ಪರಮಾತ್ಮನಲ್ಲಿ ಸಾಮರಸ್ಯ ಹೊಂದಿದವನು , ಲಿಂಗಮೂರ್ತಿಯೇ ತಾನಾಗಿ ನಿಂದವನು , ನಡೆ ನುಡಿಗಳಲ್ಲಿ ಸತ್ಯವನ್ನೂ , ಅಂತರಂಗದಲ್ಲಿ ಶಿವಭಾವವನ್ನೂ ಹೊಂದಿದವನು ಮಾತ್ರ ಜಂಗಮನೆನಿಸಿಕೊಳ್ಳಲು ಅರ್ಹನಾಗುತ್ತಾನೆ . ಸಚ್ಚಿದಾನಂದ ನಿತ್ಯ ಪರಿಪೂರ್ಣನಾಗಿರುವ ಇಂತಹ ಜಂಗಮದ ಸುಳುಹು ಜಗತ್ಪಾವನ , ಅವನ ನುಡಿ ಪರಮ ಬೋಧೆ , ದರ್ಶನ ಸ್ಪರ್ಶನ ಮಹಾಪುಣ್ಯ . ಇಂತಹ ಜಂಗಮನನ್ನು ಪ್ರಾಣವಾಗಿಸಿಕೊಂಡ ಭಕ್ತನ ಸರ್ವಾಂಗವೆಲ್ಲವೂ ಶುದ್ಧವಾಗುತ್ತದೆ . ಕಾರಣವೆಂದರೆ ಜಂಗಮನು ಭಕ್ತನ ಭವರೋಗವನ್ನು ಕಳೆದು ಅವನನ್ನು ಮುಕ್ತನನ್ನಾಗಿಸುತ್ತಾನೆ . ` ಭವರೋಗವ ಕಳೆವ ಪರಿಯ ನೋಡಾ ಮಡಿವಾಳನ ಕಾಯಕದಂತೆ ‘ ಎಂದು ವಚನಗಳಲ್ಲಿ ಉಕ್ತವಾಗಿರುವುದು ಯಥೋಚಿತವಾಗಿದೆ . ಏಕೆಂದರೆ ಮಡಿವಾಳನು ಬಟ್ಟೆಗಳನ್ನು ಎತ್ತಿ ಎತ್ತಿ ಒಗೆದು ಹಿಂಡಿ ಅದರ ಕೊಳೆಯನ್ನು ತೆಗೆಯುವಂತೆ ಜಂಗಮನು ಭಕ್ತನ ಭವರೋಗದ ಕೊಳೆಯನ್ನು ತೆಗೆದು ಪರಿಶುದ್ಧವಾಗಿಸುತ್ತಾನೆ . ಒಟ್ಟಾರೆ ಸಮಾಜ ಕಲ್ಯಾಣವನ್ನೇ ಗುರಿಯಾಗಿಸಿಕೊಂಡ ಜಂಗಮನು ಸಮಾಜ ಕಲ್ಯಾಣಕ್ಕಾಗಿ ಧನಧಾನ್ಯಗಳನ್ನು ಸಂಗ್ರಹಿಸಬಹುದು . ಆದರೆ ಅಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ . ಆದ್ದರಿಂದ ಭಕ್ತನಾದವನೂ ಕೂಡ ಇಂತಹ ಜಂಗಮವೇ ತನ್ನ ಪ್ರಾಣವೆಂದರಿದು ತನು ಮನ ಧನಗಳನ್ನು ಸಮರ್ಪಿಸಬೇಕು . ‘ ಜಾಣನು ಜಾಣನು ಆತ ಜಾಣನು ಜಂಗಮಕ್ಕೆ ಸವೆಸುವಾತ ಜಾಣನು ‘ , ಕನ್ನಡಿಯ ನೋಡುವ ಅಣ್ಣಗಳಿರಾ , ಜಂಗಮವ ನೋಡಿರೆ , ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ , ಜಂಗಮವಾಪ್ಯಾಯನವಾದೊಡೆ ಲಿಂಗ ಸಂತುಷ್ಟಿ ಮುಂತಾದ ಶರಣರ ವಚನಗಳನ್ನು ಗಮನಿಸಿದರೆ ಜಂಗಮಸೇವೆ ಇಲ್ಲದೆ ಭಕ್ತನ ಆಧ್ಯಾತ್ಮ ಸಾಧನೆ ಅಪೂರ್ಣವೆನಿಸುತ್ತದೆ . ಅಗ್ನಿಯಾಧಾರದಲ್ಲಿ ಕಬ್ಬಿಣ ನೀರುಂಬುವಂತೆ , ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುವಂತೆ ಲಿಂಗದ ಮುಖ ಜಂಗಮವೆಂದು ತಿಳಿದು ಜಂಗಮಕ್ಕೆ ಸಕಲ ಪಡಿಪದಾರ್ಥಗಳನ್ನು ಸಮರ್ಪಿಸಬೇಕೆಂಬುದು ಧರ್ಮಗುರು ಬಸವಣ್ಣನವರ ಆದೇಶ . ಆದರೆ ಇಲ್ಲಿ ‘ ಬೇಡುವಾತ ಜಂಗಮನಲ್ಲ , ಬೇಡಿಸಿಕೊಂಬಾತ ಭಕ್ತನಲ್ಲ ‘ ನಿಯಮವು ಭಕ್ತ ಜಂಗಮರಲ್ಲಿ ಪರಿಪಾಲನೆಯಾಗಬೇಕಾದುದು ಮಾತ್ರ ಅತ್ಯವಶ್ಯವಾಗಿದೆ . ‘ ಜಂಗಮದರಿವು     ಬೇಡಿದಲ್ಲಿ ಹೋಯಿತು ‘ ಎಂಬಂತೆ ಜಂಗಮ  ಬೇಡಿ ಹಾಳಾದರೆ ಭಕ್ತನು ಬೇಡಿಸಿಕೊಂಡು ತನ್ನ ಸಾಧನೆಯಿಂದ ಚ್ಯುತನಾಗುತ್ತಾನೆ . ಆದ್ದರಿಂದ ಭಕ್ತನು

ಬೇಡಿಸಿಕೊಳ್ಳದೆ   ಸರ್ವಾರ್ಪಣ ಭಾವದಿಂದ ಜಂಗಮಕ್ಕೆ ಸಮರ್ಪಿಸಬೇಕು . ಜಂಗಮನಾದರೂ ಸಮಾಜ ಕಲ್ಯಾಣಕ್ಕಾಗಿ ಅದನ್ನು ನಿಸ್ವಾರ್ಥ ಮನೋಭಾವದಿಂದ ಸ್ವೀಕರಿಸಿ ತೃಪ್ತಿ ಹೊಂದಬೇಕು . ಹೀಗೆ ಜಂಗಮ ತೃಪ್ತಿ ನಡೆದರೆ ಜಗತ್ತಿನ

ತೃಪ್ತಿಯಾಗುವುದು .

ಶಿವಯೋಗಿನಿ ಸಂತೃಪ್ತೇ   ತೃಪ್ತೋಭವತಿ ಶಂಕರ : |

 ತತ್‌ ತೃಪ್ತ್ಯಾ ತನ್ಮಯಂ ವಿಶ್ವಂ ತೃಪ್ತಿಮೇತಿ ಚರಾಚರಂ

ಎಂಬಂತೆ ಶಿವಸ್ವರೂಪಿ , ಶಿವಯೋಗಿಯಾಗಿರುವ ಜಂಗಮನು ತೃಪ್ತನಾದರೆ ಪರಶಿವನೇ ತೃಪ್ತನಾದಂತೆ . ಪರಶಿವನ ತೃಪ್ತಿಯಾದರೆ ಅವನ ಅಂಶದಿಂದ ಕೂಡಿ ಸಕಲ ಚರಾಚರಗಳಿಂದ ಯುಕ್ತವಾಗಿರುವ ವಿಶ್ವವೂ ತೃಪ್ತಿಯಾದಂತೆಯೆ ,

ಹೀಗೆ ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ . ಹಾನಗಲ್ಲ ಕುಮಾರ ಸ್ವಾಮಿಗಳವರು ಮೇಲೆ ಉಲ್ಲೇಖಿಸಿದ ಪದ್ಯದ ಮೊದಲನೆಯ ನುಡಿಯಲ್ಲಿ ಸ್ವಯ ಜಂಗಮದ ಲಕ್ಷಣವನ್ನು ಹೀಗೆ ಹೇಳುತ್ತಾರೆ ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು . ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು . ಅದನ್ನು ಹಾನಗಲ್ಲ ಕುಮಾರಸ್ವಾಮಿಗಳವರು ತಮ್ಮ ಪದ್ಯದ ಎರಡನೆಯ ನುಡಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ . ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮನೆಂದು ಹೇಳುತ್ತ ಅಂತಹ ಚರ ಜಂಗಮ ಸಮೂಹದಲ್ಲಿ ಗುರುಸ್ಥಾನವನ್ನು ಅಥಣಿಯ ಶಿವಯೋಗಿಗಳು ಹೊಂದಿದ್ದರು ಎಂಬುದನ್ನು ಅವರು ಸ್ಮರಿಸಿಕೊಳ್ಳುತ್ತಾರೆ . ಲಿಂಗಾಯತ ಧರ್ಮದಲ್ಲಿ ಚರಜಂಗಮನ ಸ್ಥಾನ ಬಹಳ ಮಹತ್ವದ್ದು .

ಸರ್ವಲೋಕೋಪಕಾರಾಯ ಯೋ ದೇವಃ ಪರಮೇಶ್ವರಃ |

ಚರತ್ಯತಿಥಿ ರೂಪೇಣ ನಮಸ್ತೇ ಜಂಗಮಾತ್ಮನೇ  ॥

ಎಂಬ ಮಾತಿನಲ್ಲಿಯೂ ಕೂಡ ಸಾಕ್ಷಾತ್ ಪರಶಿವನೇ ಜನಕಲ್ಯಾಣ ದೃಷ್ಟಿಯಿಂದ ಚರಜಂಗಮನಾಗಿ ಲೋಕದಲ್ಲಿ ಸುಳಿಯುತ್ತಾನೆ ಎಂಬುದನ್ನು ಸ್ಪಷ್ಟ ಪಡಿಸಲಾಗಿದೆ . ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು . ಇದೇ ಭಾವವನ್ನು ಇದಕ್ಕಿಂತಲೂ ಸ್ಪಷ್ಟವಾಗಿ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರು ಮೇಲಿನ ಪದ್ಯದ ಮೂರನೆಯ ನುಡಿಯಲ್ಲಿ ತಿಳಿಯಪಡಿಸುತ್ತಾರೆ . ಅವರ ದೃಷ್ಟಿಯಲ್ಲಿ ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು . ಹೀಗೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಮೂರು ರೀತಿಯ ಭೇದಗಳಿಂದ ಕೂಡಿದ ಜಂಗಮ ತತ್ವದ ಸ್ವರೂಪವನ್ನು ಮೂರು ನುಡಿಗಳಲ್ಲಿ ಕರಿಯು ಕನ್ನಡಿಯೊಳಡಗಿದಂತೆ ಹಿಡಿದಿರಿಸಿದ ಪರಿ ತುಂಬ ಮನೋಜ್ಞವಾಗಿದೆ .

Related Posts