ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಮಗನೆ ಈ ಸಂಸಾರ | ತೆಗಹನೇ ಪರಿಹರಿಪೆ
ದುಗುಡ ಬೇಡೆಂದು ನಗುತೊಂದಾಲೋಚನೆ
ಬಗೆದ ಶ್ರೀಗುರುವೆ ಕೃಪೆಯಾಗು || ೭೬ ||
ಎಷ್ಟೋ ದಿನಗಳಿಂದ ಜಂಗುಹಿಡಿದ ಕಬ್ಬಿಣವಾದರೂ ಪರುಷಮಣಿ ಸಂಸ್ಪರ್ಶದಿಂದ ಹೊನ್ನಾಗುವಂತೆ ಸದ್ಗುರು ಸನ್ನಿಧಿಯನ್ನು ಸೇರಿದ ಮೇಲೆ ಉದ್ಧಾರವಾಗದೆ ಮಾಣನು. ಶಿಷ್ಯನು ಶ್ರೀಗುರುವಿನಲ್ಲಿ ಆತ್ಮಾರ್ಪಣ ಭಕ್ತಿಯನ್ನು ಅರ್ಪಿಸಬೇಕು. ಅಂದರೆ ಅವನ ಎಲ್ಲ ಜೀವನಭಾರವು ಗುರುವಿಗೆ ಸಲ್ಲುತ್ತದೆ. ಮಾರ್ಜಾಲಕಿಶೋರನ್ಯಾಯದಂತೆ ಪರಮಗುರುವು ಶಿಷ್ಯನ ಸಕಲ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ.
ಶಿಷ್ಯನ ಅನನ್ಯವಾದ ಪ್ರಾರ್ಥನೆಯಿಂದ ಸಂತುಷ್ಟನಾದ ಕರುಣಾಮಯ ಗುರುನಾಥನು- ‘ಮಗನೆ’ಯೆಂದು ಸಂಬೋಧಿಸಿ ಹತ್ತಿರ ಕರೆದು. ತಂದೆ ಮಗನನ್ನು ಕರೆದು ಕೂಡ್ರಿಸಿಕೊಂಡು ಜೀವನ ಮಾರ್ಗವನ್ನು ತಿಳಿಸುವಂತೆ ಶಿಷ್ಯನಿಗೆ ಉಪದೇಶಿಸುತ್ತಾನೆ. ತಂದೆಗೆ ಮಗನ ಉತ್ಕರ್ಷದ ಚಿಂತೆಯಿರುವಂತೆ ಶಿಷ್ಯನ ಉದ್ಧಾರ ಕಾರ್ಯ ಪರಮಗುರುವಿಗಿದೆ. ಬುದ್ಧಿ ಕಲಿಸುವದು, ಸಮಸ್ಯೆಗಳಿಗೆ ಸದುಪಾಯ ತೋರುವುದು ತಂದೆಯಾದವನ ಕರ್ತವ್ಯವಲ್ಲವೆ ? ಸರ್ವಜ್ಞಮೂರ್ತಿಯು “ಬುದ್ಧಿಗಲಿಸದ ತಂದೆಗೆ ಶುದ್ಧ ವೈರಿ’ ಯೆಂದಿದ್ದಾನೆ. ಇಲ್ಲಿ ಸಾಕ್ಷಾತ್ ಅಧ್ಯಾತ್ಮ ತಂದೆಯು ಲಭ್ಯವಾದ ಬಳಿಕ ಶಿಷ್ಯನಿಗೆ ಇನ್ನೆಲ್ಲಿಯ ಚಿಂತೆ ? ಮತ್ತೆಲ್ಲಿಯ ಭಯ ? ಯಾವುದೂ ಉಳಿಯುವದಿಲ್ಲ. ಸಮುದ್ರವನ್ನು ಸೇರಿದ ನದಿಗೆ ರಭಸವೆಲ್ಲಿ ? ಉದ್ವೇಗವೆಲ್ಲಿ? ಎಲ್ಲವೂ ಅದರಲ್ಲಿ ಲೀನವಾಗಿ ಹೋಗುತ್ತದೆ. ಹಾಗೆ ಗುರುಸನ್ನಿಧಿಯಲ್ಲಿ ಶಿಷ್ಯನ ಸಂಸಾರಭಾವನೆಗಳೆಲ್ಲ ಅಡಗಿ ಮೋಕ್ಷದ ಬಯಕೆ ಬಲಿಯುತ್ತದೆ.
ಕೃಪಾಕರನಾದ ಶ್ರೀಗುರುವು ಶಿಷ್ಯನನ್ನು ‘ಬಾ ಅಪ್ಪಾ ಮಗನೆ !’ ಎಂದು ಸಮೀಪಕ್ಕೆ ಕರೆದು ಕುಳ್ಳಿರಿಸಿಕೊಂಡು ನಗುಮುಖದಿಂದ ಬೋಧೆಗೆಯ್ಯುವ ದೃಶ್ಯ ಅಪೂರ್ವ. ರೋಗಿಯಾದವನಿಗೆ ವೈದ್ಯನ ಕರುಣಾಮಯ ದೃಷ್ಟಿಯು ಮತ್ತು ಸಾಂತ್ವನೆಯ ಮಾತುಗಳು ಅವನ ಅರ್ಧರೋಗವನ್ನೇ ಕಳೆಯುವಂತೆ ; ಭವರೋಗ ವೈದ್ಯನಾದ ಪರಮ ಗುರುವಿನ ನಗು ಮುಖದ ಕೃಪಾನೋಟ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಬಿಸಿಲಿನಿಂದ ಬಳಲಿದವನಿಗೆ ನೆಳಲು ತಂಪನ್ನೀಯುವದಿಲ್ಲವೆ?
ಗುರುನಾಥನು ಶಿಷ್ಯನಾದ ನನಗೆ- ‘ಈ ಸಂಸಾರವು ಅಜ್ಞಾನದಿಂದ ಅಹಂಕಾರ ದಿಂದ ನಿನಗೆ ಭಾರವಾಗಿದೆ ಹೊರತು; ಅರಿತಾಚರಿಸಿದಲ್ಲಿ ಅದು ಸಸಾರವಾಗುತ್ತದೆ. ಕಮಲ ಪತ್ರ ಬಿಂದುವಿನಂತೆ, ಕೆಸರಿನಲ್ಲಿದ್ದ ಕುಂಬಾರ ಹುಳದಂತೆ ಸಂಸಾರದಲ್ಲಿದ್ದು ಇಲ್ಲದಂತಿರಬೇಕು. ಆಗ ಸಂಸಾರವೇ ಸದ್ಗತಿಗೆ ಸಹಾಯಕವಾಗುವದು. ಬಸವಾದಿ ಪ್ರಮಥರು ಸಂಸಾರದಿಂದಲೇ ಸದ್ಗತಿಯನ್ನು ಸಾಧಿಸಲಿಲ್ಲವೆ ? ಜ್ಞಾನಿಯಾಗಿ ಗುರುಪುತ್ರನಾಗಿ ಸಂಸಾರಕ್ರಿಯೆಯನ್ನು ಆಚರಿಸಿದರೆ ಬಂಧನವಿಲ್ಲ. ಅರಿವಿಲ್ಲದ ಕ್ರಿಯೆ ; ಕ್ರಿಯೆಯಿಲ್ಲದ ಅರಿವೂ ವ್ಯರ್ಥ, ಕಾರಣ ಈ ಸಂಸಾರದ ದುಗುಡವನ್ನು ಬಿಡು. ಯಾವ ಕಳವಳವನ್ನು ಮಾಡಿಕೊಳ್ಳಬೇಡ. ಈ ದುಗುಡ-ದುಮ್ಮಾನಗಳನ್ನು ನಿವಾರಿಸಿಕೊಳ್ಳುವ ಪರಮೋಪಾಯವನ್ನು ಕರುಣಿಸುವೆನು. ಚಿತ್ತವಿಟ್ಟು ಕೇಳು.
“ಭಕ್ತಿಯೇ ಮುಕ್ತಿಯ ಸಾಧನೆ. ಶ್ರದ್ಧಾ-ನಿಷ್ಠೆಗಳಿಂದ ಅದನ್ನು ಅಳವಡಿಸಿಕೊಳ್ಳು. ನವವಿಧ ಭಕ್ತಿಗಳಲ್ಲಿ ಕೊನೆಯದಾದ ಆತ್ಮಸಮರ್ಪಣಾಭಕ್ತಿಯು ಅತ್ಯಂತ ಶ್ರೇಷ್ಠವಾದುದು. ಇದಕ್ಕೆ ಸುಂದರ ಉದಾಹರಣೆಯೆಂದರೆ- *ʼʼಮಾರ್ಜಾಲ ಕಿಶೋರ ನ್ಯಾಯ.” ಬೆಕ್ಕಿನ ಮರಿಗಳು ತಮ್ಮ ನಿರ್ವಹಣೆಯನ್ನೆಲ್ಲ ತಾಯಿಗೇನೆ ಬಿಟ್ಟಿರುತ್ತವೆ. ಕಣ್ಣುಮುಚ್ಚಿ ಧ್ಯಾನಸ್ಥರಂತೆ ನಿಶ್ಚಿಂತವಾಗಿರುತ್ತವೆ. ತಮ್ಮನ್ನು ತಾಯಿಗೆ ಅರ್ಪಿಸಿಕೊಂಡಿರುತ್ತವೆ. ಅದಕ್ಕಾಗಿ ತಾಯಿಬೆಕ್ಕೇ ಮರಿಗಳ ಸಂಪೂರ್ಣ ರಕ್ಷಣೆಯ ಹೊಣೆಹೊತ್ತಿರುತ್ತದೆ. ಇದರಂತೆ ಶಿವಮಯವಾದ ಸಂಸಾರದಲ್ಲಿದ್ದು ಅದರ ಎಲ್ಲ ಭಾರವನ್ನು ಶಿವನ ಮೇಲೆ ಹಾಕಿ ಕರ್ತವ್ಯ ಕರ್ಮವನ್ನು ಮಾಡು. ಕೊಡುವನೂ ಸಂಗ, ಕೊಂಬುವವನೂ ಸಂಗ’ನೆಂದು ಬಸವಣ್ಣನವರು ನೆರೆನಂಬಿದಂತೆ, ಮಾಡುವವನೂ ಶಿವ, ಮಾಡಿಸಿಕೊಳ್ಳುವವನೂ ಶಿವ. ಮಾಡುವ ಕೆಲಸವೂ ಶಿವಮಯವೆಂಬ ಪವಿತ್ರ ಭಾವನೆಯಿರಲಿ. ಇದನ್ನರಿತು ಆಚರಿಸಿದರೆ ಸಂಸಾರ ಸಸಾರವಾಗುವದರಲ್ಲಿ ಸಂದೇಹವಿಲ್ಲ.
ಇದಕ್ಕೊಂದು ಚಿಕ್ಕ ದೃಷ್ಟಾಂತವನ್ನು ಮನವಿಟ್ಟು ಕೇಳು- ಒಬ್ಬ ರೈತನು ದಿನಾಲು ತಪ್ಪದೆ ತನ್ನ ಕುದುರೆಯನ್ನೇರಿ ಹೊಲಕ್ಕೆ ಹೋಗಿ ಕೃಷಿಕಾಯಕವನ್ನು ಪೂರೈಸಿ ಬರುತ್ತಿದ್ದನು. ಬರುವಾಗ ಹುಲ್ಲನ್ನೋ, ಕಟ್ಟಿಗೆಯನ್ನೂ ತರುತ್ತಿದ್ದನು. ಹೊಲಕ್ಕೆ ತಪ್ಪದೆ ಹೋಗುವದು ಒಕ್ಕಲಿಗನ ಕರ್ತವ್ಯ. ಜೊತೆಗೆ ಏನಾದರೂ ಕೆಲಸ ಮಾಡಿಯೇ ಬರಬೇಕು. ಅದಕ್ಕಾಗಿಯೇ ಹೊಲ ನೋಡದೆ ಹೋಯಿತು. ಸಾಲ ಕೇಳದೆ ಹೋಯಿತು” ಎಂಬ ವೇದಸದೃಶ ಗಾದೆ ಮಾತನ್ನು ಕೇಳಿರ ಬೇಕು. ಪ್ರತಿನಿತ್ಯವೂ ಹೊಲವನ್ನು ನೋಡುವದರಿಂದ ಕೃಷಿಕಾಯಕ ಸಫಲವಾಗುವದು. ಹೊಲಕ್ಕೆ ಹೋದ ರೈತನು ಬರಿಗೈಯಿಂದ ಬರಬಾರದು. ಅದು ರೈತನ ಲಕ್ಷಣವಲ್ಲ, ಅದಕ್ಕಾಗಿ ಆ ರೈತನು ಬರಿಗೈಯಿಂದ ಬರುತಿರಲಿಲ್ಲ. ಒಮ್ಮೆ ಬರುವಾಗ ಅವನಿಗೊಂದು ವಿಚಾರ ಹೊಳೆಯಿತು. ಈ ಕುದುರೆಯ ಮೇಲೆ ನಾನು ಸುಖವಾಗಿ ಅಡ್ಡಾಡುತ್ತಿದ್ದೇನೆ. ಪಾಪ ! ಇದಕ್ಕೇಕೆ ಈ ಭಾರವಾದ ಹೊರೆಯನ್ನು ಹೊರಿಸಬೇಕು. ಇದು ಸರಿಯಲ್ಲವೆಂದು ವಿಚಾರಿಸಿ ಅದನ್ನು ತನ್ನ ತಲೆಯ ಮೇಲಿಟ್ಟುಕೊಂಡು ನಡೆದನು. ದಿನಾಲು ಇದನ್ನು ನೋಡುತ್ತಿದ್ದ ಪಕ್ಕದ ಹೊಲದ ಯಜಮಾನನು ಅವನನ್ನು ಕೇಳಿದ, ”ಏನಪ್ಪಾ ತಮ್ಮಾ! ಇಲ್ಲಿ ನಿಲ್ಲು ನಿನಗೊಂದು ಮಾತು ಕೇಳಬೇಕಾಗಿದೆ. ನೀನು ದಿನನಿತ್ಯವೂ ಮೇವಿನ ಹೊರೆಯನ್ನಾಗಲಿ, ಕಟ್ಟಿಗೆಯನ್ನಾಗಲಿ ಮನೆಗೆ ಒಯ್ಯುತ್ತಿ ಆದರೆ ಆ ಭಾರವನ್ನು ನಿನ್ನ ತಲೆಯ ಮೇಲಿಟ್ಟು ಕೊಂಡೇಕೆ ಹೋಗುತ್ತೀ ? ನೀನು ಹೊತ್ತ ಹೊರೆಯ ಭಾರವೂ ಕುದುರೆಗೇನೆ ಬೀಳುವದಿಲ್ಲವೆ ? ನೀನೇಕೆ ವ್ಯರ್ಥ ಕಷ್ಟ ಪಡುತ್ತಿದ್ದೀಯಾ ! ಕುದುರೆಯ ಮೇಲೇನೇ ಮುಂದಿಟ್ಟುಕೊಂಡು ಹೋಗುವದು ಉಚಿತವಲ್ಲವೆ ?” ಎಂದು ಹಿತೋಕ್ತಿಗಳನ್ನಾಡಿದನು.
ಅವನ ಮಾತುಗಳನ್ನು ಅರ್ಥೈಸಿಕೊಂಡು ರೈತನು ತನ್ನ ಮೂರ್ಖತನಕ್ಕೆ ಮರುಗಿ ಸುಖವಾಗಿ ಬರಹತ್ತಿದನು. ಈ ದೃಷ್ಟಾಂತ ಕೇವಲ ರೈತನದಲ್ಲ, ಅದು ನಿನಗೂ ಅನ್ವಯಿಸುತ್ತದೆ-ನೀನು ಶಿವನೆಂಬ ಕುದುರೆಯನ್ನೇರಿ ಸಂಸಾರ ಸಾಗರವನ್ನು ದಾಟುತ್ತಿದ್ದೇನೆಂಬುದನ್ನೇ ಮರೆತಿರುವಿ. ಎಲ್ಲವನ್ನು ನಡೆಯಿಸಿಕೊಡುವವನು ಶಿವನು. ಆದರೆ ಹೊಲ, ಮನೆ ಮಡದಿ ಮಕ್ಕಳೆಲ್ಲರೂ ನನ್ನವರು. ನಾನೇ ನಡೆಸುವೆನೆಂಬ ಸಂಸಾರ ಭ್ರಾಂತಿಯೇ ಭಾರವಾಗಿದೆ. ಶಿವನ ಪ್ರೇರಣೆಯಿಲ್ಲದೆ ಯಾವುದೂ ನಡೆಯದು. ಅದು ಕಾರಣ ಶಿವನ ಧ್ಯಾನ ಮಾಡುತ್ತ, ಗುರು-ಲಿಂಗ- ಜಂಗಮಾರಾಧನೆ ಗೈಯ್ಯುತ್ತ ಎಲ್ಲ ಭಾರವನ್ನು ಪರಶಿವನ ಮೇಲೆ ಹಾಕಿ ಕಾಯಕ ಕೈಕೊಳ್ಳುವದೇ ಪ್ರತಿಯೊಬ್ಬರ ಕರ್ತವ್ಯ. ಇದುವೇ ಸುಲಭೋಪಾಯವು. ಇದರಿಂದ ಸುಖ ಖಂಡಿತವಾಗಿ ಸಿಕ್ಕುವದು.” ಎಂದು ಮುಂತಾಗಿ ಸದ್ಗುರುವಿನ ಆಲೋಚನೆಯನ್ನು ಆಲಿಸುವ ಶಿಷ್ಯನೇ ಕೃತಾರ್ಥನು. ಪುಣ್ಯಮಯನು.
ಕರೆದು ಮಂಡೆಯ ಮೇಲೆ | ಕರವಿಟ್ಟು ಸಿರದಡಹಿ
ಗುರುಪುತ್ರನೆನಿಸಿ-ಸ್ಥಿರವಾಗಿ ಬಾಳೆಂದು
ಹರಸಿದೈ ಗುರುವೆ ಕೃಪೆಯಾಗು II ೭೭ ||
ಶ್ರೀಗುರುವು ಶಿಷ್ಯನನ್ನು ಸಮೀಪಕ್ಕೆ ಬರಮಾಡಿಕೊಂಡು ಆತ್ಮೀಯವಾಗಿ ಹಸನ್ಮುಖದಿಂದ ಸುಲಭೋಪಾಯಗಳನ್ನು ತಿಳಿಸುತ್ತ ಯಾವ ಯಾವ ಸಂಸ್ಕಾರವನ್ನು ದಯಪಾಲಿಸುವನು, ಏನನ್ನು ಅನುಗ್ರಹಿಸುವನು ಎಂಬುದನ್ನು ಶಿವಕವಿಯು ವಿಶದ ಪಡಿಸುತ್ತ ಹೋಗುತ್ತಾನೆ.
ಬಾಳಿನ ಬೇಗೆಯಲ್ಲಿ ಬಳಲಿದ ವ್ಯಕ್ತಿಯನ್ನು ಹತ್ತಿರಕ್ಕೆ ಕರೆದು ಮೈದಡಹಿ ತಲೆಯ ಮೇಲೆ ಹಸ್ತವನ್ನಿಟ್ಟು ಸಂತೈಸಿದರೆ ಅವನಿಗೆಷ್ಟು ಆನಂದವಾಗುವದೋ ಅದಕ್ಕೂ ಮಿಗಿಲಾಗಿ ಗುರುಕರಸ್ಪರ್ಶದಿಂದ ಪರಮಾನಂದವೇ ಲಭ್ಯವಾಗುವದು. ಸದ್ಗುರುವಿನ ಸದಯಾಂತಃಕರಣವನ್ನು ಶಿಷ್ಯನು ಪುನಃ ಪುನಃ ಸಂಸ್ಮರಿಸುತ್ತಾನೆ. ಉಪಕೃತಿಯನ್ನು ಸ್ಮರಿಸುತ್ತಿರುವುದೇ ನಿಜವಾದ ಮಾನವೀಯತೆ. ಅದು ಅತ್ಮೋದ್ಧಾರದ ಮೈಲುಗಲ್ಲು
ಗುರುದೇವಾ ! ಕಾಯ-ಕರ್ಮಗಳೆಂಬ ಮಾಯಾ ಸಂಸಾರಭ್ರಾಂತಿಯಲ್ಲಿ ಗತಿಗಾಣದ ನನ್ನನ್ನು ಉದ್ಧಾರಗೊಳಿಸಿದೆ. ಯೋಗಕ್ಷೇಮವನ್ನು ವಿಚಾರಿಸಿದೆ. ನಗುತೊಂದಾಲೋಚನೆಯನ್ನಿತ್ತು ಸಂತಸಗೊಳಿಸಿರುವೆ. ನಿನ್ನ ಉಪಕಾರ ಸ್ಮರಿಸಲ ಸದಳವಾಗಿದೆ. ಎನ್ನ ಶಿರದ ಮೇಲೆ ನಿನ್ನ ವರದ ಹಸ್ತವನ್ನಿಟ್ಟು ಗುರುಪುತ್ರನನ್ನಾಗಿಸಿದೆ .ಗುರುಕರ ಜಾತನನ್ನಾಗಿಸಿದೆ. ನನ್ನ ಮಾಂಸಮಯ ಪಿಂಡವು ಮಂತ್ರಮಯವಾಯಿತು. ಧೈರ್ಯವಾಗಿ ಶಿವಬಾಳನ್ನು ಬಾಳೆಂದು ಹರಸಿದೆ-ಇಂಥ ಹರಕೆ ಸಾಮಾನ್ಯವೆ ! ಪುನರ್ಜಾತನನ್ನು ಮಾಡುವ ಸುಯೋಗ, ಗುರುಕರ ಜಾತನಾಗುವ ಶುಭಯೋಗವೂ ಹೌದು.
ಅಧ್ಯಾತ್ಮಜೀವನದಲ್ಲಿ ಗುರುಪುತ್ರನಾಗುವದೇ ಉನ್ನತ ಮಾರ್ಗ. ಅದರಲ್ಲೂ ವೀರಶೈವ ಸಿದ್ಧಾಂತವು ತತ್ತ್ವಪ್ರಧಾನವಾದುದು. ವೀರಶೈವವು ಜಾತಿವಾಚಕವಲ್ಲ. ತತ್ತ್ವಸೂಚಕವಾದುದು. ಗುರುಕರಜಾತನಾಗುವದು ಬಹುಮುಖ್ಯವಾದ ಪ್ರಕ್ರಿಯೆ. ಗುರುಪುತ್ರನಾಗುವಲ್ಲಿಯೇ ಪೂರ್ವಾಶ್ರಯ ಅಳಿಯುವದು ; ಮತ್ತು ಶಿವದೀಕ್ಷೆಯಿಂದ ಸಮಾನತೆಯು ಪ್ರಾಪ್ತವಾಗುವದು. ಸದ್ಗುರು ಕೃಪೆ ಪಡೆಯದೆ ಯಾವ ಫಲವಿಲ್ಲ. ಶರಣಸಂತತಿಗೆ ಕಾರಣಕರ್ತನು ಗುರುದೇವನೆ. ಜೀವಜಾಲಂಗಳೊಳಗೆ ಯಾವನ ನ್ನಾದರೂ ಪಾವನಮಾಡುವ ಮಹಾ ಶಕ್ತಿ ಸದ್ಗುರುವಿಗಿದೆ. ಅಂತೆಯೇ ಅನುಭವಿಗಳು ಶಾಸ್ತ್ರಕಾರರು ,
“ಅಪುತ್ರಸ್ಯ ಗತಿರ್ನಾಸ್ತಿ”
ಮಕ್ಕಳಾಗದವನಿಗೆ ಗತಿಯಿಲ್ಲವೆಂದರು. ಲೌಕಿಕ ಮಕ್ಕಳಾದರೆ ಸದ್ಗತಿಯೆಂದರ್ಥವಲ್ಲ. ಇದು ವೈಶಿಷ್ಟ್ಯಪೂರ್ಣವಾಗಿದೆ. ಅನೇಕ ಮಕ್ಕಳನ್ನು ಹಡೆಯುವ ಶ್ವಾನ ಸೂಕರಗಳಿಗೂ ಸದ್ಧತಿ ಸಿಕ್ಕಬೇಕಾದೀತು. ಸದ್ಗುರುವಿನ ವರಕರದಲ್ಲಿ ಸಂಜನಿಸಿ ಗುರುಪುತ್ರನೆನಿಸಬೇಕು. ಗುರುಪುತ್ರರಾಗದವರಿಗೆ ಸದ್ದತಿಯಿಲ್ಲವೆಂಬುದು ಗಮನೀಯವಾದುದು. ಗುರುಕರ ಜಾತನಾಗದೇ ಶಿವಜೀವರ, ಅಂಗ-ಲಿಂಗದ ಸಾಮರಸ್ಯದ ಸುಖದ ಸಂಬಂಧವೂ ಆಗುವದಿಲ್ಲ.
ವೀರಶೈವ ಪ್ರಕ್ರಿಯೆಯಲ್ಲಿ ಸ್ತ್ರೀಪುರುಷರೆಂಬ ಭೇದಭಾವವಿಲ್ಲ. ಲಿಂಗಾಂಗ ಸಾಮರಸ್ಯದ ಸುಖವನ್ನು ಸವಿಯಲು ಸಕಲರಿಗೂ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿದೆ ಶರಣಧರ್ಮ. ಹಿಂದೂ ಸಂಸ್ಕೃತಿಯಲ್ಲಿ ಧಾರ್ಮಿಕಸ್ವಾತಂತ್ರ್ಯ ಸಿಕ್ಕದ ಮಹಿಳೆಗೆ ವೀರಶೈವರು ಪ್ರಾಚೀನ ಕಾಲದಿಂದಲೂ ಧರ್ಮಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಶಿವಲಿಂಗವನ್ನು ಪೂಜಿಸುವ ಆರಾಧಿಸುವ ಅಧಿಕಾರ ಸಮನಾಗಿ ಬಂದಿದೆ.
ಗುರುಪುತ್ರನಾಗುವ ಸಂಸ್ಕಾರಕ್ಕೆ ಶಿವಸಂಸ್ಕಾರ ಅಥವಾ ದೀಕ್ಷಾಸಂಸ್ಕಾರವೆಂದು ಹೆಸರು. ಶ್ರೀಗುರುವಿನ ಶಕ್ತಿಪಾತವು ಶಿಷ್ಯನ ಮೇಲಾಗುವದರಿಂದ ಅವನ ತನು-ಮನ-ಭಾವಗಳು ಪವಿತ್ರವಾಗುತ್ತವೆ. ಶರೀರದಲ್ಲಿದ್ದ ಮಲತ್ರಯಗಳು ಮಾಯವಾಗುತ್ತವೆ. ಅಲ್ಲದೆ ತನುತ್ರಯದಲ್ಲಿ ಶಿವಲಿಂಗತ್ರಯದ ಪ್ರತಿಷ್ಠೆಯೂ ನೆರವೇರುವದು: ಈ ವಿಚಾರವಾಗಿ ಶಿವಯೋಗಿ ಶಿವಚಾರ್ಯರ ನುಡಿಯನ್ನು ಆಲಿಸಿ
*ದೀಯತೇ ಚ ಶಿವಜ್ಞಾನಂ
ಕ್ಷೀಯತೇ ಪಾಶಬಂಧನಮ್ |
ಯಸ್ಮಾದತಃ ಸಮಾಖ್ಯಾತಾ
ದೀಕ್ಷೇತೀಯಂ ವಿಚಕ್ಷಣೈಃ||೬. ೧೧ ||
ಯಾವ ಸಂಸ್ಕಾರವು ಶಿವಜ್ಞಾನವನ್ನುಂಟು ಮಾಡುವದೋ ಮತ್ತು ಮಲಮಾಯಾ ಕರ್ಮಬಂಧನವನ್ನು ನಾಶಮಾಡುವದೋ ಅದಕ್ಕೆ ಶಾಸ್ತ್ರಜ್ಞರು “ದೀಕ್ಷೆ’ಯೆಂದು ಹೇಳುವರು. ಮಲತ್ರಯವನ್ನು ನಾಶಮಾಡಿ ಲಿಂಗತ್ರಯವನ್ನು ಕರುಣಿಸುವ ಸತ್ಕೃಯೆಯುಳ್ಳುದೇ ‘ದೀಕ್ಷೆ’ಯೆಂಬ ಅನ್ವರ್ಥಕ ನಾಮವನ್ನು ಹೊಂದಿದೆ. ಇಂಥ ಮಹತ್ತರವಾದ ಹಸ್ತ-ಮಸ್ತಕ ಸಂಯೋಗ ರೂಪಸತ್ಕೃಯೆಯಿಂದ ಗುರುಕರಜಾತನಾದ ಶರಣನಿಗೆ ಭವ-ಮರಣಗಳು ದೂರಾಗುತ್ತವೆ. ಈ ಕೃತಿಕರ್ತನಾದ ಶಿವಕವಿಯು ತಮ್ಮ ‘ಶಿವಾನುಭವ ದರ್ಪಣದಲ್ಲಿ’-
ಗುರು ಕರೋದ್ಭವ ತಾನಾದ ಶರಣಗುಂಟೆ ಪರಿಭವ ?
ಪರಮಗುರುವು ಕರುಣದಿಂದ ಶಿರದಮೇಲೆ ಕರವನಿಡಲು |
ಪರುಷಮುಟ್ಟಿದ ಲೋಹದಂತೆ ಶರೀರ ಲಿಂಗವಾದ
ಶರಣಗಿನ್ನು ಉಂಟೆ ಪರಿಭವ ||
ಎಂದು ಗುರುಕರಸ್ಪರ್ಶದ ಮಹತ್ವವನ್ನು ಮಾರ್ಮಿಕವಾಗಿ ವರ್ಣಿಸಿದ್ದಾನೆ. ಪುನರ್ಜಾತನನ್ನು ಮಾಡುವ ಸದ್ಗುರುವನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯು-
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ,
ಭವಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೆ,
ಭವಿಯೆಂಬುದ ತೊಡೆದು ಭಕ್ತೆಯೆಂದೆನಿಸುವ ಗುರುವೆ,
ಚನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವ, ಶರಣು ಶರಣಾರ್ಥಿ,
ಎಂದು ಮನವಾರೆ ಕೊಂಡಾಡಿ ಶರಣುಗೈದಿದ್ದಾಳೆ. ಅಂದಮೇಲೆ ಸದ್ಗುರುವಿನ ಹರಕೆ ಸಾರ್ಥಕವಾಗುವದು. ಶಕ್ತಿಯುತವಾದುದು.
ದೀಕ್ಷೆ ತ್ರೈತನುವಿಂಗೆ | ಶಿಕ್ಷೆಯಂ ಮನಸಿಂಗೆ
ಮೋಕ್ಷವಾತ್ಮಂಗೆ-ಈಕ್ಷಿಸುತ ಕೊಟ್ಟಪ್ರ-
ತ್ಯಕ್ಷ ಶ್ರೀಗುರುವೆ ಕೃಪೆಯಾಗು ॥೭೮ ||
ಹಿಂದಿನ ತ್ರಿಪದಿಯಲ್ಲಿ ದೀಕ್ಷಾವಿಧಾನಗಳನ್ನು ವಿವರಿಸಿ ಇಲ್ಲಿ ದೀಕ್ಷೆಯ ವೈವಿಧ್ಯತೆಯನ್ನು ಶಿವಕವಿಯು ನಿರೂಪಿಸುತ್ತಾನೆ.
ದೀಕ್ಷಾಸಂಸ್ಕಾರವು ಮೂಬಗೆಯಾಗಿದೆ. ಮೂರು ಶರೀರಗಳ ಮೂರು ಮಲಗಳನ್ನು ಕಳೆಯಲು ಮೂರು ದೀಕ್ಷೆಗಳು ಅವಶ್ಯವಾಗಬೇಕು.ʼʼ ಸಿದ್ಧಾಂತ ಶಿಖಾಮಣಿʼ’ ಯಲ್ಲಿ ಶಿವಯೋಗಿ ಶಿವಾಚಾರ್ಯರು
ಸಾ ದೀಕ್ಷಾ ತ್ರಿವಿಧಾ ಪ್ರೋಕ್ತಾ ಶಿವಾಗಮವಿಶಾರದೈಃ |
ವೇಧಾರೂಪಾ, ಕ್ರಿಯಾರೂಪಾ, ಮಂತ್ರರೂಪಾ ಚ ತಾಪಸ II ೬.೧೨ ||
ಗುರೋರಾಲೋಕಮಾತ್ರೇಣ ಹಸ್ತಮಸ್ತಕಯೋಗತಃ |
ಯಃ ಶಿವತ್ವ ಸಮಾವೇಶೋ ವೇಧಾದೀಕ್ಷೆತಿ ಸಾ ಮತಾ || ೬.೧೩
ಮಂತ್ರದೀಕ್ಷೇತಿ ಸಾ ಪ್ರೋಕ್ತಾ ಮಂತ್ರ ಮಾತ್ರೋಪದೇಶಿನೀ |
ಕುಂಡಮಂಡಲಿಕೋಪೇತಾ ಕ್ರಿಯಾದೀಕ್ಷಾ ಕ್ರಿಯೋತ್ತರಾ || ೬. ೧೪ ||
ಆದೀಕ್ಷೆಯು ವೇಧಾದೀಕ್ಷಾ, ಮಂತ್ರದೀಕ್ಷಾ, ಮತ್ತು ಕ್ರಿಯಾದೀಕ್ಷೆಯೆಂದು ಮೂಬಗೆಯಾಗಿದೆ. ಶ್ರೀಗುರುವಿನ ಕೃಪಾಕಟಾಕ್ಷೇಕ್ಷಣ ಮಾತ್ರದಿಂದಲೂ, ಹಸ್ತ ಮಸ್ತಕ ಸಂಯೋಗದಿಂದಲೂ ಉತ್ಪನ್ನವಾಗುವದೋ ಯಾವ ಜ್ಞಾನಕ್ರಿಯಾತ್ಮಕ ಶಿವತತ್ತ್ವ ಸಮಾವೇಶವು ಉತ್ಪನ್ನವಾಗುವದೋ ಅದು ವೇಧಾ ದೀಕ್ಷೆಯೆನಿಸುವದು. ಶಿವಪಂಚಾಕ್ಷರಿ ಮಂತ್ರೋಪದೇಶವನ್ನು ಮಾಡುವದರಿಂದ ಅದು ಮಂತ್ರದೀಕ್ಷೆ ಯೆನಿಸುವದು. ದೀಕ್ಷಾಂಗಭೂತ ಸತ್ಕೃಯೆಗಳಿಂದ ಯುಕ್ತವಾದುದು ಕ್ರಿಯಾದೀಕ್ಷೆ ಯೆನಿಸುವದು ಎಂದು ಮೂರು ದೀಕ್ಷೆಗಳ ವಿವರವನ್ನು ವಿಶದಪಡಿಸಿದ್ದಾರೆ.
ಜೀವನಿಗೆ ಸ್ಥೂಲವಾದುದು ಶರೀರ, ಸೂಕ್ಷ್ಮವಾದುದು ಮನಸ್ಸು. ಕಾರಣ ಸ್ಥಿತಿಯಲ್ಲಿರುವದು ಭಾವ. ಪ್ರತಿಯೊಬ್ಬನಿಗೆ ಈ ಮೂರರ ಕಲ್ಪನೆ ಬಂದೇ ಬರುತ್ತದೆ. ಸ್ಥೂಲಶರೀರಕ್ಕೆ ಕಾರ್ಯಾನ ಕಾರ್ಯಗಳಿಂದ ಅಂಟಿಕೊಂಡಿರುವದು ಕಾರ್ಮಿಕ ಮಲವು. ಸೂಕ್ಷ್ಮ ಶರೀರವಾದ ಮನಸ್ಸಿನಲ್ಲಿ ಹೊನ್ನು, ಹೆಣ್ಣು, ಮಣ್ಣುಗಳಲ್ಲಿ ವ್ಯಾಪ್ತವಾಗಿ ಮೋಹಗೊಂಡಂಥಹವುದೇ ಮಾಯಾಮಲವು. ಕಾರಣರೂಪಾದ ಭಾವವನ್ನು ಸಂಕುಚಿಗೊಳಿಸಿರುವದು ಆಣವಮಲವು. ಈ ಮೂರು ಮಲಗಳಿಂದ ಮಾನವನು ಪುನಃ ಪುನಃ ಭವಚಕ್ರದಲ್ಲಿ ತಿರುಗುತ್ತಾನೆ. ದುಃಖದಿಂದ ಬಳಲುತ್ತಾನೆ. ಪರಮಾತ್ಮನ ಅಂಶೀಭೂತನಾದ ಜೀವನು ದೇವನ ಸರ್ವಜ್ಞತ್ವ, ಸರ್ವಕರ್ತೃತ್ವ, ಸರ್ವವ್ಯಾಪಕತ್ವಗಳನ್ನು ಮರೆತು ಅಲ್ಪಜ್ಞನೂ, ಅಹಂಕರ್ತನೂ, ಸಂಕೋಚ ಸ್ವಭಾವಿಯೂ ಆಗುವನು. ಇದರಿಂದ ಭವ-ಬಂಧನ ತಪ್ಪುವದಿಲ್ಲ. ಇವುಗಳನ್ನು ನಾಶಮಾಡ ಬಲ್ಲಾತನೇ ಶ್ರೀಗುರು.
ಸದ್ಗುರುವು ಶಿಷ್ಯನನ್ನು ಕೃಪಾದೃಷ್ಟಿಯಿಂದ ಈಕ್ಷಿಸಿ ಕಾಯದಲ್ಲಿಯ ಕಾರ್ಮಿಕ ಮಲವನ್ನು ಹೋಗಲಾಡಿಸುತ್ತಾನೆ . ಸಕಾಮಕರ್ಮಂಗಳನ್ನು ಬಿಡಿಸಿ ನಿಷ್ಕಾಮ ಕ್ರಿಯೆಗಳನ್ನು ಬೋಧಿಸಿ ಇಷ್ಟಲಿಂಗವನ್ನು ಅನುಗ್ರಹಿಸುತ್ತಾನೆ. ಇಲ್ಲಿ ಹಸ್ತ ಮಸ್ತಕ. ಸಂಯೋಗಾತ್ಮಕ ಕ್ರಿಯೆಯು ಬಹು ಮಹತ್ವವುಳ್ಳುದು.
ಈ ವೇಧಾಧೀಕ್ಷೆಯಲ್ಲಿ *೧. ಆಜ್ಞಾ ೨. ಉಪಮಾ ೩. ಸ್ವಸ್ತಿಕಾರೋಹಣ ೪. ಕಲಶಾಭಿಷೇಕ ೫. ವಿಭೂತಿಪಟ್ಟ ೬. ಲಿಂಗಾಯತ ೭. ಲಿಂಗಸ್ವಾಯತ ವೆಂದು ಏಳು ವಿಧಾನಗಳುಂಟು. ಸದಾಚಾರಗಳನ್ನು ಆಜ್ಞಾಪಿಸಿ, ಉತ್ತಮರ, ಶರಣರ ನಡೆಯನ್ನು ಉಪಮಿಸುತ್ತಾನೆ. ಸ್ವಸ್ತಿಕಾರೋಹಣ ಮಾಡಿ ಕಲಶಾಭಿಷೇಕಗೈಯುತ್ತ ಶರೀರಕ್ಕೆ ವಿಭೂತಿ ಪಟ್ಟವನ್ನು ಬರೆಯುತ್ತಾನೆ. ನಂತರ ಶಿಷ್ಯನ ಪಶ್ಚಿಮ ಚಕ್ರದಲ್ಲಿಯ ಮಹಾಚೈತನ್ಯವನ್ನು ಲಿಂಗದಲ್ಲಿ ಆಯತಗೊಳಿಸಿ ಶಿಷ್ಯನ ಅಂಗೈಗೆ ಸ್ವಾಧೀನ ಗೊಳಿಸುತ್ತಾನೆ. ಅರ್ಥಾತ್ ಲಿಂಗವನ್ನು ಕರುಣಿಸುತ್ತಾನೆ. ಈ ಎಲ್ಲ ಕ್ರಿಯಾ ವಿಧಾನಗಳನ್ನು ಮಾಡುವದರಿಂದ ಶಿಷ್ಯನ ತನುವು ವೇಧಿಸಲ್ಪಡುತ್ತದೆ. ಅದಕ್ಕಾಗಿ ಇದು ವೇಧಾದೀಕ್ಷೆಯೆನಿಸುವದು ಈ ಸಪ್ತ ಸಂಸ್ಕಾರಗಳಿಂದ ಸ್ಥೂಲತನುವಿನ ಕಾರ್ಮಿಕಮಲವು ನಾಶವಾಗುವದು. ಮಂತ್ರದೀಕ್ಷೆಯಲ್ಲಿ ಸೂಕ್ಷ್ಮವಾದ ಮನವು ಮಾಯಾಮಲದಿಂದ ದೂರವಾಗಿ ಪ್ರಾಣಲಿಂಗವನ್ನು ಪಡೆಯುವದು. ಶಿವಷಡಕ್ಷರ ಮಹಾಮಂತ್ರವು ಮನಕ್ಕೆ ಉಪದೇಶಿಸಲ್ಪಡುವದು. ಮಂತ್ರೋಪದೇಶವೆಂಬ ಮಹಾಕ್ರಿಯೆ ನಡೆಯುವದರಿಂದ ಇದಕ್ಕೆ ಮಂತ್ರದೀಕ್ಷೆಯೆಂಬ ನಾಮ ಬಂದಿದೆ. ಇದು ೧. ಸಮಯ ೨. ನಿಸ್ಸಂಸಾರ ೩. ನಿರ್ವಾಣ ೪. ತತ್ತ್ವ ೫. ಆಧ್ಯಾತ್ಮ ೬. ಅನುಗ್ರಹ ೭. ಸತ್ಯಸಿದಗಳೆಂದು ಏಳು ವಿಧವಾಗುತ್ತದೆ. ಈ ಏಳನ್ನು ಮನಕ್ಕೆ (ಪ್ರಾಣಕ್ಕೆ) ಉಪದೇಶಿಸಿ ಮಾಯಾಮಲವನ್ನು ದೂರಮಾಡುವನು. ಮೇಲಿನ ಏಳೂ, ಮನಸ್ಸಿನಲ್ಲಿ ಪರಿಣಾಮ ಬೀರುವಂಥವುಗಳು ಇದರಿಂದ ಪ್ರಾಣದ ಮಾಯಾಮಲವು ದೂರವಾಗಿ ಸಂಕುಚಿತದೃಷ್ಟಿಯಳಿದು ವಿಶಾಲದೃಷ್ಟಿಯು ಪ್ರಾಪ್ತವಾಗುವದು.
ಕ್ರೀಯಾದೀಕ್ಷೆಯಿಂದ ಶಿಷ್ಯನ ಜೀವಭಾವವನ್ನು ನಿವೃತ್ತಗೊಳಿಸಿ ದಿವ್ಯ ಭಾವವ ಅಂದರೆ ಲಿಂಗಾಂಗಸಾಮರಸ್ಯದ ರಹಸ್ಯವನ್ನು ತಿಳುಹಿ ಆಣವ ಮಲವನ್ನು ಸುಟ್ಟು ಭಾವಲಿಂಗವನ್ನು ಅನುಗ್ರಹಿಸುವನು. ಇಲ್ಲಿ ೧. ಏಕಾಗ್ರಚಿತ್ತ ೨. ದೃಢವ್ರತ ೩. ಪಂಚೇದ್ರಿಯಾರ್ಪಿತ ೪. ಅಹಿಂಸೆ ೫. ಮನೋಲಯ ೬, ಲಿಂಗನಿಜ ೭. ಸದ್ಯೋನ್ಮುಕ್ತಿಗಳೆಂಬ ಏಳು ಉಪಸಂಸ್ಕಾರಗಳಾಗುವವು. ಅರ್ಥಾತ್ ಈ ಏಳು ಸೂಕ್ಷ್ಮ ಕ್ರಿಯೆಗಳಿಂದ ಸೂಕ್ಷ್ಮವಾದ ಭಾವದಲ್ಲಿ ಭರಿತವಾದ ಆಣವಮಲವನ್ನು ಕಿತ್ತಿಹಾಕುವನು. ಭಾವ ವಿಶಾಲವಾಗುವದು .ಭಾವಲಿಂಗಕ್ಕೆ ಆಶ್ರಯವಾಗುವದು. ಸಪ್ತ ಸತ್ಕ್ರಿಯಾ ಭರಿತವಾದ ಇದು ಕ್ರಿಯಾದೀಕ್ಷೆಯೆನಿಸಿದೆ.
ಈ ತೆರನಾಗಿ ವೇಧಾದೀಕ್ಷೆ, ಮಂತ್ರದೀಕ್ಷೆ, ಕ್ರಿಯಾದೀಕ್ಷೆಗಳಲ್ಲಿ ಏಳೇಳು ವಿಧವಾಗಿ ಒಟ್ಟಿಗೆ ಇಪ್ಪತ್ತೊಂದು ದೀಕ್ಷೆಗಳಾಗುವವು. ಷಟ್‌ಸ್ಥಲಬ್ರಹ್ಮಿ ಮಹಾಜ್ಞಾನಿಗಳಾದ ಚನ್ನಬಸವಣ್ಣನವರು ೮೮೫ನೆಯ ವಚನದಲ್ಲಿ ಮೇಲಿನ ೨೧ ದೀಕ್ಷಾ ವಿವರವನ್ನು ತಿಳಿಸಿದ್ದಾರೆ. ಮತ್ತು…….
ಮೂರೇಳು ಇಪ್ಪತ್ತೊಂದು ದೀಕ್ಷೆಯ
ಭಿನ್ನವಿಲ್ಲದೆ ಸದ್ಗುರು ಮುಖದಿಂದೆ
ಅರಿದಾನಂದಿಸಬೇಕು’ (೩೩೨ ವಚನ)
ಎಂದು ಇಪ್ಪತ್ತೊಂದು ದೀಕ್ಷೆಗಳು ಅವಶ್ಯವೆಂಬುದನ್ನು ನಿರೂಪಿಸಿದ್ದಾರೆ.
ಸದ್ಗುರುವು ಪ್ರತ್ಯಕ್ಷ ಶಿವನಾಗಿ ಶಿಷ್ಯನ ಉದ್ಧಾರಮಾಡುವಲ್ಲಿ ದೀಕ್ಷಾಗುರುವಾಗಿ ತನುತ್ರಯಗಳನ್ನು ಶುದ್ಧಗೊಳಿಸಿ ಇಷ್ಟಲಿಂಗವನ್ನು ಕರುಣಿಸುವನು. ಶಿಕ್ಷಾಗುರುವಾಗಿ ಮನಕ್ಕೆ ಮಂತ್ರವನ್ನು ಉಪದೇಶಿಸಿಸುವನು. ಮೋಕ್ಷಗುರುವಾಗಿ ಭಾವದಲ್ಲಿ ಪರಿಶುದ್ಧತೆಯನ್ನು ವ್ಯಾಪಕತೆಯನ್ನು ತುಂಬಿ ಭಾವಲಿಂಗವನ್ನು ನೆಲೆಗೊಳಿಸುವನು. ನಿತ್ಯ ಮುಕ್ತಿಯನ್ನು ಪಡೆದು ನಿತ್ಯಾನಂದವನ್ನು ಹೊಂದಲು ಅಣಿಗೊಳಿಸುವನು. ಶ್ರೀಗುರುವಿನ ಕರುಣಾದೃಷ್ಟಿಯ ಈಕ್ಷಣವು ಅಸಾಮಾನ್ಯವಾದುದು. ಆತನ ಈ ಕ್ಷಣದಿಂದ ಮೋಕ್ಷ ಸುಖ ಸಾಧ್ಯವಾಗುವದು. ಆದ್ದರಿಂದ ಗುರುನಾಥನು ಪ್ರತ್ಯಕ್ಷ ಶಿವನಲ್ಲದೆ ಮತ್ತೇನು ? ಅಪ್ರತ್ಯಕ್ಷ ಶಿವನಿಂದ ಇವೆಲ್ಲವೂ ಸಾಧ್ಯವಿಲ್ಲ. ಅದು ಕಾರಣವೇ ಅಣ್ಣನವರು- “ಶಿವಪಥವನರಿವೊಡೆ ಗುರುಪಥವೆ ಮೊದಲು” ಎಂದು ಕೊಂಡಾಡಿದರು.
ಅಡಿಗೆರಗಿದವನ ಶಿರ | ದಡಹಿ ಮನ್ನಸಿ ಎನ್ನ
ನುಡಿಯ ಬ್ರಹ್ಮವನು-ನಡೆಗೆ ತಂದಿತ್ತ ಎ-
ನ್ನೊಡೆಯ ಶ್ರೀಗುರುವೆ ಕೃಪೆಯಾಗು ||೭೬||
ಗುರುದೀಕ್ಷಾಸಂಸ್ಕಾರದ ಗರಿಮೆಯನ್ನು ಪುನಃ ಪುನಃ ಶಿವಕವಿಯು ಬಿತ್ತರಿಸಿದ್ದಾನೆ. ದೇವರದಾಸಿಮಾರ್ಯರು ಗುರುಕರುಣೆಯಿಂದಾದ ತಮ್ಮಿರವನ್ನು, ಸ್ವಾನುಭಾವವನ್ನು
ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದರೆ
ಆ ತೃಣವನಾ ಕೆಂಡ ನುಂಗಿದಂತೆ
ಗುರುಚರಣದ ಮೇಲೆ
ತನುವೆಂಬ ತೃಣವ ತಂದಿರಿಸಿದರೆ
ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ
ಎಂದು ತನುತುಂಬಿ, ಮನತುಂಬಿ, ಭಾವದುಂಬಿ ಹಾಡಿದ್ದಾರೆ. ಉರಿಯನ್ನು ಕಂಡ ತೃಣ ಉರಿಯಂತಾಗುವಂತೆ ಗುರುಚರಣವನ್ನು ಹೊಂದಿದ ಶಿಷ್ಯನ ತನುವು ಲಿಂಗಸ್ವರೂಪವಾಗುವದು. ಲಿಂಗಸ್ವರೂಪವನ್ನು ಅನುಭವಿಸಿ ಸರ್ವಾಂಗ ಲಿಂಗಿಯಾದ ಆನಂದದ ನಿಬ್ಬೆರಗಿನಲ್ಲಿ ಪುನಃ ಪುನಃ ಗುರುಸಾಮರ್ಥ್ಯವನ್ನು ಎತ್ತಿ ತೋರಿಸಿದ್ದಾನೆ.
ಗುರುವೆ! ತವಚರಣಾರವಿಂದಗಳಲ್ಲಿ ಶರಣಾಗತನಾದ ಎನ್ನ ಶಿರದಡಹಿ ಪ್ರೀತಿಯಿಂದ ನನ್ನ ನುಡಿಯನ್ನೂ ಮಂತ್ರಮಯಗೊಳಿಸಿದೆ. ಚತುರ್ವೇದಗಳ ಸಾರತರವಾದ ಮಹಾವಾಕ್ಯಗಳೆನಿಸಿದ ‘ಅಹಂ ಬ್ರಹ್ಮಾಸ್ಮಿ” (ನಾನು ಬ್ರಹ್ಮನಿದ್ದೇನೆ.) ‘ಅಯಮಾತ್ಮಾ ಬ್ರಹ್ಮ’ (ಈ ಆತ್ಮನೇ ಬ್ರಹ್ಮನಾಗಿದ್ದಾನೆ.) ‘ಪ್ರಜ್ಞಾನಂ ಬ್ರಹ್ಮ (ಪ್ರಕೃಷ್ಟವಾದ ಜ್ಞಾನವೇ ಬ್ರಹ್ಮವಾಗಿದೆ) ಮತ್ತು ‘ತತ್ತ್ವಮಸಿ’ (ಆ ಬ್ರಹ್ಮವೇ ನೀನಾಗಿರುವೆ)ಯೆಂಬ ಬಾಯ್ (ನುಡಿ) ಬ್ರಹ್ಮವನ್ನು ಪ್ರತ್ಯಕ್ಷವಾಗಿ ಎನ್ನ ಕಂಗಳಿಂದ ನೋಡಲು ಮನ ಮುಟ್ಟಿ ಪೂಜಿಸಲು, ಭಾವತುಂಬಿ ಹಾಡಲು ಸದ್ಗುರುನಾಥನೆ ! ಅನುವು ಮಾಡಿಕೊಟ್ಟಿರುವಿ. ಶಬ್ದ ಬ್ರಹ್ಮದಿಂದೇನು ಲಾಭ ? ಆ ಶಬ್ದಬ್ರಹ್ಮವನ್ನೇ ಆಚಾರ ಲಿಂಗವನ್ನಾಗಿ ಕ್ರಿಯಾಲಿಂಗವನ್ನಾಗಿ ಎನ್ನ ಕರಕಮಲಕ್ಕೆ ತಂದಿರಿಸಿದ ನೀನು ಎನ್ನೊಡೆಯನಲ್ಲವೆ ?
ಕ್ರಿಯೆಗೆ ಬಾರದ ವಸ್ತುವಿನಿಂದ ಯಾವ ಫಲವೂ ದೊರೆಯುವದಿಲ್ಲ. ನುಡಿಯ ಬ್ರಹ್ಮವು ನಡೆಗೆ ಬಾರದೆ ಪ್ರಯೋಜನವಾಗುವದಿಲ್ಲ, ಕಲ್ಲುಸಕ್ಕರೆಯ ಸವಿಯನ್ನು ಮಾತಿನಿಂದ ನೆನೆದರೆ ಅದನ್ನು ಉಪಭೋಗಿಸಿದಂತಾಗುವದೇ ? ನುಡಿಯನ್ನು ನಡೆಯಲ್ಲಿ ಸಮನ್ವಯಗೊಳಿಸುವದೇ ವೀರಶೈವ ಸಿದ್ಧಾಂತ. ಜ್ಞಾನಗಮ್ಯವಾದ ವಿಷಯವನ್ನು ಆಚರಣೆಯಲ್ಲಿ ಅಳವಡಿಸುವದೇ ಶರಣರ ಮಹಾಮಾರ್ಗ, ಜ್ಞಾನ ಕ್ರಿಯೆಗಳ ಸಂಗಮದಲ್ಲಿಯೇ ಅನುಭವ ಪ್ರಾಪ್ತವಾಗುವದು. ಅನುಭವದಲ್ಲಿಯೇ ಆನಂದವನ್ನು ಹೊಂದುತ್ತೇವೆ. ವೀರಶೈವನು ನುಡಿದಂತೆ ನಡಿಯಲೇಬೇಕು. ಅಂತೆಯೇ ಚನ್ನಬಸವಣ್ಣನವರು-
ವೀರಶೈವನಾದಡೆ ಪರಧನ ಪರಸತಿಯರ ಮುಟ್ಟದಿರಬೇಕು.
ಎಂದೂ ಪರಹಿಂಸೆಯನೆಸಗದಿರಬೇಕು.
ಒಡಲಳಿದಡೆಯೂ ಹಿಡಿದಾಚಾರವ ಬಿಡದಿರಬೇಕು.
ಇಂತೀ ವೀರಾಚಾರವು ನೆಲೆಗೊಳ್ಳದೆ ವೀರವಂಶದಲ್ಲಿ
ಹುಟ್ಟಿದ ಮಾತ್ರಕ್ಕೆ ವೀರಶೈವನೆಂತಪ್ಪನಯ್ಯ ಕೂಡಲ ಚನ್ನಸಂಗಯ್ಯ
“ಹಿಡಿದಾಚಾರವನ್ನು ಬಿಡದೇ ಪಾಲಿಸುವಲ್ಲಿಯೇ ವೀರಶೈವತ್ವವು ಸಿದ್ಧಿಸುವದು” ಎಂದು ನಡೆ-ನುಡಿಯ ನಿರ್ವಚನ ಮಾಡಿದ್ದಾರೆ. ಅದುಕಾರಣ ನಡೆ-ನುಡಿ ಯೊಂದಾಗಿಸುವದೇ ಭವಭಂಧನದ ಬಿಡುಗಡೆಗೆ ಕಾರಣವಾಗಿದೆ.
ಮಸ್ತಕದೊಳಗೆ ನಿನ್ನ | ಹಸ್ತವನೆ ಇಟ್ಟು ನಿಜ
ವಸ್ತುವನು ತೆಗೆದು –ಹಸ್ತಪೀಠದೊಳಿತ್ತ
ಸ್ವಸ್ಥ ಶ್ರೀಗುರುವೆ ಕೃಪೆಯಾಗು II ೮೦ ||
ಸದ್ಗುರುವಿನಿಂದ ಶಿವದೀಕ್ಷೆಯನ್ನು ಪಡೆದ ಶಿವಕವಿಯು ಅದರ ಪರಿಯನ್ನು ಸುಖದ ಸೊಬಗನ್ನು ನೆನೆನೆನೆದು ಮೆಲಕುಹಾಕಹತ್ತಿದ್ದಾನೆ. ಈ ದೀಕ್ಷಾವಿಧಾನವು ಈ ಶರಣ ʼನಿರಾಭಾರಿ ವೀರಶೈವ ಸಿದ್ಧಾಂತ’ ಪ್ರಕರಣದಲ್ಲಿ ಇದಕ್ಕೂ ಸ್ಪಷ್ಟವಾಗಿ ಪ್ರತಿಪಾದಿತ ವಾಗಿದೆ-
ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು
ದೇವ ಕರವಾಂತು ಸಾಸಿರದಳದ ಚಿತ್ ಕಳೆಯ
ಭಾವದಿಂ ಮನ, ಮನದಿ ನೇತ್ರಂಗಳಿಂ ತೆಗೆದಿಷ್ಟರೂಪುಗೊಳಿಸಿ
ತೀವಿ ತಚ್ಛಿಷ್ಯನಂಗದ ಮೇಲೆ ಧರಿಸಿ ಸಂ-
ಜೀವ ಷಣ್ಮಂತ್ರ ಲಿಂಗವಿದೆಂದು ತಿಳುಹೆ ಚಿದ್
ಭಾವ ಕಳೆಯೊಳಗಿಷ್ಟಲಿಂಗವೇ ತಾನಾದ ಲಿಂಗಭಕ್ತನೆ ಶ್ರೇಷ್ಠನು || ೪ ||
ದೀಕ್ಷಾವಿಧಾನವು ಎಂಥ ಕಲಾತ್ಮಕವೂ ಕ್ರಿಯಾ-ಜ್ಞಾನ ಪ್ರಧಾನವೂ ಹಾಗೂ ಸದ್ಗುರು ಕೃಪಾಪೂರಿತವೂ ಆಗಿದೆ ! ಇದು ಸಾಮಾನ್ಯ ಗುರುವಿನಿಂದ ಸಾಧ್ಯವಿಲ್ಲ. ಲಿಂಗದ ಶಿಲಾಭಾವ ಹೋಗದೆ ಜೀವಾತ್ಮನ ಜಡಭಾವ ಅಳಿಯದು. ಸದ್ಗುರುವು ಶಿಷ್ಯನ ಪಾವನಾತ್ಮಕ ಮಸ್ತಕದ ಪಶ್ಚಿಮ ಶಿಖಾಚಕ್ರಮಧ್ಯದ ನಿಜವಸ್ತುವಾದ ಮಹಾಚೈತನ್ಯವನ್ನು ಅವನ ಶಿರದ ಮೇಲೆ ತನ್ನ ವರದ ಹಸ್ತವನ್ನು ಇಟ್ಟು ತನ್ನ ಭಾವದಲ್ಲಿ ಭಾವಿಸುತ್ತಾನೆ. ಆ ಚೈತನ್ಯವನ್ನು ಮನದಲ್ಲಿ ಮೂರ್ತರೂಪಗೊಳಿಸುತ್ತಾನೆ. ನಂತರ ಅದನ್ನು ಶಿಷ್ಯನ ಕಂಗಳಿಂದ ತನ್ನ ಕೃಪಾಪೂರ್ಣ ಲೋಚನಮುಖಾಂತರ ಹೊರತೆಗೆದು ಇಷ್ಟಲಿಂಗವನ್ನಾಗಿ ಮಾಡಿ ಕರುಣಾಮಯ ಹೃದಯದಿಂದ ಶಿಷ್ಯನ ವಾಮಹಸ್ತದಲ್ಲಿ ಇರಿಸುತ್ತಾನೆ. ಈ ಇಷ್ಟಲಿಂಗವು ನಿನ್ನ ಚಿತ್‌ಸ್ವರೂಪು. ಇದು ಸುಜ್ಞಾನ-ಸತ್ಕೃಯೆಗಳನ್ನು ಸಮನ್ವಯ ಗೊಳಿಸುವ ಸಾಧನವೆಂದು ಆಜ್ಞಾದಿ ದೀಕ್ಷೆಗಳಿಂದ ಉಪದೇಶಿಸಿ ಬಲಕರ್ಣದಲ್ಲಿ ಷಡಕ್ಷರ ಮಹಾಮಂತ್ರವನ್ನು ಬೋಧಿಸಿ, ಇದುವೆ ನಿನ್ನ ಪ್ರಾಣ. ಪ್ರಾಣ ಬೇರೆಯಲ್ಲ ; ಲಿಂಗ ಬೇರೆಯಲ್ಲ, ಲಿಂಗಪ್ರಾಣಿಯಾಗಿ ಬಾಳೆಂದು ಹರಸುತ್ತಾನೆ. ಶಿರದರಮನೆಯಿಂದ ಕರಕಮಲಕ್ಕೆ ಬಿಜಯಂಗೈಸಿದ ಈ ಮಹಾಲಿಂಗವು ಸಾಮಾನ್ಯವಲ್ಲ. ಇದು ಇಷ್ಟಲಿಂಗ. ಇಷ್ಟಾರ್ಥವನ್ನು ಪೂರೈಸುವಂಥಹದು.
ಇಂಥ ಲಿಂಗದ ನೆಲೆ-ಕಲೆಗಳೇನೆಂಬ ಪ್ರಶ್ನೆಬರುವದು ಸಹಜ. “ವೀರಶೈವ ಚಿಂತಾಮಣಿ’ಯಲ್ಲಿ –
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |
ತದೇತಲ್ಲಿಂಗಮಿತ್ಯುಕ್ತಂ ಲಿಂಗಶಬ್ದಪರಾಯಣೈ II ೧೦ II
ಲಿಂಗಮಧೇಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ || ೧೧ |
ಯಾವ ಮಹಾವಸ್ತುವಿನಲ್ಲಿ ಸಕಲ ಚರಾಚರ ಪ್ರಾಣಿಗಳು ಲೀನವಾಗುವವೋ ಪುನಃ ಹುಟ್ಟುವವೋ; ಅದುವೆ ಲಿಂಗವೆಂಬುದಾಗಿ ಲಿಂಗತತ್ತ್ವವನ್ನು ಬಲ್ಲಜ್ಞಾನಿಗಳು ನಿರೂಪಿಸಿದ್ದಾರೆ. ಮತ್ತು ಈ ಲಿಂಗಮಧ್ಯದಲ್ಲಿ ಮೂರುಲೋಕದ ಸಕಲ ಚರಾಚರ ಜಗತ್ತು ಅಡಗಿದೆ. ಇದನ್ನು (ಲಿಂಗವನ್ನು) ಹೊರತುಪಡಿಸಿ ಬೇರೆ ಯಾವುದೂ ಇಲ್ಲ. ಎಲ್ಲವನ್ನು ಒಳಗೊಂಡ ಮಹಾಲಿಂಗವನ್ನು ಚನ್ನಾಗಿ ಪೂಜಿಸಬೇಕೆಂದು ತಿಳಿಸಿದ್ದಾರೆ. ಇದು ಬ್ರಹ್ಮಾದಿ ದೇವತೆಗಳಿಗೂ ದೊರಕಿಲ್ಲ, ಇಂಥ ಮಹಾ ಘನಲಿಂಗವನ್ನು ಗುರು ಇಷ್ಟಲಿಂಗವನ್ನಾಗಿ ಕರುಣಿಸುತ್ತಾನೆ. ಅರುಹಿನ ಕುರುಹನ್ನಾಗಿ ಉಪದೇಶಿಸುತ್ತಾನೆ. ಚಿಚ್ಚೈತನ್ಯದ ಚುಳುಕನ್ನಾಗಿ ಅನುಗ್ರಹಿಸುತ್ತಾನೆ. ಜಗದಣ್ಣ ಬಸವಣ್ಣನವರು-
ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ
ಅಗಮ್ಯ, ಅಗೋಚರ, ಅಪ್ರತಿಮಲಿಂಗವೆ
ಕೂಡಲ ಸಂಗಮ ದೇವಯ್ಯಾ
ನೀವೆನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ
“ಜಗದ ವಿಸ್ತಾರದಲ್ಲಿ, ಆಕಾಶದ ಹರವಿನಲ್ಲಿ ವ್ಯಾಪಿಸಿದ, ಅಗಮ್ಯ, ಅಗೋಚರ, ಅಪ್ರತಿಮವಾದ ಮಹಾಲಿಂಗವು ಸದ್ಗುರು ಕೃಪೆಯಿಂದ ಎನ್ನ ಕರಸ್ಥಲಕ್ಕೆ ಚುಳುಕಾಗಿ ಬಂದಿತು.” ಎಂದು ಆನಂದದಿಂದ ಮಾರ್ಮಿಕವಾಗಿ ಇಷ್ಟಲಿಂಗದ ಹುಟ್ಟಿನ ಗುಟ್ಟನ್ನು ಪ್ರಕಟಗೊಳಿಸಿದ್ದಾರೆ. ಅದರ ಮಹತ್ವವನ್ನು ಮನದುಂಬಿ ಬಣ್ಣಿಸಿದ್ದಾರೆ.
ಬ್ರಹ್ಮಾಂಡಗತವಾದ ಮಹಾಲಿಂಗವು ಮಹಾಚೈತನ್ಯವಾಗಿದ್ದರೆ, ಪಿಂಡಾಂಡಕ್ಕೆ ಪ್ರಾಪ್ತವಾದ ಇಷ್ಟಲಿಂಗವು ಮಹಾಚೈತನ್ಯದ ಚುಳುಕು, ಇಷ್ಟಲಿಂಗವನ್ನು ಸಂಶೋಧಿಸಿದ ಮಹಾನುಭಾವರು ಮನುಷ್ಯನ ಆಕಾರಕ್ಕೇನೇ ಸಾದೃಶ್ಯಗೊಳಿಸಿದ್ದಾರೆ. ಈ ಲಿಂಗವು ಐದು ಲಕ್ಷಣಗಳಿಂದ ಕೂಡಿರಬೇಕು. ಇವಕ್ಕೆ ಪಂಚಸೂತ್ರಗಳೆನ್ನುವರು.
ಲಿಂಗವೃತ್ತ ಸಮಂ ಪೀಠಂ ದೀರ್ಘ೦ ವಿಸ್ತಾರ ಮೇವ ಚ |
ತದರ್ಧ೦ ಗೋಮುಖಶೈವ ಇತ್ಯೇತಲ್ಲಿಂಗಪಂಚಕಮ್
ಪಂಚಸೂತ್ರಕೃತಂ ಲಿಂಗಂ ಧಾರಯೇದ್ವಿಧಿವತ್ ಶುಭಮ್ ||
ಲಿಂಗಕ್ಕೆ ಬಾಣ, ಪೀಠ, ವಿಸ್ತಾರ, ಎತ್ತರ ಮತ್ತು ಗೋಮುಖವೆಂದು ಪಂಚ ಲಕ್ಷಣಗಳು. ಬಾಣ (ಪೀಠದ ಮೇಲಿನ ಲಿಂಗ)ದ ಸುತ್ತಳತೆಯಷ್ಟು ಪೀಠದ ಎತ್ತರ ಮತ್ತು ವಿಸ್ತಾರವಿರಬೇಕು. ಪೀಠದಲ್ಲಿ ಅರ್ಧಬಾಣವು ಅಡಗಬೇಕು. ಗೋಮುಖವು ಸುತ್ತಳತೆಯ ಅರ್ಧವಾಗಿರಬೇಕು. ಹೀಗೆ ಪಂಚಸೂತ್ರಗಳಿಂದ ಕೂಡಿದ ಲಿಂಗವನ್ನೇ ಸದ್ಗುರುವಿನಿಂದ ವಿಧಾನ ಪೂರ್ವಕ ಧರಿಸಬೇಕೆಂದು ʼʼವೀರಶೈವಾಚಾರ ಪ್ರದೀಪಿಕೆ” ಯಲ್ಲಿ ಪ್ರತಿಪಾದಿತವಾಗಿದೆ
ಇಂಥ ಶಾಸ್ತ್ರೀಯವಾದ ಪಂಚಸೂತ್ರಲಿಂಗಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಕಾರಣಿಕ ಪುರುಷರಾದ ಶಿವಯೋಗಮಂದಿರ ಸಂಸ್ಥಾಪಕರಾದ ಹಾನಗಲ್ಲ ಶ್ರೀಕುಮಾರ ಮಹಾ ಶಿವಯೋಗಿಗಳಿಗೆ ಸಲ್ಲದೆ ಇರದು. ಶುದ್ಧವಾದ ಕಪ್ಪು ಕಲ್ಲಿನಲ್ಲಿ ಪಂಚ ಸೂತ್ರ(ಪಂಚಲಕ್ಷಣ)ಗಳಿಂದ ಕೂಡಿದ ಲಿಂಗವನ್ನು ತಯಾರಿಸುವ ವಿಧಾನವನ್ನು ಶಿವಯೋಗ ಮಂದಿರದಲ್ಲಿ ಕಲಿಸಿಕೊಟ್ಟರು.
ವೀರಶೈವರ ಧಾರ್ಮಿಕ ಕಲ್ಪನೆಗಳಲ್ಲಿ ಮತ್ತು ಆಚಾರ-ವಿಚಾರಗಳಲ್ಲಿ ವೈಜ್ಞಾನಿಕತೆ ತುಂಬಿ ತುಳುಕಿದೆ. ಇಲ್ಲಿ ಯಾವ ಮಾತನ್ನು ಮೂಢನಂಬಿಕೆಯಿಂದಾಗಲಿ ರಂಜನೆಯಿಂದಾಗಲಿ ಹೇಳಿಲ್ಲ. ಶಿವಪೂಜೆಗೆ ಕುಳಿತುಕೊಳ್ಳುವ ವ್ಯಕ್ತಿಯನ್ನು ಲಿಂಗದ ಆಕಾರ (ಪಂಚಸೂತ್ರದ ಲಿಂಗದಂತೆ)ವಾಗಿಯೇ ಕಾಣಬರುವನು. ಆಸನಯುಕ್ತವಾಗಿ ಕುಳಿತುಕೊಂಡ ಕೆಳಭಾಗವೇ ಪೀಠವಾಗುವದು. ನೀಳವಾದ ಕಾಯ (ದಿಡ)ವು ಅಷ್ಟೇ ಪ್ರಮಾಣದಲ್ಲಿರುತ್ತದೆ. ಅದರರ್ಧಶಿರವಿರುತ್ತದೆ. ಈ ಶಿರವೇ ಲಿಂಗದ ಬಾಣವೆನಿಸುವದು. ವಾಮಕರದಲ್ಲಿ ಲಿಂಗವನ್ನು ಧರಿಸಿ ಈ ಲಿಂಗನಿರೀಕ್ಷಣೆ ಮಾಡುವ ಸನ್ನಿವೇಶವೇ ಗೋಮುಖವೆಸಿಸುವದು. ಲಿಂಗದ ಆಕಾರಕ್ಕೂ ಅಂಗದ ಆಕಾರಕ್ಕೂ ಭೇದವಿಲ್ಲದೆ ಅಂಗದಲ್ಲಿ ಲಿಂಗವನ್ನು ಲಿಂಗ ಗುಣಗಳನ್ನು ಅಳವಡಿಸಿಕೊಂಡರೆ ಲಿಂಗವೇ ತಾನಾಗುವನು.
ಪಂಚಸೂತ್ರ ಲಿಂಗಗಳು ಮಾರಲಿಕ್ಕೆ ಸಿಕ್ಕಮೇಲೆ ನಾವೇ ಕಟ್ಟಿಕೊಳ್ಳಬಹುದಲ್ಲ ವೆಂಬ ವಿಚಾರ ಬರಬಹುದು. ಹಾಗೇ (ಗುರುಸಂಸ್ಕಾರವಿಲ್ಲದೆ) ಕಟ್ಟಿಕೊಂಡ ಲಿಂಗದಲ್ಲಿ ಚೈತನ್ಯ ಬರದು. ಯಾವ ಸಂಸ್ಕಾರ ದೊರೆಯದು. ಲಿಂಗದ ಪೂರ್ವಾಶ್ರಯ (ಶಿಲಾಭಾವ)ವೂ ಹೋಗದು. ಅಂಗದ ಜಡಭಾವ (ಮಾಂಸಮಯ ಪಿಂಡದ)ವೂ ಅಳಿಯದು. ಮಂತ್ರ ಲಭ್ಯವಾಗದು. ಲಿಂಗವನ್ನು ಖರೀದಿಸಿ ತಾವೇ ಕಟ್ಟಿಕೊಳ್ಳುವ ಮೂರ್ಖರನ್ನು ಅಂಬಿಗರ ಚೌಡಯ್ಯ ಶರಣನು ಕಟುವಾಗಿ ಖಂಡಿಸಿದ್ದಾನೆ.
ಅದುಕಾರಣ ಗುರುಕರುಣೆಯಲ್ಲಿ ಆತನ ಶಿವಯೋಗ ಬಲದಿಂದ ಸಂಸ್ಕರಿಸಿದ ಲಿಂಗವೇ ಇಷ್ಟಲಿಂಗವು. ಮನಕ್ಕೆ ಶಿಕ್ಷೆಯನ್ನಿತ್ತು ಪ್ರಾಣಲಿಂಗವನ್ನು ಸ್ವಾಯತ್ತೀ ಕರಿಸುವನು. ಸಂಸಾರ ಭ್ರಾಂತಿಯಿಂದ ಬಿಡುಗಡೆ ಮಾಡಿ ಭಾವಕ್ಕೆ ಮೋಕ್ಷವನ್ನು ಕರುಣಿಸುವ ಭಾವಲಿಂಗವನ್ನು ಸನ್ನಿಹಿತಗೊಳಿಸುವನು. ಅಂದಮೇಲೆ ಇಂಥ ಪರಿಪೂರ್ಣ ಚೈತನ್ಯಮಯ ಇಷ್ಟಲಿಂಗವುಳ್ಳವನೇ ಲಿಂಗಾಯತನು. ಅಥವಾ ಲಿಂಗವಂತನು. ಲಿಂಗವಿಲ್ಲದೆ ಲಿಂಗವಂತನೆನಿಸಲಾರನು. ಯಾಕೆಂದರೆ ನಮ್ಮ “ವಚನವಲ್ಲರಿ”ಯಲ್ಲಿ ಅವಲೋಕಿಸಿ:
ಸಿರಿಯುಳ್ಳವನೆ ಸಿರಿವಂತ,
ಗುಣವುಳ್ಳವನೆ ಗುಣವಂತ;
ಲಿಂಗವುಳ್ಳವನೆ ಲಿಂಗವಂತನು ನಿಜದಿಂ,
ಲಿಂಗಗುಣಗಳನ್ನು ಆಯತ-ಸ್ವಾಯತ-ಸನ್ನಿಹಿತ
ಮಾಡಿಕೊಂಡವನೆ ಲಿಂಗಾಯತನು.
ಲಿಂಗಾಂಗ ಸಾಮರಸ್ಯದ ಸವಿಯನುಂಡವನೆ ನಿಜವೀರಶೈವನೆಂದ-
ನಮ್ಮ ಮೃಡಗಿರಿಯ ಅನ್ನದಾನೀಶ || ೨೧ ||
ಹೆತ್ತ ತಂದೆ ತಾಯಿಗಳು ಲಿಂಗವಂತರಾಗಿದ್ದರೂ ಲಿಂಗವಿಲ್ಲದ ಪುತ್ರ ಲಿಂಗಾಯತನಲ್ಲ. ಸಿರಿಸಂಪಾದಿಸಿ ಸಿರಿವಂತನೆನಿಸುವಂತೆ ಗುಣಗಳನ್ನು ಸಂಪಾದಿಸಿ ಗುಣವಂತನಾಗುವಂತೆ ಸದ್ಗುರುವಿನ ಕೃಪೆಪಡೆದು ಲಿಂಗಾಯತನಾಗಬೇಕು. ಇದುವೆ ಲಿಂಗವಂತಿಕೆಯ ಮೂಲವಾಗಿದೆ. ಇಷ್ಟಲಿಂಗವನ್ನು ಗುರುವಿನಿಂದ ಆಯತವಾದ (ಬರಮಾಡಿಕೊಂಡ) ಮೇಲೆ ಅದನ್ನು ಅರ್ಚನೆಗಳಿಂದ ಸ್ವಾಯತಗೊಳಿಸಿ (ತನ್ನದನ್ನಾಗಿ ಮಾಡಿಕೊಂಡು )ಸನ್ನಿಹಿತಗೊಳಿಸಿಕೊಳ್ಳಬೇಕು. (ಸಮರಸಗೊಳ್ಳಬೇಕು) ಲಿಂಗವೇ ಪ್ರಾಣ; ಪ್ರಾಣವೇ ಲಿಂಗವಾಗಿ ಭಾವಲಿಂಗದಲ್ಲಿ ಬೆರೆಯಬೇಕು. ಒಂದಾಗಬೇಕು. ಅಂದರೆ ಮಾತ್ರ ನಿಜವಾದ ವೀರಶೈವನೆನಿಸುವನು. ಲಿಂಗಭಕ್ತನಾಗುವನು. ಇಂಥವನಿಗೆ ಸಮಾನ ಸುಖಿ ವಿರಳ. ಇಂಥ ಲಿಂಗಾನಂದರಸದಲ್ಲಿ ತಲ್ಲೀನರಾದ ಮಹಾನುಭಾವರು ಮನದುಂಬಿ, ಭಾವದುಂಬಿ ಹೃದಯವನ್ನೇ ಹೊರಗೆಡವಿದ್ದಾರೆ. ಲಿಂಗತತ್ತ್ವದ ಅಗ್ಗಳಿಕೆಯನ್ನು ವೆಗ್ಗಳವಾಗಿ ಹೊಗಳಿದ್ದಾರೆ. ನಿಜಗುಣಾರ್ಯರು-
ಪರತರ ಶಿವಲಿಂಗವೆಳಸಿ ನಿನಗಾಗಿ
ಕರಕಂಜದೊಳು ಕಾಣಿಸಿತು ಯೋಗಿ ಯಜಿಸು ||
ಎಂದು ಹಾಡಿದ್ದಾರೆ. ಸರ್ಪಭೂಷಣ ಶಿವಯೋಗಿಗಳು
ಕರದೊಳಗೆ ಕಾಣಿಪುದು ಪರವಸ್ತುವಿದನರಿಯ
ದರೆಮರುಳರೊಳಗರಸಿ ತೊಳಲಿ ಬಳಲುವರು || ಪ ||
ಗೋವಿನೊಳಗಿಹ ಘೃತವು ಗೋವಿನಂಗದ ರುಜೆಯ
ಗೋವಿನಿಂ ಪೊರಮಟ್ಟು ಕೆಡಿಸುವಂತೆ ||
ಜೀವಭಾವವ ಕಳೆಯಲಾ ವಿಮಲಚಿದ್ ಬಿಂದು
ವಾವರಿಸಿ ಪೊರಗಿಷ್ಟಲಿಂಗ ತಾನಾಗಿ ||೧||
ಕಾಷ್ಠದೊಡಲಿನ ಶಿಖಿಯ ಕಾಷ್ಠದಿಂದುಜ್ವಲಿಸಿ
ಕಾಷ್ಠವನೆ ಸುಟ್ಟು ತಾ ಬೆಳಗುವಂತೆ ||
ಶ್ರೇಷ್ಠ ಚಿತ್ ಕಳೆಯೆ ಪೊರಮೊಟ್ಟು ಜಡಭಾವವನು |
ನಿಟ್ಟೊರಸಲದು ಪ್ರಾಣಲಿಂಗ ತಾನಾಗಿ || ೨ ||
ಮನೆಯ ಸೊಡರಿನ ಬೆಳಗು ಮನೆಯ ಬಾಗಿಲೊಳೈದಿ
ಮನೆಯಂಗಣದ ಮರ್ಬ ನೂಂಕುವಂತೆ ||
ತನು ತಮವ ಕಳೆಯಲ್ಕೆ ಚಿನ್ನಾದ ಮುಚ್ಚಳಿಸು-
ತನುಪಮಾದ್ವಯ ಭಾವಲಿಂಗ ತಾನಾಗಿ || ೩ ||
ʼʼ ಹಸ್ತಕಮಲದಲ್ಲಿ ಪರವಸ್ತುವಾದ ಇಷ್ಟಲಿಂಗವು ಸದ್ಗುರು ಕೃಪೆಯಿಂದ ಪ್ರತ್ಯಕ್ಷ ತೋರುವದನ್ನು ತಿಳಿಯದೆ ಪಾಮರರೊಡನೆ ಚರ್ಚಿಸಿ ತೊಳಲಾಡಿ ಬಳಲುತ್ತಿರುವರು. ಆಕಳಿಗೆ ಬೇನೆ ಬಂದರೆ ಅದರೊಳಗಿರುವ ಹಾಲಿನಲ್ಲಿಯ ತುಪ್ಪವು ಗುಣಪಡಿಸಲಾರದು. ಹಾಲನ್ನು ಕರೆದು ಚನ್ನಾಗಿ ಕಾಸಿ, ಹೆಪ್ಪು ಹಾಕಿ, ಮಜ್ಜಿಗೆ ಮಾಡಿ, ಬೆಣ್ಣೆತೆಗೆದು ಕಾಯಿಸಿದರೆ ತುಪ್ಪವಾಗುವದು. ಅದನ್ನು ಗೋವಿನ ನೋವಿಗೆ ಹಚ್ಚಿ ತಿಕ್ಕಿದರೆ ಅದು ವಾಸಿಯಾಗುವಂತೆ, ಗುರುವು ಜೀವಭಾವವನ್ನು ಕಳೆದು ವಿಮಲ ಚೈತನ್ಯಮಯ ಬೆಳಗನ್ನು ಇಷ್ಟಲಿಂಗದಲ್ಲಿ ನೆಲೆಗೊಳಿಸಿದರೇನೆ ಇಷ್ಟಲಿಂಗವಾಗುವದು. ಕಟ್ಟಿಗೆ ಯೊಳಗಿನ ಬೆಂಕಿಯು ಮಥನದಿಂದ ಹೊರಬಂದು ಆ ಕಟ್ಟಿಗೆಯನ್ನೆಲ್ಲ ಸುಟ್ಟು ಬೆಳಗುವಂತೆ ಜೀವಾತ್ಮನೊಳಗಿರುವ ಶ್ರೇಷ್ಠ ಚಿತ್ಕಳೆಯೇ ಗುರುಕೃಪೆಯಿಂದ ಹೊರಬಂದು ಜೀವದ ಜಡಭಾವವನ್ನು ಕಳೆಯಲು ಪ್ರಾಣಲಿಂಗವಾಗಿ ಮನೋನೇತ್ರಕ್ಕೆ ಕಾಣಿಸುವದು. ಮನೆಯೊಳಗೆ ಹಚ್ಚಿಟ್ಟ ದೀಪದ ಬೆಳಕು ಮನೆಯ ಬಾಗಿಲೊಳಗೆ ವ್ಯಾಪಿಸಿ ಮನೆಯಂಗಳದ ಕತ್ತಲೆಯನ್ನು ಕಳೆಯುವಂತೆ, ತನುವಿನಲ್ಲಿ (ಭಾವದಲ್ಲಿ )ತುಂಬಿರುವ ತಮ (ಅಜ್ಞಾನ ಕತ್ತಲೆ) ವನ್ನು ನೀಗಿದ ಚಿನ್ನಾದವೇ ಅನುಪಮದ ಭಾವಲಿಂಗವಾಗಿ ಬೆಳಗುವದು” ಎಂದು ಇಷ್ಟ-ಪ್ರಾಣ-ಭಾವಲಿಂಗಗಳ ಸ್ವರೂಪ ವನ್ನು ಅವಶ್ಯಕತೆಯನ್ನು ತಿಳಿಪಡಿಸುತ್ತ ಸ್ತುತಿಗೈದಿದ್ದಾರೆ.
ಕೆಲವರು ತಮ್ಮಂತರಂಗದಲ್ಲಿಯೇ ಪ್ರಾಣಲಿಂಗವಿರುವದರಿಂದ ಹೊರಗಿನ ಇಷ್ಟಲಿಂಗದ ಅವಶ್ಯಕತೆಯಿಲ್ಲವೆಂದು ವಾದಿಸುತ್ತಾರೆ. ಈ ವಾದ ಬರಿ ಶುಷ್ಕವಾದುದು. ವ್ಯರ್ಥವಾದುದು. ಊಟಮಾಡದವನಿಗೆ ತೃಪ್ತಿಯಾಗುವದೇ ಇಲ್ಲ. ಬಾಹ್ಯದಿಂದಲೇ ಅಂತರಂಗದ ಅರಿವಾಗುವದು. ಕರ್ಮಯೋಗದಲ್ಲಿ ಬದ್ಧನಾಗಿ ಗುಡಿ-ಗೋಪುರ- ಕೆರೆಗಳನ್ನು ಕಟ್ಟಿಸುತ್ತಿದ್ದ ಸಿದ್ಧರಾಮನಿಗೂ ಇಷ್ಟಲಿಂಗವಿರಲಿಲ್ಲ. ಮಲ್ಲಿಕಾರ್ಜುನನ ಕೃಪೆಪಡೆದಿದ್ದರೂ ಸ್ಥೂಲತನುವಿನ ತಮ (ಅಹಂಕಾರ) ಅಳಿದಿರಲಿಲ್ಲ. ಹಣೆಗಣ್ಣನ್ನು ಪಡೆದಿದ್ದೇನೆಂಬ ಅಹಂಕಾರ ಅತಿಯಾಯಿತು. ಲೋಕೋದ್ಧಾರಕ್ಕಾಗಿ ಸಂಚರಿಸುವ ವ್ಯೋಮಕಾಯನಾದ ಅಲ್ಲಮನ ಮೇಲೂ ಸಿದ್ಧರಾಮನ ಉರಿಗಣ್ಣು ಭುಗಿಲ್ಲೆಂದಿತು. ಆದರೆ ಸರ್ವಾತ್ಮನಾದ ಅಲ್ಲಮನ ಅಡಿಯಲ್ಲಿ ಉರಿಗಣ್ಣು ನಂದಿತು. ಸಿದ್ಧರಾಮನ ಗರ್ವ ಮುರಿಯಿತು. ನೈಜತಾತ್ತ್ವಿಕ ವಿಚಾರಗಳನ್ನು ಪ್ರಭುವಿನಿಂದ ತಿಳಿದು ಇಷ್ಟಲಿಂಗದ ಅವಶ್ಯಕತೆಯನ್ನು ಅರಿತು, ಚನ್ನಬಸವಣ್ಣನಿಂದ ಅನುಗೃಹೀತನಾದ ಸಿದ್ಧರಾಮೇಶ್ವರನ ಶೂನ್ಯ ಸಂಪಾದನೆಯ ಪ್ರಕರಣ ಅತ್ಯಂತ ಮಾರ್ಮಿಕವಾಗಿದೆ.
ಸಾಮಾನ್ಯವಾಗಿ ಗರ್ಭಸ್ಥ ಶಿಶುವಿಗೆ ತಾಯಿಯು ಜೋಗುಳವನ್ನು ಹಾಡುವದಿಲ್ಲ. ಉಪಚರಿಸಿ ಮುತ್ತಿಕ್ಕಿ ಆನಂದಪಡಲಾರಳು. ಅದರಂತೆ ಅಂತರಂಗದ ಆತ್ಮಲಿಂಗದ ಸ್ಥಿತಿಯಾದರೂ ಅರುವಿಗೆ ಬರುವದಿಲ್ಲ. ಇಷ್ಟಲಿಂಗವಿಲ್ಲದೆ ಪ್ರಾಣಲಿಂಗದ ನೆಲೆಕಲೆಗಳೂ ತಿಳಿಯುವದಿಲ್ಲ. ದೀಪವನ್ನು ಬೆಳಗಿದರೇನೇ ಕಿರಣ, ಪ್ರಕಾಶಗಳು ಹೊರಸೂಸುವಂತೆ ಸದ್ಗುರುವಿನಿಂದ ಪಡೆದ ಇಷ್ಟಲಿಂಗವೇ ದೀಪವು, ದೀಪದ ಕಿರಣವೇ ಪ್ರಾಣಲಿಂಗವು, ಪ್ರಕಾಶವೇ ಭಾವಲಿಂಗವು. ಇಷ್ಟಲಿಂಗದಿಂದಲೇ ಪ್ರಾಣಲಿಂಗ- ಭಾವಲಿಂಗಗಳು ಅಳವಡುತ್ತವೆ. ಮೂರು ಲಿಂಗಗಳನ್ನು ಧಾರಣ ಮಾಡಿಕೊಂಡಲ್ಲದೆ ಮೂರುತನುಗಳು ತುಂಬವು. ಮೂರು ಮಲಗಳು ನಾಶವಾಗಿ ಪಾವನವಾಗವು.
ಇಂಥ ಅಗಮ್ಯ, ಅನುಪಮ, ದಿವ್ಯಲಿಂಗವನ್ನು ಪಡೆದ ಮೇಲೆ ಅನ್ಯದೇವತೆ ಗಳನ್ನು ಆರಾಧಿಸುವ ಅವಶ್ಯಕತೆಯಿಲ್ಲ. ಈ ಲಿಂಗವ ಹೊರತುಪಡಿಸಿ ಯಾವ ದೈವವೂ ಇಲ್ಲವೆಂದು ಹಿಂದೆ ಅರಿತಿದ್ದೇವೆ. ಲಿಂಗಭಕ್ತನು ಅನ್ಯದೇವತೆಗಳ ಕಲ್ಪನೆಯನ್ನೂ ಮನದಲ್ಲಿ ತರಬಾರದು. ಅನೇಕ ಶರಣರು ಅನ್ಯದೇವತಾರ್ಚನೆಯನ್ನು ನಿಷ್ಠುರವಾಗಿ ಹೇಳಿದ್ದುಂಟು. ‘ಶಿವಾನಂದಲಹರಿ”ಯಲ್ಲಿ ಶಂಕರಾಚಾರ್ಯರು-
ಸಹಸ್ರಂ ವರ್ತಂತೇ ಜಗತಿ ವಿಬುಧಾಃ ಕ್ಷುದ್ರಫಲದಾಃ |
ನಮನ್ಯೇ ಸ್ವಪ್ನೇ ವಾ ತದನುಸರಣಂ ತತ್ಕೃಫಲಮ್ ||
ಹರಿಬ್ರಹ್ಮಾದೀನಾಮಪಿ ನಿಕಟಭಾಜಾಮಸುಲಭಂ
ಚಿರಂ ಯಾಚೇ ಶಂಭೋ ಶಿವ ! ತವ ಪದಾಂಭೋಜಭಜನಮ್ || ೪ ||
ಜಗತ್ತಿನಲ್ಲಿ ಕ್ಷುದ್ರಫಲವನ್ನು ಕೊಡುವ ಸಹಸ್ರಾರು ದೇವತೆಗಳಿರಬಹುದು. ಆದರೆ ಅವುಗಳನ್ನು ಸ್ವಪ್ನಾವಸ್ಥೆಯಲ್ಲಿಯೂ ನೆನೆಯುವದಿಲ್ಲ. ಅವುಗಳ ಫಲವನ್ನು ಬಯಸುವದಿಲ್ಲ. ಹರಿಬ್ರಹ್ಮಾದಿಗಳಿಗೆ ದುರ್ಲಭವಾದ ಶಿವನಪಾದವೊಂದೇ ತನ್ನ ಮನದಲ್ಲಿ ಸ್ಥಿರವಾಗಿರಲೆಂದು ಬೇಡಿಕೊಂಡಿದ್ದಾರೆ. ಅದರಂತೆ ಇಷ್ಟಲಿಂಗ ಭಕ್ತನು ಲಿಂಗಾಚಾರವೆನಿಸುವದು. ಅನ್ಯದೇವತೆಗಳನ್ನು ಮನ್ನಿಸಬಾರದು. ಲಿಂಗಾಚಾರಿಯಾದ ಭಕ್ತನು ಅನ್ಯದೇವತೆಗಳನ್ನು ಮನ್ನಿಸಬಾರದೆಂದರೆ ಅವುಗಳನ್ನು ತಿರಸ್ಕರಿಸುವದಲ್ಲ. ತನ್ನ ಲಿಂಗದಲ್ಲಿಯೇ ಎಲ್ಲವನ್ನು ಕಂಡುಕೊಳ್ಳಬೇಕು. ಯಾವುದೇ ದೇವರನ್ನು ಕಂಡರೂ ಇಷ್ಟಲಿಂಗಕ್ಕೇನೇ ಹಣೆಯಿಡಬೇಕಲ್ಲದೆ ಅವುಗಳಿಗೆ ಮಣಿಯಬಾರದು. ಮನದಲ್ಲಿ ಶಿವಲಿಂಗವನ್ನು ಧ್ಯಾನಿಸಬೇಕು. ಇಷ್ಟಲಿಂಗಕ್ಕೆ ಮಿಗಿಲಾಗಿ ಯಾವುದನ್ನೂ ಭಾವಿಸಬಾರದು. ಇಂಥ ಲಿಂಗನಿಷ್ಠಾಪರನು ಭವಮರಣಗಳನ್ನು ಸುಲಭವಾಗಿ ಜಯಿಸಬಹುದು. ಘನತರ ವೈರಾಗ್ಯ ನಿಧಿಯಾದ ಘನಮಠದಾರ್ಯರು.
ಗುರುಕರ ಜಾತರು ನಮ್ಮವರು
ಭವಮರಣವ ಗೆಲಿವರು ನಮ್ಮವರು |
ಪರಮವೀರಶೈವಾಚಾರವನೀ
ಧರೆಯೊಳ್ ಮೆರೆದರು ನಮ್ಮವರು || ಪ ||
ಮಾರಿಮಸಣಿಯೆಂಬೂರ ದೈವತರ
ಗಾರುಮಾಡುವರು ನಮ್ಮವರು ||
ಎಂದು ಹೆಮ್ಮೆಯಿಂದ ದೀರ್ಘವಾಗಿ ಹಾಡಿದ ಹಾಡು ಮನನೀಯವಾಗಿದೆ. ಪ್ರತಿಯೊಬ್ಬ ವೀರಶೈವನು ಈ ಹಾಡನ್ನು ಹಾಡಲೇಬೇಕು. ಹಾಡಿನ ನಾದದಲ್ಲಿ ಬೆರೆಯಬೇಕು. ಅರ್ಥದ ಆಳದಲ್ಲಿ ಮುಳುಗಬೇಕು.
ಇಷ್ಟಲಿಂಗ ವಿಜ್ಞಾನದಲ್ಲಿ ಇನ್ನೊಂದು ಮಾತು ವಿಚಾರಣೀಯವಾಗಿದೆ. ಪಂಚಸೂತ್ರದ ಲಿಂಗಕ್ಕೆ ಕಪ್ಪು ಕಂಥೆಯನ್ನಿಡುವದು ತಾತ್ವಿಕವೂ ಹಾಗೂ ವೈಜ್ಞಾನಿಕವೂ ಆಗಿದೆ. ವೀರಶೈವರು ಶಿವಾದೈತಿಗಳು ಅಥವಾ ಶಕ್ತಿವಿಶಿಷ್ಟಾದೈತಿಗಳು, ಲಿಂಗದ ಪೀಠವೇ ಶಕ್ತಿ, ಬಾಣವೇ ಶಿವ. ಈ ಶಿವ-ಶಕ್ತಿಯರ ಸಮ್ಮಿಲನದಿಂದ ಕೂಡಿದ್ದೇ ಲಿಂಗ. ಜಗವೂ ಶಿವ ಶಕ್ತಿಯರ ಸಮ್ಮಿಲನದಲ್ಲಿಯೇ ಪ್ರಾದುರ್ಭವಿಸಿದೆ. ಶಿವನಿಲ್ಲದೆ ಶಕ್ತಿಯಿಲ್ಲ. ಶಕ್ತಿಯಿಲ್ಲದೆ ಶಿವನಿಗೆ ಚೈತನ್ಯವಿಲ್ಲ. ಶಿವಶಕ್ತಿಯರ ಅದ್ವೈತತತ್ತ್ವವನ್ನು (ಸಾಮರಸ್ಯವನ್ನು) ಸಾರುವ ಈ ಇಷ್ಟಲಿಂಗವು ಜಗದಾಕಾರವುಳ್ಳುದಾಗಿದೆ. ಪರಿಪೂರ್ಣವಾಗಿದೆ. ಜಗತ್ತು ಗೋಲವಾಗಿದೆಯೆಂಬ ಮಾತನ್ನು ವಿಜ್ಞಾನಿಗಳೂ ಒಪ್ಪಿದ್ದಾರೆ ಮತ್ತು ಲಿಂಗಕ್ಕೆ ಕಪ್ಪು ಕಂಥೆಯನ್ನಿಡುವದೂ ಸಶಾಸ್ತ್ರೀಯವಾಗಿದೆ. ಲಿಂಗದಲ್ಲಿಯ ಪೀಠ (ಶಕ್ತಿ) ಬಾಣ (ಶಿವ)ಗಳನ್ನು ಪರಿಪೂರ್ಣಗೊಳಿಸುವ ಅಥವಾ ಒಂದಾಗಿಸುವ ಸಂಕೇತವೂ ಕಂಥೆಯಿಡುವುದಾಗಿದೆ. ಅಲ್ಲದೆ ಲಿಂಗವು ಆಯತವಾದ ಮೇಲೆ ಸ್ವಾಯತ ಸನ್ನಿಹಿತಗೊಳ್ಳಬೇಕಾದರೆ ನೋಟ-ಮಾಟ-ಕೂಟಗಳು ಅವಶ್ಯ. ಲಿಂಗದ ನೋಟ ದಿಂದಲೇ ಶಿವಯೋಗ ಸಾಧಿಸುವದು. ನೋಡುವ ಕಣ್ಣುಗುಡ್ಡೆಗಳು ಕಪ್ಪಾಗಿರುವದರಿಂದ ಲಿಂಗಕ್ಕೆ ಕಪ್ಪು ಕಂಥೆಯನ್ನು ಕೊಟ್ಟಿದ್ದಾರೆ. “ಸಮಾನಶೀಲವ್ಯಸನೇಷು ಸಖ್ಯಮ್” ಸಮಾನವಾದ ಶೀಲ ವ್ಯಸನವುಳ್ಳವರಲ್ಲಿ ಗಾಢವಾದ ಮಿತ್ರತ್ವ ಬೆಳೆಯುವಂತೆ ಕಂಥೆಯು ಕಪ್ಪು ; ಕಣ್ಣು ಗುಡ್ಡೆಯು ಕಪ್ಪು ; ಕಂಥೆಯನ್ನು ತಯಾರಿಸಲು ಉಪಯೋಗಿಸುವ ಬೂದಿಯೂ ಕಪ್ಪು, ಕೇರೆಣ್ಣೆಯೂ ಕಪ್ಪು; ಅಲ್ಲದೆ ಕಾಡಿಗೆಯೂ ಕಪ್ಪೇ ಇರುವದು. ಎಲ್ಲ ಕಪ್ಪುಗಳ ಶೀಲ ಸಮನಾಗಿದೆ.
ಕಂಥೆಯನ್ನು ಮಾಡುವಾಗ ಬೆರೆಸುವ ಕೇರೆಣ್ಣೆಯು ಅಗ್ನಿತತ್ತ್ವದ್ದಿದ್ದು ಕಣ್ಣೂ ಅಗ್ನಿತತ್ತ್ವದ್ದಾಗಿದೆ. ಕಾರಣ ಎರಡರಲ್ಲಿ ಪರಸ್ಪರ ಸಾಮ್ಯವಿದೆ. ಸ್ನೇಹವಿದೆ. ಲಿಂಗದ ಕಂಥೆಯ ಕಾಂತಿಯೊಡನೆ ಕಂಗಳ ಕಾಂತಿಯು ಬೆಳಗಿ ಅದಕ್ಕೆ ಪ್ರಕಾಶ ಪ್ರಾಪ್ತವಾಗುವದು. ಕರಿಯ ಮೋಡದಲ್ಲಿ ವಿದ್ಯುತ್ ಸಂಚಲನವು ವ್ಯಕ್ತವಾಗಿ ಕಾಣುವಂತೆ ಲಿಂಗ ಮತ್ತು ಕಣ್ಣಿನ ನೋಟದಲ್ಲಿ ಪ್ರಕಾಶವು ಸ್ಫುಟವಾಗಿ ತೋರುವದು. ಇದಲ್ಲದೆ ಲಿಂಗವನ್ನು ಅನಿಮಿಷದೃಷ್ಟಿಯಿಂದ ನೋಡುವವನ ಕಣ್ಣಿನ ಕಾಂತಿ ಕಳೆಯೇರುತ್ತದೆ. ಮತ್ತು ಲಿಂಗದಮೇಲೆ ಪಾದೋದಕವನ್ನು ಎರೆದು ಸ್ವೀಕರಿಸುವದು ಆರೋಗ್ಯಕ್ಕೆ ಉತ್ತಮ ವಾಗಿದೆ. ಕೇರು ರೋಗ ನಿವಾರಕವಾಗಿದೆ. ಆದ್ದರಿಂದ ಲಿಂಗಕ್ಕೆ ಕಪ್ಪು ಕಂಥೆಯು ಅತ್ಯಂತ ಸಮೀಚೀನವಾಗಿದೆ.
ಇಂಥ ಅದ್ಭುತ ಶಕ್ತಿಯುಳ್ಳ ಇಷ್ಟಲಿಂಗವನ್ನು ಅಂಗೈಯಲ್ಲಿ ತಂದುಕೊಟ್ಟ ಗುರುವು ಸ್ವಸ್ಥನಾಗಿರುವನು. ಯಾಕಂದರೆ ತಂದೆಯು ಮಗನಿಗೆ ತನ್ನ ಎಲ್ಲ ಸಂಸಾರದ ಭಾರವನ್ನು ವಹಿಸಿಕೊಟ್ಟ ಮೇಲೆ ತಾನು ಸಖಿಯಾಗಿ, ನಿಶ್ಚಿಂತನಾಗಿರುವಂತೆ ಗುರುದೇವನು ತನ್ನ ಸನ್ನಿಧಿಯನ್ನು ಬಯಸಿಬಂದ ಶಿಷ್ಯನಿಗೆ ಮಸ್ತಕದೊಳಗಿನ ಪರವಸ್ತುವನು ಹಸ್ತದಲ್ಲಿ ತಂದಿರಿಸುವದರಿಂದ ಕೃತಕೃತ್ಯನಲ್ಲದೆ ಮತ್ತೇನು ? ಕಾರಣ ‘ಸ್ವಸ್ಥ’ ಪದಪ್ರಯೋಗವು ಔಚಿತ್ಯಪೂರ್ಣವಾಗಿದೆ. ಸಾರ್ಥಕವಾಗಿದೆ.