ಪೂಜ್ಯ ಶ್ರೀ ಲಿಂ. ಡಾ. ಶಿವಬಸವ ಸ್ವಾಮಿಗಳು,ರುದ್ರಾಕ್ಷಿಮಠ ನಾಗನೂರ
ಶಿವಯೋಗಿ ಗುರುವು ಪರುಷಮಣಿ ಇದ್ದಂತೆ. ಗುರುವಿನ ಕೃಪೆಯಿಂದ-ಕರುಣಾಕಟಾಕ್ಷದಿಂದ ಶಿಷ್ಯನು ಪುನೀತನಾಗುತ್ತಾನೆ. ಗುರುಕರುಣೆಯಿಂದ ಅಲೌಕಿಕ ಆತ್ಮಶಕ್ತಿಯನ್ನು ಶಿಷ್ಯನು ಪಡೆಯಬಲ್ಲ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಅಂತಹ ಕರುಣಾಳು ಗುರುದೇವರು. ಅವರ ಅಮಿತ ಕರುಣೆಯ ನೆರಳಿನಲ್ಲಿ ಅನೇಕ ಸಾಧಕರು ಸಿದ್ಧಿಯನ್ನು ಪಡೆದವರುಂಟು. ಅವರ ಸೇವೆಯನ್ನುಮಾಡುವ ಭಾಗ್ಯ ಅನೇಕ ಸಾಧಕರಿಗೆ ಲಭಿಸಿತ್ತು. ಅಂತಹ ಪರಮ ಭಾಗ್ಯ ನಮ್ಮ ಪಾಲಿಗೂ ಬಂದಿತ್ತು.
ಹದಿನೈದು ವರ್ಷಗಳವರೆಗೆ ಪೂಜ್ಯರ ಶೀಲಾಚರಣೆಯಲ್ಲಿ ಸೇವೆಯ ಲಾಭ.ಈ ಅವಧಿಯಲ್ಲಿ ಪೂಜ್ಯರನ್ನು ಬಹಳ ಹತ್ತಿರದಿಂದ ಕಾಣುವ ಸುಯೋಗ ಒದಗಿತ್ತು.ನಾವು ಹೆಚ್ಚಾಗಿ ಸೇವೆಯಲ್ಲಿಯೇ ಇರುತ್ತಿದ್ದೆವು. ಆದುದರಿಂದ ಹೆಚ್ಚು ವಿದ್ಯಾವ್ಯಾಸಂಗಮಾಡುವುದು ಸಾಧ್ಯವಾಗಲಿಲ್ಲ. ಆದರೆ ಪೂಜ್ಯರ ಸೇವೆಯಲ್ಲಿ ದೊರೆತ ಅನುಭಾವಎಂತಹ ಪಾಂಡಿತ್ಯಕ್ಕೂ ಎಟುಕದು. ಈ ಸೇವಾ ಪ್ರಸಂಗದಲ್ಲಿ ಅನೇಕ ಘಟನೆಗಳು ನಡೆದು ಹೋಗಿವೆ ಅವೆಲ್ಲವುಗಳಲ್ಲಿ ಸ್ಪುಟವಾದ ಪೂಜ್ಯರ ಘನವಾದ ದಿವ್ಯ ವ್ಯಕ್ತಿತ್ವದ ಕೆಲವು ಅಂಶಗಳನ್ನು ಮಾತ್ರ ಈ ಸಂಸ್ಕರಣೆಯಲ್ಲಿ ಮೂಡಿಸಲಾಗಿದೆ.
ಸ್ವಾತ್ವಿಕ ಮತ್ತು ಸರಳ ಜೀವನ
ಪೂಜ್ಯ ಶ್ರೀಗಳವರ ಜೀವನದ ಪ್ರತಿನಿತ್ಯದ ಆಚರಣೆಯಲ್ಲಿ ಸಾತ್ವಿಕತೆ ಮತ್ತು ಸರಳತೆ ಎದ್ದು ಕಾಣುತ್ತಿದ್ದವು. ಅವರು ಮಿತಾಹಾರಿಗಳು. ಅವರ ಪ್ರಸಾದದಲ್ಲಿ ಸಾತ್ವಿಕತೆ ಮತ್ತು ನಿರ್ಮಲತೆ ಎರಕಗೊಂಡಿದ್ದವು. ಅವರು ಎಂದೂ ನಾಲಿಗೆಯ ರುಚಿಗೆ ಮಾರುಹೋಗಲಿಲ್ಲ. ಖಾರ, ಉಪ್ಪು, ಹುಳಿಯನ್ನು ಕೊನೆಯವರೆಗೂ ಮುಟ್ಟಲಿಲ್ಲ.ಸೈಂಧವ ಲವಣವನ್ನು ಮಾತ್ರ ಅಲ್ಪ ಮಾತ್ರೆಯಲ್ಲಿ ಸೇವಿಸುತ್ತಿದ್ದರು. ಅವರ ಸಪ್ಪೆ ಸಾರಿನ ಮಸಾಲೆಯಲ್ಲಿ ಜೀರಿಗೆ ಮತ್ತು ಹವೀಜ (ಧನಿಯಾ)ದ ಪುಡಿ ಮಾತ್ರ ಸೇರುತ್ತಿತ್ತು.
ಶ್ರೀಗಳವರು ಹೆಚ್ಚಾಗಿ ತಪ್ಪಲುಪಲ್ಯವನ್ನು ತುಸು ಕುದಿಸಿ ತೆಗೆದುಕೊಳ್ಳುತ್ತಿದ್ದರು.ಕಿರುಕಸಾಲೆ ಅವರ ನೆಚ್ಚಿನ ತಪ್ಪಲು ಪಲ್ಯ ಬಿಳಿಯ ಕಣಜಗಲಿ, ಬೇವು, ಕಕ್ಕಿ ಮತ್ತುಅಮೃತ ಬಳ್ಳಿಯ ಚಿಗುರೆಲೆ, ನೆಗ್ಗಲಿ ಮತ್ತು ಉತ್ತರಾಣಿಯ ಮುಗುಳುಗಳನ್ನು ಅವರು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಋತು ಮಾಸಕ್ಕೆ ತಕ್ಕಂತೆ ಇವನ್ನು ಅವರು ಬಳಸಿಕೊಳ್ಳುತ್ತಿದ್ದರು. ಮಾಗಣಿ ಬೇರಿನ ಉಪ್ಪಿನಕಾಯಿ ಅವರ ಮೆಚ್ಚಿನ ನೆಂಚಿಗೆ ಅವರು ಹುರಿದ ಹೆಸರು ಬೇಳೆ, ಆಕಳ ಹಾಲು ಮತ್ತು ತುಪ್ಪವನ್ನೇ ಯಾವಾಗಲೂ ಪ್ರಸಾದದಲ್ಲಿ ವಿನಿಯೋಗಿ ಸುತ್ತಿದ್ದರು. ಅವರ ಪಾಕ ಸಾತ್ವಿಕ, ಅವರ ಪ್ರಸಾದ ಬಹು ಮಿತ ಮತ್ತು ಹಿತ.
ನಿಯಮಿತ ಕಾರ್ಯಕ್ರಮ
ಶ್ರೀಗಳವರು ಸದಾ ಜಾಗ್ರತರಾಗಿರುತ್ತಿದ್ದರು. ಅವರ ಪ್ರತಿ ನಿತ್ಯದ ಕಾರಗಳು ಗಡಿಯಾರದಂತೆ ನಿಯಮಿತವಾಗಿ ಚಾಚೂ ತಪ್ಪದೆ ನಡೆಯುತ್ತಿದ್ದವು. ಪ್ರತಿದಿನವೂ ಮುಂಜಾನೆ ೪ಗಂಟೆಗೆ ಎದ್ದು, ಅರ್ಧ ಗಂಟೆ ಧ್ಯಾನಸ್ಥರಾಗಿ ಕುಳಿತು ಆ ಮೇಲೆ ತಾವೇ ಗಂಟೆ ಬಾರಿಸಿ ಸಾಧಕರನ್ನೂ ಸೇವಕರನ್ನೂ ಎಚ್ಚರಿಸುತ್ತಿದ್ದರು; ಅನಂತರ ಮುಖ ತೊಳೆದು, ಭಸ್ಮಧಾರಣ ಮಾಡಿಕೊಂಡು ಶಿವಾನುಭವ ಪ್ರವಚನವನ್ನು ೬ಗಂಟೆಯ ವರೆಗೂ ನಡೆಯಿಸುತ್ತಿದ್ದರು. ಮಗ್ಗೆಯ ಮಾಯಿದೇವರ ‘ಶತಕತ್ರಯ ಅವರ ಅಚ್ಚುಮೆಚ್ಚಿನ ಅನುಭವ ಗ್ರಂಥ.
ಶ್ರೀಗಳವರು ಪ್ರತಿನಿತ್ಯ ಮುಂಜಾನೆ ಪ್ರಾತರ್ವಿಧಿ ಗಳಿಗಾಗಿ ಊರ ಹೊರಗೆ (ಶಿವಯೋಗಮಂದಿರದಲ್ಲಿದ್ದರೆ ಗುಡ್ಡಗಳಲ್ಲಿ) ಮೈಲುಗಟ್ಟಲೆ ಪಾದಚಾರಿಗಳಾಗಿ ನಡೆಯುತ್ತಿದ್ದರು. ಎತ್ತರದ ನಿಲುವು, ಖಡ ಖಡ ಕಾಯ, ನಿರ್ಮಲ ನೇತ್ರ, ಆಜಾನುಬಾಹು, ಹಸ್ತದಲ್ಲಿ ತಮ್ಮ ಎತ್ತರದ ಬೆತ್ತ ಸಾಕ್ಷಾತ್ ಜಂಗಮದ ರೂಪಾಗಿರುತ್ತಿದ್ದರು. ಎಂತಹ ಪಾಮರ-ಪತಿತನನ್ನೂ ಉದ್ಧರಿಸೇವೆಂಬ ಅನುಗ್ರಹಭಾವ ಅವರ ಈ ಭವ್ಯರೂಪದಲ್ಲಿ ಮೈದಾಳಿ ನಡೆಯುವಂತಿತ್ತು.
ನಿತ್ಯದ ಈ ಸಂಚಾರದ ಕಾಲದಲ್ಲಿ ಮರಡಿಯೇ ಆಗಲಿ, ಕಾಡೇ ಆಗಲಿ ಅಲ್ಲಿ ದೊರೆತ ವನಸ್ಪತಿಗಳನ್ನು ಸಂಗ್ರಹಿಸುವುದು, ಅವುಗಳ ಪರಿಜ್ಞಾನವನ್ನು ಜೊತೆಯಲ್ಲಿದ್ದ ಸೇವಕರಿಗೆ ಮಾಡಿಕೊಡುವುದು ಅವರ ನಿತ್ಯನೇಮವಾಗಿದ್ದಿತು. ಅವರ ಆಯುರ್ವೇದ ಪ್ರೇಮ, ವನಸ್ಪತಿ ವಿಜ್ಞಾನ ಅಪರಿಮಿತ ಮತ್ತು ಅನುಕರಣೀಯವಾಗಿದ್ದವು.
ಪ್ರಾತಃಸಂಚಾರವಾದ ಮೇಲೆ ಸ್ನಾನ-ಶಿವಪೂಜೆ ಗಳನ್ನು ಮುಗಿಸಿಕೊಂಡು ಶ್ರೀಗಳವರು ಭಿಕ್ಷೆಗೆ ದಯಮಾಡಿಸುವುದು ನಿತ್ಯದ ಪದ್ಧತಿಯಾಗಿದ್ದಿತು. ಜನಸೇವೆಯೇ ಅವರಿಗೆ ಈಶಸೇವೆಯಾಗಿದ್ದಿತು. ಎಲ್ಲ ಕಾರ್ಯಗಳಿಗೂ ಹೊತ್ತಿಗೆ ಸರಿಯಾಗಿ ನಿಯಮಿತವಾಗಿ ಅಚ್ಚುಕಟ್ಟಾಗಿ ನಡೆಯಬೇಕು. ಅಂದರೆ ಅವರಿಗೆ ಸಮಾಧಾನ. ಒಮ್ಮೊಮ್ಮೆ ಭಿಕ್ಷೆಯ ಕಾರ್ಯದಲ್ಲಿ ಶಿವಪೂಜೆ ಅರ್ಪಿತಕ್ಕೆ ವ್ಯತ್ಯಯವೂ ಬರುತ್ತಿತ್ತು. ಆದರೆ ಅವರು ಪೂಜೆಗೆ ತಡವಾಯಿತೆಂದು ಅವಸರ ಮಾಡುತ್ತಿರಲಿಲ್ಲ. ಸಭೆಯ ಭಾಷಣ, ಪ್ರವಚನ ಮತ್ತು ಶಿವಕೀರ್ತನ ಮೊದಲಾದ ಬೋಧೆಯ ಕಾರ್ಯಕ್ರಮಗಳನ್ನು ಕ್ರಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಯಿಸಿ ಸಂತೋಷಪಡುತ್ತಿದ್ದರು. ಅವರೆಂದೂ ಶರೀರ ಸೌಖ್ಯವನ್ನು ಕನಸು-ಮನಸಿನಲ್ಲಿಯೂ ಬಯಸಿದವರಲ್ಲ. ಅವರ ವಿರಕ್ತಿ ಕಡು ಕಠೋರರೀತಿಯದು. ಶ್ರೀಗಳವರು ಹಸಿವು-ತೃಷೆಗಳನ್ನು ಗೆದ್ದ ಮಹಾಂತರೆಂದರೆ ಸರಿಯಾದೀತು.
ಸಾಧಕರ ನಡೆನುಡಿಯನ್ನು ತಿದ್ದುವ ಹಂಬಲ
ಶ್ರೀಗಳವರು ಶಿವಯೋಗಮಂದಿರವನ್ನು ಸ್ಥಾಪಿಸಿ ಚಿಕ್ಕ ವಟುಗಳನ್ನು ಎಳೆಯ ಸಾಧಕರನ್ನೂ ಅಲ್ಲಿ ತಂದಿಟ್ಟರು. ಅವರನ್ನು ತಮ್ಮ ಕರಸಂಜಾತರೆಂದು ಬಗೆದು ವಾತ್ಸಲ್ಯದಿಂದ ಸಾಕಿ ಸಲುಹಿದರು. ಅವರಿಗೆ ಸರಿಯಾದ ಶಿಕ್ಷಣ ದೊರೆಯುವಂತೆ ಎಲ್ಲ ಏರ್ಪಾಡುಗಳನ್ನು ಮಾಡಿದರು. ಯೋಗ-ಶಾಸ್ತ್ರಗಳ ವ್ಯಾಸಂಗದ ಜೊತೆಗೆ ಪ್ರತಿಯೊಬ್ಬ ವಟುವಿನ ಸಾಧಕನ ನಡೆ-ನುಡಿಗಳನ್ನು ತಿದ್ದುವ ಹೊಸ ಕ್ರಮಗಳನ್ನೇ ಅನುಸರಿಸಿ ಪ್ರಯೋಗಿಸಿದರು. ಏಕಾಂತದಲ್ಲಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ಆದ ಸ್ವಪ್ನಗಳನ್ನು, ಮಾಡಿದ ತಪ್ಪುಗಳನ್ನು ಕೇಳಿ ತಿಳಿದು ಸರಿಯಾದ ಮಾರ್ಗದರ್ಶನ ನೀಡುತ್ತಿದ್ದರು. ಸಾಧಕರು ಬರಿಯ ಆಸ್ತಿವಂತ ಶ್ರೀಮಂತ ಮಠಗಳಿಗೆ ಅಧಿಕಾರಿಗಳಾಗಿ ಹೋದರೆ ಆಗಲಿಲ್ಲ. ಅವರು ತಮ್ಮ ಇಡಿಯ ಜೀವನವನ್ನೇ ಸಮಾಜ ಸೇವೆಗೆಂದು ಧಾರೆಯೆರೆಯಬೇಕು ಎಂಬುದು ಶ್ರೀಗಳವರ ಬಯಕೆ ಯಾಗಿದ್ದಿತು. ಕೆಲವು ಸಾಧಕರು ತಾವು ಮಠ-ಮಾನ್ಯಗಳಿಗೆ ಅಧಿಕಾರಿಗಳಾಗದೆ ಆಜೀವ ದೇಶಿಕರಾಗಿದ್ದು ಸಮಾಜಸೇವೆ ಮಾಡುವ ಪ್ರತಿಜ್ಞೆಯನ್ನು ಪೂಜ್ಯರ ಮುಂದೆ ಸಾಷ್ಟಾಂಗಪ್ರಣತರಾಗಿ ಕೈಕೊಂಡವರೂ ಉಂಟೂ. ಅವರು ಅಂತಹ ತ್ಯಾಗ ಭಾವನೆಯಿಂದ ಪ್ರೇರಿತರಾದ ಸಾಧಕರನ್ನು ಕಂಡು ಪರಿಶ್ರಮ ಸಾರ್ಥಕವಾದೀತೆಂದು ಆನಂದ ಪಡುತ್ತಿದ್ದರು. ಸಮಾಜಸೇವೆಯ ವ್ರತದಲ್ಲಿ ದೀಕ್ಷಿತರಾದ ಸುಶಿಕ್ಷಿತ ಮತ್ತು ಸಮರ್ಥ ಸಾಧಕರನ್ನೇ ಅವರು ಶಿವಯೋಗಮಂದಿರದ ಸ್ಥಿರವಾದ ಆಸ್ತಿಯೆಂದು ಬಗೆದಿದ್ದರು.
ಸಂಸ್ಥೆಯ ಪ್ರೇಮ
ಶಿವಯೋಗಮಂದಿರವೆಂಬ ಸಂಸ್ಥೆ ಶ್ರೀಗಳವರ ಉದಾತ್ತ ಧೈಯಗಳ ಸಾಕಾರ ರೂಪವಾಗಿದ್ದಿತು. ಆ ಮಹಾಸಂಸ್ಥೆ ಅವರ ಸಮಾಜ ಸುಧಾರಣೆಯ ಬೃಹದ್ ಯೋಜನೆಗಳ ಪ್ರಯೋಗ ಕ್ಷೇತ್ರವಾಗಿದ್ದಿತು. ಅದನ್ನು ಪೂರ್ಣ ಉನ್ನತಿಗೆ ಉಚ್ಛ್ರಾಯ ಸ್ಥಿತಿಗೆ ಒಯ್ಯುವ ಹಂಬಲ ಅವರಲ್ಲಿ ಪ್ರಬಲವಾಗಿತ್ತು, ಹಗಲಿರುಳು ಅವರು ಅದರ ಸುಧಾರಣೆಯ ಚಿಂತೆ ಮಾಡಿದರು. ಅದೇ ಅವರ ಮಠವಾಗಿದ್ದಿತು. ಅವರು ಹಾನಗಲ್ಲ ವಿರಕ್ತಮಠಕ್ಕೆ ಅಧಿಕಾರಿಗಳಾಗಿದ್ದರೂ ಅದರ ಚಿಂತೆ ಮಾಡಲಿಲ್ಲ. ತಾವಿರುವಾಗಲೇ ಮತ್ತೊಬ್ಬ ಯೋಗ್ಯ ಸಾಧಕರಿಗೆ ಅಧಿಕಾರ ಪಟ್ಟಿ ಮಾಡಿ ನಿಶ್ಚಿಂತರಾಗಿದ್ದರು. ಶ್ರೀಗಳವರು ಹಾನಗಲ್ಲ ಮಠದಲ್ಲಿ ವಾಸ್ತವ್ಯವಿದ್ದಾಗ ಮಲೆ ನಾಡಿನ ಸಾವಿರಾರು ಜನ ಭಕ್ತರು ಪ್ರತಿನಿತ್ಯ ದರ್ಶನಾಶೀರ್ವಾದ ಪಡೆಯಲು ಬರುತ್ತಿದ್ದರು. ಕಾಣಿಕೆ ಕಾಯಿ-ಕರ್ಪುರಗಳು ರಾಶಿಯಾಗಿ ಒಟ್ಟಿರುತ್ತಿದ್ದವು. ಶ್ರೀಗಳವರು ಆವೆಲ್ಲವನ್ನು ಲೆಕ್ಕ ಮಾಡಿಸಿ ನೇರವಾಗಿ ಶಿವಯೋಗಮಂದಿರಕ್ಕೆ ಕಳಿಸಿಕೊಡುತ್ತಿದ್ದರು.
ಒಮ್ಮೆ ಅಕ್ಕಿಆಲೂರಿನ ಒಬ್ಬ ಸಿರಿವಂತ ತಾಯಿ ಹಾನಗಲ್ಲ ಮಠಕ್ಕೆಂದು ತನ್ನಆಸ್ತಿಯನ್ನು ಭಕ್ತಿಯಿಂದ ದಾನವಾಗಿ ಬರೆದು ಅರ್ಪಿಸಿದಳು. ಶ್ರೀಗಳವರು ಅದೆಲ್ಲವನ್ನುಮಂದಿರದ ಹೆಸರಿಗೆ ಬರೆಯಿಸಿದರು. ಅವರು ಸ್ವಂತಕ್ಕಾಗಿ ಒಂದು ಚಿಕ್ಕಾಸನ್ನೂ ಮುಟ್ಟಲಿಲ್ಲ, ಬಳಸಲಿಲ್ಲ. ತಮಗೆ ಬೇಕಾದ ಖಾದಿಯ ಬಟ್ಟೆಗಳನ್ನು ಭಕ್ತರೇ ಕೊಡಿಸಿದವನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅದಕ್ಕಾಗಿ ಹಾನುಗಲ್ಲ ಮಠ ಇಲ್ಲವೆ ಶಿವಯೋಗಮಂದಿರ ಸಂಸ್ಥೆಯ ಒಂದು ಪೈಸೆಯನ್ನೂ ಮುಟ್ಟುತ್ತಿರಲಿಲ್ಲ. ಸಂಸ್ಥೆಯ ಆಡಳಿತವನ್ನು ಅಭಿಮಾನಿ ಸ್ವಾಮಿಗಳಿಗೆ-ಭಕ್ತರಿಗೆ ಒಪ್ಪಿಸಿ ನಿಶ್ಚಿಂತರಾಗಿದ್ದರು.
ಶ್ರೀಗಳವರು ಧನದಾಶೆ-ಅಧಿಕಾರಲಾಲಸೆಗಳನ್ನು ಮೆಟ್ಟಿ ವೀರವಿರತಿಯ ತುತ್ತತುದಿಯನ್ನು ಏರಿ ನಿರ್ಭಯರಾಗಿದ್ದರು.
ನಿರಹಂಕಾರ ವೃತ್ತಿ
ನಿರಂಜನ-ನಿರಾಭಾರಿ ವೀರಶೈವ ವಿರಕ್ತರ ಸಂಪ್ರದಾಯದಲ್ಲಿ ನಿರಹಂಕಾರ ವೃತ್ತಿಗೆ ಬಹಳ ಪ್ರಾಶಸ್ಯವಿದೆ. ಮೂರ್ತಿಗಳು ಒಬ್ಬರನೊಬ್ಬರು ಕಂಡಾಗ ಪರಸ್ಪರ ಸಾಷ್ಟಾಂಗ ಪ್ರಣತರಾಗುವುದು ವಿರಕ್ತರ ಸಮಯಾಚಾರವಾಗಿದೆ. ಅವರಲ್ಲಿ ಹಿರಿಯ-ಕಿರಿಯ ಎಂಬ ವಯೋಮಾನ-ಸ್ಥಾನಮಾನಗಳ ಭೇದಭಾವ ಎಳ್ಳಷ್ಟೂ ಬರಕೂಡದು. ವಿರಕ್ತರ ಈ ನಿರಹಂಕಾರ ವೃತ್ತಿಯನ್ನು ಶ್ರೀಗಳವರಲ್ಲಿ ಅನೇಕ ಸಲ ಪ್ರತ್ಯಕ್ಷ ಕಂಡಿದ್ದೇವೆ.
ಶ್ರೀಗಳವರು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ್ದರು. ಪರಳಿಯ ಪ್ರಕರಣದಲ್ಲಿ ವಿಜಯ ಸಂಪಾದಿಸಿದ್ದರು, ಶಿವಯೋಗಮಂದಿರವೆಂಬ ಆದರ್ಶ ಯೋಗಾಶ್ರಮವನ್ನು ಕಟ್ಟಿ ಬೆಳೆಸಿದ್ದರು. ಇಡಿಯ ನಾಡಜನರು ಅವರನ್ನು ತೋಂಟದ ಶ್ರೀ ಸಿದ್ಧಲಿಂಗಯತಿಯ ಅವತಾರವೆಂದು ಬಗೆದು ಪೂಜಿಸುತ್ತಿದ್ದರು. ಆದರೆ ಶ್ರೀಗಳವರಿಗೆ ಈ ವಿಶಾಲಕೀರ್ತಿಯ ಸೋಂಕು ತಗುಲಲಿಲ್ಲ. ಅವರು ತಮ್ಮನ್ನು ಹಿರಿಯರೆಂದು ಎಂದೂ ಬಗೆಯಲಿಲ್ಲ. ಅವರು ವಿನಯದ ಸಾಕಾರ ಮೂರ್ತಿಯಾಗಿದ್ದರು.
ವಿರಕ್ತ ಸಮಯಾಚಾರದಲ್ಲಿ ಇನ್ನೊಂದು ಆಚರಣೆ ಆದರ್ಶವಾಗಿದೆ. ಶಿವಪೂಜೆಯಾದ ನಂತರ ಮೂರ್ತಿಗಳ ಪಾದಪೂಜೆ ಮಾಡಿ ಪಾದೋದಕ ಪಡೆದು ಪ್ರಸಾದವನ್ನು ಸ್ವೀಕರಿಸುವುದು ವಿಶಿಷ್ಟವಾಗಿದೆ. ಶ್ರೀಗಳವರು ಎಂದೂ ತಮ್ಮ ಪಾದಪೂಜೆಯನ್ನು ಮಾಡಿಸಿಕೊಳ್ಳಲಿಲ್ಲ.
ಒಂದು ಸಲ ಶ್ರೀಗಳವರು ಮುಂಡರಗಿಯಿಂದ ಹೂವಿನಹಡಗಲಿಗೆ ದಯಮಾಡಿಸುವ ತಯಾರಿಯಲ್ಲಿದ್ದರು ಸ್ನಾನವಾಯಿತು ನೆರೆಯಲ್ಲಿ ಮೂರ್ತಿಗಳೊಬ್ಬರ ಪಾದಪೂಜೆ ನಡೆಯುತ್ತಿತ್ತು. ಶ್ರೀಗಳವರು ಕೂಡಲೇ ಅಲ್ಲಿಗೆ ದಯಮಾಡಿಸಿ ಸಾಷ್ಟಾಂಗವೆರಗಿ ಪಾದೋದಕ ಸ್ವೀಕರಿಸಿ ಬಂದರು. ಮೂರ್ತಿಗಳು ಯಾರೇ ಇರಲಿ, ಭೇದಭಾವ ಮಾಡುತ್ತಿರಲಿಲ್ಲ. ಲಾಂಛನಕ್ಕೆ ಶರಣೆನ್ನುತ್ತಿದ್ದರು. ಪೂಜ್ಯರು ನಿರಂಹಕಾರ ವೃತ್ತಿಗೆ ಇದೊಂದು ಜ್ವಲಂತ ಉದಾಹರಣೆ.
ಪವಾಡ ಪುರುಷರು
ಶಿವಯೋಗಿಗಳಲ್ಲಿ ಅಣಿಮಾದಿ ಅಷ್ಟಸಿದ್ಧಿಗಳು ತಾವಾಗಿಯೇ ಬಂದು ನೆಲೆಸಿರುತ್ತವೆ. ಅವರ ಆತ್ಮಬಲ ಅಂತಹುದು. ಆದರೆ ನಿಜವಾದ ಯೋಗಿಯೂ ಅವನ್ನು ತೋರಗೊಡುವುದಿಲ್ಲ. ತೋರಗೊಡಲು ಬಾರದು. ಸಿದ್ಧಿಗಳನ್ನು ಪ್ರಕಟವಾಗಿ ಪ್ರಯೋಗಿಸಿ ಧರೆ ಯೋಗಿಯೂ ಒಬ್ಬ ಮಾಟಗಾರನಂತೆಯೇ ಸರಿ. ಈ ಮಾಟವೂ ಮಾಯೆಯೇ. ಈ ಮಾಯೆಯನ್ನು ಪ್ರದರ್ಶಿಸಿ ನಾವು ಜನರನ್ನು ಮರುಳುಮಾಡಿ ಬೇಕಾದಷ್ಟು ಕೀರ್ತಿಯನ್ನು ಸಂಪತ್ತನ್ನೂ ಪಡೆಯಬಹುದು ಆದರೆ ಕೊನೆಗೆ ಯೋಗಿಯು ಈ ಮಾಯೆಯ ಮಾಟಕ್ಕೆ ತಾನೇ ಎರವಾಗಿ ವಿನಾಶಕ್ಕೆ ಗುರಿಯಾಗಬೇಕಾಗುತ್ತದೆ. ಇದು ಶಾಶ್ವತವಾದ ಅನುಭವದ ಮಾತು.
ದ್ಯಾಂಪುರದ ಶ್ರೀ ಚನ್ನಕವಿಗಳು ರಚಿಸಿದ ಶ್ರೀಗಳವರ ಪುರಾಣದಲ್ಲಿ ನಾವೆಲ್ಲಿಯೂ ಪವಾಡಗಳನ್ನು ಕಾಣುವುದಿಲ್ಲ ಆದುದರಿಂದ ಅವರು ಪವಾಡ ಪುರುಷರಲ್ಲವೆನ್ನಬಹುದೇ? ಅವರ ಅನೇಕ ಪವಾಡಗಳು ಅಜ್ಞರನ್ನು ಎಚ್ಚರಿಸುವುದಕ್ಕಾಗಿ ಲೋಕಹಿತಕ್ಕಾಗಿ ತಾವಾಗಿಯೇ ಘಟಿಸುತ್ತಿದ್ದವು. ಅಂತಹ ಸನ್ನಿವೇಶಗಳನ್ನು ನಾವು ಪ್ರತ್ಯಕ್ಷ ಕಂಡಿದ್ದೇವೆ.
ಒಮ್ಮೆ ಅನಿರೀಕ್ಷಿತವಾಗಿ ಸೊಲ್ಲಾಪುರಕ್ಕೆ ದಯಮಾಡಿಸುವ ಪ್ರಸಂಗ ಬಂದಿತು.ಆಗ ಶ್ರೀಗಳವರು ರೇಲ್ವೆಯಲ್ಲಿ ಪ್ರವಾಸ ಮಾಡುತ್ತಿರಲಿಲ್ಲ. ಅಂದು ಈ ನಿಯಮವನ್ನು ಮುರಿಯಲೇಬೇಕಾಯಿತು. ಸೊಲ್ಲಾಪುರದ ಶ್ರೀ ವೀರೇಶ್ವರ ಶಿವಶರಣವೆಂದರೆ ಶ್ರೀಗಳವರಿಗೆ ಬಹಳ ಗೌರವ ಮತ್ತು ಅಭಿಮಾನ, ಶರಣರ ಆರೋಗ್ಯ ಚಿಂತಾಜನಕವೆಂದು ತಾರು ಬಂದಿತ್ತು. ಶ್ರೀಗಳವರ ಆರೋಗ್ಯವು ಚೆನ್ನಾಗಿರಲಿಲ್ಲ ಆದರೂ ಶರಣರ ಯೋಗಕ್ಷೇಮವನ್ನು ವಿಚಾರಿಸುವ ಆತುರತೆಯಿಂದ ರೇಲ್ವೆ ಪ್ರವಾಸಕ್ಕೆ ಸಿದ್ಧರಾದರು. ಟಾಂಗಾ ಬಂದಿತು ಸ್ಟೇಶನ್ನಿಗೆ ಬಂದೆವು (ಬಹುಶಃ ಆಗ ಗದಗಿನಲ್ಲಿ ಮುಕ್ಕಾಮು ಮಾಡಿದ್ದರು) ಗಾಡಿ ಹೊರಡುವುದರಲ್ಲಿತ್ತು ಗಡಿಬಿಡಿಯಿಂದ ಓಡಾಡಿದೆವು ಎಲ್ಲಿಯೂ ಸೀಟು ಸಿಗಲಿಲ್ಲ ಕೊನೆಗೆ ಅವಸರ ಮಾಡಿ ಬ್ರೆಕ್ಕಿನ ಡಬ್ಬಿಯಲ್ಲಿ ಹತ್ತಿ ಕುಳಿತೆವು.
ಟಿಕೆಟ್ ಚೆಕ್ಕರನು ಬಂದು ನಮಗೆ ಮನಬಂದಂತೆ ಅಂದನು, ಬಹಳ ತಾಸು ಕೊಟ್ಟನು.ಇಷ್ಟೆಲ್ಲ ಆದರೂ ಶ್ರೀಗಳವರು ಮೌನವಾಗಿಯೇ ಇದ್ದರು. ಮುಂದಿನ ಸ್ಟೇಶನ್ನು ಬರುವಷ್ಟರಲ್ಲಿ ಟಿಕೆಟ್ ಚೆಕ್ಕರನಿಗೆ ವಿಪರೀತವಾಗಿ ಹೊಟ್ಟೆಕಡಿತ ಬಂದಿತ್ತು ಅವನು ‘ಸ್ವಾಮಿ ಕ್ಷಮಿಸಿ’ ಎಂದು ಗೋಗರೆದನು ಅವನಿಗೆ ಶ್ರೀಗಳವರು ಅಭಯಹಸ್ತ ತೋರಿದರು. ಅವನು ತುಸು ಹೊತ್ತಿನಲ್ಲಿ ಸ್ವಸ್ಥನಾಗಿ ಬಂದು ಮತ್ತೆ ಶ್ರೀಗಳವರಿಗೆ ನಮಸ್ಕರಿಸಿ ಯೋಗ್ಯವಾದ ಕಂಪಾರ್ಟಮೆಂಟನಲ್ಲಿ ನಮಗೆ ಸ್ಥಳ ಮಾಡಿಕೊಟ್ಟನು. ಶ್ರೀಗಳವರನ್ನು ಪವಾಡ ಪುರುಷರೆಂದು ಕಾಣುವುದಕ್ಕಿಂದ ಅವರೊಬ್ಬ ಸತ್ಕ್ರಿಯಾನಿಷ್ಠ ವಿರಕ್ತಸ್ವಾಮಿ ಮತ್ತು ನಿಸ್ವಾರ್ಥ ಸಮಾಜೋದ್ಧಾರಕ ಕಾರಕರ್ತರೆಂದು ಬಗೆಯುವಲ್ಲಿಯೇ ಅವರ ವ್ಯಕ್ತಿತ್ವದ ಘನತೆ-ಗೌರವ ಮೆರಗು ಮೂಡಿ ಮಿಂಚುತ್ತದೆ