ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-೩ :ಅನುಭಾವ

ಲೇಖಕರು: ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಕೆರೆ ಹಳ್ಳ ಭಾವಿಗಳು ಮೈದೆಗೆಡದೆ

ಗುಳ್ಳೆ,ಗೊರಚೆ,ಚಿಪ್ಪು ಕಾಣಬಹುದು

ವಾರಿಧಿಯು ಮೈದೆಗೆದಡೆ

ಮುತ್ತು ರತ್ನಂಗಳ ಕಾಣಬಹುದು.

ಕೂಡಲ ಸಂಗನ ಶರಣರು

ಮನದೆರೆದು ಮಾತನಾಡಿದರೆ ಲಿಂಗವೇ ಕಾಣಬಹುದು.

            ಮಾನವ ವಿಶ್ವಕೋಶದ ಪುಟಗಳನ್ನು ತೆರೆದು ನೋಡಿದಾಗ ಅಲ್ಲಿ ದೊರಕುವ ಜ್ಞಾನ ಅಘಾಧ. ಹಲ ಹಲವು ಮಾರ್ಗಗಳಿಂದ ಹೆಕ್ಕಿ ಹೆಕ್ಕಿ ನೋಡಿದಡೆ ಹಲ ಹಲವು ಜ್ಞಾನ ಸಂಪದ  ನಮ್ಮ ಮಸ್ತಿಷ್ಕಕ್ಕೆ ಸ್ಪರ್ಷವಾಗುತ್ತದೆ.ಷಡ್ ದರ್ಶನಗಳು,ವೇದ ಆಗಮ ಉಪನಿಷತ್ತುಗಳು,ಅಷ್ಟಾದಶ ಪುರಾಣಗಳು,ಗೀತಾ,ಬೈಬಲ್,ಕುರಾನ್,ಗ್ರಂಥ ಸಾಹೇಬ, ಟ್ರಿಪೀಠಕ ಇನ್ನೂ ಹತ್ತು ಹಲವು ಸಾರ ಸಂಗ್ರಹ ನಮ್ಮ ವಿಶ್ವದಲ್ಲಿ ದೊರಕುತ್ತದೆ.ಇವುಗಳೆಲ್ಲ ಸಾರುವ ತತ್ವ ಒಂದೇ ಮಾನವೋಭ್ಯುದಯ. ಯಾವ ಗ್ರಂಥವು ಸಹ ಪ್ರಾಣಿ ಪಕ್ಷಿಗಳಿಗೊಸುಗ, ತರು ಮರಾಗಳಿಗಾಗಿ ರಚನೆ ಆಗಿಲ್ಲ. ಸಕಲ ಚರಾಚರ ಪ್ರಣಿಗಳೆಲ್ಲ ಈ ಸೃಷ್ಠಿಯ ಆಧೀನ.ಇದಕ್ಕೆ ಮಾನವನು ಹೊರತಲ್ಲ.ಇದರ ಪ್ರಜ್ಞೆ ಅವನಿಗಿದ್ದರೂ ಸಹ ‘ಈ ಹೊಗೆಯು ಬೆಂಕಿಗೆ ಆವರಿಸಿದಾಗ ಹೇಗೆ ಬೆಂಕಿ ನಮಗೆ ಅಸ್ಪಷ್ಟ ಗೋಚರವಾಗುತ್ತದೆಯೋ ಹಾಗೆ ಈ ಮಾನವನಿಗೆ ಮಾಯೆ ಎನ್ನುವ ಹೊಗೆ ಆವರಿಸಿ ಇವನ ಅಸ್ತಿತ್ವವನ್ನೇ ನಾಶಮಾಡಿ ಬಿಟ್ಟಿದೆ’. “ಕೋsಹಂ? (ನಾನು ಯಾರು? ),ಕುತ್ರಾತ್ ಆಗತವನ್?(ಎಲ್ಲಿಂದ ಬಂದೆ?), “ಕಿಮ್ ಕರ್ತುಂ ಆಗತಂ? (ಏನು ಮಾಡಲು ಬಂದೆ).ಪುನಃ ಕುತ್ರ ಗಂತವ್ಯಂ?( ಮರಳಿ ಎಲ್ಲಿಗೆ ಹೊರಡಬೇಕಿದೆ?)” ಎನ್ನುವ ಪ್ರಜ್ಞೆಯನ್ನು ಕಳೆದುಕೊಂಡು ಮಾಯಾ ಛಾಯೆಗೆ ಬಲಿಯಾಗಿ, ತ್ರೈ ಮಲಗಳಿಗೆ ಸಿಲುಕಿ,ಸ್ವಾರ್ಥ ಬದುಕನ್ನು ನೆಚ್ಚಿ ಹೊನ್ನು ಹೆಣ್ಣು ಮಣ್ಣಿಗಾಗಿ ಬದುಕನ್ನ ಮೀಸಲಿರಿಸಿದ್ದಾನೆ. ಈ ಕಲುಷಿತವಾದ ಮಾನವನ ಹೃದಯವನ್ನು ತಿಳಿಯಾಗಿಸಲು ಈ ಎಲ್ಲ ವಿಶ್ವಕೋಶಗಳು ರಚನೆಯಾಗಿವೆ.ಒಂದೊಂದು ಕೋಶಗಳು ಒಂದೊಂದು ಅರ್ಥ ಪ್ರಾಧಾನ್ಯತೆಯನ್ನು ಎತ್ತಿ ಹಿಡಿಯುತ್ತವೆ.

 ಒಂದರಲ್ಲಿ “ಅಹಂ ಬ್ರಹ್ಮಾಸ್ಮಿ” ಎಂದು ಹೇಳಿದರೆ, ಒಂದು “ಆಸೆಯೇ ದುಃಖಕ್ಕೆ ಮೂಲ” ಎಂದು ಸಾರುತ್ತದೆ.ಒಂದು “ಪರೋಪಕಾರವೆ ಪುಣ್ಯ, ಪರ ಪೀಡನೆಯೇ ಪಾಪ” ಎಂದರೆ ಒಂದು “ಅಹಿಂಸಾ ಪರಮೋ ಧರ್ಮ:” ಎಂದು ತಿಳಿಸುತ್ತದೆ. ಹೀಗೆ ಒಂದೊಂದು ಹಲವು ಮಾರ್ಗಗಳ ಮೂಲಕ ಮಾನವ ಅಭ್ಯುದಯದ ದಿವ್ಯ ಜ್ಞಾನ ಸಾಗರಗಳಾಗಿವೆ. ಇವುಗಳನ್ನೆಲ್ಲ ಕ್ರೋಢೀಕರಿಸಿ ಒಂದು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ತೆಗೆದ ಸಾರವೇ ನಮ್ಮ ಪುರಾತನ ಶರಣರ “ವಚನ ಸಾಹಿತ್ಯ”.

              ಇದು ಯಾರೋ ಕಟ್ಟೆಗೆ ಕುಳಿತು ಕಾಲ ಹರಣ ಮಾಡಿ ಬರೆದ ರಚನೆಯಲ್ಲ,ಇದು ಯಾರೋ ಗರತಿ ಹಾಡಿದ ಗರತಿ ಪದವಲ್ಲ,ಇದು ಜನಪದರ ಜಾನಪದವು ಅಲ್ಲ,ಇದು ಮನೋರಂಜನೆ ನೀಡುವ ಹಾಸ್ಯ ಲಾಸ್ಯ ಸಾಹಿತ್ಯವಲ್ಲ, ಯಾರಿಗೋ ಎಲ್ಲಿಯೋ ಹೊಳೆದ ಮಸ್ತಿಷ್ಕ ಜನ್ಯ ಜ್ಞಾನವು ಅಲ್ಲ. ಇದು ಏನೆಂದರೆ ಅಂತರಂಗದ ಅರಿವಿನ ಮನೆಯಲ್ಲಿ ಅನುಭವ ಎನ್ನುವ ತಾಯಿ ಬೇರಿನಿಂದ ಸೃಷ್ಟಿಯಾದ ಬೇಡಿದವರಿಗೆ ಬೇಡಿದ್ದನ್ನು ನೀಡುವ ಕಲ್ಪ ವೃಕ್ಷ. ಅರಿವಿನರಮನೆಯ ಅರಿವಿನನುಭಾವಿಗಳ ಅರಿವೇ ಈ ವಚನಗಳು. ಇವುಗಳು ಪ್ರಪಂಚದಾದ್ಯಂತ ಪ್ರಸಾರವಾಗಲು ಎಲ್ಲರೂ ಇವುಗಳನ್ನ ಒಪ್ಪಿ ಅಪ್ಪಳು ಕಾರಣ ಇವುಗಲು “ಅನುಭವ ಜನ್ಯ ಜ್ಞಾನ”ಸಿದ್ಧಾಂತ ಎಂಬುದಕ್ಕಾಗಿ .ಬಸವಾದಿ ಶರಣರು ತಾವು ಬದುಕಿನಲ್ಲಿ ನಡೆದು ಆ ನಡೆಯ ಮೂಲಕ ಅವತರಿಸಿದ ಮಹಾ ಖನಿಜವೆ ಇಂದು ನಮಗೆಲ್ಲ ದಾರಿ ದೀಪವಾಗಿ ಬೆಳಕು ಚೆಲ್ಲುತ್ತಿವೆ. ಇದಕ್ಕೆಲ್ಲ ಮೂಲ ತಳಹದಿ “ಅನುಭವ.”. ಈ ಅನುಭವ  ತಾಯಿಯ ಮೂಲಕ ಜನಿಸಿದ ಮಗುವೇ “ಅನುಭಾವ”. ಅರಿವು ತನ್ನ ಸಾರ್ಥಕತೆಯನ್ನು ಪಡೆಯಬೇಕೆಂದರೆ ಅದಕ್ಕೆ ಅನುಭಾವವೆ ಪ್ರಾಮುಖ್ಯ. ಇದನ್ನೇ ವಚನಕಾರರು “ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ, ಲಿಂಗಾನುಭಾವದಿಂದ ನಿಮ್ಮನ್ನ ಕಂಡು ಎನ್ನ ಮರೆತೇ ಕೂಡಲ ಸಂಗಮ ದೇವಾ” ಎಂದರು.

 ಅವರ ಅಂತರಂಗದ ಅರಿವು ಬಹಿರಂಗಕ್ಕೆ ಬಂದದ್ದು “ಅನುಭಾವ”ಎಂಬ  ರೂಪ ತಾಳಿ.ಇಲ್ಲಿ ಅನುಭವ ಮತ್ತು ಅನುಭಾವಕ್ಕೆ ಬಹಳ ಅನ್ಯುನ್ಯತೆ ಇದೆ.ಇವುಗಳು ಒಂದನ್ನ ಬಿಟ್ಟು ಒಂದು ಇರಲಾರದು.ನಮ್ಮರಿವು ಸಾರ್ಥಕ್ಯವಾಗಲು ನಮ್ಮ ಅನುಭಾವವೇ ಮೂಲ.ಇದನ್ನರಿತು ಆಚರಿಸಿದವರು ಬಸವಾದಿ ಶರಣರು.

       “ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು.”

   ಎಂದರು ಸಿದ್ಧರಾಮೇಶ್ವರರು.

ಶರಣರು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಂಪೂರ್ಣ ಅನುಭವ ಪಡೆದು ಮಹಾಜ್ಞಾನಿಗಳಾದರು. ಆವೊಂದು ಆಂತರಿಕ ಜ್ಞಾನವೆ ಅವರನ್ನು ಪರಿಪೂರ್ಣತೆಯಡೆಗೆ ಕರೆದುಕೊಂಡು ಹೋಗಲು ಸಾಧ್ಯ ಮಾಡಿಕೊಟ್ಟಿತು ಹಾಗಾಗಿ ಅವರ ಈ ಸಾಧನೆ ಸದಕಾಲ ಜೀವಂತಿಕೆಯಾಗಿ ಉಳಿಯಿತು. ಈವೊಂದು ಅನುಭವದಿಂದ ಸಿದ್ಧರಾಮೇಶ್ವರರು ನಾವು ಮಾಡುವ ಪ್ರತಿಯೊಂದು ಕೆಲಸದಿಂದ ಅನುಭವ ಸಾಧನೆಯಾಗಬೇಕು ಎನ್ನುತ್ತಾರೆ ಇಲ್ಲಿ.

ಹಾಗೆಯೇ ಅವರ ಹಾದಿಯಲ್ಲಿಯೇ 19 ಹಾಗೂ 20 ನೆಯ ಶತಮಾನದಲ್ಲಿ ಜನಿಸಿ ಬಸವಾದಿ ಶರಣರ ಬದುಕನ್ನ ತಮ್ಮ ಬದುಕಿನೊಂದಿಗೆ ಸಮಾಜಕ್ಕೆ ಪುನಃ ತೋರಿಸಿದ ಮಹಾನುಭಾವಿ,ಕಾರಣಿಕ ಪುರುಷರು “ಪೂಜ್ಯ ಶ್ರೀ ಶಿವಯೋಗ ಮಂದಿರದ ಕುಮಾರ ಶಿವಯೋಗಿಗಳು.”

ಇವರು ಬದುಕಿದ ಬದುಕು ಹೇಗಿತ್ತೆಂದರೆ ಬದುಕಿಗೆ ಮರಳಿ ಹೇಗೆ ಬದುಕಬೇಕು ಎನ್ನುವ ಪಾಠ ಕಲಿಸಿದಂತಿತ್ತು.ಇವರು ಕೈಗೊಂಡ ಕಾರ್ಯಗಳು ಕೇವಲ ಕಾರ್ಯಗಳಾಗಿರದೆ ಇಂದಿನ ಪೀಳಿಗೆಗೆ ಬದುಕ ರೂಪಿಸಿದೆ.

*ಧರ್ಮವೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅಳುತ್ತಿರುವಾಗ ಅದಕ್ಕೆ ಒಂದು ಸ್ಥಾನಮಾನವನ್ನು ಪುನಃ ಕಲ್ಪಿಸುವಲ್ಲಿ “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡವೆನ್ನುವ ಸಿದ್ಧಾಂತವನ್ನು ನಡೆದು ತೋರಿಸಿ ಧರ್ಮದ ಉಳಿವಿಗಾಗಿ  ಬಸವನಾಗಿ ಬಾಳಿದವರು.೧೨ನೇ ಶತಮಾನದಲ್ಲಿ ಎಲ್ಲಾ ಧರ್ಮದ ಜ್ಞಾನಿಗಳನ್ನು  ಕವಿಗಳನ್ನು ಮತ್ತು ತತ್ವಜ್ಞಾನಿಗಳನ್ನು  ಎಲ್ಲೆಲ್ಲಿಂದಲೋ ತಂದು ಒಟ್ಟು ಗೂಡಿಸುವಲ್ಲಿ ಒಂದು ಸಾಮಾಜಿಕ-ಧಾರ್ಮಿಕ ಸಂಸತ್ತನ್ನು ಅನುಭವ ಮಂಟಪವನ್ನು  ನಿರ್ಮಾಣ ಮಾಡುವಲ್ಲಿ ಬಸವಣ್ಣನವರು ಯಶಸ್ವಿಯಾದರೆ

20 ನೆಯ ಶತಮಾನದ ಎಲ್ಲ ಧರ್ಮ ಪ್ರವರ್ತಕರನ್ನು, ಸಾಹಿತಿಗಳನ್ನು, ಸಂಗೀತಗಾರರನ್ನು,ಕಲಾಗಾರರನು,ಕವಿಗಳನ್ನು

ಒಂದೇ ಶಿವಯೋಗ ಮಂದಿರ ಎಂಬ ಸಂಸ್ಥೆಯ ಮೂಲಕ ರಚಿಸಿ ಇಡೀ ವಿಶ್ವಕ್ಕೆ ಬೆಳಕು ನೀಡುವಲ್ಲಿ ಯಶಸ್ವಿಯಾದವರು ಶ್ರೀ ಕುಮಾರ ಶಿವಯೋಗಿಗಳು.

*ದೇಶಗುರಿಯಾಗಿ ಹೋಗದೆ ಕಾಮ ಗುರಿಯಾಗಿ ಬೆಂದು ಹೋಗದೆ, ನೀ ಗುರಿಯಾಗಿ ಹೋಗಬೇಕು ಎನ್ನುವ ಅಲ್ಲಮನ ಅನುಭಾವದಂತೆ ತಾರುಣ್ಯ ಭರಿತರಾಗಿದ್ದ ಹಾಲಯ್ಯನವರು ಹುಬ್ಬಳ್ಳಿಯ ನಗರದಲ್ಲಿ ಭಿಕ್ಷೆಗೆ ಹೋದಾಗ ಒಬ್ಬ ಯೌವ್ವನ ಭರಿತ ಮಹಿಳೆ ಇವರಿಗೆ ಆಕರ್ಶಿತಳಾಗಿ ಭಿಕ್ಷೆಯನ್ನು ನೀಡದೇ ಇವರ ಜೋಳಿಗೆಯನ್ನು ಹಿಡಿದು ಎಳೆದಾಗ ಶಿವಯೋಗ ದ ಶಕ್ತಿ ಪುಂಜವಾದ ಹಾಲಯ್ಯನವರ ದೇಹಕ್ಕೆ ಮುಳ್ಳು ಚುಚ್ಚ್ಚಿದಂತಾಗಿ ತಕ್ಷಣವೇ ಆ ಜೋಳಿಗೆಯನ್ನು ಅಲ್ಲಿಯೇ ಬಿಟ್ಟು ಕೊಸರಿ ಹೋಗುವಲ್ಲಿ ಮಾಯಾ ಕೋಲಾಹಲವನ್ನು ಮೆಟ್ಟಿದ ಅಲ್ಲಮನಾದರು.

*शान्ति की इच्छा होतो पेहेले इच्छा को शन्त करो।

” ಶಾಂತಿ ಬೇಕು ಅನ್ನುವುದಾದರೆ ಮೊದಲು ಬಯಕೆಗಳನ್ನು ಶಂತಮಾಡು” ಎನ್ನುವ ಅನುಭಾವದ ನುಡಿಯಂತೆ ಕುಮಾರ ಶ್ರೀಗಳು ಅಂತರಂಗ ಶುದ್ಧಿ ಬಹಿರಂಗ ಶುದ್ಧಿ ಎಂದು ವೈಚಾರಿಕವಾಗಿ ನಡೆಯದೇ ಅದನ್ನ ರೂಢಿಸಿಕೊಂಡು ಬದುಕಿದವರು.ಪ್ರಸಾದಕ್ಕೆ ಕುಳಿತಾಗ ರುಚಿಯಾದ ಆಹಾರ ಮುಟ್ಟಲಿಲ್ಲ,ಸೇವಕರು  ರುಚಿಯಾದ ಆಹಾರ ನೀಡಿದರೆ ದೇಹಕ್ಕೆ ಅತಿ ರುಚಿಯಾದ ಆಹಾರ ಸಲ್ಲ ಇದು ಹಾದಿಯನ್ನು ಬಿಟ್ಟು ಹೋಗುತ್ತದೆ ಎನ್ನುವ ತತ್ವ ವರಿತ ಶಿವಯೋಗಿಗಳು ಅದಕ್ಕೆ ಪಾದೊದಕವನ್ನು ಬೆರೆಸಿ ಸ್ವೀಕರಿಸಿದ ಮಹಾ ಸಾತ್ವಿಕ ಸಂತರು.

*”ಜನ ಸೇವೆಯೆ ಜನಾರ್ದನ ಸೇವೆ” ಎನ್ನುವ ತತ್ವ ಅನುಭಾವಿಸಿಕೊಂಡ ಮಹಾನುಭವಿ ಶ್ರೀಗಳು ಕುಮಾರರು.ಹಾನಗಲ್ ಮಠಕ್ಕೆ ಅಧಿಕಾರಿಗಳಾಗಿ ಕೆಲವೇ ವರ್ಷದಲ್ಲಿ ಆ ಭಾಗದಲ್ಲಿ ಬರಗಾಲ ಬಂದು ಎಲ್ಲ ಜನಗಳು ಆಹಾರವಿಲ್ಲದೆ ಪರಿತಪಿಸುವಾಗ ಸ್ವತಃ ತಮ್ಮ ಮಠದ ಮೂಲಕ ದಾಸೋಹ ವ್ಯವಸ್ಥೆ ಕೈಗೊಂಡು ಪ್ರಸಾದ ನೀಡಿದವರು ಅಷ್ಟೇ ಅಲ್ಲದೆ ಮಠದ ಎಲ್ಲ ಧಾನ್ಯಗಳು ಖಾಲಿ ಆಗಿ ಪ್ರಸಾದಕ್ಕೆ ಕೊರತೆ ಬಂದಾಗ “ಹಿಡಿದ ವೃತವ ಬಿಡದಿರಬೇಕು”ಎನ್ನುವಂತೆ ತಮ್ಮ ಮಠದ ಒಂದು ಭಾಗವನ್ನೇ ಮಾರಾಟಮಾಡಿ ಬಂದ ಹಣದಿಂದ ದಾಸೋಹ ಮಾಡಿ “ಬರಗಾಲ ಬಂಟ” ನಾದವರು .

*”ಸಮಾಜವೇ ನಾನು ನಾನೇ ಸಮಾಜ”ಎನ್ನುವ ಸಿದ್ಧಾಂತಕೆ ಸಾಕ್ಷರು ಗುರುಗಳು. ಶ್ರೀಗಳ ಬಟ್ಟೆ ಹರಿದು ಅದಕ್ಕೆ ಅಲ್ಲಲ್ಲಿ ತ್ಯಾಪಿ ಹಾಕಿ ಹೊಲಿದ ಬಹಳ.ಜೀರ್ಣಗೊಂದ ಬಟ್ಟೆಯನ್ನು ನೋಡಿದ ಸೇವಕರು ಗುರುಗಳು ಇರಿಸಿದ ಕಾಣಿಕೆಯಲ್ಲಿ ಹೊಸದೊಂದು ಬಟ್ಟೆಯನ್ನು ತಂದು ಕೊಟ್ಟದ್ದನು ನೋಡಿ ಗುರುಗಳು ಸಂತಸ ವ್ಯಕ್ತಪಡಿಸುವರೆಂದು ಖುಷಿಯಲ್ಲಿ ಬಂದು ಮುಂದೆ ನಿಂತಾಗ ಗುರುಗಳು ಸಮಾಜದ ಹಣದಿಂದ ಇದನ್ನು ಹೋಲಿಸುವ ಅಧಿಕಾರ ನಿಮಗೆ ಯಾರು ನೀಡಿದವರು.ಸಮಾಜದ ಹಣ ಭಕ್ತರು ನನಗಾಗಿ ನನ್ನ ದಿನದ ಬದುಕನ್ನು ಸುಂದರಾಗೊಳಿಸಲು ನೀಡಿರುತ್ತಾರೆ ಏನು? ಅವರು ನೀಡಿದ ಪ್ರತಿ ಹಣವೂ ಸಹ ನ್ಯಾಯಯುತವಾದ ಸಮಾಜ ಸೇವೆಗೆ ಸಲ್ಲಬೇಕು ನಮಗೆ ಅಲ್ಲ ಸಮಾಜವೇ ಬಟ್ಟೆ ಗೆಟ್ಟು ಬೆಂಡಾಗಿದೆ ಅಂತಹದರಲ್ಲಿ ಈ ನನ್ನ  ದೇಹಕ್ಕೆ ಹೊಸಬಟ್ಟೆ ಧರಿಸಿದರೆ ಏನು ಅರ್ಥ ಎಂದು ಸೇವಕರನ್ನು ತೆಗಳಿ ಆ ಬಟ್ಟೆಗೆ ಖರ್ಚಾದ ಹಣವನ್ನು ತಿರುವವರೆಗೆ ನೀವು ಉಚಿತವಾಗಿ ಸೇವೆ ಮಾಡಿ ಎಂದು ಕಠೋರವಾಗಿ ನುಡಿದು ಸರಳತೆಯನ್ನು ಬದುಕಿನುದ್ದಕ್ಕೂ ಅಳವಡಿಸಿದ ಶ್ರೀಗಳು ಮಹಾನುಭಾವರು ಅಲ್ಲವೇ. ಪರರ ಹಿತದಲ್ಲಿ ತನ್ನ ಹಿತವನ್ನು ಕಾಣು ಎನ್ನುವ ಅನುಭಾವದ ನುಡಿಗೆ ಇವರು ಸಾಕ್ಷರಲ್ಲವೆ.?

*ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ

ವಿಶ್ವಾಸವೆಂಬ ಬತ್ತ ಬಲಿದು ಉಂಡು

ಸುಖಿಯಾಗಿರಬೇಕೆಂದ ಕಾಮ ಭೀಮ ಜೀವಧನದೊಡೆಯ.”

ಎನ್ನುವ ವಚನದಂತೆ

ಮತ್ತೊಬ್ಬರ ಅರಸೊತ್ತಿಗೆಯ ಗುಲಾಮರಾಗಿ ಬದುಕವುದಕ್ಕಿಂತಲೂ ಭೂಮಿಗೆ ಆಳಾಗಿ ದುಡಿದು ಬದುಕುವುದು ಶ್ರೇಷ್ಠ’ ಎನ್ನುವ ವಿಚಾರ ಧಾರೆಯನ್ನು ಇಟ್ಟುಕೊಂಡು ಹಾಗೂ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಕೃಷಿಗೆ ಪ್ರಾಧಾನ್ಯತೆಯನ್ನು ಪರಿಚಯಿಸಿ  ಕೊಟ್ಟವರು ಶರಣರಾದರೆ ಅದನ್ನು 20 ನೆ ಶತಮಾನದಲ್ಲಿ ರೂಢಿಗೆ ತರುವಲ್ಲಿ ಯಶಸ್ವಿಯಾದವರು ಕುಮಾರ ಶಿವಯೋಗಿಗಳು.

ಕುಮಾರ ಶ್ರೀಗಳ ಜೀವಿತ ಕಾಲದಲ್ಲಿ, ಶ್ರೀಗಳು ಕೈಗೊಂಡ ಹೊಸ ಹೊಸ ಕೃಷಿ ಕಾರ್ಯಗಳು ಅಚ್ಚರಿ ಮೂಡಿಸುತ್ತವೆ.ಇದೊಂದು ಕೃಷಿ ಕ್ರಾಂತಿ ಎಂದರೆ ತಪ್ಪಾಗಲಾರದು. ಏಕೆಂದರೆ ‘ ಕರ್ಷತೊ ನಾಸ್ತಿ ದುರ್ಭಿಕ್ಷಮ್’ ಎನ್ನುವಂತೆ  ನಾಡು ಸುಭಿಕ್ಷೆ ಇಂದಿರಲು ಕೃಷಿಯನ್ನು ಮಾಡಲೇ ಬೇಕು ಎಂದು ತಿಳಿದ ಶ್ರೀಗಳು, ‘ ಅನ್ನಾತ್ ಪ್ರಜಃ ‘ ಎನ್ನುವಂತೆ ಅನ್ನವೇ ಪ್ರತೀ ಜೀವಿಗಳಿಗೆ ಬದುಕಲು ಮೂಲ ಆಧಾರ,ಅದನ್ನು ಮರೆತರೆ ಮುಂದೊಂದು ದಿನ ನಾಡಲ್ಲಿ ತಿನ್ನಲು ಅನ್ನವಿಲ್ಲದೇ ಸಾಯುವ ಪರಿಸ್ಥಿತಿ ಎದುರಾಗಬಹುದು ಎಂದು ತಮ್ಮ ಸೂಕ್ಷ್ಮ ದೃಷ್ಟಿಯಿಂದ ಅರಿತ ಶ್ರೀಗಳು ವ್ಯವಸಾಯಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು.ನಾಡಲ್ಲಿ ಶಿವಾನುಭವ ಬೋಧೆಯನ್ನು ಮಾಡುತ್ತಾ ಜೊತೆಜೊತೆಗೆ ಸರಿಯಾದ ವ್ಯವಸಾಯ ಕ್ರಮ ತಿಳಿಯದೇ ಬೇಸತ್ತು ಕೃಷಿಯನ್ನು ಕೈ ಬಿಟ್ಟು ನಿರಾಶರಾದ ಜನರಲ್ಲಿ, ಕೃಷಿಯಬಗ್ಗೆ  ಅರಿವನ್ನು ಮೂಡಿಸಿ ಅದರ ಪ್ರಾಮುಖ್ಯತೆಯನ್ನು ತಿಳಿಸಿ,ಋತುಮಾನಕ್ಕೆ ಅನುಗುಣವಾಗಿ ಹೇಗೆ ಕೃಷಿ ಮಾಡಬೇಕು ಎಂಬುದನ್ನು ತಿಳಿಸುತ್ತಿದ್ದರು. “ಕೋಟಿವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು”ಎಂದರಿತ ಶ್ರೀಗಳು ಪ್ರಥಮವಾಗಿ ಕರ್ನಾಟಕದಲ್ಲಿ

ಕೃಷಿ ವಿಜ್ಞಾನವು ಕಾಲಿಟ್ಟಾಗ ಅದರ ಉಪಯೋಗವನ್ನು ಪಡೆದವರಲ್ಲಿ ಅಗ್ರ ಸ್ಥಾನ ನಮ್ಮ ಶ್ರೀಗಳಿಗೆ ಸಲ್ಲುತ್ತದೆ.

ಕೃಷಿ ವಿಜ್ಞಾನದ ಕಚೇರಿಯಿಂದ ಹೆಚ್ಚಿನ ಹಣವನ್ನು ತೆತ್ತು ಮೊದಲ ಬಾರಿಗೆ  ಟ್ರಾಕ್ಟರ್ ಅನ್ನು ತರಿಸಿ ಶಿವಯೋಗ ಮಂದಿರದಲ್ಲಿ ಊಳಿಸಿದರು.ನೂರಾರು ದನಕರುಗಳನ್ನು ಸಾಕಿ ಗೊಬ್ಬರವನ್ನು ಸಂಗ್ರಹಿಸಿ ಕಾಲ ಕಾಲಕ್ಕೆ ತಕ್ಕಂತೆ ಬೆಳೆಗಳಿಗೆ  ಗೊಬ್ಬರವನ್ನು ಕೊಡಿಸುತ್ತಿದ್ದರು. ಶಾಖಾ ಶಿವಯೋಗ ಮಂದಿರದಲ್ಲಿ ಮೊದಲ ಬಾರಿಗೆ ನೀರೆತ್ತುವ ಯಂತ್ರವನ್ನು ಖರೀದಿಸಿ ಅದರಿಂದ ನೀರೆತ್ತಿ ಕಬ್ಬನ್ನು ಬೆಳೆದರು.ಹಾಗೆ ಕ್ಯಾಸನೂರು ಗ್ರಾಮದಲ್ಲಿ ಶ್ರೀಗಳು 100 ಎಕ್ರೆ ಕ್ಷೇತ್ರದಲ್ಲಿ ಆಧುನಿಕ ಕೃಷಿ ಸಾಧನಗಳನ್ನು ಬಳಸಿ ವ್ಯವಸಾಯ ಮಾಡಿಸಿದರು. ಮಹಾಕೂಟದ ಹೊಲದಲ್ಲಿ ಅಲ್ಲಿಯ ನೀರಿನಿಂದ ಅಂದು ಬಾಳೆಯನ್ನು ಬೆಳೆದು ಸುತ್ತ ಎಲ್ಲ ಗ್ರಾಮದವರಿಗೆ ಕೃಷಿಯಲ್ಲಿ ಉತ್ತೇಜನ ನೀಡುತ್ತಿದ್ದರು.

ವ್ಯವಸಾಯದಲ್ಲಿ ಪರಿಣಿತ ಹೊಂದಿದ ತಜ್ಞರನ್ನು ಕರೆಸಿ ಸುತ್ತಮುತ್ತಲಿನ ಗ್ರಾಮದ ಕೃಷಿಕರಿಗೆ ಮಾಹಿತಿಯನ್ನು ಕೊಡಿಸುತ್ತಿದರು. ಕೃಷಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು.ಹೀಗೆ ಭಾರತೀಯ ಮೂಲ ಕಸುಬಾದ ಕೃಷಿಯನ್ನು ಎತ್ತಿ ಹಿಡಿಯಲು ಜನ ಜಾಗೃತಿ ಮೂಡಿಸಿದರು.ನೋಡಿ ಒಬ್ಬ ಸ್ವಾಮಿಯಾದವರು ಧರ್ಮಜಾಗೃತಿಯೊಂದಿಗೆ,ಸಮಾಜದ ಪ್ರತಿಯೊಬ್ಬರನ್ನೂ ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತಲು ಹೇಗೆ ಸ್ವತಃ  ಶ್ರಮಿಸಿದರು ಎಂಬುದು ಶ್ರೀಗಳು ಕೇವಲ ಲಿಂಗ ಪೂಜೆಯನ್ನು ಮಾಡುತ್ತಾ ಅಧ್ಯಾತ್ಮವನ್ನು ಮಾತ್ರ ಬೋಧಿಸದೆ ಮಾನವನು ಬದುಕಲು ಬೇಕಾದ ಮಾರ್ಗಗಳನ್ನು ರೂಪಿಸುವಲ್ಲಿ ತಮ್ಮ ಅನುಭಾವವನ್ನು ತೋರಿಸಿಕೊಟ್ಟವರು.

*ದಯವಿಲ್ಲದ ಧರ್ಮ ಯಾವುದು”ಎನ್ನುವ ತತ್ವವನ್ನು ಮೈಗೂಡಿಸಿಕೊಂಡಿದ್ದ ಶ್ರೀಗಳು ಪ್ರಾಣಿ ಬಲಿ ಕೊಡುವಲ್ಲಿ ಸ್ವತಃ ತಾವೇ ಹೋಗಿ ತಿಳಿ ಹೇಳಿ ಧರ್ಮ ಮಾರ್ಗದತ್ತ ನಡೆಸಿದ್ದು.ಹಿಂದೂ ಧರ್ಮದ ದೇವತಾ ಸ್ವರೂಪಿಯಾದಂತಹ ಗೋವುಗಳನ್ನು ಸಾಕಿ ಅವುಗಳ ಸೇವೆಯಲ್ಲಿ ಪಾತ್ರರಾಗಿ,ಅವುಗಳಿಂದ ಬಂದ ಗೋಮಯದಿಂದ ವೀರಶೈವ ಧರ್ಮದ ಲಾಂಛನವಾದ ಭಸ್ಮವನ್ನು ಆಗಮ ವಿಧಿ ಪೂರ್ವಕ ತಯಾರಿಸಿ ವಿತರಿಸಿದ್ದು. ಜಗದಗಲ ಮುಗಿಲಗಳ ಮಿಗೆಯಗಳ  ಆದ ವೀರಶೈವ ಲಿಂಗಾಯತರ ಭವ ಪ್ರಪಂಚವನ್ನು ನೀಗಿ ಶಿವ ಪ್ರಪಂಚವನ್ನು ಕಲ್ಪಿಸುವುದು ಈ ಇಷ್ಟಲಿಂಗವು.ಇದರ ನಿರ್ಮಾಣ ಪದ್ಧತಿಯಂತೆ ಆಗದಿದ್ದಾಗ ಅದನ್ನು ಸೂಕ್ಷ್ಮವಾಗಿ ಅವಲೋಕಿಸಿದ ಶ್ರೀಗಳು ಆಗಮನುಸಾರ  ಪಂಚ ಸೂತ್ರಲಿಂಗಗಳನ್ನು ವಿಧಿ ಪೂರ್ವಕವಾಗಿ ತಯಾರಿಸಿ ಸಮಾಜಕ್ಕೆ ನೀಡಿದವರು. ಹೀಗೆ ಅಸ್ಟಾವರಣಕ್ಕೆ ಅಂಗವಾಗಿ ಪಂಚಾಚರಕ್ಕೆ ಪ್ರಾಣವಾಗಿ ಷಟಸ್ಥಲಕ್ಕೆ ಆತ್ಮವಾಗಿ ಬದುಕಿ ಆ ಅನುಭಾವವನ್ನು ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಗೂ ನಮಗೆ ನೀಡಿದವರು  ಶ್ರೀ ಕುಮಾರ ಶ್ರೀಗಳು.

*ಇವರ ಆಚರಣೆ ಎಂತಹ ಕಠೋರವಾಗಿತ್ತು ಎಂದರೇ ಉಸಿರಿರುವ ಕೊನೆಯವರೆಗೂ  “प्राण जाए पर वचन न जाई” ಎನ್ನುವ ಸಿದ್ಧಾಂತವನ್ನು ಅನುಭವಿಸಿಕೊಂಡು ಬದುಕಿದವರು.

ಅಂತಿಮಾವಸ್ತೆಯಲ್ಲಿ ಸಮಾಜ ಸಮಾಜ ಎಂದು ಉಸಿರು ಬಿಡುವ ಪ್ರಸಂಗದಲ್ಲಿ ಎಲ್ಲರನ್ನೂ ಕರೆದು ‘ ಹೊರಗಿನ ಕ್ರಿಯೆ ಕೆಟ್ಟರೆ ಅದು ನಿಮ್ಮ ದೋಷ.ಒಳಗಿನ ಧ್ಯಾನ ಕೆಟ್ಟರೆ ಅದು ನಮ್ಮ ಲೋಪ ಹಾಗಾಗಕೂಡದು ಎಚ್ಚರದಿಂದ ಮುಂದಿನ ಕಾರ್ಯ ನಡೆಸಿರಿ ಸಮಾಜವೇ ನಮ್ಮ ಉಸಿರು,ಮತ್ತೆ ಸಮಾಜೋದ್ಧರಕ್ಕಾಗಿ ನಾವು ಪುನಃ ಜನಿಸುತ್ತವೆ’ ಎಂದು ಹೇಳಿ ಲಿಂಗದಲ್ಲಿ ಬೆರೆಯುತ್ತಾರೆ.

ಈ ಒಂದು ಪ್ರಸಂಗ ಅವರ ಸಮಗ್ರ ಜೀವನದ ಬದುಕಿನ ಸಾರವನ್ನೆ ಎತ್ತಿ ಹಿಡಿದು ಅವರು ಎಂತಹ ಅನುಭಾವಿಗಳು ಆಗಿದ್ದರು ಎನ್ನುವುದನ್ನು ಅವರನ್ನು ಕಾಣದ,ಅವರ ಬಗ್ಗೆ ತಿಳಿಯದ ಹಲವಾರು ಜನಗಳಿಗೆ ಮಾದರಿ.

ಕೆರೆ ಹಳ್ಳಗಳು ಗುಳ್ಳೆ ಗೋರಚೆ ಚಿಪ್ಪುಗಳನ್ನು ನೀಡಿದರೆ,ಸಮುದ್ರ ಸಾಗರಗಳು ಮುತ್ತು ರತ್ನಗಳನ್ನು ನೀಡಿದರೆ

ಒಬ್ಬ ಶಿವಯೋಗಿ ಸಮಗ್ರ ಮನುಕುಲಕ್ಕೆ ಇತಿಹಾಸವನ್ನೇ ನೀಡುತ್ತಾನೆ ಎನ್ನುವುದಕ್ಕೆ ಸಾಕ್ಷಿ ಭೂತರು, ಅನುಭಾವದ ಕಡಲು ನಮ್ಮ ಕುಮಾರ ಶಿವಯೋಗಿಗಳು.

ಸಮಾಜಕ್ಕಾಗಿ ಸೇವೆ ಸಲ್ಲಿಸಿದ ತನ್ನ ತನುವ

ಶಿವಯೋಗಕ್ಕ ಮೀಸಲಿಟ್ಟ ತನ್ನ ಮನವ

ಧರ್ಮ ಸಂಸ್ಕೃತಿಗೆ ಮೀಸಲಿರಿಸಿದವ ತನ್ನ ಧನವ

ಇವನೇ ನಮ್ಮ ಯುಗಪುರುಷ ಕುಮಾರ ಶಿವಯೋಗಿ ಎಂಬ ಮಹಾನುಭಾವ.

ಅನುಭಾವದಿಂದ ಹುಟ್ಟಿತ್ತು ಲಿಂಗ

ಅನುಭಾವದಿಂದ ಹುಟ್ಟಿತು ಜಂಗಮ

ಅನುಭಾವದಿಂದ ಹುಟ್ಟಿತ್ತು ಪ್ರಸಾದ

ಅನುಭಾವದನುವಿನಲ್ಲಿ ಗುಹೇಶ್ವರ

ನಿಮ್ಮ ಶರಣ ಅನುಪಮಾಸುಖಿ..

Related Posts