ಲೇಖಕರು : ಪೂಜ್ಯ ಶ್ರೀ ವಿವೇಕಾನಂದ ದೇವರು ಕಲ್ಯಾಣೇಶ್ವರ ಹಿರೇಮಠ ಗುಣದಾಳ
“ತತ್ವ” ಎಂಬ ಸಂಸ್ಕೃತ ಪದಕ್ಕೆ ಬೇರೆ ಬೇರೆ ಅರ್ಥಗಳನ್ನು ಕೊಡುತ್ತೇವೆ. ಉದಾಹರಣೆಗೆ ಸಾಂಖ್ಯರ ಪ್ರಕಾರ ತತ್ವ ಎಂದರೆ ಮನಸ್ಸು ಬುದ್ಧಿ ಮುಂತಾದ 25 ತತ್ವಗಳು. ವಿಶಿಷ್ಠಾದ್ವೈತದ ಪ್ರಕಾರ ತತ್ವಗಳು ಮೂರು (ತತ್ವತ್ತಯ) ಬ್ರಹ್ಮನ್, ಚಿತ್, ಮತ್ತು ಅಚಿತ್, ಹೀಗೆ ಭಾರತೀಯರ ಪ್ರಕಾರ ತತ್ವಜ್ಞಾನ ಅಥವಾ ತತ್ವಶಾಸ್ತ್ರವೆಂದರೆ ಅಂತಿಮ ತತ್ವಗಳ ಜ್ಞಾನ ಎಂದಾಗುತ್ತದೆ. ಪಾಶ್ಚಾತ್ಯ ತತ್ವಶಾಸ್ತ್ರಜ್ಞರು ಅಂಥ ತತ್ವಗಳ ಬಗ್ಗೆ ಚರ್ಚಿಸಿದರೂ, ಅವು ಇರಲು ಸಾಧ್ಯವೇ ಎಂದೂ, ಒಂದು ವೇಳೆ ಇದ್ದರೆ ಅವುಗಳನ್ನು ಕುರಿತು ಚರ್ಚಿಸುವುದು ವಿಜ್ಞಾನದ ಕರ್ತವ್ಯವೇ ಹೊರತು, ತತ್ವಶಾಸ್ತ್ರದ ಕರ್ತವ್ಯವಲ್ಲ ಎಂದು ಅಭಿಪ್ರಾಯಪಡುತ್ತಾರೆ. ಪಾಶ್ಚಾತ್ಯರಿಗೆ ತತ್ವಶಾಸ್ತ್ರ ಕೇವಲ ಒಂದು ಬೌದ್ಧಿಕ ಚಟುವಟಿಕೆಯೇ ಹೊರತು ಜೀವನವನ್ನು ರೂಪಿಸುವ ವಿದ್ಯೆಯಲ್ಲ, ಅದರ ಬಗ್ಗೆ ಚಿಂತಿಸಬಹುದು, ಅದರ ಬಗ್ಗೆ ವಿಫುಲವಾಗಿ ಬರೆಯಬಹುದು. ಆದರೆ ಭಾರತೀಯರ ಪ್ರಕಾರ ತತ್ವಶಾಸ್ತ್ರವು ನಮ್ಮ ಜೀವನವನ್ನು ರೂಪಿಸುವ ಮುಕ್ತಿಗೆ ಮಾರ್ಗದರ್ಶನ ನೀಡುವ ವಿದ್ಯೆ, ಅದು ಮೋಕ್ಷಶಾಸ್ತ್ರ ಅದಕ್ಕೂ ಸೈದ್ದಾಂತಿಕ (Theoretical) ಪ್ರಾಮುಖ್ಯವಿದೆ, ಆದರೆ ಅದಕ್ಕಿರುವ ಅನುಷ್ಠಾನಿಕ (Practical) ಪ್ರಾಮುಖ್ಯ ಹೆಚ್ಚು ಇದೆ. ತತ್ವಜ್ಞಾನವನ್ನು ಪಡೆಯುವುದು ಮುಕ್ತಿ ಪಡೆಯುವುದಕ್ಕೆ ಹೊರತು, ಕೇವಲ ಕುತೂಹಲವನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ ಅಲ್ಲ.
“ತತ್ವಪದಗಳನ್ನು ಸ್ವರವಚನಗಳು ಎಂತಲೂ ಕರೆಯುತ್ತಾರೆ. ಈ ಸ್ವರವಚಗಳು 12ನೇಯ ಶತಮಾನದ ಶಿವಶರಣರ ಕಾಲಕ್ಕಿಂತಲೂ ಪೂರ್ವದಲ್ಲಿ ಇದ್ದಿರಬಹುದು ಎಂದು ಹೇಳಬಹುದು. ಅಕ್ಕ–ಅಲ್ಲಮ ಪ್ರಭುವಿನಂಥವರ ಹಾಡುಗಳನ್ನು ನೋಡುವಾಗ, ಇಂತ ಪ್ರಕಾರ ಒಮ್ಮಗೇ ಹುಟ್ಟಿಕೊಂಡಿತೇ? ಎಂಬ ಬೆರಗು ಮೂಡಿಸುತ್ತದೆ. ಬೆಡಗಿನ ಹಾಡುಗಳು ಹುದುಗಿಕೊಂಡಿರುವ ರಹಸ್ಯಾರ್ಥ, ಅವುಗಳ ಆಕರ್ಷಕ ಬರವಣಿಗೆ ಇವಕ್ಕೂ ಪೂರ್ವದಲ್ಲಿ ಇದ್ದಿರಬಹುದಾದ ಹಾಡುಗಳ ಸಾಧ್ಯತೆಯತ್ತ ಬೆರಳು ಮಾಡಿ ತೋರಿಸುತ್ತದೆ.”
ತತ್(ಪದ) ಎಂದರೆ- ಪರಮಾತ್ಮ, ‘ತ್ವ’ ಎಂದರೆ-ಜೀವಾತ್ಮ. ಜೀವಾತ್ಮ ಮತ್ತು ಪರಮಾತ್ಮಗಳ ತಾದ್ಯಾತ್ಮವೇ ‘ತತ್ವ’ವೆಂದು ಶರಣ ಉರಿಲಿಂಗಪೆದ್ದಿ ಹೇಳುತ್ತಾರೆ. ಮಾನವ ಚರಿತ್ರೆಯ ಉಗಮದ ಜೊತೆಗೆ ದೈವಿಕ ಭಾವನೆ ಕೂಡ ಕಾಣಿಸಿಕೊಂಡಿತೆನ್ನಬೇಕು. ಜಗತ್ತಿನಲ್ಲಿ ಮೊಟ್ಟ ಮೊದಲು ಆದಿತತ್ವ ಮೂಲವಾದ ‘ವಾಕ್’ ಹೊರಹೊಮ್ಮಿತು. ಈ ವಾಕ್‍ರೂಪಿಗಳು ಮಧುರವಾಗಿದ್ದರಿಂದ ಶ್ರುತಿಗಳು ಎನಿಸಿಕೊಂಡವು. ಇವು ಅಪೌರುಷೇಯವಾಗಿ ದೈವ, ಆತ್ಮ ಮುಂತಾದ ವಿಷಯಗಳಿಗೆ ಸಂಬಂಧಿತವಾದ ಈ ಅರಿವು ದರ್ಶಿತವಾದದ್ದು. ಈ ದೈವ ಆತ್ಮಗಳನ್ನು ಕುರಿತು ತಿಳಿಸಿಕೊಡುವ ತತ್ವಗಳೇ ವಚನಗಳು, ಹಾಗೂ ತತ್ವಪದಗಳಾಗಿ ರೂಡಿಯಾಗಿವೆ. ಇವುಗಳನ್ನು ಅರಿತುಕೊಂಡು ನಡೆಯುವುದೇ ಪುರುಷಾರ್ಥಗಳಲ್ಲಿ ಶ್ರೇಷ್ಠವಾದ ಮೋಕ್ಷ/ಮುಕ್ತಿ ದೊರೆಯಲು ಸಾಧ್ಯ. ಭರ್ತೃಹರಿ ಹೇಳಿದಂತೆ, ‘ಲೌಕಿಕ ಭೋಗಗಳು ಕಾಲಕ್ರಮೇಣ ನಮ್ಮನ್ನು ಬಿಟ್ಟು ಹೋಗುತ್ತವೆ. ಅವು ನಮ್ಮನ್ನು ತ್ಯಜಿಸಿದರೆ ನಮಗೆ ದುಃಖವಾಗುತ್ತದೆ. ನಾವೇ ಅವುಗಳನ್ನು ತ್ಯಜಿಸಿದರೆ ಸುಖವುಂಟಾಗುತ್ತದೆ.’ ಎಲ್ಲ ಬಗೆಯ ಭೋಗಗಳಿಂದ ಮುಕ್ತವಾದ, ಪರಿಶುದ್ಧವಾದ ನಿರ್ವಿಕಲ್ಪ ಸ್ಥಿತಿಯೇ ಮುಕ್ತಿ, ಶಿವಯೋಗ, ಲಿಂಗಾಂಗ ಸಾಮರಸ್ಯ, ಅನುಭಾವ, ಅದ್ವೈತ, ಕೈವಲ್ಯ ಎಂದು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಈ ಮುಕ್ತಿ ಸ್ಥಿತಿಯನ್ನು ಕುರಿತು ತತ್ವಪದ(ಸ್ವರವಚನ)ಗಳು ಹಾಗೂ ವಚನಗಳು ವಿಶಾಲಾರ್ಥದಲ್ಲಿ ಭಿನ್ನಭಿನ್ನವಾಗಿ ಹೇಳಿರುವುದನ್ನು ಕಾಣುತ್ತೇವೆ.
ಶರಣೆ ನೀಲಮ್ಮ ರಚಿಸಿದ ತತ್ವಭರಿತವಾದ ಜೋಗುಳು ಪದ್ಯದಲ್ಲಿ ಅಳಿಯನಾದ ಚನ್ನಬಸವಣ್ಣನ ಮೇಲೆ ಶಿಶುಗಳು ಸಾಕ್ಷತ್ ಶಿವನ ಸ್ವರೂಪದಲ್ಲಿರುವ ಪರಂಜ್ಯೋತಿಗಳು, ಮುಕ್ತಿಯನ್ನು ಹೊಂದಲು ಯೋಗದಲ್ಲಿ ಬರುವ ಕಂಡಲಿನಿ ಶಕ್ತಿಯನ್ನು ಜಾಗೃತ ಮಾಡಿಕೊಳ್ಳುವ ಬಗೆಯನ್ನು ಕುರಿತು ಹೇಳಿ, ಶಿಶುಗಳು ಯಾವುದನ್ನು ಅರಿಯದೇ ಮುಗ್ದತೆಯಿಂದ ಇರುವ ಹಾಗೆ ಮುಕ್ತಿಯನ್ನು ಪಡೆದವರು ಎಲ್ಲವನ್ನು ಅರಿತು ಅರಿಯದವರಂತೆ ಇರುತ್ತಾರೆ. ಅಂತಹ ಅಳಿಯ ಶಿಶುವಿನ ಮೇಲೆ ಯೋಗದಿಂದ ಮುಕ್ತಿಯನ್ನು ಹೊಂದುವ ಕುರಿತು ರಚಿಸಿದ ಪದ್ಯ,
“ಜೋ ಜೋ ಎನ್ನ ಪರಮಹಂಸ
ಜೋ ಜೋ ಎನ್ನ ಪರಂಜ್ಯೋತಿ||ಪ||
ಗುದವ ಬಿಗಿದೊತ್ತಿ ಅನಲಜ್ವಾಲೆ ಪಲ್ಲವಿಸಿ
ಮುದುಡಿಕೊಂಡಿಹ ಸರ್ಪ ಹೆಡೆಯನೆತ್ತಿ
ಗದಗದಿಪ ಪವನ ಗ್ರಂತಿಯನೊಡೆದು ಪಶ್ಚಿಮದ
ಕದವ ತೆಗೆದೊಳಗೆ ಜ್ಯೋತಿಯ ಕಂಡ ಶಿಶುವೆ||1||”

ಇಲ್ಲಿ ಯೋಗದಲ್ಲಿ ಬರುವ ಕುಂಡಲಿನ ಶಕ್ತಿಯನ್ನು ಜಾಗೃತ ಪಡಿಸಿಕೊಂಡ ಶಿಶುವಿನ ಕುರಿತು ಹೇಳಿದ ನುಡಿ. ಗುದವ ಬಿಗಿದೊತ್ತಿ ಸಿದ್ದಾಸನ ಹಾಕಿ, ಮೂಲಾಧಾರ ಚಕ್ರವನ್ನು ಜಾಗೃತಗೊಳಿಸಿಕೊಂಡು, ವಾಯು ಕುಂಭಕವಾದಾಗ ಅನಲಜ್ವಾಲೆ ಅಂದರೆ ಬಿಸಿಯ ಅಗ್ನಿರೂಪದ ಗಾಳಿ ಮೇಲೆದ್ದಾಗ, ಸರ್ಪಾಕಾರದ ಕುಂಡಲಿನಿ ಜಾಗೃತವಾಗಿ ಸ್ವಾಧಿಷ್ಠಾನ, ಮನಿಪೂರಕ, ಅನಾಹತ, ವಿಶುದ್ಧಿ, ಆಜ್ಞೆಯ, ಬ್ರಹ್ಮರಂದ್ರ ಶಿಖಾಚಕ್ರ, ಪಶ್ಚಿಮ ಹೀಗೆ ಒಂಬತ್ತು ಚಕ್ರಗಳ ಮುಖಾಂತರ ವಾಯು ಎಲ್ಲ ಚಕ್ರಗಳಲ್ಲಿ ಹರಿದಾಡಿದಾಗ ಎಲ್ಲ ಗ್ರಂಥಿಗಳು ತೆಗೆದು ಪಶ್ಚಿಮ ಚಕ್ರದಲ್ಲಿರುವ ಜ್ಯೋತಿಯನ್ನು ಕಾಣುವುದಾಗಿದೆ. ಅಂದರೆ ಮನಸ್ಸನ್ನು ಸಂಪೂರ್ಣವಾಗಿ ಪರಮಾತ್ಮನಲ್ಲಿ ಒಂದಾಗಿಸುವ ಶಿವಯೋಗದ ಸ್ಥಿತಿಯನ್ನು ಮುಕ್ತಿ ಎಂದು ಹೆಳುತ್ತಾರೆ. ಅಂತಹ ಮುಕ್ತಿಯನ್ನು ಕಂಡಿರುವ ಶಿಶುವೆ ಎಂದು ಹೇಳುತ್ತಿದ್ದಾಳೆ. ಈ ವಿಧಾನವು ಮುಕ್ತಿಯನ್ನು ಪಡೆಯುವಲ್ಲಿ ಯೋಗ ದರ್ಶನದಲ್ಲಿ ಹೇಳಿರುವ ಒಂದು ಕ್ರಿಯೆ ಎಂದು ಹೇಳಿದ್ದಾರೆ. ಮುಂದೆ ಈ ಯೋಗ ಜಾಗೃತಿಯ ಕುರಿತು ಹೇಳುತ್ತಿದ್ದಾರೆ.
“ಅಂಬೆಗಾಲಡಿಯಿಟ್ಟು ಆಧಾರಮಂ ಬಲಿದು
ಅಂಬುಜಾರ ತಾಣದಲ್ಲಿ ನಿಂದು
ಕಂಭವನೆ ದಾಟಿ ಮೇಲಣ ಬಾಗಿಲನೆ ಹಾಯ್ದು
ಕುಂಭಿನಿಯ ಮೊಲೆವಾಲನುಂಡು ದಣಿಯದ ಶಿಶುವೆ||2||
ಮುಂದಿನ ನುಡಿಯಲ್ಲಿ ಮಗು ಹೇಗೆ ಅಂಬೆಗಾಲಡಿಯಿಟ್ಟು ನಡಿದಾಡುವಂತೆ ಮುಮುಕ್ಷು ಆಧಾರ ಚಕ್ರಕ್ಕೆ ಜಾಗೃತಗೊಳಿಸಿ, ಎಲ್ಲ ಚಕ್ರಗಳಲ್ಲಿ ಲಿಂಗವನ್ನು ನಿಲ್ಲಿಸುತ್ತ, ಮೇಲೆರಿ ಆಜ್ಞಾ ಚಕ್ರವೆಂಬ ಕಂಬವನ್ನು ದಾಟಿ, ಮೇಲಿನ ಬಾಗಿಲಿನಿಂದ ಅಂದರೆ ಬ್ರಹ್ಮರಂಧ್ರದಲ್ಲಿ ಹಾಯ್ದು ಈ ಬ್ರಹ್ಮರಂಧ್ರದಲ್ಲಿರುವ ಅಮೃತ ಸೇವನೆ ಮಾಡಿದರೆ ದಣಿವು, ಆಯಾಸ, ಹುಟ್ಟು-ಸಾವುಗಳನ್ನು ದೂರ ಮಾಡಿದ ಸ್ಥಿತಿಯನ್ನು ಪಡೆದವನು ಚೆನ್ನಬಸವಣ್ಣ ಎಂದು ಶಿಶುವಿನ ಮೇಲೆ ಹೇಳಿದ್ದಾಳೆ. ಇಲ್ಲಿ ಕುಂಡಲಿನಿ ಶಕ್ತಿಯನ್ನು ಜಾಗೃತಿಗೊಳಿಸಿ ಮುಕ್ತಿಯನ್ನು ಪಡೆಯುವುದರ ಕುರಿತು ಹೇಳಿದರೆ, ಗುರುವಿನಿಂದ ಅನುಗ್ರಹ ಪಡೆದು ಇಷ್ಟಲಿಂಗಾರಾಧನೆಯ ಮುಂದೆ ಬೇರೆ ಯಾವ ಅಮೃತವು ಸಮಬಾರದೆಂದು ಉರಿಲಿಂಗಪೆದ್ದಿಯು ತಮ್ಮ ವಚನದಲ್ಲಿ,
“ಅಮೃತಕ್ಕೆ ಹಸಿವುಂಟೆ? ಜಲಕ್ಕೆ ತೃಷೆಯುಂಟೆ?
ಮಹಾಜ್ಞಾನಸ್ವರೂಪಂಗೆ ವಿಷಯವುಂಟೆ?
ಸದ್ಗುರು ಕಾರುಣ್ಯವ ಪಡೆದು ಲಿಂಗಾರ್ಚನೆಯಂ ಮಾಡುವ
ಮಹಾ ಭಕ್ತಂಗೆ ಬೇರೆ ಮುಕ್ತಿಯ ಬಯಕೆ ಉಂಟೆ?
ಅವರುಗಳಿಗೆ ಅದು ಸ್ವಯಂಭು ಸಹಜಸ್ವಭಾವ.
ಇನ್ನು ತೃಪ್ತಿ ಅಪ್ಯಾಯನ ಅರಸಲುಂಟೆ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.||”
ಗುರುವಿನಿಂದ ಪಡೆದ ಇಷ್ಟಲಿಂಗ ಪೂಜೆಯೆ ಮುಕ್ತಿಯಾಗಿದೆ. ಈ ಮುಕ್ತಿಯನ್ನುವಂತಹ ಅಮೃತವನ್ನು ಸವಿದ ಮೇಲೆ ಬೇರೆ ಯಾವುದೆ ಮುಕ್ತಿಯ ಕುರಿತು ಬಯಸುವುದಿಲ್ಲ. ಗುರುವಿನಿಂದ ಜ್ಞಾನ ಪಡೆದ ಆ ಮಾರ್ಗದಲ್ಲಿ ನಡೆಯುವುದೇ ಮುಕ್ತಿ ಎಂದು ಉರಿಲಿಂಗಪೆದ್ದಿಗಳು ಅನೇಕ ರೂಪಕಗಳನ್ನು ಕೊಟ್ಟು ಹೇಳಿದರೆ, ಅಲ್ಲಮಪ್ರಭುಗಳು ಜ್ಞಾನ ಸಂಪಾದನೆ ಮತ್ತು ಅದರ ರಕ್ಷಣೆ, ತತ್ವಜ್ಞಾನದ ಹಾಗೂ ಮುಕ್ತಿಯ ವಿವರಣೆಯನ್ನು ಕುರಿತು ತ್ರಿಕರಣಂಗಳು ಬಂಧನವನ್ನುಂಟುಮಾಡಬಲ್ಲವು. ಸಾಧಕನಾದವನು ಅವುಗಳಿಂದ ಮುಕ್ತನಾಗಬೇಕೆಂದು, ತಮ್ಮ ತತ್ವಪದದಲ್ಲಿ:
“ಅಲ್ಲೆ ಬಿದ್ದಿದೆ ಮೂಕುತಿ ಅದ
ಬಲ್ಲಡರಸಿ ತಾರೆ ನಲ್ಲರ ಜಾಣೆ||ಪ||”
ಈ ಪಲ್ಲವಿಯಲ್ಲಿ ಯೋಗಿಯಾದವನ ಅನುಭವ ಜ್ಞಾನದಿಂದ ಮೂಡಿ ಬಂದುದು. ಮೂಕುತಿ-ಮುಕುತಿ, ಮುಕ್ತಿಯೆಂಬ ಮಾನಿಕ್ಯವು ಶರೀರದಲ್ಲಿಯೆ ಇರಲು ಅಲ್ಲಿ ಇಲ್ಲಿ ಎಲ್ಲೆಲ್ಲಿ ಏಕೆ ಹುಡುಕುತ್ತಿರುವಿ. ಅಂಗದಲ್ಲಿಯೇ ಲಿಂಗದೇವನಿದ್ದಾನೆ. ಅರಸಿರಿ, ಹುಡುಕಿರಿ ಜ್ಞಾನಿಗಳ, ಗುರುವಿನ ಸಾನಿಧ್ಯದಿಂದ ಮಾರ್ಗದರ್ಶನ ಪಡೆದು ಮುಕ್ತಿ ಹೊಂದುವಂತವರಾಗಿರೆಂಬುದನ್ನು ಪಲ್ಲವಿ ಮಾತುಗಳು ಸೂಚಿಸುತ್ತವೆ. ಇದೇ ರೀತಿ ಬಸವಣ್ಣನವರು ಸಹ ಮುಕ್ತಿಯನ್ನು ಅರಿಸಿಕೊಂಡು ಬೇರೆ ಕಡೆ ಹೊಗಬೇಡಿ ನಿಮ್ಮಲ್ಲಿಯೇ ಇದೆ. ಎಂದು ತಮ್ಮ ಒಂದು ವಚನದಲ್ಲಿ,
“ಹೊಲಬುಗೊಂಡರಸಬೇಡ, ಬಲಿತು ತರಬೇಡ,
ಒಲಿದೊಮ್ಮೆ ಶಿವಶರಣೆನ್ನಿರಯ್ಯಾ
ಒಂದು ಸೊಲ್ಲಿಗೆ ಮುಕ್ತಿ ಸಿದ್ಧಿ,
ಕೂಡಲಸಂಗಮದೇವಾ ಭಕ್ತಿಲಂಪಟನಾಗಿ.”
ಕಾಯಾ-ವಾಚಾ-ಮನಸಾ ತ್ರಿಕರಣ ಶುದ್ಧಿಯಿಂದ, ಭಕ್ತಿಯಿಂದ ಶಿವನ ಕುರಿತು ಜ್ಞಾನ ಪಡೆದುಕೊಂಡು ಆ ಶಿವನಿಗೆ ಶರಣು ಹೇಳಿ ಶರಣಾದರೆ ಮುಕ್ತಿಯಾಗಲು ಸಾಧ್ಯ. ಈ ಸರಳ ಮಾರ್ಗವನ್ನು ಬಿಟ್ಟು ಮುಕ್ತಿಗಾಗಿ ಸುತ್ತಾಡದೆ, ಯೋಗ್ಯ ಗುರುವಿನ ಮಾರ್ಗದರ್ಶನವನ್ನು ಪಡೆದು ಮುಕ್ತಿಯನ್ನು ಪಡೆದುಕೊ ಎಂದು ‘ಜ್ಞಾನವೇ’ ಮುಕ್ತಿಗೆ ಕಾರಣ ಎಂದು ಹೇಳುತ್ತಿದ್ದಾರೆ. ಮುಂದೆ ಅಲ್ಲಮಪ್ರಭುಗಳು ತಮ್ಮ ಸ್ವರವಚನದ ಒಂದನೆ ಚರಣದಲ್ಲಿಯು ಸಹ ಜ್ಞಾನದ ಬಗೆಯನ್ನು ಕುರಿತು, ಲಿಂಗವೇ ಜ್ಞಾನದ ಸಂಕೇತವಾಗಿ ಅದನ್ನು ಮಾನಿಕ್ಯವೆಂದು ರೂಪಕ ಕೊಟ್ಟು ಹೇಳುತ್ತಿದ್ದಾರೆ,
“ಕುಂಭದೊಳಗೊಂದು ಮಾಣಿಕ್ಯ
ಅದು ಬಲೆಯ ಬೀಸಿದಡೆ ಸಿಕ್ಕದು
ಕುಂಭ ಒಡೆಯಿತು, ಬಲೆ ಬರುದಾಯಿತು
ಮಾನಿಕ್ಯ ಗುಹೇಶ್ವರಂಗಾಯಿತಮ್ಮ||1||”
ಈ ಶರೀರ ಅಂಗ, ಇದು ದೇವನ ಅಂಗವೇ! ಅಂಗದೊಳಗೆ ಲಿಂಗವಿದೆ(ಮಾಣಿಕ್ಯವೆಂದರೆ ಲಿಂಗ). ಅದು ಬರಿ ಕ್ರಿಯೆಯಿಂದ ಸಿಗುವಂತಹದ್ದಲ್ಲ. ಅದಕ್ಕೆ ಸತತಾಭ್ಯಾಸ, ತತ್ವಗಳ ಅರಿವು, ಯೋಗಸಿದ್ಧಾಂತದ ತಿಳುವಳಿಕೆ ಸಾಧನೆ ಇವೆಲ್ಲವೂ ಅಂತರಂಗದಲ್ಲಿ ತಗ್ದತವಾಗಿರಬೇಕು. ಆಗ ಒಳಗಿರುವ ಲಿಂಗವು ಕಂಗೊಳಿಸುವುದು. ಮನಸ್ಸಿನ ಕಳವಳವ ನಿಲಿಸಿ ಕರಣಾದಿಗಳನ್ನು(ಕಾಯಾ-ವಾಚಾ-ಮನಸಾ) ವಿಕಾರಗಳೆಡೆಗೆ ಹರಿಯದಂತೆ ತಡೆದು, ಲಿಂಗಗುಣಗಳು ತುಂಬಿ ಕ್ರಿಯೆಯಲ್ಲಿ ತೊಡಗಬೇಕು. ಇಲ್ಲವಾದರೆ ಮಾಡಿದ ಕ್ರಿಯೆಯೇ ಹುಸಿಯಾಗಿ ಸಾಧಕನ ಸಾಧನೆ ವ್ಯರ್ಥವಾಗುತ್ತದೆಯೆನ್ನುತ್ತಾರೆ ಪ್ರಭುದೇವರು. ಸುಜ್ಞಾನವಿಡಿದು ಸತ್ಕ್ರೀಯನ್ನಾಚರಿಸಿದಾಗ ದೇಹಭಾವವಳಿದು, ದೇಹದಲ್ಲಿನ ಲಿಂಗಕಳೆ, ಮುಕ್ತಿ ಮಾಣಿಕ್ಯವಾಗಿ ತೋರುವುದು.
ಶರಣ ಸೊಡ್ಡಳ ಬಾಚರಸ ಮುಕ್ತಿ ದೊರೆಯಬೇಕಾದರೆ ಮನಸ್ಸು ನಿರ್ಮಲವಾಗಿರಬೇಕು ಎಂಬುದರ ಕುರಿತು,
“ಚಿತ್ತದಲ್ಲಿ ನಿರ್ಮಲನಾಗಿಪ್ಪಡೆ
ಮುಕ್ತಿ ಬೇರುಂಟೇ ಹೇಳಾ?”
ಎಂದು ಪ್ರಶ್ನೆಯನ್ನು ಕೇಳುವುದರ ಮುಖಾಂತ ಬುದ್ಧಿಯಲ್ಲಿ, ಮನಸ್ಸಿನಲ್ಲಿ ನಿರ್ಮಲವಾಗಿದ್ದರೇನೇ ಮುಕ್ತಿ. ಮತ್ತೊಂದು ’ಮುಕ್ತಿ’ ಬೇರೆ ಇಲ್ಲವೇ ಇಲ್ಲ ಎನ್ನುತ್ತಾನೆ. ಚಿತ್ತವನ್ನು ನಿರ್ಮಲವಾಗಿಟ್ಟುಕೊಳ್ಳುವುದೆಂದರೆ ಹೇಗೆ? ಅಂತರಂಗ ಬಹಿರಂಗಗಳೆರಡೂ ನಿರ್ಮಲವಾಗಿರಬೇಕು. ಬಹಿರಂಗವನ್ನು ನಿರ್ಮಲವಾಗಿಟ್ಟುಕೊಳ್ಳುವುದು ಸರಳ, ಹೊರಗಿನ ದೇಹದ ಮಲವ ತೊಳೆಯಬಹುದಲ್ಲದೆ ಮನವ ತೊಳೆಯಬಹುದೇ ಒಳಗಿನ ಮನಸ್ಸಿನ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳವುದು ಹೇಗೆ? ಹೇಳುವ ಎಲ್ಲ ಆಚಾರಗಳನ್ನು ಗುರುಕೃಪಾಮುಖದಿಂದ ಅಷ್ಟಾವರಣಗಳನ್ನು(ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ)ಗಳನ್ನಾಗಿ, ಪಂಚಾಚಾರಗಳನ್ನು(ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಹಾಗೂ ಭೃತ್ಯಾಚಾರ)ವನ್ನಾಗಿಯೂ ಷಟ್‍ಸ್ಥಲವನ್ನು (ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಹಾಗೂ ಐಕ್ಯಸ್ಥಲ)ವನ್ನಾಗಿಯೂ ಮಾಡಿಕೊಂಡು ಆಚರಣೆಯಲ್ಲಿ ತರುವುದು. ಇನ್ನೂ ಸರಳವಾಗಿ ಪ್ರಯೋಗದ ಮೂಲಕ ಹೇಳುವುದಾದರೆ- ಒಂದು ಬಾಟಲಿ(ದೇಹ)ಯಲ್ಲಿ ಮಸಿ(ಹೊಲಸು)ತುಂಬಿದೆ. ಆ ಬಾಟಲಿಯಲ್ಲಿ ಮಸಿಯನ್ನು ತೆಗೆದು ಶುದ್ಧ ನೀರನ್ನು ತುಂಬಬೇಕಾಗಿದೆ, ನಳದ ಮುಖಾಂತರ ನೀರಿನ ಧರೆಯನ್ನು ಹರಿಸುವುದು. ಮಸಿಯೆಲ್ಲ ಹೊರಹೋಗುತ್ತದೆ. ಹೀಗೆಯೇ ನೀರಿನ ಧಾರೆ ಹೆಚ್ಚಾದಂತೆ- ಮಸಿಯೆಲ್ಲ ಹೊರಹೋಗಿ ಶುದ್ಧ ನೀರಿನಿಂದ ತುಂಬುತ್ತದೆ. ಹೀಗೆಯೇ ಗುರುವಿನ ಜ್ಞಾನ(ಅರಿವಿನ)ದ ಧಾರೆಯೇ ಶುದ್ಧನೀರು. ಮನಸ್ಸಿನ (ಅಂತರಂಗದ ಕಲ್ಮಶ) ಅಶುದ್ಧತೆಯೆಲ್ಲ ಹೊರಹೋಗಿ ಚಿತ್ತ ಶುದ್ಧಿಯಾಗುತ್ತದೆ. ಅದಕ್ಕೆ ಈ ಜ್ಞಾನವನ್ನು ದೊರಕಿಸುವ ಮೂಲ ವ್ಯಕ್ತಿಯಾದ ಗುರುವಿನ ಸೇವೆ ಮಾಡಬೇಕು ಎಂದು ಮುಕ್ತಾಯಕ್ಕನ ವಚನ,
“ಜ್ಞಾನಮೂಲ ಗುರುಸೇವೆ ಎಂಬೆನು.
ಐಶ್ವರ್ಯಮೂಲ ಲಿಂಗಾರ್ಚನೆ ಎಂಬೆನು.
ಮೋಕ್ಷ ಮೂಲ ಘಟಸಂತೃಪ್ತಿ ಎಂಬೆನು ಅಜಗಣ್ಣ ಲಿಂಗವೆ.”
ಈ ಮೇಲೆ ತಿಳಿಸಿದ ಸೊಡ್ಡಳ ಬಾಚರಸನ ಸ್ವರವಚನದಂತೆ ಮುಕ್ತಿ ದೊರೆಯಲು ಚಿತ್ತ ಶುದ್ಧವಾಗಿರಬೇಕು. ಆ ಚಿತ್ತ ಶುದ್ಧವಾಗಿರಬೇಕೆಂದರೆ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬೇಕು. ಅದಕ್ಕೆ ಜ್ಞಾನದ ಅವಶ್ಯಕತೆ ಇದೆ. ಈ ಜ್ಞಾನವನ್ನು ಕೊಡುವ ಗುರುವಿನ ಸೇವೆಯನ್ನು ಕಾಯಾ, ವಾಚಾ, ಮನಸಾ ಮಾಡಿದಾಗ ಮಾತ್ರ ಜ್ಞಾನದ ಕುರುಹು ಆಗಿರುವ ಇಷ್ಟಲಿಂಗವನ್ನು ಕರುಣಿಸುವನು. ಆ ಇಷ್ಟಲಿಂದ ಅರ್ಚನೆಯಿಂದ ದೈಹಿಕವಾಗಿ, ಮಾನಸಿಕವಾಗಿ ಐಶ್ವರ್ಯ ವೆಂಬ ಆರೋಗ್ಯ ಶಾಂತಿ ಸಿಗುವುದು. ಇದುವೇ ಮೋಕ್ಷ/ಮುಕ್ತಿ ಎಂದು ಮುಕ್ತಾಯಕ್ಕ ಹೇಳುತ್ತದ್ದಾಳೆ.
ಈ ಮುಕ್ತಿ ದೊರೆಯಬೇಕಾದರೆ ಸದಾವಕಾಲ ಭಗವಂತನ ನಾಮಸ್ಮರಣೆ ಮಾಡುತ್ತ ಸ್ವತಃ ಭಗವಂತನಾಗುವನು ಎಂದು ಅಲ್ಲಮಪ್ರಭುಗಳು ತಮ್ಮ ಒಂದು ತತ್ವಪದದಲ್ಲಿ,
“ಭೂತದ ಕೈಯಲೊಂದರುವೆ! ಅದು
ವೇತಾಳನುದ್ದಕ್ಕೆ ನಿಂದಿತು!
ಭೂತ ಸತ್ತಿತು ವೇತಾಳನತ್ತಿತ್ತು!!
ಅರುವೆ ಗುಹೇಶ್ವರನೊಳಗಾಯಿತಮ್ಮ|”
ಇಲ್ಲಿ ಬರುವ ಭೂತ ಪದವೆಂದರೆ ಆತ್ಮ(ದೆವ್ವವಲ್ಲ) ವೆಂದರ್ಥ! ಆತ್ಮವೇ ಪರಮಾತ್ಮ!. ಪರಮಾತ್ಮನ ಭಾವವನ್ನು ಮನದಲ್ಲಿ ಮೂಡಿಸಿಕೊಂಡಲ್ಲಿ ಪರಮಾತ್ಮನ ಭಾವವೇ ತೋರುವುದು. ಕನಸಿನಲ್ಲೂ ಮನಸ್ಸಿನಲ್ಲೂ ಆತನ ನಾಮಸ್ಮರಣೆ ಮಾಡುತ್ತಿದ್ದರೆ, ಆತನ ಗುಣಗಾನ ಮಾಡುತ್ತಿದ್ದರೆ ಸಾಕ್ಷಾತ ಶಿವನೇ ಪ್ರತ್ಯಕ್ಷನಾಗುತ್ತಾನೆ. ‘ಯದ್ಭಾವಂ ತದ್ಭವತಿ’ ಎಂಬಂತೆ ನಾವು ಯಾವ ರೀತಿಯಲ್ಲಿ ವಿಚಾರ ಮಾಡುತ್ತೇವೆಯೋ ಆ ರೀತಿ ನಾವಾಗುತ್ತೇವೆ. ‘ವಿಚಾರ’ ಮತ್ತು ‘ಆಚಾರ’ ಒಂದಾಗಿರುವುದೇ ಲಿಂಗಧಾರಿಯಾದವನ ನಿಜ ನಡವಳಿಕೆ. ನಿರ್ಮಲ ಮನಸ್ಸಿನಿಂದ ಆತನನ್ನು ನೆನೆದರೆ ಆತ ನಮ್ಮನ್ನೆತ್ತಿಕೊಳ್ಳಬಲ್ಲ. ಜೀವಭಾವ ಅಳಿದಾಗ ಪರಮಾತ್ಮನುಳಿಯುತ್ತಾನೆ. ಪರಮಾತ್ಮನೆಂದರೆ ಅರಿವು, ಸುಜ್ಞಾನ, ತತ್ವಜ್ಞಾನದ ಪ್ರತೀಕ. ಇದುವೇ ಒಂದರ್ಥದಲ್ಲಿ ಪರತತ್ವವು. ಇದನ್ನೇ ಅಲ್ಲಮನು ವೇತಾಳ(ಪರಮಾತ್ಮ) ಅಥವಾ ಪರಮಾತ್ಮ ಶಾಶ್ವತನು. ಆತ್ಮ ಬೇರೆಯಲ್ಲ, ಪರಮಾತ್ಮ ಬೇರೆಯಲ್ಲ, ಎಂಬ ಅರಿವೇ ಗುರುವಾಗಿದ್ದಾನೆ. ಆ ಅರಿವೇ ಗುಹೇಶ್ವರನೊಳಗಾಯಿತ್ತೆಂಬುದೆ ಮುಕ್ತಿ ಸ್ಥಿತಿಯಾಗಿದೆ.
ಇದೇ ರೀತಿ ವೈರಾಗ್ಯದ ನಿಧಿ ಅಕ್ಕ ಮಹಾದೇವಿಯು ಪರಮಾತ್ಮನ ನಾಮಸ್ಮರಣೆ ಮಾಡಿದವರೆಲ್ಲರೂ ಮುಕ್ತಿ ಹೊಂದಿದರು ಎನ್ನುವುದಕ್ಕೆ, ವಚನ:
“ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ,
ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ
ಶಿವನ ನೆನೆಯಿರೆ ! ಶಿವನ ನೆನೆಯಿರೆ ! ಈ ಜನ್ಮ ಬಳಿಕಿಲ್ಲ.
ಚನ್ನಮಲ್ಲಿಕಾರ್ಜುನದೇವರದೇವನ ನೆನೆದು
ಪಂಚಮಹಾಪಾತಕರೆಲ್ಲರು ಮುಕ್ತಿವಡೆದರೆಂದು !”
ಎಷ್ಟೋ ಜನ್ಮದ ಪುಣ್ಯದ ಫಲದಿಂದ ಮಾನವ ಜನ್ಮಕ್ಕೆ ಬಂದಿದ್ದೇವೆ, ಅಕ್ಕ ಹೇಳುವ ಹಾಗೆ 84 ಲಕ್ಷ ಯೋನಿಗಳಲ್ಲಿ ಹುಟ್ಟಿ, ಸತ್ತು, ಹುಟ್ಟಿ ಶ್ರೇಷ್ಟವಾದ ಮಾನವ ಜನ್ಮ ಇದಾಗಿದೆ. ಆದ್ದರಿಂದ ಶಿವನಾಮಸ್ಮರಣೆಯನ್ನು ನೆನೆಯುವುದರಿಂದ ಎಷ್ಟೋ ಜನ ಮುಕ್ತಿಯನ್ನು ಪಡೆದಿದ್ದಾರೆ. ಆದ್ದರಿಂದ ಶಿವನ ಕುರಿತು ನೆನೆಯಿರಿ, ಎಂದು ಅದನ್ನು ಬಿಟ್ಟು ಹಗಲು ರಾತ್ರಿಯನ್ನದೆ ಹಲವು ಚಿಂತೆಗಳಲ್ಲಿ ಕಳೆದರೆ ಜೀವನ ವ್ಯರ್ಥವಾಗಿ ಹೋಗುವುದು ಎಂದು ಆಯುಷ್ಯ ತೀರುವ ಮುನ್ನ ಶಿವನಾಮಸ್ಮರಣೆ ಎಂಬ ಬುತ್ತಿ ಕಟ್ಟಿಕೊಂಡು ಇರುವ ಜೀವಿತಾವಧಿಯಲ್ಲಿಯೇ ಮುಕ್ತಿಯನ್ನು ಸಾಧಿಸುವುದಾಗಿದೆ.
ಮುಕ್ತಿಯನ್ನು ಶಿವಯೋಗವೆಂತಲು ಕರೆಯುತ್ತಾರೆ, ಈ ಶಿವಯೋಗದ ಕುರಿತು 14-15ನೇ ಶತಮಾನದ ಶ್ರೀ ಮನ್ ನಿಜಗುಣಶಿವಯೋಗಿಗಳು ಸಹ ಕೈವಲ್ಯ ಪದ್ಧತಿಯ “ಯೋಗ ಪ್ರತಿಪಾದನ ಸ್ಥಲ”ದ ಕೊನೆಯ ಭಾಗದಲ್ಲಿ ಹೇಳಿದ “ಶಿವಯೋಗ” ವಿಷಯಕ ಪದ್ಯಗಳಲ್ಲಿ ಕ್ರಮವಾಗಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಪೂಜಾಕ್ರಮಗಳನ್ನೇ ಮೂರು ಹಾಡುಗಳಲ್ಲಿ ಹೇಳಲಾಗಿದೆ.
“ಪರತರ ಶಿವಲಿಂಗವೆಳಸಿ ನಿನಗಾಗಿ |
ಕರಕಂಜದೊಳು ಕಾಣಿಸಿತು ಯೋಗಿ ಯುಜಿಸು||ಪ||”
ನಿನ್ನ ಉದ್ಧಾರಕ್ಕಾಗಿ ಗುರುಕಾರುಣ್ಯದಿಂದ ಪರತರವಾದ ಶಿವಲಿಂಗವು ಬಯಸಿ ನಿನಗಾಗಿ ಹಸ್ತಾರವಿಂದದಲ್ಲಿ ಕಾಣಿಸಿರುವುದು ಅರ್ಚಿಸಿ, ಲಿಂಗಾಂಗ ಸಾಮರಸ್ಯದ ಸ್ಥಿತಿಯನ್ನು ಹೊಂದು ಎಂದು ಶಿವಯೋಗಿಗಳು ಶಿವಯೋಗ(ಮುಕ್ತಿ)ದ ಸ್ಥಿತಿಯನ್ನು ಕುರಿತು ಹೇಳಿದ್ದಾರೆ. ಮುಂದಿನ ಪದ್ಯದಲ್ಲಿ,
“ಪ್ರಾಣಲಿಂಗವಿದನು ಗುರುವಿ | ನಾಣತಿಯೊಳು ಕೇಳಿ ನೋಡಿ |
ಮಾಣದೇಕ ಚಿತ್ತದಿಂದ ಧ್ಯಾನಿಪನೆ ಕೃತಾರ್ಥನು||ಪ||”
ಸದೃಪು ಇಷ್ಟ(ಕ್ರೀಯಾ) ಲಿಂಗವಾದರೆ, ಚಿದೃಪವು ಪ್ರಾಣ(ಜ್ಞಾನ) ಲಿಂಗ. ಇಷ್ಟಲಿಂಗವನ್ನಿತ್ತ ದೀಕ್ಷಾಗುರುವೆ ಶಿಕ್ಷಾಗುರುವಾಗಿ ಪ್ರಾಣಲಿಂಗವನ್ನು ಕರುಣಿಸುತ್ತಾನೆ. ಇದರಿಂದಾಗಿ ಗುರುವಿನ ಆಜ್ಞೆಗೆ ಲಿಂಗಾರಾಧಕನು ಬದ್ಧನಾಗಿರಬೇಕು. ಇಲ್ಲವಾದರೆ ಪ್ರಾಣಲಿಂಗದ ನೆಲೆಕಲೆಗಳು ತಿಳಿಯವು.
“ಭಾವಲಿಂಗವನೆ ಬಿಡದೆ ನೀನು ಪರಿ
ಭಾವಿಸು ಭೇದವಿಲ್ಲದೆ ಯೋಗಿ||ಪ||”
ಶ್ರೀ ಗುರು ತನ್ನ ವೇಧಾ ದೀಕ್ಷೆಯಿಂದ ಕರುಣಿಸಿದ ಭಾವ(ತೃಪ್ತಿ) ಲಿಂಗವನ್ನು ತಪ್ಪದೆ ನಿತ್ಯತೃಪ್ತನಾದ ನಿಜಗುರುದೇವನಲ್ಲಿ ಸಹಜಸಿದ್ಧವಾಗಿದ್ದ ಪರಮಾನಂದ ಸ್ವರೂಪ ಭಾವಲಿಂಗವು. ಹಸ್ತಮಸ್ತಕ ಸಂಯೋಗ ಮಾತ್ರದಿಂದ ತಾನೆ ತಾನಾಗಿ ಪ್ರಾಣಲಿಂಗಯೋಗಿಯಾಗಿ ಆವಿಷ್ಕರಿಸುತ್ತದೆ. ಅದನ್ನು ಪರಿಭಾವಿಸುವುದೆ ಪ್ರಾಣಲಿಂಗಯೋಗಿಯ ಕರ್ತವ್ಯವಾಗಿದೆ. ಮುಂದೆ 38ನೆಯ ಪದ್ಯದಲ್ಲಿ “ಶರಣಸ್ಥಲ”ದ ವರ್ಣನೆಯು ಸ್ಪಷ್ಟವಾಗಿ ಬಂದಿದೆ.
“ಸತಿಪತಿಗಳೀವರ ಸಮರತಿ ಸುಖದ ಬಾಳುವೆಗೆ|
ಪ್ರತಿಯುಂಟೆ ಲೋಕದೊಳು ನೋಡೆ ಲಲಿತಾಂಗಿ||ಪ||
ಬೆರಸಿ ಬೇರೆನಿಸದೆರಡಾಲಿ ಕಲ್ಲುಗಳೇಕ|
ಸುರಸವಾದಂತೆ ಪತಿ ಶಂಭುಲಿಂಗ||
ಶರಣ ಸತಿಯ ಕೂಡಿ ಪರತರಾನಂದದೊಳು|
ಪರವಶನೈದಿಹುದನುಪಮಿಸಲು ಬಹುದೆ?||3||”
ಸತಿಪತಿಗಳಿವರ ಸಮಪ್ರೀತಿಯ ಕೂಟದ ಆನಂದದ ಬಾಳಿಗೆ ಜಗತ್ತಿನಲ್ಲಿ ಹೋಲಿಕೆಯಿರುವುದೇ? ಹಾಗೆ ಆಧ್ಯಾತ್ಮದಲ್ಲಿ ಅಂಗಸತಿ ಲಿಂಗಪತಿ ಎಂಬ ಇವರಿಬ್ಬರ ಸುಖಕ್ಕಿಂತ ಬೇರೆ ಸುಖ ಇನ್ನಾವುದು. ಎಂದು ಪ್ರಶ್ನಿಸಿ ವಿಚಾರಿಸು. ಎಂದು ಶಿವಸುಂದರಾಂಗಿಯಾದ ಸಂವಿತ್ ಶಕ್ತಿಯನ್ನು ಕೇಳುತ್ತಿದ್ದಾರೆ. ಮುಂದೆ ಕೊನೆಯ ನುಡಿಯಲ್ಲಿ ಎರಡು ಆಲಿಕಲ್ಲುಗಳು ಕರಗಿ ಏಕವಾದಂತೆ ಬೆರಸಿ ಬೇರಾಗದಂತಿರುವ ಪತಿ ಶಂಭುಲಿಂಗನು, ಸತಿ ಶರಣಾಂಗನು ಕೂಡಿ ಅಂದರೆ ಏಕರಸವಾಗಿ ಪರಮ ಪರಿಣಾಮದಲ್ಲಿ ಪರವಶರಾಗುವರು. ಇದುವೆ ಶಿವಯೋಗ(ಮುಕ್ತಿ)ವಾಗಿದೆ. ಅದನ್ನೆ ಬೇರೊಂದಕ್ಕೆ ಉಪಮಿಸಿ ಹೇಳಲು ಸಾಧ್ಯವಿಲ್ಲ.
ಇದೆಲ್ಲದರ ಮೇಲಿಂದ ಶ್ರೀಮನ್ನಿಜಗುಣ ಶಿವಯೋಗಿಗಳ “ಕೈವಲ್ಯ ಪದ್ಧತಿ”ಯೆಂಬ ಉದ್ಗ್ರಂಥದಲ್ಲಿ ಹೇಳಿದ “ಶಿವಯೋಗವು” ಶಿವಶರಣರ “ಷಟ್‍ಸ್ಥಲ” ಮಾರ್ಗವೇ ಅಹುದೆಂದು ಸಿದ್ಧವಾಗುವುದು. ಆದರೆ ಶಿವಯೋಗಕ್ಕೂ ಇನ್ನುಳಿದ ಬೇರೆ ಯೋಗಗಳಿಗೂ ಭೇದವೇನು? ಎಂಬ ಪ್ರಶ್ನೆಯು ಮನದಲ್ಲೇಳುವುದ ಸಹಜ. ಮಾನವ ದೇಹದೊಳಗಿರುವ ಆತ್ಮವನ್ನು ಒಂದಿಲ್ಲೊಂದು ಬಗೆಯಿಂದ ಪ್ರಕಟಿಸಿಕೊಳ್ಳವುದೇ ಪ್ರತಿಯೊಂದು ಯೋಗದ ಉದ್ದೇಶವಾಗಿದೆ. ಆದರೆ ಆ ಆತ್ಮನು ಪರಮಾತ್ಮನದೇ ಒಂದು ಅಂಶವಾಗಿದ್ದಾನೆಂದು, ಅಥವಾ ಪರಮಾತ್ಮನೇ ಪ್ರಾಣಿಗಳ ಹೃದಯದಲ್ಲಿ ಆತ್ಮರೂಪದಿಂದ ಕುಳಿತಿದ್ದಾನೆಂದು ತಿಳಿದು ಆತ್ಮನಲ್ಲಿ ಪರಮಾತ್ಮನನ್ನು ಭಾವಿಸಿ ಧ್ಯಾನಿಸುವದೇ “ಶಿವಯೋಗ”ದ ಮುಖ್ಯ ರಹಸ್ಯವಾಗಿದೆ. ಹೀಗೆ ಶಿವಯೋಗ(ಮುಕ್ತಿ)ವು ಮುಖ್ಯವಾಗಿ ಸಗುಣ-ನಿರ್ಗುಣ ತತ್ವಗಳೆರಡರ ಸಮನ್ವಯವನ್ನು ಸಾಧಿಸುತ್ತದೆ.
ನೇತ್ರ, ಶ್ರೋತ್ರ, ಘ್ರಾಣ, ಜಿಹ್ವೆ, ಸ್ಪರ್ಶನಗಳು ಲಿಂಗಮುಖವಾಗಿ, ಲಿಂಗತನುಗಳಾಗಿ ಅಂಗನಲ್ಲಿ ಲಿಂಗ ಸನ್ನಿಹಿತವಾಗಿ ಲಿಂಗದಲ್ಲಿ ಅಂಗವಾಗಿರ್ದ ಪ್ರಾಣಲಿಂಗಿ ಪರಮ ಸುಖಿಯೆಂದು ವಚನಿಸಿದ ಚೆನ್ನಬಸವಣ್ಣನವರ ವಚನ-
‘’ಅಂಗದಿಂದ ಲಿಂಗಸುಖ, ಲಿಂಗದಿಂದ ಅಂಗಸುಖಿ
ಅಂಗಲಿಂಗ ಸಂಗದಿಂದ ಪರಮಸುಖ ನೋಡಯ್ಯಾ
ಅಂಗಲಿಂಗ ಸಂಗ ಸುಖವನೂ
ಕೂಡಲಚನ್ನಸಂಗಯ್ಯಲ್ಲಿ ಲಿಂಗೈಕ್ಯನೆ ಬಲ್ಲ||”
ಪರಮಪಾವನವಾದ ಪ್ರಾಣಲಿಂಗವು, ಪರಬ್ರಹ್ಮವು ಮುಕ್ತಿದಾಯಕವು, ಜಗದಾಧಾರವು, ಅನಾಧಿ, ಅನಂತ ಅಖಂಡ ಸೃಷ್ಟಿಗೆ ಕಾರಣವೆಂಬುದನ್ನು ಅರಿತು. ಗುರುಕರುಣೆ ಸಾಧನೆಯಿಂದ ಸಾಕ್ಷಾತ್ಕರಿಸಿಕೊಂಡು ಸದ್ಭಾವದಿಂದ ಪೂಜಿಸುವವನು ಪ್ರಾಣಲಿಂಗಿಯು ಅವನೇ ಅಂಗಲಿಂಗಿಯು. ಅದುವೇ ಮುಕ್ತಿಸ್ಥಿತಿಯಾಗುವುದು.
—–
ಪರಾಮರ್ಶನ ಗ್ರಂಥಗಳು
• ಡಾ.ಎಲ್.ಬಸವರಾಜು. ‘ಶಿವದಾಸ ಗೀತಾಂಜಲಿ’ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.1990
• ಡಾ.ವೀರಣ್ಣ. ರಾಜೂರ(ಸಂ), ‘ಶಿವಶರಣೆಯರ ವಚನ ಸಂಪುಟ’, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 1993, ಪು-30. ವ.82
• ಡಾ.ವೀರಣ್ಣ ರಾಜೂರ(ಸಂ) ‘ಕೈವಲ್ಯ ಸಾಹಿತ್ಯ ಸಂಪುಟ’ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥಮಾಲೆ, ಮುರುಘಾಮಠ ಧಾರವಾಡ. 2019
• ಡಾ. ವೀರಣ್ಣ ರಾಜೂರ(ಸಂ), ‘ಸ್ವರವಚನ ನಿರ್ವಚನ’ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥಮಾಲೆ, ಮುರುಘಾಮಠ ಧಾರವಾಡ. 2019
• ಡಾ.ಎಂ.ಎಂ.ಕಲಬುರ್ಗಿ, ‘ಸಂಕೀರ್ಣ ವಚನ ಸಂಪುಟ-1’, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 1993.
• ಡಾ. ವೀರಣ್ಣ ರಾಜೂರ ‘ಶಿವಯೋಗ ಪ್ರಥೀಪಿಕೆ: ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ 1981,
• ಡಾ.ಎಸ್.ಆರ್. ಚೆನ್ನವೀರಪ್ಪ, ‘ಮುಕ್ತಿಯ ಪರಿಕಲ್ಪನೆ’ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ -2006
• ತಿ.ಸ್ವಾಮಿ ಹರ್ಷಾನಂದ, ‘ಜೀವನ್ಮುಕ್ತಿ ವಿವೇಕ’, ಶ್ರೀ ರಾಮಕೃಷ್ಣಾಶ್ರಮ, ಮೈಸೂರು-1980
• ಲಿಂಗರಾಜು(ಸಂ), ‘ಅನಾದಿಯ ಅನುಭಾವದ ಸೆಲೆ’, ತತ್ವಪದ ಪ್ರವೇಶಿಕೆ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯಮಾಲೆ ಸಂ-01, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.2017