• ಈಶ್ವರ ಸಣಕಲ್ಲ ( ಲೇಖನ ಸಂಗ್ರಹ)(ಈಶ್ವರ ಸಣಕಲ್ಲ ಇವರು ೧೯೦೬ ಡಿಸೆಂಬರ ೨೦ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾದವಾಡದಲ್ಲಿ ಜನಿಸಿದರು. ತಾಯಿ ನೀಲಾಂಬಿಕೆ ; ತಂದೆ ಮಹಾರುದ್ರಪ್ಪ. ಬಾಲ್ಯದಲ್ಲೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಅನುಭವಕ್ಕೆ ಅಭಿವ್ಯಕ್ತಿಯ ರೂಪುಕೊಟ್ಟರು. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸುಮಾರು ೨೦ ಕೃತಿಗಳನ್ನು ರಚಿಸಿದ್ದಾರೆ. ಮುಂಬಯಿಯಿಂದ ಹೊರಡುತ್ತಿದ್ದ “ಸಹಕಾರ” ಪತ್ರಿಕೆಯ ಸಂಪಾದಕರಾಗಿದ್ದರು.

ಇವರ ಬಟ್ಟೆ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಇವರು ೧೯೮೦ ರಲ್ಲಿ ಬೆಳಗಾವಿಯಲ್ಲಿ ನಡೆದ ೫೨ ನೆಯ ಅಖಿಲ ಭಾರತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿದ್ದರು. ಈಶ್ವರ ಸಣಕಲ್ಲರ ಉದಾತ್ತ ಆದರ್ಶವು ಅವರ ಕವನವೊಂದರಲ್ಲಿ ಬರುವ ಈ ಸಾಲುಗಳಿಂದ ವ್ಯಕ್ತವಾಗುತ್ತದೆ: “ ಜಗವೆಲ್ಲ ನಗುತಿರುಲಿ ; ಜಗದಳವು ನನಗಿರಲಿ ” ಈಶ್ವರ ಸಣಕಲ್ಲರು ೧೯೮೪ ಡಿಸೆಂಬರ ೩ರಂದು ತೀರಿಕೊಂಡರು.)
ಅನಾದ್ಯನಂತವಾಗಿ ಹಬ್ಬಿರುವ ಆಕಾಶದಗಲದ ಮಹಾಮೌನದಲ್ಲಿ ಅಖಂಡ ತೇಜಃಪುಂಜವಾದ,ಅವಿರತ ಜ್ಯೋತಿರ್ಮಯವಾದ, ಅಪ್ರತಿಮ ಪ್ರಕಾಶ ಪೂರ್ಣವಾದ ಅಸಂಖ್ಯ ಕೋಟಿ ಗ್ರಹನಕ್ಷತ್ರಗಳುಮೂಡಿ, ಲೀಲೆಯಲ್ಲಿ ಆಡಿ, ವೇಗದಲ್ಲಿ ಪರಿಭ್ರಮಿಸುತೋಡಿ, ನಿರ್ಧಿಷ್ಟ ದೇಹದಲ್ಲಿ ತೀಡಿ, ತಮ್ಮ ಆಯುವನ್ನು ದೂಡಿ, ಮೈದೋರಿ ಮೈಗರೆವ ಮಹಾಸ್ವಪ್ನದಂತೆ ಮರೆಯಾಗುತ್ತವೆ. ಅದೇ ಆಕಾಶದ ಅದೇ ಮೌನದಲ್ಲಿ ಈ ಜ್ಯೋತಿಷ್ಪ್ರಪಂಚದ ಆಚೆ ಆಚೆ, ಮೇಲೆ ಮೇಲೆ, ನಿಬಿಡತಮ ನೀಹಾರಿಕಾವಲಯವು ಮೇರೆ ಮೀರಿ ಹಬ್ಬಿ ಹಿಂಜಿದರಳಿಯ ರಾಶಿಯಂತೆ ರಂಜಿಸಿ, ಮತ್ತೆ, ಮೈದಳೆದ ಭಾವ ಮೈಯಳಿದು ಹೋಗುವಂತೆ, ಕರಗಿ ಹೋಗುತ್ತದೆ. ಅದೇ ಮುಗಿಲಗಲ ಅದೇ ಮೌನಸಾಮ್ರಾಜ್ಯದಲ್ಲಿ ಹಗಲಿರುಳು ಕಣ್ಣುಮುಚ್ಚಾಟ, ಮಳೆಗಾಲದ ಗುಡುಗು ಸಿಡಿಲು ಮಿಂಚು ಮಳೆಗಳ ಹುಚ್ಚಾಟ, ಕಟಗುಡುವ ಚಳಿಗಾಲದ ಕುಳಿರ್ಗಾಳಿಯ, ತೀಟದಲ್ಲಿ ತುಟಿಯ ಕಚ್ಚಾಟ, ಹಿಗ್ಗಿನ ಸುಗ್ಗಿಯ ಕಂಪಿನ, ಇಂಪಿನ, ಜೊಂಪಿನ, ಪೆಂಪಿನ ಬುಗ್ಗೆಯಲ್ಲಿ ಚಿಮ್ಮಿದ ಕಾಮನ ಬಿಲ್ಲಿನ ಸೊಲ್ಲಿನ ಮೆಚ್ಚಾಟ; ಬಲ್ವೇಸಗೆಯ ಬಿರುಬಿಸಿಲ ಬೇಗೆಯ ಕಿಚ್ಚಾಟ-ಇಂತು ಕ್ಷಣ, ದಿನ-ಮಾಸ-ಋತು-ವರ್ಷ-ಯುಗ ಕಲ್ಪಗಳ ಲೀಲಾತಲ್ಪದಲ್ಲಿ, ಕಲ್ಪನೆಯ ವಿವಿಧ ಭಂಗಿಯಲ್ಲಿ, ವಿವಿಧ ವರ್ಣವಿನ್ಯಾಸದಲ್ಲಿ ಲಾಸ್ಯವಾಡಿ, ಹೃನ್ಮಂದಿರದಲ್ಲಿ ಸೃತಿಯ ಮುದ್ರೆಯೊತ್ತಿ, ಮತ್ತೆ ಸರಿದು ಹೋಗುವಳು. ಇಂತು ವಿಶ್ವದ ಮಹಾಪ್ರಪಂಚದ, ಮಾಯಾ ಪ್ರಪಂಚದ, ದ್ವಂದ್ವ ಪ್ರಪಂಚದ ಅಸಂಖ್ಯ ಮುಖಲೀಲೆಗೆ ತನ್ನಲ್ಲಿ ಅವಕಾಶವನ್ನಿತ್ತಿದ್ದರೂ ಅದರಿಂದ ಆ ಆಕಾಶದ ಮಹಾಮೌನವು ಅತೀತ! ನಿರ್ಲಿಪ್ತ !.
ಅಂತೆ ಶ್ರೀ ಶ್ರೀ ಶ್ರೀಮನ್ನಿರಂಜನ ಪ್ರಣವಸ್ವರೂಪಿ ಶ್ರೀ ನಾಗನೂರ ರುದ್ರಾಕ್ಷಿಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು! ಇವರಲ್ಲಿ ಕಲ್ಯಾಣ ದೃಷ್ಟಿಯ ಶಿವನೂ, ಕಾಯಕನಿಷ್ಠೆಯ ಬಸವನೂ ಸಂಗಮಿಸಿ, ಸಂಯಮಿಸಿ ಇವರು ಶ್ರೀ ಶಿವಬಸವ ಮಹಾಸ್ವಾಮಿಗಳಾಗಿಹರು! ಇವರ ದೇಹವು ಎಪ್ಪತ್ತರಾಚೆಗೆ ಸರಿದರೂ, ಇವರ ಉತ್ಸಾಹವು ಇನ್ನೂ ಇಪ್ಪತ್ತರ ಈಚೆಗೇನೇ ಉಳಿದಿದೆ! ಉರುಳುತಿರುವ ಸಂವತ್ಸರಗಳು ಇವರ ಮುಪ್ಪು ಸಾವುಗಳ ಲೆಕ್ಕ ಹಾಕುತ್ತಿದ್ದರೆ, ಅರಳುತ್ತಿರುವ ತಪಸ್ಚೈತನ್ಯವು ಇವರ ಪ್ರಾಯದ ಒಪ್ಪು-ಕಾವುಗಳ ಎಣಿಕೆ ಹಾಕುತ್ತಿದೆ. ಇಂತಹ ಇಳಿವಯಸ್ಸಿನಲ್ಲಿಯೂ ಬಾಗದ ಇವರ ನಡು ಇವರ ಪರಿಶುದ್ಧ ಚರಿತ್ರಕ್ಕೆ ಸಾಕ್ಷಿಯಾಗಿದೆ ! ಎತ್ತರದ ನಿಲವು ! ಭವ್ಯ ವ್ಯಕ್ತಿತ್ವ ಮಾತುಗಾರಿಕೆಯಿರಬಹುದು; ಆದರೆ ಮಾತು ತುಟಿ ಮೀರಿ ಬಂದುದೇ ವಿರಳ! ಜೀವನದ ಬಹುಭಾಗವೆಲ್ಲ ಮೌನ! ಮಹಾಮೌನ! ಆ ಮೌನದ ಸಂದು ಸಂದುಗಳಲ್ಲಿ, ಕೀಲುಕೀಲುಗಳಲ್ಲಿ ಕೃತಿಯ ಸ್ಪಂದನ! ಸತ್ಮತಿಯ ಸಂಸ್ಕೃತಿಯ ನಂದನ! ಶಿವಾಕೃತಿಯ ಚಂದನ !
ಸೇವಾಧರ್ಮವೇ ಇವರ ಜೀವನ ಮರ್ಮವು “ಮಾನವನ ಹೃದಯದಲ್ಲಿ ಗುಪ್ತವಾಗಿ ಹುದುಗಿರುವ ಪರಿಪೂರ್ಣತೆಯ ಆವಿಷ್ಕಾರವೇ ಶಿಕ್ಷಣವೆಂದು ಬಗೆದು ಅಂತಹ ಶಿಕ್ಷಣವನ್ನು ಪಡೆದು ಲೋಕವೆಲ್ಲಾ ಪರಿಪೂರ್ಣತೆಯ ಎಡೆಗೆ ಸಾಗಲೆಂದು ಯೋಚಿಸಿದರು. ಆ ಯೋಚನೆಗೆ ತಕ್ಕ ಯೋಜನೆ ಆವುದೆಂದು ತರ್ಕಿಸಿದರು. ಹೊಟ್ಟೆಗೆ ಗತಿಯಿಲ್ಲದೆ, ಶಿಕ್ಷಣ ಪಡೆಯಲು ತಕ್ಕ ಸೌಕರ್ಯವಿಲ್ಲದೆ, ಅಸಂಖ್ಯ ಅಸಹಾಯ ಪರಿಸ್ಥಿತಿಯಲ್ಲಿ ತೆವಳಿ ತೊಳಲಾಡುತ್ತಿರುವ ಬಡ ವಿದ್ಯಾರ್ಥಿ ಲೋಕದ ವಿದ್ಯಾರ್ಜನೆಗೆ, ಅಧ್ಯಯನ-ಅಭ್ಯಾಸಗಳಿಗೆ, ವಿವಿಧ ಬಗೆಯ ಶಿಕ್ಷಣ ಸಂಸ್ಥೆಗಳ ಕೇಂದ್ರವಾದ ಬೆಳಗಾವಿಯಂಥ ಪಟ್ಟಣದಲ್ಲಿ ಪ್ರಸಾದ ನಿಲಯ ಸ್ಥಾಪನೆಯೇ ಪರಮಸಾಧನವೆಂದು ನಿಶ್ಚಯಿಸಿದರು.
ಆ ನಿಶ್ಚಯದ ನಿರ್ಣಯವೇ ಇಂದು ಭವ್ಯ ಪ್ರಸಾದ ನಿಲಯವಾಗಿ ರೂಪುಗೊಂಡಿದೆ!ಇಂತು ಪ್ರಸಾದ ನಿಲಯದ ಮುಖಾಂತರವಾಗಿ ಅವರು ಕೈಕೊಂಡ ವಿದ್ಯಾರ್ಥಿಲೋಕಸೇವಾ ಧರ್ಮವೇ ಅವರಿಗೆ ಶಿವನ ಮರ್ಮವನ್ನು ಬಿತ್ತರಿಸಿತು! ಈ ಪ್ರಸಾದ ನಿಲಯದ ಯೋಜನೆಯು, ಅವರ ತಪದ ಮಹಾಮೌನವು ಮಥಿಸಿ ತಂದ ದಿವ್ಯ ನವನೀತ! ಇದನ್ನು ಆಶ್ರಯಿಸಿದವರು,ಸೇವಿಸಿದವರು, ವಿದ್ಯಾಪಾತ್ರರಾದರು! ಮಾನವರಾದರು; ಮಾನವತೆಯಲ್ಲಿ ಪರಿಪೂರ್ಣರಾದರು! ಅಮೃತ ಪುತ್ರರಾದರು!
ಈ ಮೊದಲು ಹೇಳಿದಂತೆ, ಆಕಾಶದ ಮಹಾಮೌನವು ವಿಶ್ವದ ಅನಂತ ನಿರಂತರ ವಿವಿಧ ಲೀಲೆಗಳನ್ನು ಒಳಗೊಂಡು ಅವುಗಳಿಂದ ಅತೀತವೂ, ನಿರ್ಲಿಪ್ತವೂ ಆಗಿರುವಂತೆ, ಈ ಮಹಾಸ್ವಾಮಿಗಳ ಮೌನಾಕಾಶವು ಲೋಕಕಲ್ಯಾಣದ ಇನಿತೆಲ್ಲ ಯೋಚನೆ, ಯೋಜನೆ, ಸತ್ಕೃತಿಗಳನ್ನು ಒಳಗೊಂಡಿದ್ದರೂ ಅವೆಲ್ಲವುಗಳಿಂದ ಅವರು ಅತೀತರು; ನಿರ್ಲಿಪ್ತರು!
ಈ ನಿಸ್ವಾರ್ಥ ಸೇವೆ, ನಿರ್ಲಿಪ್ತತೆ ಒಂದೇ ದಿನದ ಅನಾಯಾಸದ ಗೆಲುವಲ್ಲ! ಜನ್ಮಜನ್ಮಗಳ ತಪದ ಸಾಧನೆಯ ಬಲವು; ಜೊತೆಗೆ ಮಹಾಗುರುವಿನ ಮಹಾಕೃಪೆಯ ಮಹಾನುಗ್ರಹದ ಬಲವು! ಸತ್ ಶರಣರ, ಸಜ್ಜನರ, ಸತ್ಸಂಗದ ಸಹವಾಸದ ಫಲವು; ಸಮ್ಮತಿಗಾಗಿ, ಪರಹಿತ ಕಲ್ಯಾಣಕ್ಕಾಗಿ ಮೈದಳೆದ ಉತ್ಕಟ ಸತ್ಸಂಕಲ್ಪ ಶಕ್ತಿಯ ಫಲವು! ಲೋಕದ ಹೊಗಳಿಕೆ-ತೆಗಳಿಕೆ, ಹಿಗ್ಗು-ಕುಗ್ಗು, ಸೋಲು-ಗೆಲುವು, ಸುಖ-ದುಃಖ, ಮಾನ-ಅಪಮಾನ ಈ ಮೊದಲಾದ ದ್ವಂದ್ವಪ್ರಪಂಚವನ್ನು ಮೀರಿ ನಿಂತ ಸುಸ್ಥಿರ-ಸಹಜ ಸಮತೆಯ ನಿಲುವು! ಆನುವಂಶಿಕ ಸಂಸ್ಕಾರದಲ್ಲಿ ಬೆಳಗಿದ ಬೆಳಕಿನ ಹೊಳವು ದಾಸೋಹಂಭಾವದಲ್ಲಿ ಸೋಹಂಭಾವವಲಯಿಸಿ ವಿನಯವೇ ಮೂರ್ತಿವೆತ್ತಂತಿರುವ ಕೈಂಕರ್ಯದ ಸುಳುವು! ಇವೆಲ್ಲವೂ ಸಮನಿಸಿ ನಾಗನೂರು ಶ್ರೀ ಶಕ್ತಿಯಾಯಿತು! ಶಿವಬಸವ ನಿರಂಜನ ವ್ಯಕ್ತಿಯಾಯಿತು!
ಶಿವಯೋಗಮಂದಿರದ ಪುಣ್ಯಪರಿಸರದಲ್ಲಿ .
ಶಿವಯೋಗಮಂದಿರದಲ್ಲಿಯೂ ಅವರ ಮೊದಲಿನ ಜೀವನಕ್ರಮವೇ ಮುಂದುವರಿಯಿತು. ದಿನವೂ ಬ್ರಾಹ್ಮಿ ಮುಹೂರ್ತದಲ್ಲಿ ಶಿವಸ್ಮರಣೆಯೊಂದಿಗೆ ಏಳುವುದು, ಪ್ರಾತರ್ವಿಧಿಗಳನ್ನು ಮುಗಿಸುವುದು,ಸ್ನಾನ, ಶಿವಪೂಜೆ, ಸಂಸ್ಕೃತ ಪಾಠಶಾಲಾಧ್ಯಯನ ಇವುಗಳಲ್ಲಿಯೇ ಇವರ ಮನಸ್ಸು ತನ್ಮಯವಾಯಿತು; ತಲ್ಲೀನವಾಯಿತು. ಅವಿರಳ ಜ್ಞಾನಪಥವಾದ ಅಂತರ್ಮುಖತೆ ಇನ್ನೂ ಬೆಳೆಯಿತು.ಶಕ್ಯವಿದ್ದಷ್ಟೂ ಎಲ್ಲರ ಸಂಗವನ್ನೂ, ಸಂಪರ್ಕವನ್ನೂ ಕಡಿಮೆ ಮಾಡಿಕೊಂಡು, ಕಡಿದುಕೊಂಡು,ಏಕಾಂತ ಪ್ರಶಾಂತ ವಾತಾವರಣದಲ್ಲಿ ಅಧ್ಯಯನಲೀನರಾಗಿ, ಧ್ಯಾನಲೀನರಾಗಿ ಅಂತರ್ಮುಖತೆ-ಯಿಂದ ಅಂತಸ್ಸಮಾಧಿಗೆ ಒಳಗೆ ಒಳಗೆ, ಕೆಳಗೆ ಕೆಳಗೆ ಇಳಿಯತೊಡಗಿದರು. ಹೀಗಾಗಿ ಬಾಹ್ಯ ಪ್ರಪಂಚವು ದೂರವಾಗಿ, ಮರೆಯಾಗಿ ಅಂತಃಪ್ರಪಂಚದ ಬಿತ್ತರವೂ, ಎತ್ತರವೂ, ಆಳವೂ ಗೋಚರಿಸತೊಡಗಿದವು. ಇದರ ಮುಂದೆ ಬಾಹ್ಯ ಪ್ರಪಂಚವು ಅಲ್ಪವೂ, ಕ್ಷುದ್ರವೂ, ಸಂಕುಚಿತವೂ ಎನಿಸತೊಡಗಿತು. ಲೋಕದ ಸ್ಥಾನಮಾನ-ಅಧಿಕಾರ, ಕೀರ್ತಿ, ಕಾಂಚನ, ಪ್ರಶಂಸೆ, ನಿಂದೆ ಈ ಎಲ್ಲವುಗಳಿಂದಲೂ ದೂರವಾಗಿ ಲೋಕದ ದ್ವಂದ್ವದಿಂದ ಅತೀತರಾಗಿ ಇರಲು ಯತ್ನಿಸಿದರು. ಈ ಮೇರೆಗೆ ಒಂದು ದಿವ್ಯಾದರ್ಶವು ಶ್ರೀ ಶಿವಯೋಗಮಂದಿರದ ಪ್ರಶಾಂತವಾತಾವರಣದಲ್ಲಿ ಇವರ ಬಾಳನ್ನು ಇಂತು ರೂಪಿಸುತ್ತಲಿದ್ದಿತು.ಇವರ ಪರಿಶುದ್ಧ ಆಚಾರ, ಉಚ್ಚವಿಚಾರ, ಪವಿತ್ರ ಚಾರಿತ್ರ್ಯ, ಅನನ್ಯ ಭಕ್ತಿ, ಅಪ್ರತಿಮ ದಾಸೋಹಭಾವ, ಅನುಪಮ ಸೇವೆ, ಅವಿಚಲ ಕಾಯಕನಿಷ್ಠೆ, ಅಚಲ ಸಂಯಮಶೀಲ, ಸರ್ವಭೂತದಯಾದೃಷ್ಟಿ, ವಿಶ್ವಮಾನ್ಯಧರ್ಮದೃಷ್ಟಿ ಇವೆಲ್ಲವು ಗಳಿಂದ ಆಕರ್ಷಿತರಾದ ಶ್ರೀ ಶಿವಯೋಗಮಂದಿರ ಸಂಸ್ಥಾಪಕರಾದ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ಕೃಪಾದೃಷ್ಟಿಯು ಇವರ ಮೇಲೆ ಬಿದ್ದಿತು. ಪರಿಣಾಮವಾಗಿ ಇವರು ಅವರ ಪ್ರೀತಿಯ ಶಿಷ್ಯರಾಗಿ ಅನನ್ಯ ಭಾವದಿಂದ ಸೇವೆ ಸಲ್ಲಿಸತೊಡಗಿದರು. ಇವರ ದ್ವಾದಶ ವರ್ಷದ ದೀರ್ಘ ಅವಿರತ ಅವಿಚ್ಛಿನ್ನ ಸೇವೆಗೆ ಮೆಚ್ಚಿ ಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಇವರನ್ನು ಆಶೀರ್ವದಿಸಿದರು; ಅನುಗ್ರಹಿಸಿದರು. ಇಂತು ಎಲ್ಲರ ಮೆಚ್ಚಿಗೆಗೂ ಪಾತ್ರರಾದರು. ಇವರು ಮಂದಿರದಲ್ಲಿರುವಾಗ ಬೇರೆ ಬೇರೆ ಊರುಗಳ ಅಪಾರ ಉತ್ಪನ್ನವಿರುವ ಅದೆಷ್ಟೋ ಮಠಗಳ ಅಧಿಕಾರ ಸ್ವೀಕಾರಕ್ಕಾಗಿ ಆಯಾ ಊರವರು ಬಂದು ಬಂದು ಇವರನ್ನು ಪ್ರಾರ್ಥಿಸಿಕೊಂಡರು. ಹಾನಗಲ್ಲ ಊರವರೂ ಬಂದು ಬೇಡಿಕೊಂಡರಂತೆ; ಇವರು ಯಾವುದಕ್ಕೂ ಆಶಿಸಲಿಲ್ಲ; ಜಗ್ಗಲಿಲ್ಲ; ಯಾರ ಬೇಡಿಕೆಗೂ ಸೊಪ್ಪು ಹಾಕಲಿಲ್ಲ. ‘ಉತ್ಪನ್ನವಿಲ್ಲದಿದ್ದರೂ ಅಡ್ಡಿಯಿಲ್ಲ; ಚಿಕ್ಕದಿದ್ದರೂ ಚಿಂತೆಯಿಲ್ಲ; ನನ್ನ ಈಗಿನ ನಾಗನೂರ ಮಠವೇ ನನಗಿರಲಿ’ ಎಂದು ನಿರ್ಧಾರದ ಧ್ವನಿಯಲ್ಲಿ, ಸಂತೃಪ್ತ ಭಾವದಲ್ಲಿ ಉತ್ತರಿಸಿದರು. ಇದನ್ನು ಕಂಡ ಪೂಜ್ಯ ಶ್ರೀ ಕುಮಾರ ಸ್ವಾಮಿಗಳವರು “ಚಿಕ್ಕದಾಗಿ ಕಾಣುವ ಚಿಕ್ಕೆ ಕೋಟಿ ಕೋಟಿ ಯೋಜನೆಗಳಾಚೆಯಿಂದ ತನ್ನ ಥಳಥಳಿಸುವ ಬೆಳಕನ್ನು ಹರಡಿ ವಿಶ್ವದ ಅಂಧ ತಮಂಧವನ್ನು ಸೀಳುವುದು. ಅಂತೆಯೇ ಬಾಳು, ನಿನ್ನ ಮಠವು ಚಿಕ್ಕದಾಗಿದ್ದರೂ ಆ ಮಠದ ಮೂಲದಿಂದ ಅಖಂಡ ಅನಂತ ಪ್ರಕಾಶದ, ಕಣ್ಣು ಕೋರೈಸುವ ಲಕ್ಷೋಪಲಕ್ಷ ಉಜ್ವಲ ಅಕ್ಷಯ ದಿಧಿತಿಗಳು ಅಸಂಖ್ಯ ಹೃದಯಗಳನ್ನು ತಟ್ಟಿ ಮುಟ್ಟಿ, ಅಲ್ಲಿಯ ಕಾರ್ಗತ್ತಲೆಯನ್ನು ಮೆಟ್ಟಿ ಪ್ರಜ್ಞಾನ ಬ್ರಹ್ಮವಾಗಿ ತೊಳಗಿ ಬೆಳಗಬಲ್ಲವು. ಆ ದಿವ್ಯ ಪ್ರಕಾಶದ ಪೂತ ಧವಳ ಪುಣ್ಯ ಪ್ರವಾಹದಲ್ಲಿ ನೀನು ಮಿಂದು ಕರಗಿ ಹೋಗುವಿ, ಆ ಬೆಳಕಿನಲ್ಲಿ ಬೆಳಕಾಗಿ ಬೆಳೆದು ಹೋಗುವಿ! ನಿನ್ನ ಸೇವೆಯಲ್ಲಿಯೇ ಶಿವನ ಸಾಕ್ಷಾತ್ಕಾರವಾಗುವುದು. ನಿನ್ನ ಈ ಸೌಜನ್ಯದ ವಿನಯದ ಕೈಂಕರ್ಯದ ಶೀಲದಲ್ಲಿಯೇ ಜಗದೋದ್ಧಾರದ ಶೀಲವು ಕಾಣುವುದು. ಎಲ್ಲವನ್ನೂ ಪ್ರಸಾದ ಭಾವನೆಯಿಂದ ಕಾಣುವ ನಿನಗೆ ಪ್ರಸಾದವೇ ಪರಮ ಧೈಯವಾಗುವುದು. ಅನುಪಮ ಶ್ರೇಯವಾಗುವುದು. ನಿತ್ಯ ಪ್ರಕಾಶವಾಗುವುದು. ಸತ್ಯ ಪರಮಾತ್ಮವಾಗುವುದು. ಇದರಲ್ಲಿಯೇ ನಿನ್ನ ಜೀವನದ ಸುಳುಹೂ ಇದೆ ಹೊಳಹೂ ಇದೆ ನಿನಗೆ ಶುಭವಾಗಲಿ! ಮಂಗಳ ವಾಗಲಿ!! ಎಂದು ಹೃದಯ ತುಂಬಿ, ಕಂಠ ತುಂಬಿ, ಬಾಯಿತುಂಬಿ ಆಶೀರ್ವದಿಸಿದರು. ಇಂತು ನೀಡಿದ ಆಶೀರ್ವಾದವು ಗಟ್ಟಿಗೊಳ್ಳುವಂತೆ ಕೊಡಗಲಿ ಗವಿಯಲ್ಲಿ ಶ್ರೀ ಶಿವಬಸವ ಸ್ವಾಮಿಗಳನ್ನು ಅನುಷ್ಠಾನಕ್ಕೂ ಕೂಡಿಸಿದರು.
ಇಷ್ಟೇ ಅಲ್ಲ, ತಾವು ಲಿಂಗೈಕ್ಯವಾಗುವ ಕಾಲವನ್ನು ಅಂತರ್ಜ್ಞಾನದಿಂದ ಕಂಡು ಹಿಡಿದ ಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಅದಕ್ಕಿಂತ ಕೆಲದಿನಗಳ ಪೂರ್ವದಲ್ಲಿ ಈ ಶ್ರೀ ಶಿವಬಸವ ಸ್ವಾಮಿಗಳನ್ನು ಕರೆಯಿಸಿಕೊಂಡು ಇವರಿಗೆ ಶ್ರೀ ಹಾಲಕೆರೆ ಅನ್ನದಾನೀಶ್ವರ ಮಹಾಶಿವಯೋಗಿ ಗಳಿಂದ ಆಶ್ರಮ (ಸ್ಥಳ) ದೀಕ್ಷೆಯನ್ನು ಕೊಡಿಸಿದರು. ಒಂದು ದಿನ ಬಳಿಯಲ್ಲಿ ಕರೆದು “ನೀನು ಲೋಕೋಪಕಾರಿಯಾಗು! ಲೋಕೋದ್ಧಾರಕನಾಗು!” ಎಂದು ಆಶೀರ್ವದಿಸುತ್ತ ತಮ್ಮ ಕೊರಳಲ್ಲಿರುವ ರುದ್ರಾಕ್ಷಿ ಮಾಲೆಯನ್ನು ಇವರ ಕೊರಳಿಗೆ ಹಾಕಿದರು. ಮತ್ತು ತಮ್ಮ ಪವಿತ್ರ ಹಸ್ತದಿಂದ ಆ ಪೂಜ್ಯ ಹಾನಗಲ್ಲ ಮಹಾಸ್ವಾಮಿಗಳು ಇವರಿಗೆ ಕರುಣಿಸಿದ ಭಸ್ಮದ ಘಟ್ಟಿಯೊಂದನ್ನು ಈ ರುದ್ರಾಕ್ಷಿ ಮಾಲೆಯನ್ನು ಈಗಲೂ ಈ ಶ್ರೀಗಳವರು ಗುರುಶಿಷ್ಯರ ಈ ಅನನ್ಯ ಅಭಿನ್ನ ಸಾಮರಸ್ಯದ ಸ್ಮಾರಕವಾಗಿ, ಗುರುವು ಶಿಷ್ಯನ ಮೇಲೆ ಗೆಯ್ದ ಮಹಾಕೃಪೆಯ ಪ್ರತೀಕವಾಗಿ, ಜತನದಿಂದ ಅಚ್ಚಳಿಯದಂತೆ ಕಾಯ್ದಿಟ್ಟಿರುವರು.
ಈ ಮೇರೆಗೆ ಶಿವಯೋಗಮಂದಿರದಲ್ಲಿ ಹನ್ನೆರಡು ವರ್ಷಗಳ ಹರಿಗಡಿಯದ ತಪಃಪ್ರಭಾವದಿಂದ ತಪಃಪ್ರಭೆಯಿಂದ ಆಂತರಿಕ ವಿಕಾಸವನ್ನೂ ಪ್ರಕಾಶವನ್ನೂ ಅಳವಡಿಸಿಕೊಂಡರು. ಅವರ ಬಾಳು ಕೊನರಿ ಚಿಗುರಿ ಹೂತು, ಕಾತು ಈ ತಪಸ್ತೇಜದಲ್ಲಿ ಹಣ್ಣು ಸಾರ್ಥಕತೆಯನ್ನು ಪಡೆಯಿತು. ಧನ್ಯತೆಯನ್ನು ಹೊಂದಿತು.