ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೨೫

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಈ ಲಿಂಗದೊಡಲೊಳಗೆ | ಮೂಲೋಕವಡಗಿಹುದು

ಮೂಲೋಕದೊಳಗೆ – ಈ ಲಿಂಗ ಸಂಚರವ

ಪಾಲಿಸಿದೆ ಗುರುವೆ ಕೃಪೆಯಾಗು     ||೧೧೧ ||

ಲಿಂಗಾಂಗಯೋಗವನ್ನು ವಿವರಿಸಿ ಆ ಲಿಂಗದ ಆದ್ಯಂತವನ್ನು ಅರುಹುತ್ತಾನೆ. ಗುರುಕರುಣಿಸಿದ ಲಿಂಗವು ಶಿಷ್ಯನ  ಚಿತ್ಕಳೆಯೆಂಬುದನ್ನು ತಿಳಿದಿದ್ದೇವೆ. ಚಿತ್ಕಳೆಯೇ ಚುಳುಕಾಗಿ ಕರಕಮಲಕ್ಕೆ ಬಂದ ಇಷ್ಟಲಿಂಗ ಚಿಕ್ಕದಲ್ಲ.  ಆಲದ ಬೀಜವು ಅತಿಚಿಕ್ಕದಾಗಿದ್ದರೂ ಅದರಲ್ಲಡಗಿದ ಮರದ ಧರ್ಮ ವ್ಯಾಪಕವಾಗಿದೆ. ಸಣ್ಣ ಬೀಜದಿಂದಲೇ ಬೃಹತ್ತಾದ ಗಿಡವು ಪ್ರಾದುರ್ಭವಿಸುತ್ತದೆ. ಅದರಂತೆ ಈ ಲಿಂಗದೊಡಲೊಳಗೆ  ಸ್ವರ್ಗ ಮರ್ತ್ಯ-ಪಾತಾಳವೆಂಬ ಮೂರು ಲೋಕಂಗಳು ಅಡಗಿದ್ದಾವೆ. ಲಿಂಗದಲ್ಲಿ ತ್ರಿಲೋಕಗಳ ವ್ಯಾಪಕತೆಯಿರುವಂತೆ ಮೂರು ಲೋಕಂಗಳಲ್ಲಿ ಲಿಂಗದ ಸಂಚಾರ (ವ್ಯಾಪಕತೆ) ಪಸರಿಸಿದೆ. ಲಿಂಗವಿಲ್ಲದ ಸ್ಥಾನವೇ ಇಲ್ಲ. ಈ ಮಾತನ್ನು ಸರ್ವಜ್ಞನು ಸುಂದರವಾಗಿ ಹಾಡಿದ್ದಾನೆ.

ಲಿಂಗಕ್ಕೆ ಕಡೆಯಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?

ಲಿಂಗದೊಳು ಜಗವು ಅಡಗಿಹುದು, ಲಿಂಗವನು

ಹಿಂಗಿದವರುಂಟೆ ಸರ್ವಜ್ಞ

ಲಿಂಗಕ್ಕೆ ಕಡೆ-ಮೊದಲಿಲ್ಲ, ಲಿಂಗವು ಸರ್ವತ್ರ ವ್ಯಾಪಿಸಿದೆ. ಅದುಕಾರಣ ಇದನ್ನು ಸಕಲರೂ ಗೌರವಿಸಲೇಬೇಕಾಗುವದು.

ವೀರಶೈವ ಚಿಂತಾಮಣಿಕಾರರು-

ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಮ್ |

ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯತೇ ||

ʼʼಲಿಂಗ ಮಧ್ಯದಲ್ಲಿ ಮೂರು ಲೋಕದ ಸಚರಾಚರ ಜಗತ್ತು ಅಡಕವಾಗಿದ್ದು ಆ ಲಿಂಗಕ್ಕಿಂತ ಭಿನ್ನವಾದ ವಸ್ತು ಯಾವುದೂ ಇಲ್ಲ, ಇಂಥ ಲಿಂಗಪೂಜೆ ಅವಶ್ಯ” ವೆಂದು ಪ್ರತಿಪಾದಿಸಿದ್ದಾರೆ.

ಲಿಂಗದಲ್ಲಿ ಸಕಲವೂ ವ್ಯಾಪಿಸಿದೆ. ಲಿಂಗವು ಕರದ ವರರತ್ನ. ಅಂತೆಯೇ-

ಏಕೇನ ವಿಜ್ಞಾತೇನ ಸರ್ವ೦ ವಿಜ್ಞಾತಂ ಭವತಿ | ತದ್ಬ್ರಹ್ಮ||ʼʼ

ಪರಾತ್ಪರವೆನಿಸಿದ ಏಕಮೇವ ವಸ್ತುವಿನ ಸಾಕ್ಷಾತ್ಕಾರದಿಂದ ಸಕಲ ವಸ್ತುಗಳ ಜ್ಞಾನ-ವಿಜ್ಞಾನಗಳು ತಿಳಿಯುವವು. ಅದುವೇ ಬ್ರಹ್ಮ (ಪರಬ್ರಹ್ಮ) ಎಂದು ಉದ್ಧಾಲಕ ಮುನಿಯು ದ್ವಾದಶವರ್ಷ ಅಧ್ಯಯನ ಮಾಡಿ ಮರಳಿದ, ಅಭಿಮಾನಿಯೆನಿಸಿದ. (ಪುತ್ರ) ಶ್ವೇತ ಕೇತುವಿಗೆ ತಿಳಿಯಪಡಿಸಿದಂತೆ ಈ ಲಿಂಗದ ವಿಜ್ಞಾನವನ್ನು ಅವಗತ ಮಾಡಿಕೊಂಡ ಭಕ್ತನು ಯಾವುದರ ಗೊಂದಲಕ್ಕೆ ಅವಕಾಶವೀಯುವುದಿಲ್ಲ. ಆ ಕರದಿಷ್ಟ ಲಿಂಗದಲ್ಲಿಯೇ ಸಕಲ ಸೌಭಾಗ್ಯ ಸನ್ನಿಹಿತವಾಗಿರುತ್ತದೆ.

 ಆನು ಕಾಮಿಸುತಿಪ್ಪ ಸಾಲೋಕ್ಯವಿದೆ.

 ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ.

ಧರ್ಮವಿದೆ, ಅರ್ಥವಿದೆ, ಕಾಮವಿದೆ, ಮೋಕ್ಷವಿದೆ,

ಎನ್ನ ಧ್ಯಾನದ ಜಪ-ತಪದಿಂದಲೇ ಸಿದ್ಧಿಯಪ್ಪ ಮಹಾಸಿದ್ಧಿಯಿದೆ,

ಆನೇನ ಇಚ್ಛೈಸುವ ಎಲ್ಲವೂ ಇದೆ ನೋಡಾ !

ಶ್ರೀಗುರು ಕಾರುಣ್ಯದಿಂದ ಮಹಾವಸ್ತು

ಕರಸ್ಥಲಕ್ಕೆ ಬಂದ ಬಳಿಕ ಸರ್ವಸುಖ ಇದೆ ನೋಡಾ !

ಇನ್ನು ಬಯಲಭ್ರಮೆಯೊಳಗೆ ಹೊಗಿಸದಿರಯ್ಯಾ

ನಿಮ್ಮ ಬೇಡಿಕೊಂಬೆನು ನಿಮಗೆ ಎನ್ನಾಣೆ

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ

ಚತುರ್ವಿಧ ಮುಕ್ತಿಗಳು ಚತುರ್ವಿಧ ಪುರುಷಾರ್ಥಗಳು, ಶಿವಭಕ್ತರು ಬಯಸುವ ಸಕಲ ಪಡಿಪದಾರ್ಥಗಳು ಸಂಕಲ್ಪಗಳು ಕರದಿಷ್ಟಲಿಂಗದ ಧ್ಯಾನ ತಪಾದಿಗಳಿಂದ ಸುಲಭವಾಗಿ ಸಿದ್ಧಿಸುತ್ತವೆಂದ ಬಳಿಕ ಬಯಲು ಭ್ರಮೆಯಲ್ಲಿ ಮನ ಚಲಿಸದಂತಿರಿಸೆಂದು ಆಣೆಯಿಟ್ಟು ಬೇಡಿದ ಉರಿಲಿಂಗ ಪೆದ್ದಣ್ಣನ ಮಾತು ಮನನೀಯ ವಾಗಿದೆ.

ಈಶಾವಾಸ್ಯೋಪನಿಷತ್ತು ಲಿಂಗದ ಪರಿಪೂರ್ಣತೆಯನ್ನು ಉದ್ಘೋಶಿಸಿದೆ

ಓಂ ಪೂರ್ಣಮದಃ ಪೂರ್ಣಮಿದಂ

ಪೂರ್ಣಾತ್ ಪೂರ್ಣಮುದಚ್ಯತೇ ।

ಪೂರ್ಣಸ್ಯ ಪೂರ್ಣಮಾದಾಯ

ಪೂರ್ಣಮೇವಾವ ಶಿಷ್ಯತೇ ।।

ಓಂಕಾರರೂಪದ ಮಹಾಲಿಂಗವು ಪೂರ್ಣವಾಗಿದೆ. ಅದರಿಂದಾದ ಈ ಜಗವೂ ಪರಿಪೂರ್ಣವೇ ಆಗಿದೆ. ಪೂರ್ಣದಲ್ಲಿ ಪೂರ್ಣವನ್ನು ಬೆರೆತರೆ ಪೂರ್ಣವೇ ತಾನೇ ಉಳಿಯುವಂತೆ ಮಹಾಲಿಂಗ ಹಾಗೂ ಇಷ್ಟಲಿಂಗಕ್ಕೂ ಅಂತರವಿಲ್ಲ, ಆಚಾರಾದಿ ಲಿಂಗಗಳ ಆರಾಧನೆಯಿಂದ ಮಹಾಲಿಂಗದಲ್ಲಿ ಕೂಡಿ ಮಹಾಲಿಂಗವೇ ತಾನಾದ ಶರಣನು ಪೂರ್ಣನೆನಿಸುವನು.

 ಜಗತ್ತಿನಲ್ಲಿ ಕಾಣಬರುವ ಲಿಂಗಗಳಿಂದ ಈ ಲಿಂಗ ತತ್ತ್ವದ ವ್ಯಾಪಕತೆ ವೇದ್ಯವಾಗುವದು. ಕಾಶಿಯ ಶ್ರೀಬಾಬು ಶಿವಪ್ರಸಾದರು- “ಪೃಥ್ವಿ ಪ್ರದಕ್ಷಿಣೆ’ ಎಂಬ ಗ್ರಂಥದಲ್ಲಿ – ಮಿಸರದೇಶದಲ್ಲಿ ”ಅಸಿರಿಸ್” ಮತ್ತು ‘ಆಯಿಸಿಸ್” ಎಂಬ ಲಿಂಗವನ್ನೂ, ಗ್ರೀಸ್ ದೇಶದಲ್ಲಿ ಬೆಸಕ್’ ಮತ್ತು ‘ಪಿಯಸಸ್’ ಎಂಬ ಲಿಂಗವನ್ನೂ, ಸ್ಕಾಟಲೆಂಡದ ಗ್ಲಾಸಗೋ ಪಟ್ಟಣದಲ್ಲಿ ಸುವರ್ಣವಿಶಿಷ್ಟ ಲಿಂಗವನ್ನೂ, ಆಸ್ಟ್ರಿಯಾ, ಹಂಗೇರಿಯಲ್ಲಿ ತಂತ್ರಿಸ್ಟಕ ಎಂಬ ಲಿಂಗವನ್ನು, ಅಸೀರಿಯಾ ದೇಶದ ಬಿಲಸನಗರದಲ್ಲಿ ಮುನ್ನೂರು ಘನಹಸ್ತ ಪ್ರಮಾಣವುಳ್ಳ ಮಹಾಲಿಂಗವನ್ನೂ, ಅರಬಸ್ತಾನದಲ್ಲಿ ‘ಸಗೆ ಅನಬದ್’ ಅಂದರೆ ಮಕ್ಕೇಶ್ವರ ಲಿಂಗ (ಇದಕ್ಕೆ ಮುಸಲ್ಮಾನರು ಶ್ರದ್ಧಾಪೂರ್ವಕ ಚುಂಬನ ಕೊಡುತ್ತಾರೆ). ವನ್ನೂ, ಇರಾಣದಲ್ಲಿ ಜ್ವಾಲಾಮಯ ಲಿಂಗವನ್ನೂ, ಪೆರುದೇಶದಲ್ಲಿ ‘ಪಾರ್ಥಿವೇಶ್ವರ” ಲಿಂಗವನ್ನೂ, ಅಮೇರಿಕೆಯ ಪೆಂಬ್ರುಕೋ ಪಟ್ಟಣದಲ್ಲಿ “ದ್ವಿಮುಖ” ಲಿಂಗವನ್ನೂ, ಅಮೇರಿಕೆಯ ಟೆನ್ನಿ ಪಟ್ಟಣದಲ್ಲಿ ಘನಲಿಂಗವನ್ನೂ, ಇಂದಿಗೂ ಆ ಭಾಗದ ಜನರು ಪೂಜಿಸುತ್ತಿದ್ದಾರೆ” ಎಂದು ಲಿಂಗಪೂಜೆಯ ವಿಶ್ವವ್ಯಾಪಕತೆಯನ್ನು ವಿವರಿಸಿದ್ದಾರೆ.

 ಉತ್ತರ ಪ್ರದೇಶದ ಗೋರಖಪುರದಿಂದ ಪ್ರಕಟವಾಗುವ ‘ಕಲ್ಯಾಣ’ ಮಾಸ ಪತ್ರಿಕೆಯ ‘ಶ್ರೀ ಶಿವಾಂಕ” ವೆಂಬ ವಿಶೇಷಾಂಕವನ್ನು ಸನ್ ೧೯೩೩ ರಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಲಿಂಗತತ್ತ್ವದ ಪುರಾತನತೆಯನ್ನು ಮತ್ತು ವಿಶ್ವವ್ಯಾಪಕತೆಯನ್ನು ಅವಲೋಕಿಸಬಹುದು. ಭಾರತೀಯ ಇತಿಹಾಸಕಾರರು ಮತ್ತು ಪುರಾತತ್ತ್ವ ಸಂಶೋಧಕರು ಸಂಗ್ರಹಿಸಿದ ಸಿಂಧೂ ನದಿಯ ಹರಪ್ಪಾ ಮತ್ತು ಮೆಹಂಜೋದಾರದ ಅವಶೇಷಗಳಲ್ಲಿ ಉಪಲಬ್ಧವಾದ ಲಿಂಗಗಳಿಂದ ಲಿಂಗ ಸಂಸ್ಕೃತಿಯ ೪-೫ ಸಾವಿರ ವರುಷ ಪೂರ್ವದ್ದೆಂದು ತಿಳಿದು ಬರುತ್ತದೆ.

ಮೇಲಿನ ಇತಿಹಾಸ ಸ್ಥಾವರ ಲಿಂಗಕ್ಕೆ ಸೀಮಿತವಾದುದು. ಸಿಂಧೂ ಸಂಸ್ಕೃತಿ ಯಲ್ಲಿ ಮಾತ್ರ ಇಷ್ಟಲಿಂಗದ ಅವಶೇಷ ಸಿಕ್ಕುತ್ತದೆ. ಬೃಹತ್ತಾದ, ಹಾಗೂ ಸ್ಥಾವರತ್ವವನ್ನು ಹೊಂದಿದ ಲಿಂಗವನ್ನು ಅಧ್ಯಾತ್ಮಿಕವಾಗಿ ಇಷ್ಟಲಿಂಗವನ್ನಾಗಿ ಅಳವಡಿಸಿಕೊಡುವ ಸದ್ಗುರುವು ಸಾಮಾನ್ಯನಲ್ಲ.  ಅಂತರಂಗದ ಅರುಹಿನ ಕುರುಹೆನಿಸಿದ ಕರದಿಷ್ಟ ಲಿಂಗವನ್ನು ಶರೀರದಿಂದ ಅಗಲದಂತಿರಿಸಬೇಕು. ಅಂದರೆ ಸದಾ ಲಿಂಗದೇವನ ಸಹವಾಸದಲ್ಲಿ ಲಿಂಗಗುಣಗಳು ಮೈಗೂಡುತ್ತವೆ.

ಇಷ್ಟ-ಪ್ರಾಣ-ಭಾವಲಿಂಗಗಳನ್ನು ಸತ್ಕ್ರಿಯಾ-ಸುಜ್ಞಾನ ಪೂರ್ವಕ ಸಂಪೂಜಿಸಿ ಸ್ಥೂಲ-ಸೂಕ್ಷ್ಮ-ಕಾರಣವೆಂಬ ಶರೀರತ್ರಯ ರೂಪ ತ್ರಿವಿಧ ಲೋಕದಲ್ಲಿಯೂ ಆ ಲಿಂಗಗಳು ವ್ಯಾಪಿಸುವಂತೆ ಮಾಡಿಕೊಳ್ಳಬೇಕು. ಅರ್ಥಾತ್, ತ್ರಿವಿಧ ತನುಗಳಿಗೆ ಸಂಬಂಧಿಸಿದ ತ್ರಿವಿಧ ಲಿಂಗಗಳ ಅನುಸಂಧಾನವನ್ನು ಸಾಧಿಸಿ ಲಿಂಗಸ್ವರೂಪನೇ ತಾನಾಗಬೇಕು. ಇದುವೇ ಶ್ರೀಗುರುವಿನ ಕೃಪೆಯ ಸತ್ಪಲವೆನಿಸುವದು.

ಆದಿ ಪೀಠವೆ ಗುರು ಮೇ | ಲಾದ ಪೀಠವೆ ಲಿಂಗ ಅ-

ನಾದಿ ಗೋಮುಖವೆ-ಮೋದ ಜಂಗಮವೆಂದು

ಭೋಧಿಸಿದ ಗುರುವೆ ಕೃಪೆಯಾಗು      || ೧೧೨ ॥

ಪರಶಿವನ ಸಾಕ್ಷಾತ್ ಸ್ವರೂಪವೇ ಲಿಂಗವಾಗಿರವುದೆಂಬುದನ್ನು ಅರಿತಾಯಿತು. ಪರಶಿವನು ನಿಷ್ಕಲನು; ನಿರ್ಗುಣನು. ಲಿಂಗದಲ್ಲಿ ಸಕಲ ನಿಷ್ಕಲತೆಯಿದೆ. ಸಗುಣ ನಿರ್ಗುಣತ್ವವಿದೆ. ಶಿವನು ಭಕ್ತೋದ್ಧಾರಕ್ಕಾಗಿ ತ್ರಿವಿಧ ರೂಪವನ್ನು ಧರಿಸಿದ್ದಾನೆ. ಗುರು-ಲಿಂಗ-ಜಂಗಮರೇ ತ್ರಿಮೂರ್ತಿಗಳು. ವೀರಶೈವರಿಗೆ ಇವು ಪರಮ ಪೂಜನೀಯ ವಸ್ತುಗಳು. ಇವರನ್ನು ಬಿಟ್ಟು ಬೇರೆ ಪೂಜ್ಯರಿಲ್ಲ ವೀರಶೈವರಿಗೆ ಅದು ಕಾರಣ ತನ್ನಂಗೈಯಲ್ಲಿ ಕಾಣುವ ಲಿಂಗದಲ್ಲಿಯೂ ಗುರು-ಜಂಗಮರ ಸ್ವರೂಪವು ಸುಪ್ತವಾಗಿರುತ್ತದೆ.

 “ಸಚ್ಛಿದಾನಂದಂ ಬ್ರಹ್ಮ’ ” ಸತ್ ಚಿತ್ ಆನಂದವೇ ಬ್ರಹ್ಮವೆಂಬ ಶೃತಿ ವಾಕ್ಯದಂತೆ ಲಿಂಗದ ಆದಿ ಪೀಠವು ಅಂದರೆ ಲಿಂಗದ ಕೆಳಗಿನ ಭಾಗವು ಸತ್ ಸ್ವರೂಪನಾದ ಗುರು ರೂಪವಾಗಿದೆ. ಅರ್ಥಾತ್ ಗುರುವು ಲಿಂಗವನ್ನು ಸೃಷ್ಟಿಸುವವನು. ಗುರು ಲಿಂಗಕ್ಕೆ

ಆಧಾರನಾಗಿದ್ದಾನೆ. (ಲಿಂಗದ) ಮೇಲಿರುವ ಬಾಣವು ಅಥವಾ ಲಿಂಗವು ಚಿತ್ ಸ್ವರೂಪವಾಗಿದೆ. ಅನಾದಿ ಗೋಮುಖವು ಆನಂದದಾಯಕನಾದ ಜಂಗಮ ಸ್ವರೂಪವೆನಿಸಿದೆಯೆಂದು ಗುರುವರನು ಬೋಧಿಸುತ್ತಾನೆ.   

ಈ ಕೃತಿಕರ್ತರ ಸಮಕಾಲೀನರೂ, ಶರಣ ಸಹೋದ್ಯೋಗಿಗಳೂ ಚನ್ನ ವೀರೇಶ್ವರ ಯತಿಗಳ ಪರಮ ಶಿಷ್ಯರೂ ಆದ ಬನ್ನಿಮಟ್ಟಿ ಚನ್ನಪ್ಪನವರು ತಮ್ಮ’ಶಿವಾನುಭವ ದೀಪಿಕೆ” ಯಲ್ಲಿ ಇದೇ ಅರ್ಥವನ್ನು,

ಲಿಂಗದಡಿ ಪೀಠ ಶ್ರೀಗುರು |

ಲಿಂಗದ ಮೇಲೂರ್ಧ್ವಪೀಠ ಚಿದ್ಘನಲಿಂಗ ||

ಲಿಂಗದ ಗೋಮುಖ ಜಂಗಮ |

ಲಿಂಗವೆ ಕೂಡಲ ಸಂಗಂ ಬಸವ ಪ್ರಭುವೆ || ೨೮೯ |

ಎಂದು ಪುಷ್ಟಿಕರಿಸುವಂತೆ ಬಣ್ಣಿಸಿರುತ್ತಾರೆ.

ಗುರು-ಜಂಗಮರ ಸಾನಿಧ್ಯವಿಲ್ಲದ ಸಮಯಕ್ಕೆ ಕೇವಲ ಕರದಿಷ್ಟಲಿಂಗವನ್ನು ಪೂಜಿಸಿದರೂ ತ್ರಿವಿಧ ಪೂಜ್ಯರ ಪೂಜೆ ಪೂರೈಸಿದಂತಾಗುವದು. ಈ ತ್ರಿವಿಧ ಪೂಜ್ಯ ವಸ್ತುಗಳು ಅವಿಭಾಜ್ಯ ಅಂಗಗಳು. ಇವು ಒಂದಕ್ಕೊಂದು ಆಶ್ರಯಿಸಿವೆ. ಅದು ಕಾರಣ ಈ ಬೋಧೆಯನ್ನು ಮನದಲ್ಲಿ ಅಳವಡಿಸಿಕೊಂಡು ತ್ರಿವಿಧ ಪೂಜ್ಯ ವಸ್ತುಗಳ ಪೂಜೆ ಮಾಡಿದ ಆನಂದವನ್ನು ಹೊಂದಬೇಕು. ಅಂದರೆ ಮಾತ್ರ ಗುರುಬೋಧೆ ಯಥಾರ್ಥ ವಾಗುವದು

ಅಡಿಯ ಪೀಠವೆ ಇಷ್ಟ | ಮುಡಿಯ ಪೀಠವೆ ಪ್ರಾಣ

ನಡುವಣ ಗೋಮುಖ-ದೃಢ ಭಾವ ಲಿಂಗವೆಂ-

ದೊಡನುಸಿರ್ದ ಗುರುವೆ ಕೃಪೆಯಾಗು     II ೧೧೩ II

ಲಿಂಗದ ಅಡಿಯು ಪೀಠವು, (ಕೆಳಭಾಗ) ಇದು ಲಿಂಗಕ್ಕೆ ಪಾದವಾಗಿದೆ. ಲಿಂಗದ ಪಾದವು ಕ್ರಿಯಾಸ್ವರೂಪವು. ಲಿಂಗದ ಮೇಲಿನ ಪೀಠವು ಮುಡಿಯು ಅಂದರೆ ಮಸ್ತಕವು. ಇದು ಜ್ಞಾನದ ಸಂಕೇತವು. ಜ್ಞಾನವು ಮಸ್ತಕದಲ್ಲಿರುವದು ಸರ್ವರಿಗೂ ಅರಿತ ವಿಷಯ. ಜ್ಞಾನ ಕ್ರಿಯೆಗಳ ವ್ಯಾಖ್ಯಾನದಲ್ಲಿ ಪಾದಕ್ಕೆ ಕ್ರಿಯೆಯ ಉಪಮೆಯನ್ನು ಜ್ಞಾನಕ್ಕೆ ಮುಡಿಯ ಮಾತನ್ನು ಮಹಾನುಭಾವಿಗಳು ಮಾರ್ನುಡಿದಿದ್ದಾರೆ. ಕ್ರಿಯೆಗೆ ಜ್ಞಾನವೇ ಪ್ರಾಣವು. ಪ್ರಾಣವಿಲ್ಲದ ಶರೀರ ಶವವಾಗುವಂತೆ; ಜ್ಞಾನಶೂನ್ಯವಾದ ಕ್ರಿಯೆಯು ಜಡವಾಗುತ್ತದೆ. ಕ್ರಿಯಾ-ಜ್ಞಾನಗಳ ಸಮನ್ವಯದಲ್ಲಿ ಭಾವ ಅಥವಾ ಅನುಭಾವ ಅನುಗೂಡುತ್ತದೆ. ಆದ್ದರಿಂದ ಅಡಿಪೀಠ  ಇಷ್ಟಲಿಂಗವಾದರೆ ಮುಡಿಪೀಠ ಪ್ರಾಣಲಿಂಗವಾಗುತ್ತದೆ. ನಡುವಿನ ಗೋಮುಖವು ದೃಢತರವಾದ ಭಾವ ಲಿಂಗವಾಗಿ ಪರಿಣಮಿಸುವದು.

ಕ್ರಿಯಾ ಜ್ಞಾನಗಳ ಸಮ-ಸಮುಚ್ಚಯದಲ್ಲಿ ಅನುಭಾವ ಬೆಳೆಯುವದು. ಈ ರೀತಿಯಾಗಿ ಕರದಿಷ್ಟಲಿಂಗದಲ್ಲಿ ಪ್ರಾಣ-ಭಾವಲಿಂಗಗಳು ಸೇರಿ ತ್ರಿವಿಧ ಬಗೆಯಾಗಿದ್ದ ಪರಿಯನ್ನು ಶ್ರೀಗುರುವರನು ಉಸುರುತ್ತಾನೆ. ಕ್ರಿಯಾಜ್ಞಾನಗಳು ಸಂಬಂಧವಾಗಿ ಆಚರಣೆಯಲ್ಲಿ ಅಳವಟ್ಟರೆ ಭಾವಬಲಿಯುವದು. ಭಾವ ದೃಢವಾದರೆ ಆ ಕ್ರಿಯಾಲಿಂಗ (ಇಷ್ಟಲಿಂಗ) ಹಾಗೂ ಜ್ಞಾನ (ಪ್ರಾಣ) ಲಿಂಗಗಳು ಭಾವ ಲಿಂಗದಲ್ಲಿ ಒಂದುಗೂಡುವವು. ಅದು ಕಾರಣವೇ ಶಿವಕವಿಯು ಭಾವಕ್ಕೆ ದೃಢ ಭಾವವೆಂದು ಸ್ಪಷ್ಟಪಡಿಸಿರುವನು. “ಭಾವದಲ್ಲಿ ಬ್ರಹ್ಮವೆಂಬ ಮಾತನ್ನು ಅನುಭಾವಿಗಳೂ ಹೇಳಿದ್ದುಂಟು. “ಯಥಾ ಭಾವಸ್ತಥಾ ಸಿದ್ಧಿರ್ಭವತಿ”, ಶುದ್ಧಭಾವದಂತೆ ಸಿದ್ಧಿಯು ಸಂಭವಿಸುವದೆಂದು ಜ್ಞಾನಿಗಳೂ ಪ್ರತಿಪಾದಿಸಿರುವರು.

 ಮೂಢ ಮನುಷ್ಯನ ಭಾವದಲ್ಲಿ ದೃಢತೆಯಿರುತ್ತದೆ. ಗುರುವಾಕ್ಯದಲ್ಲಿ ಶ್ರದ್ಧೆ- ವಿಶ್ವಾಸಗಳು ಘಟ್ಟಿಗೊಂಡಿರುತ್ತವೆ. ಅಂತೆಯೇ ಮುಗ್ಧ ಭಕ್ತನು ಕಲ್ಲನ್ನೂ ದೇವನನ್ನಾಗಿ ಪರಿವರ್ತಿಸಿದ ಉದಾಹರಣೆಗಳು ನಮ್ಮ ಭಾರತೀಯ ಧಾರ್ಮಿಕ ಸಾಹಿತ್ಯದಲ್ಲಿ ವಿಪುಲವಾಗಿವೆ. ಹಾಲುಮತದ ಗೊಲ್ಲಾಳನು ಕುರಿಯ ಹಿಕ್ಕಿಯಲ್ಲಿ ಶಿವಲಿಂಗವನ್ನು ಕಂಡನು. ಬೇಡರ ಕಣ್ಣಪ್ಪನ ದೃಢ ಭಾವಕ್ಕೆ ಶಿವನು ದೃಢತರ ಪದವಿಯನ್ನಿತ್ತನು. ಅರವತ್ತುಮೂರು ಪುರಾತನರ ಚರಿತ್ರೆಗಳಲ್ಲಿ ಭಾವದೃಢತೆಯೂ ಮತ್ತು ಆತ್ಮಸಮರ್ಪಣೆಯೂ ಪ್ರಮುಖವಾಗಿದೆ. ಭಾವಜೀವಿಯು ಆನಂದಮಯನಾಗಿರುತ್ತಾನೆ. ವಿಮರ್ಶಕನ ಭಾವದಲ್ಲಿ ದೃಢತೆಯಿರುವದಿಲ್ಲ. ಅವನಲ್ಲಿ ಪ್ರತಿಯೊಂದನ್ನು ಪರೀಕ್ಷಿಸುವ ಚಿಕಿತ್ಸಕ ಬುದ್ಧಿ-ಭಾವಗಳು ನೆಲಸಿರುತ್ತವೆ.

 ಶರಣರು ಕೇವಲ ಭಾವ ಜೀವಿಗಳಲ್ಲ, ಕೇವಲ ಜ್ಞಾನಿಗಳಲ್ಲ. ಕರ್ಮಠರೂ ಅವರಲ್ಲ, ಅವರು ಕ್ರಿಯಾ-ಜ್ಞಾನಗಳ ಸಮ್ಮಿಲನದಲ್ಲಿ ಸಮರಸಾನಂದದ ಸವಿಯುಂಡರು ಸಂತಸಪಟ್ಟರು. ಇದುವೇ ಲಿಂಗಾನುಸಂಧಾನದ ಅರಿವು, ಅನುಭಾವದ ಕುರುಹು.

 ಇಂಥ ಕ್ರಿಯಾ-ಜ್ಞಾನ-ಭಾವಗಳ ಮುಪ್ಪುರಿಯೇ ಈ ದೃಷ್ಟಿಲಿಂಗವೆಂದು ಬೋಧಿಸಿದ ಸದ್ಗುರುವೆ ! ಅದರಂತಜ್ಞಾನಸವಿಯನ್ನು ಸವಿಯುವ ಸೌಭಾಗ್ಯವನ್ನು ಸಮನಿಸು.

ಮೊದಲ ಪೀಠವೆ ಸ್ವಯ | ತುದಿಯ ಪೀಠವೆ ಚರ ಮ-

ಧ್ಯದ ಗೋಮುಖ ಪರತತ್ತ್ವ ಜಂಗಮವು ಎಂ

ಬುದ ಪೇಳ್ದ ಗುರುವೆ ಕೃಪೆಯಾಗು     ||೧೪  ||

ಲಿಂಗವು ಇಷ್ಟ-ಪ್ರಾಣ-ಭಾವವೆಂದು ತ್ರಿವಿಧವಾಗಿರುವಂತೆ ಲಿಂಗದ ಹರಣ ವಾದ ಜಂಗಮವೂ ಮೂಬಗೆಯಾಗಿದೆ. ಜಂಗಮದಲ್ಲಿ ಸ್ವಯಜಂಗಮನೆಂತಲೂ ಚರಜಂಗಮನೆಂತಲೂ, ಪರಜಂಗಮನೆಂತಲೂ, ಮೂರು ವಿಧ. ಈ ಮೂವರ ಸ್ವಸ್ವರೂಪ ಲಕ್ಷಣವನ್ನು ಶಿವಕವಿಯು ಮುಂದೆ ಜಂಗಮತತ್ತ್ವವನ್ನು ಪ್ರತಿಪಾದಿಸುವ ಅವಸರದಲ್ಲಿ ವರ್ಣಿಸಿದ್ದಾನೆ. ಲಿಂಗಪೂಜೆಯ ಫಲ ಜಂಗಮನ ಸಾಕ್ಷಾತ್ಕಾರ; ಹಾಗೂ ಪಾದೋದಕ-ಪ್ರಸಾದಗಳು.

  ಸಾಮಾನ್ಯವಾಗಿ ಯಾವುದೊಂದು ವಸ್ತುವಿನ ಯಥಾರ್ಥ ಸ್ವರೂಪವನ್ನು ಅರಿಯುವಾಗ ಆದ್ಯಂತಗಳನ್ನು ಅವಲೋಕಿಸುತ್ತೇವೆ. ಕೆಳಗೆ ಮತ್ತು ಮೇಲೆ ನೋಡುತ್ತೇವೆ. ಅದರೊಳಗಿನ ಗುಣವನ್ನು ಪರೀಕ್ಷಿಸಬೇಕಾಗುವದು. ಕಾರಣ ಪೃಥ್ವಿಯಲ್ಲಿ ಸ್ಥೂಲವಾಗಿ ವ್ಯಾಪಿಸಿರುವದನ್ನು ನೋಡುತ್ತೇವೆ. ಆ ಮೇಲೆ ಅದು ಏನೆಂಬುದನ್ನು ವಿಚಾರಿಸಲು ಮೇಲೆ ನೋಡುತ್ತೇವೆ. ಉದಾಹರಣೆಗಾಗಿ ಒಂದು ವನವನ್ನು ಪ್ರವೇಶಿಸುತ್ತ ಗಿಡಗಳ ಬೊಡ್ಡೆಗಳನ್ನು ಕಾಣುತ್ತೇವೆ. ಇದು ಯಾವ ಮರವೆಂಬ ವಿಚಾರ ಸುಳಿಯುತ್ತಲೇ ಮೇಲೆ ಅವಲೋಕಿಸಿ ಅರ್ಥೈಸಿಕೊಳ್ಳುತ್ತೇವೆ. ಇನ್ನು ಮಧ್ಯಭಾಗವು ಎರಡನ್ನು ಸಮನ್ವಯಗೊಳಿಸುವದು. ಹಾಗೆ, ಲಿಂಗದಲ್ಲಿ ಮೊದಲ ಪೀಠವು ಸ್ಥಾಯಿಯಾಗಿ (ಮೇಲಿನ ಬಾಣಕ್ಕೆ ಆಧಾರವಾಗಿ) ರುವದರಿಂದ ಅದು ಸ್ವಯ ಜಂಗಮವೆನಿಸುವದು. ಲಿಂಗಭಕ್ತನು ಲಿಂಗಪೂಜೆಯಲ್ಲಿ ತನ್ನ ದೃಷ್ಟಿ ಮನಗಳನ್ನು ಲಿಂಗದ ತುದಿಯ ಮೇಲಿರಿಸುವದರಿಂದ ಅದು ಚರಜಂಗಮವೆನಿಸುವದು. ಯಾಕಂದರೆ ಲಿಂಗದಲ್ಲಿ ದೃಷ್ಟಿ-ಮನಗಳು ಸಂಚಲನೆಗೊಳ್ಳುತ್ತಿರುವದರಿಂದ ಅದು ಚರಜಂಗಮವಾಗಿದೆ. ಮೊದಲ ಭಾಗ ಹಾಗೂ ತುದಿಗಳ ಅವಲೋಕನಯಲ್ಲಿ ಮಧ್ಯದ ಗೋಮುಖವು. ಮೇಲಿನವೆರಡೂ ಕ್ರಿಯೆಗಳಿಗೆ ಸಮನ್ವಯಗೊಂಡು ಪರವಾಗಿರುವುದರಿಂದ ಅದು ಪರಜಂಗಮವೆನಿಸುವದು. ಪರಜಂಗಮನು ಸ್ವಯ ಚರಜಂಗಮತ್ವದ ಕ್ರಿಯೆಗಳನ್ನು ಆಚರಿಸಿ ಮುಕ್ತನೆನಿಸುವನು. ತನ್ನ ಲಿಂಗಾನಂದದಲ್ಲಿಯೇ ತಲ್ಲೀನನಾಗಿರುವನು. ಅದು ಕಾರಣ ಪರತರವಾದ ಈ ಇಷ್ಟಲಿಂಗದಲ್ಲಿ ಲಿಂಗದ ಪ್ರಾಣವೆನಿಸಿದ ಜಂಗಮವು ಸ್ವಯ-ಚರ-ಪರವೆಂದು ಮೂಬಗೆಯಾಗಿ ಅಡಕವಾಗಿದೆಯೆಂಬ ತತ್ತ್ವವನ್ನು ಗುರುನಾಥನು ತಿಳಿಸಿಕೊಡುತ್ತಾನೆ.

ಗುರು-ಲಿಂಗ-ಜಂಗಮವು | ವರಭಾವ ಪ್ರಾಣೇಷ್ಟ

ಸ್ಥಿರ-ಚರ-ಪರ ಮೂರು-ಕರದಿಷ್ಟಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೫ ||

ಬಸವಲಿಂಗ ಶರಣರು ಶ್ರೇಷ್ಠದಾರ್ಶನಿಕರು, ಹಾಗೂ ಅನುಭಾವಿ ಕವಿಗಳು. ಅಂತೆಯೇ ಶಿವಾನುಭವವನ್ನು ತಿಳಿಯಲಿಚ್ಛಿಸುವ ಜಿಜ್ಞಾಸುವಿಗೆ ಪ್ರತಿಯೊಂದು ವಿಷಯವನ್ನು ಹಿಂಜಿ-ಹಿಂಜುವ ಜೊತೆಗೆ ಸಿಂಹಾವಲೋಕನವನ್ನು ಆಗಾಗ್ಗೆ ಮಾಡಿಸುತ್ತಾರೆ. ವನರಾಜನಾದ ಸಿಂಹವು ತಾನು ನಿಂತಲ್ಲಿಂದಲೇ ಹಿಂದಿನದನ್ನು ಮುಂದಿನದನ್ನೂ ಅವಲೋಕಿಸುತ್ತದೆ. ಧೀರನಾದವನು ಹಿಂದೆ ಅನುಭವಿಸಿದ ಅನುಭವವನ್ನು ಮೆಲುಕು ಹಾಕುತ್ತ ಮುಂದೆ ಸಾಧಿಸಬೇಕಾದುದನ್ನು ಆಲೋಚಿ ಸುತ್ತಾನೆ. ಹಿಂದಿನ ಅನುಭವವನ್ನು ಸಿಂಹಾವಲೋಕನಗೈಯುತ್ತಾನೆ. ಮೇಲಿನ ಕ್ಲಾಸಿಗೆ ಮುಂದು ವರೆಯುವ ವಿದ್ಯಾರ್ಥಿಯು ಹಿಂದಿನ ಅಭ್ಯಾಸವನ್ನು ಅವಲೋಕಿಸುತ್ತಿರ ಬೇಕು. ಬುನಾದಿ ಭದ್ರವಾಗಿದ್ದರೆ ಭವನವು ಭದ್ರವಾಗುವದು. ಕಾರಣ ಸಾಧಕನು ಮುಂದುವರಿಯಲು ಹಿಂದಿನ ಸತ್ಕ್ರಿಯೆಗಳನ್ನು ಬಿಡದಂತೆ ಆಚರಿಸುತ್ತಿರಬೇಕು. ಮತ್ತು ಪೂರ್ವದ ಶಾಸ್ತ್ರ ಶ್ರವಣವನ್ನು (ಹಿಂದಿನ ಪ್ರಕ್ರಿಯೆಯನ್ನು ಮನದಲ್ಲಿಟ್ಟುಕೊಂಡರೆ ಮುಂದಣ ಅನುಭವವು ಗಮ್ಯವಾಗುವದು.

 ಶಿವಕವಿಯು ಆಗಾಗ್ಗೆ ಹಿಂದೆ ಹೇಳಿದ ವಿಷಯವನ್ನು ಅಲ್ಲಲ್ಲಿ ಸಮಾಹಾರ ಮಾಡುತ್ತಾನೆ. ಲಿಂಗದಲ್ಲಿ ಗುರು-ಲಿಂಗ-ಜಂಗಮವೆಂಬ ತ್ರಿವಿಧ ಪೂಜ್ಯವಸ್ತುಗಳು ವ್ಯಾಪಿಸಿರುವಂತೆ ಭಾವಲಿಂಗ-ಪ್ರಾಣಲಿಂಗ ಇಷ್ಟಲಿಂಗಗಳು ಒಂದಕ್ಕೊಂದು ಹೊಂದಿಕೊಂಡಿವೆ. ಜೊತೆಗೆ ಲಿಂಗದ ಚಿತ್ಕಳೆಯೆನಿಸಿದ ಸ್ವಯಜಂಗಮ, ಚರಜಂಗಮ, ಪರಜಂಗಮದ ಭಾವ ಭರಿತವಾಗಿದೆ.

 ಬ್ರಹ್ಮಾಂಡಗಳ ಮಹಾಲಿಂಗದಲ್ಲಿ ಹುದುಗಿಕೊಂಡಿದ್ದ ಶಕ್ತಿ ಚಿತ್ಕಳಾರೂಪ ಕರದಿಷ್ಟ ಲಿಂಗದಲ್ಲಿ ಅಡಗಿದೆ. ಲಿಂಗದೊಳಗೆ ಎಲ್ಲವೂ ಅಡಗಿದ್ದು ಸಕಲರಲ್ಲಿ ಲಿಂಗದ ವ್ಯಾಪಕತೆಯಿರುವಂತೆ, ಇಷ್ಟಲಿಂಗದಲ್ಲಿ ಶಿಷ್ಯನ ಸಕಲ ಚೈತನ್ಯವು ಹುದುಗಿಕೊಂಡು ಶಿಷ್ಯನಲ್ಲಿ ಪರಿಪೂರ್ಣವಾಗಿ ಲಿಂಗದ ಚೇತನ ಪಸರಿಸಿಕೊಂಡಿರುತ್ತದೆ. ಇಂಥ ಲಿಂಗದಲ್ಲಿ ಪೂಜ್ಯ ವಸ್ತುಗಳ ಸಮಾವೇಶ ಸಮನಿಸಿದೆ. ಯಾಕೆಂದರೆ ಪರಾತ್ಪರ ಪರವಸ್ತುವೇ ಸಕಲನೆನಿಸಿ ಗುರುವಾಗಿ ಲಿಂಗವನ್ನೀಯುತ್ತಾನೆ. ಅರುಹಿನ ಕುರುಹಾಗಿ ಚಿಚ್ಚೈತನ್ಯವೆನಿಸಿದ ಲಿಂಗವು ಪೂಜೆಗೊಳ್ಳುತ್ತದೆ. ಲಿಂಗಕ್ಕೇನೆ ಚೇತನವೆನಿಸಿದ ಜಂಗಮನ ಕೃಪೆಯೂ ಅತ್ಯವಶ್ಯ. ಆದುದರಿಂದ ಲಿಂಗದಲ್ಲಿ ತ್ರಿವಿಧ ವಸ್ತುಗಳ ಅಭಿನ್ನತೆಯಿದೆ. ಲಿಂಗಭಕ್ತನು ಈ ತ್ರಿವಿಧ ಪೂಜ್ಯರನ್ನು ಭಿನ್ನವಾಗಿ ಕಾಣಬಾರದು. ಅದರಲ್ಲೂ ಲಿಂಗದ ಚೈತನ್ಯನೆನಿಸಿದ ಜಂಗಮನ ತ್ರಿವಿಧ ರೂಪಗಳನ್ನೂ ಸೂಕ್ಷ್ಮವಾಗಿ ಪರೀಕ್ಷಿಸಬೇಕು. ಇಂಥ ಅಪ್ರತಿಮ ಸ್ವರೂಪದ ಲಿಂಗವು ಅಸದೃಶವಾದುದು. ಅನುಪಮವಾದುದು.

Related Posts