ಉದಂತ ಉದಯ, ಉಜ್ವಲಂತ ಉತ್ಕ್ರಮಣ

ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 3

ಜ.ಚ.ನಿ

ಹಿನ್ನೆಲೆ

ಸುಮಾರು ಎಂಬತ್ತು ಅಥವಾ ನೂರು ವರ್ಷಗಳ ಹಿಂದೆ ವೀರಶೈವ ಸಮಾಜವು ಮಹಾಂಧಕಾರದಲ್ಲಿ ಮುಳುಗಿತ್ತು. ಮಹಾರೋಗಕ್ಕೆ ಪಕ್ಕಾಗಿತ್ತು. ನಾಡಿಕ್ರಿಯೆಗಳು ನಿಲ್ಲುತ್ತ ಬಂದಿದ್ದವು. ಸಮಾಜವು ಶೈವಸಂಪ್ರದಾಯಕ್ಕೆ ಕಟ್ಟುಬಿದ್ದಿತ್ತು. ಒಂದೆಡೆಗೆ

ನಿರಾಚಾರಗಳು ಇನ್ನೊಂದೆಡೆಗೆ ಅನಾಚಾರಗಳು ಹೆಚ್ಚಿಹೋಗಿದ್ದವು. ಅತ್ಯಾಚಾರಗಳು ಅತಿಯಾಗಿದ್ದವು. ಗುರುಗಳು ತಮ್ಮ ಗೊತ್ತುಗುರಿಗಳನ್ನು ಮರೆತಿದ್ದರು. ಲಿಂಗಗಳು ಅಂಗಗಳಿಂದ ಅಗಲಿ ಮನೆಯ ಜಗುಲಿಗಳ ಏರಿದ್ದವು. ಪಂಚಸೂತ್ರದ ಮಾತು

ಸೂತಕವಾಗಿತ್ತು. ಪವಿತ್ರ ಶಿಲೆಯ ಬದಲು ಅಪವಿತ್ರ ಮಣ್ಣು ಮಟ್ಟೆಯ ಶಿಲೆಯು ಸಾಕ್ಷಿಯಾಗಿತ್ತು. ಜಂಗಮರು ತತ್ವಹೀನರಾಗಿ ತುತ್ತಿಗಾಗಿ ಅಲೆಯುತ್ತಿದ್ದರು. ಭಸ್ಮ ಭಸ್ಮವಾಗಿತ್ತು. ಮಣ್ಣು ಮಟ್ಟೆಗಳಿಂದ ಸಿಕ್ಕ ಬೂದಿ ಬೆರಣಿಗಳಿಂದ ಭಸ್ಮಗಳು ಸಿದ್ಧವಾಗುತ್ತಿದ್ದವು. ರುದ್ರಾಕ್ಷಿಗಳ ಧರಿಸುವುದೊಂದೆಡೆಗಿರಲಿ, ಕಂಡವರೆ ಇರಲಿಲ್ಲ. ಮಠಮಾನ್ಯಗಳಲ್ಲಿಯೆ ಕಾಣುವುದು ಅಪರೂಪವಾಗಿತ್ತು. ಮಂತ್ರೋಚ್ಛಾರಣೆ ಮಾಯವಾಗಿತ್ತು. ಸಂಸಾರ ಚಿಂತೆ ಮಿತಿಮೀರಿತ್ತು. ಎಲ್ಲಿಯೊ ಯಾರಾದರು ಕೆಲವರು

ಮಂತ್ರ ಜಪ ಮಾಡುತ್ತಿದ್ದರೆ ಅವರಿಗೆ ಅದರ ಅರ್ಥವೇನು, ಮರ್ಮವೇನು, ಹೇಗೆ  ಜಪಿಸಬೇಕು ಎಂಬುದೇ ತಿಳಿದಿರಲಿಲ್ಲ. ಪಾದೋದಕ ವಿಧಿ-ವಿಧಾನಗಳನ್ನು ಅರಿತವರಿರಲಿಲ್ಲ. ಪ್ರಸಾದ ಪ್ರಭಾವ ಕುಂದಿತ್ತು. ಪಂಚಾಚಾರಗಳ ಪ್ರಾಣ ತ್ರಾಣಗಳ ಸುಳಿವಿರಲಿಲ್ಲ.

 ಭಕ್ತರು ಶ್ರದ್ಧೆಗೆ ಮಹೇಶ್ವರರು ನಿಷ್ಠೆಗೆ ಪ್ರಸಾದಿಗಳು ಅವಧಾನಕ್ಕೆ ತಿಲಾಂಜಲಿಯ ಬಿಟ್ಟಿದ್ದರು. ಪ್ರಾಣಲಿಂಗಿಗಳಿಗೆ ಆನಂದದ ಸೊಗಸು ಸೋಂಕಿರಲಿಲ್ಲ. ಶರಣರಿಗೆ ಅನುಭಾವದ ಗಂಧವೇ ಗೊತ್ತಿರಲಿಲ್ಲ. ಐಕ್ಯರು ಅಲ್ಲಲ್ಲಿ ಒಬ್ಬೊಬ್ಬರು ಮಿಣುಗುತ್ತಿದ್ದರು. ಆದರೆ ಸಮಾಜದ ಸಾಮರಸ್ಯ ಅವರಿಗಿರಲಿಲ್ಲ. ಇದ್ದರೂ ಸಾಮಾಜಿಕ ಕುಂದುಕೊರತೆಗಳನ್ನು ಪೂರೈಸುವ ಕ್ರಿಯಾಶಕ್ತಿ ಅವರಲ್ಲಿರಲಿಲ್ಲ. ಜ್ಞಾನಪ್ರಚಾರವಿರಲಿಲ್ಲ. ಹೀಗೆ ಸಮಾಜವು ಅಜ್ಞಾನಾಂಧಕಾರದಲ್ಲಿ ಮುಳುಗಿತ್ತು. ನೀತಿ ರೀತಿಗಳ ಶ್ವಾಸೋಚ್ಛ್ವಸಗಳು ನಿಲ್ಲುತ್ತ ಬಂದಿದ್ದವು. ತೀರ ನಿಶ್ಯಕ್ತಿಯೊದಗಿತ್ತು. ಜಡವಾಗಿತ್ತು. ಜಂಜಾಟಕ್ಕಿಕ್ಕಿತ್ತು.

ಆ ಸಮಯದಲ್ಲಿ ವೈದ್ಯಭಾನುವಿನ ಉದಯವಾಯಿತು. ಅಂಧಕಾರ ಹರಿಯಿತು, ಭವರೋಗ ಅಳಿಯಿತು. ಆಚಾರ ವಿಚಾರ ಚಿಕಿತ್ಸೆಯಿಂದ ಉಸಿರು ಉತ್ತಮ ರೀತಿಯಲ್ಲಿ ಆಡತೊಡಗಿತು. ವರ್ಷವರ್ಷಕ್ಕು ಶಕ್ತಿ ಮೈಗೂಡಿ ಬರಹತ್ತಿತು. ಹೊಸರಕ್ತ ಧಮನಿಗಳಲ್ಲಿ ಹರಿಯತೊಡಗಿತು. ಸು. ೩೦-೩೫ ವರ್ಷಗಳಲ್ಲಿ ಸಮಾಜವು ಸಶಕ್ತವಾಗಿ ಸರ್ವಾಂಗ ಸುಂದರವಾಯಿತು. ಹಾಗಾದಲ್ಲಿ ಅಂತಹ ಅಮೋಘವಾದ ಶಕ್ತಿಗೆ ಕಾರಣರಾರು ಎನ್ನುವಿರಾ ? ಅವರೇ ಕಾರಣಿಕ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು. ಅವರು ಮೂಡಿಬಂದುದನ್ನು ಮಾಡಿ ನೆರವೇರಿಸಿದ ಮಣಿಹಗಳಾವವೆಂಬುದನ್ನು ತಿಳಿಯಲಪೇಕ್ಷಿಸುವಿರಾ ? ಹಾಗಾದರೆ ಬನ್ನಿ ! ಕೇಳಬನ್ನಿ !!

 ಕರ್ನಾಟಕ ಕೇಂದ್ರವಾದ ಧಾರವಾಡ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿರುವ ‘ಜೋಯಿಸರ ಹರಳಳ್ಳಿ’ ಎಂಬುದೊಂದು ಸಣ್ಣ ಗ್ರಾಮ, ಗ್ರಾಮ ಸಣ್ಣದಾದರೂ ಅದರ ಧಾಮ ಇಂದು ಹಿರಿಯದು. ಆ ಗ್ರಾಮದಲ್ಲಿ ದೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳಿದ್ದರು. ಅವರು ತಮ್ಮ ನಡೆನುಡಿಗಳಿಂದ ನಾಮ ನೇಮಗಳಿಂದ ಹನ್ನೆರಡನೆಯ ಶತಮಾನದಲ್ಲಿದ್ದ ಕಲ್ಯಾಣದ ಬಸವ ನೀಲಾಂಬಿಕೆಯರ ನೆನಪನ್ನು ತರುವಂತಿದ್ದರು.

 ನಿಜವಾಗಿಯು ತಾಯಿ ನೀಲಮ್ಮನು ನೀಲಾಂಬಿಕೆಯ ಸದೃಶಳು. ಗುಣಗಳಲ್ಲಿ ಗುಂಜಿಯಷ್ಟು ವ್ಯತ್ಯಾಸವಿಲ್ಲ. ಬಸವಯ್ಯನವರ ಭಾಗ್ಯದ ತವರು, ಬಾಳಿನ ಭವನ, ತಾಯಿ ನೀಲಮ್ಮನು ಬಸವಯ್ಯನವರಿಗೆ ಅನುರೂಪಳಾದ ಗೃಹಿಣಿ. ಪರಮ ಪತಿವ್ರತೆ; ಪತಿಯ ಪ್ರಾಣ ದೇವತೆ, ಶಾಂತಿ ಸಂಪನ್ನೆ, ಲಿಂಗಾರ್ಚನಾಸಕ್ತಿ, ಶ್ರಮಿಸುವ ಜೀವಿ, ಸಮತಾಭಾವಿ.

ಮನೆಯ ಕುಂದುಕೊರತೆಗಳನ್ನು ಆಚೆ ನೆರೆಯವರಿಗೆ ಚಾಚೂ ಹೇಳುತ್ತಿರಲಿಲ್ಲ. ನೆರೆ ಮನೆಗಳಿಗೆ ಸ್ವೈರವಾಗಿ ಸುಳಿಯುತ್ತಿರಲಿಲ್ಲ. ಮನೆಯ ಕಷ್ಟ ಕಾರ್ಪಣ್ಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಿರಲಿಲ್ಲ. ಕುಂದು ಕೊರತೆ ಕಷ್ಟಕಾರ್ಪಣ್ಯಗಳ ಈ ಸಂಸಾರ ಸಾಗರ ವಿಷವನ್ನು ಕಾರಿದರೂ ಕಷ್ಟ, ನುಂಗಿದರೂ ಕಷ್ಟ, ಕಾರಿದರೆ ಮನೆತನದ ಮರ್ಯಾದೆಗೆ ಭಂಗ, ನುಂಗಿದರೆ ಮನಃಶಾಂತಿಗೆ ಭಂಗ, ಇದನರಿದು ತಾಯಿ ನೀಲಮ್ಮನವರು ಈ ನಂಜನ್ನು ಕಕ್ಕದೆ ಕುಡಿಯದೆ ಕಂಠದಲ್ಲಿಯೇ ಇರಿಸಿಕೊಂಡು ನಿಜಕ್ಕೂ ನೀಲಕಂಠಯರಾಗಿದ್ದರು. ನೀಲಕಂಧರನು ಜೀವನದಲ್ಲಿ ಒಮ್ಮೆ ವಿಷಪಾನ ಮಾಡಿ ಜಗತ್ತಿಗೆ ವರ್ಷಕ್ಕೊಂದು ಸಲ ಯುಗಾದಿ ಬರುವಂತೆ ಮಾಡಿದ್ದರೆ ತಾಯಿ ನೀಲಮ್ಮನವರು ತಮ್ಮ ಬಾಳಿನಲ್ಲಿ ನಿತ್ಯ ನಂಜುಂಡು ದಿನದಿನವೂ ಹೊಸಹಬ್ಬದ ಉಲ್ಲಾಸ ಉಣ್ಣುವಂತೆ ಮಾಡುತ್ತಿದ್ದರು. ಹೊಸ ಹೊಸ ಜೀವನ ಕಾಣುವಂತೆ ಮಾಡುತ್ತಿದ್ದರು. ಅವರು ಈ ಭಾಗ್ಯವಿಲ್ಲದ ಬಾಳಿಗೆ ಬಂದು ರುದ್ರಾಣಿಯಾಗಿದ್ದಂತೆ ತಮ್ಮ ಷಡ್ಗುಣೈಶ್ವರ್ಯಗಳಿಂದ ಇಂದ್ರಾಣಿಯೂ ಆಗಿದ್ದರು. ಅದರಿಂದ ಆ ಬಡತನದ ಬಾಳಿಗೆ ನೀಲಮ್ಮನವರು ಒಂದು ನೀಲರತ್ನ; ಬಡತನದ ಆ ಕಾಳಿರುಳಿಗೆ ಒಂದು ನೀಲಾಂಜನ ; ಬಾಳುರಿಯ ಉಪಶಾಂತಿಗೆ ಅವರೊಂದು ನೀಲಾಚಲ, ಬೋಳಾದ ಈ ಬಾಳಬನಕ್ಕೆ ಅವರೊಂದು ನೀಲೋತ್ಪಲ ಆಗಿದ್ದರೆಂದರೆ ಅತಿಶಯೋಕ್ತಿಯಲ್ಲ. ಅವರೇ ಆ ಬಾಳಿನ ಸಂಪತ್ತು; ಸರ್ವಸ್ವ.

 ಹೀಗೆ ಸಂಸಾರದ ಸರ್ವತೋಮುಖವಾದ ರಥ ಚಾಲನೆಗೆ ಹೆಗಲಿಕ್ಕಿ ಹೊಣೆ ಹೊತ್ತು ಪತಿಗೆ ಹಿಂದಡಿಯಿಡದೆ ಆ ಮಾತಾಯಿ ಮುನ್ನಡೆಯುತ್ತಿದ್ದಳು; ಮುನ್ನಿರೀಕ್ಷಣೆ ಮಾಡುತ್ತಿದ್ದಳು. ಆದರೂ ಬಡತನದ ಬಾಗಿಲನ್ನು ದಾಟಲು ಶಕ್ಯವಾಗಿರಲಿಲ್ಲ. ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿಯಿಂದ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿ ಅವೆರಡು ಕೂಡಿ ಬಾಳಿದವು.

 ಹೀಗೆ ಕೆಲವು ಕಾಲ ಕಳೆದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ.ಶ. ೧೮೬೭ ಪ್ರಭವ ಸಂವತ್ಸರದಲ್ಲಿ ಶ್ರೀ  ಹಾನಗಲ್ಲ ಕುಮಾರ ಪ್ರಭುಗಳು ಜನ್ಮತೊಟ್ಟರು. ವಿರಕ್ತರತ್ನ ಅವತರಿಸಿತು. ಯೋಗಿಚಂದ್ರ ಮೂಡಿತು.     ಸಮಾಜಸೂರ್ಯೋದಯವಾಯಿತು.

ಮುಂದೆ ಕುಮಾರ ಸ್ವಾಮಿಯಾಗಲಿರುವ ಈ ಕುವರನು ಸ್ವಾಮಿ ವಿವೇಕಾನಂದರಿಗೆ ಮೂರು ನಾಲ್ಕು ವರ್ಷ ಚಿಕ್ಕವನು. ಸಮಾಜದ ನಾಡಿನ ವಿವೇಕಾನಂದನಂತಿದ್ದನು. ಅದೇ ನಿಲುವು. ಅದೇ ತೇಜಸ್ಸು, ಆದರೂ ಆ ವೀರವೃತ್ತಿಯಿರಲಿಲ್ಲ; ಸಾಧು

ಸಂಪತ್ತಿಯಿತ್ತು. ಆ ಕಿಡಿನುಡಿಗಳಿಲ್ಲದಿದ್ದರು ವಿಚಾರ ಪರಿಪೂರ್ಣ ಉದಾತ್ತ ಉಪದೇಶದಿಂದ ಜನಾಂಗವನ್ನು ಚೇತರಿಸಿಕೊಳ್ಳುವಂತೆ ಮಾಡುವ ಚೈತನ್ಯವಿತ್ತು. ಹೊಸಕಾರ್ಯಕ್ಷೇತ್ರಕ್ಕೆ ಹೆಜ್ಜೆಯಿಕ್ಕುವಂತೆ ಮಾಡುವ ಅಪ್ರತಿಮ ಪ್ರತಿಭೆಯಿತ್ತು.

ಧೈಯವೊಂದೇ ಕ್ಷೇತ್ರ ಚಿಕ್ಕದು. ಮಾರ್ಗವೊಂದೇ ಪರಿಣಾಮ ಫಲಿತಾಂಶಗಳು ಬೇರೆ. ಕಾಲವೊಂದೇ ಪ್ರಾಂತ ಬೇರೆ, ಅದು ಭಾರತದ ಬೆಳಕು. ಇದು ಕನ್ನಡದ ಕಾಂತಿ, ಇಂತಹ ಕಾರಣಿಕ ಶಿಶುವನ್ನು ಹೆತ್ತತಾಯಿತಂದೆಗಳು ಎಂತಹ ಪುಣ್ಯಶಾಲಿಗಳು !

ಇಂತಹ ಕಾರಣಿಕ ಪುರುಷನನ್ನು ಪಡೆದ ನಾಡು ಸಮಾಜಗಳು ಎಂತಹ ಭಾಗ್ಯಶಾಲಿಗಳು !!

 ಈ ಕಾರಣಿಕ ಶಿಶುವಿನ ಉದಂತ ಉದಯದ ಕಾರಣಗಳಲ್ಲಿ ಹೇಳದೆ ಬಿಡುವಂತಿಲ್ಲ. ಒಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮನವರು ಪವಡಿಸಿ ನಿದ್ದೆಹೋಗಿದ್ದಾರೆ. ಆ ಸಮಯದಲ್ಲಿ ಒಂದು ಸ್ವಪ್ನ ಬಿದ್ದಿದೆ. ಜಂಗಮ ವೇಷಧಾರಿಯಾದ ಒಬ್ಬ ತಾಪಸಿಯು ದರ್ಶನ ಕೊಟ್ಟಿದ್ದಾನೆ. ಜಂಗಮ ಭಕ್ತಿಯಾದ ನೀಲಮ್ಮ ತಾಯಿಯು ನಯಭಯದಿಂದ ನಮಿಸಿದ್ದಾಳೆ. ತಾಪಸಿಯು ತನ್ನ ಕೈಯಲ್ಲಿದ್ದ ಸುರಸುಮವನ್ನು ಆಶೀರ್ವದಿಸಿ ಜಗನ್ಮಾತೆ, ನಾವು ಆಶೀರ್ವದಿಸಿದ ಕುಸುಮಕ್ಕೆ ಬದಲು ನಮಗೊಬ್ಬ ಸುಕುಮಾರನನ್ನು ಕೊಡು. ಇದೇ ನಾವು ನಿನ್ನಲ್ಲಿ ಬೇಡಬಂದ ಭಿಕ್ಷೆ ಎಂದು ಹೇಳಲು, ಅದಕ್ಕೆ ತಾಯಿಗಳು ಆಗಲಿ ಮಹಾತ್ಮ ತಮ್ಮ ಆಶೀರ್ವಾದದಿಂದ ಇನ್ನೊಬ್ಬ ಮಗನು ಹುಟ್ಟುವ ಭಾಗ್ಯವೊದಗಿದಲ್ಲಿ ಅಗತ್ಯವಾಗಿ ಅರ್ಪಿಸುತ್ತೇನೆಂದು ಮಾತುಕೊಟ್ಟಳಂತೆ | ಬಂದು ಬೇಡಿದ ತಾಪಸಿಯು ಯಾರನ್ನುವಿರಾ ? ಸಮಾಜದ ಜನತಾ ಜನಾರ್ದನನೇ ಆ ವೇಷದಲ್ಲಿ ಬಂದು ಬೇಡಿದನೆಂಬುದೇ ನೂರು ಪಾಲಿಗೂ ನಿಜ. ಕುಮಾರನು ಮುಂದೆ ಸಮಾಜ ಕುಮಾರನಾಗಿ ಬಾಳಲಿಲ್ಲವೆ ? ಇದಕ್ಕಿಂತಲು ಬೇರೆ ನಿದರ್ಶನ ಬೇಕೆ ?

 ಇನ್ನೊಂದು ದಿನ ತವರೂರಾದ ಲಿಂಗದಹಳ್ಳಿಯ ಬಳಿಯಲ್ಲಿರುವ ನಂದೀಹಳ್ಳಿಯಲ್ಲಿ ಜರುಗುವ ಬಸವೇಶ್ವರನ ಯಾತ್ರೆಗೆ ನೀಲಮ್ಮನವರು ಹೋಗಿದ್ದರು. ನಂದೀಶ್ವರನ ರಥೋತ್ಸವ ನಡೆಯುತ್ತಿತ್ತು. ಅಲಂಕರಿಸಿದ ಆ ತೇರನ್ನು ನೋಡಿ ನಲಿಯಲು ಅದರ ಬಳಿಗೆ ನೀಲಮ್ಮನವರು ನಿಂತಿದ್ದರು. ಯಾರೋ ತೂರಿದ ಖರ್ಜೂರವೊಂದು ಅನಿರೀಕ್ಷಿತವಾಗಿ ನೀಲಮ್ಮ ತಾಯಿಯ ಉಡಿಯ ಮಡಿಕೆಯಲ್ಲಿ ಬಂದು ಬಿತ್ತು. ಅದನ್ನು ಕಂಡು ಭಕ್ತಿಭರಿತರಾದ ತಾಯಿಯವರು ಇದೂ ಒಂದು ದೇವರ ಕರುಣೆಯೆಂದು ಕೈಗೆ ತೆಗೆದುಕೊಂಡು ಕಣ್ಣುಗಳಿಗೊತ್ತಿಕೊಂಡು ಮನೆಗೆ ಕೊಂಡೊಯ್ದರು. ಸ್ನಾನ ಶಿವಪೂಜೆಗಳನ್ನು ಆಗು ಮಾಡಿಕೊಂಡು ತಂದ ಪ್ರಸಾದವನ್ನು ಪ್ರಸನ್ನಚಿತ್ತದಿಂದ ಲಿಂಗಕ್ಕರ್ಪಿಸಿ ಸ್ವೀಕರಿಸಿದರು. ಅದರ ಫಲವಾಗಿ ಗರ್ಭಧಾರಣೆಯಾಗಿ ನವಮಾಸ ತುಂಬಿ ಕಾರಣಿಕ ಕುಮಾರನು ಜನಿಸಿದನು. ಮಕ್ಕಳಿಲ್ಲದೆ ಮರಗುತ್ತಿದ್ದ ಮಾದಲಾಂಬಿಕೆಗೆ ಬಾಗೇವಾಡಿಯ ದೇವಸ್ಥಾನದಲ್ಲಿರುವ ಬಸವೇಶ್ವರನ ಪುಷ್ಪಫಲಾನುಗ್ರಹದಿಂದ ದ್ವಿತೀಯ ಶಂಭು ಬಸವೇಶ್ವರನು ಜನಿಸಿದಂತೆ ನಮ್ಮ ಕಥಾನಾಯಕನು ಸಹ ಬಸವೇಶ್ವರ ಫಲಾನುಗ್ರಹದಿಂದಲೇ ಜನಿಸಿದ್ದು ಮತ್ತೊಂದು ಉದಂತ ಉದಯದ ಕುರುಹು.

ದಿನವಾವುದೋ ತಿಳಿಯದು ಒಂದು ದಿನ ಬ್ರಾಹ್ಮಿಮುಹೂರ್ತ, ಮಗು ಜನಿಸಿದೆ. ಮನೆಯವರಿಗೆಲ್ಲ ಆನಂದ. ಮನೆಯನ್ನು ಸಾರಣೆ ಕಾರಣೆಗಳಿಂದ ಶುದ್ಧಗೊಳಿಸಿದ್ದಾರೆ. ರಂಗವಲ್ಲಿ ತಳಿರುತೋರಣಗಳಿಂದ ಅಲಂಕರಿಸಿದ್ದಾರೆ. ಜನ್ಮಲಿಂಗಧಾರಣೆಗೆಂದು ಜಂಗಮರೊಬ್ಬರನ್ನು ಕರೆಯಲು ಹೋಗಿದ್ದರು. ಅಷ್ಟರಲ್ಲಿ ಒಬ್ಬ ಮುದುಕ ಮಹೇಶ್ವರರು ಭಿಕ್ಷಕ್ಕಾಗಿ ಮನೆಗೆ ಬಂದರು. ಕೆಲಸ ಮಾಡಲು ಬಂದಿದ್ದ ಒಬ್ಬ ಮುದುಕಿಯು ಸ್ವಾಮಿ ! ಮನೆಯಲ್ಲಿ ಹೆತ್ತಿರುವರು. ಈ ದಿನ ಭಿಕ್ಷೆ ನೀಡುವಂತಿಲ್ಲ, ಮತ್ತೊಂದು ಮನೆಗೆ ಹೋಗಿರಿ ಎಂದು ಹೇಳಿದಳು. ಅಮ್ಮಾ, ಏನು ಹೆತ್ತಿರುವರು ? ಗಂಡುಕೂಸನ್ನು, ಹಾಗಾದಮೇಲೆ ನೀನೇಕಮ್ಮ ಹೀಗೆ ಹೇಳುತ್ತೀಯೆ ! ಸುತನು ಜನಿಸಿದರೆ ಸಂತೋಷವಲ್ಲವೆ? ಸಕ್ಕರೆ ಹಂಚುವುದಿಲ್ಲವೆ? ದೀನದರಿದ್ರರಿಗೆ ದಾನ ಮಾಡುವುದಿಲ್ಲವೆ? ಹೀಗೆ ಲೋಕರೂಢಿಯಿದ್ದು ನೀನು ಒಂದು ಹಿಡಿ ಕಾಳು ನೀಡುವದಿಲ್ಲೆಂದು ಹೇಳುವುದು ಧರ್ಮವೇ? ಸ್ವಾಮಿ, ನೀವು ಹೇಳುವುದೆಲ್ಲ ಸರಿಯೆ. ಆದರದು ಶ್ರೀಮಂತರ ಮಾತು. ನಮ್ಮಂತಹ ಬಡವರು ಎಲ್ಲಿಂದ ಮಾಡಬೇಕು? ಮೊದಲೆ ನಮಗೆ ಮಕ್ಕಳು ಹುಟ್ಟುವುದು ಹೆಚ್ಚು. ದಾನಧರ್ಮ ಮಾಡಿದರೆ ಮತ್ತಷ್ಟು ಹುಟ್ಟ ಬಹುದಲ್ಲವೆ? ಎಂದು ನಗೆ ನುಡಿದಳು. ಅಮ್ಮಾ, ನಿಮಗೆ ಮಕ್ಕಳು ಹೆಚ್ಚಾಗಿದ್ದರೆ ಈಗ ಹುಟ್ಟಿದ ಮಗುವನ್ನು ನಮಗೆ ಕೊಟ್ಟುಬಿಡಿರಿ. ಸ್ವಾಮಿ, ಯಾರು ಬೇಡೆನ್ನುವರು? ಅಗತ್ಯವಾಗಿ ತಗೆದುಕೊಂಡು ಹೋಗಿರಿ, ಸಾಕುವ ಸಾಮರ್ಥ್ಯ ನಿಮಗಿದ್ದರೆ ಎಂದು ನಗೆಮಾತಿನಿಂದ ನುಡಿದಳು. ಆಗ ಮಹೇಶ್ವರನು ಹರ್ಷಚಿತ್ತನಾಗಿ ಹೊರಟು ಹೋದನು. ತಾಯಿಯ ಕನಸಿಗೆ ಬಂದು ಹೋಗಿದ್ದ ಆ ಜನತಾಜನಾರ್ದನನೆ ಮರಳಿ ಮಹೇಶ್ವರನ ರೂಪದಲ್ಲಿ ಬಂದು ಸಮಾಜದ ಶಿಶುವನ್ನು ಸಮಾಜಕ್ಕೆ ಕೊಡುವಂತೆ ಜಾಗ್ರತಾವಸ್ಥೆಯಲ್ಲಿ ಮಾತು ತೆಗೆದುಕೊಂಡು ಮರಳಿದನು. ಇದೂ ಒಂದು ಉದಂತ ಉದಯದ ಚಿನ್ಹೆಯಲ್ಲವೆ ?

ಆಮೇಲೆ ಜಂಗಮರೊಬ್ಬರು ಬಂದು ಜನ್ಮಲಿಂಗಧಾರಣೆಯನ್ನು ಮಾಡಿ ಹೋಗುವರು. ಮೂರಾರು ದಿನಗಳು ಕಳೆದ ನಂತರ ಇದ್ದಕ್ಕಿದ್ದಂತೆ ಮಗು ಹಾಲು ಕುಡಿಯದೆ ಹೋಯಿತು. ತಾಯಿಗೆ ದಿಗಲಾಯಿತು. ಮನೆಯವರಿಗೆ ಭಯವಾಯಿತು. ಎಲ್ಲರು ಮಮ್ಮಲ ಮರುಗಿದರು. ಏನಾಗಿದೆಯೋ ಎಂದು ಯಾರಾರನ್ನೋ ಕರೆಯಿಸಿ ತೋರಿಸಿದರು. ಒಬ್ಬೊಬ್ಬರು ಒಂದೊಂದು ಉಪಾಯವನ್ನು ಹೇಳಹತ್ತಿದರು. ‘ಹಾಲಯ್ಯ’ ಎಂದು ಹೆಸರಿಟ್ಟು ನೋಡಿದರು. ಇದುವೆ ಹುಟ್ಟುಹೆಸರಾಯಿತು. ಏನಾದರೂ ಹಸುಮಗು ಹಾಲು ಕುಡಿಯಲಿಲ್ಲ. ಆಗ ಅವರಲ್ಲಿ ಒಬ್ಬರು ಗ್ರಾಮದೇವತೆಯ ಅಂಗಾರವನ್ನು ತಂದು ಹಚ್ಚಬೇಕೆಂದರು. ಆ ಮಾತು ಮಾತೆಯಾದ ನೀಲಮ್ಮನವರ ಕಿವಿಗೆ ಬಿದ್ದೊಡನೆಯೇ ಎದ್ದು ಹೋಗಿ ಶ್ರೀಗುರುವಿನಿಂದ ಶುದ್ಧವಾದ ಭಸಿತವನ್ನು ತಂದು ಹಣೆಗೆ ಧರಿಸಿದರು. ಆ ಕೂಡಲೇ ಮಗುವು ಮೊಲೆಯುಂಡಿತು. ಸರ್ವರು ಸಂತೋಷಭರಿತರಾದರು. ಕಂದನ ಉಜ್ವಲಂತ ಉತ್ಕ್ರಮಣ ಜೀವನಕ್ಕೆ ಬೀಜಾವಾಪವಿದು.

ದಿನದಿನಕ್ಕೆ ಮಗುವಿಗೆ ಬಲಬಂದಿತು. ಮೈಕೈ ತುಂಬಿಬಂದವು. ಶುಕ್ಲಪಕ್ಷದ ಚಂದ್ರನಂತೆ ಬೆಳೆದನು. ನಗೆ ಬೆಳದಿಂಗಳ ಬೀರಿದನು. ಹನ್ನೊಂದನೆಯ ದಿನ ‘ಸದಾಶಿವ’ನೆಂದು ಹೆಸರಿಟ್ಟರು. ನೆರೆಯವರ ನೇಹದ ಶಿಶುವಾಗಿ ಮನೆಯವರ ಮುದ್ದುಮಗನಾಗಿ ದಿನಗಳೆದನು. ಎಲ್ಲರಿಗೂ ಹಾಲಿನಂತೆ ಹರ್ಷಪ್ರದನಾಗಿ ಅಂಬೆಗಾಲಿನಿಂದ ಆಟವಾಡಿದನು. ಆಡಿಸುವವರ ತೊಡೆಯ ಶಿಶುವಾಗಿ, ಮುದ್ದಿಸುವವರ ಮುಂಗೈಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಬೆಳೆದನು. ತೊದಲ್ನುಡಿಗಳ ಕೇಳಿ ಆನಂದಿಸಿದರು. ನಗೆಮೊಗವ ಕಂಡು ನಲಿದರು. ಮೊಗದ ತೇಜವ ನೋಡಿ ಹರುಷಿಸಿದರು. ಮೃದುತನುವ ಮುಟ್ಟಿ ಸುಖಪಟ್ಟರು. ಹೀಗೆ ಸಕಲರ ಸಂತಸದ ಕೇಂದ್ರವಾಗಿ ಬೆಳೆದು ವರುಷದವನಾದನು.

ಸದಾಶಿವನಿಗೆ ಯಾವ ಆಟಗಳ ಮೇಲೆ ಪ್ರೇಮವಿಲ್ಲದಿದ್ದರು ಗೋಲಿಯಾಟ (ಗುಂಡಿನಾಟ)ದಲ್ಲಿ ಗಮನವಿತ್ತು. ಗುರಿಯಿಟ್ಟು ಹೊಡೆದರೆ ಎಷ್ಟು ದೂರದಲ್ಲಿದ್ದರೂ ತಪ್ಪುತ್ತಿರಲಿಲ್ಲ. ಗುಂಡಿನಾಟದಲ್ಲಿ ಆತನನ್ನು ಸೋಲಿಸುವ ಹುಡುಗರೆ ಇರಲಿಲ್ಲ. ಹೀಗಾಗಿ ಸದಾಶಿವನ ದೃಷ್ಟಿಯೋಗ ಈ ಆಟದಿಂದಲೇ ಪ್ರಾರಂಭವಾಯಿತು. ಸದಾಶಿವನ ಮೆಚ್ಚುಗೆಯ ಮತ್ತೊಂದಾಟವೆಂದರೆ ದೊಂಬರಾಟ, ದೊಂಬರೆಲ್ಲಿ ಬಂದಾಡಿದರು. ಅಲ್ಲಿಗೆ ಹೋಗಿ ನೋಡುತ್ತಿದ್ದನು. ಅವರ ಮೈಕುಣಿತಗಳನ್ನು ಅಂತರದಲ್ಲಿ ಹಗ್ಗದ ಮೇಲೆ ಮಧ್ಯಬಿಂದುವಿನ ತೂಕವಿಡಿದು ಕೆಳಕ್ಕೆ ಬೀಳದಂತೆ ನಡೆವುದನ್ನು ನೋಡಿ ಅಚ್ಚರಿಪಡುತ್ತಿದ್ದನು. ಅದರ ಫಲವಾಗಿ ಹಠಯೋಗದತ್ತ ಆತನ ಮನಸ್ಸು ವಾಲಿತು.

ಗೋಲಿಯಾಟದಲ್ಲಿ ಗುರಿಯಿಡುವದರ ಮೂಲಕ ಕಲಿತ ದೃಷ್ಟಿಯೋಗವನ್ನು ಅಲ್ಲಿಗೆ ಕೈ ಬಿಡದೆ ಕೊನೆಯವರೆವಿಗೂ ಸಾಧಿಸಿ ಅದರ ಪರಿಪೂರ್ಣ ಸಿದ್ಧಿಯನ್ನು ಸಫಲತೆಯನ್ನು ಪಡೆದರು. ‘ದೃಷ್ಟಿಶುದ್ಧಿ’ ಎಂಬ ಪ್ರಕರಣದಲ್ಲಿ ಈ ವಿಷಯವನ್ನು ಓದಿ ತಿಳಿಯಬಲ್ಲಿರಿ. ಗೋಲಿಯಾಟದ ಮೇಲೆ ಶ್ರೀಗಳವರಿಗೆ ಕೊನೆಯವರೆಗೂ ಮೆಚ್ಚುಗೆಯಿತ್ತು.

ದೊಂಬರಾಟಗಳನ್ನು ನೋಡಿದ ಫಲವಾಗಿ ಹಠಯೋಗ ಉದ್ಧಾರವಾಯಿತು. ಆ ವಿಷಯದಲ್ಲಿ ಶಿವಯೋಗಮಂದಿರವೆ ಸಾಕ್ಷಿ. ಸಾಧಕರೆ ಪರಮ ಸಾಕ್ಷಿ. ಶಿವಯೋಗಮಂದಿರದಲ್ಲಿಯೂ ಸಹ ದೊಂಬರಾಟ ಬಂದರೆ ಬಿಡದೆ ಕರೆಯಿಸಿ ಆಡಿಸಿ ವಟುಗಳಿಗೆ ಸಾಧಕರಿಗೆ ತೋರಿಸುತ್ತಿದ್ದರು. ಪರಸ್ಪರ ಇರುವ ಆಸನ ವ್ಯತ್ಯಾಸ ಭಾವ ವ್ಯತ್ಯಾಸ ಫಲ ವ್ಯತ್ಯಾಸಗಳನ್ನು ವಿವರಿಸಿ ಹೇಳುತ್ತಿದ್ದರು.   ಹೀಗೆ ಚಿಕ್ಕವಯಸ್ಸಿನ ಆಟಗಳಲ್ಲಿಯೂ ಸಹ ಅವರ ನೋಟ ಹಿರಿದಾಗಿತ್ತು.

ಈ ಆರನೆಯ ವಯಸ್ಸಿನಲ್ಲಿಯೇ ಒಳ್ಳೆಯ ದಿನದಲ್ಲಿ ಅಕ್ಷರಾಭ್ಯಾಸಕ್ಕೆ ಆರಂಭವಾಯಿತು. ಊರಿನಲ್ಲಿ ಬೇರೆ ಶಾಲೆಯಿರಲಿಲ್ಲ. ಸದಾಶಿವನ ಅಜ್ಜಂದಿರಾದ ಶ್ರೀ ಕೊಟ್ರಪ್ಪಯ್ಯನವರೇ ಒಂದು ಸ್ವತಂತ್ರಶಾಲೆ (ಗಾವಠೀಶಾಲೆ) ಯನ್ನು ತೆರೆದಿದ್ದರು. ಅದರಲ್ಲಿಯೆ ಓದಿಗೆ ಮೊದಲಾಯಿತು. ಸದಾಶಿವನು ಕುಶಲಮತಿಯಾಗಿದ್ದನು. ಅಕ್ಷರಾಭ್ಯಾಸವನ್ನು ಆದಷ್ಟು ಬೇಗ ಮುಗಿಸಿ ಶ್ರೇಣಿಗೆ ಸೇರಿದನು. ವರ್ಗದಲ್ಲಿಯೂ ಮೊದಲಿನವನಾಗಿಯೇ ಇರುತ್ತಿದ್ದನು. ಎಲ್ಲರಿಗಿಂತಲೂ ಹೆಚ್ಚಾಗಿಯೇ ಅಂಕಗಳನ್ನು ಪಡೆಯುತ್ತಿದ್ದನು. ಪ್ರತಿವರ್ಷವೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದನು. ಹೀಗೆ ಮೂರು ನಾಲ್ಕು ವರುಷ ಅಬಾಧಿತವಾಗಿ ಓದು ಮುಂದುವರೆಯಿತು. ಆಮೇಲೆ ಎರಡು ಹೊತ್ತು ಶಾಲೆಗೆ ಹೋಗಿ ಓದಲು ಆತಂಕವೊದಗಿತು. ಮನೆಯ ಬಡತನ, ಬಾಳಿನ ಬವಣೆ ಅದಕ್ಕೆ ಕಾರಣವಾಯಿತು.

Related Posts