ನೇಮ-ನಿತ್ಯ

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

‘ನಿಯಮ’ ಶಬ್ದದ ತದ್ಭವ ರೂಪ ನೇಮ. ವ್ರತ ಕಟ್ಟಳೆ, ಧರ್ಮಾಚರಣೆಗಳ ಅರ್ಥದಲ್ಲಿ ನೇಮ ಶಬ್ದದ ಬಳಕೆಯನ್ನು ಕಾಣುತ್ತೇವೆ. ನಿತ್ಯ ಪಾಲಿಸುವ ಮತ್ತು ಕಾಲಬದ್ಧ ನೇಮಗಳಿಗೆ ನಿತ್ಯ ನೇಮ ಅಥವಾ ನೇಮನಿತ್ಯ ಎನ್ನುವರು. ನೇಮ- ನಿತ್ಯಗಳ ಪಾಲನೆಯ ಉದ್ದೇಶ ದೈವದಲ್ಲಿರುವ ನಮ್ಮ ಶ್ರದ್ಧೆಯನ್ನು ಗಟ್ಟಿಗೊಳಿಸುವುದು. ಹಾಗೆಯೇ ಆಶೆ-ಆಮಿಷಗಳನ್ನು ತೊರೆದು ಮನಸ್ಸನ್ನು ಪರಿಶುದ್ಧಗೊಳಿಸುವುದು. ಆದರೆ ಬದುಕಿನಲ್ಲಿ ಸುಖ ಶಾಂತಿಗಳನ್ನು ಪಡೆಯುವುದಕ್ಕಾಗಿಯೇ ಅನೇಕರು ನೇಮಾದಿಗಳನ್ನು ಪಾಲಿಸುವುದುಂಟು. ವ್ಯಕ್ತಿಯ ಅಧ್ಯಾತ್ಮಿಕ ಬದುಕಿಗೆ ಪೂರಕವಾಗಬೇಕಿದ್ದ ನೇಮನಿತ್ಯಗಳು ಕ್ಷಣಿಕ ಫಲಾಪೇಕ್ಷೆಯಲ್ಲಿ ಪರ್ಯವಸಾನಗೊಳ್ಳುತ್ತವೆ. ಅದರಲ್ಲೂ ಕೆಲವರ ವ್ರತ ನೇಮಗಳಿಗೆ ಯಾವುದೇ ನಿಶ್ಚಿತ ಉದ್ದೇಶವಿರುವುದಿಲ್ಲ. ಅಲ್ಲಿರುವುದು

ಇನ್ನೊಬ್ಬರ ಅನುಕರಣೆ ಮಾತ್ರ.

 ನೋಡಿ ನೋಡಿ ಮಾಡುವ ನೇಮ, ತನು ಉದ್ದೇಶವಾಗಿ ಮಾಡುವ ನೇಮ, ಗುರುಪಥ ಮೀರಿ ಮಾಡುವ ನೇಮ ಶಿವಾರ್ಪಿತವಾಗಲಾರವು. ಪರಮಾರ್ಥ ಸಾಧನೆಗಾಗಿ ಗುರುವಿನ ಮಾರ್ಗದರ್ಶನದಂತೆ ನೇಮ ನಿತ್ಯಗಳನ್ನು ಪಾಲಿಸಬೇಕು. ತನ್ನ ಲಿಂಗ (ದೇವರಿಗೆ)ಕ್ಕೆ ಮಾಡುವ ನಿತ್ಯ ನೇಮಗಳನ್ನು ತಾನೇ ಮಾಡಬೇಕೆಂಬುದು ಬಸವಣ್ಣನವರ ಸ್ಪಷ್ಟ ಆದೇಶ.

 ಮನದಲ್ಲಿ ನಿಷ್ಠೆ ಇಲ್ಲದೆ ಹಾಲು, ಕಡಲೆ, ನೀರು, ಪುಷ್ಪಾದಿಗಳ ನೇಮ ಹಿಡಿದವರು ಕ್ರಮವಾಗಿ ಬೆಕ್ಕು, ಕುದುರೆ, ಕಪ್ಪೆ, ತುಂಬಿಯಾಗಿ ಹುಟ್ಟುವರೆಂದು ಒಂದೆಡೆ ಅಲ್ಲಮಪ್ರಭು ವಿಡಂಬಿಸಿದ್ದಾನೆ. ಇಂಥ ನೇಮಗಳು ನಿರರ್ಥಕ. ಬಂದುದ ಕೈಕೊಳ್ಳಬಲ್ಲರೆ ನೇಮ, ಇದ್ದುದ ವಂಚನೆ ಮಾಡದಿದ್ದರೆ ನೇಮ, ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ ನಮ್ಮ ಕೂಡಲಸಂಗನ ಶರಣರು ಬಂದರೆ ಒಡೆಯರಿಗೊಡವೆಯ ಒಪ್ಪಿಸುವುದೇ ನೇಮ. ಅಂದರೆ ಇದ್ದುದರಲ್ಲಿ ತೃಪ್ತಿ ಹೊಂದುವ, ವಂಚನೆ ಇಲ್ಲದೆ ಹಂಚಿ ಉಣ್ಣುವ, ನಡೆ ನುಡಿ ಪರಿಶುದ್ಧವಾಗಿಟ್ಟುಕೊಳ್ಳುವ ಮತ್ತು ದುಡಿಮೆಯ ಫಲವನ್ನು ಶರಣರಿಗೊಪ್ಪಿಸಿ ದಾಸೋಹಂಭಾವದಿಂದ ಬದುಕುವ ನೇಮಗಳೆ ನಿಜವಾದ ನೇಮಗಳು.  ಅವು ದೇವರಿಗೆ ಒಪ್ಪಿತವಾದ ನೇಮಗಳು.

 ಶಿವರಾತ್ರಿ, ಏಕಾದಶಿ, ಸಂಕಷ್ಟಿಗಳಲ್ಲಿ ಮಾಡುವ ಉಪವಾಸಾದಿ ನೇಮಗಳು ಅರ್ಥವನ್ನು ಕಳೆದುಕೊಂಡು ಆಹಾರ ಬದಲಾವಣೆಗೆ ಸೀಮಿತಗೊಂಡಿವೆ. ಶ್ರಾವಣ ಶುಕ್ರವಾರಗಳ ಲಕ್ಷ್ಮಿ ಪೂಜೆ, ಮಾರ್ಗಶಿರ ಗುರುವಾರಗಳ ಗೌರಿಪೂಜೆಗಳಲ್ಲಿ ಭಕ್ತಿ, ಶ್ರದ್ಧೆಗಳಿಗಿಂತ ವಿಶೇಷಾಲಂಕಾರ ಮತ್ತು ಆಭರಣ ಪ್ರದರ್ಶನಗಳಿಗೆ ಅಗ್ರಸ್ಥಾನ. ವಾಸ್ತುಶಾಂತಿ ಹಾಗು ಗೃಹಶಾಂತಿಗಳಲ್ಲಿ ಭಕ್ತಿ ಇಲ್ಲದೆ ಮಾಡುವ ಅರ್ಥಹೀನ ಹೋಮಹವನಗಳಿಂದ ಪವಿತ್ರ ಪ್ರಸಾದದ ಕೇಡು. ಇದಲ್ಲದೆ ಕೆಲವು ವಿಶಿಷ್ಟ ಪದಾರ್ಥಗಳನ್ನು ತಿನ್ನದಿರುವುದು, ಕ್ಷೌರ ಮಾಡಿಕೊಳ್ಳದಿರುವುದು, ಮೌನದಿಂದಿರುವುದು ಮುಂತಾದ ನೇಮಾದಿಗಳನ್ನು ಪಾಲಿಸುವವರೂ ಉಂಟು. ಆದರೆ ಶುದ್ಧ ಮನಸ್ಸಿನಿಂದ ದೈವವನ್ನು ನೆನೆದವರಿಗೆ ಇಂಥ ಯಾವ ನೇಮನಿತ್ಯಗಳ ಅವಶ್ಯಕತೆ ಇರದು. ಒಟ್ಟಾರೆ

ನೇಮ ನಿತ್ಯಗಳು ನಮ್ಮ ದುರ್ವ್ಯಸನ ದುರಾಚಾರಗಳಿಗೆ ಕಡಿವಾಣದಂತಿರಬೇಕು. ಹಾಗೆಯೇ ಅಧ್ಯಾತ್ಮಿಕ ಪ್ರಗತಿಗೆ, ಅಂತರಂಗ-ಬಹಿರಂಗ ಶುದ್ಧಿಗೆ ಪೂರಕವಾಗಿರಬೇಕು ಎಂಬುದೇ ಮುಖ್ಯ.

 

Related Posts