ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳು

ಲೇಖಕರು ಡಾ . ಪಂಚಾಕ್ಷರಿ ಹಿರೇಮಠ

(ಗ್ರಂಥ ಋಣ : ಕೈವಲ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳ  ಸ್ಮರಣ ಸಂಪುಟ)

ಮೊಗ್ಗೆಯ ಮಾಯಿದೇವರು ‘ ಶಿವಾನುಭವಸೂತ್ರ’ದಲ್ಲಿ

ಉಪಾಸನೈವ ಸುಯೋಗಃ  ಸಂಯೋಗೋದ್ಯ್ವತ ಸಂಲಯಃ

ದ್ವ್ಯತಸ್ಯ ವಿಲಶ್ಚೈ ವ ನಿವೃತ್ತಿಃ  ಪರಿಕೀರ್ತಿತಾ |

ನಿವೃತ್ತಿರೇವ ವಿಶ್ರಾಂತಿಃ , ವಿಶ್ರಾಂತಿಃ  ಪರಮಂ ಪದಂ  ||

ಲಿಂಗೋಪಾಸನೆಯೇ ಲಿಂಗಾಂಗಗಳ ಸಂಯೋಗವೆಂದೆನಿಸುವುದು . ಆ ಸಂಯೋಗವೇ ದ್ವ್ಯತವಿಲಯವು , ಆ ದ್ವ್ಯತವಿಲಯವೇ ನಿವೃತ್ತಿ ( ಶಿವತ್ವದ ಪ್ರಾಪ್ತಿಯಿಂದ ಉಂಟಾದ ಜೀವತ್ವದ ಬಿಡುಗಡೆ ) ಆ ನಿವೃತ್ತಿಯೇ ವಿಶ್ರಾಂತಿಯು , ಈ ವಿಶ್ರಾಂತಿಯೇ ವೀರಶೈವರ ಮೋಕ್ಷರೂಪವಾದ ಪರಮಪದವು – ಎಂದು ಅಪ್ಪಣೆ ಕೊಡಿಸಿದ್ದಾರೆ . ಇಲ್ಲಿ ಉಪಾಸನೆಯ ಅರ್ಥ ಸ್ವಸ್ವರೂಪಾನುಸಂಧಾನವೆಂದೇ ಅರ್ಥ .

 ಇಂಥ ಶಿವಯೋಗಸಿದ್ದರು ಹೇಗೆ ಬರುತ್ತಾರೆ ; ಹೇಗೆ ಶಿವನಲ್ಲಿ ಅಂದರೆ ಲಿಂಗದಲ್ಲಿ ಒಂದಾಗುತ್ತಾರೆಂಬುದನ್ನು ಉರಿಲಿಂಗಪೆದ್ದಿಗಳ ಈ ವಚನ ವಿವರಿಸುತ್ತದೆ-

 ಲೋಕದಂತೆ ಬಾರರು , ಲೋಕದಂತೆ ಇರರು

 ಲೋಕದಂತೆ ಹೋಗರು  ನೋಡಯ್ಯ

ಪುಣ್ಯದಂತೆ ಬಪ್ಪರು , ಜ್ಞಾನದಂತೆ ಇಪ್ಪರು

ಮುಕ್ತಿಯಂತೆ ಹೋಹರು ನೋಡಯ್ಯ

ಉರಿಲಿಂಗದೇವಾ ನಿಮ್ಮ ಶರಣರು

ಉಪಮಾತೀತರಾಗಿ ಉಪಮಿಸಬಾರದು .

  ಇಂಥ ಉಪಮಿಸಬಾರದ ಪರಮಚೈತನ್ಯ , ಚಿತ್ಸ್ವರೂಪ , ಅಖಂಡ ತೇಜೋಮೂರ್ತಿ , ಚಿದ್ವಿಲಾಸಾನಂದಸ್ವರೂಪ , ಲಿಂಗಾನಂದಲೀಲಾಲೋಲ , ಚಿದ್ಘನಪ್ರಣವಸ್ವರೂಪಿ , ಚಿನ್ಮಯ ಮಂತ್ರಮೂರ್ತಿ , ಮಹಾಜಂಗಮ ಶ್ರೀಮದಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು . ಅಂತರಂಗದಲ್ಲಿ ಅರಿವು , ಬಹಿರಂಗದಲ್ಲಿ ಶಮೆ , ದಯೆ , ಸರ್ವಶಾಂತಿ , ನಂಬಿದ ಸಜ್ಜನ ಸದ್ಭಕ್ತರ ರಕ್ಷಕ , ಭಾವಕ್ಕೆ ಜಂಗಮವಾಗಿ , ಪ್ರಾಣಕ್ಕೆ ಲಿಂಗವಾಗಿ , ಕಾರ್ಯಕ್ಕೆ ಗುರುವಾಗಿ ಬಂದ ಪದಾರ್ಥವ ಲಿಂಗಾರ್ಪಿತವ ಮಾಡುತ್ತ , ಬಾರದ ಪದಾರ್ಥವ ಮನದಲ್ಲಿ ನೆನೆಯದೆ , ಮಾನವರ ಬೇಡದೆ , ಭಕ್ತರ ಕಾಡದೆ , ನಿರ್ಗಮನಿಯಾಗಿ ಸುಳಿವ ಆತ ಮಹಾಲಿಂಗ ಜಂಗಮನಾಗಿದ್ದಾತ . ಆತನ ನೆನಹೇ ಪ್ರಾಣಜೀವಾಳವೆನಗೆ .

ಆತನ ನಡೆ ಇಷ್ಟಲಿಂಗ , ಆತನ ಮಾರ್ನುಡಿ ಪ್ರಾಣಲಿಂಗ , ನಡೆ – ನುಡಿಗಳ ಒಂದಾಗಿಸಿ ಭಾವಲಿಂಗ ಮಾಡಿಕೊಂಡ , ಮಹಾ ಮಹಿಮರು ಶ್ರೀಮದಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು .

 ಶಿವಯೋಗಿಗಳಿಗೆ ಧ್ಯಾನವೇ ಅಂತರಂಗದ ಪ್ರಾಣಲಿಂಗ ಪೂಜೆಯಾಗಿತ್ತು ಧಾರಣವೇ ಬಹಿರಂಗದ ಇಷ್ಟಲಿಂಗ ಪೂಜೆಯಾಗಿತ್ತು ; ಸಮಾಧಿಯೇ ಭಾವಲಿಂಗದ ಸಂಧಾನಕ್ರಿಯೆಯಾಗಿತ್ತು .

 ಶಿವಯೋಗಿಗಳಿಗೆ ನಿಜಪದವಿ , ಅವರ ಆರಾಧ್ಯಮೂರ್ತಿ ಅಪ್ಪ ಬಸವಣ್ಣ ವರ್ಣಿಸಿದ “ಜಗದಗಲ , ಮುಗಿಲಗಲ , ಮಿಗೆಯಗಲ ನಿಮ್ಮಗಲ , ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ , ಅಗಮ್ಯ ಅಗೋಚರ , ಅಪ್ರತಿಮಲಿಂಗ ‘ ದಲ್ಲಿ ದೃಗ್ಗೋಚರವಾಗುತ್ತಿತ್ತು .

ನನ್ನ ಪರಮಾರಾಧ್ಯ ಮೃತ್ಯುಂಜಯ ಅಪ್ಪಗಳು ತಮ್ಮ ಆಶೀರ್ವಚನದ ಕಾಲದಲ್ಲಿ ಶ್ರೀ ಶಿವಯೋಗಿಗಳ ಜೀವಿತ ಕಾಲದಲ್ಲಿ ನಡೆದ ಒಂದಲ್ಲ ಒಂದು ಘಟನೆಯನ್ನು ಆನಂದತುಂದಿಲರಾಗಿ ಭಕ್ತ ತಿಂಥಿಣಿಗೆ ಬೋಧಿಸುತ್ತ ತನ್ಮಯರಾಗುತ್ತಿದ್ದರು . ಒಮ್ಮೆ ಶಿವಯೋಗಿಗಳು ಸದಾ ಲಿಂಗಧ್ಯಾನದಲ್ಲಿ ಲಿಂಗಪೂಜೆಯಲ್ಲಿ ರುತ್ತಿದ್ದರು ಎಂಬುದನ್ನು ಅಪ್ಪಣೆ ಕೊಡಿಸಿದರು . ಅಥಣಿ ಗಚ್ಚಿನಮಠದಲ್ಲಿ ಶಿವಯೋಗಿಗಳ ಸೇವೆಯಲ್ಲಿ ಪೂಜ್ಯ ಅಪ್ಪಗಳಿದ್ದಾರೆ . ಅವರ ಭಾಗ್ಯವೇ ಭಾಗ್ಯ , ಸುತ್ತಲೂ ಎತ್ತರದ ಪ್ರಾಕಾರ , ಬಕುಲ , ಆಕಾಶ ಮಲ್ಲಿಗೆಗಳು ಅವುಗಳ ಮಧ್ಯೆ ಶಿವಯೋಗಿಗಳ ಪೂಜಾಕೋಣೆ , ವಿಶ್ರಾಂತಿಧಾಮ . ಶಿವಯೋಗಿಗಳ ಲಿಂಗಾರ್ಚನೆಗೆ ಅಣಿಮಾಡಿ , ಲಿಂಗಾರ್ಚನೆಗೆ ದಯಮಾಡಿಸಬೇಕೆಂದು ಬಿನ್ನಹ ಮಾಡಲು ಅಪ್ಪಗಳು ಶಿವಯೋಗಿಗಳಿದ್ದಲ್ಲಿಗೆ ಬಂದಿದ್ದಾರೆ . ಆಗ ಶಿವಯೋಗಿಗಳು ಎಡಗೈ ಮುಂದೆ ಚಾಚಿ ಬಲಹಸ್ತದಿಂದ ಪತ್ರಿ ಪುಷ್ಪ ಏರಿಸುತ್ತಿದ್ದಾರೆ . ಅಪ್ಪಗಳಿಗೆ ಅಲ್ಲಿ ಲಿಂಗ ಕಾಣಿಸುತ್ತಿಲ್ಲ . ಬಲಗೈಯಲ್ಲಿ ಪತ್ರಿಪುಷ್ಟಗಳಿಲ್ಲ . ಆದರೂ ಲಿಂಗಪೂಜೆ ನಡೆದಿದೆ . ಅಪ್ಪಗಳು ‘ ಮಾತು ಅಲ್ಲಿ ಮೈಲಿಗೆ ‘ ಎಂಬುದನರಿತು ಮೌನವಾಗಿದ್ದಾರೆ . ಇದ್ದಕ್ಕಿದ್ದಂತೆ ಶಿವಯೋಗಿಗಳು ‘ ಆಹಾ ಆಹಾ … ಏನು ಬೆಳಕು ಓ ಮಹಾಬೆಳಕು …. ಎಂಬ ಉದ್ಗಾರ ತೆಗೆಯುತ್ತಾರೆ . ಆಗ ಅಪ್ಪಗಳು ಮಂತ್ರಮುಗ್ಧರಾಗಿ ಸಾಷ್ಟಾಂಗ ಹಾಕುತ್ತಾರೆ . ಈ ಕ್ರಿಯೆ ಅದೆಷ್ಟೋ ಕಾಲ ನಡೆಯುತ್ತದೆ . ಹೀಗೆ ಲಿಂಗದೊಂದಿಗೆ ಲಿಂಗವಾಗಿದ್ದರು ಶ್ರೀಮದಥಣಿ ಶಿವಯೋಗಿಗಳು .

 ಶ್ರೀ ಮುರುಘೇಂದ್ರ ಶಿವಯೋಗಿಗಳು ತಮ್ಮ ಇರುವಿಕೆಯಿಂದ , ಲಿಂಗ ನಿಷ್ಠೆಯಿಂದ ಅಥಣಿಯನ್ನು ಸುಕ್ಷೇತ್ರವನ್ನಾಗಿ ಮಾಡಿದರು . ಅಥಣಿಯ ಗಚ್ಚಿನಮಠದಲ್ಲಿ ಶ್ರೀ ಶಿವಯೋಗಿಗಳು ಸಮಗ್ರ ನಲವತ್ತು ವರ್ಷಗಳ ಕಾಲ ತಮ್ಮ ಗುರುಗಳ ಅಪ್ಪಣೆಯ ಪ್ರಕಾರ ನೆಲೆಸಿದ್ದರು . ಅಲ್ಲಿ ಹಾಗೆ ನೆಲೆಸುವ ಪೂರ್ವದಲ್ಲಿ ನಲವತ್ತೈದು ವರ್ಷಗಳ ಕಾಲ ದೇಶಸಂಚಾರಗೈದರು . ಹೀಗೆ ಎಂಬತ್ತೈದು ವರ್ಷಗಳ ತಮ್ಮ ಜೀವಿತ ಕಾಲದಲ್ಲಿ ಶ್ರೀ ಶಿವಯೋಗಿಗಳು ಅಷ್ಟಾವರಣ , ಪಂಚಾಚಾರ , ಷಟ್‌ಸ್ಥಲಗಳಿಗೆ ತಮ್ಮ ಆಚರಣೆಯಿಂದ ವ್ಯಾಖ್ಯೆ ಬರೆದರು . ವೀರಶೈವ ಶಾಸ್ತ್ರಕ್ಕೂ , ಅನುಭಾವಕ್ಕೂ , ಶಿವಯೋಗಕ್ಕೂ , ಸಂಕೇತವಾದರು . ಲಿಂಗಾಂಗ ಸಾಮರಸ್ಯವೆಂಬುದು ಅವರಿಗೆ ಸಹಜ ಕ್ರಿಯೆಯಾಗಿತ್ತು . ಮುಪ್ಪಿನ ಷಡಕ್ಷರದೇವರು ನುಡಿದಂತೆ ‘ ಎನ್ನ ಕರದೊಳಗಿರ್ದು ಎನ್ನೊಳೇತಕೆ ನುಡಿಯೆ , ಎನ್ನ ಭವಭವದಲ್ಲಿ ಬಿಡದಾಳ್ದನೇ ‘ ಎಂದು ನಿತ್ಯವೂ ಅಂಗೈಯ ಲಿಂಗಯ್ಯನನ್ನು ಕೇಳಿ ಕೇಳಿ – ಭಕ್ತಿಯಿಂದ ಒಲಿಸಿಕೊಂಡು , ಆತನೊಂದಿಗೆ ಮಾತನಾಡಿ , ಆತನನ್ನು ಅಪಾರವಾಗಿ , ಒಲಿದು ರಮಿಸಿದರು . ‘ ಎನ್ನ ಭಾಗ್ಯದ ಸುಧೆಯೇ ‘ ಎನ್ನ ಭಕ್ತಿಯ ನಿಧಿಯೇ ಎನ್ನ ಮನವೆಂಬ ವನಿತೆಯ ತಿಲಕವೇ ಎಂದು ಲಿಂಗಯ್ಯನನ್ನು ಕೊಂಡಾಡಿ ‘ ಎನ್ನನಗಲದೆ ಕೂಡಿ ಬಿಡದಾಳ್ತನೇ ಎಂದು ಓಲೈಸಿದರು .

ಶಿವಯೋಗಿಗಳು ಲಿಂಗವ ಪೂಜಿಸಿ , ಲಿಂಗವ ಒಲಿಸಿಕೊಂಡು ತಾವೇ ಲಿಂಗವಾಗಿ ಪೂಜೆಗೊಂಡರು . ಲಿಂಗ ವ್ರತದಿಂದ ಲಿಂಗ ಸ್ವರೂಪರಾದ ಶಿವಯೋಗಿಗಳು ಓಂಕಾರವೇ ಕಾಯವಾಗಿ , ಪಂಚಾಕ್ಷರಗಳೇ ಪಂಚೇಂದ್ರಿಯಗಳಾಗಿ , ಅಂಗವೆಲ್ಲ ಮಂತ್ರ ಪಿಂಡವೆನಿಸಿ , ಮಂತ್ರ ಮೂರುತಿಗಳಾದರು . ಇದರಿಂದಾಗಿ ಅವರು ಸತ್ ಚಿತ್ ಆನಂದಸ್ವರೂಪೆನ್ನಿಸಿಕೊಂಡರು . ಹೊಳೆ ಹೊಳೆವ ಚಿಚ್ಚೈತನ್ಯ  ಕಳಾಕೀರ್ತಿ ಶಿವಯೋಗಿಗಳ ಪದತಲದಲ್ಲಿ ಬಂದು ನೆಲೆಸಿತು .

 ಅಥಣಿಯ ಸುಕ್ಷೇತ್ರಕ್ಕೆ ಸಮೀಪದ ನಯನ ಮನೋಹರವಾದ ಕೃಷ್ಣಾ ನದಿಯ ದಂಡೆಯ ಮೇಲೆ ಸ್ಥಿತಗೊಂಡಿರುವ ಇಂಗಳಗಾವಿ , ಅಲ್ಲಿಯ ಮಠದೊಡೆಯ ವೇ . ಮೂ . ರಾಚಯ್ಯನವರು . ಅವರಿಗೆ ಮಹಾಸಾದ್ವಿಶಿರೋಮಣಿ ನಿಜಸತಿ ನೀಲಾಂಬಿಕಾದೇವಿ . ಇಬ್ಬರೂ ಮಹಾಜಂಗಮ ಪ್ರೇಮಿಗಳು , ಅವರ ಪುತ್ರ ಗುರುಲಿಂಗಯ್ಯ , ದಿವ್ಯಲಿಂಗದ ಘನತೇಜೋಮೂರ್ತಿ ತಾನೇ ಆಗಬೇಕೆಂದು ಅಥಣಿಯ ಗಚ್ಚಿನ ಮಠಕ್ಕೆ ಬಂದ ಬಾಲಕ ಗುರುಲಿಂಗಯ್ಯ , ಪರಮ ತಪಸ್ವಿ ಶ್ರೀ ಗುರುಶಾಂತ ಮಹಾಸ್ವಾಮಿಗಳ ಕೃಪೆಯಿಂದ ಗುರುಲಿಂಗ ಮರಿದೇವರಾದರು . ಮಮದಾಪುರದ ಶ್ರೀ ಮುರುಘೇಂದ್ರ ಸ್ವಾಮಿಗಳಲ್ಲಿ ಶಾಸ್ತ್ರಾಭ್ಯಾಸ ಮಾಡಿದರು . ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಜಂಗಮ ಸಂಸ್ಕಾರ ಪಡೆದು ನಿರಂಜನಮೂರ್ತಿಯಾಗಿ ಶ್ರೀ ನಿ.ಪ್ರ.ಶ್ರೀ ಮುರುಘೇಂದ್ರ ಸ್ವಾಮಿಗಳಾಗಿ , ನಿರಂತರ ಅಂತರಂಗದ ಬದುಕನ್ನು ಉದ್ದೀಪನಗೊಳಿಸಿಕೊಳ್ಳುತ್ತ ಲಿಂಗನಿಷ್ಠೆ , ಲಿಂಗಾರ್ಚನೆ , ಲಿಂಗಧ್ಯಾನವೇ ವ್ರತಗಳಾಗುವಂತೆ ತಪಃ ಕೈಕೊಂಡು ಶಿವಯೋಗ ಸಿದ್ಧಿ ಸಾಧಿಸಿ , ಶ್ರೀಮದಥಣಿ ಶಿವಯೋಗಿಗಳೆಂದೇ ಕೀರ್ತಿ ಪಡೆದರು- ಈ ಎಲ್ಲ ಅವಸ್ಥೆಗಳನ್ನು ಮುಗಿಸಿ ಈಗ ಕೇವಲ – ದಿವ್ಯಲಿಂಗದ ಘನತೇಜೋಮೂರ್ತಿ .

 ಇಂಥ ಚಿನ್ಮಯ ಮೂರ್ತಿಯನ್ನು ಬಸವಣ್ಣ ನುಡಿದಂತೆ ಶಿವ , ಭಕ್ತಿ ಕಂಪಿತ ‘ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಮೃತ್ಯುಂಜಯ ಅಪ್ಪಗಳು ತಮ್ಮ ಅತುಲ ಭಕ್ತಿಯ ಶಕ್ತಿಯಿಂದ ಲಿಂಗಸ್ವರೂಪಿಯಾದ ಶಿವಯೋಗಿಯನ್ನು ಅಥಣಿಯಿಂದ ಧಾರವಾಡದ ಶ್ರೀ ಮುರುಘಾಮಠಕ್ಕೆ ಕರೆತಂದು , ನೆಲೆಗೊಳಿಸಿದರು . ಆ ಪರಮ ಶಿವಯೋಗಿಯ ಪುಣ್ಯನಾಮದಲ್ಲಿ ಜಾತ್ರೆ ಆರಂಭಿಸಿದರು . ಸಾವಿರದೊಂಬೈನೂರ ಇಪ್ಪತ್ತೊಂಬತ್ತರಲ್ಲಿ ಆರಂಭವಾದ ಈ ಜಾತ್ರೆ ವೈಭವದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಲಿದೆ . ಅಂದು ಮೃತ್ಯುಂಜಯ ಅಪ್ಪಗಳು , ಮಹಾಂತ ಅಪ್ಪಗಳು ಇಂದು ಶಿವಯೋಗಿ ಅಪ್ಪಗಳು . ಭಕ್ತಿಯ ಸಂಕೇತವಾಗಿ ಲಿಂಗದ ಸಂಕೇತವಾಗಿ , ಜಂಗಮದ ಸಂಕೇತವಾಗಿ ಶಿವಯೋಗಿಯ ತೇರು ಸಾಗುತ್ತಲಿದೆ . ಲಿಂಗದ ನೃತ್ಯಕ್ಕೆ ಕೊನೆಯೆಲ್ಲಿ ? ಓ ! ಗುರುವೆ , ಪರಮ ಕಲ್ಪತರುವೆ ಸಾಗಲಿ ಹೀಗೆಯೇ ನಿನ್ನ ದಿವ್ಯನಾಮಸ್ಮರಣೆಯ ತೇರು ಲೋಕದಲ್ಲಿ ಶಾಂತಿ ನೆಲೆಸಲು , ಸಕಲ ಜೀವಾವಳಿಯ ಲೇಸಾಗಲು .

 ಇಂಥ ಶಿವಯೋಗಿಗಳು-

ಕಂಡುದೆಲ್ಲ ಪಾವನ , ಕೇಳಿತ್ತೆಲ್ಲ ಪರಮಬೋಧೆ

ಮುಟ್ಟಿತ್ತೆಲ್ಲವು ಪರುಷದ ಸೋಂಕು

ಒಡನೆ ಕೂಡಿದರೆಲ್ಲರು ಸದ್ಯೋನ್ಮುಕ್ತರು

ಸುಳಿದ ಸುಳುಹೆಲ್ಲ ಜಗತ್ಪಾವನ

ಮೆಟ್ಟಿದ ಧರೆಯಲ್ಲವು ಅವಿಮುಕ್ತಕ್ಷೇತ್ರ

ಸೋಂಕಿದ ಜಲವೆಲ್ಲವು ಪುಣ್ಯತೀರ್ಥಂಗಳು

 ಶರಣೆಂದು ಭಕ್ತಿಯ ಮಾಡಿದವರೆಲ್ಲರೂ ಸಾಯುಜ್ಯರು .

ಗುಹೇಶ್ವರ , ನಿಮ್ಮ ಸುಳುಹಿನ ಸೊಗಸ ಉಪಮಿಸಬಾರದು .

ಅಂತೆಯೇ ಶ್ರೀಮದಥಣಿ ಶಿವಯೋಗಿಗಳು ಉಪಮಾತೀತರು . ಶಿವಯೋಗಿಗಳ ಕೃಪೆ ಅನುಪಮವಾದುದು . ಅವರ ಕೃಪೆಯಿಂದ ಕೊರಡು ಕೊನರಿತು , ಬರಡು ಹಯನಾಯಿತು , ಅವರ ಕಾರುಣ್ಯ ದೃಷ್ಟಿಯಿಂದ ಪೆರ್ಬುಲಿಯು ಯೆರಳೆಯಾಗಿ ಶ್ರೀಚರಣಕ್ಕೆರಗಿತು , ಉರಿವಕಿಚ್ಚು ಸೀತಳವಾಯಿತು . ಸವದತ್ತಿಯ ಕಲ್ಲುಮಠದಲ್ಲಿ ನಡೆದ ಬಸವ ಪುರಾಣದ ಮಹಾಗಣಾರಾಧನೆಯ ಕಾಲದಲ್ಲಿ ಜಡಿಮಳೆ ಸುರಿದರೂ ಶಿವಯೋಗಿಗಳ ಅಪ್ಪಣೆಯಿಂದ ಶ್ರೀ ಮಠದ ಆವರಣದಲ್ಲಿ ಮಳೆ ಸುರಿಯದೇ ಹೋಯಿತು . ಭಯವಳಿದು ನಯವಾಯಿತು . ಚಕ್ಕಡಿಯ ಗಾಲಿ ಹಾಯ್ದರೂ ಶಿವಯೋಗಿಗಳ ಪಾದಸ್ಪರ್ಶವಾದ ಕೂಡಲೇ ಭಕ್ತ ಮಲಗಿದವನು ಎದ್ದಂತೆ ಎದ್ದು ಕುಳಿತ . ಹೆಚ್ಚೇನು ಆ ಮಹಾಮಹಿಮನ ಕರುಣೆಯಿಂದ ಕಲ್ಲೆಲ್ಲ ಕುಣಿದವು , ಭೂವಳಯ ಸೌಭಾಗ್ಯದ ಸೊಂಪನ್ನು ತಂಪನ್ನು ತಳೆಯಿತು . ಅಂತೇ ಶ್ರೀಮದಥಣಿ ಶಿವಯೋಗಿ – ಲೋಕದೊಳ್ ಈಶ್ವರನೆನಿಸಿ ಮೆರೆದ .

ಮೃತ್ಯುಂಜಯ ಅಪ್ಪಗಳ ದಿವ್ಯ ಸಾನ್ನಿಧ್ಯದಲ್ಲಿ ಕೈಂಕರ್ಯ ಕೈಕೊಂಡ ಮಹಾಭಾಗ್ಯ ಈ ತೊತ್ತಿನದು . ಅಂತೆಯೇ ಅಂದೇ ಹೀಗೆ ಹಾಡಿದ್ದೆ-

ನನ್ನ ಗುರುವೆ

ನಿಮ್ಮ ಗುರು ಶಿವಯೋಗಿಯ

 ಇರುವ ನಿಮ್ಮಲ್ಲಿ ಕಂಡೆನಯ್ಯಾ !

ನೀವಲ್ಲದೆ ಶಿವಯೋಗಿಗೆ

 ಬೇರೆ ಠಾವಿಲ್ಲ ಎನ್ನ ಮನದಾಳ್ದನೆ .

Related Posts