ಲೇಖಕರು: ಚಿದಾನಂದ ಎಸ್ ಮಠದ, ರಾಷ್ಟ್ರೀಯ ಕಾರ್ಯದರ್ಶಿ,
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
ಕನ್ನಡ ನಾಡಿನ ಕಾರಣಿಕ ಪುಣ್ಯ ಪುರುಷರೆನಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ಸಮಾಜದ ಅಂಧಕಾರವನ್ನು ಹೋಗಲಾಡಿಸಿದ ಪುಣ್ಯಾತ್ಮರು. ಪರಮ ತಪಸ್ವಿಗಳಾಗಿದ್ದ ಶ್ರೀಗಳು ವೀರಶೈವ ಸಮಾಜದ ಜಂಗಮ ಪುಂಗವರು. ಇವರು ಧಾರವಾಡ ಜಿಲ್ಲಾ ರಾಣೆಬೆನ್ನೂರು ತಾಲೂಕಿನ ಜೋಯಿಸರಹರಳಳ್ಳಿ ಗ್ರಾಮದವರು. ಇಲ್ಲಿಯ ಸುಸಂಸ್ಕøತ ಬಡಮನೆತನದ ಸಾಲಿಮಠ ಬಸವಯ್ಯ ನೀಲಮ್ಮ ದಂಪತಿಗಳ ಸುಪುತ್ರರು. ಇವರು ಜನಿಸಿದುದು ಕ್ರಿ.ಶ. 1867 ರಲ್ಲಿ. ಹಾಲಯ್ಯ ಇವರ ಜನ್ಮ ನಾಮ ಎಂದು ಕರೆಯುತ್ತಿದ್ದರು. ಇವರ ಅಜ್ಜ ಕೊಟ್ರಯ್ಯನವರು ಶಾಲೆ ಓದಿಸಲು ಕಾರಣರು.
ಹಾಲಯ್ಯನವರು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಒಂದು ಹೊತ್ತು ಶಾಲೆ ಕಲಿಯುವುದರೊಂದಿಗೆ ಒಪ್ಪೊತ್ತು ಭಿಕ್ಷೆಗೆ ಹೋಗುತ್ತಿದ್ದರು. ಕಜ್ಜರಿ ಎಂಬ ಗ್ರಾಮಕ್ಕೆ ಹೋದಾಗ ರಾಚಯ್ಯ ಎಂಬುವರು ಹಾಲಯ್ಯನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸಿದರು. ಪಾಠಶಾಲೆಗೆ ಕಳಿಸುವ ಏರ್ಪಾಟೂ ಮಾಡಿದರು. 7ನೆಯ ತರಗತಿ(ಮುಲ್ಕಿ) ಪರೀಕ್ಷೆಗೆ ಕುಳಿತುಕೊಳ್ಳಲು ಧಾರವಾಡಕ್ಕೆ ಹೋಗಬೇಕಾಗಿತ್ತು. ಹಣವಿಲ್ಲದ್ದರಿಂದ ಕಾಲು ನಡಿಗೆಯಲ್ಲಿಯೇ ಹೋಗಿ ಪರೀಕ್ಷೆ ಕೊಟ್ಟು ಬಂದರು.
ಹಾಲಯ್ಯನವರು ತಮ್ಮ ತಾಯಿಯ ತವರುಮನೆ ಲಿಂಗದಳ್ಳಿಗೆ ಹೋದರು. ಅಲ್ಲೊಂದು ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ಮಕ್ಕಳಿಗೆ ಪಾಠ ಹೇಳುವುದರೊಂದಿಗೆ ಗ್ರಾಮ ಸುಧಾರಣಾ ಕಾರ್ಯವನ್ನೂ ಕೈಕೊಂಡರು. ಜೊತೆಗೆ ತಮ್ಮ ತನು-ಮನಗಳ ಶುದ್ಧೀಕರಣವನ್ನು ಮಾಡಿಕೊಳ್ಳತೊಡಗಿದರು. ಆತ್ಮಬಲ ಬೆಳೆಸಿಕೊಳ್ಳಲು ಸಂಬಾಳದ ಬಸವಪ್ಪನವರಿಂದ ಆಧ್ಯಾತ್ಮಿಕ ಅರಿವು ಮೂಡಿಸಿಕೊಂಡರು. ತಾಯಿ ನೀಲಮ್ಮನವರು ಮಗನ ಸುಳಿವು ಪಡೆದು ಲಿಂಗದಳ್ಳಿಗೆ ಹೋದರು. ಮಗನನ್ನು ಊರಿಗೆ ಮರಳಿ ಬರಲು ಕೇಳಿಕೊಂಡರು. ಮಗ ಬೆಳೆದು ದೊಡ್ಡವನಾಗಿದ್ದುದರಿಂದ ಊರಿಗೆ ಕರೆದುಕೊಂಡು ಹೋಗಿ ವiದುವೆ ಮಾಡಬೇಕೆಂದರು. ಅದಕ್ಕೆ ಮಗ ಹಾಲಯ್ಯ ಒಪ್ಪದೇ ಹೋದನು.
“ನನಗೆ ಮನೆಬೇಡ, ಮದುವೆಬೇಡ, ಗುರು ಕರುಣೆಬೇಕು, ಗುಣ ಸಾಧನೆ ಬೇಕು. ಹರಪೂಜೆ ಗುರುಸೇವೆಗಿಂತ ಹಿರಿದಾದುದಿಲ್ಲ. ವಿರತಿ ವಿದ್ಯೆ, ವಿವೇಕ, ಶಮೆ, ದಮೆ, ಧರ್ಮ, ಸತ್ಯದರ್ಶನ, ನಿಜಭಕ್ತಿ, ನೀತಿಗಳ ಬ¯ಬೇಕು. ಕಾರಣ ನನ್ನನ್ನು ಮನೆಗೆ ಮದುವೆಗೆ ಕರೆಯಬೇಡ ತಾಯಿ.” ಎಂದು ನಿಷ್ಠುರವಾಗಿ ನುಡಿದಾಗ ತಾಯಿಯ ಕಣ್ಣಲ್ಲಿ ನೀರು ಹರಿಯುವುದನ್ನು ನೋಡಿದ ಹಾಲಯ್ಯ ‘ಮತ್ತೊಮ್ಮೆ ಬಾ’ ಎಂದು ಹೇಳಿದನು. ಅಲ್ಲಿಂದ ಹೊರಟು ಸತ್ಯ ಸಾಕಾತ್ಕಾರ ದರ್ಶನಕ್ಕಾಗಿ ನಡೆದನು. ಹುಬ್ಬಳ್ಳಿಗೆ ಬಂದು ಅಲ್ಲಿಯ ರುದ್ರಾಕ್ಷೀಮಠದಲ್ಲಿ ನೆಲೆ ನಿಂತನು. ಪಾಠಪ್ರವಚನ ಕೇಳಲು ಸಿದ್ಧಾರೂಢರಲ್ಲಿ ಹೋದನು. ಅಲ್ಲಿ ಲಿಂಗಧಾರಣೆ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದನು. ಸಂಶಯ ನಿವಾರಣೆಯಾಗದ್ದಕ್ಕೆ ಎಮ್ಮಿಗನೂರಿನ ಜಡೆಸಿದ್ಧರಲ್ಲಿಗೆ ಹೋದನು. ಅವರ ಇರುವಿಕೆಯಲ್ಲಿ ಲಿಂಗ ಬಿಡಬಾರದೆಂದುಕೊಂಡನು.
“ಎಲ್ಲಿದೇವೋ ಅಲ್ಲಿಗೇ ಹೋದರಾಯಿತು” ಎಂದು ಜಡೆಯಸಿದ್ದರು ನುಡಿದಾಗ ಮರಳಿ ಹಾಲಯ್ಯ ಹುಬ್ಬಳ್ಳಿಗೆ ಬಂದನು. ಇಷ್ಟಲಿಂಗಧಾರಿಗಳಾಗಿಯೇ ಇದ್ದುಕೊಂಡು “ನಿಜಗುಣರ ಕೈವಲ್ಯಪದ್ಧತಿ” ಅಧ್ಯಯನ ಮಾಡಿದರು. ಲಿಂಗಪತಿಯೊಡನೆ “ಶರಣಸತಿ, ಲಿಂಗಪತಿ” ತತ್ವದಂತೆ, ಲಗ್ನವಾದರು. ಲಿಂಗಾನುಸಂಧಾನದ ಅನುಭಾವಾನಂದವನ್ನು ಪಡೆಯಲಿಚ್ಚಿಸಿದರು. ಹುಬ್ಬಳ್ಳಿಗೆ ಆಗಮಿಸಿದ್ದ ಎಳಂದೂರ ಬಸವಲಿಂಗ ಸ್ವಾಮಿಗಳ ದರ್ಶನಾಶೀರ್ವಾದ ಪಡೆದನು.
ಆರೂಢರು ಕೇವಲ ಜ್ಞಾನಿಗಳೆನಿಸಿದರೆ, ಶಿವಯೋಗಿಗಳು ಕ್ರಿಯಾ-ಜ್ಞಾನಾನುಭೂತಿಯುಳ್ಳವರು ಎಂದರಿತು ಎಳಂದೂರ ಶಿವಯೋಗಿಗಳವರ ಶಿವಾನುಭೂತಿಗೆ ಆಕರ್ಷಿತರಾದರು. ಹಾಲಯ್ಯನವರು ಅವರೊಡನೆ ಹೊರಟು ದೇಶ ಸಂಚಾರ ಮಾಡಿದರು. ಯೋಗ-ಶಿವಯೋಗಗಳ ಅಭ್ಯಾಸ ಮಾಡಿದರು. ಆಚಾರ-ವಿಚಾರಗಳ, ಅಂಗ-ಲಿಂಗಗಳ ಅನುಸಂಧಾನಮಾರ್ಗ ಅಳವಡಿಸಿಕೊಂಡರು. ಅರ್ಚನ, ಅರ್ಪಣ, ಅನುಭವಗಳ ಸಂಬಂಧ ಸಕೀಲಗಳ ಅರಿವು ಮಾಡಿಕೊಂಡರು. ಹೀಗೆ ಹಾಲಯ್ಯ ಎಳಂದೂರ ಶಿವಯೋಗಿಗಳಿಂದ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡರು. ಹಳ್ಳಿ ಹಳ್ಳಿ ಅಡ್ಡಾಡಿ ಶರಣ ಸಂಸ್ಕತಿಯನ್ನು ಪ್ರಚಾರ ಕಾರ್ಯಕೈಗೊಂಡರು. ಅಲ್ಲಿಂದ ಅಣ್ಣಿಗೇರಿಯ ತೋಂಟದಾರ್ಯ ಶಾಖಾಮಠಕ್ಕೆ ಹೋದರು. ಬಸವಲಿಂಗ ಶಿವಯೋಗಿಗಳು ಅಸ್ವಸ್ಥರಾದುದನ್ನು ತಿಳಿದು ಅಲ್ಲಿಗೆ ಹೋದರು. ಶಿವಯೋಗಿಗಳು ಹಾಲಯ್ಯನನ್ನು ಕರೆದು ತಲೆದಡವಿ, “ ಹಾಲಯ್ಯ, ನಮಗಾಗಿ ಮರುಗದಿರು, ಕೊರಗದಿರು. ವ್ಯಕ್ತಿಗಿಂತ ಸಮಾಜ ದೊಡ್ಡದು. ಸಾಮಾಜಿಕ ಸೇವೆ ದೊಡ್ಡದು. ನೀನು ಮುಂದೆ ಸಮಾಜ ಸೇವೆಯನ್ನೆಸಗು. ಆ ಶಕ್ತಿ ನಿನ್ನಲ್ಲಿದೆ. ವಿದ್ಯೆ-ವಿನಯ-ಧರ್ಮಗಳಿಲ್ಲದೆ ಸಮಾಜ ಕುರುಡಾಗಿದೆ, ಬರಡಾಗಿದೆ. ಸಮಾಜ ಬೇರೆಯಲ್ಲ. ನಾನು ಬೇರೆಯಲ್ಲ. ಸಮಾಜಸೇವೆ ಮಾಡಿ ಆದರ್ಶಜೀವಿಯಾಗು” ಎಂದು ಯೋಗ ಶಿವಯೋಗ ಸಾಮಗ್ರಿಯನ್ನೆಲ್ಲ ಹಾಲಯ್ಯನಿಗೆ ಅನುಗ್ರಹಿಸಿ ಶಿವಯೋಗಿಗಳು ಮಹಾಲಿಂಗದೊಳಗೆ ಅವಿರಳೈಕ್ಯವಾದರು.
ಬಸವಲಿಂಗ ಶಿವಯೋಗಿಗಳ ಕೃಪಾಶೀರ್ವಾದದಿಂದ ಹಾಲಯ್ಯ ಮುಂದೆ ಅನುಷ್ಠಾನಕ್ಕೆಂದು “ಶಂಭುಲಿಂಗ ಬೆಟ್ಟಕ್ಕೆ” ಹೋದರು. ನಿಜಾನುಷ್ಠಾನ ಕೈಕೊಂಡರು. ವೈಯಕ್ತಿಕ ಮತ್ತು ಸಾಮಾಜಿಕವಾಗಿ ತಪೋನುಷ್ಠಾನ ಹಾಗೂ ಸೇವಾನುಷ್ಠಾನ ನಡೆಸಿದರು. ಅಲ್ಲಿಯೇ ಪಕ್ಕದ ಗ್ರಾಮದಿಂದ ಆಯ್ದ ಮನೆಗಳಿಂದ ಕಾಳಿನ ಭಿಕ್ಷೆ ತಂದು ತಾವೇ ಅಡುಗೆ ಮಾಡಿ ಸಪ್ಪನ್ನ ಊಟ ದಿನಕ್ಕೊಂದು ಸಲ ಸೇವಿಸುತ್ತಿದ್ದರು. ಹೀಗೆಯೇ ಹನ್ನೆರಡು ವರ್ಷ ಅನಂತ ತಪಸ್ಸು ನಡೆಸಿ ಕರಣೇಂದ್ರಿಯ ವಿಜಯ ಗಳಿಸಿದರು. ಹಗಲಿರುಳೂ ಧ್ಯಾನಾಸಕ್ತರಾಗಿ ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡರು.
ಮಹಾಶಿವಯೋಗಿಗಳಾದ ಹಾಲಯ್ಯ ಹಳ್ಳಿ ಹಳ್ಳಿಗೆ ಜನೋಪಯೋಗಿ ಕಾರ್ಯಕ್ರಮ ನಡೆಸುತ್ತ ಧರ್ಮದ ತಿಳುವಳಿಕೆ ಮಾಡಿಕೊಡುತ್ತ ಹೊರಟರು. ಅವರ ವಾಣಿಯಲ್ಲಿ ಧರ್ಮದ ಕೆಚ್ಚಿತ್ತು, ಮಿಂಚಿತ್ತು, ಮಾಧುರ್ಯವಿತ್ತು ಅತ್ಯಂತ ಕಳಕಳಿಯಿಂದ ಜನತೆಗೆ ಬೇಕಾಗಿರುವ ಶಾಶ್ವತ ಮೌಲ್ಯಗಳನ್ನು ತಿಳಿಹೇಳತೊಡಗಿದರು. ಸೊರಬದ ಉಳವಿಮಠಕ್ಕೆ ಹೋದರು. ಕೆಳದಿ ರಾಜರ ಪಂಚಮಠಗಳಲ್ಲಿ ಒಂದಾದ ಕ್ಯಾಸನೂರ ಮಠಕ್ಕೆ ಬಂದರು.
ಅಲ್ಲಿ ಅನುಷ್ಠಾನ ಕೈಕೊಂಡರು. ಜನತೆಗೆ ಉಪದೇಶ ಮಾಡತೊಡಗಿದರು. ಅರಿವು ಆಚಾರಗಳನ್ನು ಅಳವಡಿಸಿಕೊಳ್ಳಲು, ಆರ್ಥಿಕ ಬಲ ಹೆಚ್ಚಿಸಿಕೊಳ್ಳಲು ಕರೆಯಿತ್ತರು.
ಮಠಗಳು ಸಾಮಾಜಿಕ ಶಿಕ್ಷಣಾಲಯಗಳಾಗಬೇಕು, ಮಠಾಧಿಪತಿಗಳು ಶಿಕ್ಷಕರಾಗಬೇಕು, ಮಠಗಳು ವೈಭವದ ಕೇಂದ್ರಗಳಾಗಬಾರದು. ತ್ಯಾಗ-ಯೋಗಗಳಿಗೆ, ಸಾಹಿತ್ಯ-ಸಂಸ್ಕøತಿ-ಕಲೆಗಳಿಗೆ ನಿಲಯಗಳಾಗಬೇಕು. ಆಧ್ಯಾತ್ಮಿಕ ವಿದ್ಯಾಕೇಂದ್ರಗಳಾಗಬೇಕು ಎಂಬುವು ಹಾಲಯ್ಯನವರ ಧ್ಯೇಯಗಳಾಗಿದ್ದವು. ವಿದ್ಯೆಯಿಲ್ಲದ, ಆಚಾರ-ವಿಚಾರಗಳಿಲ್ಲದ ವಿಷಯವಾಸನೆಗಳನ್ನು ಅಳಿಯದ ವ್ಯಕ್ತಿಗಳನ್ನು ಮಠಾಧಿಪತಿಗಳನ್ನಾಗಿ ಮಾಡಬಾರದೆಂಬುದು ಹಾಲಯ್ಯನವರ ಗಟ್ಟಿ ನಿಲುವಾಗಿತ್ತು.
ಅಂತರಂಗ-ಬಹಿರಂಗ ಶುದ್ಧಿಗಳಾಗಿದ್ದ ಮಿತಭಾಷಿ ಶ್ರೀ ಹಾಲಯ್ಯ ಅವರನ್ನು ಚಿತ್ರದುರ್ಗದ ಬೃಹನ್ಮಠಕ್ಕೆ ಜಗದ್ಗುರುಗಳಾಗಬೇಕೆಂದು ಭಕ್ತರು ಬಿನ್ನವಿಸಿಕೊಂಡರು. ಒಪ್ಪಿಕೊಳ್ಳದ ಹಾಲಯ್ಯನವರು ಕಾಶಿಯಲ್ಲಿ ಓದುತ್ತಿದ್ದ ಜಯದೇವ ಮುರುಘರಾಜೇಂದ್ರರ ಹೆಸರನ್ನು ಸೂಚಿಸಿದರು. ಮತ್ತೆ ಹಾನಗಲ್ಲಿನ ಮಠಾಧ್ಯಕ್ಷರಾಗಲು ಕೋರಿದರು.ಅದಕ್ಕವರು ಸದ್ಯ ಬೇಡ ಎಂದರು. ಆಗ ಬಿದರಿ ಕುಮಾರಸ್ವಾಮಿಗಳು ಮಠಾಧಿಪತಿಗಳಾದರು. ತರುವಾಯ ಹಾಲಯ್ಯನವರೇ ಹಾನಗಲ್ಲ ಮಠಕ್ಕೆ ‘ಸದಾಶಿವ’ ಸ್ವಾಮಿಗಳೆನಿಸಿದರು. ಇವರೇ ಮುಂದೆ “ಹಾನಗಲ್ಲ ಕುಮಾರ ಸ್ವಾಮಿ”ಗಳಾದರು.
‘ವೀರಶೈವ ಮತ ಲೋಕಮತವಾಗಬೇಕು, ವಿಶ್ವಪಥವಾಗಬೇಕು’ ಎಂಬುದು ಹಾನಗಲ್ಲ ಕುಮಾರಸ್ವಾಮಿಗಳವರ ಮನೀಷೆಯಾಗಿತ್ತು. ಹಾನಗಲ್ಲದ ಕುಮಾರ ಸ್ವಾಮಿಗಳವರು ವೀರಶೈವ ಸಮಾಜದ ಸೌಭಾಗ್ಯ ಎನ್ನುವಂತೆ ಇಡೀ ನಾಡಿನ ವಿರಕ್ತಮಠಗಳಿಗೆಲ್ಲ ಮಾರ್ಗದರ್ಶಿಗಳಾದರು. ಸಮಾಜದ ಒಪ್ಪಂದದ ಸೌಖ್ಯಕ್ಕಾಗಿ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಹಲವಾರು ಸಂಘ-ಸಂಸ್ಥೆಗಳನ್ನು ಪ್ರಾರಂಭಿಸಿ ಆ ಮೂಲಕ ಸಮಾಜದ ಸರ್ವತೋಮುಖದ ಏಳ್ಗೆಗಾಗಿ ಹಗಲಿರುಳು ಶ್ರಮಿಸತೊಡಗಿದರು. ಅವರು ಪ್ರಾರಂಭಿಸಿದ ಕೆಲವೊಂದು ಸಂಘ-ಸಂಸ್ಥೆಗಳ ಪರಿಚಯವನ್ನು ಇಲ್ಲಿ ಕೊಡಲಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆ:
ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ನಾಡನ್ನು ಸುತ್ತಿದರು. ಸಮಾಜದ ಜನತೆಯ ನಾಡಿ ಪರೀಕ್ಷೆ ಮಾಡಿದರು. ಆ ಒಗ್ಗಟ್ಟಿನ ಕೊರತೆಯಿಂದ ಸೊರಗಿ ಸಣ್ಣಾಗುತ್ತಲಿತ್ತು. ಅದನ್ನು ಬಲಿಷ್ಠಗೊಳಿಸಲು ಶ್ರೀಮಂತ ಬಡವರನ್ನು ಈ ಒಳಪಂಗಡದ ಎಲ್ಲ ಲಿಂಗಾಯತರನ್ನು ಒಂದುಗೂಡಿಸಲು, ಗುರು-ವಿರಕ್ತ ಭೇದ ಅಳಿಸಿಹಾಕಲು, ಸಂಸ್ಥೆಯನ್ನು ಸ್ಥಾಪಿಸಿದರು. ಅದುವೆ “ಅಖಿಲ ಭಾರತ ವೀರಶೈವ ಮಹಾಸಭಾ. ಇದು ಕ್ರಿ.ಶ 1904ರ ಮೇ ತಿಂಗಳು 13 ರಂದು ಪ್ರಾರಂಭವಾಯಿತು. ಇದಕ್ಕೆ ದಾನಶೂರ ಸಿರಸಂಗಿ ಲಿಂಗರಾಜ ಜಾಯಪ್ಪ ದೇಸಾಯಿ ಇವರು ಅಧ್ಯಕ್ಷರಾದರು. ಅಂದಿನಿಂದ ಇಂದಿನವರೆಗೆ ಈ ಮಹಾಸಭೆಯು 23 ಅಧಿವೇಶನಗಳನ್ನು ಕಂಡಿದೆ.
ಅಖಿಲ ಭಾರತ ವೀರಶೈವ ಮಹಾಸಭೆಯ 1ನೇ ಅಧಿವೇಶನವು ಕ್ರಿ.ಶ. 1904 ರಲ್ಲಿ ಧಾರವಾಡದಲ್ಲಿ ಜರುಗಿತು. ಇದರ ಪ್ರಥಮ ಅಧ್ಯಕ್ಷತೆಯನ್ನು ಸಿರಸಂಗಿ ಲಿಂಗರಾಜ ದೇಸಾಯಿಯವರು ವಹಿಸಿದ್ದರು. 2ನೇ ಅಧಿವೇಶನವು ಇವರ ಅಧ್ಯಕ್ಷತೆಯಲ್ಲಿ ಕ್ರಿ.ಶ 1905 ರಲ್ಲಿ ಬೆಂಗಳೂರಿನಲ್ಲಿ ಜರುಗಿತು. ಕ್ರಿ.ಶ 1907 ರಲ್ಲಿ 3ನೇ ಅಧಿವೇಶನವು ಸೊಲ್ಲಾಪುರದಲ್ಲಿ ರಾಜಸಭಾ ಭೂಷಣ ಮೈಸೂರು ರಾಜ್ಯದ ದಿವಾನರಾಗಿದ್ದ ಕೆ.ಪಿ. ಪುಟ್ಟಣ್ಣಚೆಟ್ಟರ ಅಧ್ಯಕ್ಷತೆಯಲ್ಲಿ ಜರುಗಿತು. 4ನೇ ಅಧಿವೇಶನವು ಕ್ರಿ.ಶ. 1908 ರಲ್ಲಿ ವಂಟಮೂರಿ ದೊರಗಳೂ ದೇಸಾಯಿಯವರಾದ ರಾಜಾ ಲಖಮಗೌಡರ ಸರ್ ದೇಸಾಯಿ ಅಧ್ಯಕ್ಷತೆಯಲ್ಲಿ ಜರುಗಿತು. ಶಿವಯೋಗ ಮಂದಿರ ಸ್ಥಾಪನೆಯ ನಿರ್ಧಾರವಾಯಿತು. 5ನೇ ಅಧಿವೇಶನವು ಬಳ್ಳಾರಿಯಲ್ಲಿ ಕ್ರಿ.ಶ. 1909 ರಲ್ಲಿ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು. 6ನೇ ಅಧಿವೇಶನವು ಬೆಳಗಾವಿಯಲ್ಲಿ ಕ್ರಿ.ಶ. 1911 ರಲ್ಲಿ ಹಂದಿಗನೂರ ಬಿ.ಬಿ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 7ನೇ ಅಧಿವೇಶನ ಕ್ರಿ.ಶ. 1913 ರಲ್ಲಿ ಅರಟಾಳ ರುದ್ರಗೌಡರ ಅಧ್ಯಕ್ಷತೆಯಲ್ಲಿ ನಿಪ್ಪಾಣಿಯಲ್ಲಿ ಜರುಗಿತು. 8ನೇ ಅಧಿವೇಶನವು ದಾವಣಗೆರೆಯಲ್ಲಿ ಕ್ರಿ.ಶ. 1917 ರಲ್ಲಿ ಸರ್ ಕೆ.ಪಿ ಪುಟ್ಟಣ್ಣಚೆಟ್ಟರ ಅಧ್ಯಕ್ಷತೆಯಲ್ಲಿ ಜರುಗಿತು. 9ನೇ ಅಧಿವೇಶನವು ಕ್ರಿ.ಶ 1919 ರಲ್ಲಿ ಬೀರೂರಿನ ಶಾಂತವೀರಪ್ಪ ಮೆಣಸಿನಕಾಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 10ನೇ ಅಧಿವೇಶನವು ಕ್ರಿ .ಶ 1927 ರಲ್ಲಿ ಬೆಂಗಳೂರಿನಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ರಿ.ಶ 1933 ರಲ್ಲಿ 11ನೇ ಅಧಿವೇಶನವು ಡಾ.ಫ.ಗು ಹಳಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಜರುಗಿತು. ಅದೇ ಪ್ರಕಾರ 12ನೇ ಅಧಿವೇಶನವು ಸರ್. ಸಿದ್ದಪ್ಪ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ಕ್ರಿ.ಶ. 1936 ರಲ್ಲಿ ಜರುಗಿತು.
ಹದಿಮೂರನೇ ಅಧಿವೇಶನವು ಪ್ರೊ.ಎಸ್.ಎಸ್. ಬಸವನಾಳರ ಅಧ್ಯಕ್ಷತೆಯಲ್ಲಿ ನಡೆಯಿತು. 14ನೇ ಅಧಿವೇಶನವು ಬ್ಯಾರಿಸ್ಟರ್ ಎಂ.ಎಸ್. ಸರದಾರ ಅವರ ಅಧ್ಯಕ್ಷತೆಯಲ್ಲಿ ಕ್ರಿ.ಶ. 1940 ರಲ್ಲಿ ತಮಿಳುನಾಡಿನ ಕುಂಭಕೋಣಂದಲ್ಲಿ ನಡೆಯಿತು. ಕ್ರಿ.ಶ. 1943 ರಲ್ಲಿ 15ನೇ ಅಧಿವೇಶನ ತುಮಕೂರಿನಲ್ಲಿ ನ್ಯಾಯಮೂರ್ತಿ ಸಿ.ಸಿ ಹುಲಕೋಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 16ನೇ ಅಧಿವೇಶನವು ಬಂಥನಾಳ ಸಂಗನಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಶಿವಯೋಗ ಮಂದಿರದಲ್ಲಿ ರ್ಯಾಂಗ್ಲರ್ ಪದವಿಭೂಷಿತ ಡಾ.ಡಿ.ಸಿ ಪಾವಟೆ ಅವರ ಅಧ್ಯಕ್ಷತೆಯಲ್ಲಿ 17ನೇ ಅಧಿವೇಶನವು ಕ್ರಿ.ಶ 1960ರಲ್ಲಿ ಜರುಗಿತು. 18ನೇ ಅಧಿವೇಶನ ಕ್ರಿ.ಶ.1969 ರಲ್ಲಿ ಮುಂಯಿಯಲ್ಲಿ ಸಿದ್ಧಗಂಗಾಮಠದ ಡಾ. ಶಿವಕುಮಾರ ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಸಂಘಟನೆಯಾಗಿತ್ತು. ಕ್ರಿ.ಶ 1973 ರಲ್ಲಿ ಜೆ.ಬಿ ಮಲ್ಲಾರಾಧ್ಯರ ಅಧ್ಯಕ್ಷತೆಯಲ್ಲಿ 19ನೇ ಅಧಿವೇಶನ ಬೆಂಗಳೂರಿನಲ್ಲಿ ಜರುಗಿತು. 1983 ರಲ್ಲಿ ಮೈಸೂರಿನಲ್ಲಿ 20ನೇ ಅಧಿವೇಶನವು ಈಶ್ವರ ಮಲ್ಲಪ್ಪ ಮಗದುಮ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 21ನೇ ಅಧಿವೇಶನವು 1992 ರಲ್ಲಿ ಬೆಳಗಾವಿಯಲ್ಲಿ ಡಾ.ಶರಣಬಸಪ್ಪ ಅಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ರಿ.ಶ 1904 ರಲ್ಲಿ ಸ್ಥಾಪಿಸಿರುವ “ಅಖಿಲ ಭಾರತ ವೀರಶೈವ ಮಹಾಸಭೆಯ ಶತಮಾನೋತ್ಸವವನ್ನು ಕ್ರಿ.ಶ 2010 ರಲ್ಲಿ ಶ್ರೀ ಮದ್‍ವೀರಶೈವ ಶಿವಯೋಗ ಮಂದಿರ ಸುಕ್ಷೇತ್ರದಲ್ಲಿ ನಭೂತೋ ನಭವಿಷ್ಯತಿ ಎಂಬ ವಿರಾಟ್ ಸ್ವರೂಪದಲ್ಲಿ ಪರಮಪೂಜ್ಯ ಜಗದ್ಗುರು ಲಿಂ. ಡಾ ಸಂಗನಬಸವಸ್ವಾಮಿಗಳ ಸಹಯೋಗದಲ್ಲಿ ಸಂಘಟನೆಯಾಗಿತ್ತು.”
ಆಗ ಸದರಿ ಜಗದ್ಗುರುಗಳೇ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷರಾಗಿದ್ದರು.ಕುಮಾರಸ್ವಾಮಿಗಳು ಸ್ಥಾಪಿಸಿದ “ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶ್ರೀ ಮದ್‍ವೀರಶೈವ ಶಿವಯೋಗ ಮಂದಿರ ಸುಕ್ಷೇತ್ರದಲ್ಲಿಯೇ ಆಚರಣೆಯಾಗಿದ್ದು ಒಂದು ಮಹತ್ವಪೂರ್ಣ ಕಾಲಘಟ್ಟ.”
ಅಂದು ಪೂಜ್ಯ ಕುಮಾರಸ್ವಾಮಿಗಳವರಿಗೆ ಈ ಸಂಸ್ಥೆ ಪ್ರಾರಂಭಿಸುವಾಗ ಅರಟಾಳ ರುದ್ರಗೌಡರು ಬೆನ್ನೆಲುಬಾಗಿದ್ದರಿಂದ ಮಾತನ್ನು ಮರೆಯುವಂಥದ್ದಲ್ಲ. ಅಖಿಲ ಭಾರತ ಮಹಿಳಾ ಪರಿಷತ್ತು, ತರುಣ ಪರಿಷತ್ತು, ಶೈಕ್ಷಣಿಕ ಸಮ್ಮೇಳನ, ವೈದ್ಯ ಸಮ್ಮೇಳನಗಳೂ ಜರುಗಿದ್ದುದನ್ನು ಸ್ಮರಿಸಬಹುದಾಗಿದೆ. ಹೀಗೆ ಸಾಮಾಜಿಕ ಸಂಘಟನೆಗೆ, ಪ್ರಗತಿಗೆ ಕುಮಾÀರಸ್ವಾಮಿಗಳು ನಾಂದಿ ಹಾಡಿರುವರು.
ಶ್ರೀಮದ್ದೀರಶೈವ ಶಿವಯೋಗ ಮಂದಿರ ಸ್ಥಾಪನೆ:
ವೀರಶೈವಧರ್ಮ ವ್ಯಕ್ತಿನಿಷ್ಠವಾಗಿರದೆ ಅದು ತತ್ವಪ್ರಧಾನವಾಗಿರುವುದು. ಇಂಥ ತತ್ವಗಳನ್ನು, ಆಚಾರ-ವಿಚಾರ, ಧರ್ಮ-ಸಾಹಿತ್ಯ, ಸಂಸ್ಕøತಿಯ ಅರಿವು ಮೂಡಿಸಿಕೊಡಲೆಂದು ಧಾರ್ಮಿಕ ತರಬೇತಿ ನೀಡುವುದಕ್ಕಾಗಿ ಈ ಶಿವಯೋಗ ಮಂದಿರ ಸಂಸ್ಥೆಯನ್ನು ಸ್ಥಾಪಿಸಿದರು. ಅದು ಕ್ರಿ.ಶ 1909 ರಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಲಪ್ರಬಾ ನದಿ ತಟದಲ್ಲಿ ಫೆಬ್ರವರಿ 7 ರಂದು ಪ್ರಾರಂಭವಾಯಿತು. ಆದರ್ಶ ಮಠಾಧೀಶರ ಯೋಗ,ಶಿವಯೋಗ, ಅರಿಯಲು ತವನಿಧಿಯಾಯಿತು. ಈ ಸಂಸ್ಥೆ ಮುಡುಪಾಯಿತು. ಈ ಸಂಸ್ಥೆಯಿಂದ ಧರ್ಮ, ಸಾಹಿತ್ಯ, ಸಂಸ್ಕøತಿಗಳ ರಕ್ಷಣೆಗಾಗಿ ಈ ಶಿವಯೋಗ ಮಂದಿರ ಮೀಸಲಾಯಿತು. ಶಿವಯೋಗ ಸಾಧಕರಿಗೆ ಇದು ಪವಿತ್ರ ತಾಣವಾಯಿತು. ಇಲ್ಲಿ ಈ ಸಂಸ್ಥೆಯಲ್ಲಿ ನಿತ್ಯವೂ ಅರ್ಚನ-ಅರ್ಪಣ, ಅನುಭವ ನಡೆಯಿಸಿ, ಸಾಧಕರಿಗೆ ಮಾರ್ಗದರ್ಶನ ಮಾಡತೊಡಗಿದರು. ಇಲ್ಲಿ ಪೂಜ್ಯ ಕುಮಾರ ಸ್ವಾಮಿಗಳೂ ಕೂಡ ತ್ರಿಕಾಲದಲ್ಲಿ ಅನುಭಾವ ಮಾಡುತ್ತಿದ್ದರು. ಇಲ್ಲಿ ಬಂದ ಲಿಂಗಾಯತ ಮಠಾಧೀಶರಿಗೂ ಭಕ್ತರಿಗೂ ನಿಕಟ ಸಂಬಂಧವಿದ್ದುದನ್ನು ಕಾಣುತ್ತೇವೆ. ಶಿವಯೋಗದ ಜೊತೆಗೆ ನೇಗಿಲ ಯೋಗಕ್ಕೂ ಸ್ಥಾನ ನೀಡಿದರು. ವಚನ ಸಾಹಿತ್ಯ, ಶರಣ ಧರ್ಮ, ಕನ್ನಡದೊಂದಿಗೆ ಸಂಸ್ಕøತ, ಹಿಂದಿ, ಇಂಗ್ಲೀಷ್, ಭಾಷೆಗಳ ಅಧ್ಯಯನವು ಇಲ್ಲಿ ವಟು ಸಾಧಕರಿಗೆ ಅಗತ್ಯವಾಗಿತ್ತು.
ಶಿವಯೋಗ ಮಂದಿರದ ವತಿಯಿಂದ “ಸುಕುಮಾರ” ಹೆಸರಿನ ಪತ್ರಿಕೆಯೊಂದನ್ನು ಪ್ರಕಟಿಸತೊಡಗಿದರು. ಮುಂದೆ ಕೆಲಕಾಲ ಅದರ ಸಂಪಾದಕರಾಗಿ ಪ್ರೊ. ಉಮಾಪತಿ ಶಾಸ್ತ್ರಿಗಳು ಕೆಲಸ ಮಾಡಿದರು. ಆಗ ಅವರು ಬರೆದ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಅದರಲ್ಲಿ ಪ್ರಕಟಗೊಂಡಿದ್ದನ್ನು ನೆನಯಬಹುದಾಗಿದೆ. ಶಿವಯೋಗ ಮಂದಿರದಲ್ಲಿ ವಟುಗಳ ಅಧ್ಯಯನಕ್ಕೆ ಅನುಕೂಲವಾಗಲೆಂದು ವಾಚನಾಲಯವೊಂದನ್ನು ಶ್ರೀಗಳು ತೆರೆದರು. ಹಸ್ತಪ್ರತಿ (ತಾಡೋಲೆ) ಉದ್ಧಾರಣಾ ಸಾಹಿತ್ಯ ಕೂಡುಹಾಕಿದರು. ಗೋರಕ್ಷಣೆಗೆಂದು ಗೋಶಾಲೆ ತೆರೆದರು. ಗೋವುಗಳ ಸಗಣಿಯಿಂದ ಶಾಸ್ರೋಕ್ತವಾಗಿ ಭಸ್ಮ ತಯಾರಿಸುವದನ್ನು ಪ್ರಾರಂಭಿಸಿ ಕೈಗಾರಿಕೆಗೆ ಉತ್ತೇಜನ ನೀಡಿದರು.ಇವರ ಪ್ರೇರಣೆಯಿಂದ ಬಂದ ಭಕ್ತರೆಲ್ಲ ಭಸ್ಮ ಧರಿಸುವ ಪ್ರಕ್ರಿಯೆಗೆ ಪ್ರೇರಣೆ ಪಡೆದರು.
ಕುಮಾರಸ್ವಾಮಿಗಳು ಶಿವಯೋಗ ಮಂದಿರದಲ್ಲಿಯೇ ಕೂರದೆ ಚೈತನ್ಯ ಜಂಗಮರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸತೊಡಗಿದರು. ಸ್ವತಃ ಸ್ವದೇಶಿ ಬಟ್ಟೆಗಳನ್ನು ತೊಟ್ಟು ಇತರರಿಗೂ ಸ್ವದೇಶಿ ಪ್ರೇಮ ಬೆಳೆಯುವಂತೆ ಮಾಡಿದರು. ಔದ್ಯೋಗಿಕ ಕ್ಷೇತ್ರದಲ್ಲಿಯೂ ಪ್ರಗತಿಯಾಗಬೇಕೆಂದರು. ಪ್ರತಿಯೊಬ್ಬರೂ ಅಕ್ಷರಜ್ಞರಾಗಬೇಕೆಂದು ಸಂಗೀತ, ಸಾಹಿತ್ಯ, ಕಲಾಭಿವೃದ್ದಿಗೆ ಜನಮನದ ಕಣ್ಣು ತೆರೆಸಿದರು. ಸಂಸ್ಕøತಾಭಿಮಾನಿಗಳು, ಪಂಡಿತರ ಹಿತಚಿಂತಕರು ಆಗಿದ್ದ ಶ್ರೀಗಳು ಎಲ್ಲಕ್ಕೂ ಮಿಗಿಲಾಗಿ ಕನ್ನಡದ ಕಲಿಕೆಗೆ ಒತ್ತು ನೀಡಿದ್ದರು. “ವಿದ್ಯಾವಿಹೀನಃ ಪಶು” ಎಂಬುದನ್ನು ಹೇಳುತ್ತ ವಿದ್ಯಾಭಿವೃದ್ದಿಗಾಗಿ ಜನತೆಯ ಕಣ್ಣು ತೆರೆಸಿದರು. ಅರಿವು-ಆಚಾರಗಳು ಅನುಷ್ಠಾನಕ್ಕೆ ಬರಬೇಕೆಂದರು. ಸಮಾಜದ ಎಲ್ಲರನ್ನೂ ಅಭಿವೃದ್ಧಿ ದಾರಿಯತ್ತ ಕರೆದುಕೊಂಡು ಹೋದರು. ಎಲೆಯ ಮರೆಯ ಕಾಯಿಯಂತೆ ಸಮಾಜದ ಸರ್ವತೋಮುಖದ ಅಭಿವೃದ್ಧಿಗಾಗಿ ಹೋರಾಡಿದರು.
ಬಾಗಲಕೋಟೆಯಲ್ಲಿ ಶಿವಾನಂದ ಜಿನ್ನಿಂಗ್ ಫ್ಯಾಕ್ಟರಿ ಸ್ಥಾಪಿಸಿ ಅದರಿಂದ ಬಂದ ಆದಾಯದಲ್ಲಿ ಶ್ರೀ ಶಿವಯೋಗ ಮಂದಿರದ ಯೋಜನೆಗಳು ಅನುಷ್ಠಾನವಾಗುವಂತೆ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಪೂರಕವಾಗಿ ಚಿತ್ರಮಂದಿರವೊಂದನ್ನು ಕಟ್ಡಿಸಿದ್ದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ-ಕಪನಹಳ್ಳಿಯಲ್ಲಿ ಶ್ರೀ ಶಿವಯೋಗಾಶ್ರಮ ಸ್ಥಾಪಿಸಿದರು. ನೂರಾರು ಹಸುಗಳನ್ನು ಸಾಕಿ ಅವುಗಳಿಂದ ಬರುವ ಹಾಲು ಹಯನವನ್ನು ಭಕ್ತರಿಗೆ ಉಣಬಡಿಸುತ್ತಿದ್ದರು. ಬಾಗಲಕೋಟೆಯ ಶ್ರೀ ಬಸವೇಶ್ವರ ವಿದ್ಯಾರ್ಧಕ ಸಂಘ ಸ್ಥಾಪನೆಯಾಗಿ ಅದೊಂದು ಶೈಕ್ಷಣಿಕ ಹೆಮ್ಮರವಾಗುವಂತೆ ಪ್ರೇರಣೆಯಾಗಿದ್ದರು.
ಲಕ್ಷಾಂತರ ರೂಪಾಯಿಗಳ ಫಂಡ (ಮೊತ್ತ) ಕೂಡಿಸುವಲ್ಲಿ ಪ್ರೇರಣೆ ನೀಡುತ್ತ ವೀರಶೈವ-ಲಿಂಗಾಯತ ಬಡಮಕ್ಕಳಿಗೆ ವಿದ್ಯೆ ಮುಂದುವರಿಸಲು ಸಹಾಯಧನ ನೀಡುವುದಕ್ಕೆ ಲಿಂಗಾಯತ ಎಜ್ಯುಕೇಷನ್ ಫಂಡ ಒಂದನ್ನು ಧಾರವಾಡದಲ್ಲಿ ಪ್ರಾರಂಭಿಸಿದ್ದನ್ನು ನೆನೆಯಬಹುದು. ಅದಕ್ಕಾಗಿ ಪ್ರತಿಯೊಂದು ಹಳ್ಳಿಗೂ ಒಂದು ಶಾಲೆ, ಒಂದು ಉಚಿತ ಪ್ರಸಾದ ನಿಲಯಗಳಾಗಬೇಕೆಂದರು. ಈ ಕಾರ್ಯಕ್ಕೆ ಮಠದ ಸ್ವಾಮಿಗಳನ್ನು ಮುಂದೆ ಮಾಡಿದರು. ಅಂತೆಯೇ ನೂರಾರು ಕಡೆಗಳಲ್ಲಿ ಶಾಲೆ ಮತ್ತು ದಾಸೋಹ ಪ್ರಾರಂಭವಾದವು. ನಾನು ಇದೆಲ್ಲವೂ ಹಾನಗಲ್ಲ ಕುಮಾರಸ್ವಾಮಿಗಳ ಪ್ರಯತ್ನದ ಫಲವಾಗಿತ್ತು.
12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ನೀಡಿದ ಸ್ತ್ರೀ ಸ್ವಾತಂತ್ರ್ಯದಿಂದಾಗಿ ಅಂದು ನೂರಾರು ಜನ ಶರಣೆಯರೂ ವಚನಕಾರ್ತಿಯರಾದರು. ಜಾತಿ-ಭೇದ, ಬಡವ-ಶ್ರೀಮಂತರೆಂಬ ಭೇದ ಇಲ್ಲದಂತಾಗಿ ಸಮಾನತೆ ತಲೆಯೆತ್ತಿತು. ಅದು ಮತ್ತೆ ಬಿರುಕು ಬಿಟ್ಟಿತು. ಇದನ್ನು ಹೋಗಲಾಡಿಸಲು ಶ್ರೀ ಕುಮಾರಸ್ವಾಮಿಗಳು ಪಣತೊಟ್ಟರು.
ಸ್ತ್ರೀಯರ ಸರ್ವತೋಮುಖ ಉದ್ಧಾರದ ಕಾರ್ಯ ಕೈಕೊಂಡರು. ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳ ಮೂರ್ತಿವೆತ್ತಂತಿರುವ ಮಹಿಳೆಯರು ನಮ್ಮ ಸಮಾಜದ ಚೇತನಶೀಲ ವ್ಯಕ್ತಿಗಳು ಎಂದು ಪ್ರೋತ್ಸಾಹಿಸುತ್ತಿದ್ದರು. ಕುರುಡು ಕಲಾವಿದರನ್ನು ಕರೆತಂದು ಅವರಲ್ಲಿರುವ ಸುಪ್ತ ವಿದ್ಯೆಗಳಿಗೆ ಪ್ರೋತ್ಸಾಹ ನೀಡಿದರು. ಕಾಡಸೆಟ್ಟಿ ಹಳ್ಳಿಯ ಕುರುಡ ಸಹೋದರರನ್ನು ಕರೆತಂದು ಅವರಲ್ಲಿ ಪಂಚಾಕ್ಷರಿ ಗವಾಯಿಗಳು ಎಂಬುವವರಿಗೆ ಸಂಗೀತ ವಿದ್ಯೆ
ಕಲಿಯಲು ಹಚ್ಚಿ ಪುಣ್ಯ ಕಟ್ಟಿಕೊಂಡರು. ರಾಷ್ಟ್ರಮಟ್ಟದ ಗಾನಯೋಗಿಗಳೆನಿಸಿದ ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ ಡಾ. ಪುಟ್ಟರಾಜ ಗವಾಯಿಗಳೂ ಗುರುವಿನ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿರುವುದು ಕುಮಾರಸ್ವಾಮಿಗಳವರ ಕೃಪಾಶೀರ್ವಾದದಿಂದಲೇ ಎಂಬ ಮಾತನ್ನು ಮರೆಯುವಂತಿಲ್ಲ. ಸಕಲ ಪ್ರಾಣಿಗಳಲ್ಲಿಯೂ ದಯಾಪರರಾಗಿದ್ದ ಕುಮಾರಸ್ವಾಮಿಗಳವರದು ಬಸವಣ್ಣನವರು ಸಾರಿದಂತೆ ಇವರದೂ ದಯವೇ ಧರ್ಮದ ಮೂಲ.ಎಂದು ಸಾರುತ್ತಾ ಗೃಹಸ್ತರಲ್ಲಾಗುತ್ತಿದ್ದ ಕಲಹಗಳನ್ನು, ದಂಪತಿಗಳಲ್ಲಿ ಬಿಟ್ಟಿದ್ದ ಬಿರುಕುಗಳನ್ನು ಸದುಪದೇಶದಿಂದ ಬಗೆಹರಿಸುತ್ತಿದ್ದರು. ಪುರುಷರಂತೆ ಸ್ತ್ರೀಯರೂ ಸಹ ವಿದ್ಯೆ ಬುದ್ದಿ ಪಡೆಯಬೇಕೆಂದು ಬಯಸಿ ಉದ್ಯೋಗ ಮತ್ತು ವೃತ್ತಿಗಳಲ್ಲಿ ಮಹಿಳೆಯರು ತೊಡಗಿಕೊಳ್ಳಬೇಕೆಂದು ಬಯಸಿದ್ದರು.
ದಾನವೀರ ಸಿರಸಂಗಿ ಲಿಂಗರಾಜ ದೇಸಾಯಿಯವರು ತಮ್ಮ ಅಮೂಲ್ಯ ಆಸ್ತಿ-ಪಾಸ್ತಿಯನ್ನು ವೀರಶೈವ ಸಮಾಜದ ಸಂಘ-ಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡಿದ್ದು ಸರ್ವವೇದ್ಯ. ಇಂತಹ ದಾನಕ್ರಮಗಳು ದಾನ ಪತ್ರಗಳ ಮೂಲಕ ಬ್ರಿಟೀಷ್ ಅಧಿಕಾರಿಗಳ ಮುಂದೆ ನೋಂದಣಿಯಾಗಿದ್ದವು. ಈ ದಾನಾದಿಗಳ ವಿರುದ್ಧ ಅವರ ಪತ್ನಿ ಸುಂದರಾಬಾಯಿಯವರು ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದರು, ದಾವೆ ಹೂಡಿದ್ದರು. ಆ ಸಂಧರ್ಭದಲ್ಲಿ ಪೂಜ್ಯರು ಕೊಡುಗೈ ದೊರೆ ಲಿಂಗರಾಜ ದೇಸಾಯರ ಕ್ರಮವನ್ನು ಸಮರ್ಥಿಸಿ ನ್ಯಾಯಾಲಯದಲ್ಲಿ ಪ್ರತಿವಾದಿಗಳಾಗಿದ್ದರು. ಆ ಮೂಲಕ ಆ ಮಹಾದಾನಿಯ ಸಂಕಲ್ಪವನ್ನು ಸಮರ್ಥಿಸಿದ್ದರು.
ಶ್ರೀ ಕುಮಾರಸ್ವಾಮಿಗಳು ಪ್ರತಿಭಾ ಸಂಪನ್ನರು, ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದ ಶ್ರೀಗಳವರು ಆಗಾಗ ತತ್ವಪದಗಳನ್ನು ರಚಿಸಿದ್ದುಂಟು. ಅವುಗಳನ್ನು ಇತರ ಶಿವಯೋಗಿಗಳು ರಚಿಸಿರುವ ಪದಗಳನ್ನು ಆಗಾಗ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಶ್ರೀ ಕುಮಾರಸ್ವಾಮಿಗಳ ಉಡುಪು ಸಾದಾ-ಸೀದಾ, ವಿಚಾರಗಳು ಉದಾತ್ತವಾದವುಗಳು. ಅವರ ಬದುಕು, ಅರಿವು ಆಚಾರಗಳ ಸುಂದರ ಸಮನ್ವಯದ ಉನ್ನತ ವಿರಕ್ತ ಬದುಕು. ಒಂದು ದಿನ ಪೂಜ್ಯರು ಇದ್ದಕ್ಕಿದ್ದಂತೆ ಒಮ್ಮೆಲೆ ಜ್ವರದಿಂದ ಬಳಲತೊಡಗಿದರು. ಹಾವೇರಿಗೆ ಕರೆದುಕೊಂಡು ಹೋಗಲಾಯಿತು. ಹುಕ್ಕೇರಿ ಮಠದ ಮ.ನಿ.ಪ್ರ ಶಿವಬಸವಸ್ವಾಮಿಗಳನ್ನು ಹತ್ತಿರ ಕರೆದು ನೀವು ನಮ್ಮವರು, ಶಿವಯೋಗ ಮಂದಿರ ನಿಮ್ಮದು. ನೀವದನ್ನು ಮನ್ನಡೆಸಬೇಕು ಎಂದು ಸೂಚಿಸಿದರು. ಖಾಯಿಲೆ ಹೆಚ್ಚಾದಾಗ ಶಿವಯೋಗ ಮಂದಿರಕ್ಕೆ ಕರೆದುಕೊಂಡು ಹೋಗಲಾಯಿತು. 1930ನೇ ಸಪ್ತಮಿ ಬಹುಳದಂದು ಮಾಘಸ್ನಾನ ಮಾಡಿಸಿದರು. ಶಿವಪೂಜೆ ಗೈದರು. ಶಿವ-ಶಿವ ಎಂದರು. ಆತ್ಮತೇಜ ಪರಮಾತ್ಮ ತೇಜದಲ್ಲಿ ಪರವಶವಾಯಿತು. ಅಂಗ ಲಿಂಗದಲ್ಲಿ ಬೆರೆತು ಏಕವಾಯಿತು. ಹಾನಗಲ್ಲ ಕುಮಾರ ಶಿವಯೋಗಿಗಳು ಲಿಂಗೈಕ್ಯರಾದರು.
ಕುಮಾರ ಶಿವಯೋಗಿಗಳು ಬದುಕಿದ್ದುದು 63 ವರುಷ. ಅವರು ಸ್ಥಾಪಿಸಿದ ಅಖಿಲಭಾರತ ವೀರಶೈವ ಮಾಹಾಸಭೆ ಕ್ರಿ.ಶ 2011 ರ ಮೇ ತಿಂಗಳಿನಲ್ಲಿ ಶತಮಾನೋತ್ಸವವನ್ನು ಶ್ರೀ ಶಿವಯೋಗಮಂದಿರದ ಸಹಭಾಗಿತ್ವದಲ್ಲಿ ಸಂಭ್ರಮ ಕಂಡಿತು. ಕುಮಾರ ಸ್ವಾಮಿಗಳು ಯುಗ ಪುರುಷರಾಗಿ ಹೊರಹೊಮ್ಮಿದರು.