ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯಮಠ ಗದಗ
‘ಜಂತೂನಾಂ ನರಜನ್ಮ ದುರ್ಲಭಂ‘ ಅಂದರೆ ಕ್ರಿಮಿಕೀಟಾದಿ ಅನಂತ ಜೀವರಾಶಿಗಳಲ್ಲಿ ನರಜನ್ಮ ದುರ್ಲಭವಾದುದಷ್ಟೇ ಅಲ್ಲ ಶ್ರೇಷ್ಠವಾದುದೂ ಕೂಡ. ಇದು ಅರಿವಿನ ಜನ್ಮ. ಕ್ರಿಯಾಶೀಲರಾಗಿ, ಜ್ಞಾನಸಂಪನ್ನರಾಗಿ, ಭಾವಜೀವಿಗಳಾಗಿ ಈ ಜನ್ಮದಲ್ಲಿಯೇ ಭೋಗಮೋಕ್ಷಗಳೆರಡನ್ನು ಪಡೆಯಬಹುದಾಗಿದೆ. ಧರ್ಮಕಾರ್ಯಗಳನ್ನು ನೆರವೇರಿಸುತ್ತ ಇಹಪರಗಳೆರಡರಲ್ಲಿಯೂ ಸುಖವನ್ನು ಹೊಂದಲು ಈ ನರಜನ್ಮ ಸಾಧನವಾಗಿದೆ. ಆದ್ದರಿಂದಲೇ ಮಹಾಕವಿ ಕಾಳಿದಾಸನು ‘ಶರೀರಮಾದ್ಯಂ ಖಲು ಧರ್ಮ ಸಾಧನಂ‘ ಎಂದು ಹೇಳಿರುವುದು. ಅನೇಕ ಜನ್ಮಗಳ ಪುಣ್ಯವಿಶೇಷದಿಂದ ಹಾಗೂ ಪರಮಾತ್ಮನ ವಿಶೇಷ ಕೃಪೆಯಿಂದ ಲಭ್ಯವಾಗಿರುವ ಈ ಜನ್ಮವನ್ನು
ನಿರರ್ಥಕವಾಗಿ ಹಾಳು ಮಾಡಿಕೊಳ್ಳಬೇಡಿರೆಂದು ದಾಸರು ಸಾರಿ ಸಾರಿ ಹೇಳುತ್ತಾರೆ. ತನುವಿನ ದೋಷಗಳನ್ನತಿಗಳೆದು ಲೌಕಿಕ ಸುಖಭೋಗದ ಭ್ರಾಂತಿಯಿಂದ ಮುಕ್ತನಾಗಿ, ಗುರುಬೋಧೆ ಪಡೆದು ದೈವ ನಿಷ್ಠೆ ಅಳವಡಿಸಿಕೊಂಡಾಗ ಈ ನರಜನ್ಮವನ್ನು ಹರಜನ್ಮವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದುವೇ ನರಜನ್ಮದ ಸಾರ್ಥಕ್ಯ .
ನರಜನ್ಮವನ್ನು ಹರಜನ್ಮವಾಗಿಸಿಕೊಂಡಾತ ಗುರು. ನರಜನ್ಮವನ್ನು ಹರಜನ್ಮವಾಗಿಸುವವನೂ ಗುರು. ಗುರುಕಾರುಣ್ಯ ಸಂಸ್ಕಾರಕ್ಕೆ ಒಳಗಾದ ನರರ ಕರಣೇಂದ್ರಿಯಗಳೆಲ್ಲ ಲಿಂಗೇಂದ್ರಿಯಗಳಾಗಿ ಪರಿವರ್ತನೆಗೊಳ್ಳುತ್ತವೆ. ಮಾಂಸಪಿಂಡ, ಮಂತ್ರಪಿಂಡವಾಗುತ್ತದೆ. ಜೀವ ಶಿವನಾಗುತ್ತಾನೆ. ದೇಹ ದೇಗುಲವಾಗುತ್ತದೆ. ಗುರುವಿನ ಬೋಧೆ ಎಂಬ ಅರಿವಿನ ಜ್ಯೋತಿ ಶರೀರವನ್ನೆಲ್ಲ ವ್ಯಾಪಿಸಿದಾಗ ಮರವೆಯ ಕತ್ತಲು ಸಹಜವಾಗಿಯೇ ದೂರಾಗುತ್ತದೆ. ಗುರುವಿನ ಚರಣಸ್ಪರ್ಶ ತನುಕರಣಾದಿಗಳ ದೋಷಗಳನ್ನೆಲ್ಲ ಸುಟ್ಟು ಸರ್ವಾಂಗವನ್ನು ಲಿಂಗವಾಗಿಸುವುದೆಂಬ ದಾಸಿಮಾರ್ಯರ ವಚನವೊಂದು ಹೀಗಿದೆ:
ಉರಿವ ಕೆಂಡದ ಮೇಲೆ ತೃಣವ ತಂದಿಡಲು
ಆ ತೃಣವನಾ ಕೆಂಡ ನುಂಗಿದಂತೆ
ಗುರುಚರಣದ ಮೇಲೆ ತನುವ ತಂದಿಡಲು
ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥಾ‘
ಗುರುವಿನ ಚರಣದಲ್ಲಿ ಅಂತಹ ಅದ್ಭುತವಾದ ಶಕ್ತಿ ಇದೆ. ಅಂಥ ಗುರುಚರಣವ ಪೂಜಿಸಿದ ಹಸ್ತ, ನೋಡಿದ ಕಣ್ಣು, ಹಾಡಿದ ನಾಲಿಗೆ, ನೆನೆದ ಮನ, ಧ್ಯಾನಿಸಿದ ಹೃದಯವೆಲ್ಲವೂ ಪರಿಶುದ್ಧವಾಗುವವು.
ಹರಜನ್ಮವನ್ನು ಸಾಧಿಸುವುದು ನರಜನ್ಮದಲ್ಲಿ ಮಾತ್ರ ಸಾಧ್ಯ. ಉಳಿದ ಯಾವ ಜನ್ಮದಲ್ಲಿಯೂ ಇದು ಸಾಧ್ಯವಿಲ್ಲ. ಹುಟ್ಟುಸಾವುಗಳೆಂಬ ಭವಚಕ್ರದಿಂದ ಮುಕ್ತನಾಗಲು ಮಾನವ ಶರೀರ ಒಂದು ಅಪೂರ್ವ ಸಾಧನ. ‘ಯೋಗ ಯೋಗ್ಯರು ಭೂ ಭಾಗದೊಳು ಮಾನವ ಶರೀರಿಗಳಾಗಿ ಸಾಧಿಸಿ ನಿಜವನ್ನರಿವರು’ ಎಂದು ಮಹಾಕವಿ ಚಾಮರಸ ಮಾನವ ಜನ್ಮದ ಪ್ರಯೋಜನವನ್ನು ಕುರಿತು ಹೇಳುತ್ತಾನೆ. ನಿಜವನ್ನರಿತು ನಿಜವೇ ತಾವಾಗಲು ನರಜನ್ಮ ಅತ್ಯಂತ ಸಹಕಾರಿ. ನರಜನ್ಮ ಪಡೆದವರು ಯೋಗ್ಯ
ಗುರುವನ್ನಾಶ್ರಯಿಸಿ ಅವರ ಬೋಧಾಮೃತದಿಂದ ದುರಿತ ದುರ್ಗುಣಗಳನ್ನು ನಿವಾರಿಸಿಕೊಂಡು ಮನಸ್ಸನ್ನು ಪರಿಶುದ್ಧಗೊಳಿಸಬೇಕು. ನರಜನ್ಮವನ್ನು ಅಹಂಕಾರ- ಮಮಕಾರಗಳಿಂದ ಬಂಧಿಸದ ಅರಿವಿನಿಂದೊಡಗೂಡಿ ಪರಮಾತ್ಮನ ನಿಲವನರಿದರೆ ಅದೇ ಹರಜನ್ಮ. ಗುರುವಿನ ಉಪದೇಶದಂತೆ ನಡೆದ ನರರು ತಮ್ಮ ನರಜನ್ಮವನ್ನು ನೀಗಿ ಹರಜನ್ಮವನ್ನು ನಿಸ್ಸಂದೇಹವಾಗಿ ಪಡೆಯುತ್ತಾರೆ. ಹಾಗೆಯೇ ಪರಿಭವದಿಂದ ಮುಕ್ತರಾಗುತ್ತಾರೆ. ಅಂಥ ಗುರುವಿಗೆ ‘ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಶರಣು ಶರಣಾರ್ಥಿ’ ಎಂದು ಅಕ್ಕಮಹಾದೇವಿ ಹೇಳಿದಂತೆ ನಾವು ಶರಣಾರ್ಥಿಗಳನ್ನು ಹೇಳೋಣ.