ಮನೆ ಮಠಗಳ, ತಾಯಿ ತನ್ನವರ ಮೋಹವನ್ನು ತೊರೆದು ಬಂದ ಸದಾಶಿವಯ್ಯನವರನ್ನು ಸ್ವಾಮಿಗಳೆಂದು ಸಂಬೋಧಿಸುತ್ತೇವೆ. ಇದಕ್ಕಿಂತಲು ಹೆಚ್ಚಿನ ಸ್ವಾಮಿತ್ವ ಬೇರಿಲ್ಲ. ಸಿದ್ಧಾರ್ಥನು ಸಂಸಾರವನ್ನು ಅನುಭವಿಸಿ ಸನ್ನಿವೇಶಗಳನ್ನು ಪರಿಣಮಿಸಿ ತನ್ನ ೨೯ನೆಯ ವಯಸ್ಸಿನಲ್ಲಿ ವಿರತನಾಗಿದ್ದರೆ ಸದಾಶಿವ ಸ್ವಾಮಿಯು ಷೋಡಶಪ್ರಾಯದಲ್ಲಿಯೆ ಸಂಸಾರಕ್ಕೆ ಸಿಕ್ಕುಬೀಳದೆ ವ್ಯಾಮೋಹಕ್ಕೆ ಬಾಯ್ನೀರು ಕರೆಯದೆ ವೀರ ವಿರಾಗಿಗಳಾಗಿ ಹೊರಟಿರುವುದರಲ್ಲಿಯೇ ಅವರ ಮನೋಧೈರ್ಯದ ಮಹತ್ತು ಸ್ಥಿರಪ್ರಜ್ಞೆತೆಯ ಸಂಪತ್ತು ಎಷ್ಟಿತ್ತೆಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ನಿರೂಹ್ಯವು ನಿರ್ವಿಷಯವೆ ! ಅದಿರಲಿ.
ಸದಾಶಿವ ಸ್ವಾಮಿಗಳವರು ಲಿಂಗದಹಳ್ಳಿಯಿಂದ ಹೊರಟು ಬಂದು ಹುಬ್ಬಳ್ಳಿಯಲ್ಲಿ ನೆಲೆನಿಂತರು. ಆರೂಢರಲ್ಲಿ ಪಂಚದಶಿ-ವಿಚಾರ ಸಾಗರ- ಪರಮಾನುಭವ ಬೋಧೆ ಮುಂತಾದ ಗ್ರಂಥಗಳ ಅಭ್ಯಾಸವನ್ನು ಆರಂಭಿಸಿದರು. ವಿವೇಕಾನಂದರು ಒಬ್ಬ ಅಧ್ಯಾಪಕರ ಮುಖಾಂತರ ರಾಮಕೃಷ್ಣ ಪರಮಹಂಸರನ್ನು ಅರಿತರು. ಸದಾಶಿವ ಸ್ವಾಮಿಗಳವರಿಗೆ ಮಾತ್ರ ಆರೂಢರನ್ನು ಅರಿಯಲು ಯಾರ ನೆರವೂ ಬೇಕಾಗಲಿಲ್ಲ. ಅದ್ವೈತ ಸಿದ್ಧಾಂತದಲ್ಲಿ ಆರೂಢರ ಖ್ಯಾತಿ ಅಷ್ಟೊಂದು ಹಬ್ಬಿತ್ತು. ಹಬ್ಬಿಹೂವಾಗಿತ್ತು. ಹೂವಿನ ವಾಸನೆ ಎಲ್ಲೆಲ್ಲಿಯೂ ಹರಡಿತ್ತು. ವೇದಾಂತದ ವಾತ್ಸಲ್ಯ ವಿಶೇಷವಾದಾಗ ಸದಾಶಿವಸ್ವಾಮಿಗಳವರೆ ಅವರ ಪ್ರಭಾವಕ್ಕೆ ಒಳಪಟ್ಟಿರಬೇಕು; ಪಟ್ಟಿದ್ದರು.
ಸದಾಶಿವಸ್ವಾಮಿಗಳವರು ಆರೂಢರಲ್ಲಿ ವೇದಾಂತಾಭ್ಯಾಸ ಮಾಡುತ್ತಿದ್ದರು. ವೇದಾಂತಿಗಳಾಗಿರಲಿಲ್ಲ. ಅಲ್ಲಿ ನಡೆಯುತ್ತಿರುವ ಬಾಹ್ಯಾದ್ವೈತವು ಸ್ವಾಮಿಗಳವರ ಮನಸ್ಸಿಗೆ ಹಿಡಿಯುತ್ತಿರಲಿಲ್ಲ. ಸತ್ಯಸಿದ್ಧಾಂತದ ಹವ್ಯಾಸ ಇವರಲ್ಲಿ ಮಿಡಿಯುತ್ತಿತ್ತು. ಅದಕ್ಕಾಗಿ ಇವರು ವಾಸ ಭೋಜನಾದಿಗಳನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಸ್ವಂತ ಕಲ್ಪಿಸಿಕೊಂಡಿದ್ದರು. ಪಾಠ ಪ್ರವಚನಾದಿಗಳಿಗೆ ಮಾತ್ರ ಆರೂಢರಲ್ಲಿಗೆ ಹೋಗುತ್ತಿದ್ದರು.
ಹೀಗಿರಲು ಒಂದು ದಿನ ಪ್ರವಚನದಲ್ಲಿ ಇಷ್ಟಲಿಂಗವು ಬಾಹ್ಯವಸ್ತು ಅದರ ಪೂಜೆ ಮೂರ್ತಿಪೂಜೆ. ಅದರ ಪೂಜೆಯಿಂದ, ಧಾರಣೆಯಿಂದ ಪ್ರಯೋಜನವಿಲ್ಲ ಎಂದು ಮುಂತಾಗಿ ಚರ್ಚೆ ವಿಚರ್ಚೆ ನಡೆಯಿತು. ಈ ವಿಷಯದಲ್ಲಿ ಸ್ವಾಮಿಗಳವರ ಮನಸ್ಸು ಹೊಯ್ದಾಡಿತು. ಧರಿಸಿದ ಇಷ್ಟಲಿಂಗದ ವಿಷಯದಲ್ಲಿ ಸಂಶಯ ಉದಯಿಸಿತು. ಆಗ ಅವರನ್ನು ಹುಬ್ಬಳ್ಳಿಯಲ್ಲಿ ಎರಡೆತ್ತಿನ ಮಠದ ಶ್ರೀಗಳೊಬ್ಬರು ಶಿವಾನುಭವಿಗಳಿದ್ದರು. ಅವರನ್ನು ಬೆದಕಿಕೊಂಡು ಹೋಗಿ ಸ್ವಾಮಿಗಳು ಇಷ್ಟಲಿಂಗ ತ್ಯಾಗದ ವಿಷಯವಾಗಿ ಬಹುದಿನ ಚರ್ಚಿಸಿದರು. ಅವರಿಂದಲು ಸ್ವಾಮಿಗಳ ಸಂಶಯ ಪರಿಹಾರವಾಗಲಿಲ್ಲ. ಆಗ ಅದೇ ಶ್ರೀಗಳವರು ‘ತಮ್ಮಾ ನೀನು ಬಳ್ಳಾರಿ ಭಾಗದಲ್ಲಿರುವ ಎಮ್ಮಿಗನೂರು ಜಡೆಸಿದ್ದರ ಬಳಿಗೆ ಹೋಗು. ಅಲ್ಲಿ ನಿನ್ನ ಸಂಶಯ ನಿರಸನವಾಗಬಲ್ಲುದು. ಅವರನ್ನು ಸಂದರ್ಶಿಸದೆ ನೀನು ಇಷ್ಟಲಿಂಗವನ್ನು ತ್ಯಜಿಸಬೇಡ’ ಎಂದು ಹೇಳಿ ಕಳುಹಿಸಿದರು.
ಸದಾಶಿವ ಸ್ವಾಮಿಗಳವರು ಸಹ ಆ ಜಡೆಸಿದ್ದರ ಹೆಸರನ್ನು ಕೇಳಿದ್ದರು. ಹೆಚ್ಚಾಗಿ ಬಲ್ಲಿದರು, ನಿಚ್ಚಟದ ನಡೆಯವರು ಎಂದು ಎಲ್ಲೆಲ್ಲಿಯು ಅವರ ಪುಣ್ಯವಾರ್ತೆ ಪಸರಿಸಿತ್ತು. ಅದರಿಂದಾಗಿ ಸ್ವಾಮಿಗಳಿಗೆ ಅಲ್ಲಿಗೆ ಹೋಗುವ ಪ್ರೇಮ ಹುಟ್ಟಿತು. ಒಬ್ಬ ಭಕ್ತನನ್ನು ಜೊತೆಗೂಡಿ ಜಡೆಸಿದ್ಧರಲ್ಲಿಗೆ ಪ್ರಯಾಣವಾದರು. ಆಗ ರೈಲು ಬಸ್ಸುಗಳಿಲ್ಲ. ಅದರಿಂದಾಗಿ ದಿನವು ಎಂಟು ಹತ್ತು ಮೈಲು ಕಾಲು ನಡಿಗೆಯಿಂದ ಪ್ರಯಾಣ ಬೆಳಸಿದರು. ಅಲ್ಲಲ್ಲಿ ಕೆರೆಮಡುಗಳಲ್ಲಿ ಸ್ನಾನ ಮಾಡಿ ತರುಮೂಲಗಳಲ್ಲಿ ಶಿವಪೂಜೆಯಂ ತೀರಿಸಿ, ಕರತಲ ಭಿಕ್ಷದಿಂದ ಪ್ರಸಾದ ಪರಿಗ್ರಹಿಸುತ್ತ ಮುನ್ನಡೆದರು. ಆಗ ಸ್ವಾಮಿಗಳವರು ಧರಿಸುತ್ತಿದ್ದುದು ಒಂದೇ ಒಂದು ಕಾವಿಯ ಶಾಟಿ, ಮಸ್ತಕದ ಮೇಲೆ ಕಂಬಳಿಯ ಕೊಪ್ಪಿ, ಕೈಯಲ್ಲಿ ಒಂದು ತಂಬಿಗೆ, ತೋಳಿನಲ್ಲಿ ಒಂದು ಜೋಳಿಗೆ. ಇಷ್ಟರ ಹೊರತು ಇನ್ನೇನು ಇರಲಿಲ್ಲ.
ಇಷ್ಟು ಕಷ್ಟಗಳಿದ್ದರು ಅವನ್ನೆಲ್ಲ ಲೆಕ್ಕಿಸದೆ ಸಾಗಿದರು. ಸತ್ಯ ಸಿದ್ಧಾಂತದ ಹವ್ಯಾಸದ ಹೆಚ್ಚಳ ಅವರಲ್ಲಿ ಅಷ್ಟಿತ್ತು. ಅದರಿಂದಾಗಿ ಈ ಕಷ್ಟಗಳೊಂದೂ ಅವರಿಗೆ ಕಾಣಲಿಲ್ಲ. ಬಹುದೂರದ ಪ್ರಯಾಣವನ್ನು ಪ್ರಯಾಸವಿಲ್ಲದೆ ತೀರಿಸಿ ಜಡೆಸಿದ್ದರಲ್ಲಿಗೆ ಹೋದರು. ಸ್ವಾಮಿಗಳು ಬರುವ ಮೊದಲಿಗೆ ಸಿದ್ಧರು ತಮ್ಮ ಸಿದ್ಧಿಯಿಂದ ಸ್ವಾಮಿಗಳವರ ಮಹತ್ತನ್ನು ಅರಿತು ತಮ್ಮೆದುರಿನಲ್ಲಿದ್ದ ಶಿಷ್ಯರಿಗೆ ಸಂಜ್ಞೆಯಿಂದ ಕಸ ತೆಗೆಯಿರಿ, ಬರಲು ದಾರಿಮಾಡಿಕೊಡಿರಿ ಎಂದು ಹೇಳಿ ವ್ಯವಸ್ಥೆ ಮಾಡಿಸಲು ಆರಂಭಿಸಿದುದನ್ನು ಕಂಡು ಜನರು ಅದಾವ ಮಹಾತ್ಮರು ಬರುವರೋ ಎಂದು ಅಚ್ಚರಿಗೊಂಡಿದ್ದರು. ಅಷ್ಟರಲ್ಲಿ ಸದಾಶಿವಸ್ವಾಮಿಗಳವರು ಅಲ್ಲಿಗೆ ಆಗಮಿಸಿದರು. ಇವರ ಮನಸ್ಸಿನ ಬಯಕೆಯನ್ನು ಸಿದ್ಧರು ತಾವೇ ತಿಳಿದು ತಮ್ಮ ಪಕ್ಕದಲ್ಲಿ ಕುಳಿತಿದ್ದವರ ಹೆಗಲಮೇಲಿದ್ದ ವಸ್ತ್ರವೊಂದನ್ನು ತೆಗೆದುಕೊಂಡು ಲಿಂಗಾಕಾರದ ಸಜ್ಜಿಕೆಯನ್ನು ಮಾಡಿ ತಮ್ಮ ಕೊರಳಲ್ಲಿ ಕಟ್ಟಿಕೊಂಡು ಕೈ ಜೋಡಿಸಿಕೊಂಡು ನಿಲ್ಲುವರು. ಇದನ್ನೆಲ್ಲ ಬರುತ್ತಿದ್ದ ಸದಾಶಿವ ಸ್ವಾಮಿಗಳವರು ಕಂಡು ಕಡು ಆಶ್ಚರ್ಯವನ್ನು ಆನಂದವನ್ನು ಹೊಂದಿ ಆತ್ಮತೃಪ್ತಿಯಿಂದ ಅಷ್ಟಾಂಗ ನಮಸ್ಕಾರ ಮಾಡಿದರು. ಆಗ ಸಿದ್ಧರು ಸ್ವಾಮಿಗಳನ್ನು ಶಿವಯೋಗಿ ಎಂದು ಸಂಬೋಧಿಸಿದರು.
ಸ್ವಾಮಿಗಳವರು ಸಿದ್ಧರಿಗಾಗಿ ತಂದಿದ್ದ ಕೆಲವು ಪದಾರ್ಥಗಳನ್ನು ಸ್ವೀಕರಿಸಲು ಕೊಟ್ಟರು. ಹಸಿ-ಬಿಸಿ ಎನ್ನದೆ ಬೇಡಿದ್ದು-ಬೇಡದ್ದು ಎನ್ನದೆ ಬೇಕು-ಬೇಡ ಎನ್ನದೆ ಕೊಟ್ಟಿದ್ದನ್ನು ಸಂತೋಷದಿಂದ ಸ್ವೀಕರಿಸುವ ಅವರ ನಿಜವಾದ ಆರೂಢಸ್ಥಿತಿಯನ್ನು ಕಂಡು ತಣಿದರು. ಮಠ ಮಾನ್ಯಗಳ ಅನ್ನ ಅರಿವೆಗಳ ಹಂಗಿಲ್ಲದೆ ಮಾನಾಪಮಾನಗಳ ಜಯಾಪಜಯಗಳ ಹಿಗ್ಗು ಕುಗ್ಗುಗಳಿಲ್ಲದೆ ಇರುವ ಸಹಜಾರೂಢಸ್ಥಿತಿಗೆ ಸ್ವಾಮಿಗಳು ತಲೆದೂಗಿದರು, ತಲೆಬಾಗಿದರು.
ಇದಕ್ಕೆ ವಿಪರೀತಾಚರಣೆಯುಳ್ಳ ಹುಬ್ಬಳ್ಳಿಯ ಆರೂಢರಲ್ಲಿಗೆ ತಾವಿನ್ನು ಹೋಗಬಾರದೆಂದು ಭಾವಿಸಿ ಇನ್ನೆಲ್ಲಿಗೆ ಹೋಗಬೇಕೆಂಬುದನ್ನು ಸಿದ್ಧರನ್ನೆ ಕೇಳಬೇಕೆಂದು ಆಶಿಸಿ ಇರುವಷ್ಟರಲ್ಲಿ ಇವರ ಇಂಗಿತವ ತಿಳಿದು ಸಿದ್ಧರು ‘ಎಲ್ಲಿದ್ದೆಯೋ ಅಲ್ಲಿಗೆ ಹೋದರಾಯಿತು’ ಎಂದು ಮೂರು ಸಲ ನುಡಿದರು.
ಜಡೆಸಿದ್ದರ ಆ ಅಪ್ಪಣೆಯನ್ನು ಮೀರದೆ ಸ್ವಾಮಿಗಳು ಮರಳಿ ಹುಬ್ಬಳ್ಳಿಗೆ ಬಂದು ಅದೇ ಆರೂಢರಲ್ಲಿಯ ವೇದಾಂತಾಭ್ಯಾಸವನ್ನು ಮಾಡಹತ್ತಿದರು. ಇಷ್ಟಲಿಂಗ ಪರಿತ್ಯಾಗದ ಸಂಶಯವನ್ನು ಹಳಚಿ ಇಷ್ಟಲಿಂಗ ಧಾರಿಗಳಾಗಿಯೇ ಇದ್ದರು. ಹೀಗೆ ವೇದಾಂತಾಭ್ಯಾಸ ನಡೆದಿದ್ದರೂ ಸಿದ್ಧಾಂತ-ಹವ್ಯಾಸವನ್ನು ಕೈ ಬಿಟ್ಟಿರಲಿಲ್ಲ. ಅವರೊಡನೆ ಕೈ ಮಾಡುತ್ತಿರಲಿಲ್ಲ.
ಅಂದು ತಾಯಿ ಹೇಳಿದ ಮದುವೆಯನ್ನು ಮಾಡಿಕೊಳ್ಳದ ಸದಾಶಿವಸ್ವಾಮಿಗಳವರು ಇಂದು ಜಡೆಸಿದ್ದರು ಹೇಳಿದ ಲಿಂಗಪತಿಯ ಮದುವೆಯನ್ನು ಮಾಡಿಕೊಂಡರು. ಲೌಕಿಕ ಸತಿಗೆ ಗಂಡನಾಗಿ ಬದುಕುವದಕ್ಕಿಂತ ಲಿಂಗಪತಿಗೆ ಶರಣ ಸತಿಯಾಗಿ ಬಾಳುವುದು ಲೇಸೆಂದು ಮನಗಂಡರು.
ಶರಣ ಸತಿಯ ಮದುವೆಯ ಸಂಭ್ರಮವನ್ನು ನೋಡಿರಮ್ಮ ||ಪ||
ಪರಮಾನಂದ ಪಯೋನಿಧಿಯೊಳಗೋಲಾಡಿರಮ್ಮ
ಸಿಂಗರಿಸಿದ ಶುಭಮಂದಿರವಂದದ ಹಂದರವಮ್ಮ
ಮಂಗಳ ಚೌಕದ ಹಸೆಯ ಜಗುಲಿ ಹಸನಾದುದಮ್ಮ
ಕಂಗೊಳಿಸುವ ಕಲಶಗಳಿಂದೈರಣೆ ತುಂಬಿತಮ್ಮ
ಹಿಂಗದವರೊಳೊಪ್ಪುವ ತಳಿರೆಡೆವರವೆನಿಸಿತಮ್ಮ ||೧||
ಕಲಶೋದಕದೊಳು ಮಿಂದು ಶುಚಿತೆಯಳವಟ್ಟುದಮ್ಮ
ತಿಳಿವಿನ ಬೆಳುವಟ್ಟೆಯನೊಲಿದುಡೆ ಚಲುವೆತ್ತುದಮ್ಮಾ
ತಿಲಕ ಭಸಿತ-ರುದ್ರಾಕ್ಷಿಮಯ ಮಣಿದೊಡವಾದುದಮ್ಮ
ವಿಳಸಿತ ಶಿವ ಹಸ್ತಬ್ಜದ ತೊಂಡಿಲು ಗಟ್ಟಿತಮ್ಮ ||೨||
ನೆರೆದ ಗಣಂಗಳೊಸಗೆಯ ಸುವಾಸಿನಿಯರುಗಳಮ್ಮ
ಪರಿವಿಡಿದೊರೆವಾಗಮ ವಿಧಿವಾದ್ಯದ ರಭಸವಮ್ಮ
ವರಮಂತ್ರದ ಶೋಭಾನವಿಂಬಾಗಿರೆ ಪಾಡಿತಮ್ಮ
ಸರಿದುದು ಮಾಯಾಮಲ ಕರ್ಮದ ತೆರೆಯಾಗಳಮ್ಮ ||೩||
ಭಜನೆ ಭಕುತಿಗಳಿವೆ ಜೀರಿಗೆ ಬೆಲ್ಲವಾದವಮ್ಮ
ನಿಜದೀಕ್ಷಾ ಸಮಯದ ಸುಮುಹೂರ್ತ ಸಮನಿಸಿತಮ್ಮ
ಸುಜನ ಜನದ ಕೈವಾರವೆ ಮಂಗಳಪಾಠವಮ್ಮ
ತ್ರಿಜಗನ್ನುತ ಗುರುಕರುಣ ರಸದ ಕೈಧಾರೆಯಮ್ಮ ||೪||
ಮೆರೆವ ಶಿರದರಮನೆಯ ನಿಬ್ಬಣವೈತಂದುದಮ್ಮ
ಕೊರೆತರಹಿತ ಶಂಭುಲಿಂಗನೇ ಮದವಳಿಗನಮ್ಮ
ಮೆರೆದಿನಿಸಗಲದ ನೇಹವೆರಸಿ ಕೈ ವಿಡಿದನಮ್ಮ
ನೆರೆದಿಹ ಮುತ್ತೈದೆ ಶರಣವಧು ನಿಜಕಾಣಿರಮ್ಮ ||೫||
ಅದಕ್ಕೆ ಸರಿಯಾಗಿ ನಿಜಗುಣರ ಈ ನಿಜಬೋಧೆಯಿಂದ ಸ್ವಾಮಿಗಳ ಮನ ಮತ್ತೂ ಗಟ್ಟಿಗೊಂಡಿತು. ಈ ಬಾಳುವೆಗೆ ಬಾಗಿದರು. ಈ ಬಳುವಳಿಗೆಯ ಕೈ ಕೊಂಡರು. ಈ ಬಳಗದಲ್ಲಿ ಕೂಡಿದ್ದರು.ʼʼ ಆವ ಪುಣ್ಯವೊ ಲಿಂಗಪೂಜಾ ವಿಧಿಯ ಅನುಭಾವವಹುದು ನರಜನ್ಮದೊಳು ಸಾವಿರ ಮುಖದೊಳರಸಿ ನೋಡಿ ನಿಗಮಾಗಮಾವಳಿ ಕಾಣದ ಸಾಧ್ಯವಿದು” ಎಂದು ಲಿಂಗಧಾರಣ ಲಿಂಗಾರ್ಚನ ಸೌಭಾಗ್ಯವನ್ನು ಸರ್ವೋತ್ಕೃಷ್ಟತೆಯನ್ನು ನಿಜಗುಣರು ಹೃದಯಾರೆ ಹಾಡಿಹರಿಸಿದಾರೆ; ಹವಣತೋರಿ ಹೆಚ್ಚಳಿಕೆ ಹೊರಗೆಡವಿದಾರೆ; ಹೆಮ್ಮೆಯ ಹಿತೋಪದೇಶ ಹೇಳಿದಾರೆ.