ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯರಿಗೆ ನನ್ನ ನಮಸ್ಕಾರಗಳು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಯೌವನಾವಸ್ಥೆಯಲ್ಲಿರುವ  ಒಂದು ಅಪರೂಪದ ಚಿತ್ರವನ್ನು  ಶ್ರೀಧರಗಡ್ಡಿ ಶ್ರೀ ಕೊಟ್ಟೂರೇಶ್ವರಮಠದ ಉತ್ತರಾಧಿಕಾರಿಗಳಾದ ಪೂಜ್ಯ ಮರಿಕೊಟ್ಟೂರ ಸ್ವಾಮಿಗಳು (ವಾಗೀಶ್ವರ ದೇವರು ) ಇತ್ತೀಚಿಗಷ್ಟೆ ಹುಡುಕಿರುವರು. ಈ ಚಿತ್ರವನ್ನು  ಮದ್ರಾಸಿನ ಗುರು ಬಸವ ಪ್ರಿಂಟರ್ಸ ನವರು ಮುದ್ರಿಸಿರುವರು.ಬಹುಶಃ ಈ ಚಿತ್ರವನ್ನು  ಗುರುಗಳ ೨೮-೨೯ ರ ವಯಸ್ಸಿನಲ್ಲಿ ತಗೆದುಕೊಂಡಿರಬಹುದು.(ಹಾನಗಲ್ಲ ಮಠದ ಅಧಿಕಾರ ಪಡೆದ ಸಮಯದಲ್ಲಿ ೧೮೯೬) ಪುಷ್ಠಿಯಾಗಿ ಹಾನಗಲ್ಲ ಮಠದಲ್ಲಿ ಈ ಚಿತ್ರದ ಬ್ರಹತ್‌ ತೈಲ ಚಿತ್ರವಿದೆ.ಗಂಭೀರ ಮುಖಭಾವ ಮತ್ತು ಚೈತನ್ಯಯುಕ್ತ ತೇಜಸ್ಸುಗಳನ್ನು  ನೋಡುತ್ತ ,ನೋಡುತ್ತ ಜ.ಚ.ನಿ ಯವರ  ಪುಸ್ತಕ “ಕಾರುಣಿಕ ಕುಮಾರಯೋಗಿ” ಯ “ನಾನು ಕಂಡ ಕುಮಾರ ಯೋಗಿ” ಯ ವರ್ಣನೆಯ ಶಬ್ಧಗಳು ಮಾರ್ಧನಿಸಿದವು .

ಷಟ್‌ಸ್ಥಲಮೂರ್ತಿ ಸುಖಾಸನದಲ್ಲಿ ಕುಳಿತಿತ್ತು . ನಿರಂಜನ ಮೂರ್ತಿ ನಿರಾಡಂಬರ ವೇಷದಲ್ಲಿ ಮೂರ್ತ ಮಾಡಿತ್ತು ನಿರಾಭಾರಿ ಸ್ವಾಮಿ ನಿರ್ಮಲ ಮನಸ್ಸಿನಿಂದ ಮಂಡಿಸಿತ್ತು . ಪ್ರಣವ ಸ್ವರೂಪಿ ಪ್ರಶಾಂತ ಕಲೆಯಿಂದ ಆಸೀನವಾಗಿತ್ತು ಷಟ್‌ಶಾಸ್ತ್ರ ಶಿವಾನುಭಾವಿ ಉಜ್ವಲ ಓಜದಿಂದ ಒಡರಿತ್ತು . ಕೂತುಕೊಳ್ಳುವುದರಲ್ಲಿ ಅವರದೇ ಒಂದು ಠೀವಿ . ಅದು ಯೋಗ ಠೀವಿ , ಅರ್ಜವ ದೇಹ ಅಜಾನುಬಾಹು , ವಿಶಾಲವಾದ ಹಣೆ , ಎವೆಯಿಕ್ಕದ ಕಣ್ಣು , ಜಗತ್ತನ್ನೇ ಜರಿದಿದ್ದರು ಸಮಾಜದ ಪ್ರಗತಿ ವಿಚಾರ ಭಾವರೇಖೆ ನೀಳವಾದ ಮೊಗದಲ್ಲಿ ಆಳವಾಗಿ ಮೂಡಿ ತೋರುತ್ತಿತ್ತು . ಅನುಭವದ ಆಗರವಾಗಿದ್ದರೂ ಅದರ ಕ್ಷೀಣತೆಯ ನೆನೆದು ಅಭಿವೃದ್ಧಿಯ ಹಂಬಲ ಹೆಚ್ಚಿ ಹೊಮ್ಮುತ್ತಿತ್ತು . ಯೋಗ ಬಲ್ಲಿದರಾಗಿದ್ದರೂ ಯೋಗದ ಏಳೆಗಾಗಿ ಪಡುತ್ತಿದ್ದ ಚಾಕಚಕ್ಯತೆ ಚಿಮ್ಮುತ್ತಿತ್ತು . ಸ್ವತಃ ಸಾಹಿತಿಗಳಾಗದಿದ್ದರೂ ಪ್ರಾಚೀನ ಸಾಹಿತ್ಯ ಸಂಗ್ರಹದ ಆಸಕ್ತಿಆಸೇಚನವಾಗಿತ್ತು . ವಿದ್ಯೆಯನ್ನು ವಿಶೇಷ ಕಲಿಯದಿದ್ದರೂ ವಿಚಾರ ಪ್ರೌಢಿಮೆಯಿಂದ ವಿದ್ವಾಂಸರನ್ನು ನಿಬ್ಬೆರಗುಗೊಳಿಸುತ್ತಿದ್ದ ಪ್ರಕಾಂಡ ಪ್ರಭಾವವಿತ್ತು . ಸಂನ್ಯಾಸಿಗಳಾಗಿದ್ದರೂ ಸ್ತ್ರೀಯರ ಸತ್ಕರ್ಮ – ಸದ್ಧರ್ಮಗಳ ಉಳಿಮೆಗೆ ಹೆಣಗುತ್ತಿದ್ದ ಹೆಚ್ಚಳದ ಪೆಂಪಿತ್ತು . ನಿಷ್ಕಾಮಿ ಗಳಾಗಿದ್ದರೂ ಲೋಕಕಲ್ಯಾಣ ಕ್ರಿಯಾಪ್ರೇಮ ಕೌಶಲ್ಯವಿತ್ತು . ವಿರಕ್ತ ಶಿಖಾಮಣಿ ಯಾಗಿದ್ದರೂ ವಿನಯಶೀಲಶ್ರೀ ವಿರಾಜಿಸುತ್ತಿತ್ತು . ಜೀವನ ನಿರ್ವಹಣದ ಯಾವ ಯೋಚನೆಯಿಲ್ಲದಿದ್ದರೂ ವೈದ್ಯದ ಶೋಧ – ಪ್ರಯೋಗಗಳ ಸಂಭ್ರಮ ಸೂರೆ ಗೊಂಡಿತ್ತು . ದೀನ ದರಿದ್ರರಲ್ಲಿದ್ದ ದಯಾಂತಃಕರಣ ದಿವ್ಯವಾಗಿತ್ತು . ಪ್ರಗತಿಶೀಲರಿಗೆ ಪ್ರೋತ್ಸಾಹದಾಯಕ ಗುಣ ಪ್ರಭೂತವಾಗಿತ್ತು . ಬರಿ ದಯೆ – ಪ್ರೋತ್ಸಾಹ ಮಾತ್ರವಲ್ಲ ಆಶ್ರಯ- ಪೋಷಣಗಳನ್ನು ಕೊಡುತ್ತಿದ್ದ ಒಮ್ಮನದ ಔದಾರ್ಯವಿತ್ತು . ಮಂದಮತಿ ಶಿಷ್ಯರಿಗೆ ಸ್ವಂತ ಪಾಠ ಪ್ರವಚನ ಹೇಳಿ ಕೇಳಿ ಪಳಗಿಸುತ್ತಿದ್ದ ಪ್ರತಿಭೆಯಿತ್ತು . ಅಂತಹ ಅನುಪಮ ಜಗಜ್ಯೋತಿಯೊಂದನ್ನು ಕಂಡೆ,  ಅವರೆ ನಾ ಕಂಡ ಕಾರಣಿಕ ಕುಮಾರ ಯೋಗಿಗಳು ,

ಅವರು ಆಗಳೆ ಸಮಾಜ ಬಾಂದಳದಿ ಕ್ರಿಯಾ ಕಿರಣಗಳನು ನೀಡಿ ಜ್ಞಾನ ಬೆಳಗನು ಹರಡಿ ಜಗಚ್ಚಕ್ಷುವಿನಂತೆ ಜಗಜಗಿಸಿದ್ದರು . ಅಂದು ಆ ಬಿಂಬವ ಕಂಡೆ ನಾನು ಕಂಡ ಕುಮಾರ ಯೋಗಿ ಕಂಡೆನ್ನ ಕಂಗಳು ಧನ್ಯವಾದವು . ಜನ್ಮ ಸಾರ್ಥಕವಾಯಿತು . ಆಟ ಆ ಲೋಕೋತ್ತರ ಮಹಾಮೂರ್ತಿಯನ್ನು ಎಷ್ಟು ಸಲ ಎಷ್ಟು ಬಗೆಯಲ್ಲಿ ನೋಡಿದರೂ ಬರ ಹಿಂಗದು , ಬೇಸರ ಬಾರದು .

ನಿಮ್ಮ ನೋಟವನಂತ ಸುಖ ,

ನಿಮ್ಮ ಕೂಟ ಪರಮ ಸುಖವಯ್ಯ

 ಅಷ್ಟಕೋಟಿ ರೋಮಂಗಳೆಲ್ಲ ಕಂಗಳಾಗಿ

ನೋಡುತ್ತಿದ್ದೆನಯ್ಯ ಕುಮಾರ ಯೋಗೀಶ್ವರ ನಿಮ್ಮ ನೋಡಿ ನೋಡಿ

 ಮನದಲ್ಲಿ ರತಿಹುಟ್ಟಿ ನಿಮಿರ್ದವೆನ್ನ ಕಂಗಳು

ಎಂದು ಅಣ್ಣನ ಅಮೃತವಾಣಿಯಲ್ಲಿ ಹಾಡಿ ನೆಟ್ಟ ನೋಟದಿಂದ ನೋಡಿ ನಲಿಯಲು ಮುಂದುವರಿಯಲಾಗಿದೆ , ಉಲಿಯಲು ಮೊದಲು ಮಾಡಲಾಗಿದೆ .

.

ಈ ಸಂಚಿಕೆಯ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಅಪೂರ್ವ ಲೇಖನಗಳ ವಿವರ

  1. ಕಾವ್ಯ :” ಶಿವಮಂಗಲವನು ಕೊಡು ಬೇಗ  | “ ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಕಾವ್ಯ : “ಮತ್ತೆ ಬರುವನೆಂದು ಹೇಳಿ ಪೋದೆಯ್ಯ .ಮತ್ತೇಕೆ ಬರಲಿಲ್ಲಿ ಪೇಳೋ ಹಾಲಯ್ಯ ? : ಶ್ರೀ ಚನ್ನವೀರದೇವರು ಕಲ್ಯಾಣಮಠ , ಹುಬ್ಬಳ್ಳಿ
  • ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ವಿಶೇಷ ಲೇಖನಗಳು:

  • ಶ್ರೀ ಅನ್ನದಾನ ಶ್ರೀಗಳವರು ಹಾಗೂ ಶಿವಯೋಗಮಂದಿರ : ಡಾ ಶಿವಬಸವ ಮಹಾಸ್ವಾಮಿಗಳು ನಾಗನೂರ – ಬೆಳಗಾವಿ
  • ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು.: ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
  • ಶ್ರೀಗುರು ಅನ್ನದಾನಿ ಮಹಾಸ್ವಾಮಿಗಳವರ  ದರ್ಶನ ದೂರ-ಸಮೀಪ : • ಪ್ರೊ. ಎಸ್. ಎಸ್. ಭೂಸನೂರಮಠ
  • ಶ್ರೀಗುರು ಅನ್ನದಾನ ಮಹಾಸ್ವಾಮಿಗಳು ಮತ್ತು ಶಿಕ್ಷಣ: ಸದಾಶಿವ ಒಡೆಯರ, ಧಾರವಾಡ
  • ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳು : ಈಶ್ವರ ಸಣಕಲ್ಲ ( ಲೇಖನ ಸಂಗ್ರಹ)
  • ಪೂಜ್ಯಶ್ರೀ ಡಾ. ಶಿವಬಸವ ಸ್ವಾಮಿಗಳು: ಪ್ರಕಾಶ ಗಿರಿಮಲ್ಲನವರ
  • ವೈರಾಗ್ಯದ ಮಲ್ಲಣಾರ‍್ಯರು : ಸಂಗ್ರಹ : ಎ. ಎಸ್. ಪಾವಟೆ, ವಿಶ್ರಾಂತ ಪ್ರಾಚಾರ್ಯರು, ಬಾಗಲಕೋಟ
  • ಶ್ರೀ ಗುರು ಕುಮಾರೇಶ್ವರರ ಕಾಣಿಕೆಗಳು : ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ,

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಶ್ರೀ ಚನ್ನವೀರದೇವರು ಕಲ್ಯಾಣಮಠ , ಹುಬ್ಬಳ್ಳಿ

ಹಾಲಯ್ಯ ನಾಮದಿಂ ಜಗಕೆಲ್ಲ ಹಾಲ್ಗುಡಿಸಿ

ಹಾಲಿನಂತಿರುವ ಹೇ ಹಾಲಯ್ಯನೇ || ಪ ||

 ಜನಿಸಿದನು ಹಾಲಯ್ಯ ಜೋಯಿಸರ ಹಳ್ಳಿಯೊಳ್

ಪರಮ ಪಾವನ ರೂಪ ಹಿರಿಯ ಮಠದೊಳ್

ನೀಲಮ್ಮ ಬಸವಯ್ಯ ದಂಪತಿಯ ಗರ್ಭದೊಳ್

ಕಳೆದನೋ ತನ್ನ ಜೀವನವ ಕಿರಿ ಪಳ್ಳಿಯೋಳ್ || ೧ ||

ಚಿಕ್ಕ ತನದಲಿ ತಾನು ಚೊಕ್ಕ ಮನದಿಂದೋದಿ

ಧರ್ಮ ದಿಂದಲೇ ಜಯ ಬಂದ್ಹೇಳಿದೆ

 ಶಿವೇನ ಸಹಯೋಗದ ಅನುಭವಂ ಮಾಡಿಸಿದೆ

 ಅತಿ ವೀರತನದಿಂದ ಯೋಗ ಸಾಧಿಸಿದೆ || ೨ ||

 ಎಷ್ಟು ಹೇಳಲಿ ನಿನ್ನ ದಿವ್ಯರೂಪದ ಮಹಿಮೆ

 ಹರಡಿಸಿದ ಸದಾಶಿವಯೋಗಿ ತನ್ನ ಯ ಜಾಗ್ಮೆ

 ಹರಡಿತ್ತು ಜಗಕೆಲ್ಲ ಮಂದಿರದ ಮಹಿಮೆ

ತೋರೊ ನಿನ್ನ ಯ ರೂಪ ಜಗಕೆ ಇನ್ನೊಮ್ಮೆ || ೩ ||

ಮತ್ತೆ ಬರುವನೆಂದು ಹೇಳಿ ಪೋದೆಯ್ಯ

ಮತ್ತೇಕೆ ಬರಲಿಲ್ಲಿ ಪೇಳೋ ಹಾಲಯ್ಯ

ನೀ ಬರದೆ ಈ ಜಗವು ಬೆಳಗುವುದು ಹೇಗೀಗ

 ನೀ ಬಂದು ಈ ಜಗಕೆ ತೋರೊ ಬೆಳಕೀಗ ||  ೪ ||

 ಕರೆವರು ಶಿವಯೋಗಿ ಪುಂಗವರು ಕೈ ಮಾಡಿ

 ಕಣ್ತೆರೆದು ಒಂದಿಷ್ಟು ನೋಡೋ ನಮ್ಮನ್ನು

 ಹೊಳೆ ಹಳ್ಳ ಕೂಡಿ ಹೋಗುತಿದೆ ಜಗವಿನ್ನು || ೫ ||

ನಿನ್ನಂಥ ಯೋಗಿಯ ಕಳಕೊಂಡ ಭೂತಾಯಿ

ಶಪಿಸಿಕೊಂಡಳು ತಾಯಿ ತನ್ನ ಇದಿಮಾಯಿ

ಭೂತಾಯಿ ತಬ್ಬಲಿ ಆಗಿಹಳೊ ಯೋಗಿ

ಹಾಲಿನೋಳ್  ಹಾಲಾಗಿ ಹೋದ ವೈರಾಗಿ || ೬ ||

ನಾ ಬಂದೆ ಮರ್ತ್ಯಕ್ಕೆ ನಿನ್ನ ಕೃಪೆಯಿಂದ

ನಿನ್ನ ಸೇವೆಯ ಗೈಯ್ವ ಮನದ ಆನಂದ

ಸಲಹಯ್ಯ ಸಲಹಯ್ಯ ಸಲಹಯ್ಯ ತಂದೆ

 ನಿನ್ನ ಸೇವೆಯ ಮಾಳ್ವ ‘ ಚೆನ್ನವೀರನಿಗೆ ‘

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಅಕ್ಟೋಬರ  ೨೦೨೧ ರ ಸಂಚಿಕೆ

ಶ್ರೀಗುರುವೆ ಸಕಲ ಬಂಧು-ಬಳಗ

ಎರವು ಮಾಡದೆ ನಿಮ್ಮ | ಗುರುಪುತ್ರರೊಳಗೆನ್ನ

ಕಿರಿಯ ಮಗನೆಂದು – ಗುರುವೆ ನೀ ಕರವಿಡಿದು

ಹರುಷದಿಂದೆನಗೆ ಕೃಪೆಯಾಗು || ೨೭ ||

ಶಿವಕವಿಯು ಗುರುವಿನಲ್ಲಿ ತಂದೆ-ತಾಯಿ, ಅಪ್ಪ-ಅಜ್ಜ, ಬಂಧು-ಬಳಗದ ಆರೋಪವನ್ನು ಮಾಡುತ್ತ ಸದ್ಗುರುವನ್ನು ಅತ್ಯಂತ ಆತ್ಮೀಯವಾಗಿ ಕಾಣುತ್ತಾನೆ. ಸುಮಾರು ಹದಿನಾಲ್ಕು ನುಡಿಗಳಲ್ಲಿ ಗುರುವೇ ಸಕಲ ಬಂಧು-ಬಳಗವೆಂಬುದನ್ನು ವ್ಯಕ್ತಗೊಳಿಸಿದ್ದಾನೆ. ಆತ್ಮೀಯರಲ್ಲಿ ತನ್ನ ಮನದಳಲನ್ನು ದೂರ ಮಾಡಿಕೊಳ್ಳುವಂತೆ ಈ ಶರಣ ಕವಿಯು ತನ್ನ ದುಗುಡದುಮ್ಮಾನವನ್ನು ಗುರುಬಂಧುವಿನಲ್ಲಿ ಬಿಡಿಸಿಕೊಂಡಿದ್ದಾನೆ.

ಎರವು ಮಾಡು= ಭೇದಭಾವ ಮಾಡು, ಭಿನ್ನವಾಗಿ ತಿಳಿ, ಗುರುವೆ ! ನಿಮ್ಮಹಿರಿಯರಾದ ಅನೇಕ ಗುರುಪುತ್ರರೊಳಗೆ ಎನ್ನನ್ನು ಭಿನ್ನವಾಗಿ ತಿಳಿಯಬೇಡ. ನನ್ನಲ್ಲಿಭೇದ ಭಾವವನ್ನು ಮಾಡಬೇಡ. ನಿನ್ನದು ವಿಶಾಲ ಮನೋಭಾವ.

“ಅಯಂ ನಿಜ: ಪರೋ ವೇತ್ತಿ ಗಣನಾ ಲಘುಚೇತಸಾಮ್ |

ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ||

ಇವನು ನನ್ನವನು, ಅನ್ಯನೆಂದು ಭಾವಿಸುವದು ಸಣ್ಣ ಮನಸ್ಸಿನವನ ವ್ಯವಹಾರ.ಆದರೆ ಉದಾರ ಚರಿತ್ರವುಳ್ಳ, ವಿಶಾಲ ಹೃದಯವುಳ್ಳ ತಮಗೆ ಜಗತ್ತೇ ಕುಟುಂಬವಾಗಿದೆ. ನನ್ನನ್ನು ಎಲ್ಲರೊಳಗೆ ಚಿಕ್ಕಮಗನೆಂದು ಎಣಿಸು. ಚಿಕ್ಕವನು ಏನೇ ತಪ್ಪುಮಾಡಿದರೂ ಅದು ಕ್ಷಮ್ಯವಲ್ಲವೆ ? ಕ್ಷಮಿಸುವದು ತಂದೆಯ ಧರ್ಮ. ನನ್ನ ಕೈಹಿಡಿದು ಭವಸಾಗರದಿಂದ ಮೇಲೆತ್ತು. ಚಿಕ್ಕವನು ಕೈಹಿಡಿಯದೆ ನಡೆಗಲಿಯಲಾರ. ಬೀಳುತ್ತಿದ್ದರೂ ಹಿಡಿದೆತ್ತುವದು ಸದ್ಗುರುವಿನ ಕಾರ್ಯ. ನೀ ಕೈ ಬಿಟ್ಟರೆ ನಾನು ಭವಸಾಗರದಲ್ಲಿಮುಳುಗಿ ಹೋಗುವೆ. ಬೇಸರ ತಾಳದೆ ನನ್ನನ್ನು ಉದ್ಧರಿಸು. ಸಂತೋಷದಿಂದ ಕೃಪೆಮಾಡು.

ಮಾಯಾ ಪಾಶವ ಹರಿದು | ಕಾಯೋ ನೀನೆನ್ನುವನು.

ತಾಯಿ ಜನ್ಮದೊಳು-ಬೇಡಿದುದೀವ ಗುರು-

ತಾಯಿ ನೀನೆಗೆ ಕೃಪೆಯಾಗು || ೨೮ ||

ಜಗತ್ತಿನಲ್ಲಿ ತಾಯಿಗೆ ಅಗ್ರಸ್ಥಾನವಿದೆ. ‘ಮಾತೃ ದೇವೋಭವ’ವೆಂದು ವೇದವು ತಾಯಿಯನ್ನು ಗೌರವಿಸಿದೆ. ತಾಯಿ ಮೊದಲನೆಯ ದೇವರೆಂದು ಎಲ್ಲರೂ ಅದರ ಮಾಡಿದ್ದಾರೆ. ‘ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲವೆಂಬ ನಾಣ್ಣುಡಿಯನ್ನು ಬಲ್ಲ ಶಿವ ಕವಿಯು ಗುರುವಿನಲ್ಲಿ ಮೊದಲು ತಾಯಿತನವನ್ನು ಕಾಣುತ್ತಾನೆ.

ಮಾಯಾಕೋಲಾಹಲಿಗಳೆನಿಸಿದ ಅಲ್ಲಮ ಪ್ರಭುಗಳು ಮಾಯೆಯ ವ್ಯಾಖ್ಯೆ ಯನ್ನು ಮಾರ್ಮಿಕವಾಗಿ ಮಾಡಿದ್ದಾರೆ.

ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ.

ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ.

ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ.

ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ.

ಹೊನ್ನು, ಹೆಣ್ಣು, ಮಣ್ಣುಗಳನ್ನು ವೇದಾಂತಿಗಳು ಮಾಯೆಯೆಂದು ಭಾವಿಸು ತ್ತಾರೆ. ಆದರೆ ಅವು ನಿಜವಾದ ಮಾಯೆಯಲ್ಲ. ಅವುಗಳೆಲ್ಲ ತನಗೇ ಬೇಕೆಂಬ ಮನದ ಅತಿಯಾಸೆಯೇ ಮಾಯೆಯಾಗಿದೆ. ಮನಸ್ಸಿನ ಕಾಮನೆಗಳೇ ಮಾಯೆಯಾಗಿ ಪರಿಣಮಿಸುತ್ತವೆ. ಮನ ಸುಮನವಾದರೆ ಆಶೆ ನಿರಾಶೆಯಾಗುವದು. ಮಾಯಾಪಾಶಹರಿಯುವದು. ಅಕ್ಕಮಹಾದೇವಿಯೂ ಕೂಡ ತೆರಣಿಯ ಹುಳದ ಉದಹಾರಣೆಯನ್ನು ಕೊಟ್ಟು ಮಾನವನು ಆಶಾ ಪಾಶದಿಂದ ಬಂಧಿತನಾಗಿ ಮನಬಂದಂತೆ ನಡೆಯುವನು. ಈ ಆಶೆಯನ್ನು ದೂರು ಮಾಡೆಂದು ಶ್ರೀ ಗುರುದೇವ ಚನ್ನಮಲ್ಲಿಕಾರ್ಜುನನಲ್ಲಿ ಬೇಡಿ ಕೊಂಡಿದ್ದಾಳೆ.

ಮಾಯೆಯೆಂದರೆ ಅಜ್ಞಾನವೆಂತಲೂ ಅರ್ಥ ಮಾಡಬಹುದು. ಅಜ್ಞಾನದಿಂದ ಪಾರಮಾರ್ಥವನ್ನು ಮರೆತು ಲೌಕಿಕ ವ್ಯವಹಾರದಲ್ಲಿ ಜೀವಾತ್ಮನು ಬಂಧಿತನಾಗುವನು. ಭವಚಕ್ರದಲ್ಲಿ ಸಿಲುಕುವನು.ಈ ಮಾಯಾಪಾಶದಿಂದ ಬಿಡುಗಡೆಯಾಗಬೇಕಾದರೆ ಗುರು ಕೃಪೆ ಮೂಲವಾಗಿದೆ. ಮಾನವನ ತಾಯಿಯ ಗರ್ಭದಲ್ಲಿರುವಾಗ ಈ ತಿಂಗಳಿಗೆ ಪೂರ್ವಜನ್ಮದ ಸ್ಮರಣೆಯಾಗುತ್ತದೆ. ಆಗ ಜೀವನು ತನ್ನ ತಪ್ಪಿನ ಅರಿವಾಗಿ ದೇವರಲ್ಲಿ ಪ್ರಾರ್ಥಿಸುತ್ತಾ… ದೇವಾ ! ಎನ್ನ ತಪ್ಪು ಅನಂತ ನಿನ್ನ  ಸ್ಯೆರಣೆಗೆ ಲೆಕ್ಕವಿಲ್ಲ.

ಇನ್ನು ಮೇಲೆ  ತಪ್ಪದಂತೆ ಇರಿಸು,ನಿನ್ನ ಸ್ಮರಣೆಯನ್ನು ಬಿಡುವುದಿಲ್ಲ. ಈ ಭವ ಬಂಧನವನ್ನು ಸಾಕುಮಾಡು  ಮುಕ್ತನನ್ನಾಗಿಸು  ಲಿಂಗವನ್ನು ಮರೆತ  ಕಾರಣ ಪುನಪುನಃ ಹುಟ್ಟಬೇಕಾಯಿತು ಜಂಗಮನನ್ನು ಜರಿದವಾಗಿ ಮಾಯಾಪಾಶದಿಂದ ಬಂಧಿತನಾದೆ ಶಿವ ಶಿವಾ! ಶರಣ ಮಾರ್ಗವನ್ನು ಕರುಣಿಸಿ ಭವಬಂಧನದಿಂದ ದೂರ ಮಾಡೆಂದು ಬೇಡಿಕೂಳ್ಳುತ್ತಾರೆ.ಆದರೆ ಪ್ರಸೂತವಾಯು ತಾಯಿ ಗರ್ಭಕೋಶದಿಂದ ಹೊರನೂಕಿದಾಗ ಆ ಬೇಡಿಕೆ ,ಆ ಪ್ರಾರ್ಥನೆ ,ಆ ಪೂರ್ವಜನ್ಮದ  ಸ್ಮರಣೆ ಮರೆತು ಬಿಡುತ್ತದೆ . ಜೀವಾತ್ಮನು ಮರೆತರೂ ಸುದ್ಗುರುನಾಥನು ಅದನ್ನೆಲ್ಲ ಕರುಣಿಸುತ್ತಾನೆ.ಜೀವದಾತೆಯಾದ ತಾಯಿಯು ಶಿಶುವಿಗೆ ಬೇಡಿದ್ದನ್ನ ಕೊಟ್ಟು ಸಂತೈಸುತ್ತಾಳೆ. ತಾಯಿ ಕೊಡುವದು ಶಕ್ತ್ಯಾನುಸಾರ ಅದು ಭೌತಿಕ ಬೇಡಿಕೆಗಳನ್ನು  ಮಾತ್ರ .ಗುರು ತಾಯಿ ಕೊಡುವುದು ಅಲೌಕಿಕವಾದುದನ್ನು. ಗುರು ತಾಯಿ ಕೊಡುಗೆಗೆ ಯಾವುದೂ ಸಮಾನವಲ್ಲ.

ಓ ಗುರುವೆ! ಗುರು ತಾಯಿಯೆ !  ನೀ ಕರುಣಿಸು  ನಾನು ನಿನ್ನ ಕಿರಿಯ ಕುವರ  ಚಿಕ್ಕಮಗನು  ತಾಯಿಗೆ ಬಲು ಪ್ರೀತಿಯಲ್ಲವೆ? ಕರುಣೆದೋರಿ ನನ್ನ ಮಾಯಾಪಾಶವನ್ನು ಹರಿದು ಹಾಕು. ಭೌತಿಕ ಬಯಕೆಯನ್ನು  ಕಳೆದು ತಾಯಿಯ ಗರ್ಭದಲ್ಲಿ ಬೇಡಿದ ಬಯಕೆಗಳನ್ನು ಕೈಗೂಡಿಸು.  ನಿನ್ನ ಕರಗರ್ಭದಲ್ಲಿ ನನ್ನನ್ನು  ಪುನರ್ಜಾತನನ್ನಾಗಿ ಮಾಡು. ನಿನ್ನ ಕರಗರ್ಭದಲ್ಲಿ ಉದಯವಾಗುವದರಿಂದ ಸಂಸಾರ ಬಂಧನ ಬಿಡುವದು. ನನ್ನ ಮಲತ್ರಯಗಳನ್ನು ಕಳೆದು ಕರುಣಿಸು . ಮಗುಬೇಡಿದ್ದನೆಲ್ಲಾ ತಾಯಿ ಕೊಡುವಂತೆ ನನ್ನ ಈ ಬೇಡಿಕೆಯನ್ನು ಪೂರೈಸಿ ಗುರುತಾಯಿಯಾಗು . ನಿನ್ನ ಹೃದಯ ವಿಶಾಲವಾದುದು.ಅನುಪಮವಾದುದು. ಈ ಬಳಲುವ ಕಂದನ ಬಂಧನ ಬಿಡಿಸು .ಇದು ನಿಮ್ಮ ಧರ್ಮ.

ಶಿವಕವಿಯು ಹಿಂದೆ ತನ್ನನ್ನು ಕಿರಿಯ ಮಗನೆಂದು ಹೇಳಿಕೊಂಡು ಇಲ್ಲಿ ಗುರು ತಾಯಿಯ ಪ್ರಸ್ತಾಪ ಮಾಡುವದು ಅತ್ಯಂತ ಮಾರ್ಮಿಕವಾಗಿದೆ. ತಾಯಿಗೆ  ಚಿಕ್ಕಮಗನ ಮೇಲೆ ಪ್ರೀತಿ ಹೆಚ್ಚಾಗಿರುತ್ತದೆ. ಇದು  ಲೌಕಿಕ ಅನುಭವ . ಕವಿಯಲ್ಲಿ  ಲೌಕಿಕ  ಮತ್ತು ಪಾರಮಾರ್ಥಿಕ ಅನುಭವ ಸಾಕಷ್ಟಿತ್ತೆಂಬುದು ವ್ಯಕ್ತವಾಗುತ್ತದೆ. ಮತ್ತು ಸದ್ಗುರು ನಾಥನು ತೀವ್ರವಾಗಿ ಕೃಪೆಯನ್ನುಂಟು ಮಾಡಲೆಂಬ ಜಾಣ್ಮೆಯೂ  ಸ್ಪಷ್ಟವಾಗುತ್ತದ.

• ಈಶ್ವರ ಸಣಕಲ್ಲ ( ಲೇಖನ ಸಂಗ್ರಹ)(ಈಶ್ವರ ಸಣಕಲ್ಲ ಇವರು ೧೯೦೬ ಡಿಸೆಂಬರ ೨೦ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾದವಾಡದಲ್ಲಿ ಜನಿಸಿದರು. ತಾಯಿ ನೀಲಾಂಬಿಕೆ ; ತಂದೆ ಮಹಾರುದ್ರಪ್ಪ. ಬಾಲ್ಯದಲ್ಲೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಅನುಭವಕ್ಕೆ ಅಭಿವ್ಯಕ್ತಿಯ ರೂಪುಕೊಟ್ಟರು. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸುಮಾರು ೨೦ ಕೃತಿಗಳನ್ನು ರಚಿಸಿದ್ದಾರೆ. ಮುಂಬಯಿಯಿಂದ ಹೊರಡುತ್ತಿದ್ದ “ಸಹಕಾರ” ಪತ್ರಿಕೆಯ ಸಂಪಾದಕರಾಗಿದ್ದರು.

ಇವರ ಬಟ್ಟೆ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಇವರು ೧೯೮೦ ರಲ್ಲಿ ಬೆಳಗಾವಿಯಲ್ಲಿ ನಡೆದ ೫೨ ನೆಯ ಅಖಿಲ ಭಾರತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿದ್ದರು. ಈಶ್ವರ ಸಣಕಲ್ಲರ ಉದಾತ್ತ ಆದರ್ಶವು ಅವರ ಕವನವೊಂದರಲ್ಲಿ ಬರುವ ಈ ಸಾಲುಗಳಿಂದ ವ್ಯಕ್ತವಾಗುತ್ತದೆ: “ ಜಗವೆಲ್ಲ ನಗುತಿರುಲಿ ; ಜಗದಳವು ನನಗಿರಲಿ ” ಈಶ್ವರ ಸಣಕಲ್ಲರು ೧೯೮೪ ಡಿಸೆಂಬರ ೩ರಂದು ತೀರಿಕೊಂಡರು.)

ಅನಾದ್ಯನಂತವಾಗಿ ಹಬ್ಬಿರುವ ಆಕಾಶದಗಲದ ಮಹಾಮೌನದಲ್ಲಿ ಅಖಂಡ ತೇಜಃಪುಂಜವಾದ,ಅವಿರತ ಜ್ಯೋತಿರ್ಮಯವಾದ, ಅಪ್ರತಿಮ ಪ್ರಕಾಶ ಪೂರ್ಣವಾದ ಅಸಂಖ್ಯ ಕೋಟಿ ಗ್ರಹನಕ್ಷತ್ರಗಳುಮೂಡಿ, ಲೀಲೆಯಲ್ಲಿ ಆಡಿ, ವೇಗದಲ್ಲಿ ಪರಿಭ್ರಮಿಸುತೋಡಿ, ನಿರ್ಧಿಷ್ಟ ದೇಹದಲ್ಲಿ ತೀಡಿ, ತಮ್ಮ ಆಯುವನ್ನು ದೂಡಿ, ಮೈದೋರಿ ಮೈಗರೆವ ಮಹಾಸ್ವಪ್ನದಂತೆ ಮರೆಯಾಗುತ್ತವೆ. ಅದೇ ಆಕಾಶದ ಅದೇ ಮೌನದಲ್ಲಿ ಈ ಜ್ಯೋತಿಷ್ಪ್ರಪಂಚದ ಆಚೆ ಆಚೆ, ಮೇಲೆ ಮೇಲೆ, ನಿಬಿಡತಮ ನೀಹಾರಿಕಾವಲಯವು ಮೇರೆ ಮೀರಿ ಹಬ್ಬಿ ಹಿಂಜಿದರಳಿಯ ರಾಶಿಯಂತೆ ರಂಜಿಸಿ, ಮತ್ತೆ, ಮೈದಳೆದ ಭಾವ ಮೈಯಳಿದು ಹೋಗುವಂತೆ, ಕರಗಿ ಹೋಗುತ್ತದೆ. ಅದೇ ಮುಗಿಲಗಲ ಅದೇ ಮೌನಸಾಮ್ರಾಜ್ಯದಲ್ಲಿ ಹಗಲಿರುಳು ಕಣ್ಣುಮುಚ್ಚಾಟ, ಮಳೆಗಾಲದ ಗುಡುಗು ಸಿಡಿಲು ಮಿಂಚು ಮಳೆಗಳ ಹುಚ್ಚಾಟ, ಕಟಗುಡುವ ಚಳಿಗಾಲದ ಕುಳಿರ್ಗಾಳಿಯ, ತೀಟದಲ್ಲಿ ತುಟಿಯ ಕಚ್ಚಾಟ, ಹಿಗ್ಗಿನ ಸುಗ್ಗಿಯ ಕಂಪಿನ, ಇಂಪಿನ, ಜೊಂಪಿನ, ಪೆಂಪಿನ ಬುಗ್ಗೆಯಲ್ಲಿ ಚಿಮ್ಮಿದ ಕಾಮನ ಬಿಲ್ಲಿನ ಸೊಲ್ಲಿನ ಮೆಚ್ಚಾಟ; ಬಲ್ವೇಸಗೆಯ ಬಿರುಬಿಸಿಲ ಬೇಗೆಯ ಕಿಚ್ಚಾಟ-ಇಂತು ಕ್ಷಣ, ದಿನ-ಮಾಸ-ಋತು-ವರ್ಷ-ಯುಗ ಕಲ್ಪಗಳ ಲೀಲಾತಲ್ಪದಲ್ಲಿ, ಕಲ್ಪನೆಯ ವಿವಿಧ ಭಂಗಿಯಲ್ಲಿ, ವಿವಿಧ ವರ್ಣವಿನ್ಯಾಸದಲ್ಲಿ ಲಾಸ್ಯವಾಡಿ, ಹೃನ್ಮಂದಿರದಲ್ಲಿ ಸೃತಿಯ ಮುದ್ರೆಯೊತ್ತಿ, ಮತ್ತೆ ಸರಿದು ಹೋಗುವಳು. ಇಂತು ವಿಶ್ವದ ಮಹಾಪ್ರಪಂಚದ, ಮಾಯಾ ಪ್ರಪಂಚದ, ದ್ವಂದ್ವ ಪ್ರಪಂಚದ ಅಸಂಖ್ಯ ಮುಖಲೀಲೆಗೆ ತನ್ನಲ್ಲಿ ಅವಕಾಶವನ್ನಿತ್ತಿದ್ದರೂ ಅದರಿಂದ ಆ ಆಕಾಶದ ಮಹಾಮೌನವು ಅತೀತ! ನಿರ್ಲಿಪ್ತ !.

ಅಂತೆ ಶ್ರೀ ಶ್ರೀ ಶ್ರೀಮನ್ನಿರಂಜನ ಪ್ರಣವಸ್ವರೂಪಿ ಶ್ರೀ ನಾಗನೂರ ರುದ್ರಾಕ್ಷಿಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು! ಇವರಲ್ಲಿ ಕಲ್ಯಾಣ ದೃಷ್ಟಿಯ ಶಿವನೂ, ಕಾಯಕನಿಷ್ಠೆಯ ಬಸವನೂ ಸಂಗಮಿಸಿ, ಸಂಯಮಿಸಿ ಇವರು ಶ್ರೀ ಶಿವಬಸವ ಮಹಾಸ್ವಾಮಿಗಳಾಗಿಹರು! ಇವರ ದೇಹವು ಎಪ್ಪತ್ತರಾಚೆಗೆ ಸರಿದರೂ, ಇವರ ಉತ್ಸಾಹವು ಇನ್ನೂ ಇಪ್ಪತ್ತರ ಈಚೆಗೇನೇ ಉಳಿದಿದೆ! ಉರುಳುತಿರುವ ಸಂವತ್ಸರಗಳು ಇವರ ಮುಪ್ಪು ಸಾವುಗಳ ಲೆಕ್ಕ ಹಾಕುತ್ತಿದ್ದರೆ, ಅರಳುತ್ತಿರುವ ತಪಸ್ಚೈತನ್ಯವು ಇವರ ಪ್ರಾಯದ ಒಪ್ಪು-ಕಾವುಗಳ ಎಣಿಕೆ ಹಾಕುತ್ತಿದೆ. ಇಂತಹ ಇಳಿವಯಸ್ಸಿನಲ್ಲಿಯೂ ಬಾಗದ ಇವರ ನಡು ಇವರ ಪರಿಶುದ್ಧ ಚರಿತ್ರಕ್ಕೆ ಸಾಕ್ಷಿಯಾಗಿದೆ ! ಎತ್ತರದ ನಿಲವು ! ಭವ್ಯ ವ್ಯಕ್ತಿತ್ವ ಮಾತುಗಾರಿಕೆಯಿರಬಹುದು; ಆದರೆ ಮಾತು ತುಟಿ ಮೀರಿ  ಬಂದುದೇ ವಿರಳ! ಜೀವನದ ಬಹುಭಾಗವೆಲ್ಲ ಮೌನ! ಮಹಾಮೌನ! ಆ ಮೌನದ ಸಂದು ಸಂದುಗಳಲ್ಲಿ, ಕೀಲುಕೀಲುಗಳಲ್ಲಿ ಕೃತಿಯ ಸ್ಪಂದನ! ಸತ್ಮತಿಯ ಸಂಸ್ಕೃತಿಯ ನಂದನ! ಶಿವಾಕೃತಿಯ ಚಂದನ !

ಸೇವಾಧರ್ಮವೇ ಇವರ ಜೀವನ ಮರ್ಮವು “ಮಾನವನ ಹೃದಯದಲ್ಲಿ ಗುಪ್ತವಾಗಿ ಹುದುಗಿರುವ ಪರಿಪೂರ್ಣತೆಯ ಆವಿಷ್ಕಾರವೇ ಶಿಕ್ಷಣವೆಂದು ಬಗೆದು ಅಂತಹ ಶಿಕ್ಷಣವನ್ನು ಪಡೆದು ಲೋಕವೆಲ್ಲಾ ಪರಿಪೂರ್ಣತೆಯ ಎಡೆಗೆ ಸಾಗಲೆಂದು ಯೋಚಿಸಿದರು. ಆ ಯೋಚನೆಗೆ ತಕ್ಕ ಯೋಜನೆ ಆವುದೆಂದು ತರ್ಕಿಸಿದರು. ಹೊಟ್ಟೆಗೆ ಗತಿಯಿಲ್ಲದೆ, ಶಿಕ್ಷಣ ಪಡೆಯಲು ತಕ್ಕ ಸೌಕರ್ಯವಿಲ್ಲದೆ, ಅಸಂಖ್ಯ ಅಸಹಾಯ ಪರಿಸ್ಥಿತಿಯಲ್ಲಿ ತೆವಳಿ ತೊಳಲಾಡುತ್ತಿರುವ ಬಡ ವಿದ್ಯಾರ್ಥಿ ಲೋಕದ ವಿದ್ಯಾರ್ಜನೆಗೆ, ಅಧ್ಯಯನ-ಅಭ್ಯಾಸಗಳಿಗೆ, ವಿವಿಧ ಬಗೆಯ ಶಿಕ್ಷಣ ಸಂಸ್ಥೆಗಳ ಕೇಂದ್ರವಾದ ಬೆಳಗಾವಿಯಂಥ ಪಟ್ಟಣದಲ್ಲಿ ಪ್ರಸಾದ ನಿಲಯ ಸ್ಥಾಪನೆಯೇ ಪರಮಸಾಧನವೆಂದು ನಿಶ್ಚಯಿಸಿದರು.

ಆ ನಿಶ್ಚಯದ ನಿರ್ಣಯವೇ ಇಂದು ಭವ್ಯ ಪ್ರಸಾದ ನಿಲಯವಾಗಿ ರೂಪುಗೊಂಡಿದೆ!ಇಂತು ಪ್ರಸಾದ ನಿಲಯದ ಮುಖಾಂತರವಾಗಿ ಅವರು ಕೈಕೊಂಡ ವಿದ್ಯಾರ್ಥಿಲೋಕಸೇವಾ ಧರ್ಮವೇ ಅವರಿಗೆ ಶಿವನ ಮರ್ಮವನ್ನು ಬಿತ್ತರಿಸಿತು! ಈ ಪ್ರಸಾದ ನಿಲಯದ ಯೋಜನೆಯು, ಅವರ ತಪದ ಮಹಾಮೌನವು ಮಥಿಸಿ ತಂದ ದಿವ್ಯ ನವನೀತ! ಇದನ್ನು ಆಶ್ರಯಿಸಿದವರು,ಸೇವಿಸಿದವರು, ವಿದ್ಯಾಪಾತ್ರರಾದರು! ಮಾನವರಾದರು; ಮಾನವತೆಯಲ್ಲಿ ಪರಿಪೂರ್ಣರಾದರು! ಅಮೃತ ಪುತ್ರರಾದರು!

ಈ ಮೊದಲು ಹೇಳಿದಂತೆ, ಆಕಾಶದ ಮಹಾಮೌನವು ವಿಶ್ವದ ಅನಂತ ನಿರಂತರ ವಿವಿಧ ಲೀಲೆಗಳನ್ನು ಒಳಗೊಂಡು ಅವುಗಳಿಂದ ಅತೀತವೂ, ನಿರ್ಲಿಪ್ತವೂ ಆಗಿರುವಂತೆ, ಈ ಮಹಾಸ್ವಾಮಿಗಳ ಮೌನಾಕಾಶವು ಲೋಕಕಲ್ಯಾಣದ ಇನಿತೆಲ್ಲ ಯೋಚನೆ, ಯೋಜನೆ, ಸತ್ಕೃತಿಗಳನ್ನು ಒಳಗೊಂಡಿದ್ದರೂ ಅವೆಲ್ಲವುಗಳಿಂದ ಅವರು ಅತೀತರು; ನಿರ್ಲಿಪ್ತರು!

ಈ ನಿಸ್ವಾರ್ಥ ಸೇವೆ, ನಿರ್ಲಿಪ್ತತೆ ಒಂದೇ ದಿನದ ಅನಾಯಾಸದ ಗೆಲುವಲ್ಲ! ಜನ್ಮಜನ್ಮಗಳ ತಪದ ಸಾಧನೆಯ ಬಲವು; ಜೊತೆಗೆ ಮಹಾಗುರುವಿನ ಮಹಾಕೃಪೆಯ ಮಹಾನುಗ್ರಹದ ಬಲವು! ಸತ್‌ ಶರಣರ, ಸಜ್ಜನರ, ಸತ್ಸಂಗದ ಸಹವಾಸದ ಫಲವು; ಸಮ್ಮತಿಗಾಗಿ, ಪರಹಿತ ಕಲ್ಯಾಣಕ್ಕಾಗಿ ಮೈದಳೆದ ಉತ್ಕಟ ಸತ್ಸಂಕಲ್ಪ ಶಕ್ತಿಯ ಫಲವು! ಲೋಕದ ಹೊಗಳಿಕೆ-ತೆಗಳಿಕೆ, ಹಿಗ್ಗು-ಕುಗ್ಗು, ಸೋಲು-ಗೆಲುವು, ಸುಖ-ದುಃಖ, ಮಾನ-ಅಪಮಾನ ಈ ಮೊದಲಾದ ದ್ವಂದ್ವಪ್ರಪಂಚವನ್ನು ಮೀರಿ ನಿಂತ ಸುಸ್ಥಿರ-ಸಹಜ ಸಮತೆಯ ನಿಲುವು! ಆನುವಂಶಿಕ ಸಂಸ್ಕಾರದಲ್ಲಿ ಬೆಳಗಿದ ಬೆಳಕಿನ ಹೊಳವು ದಾಸೋಹಂಭಾವದಲ್ಲಿ ಸೋಹಂಭಾವವಲಯಿಸಿ ವಿನಯವೇ ಮೂರ್ತಿವೆತ್ತಂತಿರುವ ಕೈಂಕರ್ಯದ ಸುಳುವು! ಇವೆಲ್ಲವೂ ಸಮನಿಸಿ ನಾಗನೂರು ಶ್ರೀ ಶಕ್ತಿಯಾಯಿತು! ಶಿವಬಸವ ನಿರಂಜನ ವ್ಯಕ್ತಿಯಾಯಿತು!

ಶಿವಯೋಗಮಂದಿರದ ಪುಣ್ಯಪರಿಸರದಲ್ಲಿ .

ಶಿವಯೋಗಮಂದಿರದಲ್ಲಿಯೂ ಅವರ ಮೊದಲಿನ ಜೀವನಕ್ರಮವೇ ಮುಂದುವರಿಯಿತು. ದಿನವೂ ಬ್ರಾಹ್ಮಿ ಮುಹೂರ್ತದಲ್ಲಿ ಶಿವಸ್ಮರಣೆಯೊಂದಿಗೆ ಏಳುವುದು, ಪ್ರಾತರ್ವಿಧಿಗಳನ್ನು ಮುಗಿಸುವುದು,ಸ್ನಾನ, ಶಿವಪೂಜೆ, ಸಂಸ್ಕೃತ ಪಾಠಶಾಲಾಧ್ಯಯನ ಇವುಗಳಲ್ಲಿಯೇ ಇವರ ಮನಸ್ಸು ತನ್ಮಯವಾಯಿತು; ತಲ್ಲೀನವಾಯಿತು. ಅವಿರಳ ಜ್ಞಾನಪಥವಾದ ಅಂತರ್ಮುಖತೆ ಇನ್ನೂ ಬೆಳೆಯಿತು.ಶಕ್ಯವಿದ್ದಷ್ಟೂ ಎಲ್ಲರ ಸಂಗವನ್ನೂ, ಸಂಪರ್ಕವನ್ನೂ ಕಡಿಮೆ ಮಾಡಿಕೊಂಡು, ಕಡಿದುಕೊಂಡು,ಏಕಾಂತ ಪ್ರಶಾಂತ ವಾತಾವರಣದಲ್ಲಿ ಅಧ್ಯಯನಲೀನರಾಗಿ, ಧ್ಯಾನಲೀನರಾಗಿ ಅಂತರ್ಮುಖತೆ-ಯಿಂದ ಅಂತಸ್ಸಮಾಧಿಗೆ ಒಳಗೆ ಒಳಗೆ, ಕೆಳಗೆ ಕೆಳಗೆ ಇಳಿಯತೊಡಗಿದರು. ಹೀಗಾಗಿ ಬಾಹ್ಯ ಪ್ರಪಂಚವು ದೂರವಾಗಿ, ಮರೆಯಾಗಿ ಅಂತಃಪ್ರಪಂಚದ ಬಿತ್ತರವೂ, ಎತ್ತರವೂ, ಆಳವೂ ಗೋಚರಿಸತೊಡಗಿದವು. ಇದರ ಮುಂದೆ ಬಾಹ್ಯ ಪ್ರಪಂಚವು ಅಲ್ಪವೂ, ಕ್ಷುದ್ರವೂ, ಸಂಕುಚಿತವೂ ಎನಿಸತೊಡಗಿತು. ಲೋಕದ ಸ್ಥಾನಮಾನ-ಅಧಿಕಾರ, ಕೀರ್ತಿ, ಕಾಂಚನ, ಪ್ರಶಂಸೆ, ನಿಂದೆ ಈ ಎಲ್ಲವುಗಳಿಂದಲೂ ದೂರವಾಗಿ ಲೋಕದ ದ್ವಂದ್ವದಿಂದ ಅತೀತರಾಗಿ ಇರಲು ಯತ್ನಿಸಿದರು. ಈ ಮೇರೆಗೆ ಒಂದು ದಿವ್ಯಾದರ್ಶವು ಶ್ರೀ ಶಿವಯೋಗಮಂದಿರದ ಪ್ರಶಾಂತವಾತಾವರಣದಲ್ಲಿ ಇವರ ಬಾಳನ್ನು ಇಂತು ರೂಪಿಸುತ್ತಲಿದ್ದಿತು.ಇವರ ಪರಿಶುದ್ಧ ಆಚಾರ, ಉಚ್ಚವಿಚಾರ, ಪವಿತ್ರ ಚಾರಿತ್ರ್ಯ, ಅನನ್ಯ ಭಕ್ತಿ, ಅಪ್ರತಿಮ ದಾಸೋಹಭಾವ, ಅನುಪಮ ಸೇವೆ, ಅವಿಚಲ ಕಾಯಕನಿಷ್ಠೆ, ಅಚಲ ಸಂಯಮಶೀಲ, ಸರ್ವಭೂತದಯಾದೃಷ್ಟಿ, ವಿಶ್ವಮಾನ್ಯಧರ್ಮದೃಷ್ಟಿ ಇವೆಲ್ಲವು ಗಳಿಂದ ಆಕರ್ಷಿತರಾದ ಶ್ರೀ ಶಿವಯೋಗಮಂದಿರ ಸಂಸ್ಥಾಪಕರಾದ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ಕೃಪಾದೃಷ್ಟಿಯು ಇವರ ಮೇಲೆ ಬಿದ್ದಿತು. ಪರಿಣಾಮವಾಗಿ ಇವರು ಅವರ ಪ್ರೀತಿಯ ಶಿಷ್ಯರಾಗಿ ಅನನ್ಯ ಭಾವದಿಂದ ಸೇವೆ ಸಲ್ಲಿಸತೊಡಗಿದರು. ಇವರ ದ್ವಾದಶ ವರ್ಷದ ದೀರ್ಘ ಅವಿರತ ಅವಿಚ್ಛಿನ್ನ ಸೇವೆಗೆ ಮೆಚ್ಚಿ ಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಇವರನ್ನು ಆಶೀರ್ವದಿಸಿದರು; ಅನುಗ್ರಹಿಸಿದರು. ಇಂತು ಎಲ್ಲರ ಮೆಚ್ಚಿಗೆಗೂ ಪಾತ್ರರಾದರು. ಇವರು ಮಂದಿರದಲ್ಲಿರುವಾಗ ಬೇರೆ ಬೇರೆ ಊರುಗಳ ಅಪಾರ ಉತ್ಪನ್ನವಿರುವ ಅದೆಷ್ಟೋ ಮಠಗಳ ಅಧಿಕಾರ ಸ್ವೀಕಾರಕ್ಕಾಗಿ ಆಯಾ ಊರವರು ಬಂದು ಬಂದು ಇವರನ್ನು ಪ್ರಾರ್ಥಿಸಿಕೊಂಡರು. ಹಾನಗಲ್ಲ  ಊರವರೂ ಬಂದು ಬೇಡಿಕೊಂಡರಂತೆ; ಇವರು ಯಾವುದಕ್ಕೂ ಆಶಿಸಲಿಲ್ಲ; ಜಗ್ಗಲಿಲ್ಲ; ಯಾರ ಬೇಡಿಕೆಗೂ ಸೊಪ್ಪು ಹಾಕಲಿಲ್ಲ. ‘ಉತ್ಪನ್ನವಿಲ್ಲದಿದ್ದರೂ ಅಡ್ಡಿಯಿಲ್ಲ; ಚಿಕ್ಕದಿದ್ದರೂ ಚಿಂತೆಯಿಲ್ಲ; ನನ್ನ ಈಗಿನ ನಾಗನೂರ ಮಠವೇ ನನಗಿರಲಿ’ ಎಂದು ನಿರ್ಧಾರದ ಧ್ವನಿಯಲ್ಲಿ, ಸಂತೃಪ್ತ ಭಾವದಲ್ಲಿ ಉತ್ತರಿಸಿದರು. ಇದನ್ನು ಕಂಡ ಪೂಜ್ಯ ಶ್ರೀ ಕುಮಾರ ಸ್ವಾಮಿಗಳವರು “ಚಿಕ್ಕದಾಗಿ ಕಾಣುವ ಚಿಕ್ಕೆ ಕೋಟಿ ಕೋಟಿ ಯೋಜನೆಗಳಾಚೆಯಿಂದ ತನ್ನ ಥಳಥಳಿಸುವ ಬೆಳಕನ್ನು ಹರಡಿ ವಿಶ್ವದ ಅಂಧ ತಮಂಧವನ್ನು ಸೀಳುವುದು. ಅಂತೆಯೇ ಬಾಳು, ನಿನ್ನ ಮಠವು ಚಿಕ್ಕದಾಗಿದ್ದರೂ ಆ ಮಠದ ಮೂಲದಿಂದ ಅಖಂಡ ಅನಂತ ಪ್ರಕಾಶದ, ಕಣ್ಣು ಕೋರೈಸುವ ಲಕ್ಷೋಪಲಕ್ಷ ಉಜ್ವಲ ಅಕ್ಷಯ ದಿಧಿತಿಗಳು ಅಸಂಖ್ಯ ಹೃದಯಗಳನ್ನು ತಟ್ಟಿ ಮುಟ್ಟಿ, ಅಲ್ಲಿಯ ಕಾರ್ಗತ್ತಲೆಯನ್ನು ಮೆಟ್ಟಿ ಪ್ರಜ್ಞಾನ ಬ್ರಹ್ಮವಾಗಿ ತೊಳಗಿ ಬೆಳಗಬಲ್ಲವು. ಆ ದಿವ್ಯ ಪ್ರಕಾಶದ ಪೂತ ಧವಳ ಪುಣ್ಯ ಪ್ರವಾಹದಲ್ಲಿ ನೀನು ಮಿಂದು ಕರಗಿ ಹೋಗುವಿ, ಆ ಬೆಳಕಿನಲ್ಲಿ ಬೆಳಕಾಗಿ ಬೆಳೆದು ಹೋಗುವಿ! ನಿನ್ನ ಸೇವೆಯಲ್ಲಿಯೇ ಶಿವನ ಸಾಕ್ಷಾತ್ಕಾರವಾಗುವುದು. ನಿನ್ನ ಈ ಸೌಜನ್ಯದ ವಿನಯದ ಕೈಂಕರ್ಯದ ಶೀಲದಲ್ಲಿಯೇ ಜಗದೋದ್ಧಾರದ ಶೀಲವು ಕಾಣುವುದು. ಎಲ್ಲವನ್ನೂ ಪ್ರಸಾದ ಭಾವನೆಯಿಂದ ಕಾಣುವ ನಿನಗೆ ಪ್ರಸಾದವೇ ಪರಮ ಧೈಯವಾಗುವುದು. ಅನುಪಮ ಶ್ರೇಯವಾಗುವುದು. ನಿತ್ಯ ಪ್ರಕಾಶವಾಗುವುದು. ಸತ್ಯ ಪರಮಾತ್ಮವಾಗುವುದು. ಇದರಲ್ಲಿಯೇ ನಿನ್ನ ಜೀವನದ ಸುಳುಹೂ ಇದೆ ಹೊಳಹೂ ಇದೆ ನಿನಗೆ ಶುಭವಾಗಲಿ! ಮಂಗಳ ವಾಗಲಿ!! ಎಂದು ಹೃದಯ ತುಂಬಿ, ಕಂಠ ತುಂಬಿ, ಬಾಯಿತುಂಬಿ ಆಶೀರ್ವದಿಸಿದರು. ಇಂತು ನೀಡಿದ ಆಶೀರ್ವಾದವು ಗಟ್ಟಿಗೊಳ್ಳುವಂತೆ ಕೊಡಗಲಿ ಗವಿಯಲ್ಲಿ ಶ್ರೀ ಶಿವಬಸವ ಸ್ವಾಮಿಗಳನ್ನು ಅನುಷ್ಠಾನಕ್ಕೂ ಕೂಡಿಸಿದರು.

ಇಷ್ಟೇ ಅಲ್ಲ, ತಾವು ಲಿಂಗೈಕ್ಯವಾಗುವ ಕಾಲವನ್ನು ಅಂತರ್ಜ್ಞಾನದಿಂದ ಕಂಡು ಹಿಡಿದ ಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಅದಕ್ಕಿಂತ ಕೆಲದಿನಗಳ ಪೂರ್ವದಲ್ಲಿ ಈ ಶ್ರೀ ಶಿವಬಸವ ಸ್ವಾಮಿಗಳನ್ನು ಕರೆಯಿಸಿಕೊಂಡು ಇವರಿಗೆ ಶ್ರೀ ಹಾಲಕೆರೆ ಅನ್ನದಾನೀಶ್ವರ ಮಹಾಶಿವಯೋಗಿ ಗಳಿಂದ ಆಶ್ರಮ (ಸ್ಥಳ) ದೀಕ್ಷೆಯನ್ನು ಕೊಡಿಸಿದರು. ಒಂದು ದಿನ ಬಳಿಯಲ್ಲಿ ಕರೆದು “ನೀನು ಲೋಕೋಪಕಾರಿಯಾಗು! ಲೋಕೋದ್ಧಾರಕನಾಗು!” ಎಂದು ಆಶೀರ್ವದಿಸುತ್ತ ತಮ್ಮ ಕೊರಳಲ್ಲಿರುವ ರುದ್ರಾಕ್ಷಿ ಮಾಲೆಯನ್ನು ಇವರ ಕೊರಳಿಗೆ ಹಾಕಿದರು. ಮತ್ತು ತಮ್ಮ ಪವಿತ್ರ ಹಸ್ತದಿಂದ ಆ ಪೂಜ್ಯ ಹಾನಗಲ್ಲ ಮಹಾಸ್ವಾಮಿಗಳು ಇವರಿಗೆ ಕರುಣಿಸಿದ ಭಸ್ಮದ ಘಟ್ಟಿಯೊಂದನ್ನು ಈ ರುದ್ರಾಕ್ಷಿ ಮಾಲೆಯನ್ನು ಈಗಲೂ ಈ ಶ್ರೀಗಳವರು ಗುರುಶಿಷ್ಯರ ಈ ಅನನ್ಯ ಅಭಿನ್ನ ಸಾಮರಸ್ಯದ ಸ್ಮಾರಕವಾಗಿ, ಗುರುವು ಶಿಷ್ಯನ ಮೇಲೆ ಗೆಯ್ದ ಮಹಾಕೃಪೆಯ ಪ್ರತೀಕವಾಗಿ, ಜತನದಿಂದ ಅಚ್ಚಳಿಯದಂತೆ ಕಾಯ್ದಿಟ್ಟಿರುವರು.

ಈ ಮೇರೆಗೆ ಶಿವಯೋಗಮಂದಿರದಲ್ಲಿ ಹನ್ನೆರಡು ವರ್ಷಗಳ ಹರಿಗಡಿಯದ ತಪಃಪ್ರಭಾವದಿಂದ ತಪಃಪ್ರಭೆಯಿಂದ ಆಂತರಿಕ ವಿಕಾಸವನ್ನೂ ಪ್ರಕಾಶವನ್ನೂ ಅಳವಡಿಸಿಕೊಂಡರು. ಅವರ ಬಾಳು ಕೊನರಿ ಚಿಗುರಿ ಹೂತು, ಕಾತು ಈ ತಪಸ್ತೇಜದಲ್ಲಿ ಹಣ್ಣು ಸಾರ್ಥಕತೆಯನ್ನು ಪಡೆಯಿತು. ಧನ್ಯತೆಯನ್ನು ಹೊಂದಿತು.

ಸಂಗ್ರಹ : ಎ. ಎಸ್. ಪಾವಟೆ, ವಿಶ್ರಾಂತ ಪ್ರಾಚಾರ್ಯರು, ಬಾಗಲಕೋಟ

ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯು ಅನೇಕ ಐತಿಹಾಸಿಕ, ನೈಸರ್ಗಿಕ, ಸಾಂಸ್ಕೃತಿಕ ತಾಣಗಳಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಬಾಗಲಕೋಟ ಜಿಲ್ಲೆಯ ಬಾದಾಮಿ  ತಾಲೂಕು ಅನೇಕ ವೈಶಿಷ್ಠತೆಯಗಳನ್ನು ಹೊಂದಿದೆ. ಚಾಲುಕ್ಯರ ರಾಜಧಾನಿಯಾಗಿ ಮೆರೆದ ಬಾದಾಮಿಯ ಪರಿಸರ ಅನೇಕ ಕೋಟೆ ಕೊತ್ತಳಗಳು, ಸುಂದರ ಶಿಲ್ಪದಿಂದ ಕೂಡಿದ ದೇವಾಲಯಗಳು, ಶಿಲ್ಪ ಕಲೆಗಾಗಿಯೇ ಪ್ರಸಿದ್ಧವಾದ ‘ಮೇಣ ಬಸದಿ’ ಎಂಬ ತೆರೆದ ಶಿಲ್ಪಕಲಾ ವಸ್ತು ಪ್ರದರ್ಶನದಂತಿರುವ ಗುಹೆಗಳಿಂದ ಕಂಗೊಳಿಸುತ್ತಿದೆ.

 

ಚಿತ್ರ ಸಂಖೈ ೧ : ಬದಾಮಿಯ ಗುಹೆಗಳು (ಮೇಣ ಬಸದಿಗಳು)

ಬಾದಾಮಿಯಿಂದ ನಾಲ್ಕು ಕಿಲೋ ಮೀಟರ್ ಅಂತರದಲ್ಲಿರುವ-‘ಬನಶಂಕರಿ’- ಶ್ರೀ ಬನಶಂಕರಿ ದೇವಿಯ ಮಂದಿರ, ಜುಳು ಜುಳು ಹರಿಯುವ ಸರಸ್ವತಿ ಹಳ್ಳ, ದೇವಾಲಯದ ಎದುರಿಗಿರುವ ಬೃಹದಾಕಾರದ ಕಲ್ಯಾಣಿ, ಸುತ್ತಲೂ ತೋಟಗಳಿಂದ ತುಂಬಿದ ವನಸಿರಿ ಇದೆಲ್ಲ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಸಂದೇಹವಿಲ್ಲ.

ಎಡ ಬಲದಲ್ಲಿ ತೋಟಪಟ್ಟಿಗಳಿಂದ ಸುತ್ತುವರಿದ ಮಲಪ್ರಭಾ ನದಿಯ ಪರಿಸರ ಸದಾ ಹಸಿರಿನಿಂದ ತುಂಬಿದ ಐಸಿರಿ,  ಇಂಥ ಪರಿಸರದ ಮಧ್ಯದಲ್ಲಿ ಅಲ್ಲಲ್ಲಿ ಈ ಪರಿಸರವನ್ನು ತಮ್ಮ ಕೃಷಿಯಿಂದಾಗಿ ಇನ್ನೂ ಸುಂದರಗೊಳಿಸುವ ನೇಗಿಲ-ಯೋಗಿಗಳಿಂದ ತುಂಬಿದ ಗ್ರಾಮಗಳು.

ಪೂರ್ವಕ್ಕೆ ಹನ್ನೆರಡು ಕಿ.ಮೀ. ಅಂತರದಲ್ಲಿ ‘ಪಟ್ಟದಕಲ್ಲು’-ಪ್ರಸಿದ್ಧ ಶಿಲ್ಪಕಲಾ ದೇಗುಲಗಳ ಕೇಂದ್ರ ಸ್ಥಾನ. ಇಂಥ ಸುಂದರ ಪರಿಸರದಲ್ಲಿ ಒಂದು ಸಣ್ಣ ಗ್ರಾಮ-“ಭದ್ರನಾಯಕನ ಜಾಲಿಹಾಳ”. ಅದು ಜನಪದರ ಬಾಯಲ್ಲಿ ‘ಬಾದನಾಕ ಜ್ಯಾಲ್ಯಾಳ’ ಎಂದಾಗಿದೆ.

ಈ ಭದ್ರನಾಯಕನ ಜಾಲಿಹಾಳದಲ್ಲಿ ‘ಮಡ್ಡೇನವರ’ ಎಂಬ ಕುಟುಂಬ. ಈ ಮನೆತನದ ಮರಿಬಸಪ್ಪ ಮತ್ತು ರುದ್ರವ್ವ ದಂಪತಿಗಳ ಮಗನಾಗಿ ಜನಿಸಿದವನೇ ‘ಮಲ್ಲಣ್ಣ’-‘ಮಲ್ಲಣಾರ‍್ಯ’.

ಚಿಕ್ಕದೊಂದು ಒಣಬೇಸಾಯದ ಭೂಮಿ ಇದ್ದರೂ ಅಲ್ಪ ಸ್ವಲ್ಪ ಕಾಳು-ಕಡಿ ಬರುತ್ತಿದ್ದವು ಅದರಿಂದಲೇ ಉಪಜೀವನ ಸಾಗುತ್ತಿತ್ತು  ಪರಿಸ್ಥಿತಿ ಹದಗೆಟ್ಟಿದ್ದರಿಂದ ಇದ್ದ ಒಂದು ಹೊಲ ಮಾರಿದ-ಮರಿಬಸಪ್ಪ. ಬೇರೆಯವರ ಹೊಲದಲ್ಲಿ ಕೂಲಿಕುಂಬಳಿ ಮಾಡಿ ಜೀವನ ಸಾಗುತ್ತಿದ್ದರು.

ಇಂಥ ಬಡತನದ ಪರಿಸ್ಥಿತಿಯಲ್ಲಿಯೇ ಮರಿಬಸಪ್ಪ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ತೀರಿಕೊಂಡ. ರುದ್ರವ್ವ ಹೌಹಾರಿದಳು. ಮಗನಿಗಾಗಿ ಬದುಕಬೇಕಿತ್ತು, ಸಾವಿರ ನೋವನುಂಡು, ಮಗನನ್ನು ಸಲಹುವಲ್ಲಿ ಹೆಣಗಾಡ ತೊಡಗಿದಳು.

ಇದೇ ಸಮಯಕ್ಕೆ ಬರಗಾಲ ಕಾಣಿಸಿಕೊಂಡಿತು. ಮಳೆ ಬರಲಿಲ್ಲ, ನದೀ ಜಲಾಶಯಗಳು ಬತ್ತಿದವು, ಕುಡಿಯಲು ನೀರಿಲ್ಲ, ಹೊಲಗಳಲ್ಲಿ ಬೆಳೆಯಿಲ್ಲ, ತಿನ್ನಲು ಅನ್ನವಿಲ್ಲ, ಬದುಕು ದುರ್ಭರವಾಯಿತು. ಕಣ್ಣಿರೇ ಗತಿ. ಹಸಿವಿನಿಂದ ಜನ ದಾರಿ ದಾರಿಯಲ್ಲಿ ಸತ್ತರು. ಹೂಳುವವರಿಲ್ಲದೇ ಹೆಣಗಳು ಎಲ್ಲಿ ಬೇಕೆಂದರಲ್ಲಿ ಬಿದ್ದವು, ಪ್ರಾಣಿ ಪಕ್ಷಿಗಳು ದೇಹಗಳನ್ನು ತಿಂದು, ತಲೆಬುರುಡೆ ಎಲ್ಲೆಲ್ಲಿಯೂ ಕಂಡದ್ದರಿಂದ ಇದನ್ನು ‘ಡೋಗಿ ಬರ’ ಎಂದರು.

ಬಾಗಲಕೋಟೆ ನಗರದಲ್ಲಿ ಬರಗಾಲದ ಕಾಮಗಿರಿ ನಡೆದಿದ್ದವು, ರುದ್ರವ್ವ ಸಹ ಗುಳೇ ಹೋಗುವವರೊಂದಿಗೆ ಬಾಗಲಕೋಟೆಗೆ ಬಂದು ಡಾಂಬರ ರಸ್ತೆ ಮಾಡುವಲ್ಲಿ ಕೂಲಿ ಮಾಡ ಹತ್ತಿದಳು. ಜೊತೆಗೆ ಮಗ ಮಲ್ಲಣ್ಣ.

ಶ್ರಾವಣಮಾಸ ಬಂದಿತ್ತು. ಜನರು ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯʼನ ದರ್ಶನಕ್ಕೆ ನಾಲ್ಕೂ ಸೋಮವಾರ ನಡೆಯುತ್ತ ಹೋಗಿ ದರ್ಶನ ಪಡೆವ ಪ್ರತೀತಿ ಇದೆ.

ಚಿತ್ರ ಸಂಖ್ಯೆ ೨ ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯ       

ಚಿತ್ರ ಸಂಖ್ಯೆ ೩ ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯ ದೇವಸ್ಥಾನ

ಒಂದು ಸೋಮವಾರ ದಿನ ರುದ್ರವ್ವ ಮಗನೊಂದಿಗೆ ಮಲ್ಲಯ್ಯನ ಗುಡ್ಡ ಹತ್ತಿದಳು. ಹಸಿವಿನಿಂದ ಬಳಲಿ ಬೆಂಡಾದ ರುದ್ರವ್ವನಿಗೆ ಪೂಜಾರಿ ನೀಡಿದ ಎರಡು ಬಾಳೆಹಣ್ಣುಗಳು ಹೊಟ್ಟೆಗೆ ಶಾಂತಿ ನೀಡಿದವು. ಮಗನಿಗೆ ಬದುಕು ನೀಡೆಂದು ಗುಡ್ಡದ ಮಲ್ಲಯ್ಯನಲ್ಲಿ  ಬೇಡಿಕೊಂಡಳು.

 ಇಳಿ ಹೊತ್ತಾಗಿತ್ತು ಆ ಕಡೆಯಿಂದ ಒಬ್ಬ ಯಜಮಾನರು ತನ್ನ ಇಬ್ಬರು ಹೆಂಡಂದಿರೊಂದಿಗೆ ಬಂದು, ಮಲ್ಲಯ್ಯನ ದರ್ಶನಾಶೀರ್ವಾದ ಪಡೆದು, ದೇವಾಲಯದ ಹೊರಗಿದ್ದ ಕಲ್ಲು ಬಂಡೆಗಳ ಮೇಲೆ ಕುಳಿತು ತಂದ ಫಲಹಾರ ಸೇವನೆಗೆ ಮುಂದಾದಾಗ, ಈ ಮಗು ಮಲ್ಲಣ್ಣನು ಕಣ್ಣಿಗೆ ಬಿದ್ದ.

ಮಗುವನ್ನು ನೋಡಿ ಮನ ಮಿಡಿಯಿತು. ‘ಬಾ ಮಗು’ ಎಂದು ಕರೆದು ಮುದ್ದಾಡಿದರು. ಆ ಯಜಮಾನ ಸಾಲಿ ವಿರುಪಾಕ್ಷಯ್ಯನವರು, ಮನಗೂಳಿ. ಈರವ್ವ, ಮತ್ತು ಹುಚ್ಚವ್ವ ಅವರ ಇಬ್ಬರ ಹೆಂಡಂದಿರು. ಮಕ್ಕಳಾಗಿರಲಿಲ್ಲ ಮಗುವಿನ ಹಂಬಲ ಮೂವರನ್ನೂ ಕಾಡುತ್ತಿತ್ತು. ಈ ಮಗು ಮಲ್ಲಣ್ಣ ಅವರ ಮನಸೆಳೆದ.

ವಿರುಪಾಕ್ಷಯ್ಯನವರು ಮಗುವನ್ನು ತಮಗೆ ನೀಡಿದಲ್ಲಿ ಮಗನನ್ನಾಗಿ ಮಾಡಿಕೊಳ್ಳುತ್ತೇವೆ ಎಂದಾಗ, ತಾಯಿ ರುದ್ರಮ್ಮ ಅಳುತ್ತಲೇ ಮನಸಿಲ್ಲದ ಮನಸ್ಸಿನಿಂದ ಮಗನನ್ನು ಒಪ್ಪಿಸಿದಳು. ವಿರೂಪಾಕ್ಷಯ್ಯ ನೀಡಿದ ಎರಡು ರೂಪಾಯಿ ತೆಗೆದುಕೊಂಡು ಕಣ್ಣೀರಿಡುತ್ತ ರುದ್ರವ್ವ ಹೊರಟು ಹೋದಳು. ಗುಡ್ಡದ  ಮಲ್ಲಯ್ಯನೇ ಕರುಣಿಸಿದ ಮಗು ಮಲ್ಲಣ್ಣನನ್ನು ವಿರೂಪಾಕ್ಷಯ್ಯ ಹಾಗೂ ದಂಪತಿಗಳು ಮಗನಾಗಿ ಪಡೆದುಕೊಂಡು, ಸಾಕಿ ಸಲುಹಿದರು.

ಚಿತ್ರ ಸಂಖ್ಯೆ ೪: ಬಾಗಲಕೋಟೆ ಯಲ್ಲಿನ ಬೆಳೆದು ಬಾಳಿದ  ಶ್ರೀ ಮಲ್ಲಣರ‍್ಯರ ಮನೆ ಇಂದು ಬೇರೆಯವರ ಆಧೀನದಲ್ಲಿ ನವೀಕರಣಗೊಂಡಿದೆ

ಮಲ್ಲಣ್ಣ ಜಾಣನಾಗಿದ್ದ. ಶಾಲಾ ಶಿಕ್ಷಣವಲ್ಲದೇ ಆತನಿಗೆ ಸಂಗೀತದಲ್ಲಿ ಆಸಕ್ತಿ ಇತ್ತು. ಬಹಳ ಸುಂದರವಾದ ಕಂಠಸಿರಿಯಿತ್ತು. ವಿಭೂತಿ ಧರಿಸಿಕೊಂಡು ಹಾಡಲು ಶುರುಮಾಡಿದರೆ ಎಲ್ಲರೂ ಮನಸೋಲುವ ಗಾನ. ಮಲ್ಲಣ್ಣನು ಏಳನೇ ವರ್ಗವನ್ನು ಹೆಚ್ಚು ಅಂಕಗಳಿಸಿ ತೇರ್ಗಡೆಯಾದ  ಕನ್ನಡ, ಸಂಸ್ಕೃತ ಎರಡೂ ಭಾಷೆಗಳು ಚೆನ್ನಾಗಿ ಬರುತ್ತಿದ್ದವು.

ವಿರುಪಾಕ್ಷಯ್ಯನವರು ಜಂಗಮ ದೀಕ್ಷೆ ಕೊಡಿಸಿ ಮಲ್ಲಣ್ಣನನ್ನು ಮಲ್ಲಯ್ಯನವರನ್ನಾಗಿ ಮಾಡಿದರು. ಬಸವ ಪುರಾಣ ಓದಿಕೊಂಡ ಮಲ್ಲಯ್ಯನವರಲ್ಲಿ ಹೊಸ ವಿಚಾರ ಕ್ರಾಂತಿಯಾಯಿತು. ವಚನಗಳನ್ನು ಸುಂದರವಾಗಿ ಹಾಡುತ್ತಿದ್ದರು. ಇದನ್ನರಿತು ವಿರುಪಾಕ್ಷಯ್ಯನವರ ಗೊತ್ತಿನವರೊಬ್ಬರು ಸಂಗೀತ ಕಲಿಯಲು ಅವರನ್ನ್ನು ಮೈಸೂರಿಗೆ ಕಳುಹಿಸಿದರು. ಅಲ್ಲಿ ಎರಡು ವರ್ಷ ಸಂಗೀತ ಅಭ್ಯಾಸವಾಯಿತು. ಅವರು ಬಸವ ಪುರಾಣ ಹೇಳುವ ಶೈಲಿಗೆ ಒಂದು ಹೊಸ ಮೆರಗು ಬಂತು.

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ  ವಿರುಪಾಕ್ಷಯ್ಯ ಸಾಲಿ, ಮನಗೂಳಿ ಸೇವೆಯಿಂದ ನಿವೃತ್ತರಾದರು. ಅವರ ಸ್ಥಾನದಲ್ಲಿಯೇ ಮಲ್ಲಿಕಾರ್ಜುನಯ್ಯ ವಿರುಪಾಕ್ಷಯ್ಯ ಮನಗೂಳಿ ಅವರಿಗೆ ಶಿಕ್ಷಕ ಹುದ್ದೆ ದೊರೆಯಿತು. ಹಿಂದುಸ್ತಾನಿ ಶಾಲೆಯಲ್ಲಿ ೨೧-೧೦-೧೮೯೩ ರಂದು ೭=೦೦ ರೂಪಾಯಿಗಳ ಪಗಾರದ ಮೇಲೆ ಶಿಕ್ಷಕರಾದರು. ಅಲ್ಲಿಯ ಉರ್ದು ಸಹ-ಶಿಕ್ಷಕರ ಸ್ನೇಹದಿಂದ ಉರ್ದು ಭಾಷೆಯನ್ನೂ ಕಲಿತುಕೊಂಡರು.

ತರುಣ ಮಲ್ಲಯ್ಯ ಎಲ್ಲರ ಮನ ಸೆಳೆವ ವ್ಯಕ್ತಿತ್ವ ಹೊಂದಿದ್ದರು. ಸಂಗೀತವನ್ನು ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸುವ ಹಂಬಲವಿತ್ತು. ಅಂಥ ಸಮಯದಲ್ಲಿ ಶ್ರೀಮಂತರೊಬ್ಬರು ಮಲ್ಲಯ್ಯ ಮಾಸ್ತರನನ್ನು ಕರೆದುಕೊಂಡು ಹೋಗಿ ಒಬ್ಬ ವಿದ್ಯಾರ್ಥಿನಿಯನ್ನು ಪರಿಚಯಿಸಿದರು. ಅವಳು ವೇಶ್ಯೆಯಾಗಿದ್ದಳು ಆದರೆ ಸಂಗೀತ ಕಲಿಯುವ ಹಂಬಲ ಬಲವಾಗಿತ್ತು. ಮಲ್ಲಿಕಾರ್ಜುನಯ್ಯನವರು ಯಾವ ಸಂಕೋಚವಿಲ್ಲದೆ ಗುರುಸ್ಥಾನದಲ್ಲಿ ನಿಂತು ಅವಳಿಗೆ ಸಂಗೀತ ಹೇಳಿದರು. ತಮ್ಮ ಮಗ ವಾರಾಂಗನೆಗೆ ಸಂಗೀತ ಹೇಳುವದು ವೃಧ್ಧ ತಂದೆ-ತಾಯಿಗಳಿಗೆ ನೋವನ್ನುಂಟುಮಾಡಿತು. ಹರೆಯದ ತರುಣ ಹರೆಯದ ಒಬ್ಬ ವೇಶ್ಯೆಗೆ ಸಂಗೀತ ಹೇಳಿಕೊಡುವ ಸಂಗತಿ ಯಾರಿಗೂ ಒಪ್ಪಿತವಾಗಿರಲಿಲ್ಲ. ಅದು ಚಿಂತೆಯ ವಿಷಯವೇ ಸರಿ.

ವಿರುಪಾಕ್ಷಯ್ಯನವರ ಆರೋಗ್ಯ ಹದಗೆಟ್ಟಿತು. ಮನೆಯಲ್ಲಿ ಮಲ್ಲಯ್ಯನವರ ವಿವಾಹ ಪ್ರಸ್ತಾಪವಾಯಿತು. ಮಲ್ಲಿಕಾರ್ಜುನಯ್ಯ ಅದಕ್ಕೆ ಕಿವಿಗೊಡದಾದರು. ತನಗೆ ವಿವಾಹ ಬೇಡ ಎಂದರು. ಜಡ್ಡು ಉಲ್ಬಣಿಸಿದ್ದ ವಿರುಪಾಕ್ಷಯ್ಯನವರು ಊರಿನ ಹಿರಿಯರೂ ಅಧ್ಯಾತ್ಮ ಜೀವಿಗಳೂ ಆಗಿದ್ದ ಶ್ರೀ ಕಿಣಗಿ ಬಸಲಿಂಪ್ಪನವರು ಮತ್ತು ಶ್ರೀ ಗುಡ್ಡದ ವೀರಸಂಗಪ್ಪನವರನ್ನು ಕರೆಸಿ ಲಗ್ನವಾಗುವಂತೆ ಬುದ್ಧಿ ಹೇಳಿಸಿದರೂ ಪ್ರಯೋಜನವಾಗಲಿಲ್ಲ. ‘ನನ್ನನ್ನು ಕ್ಷಮಿಸಿ, ನನ್ನ ಒಳದನಿ ಲಗ್ನವಾಗಲು ಒಪ್ಪುತ್ತಿಲ್ಲ’ ಎಂದು ಹೇಳಿದ ಮೇಲೆ ವಿರುಪಾಕ್ಷಯ್ಯನವರು ಆ ಮಾತುಗಳನ್ನು ಕೇಳಿ ಕೊನೆಯುಸಿರೆಳೆದರು.

ಅವರ ಸಂಸಾರ ಛಿದ್ರವಾಯಿತು. ಇಬ್ಬರೂ ತಾಯಂದಿರು ಬೇರೆ ಬೇರೆ ಇರಹತ್ತಿದರು. ಮಲ್ಲಿಕಾರ್ಜುನಯ್ಯನವರು ಮನೆಬಿಟ್ಟು ಬಾಗಲಕೋಟೆಯ ಬಸವಂತರಾಯ ಸಾಸನೂರ ಇವರ ವಖಾರದಲ್ಲಿಯೇ ಇರುತ್ತಿದ್ದರು. ಒಂದು ದಿನ ಇದ್ದ ನೌಕರಿಯನ್ನು ಬಿಟ್ಟರು.

ಶ್ರೀ ಕಿಣಗಿ ಬಸಲಿಂಗಪ್ಪನವರು ಮತ್ತು ಶ್ರೀ ಗುಡ್ಡದ ವೀರಸಂಗಪ್ಪನವರ ಹತ್ತಿರ ಅಧ್ಯಾತ್ಮಿಕ ಚರ್ಚೆ ಮಾಡುವಲ್ಲಿಯೇ ಹೆಚ್ಚು ಕಾಲ ಕಳೆದುಹೋಗುತ್ತಿತ್ತು.

ಶ್ರಾವಣಮಾಸದ ನಿಮಿತ್ಯ ಪುರಾಣ ಕೇಳುವ ಸಂಪ್ರದಾಯ ಬಾಗಲಕೋಟಯಲ್ಲಿ ಬಹುದಿನಗಳಿಂದ ಇದೆ. ಆ ವರ್ಷದಲ್ಲಿ ಹುನಗುಂದದ ಬಳಿಯಿರುವ ಕೊಡಗಲಿಯ ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳಿಂದ ಶ್ರೀ ಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಪುರಾಣ ಪ್ರಾರಂಭವಾಗಿತ್ತು.

ಮಲ್ಲಿಕಾರ್ಜುನಯ್ಯನವರನ್ನು ನೋಡಿದ ಕೊಡಗಲಿ ಶ್ರೀಗಳು ‘ಧರ್ಮಕಾರ್ಯಕ್ಕಾಗಿ ಹುಟ್ಟಿ ಬಂದು, ವಾರಾಂಗನೆಯರಿಗೆ ಸಂಗೀತ ಹೇಳಿಕೊಡುತ್ತ ಕಾಲಹರಣ ಮಾಡುವದು ಸರಿಯಲ್ಲ’ ಎಂದರು. ಅವರ ಅಧ್ಯಾತ್ಮಿಕ ವಿಚಾರಗಳಿಂದ ಪ್ರೇರಿತನಾದ ಮಲ್ಲಿಕಾರ್ಜುನಯ್ಯನವರು ತಮ್ಮ ಬೆಲೆಬಾಳುವ ವಸ್ತು ಒಡವೆಗಳನ್ನು ಸುಟ್ಟು ಹಾಕಿ, ಕೌಪೀನ ಧರಿಸಿ, ಅವರಿಂದಲೇ ಜಂಗಮದೀಕ್ಷೆಯನ್ನು ಪಡೆದುಕೊಂಡು, ಕಪನಿ. ಬೆತ್ತ, ಜೋಳಿಗೆ, ತಂಬಿಗೆ ಹಿಡಿದುಕೊಂಡು ಜಂಗಮನಾಗಿ ಪರಿವರ್ತಿತರಾದರು. ಮಲ್ಲಿಕಾರ್ಜುನಯ್ಯನವರು “ಮಲ್ಲಣಾರ್ಯರಾಗಿ, ಸಂಗೀತಮಯ ಬಸವಪುರಾಣ ಹೇಳುತ್ತ ಧರ್ಮ ಜಾಗೃತಿಯ ಕಾರ್ಯದಲ್ಲಿ ತೊಡಗಿದರು.

ಇಲಕಲ್ಲಿನ ಪೂಜ್ಯ ಶ್ರೀ ಮಹಾಂತಪ್ಪಗಳಿಗೆ ಬಸವೇಶ್ವರರ ವಚನಗಳೆಂದರೆ ಎಲ್ಲಿಲ್ಲದ ಪ್ರೀತಿ. ‘ಅಪ್ಪನವರ ವಚನಗಳು’ ಎಂದು ಗೌರವದಿಂದ ಕರೆಯುತ್ತಿದ್ದರು. ತಮ್ಮಲ್ಲಿಗೆ ಬಂದ ಮಲ್ಲಣಾರ್ಯರಿಗೆ ವಚನಗಳನ್ನು ಹಾಡಲು ಮತ್ತು ವಿವರಿಸಲು ಶ್ರೀಗಳು ಕೇಳಿಕೊಂಡಾಗ ಅವರ ವೈಖರಿಯನ್ನು ಕಂಡ ಜನರೆಲ್ಲ ಬೆರಗಾದರು.  ವೈರಾಗ್ಯದ ನಡೆ-ನುಡಿಗಳು ಜನಮನ ಸೂರೆಗೊಂಡವು.

ಪೂಜ್ಯ ಶ್ರೀ ವಿಜಯ ಮಹಾಂತೇಶ್ವರ ಸ್ವಾಮಿಗಳ ಅಪ್ಪಣೆಯಂತೆ ಮೂರು ತಿಂಗಳುಗಳ ಕಾಲ ಚಿತ್ತರಗಿಯಲ್ಲಿ ಬಸವ ಪುರಾಣ ನಡೆಯಿತು. ಮುಕ್ತಾಯ ಸಮಾರಂಭಕ್ಕೆ ಶ್ರೀ ವಿಜಯಮಹಾಂತೇಶ್ವರರು, ಶ್ರೀ ಘನಮಠದ ನಾಗಭೂಷಣ ಶಿವಯೋಗಿಗಳು ಮತ್ತು ಮಲ್ಲಣಾರ್ಯರು ಸಂಗಮಿಸಿ, ಮುಕ್ತಾಯ ಸಮಾರಂಭದ ನಂತರ ಹುನಗುಂದದಲ್ಲಿ ಶ್ರೀ ನಾಗರಾಳ ದೊಡ್ಡಪ್ಪನವರನ್ನು ಕಂಡು ಆಶೀರ್ವದಿಸಿದರು.

‘ಬಸವ ಪುರಾಣ ಕೇಳುವದಾದರೆ ಮಲ್ಲಣಾರ್ಯರರಿಂದಲೇ ಕೇಳಬೇಕು’ ಎಂಬ ಮಾತು ಜನಜನಿತವಾಯಿತು.

ವಿದ್ವಾಂಸರು, ಪಂಡಿತರು ಮಲ್ಲಣಾರ್ಯರ ಬೋಧನೆಗಳನ್ನು ಕೇಳಿ, ಅವರ ವೈರಾಗ್ಯದ ನಡೆನುಡಿಗಳನ್ನು ಕಂಡು ಬೆರಗಾದರು.

ಇಂಥ ವೈರಾಗ್ಯನಿಧಿ, ಸಾಮಾಜಿಕ ಕಳಕಳಿಯುಳ್ಳ ಮಲ್ಲಣಾರ್ಯರು ಹಾನಗಲ್ಲ ಮಠಕ್ಕೆ ಬಂದರು.

ಚಿತ್ರ ಸಂಖ್ಯೆ ೫:  ಶ್ರೀ ಮಲ್ಲಣಾರ‍್ಯರು ಮತ್ತು ಪೂಜ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿ ಗಳ ಭೇಟಿಯಾದ  ತೈಲ ಚಿತ್ರ ಕಲಾವಿದರು ನಾಡೋಜ ಶ್ರೀ ವಿ.ಟಿ.ಕಾಳೆ ಶಿವಯೋಗಮಂದಿರ ಚಿತ್ರ ಸಂಗ್ರಹಾಲಯ.

ಸಾಯಂಕಾಲದ ಸಮಯ, ಶ್ರೀ ಗುರು ಕುಮಾರ ಶಿವಯೋಗಿಗಳು ಮಠದಲ್ಲಿ ತೂಗು ಮಂಚದ ಮೇಲೆಕುಳಿತಿದ್ದರು. ಅದನ್ನು ಕಂಡ ಮಲ್ಲಣಾರ್ಯರು ಅಲ್ಲಿಯ ಸೇವಕನನ್ನು ಕುರಿತು, ಸ್ವಾಮಿಗಳಿಗೆ ಕೇಳಿಸುವಂತೆ ಉದ್ದೇಶ ಪೂರ್ವಕವಾಗಿ ‘ಇಲ್ಲಿ ಮಠದ ಸ್ವಾಮಿ ಯಾರಿದ್ದಾರೆ?’ ಎಂದು ಏರು ಧ್ವನಿಯಲ್ಲಿ ಕೇಳಿದರು. ಅದಕ್ಕೆ ಸೇವಕ ‘ಇಲ್ಲಿ ಕುಳಿತಿರುವವರೇ ಸ್ವಾಮಿಗಳು’ ಎಂದು ಮೆಲುದನಿಯಲ್ಲಿ ಹೇಳಿದ. ಮಲ್ಲಣಾರ್ಯ ‘ನೀವೇ ಏನು ಮಠದ ಸ್ವಾಮಿಗಳು?’ ಎಂದು ವಕ್ರವಾಗಿ ಕೇಳಿದಾಗ ‘ಜನ ಎನ್ನುತ್ತಾರೆ’ ಎಂದರು ಶ್ರೀಗಳು. ‘ಅವರು ಮೂರ್ಖರು, ಸಮಾಜ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ತನ್ನನ್ನು ತಾನು ಸಮಾಜಕ್ಕಾಗಿ ತೇದುಕೊಳ್ಳುವವನೇ ನಿಜವಾದ ಸ್ವಾಮಿ. ಮೃಷ್ಟಾನ್ನ ಭೋಜನ ಗೈದು ತೂಗು ಮಂಚದ ಮೇಲೆ ಕುಳಿತುಕೊಳ್ಳುವವರು ಸ್ವಾಮಿಗಳಲ್ಲ, ಎಂದು ಬಿರುಮಾತುಗಳನ್ನಾಡಿದಾಗ, ಹಾನಗಲ್ಲ ಕುಮಾರ ಶ್ರೀಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಯಿತು. ಅವರು ಮಲ್ಲಣಾರ್ಯರ ಮಾತಿಗೆ ಕೋಪಗೊಳ್ಳದೇ ಸತ್ಯ ಯಾವಾಗಲೂ ಕಠೋರ ಎಂಬುದನ್ನು ಅರ್ಥಮಾಡಿಕೊಂಡು, ಎದ್ದು ಬಂದು ಆ ಜಂಗಮ ಮೂರ್ತಿಯನ್ನು ಸಮಾಧಾನಪಡಿಸುತ್ತ, ‘ಇದಕ್ಕಾಗಿ ಮಠಾಧೀಶರು ಏನು ಮಾಡಬೇಕಾಗಿದೆ?’ ಎಂದು ಕೇಳಲಾಗಿ, ಮಲ್ಲಣಾರ್ಯರು ‘ಇಂದು ಸಮಾಜ ಇಂಗ್ಲೀಷ ಪ್ರಭಾವಕ್ಕೆ ಒಳಗಾಗಿ ತಮ್ಮ ಧರ್ಮವನ್ನು ಮರೆಯುತ್ತದೆ. ಇದರಿಂದಾಗಿ ಸಮಾಜ ಅಧೋಗತಿಗೆ ಇಳಿದಿದೆ. ಸಮಾಜ ತಿದ್ದುವದಕ್ಕಾಗಿ ಇಂದು ಸ್ವಾಮಿಗಳು ಮಠದಿಂದ ಹೊರಬರಬೇಕಾಗಿದೆ, ಬಸವಾದಿ ಪ್ರಮಥರು ಹಾಕಿಕೊಟ್ಟ ಮಾರ್ಗವನ್ನು ನೆನಪಿಸಿಕೊಡಬೇಕಾಗಿದೆ’ ಎಂದು ಆವೇಶದಿಂದ ಮಾತನಾಡಿದರು. ಇದರಿಂದ ಹಾನಗಲ್ಲ ಶ್ರೀಗಳು ಜಾಗೃತರಾದರು.

ಸಮಾಜಕ್ಕಾಗಿ ಜಂಗಮರನ್ನು, ಗುರುಗಳನ್ನು ಸಿದ್ಧಪಡಿಸುವ ಒಂದು ಧಾರ್ಮಿಕ ವಿದ್ಯಾಸಂಸ್ಥೆಯ ಅವಶ್ಯಕತೆಯಿದೆ, ಅಂಥ ಒಂದು ಸಂಸ್ಥೆಯನ್ನು ತೆರೆಯಬೇಕು ಎಂಬ ಮಾತನ್ನು ಹೇಳಿ ಹಾನಗಲ್ಲಿನಿಂದ ಮಲ್ಲಣಾರ್ಯರು ನಿರ್ಗಮಿಸಿದರು. ಈ ಮಾತುಗಳ ಪ್ರಭಾವ ಶ್ರೀ ಕುಮಾರ ಶಿವಯೋಗಿಗಳ ಮನದಲ್ಲಿ ಅಚ್ಚಳಿಯದೆ ಮೂಡಿನಿಂತಿತು.. ಈ ಮಹತ್ವದ ವಿಚಾರವೇ ನಂತರ ಬಾಗಲಕೋಟ ಜಿಲ್ಲೆಯ, ಬಾದಾಮಿ ತಾಲೂಕಿನಲ್ಲಿ ಶಿವಯೋಗ ಸಾಧಕರನ್ನು ತರಬೇತಿಗೊಳಿಸುವ ‘ಶಿವಯೋಗ ಮಂದಿರ’ದ ಸ್ಥಾಪನೆಗೆ ಕಾರಣವಾಯಿತು. ವೀರಶೈವ-ಲಿಂಗಾಯತ ಧರ್ಮದ ಬೀಜ-ರೂಪದ ಸಂಸ್ಥೆಯಾಯಿತು.

ಮಲ್ಲಣಾರ್ಯರು ಜಂಗಮನಾಗಿ ಬಿರುಗಾಳಿಯಂತೆ ನಾಡತುಂಬೆಲ ಸಂಚರಿಸುತ್ತ ಬಸವ ಪ್ರವಚನಗಳನ್ನು ನೀಡುತ್ತ ಜನಮನ ಶುದ್ಧೀಕರಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಮಲ್ಲಣಾರ್ಯರು ಯಾವುದೇ ಮಠದಲ್ಲಿ ವಾಸವಿದ್ದರೂ ಆ ಮಠದಲ್ಲಿ ಸಿದ್ಧಪಡಿಸಿದ ಪ್ರಸಾದವನ್ನು ಸ್ವೀಕಾರ ಮಾಡುತ್ತಿರಲಿಲ್ಲ. ಬೆಳಿಗ್ಗೆ ಸ್ನಾನ, ಲಿಂಗ ಪೂಜೆಗಳನ್ನು ಮುಗಿಸಿಕೊಂಡು, ಐದು ಮನೆ ಭಿಕ್ಷೆಗೆ ಹೋಗುತ್ತಿದ್ದರು. ಭಿಕ್ಷೆಗೆಂದು ಬಾಗಿಲಿಗೆ ಬಂದು ನಿಂತ ತಕ್ಷಣ ಭಕ್ತರು ಭಿಕ್ಷೆ ಹಾಕಬೇಕು, ತಡಮಾಡಿದರೆ ಮುಂದೆ ಹೊರಡುತ್ತಿದ್ದರು. ಇಂಥ ಕಠಿಣ ಜಂಗಮ ವೃತ್ತಿ ಪಾಲಿಸಿದವರು. ಭಿಕ್ಷೆ ಬೇಡಿ ತಂದುದನ್ನು ಮಾತ್ರ ಪ್ರಸಾದವಾಗಿ ಸೇವಿಸುತ್ತಿದ್ದರು ಇದು ಜಂಗಮ ವೃತ್ತಿಯ ಮಾದರಿ.

ಮಲ್ಲಣಾರ್ಯರ  ಈ ಬಗೆಯ ಧರ್ಮ ಸುಧಾರಣಾ ಕಾರ್ಯಕ್ಕೆ ಬೆಂಬಲವಾಗಿ ನಿಂತವರು- ಇಲಕಲ್ಲಿನ ಶ್ರೀ ವಿಜಯ ಮಹಾಂತ ಸ್ವಾಮಿಗಳು ಮತ್ತು ಹಾಲಕೆರೆಯ ಶ್ರೀ ಅನ್ನದಾನಿ ಮಹಾಸ್ವಾಮಿಗಳವರು.

ಗಜೇಂದ್ರಗಡದ ವಿರಕ್ತಮಠಕ್ಕೆ ಮಲ್ಲಣಾರ್ಯ ಬಂದಾಗ ಅಲ್ಲಿಯ ಸ್ವಾಮಿಗಳು ಚಿಂತೆಗೊಳಗಾಗಿದ್ದರು. ಕಾರಣ ಕೇಳಿದಾಗ ಆ ಶ್ರೀಗಳು ತಮಗೆ ಶ್ರೀಮಂತ ಭಕ್ತರೊಬ್ಬರು ಸಾವಿರಾರು ರೂಪಾಯಿ ಬೆಲೆ ಬಾಳುವ ಬೆಳ್ಳಿಯ ಬಟ್ಟಲು  ಚೆರಿಗೆ ಮತ್ತು ವಾಟೆ ಕೊಟ್ಟಿದ್ದರು, ಅವುಗಳನ್ನು ಕಳ್ಳರು ತುಡುಗು ಮಾಡಿದ್ದಾರೆ ಎಂದು ಹೇಳಿದರು. ಮಲ್ಲಣಾರ್ಯರು ಇದನ್ನು ಕೇಳಿ ‘ಸ್ವಾಮಿಗಳೇ, ಅದು ತಾವೇನೂ ದುಡಿದು ತಂದದ್ದಲ್ಲ, ಇದ್ದವರು ಕೊಟ್ಟರು, ಇಲ್ಲದವರು ಒಯ್ದರು ಅದಕ್ಕೆ ನಿಮಗೇಕೆ ಚಿಂತೆ?’ ಎಂದು ತಿಳಿಹೇಳಿ, ಅವರು ಹೊಸ ವಿಚಾರಕ್ಕೆ ಬರುವಂತೆ ಮಾಡಲು ಬಸವೇಶ್ವರರ ಮನೆಗೆ ಕಳ್ಳ ಬಂದಾಗ ಬಸವಣ್ಣ ನಡೆದುಕೊಂಡ ರೀತಿಯನ್ನು ಹೇಳಿದಾಗ, ಅದನ್ನು ಕೇಳಿದ ಸ್ವಾಮಿಗಳ ಮನಸ್ಸು ನಿರ್ಮಲವಾಯಿತು.

ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು ಲಿಂಗ ಪೂಜಾ ನಿಷ್ಠರಾಗಿ, ಶಿವ ಸ್ವರೂಪಿಗಳಾಗಿದ್ದವರು. ಅಲ್ಲಿಗೆ ಮಲ್ಲಣಾರ್ಯರು ಬಂದು ‘ಬಸವ ಪ್ರವಚನ’ ಗೈದು ಶಿವಯೋಗಿಗಳಿಗೆ ಆನಂದ ನೀಡಿದರು. ಅವರ ವೈರಾಗ್ಯದ ಮಾತುಗಳು, ಧಾರ್ಮಿಕ ನಡೆ-ನುಡಿಯ ಸತ್ಯತೆಗಳು ಜನ ಮನವನ್ನು ಪರಿವರ್ತಿಸಿದವು. ಮುರುಘೇಂದ್ರ ಶಿವಯೋಗಿ ಗಳು ಮಲ್ಲಣಾರ್ಯರ ಬರುವನ್ನು ಯಾವಾಗಲೂ ಎದುರು ನೋಡುತ್ತಿದ್ದರು.

ಮಲ್ಲಣಾರ್ಯರ ಮಾತುಗಳಲ್ಲಿ ಹೇಳುವದಾದರೆ “ಅಥಣಿ ನನಗೆ ಕಾಶೀ, ಹಾಲಕೆರೆ ರಾಮೇಶ್ವರ, ಇವುಗಳ ದರ್ಶನವಿಲ್ಲದೆ ನನಗೆ ಬದುಕಿಲ್ಲ” ಎನ್ನುತ್ತಿದ್ದರು

ಬಾಗಲಕೋಟೆಯ ಟೀಕಿನಮಠದಲ್ಲಿ ಪ್ರವಚನ ನಡೆದಾಗ ಮಲ್ಲಣಾರ್ಯರು ಅಲ್ಲಿಗೆ ಬಂದರು. ಅಲ್ಲಿ ಅನೇಕ ಹರ ಗುರು ಚರಮೂರ್ತಿಗಳು ವಿರಾಜಮಾನರಾಗಿದ್ದರು. ಮಹಾ ವೈರಾಗ್ಯ ಮೂರ್ತಿಗಳಾಗಿದ್ದ ಬೀಳೂರ ಪೂಜ್ಯ ಶ್ರೀ ನಿ. ಪ್ರ. ಗುರುಬಸವ ಮಹಾಸ್ವಾಮಿಗಳೂ ಅವರ ಮಧ್ಯದಲ್ಲಿದ್ದರು. ‘ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ, ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆ ಮಾಯೆ ಎಂಬ ವಚನವನ್ನು ಪ್ರವಚನಕಾರರು ವಿವರಿಸಿದರು. ಪ್ರವಚನದ ನಂತರ ಮಾತನಾಡಿದ ಮಲ್ಲಣಾರ್ಯರು ಎದ್ದು ಮಾತನಾಡುತ್ತ, ‘ಬೀಳೂರಪ್ಪನವರು ಹೆಣ್ಣಿನ ಮೋಹ ಬಿಟ್ಟರೆ ಹೊರತು, ಮಣ್ಣಿನ ಮೋಹ ಅವರನ್ನು ಬಿಡಲಿಲ್ಲ ಎಂದರುʼ. ಅದಕ್ಕೆ ಶ್ರೀ ಬೀಳೂರ ಗುರುಬಸವ ಮಹಾಸ್ವಾಮಿಗಳು ಕೋಪಗೊಳ್ಳದೆ, ‘ಅದು ನಿಜ, ಆದರೆ ಸಮಾಜದ ಹಿತಕ್ಕಾಗಿ ಕಟ್ಟಡ ಕಾರ್ಯ ಅನಿವಾರ್ಯ’ ಎಂಬ ಮಾತನ್ನು ಹೇಳಿದಾಗ, ಮಲ್ಲಣಾರ್ಯರೂ ತಲೆ ದೂಗಿದರು, ಅವರ ಸಮಾಜ ಪ್ರೇಮವನ್ನು ಕೊಂಡಾಡಿದರು. ಹೀಗೆ ವೈರಾಗ್ಯವೇ ಮೈವೆತ್ತಿ ಬಂದಂತಿದ್ದರು-ಮಲ್ಲಣಾರ್ಯರು. ಜಂಗಮ ಪದಕ್ಕೆ ವ್ಯಾಖ್ಯೆ ಬರೆದಂತಿದ್ದಿತು ಅವರ ನಡೆ-ನುಡಿ, ದಿನಚರಿ,

ಸಾಮಾಜಿಕ, ಧಾರ್ಮಿಕ ಕಳಕಳಿಯ ಚಿಂತಕ ಮಲ್ಲಣಾರ್ಯರು, ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಲ್ಲಿಗೆ ಬಂದು ಹೊಸ ವಿಚಾರ ಸಾದರಪಡಿಸಿದರು. ಹಾನಗಲ್ಲಿನಲ್ಲಿ ಮತ್ತು ಅಬ್ಬಿಗೇರಿಯಲ್ಲಿ ಒಂದು ಸಂಸ್ಕೃತ ಪಾಠಶಾಲೆ ತೆಗೆಯುವ ವಿಚಾರವನ್ನು ಹೇಳಿ ಇಂದು ಜ್ಞಾನ ಕೆಲವೇ ಜನರ ಸೊತ್ತಾಗಿದೆ. ನಮ್ಮವರು ಜ್ಞಾನವಂತರಾಗುವ ಅವಶ್ಯಕತೆಯಿದೆ ಎಂಬ ವಿಚಾರ ತಿಳಿಸಿ, ಶ್ರೀಗಳನ್ನು ಕರೆದುಕೊಂಡು ಅಬ್ಬಿಗೇರಿಗೆ ಬಂದು, ಅಲ್ಲಿಯ ಊರಪ್ರಮುಖರ ಮುಂದೆ ವಿಚಾರವಿಟ್ಟಾಗ ಜನರು ಸಂತಸದಿಂದ ಭೂಮಿ ದಾನ, ಧನದಾನ ಮಾಡಿದರು. ಅಲ್ಲಿ ಸಂಸ್ಕೃತ ಪಾಠಶಾಲೆ ಪ್ರಾರಂಭಗೊಂಡು ೧೯೩೦ ರ ವರೆಗೆ ಉತ್ಕೃಷ್ಟವಾಗಿ ಕಾರ್ಯ ನಿರ್ವಹಿಸಿತು. ಶ್ರೀ ರಂಭಾಪುರಿ ಜಗದ್ಗುರುಗಳು, ಕೊಪ್ಪಳದ ಗವಿಸಿದ್ಧೇಶ್ವರರು, ಕೋಡಿಕೊಪ್ಪದ ಸ್ವಾಮಿಗಳು ಹೀಗೆ ಅನೇಕ ಶ್ರೀಗಳು ಅಬ್ಬಿಗೇರಿಯ ಸಂಸ್ಕೃತ ಪಾಠಶಾಲೆಯಲ್ಲಿಯೇ ಓದಿದವರು. ಹೀಗೆ ಮಲ್ಲಣಾರ್ಯ ಶುಷ್ಕ ಪ್ರವಚನಕಾರನಾಗಿರದೇ, ಕ್ರಿಯಾಶಿಲ ಜಂಗಮನಾಗಿದ್ದರು.

ಮಲ್ಲಣಾರ್ಯರು ನಿರ್ಭಿಡೆಯಿಂದ ಮಾತನಾಡುವ ವ್ಯಕ್ತಿ. ಇಂಥ ಮಾತುಗಳು ಅವರಿಗೆ ಅನೇಕ ಸಲ ಮುಳುವಾಗಿದ್ದುಂಟು. ಮುಂಡರಗಿಯಲ್ಲಿ ಪ್ರವಚನಗೈಯುತ್ತ, ಸ್ವಾಮಿಗಳು ಸಂಪತ್ತಿನ ಬೆನ್ನ ಹಿಂದೆ ಹೋಗಬಾರದು, ಆಡಂಬರದ ಬೆನ್ನು ಹತ್ತಬಾರದು ಎಂಬ ವಿಷಯವಾಗಿ ಬಿರುಸಿನ ಮಾತನಾಡಿದಾಗ ಅನೇಕ ಬಿಸಿ ರಕ್ತದ ಸ್ವಾಮಿಗಳು ಅವರನ್ನು ಥಳಿಸಿದರು, ಇದೇ ಸ್ಥಿತಿ ಅವರು ಗದುಗಿನದಲ್ಲಿಯೂ ಎದುರಿಸಬೇಕಾಯಿತು. ಅದಕ್ಕೆ ಅವರು ಹೆದರುತ್ತಿರಲಿಲ್ಲ, “ಕ್ವಾಟಿ ಮಲ್ಲ ಹಿಂಗ ಇದು, ಬಾಯಿಗೆ ಬಂದದ್ದನ್ನ ಬೊಗಳತೈತಿ, ಚೊಲೋತಂಗ ಹೊಡಿರಿ” ಎನ್ನುತ್ತಿದ್ದರು. ಆದರೆ ತನ್ನ ನಿಷ್ಠುರತನವನ್ನು ಎಂದೂ ಬಿಡಲಿಲ್ಲ. ‘ನ್ಯಾಯನಿಷ್ಠುರಿ ; ದಾಕ್ಷೀಣ್ಯಪರ ನಾನಲ್ಲ’ ಎಂಬ ದೃಢ ಭಾವ!

ತಮ್ಮ ಕಟು ಮಾತುಗಳನ್ನು ತುಂಬಿದ ಸಭೆಯಲ್ಲಿ ಅಂಜಿಕೆಯಿಲ್ಲದೇ ಆಡುತ್ತಿದ್ದರು. ಇದರಿಂದ ಅನೇಕ ಪರಿವರ್ತನೆಗಳೂ ಆದವು. ಲಂಚಕೋರ ತಹಶಿಲ್ದಾರನೊಬ್ಬ ಇವರ ಪ್ರವಚನ ಕೇಳುತ್ತ ಕೇಳುತ್ತ, ಎಲ್ಲರೆದುರಿಗೆ ಪರಿವರ್ತಿತನಾಗಿ, ಇನ್ನು ಲಂಚ ಸ್ವೀಕರಿಸುವದಿಲ್ಲ ಎಂದು ಪ್ರತಿಜ್ಞೆಗೈದ ಘಟನೆಯೂ ಇದೆ.

ಕಾಯಾ ವಾಚಾ ಮನಸಾ ಪರಿಶುದ್ಧರಾಗಿದ್ದ ಮಲ್ಲಣಾರ್ಯರಿಗೆ ಪಂಚಪರುಷ ಸಿದ್ಧಿ ತಾನಾಗಿಯೇ ಲಭಿಸಿತ್ತು. ಅಬ್ಬಿಗೇರಿಯಲ್ಲಿ ಒಬ್ಬ ಮುದುಕಿ ತನಗೆಲ್ಲ ಸಂತಸದ ಬದುಕಿದೆ,  ಇನ್ನು ದೇವರಪಾದ ಸೇರಬೇಕಾಗಿದೆ, ಕರುಣಿಸು ಎಂದಾಗ , ಮಲ್ಲಣಾರ್ಯರು “ಮುಂದಿನ ಸೋಮವಾರ ಚೆನ್ನಾಗಿದೆ” ಎಂದರು. ಆ ಮುದುಕಿಗೆ ಹೇಳಿದ ಸೋಮವಾರದಿನದಂದು ಮುಕ್ತಿಯಾದ ಉದಾಹರಣೆಯಿದೆ.

ಹುಬ್ಬಳ್ಳಿಯ ಶ್ರೀ ಸಿದ್ಧರೂಢರು ಮತ್ತು ಎಮ್ಮಿಗನೂರ ಶ್ರೀ ಜಡೆ ಸಿದ್ಧೇಶ್ವರರೊಂದಿಗೆ ದ್ವೈತ ಅದ್ವೈತ ವಿಚಾರವಾಗಿ ವಾದ ಮಾಡಿದ್ದುಂಟು. ಬಸವಮಾರ್ಗಾನುಯಾಯಿಯಾಗಿದ್ದ ಮಲ್ಲಣಾರ್ಯರಿಗೆ ಎಲ್ಲ ವಾದ ಪ್ರತಿವಾದಗಳಲ್ಲಿ ಹುರುಳಿಲ್ಲ ಎನ್ನಿಸಿದ್ದು ಅಚ್ಚರಿಯೇನಲ್ಲ.

ಮಲ್ಲಣಾರ್ಯರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಹಾನಗಲ್ಲಿಗೆ ಹೋದಾಗ ಶ್ರೀ ಕುಮಾರ ಶಿವಯೋಗಿಗಳಿಗೆ ಇದು ಕೊನೆಯ ಭೇಟಿ ಎಂದು ಹೇಳಿದಾಗ, ಶ್ರೀಗಳ ಕಣ್ಣಂಚಲ್ಲಿ ನೀರು ಹನಿಯಿತು. ಅದೇ ರೀತಿಯಾಗಿ ಕೊನೆಯ ಬಾರಿಗೆ ಎಂಬಂತೆ ಅಥಣಿಯ ಮಠದಲ್ಲಿ ಬಸವ ಪುರಾಣ ಪ್ರವಚನ ಮಾಡಿ, ಇದು ಕೊನೆಯ ಭೇಟಿ ಎಂದು ಶಿವಯೋಗಿಗಳ ಅಪ್ಪಣೆಯನ್ನೂ ಪಡೆದರು.

ಚಿತ್ರ ಸಂಖೈ ೬ : ಪೂಜ್ಯ ಲಿಂ.ಅನ್ನದಾನೇಶ್ವರ ಮಹಾಸ್ಡಾಮಿಗಳು ಹಾಲಕೆರಿ

ಬಾಗಲಕೋಟೆಗೆ ಬಂದ ನಂತರ ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಟ್ಟಿತು. ರಾಚಪ್ಪ ಬಣಗಾರ ಇವರ ವಖಾರದಲ್ಲಿ ಮಲಗಿಕೊಂಡಿದ್ದರು. ಅವರನ್ನು ಭೇಟಿಯಾಗಲು, ಕಿಣಗಿ ಬಸಲಿಂಗಪ್ಪನವರು, ಗುಡ್ಡದ ವೀರಸಂಗಪ್ಪನವರು, ಬಸವಂತಪ್ಪನವರು ಸಾಸನೂರ, ರಾಜಪ್ಪ ರಾಜೂರ, ನಾಶಿ ವೀರಯ್ಯ, ಮೊದಲಾದ ಅನೇಕ ಗಣ್ಯರು ಸೇರಿದ್ದರು. “ಶ್ರೀ ಹಾಲಕೆರೆ ಅನ್ನದಾನೇಶ್ವರ ಸ್ವಾಮಿಗಳ ಪದತಲದಲ್ಲಿ ಪ್ರಾಣಾರ್ಪಣೆಯಾಗಿ, ಮುಕ್ತಿ ಪಡೆಯಬೇಕೆಂಬುದು ಅವರ ಕೊನೆ ಆಶಯವಾಗಿತ್ತು ಅದು ಅಸಾಧ್ಯವೆಂದು ಗಮನಿಸಿದ ಗುಡ್ಡದ ವೀರಸಂಗಪ್ಪನವರು ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿಯ ಸಹಾಯದಿಂದ ಪೂಜ್ಯ ಶ್ರೀ ಹಾಲಕೆರೆ ಅನ್ನದಾನೇಶ್ವರರನ್ನು ನೆನೆ ನೆನೆದು ತಾವು ಮುಕ್ತಾರಾಗಬಹುದೆಂಬ ಉಪಾಯ ಹೇಳಿದಾಗ ಮಲ್ಲಣಾರ್ಯರು ಒಪ್ಪಿ, ದಿನಾಂಕ : ೫-೧೦-೧೯೦೩, ಸೋಮವಾರ ಬೆಳಗಿನ ೫ ಗಂಟೆಗೆ ಲಿಂಗೈಕ್ಯರಾಗಿ ಬಯಲಲ್ಲಿ ಬಯಲಾದರು. ಬಸವ ಬೆಳಗಿನಲ್ಲಿ ಒಂದಾದರು.

ವೈರಾಗ್ಯನಿಧಿ ಮಲ್ಲಣಾರ್ಯರ ಅಂತಿಮ ಯಾತ್ರೆ ಜರುಗಿತು. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಕಣ್ಣೀರು ಗರೆದುದಲ್ಲದೆ ತಮ್ಮ ಪದ್ಯ ರೂಪದ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಅಂತಿಮಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಕೊನೆಗೆ ಬಾಗಲಕೋಟೆಯ ಹೊರಭಾಗದಲ್ಲಿ ಪಶ್ಚಿಮ ದಿಕ್ಕಿನಲ್ಲಿರುವ ಶ್ರೀ ಅಡವೀಸ್ವಾಮಿ ಮಠದ ಆವರಣದಲ್ಲಿ ಅವರ ಅಂತ್ಯಕ್ರಿಯೆ ಜರುಗಿತು. ನಂತರ ಗದ್ದುಗೆಯನ್ನು ನಿರ್ಮಾಣ ಮಾಡಲಾಯಿತು.

ಚಿತ್ರ ಸಂಖ್ಯೆ ೭ : ಶ್ರೀ ಮಲ್ಲಣಾರ್ಯರ ಗದ್ದುಗೆಯು ಅಡವಿಮಠ ಬಾಗಲಕೋಟೆ (ಸದ್ಯ ಮುಳುಗಡೆ ಪ್ರದೇಶದಲ್ಲಿದೆ)

ಮಲ್ಲಣಾರ್ಯರ ಗದ್ದುಗೆಯ ಪ್ರಭಾವಕಂಡವರು ಅನೇಕ ಜನರಿದ್ದಾರೆ. ಮಲ್ಲಣಾರ್ಯರ ಪ್ರಸ್ತಾಪವು ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಪುರಾಣ, ಹಾನಗಲ್ಲ ಗುರುಕುಮಾರ ಶಿವಯೋಗಿಗಳ ಪುರಾಣ, ಶ್ರೀ ಫಲಹಾರೇಶ್ವರ ಪುರಾಣ, ಪೂಜ್ಯ ಶ್ರೀ ಬಿದರಿ ಕುಮಾರ ಸ್ವಾಮಿಗಳ ಪುರಾಣಗಳಲ್ಲಿ, ಮತ್ತು ಶಿವಯೋಗ ಮಂದಿರ ಸ್ಥಾಪನಾ ವರದಿಯಲ್ಲಿ, ಅನೇಕ ಜಾನಪದ ಗೀತೆಗಳಲ್ಲಿ ಕಂಡುಬರುತ್ತದೆ.

ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು ಸಮಾಜೋಧಾರ್ಮಿಕ ಪರಿವರ್ತನೆಯಲ್ಲಿ ಮಹತ್ವದ ಪಾತ್ರವಾಡಿದ್ದು ಒಂದು ಐತಿಹಾಸಿಕ ದಾಖಲೆಯೇ ಸರಿ. ತಮ್ಮ ನಿಷ್ಠುರ ನಡೆ-ನುಡಿಗೆ ಹೆಸರಾದ ಜಂಗಮ ಪುಂಗವರಾಗಿ ಧ್ರುವ ನಕ್ಷತ್ರದಂತೆ ಚಿರಸ್ಥಾಯಿಯಾಗಿ ಎಂದಿಗೂ ವೀರಶೈವ-ಲಿಂಗಾಯತ ಧರ್ಮಾಕಾಶದಲ್ಲಿ ಮಿನುಗುತ್ತಿರುವರು.

(ಕೃಪೆ :  ಪಿ.ವಾಯ್. ಗಿರಿಸಾಗರ ವಿರಚಿತ ‘ಬಾಗಿಲುಕೋಟೆಯ ಮಲ್ಲಣಾರ‍್ಯರು’ ಪುಸ್ತಕ. ಅನಾಮಿಕ ಪ್ರಕಾಶನ, ಚರಂತಿಮಠ,  ಬಾಗಲಕೋಟೆ ೧೯೯೩ )

ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

          ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ ಬೆಳಗಿದ ಪುಣ್ಯಪುರುಷರಲ್ಲಿ ಶಿರಸಂಗಿ ಲಿಂಗರಾಜರು ಅಗ್ರಗಣ್ಯರು.  ಶಿರಸಂಗಿ-ನವಲಗುಂದ ಸಂಸ್ಥಾನದ ಅಧಿಪತಿಯಾಗಿದ್ದ ಅವರು ಜನಕಲ್ಯಾಣದ ಕಾರ್ಯಗಳನ್ನು ಕೈಕೊಂಡು ಅತ್ಯಂತ ಜನಾನುರಾಗಿಯಾಗಿದ್ದರು.  ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅವರು ವಸಂತದ ಗಾಳಿಯಂತೆ ಸುಳಿದು ಅಜ್ಞಾನ-ದಾರಿದ್ರ್ಯದಲ್ಲಿ ಮೈಮರೆತು ಮಲಗಿದ್ದ ಸಮಾಜವನ್ನು ಎಚ್ಚರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.  ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಅರಟಾಳ ರುದ್ರಗೌಡರು, ಗಿಲಗಂಚಿ ಗುರುಸಿದ್ಧಪ್ಪನವರು, ವಾರದ ಮಲ್ಲಪ್ಪನವರು ಹಾಗು ಹಳಕಟ್ಟಿ ಗುರುಬಸಪ್ಪನವರೇ ಮುಂತಾದ ಗಣ್ಯವ್ಯಕ್ತಿಗಳ ಹೆಗಲಿಗೆ ಹೆಗಲುಕೊಟ್ಟು ಸಮಾಜವನ್ನು ಮುನ್ನಡೆಸಿದ ಕೀರ್ತಿಶಾಲಿಗಳು ತ್ಯಾಗವೀರ ಶಿರಸಂಗಿ ಲಿಂಗರಾಜರು.

          ಇಂದಿನ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಮಡ್ಲಿ ಗೂಳಪ್ಪ ಹಾಗು ಎಲ್ಲಮ್ಮ ದಂಪತಿಗಳ ಸುಪುತ್ರನಾಗಿ ೧೮೬೧ರ ಜನೇವರಿ ೧೦ ರಂದು ಜನಿಸಿದ ಲಿಂಗರಾಜರು ಶಿರಸಂಗಿ ಮತ್ತು ನವಲಗುಂದ ಸಂಸ್ಥಾನದ ದತ್ತುಪುತ್ರನಾದುದು ಯೋಗಾಯೋಗ.  ಆಗ ಅವರಿಗೆ ಕೇವಲ ೧೧ರ ಹರೆಯ.  ಕೊಲ್ಲಾಪುರದಲ್ಲಿದ್ದು ಪ್ರಾಥಮಿಕ ಇಂಗ್ಲೀಷ್ ಶಿಕ್ಷಣವನ್ನು ಪೂರ್ಣಗೊಳಿಸುವ ಪೂರ್ವದಲ್ಲಿಯೇ ದತ್ತು ತಾಯಿ ಗಂಗಾಬಾಯಿಯವರು ಲಿಂಗೈಕ್ಯರಾದುದು ಲಿಂಗರಾಜರಿಗೆ ಬರಸಿಡಿಲೆರಗಿದಂತಾಯಿತು. ಆಗ ಶಿಕ್ಷಣವನ್ನು ಪೂರ್ಣಗೊಳಿಸುವುದೊತ್ತಟ್ಟಿಗಿರಲಿ ಇನ್ನೋರ್ವ ದತ್ತಕ ತಾಯಿ ಉಮಾಬಾಯಿಯವರಿಂದ ಅನೇಕ ತೊಂದರೆಗಳನ್ನು ಲಿಂಗರಾಜರು ಎದುರಿಸಬೇಕಾಗಿ ಬಂದಿತು.  ಕೋರ್ಟುಕಚೇರಿಗಳಿಗೆ ಸುತ್ತಿ ಬೆಂದು ಬಸವಳಿದಿದ್ದ ಅವರಿಗೆ ಮುಂಬಯಿ ನ್ಯಾಯಾಲಯವು ಕ್ರಿ.ಶ. ೧೮೮೧ರಲ್ಲಿ ಶಿರಸಂಗಿ-ನವಲಗುಂದ ಸಂಸ್ಥಾನದ ನಿಜವಾರಸುದಾರರೆಂದು ತೀರ್ಪು ನೀಡಿದಾಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.  ಕೋರ್ಟಿನಲ್ಲಿ ಜಯಶಾಲಿಯಾದ ನಂತರ ತನ್ನನ್ನು ಅತಿಯಾಗಿ ಕಾಡಿದ ದತ್ತು ತಾಯಿ ಉಮಾಬಾಯಿಯವರನ್ನೂ ಕೂಡ ಅತ್ಯಂತ ಗೌರವದಿಂದ ಕಂಡು ಅವರ ಯೋಗಕ್ಷೇಮವನ್ನು ನೋಡಿಕೊಂಡ ದಯಾರ್ದ್ರ ಹೃದಯಿಗಳು ಲಿಂಗರಾಜರು.

          ಕೋರ್ಟು-ಕಚೇರಿಗಳ ಗೊಂದಲದಲ್ಲಿ ಅರ್ಥಿಕವಾಗಿ ದಯನೀಯ ಸ್ಥಿತಿಗೆ ತಲುಪಿದ್ದ ಶಿರಸಂಗಿ ಸಂಸ್ಥಾನದ ಆದಾಯವನ್ನು ಹೆಚ್ಚಿಸುವಲ್ಲಿ ಲಿಂಗರಾಜರು ಬಹುವಾಗಿ ಶ್ರಮಿಸಿದರು.  ಆ ಕಾಲದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಅವರು ಕೃಷಿ ಆದಾಯವನ್ನು ಹೆಚ್ಚಿಸುವುದಲ್ಲದೆ ಇತರ ರೈತರಿಗೆ ಮಾದರಿಯಾದರು.  ಹಾಗೆಯೇ ಇದೇ ರೀತಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ಅವರು ರೈತರಿಗೆ ನೆರವಾದರು.  ಕ್ರಿ.ಶ. ೧೮೯೬ ರಲ್ಲಿ ಮಳೆಯಾಗದೇ ಜನ ಕಂಗಾಲಾಗಿರುವುದನ್ನು ಗಮನಿಸಿದ ಅವರು ಮುಂದೆಯೂ ಜನರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಅಲ್ಲಲ್ಲಿ ಕೆರೆ ಕಾಲುವೆಗಳನ್ನು ನಿರ್ಮಿಸಿ ಜನರಿಗೆಲ್ಲ ಅನುಕೂಲ ಕಲ್ಪಿಸಿಕೊಟ್ಟರು.  ನವಲಗುಂದ ಭಾಗದಲ್ಲಿ ಅವರು ಕಟ್ಟಿದ ಕೆರೆ ಕಾಲುವೆಗಳು ಇಂದಿಗೂ ಜನರ ಜೀವನಾಡಿಯಾಗಿರುವುದನ್ನು ಕಾಣಬಹುದಾಗಿದೆ.

          ಲಿಂಗರಾಜರ ಕೌಟುಂಬಿಕ ಜೀವನ ಸುಖಮಯವಾಗಿರಲಿಲ್ಲ.  ಆದರೂ ಅದಕ್ಕಾಗಿ ಅವರೆಂದೂ ಚಿಂತಿಸಲಿಲ್ಲ.  ಲಿಂ.  ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಮಾರ್ಗದರ್ಶನ ಹಾಗು ಅರಟಾಳ ರುದ್ರಗೌಡರ ಸಹಾಯ ಸಹಕಾರದಿಂದ ಜನಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.  ಅವರ ಜನಪರ ಕಾಳಜಿ, ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಗಳು ಬ್ರಿಟಿಷ ಆಳರಸರ ಗಮನ ಸೆಳೆದವು.  ಸರಕಾರ ಅವರಿಗೆ ವಿಶೇಷ ಗೌರವವನ್ನು ನೀಡಿ ಸನ್ಮಾನಿಸಿತು.  ಇದಕ್ಕೆ ನಿದರ್ಶನವೆಂಬಂತೆ  ಕ್ರಿ.ಶ. ೧೯೦೧ರಲ್ಲಿ ಎಡ್ವರ್ಡ ಚಕ್ರವರ್ತಿಯ ಸಿಂಹಾಸನಾರೋಹಣದ ನಿಮಿತ್ತ ಜರುಗಿದ ಸಮಾರಂಭಕ್ಕೆ ಸರಕಾರದ ಪ್ರತಿನಿಧಿಯಾಗಿ ಲಿಂಗರಾಜರು ದಿಲ್ಲಿಗೆ ಹೋಗಿ ಬಂದರು.  ಹಾಗೆಯೇ ಸರಕಾರದ ಹತ್ತುಹಲವು ಕಾರ್ಯಕ್ರಮಗಳಲ್ಲಿ ಸದಸ್ಯರಾಗಿ, ಅತಿಥಿಗಳಾಗಿ ಭಾಗವಹಿಸಿದ ಗೌರವಕ್ಕೆ ಅವರು ಪಾತ್ರರಾದರು.

          ಲಿಂಗಾಯತ ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಆ ಕಾಲದ ಹಿರಿಯರ ನೆರವಿನಿಂದ ಕ್ರಿ. ಶ. ೧೯೦೪ರಲ್ಲಿ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿ ಲಿಂಗರಾಜರು ಮಾಡಿದ ಭಾಷಣವು ಇಡೀ ಸಮಾಜದ ಅಭಿವೃದ್ಧಿಯ ದಿಕ್ಸೂಚಿಯಾಗಿತ್ತು.  ಬೆಂಗಳೂರಿನಲ್ಲಿ ಜರುಗಿದ ದ್ವಿತೀಯ ಅಧಿವೇಶನಕ್ಕೂ ಅವರೇ ಅಧ್ಯಕ್ಷರಾಗಿದ್ದರು.  ಅವರು ತಮ್ಮ ಅಧ್ಯಕ್ಷೀಯ ಭಾಷಣಗಳಲ್ಲಿ ಶಿಕ್ಷಣ, ಕೃಷಿ, ಉದ್ಯೋಗ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿದರು.  ಹಾಗೆಯೇ ಬಾಲ್ಯವಿವಾಹ, ವರದಕ್ಷಿಣೆಯಂತಹ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಲು ಕರೆ ನೀಡಿದರು.  ಅದರ ಪರಿಣಾಮವಾಗಿ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು.  ಅಲ್ಲಲ್ಲಿ ಶಾಲೆ-ಕಾಲೇಜುಗಳು, ಮಠ-ಮಂದಿರಗಳಲ್ಲಿ ಪ್ರಸಾದ ನಿಲಯಗಳು ಪ್ರಾರಂಭಗೊಳ್ಳುವುದಕ್ಕೆ ಅವರ ಮಾತುಗಳು ಪ್ರೇರಕಶಕ್ತಿಯಾದವು.

          ಕ್ರಿ.ಶ. ೧೯೦೬ರಲ್ಲಿ ಲಿಂಗರಾಜರ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದನ್ನು ಗಮನಿಸಿದ ಅವರ ಅಭಿಮಾನಿಗಳು ದತ್ತಕ ಪುತ್ರನನ್ನು ತೆಗೆದುಕೊಂಡು ಸಂಸ್ಥಾನವನ್ನು ಮುಂದುವರೆಸಬೇಕೆಂದು ಸಲಹೆ ನೀಡಿದರು.  ಆದರೆ ಅದಾಗಲೇ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದ  ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಹಾಗು ಅರಟಾಳ ರುದ್ರಗೌಡರ ಮಾರ್ಗದರ್ಶನ ಪಡೆದ ಅವರು ಗುಪ್ತವಾಗಿ ಮೃತ್ಯು ಪತ್ರವನ್ನು ಬರೆದು ಬೆಳಗಾವಿಯ ಜಿಲ್ಲಾಧಿಕಾರಿಯ ಕೈಗಿತ್ತು ಕ್ರಿ.ಶ. ೧೯೦೬ರ ಅಗಸ್ಟ ೨೩, ಗಣೇಶ ಚೌತಿಯಂದು ಲಿಂಗೈಕ್ಯರಾದರು.  ನವಲಗುಂದದಲ್ಲಿ ಅವರ ಸಮಾಧಿ ಕಾರ್ಯವನ್ನು ಪೂರೈಸಿದ ೨ ದಿನಗಳ ನಂತರ ಜಿಲ್ಲಾಧಿಕಾರಿಗಳು ಮೃತ್ಯುಪತ್ರವನ್ನು ಹೊರತೆಗೆದು ಓದಿದಾಗ ಅವರಿಗೆ ಆಶ್ಚರ್ಯ ಕಾದಿತ್ತು.  ಲಿಂಗರಾಜರು ತಮ್ಮ ಸಂಸ್ಥಾನದ ಸಮಸ್ತ ಸ್ಥಾವರ ಮತ್ತು ಜಂಗಮ ಆಸ್ತಿಯನ್ನು ಸಮಾಜದ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬಳಸಬೇಕೆಂದೂ, ಬೆಳಗಾವಿ ಜಿಲ್ಲಾಧಿಕಾರಿ [ಕಲೆಕ್ಟರ್]ಯ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಮಾಡಿ ಸಮಸ್ತ ಆಸ್ತಿಯನ್ನು ಅದರ  ಅಧೀನಕ್ಕೆ ಒಳಪಡಿಸಬೇಕೆಂದೂ ಮೃತ್ಯುಪತ್ರದಲ್ಲಿ ಬರೆದಿದ್ದರು.  ಆಶೆ-ಆಮಿಷಗಳಿಗಾಗಿ, ಹೆಂಡರು ಮಕ್ಕಳಿಗಾಗಿ ಕುದಿವ  ಕೋಟಿ ಕೋಟಿ ಜನರಿರುವ ಈ ಪ್ರಪಂಚದಲ್ಲಿ ಬಡಮಕ್ಕಳಲ್ಲಿ ಭಗವಂತನನ್ನು ಕಂಡ ಲಿಂಗರಾಜರಂಥ ತ್ಯಾಗಜೀವಿಗಳು ಅಪರೂಪವೆಂಬ ಮಾತು ಜಗತ್ತಿಗೆ ಗೋಚರಿಸಿತು.  ಇಂತಹ ದಾನ ಪರಂಪರೆಗೆ ಕಾರಣರಾದ ಅವರು ಇತಿಹಾಸದಲ್ಲಿ ಅಮರರಾದರು; ತ್ಯಾಗಿಗಳಲ್ಲಿಯೇ ವೀರರಾಗಿ ತ್ಯಾಗವೀರರೆನಿಸಿದರು.

          ಶಿರಸಂಗಿ ಲಿಂಗರಾಜರು ಬರೆದಿಟ್ಟ ಈ ಮೃತ್ಯುಪತ್ರವನ್ನು ಪ್ರಶ್ನಿಸಿ ಅವರ ಧರ್ಮಪತ್ನಿ ಸುಂದರಾಬಾಯಿ ಅವರು ಹಾನಗಲ್ಲ ಕುಮಾರ ಸ್ವಾಮಿಗಳನ್ನು, ಅರಟಾಳ ರುದ್ರಗೌಡರನ್ನು ಹಾಗು ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಎದುರು ಪಕ್ಷಗಾರರನ್ನಾಗಿಸಿ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದರು.  ಸತತ ೧೩ ವರ್ಷಗಳವರೆಗೆ ನಡೆದ ಈ ವ್ಯಾಜ್ಯವು ಕ್ರಿ.ಶ. ೧೯೧೯ರಲ್ಲಿ ಕೊನೆಗೊಂಡು ಲಿಂಗರಾಜರು ಬರೆದ ಮೃತ್ಯುಪತ್ರವು ನ್ಯಾಯಸಮ್ಮತವಾಗಿದೆ ಎಂಬ ನಿರ್ಣಯ ಹೊರಬಂದಿತು.  ಅಂದಿನಿಂದ ಇಂದಿನವರೆಗೆ ಸಹಸ್ರ ಸಹಸ್ರ ಸಂಖ್ಯೆಯ ಬಡಮಕ್ಕಳು ಶಿರಸಂಗಿ ಟ್ರಸ್ಟಿನ ನೆರವಿನಿಂದ ಉನ್ನತ ಶಿಕ್ಷಣ ಪಡೆದಿದ್ದಾರೆ; ಪಡೆಯುತ್ತಿದ್ದಾರೆ.  ಡಾ. ಡಿ. ಸಿ. ಪಾವಟೆ,  ಪ್ರೊ. ಶಿ. ಶಿ. ಬಸವನಾಳ, ಪ್ರೊ. ಎಮ್. ಆರ್. ಸಾಖರೆ, ಡಾ. ಎಸ್. ಸಿ. ನಂದೀಮಠ, ಡಾ. ಎಮ್. ಸಿ. ಮೋದಿ ಅವರಂಥ ಗಣ್ಯಾತಿಗಣ್ಯರು ಉನ್ನತ ಶಿಕ್ಷಣ ಪಡೆಯುವಲ್ಲಿ ಶಿರಸಂಗಿ ಟ್ರಸ್ಟಿನ ಪಾತ್ರ ಗಮನಾರ್ಹವಾಗಿದೆ.

          ಇತ್ತೀಚೆಗೆ ಶತಮಾನೋತ್ಸವವನ್ನು ಆಚರಿಸಿಕೊಂಡ ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯಾದಿಯಾಗಿ ಅನೇಕ ಶಿಕ್ಷಣ ಸಂಸ್ಥೆಗಳು ತ್ಯಾಗವೀರ ಲಿಂಗರಾಜರ ಹಾಗು ಯುಗಪುರುಷ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಸಹಾಯ-ಸಹಕಾರ, ಪ್ರೇರಣೆ-ಪ್ರೋತ್ಸಾಹಗಳಿಂದ ಸ್ಥಾಪನೆಯಾಗಿರುವಲ್ಲಿ ಎರಡು ಮಾತಿಲ್ಲ.  ಅವರು ಸಮಾಜದಲ್ಲಿ ಚಳುವಳಿಯೋಪಾದಿಯಲ್ಲಿ ನಡೆಸಿದ ವಿದ್ಯಾಭಿವೃದ್ಧಿಯ ಚಿಂತನ ಮಂಥನಗಳ ಪರಿಣಾಮವೇ ಅವುಗಳ ಸ್ಥಾಪನೆಗೆ ಬಲ ನೀಡಿತು.  ಹೀಗೆ ಸಮಾಜಕ್ಕಾಗಿ, ವಿದ್ಯೆಯ ಅಭಿವೃದ್ಧಿಗಾಗಿ ಸರ್ವಸ್ವವನ್ನು ತ್ಯಾಗಮಾಡಿದ ಶಿರಸಂಗಿಯ ಲಿಂಗರಾಜರು ಸದಾ ಸ್ಮರಣೀಯರಾಗಿದ್ದಾರೆ.  ‘ ನಿಮ್ಮ ನೆನಹಾದಾಗಲೇ ಉದಯ, ಮರೆದಾಗಲೇ ಅಸ್ತಮಾನ’ ಎನ್ನುವಂತೆ ಇಂತಹ ಪುಣ್ಯಪುರುಷರನ್ನು ಸದಾ ಸ್ಮರಿಸುವುದೇ ಸಮಾಜದ ಭಾಗ್ಯೋದಯವಾಗಿದೆ.

• ಪ್ರೊ. ಎಸ್. ಎಸ್. ಭೂಸನೂರಮಠ

(ಪ್ರೊ. ಸಂ. ಶಿ. ಭೂಸನೂರಮಠ (ನವೆಂಬರ್ ೭, ೧೯೧೦ – ನವೆಂಬರ್ ೬, ೧೯೯೧) ಕನ್ನಡ ಸಾಹಿತ್ಯಲೋಕದ ಮಹಾನ್ ಸಾಹಿತಿಗಳಲ್ಲೊಬ್ಬರು. ಅವರ ‘ಶೂನ್ಯ ಸಂಪಾದನೆಯ ಪರಾಮರ್ಶೆ’ ಮತ್ತು ‘ಭವ್ಯ ಮಾನವ’ ಮುಂತಾದ ಕೃತಿಗಳು ಕನ್ನಡದ ಶ್ರೇಷ್ಠ ಸಾಹಿತ್ಯಕ ಕೊಡುಗೆಗಳೆನಿಸಿವೆ. ಪ್ರೊ. ಸಂ. ಶಿ. ಭೂಸನೂರಮಠರು ಹುಟ್ಟಿದ್ದು ನವಂಬರ್ ೭, ೧೯೧೦ರಂದು ಧಾರವಾಡ ಜಿಲ್ಲಾ ರೋಣ ತಾಲ್ಲೂಕಿನ ನಿಡಗುಂದಿಯಲ್ಲಿ ಜನಿಸಿದರು. ಪೂರ್ಣ ಹೆಸರು ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ.

ತಂದೆಯವರ ಅಲ್ಪ ಸ್ವಲ್ಪ ಕೃಷಿ ಮತ್ತು ವ್ಯಾಪಾರಗಳಿಂದ ಹೊಟ್ಟೆಪಾಡು ನಡೆಯುತ್ತಿತ್ತು. ಆದರೆ ಶಿಕ್ಷಣಕ್ಕೆ ಹಣದ ಅಭಾವ. ಬಾಲಕ ಸಂಗಯ್ಯ ಗದಗಿನಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ಪಂಪ್ ಒತ್ತುವ ಕೆಲಸ ಗಿಟ್ಟಿಸಿಕೊಂಡ. ಅದರಿಂದ ತುತ್ತಿನ ಚೀಲಕ್ಕೆ ತಾತ್ಕಾಲಿಕ ತ್ತೃಪ್ತಿಯೇನೋ ಸಿಕ್ಕಿತು. ಆದರೆ ಮನಸ್ಸಿಗೆ, ಬುದ್ಧಿಗೆ ನೆಮ್ಮದಿ ದೊರೆಯಲಿಲ್ಲ. ಕಲಿಯಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದ ಆ ಬಾಲಕನಿಗೆ ದೈವ, ಮಾನವ ರೂಪದಲ್ಲಿ ಬಂದು ನೆರವಾಯಿತು. ಗದಗಿನಲ್ಲಿ ಇಂಗ್ಲೀಷ್ ಶಾಲೆಯಲ್ಲಿ ಅಧ್ಯಯನ ಮತ್ತು ಮನೆಯಲ್ಲಿ ಸಂಗೀತ ಶಿಕ್ಷಣ ಎರಡೂ ಕ್ರಮವಾಗಿ ನಡೆದವು. ಓದುತ್ತಿರುವಾಗಲೇ ಮದುವೆಯೂ ಆಯಿತು. ೧೯೩೧ರಲ್ಲಿ ಮೆಟ್ರಿಕ್ ಮುಗಿಯುವ ವೇಳೆಗೆ ತಂದೆ ತೀರಿಕೊಂಡರು. ಕುಂಟುತ್ತಾ ನಡೆದಿದ್ದ ಶಿಕ್ಷಣಕ್ಕೆ ಸೊಂಟ ಮುರಿದಂತಾಯಿತು. ಆದರೂ ಪ್ರತಿಭಾವಂತ ವೇತನ ದೊರೆಯಿತು. ಎ. ಟಿ. ಸಾಸನೂರ, ಪತ್ರಾವಳಿ, ಸ.ಸ. ಮಾಳವಾಡ, ಕೆ.ಜಿ. ಕುಂದಣಕರ ಮೊದಲಾದ ಗುರುಗಳ ಕೃಪೆ ಮತ್ತು ಆಶೀರ್ವಾದಗಳ ಬೆಂಬಲದಿಂದ ಬಿ.ಎ ಮುಗಿಸಿ ಕೊಲ್ಲಾಪುರದ ಕಾಲೇಜಿಗೆ ಸೇರಿ, ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಗಳಿಸಿದರು.

ಬೆಳಗಾವಿಯ ಲಿಂಗರಾಜಾ ಕಾಲೇಜು, ಮತ್ತು ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದ ಭೂಸನೂರಮಠರು.ಇಪ್ಪತ್ತು ಮೂರು ವರ್ಷಗಳವರೆಗೆ ಲಿಂಗರಾಜಾ ಕಾಲೇಜಿನಲ್ಲಿ ಸೇವೆಸಲ್ಲಿಸಿ ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾದರು. ೧೯೭೬ರಲ್ಲಿ ನಿವೃತ್ತಿ ಹೊಂದಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಂತಹ ಅನೇಕ ಗೌರವಗಳು ಪ್ರೊ.ಭೂಸನೂರಮಠ ಅವರಿಗೆ ಸಂದಿವೆ

ತಮ್ಮ ಸರಳತೆ, ಸಜ್ಜನಿಕೆ, ಸ್ನೇಹಪರತೆ ಮತ್ತು ಸಾತ್ವಿಕ ನಡೆನುಡಿಗಳಿಂದಾಗಿ ಶಿಷ್ಯರು, ಗೆಳೆಯರಿಗೆಲ್ಲ ಆತ್ಮೀಯರಾಗಿದ್ದು ಶ್ರೀಯುತರು ತುಂಬು ಸಾರ್ಥಕ ಜೀವನ ನಡೆಸಿ 6-11-1991ರಂದು, ಧಾರವಾಡದ ಪ್ರಶಾಂತ ಪರಿಸರದಲ್ಲಿರುವ ತಮ್ಮ ಮನೆ ಪರಂಜ್ಯೋತಿಯಲ್ಲಿ ಶಿವೈಕ್ಯರಾದರು)

ನಮ್ಮೂರು ನಿಡಗುಂದಿ, ರೋಣ ತಾಲೂಕು, ಜಿಲ್ಲೆ ಧಾರವಾಡ. ನಮ್ಮೂರಿನಿಂದ ಸುಮಾರು ಮೂರುಮೈಲು ದೂರ ಹಾಳಕೇರಿ ಅಥವಾ ಹಾಲಕೆರೆ, ಇದೂ ರೋಣ ತಾಲೂಕಿನಲ್ಲಿರುವ ಗ್ರಾಮವೇ. ಜನಸಂಖ್ಯೆಯ ದೃಷ್ಟಿಯಿಂದ ನಮ್ಮೂರು ದೊಡ್ಡದಾದರೂ, ನಮ್ಮ ಭಾಗಕ್ಕೆ ಪುಣ್ಯಕ್ಷೇತ್ರವೆನಿಸಿಕೊಂಡಿರುವ ಹಾಳಕೇರಿ. ಊರು ಸಣ್ಣದಾದರೂ ಪಾವನ ಭಾವದ  ದೃಷ್ಟಿಯಿಂದ ಬಹಳ ದೊಡ್ಡದು. ಏಕೆಂದರೆ ಇಂದಿಗೂ ಹಾಳಕೇರಿ ಎಂಬ ಹೆಸರು ನೆನಪಾದರೆ ಏನೋ ಒಂದು ಬಗೆಯ ಪವಿತ್ರ ಭಾವನೆ, ಒಂದು ಪುಣ್ಯಕ್ಷೇತ್ರದ ಮಂಗಲ ವಾತಾವರಣ ಹೃದಯವನ್ನು ಅವತರಿಸಿದಂತಾಗುತ್ತದೆ. ಈ ಭಾವನೆ ತರ್ಕಕ್ಕೆ ನ್ಯಾಯಕ್ಕೆ ಒಳಗಾಗುವಂತಿಲ್ಲ ತನಗೆ ತಾವೇ ಸಾಕ್ಷಿ.

ಇಂಥ ಪ್ರಭಾವಲಯ ಹಾಳಕೇರಿಯ ಬಗೆಗೆ ಇರಲು ಕಾರಣವೇನು ? ಕಾಶಿ, ಕೇದಾರ, ಹಂಪೆ, ಕೂಡಲಸಂಗಮ ಮುಂತಾದ ಪುಣ್ಯಕ್ಷೇತ್ರ ತೀರ್ಥಗಳ ಹೆಸರಿನಲ್ಲಿ ಸುತ್ತುಗಟ್ಟಿಕೊಂಡಿರುವ ಕಾರಣವೇನು ? ಅಲ್ಲಲ್ಲಿರುವ ಸ್ಥಾವರಲಿಂಗಗಳು, ವಿಶ್ವನಾಥ, ಬದರೀನಾಥ, ವಿರೂಪಾಕ್ಷ, ಸಂಗಮೇಶ್ವರ ದೇವತೆಗಳಿರುವ ಸ್ಥಳಗಳೆಂದೇ ಈ ಹೆಸರುಗಳಲ್ಲಿ ಒಂದುಬಗೆಯ ಮನೋನೈರ್ಮಲ್ಯವನ್ನುಂಟುಮಾಡುವ ಅಂತಃಶಕ್ತಿ ಇದೆ. ಇಂದಿಗೆ ಸುಮಾರು ಹನ್ನೆರಡು ವರ್ಷಗಳ ಹಿಂದೆ ಲಿಂಗೈಕ್ಯರಾದ ಶ್ರೀಗುರು ಅನ್ನದಾನಿ ಮಹಾಸ್ವಾಮಿಗಳವರು ಹಾಳಕೇರಿಯಲ್ಲಿ ತಮ್ಮ ಶಿವಪೂಜೆ ಶಿವಯೋಗ ತಪಸ್ಸು ಅನುಷ್ಠಾನ ಮಾಡಿರುವ ಪರಿಣಾಮವಾಗಿ ಹಾಳಕೇರಿಗೆ ಒಂದು ವಿಶಿಷ್ಟ ಸ್ಥಾನದ ಮಹತ್ವ ಬಂದಿದೆ.

ಈ ಪುಣ್ಯಕ್ಷೇತ್ರಕ್ಕೆ ಮೂಲವಾದ ಇನ್ನೂ ಪೂರ್ವದ ಪುಣ್ಯದ ಇತಿಹಾಸವಿದೆ. ಶ್ರೀಗುರು ಅನ್ನದಾನೀಶ್ವರ ಮಹಾಸ್ವಾಮಿಗಳವರ ಗುರುಗಳು ಈ ಮಠದ ಹಿಂದಿನ ಪೀಠಾಧಿಪತಿಗಳು. ಇವರು ಅತ್ಯಂತ ಪ್ರಭಾವಶಾಲಿಗಳು; ಮಹಿಮಾಪುರುಷರು. ಈ ಮಠಕ್ಕೆ ಒಂದು ಮಹೋಜ್ವಲತೆಯನ್ನು ತಂದುಕೊಟ್ಟವರು. ಇವರನ್ನು ಕುರಿತು ದ್ಯಾಂಪುರದ ಚೆನ್ನಕವಿಗಳು ರಚಿಸಿದ ಅನ್ನದಾನೀಶ್ವರ ಮಹಾಪುರಾಣವೇ ಈ ಮಾತಿಗೆ ಸಾಕ್ಷಿಯಾಗಿ ನಿಂತಿದೆ.

ಶ್ರೀಗುರು ಅಥವಾ ಗುರು ಅನ್ನದಾನಿ ಮಹಾಸ್ವಾಮಿಗಳವರನ್ನು ಕುರಿತು ನನ್ನ ಭಾವನೆಗಳನ್ನು ಹೇಳಿಕೊಳ್ಳುವುದಕ್ಕಿಂತ ಮೊದಲು, ಪುರಾಣ ಪುರುಷರಾದ ಅನ್ನದಾನಿ ಮಹಾಸ್ವಾಮಿಗಳವರ ಬಗೆಗೆ ಒಂದೆರಡು ಮಾತು ಬಹುಮಟ್ಟಿಗೆ ಈ ಮೂಲ ಪುರುಷರ ಬಗೆಗೆ ನನಗೆ ಕೇಳಿ ಆಷ್ಟೇ ಗೊತ್ತು. ಇವರು ೧೯೧೩ರಲ್ಲಿ ಲಿಂಗೈಕ್ಯರಾದಾಗ ಅವರ ಸಮಾಧಿ ಮಾಡಲು ಬಂದ ಭಕ್ತರ ಸಂಖ್ಯೆ ವಿಪರೀತವೆಂದು ಹೇಳುತ್ತಾರೆ, ಎಂಟು ಹತ್ತು ಹಾಳಕೆರೆ ಜಾತ್ರೆಗಳಿಗೆ ಕೂಡಬೇಕಾದ ಜನಸಂಖ್ಯೆ ಅವರ ಸಮಾಧಿ ಮಾಡುವ ಕಾಲದಲ್ಲಿ ಕೂಡಿತ್ತೆಂದು ಅಲ್ಲಿಗೆ ಹೋಗಿಬಂದ ಹಿರಿಯರು ಹೇಳುತ್ತಿದ್ದರು. ಜನರ ಬಳಕೆಯಲ್ಲಿರುವ ವದಂತಿಗಳು ಮತ್ತು ಪುರಾಣವೇ ನನ್ನ ಕೆಲವೊಂದು ಅಭಿಪ್ರಾಯಕ್ಕೆ ಆಧಾರ. ನನಗೆ ತಿಳಿದು ಬರುವಂತೆ ಇವರು ಅತ್ಯಂತ ವೈರಾಗ್ಯಶಾಲಿಗಳು, ಶಿವಪೂಜಾ ನಿರತರು. ಶಿವಯೋಗನಿಷ್ಠರು. ಇಂದಿಗೂ ಮೊದಲಿದ್ದ ಕಲ್ಲುಮಠದ ಇವರ ಗದ್ದುಗೆಯ ಮುಂದೆ ಎಡಭಾಗದಲ್ಲಿ ಕೆಳಗೆ ಇರುವ ಗವಿಯೇ ಇವರ ಲಿಂಗಪೂಜಾ ಮಂಟಪ. ಪಾವಟಿಗೆಗಳಿರುವ ಈ ಗವಿಯೊಳಗಡೆ ಬಂದು ಈ ಮಂಟಪವನ್ನು ನೋಡಿರುವ ಪುಣ್ಯ ನನ್ನದು. ಗವಿ ಎಂದರೆ ಕತ್ತಲೆಯ ಗವಿ. ಬೆಳಕಿಲ್ಲ ದೀವಿಗೆಯನ್ನು ಹಿಡಿದೇ ಬರಬೇಕು. ಒಳಗೆ ನೋಡಬೇಕು ಈ ಪೂಜಾಮಂಟಪವನ್ನು ನನಗೆ ತಿಳಿದಿರುವ ಮಟ್ಟಿಗೆ ಈ ಮಹಾಸ್ವಾಮಿಗಳು ಎಂದಿಗೂ ಹೆಣ್ಣು ಮಕ್ಕಳಿಗೆ ದರ್ಶನವನ್ನು ಕೊಟ್ಟವರಲ್ಲ ಆಕಸ್ಮಾತ್ ಕಂಡವರು ಕಂಡಿರಬಹುದು. ತಾವು ಕೂಡುವ ಮಂಚದ ಮುಂದೆ ಯಾವಾಗಲೂ ದೊಡ್ಡ ಗುಡಾರದ ಮರೆ. ಭಕ್ತ ಜನರಷ್ಟೇ ಒಳಗೆ ದರ್ಶನ ತೆಗೆದುಕೊಂಡು ಬರುವ ಸಂಪ್ರದಾಯ. ಇವರ ಸೇವೆ ಮಾಡಿಕೊಂಡಿದ್ದ ಶಿವಪೂಜಪ್ಪ, ಸ್ವಾಮಿಗಳ ಅತ್ಯಂತ ನಿಷ್ಠಾಭಕ್ತ. ಈತನ ಬಗೆಗೆ ನಾನು ಕೇಳಿದ ಒಂದು ಕಡೆ ಸ್ವಾಮಿಗಳ ಸೇವೆಯನ್ನು ಕೈಕೊಳ್ಳುವ ಮುನ್ನ ತಮ್ಮೂರಲ್ಲಿ ತನ್ನ ಹೆಂಡತಿಯನ್ನು ಬಿಟ್ಟು ಬಂದಿದ್ದ ಶಿವಪೂಜಪ್ಪನಿಗೆ ಒಂದು ದಿನ ಸುದ್ದಿಬಂತು ತನ್ನ ಹೆಂಡತಿ ತೀರಿಕೊಂಡಳೆಂದು. ಮುಂದೆ ಶಿವಪೂಜಪ್ಪ ಊರಲ್ಲಿ ಸಕ್ಕರೆ ಹಂಚಿದ ಕಾರಣವನ್ನು ಹೇಳಲಿಲ್ಲ. ಮುಂದೆ ಊರವರಿಗೆ ಗೊತ್ತಾಯಿತು ಆತನ ಹೆಂಡತಿ ತೀರಿದ ಸುದ್ದಿ, ಊರವರು ಸಕ್ಕರೆ ಹಂಚಿದ್ದಕ್ಕೆ ಕಾರಣವನ್ನು ಕೇಳಿದರೆ ? ಆತನ ಉತ್ತರ : ಇಂದು ಸಂಸಾರದ ಬಂಧನ ಸಂಪೂರ್ಣ ಕಡಿದು ಹೋಯಿತು ಎಂದು. ಮಠದ ಸ್ವಾಮಿಗಳವರ ವೈರಾಗ್ಯದ ಪ್ರಭಾವ ಆತನ ಮೇಲಾದುದನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ಈತನ ಬಗ್ಗೆಯೇ ಇನ್ನೊಂದು ಕತೆ- ಹಾಳಕೇರಿಯ ಮಠದಲ್ಲಿ ತಾಡೋಲೆಯ ಪುರಾತನ ಗ್ರಂಥಗಳು ಚಕ್ಕಡಿ ಗಟ್ಟಲೆ ಇದ್ದವಂತೆ. ಸ್ವಾಮಿಗಳವರಿಗೆ ಅಡಿಗೆ ಮಾಡುವಾಗ ಒಲೆಪಟುವು ಮಾಡಲಿಕ್ಕೆ ಆ ತಾಡೋಲೆಯ ಗರಿಗಳನ್ನೇ ತಂದು ತುರುಕುತ್ತಿದನಂತೆ ಈ ಶಿವಪೂಜಪ್ಪ. ಈ ಮಾತು ಮಹಾಸ್ವಾಮಿಗಳವರಿಗೆ ತಿಳಿದಿರಲಿಕಿಲ್ಲವೆಂದು ತೋರುತ್ತದೆ. ಏಕೆಂದರೆ ಅವರು ವೀರಶೈವ ವಿದ್ಯಾಪ್ರೇಮಿಗಳು ಮಠದ ಈ ಸಂಪತ್ತನ್ನು ಕಾಯ್ದುಕೊಂಡು ಬಂದವರು.

ಮೇಲೆ ಹೇಳಿದ ಮಹಾಸ್ವಾಮಿಗಳವರ ಬಗೆಗೆ ನನ್ನ ಭಕ್ತಿ ಗೌರವವನ್ನು ಹೇಳ ಬೇಕೆಂದರೆ ಇವರನ್ನು ಕುರಿತು ಇರುವ ಶ್ರೀಮದನ್ನದಾನೀಶ್ವರ ಮಹಾಪುರಾಣವನ್ನು ನಾನು ಮೂರು-ನಾಲ್ಕುಸಾರೆ ಆದರೂ ಅತ್ಯಂತ ಶ್ರದ್ದೆಯಿಂದ ಭಕ್ತಿಯಿಂದ ಪಾರಾಯಣ ಮಾಡಿ ಉದ್ದಕ್ಕೆ ಬೆಳೆದಿರುವ ನನ್ನ ಈ ಜೀವನದಲ್ಲಿ ಅಳವಡಿಸಿಕೊಂಡಂತಾಗಿದೆ.

ಇನ್ನು ತರುವಾಯದ ಗುರು ಅನ್ನದಾನೀಶ್ವರ ಮಹಾಸ್ವಾಮಿಗಳವರನ್ನು ಕುರಿತು ಸುಮಾರು ಎಂಟು ವರ್ಷದ ಬಾಲ್ಯದಲ್ಲಿದ್ದ ನಾನು ಪ್ರತಿ ಅಮಾವಾಸ್ಯೆಗೆ ನಮ್ಮ ಅಕ್ಕನೊಡನೆ ಮತ್ತು ಕೆಲವು ನೆರೆಹೊರೆಯವರೊಡನೆ ಹಾಳಕೇರಿಮಠಕ್ಕೆ ಹೋಗಿ ಬರುವುದು ರೂಢಿಯಾಗಿತ್ತು. ಆದರೇನು ? ಗುರು ಅನ್ನದಾನೀಶ್ವರ ಮಹಾಸ್ವಾಮಿಗಳ ದರ್ಶನ ನಮಗಿಲ್ಲ, ಕೇವಲ ಹಿಂದಿನ ಅನ್ನದಾನಿಸ್ವಾಮಿಗಳವರ ಕಲ್ಲುಮಠದ ಗದ್ದುಗೆಯ ದರ್ಶನದ ಲಾಭವಷ್ಟೇ ನಮಗೆ. ಮೊದಲು ಗಂಟೆಬಾರಿಸಿ, ಗದ್ದುಗೆಯ ಮುಂದೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ, ಗದ್ದುಗೆಯ ಬಾಗಿಲಮುಂದೆ ಎಡಗಡೆಗೆ ಕುಳಿತಿದ್ದ ಕುಬ್ಜಮೂರ್ತಿ ಮುಪ್ಪಯ್ಯನವರ ಪಾದಕ್ಕೂ ನಮಸ್ಕಾರಮಾಡಿ, ಕಾಯಿ ಒಡೆಯಿಸಿಕೊಂಡು, ಆಂಗಾರವನ್ನು ಹಚ್ಚಿಕೊಂಡು ಮತ್ತು ಕಟ್ಟಿಕೊಂಡು, ಕಟ್ಟೆಯ ಕೆಳಗಿಳಿದು ಬಂದು ಕುಳಿತು, ನಮ್ಮೂರಿಗೆ ಮರಳಿ ಹೊರಡುವಾಗ ಮತ್ತೊಮ್ಮೆ ನಮಸ್ಕಾರಮಾಡಿ, ಅಲ್ಲಿರುವ ಅಂಗಾರವನ್ನು ತೆಗೆದುಕೊಂಡು ಬರುತ್ತಿದೆವು, ಮಠದ ಮುಂದಿರುವ ಓಣಿಯನ್ನು ದಾಟಿ ಬಂದರೆ ಅಲ್ಲಲ್ಲಿ ಕಾಯಿ, ಕರ್ಪೂರ, ಊದಿನಕಡ್ಡಿ ಇಟ್ಟುಕೊಂಡವರು ಮತ್ತು ಚುರುಮುರಿ ಅಂಗಡಿಗೆ ಇದ್ದಲ್ಲಿ ಒಂದು ಒಂದು ಪಾವು ಅಥವಾ ಪಡಿ ಚೂರಮರಿಕೊಂಡು ಪನಿವಾರ ತಿನ್ನುತ್ತ ನಮ್ಮೂರಿಗೆ ತಿರುಗಿ ಬರುವ ರೂಢಿ.

ಈ ಅಮವಾಸ್ಯೆಯ ದಿನ ಸುತ್ತ-ಮುತ್ತಲಿನ ಇನ್ನೂರು ಅಥವಾ ಹೆಚ್ಚು ಜನ ಗದ್ದುಗೆಯ ದರ್ಶನಕ್ಕೆ ಬಂದುಹೋಗುವುದನ್ನೂ ನಾನು ಕಂಡಿದ್ದೆ. ಮತ್ತು ಕೆಲವು ಭಕ್ತರು ಚಕ್ಕಡಿಯಲ್ಲಿ ಬುತ್ತಿಕಟ್ಟಿಕೊಂಡು ಬಂದು ಗದ್ದುಗೆ ದರ್ಶನ ಮಾಡಿಕೊಂಡು ಊಟಮಾಡಿ ತಿರುಗಿ ತಮ್ಮೂರಿಗೆ ಹೋಗುವುದನ್ನೂ ನಾನು ಕಂಡಿದ್ದೆ.

ಇನ್ನು ಮುಂದೆ ಹಾಳಕೇರಿ ಜಾತ್ರೆಯ ವಿಷಯ; ಈ ಜಾತ್ರೆ ಆಗ ಮಾರ್ಗಶಿರ ಮಾಸದ ಕೃಷ್ಣಪಕ್ಷದಲ್ಲಿ ನಡೆಯುತ್ತಿತ್ತು ಅಂದಿನ ನನ್ನ ಬಾಲ್ಯದಲ್ಲಿ ಆ ಜಾತ್ರೆ ಎಂದರೆ ಬಲುದೊಡ್ಡ ಜಾತ್ರೆ. ಏಕೆಂದರೆ ಬಾಲ್ಯಾವಸ್ಥೆಯಲ್ಲಿದ್ದ. ನಾನು ಈ ಜಾತ್ರೆಯನ್ನು ಮೀರಿದ ಮತ್ತೊಂದು ಜಾತ್ರೆಯನ್ನು ನೋಡಿರಲೇ ಇಲ್ಲ ರಥೋತ್ಸವಕ್ಕಿಂತ ಹಿಂದಿನ ದಿನ ಹಾಳಕೇರಿಯ ಮಹಾಮಠದಲ್ಲಿ ಬಹುದೊಡ್ಡ ಪ್ರಸ್ಥ ಅಥವಾ ಗಣಾರಾಧನೆ.

ಅಂದು ಭಕ್ತರೂ ಮತ್ತು ಗಣಂಗಳೂ ಸೇರಿ ಹತ್ತು ಸಾವಿರಕ್ಕೆ ಕಡಿಮೆ ಇಲ್ಲದಷ್ಟು ಜನ ಪ್ರಸಾದವನ್ನು ತೆಗೆದುಕೊಂಡು ಹೋಗುವ ಪ್ರತಿವರ್ಷದ ಪದ್ದತಿ, ನನ್ನ ತಿಳಿವಳಿಕೆಯ ಮಟ್ಟಿಗೆ ನಮ್ಮೂರಿಂದ ಹಾಳಕೇರಿಗೆ ಭಕ್ತರ ಇರುವೆಯ ಸಾಲು. ಇದರಂತೆ ನೀವೇ ಲೆಕ್ಕಹಾಕಿರಿ, ಹಾಲಕೆರೆಯ ಸುತ್ತಮುತ್ತಲಿನ ಮುಧೋಳ, ಮ್ಯಾಗೇರಿ, ಕರಮುಡಿ, ಸಂಗನಾಳು, ತೊಂಡ್ಯಾಳು, ಬಂಡ್ಯಾಳು, ಆಡೂರು, ರಾಜೂರು, ಕಲ್ಲೂರು, ಚಿಕ್ಕೇನಕೊಪ್ಪ, ಕುಕನೂರು, ನರೇಗಲ್ಲು, ಬೂದಿಹಾಳು, ಕೋಡಿಕೊಪ್ಪ, ತೋಟಗಂಟೆ, ಜಕ್ಕಲಿ, ಹೊಸಹಳ್ಳಿ, ಮಾರನಬಸರಿ, ಜಿಗಳೂರು, ಸಂಕನೂರು, ಬಿನ್ನಾಳು, ಯಲಬುರ್ಗಿ, ಇವಲದೇ ಅಲ್ಲಿರುವ ಸಣ್ಣ ದೊಡ್ಡ ಹಳ್ಳಿಗಳಿಂದ ಮತ್ತು ಗದಗ, ಗಜೇಂದ್ರಗಡ ಮುಂತಾದ ದೂರದ ಪಟ್ಟಣಗಳಿಂದಲೂ ಜನ ಜಾತ್ರೆಗೆ ಸೇರುತ್ತಿರಬಹುದು, ಇದು ನನಗೆ ಗೊತ್ತಿಲ್ಲ, ರಥೋತ್ಸವಕ್ಕೆಂದೇ ಬಂದು ತಮ್ಮೂರಿಗೆ ಹೋಗುವವರು ಹದಿನೈದು ಅಥವಾ ಇಪ್ಪತ್ತು ಸಾವಿರ ಸಂಖ್ಯೆಯಲ್ಲಿರಬಹುದು. ಇದು ಬೆರಳಿನ ಎಣಿಕೆಯಲ್ಲ; ಕಣ್ಣಿನ ಎಣಿಕೆ.

ಹಾಳಕೇರಿ ಜಾತ್ರೆಗೆ ಹೋಗುವಾಗ ನಾವು ಖರ್ಚಿಗಾಗಿ ಪಡೆಯುತ್ತಿದ್ದ ಹಣ ಹೆಚ್ಚು ಎಂದರೆ ನಾಲ್ಕು ಆಣೆ ಈ ನಾಲ್ಕು ಆಣೆಗೆ ಈಗಿನ ಬೆಲೆ ಸುಮಾರು ಮೂರುನಾಲ್ಕು ರೂಪಾಯಿಗಳು.

ತೇರು ಅಥವಾ ಹುಚ್ಚಾಯ ಅಂದರೆ ಸ್ವಾಮಿಯ ರಥ ಎಳೆಯುವಾಗ ಅನುಭವಿಸಬೇಕು, ಜಾತ್ರೆಯ ಶಿಖರವೆನಿಸುವ ಕಿಕ್ಕಿರಿದ ಗದ್ದಲ, ದಿಕ್ಕು ತಪ್ಪಿಸುವ ಜನ ಸಮ್ಮರ್ದದ ತೊಡಕು-ಬಡಕು ಸಂಭ್ರಮವನ್ನು ! ತೇರು ಸಾಗುವಾಗ ಸಣ್ಣವರು ದೊಡ್ಡವರು ತಮ್ಮ ತಮ್ಮ ಶಕ್ತಿಯಂತೆ ಉತ್ತತ್ತಿ ಬಾಳೆಹಣ್ಣು ರಥದ ಮೇಲು ಮೇಲಕ್ಕೆ ಒಗೆದು ಕೈಲಾಸದಿಂದ ಪುಣ್ಯವನ್ನು ಪಡೆದುಕೊಳ್ಳುವರೋ ಏನೋ ಎಂಬಂತೆ ಸಣಸಾಡುವ ಶೂರತನ ಕೈಲಾಸಕ್ಕೇರದವರು ರಥಕ್ಕೆ ಬಡಿದು ಮೇಲಿಂದ ಕೆಳಗೆ ಬಿದ್ದ ಫಲಗಳನ್ನೇ ಆರಿಸಿಕೊಂಡು ತಮ್ಮ ತಮ್ಮ ಉಡಿಯಲ್ಲಿ ಪುಣ್ಯವನ್ನೇ ಕಟ್ಟಿಕೊಂಡಂತೆ ಕಟ್ಟಿಕೊಂಡು ಹೊತ್ತುಸಿಕ್ಕಾಗ ಪ್ರಸಾದವನ್ನು ತಿನ್ನುವುದು, ಈ ಸ್ವಾಮಿಯ ಪ್ರಸಾದವನ್ನು ನಾವೂ ಸಣ್ಣವರಿದ್ದಾಗ ತಿಂದ ನೆನಪು. ಜಾತ್ರೆಯ ವಿಶೇಷವೆಂದರೆ ನೆರೆಹೊರೆಯ ನಾಡಿನ ಗರ್ಭಿಣಿಯರಾದ ಹೆಣ್ಣುಮಕ್ಕಳು ಸಾಮಾನ್ಯವಾಗಿ ರಥೋತ್ಸವಕ್ಕೆ ಬಂದು ಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡು, ಗಂಡು-ಹೆಣ್ಣಿನ ಸುಖ ಪ್ರಸವವನ್ನು ಬೇಡಿಕೊಂಡು, ಹೋಗುವವರು ಸಾಕಷ್ಟು ಜನ ಅಂದು.

ಹಾಳಕೇರಿಯ ಹೊರಗಿನ ಬಯಲಲ್ಲಿ ನೋಡಬೇಕು. ನಾಲ್ಕೈದುನೂರು ಚಕ್ಕಡಿಗಳ ಗಡಣವನ್ನು ಹಾಳಕೆರೆಯ ಹೊರಗೆ ನಿಡಗುಂದಿಯ ಕಡೆಗೆ ಇರುವ ಬಲುದೊಡ್ಡ ಕೆರೆಯ ಸಣ್ಣ ಸಾಗರದ ನೀರು ಅಂದಿನ ಪರಿಸೆಗೆ ಸಾಕಷ್ಟು ಕೆಂಪು ನೀರು ಒದಗಿಸಿ ಕೊಡುತ್ತಿತ್ತು, ಹಾಳಕೆರೆಯ ಒಳಗಡೆ ತೇರು ಎಳೆಯುವ ಮಾರ್ಗದಲ್ಲಿ ಎಡಗಡೆ, ಬಲಗಡೆ ಮತ್ತೆ ಮೇಲುಗಡೆ ಇದ್ದ ಜಾಗೆಯಲ್ಲೆಲ್ಲ ಗುಡಾರ ಹೊಡೆದುಕೊಂಡಿದ್ದ ಅಂಗಡಿಗಳ ಸಾಲು, ಚುರುಮುರಿ ಅಂಗಡಿಗಳು ಸಾಲುಗಟ್ಟಿ ಮಿಠಾಯಿ ಅಂಗಡಿಗಳು. ಆಟಿಕೆ ಸಾಮಾನುಗಳು, ಅಲ್ಲಲ್ಲಿ ಮಣೆ, ಪೀಪಿ, ಕನ್ನಡಿ, ಬಾಚಣಿಗೆ, ಸೂಜಿ – ದಾರ ಸುಣ್ಣದ ಡಬ್ಬೆ ಮುಂತಾದ ಜೋಗೇರ ಅಂಗಡಿಗಳು. ಒಂದು ಹೆಣ್ಣುಮಕ್ಕಳಿಗೆ ಪ್ರಾಧಾನ್ಯವಿದ್ದ ಈ ಜಾತ್ರೆಯಲ್ಲಿ ಬಳೆಯ ಅಂಗಡಿಗಳು ಸಾಕಷ್ಟು ಬಳೆಗಳ ಬಣ್ಣ. ಆಕಾರಗಳು ಅಳತೆಗೆಟ್ಟು ಅಂದು ಎಲ್ಲ ಬಳೆ ಕಾಜಿನ ಬಳೆ ಬಹುಮಟ್ಟಿಗೆ ಹೆಣ್ಣುಮಕ್ಕಳ ಜಾತ್ರೆ ಈ ಬಳೆಯ ಆಂಗಡಿಗಳಲ್ಲಿ, ಗಂಡುಮಕ್ಕಳದು ಮಿಠಾಯಿ ಫಳಾರದ ಅಂಗಡಿಗಳಲ್ಲಿ ಇನ್ನು ಕೆಲವರದು ಕಾಯಿ-ಕರ್ಪೂರ, ಊದಿನಕಡ್ಡಿ, ಕುಂಕುಮ ಮುಂತಾದ ಕಡೆ, ತೆಂಗಿನಕಾಯಿ- ಬಾಳೆಹಣ್ಣಿನ ಅಂಗಡಿ ಕುರ್ಚಿಗೆ, ಕೊಡಲಿ, ಚುಚುಗ, ಒನಕೆ, ಕುಡಗೋಲು, ಕುಡ, ಬಾರಕೋಲು ಮುಂತಾದ ಒಕ್ಕಲುತನದ ಮನೆತನಕ್ಕೆ ಬೇಕಾದ ಉಪಕರಣಗಳು ಬೇರೆ ಬೇರೆ ಕಡೆಯಿಂದ ಜಾತ್ರೆಗೆ ಬಂದು ಅವಶ್ಯಕ ವಸ್ತುಗಳ ಮೆರಗನ್ನು ತಂದುಕೊಡುತ್ತಿದವು. ಊರು ಹೊರಗಡೆ ಸರ್ಕಸ್ಸು ಮತ್ತು ಬಯಲಾಟಗಳು. ಅಲ್ಲದೇ ಅಂದಿನ ಆಕರ್ಷಣೆಗಳಾದ ಹಾವಾಡಿಗರು, ಡೊಂಬರು, ಮಂಗಗಳನ್ನು ಆಡಿಸುವವರು, ಮೇಲಿಂದ ಕೆಳಗೆ ಸುತ್ತು ತಿರುಗುವ ಗ್ರಹಗಳಂತಿರುವ ತೊಟ್ಟಿಲು ಆಟ, ಕುಸ್ತಿಯ ಕಣಗಳು, ಇನ್ನೇನೋ; ಇನ್ನೇನೋ ! ಹಲವಾರು ಬಗೆಯ ವಿಚಿತ್ರ ದೃಶ್ಯಮಾನ ಸಂಗತಿಗಳು. ನನಗನಿಸುವಂತೆ ಅಂದಿನ ಕಾಲದಲ್ಲಿ ನೂರಾರು ಕಡೆಗೆ ಬೆಳೆದು ಬಂದಿರುವ ಕಲಾ ಕೌಶಲ ಅಂದಿನ ಜೀವನಕ್ಕೆ ಬೇಕಾದ ಅನೇಕ ಹೊಸ ಹೊಸ ಸಾಧನ ಸಾಮಗ್ರಿಗಳು, ಮೋಜು ಮಜಲುಗಳು ಇಂತಿವೇ ಮೊದಲಾದ ನೂತನ ಪ್ರಪಂಚದ ವರ್ಧಮಾನ ನಾಗರಿಕತೆಯ ಪ್ರಸಂಗಗಳನ್ನು ಕಂಡು, ತಮ್ಮ ತಮ್ಮ ಜೀವನವನ್ನು ವಿಸ್ತಾರಗೊಳಿಸುವ ಮಹಾಸಾಧನವೆನಿಸುವ ಇಂಥ ಜಾತ್ರೆಗಳು ಇಲ್ಲದಿದ್ದರೆ ಹಳ್ಳಿ, ಪಟ್ಟಣಗಳು ತಮ್ಮ ತಮ್ಮ ಊರಿನಲ್ಲಿಯೇ ಇದ್ದು ಮುಳುಗಿ ಬಾಳುತ್ತಿರುವ ಸಂಕೋಚ ಜೀವನಕ್ಕೆ ಗುರಿಯಾಗಿ, ಹೋಗುತ್ತಿದ್ದವು. ಅಂದಿನ ಮಾನವ ಜೀವನದ ಉದಿತೋದಿತಕ್ಕೆ ಮೂಲ ಕಾರಣವೇನು ? ದೊಡ್ಡ ಪ್ರಮಾಣದಲ್ಲಿ ವರ್ಷಕ್ಕೊಮ್ಮೆ ನಡೆವ ಸ್ವಾಮಿಗಳ ದೇವರ ಜಾತ್ರೆಗಳು ಪುಣ್ಯಪ್ರಮಾಣದಲ್ಲಿ ಅಲ್ಲೊಂದು ಇಲ್ಲೊಂದು ಸಾಮಾನ್ಯವಾಗಿ ವಾರಕ್ಕೊಮ್ಮೆ ಸಂತೆಗಳು,

ಇಂದು ನನಗೆ ಅರ್ಥಹೀನವಾಗಿ ಕಾಣುವ ಈ ಪ್ರಪಂಚದಲ್ಲಿ ಅಂದಿನ ನನ್ನ ಬಾಲ್ಯದ ಭಕ್ತಿಭಾವದ ಈ ಸ್ವಪ್ನ ಪ್ರಪಂಚ ಎಂದಿಗೂ ಮರೆಯಲಾಗದ ನನ್ನ ಹಿಂದಿನ ಸಾಮ್ರಾಜ್ಯ. ಸಾಮ್ರಾಜ್ಯವಿಲ್ಲದಿದ್ದರೆ ಮನುಷ್ಯ ತನ್ನಷ್ಟೇ ಸಣ್ಣವನಾಗಿ ಬದುಕಿ ಬಾಳ ಬೇಕಾಗುತ್ತದೆ. ಇದು ಒಂದು ರೀತಿಯ ಮಾನವ ದುರ್ದೈವ. ಇದು ಸುಳ್ಳು ಎಂದು ಹೇಳಿದರೆ ನನ್ನ ಮನಸ್ಸಿಗೆ ಯಾವ ನೋವೂ ಇಲ್ಲ.

ಹಾಳಕೇರಿಯ ಶ್ರೀಮಠದ ಇನ್ನೂ ಒಂದೆರಡು ವಿಶೇಷಗಳೆಂದರೆ ಮಠದ ಆವರಣದಲ್ಲಿ ಒಂದು ಸಂಸ್ಕೃತ ಪಾಠಶಾಲೆ ಇತ್ತು. ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲಿ ಈ ಪಾಠಶಾಲೆಯ ಅಧ್ಯಾಪಕ ಉಪ್ಪಿನ ಬೆಟಗೇರಿಯ ಪಂಡಿತ ವಿಶ್ವೇಶ್ವರ ಶಾಸ್ತ್ರಿಗಳು. ಅಲ್ಲಿ ಹತ್ತು-ಹದಿನೈದು  ಜನ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳು. ಅವರ ಊಟ ಮಠದಲ್ಲಿ ಅಥವಾ ವಾರದ ಮನೆಗಳಲ್ಲಿ ಮತ್ತು ಸಣ್ಣಪ್ರಮಾಣದಲ್ಲಿ ಪ್ರತಿನಿತ್ಯ ಅಲ್ಲಿಗೆ ಬಂದ ಭಕ್ತರಿಗೆ ದಾಸೋಹ ನಡೆಯುತ್ತಿತ್ತು ವೀರಶೈವ ಮಠಗಳಲ್ಲಿ ಅಂದು ಧರ್ಮದ ಪ್ರಚಾರಕ್ಕಾಗಿ ಪುರಾಣ, ಕೀರ್ತನ, ಪ್ರವಚನ ಮುಂತಾದವು ನಡೆಯುವುದನ್ನು ನಾನು ಪ್ರತ್ಯಕ್ಷ ಹಾಳಕೇರಿಯಲ್ಲಿ ಕಂಡಿದ್ದೆ. ಸಂಗೀತ ಪಾಠಶಾಲೆಯ ಹತ್ತಿರವೇ ಇದ್ದ ಒಂದು ಮನೆಯಲ್ಲಿ ಕೆಲದಿನ ಸಂಗೀತ ಪಾಠಶಾಲೆಯು ಇತ್ತು. ಒಂದೆರಡು ತಿಂಗಳು ನಾನೇ ಹೋಗಿ ಅಲ್ಲಿ ಸಂಗೀತದ ಅಭ್ಯಾಸ ಮಾಡಿದೆ. ಈ ಅವಧಿಯಲ್ಲಿಯೇ ಮಠದ ಕಟ್ಟೆಯಮೇಲೆ ಸ್ಕಾಂದ ಇಲ್ಲವೇ ಲೈಂಗ್ಯ ಪುರಾಣದ ಪ್ರವಚನ ನಡೆದುದು ನನಗೆ ಗೊತ್ತಿದೆ. ಅದು ಸಾಯಂಕಾಲದಲ್ಲಿ ನಡೆಯುತ್ತಿದ್ದು. ಪ್ರವಚನಕಾರರು ಪಂಡಿತ ವಿಶ್ವೇಶ್ವರ ಶಾಸ್ತ್ರಿಗಳು ;ಕೊಪ್ಪಳ ತಾಲೂಕಿನ ಬೆಟಗೇರಿಯವರು. ಅವರ ಮುಖದಲ್ಲಿ ಪಾಂಡಿತ್ಯದ ತೇಜ, ಕಂಠದಲ್ಲಿ ಗಂಭೀರವಾದ, ಸ್ಫುಟವಾದ ವೀಣಾ ತಂತಿಯ ಅಸ್ಖಲಿತ ವಾಣಿ. ಪಂಡಿತರ ಈ ಪ್ರವಚನ ನಡೆವಾಗಲಷ್ಟೇ ಮಹಾಸ್ವಾಮಿಗಳ ದರ್ಶನ ಮುಕ್ತವಾಗಿತೆಂದು ಹೇಳಬಹುದು.

ಈ ಮಠದಲ್ಲಿ ಮತ್ತೊಮ್ಮೆ ನಡೆದ ಒಂದು ವೀರಶೈವ ಧಾರ್ಮಿಕ ಭಾಷಣದ ಅವಿಸ್ಮರಣೀಯ ಪ್ರಸಂಗ, ಈ ಭಾಷಣ ನಡೆದುದು ಮಠದ ಆವರಣದಲ್ಲಿಯೇ ಸಾಯಂಕಾಲ ಸುಮಾರು ನಾಲ್ಕು ಇಲ್ಲವೇ ಐದು ಗಂಟೆಯ ಸಮಯ. ಭಾಷಣಕಾರರು ಇಂದಿನ ಮುಧೋಳ ಗವಿಮಠದ ಮತ್ತು ಸೊಲ್ಲಾಪುರದಲ್ಲಿರುವ ಕಿರೀಟಮಠದ ಅಧಿಪತಿಗಳಾದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು. ಅದೇ ಆಗ ಕಾಶಿಯಲ್ಲಿ ತಮ್ಮ ಸಂಸ್ಕೃತ ಅಭ್ಯಾಸವನ್ನು ಮುಗಿಸಿಕೊಂಡು ವೇದಾಂತಾಚಾರ್ಯ ಪದವಿ ಪಡೆದು ಮರಳಿ ಬಂದವರು; ಈ ಸ್ವಾಮಿಗಳು, ವಯಸ್ಸು ಸುಮಾರು ಇಪ್ಪತ್ತೈದರಿಂದ ಇಪ್ಪತ್ತೆಂಟು ಇರಬಹುದು. ‘ದಷ್ಟ-ಪುಷ್ಟ’ ದೇಹ ಸರ್ವಾಂಗದಲ್ಲಿ ಉಕ್ಕುವ ಯೌವನದ ಕಾಂತಿ, ಮುಖದಲ್ಲಿ ಪಾಂಡಿತ್ಯದ ಕಳೆ, ಅಂದು ಅವರು ಮಠದ ಕಟ್ಟೆಯ (ವೇದಿಕೆಯ) ಮೇಲೆ ನಿಂತು ನಿರರ್ಗಳವಾಗಿ, ಪಾಂಡಿತ್ಯಪೂರ್ಣವಾಗಿ ಸುಮಾರು ಒಂದೂವರೆ ತಾಸು ಮಾತಾಡಿದರು. ಅವರ ವಾಣಿ ಗಂಭೀರ, ಶಕ್ತಿಯುತ, ಸ್ಪಷ್ಟ ಮತ್ತು ಸ್ಪುಟ, ನೇರವಾಗಿ ಬುದ್ದಿ-ಹೃದಯವನ್ನು ತಟ್ಟಿ ಎಬ್ಬಿಸುವ ಸಾಮರ್ಥ್ಯ ಅವರ ಭಾಷಣದಲ್ಲಿ ಮಾತಾಡಿದ ವಿಷಯವೇನು ? ಪ್ರತಿಪಾದನೆ ಮಾಡಿದ್ದು ಹೇಗೆ ? ವಿಷಯದ ವ್ಯಾಪ್ತಿ ಎಷ್ಟು ? ಇವೇ ಮುಂತಾದ ಪ್ರಶ್ನೆಗಳನ್ನು ನೀವು ಕೇಳಿದರೆ ನಿಮಗೆ ಕೊಡಬಲ್ಲ ಉತ್ತರ  ಇಂದು ನನ್ನಲ್ಲಿ ಉಳಿದಿಲ್ಲ. ಆದರೆ ಇಷ್ಟೇ- ಆ ಭಾಷಣದ ಗಂಭೀರ ಮುದ್ರೆ ನನ್ನ ತಲೆಯಲ್ಲಿ ಇನ್ನೂ ಉಳಿದಿದೆ.

ಸುಮಾರು ಹದಿನಾಲ್ಕು ಹದಿನೈದು ವರ್ಷದಲ್ಲಿ ನಾನಿರುವಾಗ ಮಠದಲ್ಲಿ ಸಮ ವಯಸ್ಕರಾದ ಗಂಗಾಧರದೇವರು ಮತ್ತು ನನಗಿಂತ ಚಿಕ್ಕವರಾದ ಪ್ರಭುದೇವರು ಮಠದ ಮರಿದೇವರು. ನನಗೆ ಒಂದು ರೀತಿಯ ಸಖ್ಯ ಇವರೊಡನೆ, ಎಷ್ಟೋಸಾರೆ ಇವರು ಮತ್ತು ನಾನು ನಿಡಗುಂದಿ ಮತ್ತು ಹಾಳಕೇರಿಯ ನಡುವಿರುವ ಪರಮಣ್ಣವರ ಕೆರೆಯಲ್ಲಿ ಭೋಜನ ವಿಹಾರ’ ನಡೆಸುತ್ತಿದ್ದವು. ಗಂಗಾಧರ ಮರಿದೇವರು ಈಗ ಇಲ್ಲ.  ಅಮೀನಗಡಾದ ಪ್ರಭುಶಂಕರ ಮಹಾಮಠದಲ್ಲಿ ಸ್ವಾಮಿಗಳಾಗಿದ್ದ ಪ್ರಭುದೇವರು ಲಿಂಗೈಕ್ಯ ಶ್ರೀಗುರು ಅನ್ನದಾನೀಶ್ವರ ಮಹಾಸ್ವಾಮಿಗಳ ತರುವಾಯ ಹಾಳಕೇರಿಯ ಪೀಠಕ್ಕೆ ಸುಮಾರು ಹತ್ತು ವರ್ಷ ಅಧಿಪತಿಗಳಾಗಿದ್ದರು. ಇಂದಿನ ‘ಅಭಿನವ ಅನ್ನದಾನೀಶ್ವರ ಮಹಾಸ್ವಾಮಿಗಳಿಗೆ ಪಟ್ಟಾಧಿಕಾರವನ್ನು ಕೊಟ್ಟು ಈಗ ಮತ್ತೆ ಅವರು ತಮ್ಮ ಪ್ರಭುಶಂಕರ ಮಠದಲ್ಲಿಯೇ ಇದ್ದಾರೆ.

ಇನ್ನು ಮೇಲೆ ಹಾಳಕೇರಿಯನ್ನು ಬಿಟ್ಟು ನಿಡಗುಂದಿಯಲ್ಲಿ ನನಗಾದ ಮಹಾಸ್ವಾಮಿಗಳವರ ದೂರ ಮತ್ತು ಸಮೀಪ ದರ್ಶನದ ಅನುಭವ, ಮಹಾಸ್ವಾಮಿಗಳು ಇಂದು ರೋಣ ತಾಲೂಕಿಗೆ ಸೇರಿರುವ ಇಟಗಿಯ ಮಠಕ್ಕೆ ಸುಮಾರು ಎರಡು-ಮೂರು ತಿಂಗಳಿಗೊಮ್ಮೆ ಹೋಗಿ ಬರುವ ವಹಿವಾಟು ಇತ್ತು. ನಾನು ಸಣ್ಣವನಿದ್ದಾಗ ಆದಷ್ಟು ಡಮಣಿ ಗಾಡಿಯಲ್ಲಿ ಅಥವಾ ಕೊಲ್ಲಾರಿ ಚಕ್ಕಡಿಯಲ್ಲಿ ಅಂದರೆ, ಹಿಂದು ಮತ್ತು ಮುಂದು ಹಾಗೂ ಮೇಲುಗಡೆ ಬಹುಮಟ್ಟಿಗೆ ಮುಚ್ಚಿಕೊಂಡಿರುವ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದ ಮಹಾಸ್ವಾಮಿಗಳವರಿಗೆ ನಾನು ಮತ್ತು ಹಲವರು ಕೂಡಿಕೊಂಡು ಹೋಗಿ ಕೆಳಗೇ ದೀರ್ಘದಂಡ ನಮಸ್ಕಾರ ಮಾಡಿ, ಸ್ವಾಮಿಗಳ ಪ್ರತ್ಯಕ್ಷ ಆಶೀರ್ವಾದ ಪಡೆದವರ ಧನ್ಯತೆಯ ಮನೋಭಾವದಿಂದ ಮನೆಗೆ ಬರುತ್ತಿದ್ದೆವು. ಊರ ಹೊರಗೇ ಹಾಯ್ದು ಹೋಗುತ್ತಿದ ಈ ಗಾಡಿ ಒಮ್ಮೊಮ್ಮೆ ನಮ್ಮ ಮನೆಯ ಮುಂದೆಯೇ ಹಾಯ್ದು ಹೋಗುತ್ತಿತ್ತು. ಸ್ವಲ್ಪ ದೊಡ್ಡವನಾದ ನನ್ನನ್ನು ಒಮ್ಮೊಮ್ಮೆ ಮಹಾಸ್ವಾಮಿಗಳವರು ಮಾತಾಡಿಸಿ ಆಶೀರ್ವಾದವನ್ನು ಮಾಡಿದುದೂ ಉಂಟು. ಆಗ ಆದ ಆನಂದ ಎಷ್ಟು ? ಅದು ಶಬ್ದಕ್ಕೆ ಅಳತೆಯಲ್ಲ, ಸಮೀಪಕ್ಕೆ ಕರೆದು ಒಂದು ಮಾತಾಡಿ, ಮನೆತನದ ಯೋಗಕ್ಷೇಮ ಕೇಳಿ, ಒಂದು ಬಗೆಯ ದಿವ್ಯ-ವಾತ್ಸಲ್ಯಭಾವದಿಂದ ಆಶೀರ್ವದಿಸಿದ ಪ್ರಸಂಗಗಳೂ ಉಂಟು. ಈ ಭಾವಕ್ಕೆ ಕಾರಣವೇನು ? ಏನೋ ಒಂದು ಬಗೆಯ ಸಂಬಂಧ, ಮಹಾಸ್ವಾಮಿಗಳವರ ಮಠವಿರುವ ಇಟಗಿಯೇ ನಮ್ಮ ತಾಯಿಯ ತವರು ಮನೆ. ಈ ಮಾತು ನನಗೆ ಗೊತ್ತಿತ್ತು, ಆದರೆ ಮಹಾಸ್ವಾಮಿಗಳ ಬಾಯಿಯಿಂದಲೇ ಈ ಮಾತು ಪ್ರಕಟವಾದ ರೀತಿ ಇದು ‘ನಿಮ್ಮ ತಾಯಿ ನಮಗಿಂತ ನಾಲೈದು ವರ್ಷ ಹಿರಿಯರು’. ಈ ಆಪ್ತ ವಾಕ್ಯ ಮಹಾಸ್ವಾಮಿಗಳಲ್ಲಿರುವ ನನ್ನ ಭಕ್ತಿಯ ಗಾಢತೆಯನ್ನು ಗಾಢತಮಗೊಳಿಸಿತು.

ಇನ್ನೂ ಒಂದು ವಿಷಯ. ನನ್ನ ಅಸ್ಪಷ್ಟವಾದ ಸ್ಮರಣ ಬುದ್ದಿಯಲ್ಲಿ ಇನ್ನೂ ತೋರಿ ಅಡಗುವಂತಿದೆ ಈ ಪ್ರಸಂಗ. ನಾನು ಸುಮಾರು ಎಂಟು-ಒಂಭತ್ತು ವರ್ಷದವನಿದ್ದಾಗ ನನ್ನ ದೀಕ್ಷೆ (ಅಯ್ಯಾಚಾರ) ಆಯಿತು. ಅದೇ ಕಾಲಕ್ಕೆ ನಮ್ಮ ಲಿಂಗೈಕ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಹಾವೇರಿಯ ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳು ಮತ್ತು ಶ್ರೀಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಶಿವಯೋಗ ಮಂದಿರದ ಭಿಕ್ಷೆಗಾಗಿ ಬಂದು ನಮ್ಮ ಮನೆಗೆ ಹತ್ತಿ ಎಡಗಡೆಗೆ ಇರುವ ಅಗಸಿಯವರ ದೊಡ್ಡ ಮನೆಯಲ್ಲಿ ಇವರ ಪೂಜೆ, ಪ್ರಸಾದ ನಡೆಯುತ್ತಿತ್ತು. ಆಗ ದೀಕ್ಷೆಯಾದ ಮರುದಿನ ಅಥವಾ ಮಳ್ಳಾಮರುದಿನ ಈ ಮಹಾಸ್ವಾಮಿಗಳವರಿಗೆ ನಮ್ಮ ತಂದೆಯವರು ಮಾಡಿಕೊಂಡ ಬಿನ್ನಹದ ಮೇರೆಗೆ ಈ ಮಹಾಸ್ವಾಮಿತ್ರಯರ ಪೂಜೆ ಮತ್ತು ಪ್ರಸಾದ ನಮ್ಮ ಮನೆಯಲ್ಲಿಯೇ ನಡೆದು ಅವರಿಂದ ಪಾದೋದಕ. ಪ್ರಸಾದವನ್ನು ಪಡೆದುಕೊಂಡ ನೆನಪು ನನಗಿದೆ.

ಮಹಾಸ್ವಾಮಿಗಳವರ ಪ್ರತ್ಯಕ್ಷ ಸನ್ನಿಧಿಯ ಸಮೀಪದಲ್ಲಿ ಭಕ್ತಿಯಿಂದ ಕುಳಿತು ಅವರೊಡನೆ ಮಾತಾಡಿದ ಮತ್ತೊಂದು ಮಹತ್ವದ ಪ್ರಸಂಗ, ಶಿವಯೋಗಮಂದಿರದ ಭಿಕ್ಷೆಗಾಗಿ ಸ್ವಾಮಿಗಳು ನಿಡಗುಂದಿಗೆ ಬಂದು ಸಂಗಮೇಶ್ವರ ಗುಡಿಯಲ್ಲಿ ಮೂರು ನಾಲ್ಕು ದಿನವಿದ್ದು ಶಿವಪೂಜೆ-ಪ್ರಸಾದವನ್ನು ಮಾಡಿಕೊಂಡಿರುವಾಗ ನಡೆದ ಘಟನೆ ಈಗ ನಾನು ಹೇಳಬೇಕೆಂದಿರುವುದು. ನಮ್ಮೂರಿಂದ ಸುಮಾರು ಇಪ್ಪತ್ತು ಮೈಲು ದೂರವಿರುವ ಶಿವಯೋಗ ಮಂದಿರಕ್ಕೆಂದು ಭಿಕ್ಷೆಮಾಡುವ ಪ್ರಸಂಗ ಏಕೆ ಬಂತು ? ಇದಕ್ಕೆ ಹಿನ್ನೆಲೆಯಾಗಿ ಶಿವಯೋಗ ಮಂದಿರದಲ್ಲಿ ನಡೆದ ಒಂದು ಕಠಿಣ ಪ್ರಸಂಗದ ವಿಷಮ ಚಿತ್ರವನ್ನು ಇಲ್ಲಿ ವಿವರಿಸಬೇಕಾಗುತ್ತದೆ.

ಹಾನಗಲ್ಲ ಪರಮಪೂಜ್ಯ ಕುಮಾರ ಸ್ವಾಮಿಗಳವರು ೧೯೩೦ರಲ್ಲಿ ಲಿಂಗೈಕ್ಯರಾದ ತರುವಾಯ ಹತ್ತು ಹನ್ನೊಂದು ವರ್ಷಗಳ ನಂತರ ಒಂದು ಸಭೆ ನಡೆಯಿತು. ಅಂದಿನ ಶಿವಯೋಗ ಈ ಮಂದಿರವೆಂದರೆ ನನ್ನ ಭಾವಾರ್ಥ ಶಿವಯೋಗದ ಮಂದಿರ. ಈ ಮಂದಿರವು ಶಿವನಲ್ಲಿ ಯೋಗವಾಗುವ ವಾತಾವರಣವನ್ನೇ ನಿರ್ಮಾಣಮಾಡುವಂತಿತ್ತು ಅಂದರೆ ಮಂದಿರದ ಉಸಿರು ಶಿವಯೋಗ. ಮಂದಿರದ ಸುತ್ತಮುತ್ತಣ ಪ್ರಕೃತಿಯ ಸಂಪದ್ಭರಿತ ಸೌಂದರ್ಯವನ್ನು ಒಂದುನಿಮಿಷ ನಿಂತು ನೋಡಿದರೆ ಯಾರಿಗಾದರೂ ಶಿವಯೋಗದ ಸೋಂಕು ಆಗುವಂತಿತ್ತು ಮಂದಿರದ ಸಮೀಪದಲ್ಲಿ ಪರದೇಶದ ಪ್ರವಾಸಿಗರ ಮನವನ್ನೂ ಸೆಳೆವ ಮಹಾಕೂಟ, ಬಾದಾಮಿ, ಬನಶಂಕರಿ, ಐಹೊಳೆ, ಪಟ್ಟದಕಲ್ಲು ಮುಂತಾದ ಪವಿತ್ರ ಕ್ಷೇತ್ರಗಳು, ಮಂದಿರದ ಎಡಗಡೆ ಎದ್ದುನಿಂತಿರುವ ಗುಡ್ಡ-ಬೆಟ್ಟಗಳು, ಅನೇಕ ಬಗೆಯ ಲತೆ-ಗುಲ್ಮ-ಕಂಟಿಗಳು; ಸಣ್ಣ ದೊಡ್ಡ ಗಿಡಮರಗಳು, ಅಲ್ಲಲ್ಲಿ ತಲೆ ಎತ್ತಿರುವ ಕಲ್ಲುಬಂಡೆ ಗುಂಡುಗಳು, ಈ ವನ ಸೌಂದರ್ಯದ ಸಂಪತ್ತಿನಲ್ಲಿ ಮೃಗ, ಪಶು, ಪಕ್ಷಿಗಳ ನಾನಾ ಕಂಠದಿಂದ ಹರಿದುಬಂದ ವನ್ಯ ಸಂಗೀತ, ಮಂದಿರದ ಬಲಗಡೆ ನಿರಂತರ ಹರಿವ ಮಲಪ್ರಭಾ ನದಿ. ನದಿಯಲ್ಲಿ ಹಗಲು ರಾತ್ರಿ ನದಿಯೇ ಗುಡುಗುವಂತಿರುವ ದಿಡುಗು-ಅಂದರೆ ಸಣ್ಣ ಜಲಪ್ರಪಾತ. ಶಿವಯೋಗ ಮಂದಿರದ ಹೃದಯದಲ್ಲಿ ನೂರಾರು ವಟುಗಳಿಗಾಗಿ ಕಟ್ಟಿರುವ ಸಣ್ಣ ಸಣ್ಣ ಕುಟೀರಗಳು, ಅಂದರೆ ಝೋಂಪಡಿಗಳು ಪತ್ತೆ ಲಿಂಗೈಕ್ಯ ಪಂಚಾಕ್ಷರಿ ಗವಾಯಿಗಳಲ್ಲಿ ಅಭ್ಯಾಸ ಮಾಡುತ್ತಿದ್ದ ಅನೇಕ ಸಂಗೀತ ಸಾಧಕರ ತರಂಗ ಸಂಗೀತ. ಝೋಂಪಡಿಯ ಬಳಿಯಲ್ಲಿರುವ ಅತ್ಯಂತ ರಮಣೀಯವಾದ ಲತಾಮಂಟಪ ಮತ್ತು ಸ್ವಾಮಿಗಳಿಗಾಗಿ ಕೊಟ್ಟಿರುವ ಮೇಲುಮಠ ಹಾಗೂ ಕೆಳಗಿನ ಮಠಗಳು. ಮಠದ ಸಮೀಪದಲ್ಲಿಯೇ ದಾಸೋಹದ ಮನೆ ಇನ್ನೂರು ಮುನ್ನೂರು ಆಕಳುಗಳ ಹಟ್ಟಿ. ಬದಿಯಲ್ಲಿಯೇ ವಿಧಿವತ್ತಾಗಿ ಭಸ್ಮವನ್ನು ತಯಾರಿಸುವ ಶಾಲೆ. ಮಂದಿರದ ಮುಂದೆಯೇ ಅನತಿದೂರದಲ್ಲಿ ಗುಂಪಾಗಿ, ಸಮೃದ್ಧವಾಗಿ ನಿಂತಿರುವ ಪತ್ರಿಯ ಬನ. ಅಂದು ಹೇಳುವವರು ಹೇಳುತ್ತಿದ್ದರು ಶಿವಯೋಗ ಮಂದಿರದಂಥ ಸಂಸ್ಥೆ ಇಡೀ ದೇಶದಲ್ಲಿಯೇ ಇಲ್ಲವೆಂದು ನನಗನಿಸುವಂತೆ ಇದಕ್ಕೆ ಮುಖ್ಯ ಕಾರಣ-ಮಾನವನನ್ನು ದೇವನನ್ನಾಗಿ ಕಟ್ಟುವ ಮಹಾಸಂಸ್ಥೆ ಇದು. ಈ ಮಂದಿರದಲ್ಲಿ ಎಲ್ಲಾ ವಿಧ್ಯೆಗಳಿಗಿಂತ ಅಧ್ಯಾತ್ಮ ಯೋಗವಿಧ್ಯೆಗೆ ಪ್ರಮುಖ ಸ್ಥಾನ.ಶಿವಯೋಗಮಂದಿರವೆಂದೊಡನೆ ಅನಿರ್ಬಂಧವಾಗಿ ಏಳುವ ಈ ಭಾವನೆಗಳನ್ನು ಇಲ್ಲಿ ಹೇಳುವುದು ಅಪ್ರಸ್ತುತ.ಆದರೂ ಮಣಿದಿದ್ದೇನೆ ನನ್ನ ಭಾವನೆಗಳ ವೈಖರಿಗೆ.

ಇಲ್ಲಿ ನಾನು ಹೇಳಬಾಕಾಗಿದ್ದ ಪ್ರಸ್ತುತ ವಿಷಯವೆಂದರೆ ಲಿಂಗಕ್ಕೆ ಹಾನಗಲ್ಲ ಮಹಾಸ್ವಾಮಿಗಳ ಪುಣ್ಯತಿಥಿಯ ಸಪ್ತಾಹ ಮುಗಿಯುತ್ತ ಬಂದ ಮಹಾಶಿವರಾತ್ರಿಯ ಮುನ್ನಾ ದಿನ ಸಾಯಂಕಾಲ ಏಳು ಗಂಟೆಗೆ ನಡೆಯಿತು. ಒಂದು ಗಂಭೀರ ವಿಷಯವನ್ನು ಕುರಿತ ಸಭೆ. ಆ ಸಭೆಗೆ ಬಾಗಲಕೋಟೆ, ಬದಾಮಿ, ನಂದಿಕೇಶ್ವರ, ಮತ್ತೆ ಬೇರೆ ಕಡೆಯಿಂದ ಬಂದ ಭಕ್ತ ಮಹೇಶ್ವರ ಗಣ. ನನಗೆ ನೆನಪಿದ್ದಂತೆ ಬಾಗಿಲುಕೋಟೆಯ ಶಾಬಾದಿ ಶಂಭುಲಿಂಗಪ್ಪನವರು, ಮಿಣಜಿಗಿ ವಕೀಲರು ಮತ್ತು ಅನೇಕ ಪ್ರಮುಖರು ಕೂಡಿದ್ದರು. ಮಂದಿರದ ಬಗ್ಗೆ ನಿಷ್ಠೆಯುಳ್ಳ ಮತ್ತು ಸಮಾಜದಲ್ಲಿ ಅಂದು ಅಗ್ರಗಣ್ಯರೆನಿಸಿದ್ದ ದೇವೀ ಹೊಸೂರು ಶೆಟ್ಟರು ಬಂದಿದ್ದರೇನೋ? ಇವರಲ್ಲದೆ ಬೇರೆ ಬೇರೆ ಮಠಗಳಿಂದ ಬಂದ ಇಪ್ಪತ್ತು-ಮೂವತ್ತು ಮಂದಿ ಮಹಾಸ್ವಾಮಿಗಳು. ಅವರಲ್ಲಿ ಪ್ರಮುಖರೆಂದರೆ ಹಾವೇರಿ ಹುಕ್ಕೇರಿಮಠದ ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳು, ಹಾಳಕೇರಿಯ ಲಿಂಗೈಕ್ಯ ಗುರು ಅನ್ನದಾನೇಶ್ವರ ಮಹಾಸ್ವಾಮಿಗಳು, ಇಂದಿಗೂ ಶತಾಯುಷ್ಯದ ಅಂಚಿನಲ್ಲಿರುವ ನಾಗನೂರು ಶಿವಬಸವ ಮಹಾಸ್ವಾಮಿಗಳು, ಹಾನಗಲ್ಲ ಲಿಂಗೈಕ್ಯ ಸದಾಶಿವ ಮಹಾಸ್ವಾಮಿಗಳು, ನವಲಗುಂದ ಗವಿಮಠದ ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳು. ಇನ್ನುಳಿದವರ ಹೆಸರು ನನಗೆ ಗೊತ್ತಿಲ್ಲ ಮತ್ತು ನೆನಪು ಮಸುಮಸುಕಾಗಿದೆ.

ಕ್ರಿ.ಶ. ೧೯೪೦ರ ಎಡಬಲದ ವರ್ಷ, ಆ ಸಭೆಗೆ ಏನು ಕಾರಣ ನನಗೆ ಗೊತ್ತಿಲ್ಲ – ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಿದ್ದರು. ಈ ಸಭೆಯಲ್ಲಿ ಮುಖ್ಯವಾಗಿ ನಡೆಯಬೇಕಿದ್ದ ವಿಷಯದ ಚರ್ಚೆ- ಶಿವಯೋಗಮಂದಿರ ಮಹಾಸಂಸ್ಥೆಗೆ ಬಂದೊದಗಿದ ಒಂದು ವಿಪತ್ಕಾಲ, ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಇರುವಾಗ ಸಂಸ್ಕೃತ ಕನ್ನಡ-ವೈದ್ಯ-ವೈದಿಕ-ಸಂಗೀತ-ಪುರಾಣ-ಕೀರ್ತನ- ಭಾಷಣ ಮುಂತಾದ ಕಲೆಗಳ ಶಿಕ್ಷಣದೊಡನೆ ಮುಖ್ಯವಾಗಿ ಅಲ್ಲಿ ನಡೆಯುತ್ತಿದ್ದ ಯೋಗಸಾಧನೆ, ತತ್ವ-ಧರ್ಮ-ಸಿದ್ದಾಂತ-ನೀತಿ-ಆಚಾರ ಮುಂತಾದ ವಿದ್ಯೆ, ಶಾಸ್ತ್ರಗಳ ಬಗ್ಗೆ ಅಲ್ಲಿ ತರಬೇತಿ, ಒಳ್ಳೆಯ ಉತ್ಕೃಷ್ಟವಾಗಿ ಸಾಂಗವಾಗಿ ನಡೆದವು. ಶಿವಯೋಗ ಮಂದಿರದಲ್ಲಿ, ಕರ್ನಾಟಕದ ವೀರಶೈವರ ಮತ್ತಿತರರ ಲಕ್ಷ್ಯವನ್ನು ಸೆಳೆದುಕೊಂಡಿತ್ತು ಶಿವಯೋಗಮಂದಿರ. ಕರ್ನಾಟಕದ ವೀರಶೈವರ ಮಹಾಸಭೆಯ ಆದ್ಯ ಪ್ರವರ್ತಕರಾದ ಮತ್ತು ಶಿರಸಂಗಿ ಲಿಂಗರಾಜರಿಗೆ ತಮ್ಮ ಇಡೀ ದೇಶ ಗತಿಯ ಸಂಪತ್ತನ್ನು ಸಮಾಜದ ಮಕ್ಕಳಿಗೆ ದತ್ತಿಯನ್ನಾಗಿ ಕೊಡಲು ಪ್ರೇರಣೆ ಮಾಡಿದ ಶ್ರೀ ಕುಮಾರ ಮಹಾಸ್ವಾಮಿಗಳು ಶಿವಯೋಗಮಂದಿರ ಸಂಸ್ಥೆಯನ್ನು ಹಲವಂದವಾಗಿ ಬೆಳೆಸಿ ಉಜ್ವಲಗೊಳಿಸಿದರು. ಆದರೆ ಮುಂದೆ ಅವರ ತರುವಾಯ ಅಂದರೆ ೧೯೩೦ರ ನಂತರ ಕೆಲವರ್ಷಗಳಾದಮೇಲೆ ಏನೋ ಒಂದು ಗ್ರಹಣ ಬಂದೊದಗಿದಂತೆ ಸಂಸ್ಥೆಯ ಪ್ರಗತಿ ಕುಂಠಿತವಾಯಿತು. ನನಗನಿಸುವಂತೆ ಇದಕ್ಕೆ ಕಾರಣ, ಮಂದಿರಕ್ಕೆ ಸಂಬಂಧಿಸಿದ ಮಹಾಸ್ವಾಮಿಗಳಲ್ಲಿ ಒಂದಾಗಿರುವ ಹೊಂದಾಣಿಕೆ ತಪ್ಪಿ ಈ ತಪ್ಪು ಸಂಸ್ಥೆಯ ಏಳಿಗೆಗೆ ಒಂದು ಕುತ್ತಾಗಿ ಪರಿಣಮಿಸಿತು. ಆಗ ತಿಳಿದುಬಂದಂತೆ ಸಂಸ್ಥೆಗೆ ಸುಮಾರು ೪೫ (ನಾಲ್ಪತೈದು) ಸಾವಿರ ರೂಪಾಯಿ ಸಾಲ. ಇದೇನು ಮಹಾ ಎಂದು ನೀವು ಕೇಳಬಹುದು. ಆದರೆ ಅಂದಿನ ಸಾವಿರಗಳು ಅವು. ಇಂದಿನ ಲಕ್ಷಗಳೆಂದೇ ಹೇಳಬಹುದು. ಈಗ ನೀವು ನೆನೆಸಿಕೊಳ್ಳಬಹುದು. ನಾನು ಹಾಲಕೆರೆ ಜಾತ್ರೆಗೆ ನಮ್ಮ ತಂದೆಯವರಿಂದ ಪಡೆಯುತ್ತಿದ್ದ ನಾಲ್ಕು ಆಣೆ !

ಇಂದಿನ ಸಭೆಗಳೆಂದರೆ ಒಂದು ರೀತಿಯ ಸಂತೆಗಳೆಂದು ಹೇಳಬಹುದು. ಗೊತ್ತಿರಲಿ ಬಿಡಲಿ ಸಭೆಗೆ ಬಂದವರಿಗೆ ಮಾತಾಡುವ ಚಪಲ. ಆದರೆ ಅಂದಿನ ಶಿವಯೋಗ ಮಂದಿರದ ಸಭೆ ಒಂದು ಗಂಭೀರ ಚಿಂತನೆಯ ಆವರಣದಲ್ಲಿ ಮುಳುಗಿದಂತಿತ್ತು. ಅಂದು ಕೂಡಿದ ಸುಮಾರು ಎರಡು-ಮೂರುನೂರು ಜನ ಸಭಿಕರ ಮನಸ್ಸಿನಲ್ಲಿ ಒಂದೇ ಒಂದು ಯೋಚನೆ ಮಂದಿರದ ಸಾಲ ತೀರುವುದು ಎಂತು ! ಒಂದು ರೀತಿಯ ಉದ್ವಿಗ್ನತೆ, ಉಗ್ರತೆ ಕಂಡುಬರುತ್ತಿತ್ತು ಅನೇಕ ಪ್ರಮುಖರ ಮಾತುಗಳಲ್ಲಿ ಕೆಲವರಲ್ಲಿ ಕೆಲವೊಮ್ಮೆ ಭಾವಾವೇಶ, ಕೋಪೋದ್ರೇಕ ಕಂಡುಬಂದರೂ ಈ ಎಲ್ಲ ಅವೇಶಕ್ಕೆ ಮಂದಿರ ಋಣಮುಕ್ತವಾಗಲೇಬೇಕೆಂಬ ಖಂಡಿತವಾದ ಗುರಿ‌. ಭಕ್ತರಲ್ಲಿ ಸಿಡಿದೇಳುತ್ತಿದ್ದ ಈ ಭಾವಕ್ಕೆ ಈ ಕಡೆ ಪ್ರತಿಯಾಗಿ ಅಂದು ನೆರೆದ ಮಹಾಸ್ವಾಮಿಗಳವರ ಚಿಂತೋದ್ರೇಕ. ಈ ಸ್ವಾಮಿಗಳು ಹೆಚ್ಚಾಗಿ ಮಾತಾಡದಿದ್ದರೂ ಅವರ ಮುಖಗಳೇ ಹೇಳುತ್ತಿದವು ಅವರ ಚಿಂತೆಯ ಭಾರವನ್ನು. ಹಾಳಕೇರಿ ಮಹಾಸ್ವಾಮಿಗಳು ಎಂದಿಗೂ ಹೆಚ್ಚು ಮಾತಾಡುವವರಲ್ಲ ಮತ್ತು ಯಾವ ಭಾವನೆಯ ಉದ್ರೇಕಕ್ಕೂ ಒಳಗಾದವರಲ್ಲ. ಮಾತಿಲ್ಲದ ಅವರ ಮುಖದಲ್ಲಿ ಒಂದು ಗಂಭೀರ ಮೌನ. ಆದರೆ ಮಹಾಸ್ವಾಮಿಗಳವರಲ್ಲಿ ಎಲ್ಲರಿಗಿಂತ ಹಿರಿಯರಾದ ಹಾವೇರಿ ಮಹಾಸ್ವಾಮಿಗಳವರ ಹೃದಯದಲ್ಲಿ ಚಿಂತೆ ತುಂಬಿ ಕಣ್ಣಲ್ಲಿ ಕಂಬನಿಯಾಗಿ ಒತ್ತರಿಸುವಂತೆ ಭಾಸವಾಯಿತು. ನನಗೆ ಸಮಾಜದಲ್ಲಿ ಪರಮಪೂಜ್ಯರಾಗಿದ್ದ ಇವರ ಸ್ಥಿತಿಯನ್ನು ಕಂಡು ಸಭೆಯಲ್ಲಿ ಕೂಡಿದವರಿಗೆಲ್ಲ ಒಂದು ಕಷ್ಟ ನಿಷ್ಠುರದ ಆದೇಶ ಬಂದಂತಾಯಿತು. ಈ ಆದೇಶಕ್ಕೆ ಎಲ್ಲರೂ ಮಣಿದು ಚರ್ಚೆಯ ತಾಸೆರಡು ತಾಸುಗಳ ನಂತರ ಈ ಆಕಾಶ ಭಾಷಿತಕ್ಕೆ ಎಲ್ಲರೂ ತಲೆಬಾಗಿದರು. ಸಾಲತೀರಲೇಬೇಕು. ತೀರಿಸುವಲ್ಲಿ ಎಲ್ಲರ ಭಾಗವೂ ಅದರಲ್ಲಿ ಸೇರಲೇಬೇಕು. ತಮ್ಮ ತಮ್ಮ ಶಕ್ತಿಗನುಗುಣವಾಗಿ ತಮ್ಮ ಸೇವೆ ಸಲ್ಲಿಸುವುದಲ್ಲದೇ ಹಣವನ್ನು ಸಮಾಜದ ತಮ್ಮ ತಮ್ಮ ಭಾಗದಲ್ಲಿ ಕೂಡಿಸಿಕೊಡಬೇಕು. ಇದರಲ್ಲಿ ಪ್ರಧಾನ ಪಾತ್ರವನ್ನು ಮಹಾಸ್ವಾಮಿಗಳ ಮಂಡಳಿಯೇ ವಹಿಸಬೇಕು ಎಂದು ಒಂದು ರೀತಿಯ ಪ್ರತಿಜ್ಞೆ ಮಾಡಿದಂತಾಯಿತು. ಅಂದಿನ ಸಭೆ ಹಾಲಕೆರೆಯ ಮಹಾಸ್ವಾಮಿಗಳನ್ನೊಳಗೊಂಡು ಎಲ್ಲ ಸ್ವಾಮಿಗಳೂ ಮನಃಪೂರ್ವಕವಾದ ತಮ್ಮ ಒಪ್ಪಿಗೆಯನ್ನು ಕೊಟ್ಟರು. ಆಗ ನನ್ನ ವಯಸ್ಸು ಚಿಕ್ಕದಾದರೂ ಮನಸ್ಸು ನಿರ್ಧರಿಸಿತು ಮಂದಿರದ ಈ ಮಹಾ ಸಮಸ್ಯೆ ಪರಿಹಾರವಾಗಲೇಬೇಕೆಂದು. ಮರುದಿನ ಶಿವರಾತ್ರಿ, ಶಿವಯೋಗ ಮಂದಿರದಲ್ಲಿದ್ದು ಶಿವಪುರಾಣ-ಕೀರ್ತನೆ-ಭಾಷಣ-ಕೆಲಮಟ್ಟಿಗೆ ಜಾಗರಣೆಮಾಡಿ, ಕೇಳಿ ಮರುದಿನ ರಥೋತ್ಸವ ಮುಗಿಸಿಕೊಂಡು ನಮ್ಮೂರಿಗೆ ಬಂದೆ.

ಇದೋ ಈ ಸಂದರ್ಭವನ್ನು ಹೇಳಬೇಗಾಗಿತ್ತು ನನಗೆ. ಹಾಳಕೇರಿ ಮಹಾ ಸ್ವಾಮಿಗಳು ನಿಡಗುಂದಿಗೆ ಬಂದು ಸಂಗಮೇಶ್ವರ ಗುಡಿಯಲ್ಲಿದ್ದು ಶಿವಯೋಗ ಮಂದಿರದ ಭಿಕ್ಷೆಗಾಗಿ ಬಂದ ಕಾರಣವೇ ಮೇಲೆ ಹೇಳಿದ ವಿಷಯ ವಿಸ್ತಾರಕ್ಕೆ ಕಾರಣ. ಆಗ ಬೇಸಿಗೆಯ ರಜೆ. ನಾನು ಊರಲ್ಲಿದ್ದೆ. ಮಹಾಸ್ವಾಮಿಗಳವರ ದರ್ಶನ ತೆಗೆದುಕೊಂಡು ಬಂದೆ. ಅಂದು ನಮ್ಮೂರಲ್ಲಿ ಹಿರಿಯರು ಡಂಗುರ ಸಾರಿಸಿದರು, ಜೀರರ ನಾಗರಾಶಿಯಿಂದ- ಊರ ಪ್ರಮುಖರೆಲ್ಲ ಸಂಗಮೇಶ್ವರ ಗುಡಿಗೆ ಹಾಳಕೇರಿ ಮಹಾಸ್ವಾಮಿಗಳವರ ಸನ್ನಿಧಿಗೆ ಬರಬೇಕೆಂದು. ನಮ್ಮ ತಂದೆಯವರು ತೀರಿಕೊಂಡು ಏಳೆಂಟು ವರ್ಷಗಳು ಸಂದಿದ್ದವು. ಮನೆಯಲ್ಲಿ ಹಿರಿಯ ನಾನು. ಅದಕ್ಕೆ ನಾನು ಗುಡಿಗೆ ಹೋದೆ ನನ್ನೊಡನೆ ಹಲಕೆಲವು ಗೆಳೆಯರೂ, ಹಿರಿಯರೂ ಇದ್ದರು. ಗುಡಿಯಲ್ಲಿ ಸೇರಿದ ಹಿರಿಯರು, ಶ್ರೀಮಂತರು, ವತನದಾರರು ಮತ್ತು ದೊಡ್ಡ ಒಕ್ಕಲುಗಳು. ಈ ಸಂಗಮೇಶ್ವರ ಗುಡಿಯನ್ನು ತಾವೇ ಕಟ್ಟಿಸಿದ ಕೊಪ್ಪದ ಧರ್ಮಪ್ಪನವರು, ಮತ್ತೆ ದೊಡ್ಡ ವತನದಾರರಾದ ಅಂದಾನಗೌಡರು, ಅಣ್ಣಗೌಡರ ಪವಾಡೆಪ್ಪ, ರೊಟ್ಟಿ ಎಲ್ಲಪ್ಪನವರು, ಮುಧೋಳ ಫಕೀರಪ್ಪನವರು ಮುಂತಾದ ನಮ್ಮೂರ ಪ್ರಮುಖರು ಸೇರಿ ಸುಮಾರು ನೂರು ಜನ ಕೂಡಿರಬಹುದು ಗುಡಿಯಲ್ಲಿ ಸಮಯ ರಾತ್ರಿ ಸುಮಾರು ಏಳು-ಎಂಟು ಗಂಟೆ. ಮಹಾಸ್ವಾಮಿಗಳವರು ಮಂಚದಮೇಲೆ ಮಂಡಿಸಿದರು ಬಂದ ಬಂದವರೆಲ್ಲ ಸಾಷ್ಟಾಂಗ ಹಾಕಿ ಕುಳಿತುಕೊಂಡರು. ಮಂಚದ ಕೆಳಗೆ ಮಹಾಸ್ವಾಮೀಗಳ ಅಪ್ಪಣೆಯ ಮೇರೆಗೆ ಸಮೀಪ ಸನ್ನಿಧಿಯಲ್ಲಿಯೇ ನಾನು ಕುಳಿತೆ. ಹಿರಿಯರೆಲ್ಲಾ ನೆರೆದಮೇಲೆ ಮಹಾ ಸ್ವಾಮಿಗಳು “ಪ್ರಸ್ತಾಪ ಮಾಡಿದರು. ಭಕ್ತರನ್ನು ಕರೆಸಿಕೊಂಡ ಕಾರಣವನ್ನು ಶಿವಯೋಗಮಂದಿರದ ಸಾಲ ತೀರಿಸಲು ಊರ ಭಕ್ತರೆಲ್ಲ ತಮ್ಮೂರಿನ ಗೌರವಕ್ಕೆ ತಕ್ಕಂತೆ ತಾವು ತಮ್ಮ ಪಟ್ಟಿ ಕೊಟ್ಟು ಉಳಿದವರಿಂದಲೂ ಊರಲ್ಲೆಲ್ಲ ಪಟ್ಟಿ ಮಾಡಿ ಆ ಹಣ ಸಂಗ್ರಹಿಸಿ ಕೊಡಬೇಕು ಇದು ಸ್ವಾಮಿಗಳ ಅಪ್ಪಣೆ. ಇಂಥ ವಿಷಯ ನಮ್ಮೂರಿಗೇನೂ ಹೊಸದಲ್ಲ. ಪುರಾಣ, ಪುಣ್ಯ ಕಥೆ, ಕೀರ್ತನ, ಭಾಷಣ ಮುಂತಾದವು . ಮೇಲಿಂದ ಮೇಲೆ ನಡೆದು ಒಂದು ವಿಶೇಷ ಭಕ್ತಿಯಲ್ಲಿ ಬೆಳೆದುಬಂದ ನಮ್ಮೂರಿಗೆ ಇಂಥ ಪಟ್ಟಿ ಒಂದು ಸಂತೋಷದ ಸುದ್ದಿ, ಊರಲ್ಲಿ ಪಕ್ಷ ಪಂಗಡಗಳಿದ್ದುದು ನಿಜ. ಆಗೀಗ ಹೊಡೆದಾಟ, ಬಡೆದಾಟ ಆಗುತ್ತಿದ್ದುದೂ ಸತ್ಯ. ಆದರೆ ಯಾವ ಪಕ್ಷ ಪಂಗಡಗಳಲ್ಲಿ ಭಕ್ತಿಗೆ ಬರ ಇದ್ದಿಲ್ಲ, ಕೊಡುವ ಕೈಗೆ ಹಿಡಿತ ಇರಲಿಲ್ಲ. ಸಾಮಾನ್ಯವಾಗಿ ಬಹುಜನರಲ್ಲಿ ಉದಾರಭಾವ, ಸ್ವಾಮಿಗಳೆಂದರೆ ಭಯ-ಭಕ್ತಿ.

ಈ ಮಾತನ್ನು ನಾನು ಹೇಳುತ್ತಿರುವುದು ನಮ್ಮ ನೆರೆಯೂರುಗಳಾದ ಹಾಳಕೇರಿ, ಕೊಪ್ಪ, ನರೇಗಲ್ಲು ಮುಂತಾದ ಊರುಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಭಕ್ತಿಯ ಭಾವಕ್ಕೆ ಔದಾರ್ಯಕ್ಕೆ ನಮ್ಮೂರು ಹೆಸರು. ಗುಡಿಯಲ್ಲಿ ಕೂಡಿದ ಹಿರಿಯರೆಲ್ಲ ಭಿಕ್ಷೆ ಕೊಡಲು ಒಪ್ಪಿದರು ನಿರರ್ಗಳ ಮನಸ್ಸಿನಿಂದ.

ಆಗ ಹುಟ್ಟಿದ ಪ್ರಶ್ನೆ – ಯಾರು, ಎಷ್ಟು ಕೊಡಬೇಕು, ಕೂಡಿಸಿಕೊಡಬೇಕು ಎಂಬುದು. ಹಾಳಿ ಲೆಕ್ಕಣಿಕೆ ತರಿಸಿದ್ದಾಯಿತು. ತಾವು ಕೊಡಬೇಕಾದ ಮೊತ್ತವನ್ನು ಬರೆಯಲು ಅಪ್ಪಣೆಯಾಯಿತು. ಹಿರಿಯ ಕುಳಗಳು ಅಂದಾನಿಗೌಡರು, ಕೊಪ್ಪದ ಧರ್ಮಪ್ಪನವರು ಮುಂತಾದವರು ಮೊದಲು ತಮ್ಮ ಸಂಖ್ಯೆ ಒಡೆಯಬೇಕು. ಆದರೆ ಅವರೇಕೋ ಹಿಂದೆಗೆದು ನನಗೇ ನನ್ನ ಅಂಕಿಯನ್ನು ಬರೆಯಲು ಆಗ್ರಹಪಡಿಸಿದರು. ಬೇಡವೆಂದರೂ ಕೇಳಲಿಲ್ಲ. ಮತ್ತುಳಿದವರಿಂದಲೂ ಅದೇ ಒತ್ತಾಯ, ಮೂವತ್ತರಿಂದ ಅರವತ್ತು ಕೂರಿಗೆ ಜಮೀನು ಇದ್ದ ಅವರ ಮುಂದೆ ನಾನೇನು ಬರೆಯಬೇಕು ? ಕರ್ನಾಟಕ ಕಾಲೇಜಿನಲ್ಲಿ ನಾನು ಅಧ್ಯಾಪಕ, ಬರುವ ಸಂಬಳ ಬಹಳ ಕಡಿಮೆ. ನಮಗಿದ್ದ ಜಮೀನು ಕೇವಲ ಹನ್ನೊಂದು ಎಕರೆ ! ಈ ಆರ್ಥಿಕ ಪರಿಸ್ಥಿತಿಯಲ್ಲಿ ನಾನು ಪಟ್ಟಿ ಎಷ್ಟು ಕೊಡಬೇಕು ? ನನಗನಿಸುವಂತೆ ನನ್ನ ಗರಿಷ್ಠಮಿತಿ ಐದು ರೂಪಾಯಿ. ಸಾಮಾನ್ಯ ಲೆಕ್ಕಾಚಾರದಲ್ಲಿ ಬರಿ ಎರಡು, ಮುಂದೆ ? ಆಗ ಹೊಳೆಯಿತು ಒಂದು ವಿಚಾರ ನನಗೆ ನಾನು ಐದು ರೂಪಾಯಿ ಕೊಟ್ಟರೆ ಉಳಿದ ಹಿರಿಯ ಕುಳಗಳೆಲ್ಲ ಎಂಟು ಹತ್ತು ರೂಪಾಯಿ ತಮ್ಮ ಗರಿಷ್ಠ ಎಂದು ಲೆಕ್ಕಹಾಕಿ ಕೊಡಬಹುದು. ಹೀಗಾದರೆ ಊರಿನ ಒಟ್ಟು ಭಿಕ್ಷೆ ಮೂರು-ನಾಲ್ಕು ನೂರರ ಒಳಗೆ ಆಗಬಹುದು. ಕನಿಷ್ಠ ಒಂದು ಸಾವಿರವನ್ನಾದರೂ ಮೀರಬೇಕು ನಮ್ಮೂರ ಭಿಕ್ಷೆ. ನನಗೆ ಇದ್ದ ತೊಂದರೆ ನನಗಿರಲಿ ಎಂದುಕೊಂಡು ನನ್ನ ಹೆಸರಿಗೆ ಇಪ್ಪತ್ತೈದು ರೂಪಾಯಿ ಬರೆದೆ. ಒಮ್ಮೆಲೇ ಬರೆದುದಕ್ಕಾಗಿ ಮಹಾಸ್ವಾಮಿಗಳಿಗೆ ಸ್ವಲ್ಪ ಸಂಶಯ ಬಂದಂತೆ ಕಂಡಿತು,

ನಾನು ಒಂದು ಎರಡು ಬರೆದರೆ ಪಟ್ಟಿ ಹೆಚ್ಚು ಏಳುವ ಸಂಭವವೇ ಇದ್ದಿರಲಿಲ್ಲ. ಅದಕ್ಕೆ ಮಹಾಸ್ವಾಮಿಗಳು ಒಮ್ಮೆಲೇ “ತತಾ ಇಲ್ಲೆ’ ಎಂದು ನನ್ನಿಂದ ಪಟ್ಟಿಯ ಕಾಗದವನ್ನು ಇಸಿದುಕೊಂಡರು. ನನ್ನ ಅಂಕಿ ಅವರಿಗೆ ಆಶ್ಚರ್ಯವಾಯಿತು;ಆನಂದವು ಆಯಿತು. ತಿರುಗಿ ನನ್ನ ಕೈಗೇ ಕೊಟ್ಟರು ಆ ಕಾಗದವನ್ನು ಉಳಿದವರಿಗೂ ಗೊತ್ತಾಯಿತು ನನ್ನ ಸಂಖ್ಯೆ. ಮುಧೋಳಫಕ್ಕಿರಪ್ಪ ನವರು ಮುಂತಾದ ಹಿರಿಯರು ಈ ಅಂಕಿಯನ್ನು ನೋಡಿ”ಇವರದೇನು ಯಾವಾಗಲೂ ಹೀಂಗ .ಇವರ್ನ ನಮ್ಮ ಲೇಕ್ಕಕ ತೊಗಾಳ್ಳಾಕ ಬರೂದಿಲ್ಲ” ಅಂದರೆ ಇವರ ಪ್ರಮಾಣದ ಪ್ರಕಾರ ತಾವು ಕೊಡಲು ಅಸಮ್ಮತಿ ವ್ಯಕ್ತಪಡಿಸಿದರು. ಏನೇ ಇರಲಿ ಆ ಸಂಖ್ಯೆ  ಒಂದು ‘ಮೋಡಿ’ ಆಯಿತು. ಏಕೆ? ಮೇಲೆ ಹೇಳಿದ ಹಿರಿಯರು, ಶ್ರೀಮಂತರು,ವತನದಾರರು, ದೊಡ್ಡ ಕುಳಗಳು ಇಪ್ಪತ್ತೈದುಕಿಂತ ಕಡಿಮೆ ಹೇಗೆ ಕೊಡಬೇಕು? ಅವರು ಮುವತ್ತರಿಂದ ಐವತ್ತರವರೆಗೆ ತಮ್ಮ ಸಮ್ಮತಿ ವ್ಯಕ್ತಪಡಿಸಿ ಮತ್ತೆ ಹಣ ಸಂಗ್ರಹಿಸಿ ಕೊಡಲು ಒಪ್ಪಿಕೊಂಡರು. ಇನ್ನುಳಿದವರು, ಅಂದರೆ ಒಂದು-ಎರಡು ಕೊಡುವವರು ಕನಿಷ್ಠ ಹತ್ತು ರೂಪಾಯಿ ಕೊಡಬೇಕಾಯಿತು; ಕೊಟ್ಟರು. ಮಹಾಸ್ವಾಮಿಗಳವರಿಗೆ ಬಹಳ ಆನಂದವಾಯಿತು. ಆನಂದದಲ್ಲಿಯೇ ಸಭೆ ವಿಸರ್ಜನವಾಯಿತು. ಮುಂದೆ ನನಗೆ ನೆನಪಿದ್ದಂತೆ ಮೂರುನಾಲ್ಕು ದಿನಗಳಲ್ಲಿ ನಮ್ಮೂರ ಭಿಕ್ಷೆ ೧೮೦೦ಕ್ಕೆ (ಒಂದು ಸಾವಿರದ ಎಂಟು ನೂರಕ್ಕೆ) ಏರಿತು. ಈ ಹಣ ಉದ್ದೇಶಿತ ಹಣವಿಲ್ಲ, ರೋಖ ಮೊತ್ತ.ಊರಲೆಲ್ಲ ಕೂಡಿದುದು,ಇದರಲ್ಲಿ ಆಶ್ಚರ್ಯವೆನೆಂದು ನೀವು ಕೇಳಿದರೆ, ಆಗ ನಮ್ಮೂರಲ್ಲಿ ಸುಮಾರು ಏಳು ನೂರು ಮನೆ, ನಾಲ್ಕು ಸಾವಿರ ಒಟ್ಟು ಜನಸಂಖ್ಯೆ.ಇವರ ಕೊಟ್ಟ ಪಟ್ಟಿಯ ಹಣ ಅಂದಿನ ೧೮೦೦ (ಒಂದು ಸಾವಿರದ ಎಂಟು ನೂರು) ರೂಪಾಯಿಗಳು.

ಮಹಾಸ್ವಾಮಿಗಳವರು ನಿಡಗುಂದಿಯಿಂದ ನಿರ್ಭರ ಸಂತೋಷದಿಂದ ಪೂಜೆ ಪ್ರಸಾದ ಮುಗಿಸಿಕೊಂಡು ನಮ್ಮೂರಿಗೆ ಆಶೀರ್ವಾದಿಸಿ ಹೋದರು.

ಈ ಮಹಾಸ್ವಾಮಿಗಳವರು ಒಟ್ಟು ಎಷ್ಟು ಹಣ ಕೂಡಿಸಿದರು ನನಗೆ ಕಲ್ಪನೆ ಇಲ್ಲ. ಆದರೂ ಹೆಚ್ಚು ಕಡಿಮೆ ಹನ್ನೆರಡು ಸಾವಿರ ಇರಬಹುದು. ಇದರಂತೆ ಉಳಿದ ಸ್ವಾಮಿಗಳು, ಶಿವಯೋಗ ಮಂದಿರದ ಅಭಿಮಾನಿಗಳಾದ ಸಮಾಜದ ಮುಖಂಡರು ಕೂಡಿಸಿದ ಹಣದಿಂದ ಶಿವಯೋಗ ಮಂದಿರದ ಎಲ್ಲಾ ಸಾಲ ತೀರಿತೆಂದು ತೋರುತ್ತದೆ.

ಈ ಮೇಲಿನ ಮಾತಿನಲ್ಲಿ ತಪ್ಪು ಒಪ್ಪಿಕೊಳ್ಳುವ ಒಂದು ಪ್ರಸಂಗವಿದೆ. ನೆನಪಿನ ಸ್ಖಾಲಿತ್ಯ ಅಥವಾ ಸತ್ಯ ಸಂಗತಿಗಳ ಅರಿವಿನ ಕೊರತೆ ಸಾಮಾನ್ಯವಾಗಿ ಅನೇಕರಲ್ಲಿ ಕಂಡುಬರುತ್ತದೆ. ನಾನು ಮೇಲೆ ಹೇಳುವ ಇದೆ ‘ನಿರಾಧಾರ’ ವೇ ಕಾರಣ. ಏಕೆಂದರೆ- ಈ ಲೇಖನ ಬರೆಯುವಾಗ ಮಧ್ಯದಲ್ಲಿ ೧-೪-೧೯೮೯ ರಂದು ನಾನು ಬೆಳಗಾಂವಿಗೆ ಹೋದಾಗ ನಾಗನೂರ ಶಿವಬಸವ ಮಹಾಸ್ವಾಮಿಗಳಿಂದ ಖಚಿತವಾಗಿ ತಿಳಿದುಬಂದಂತೆ ಶಿವಯೋಗ ಮಂದಿರದ ಸುಮಾರು ೪೫ (ನಾಲ್ವತ್ತೈದು) ಸಾವಿರ ರೂಪಾಯಿಗಳ ಸಾಲವನ್ನೆಲ್ಲ-ಇದಲ್ಲದೇ ಮತ್ತೂ ತಿಳಿದುಬರುವಂತೆ ಶಿವಯೋಗಮಂದಿರಕ್ಕಾಗಿ ಮಹಾಸ್ವಾಮಿಗಳವರು ಮುವತ್ತು-ಮುವತ್ತೈದುಸಾವಿರ ರೂಪಾಯಿಗಳನ್ನು ಕೂಡಿಸಿ ಕೊಟ್ಟ ಸಂಗತಿ ತಿಳಿದುಬಂದಿದೆ.

ಇದಲ್ಲದೆ ಶಿವಯೋಗ ಮಂದಿರದ ಉಪಯೋಗಕ್ಕಾಗಿ ಕಾಳು-ಕಡಿಯನ್ನು ಕೂಡಿಸಿ ಕಳಿಸಿಕೊಡುತ್ತಿದ್ದರು. ಇದಕ್ಕೆ ಉದಾಹರಣೆ ಎಂದರೆ, ಒಮ್ಮೆ ಶಿವಯೋಗ ಮಂದಿರಕ್ಕೆ ಕಾಳಿನ ಕೊರತೆಯಾದಾಗ ನಮ್ಮೂರು ನಿಡಗುಂದಿ ಯವರೆಗೆ ಮೂರು-ನಾಲ್ಕು ದಿನಗಳಲ್ಲಿ ಸುಮಾರು ೬೫ ಚೀಲ ಜೋಳ ಹಾಗೂ ಗೋಧಿಯನ್ನು ಕೂಡಿಸಿ ಕೊಟ್ಟಿದ್ದು ನನಗೆ ಗೊತ್ತಿದೆ, ಮತ್ತೂ ಈ ಬಗ್ಗೆ ನನಗೆ ಗೊತ್ತಿರುವ ಸಂಗತಿ ಎಂದರೆ, ಈ ಕಾಳನ್ನು ಶಿವಯೋಗ ಮಂದಿರಕ್ಕೆ ಸಾಗಿಸಿಕೊಂಡು ಹೋಗುವುದೇ ಮಂದಿರದವರೆಗೆ ಆಗಲಿಲ್ಲ. ಅದಕ್ಕಾಗಿ ನಮ್ಮ ಊರವರೇ ತಾವೇ ಬಂಡಿಯನ್ನು ಕಟ್ಟಿಕೊಂಡು ಕಾಳನ್ನು ಮಂದಿರಕ್ಕೆ ಮುಟ್ಟಿಸಿ ಬಂದರು. ಶಿವಯೋಗಮಂದಿರ ಪುಣ್ಯಕ್ಷೇತ್ರದ ಪ್ರಭಾವ, ಅದಕ್ಕೂ ಮುಖ್ಯವಾಗಿ ಪೂಜ್ಯ ಶ್ರೀಗಳವರ ಬಗ್ಗೆ ನಮ್ಮೂರಿನ ಜನರಿಗಿದ್ದ ಅಪಾರ ಭಕ್ತಿ ಇವೇ ಅದಕ್ಕೆ ಕಾರಣ.

ಬೆಳಗಾವಿಂಯಲ್ಲಿ ನನಗೆ ತಿಳಿದುಬಂದ ಮತ್ತೊಂದು ಮಹತ್ವದ ವಿಷಯವೆಂದರೆ ಬೆಳಗಾಂವ ಜಿಲ್ಲೆಯ ನಾಗನೂರು ಶಿವಬಸವ ಸ್ವಾಮಿಗಳವರೆಗೆ ಅನುಗ್ರಹ ಮಾಡಿ ಅಲ್ಲಿರುವ ರುದ್ರಾಕ್ಷಿ ಮಠಕ್ಕೆ ಅಧಿಕಾರ ಕೊಟ್ಟವರು ಹಾಳಕೇರಿಯ ಅನ್ನದಾನ ಮಹಾಸ್ವಾಮಿಗಳವರೇ. ಈ ಸಂದರ್ಭದಲ್ಲಿ ಒಡೆದು ಮೂಡುವ ಒಂದು ಉಜ್ವಲ ಸಂಗತಿಯೆಂದರೆ ಅನ್ನದಾನಿ ಮಹಾಸ್ವಾಮಿಗಳವರಿಂದ ಅನುಗ್ರಹೀತರಾಗಿರುವ ಶಿವಬಸವ ಮಹಾಸ್ವಾಮಿಗಳು ಬೆಳಗಾಂವಿಯ ಭಾಗವಾದ ಶಹಾಪುರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಮುವತ್ತು ಮುವತ್ತೈದು ಹುಡುಗರಿಗೆ ಪ್ರಸಾದ ಕೊಟ್ಟು ಅವರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟರು ಇಂದಿಗೆ ಸುಮಾರು ಐವತ್ತು ವರ್ಷಗಳ ಹಿಂದೆ. ಈಗ ಈ ಪ್ರಸಾದ ನಿಲಯ ಈ ಅರ್ಧ ಶತಮಾನದಲ್ಲಿ ಬೃಹದಾಕಾರವನ್ನು ತಾಳಿ ಈಗ ಸುಮಾರು ನಾಲ್ಕೈದು ನೂರು ವಿದ್ಯಾರ್ಥಿಗಳಿಗೆ ಪ್ರಸಾದ ಕೊಡುತ್ತಿರುವರಲ್ಲದೆ ಬೇರೆ ಬೇರೆ ಕಡೆ ಶಿಕ್ಷಣ ಸಂಸ್ಥೆಗಳನ್ನೂ ಮತ್ತು ಬೆಳಗಾವಿಯ ವಸತಿ ಪ್ರೌಢಶಾಲೆ (ರೆಸಿಡೆನ್ಸಿಯಲ್ ಹೈಸ್ಕೂಲ್)ಯನ್ನು ತೆಗೆದು ಒಂದು ಆದರ್ಶವನ್ನು ಕಟ್ಟಿದ್ದಾರೆ. ಸಮಾಜದ ಸ್ವಾಮಿಗಳ ಕಣ್ಣಮುಂದೆ ಇಂದು ತೊಂಭತ್ತೊಂಭತ್ತನೆಯ ವಯಸ್ಸಿನಲ್ಲಿರುವ ಶೀಲ  ವ್ರತ ಪೂಜೆ ಮತ್ತು ವ್ಯವಹಾರ ಕುಶಲತೆ ನೋಡಿ ಕಲಿತುಕೊಳ್ಳುವಂತಿವೆ, ಈ ಶತಸಾಮೀಪಾಯುಷ್ಯದ ತಪಸ್ವಿಗಳಲ್ಲಿ ನನಗೆ ತಿಳಿದುಬರುವಂತೆ ಇವರ ಶತಮಾನೋತ್ಸವವೂ ಉತ್ತರ ಕರ್ನಾಟಕದ ವೀರಶೈವ ಸಮಾಜ ಬಾಂಧವರಿಂದ ಅತ್ಯಂತ ವ್ಯಾಪಕವಾಗಿ ವಿಜೃಂಭಣೆಯಿಂದ ಮುಂದಿನ ವರ್ಷ ನೆರವೇರುವ ಭರಭರಾಟೆಯಲ್ಲಿದ್ದಂತಿದೆ ನಡೆಯಲಿ. ಸಮಾಜದ ನವ್ಯ ನವ ಜಾಗೃತಿ ಮೂಡಿಬರಲಿ. ಈ ಕಲ್ಯಾಣ ಪ್ರಸಂಗವನ್ನು ಅನ್ನದಾನಿ ಸ್ವಾಮಿಗಳವರೇ ಕಣ್ಣಾರೆ ಕಾಣುವಂತಿದ್ದರೆ ಅವರಿಗೆ ಆಗಬಹುದಾದ ಆನಂದ ಯಾವ ಕೋಟಿ!

ಇನ್ನು ಮುಂದೆ ನಾವು ಬರಬೇಕು ಜಾಲಿಹಾಳ-ಬೇಲೂರಿಗೆ, ಅನ್ನದಾನಿ ಮಹಾಸ್ವಾಮಿಗಳವರ ಶ್ರೀಮಠದಲ್ಲಿ ನಡೆಸಿದ ಧಾರ್ಮಿಕ ಕಾರ್ಯದ ಚೈತನ್ಯಮಯ ಚಟುವಟಿಕೆಗಳನ್ನು ನಿರೀಕ್ಷಿಸಲಿಕ್ಕೆ. ಮಹಾಸ್ವಾಮಿಗಳಿಗಿದ್ದ ಸುಮಾರು ಇಪ್ಪತ್ತೇಳು ಮಠಗಳಲ್ಲಿ ಇದು ಒಂದು ಮಠ. ಬೇಲೂರು ಮತ್ತು ಜಾಲಿಹಾಳಗಳನ್ನು ಒಂದೆರಡು ಹೊಲಗಳ ಪಟ್ಟಿ ವಿಭಾಗಿಸುವ ಒಂದು ಕೂಡುಹಳ್ಳಿಯ ಪಟ್ಟಣವಾದರೂ ಈ  ಮಠಕ್ಕೆ ಜಾಲಿಹಾಳಮಠವೆಂದೇ ಪ್ರಸಿದ್ಧಿ ಇದೆ. ಇಲ್ಲಿ ನಾವು ಬಂದುದಕ್ಕೆ? ಕಾರಣ ಹೇಳುತ್ತೇನೆ.

ಇಂದಿಗೆ ಸುಮಾರು ಅರವತ್ತು ವರ್ಷಗಳ ಹಿಂದೆ ಮಹಾಸ್ವಾಮಿಗಳವರು ಈ ಭಾಗದ ಧರ್ಮ ಭಕ್ತಿ ಆಚಾರ ಹಾಗೂ ಸಂಸ್ಕೃತಿಯ ಬರಗಾಲವನ್ನು ಹೋಗಿಸಲೆಂದೇನೋ ಈ ಕಡೆ ದೃಷ್ಟಿ ಹರಿಸಿದರು. ತಮ್ಮ ಜಾಲಿಹಾಳಮಠದಲ್ಲಿ ಪುರಾಣ ಪ್ರವಚನ ಮುಂತಾದುವನ್ನು ನಡೆಸಿ, ಆ ಭಾಗದ ಜನತೆಯಲ್ಲಿ ಒಂದು ಜಾಗೃತಿಯನ್ನು ತಂದುಕೊಟ್ಟು ಆ ಭಾಗದ ಮುಖವನ್ನು ಅಜ್ಞಾನದಿಂದ ತಿರುಗಿಸಿ ಶಿವಸಂಸ್ಕೃತಿಯತ್ತ ಸಾಗಿಸಬೇಕೆಂದು ಹವಣಿಗೆ ಹಾಡಿದರು. ಆಗ ಪುರಾಣ ಪ್ರವಚನ ಮಾಡುವಲ್ಲಿ’ ದಿಗ್ವಿಜಯ ಪಟು’ವೆಂದುನಿಸಿಕೊಳ್ಳಬಲ್ಲ ಬಿಜಾಪುರದ ಶಂಭುಲಿಂಗ ಪಟ್ಟದ ದೇವರನ್ನು ಜಾಲಿಹಾಳಮಠದಲ್ಲಿ ಪ್ರವಚನ ಮಾಡಲು ಆಮಂತ್ರಣ ಕಳಿಸಿದರು. ಕೆಲವರು ಪ್ರಮುಖರು ಈ ಪಟ್ಟದ್ದೇವರು ಠೀವಿಯ ಪಟ್ಟದ್ದೇವರು ಪಂಚಾಚಾರ್ಯ ಪಕ್ಷದವರು. ಅಂದರೆ ವಿರಕ್ತರಾದ ಅನ್ನದಾನಿ ಮಹಾಸ್ವಾಮಿಗಳವರಿಗೆ ಪ್ರತಿಪಕ್ಷದವರೆನಿಸಿಕೊಳ್ಳುವಂತೆ ಇದ್ದವರು. ತಮ್ಮನ್ನು ಆಮಂತ್ರಿಸಬಂದ ಪ್ರಮುಖರಿಗೆ ಖಂಡ ತುಂಡವಾಗಿ ಹೇಳಿದರು ಈ ಶಂಭುಲಿಂಗ ಸ್ವಾಮಿಗಳು. ಮೊದಲೇ ಕರಾರು ಹಾಕಿದರು ‘ನಮ್ಮ ಪೂಜೆ ಪ್ರಸಾದ ಅನ್ನದಾನಿ ಸ್ವಾಮಿಗಳ ಸಂಗಡ ನಡೆಯಬಾರದು. ನಮ್ಮ ವ್ಯವಸ್ಥೆ ಬೇರೆ ಕಡೆಯೇ ನಡೆಯಬೇಕು ಮತ್ತು ಆ ಸ್ವಾಮಿಗಳ ಬಗ್ಗೆ ನಮಗೆ ಗೌರವ ಇದೆಯಾದರೂ ನಾವು ಅವರಿಗೆ ನಮಸ್ಕಾರ ಮಾಡುವವರಲ್ಲ. ಈ ಕರಾರು ಒಪ್ಪಿದರೆ ನಾವು ಬರಬಹುದು’. ಬಿಜಾಪುರದಿಂದ ಈ ಕರಾರು ಮತ್ತು ಒಪ್ಪಿಗೆಯನ್ನು ಹೊತ್ತುಕೊಂಡು ಪ್ರಮುಖರು ಜಾಲಿಹಾಳಿಗೆ ತಿರುಗಿ ಬಂದರು. ಪಟ್ಟದ ಸ್ವಾಮಿಗಳ ಒಪ್ಪಿಗೆಗೆ ಕರಾರಿನ ಈ ಮುಂಗಥೆಯನ್ನು ವಿವರಿಸಿದರು ಅನ್ನದಾನಿ ಸ್ವಾಮಿಗಳ ಮುಂದೆ. ಎಂದಿಗೂ ಗಂಭೀರ ಮುದ್ರೆಯ ಮಹಾಸ್ವಾಮಿಗಳು ನಸುನಗೆ ನಕ್ಕರು.”ಅವರು ಹೇಳಿದಂತೆ ಅವರ ಪೂಜೆಯ ವ್ಯವಸ್ಥೆ ಬೇರೆ ಮಾಡಿರಿ. ಮತ್ತು ಅವರಿಂದ ನಮಸ್ಕಾರವನ್ನು ನಾವೆಂದು ಅಪೇಕ್ಷಿಸುವುದಿಲ್ಲ. ಅವರನ್ನು ಕರೆದುಕೊಂಡು ಬರ್ರಿ”ಎಂದು ಪ್ರಮುಖರನ್ನು ಕಳುಹಿಸಿಕೊಟ್ಟರು.

ಶಂಭುಲಿಂಗ ಮಹಾಸ್ವಾಮಿಗಳು ಜಾಲಿಹಾಳಿಗೆ ಬಂದು ಪ್ರವಚನ ಪ್ರಾರಂಭ ಮಾಡಿದರು. ಯಾವ ಪುರಾಣ? ನನಗೆ ಗೊತ್ತಿಲ್ಲ. ಅಥವಾ ನೆನಪಿಲ್ಲ. ಆಗ ನಾನು ಹದಿನೈದು ಹದಿನಾರರ ವಯಸ್ಸಿನಲ್ಲಿರಬಹುದು. ಪುರಾಣ ಪ್ರವಚನಕ್ಕೆ ಪೂರ್ವರಂಗ ಪುರಾಣಿಕರು ಬಂದು ತಮ್ಮ ವ್ಯಾಸ ಪೀಠದ ಮೇಲೆ ಕುಳಿತು, ಮುಂದೆ ನಾಲ್ಕು ಕಾಲಿನ ಮಣೆಯ ಮೇಲೆ ಪುರಾಣವನ್ನಿಟ್ಟು ಎಡಗಡೆ ಬಲಗಡೆ ಬೆಳಗುವ ಸಮೆ; ಸಂಗೀತ ವಾದ್ಯಗಳು ತಬಲಾ, ಪಿಯಾನೋ. ಪ್ರವಚನ ಪ್ರಾರಂಭವಾಗುವ ಮುನ್ನ ಅನ್ನದಾನ ಮಹಾಸ್ವಾಮಿಗಳು ಪುರಾಣ ಮಂಟಪಕ್ಕೆ ದಯಮಾಡಿಸುವುದು. ಮಹಾಸ್ವಾಮಿಗಳವರ ತತ್ವ ‘ಲಾಂಛನಕ್ಕೆ ಶರಣೆಂಬೆ’ ಎಂಬುದು. ಬಂದವರು ಶಂಭುಲಿಂಗ ಸ್ವಾಮಿಗಳಿಗೆ ನಮಸ್ಕಾರ ಮಾಡಿ ತಮ್ಮ ಆಸನದ ಮೇಲೆ ಕುಳಿತುಕೊಳ್ಳುವುದು.

ಹಾಳಕೇರೆಯ ಅಜ್ಜನವರು ತಾವಾಗಿಯೇ ಮಣಿದುದ್ದನ್ನು ಕಂಡು ಶಂಭುಲಿಂಗ ಸ್ವಾಮಿಗಳ ಠೀವಿಯ ಮನಸ್ಸು ಮೇಣವಾಗಿರಬಹುದು. ಆಮೇಲೆ ಪ್ರಾರಂಭ ಪ್ರವಚನ, ಶಂಭುಲಿಂಗ ಸ್ವಾಮಿಗಳು ಸಂಸ್ಕೃತದಲ್ಲಿ  ಘನವಿದ್ವಾಂಸರು. ಕನ್ನಡ ಹಿಂದೀ ಮುಂತಾದ ನಾಲ್ಕೈದು ಭಾಷೆಗಳಲ್ಲಿ ಪ್ರಭುತ್ವವಿದ್ದವರು. ಸಂಗೀತ ವಿದ್ಯೆಯಲ್ಲಿ ಬಲ್ಲಿದರು. ಮಂಗಲ ಪಾಠಮಾಡಲು ದನಿ ತೆಗೆದರೆ ಅವರ ಮಧುರ ಗಂಭೀರನಾದ ಅತ್ಯಂತ ಆಕರ್ಷಣೀಯ. ಎಂಥ ಹೃದಯವನ್ನಾದರೂ ತಲೆದೂಗಿಸುವ ಅವರ ಸಂಗೀತ ಕಲಾ ಪ್ರತಿಭೆ. ಇಂಥ ಪುರಾಣಿಕರನ್ನು ಆ ಭಾಗದ ಕಿವಿ ಎಂದೂ ಕೇಳಿರಲಿಲ್ಲ. ಕಣ್ಣು ಇಂಥ ಹೇಳುವವರನ್ನು ಎಂದು ನೋಡಿರಲಿಲ್ಲ. ಭರ್ತಿ ನಡೆಯುವುದು ಪುರಾಣ. ಈ ಪುರಾಣದ ಸುದ್ದಿ ಸುತ್ತಮುತ್ತಲಿನ ಹಳ್ಳಿ-ಪಟ್ಟಣಗಳಿಗೆ ಹಬ್ಬಿ ಶ್ರೋತೃಗಳ ಸಂದಣಿ ದಿನೇ ದಿನೇ ಬೆಳೆಯುತ್ತಾ ಸುಮಾರು ಐದುಸಾವಿರದಿಂದ ಹತ್ತು ಸಾವಿರ ಜನರವರೆಗೆ ಸಾವಿರ ಸಂಖ್ಯೆಯಲ್ಲಿ ಬೆಳೆಯುತ್ತ ನಡೆಯಿತು. ನಾನು ನಮ್ಮ ಸೋದರ ಮಾವನ ಊರಾದ ಜಾಲಿಹಾಳನಲ್ಲಿ ಇದ್ದಾಗ ಪುರಾಣ ಕೇಳಲು ಹೋಗಿದ್ದೆ. ಮಠದ ಮುಂದಿರುವ ಅತ್ಯಂತ ವಿಶಾಲವಾದ ಬಯಲಿನಲ್ಲಿ ಜನ ತುಂಬಿದ್ದರೆ ಹೊರಗಡೆ ನೂರಾರು ಚಕ್ಕಡಿಗಳು.ಈ ಚಕ್ಕಡಿ ಗಳಲ್ಲಿ ಬಂದವರಲ್ಲದೇ ಹಳ್ಳಿ-ಪಟ್ಟಣಗಳಿಂದ ನಡೆದುಬಂದ ಸಂಖ್ಯೆ ಅದೆಷ್ಟೋ ಇರಬಹುದು.ಮತ್ತೆ ಇಲ್ಲಿ ಒಂದು ಎಚ್ಚರ. ನಾನು ಹೇಳುವ ಅಂಕಿ ಸಂಖ್ಯೆ ಬೆರಳೆಣಿಕೆಯಲ್ಲ ಕಣ್ಣೆಣಿಕೆ ಪುರಾಣ ಕೆಳಗೆ ಕಳೆ ಏರಿ ಭರ್ತಿ ನಡೆದಾಗ ಪಿಯಾನೋ ಬಾರಿಸುವವರಿಗಾಗಲಿ ಅಥವಾ ತಬಲಾ ನುಡಿಸುವವರಿಗಾಗಲಿ ರಾಗ-ತಾಳಗಳನ್ನು ಸರಿಯಾಗಿ ನಡೆಸಲು ನಡುನಡುವೆ ಒಂದು ನಿಷ್ಠುರದ ಆದೇಶ. ಸ್ವಾಮಿಗಳ ಸಂಗೀತ ಶಕ್ತಿಯ ಬಹಿರಂಗ ಪ್ರದರ್ಶನ ಇದು. ನನಗೆ ನೆನಪಿದ್ದಂತೆ ಅಂದೇ ಹರಕುಣಿಯ ಪಟ್ಟದೇವರು ಬಂದಿದ್ದರು ಪುರಾಣ ಹೇಳುವ ಪದ್ಧತಿಯನ್ನು ಕಲಿಯಲು. ಆಗ ನಾನು ಕಂಡ ಒಂದು ನಿಷ್ಠುರ ಪ್ರಸಂಗ. ಅದೇನು? ಪಂಚಾಚಾರ್ಯರ ಪಕ್ಷದಲ್ಲಿದ್ದ ಕುಂದಗೋಳ ತಾಲೂಕಿನ ಹರಕುಣಿ ಪಟ್ಟದೇವರ ಕಡೆ ಮುಖಮಾಡಿ ಎಷ್ಟೋ ಸಾರಿ ಆಚಾರ್ಯ ಪಕ್ಷದ ಅವರಿಗೆ ಒಂದು ಎಚ್ಚರಿಕೆ ನೀಡಿ, ಆ ಪಕ್ಷದಲ್ಲಿ ಅರ್ಥ ಉಳಿದಿಲ್ಲ ವೆಂಬಂತೆ ಬಹಿರಂಗ ಸೂಚನೆಯನ್ನು ಕೊಡುವಂತಿತ್ತು. ಇದರ ಅರ್ಥವೇನು? ಬಿಜಾಪುರದಿಂದ ಆಚಾರ್ಯ ಪಕ್ಷದವರಾಗಿ ಬಂದ ಶಂಭುಲಿಂಗ ಸ್ವಾಮಿಗಳು, ಹಾಲಕೆರೆಯ ಅನ್ನದಾನಿ ಸ್ವಾಮಿಗಳ ಮಹೋನ್ನತ ವಿನಯ ಭಾವಕ್ಕೆ ಆಗಲೇ ಮಾರು ಹೋಗಿ ‘ಮತಾಂತರ’ವಾದಂತಿತ್ತು.. ಅಂದರೆ ವಿರಕ್ತ ಸಂಪ್ರದಾಯದ ಸತ್ವಪೂರ್ಣ ಗಂಭೀರೋನ್ನತಿಗೆ ಮಾರುಹೋಗಿದ್ದರು.

ನಾನು ಕೇಳುವಂತೆ ಅನ್ನದಾನಿ ಸ್ವಾಮಿಗಳನ್ನು ಕಂಡಾಗ ತಾವೇ ಮೊದಲು ಮಣಿದು ನಮಸ್ಕಾರ ಮಾಡತೊಡಗಿದರು. ಬೇಲೂರಿನಲ್ಲಿ ನಡೆದ ಈ ಪುರಾಣದ ಪ್ರಸಂಗದಲ್ಲಿ ಅನೇಕ ಭಕ್ತರು ತಾವು ತಾವಾಗಿಯೇ ಪುರಾಣ ಕೇಳಲು ಬಂದ ಸಾವಿರಾರು ಭಕ್ತರ ದಾಸೋಹಕ್ಕಾಗಿ ದವಸ ಧಾನ್ಯಗಳನ್ನು ತಂದು ಮಠವನ್ನು ತುಂಬುತ್ತಿದ್ದರು. ಏಕೆಂದರೆ ಪುರಾಣ ರಾತ್ರಿ ೧೦ ಗಂಟೆಗೆ ಅಥವಾ ಮೀರಿ ನಡೆಯುತ್ತಿದ್ದು ಬಂದ ಜನ ಸಂದಣಿ ಅಲ್ಲಿಯೇ ಪ್ರಸಾದ ತೀರಿಸಿಕೊಂಡು ತಮ್ಮ ನೆರೆಯ ಹಳ್ಳಿಗೆ ಹೋಗುತಿದ್ದರು. ಈ ಪುರಾಣ ಸಂಭ್ರಮದ ಮಹಾಚಿತ್ರ ನನ್ನ ಹೃದಯದ ಕಣ್ಣಿನಲ್ಲಿ ಅಚ್ಚೊತ್ತಿದಂತಿದೆ. ಆ ಪುರಾಣವನ್ನು ಸಾಕ್ಷಾತ್ತಾಗಿ ಕೇಳುವಂತಿವೆ. ಇನ್ನೇನು? ಇಂಥ ಪುರಾಣವನ್ನು ನಾನು ನನ್ನ ಆಯುಷ್ಯ ಮಾನದಲ್ಲಿ ಕೇಳಿಲ್ಲ ಕಂಡಿಲ್ಲ. ಸುಮಾರು ನೂರಾರು  ಪುರಾಣಿಕರನ್ನು ನಾನು ನೋಡಿರಬಹುದು; ಕೇಳಿರಬಹುದು. ಆದರೆ ಇದಕ್ಕೆ ಸರಿ ದೊರೆಯಾದ ಪ್ರವಚನ ನನ್ನ ಅನುಭವಕ್ಕೆ ಎಂದೂ ಬಂದಿಲ್ಲ. ಆ ಮಟ್ಟ ಅಲ್ಲಿ, ಈ ಮಟ್ಟ ಇಲ್ಲಿ! ಮತ್ತೊಂದು ಮಾತು. ಅನ್ನದಾನಿ ಮಹಾಸ್ವಾಮಿಗಳವರು ನೆರವೇರಿಸಿದ ಪುರಾಣ ಪ್ರವಚನ ಪ್ರಸಂಗಗಳಲ್ಲಿ ಇಂಥದ್ದು ಏಕೈಕ ಪ್ರಸಂಗ ಆಗಿರಬಹುದೆಂದು ನನ್ನ ಲೆಕ್ಕ. ಮಾಡುವಲ್ಲಿ (ಬಬಲಾದಿಯ ಹತ್ತಿರ ಇರುವ) ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳು! ಭಾಷಣ ಮಾಡುವಲ್ಲಿ ಕೊಪ್ಪದ ಅಥವಾ ಇಳಕಲ್ಲಿನ ಮಹಾಂತಸ್ವಾಮಿಗಳನ್ನು. ಧಾರ್ಮಿಕ ಶ್ರಾವಣಮಾಸದಲ್ಲಿ ಇವರೇ ನನ್ನ ಮನವನ್ನು ಮಾರಿಗೊಂಡ ಮಹಾವ್ಯಕ್ತಗಳು. ಇನ್ನು ಮುಂದೆ ಮಾತಿಲ್ಲ.

ಮೊದಲು ಕಟ್ಟಾ ಪಂಚಾಚಾರ್ಯ ಪಕ್ಷದವರಾಗಿದ್ದ ಶಂಭುಲಿಂಗ ಪಟ್ಟದ ದೇವರು ಜಾಲಿಹಾಳಿಗೆ(ಬೇಲೂರಿಗೆ) ಪುರಾಣ ಹೇಳಲಿಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಬಂದದ್ದು ಸತ್ಯ. ಆದರೆ ಅನ್ನದಾನೀಶ್ವರ ಮಹಾಸ್ವಾಮಿಗಳವರ ಗಂಭೀರ ವ್ಯಕ್ತಿತ್ವದ ಪ್ರಭಾವದಿಂದ ಅವರ ಹೃದಯದಲ್ಲಿ ಒಂದು ಪರಿವರ್ತನೆ ತಲೆದೋರಿ ಅದು ಚಿರಸ್ಥಾಯಿಯಾಗಿ ನೆಲೆಯೂರಿತು. ಏಕೆಂದರೆ ಅವರಲ್ಲಿ ಲೋಕ ಅಲೌಕಿಕದ ಬಗೆಗೆ ಒಂದು ತರಹದ ವಿರಕ್ತಿ ಒಡಮೂಡಿ ಅವರು ತಮ್ಮ ವಾಸಸ್ಥಳವಾದ ಬಿಜಾಪುರವನ್ನು ಬಿಟ್ಟು ಹುಲ್ಯಾಳಲ್ಲಿ (ತಾಲೂಕ ಜಮಖಂಡಿ. ಜಿಲ್ಲಾ ಬಿಜಾಪುರ) ಆಶ್ರಮ ಕಟ್ಟಿಕೊಂಡು ಒಳ್ಳೆಯ ತಪಸ್ವಿಗಳಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಭಾವಲಯವನ್ನು ವಿಸ್ತರಿಸಿದರು. ಅವರು ಈ ತಪೋಭೂಮಿಯಲ್ಲಿ ಹೆಚ್ಚುಕಡಿಮೆ ನೂರು ವರ್ಷ ಬದುಕಿ ಲಿಂಗೈಕ್ಯರಾದರು. ಅಲ್ಲಿ ಇವರ ಗದ್ದುಗೆ, ನಿತ್ಯಾಭಿಷೇಕ, ಪ್ರತಿವರ್ಷ ಮಹೋತ್ಸವ ಇಂದೂ ಜರುಗುತ್ತಿದೆ ಎಂಬುದು ನಾನು ಕೇಳುತ್ತಿರುವ ವಿಷಯ.

ಜಾಲಿಹಾಳದಲ್ಲಿ ಅನ್ನದಾನಿ ಮಹಾಸ್ವಾಮಿಗಳ ದರ್ಶನ ಪಡೆದು ತನ್ನ ಬಾಲ್ಯಾವಸ್ಥೆಯಲ್ಲಿ. ಈ ಘಟನೆ ನಡೆದ ಮೇಲೆ ಮುಂದೆ ಹತ್ತು-ಹದಿನೈದು ವರ್ಷಗಳ ನಂತರ ೧೯೪೦ರ ಎಡ-ಬಲ ನಡೆದ ಮತ್ತೊಂದು ಮಹತ್ವದ ಪ್ರಸಂಗ. ನಮ್ಮ ತಾಯಿಯ ತಮ್ಮ, ಅಂದರೆ ನಮ್ಮ ಸೋದರ ಮಾವ ಗುರುಪಾದಯ್ಯನವರು ಇಟಗಿಯಲ್ಲಿದ್ದ ತನ್ನ ಎಂಟು ಹತ್ತು ಎಕರೆ ಜಮೀನನ್ನು ಬಿಟ್ಟು ಗಂಡನನ್ನು ಕಳೆದುಕೊಂಡಿದ್ದ ತಂಗಿ ಬಸಮ್ಮನಿಗೆ ದತ್ತಕ ಮಗನಾಗಿ ಜಾಲಿಹಾಳಿಗೆ ಹೋದ. ಅವರ ಅಲ್ಲಿಯ  ಆ ಆಸ್ತಿಯನ್ನು ಎತ್ತಿ ಹಾಕಬೇಕೆಂದು ಜೋಗಿಮಠದ ಗುರಯ್ಯ ನವರ ಎರಡನೆಯ ಅಣ್ಣ ತಮ್ಮಂದಿರು ಪ್ರಯತ್ನ ನಡೆಸಿದರು. ನ್ಯಾಯ ನಡೆಯಿತು ಬದಾಮಿ ಕೋರ್ಟಿನಲ್ಲಿ. ನಮ್ಮಕ್ಕನನ್ನು ಈ ಗುರುಪಾದಯ್ಯ ನವರಿಗೆ ಮದುವೆ ಮಾಡಿ ಕೊಟ್ಟದ್ದರಿಂದ ನಮ್ಮ ತಂದೆಯವರು ಆ ನ್ಯಾಯದಲ್ಲಿ ಭಾಗವಹಿಸಲೇ ಬೇಕಾಯಿತು. ಪ್ರತಿಪಕ್ಷದ ಹೊನ್ನೂರು ಸಿದ್ದಲಿಂಗಯ್ಯನವರ ನಮ್ಮ ತಂದೆಯವರಿಗೆ ಮಣಿಯುವಂತಿರಲಿಲ್ಲ. ಆದ್ದರಿಂದ ಜಾಲಿಹಾಳ  ಪೊಲೀಸ್ ಗೌಡರಾದ ಹೊನ್ನಪ್ಪ ಗೌಡರಿಗೆ ಆ ನ್ಯಾಯ ಗೆದ್ದು ಕೊಡಲು ಒಪ್ಪಿಗೆ ಮಾಡಿಕೊಂಡರು. ಕರಾರು; ಊರಿಗೆ ಹತ್ತಿ ದೊಡ್ಡ ಹಳ್ಳದ ದಂಡೆಗೆ ಇರುವ ಸುಮಾರು ಹದಿನೆಂಟು  ಎಕರೆ ಒಳ್ಳೆಯ ಫಲವತ್ತಾದ ಹೊಲವನ್ನು ಹತ್ತು ವರ್ಷ ಉಣ್ಣಬೇಕು ಮತ್ತು ಮೇಲೆ ಐದು ನೂರು ರೂಪಾಯಿ ಕೊಡಬೇಕು. ಹೊಲದ ಕಬ್ಜಾದ ಸಲುವಾಗಿ ಮಾರಾಮಾರಿಯಾಗಿ ಹೊನ್ನಪ್ಪ ಗೌಡರು ಕಾಲು ಮುರಿಸಿಕೊಂಡರು. ಆದರೂ ನ್ಯಾಯ ಗೆದ್ದು ಕೊಟ್ಟರು. ಅವರು ತೀರಿಹೋದ ಮೇಲೆ ಅವರ ಮಕ್ಕಳಾದ ಶಿವನ ಗೌಡರು (ಹಿರಿಯ ಮಗ), ಲಿಂಗನಗೌಡ ರು (ಚಿಕ್ಕಮಗ) ಹೊಲವನ್ನು ಹತ್ತು ವರ್ಷ ಭೋಗಿಸಿದರು. ಹಣ ಮಾತ್ರ ಸಂದಾಯ ವಾಗಲಿಲ್ಲ. ಹತ್ತು ಹನ್ನೆರಡು ವರ್ಷಗಳಾದರೂ ಸಹಿತ ವರ್ಷವರ್ಷಕ್ಕೆ ಬಡ್ಡಿ ಬೆಳೆಯುತ್ತ ನಡೆಯಿತು. ಅಸಲು ಮತ್ತು ಐದುನೂರು ರೂಪಾಯಿ, ಬಡ್ಡಿ ಸೇರಿ ಒಂದು ಸಾವಿರ ಐದುನೂರಕ್ಕೂ ಹೆಚ್ಚಿರಬಹುದು. ಸರಾಸರಿ ಆ ಹೊಲವನ್ನು ಖರೀದಿಗೆ ಕೊಳ್ಳಬಲ್ಲ ಮೊತ್ತ ಅದು. ಸ್ವಾಭಿಮಾನದ ಸ್ವಭಾವವುಳ್ಳ ನಮ್ಮ ಮಾವನವರು ಆ ಸಾಲತೀರುವವರಿಗೆ ಬೆಲ್ಲವನ್ನು ತಿನ್ನಲಿಕ್ಕೆಲ್ಲವೆಂದು ತಮಗೆ ತಾವೇ ಆಣೆ ಹಾಕಿಕೊಂಡರು. ಈ ಪ್ರತಿಜ್ಞ ಮುಂದುವರೆಯಿತು ವರ್ಷ, ದೀಡುವರ್ಷ. ಈ ಸಂಗತಿ ಮೊದಲು ನನಗೆ ಗೊತ್ತಿರಲಿಲ್ಲ ಮಾವನವರು ನಮ್ಮೂರಿಗೆ ಬಂದರು. ರಾತ್ರಿ ಊಟಕ್ಕೆ ಕುಳಿತಾಗ ನಮಗೆ ಮಾಡಿದ್ದ ಬೆಲ್ಲದ ಅಡಿಗೆಯನ್ನು ಉಣ್ಣಲಿಲ್ಲ. ಕಾರಣವೇನು? ನಮ್ಮ ತಾಯಿ ಹೇಳಿದರು-ನನ್ನ ತಮ್ಮನ ಪ್ರತಿಜ್ಞೆಯ ಪ್ರಸಂಗವನ್ನು, ಅಂತೂ ಊಟ ಮುಗಿಸುವುದರೊಳಗೆ ನಮ್ಮ ತಾಯಿ ಗಟ್ಟಿಯಾಗಿ ಹೇಳಿದರೂ ನನಗೆ. ಸಾಮಾನ್ಯವಾಗಿ ನಮ್ಮ ತಾಯಿಯವರ ಮಾತನ್ನು ಕಟ್ಟಪ್ಪನಂತೆಯೇ ನಡೆಸಿಕೊಂಡು ಬಂದಿದ್ದ ನಾನು ಮಾವನ ಸಾಲವನ್ನು ತೀರಿಸಲೇಬೇಕೆಂದು ನಿರ್ಧರಿಸಿದೆ. ಆಗ ಅನ್ನದಾನಿ ಮಹಾಸ್ವಾಮಿಗಳು ಜಾಲಿಹಾಳದಲ್ಲೆ ಇರುವುದು ತಿಳಿಯಿತು. ಗುರುಪಾದಯ್ಯ ಮಾವನವರು ಜಾಲಿಹಾಳಿಗೆ ಹೋದರು. ಮೂರು ನಾಲ್ಕು ದಿನಗಳಲ್ಲಿ ನಾನು ಕೆಲವರೊಡನೆ ಜಾಲಿಹಾಳಿಗೆ ಬಂದು ಮಹಾ ಸ್ವಾಮಿಗಳ ದರ್ಶನ ಪಡೆಯುತ್ತೇನೆ ಎಂಬ ಬಿನ್ನಹವನ್ನು ಕಳಿಸಿದೆ ಅವರೊಡನೆ.

ನಮ್ಮೂರ ಪ್ರಮುಖ ವ್ಯಕ್ತಿಗಳ ಒಡನಾಟ ನನಗೆ ಹೆಚ್ಚು. ಅವರಲ್ಲಿ ಕೊಪ್ಪದ ಶಿವನ ಗೌಡರು (ಹಿಂದೆ ಹೇಳಿದ ಕೊಪ್ಪದ ಧರ್ಮಪ್ಪನವರ ಅಳಿಯಂದಿರು) ಮುಧೋಳ ಫಕೀರಪ್ಪನವರು, ಅಣ್ಣಗೌಡರ ಪವಾಡೆಪ್ಪ, ಡುಮ್ಮವೀರಪ್ಪ ಮತ್ತು ನಮ್ಮ ಮಾವ ನಾರಾಯಣಪುರದ ಅಂಗಡಿ ಚನ್ನಬಸಯ್ಯನವರು ಇವರನ್ನು ಕರೆದುಕೊಂಡು ನಮ್ಮ ಚಕ್ಕಡಿಯನ್ನು ಕಟ್ಟಿಸಿಕೊಂಡು ಜಾಲಿಹಾಳಿಗೆ ಹೊರಟೆವು. ನಾವೆಲ್ಲ ಕೂಡಿಕೊಂಡು ಬಂದುದೇಕೆ ಎಂಬ ಸಂಗತಿಯನ್ನು ಅರಿಕೆ ಮಾಡಿಕೊಂಡೆವು, ಬೇಲೂರಿನಲ್ಲಿರುವ ಅನ್ನದಾನಿ ಮಹಾಸ್ವಾಮಿಗಳವರಲ್ಲಿ. ಈ ಮೊದಲೇ ನಾನು ತಿಳಿಸಿರುವಂತೆ ಮಹಾಸ್ವಾಮಿಗಳವರ ಪ್ರೇಮ, ವಾತ್ಸಲ್ಯ, ಅಭಿಮಾನ, ನನ್ನ ಬಗ್ಗೆ ಒಂದು ವಿಶೇಷ ಆಸಕ್ತಿ ಎಂದಿಗೂ ಹೆಚ್ಚು. ಪೂಜೆಯ ನಂತರ ಮಹಾಸ್ವಾಮಿಗಳವರು ಬೇಲೂರು ಮತ್ತು ಜಾಲಿಹಾಳದ ಪ್ರಮುಖರನ್ನು ತಮ್ಮ ಮಠಕ್ಕೆ ಕರೆಸಿಕೊಂಡಿದ್ದರು; ಅವರಲ್ಲಿ ಗುರುಬಸಪ್ಪನವರು, ತೆಂಗಿನಕಾಯಿಯವರು ಮತ್ತು ಕಂಬಾಳಿಮಠದ ಶಾಂತವೀರಯ್ಯನವರು ಇವರೇ ಮುಂತಾದವರು ನ್ಯಾಯ ತೀರಿಸಲು ಸಹಾಯವಾಗಲೆಂದು, ಜಾಲಿಹಾಳ ಶ್ರೀ ಶಿವನ ಗೌಡರಿಗೂ ಬರಹೇಳಿದ್ದರು. ನಾವು ಜಾಲಿಹಾಳದಿಂದ ಬೇಲೂರು ಮಠಕ್ಕೆ ಹೋದೆವು.

ನಡುವೆ ಒಂದು ಮಾತು. ಹೊಲದ ಸಲುವಾಗಿ ನ್ಯಾಯ ನಡೆದ ಕಾಲಾವಧಿಯಲ್ಲಿದ್ದ ಜಾಲಿಹಾಳ ಅಥವಾ ಬೇಲೂರು ಭಕ್ತಿ, ನೀತಿ,, ಸಂಸ್ಕೃತಿ ಸಾಕಷ್ಟಿಲ್ಲದ ಒಂದು ನರವಿಂಧ್ಯಾ. ಆದರೆ ಮಹಾಸ್ವಾಮಿಗಳು ಬೇಲೂರು ಮಠದಲ್ಲಿ ಬಂದು, ಪುರಾಣ, ಪ್ರವಚನ, ಪ್ರಸಾದ, ಆರೋಗಣೆ ಮುಂತಾದವು ನಡೆದು ಆ ಭಾಗದ ವಾತಾವರಣ ಒಂದು ಪ್ರಕಾರದ ದೀಕ್ಷೆಯನ್ನು ಪಡೆದಂತಾಗಿತ್ತು. ಹಿಂದಿನ ವಾತಾವರಣದಲ್ಲಿ ಈ ಶಿವನಗೌಡರು ಮಠಕ್ಕೆ ದರ್ಶನಕ್ಕೆ ಬರುತ್ತಿದ್ದರೆಂದು ಹೇಳುವುದು ಕಷ್ಟ. ಆದರೆ ಭಕ್ತಿಯ ವಾತಾವರಣ ಹರಡಿಕೊಂಡಿದ್ದ ಇಂದು ಗೌಡರ ಮನಸ್ಸು ಮಾರ್ಪಾಟಾಗಿ, ಹೃದಯ ಸ್ವಲ್ಪ ಮಿದುವಾಗಿ, ಅವರ ಭಾವನೆಯಲ್ಲಿ ಸ್ವಾಮಿಗಳ ಒಂದು ಪ್ರಭಾವ ಅಚ್ಚುಹಾಕಿದಂತಿತ್ತು. ಅಂತೆಯೇ ನಮ್ಮ ಮಾವನವರ ಸಾಲದ ವಿಷಯ ನಿರ್ಣಯ ವಾಗಲು ಬಹಳ ಹೊತ್ತು ಹಿಡಿಯಲಿಲ್ಲ. ತಾಸೆರಡು ತಾಸು ಗಳಲ್ಲಿ ಮಹಾಸ್ವಾಮಿಗಳ ಅಪ್ಪಣೆಯ ಪ್ರಕಾರ ಏಳುನೂರು ಐವತ್ತು ರೂಪಾಯಿ ಕೊಟ್ಟು ಸಾಲ ತೀರಿಸಬೇಕೆಂದು ತೀರ್ಮಾಣವಾಯಿತು. ಅಂದು ನನಗೆ, ನಮ್ಮ ಮಾವನಿಗೆ ಮತ್ತು ಬಂದ ಹಿರಿಯರಿಗೆ ಎಂಥಾ ಆನಂದ, ಎಷ್ಟು ಆನಂದ ವಾಗಿರಬಹುದು?

ಮಹಾಸ್ವಾಮಿಗಳ ಅಪ್ಪಣೆಯಂತೆ ಸಾಲದ ಹಣವನ್ನು ನಾನೇ ಕೊಟ್ಟೆ. ನಮ್ಮ ಮಾವನ ಕಣ್ಣಲ್ಲಿ ನೀರು! ಮುಖದಲ್ಲಿ ದೈನ್ಯ! ಬಿಚ್ಚಿ ಹೇಳಬೇಕೆಂದರೆ ನನ್ನ ಕಾಲಿಗೆ ಬಿದ್ದು ದುಃಖ, ಆನಂದ ತುಂಬಿದ ಧ್ವನಿಯಲ್ಲೇ”ನೀನು ಮಾಡಿದ ಉಪಕಾರ,,,,, ಈ ನನ್ನ ಹೊಲ ನಿನ್ನ ಹೆಸರಿಗೇ ಮಾಡಿಸಿಕೊಂಡು ಬಿಡು,,,,”ಆ ಹೊಲವನ್ನು ನನ್ನ ಹೆಸರಿಗೆ ಖರೀದಿ ಮಾಡಿಸಿಕೊಳ್ಳಬೇಕೆಂದು ನಾನು ಸಾಲ ತೀರಿಸಲಿಲ್ಲ. ಆದರೆ ನಮ್ಮ ಮಾವ ಸಕ್ಕರೆ-ಬೆಲ್ಲ ಉಂಡು ಜಮೀನು ಮಾಡಿಸಿಕೊಂಡು ಸುಖವಾಗಿರಲೆಂದು. ನಮ್ಮ ತಾಯಿಯವರ ಅಣತಿ ಪೂರ್ತಿಯಾಯಿತು. ನಮ್ಮ ತಾಯಿಯವರ ತೃಪ್ತಿ ಇಂದಿಗೂ ನನ್ನನ್ನು ಆ ತೃಪ್ತಿಯ ಮನೋಭಾವದಲ್ಲಿ ಇಟ್ಟಿದೆ.

ಇಲ್ಲಿ ನಡೆದ ಒಂದು ಸಂಗತಿಯನ್ನು ನಿಮಗೆ ಹೇಳಬೇಕೆಂಬ ಮನದ ಹುಚ್ಚು, ಚಪ್ಪಲ, ಅದೇನು? ಎಂದು ನೀವು ಕೇಳಿದರೆ, ಜಾಲಿಹಾಳ ದಲ್ಲಿ ಮಹಾಸ್ವಾಮಿಗಳ ಅಪ್ಪಣೆಯಂತೆ ಸಾಲದ ನ್ಯಾಯ ನಿಖಾಲಿ ಆದ ದಿನ ಸಾಯಂಕಾಲ ಸುಮಾರು ೫ ಗಂಟೆಗೆ ಜಾಲಿಹಾಳನ್ನು ಬಿಟ್ಟು ನಮ್ಮೂರ ಹಿರಿಯರೊಡನೆ ನಮ್ಮ ಚಕ್ಕಡಿಯಲ್ಲಿ ಇಟಗಿ (ಶಾಂತಗೇರಿ) ಗೆ ಈ ಸಂಗತಿಯನ್ನು ಇಟಗಿ ಯಲ್ಲಿದ್ದ ನಮ್ಮ ಮಾವಂದಿರು ಅಂದರೆ ನಮ್ಮ ಬಳಕೆ ಮಾತಿನಲ್ಲಿ ಉಪಯೋಗಿಸುವ ರಕ್ತ ಬಾಂಧವ್ಯವನ್ನು ಸೂಚಿಸುವ ಶಬ್ದ ಅಷ್ಟೇ, ಶ್ರೀ ಅಂದಾನಿಗೌಡರಿಗೆ ಜಾಲಿಹಾಳ ನ್ಯಾಯ ನಿಖಾಲಿ ಆದ ಸಂಗತಿಯನ್ನು ತಿಳಿಸಿಯೇ ಹೋಗಬೇಕೆಂದು ಹಾದಿಯಲ್ಲಿ ಬಂಡೆಯನ್ನು ತರುಬಿ ಒಬ್ಬಿಬ್ಬರೊಡನೆ ಗೌಡರ ಮನೆಗೆ ಹೋಗಿ ಜಾಲಿಹಾಳ ಸುದ್ದಿಯನ್ನು ತಿಳಿಸಿದೆ. ಬಹಳ ಸಂತೋಷ ಪಟ್ಟವರು ನಿಡಗುಂದಿ ಗೆ ನಮ್ಮನ್ನು ಹೋಗಲು ಬಿಡಲಿಲ್ಲ. ತಮ್ಮ ಮನೆಯಲ್ಲಿ ಪ್ರಸಾದ ತೆಗೆದುಕೊಂಡು ಹೋಗಲೇಬೇಕೆಂದು ಒಂದು ಬಗೆಯ ಕಟ್ಟಪ್ಪಣೆಯನ್ನೇ ಮಾಡಿದರು.

ಇಟಗಿಯ ಪೋಲೀಸಗೌಡರಾದ ಅವರ ಜಾಯಮಾನವೇ ಅಂಥದಾಗಿತ್ತು. ಎಲರೂ ಆದಷ್ಟು ತೀವ್ರ ಸ್ನಾನ ಮಾಡಿಕೊಂಡು ಫಲಾಹಾರ ತೀರಿಸಿಕೊಂಡು ಹೋಗಬೇಕೆಂದು ಹೇಳಿ ಸುಮಾರು ಮುಂಜಾನೆ ೮ ರಿಂದ ೮-೩೦ ಗಂಟೆಯೊಳಗೆ ಬೇಸನ್ ಉಂಡಿ ಮತ್ತು ಒಗ್ಗರಣೆ ಅವಲಕ್ಕಿ ಮುಂತಾದವನ್ನು ಯಥೇಚ್ಛ ತಿನಿಸಿ ಆದಮೇಲೆ ಹೊರಡಬಹುದು ಎಂದು ಸಮ್ಮತಿಕೊಟ್ಟರು ಗೌಡರು. ನಮ್ಮ ಆನಂದದಲ್ಲಿ ಗೌಡರ ಭಾವ ವೈಶಾಲ್ಯ ತುಂಬಿ ಇಟಗಿಯಿಂದ ನಿಡಗುಂದಿಗೆ ಅಗಲವಾಗಿ ಬಂದೆವು. ಈ ಸಂಗತಿಯ ನೆನಪು ಇಂದಿಗೂ ನನ್ನಲ್ಲಿ ಹಸಿರಾಗಿ ಉಳಿದಿದೆ.

ಹಾಳಕೆರೆ ಮಹಾಸ್ವಾಮಿಗಳವರ ಪ್ರಭಾವಲಯದಲ್ಲಿ ಸಿಕ್ಕು ಪ್ರಭಾವಶಾಲಿಗಳಾಗಿ ಬೆಳೆದು ತಮ್ಮ ಬಾಳುವೆಯನ್ನು ಉತ್ತಮ ಶೀಲ, ಉದಾತ್ತ ಚರಿತ, ಉದಾರಭಾವವನ್ನು ಜೀವಿಸಿಕೊಂಡಿದ್ದ ಈ ಗೌಡರು ಮಹಾಸ್ವಾಮಿಗಳ ಪರಮ ಭಕ್ತರು. ಇಂಥ ಮಹೋನ್ನತಿಯ ಭಕ್ತ ಗಣವನ್ನು ಪಡೆದ ಅನ್ನದಾನಿ ಮಹಾಸ್ವಾಮಿಗಳವರ ಘನತೆ ಎಂಥದು ! ಗಣಿತದ ಲೆಖ್ಖವಲ್ಲ ಇದು. ಅಂತೆಯೇ ಇಟಗಿ ಎಂಬ ಹೆಸರು ನೆನಪಿಗೆ ಬಂದಾಗಲೆಲ್ಲ ಆ ಹೆಸರಿನ ಸುತ್ತು ಒಂದು ಬಗೆಯ ಪವಿತ್ರ ಭಾವನೆಯ ಪ್ರಭಾವಲಯ ಬೆಳಗುವಂತಾಗುತ್ತದೆ.

ಇನ್ನು ಮುಂದೆ ಇಟಗಿ ಜಾಳಿಹಾಳನ್ನು ಬಿಟ್ಟು ರೋಣ ತಾಲೂಕ ನರೇಗಲ್ಲಿನಿಂದ ಸುಮಾರು ಎರಡು-ಮೂರು ಮೈಲಿ ದೂರದಲ್ಲಿರುವ ಕೋಡಿಕೊಪ್ಪದ ಮಠದಲ್ಲಿರುವ ಅನ್ನದಾನಿ ಮಹಾಸ್ವಾಮಿಗಳವರ ಆಶ್ರಮಕ್ಕೆ ಬರಬೇಕು ನಾವು. ಏಕೆ? ಮಹಾಸ್ವಾಮಿಗಳು ಆಗ ಕೋಡಿ ಕೊಪ್ಪದ ಆಶ್ರಮದಲ್ಲಿ ಅನುಷ್ಠಾನ ಮಾಡುವ ಸಂಗತಿ ನಮ್ಮ ಭಾಗದ ಸಮೀಪ ಮತ್ತು ದೂರದವರೆಗೆ ಹಬ್ಬಿತ್ತು. ನನಗೆ ಆಗ ಸುಮಾರು ಹತ್ತು ವರ್ಷ ಆಗಿರಬಹುದು, ಈ ಕಾಲದಲ್ಲಿ ಅಂದರೆ ಸುಮಾರು ೧೯೨೦-೨೧ರಲ್ಲಿ ಪ್ರವಾಸಕ್ಕೆ ಬಸ್ಸು, ಕಾರು ಮುಂತಾದ ಯಂತ್ರವಾಹನಗಳ ಮಾತು ಇರಲಿಲ್ಲ. ಉಗಿ ಬಂಡೆಗಳ ಆಗ ಇದ್ದರೂ ಅವುಗಳ ಹರಿದಾಟ ದ ಕ್ಷೇತ್ರ ನಮ್ಮೂರಿಂದ ಬಹಳ ದೂರ. ನಮ್ಮೂರಿಂದ ಬರಬೇಕಾದರೆ ಕೋಡಿ ಕೊಪ್ಪಕ್ಕೆ ನಾವು ಬಂಡಿಯಲ್ಲಿಯೇ ಬರಬೇಕು. ನಮ್ಮದು ಬಯಲುಸೀಮೆ, ಮರ-ಗಿಡಗಳ ಸಂಖ್ಯೆ ಬಹಳ ಕಡಿಮೆ, ನರೇಗಲ್ಲವರಿಗೆ ಲೈನದ ಎರಡು ಕಡೆ ಗಿಡಮರಗಳು ಇದ್ದದ್ದು ನಿಜ. ಆದರೆ ಎಡಬಲದ ಹೊಲಗಳಲ್ಲಿ ಗಿಡ ಮರಗಳ ಸಂಖ್ಯೆ ಅತಿ ಕಡಿಮೆ. ಹಾದಿಯಲ್ಲಿ ಒಂದೆರಡು ಸಣ್ಣ ದೊಡ್ಡ ಹಳ್ಳಗಳನ್ನು ಮತ್ತು ಅಲ್ಲಲ್ಲಿ ಕೆರೆಗಳನ್ನು ಬಿಟ್ಟರೆ ಹೊಳೆಗಳ ಮಾತು ಇಲ್ಲ. ಸಮುದ್ರದ ಮಾತಂತೂ ಕನಸಿನಲ್ಲಿಯೂ ಇಲ್ಲ. ಬಂಡಿಯಲ್ಲಿ ಪ್ರವಾಸ, ಪ್ರತಿ ಅಮವಾಸ್ಯೆಗೆ ಕೋಡಿಕೊಪ್ಪಕ್ಕೆ ಬರಬೇಕಾದರೆ, ಕೋಡಿಕೊಪ್ಪ ಮತ್ತು ಸಮೀಪದಲ್ಲಿರುವ ತೋಟಗಂಟಿಯ ಭಾಗದ ವಿಶೇಷವೆಂದರೆ ತೋಟಗಳ ಸಂಖ್ಯೆ ಹೆಚ್ಚು ಮತ್ತು ಗಿಡಮರಗಳು ಕೆಲಮಟ್ಟಿಗೆ ಸಮೃದ್ಧ.

ಹಿಂದಿನ ಕಾಲದಲ್ಲಿ ಅರಣ್ಯದ ಆಶ್ರಮದಗಳಲ್ಲಿ ಋಷಿಗಳು ತಪಸ್ಸು ಮಾಡುತ್ತಿದ್ದುದು ಹೇಗೋ ಹಾಗೇ ನನ್ನ ಬಾಲ್ಯದ ಕಾಲದಲ್ಲಿ ಸ್ವಾಮಿಗಳು ಅನುಷ್ಠಾನ ಮಾಡುವುದು ಒಂದು ಮಹಾಪುಣ್ಯ ನಾಡಿನದು. ಆದ್ದರಿಂದ ನನಗೆ ನೆನಪಿದ್ದಂತೆ ಆಶ್ರಮ ಹಿಂದಿನ ತಪೋಭೂಮಿಯನ್ನು ನೆನೆಸಿಕೊಡುವಂತಿತ್ತು. ನನ್ನ ಬಾಲ್ಯದ ಆ ದಿನಗಳಲ್ಲಿ ತೋಟಪಟ್ಟಿ, ಗಿಡಮರ, ಹರಿವ ಹಳ್ಳ, ಹೊಳೆ, ಹಾಡುವ ವಿಧವಿಧ ನಿನಾದ, ಆಗೀಗ ಅಡವಿಯಲ್ಲಿ ಓಡಾಡುವ ಗಂಡೆರೆಳೆಯಿಂದ ಕೂಡಿದ ಚಿಗರೆ ಗಳ ಹಿಂಡು. ಮೇಲೆ ಹರವಿದ ಆಕಾಶ. ಕೆಳಗೆ ನೆರಳಿನಿಂದ ತಂಪಾದ ನೆಲೆ. ಇವೆಲ್ಲ ಕೊಡುತ್ತಿದ್ದ ಆನಂದ-ಆ ಆನಂದ ಭಾವಕ್ಕೆ ಗೊತ್ತು. ಬಯಲುಸೀಮೆಯ ನನಗೆ ಕೋಡಿ ಕೊಪ್ಪದ ಸಮೃದ್ಧ ದೃಶ್ಯ ನಂದನವನ. ಅದರಲ್ಲಿ ಸುತ್ತು ಮುತ್ತಿರುವ ಇಂಥ ವಾತಾವರಣದ ಮಧ್ಯದಲ್ಲಿ ಮಹಾಸ್ವಾಮಿಗಳವರ ಆಶ್ರಮ. ಈ ಆಶ್ರಮ ಪರ್ಣಕುಟಿ ಅಥವಾ ಕುಟೀರವೆಂದು ಹೇಳಲಿಕ್ಕೆ ಬರುವುದಿಲ್ಲ. ಏಕೆಂದರೆ ಬಹು ಮಟ್ಟಿಗೆ ಅದು ಸಣ್ಣ-ದೊಡ್ಡ ಗಿಡ ಮರದ ಎಲೆಗಳಿಂದ ಮಾಡಿ ಹುಲ್ಲಿನ ಹೊದಿಕೆಯಿಂದ ಅಚ್ಛಾದಿತವಾಗಿರುವ ಈ ಆಶ್ರಮ ಹೃದಯಕ್ಕೆ ತಂದುಕೊಟ್ಟ ಪವಿತ್ರ ಭಾವನೆಯ ವಿಸ್ತಾರವೇ. ಹಸಿರು ಸಂಪತ್ತಿನಿಂದ ತುಂಬಿದ ಈ ಪ್ರದೇಶದ ಹರಿವಿನಲ್ಲಿ ಬೆಳೆಯದೆ ಬೆಳೆದು ನಿಂತಿದ್ದ ಕಲಮಿ ಮಾವಿನ ನಾಲ್ಕೈದು ಅಡಿಯ ಮರಗಳು. ಆಶ್ರಮದ ಮುಂದಿನ ಭಾಗದ ಮೂರುನಾಲ್ಕುಎಕರೆಯ ಕೆಂಪು ಭೂಮಿಯಲ್ಲಿ ಹಸಿರು ಸೌಂದರ್ಯದ ಗುಚ್ಛ ಗಳಂತೆ ಸಮೃದ್ಧವಾಗಿರುವ ನನ್ನ ಕಣ್ಣ ಮುಂದೆ ಕಣ್ಣ ಒಳಗೆ ಇಂದು ಎದ್ದು ನಿಂತಂತಿದೆ. ಅಲ್ಲಲ್ಲಿ ತುಂಬಿರುವ ಬಾವಿಗಳು, ಮೇಲೆ ಹೇಳಿದ ಸಮೃದ್ಧ ಸಂಪತ್ತಿನಿಂದ ಮಹಾಸ್ವಾಮಿಗಳವರ ಆಶ್ರಮದಲ್ಲಿ ಅನುಷ್ಠಾನದ ಪವಿತ್ರ ಸೌಂದರ್ಯ ತುಂಬಿ ತುಳುಕಿದ ಮಠದ ವಾತಾವರಣ ಇಂದಿಗೂ ನನ್ನೊಳಗೆ ಗೊತ್ತಿಲ್ಲದಂತೆ ತುಂಬಿ ತುಳುಕುವಂತಿದೆ.

ಅಮಾವಾಸ್ಯೆಗೆಂದು ಬಂದ ನಾವು ಮಹಾಸ್ವಾಮಿಗಳವರ ದರ್ಶನ ಪಡೆದ ನೆನಪು ನನಗಿಲ್ಲ; ಅಥವಾ ಮೂರು ವರ್ಷಗಳವರೆಗೆ ಅನುಷ್ಠಾನ ನಿರತರಾಗಿದ್ದ ಮಹಾಸ್ವಾಮಿಗಳು ಯಾರಿಗಾದರೂ ದರ್ಶನ ಕೊಡುತ್ತಿದ್ದರೋ ಇಲ್ಲವೋ ಅದು ನನಗೆ ಗೊತ್ತಿಲ್ಲ. ಅಂತೂ ನಿಡಗುಂದಿಯಿಂದ ಬರುವುದು, ಇಂತಹ ಪರಮಪುಣ್ಯಾಶ್ರಮದಲ್ಲಿ ಊದಿನಕಡ್ಡಿ ಹಚ್ಚಿ ತೆಂಗಿನಕಾಯಿಯ ಮೇಲೆ ಕರ್ಪೂರವನ್ನು ಹಚ್ಚಿ ಮಂಗಳಾರತಿ ಮಾಡಿ ಕಾಯಿ ಒಡೆಸಿಕೊಂಡು ಆಶ್ರಮದ ಹೊರಭಾಗದಲ್ಲಿ ಇಟ್ಟಿದ್ದ ಅಂಗಾರವನ್ನು ತೆಗೆದುಕೊಂಡು, ಮತ್ತೊಮ್ಮೆ ಸ್ವಾಮಿಗಳಿದ್ದ ಕಡೆ ದೀರ್ಘದಂಡ ನಮಸ್ಕಾರ ಮಾಡಿ ಪಾವನ ತುಂಬಿದ ಭಾವನೆಯಲ್ಲಿ, ಎದ್ದು ಮತ್ತೆ ಕೈಮುಗಿದು ಬಂದು ಊರಕಡೆ ಹೊರಡುತ್ತಿದ್ದೆವು. ಹೊರಡುವ ಮುನ್ನ ಅಲ್ಲಿಯೇ ಸಮೀಪದಲ್ಲಿದ್ದ ಹೊಕ್ಕು ತುಂಬುವ ಬಾವಿಯ ದಂಡೆಯ ಮೇಲೆ ಕುಳಿತು ಊರಿಂದ ತಂದ ಬುತ್ತಿಯನ್ನು ಉಂಡು, ಮರಳಿ ನಮ್ಮೂರಿಗೆ ನಮ್ಮ ಬಂಡಿಯಲ್ಲಿ ಬರುವುದು. ಇಂತಹ ತಿಂಗಳುಗಳು ಎಷ್ಟು? ನನಗೆ ನೆನಪಿಲ್ಲ. ಆದರೆ ನಾವು ಹೋದಾಗಲೆಲ್ಲ ಅನೇಕ ಊರುಗಳಿಂದ ಕಾಲುನಡಿಗೆಯಿಂದ ಅಥವಾ ಬಂಡಿಯಿಂದ ಕೋಡಿಕೊಪ್ಪದ ಆಶ್ರಮಕ್ಕೆ ಬಂದು ಅಪ್ರತ್ಯಕ್ಷವಾಗಿ ಆಶೀರ್ವಾದ ಪಡೆದು ಹೋಗುವುದು ಎಷ್ಟೋ ಜನ.

ಮತ್ತೆ ಮುಂದೆ ಸುಮಾರು ನಾಲ್ವತ್ತೈದು ವರ್ಷಗಳ ನಂತರ ಕೋಡಿಕೊಪ್ಪದ ಮಠಕ್ಕೆ ಬರುವ ಪ್ರಸಂಗ ಬಂತು. ಆಗ ನಾನು ಬೆಳಗಾಂವಿಯ ಲಿಂಗರಾಜ ಕಾಲೇಜಿನಲ್ಲಿ ಕೆಲಸ ಮಾಡುತ್ತಿದೆ. ಶೂನ್ಯ ಸಂಪಾದನೆಯು ಪ್ರಕಟವಾದ ಮೇಲೆ, ಶೂನ್ಯ ಸಂಪಾದನೆಯನ್ನು ಕುರಿತ ಪರಾಮರ್ಶೆ ಮುದ್ರಣಕ್ಕೆ ಹೋಗಬೇಕಿತ್ತು. ಎಕ್ಸರ್‌ಸಾಯಿಟ್ ಬುಕ್ಕಿನಲ್ಲಿ ಸುಮಾರು ೧೬೦೦ ಪುಟಗಳ ಗಾತ್ರದ ಪರಾಮರ್ಶೆ ಮಂಗಳೂರು ಶಾರದಾ ಮುದ್ರಣಾಲಯದಲ್ಲಿ ಮುದ್ರಿಸಬೇಕೆಂಬ ಸಂಕಲ್ಪ ನನ್ನದು. ಅದನ್ನು ಪ್ರಕಾಶಪಡಿಸಲಿದ್ದ ಗುಲಬರ್ಗಾ ಜಿಲ್ಲೆಯಲ್ಲಿರುವ ರಾವೂರು ಸಿದ್ದಲಿಂಗೇಶ್ವರಮಠದ ಸಿದ್ದಲಿಂಗಸ್ವಾಮಿಗಳಿಗೆ ಮುದ್ರಣದ ವೆಚ್ಚವನ್ನೆಲ್ಲಾ ವಹಿಸಿಕೊಳ್ಳುವ ದುಡ್ಡಿನ ಶಕ್ತಿ ಇದ್ದಿರಲಿಲ್ಲ. ಮುದ್ರಣಕ್ಕೆ ಲಿಂ. ಸದಾಶಿವಸ್ವಾಮಿಗಳು, ನಾಗನೂರು ಶಿವಬಸವ ಮಹಾಸ್ವಾಮಿಗಳು ಮುಂತಾದವರು ಧನಸಹಾಯ ಮಾಡಿದರು. ಆದರೂ ಅಂದಿನ ಕಾಲದಲ್ಲಿ ಸುಮಾರು ೨೧ ಸಾವಿರ ರೂಪಾಯಿ ಮುದ್ರಣಕ್ಕೆ ಬೇಕಾಗುವ ಹಣದ ಕೊರತೆ ಇನ್ನೂ ಉಳಿದಂತಾಯಿತು. ಅಂದೇ ರಾವೂರು ಮಹಾಸ್ವಾಮಿಗಳು ಮತ್ತು ನಾನು ವಿಚಾರಮಾಡಿ ಕೋಡಿಕೊಪ್ಪದಲ್ಲಿ ಮಠಕ್ಕೆ ಬಂದೆವು. ಹಿಂದಿನ ಆಶ್ರಮದ ಸಮೀಪದಲ್ಲಿಯೇ ಮುಂದೆ ನಿರ್ಮಾಣವಾಗಿದ್ದ ಸಣ್ಣ ಕಲ್ಮಠ. ಮುಂಜಾನೆ ಸುಮಾರು ಹತ್ತುಗಂಟೆಯ ಸಮಯ. ಅನ್ನದಾನಿ ಮಹಾಸ್ವಾಮಿಗಳು ಪೂಜೆ ಪ್ರಸಾದ ತೀರಿಸಿಕೊಂಡು ಕುಳಿತಿದ್ದರು. ರಾವೂರು ಸ್ವಾಮಿಗಳು ಶಿವಯೋಗ ಮಂದಿರದಲ್ಲಿ. ಸಾಧಕರಾಗಿದ್ದುದರಿಂದ ಹಾಳಕೇರಿಯ ಮಹಾಸ್ವಾಮಿಗಳವರ ಎದುರಿಗೆ ನಿಂತು ಅಥವಾ ಕುಳಿತು ಮಾತಾಡುವ ಶಕ್ತಿ ಸಂಕುಚಿತವಾಗಿತ್ತು. ಏಕೆಂದರೆ ಶಿವಯೋಗ ಮಂದಿರಕ್ಕೆ ಅನ್ನದಾನಿ ಮಹಾಸ್ವಾಮಿಗಳ ಸಂಬಂಧ ಎಷ್ಟಿತ್ತೆಂಬುದರ ಅರಿವು ನಮಗಿದೆ. ಆದ್ದರಿಂದ ರಾವೂರು ಸ್ವಾಮಿಗಳು ಬಾಯಿಬಿಚ್ಚಿ ಮಾತಾಡಿ ಪರಾಮರ್ಶೆಯ ಮುದ್ರಣದ ವೆಚ್ಚಕ್ಕಾಗಿ ಹಣ ಕೇಳುವ ಶಕ್ತಿ ಅವರಿಗಿರಲಿಲ್ಲವೆಂದೇ ಹೇಳಬಹುದು. ಆದರೆ ನನಗೆ ಏನೋ ಯಾಕೋ ಅವರೊಡನೆ ಸರಳವಾಗಿ ನಡೆದು ನುಡಿದುಕೊಳ್ಳುವ ಒಂದು ‌ಸಲಿಗೆ. ಬಾಯಿಬಿಟ್ಟು ಕೇಳಿದೆ ನಾನು- ಪರಾಮರ್ಶೆಯ ಮುದ್ರಣಕ್ಕೆ ಧನಸಹಾಯ ಮಾಡಬೇಕೆಂದು. ಪರಾಮರ್ಶೆಯ ವಿವರಗಳನ್ನೆಲ್ಲ ಸಾವಧಾನವಾಗಿ ಕೇಳಿ ಒಂದು ಸಾವಿರ ರೂಪಾಯಿ ಕೊಡುವುದಾಗಿ ಅಪ್ಪಣೆ ಮಾಡಿದರು. ಮಠದಲ್ಲಿ ಪ್ರಸಾದವನ್ನು ಪಡೆದು. ತಿರುಗಿ ಪ್ರಯಾಣಿಸುವಾಗ ರಾವೂರು ಸ್ವಾಮಿಗಳು ಅನ್ನದಾನಿ ಮಹಾಸ್ವಾಮಿಗಳ ನನ್ನ ಬಿಚ್ಚುವರ್ತನೆಗೆ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ನನ್ನ ನಡತೆ ವಿಸ್ಮಯಕಾರಿ. ಆದರೆ ಅದು ನನಗೆ ಸಹಜಶೀಲ.

ಮಹಾಸ್ವಾಮಿಗಳವರು ಮಾತು ಕೊಟ್ಟರೆ ಮಾತಿನಲ್ಲಿ ತುಂಬ ಸತ್ಯಾರ್ಥ ಮೂರು-ನಾಲ್ಕು ದಿವಸಗಳಲ್ಲಿ ಒಂದುಸಾವಿರ ರೂಪಾಯಿ ಹಣ ಬಂತು ರಾವೂರ ಸ್ವಾಮಿಗಳ ಕೈಗೆ, ಮಹಾಸ್ವಾಮಿಗಳವರ ಮಾತು ಎಂದಿಗೂ ‘ಸತ್ಯಶಾಸನ’,

ಕೊನೆಗೆ ಮತ್ತೊಂದು ಮಹತ್ವದ ಸಂದರ್ಭ. ನಮ್ಮ ಹಿರಿಯ ಮಗ ಚಿ| ರಾಜಶೇಖರನು ಬನಾರಸ ಹಿಂದೂ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿ ಬೆಳಗಾಂವಿಗೆ ಬಂದಬಳಿಕ ಆತನನ್ನು ಪರದೇಶಕ್ಕೆ ಕಳಿಸಿ ಅಲ್ಲಿ ಶಿಕ್ಷಣವನ್ನು ಪಡೆಯಲೆಂಬ ನನ್ನ ಅಭಿಲಾಷೆ ತೀವ್ರವಾಗಿತ್ತು ಈ ನನ್ನ ಇಂಗಿತವನು ನಾಗನೂರು ಶಿವಬಸವ ಮಹಾಸ್ವಾಮಿಗಳಲ್ಲಿ ಅರಿಕೆಮಾಡಿಕೊಂಡೆ. ಆಗಿನ ಕಾಲದಲ್ಲಿ ೧೯೫೮ರ ಸುಮಾರಿನಲ್ಲಿ ಪರದೇಶದಲ್ಲಿ ಶಿಕ್ಷಣ ಪಡೆಯಬೇಕಾದರೆ ಏಳೆಂಟುಸಾವಿರ ರೂಪಾಯಿ ಬೇಕಾಗುತ್ತಿದೆ ಎಂದು ನಾನು ಕೇಳಿದ್ದೆ. ನನ್ನ ಪ್ರಬಲವಾದ ಆಕಾಂಕ್ಷೆಯನ್ನು ತಿಳಿದ ಮಹಾಸ್ವಾಮಿಗಳವರು ಸೂಚನೆ ಕೊಟ್ಟರು : ಸ್ವಲ್ಪ ಹೆಚ್ಚು ಕಡಿಮೆ ಇಷ್ಟು ಹಣವನ್ನು ಕೊಡಬಲ್ಲವರು ಹಾಳಕೇರಿಯ ಮಹಾಸ್ವಾಮಿಗಳವರು ಎಂದು. ಒಂದೆರಡು ದಿನಗಳಲ್ಲಿಯೇ ಕೋಡೀಕೊಪ್ಪದ ಮುಕ್ಕಾಮಿನಲ್ಲಿದ್ದ ಅನ್ನದಾನಿ ಮಹಾಸ್ವಾಮಿಗಳನ್ನು ಕಾಣಲು ನಾಗನೂರು ಸ್ವಾಮಿಗಳೊಡನೆ ನಾನೂ ಬಂದು ಅವರಲ್ಲಿ ಈ ಬಿನ್ನಹ ಮಾಡಬೇಕೆಂದು ನಿರ್ಧರಿಸಿದೆವು. ಅವರು ಕೊಡುವ ಹಣ ಸ್ವಲ್ಪ ಕಡಿಮೆ ಆದರೂ ಸುಮಾರು ಒಂದು ಕೂರಿಗೆ ಹೊಲವನ್ನಾದರೂ ಮಾರಿ ಹಣ ಭರ್ತಿ ಮಾಡಿ ಪರದೇಶದಲ್ಲಿ (ಬಹುಮಟ್ಟಿಗೆ ಇಂಗ್ಲೀಷಿನಲ್ಲಿ) ಶಿಕ್ಷಣ ಕೊಡಿಸಬೇಕೆಂದು ನಿರ್ಧಾರ ಮಾಡಿದೆವು. ಆದರೆ ಮುಂದೆ ಈ ಮಾತು ಕೈಬಿಟ್ಟೆವು. ಏಕೆ? ಕಾರಣ ನನಗೆ ನೆನಪಿಲ್ಲ. ಬಹುಮಟ್ಟಿಗೆ ನಮ್ಮ ರಾಜಶೇಖರನು ಪರದೇಶಕ್ಕೆ ಹೋಗಲು ಅಷ್ಟೊಂದು ಒಲವು ತೋರಿಸಿರಲಿಕ್ಕಿಲ್ಲ ನೆನಪಿನ ಮಾತು ಏನೇ ಇರಲಿ ಹಾಳಕೇರಿ ಮಹಾಸ್ವಾಮಿಗಳವರು ವಿದ್ಯಾಭಿಮಾನಿಗಳ ಸಮಾಜವನ್ನು ಮೇಲಕ್ಕೆತ್ತುವ ಕುತೂಹಲದಲ್ಲಿ ಎಂದಿಗೂ ನಿರತರಾಗಿದ್ದರೆಂಬ ಮಾತು ನಾಗನೂರು ಮಹಾಸ್ವಾಮಿಗಳಿಗೆ ಗೊತ್ತು, ನನಗೆ ಗೊತ್ತು, ಸಾಮಾನ್ಯವಾಗಿ ಸಮಾಜಕ್ಕೆಲ್ಲ ಗೊತ್ತು.

ಸಮಾಜದಲ್ಲಿ ಇಂಥ ಮಹೋನ್ನತ ಸ್ಥಾನಕ್ಕೆ ಏರಿ ಆ ಸ್ಥಾನಕ್ಕೆ ತಕ್ಕ ಮಾನವನು ತಂದುಕೊಟ್ಟ ಈ ಮಹಿಮಾಶೀಲರನ್ನು ನೆನೆವುದೇ ನನ್ನ ಮಹಾಭಾಗ್ಯ. ಇಂಥ ಘನ ಗಂಭೀರ ಮಹಾಸ್ವಾಮಿಗಳವರ ಸ್ಥಾನಕ್ಕೆ ಬಂದಿರುವ ಇಂದಿನ ಅಭಿನವ ಅನ್ನದಾನಿ ಮಹಾಸ್ವಾಮಿಗಳವರು ಆ ಸ್ಥಾನದ ಗಂಭೀರವನ್ನು ಗಂಭೀರತರಗೊಳಿಸಿ ಅದರ ಉನ್ನತಿಯನ್ನು ಉನ್ನತತರಗೊಳಿಸಿ ಕರ್ನಾಟಕದ ಸೀಮೆಯನ್ನು ದಾಟಿ ಉಜ್ವಲವಾಗಿ ಬೆಳಗಲೆಂಬುದು ಹೃತ್ಪೂರ್ವಕವಾದ ಹಾರೈಕೆ ನಮ್ಮದು.

• ಸದಾಶಿವ ಒಡೆಯರ, ಧಾರವಾಡ

(ಶಿಕ್ಷಣ  ಕ್ಷೇತ್ರದ ದಕ್ಷ, ಪ್ರಾಮಾಣಿಕ ಆಡಳಿತಾಕಾರಿ, ವಿಶ್ವವಿದ್ಯಾಲಯದ ಕುಲಸಚಿವ, ಸಾಹಿತಿ, ಸದಾಶಿವ ಒಡೆಯರರವರು ಹುಟ್ಟಿದ್ದು ಧಾರವಾಡದ ಮರೇವಾಡ ಗ್ರಾಮದಲ್ಲಿ. ತಂದೆ ಶಿವದೇವ ಒಡೆಯರ, ತಾಯಿ ಗಿರಿಜಾದೇವಿ. ಪ್ರಾರಂಭಿಕ ಶಿಕ್ಷಣ ಹಾವೇರಿ. ಆಟದಲ್ಲಿ ಸದಾಮುಂದು. ಬ್ಯಾಡಮಿಂಟನ್, ಟೇಬಲ್ ಟೆನಿಸ್ ಪ್ರಿಯವಾದ ಆಟಗಳು. ಕಾಲೇಜು ವಿದ್ಯಾಭ್ಯಾಸ ಧಾರವಾಡ. ೧೯೪೫ರಲ್ಲಿ ಬಿ.ಎ. (ಆನರ್ಸ್) ಪದವಿ. ೧೯೪೭ರಲ್ಲಿ ಬೆಳಗಾವಿಯ ಲಾ ಕಾಲೇಜಿನಿಂದ ಎಲ್.ಎಲ್.ಬಿ. ಪದವಿ. ೧೯೪೮ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಎರಡು ವರ್ಷ ಸೇವೆ. ೧೯೪೯ರಲ್ಲಿ ಸ್ಥಾಪಿತವಾದ ಕರ್ನಾಟಕ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರರ್ ಆಗಿ ನೇಮಕ. ೧೯೫೧ರಲ್ಲಿ ಸಹಾಯಕ ಕುಲಸಚಿವ, ೧೯೫೭ರಲ್ಲಿ ಕುಲಸಚಿವರ ಹುದ್ದೆ. ೧೯೬೭-೬೮ರಲ್ಲಿ ಉಪಕುಲಪತಿಗಳಾಗಿ ಕಾರ‍್ಯನಿರ್ವಹಣೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಮೇಲೆ ಅಮೆರಿಕಾ ಸರಕಾರದ ಆಹ್ವಾನದ ಮೇರೆಗೆ ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಗಳ ಭೇಟಿ. ಬ್ರಿಟಿಷ್ ಕೌನ್ಸಿಲ್ ಆಹ್ವಾನದ ಮೇರೆಗೆ ಇಂಗ್ಲೆಂಡ್ ಭೇಟಿ. ಇದಲ್ಲದೆ ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಡ್ಜರ್‌ಲ್ಯಾಂಡ್, ಈಜಿಪ್ಟ್ ದೇಶಗಳಿಗೂ ಭೇಟಿ. ಅಲ್ಲಿನ ಆಡಳಿತ ಪದ್ಧತಿ, ವಿಧಾನಗಳ ಅಳವಡಿಕೆ. ವಿಶ್ವವಿದ್ಯಾಲಯದ ಉನ್ನತಿಗೆ ಪಟ್ಟ ಶ್ರಮ. ಆಡಳಿತ ಮಧ್ಯೆ ರಚಿಸಿದ ಕೆಲವು ಕೃತಿಗಳು. ‘ಜೀವನ ಕಲೆ’ ಪ್ರಬಂಧ ಸಂಕಲನ, ರವೀಂದ್ರ ದರ್ಶನ, ಇದು ಜೀವನ ಮತ್ತೆರಡು ಚಿಂತನ ಶೀಲ ಸಂಕಲನಗಳಿಂದ ಬರವಣಿಗೆಗೆ ತಂದ ಕಾಂತಿ. ನಾಟಕಗಳು-ಜೋನ್ ಆಫ್ ಆರ್ಕ್ ಮತ್ತು ಇತರ ನಾಟಕಗಳು. ಇಂಗ್ಲಿಷ್‌ನಲ್ಲಿ THE LIGHT OF OTHER DAYS, TRAILING CLOUD. ಸಂಪಾದಿತ- BASAVESHWARA COMMEMORATION VOLUME. ರವೀಂದ್ರ ದರ್ಶನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಐವತ್ತನೇ ಹುಟ್ಟುಹಬ್ಬಕ್ಕೆ ಹಿತೈಷಿಗಳು ಅರ್ಪಿಸಿದ ಗೌರವಗ್ರಂಥ ‘ಸವಿಸಂಚಯ.’)

ಕ್ರಿ. ಶ. ೧೨ನೇ ಶತಮಾನದಲ್ಲಿ ಕನ್ನಡನಾಡು ಒಂದು ಅಭೂತಪೂರ್ವ ಕ್ರಾಂತಿಯ ಬೆಳಕನ್ನು ಕಂಡಿತು. ಮಹಾತ್ಮಾ ಬಸವೇಶ್ವರ, ಪ್ರಭುದೇವ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ದರಾಮರಂಥ ಮಹಾಶರಣ ಶರಣೆಯರು ಈ ನಾಡಿನಲ್ಲಿ ಬದುಕಿದ ಕಾಲ ಅದು. ಸಕಲ ಜೀವಿಗಳ ಕಲ್ಯಾಣಕ್ಕಾಗಿ ಅನವರತ ಚಿಂತಿಸಿದ ಈ ಧರ್ಮ ಜಿಜ್ಞಾಸುಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಚರ್ಚಿಸಿ ನಿಷ್ಕರ್ಷಿಸಲು ಅನುಭವಮಂಟಪದಂಥ ಮಹಾಸಂಸ್ಥೆಯನ್ನು ಕಟ್ಟಿ, ತಮ್ಮ ಅನುಭವಜನ್ಯವಾದ ಅನಿಸಿಕೆಗಳನ್ನು ಸುಲಭ ಹಾಗೂ ಲಲಿತವಾದ ಕನ್ನಡದಲ್ಲಿ ವಚನರೂಪದಲ್ಲಿ ಬರೆದಿಟ್ಟು, ಮುಂದಿನ ಜನಾಂಗಗಳಿಗೆ ದಾರಿದೀಪವಾಗುವಂಥ ಸೂತ್ರಗಳನ್ನು ಒದಗಿಸಿದ ಪುಣ್ಯಜೀವಿಗಳು ಬದುಕಿದ ಕಾಲವದು. ಆ ಉದಾತ್ತ ಪರಂಪರೆಯಲ್ಲಿ ನಾಡಿನಾದ್ಯಂತ ಅನೇಕ ಮಠಮಾನ್ಯಗಳು ಕಾರ್ಯಮಾಡಲು ಆರಂಭಿಸಿದವು. ಇದೇ ಪರಂಪರೆಯ ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗದ ಈ ಪರಂಪರೆ ವಿಜಯಮಹಾಂತೇಶ ನಿಂದ ಮುಂದುವರಿದು ಅನ್ನದಾನೇಶ, ಕೊಟ್ಟೂರೇಶ ಎಂಬ ಶಿಷ್ಯರ ಮೂಲಕ ಪ್ರವಹಿಸಿ ಬಂದಿತು. ಅವರಲ್ಲಿ ಶ್ರೀ ಅನ್ನದಾನೇಶರು ಹಾಲಕೆರೆಯಲ್ಲಿ ನೆಲೆನಿಂತು ಧರ್ಮಪ್ರಸಾರದ ಕಾರ್ಯಕೈಕೊಂಡರು. ಇವರಿಂದ ಮುಂದೆ ಕರಿಸಿದ್ಧಸ್ವಾಮಿ, ಮುಪ್ಪಿನ ಬಸವಲಿಂಗಸ್ವಾಮಿ, ಅನ್ನದಾನ ಸ್ವಾಮಿ, ಕಿರಿಯ ಮುಪ್ಪಿನ ಬಸವಲಿಂಗಸ್ವಾಮಿ, ಹಿರಿಯ ಅನ್ನದಾನೀಶ್ವರ, ಗುರು ಅನ್ನದಾನೀಶ್ವರಸ್ವಾಮಿ, ಮುಪ್ಪಿನ ಬಸವಲಿಂಗಸ್ವಾಮಿಗಳು ಇವರುಗಳ ಮುಖಾಂತರ ಈ ಪರಂಪರೆ ಹರಿದುಬಂದಿತು. ಮುಪ್ಪಿನ ಬಸವಲಿಂಗಸ್ವಾಮಿಗಳ ಕರಸಂಜಾತರಾಗಿ ಮೂಡಿಬಂದವರು ೧ನೇ ಶ್ರೀ ಅನ್ನದಾನ ಮಹಾಸ್ವಾಮಿಗಳವರು. ಈ ಶ್ರೀಗಳವರು ದೀರ್ಘವೂ ಪರಿಪೂರ್ಣವೂ ಆದ ೧೦೨ ವರ್ಷಗಳ ಆಯುಷ್ಯವನ್ನು ಕಳೆದು ಕ್ರಿ.ಶ.೧೯೧೨ರಲ್ಲಿ ಹಾಲಕೆರೆಯಲ್ಲಿ ಲಿಂಗೈಕ್ಯರಾದರು. ಬರ ಕಾಲದಲ್ಲಿಯೇ ಮಠದ ಕೀರ್ತಿ ಬಹುದೂರದವರೆಗೆ ಹರಡಿತ್ತು

.ಕ್ರಿ.ಶ.೧೯೧೦ರಲ್ಲಿ ನಡೆದ ಇವರ ಪಟ್ಟಾಭಿಷೇಕಕ್ಕೆ ಆಗಮಿಸಿದ ಅನೇಕ ಹರ ಗುರು ಚರಮೂರ್ತಿಗಳಲ್ಲಿ, ವೀರಶೈವರಿಗೆಲ್ಲ ಪ್ರಾತಃಸ್ಮರಣೀಯರಾದ ಹಾನಗಲ್ಲ ಕುಮಾರಸ್ವಾಮಿಗಳೂ ಹಾಗೂ ಹಾವೇರಿಯ ಶಿವಬಸವಸ್ವಾಮಿಗಳೂ ಪ್ರಮುಖರು. ಹಾನಗಲ್ಲ ಕುಮಾರಸ್ವಾಮಿಗಳ ಒಡನಾಟದ ಕಾರಣದಿಂದ, ಅನ್ನದಾನಸ್ವಾಮಿಗಳು ಅವರ ಉದಾತ್ತ ವಿಚಾರ, ದೂರದೃಷ್ಟಿ ಹಾಗೂ ಸಮಾಜಕಲ್ಯಾಣ ಕಾರ್ಯಗಳಿಂದ ಅತ್ಯಂತ ಪ್ರಭಾವಿತರಾದರು. ಅವರು ಹಮ್ಮಿಕೊಂಡ ಅನೇಕ ಕಾರ್ಯಗಳಿಗೆ ನೆರವಾಗತೊಡಗಿದರು. ಕುಮಾರಸ್ವಾಮಿಗಳು ಆರಂಭಿಸಿದ ಶಿವಯೋಗಮಂದಿರ ಇವರಿಗೆ ಅತಿ ಮೆಚ್ಚಿನ ಸಂಸ್ಥೆಯಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಮಾಡಿದ ಅನೇಕ ಸಮಾಜಕಲ್ಯಾಣ ಕಾರ್ಯಗಳಲ್ಲಿ ಅತ್ಯಂತ ಮಹತ್ವವಾದದ್ದು ಶಿವಯೋಗ ಮಂದಿರದ ಸ್ಥಾಪನೆ. ಎಂದಿನಿಂದಲೂ ವೀರಶೈವ ಧರ್ಮವನ್ನು ರಕ್ಷಿಸುತ್ತ, ಸಮಾಜದ ಜನತೆಯಲ್ಲಿ ದೈವಭಕ್ತಿ, ಧರ್ಮಪ್ರಜ್ಞೆ ಹಾಗೂ ನೀತಿಯುತ ನಡೆ-ನುಡಿಗಳನ್ನು ಪೋಷಿಸಿಕೊಂಡು ಬಂದ ಸಂಸ್ಥೆಗಳೆಂದರೆ ಮಠಗಳು. ಈ ಮಠಗಳಿಗೆ ಯೋಗ್ಯ ಮರಿಗಳನ್ನು ಆರಿಸಿ ಅವರಿಗೆ ಅವಶ್ಯವಾದ ಧಾರ್ಮಿಕ, ತಾತ್ವಿಕ ಹಾಗೂ ಸಾಹಿತ್ಯಕ ತರಬೇತಿಯನ್ನು ಪವಿತ್ರವಾದ ಪರಿಸರದಲ್ಲಿ ಒದಗಿಸಿ, ಅವರನ್ನು ಒಳ್ಳೆ ಸ್ವಾಮಿಗಳಾಗು ವಂತೆ ತರಬೇತಿಗೊಳಿಸಲು ಅವಶ್ಯವಾದ ಸೂಕ್ತಶಿಕ್ಷಣ ಕೊಡುವಂಥ ಸಂಸ್ಥೆ ಸಮಾಜಕ್ಕೆ ಅವಶ್ಯವಾಗಿ ಬೇಕಾಗಿತ್ತು ಇದರ ಬಗ್ಗೆ ಬಹಳ ಮುಂದಾಲೋಚನೆಯಿಂದ ವಿಚಾರ ಮಾಡಿ, ಅತ್ಯಂತ ಪರಿಶ್ರಮದಿಂದ ಅದಕ್ಕೆ ಸೂಕ್ತವಾದ ನದಿಯ ದಂಡೆಯಲ್ಲಿಯ ಸುಂದರ ನಿವೇಶನವನ್ನು ಆರಿಸಿ, ಶಿವಯೋಗಮಂದಿರವೆಂಬ ಮಹಾಸಂಸ್ಥೆಯನ್ನು ಹಾನಗಲ್ಲ ಕುಮಾರಸ್ವಾಮಿಗಳು ಆರಂಭಿಸಿ ಸಮಾಜಕ್ಕೆ ಮಹದುಪಕಾರ ಮಾಡಿದರು. ಕ್ರಿ.ಶ.೧೯೪೨ರಲ್ಲಿ ಈ ಭಾಗದಲ್ಲಿ ವ್ಯಾಪಿಸಿದ ಭೀಕರ ಕ್ಷಾಮದ ಪರಿಣಾಮ ಒದಗಿದ ಆರ್ಥಿಕ ತೊಂದರೆಯಿಂದಾಗಿ ಶಿವಯೋಗಮಂದಿರವು ಮುಂದುವರೆಯದ ಸಂಧಿಗ್ಧ ಪರಿಸ್ಥಿತಿಯಲ್ಲಿತ್ತು. ಆಗ ಅನ್ನದಾನಸ್ವಾಮಿಗಳು ಅದರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡು, ೫-೬ ವರ್ಷಗಳಲ್ಲಿ ಸುಮಾರು ೮೦ ಸಾವಿರ ರೂಪಾಯಿಗಳ ವಿನಿಯೋಗದಿಂದ ಬಂದಂತಹ ಆರ್ಥಿಕ ಸಂಕಷ್ಟವನ್ನು ದೂರಿಕರಿಸಿ ಮುಂದುವರೆಸಿದರು. ಶಿವಯೋಗ ಮಂದಿರದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ೧೭ನೇ ಅಧಿವೇಶನ ಜರುಗಿದಾಗ ಅನ್ನದಾನಸ್ವಾಮಿಗಳು ೪೦೦ ಚೀಲ ಅಕ್ಕಿಯನ್ನು ಮಂದಿರದ ದಾಸೋಹಕ್ಕೆ  ಸಲ್ಲಿಸಿದ್ದಲ್ಲದೇ  ಪ್ರಸಾದ ವಿನಿಯೋಗ ಕಾರ್ಯವನ್ನು ಶ್ರೀಗಳು ಒಬ್ಬರೇ ವಹಿಸಿಕೊಂಡಿದ್ದರು. ಈ ಕಾರ್ಯ ಲಕ್ಷಾಂತರ ಜನರನ್ನು ಬೆರಗುಗೊಳಿಸುವಂತೆ ಮಾಡಿತು.

ಶಿಕ್ಷಣದಲ್ಲಿ ಶ್ರೀಗಳಿಗೆ ಎಂದಿನಿಂದಲೂ ವಿಶೇಷ ಆಸಕ್ತಿಇದ್ದಿತ್ತು. ಹಾಗಾಗಿ ಹಾಲಕೆರೆಗೆ ಸಮೀಪದ ನಗರವಾದ ನರೇಗಲ್ಲಿನಲ್ಲಿ ಒಳ್ಳೆ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ನರೇಗಲ್ಲಿನ ಶ್ರೀ ಅನ್ನದಾನ ವಿಜಯ ಗಂಡುಮಕ್ಕಳ ಮಾಧ್ಯಮಿಕ ಶಾಲೆ’ಯು ಈ ಭಾಗದ ವಿದ್ಯಾಸಂಸ್ಥೆಗಳಲ್ಲಿ ಮಾತೃಸ್ಥಾನದಲ್ಲಿರುವ ಸಂಸ್ಥೆಯಾಗಿದೆ. ಕ್ರಿ.ಶ.೧೯೧೯ರಲ್ಲಿ  ಸ್ಥಾಪನೆಗೊಂಡ ಈ ಶಾಲೆ ಕ್ರಿ.ಶ.೧೯೪೬ರಲ್ಲಿ ಸರಕಾರದಿಂದ ಮನ್ನಣೆ ಪಡೆಯಿತು. ಮೊದಮೊದಲು ಗ್ರಾಮಸ್ಥರ ಆಡಳಿತದಲ್ಲಿದ್ದ ಈ ಶಾಲೆ ಕೆಲವೊಂದು ತಾಪತ್ರಯಗಳಿಂದ ಕ್ರಿ.ಶ.೧೯೫೫ ರಲ್ಲಿ ಶ್ರೀಗಳವರ ಕೈಸೇರಿತು. ಶ್ರೀಗಳ ಪರುಷ ಹಸ್ತಸ್ಪರ್ಶದಿಂದ  ಈ ಸಂಸ್ಥೆಯು ಮುಂದೆ ಉಜ್ವಲವಾಗಿ ಬೆಳೆಯಿತು. ಈಗ ಈ ಸಂಸ್ಥೆ ಅತ್ಯಂತ ಗುನಮಟ್ಟದ ಶಿಕ್ಷಣ ನೀಡುವಲ್ಲಿ ನಾಡಿನ ಪ್ರಮುಖ ವಿದ್ಯಾಸಂಸ್ಥೆಯಾಗಿ ಕಾರ್ಯಮಾಡುತ್ತಿದೆ. ಸುಮಾರು ಮೂರುಲಕ್ಷ ರೂ.ಗಳ ಖರ್ಚಿನಿಂದ ಕಟ್ಟಿಸಿದ ಕಟ್ಟಡವನ್ನು ಶಾಲೆ ಪಡೆದುಕೊಂಡಿದೆ.

ಸಂಸ್ಕೃತ ಭಾಷೆ ಭಾರತದ ಜ್ಞಾನನಿಧಿಯ ಅಕ್ಷಯ ಭಾಂಡಾರ. ಅದು ನಮ್ಮ ಸಂಸ್ಕ್ರತಿಯ ಉಗಮದ ಸೆಲೆಯಾಗಿದೆ.. ನಮ್ಮ ತತ್ವಜ್ಞಾನ, ಧರ್ಮದ ವಿಚಾರಗಳನ್ನು ಅರಿಯಬೇಕಾದರೆ ಅದರ ಜ್ಞಾನ ನಮಗೆ ಅತ್ಯಂತ ಅವಶ್ಯವಾದದ್ದೆಂದು  ಅರಿತ ಶ್ರೀಗಳವರು ಕ್ರಿ.ಶ.೧೯೬೨ನೇ ಇಸ್ವಿಯಲ್ಲಿಯೇ ನರೇಗಲ್ಲಿನಲ್ಲಿ ‘ಮಲ್ಹಣಾರ್ಯ ಸಂಸ್ಕೃತ ಪಾಠಶಾಲೆ’ ಯನ್ನು ಆರಂಭಿಸಿದರು. ಇಲ್ಲಿ ಅನೇಕ ವಿದ್ಯಾರ್ಥಿಗಳು ಸಂಸ್ಕೃತ ಅಭ್ಯಾಸಮಾಡಿ ನಾಡಿನ ತುಂಬೆಲ್ಲ ತಮ್ಮ ವಿದ್ವತ್‌ ಪ್ರದರ್ಶನ ಮಾಡುತ್ತ ಖ್ಯಾತರಾಗಿದ್ದಾರೆ.

ಈ ಭಾಗದಲ್ಲಿ ಉಚ್ಚ ಶಿಕ್ಷಣ ಸಂಸ್ಥೆಗಳ ಅಭಾವವು ಶ್ರೀಗಳನ್ನು ವಿವಂಚನೆಗೆ ಈಡು ಮಾಡಿದ್ದಿತು. ಅದಕ್ಕಾಗಿ ಈ ಭಾಗದ ಜನತೆಯಲ್ಲಿ ಇಂಥ ಸಂಸ್ಥೆಗಳ ಅವಶ್ಯಕತೆಯ ಬಗ್ಗೆ ಜಾಗೃತಿಯನ್ನುಂಟುಮಾಡಿ ಗಜೇಂದ್ರಗಡ, ರೋಣ, ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಸಂಚಾರ ಕೈಕೊಂಡು, ಹಣ ಸಂಗ್ರಹಿಸಿ ನರೇಗಲ್ಲಿನಲ್ಲಿ ಕಾಲೇಜನ್ನು ಆರಂಭಿಸಿದರು. ‘ಅನ್ನದಾನೇಶ್ವರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ’ ಎಂಬ ಅಭಿದಾನವನ್ನು ಪಡೆದ ಈ ಕಾಲೇಜು, ದಿನಾಂಕ ೨೦-೯-೧೯೬೭ ರಂದು ಆರಂಭ ವಾಯಿತು. ಇದರ ಪ್ರಾರಂಭೋತ್ಸವವು ಅಂದಿನ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಹಳ್ಳಿಕೇರಿ ಗುದ್ದೆಪ್ಪನವರ ಅಧ್ಯಕ್ಷತೆಯಲ್ಲಿ, ಕರ್ನಾಟಕವಿಶ್ವವಿದ್ಯಾಲಯದ ಅಂದಿನ ಧೀಮಂತ ಕುಲಪತಿಗಳಾಗಿದ್ದ ಮಹಾಮೇಧಾವಿ ಡಾ.ಡಿ.ಸಿ. ಪಾವಟೆ ಯವರಿಂದ ನೆರವೇರಿಸಲ್ಪಟ್ಟಿತು. ಹಳ್ಳಿಗಾಡಿನ ಜನರು ಮಕ್ಕಳ ವಿದ್ಯಾಭ್ಯಾಸಕ್ಕೆಂದು ದೊಡ್ಡ ಊರುಗಳಿಗೆ ವಲಸೆಹೋಗುತ್ತಿದ್ದರು. ಮತ್ತು ಅನೇಕ ಅನಾನುಕೂಲತೆಗಳನ್ನು ಮತ್ತು ತೊಂದರೆಗಳನ್ನು ಅನುಭವಿಸಿ ಮಕ್ಕಳನ್ನು ದೊಡ್ಡ ಊರಿನಲ್ಲಿ ಇಟ್ಟು ವಿದ್ಯಾಭ್ಯಾಸಮಾಡಿಸುತ್ತಿದ್ದರು. ಇವುಗಳನ್ನು ಕಂಡ ಶ್ರೀಗಳು ಹಳ್ಳಿಗಾಡಿನಲ್ಲಿಯೇ ಇಂಥ ಸಂಸ್ಥೆಯನ್ನು ನಿರ್ಮಿಸಬೇಕೆಂದು ಶ್ರಮಿಸಿದರು. ಇಂದು ಈ ಕಾಲೇಜು ಸುಮಾರು ನಾಲ್ಕುಲಕ್ಷ ರೂಪಾಯಿ ಖರ್ಚಿನಿಂದ ಕಟ್ಟಿಸಲ್ಪಟ್ಟ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದ ನಕ್ಷೆಯನ್ನು ಪೂಜ್ಯ ಶ್ರೀಗಳೇ ಸ್ವತಃ ತಮ್ಮ ಬೆತ್ತದಿಂದ ತಯಾರಿಸಿದರು. ಶಿಲ್ಪಶಾಸ್ತ್ರದಲ್ಲಿ ಅವರಿಗೆ ವಿಶೇಷವಾದ ಗತಿಯಿದ್ದಿತು. ಲಕ್ಷಣವಾದ ವಿನ್ಯಾಸವನ್ನು ಹೊಂದಿದ ಕಟ್ಟಡವನ್ನು ನೋಡಿದಾಗ ಶ್ರೀಗಳ ಶಿಲ್ಪಶಾಸ್ತ್ರಜ್ಞಾನ ಹಾಗೂ ಸೌಂದರ್ಯಪ್ರಜೆಯ ಕಲ್ಪನೆಯು ನಮ್ಮೆದುರಿಗೆ ಮೂಡುತ್ತದೆ. ಈ ಕಾಲೇಜು ಸುಮಾರು ೩ ಲಕ್ಷ ಕಿಮ್ಮತ್ತಿನ ವಸತಿಗೃಹವನ್ನೂ ಹೊಂದಿವೆ. ಈ ಕಾಲೇಜು ಶ್ರೀ ಟಿ.ಕೆ.ಪಾಟೀಲ, ಎಂ.ಎ (ಲಂಡನ್) ಹಾಗೂ ಡಾ.ಡಿ.ಎಸ್. ಕರ್ಕಿಯವರಂಥ ಅನುಭವಿ ಹಾಗೂ ಸಮರ್ಥ ಹಾಲಕೆರೆ ಸನ್ನಿಧಾನ ಪ್ರಿನ್ಸಿಪಾಲರನ್ನು ಪಡೆದುಕೊಂಡಿತ್ತು. ಶ್ರೀ.ಟಿ.ಕೆ.ಪಾಟೀಲರು ಪ್ರಿನ್ಸಿಪಾಲರಾಗಿದ್ದಾಗ, ಕರ್ನಾಟಕ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿಯೂ ಗಣನೀಯ ಸೇವೆ ಸಲ್ಲಿಸಿದರು. ಡಾ.ಕರ್ಕಿಯವರು ಉದ್ಧಾಮ ಕವಿಗಳೂ ಭಾಷಾವಿಜ್ಞಾನ ಪಂಡಿತರೂ ಆಗಿದ್ದರು. ಕಾಲೇಜಿನ ಆರಂಭದ ದಿನಮಾನಗಳಲ್ಲಿ ಅವರು ಉತ್ತಮ ಕಕ್ಷೆಯಲ್ಲಿಯ ಪರಂಪರೆಗಳನ್ನು ಹಾಕಿಕೊಟ್ಟರು. ಇಂದು ನರೇಗಲ್ಲಿನ ಕಲಾ ಮತ್ತು ವಿಜ್ಞಾನ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯದ ಗ್ರಾಮೀಣಮಟ್ಟದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ಶ್ರೀಗಳು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯುಳ್ಳವರಾಗಿದ್ದರು. ಆದ್ದರಿಂದಲೇ ಅವರು ಕ್ರಿ.ಶ.೧೯೭೧ರಲ್ಲಿ ನರೇಗಲ್ಲಿನಲ್ಲಿ ಶ್ರೀ ಅನ್ನದಾನ ವಿಜಯ ಮಾಧ್ಯಮಿಕ ಬಾಲಿಕೆಯರ ಶಾಲೆ’ಯನ್ನು ಆರಂಭಿಸಿದರು. ಈ ಶಾಲೆಯಲ್ಲಿ ಈಗ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿದ್ಯಾದ್ಯಯನ ಮಾಡಿ ಸುಶಿಕ್ಷಿತೆಯರಾಗಿದ್ದಾರೆ.

ಇದಲ್ಲದೆ ನಿಡಗುಂದಿಯಲ್ಲಿ ‘ಶ್ರೀ ಅನ್ನದಾನೇಶ್ವರ ಮಾಧ್ಯಮಿಕ ಶಾಲೆ ನಿಡಗುಂದಿ’ ಎಂಬ ಹೆಸರಿನ ಶಾಲೆಯನ್ನು ಶ್ರೀಗಳು ಕ್ರಿ.ಶ.೧೯೬೭ರಲ್ಲಿ ಆರಂಭಿಸಿದರು. ಈಗ ಈ ಶಾಲೆಯಲ್ಲಿ ಸುಮಾರು ೧೨೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲಿ ಪ್ರಸಾದನಿಲಯದ ಏರ್ಪಾಟನ್ನೂ ಮಾಡಿದ್ದಾರೆ. ಇದರ ಬೃಹತ್ ಕಟ್ಟಡವೂ ನಿರ್ಮಾಣ ಹಂತದಲ್ಲಿದೆ.

ಹಾಗೆಯೇ ಅಬ್ಬಿಗೇರಿಯಲ್ಲಿ ಶ್ರೀ ಅನ್ನದಾನೀಶ್ವರ ಮಾಧ್ಯಮಿಕ ಶಾಲೆ, ಅಬ್ಬಿಗೇರಿ’, ಎಂಬ ಹೆಸರಿನ ಶಾಲೆಯನ್ನು ಕ್ರಿ.ಶ.೧೯೭೨ರಲ್ಲಿ ಆರಂಭಿಸಿದರು. ಇಲ್ಲಿ ಈಗ ಸುಮಾರು ೧೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಮಠದ ಉಚ್ಚ ಪರಂಪರೆಯನ್ವಯ ವಿದ್ಯಾರ್ಥಿಗಳಿಗೆ ವಿದ್ಯಾದಾನದ ಜೊತೆಗೆ ವಸತಿ ಹಾಗೂ ಅನ್ನದಾನದ ವ್ಯವಸ್ಥೆಯಾಗಬೇಕೆಂಬುದನ್ನು ಸ್ವಾಮಿಗಳು ಚೆನ್ನಾಗಿ ಅರಿತಿದ್ದರು. ಅದಕ್ಕಾಗಿಯೇ ನರೇಗಲ್ಲಿನಲ್ಲಿ ೫೨ ಕೋಣೆಗಳುಳ್ಳ ಶ್ರೀ ಅನ್ನದಾನ ವಿಜಯ ವಿದ್ಯಾರ್ಥಿಗಳ ವಸತಿಗೃಹ’ ವನ್ನು ಶ್ರೀಗಳು ಕ್ರಿ.ಶ.೧೯೬೫ರಲ್ಲಿ ನರೇಗಲ್ಲಿನಲ್ಲಿ ಸ್ಥಾಪಿಸಿದರು. ಈ ವಸತಿಗೃಹದ ಉದ್ಘಾಟನೆಯನ್ನು ಆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್. ನಿಜಲಿಂಗಪ್ಪನವರು ೩೦-೬-೧೯೬೫ರಂದು ನೆರವೇರಿಸಿದರು.

ಅನ್ನದಾಸೋಹಕ್ಕಾಗಿ ನರೇಗಲ್ಲಿನಲ್ಲಿ ಶ್ರೀ ಕೋಡೀಕೊಪ್ಪದ ವೀರಪ್ಪಜ್ಜನವರ ಬಾಗಲಕೋಟ ಶ್ರೀ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯ’ವೆಂಬ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ, ಸುಮಾರು ೫೦೦ ವಿದ್ಯಾರ್ಥಿಗಳಿಗೆ ಪ್ರಸಾದದ ಅನುಕೂಲತೆಯನ್ನು ಶ್ರೀಗಳು ಒದಗಿಸಿದರು. ಮರಣ ಹಾಗೂ ಅವುಗಳಿಗೆ ಸಂಬಂಧಿಸಿದ ಸಂಶೋಧನೆಗಾಗಿ ಬಸವರಾಜಶಾಸ್ತ್ರಿಗಳು ಸನ್ನಿಧಿಯ ಅಪ್ಪಣೆಯಂತೆ ಧರ್ಮಗ್ರಂಥಗಳ ಪರಿಷ್ಕರಣ ಹಾಗೂ ಅವುಗಳಿಗೆ ಸಂಬಂಧಿಸಿದ ಆಕರಗಳ ಅನುಕೂಲತೆಗಳನ್ನು ಒದಗಿಸಿದರು.

ಧರ್ಮಗ್ರಂಥಗಳ ಪರಿಶೋಧನೆಗಾಗಿ ಪಂಡಿತರನ್ನು ಬೇರೆ ಬೇರೆ ಸ್ಥಳಗಳಿಗೆ ಕಳಿಸಿ ಪರಿಷ್ಕರಿಸಲ್ಪಟ್ಟು ಹಲವಾರು ಗ್ರಂಥಗಳನ್ನು ಶ್ರೀಮಠವು ಪ್ರಕಾಶನ ಗೊಳಿಸಿದೆ  6-1-1925  ರಂದು ಪಂಡಿತ್ ಬಸವರಾಜ ಶಾಸ್ತ್ರಿಗಳು ಸನ್ನಿಧಿಯ ಅಪ್ಪಣೆಯ ಮೇರೆಗೆ ಮದ್ರಾಸಿಗೆ ಹೋಗಿ ಅಲ್ಲಿ 5 ತಿಂಗಳವರೆಗೆ ಇದ್ದು ಕೆಲವು ಧರ್ಮಗ್ರಂಥಗಳನ್ನು ಶೋಧಿಸಿ ಹಾಲಕೆರೆ ಮಠದಲ್ಲಿ ಅವುಗಳ ಪರಿಷ್ಕಾರ ಕಾರ್ಯವನ್ನು ಕೈಕೊಂಡರು ಸ್ವಾಮಿಗಳ ಆಶ್ರಯದಲ್ಲಿ ಇಂಥ ಬೇರೆಬೇರೆ ಪಂಡಿತರಿಂದ ಬೆಳಕು ಕಂಡ ಕೃತಿಗಳೆಂದರೆ 1) ಶಂಕರಲಿಂಗ ಶತಕ

2) ಕ್ಷಮಾಪರಾಧ ಸ್ತೋತ್ರ 3) ಯೋಗಿರಾಜ ವಿಜಯ 4) ಶ್ರೀ ಅನ್ನಧಾನ ಮಹಾಸ್ವಾಮಿಗಳ ಪುರಾಣ

, ಹೀಗೆ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಸಾದ ನಿಲಯಗಳನ್ನು ನಡೆಯಿಸುವದು, ಇಂಥ ಉಳಿದ ಸಂಸ್ಥೆಗಳಿಗೆ ನೆರವಾಗುವುದು, ಸಂಶೋಧನೆ ಹಾಗೂ ಧರ್ಮ ಗ್ರಂಥಗಳ ಪ್ರಕಟನೆ ಕೈಕೊಳ್ಳುವುದರ ಮುಖಾಂತರ ಶ್ರೀಗಳು ವಿದ್ಯಾಕ್ಷೇತ್ರದಲ್ಲಿ ಬಹಳ ಉಪಯುಕ್ತವಾದ ಸೇವೆ ಸಲ್ಲಿಸಿದರು. ಹಲವಾರು ಪ್ರಸಂಗಗಳಲ್ಲಿ ನಾನು ಶ್ರೀಗಳ ದರ್ಶನ ಪಡೆಯುವ ಅವಕಾಶ ದೊರೆಯಿತು. ಆಗ ಅವರಿಗೆ ಆಗಲೇ ಬಹಳ ವಯಸ್ಸಾಗಿತ್ತು ಮೈತುಂಬ ಕ್ಯಾವಿಯ ಬಟ್ಟೆ, ದೊಡ್ಡ ಕೋಲು, ಮೈಮೇಲೆ ದೊಡ್ಡ ದೊಡ್ಡ ರುದ್ರಾಕ್ಷಿಗಳ ದೊಡ್ಡ ಸರ, ವಿಶಾಲವಾದ ಮುಖದ ಹಣೆಯ ತುಂಬ ಢಾಳವಾಗಿ ಧರಿಸಿದ ವಿಭೂತಿ ಇವುಗಳು ಅವರ ದರ್ಶನವನ್ನು ಅವಿಸ್ಮರಣೀಯವಾಗಿ ಮಾಡುತ್ತಿದ್ದವು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಎಸಗಿದ ಕಾರ್ಯ ಎಷ್ಟು ಮಹತ್ತರವಾಗಿತ್ತೋ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಷ್ಟೇ ಮಹತ್ವದ್ದಾಗಿತ್ತು ಶಿಕ್ಷಣ ಕ್ಷೇತ್ರದಲ್ಲಿ ಪೂಜ್ಯ ಶ್ರೀಗಳು ಮಾಡಿದ ಪ್ರಮುಖ ಕಾರ್ಯಗಳನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಅವುಗಳನ್ನು ಹೀಗೆ ವಿಂಗಡಿಸಿ ಎತ್ತಿ ಹೇಳಬಹುದು : ೧)ಹಳ್ಳಿಗಾಡಿನಲ್ಲಿ ಅಲ್ಲಿಯ ಜನತೆಯ ಸಲುವಾಗಿ, ಅದರಲ್ಲಿಯೂ ಬಡವರ ಅನುಕೂಲಕ್ಕಾಗಿ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಅವರಲ್ಲಿ ವಿದ್ಯಾಪ್ರಸಾರಕ್ಕೆ ಅನುವು ಮಾಡಿಕೊಟ್ಟಿದ್ದು. ೨) ಹಳ್ಳಿಗಾಡಿನ ಹಾಗೂ ದೀನದಲಿತರ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕಾಗಿ ಉಚಿತ ಪ್ರಸಾದ ನಿಲಯ ಆರಂಭಿಸಿ ಅವರಿಗೆ ಬಿಸಿಊಟದ ಅನುಕೂಲತೆಗಳನ್ನು ಒದಗಿಸಿದ್ದು, ೩) ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತ ಅಭ್ಯಾಸದ ಮಹತಿಯನ್ನು ಗುರುತಿಸಿ ಅದರ ಅಗತ್ಯ ಜ್ಞಾನವನ್ನುಪ್ರಸುರಪಡಿಸಿದ್ದು, ೪) ಹೆಣ್ಣು ಮಕ್ಕಳ ಶಿಕ್ಷಣ ಅವಶ್ಯಕತೆಯನ್ನು ಮನಗಂಡು ಅವರಿಗಾಗಿ ವಿದ್ಯಾಸಂಸ್ಥೆ ಆರಂಭಿಸಿದ್ದು, ೫) ಧರ್ಮ ಗ್ರಂಥಗಳ ಪರಿಷ್ಕರಣೆ, ಸಂಶೋಧನೆ ಹಾಗೂ ಅವುಗಳ  ಪ್ರಕಟನೆಗೆ ಅವಕಾಶ ಕಲ್ಪಿಸಿದ್ದು. ೬) ವ್ಯಾಸ ಕ್ರಮದಲ್ಲಿ ಯೋಗ ಶಿಕ್ಷಣದ ಮಹತಿಯನ್ನರಿತು ಅದನ್ನು  ವಿದ್ಯಾಭ್ಯಾಸ ಕ್ರಮದಲ್ಲಿ  ಸೇರಿಸಿ ಅದರ ಅಭ್ಯಾಸದ ಅನುಕೂಲತೆಗಳನ್ನು ಎಡೆಮಾಡಿಕೊಟ್ಟಿದ್ದು. ೬)ಇವೆಲ್ಲಕ್ಕಿಂತ ಹೆಚ್ಚಾಗಿ ಸಮಾಜದ ಉಳಿವಿಗೆ ಅತಿ ಅವಶ್ಯವಾದ ಶಿವಯೋಗ ಮಂದಿರದಂಥ ಉದಾತ್ತ ವಿದ್ಯಾಸಂಸ್ಥೆಗೆ ಅನೇಕ ರೀತಿಯಿಂದ ನೆರವಾದದ್ದು. ಇವೆಲ್ಲವುಗಳನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ಅನ್ನದಾನ ಸ್ವಾಮಿಗಳು ಶಿಕ್ಷಣ ಕ್ಷೇತ್ರಕ್ಕೆ ಅಮೋಘವಾದ ಸೇವೆ ಸಲ್ಲಿಸಿದರೆಂದು ಹೇಳಿದರೆ ಅದು ಅತಿಶಯೋಕ್ತಿಯಾಗಲಾರದು.

 ಆಧಾರ ಗ್ರಂಥಗಳು : ೧. ‘ಶ್ರೀ ಗುರು ಅನ್ನದಾನೇಶ್ವರ ಚರಿತಾಮೃತ” – ವೇ.ಪಂ.ಜಿ.ಎಂ.ಚಂದ್ರಶೇಖರ

ಶಾಸ್ತ್ರಿಗಳು ಇಜಾರಿ ಲಕಮಾಪುರ (ಹಾವೇರಿ). ೨. “ಹಾಲಕೆರೆಯ ಶ್ರೀ ಅನ್ನದಾನ ಮಹಾಸ್ವಾಮಿದ್ವಯರು ” – ಡಾ. ಬಿ. ವಿ.

ಶಿರೂರ.

ಲೇಖಕರು: ಪ್ರಕಾಶ ಗಿರಿಮಲ್ಲನವರ

 ನಾಗನೂರು ರುದ್ರಾಕ್ಷಿಮಠದ ೭ನೆಯ ಅಧಿಪತಿಗಳಾಗಿ ಬಂದ ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳ ಕಾಲ ಸುವರ್ಣಕಾಲವೆಂದೇ ಹೇಳಬೇಕು.  ಗಡಿಭಾಗದಲ್ಲಿ  ಶ್ರೀಗಳು ಮಾಡಿದ ಧಾರ್ಮಿಕ-ಶೈಕ್ಷಣಿಕ ಕ್ರಾಂತಿ ಅಭೂತಪೂರ್ವವಾದುದು. ೧೯೨೨ ರಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳವರ ಆಶೀರ್ವಾದದಿಂದ ಶ್ರೀಮಠದ ಕರ್ಣಧಾರತ್ವವನ್ನು ವಹಿಸಿಕೊಂಡು ಪೂಜ್ಯರು “ಶಿಕ್ಷಣವೇ ಶಕ್ತಿ” ಎಂಬುದನ್ನರಿತು ಶೈಕ್ಷಣಿಕ ಸಂಸ್ಥೆಗಳ ಮೂಲಕ ನಮ್ಮ ನಾಡವರ ಬಡತನ ಹಾಗು ಅಜ್ಞಾನ ನಿವಾರಣೆಗೆ ಹಗಲಿರುಳೂ ಶ್ರಮಿಸಿದವರು ಲಿಂ. ಡಾ|| ಶಿವಬಸವ ಮಹಾಸ್ವಾಮಿಗಳು.

ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರ ಶೈಕ್ಷಣಿಕ ಕ್ರಾಂತಿ:

  ಕ್ರಿ.ಶ. ೧೯೩೨ರಲ್ಲಿಯೇ ಪ್ರಸಾದ ನಿಲಯ ಸ್ಥಾಪಿಸಿ ಜಾತಿ ಮತ ಪಂಥಗಳ ಭೇದವಿಲ್ಲದೆ ನಾಡ ಬಡಮಕ್ಕಳಿಗೆ ಅನ್ನ-ಆಶ್ರಯಗಳನ್ನಿತ್ತು ಸಲುಹಿದ ಅವರು ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯನ್ನು ಕ್ರಿ.ಶ. ೧೯೭೫ ರಲ್ಲಿ ಸ್ಥಾಪಿಸುವ ಮೂಲಕ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹದ ಕೈಂಕರ್ಯವನ್ನು ಪ್ರಾರಂಭಿಸಿದರು. ಅವರು ಸ್ಥಾಪಿಸಿದ ಪ್ರಸಾದ ನಿಲಯವು ಸಾರ್ಥಕ ೭೮ ವಸಂತಗಳನ್ನು ಪೂರೈಸಿದೆ. ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯು ಕಳೆದ ಮೂರು ದಶಕಗಳ ಅವಧಿಯಲ್ಲಿ ಹಲವಾರು ಅಂಗಸಂಸ್ಥೆಗಳನ್ನು ಹೊಂದಿ ಹೂವು-ಹಣ್ಣುಗಳಿಂದ ಕೂಡಿದ ಸುಂದರ ವೃಕ್ಷದಂತೆ ಕಂಗೊಳಿಸುತ್ತಿದೆ.

 ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಿತ್ಯ ೫-೬ ಸಾವಿರ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಉತ್ತರ ಕರ್ನಾಟಕದ ಬೀದರ, ಗುಲಬರ್ಗಾ, ರಾಯಚೂರು, ಬಳ್ಳಾರಿ, ವಿಜಾಪುರ ಮುಂತಾದ ಜಿಲ್ಲೆಗಳ ಗ್ರಾಮಾಂತರ ಪ್ರದೇಶದ ಸಾವಿರಾರು ಬಡಮಕ್ಕಳು ಪ್ರಸಾದದ ಜೊತೆಗೆ ಸಂಸ್ಕಾರಯುಕ್ತ ಶಿಕ್ಷಣವನ್ನು ಪಡೆದು ನಾಡು-ನುಡಿಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ನಗರ ಮಧ್ಯದಲ್ಲಿ ೧೬ ಎಕರೆ ವಿಸ್ತಾರದ ಪ್ರಶಾಂತ, ಸುಂದರ ಹಾಗು ಅಧ್ಯಾತ್ಮಿಕ ಪರಿಸರದಲ್ಲಿ ಪ್ರಾಚೀನ ಆದರ್ಶಗಳ ಜೊತೆಗೆ ಆಧುನಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಶಿಸ್ತು, ಸಹನೆ, ಧೈರ್ಯ, ಸಾಹಸ ಮತ್ತು ಆತ್ಮವಿಶ್ವಾಸಗಳನ್ನು ರೂಢಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾರೆ.

 ಹಲವಾರು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಮಹಾವಿದ್ಯಾಲಯ, ಡಿ.ಇಡಿ; ಬಿ.ಇಡಿ ಮಹಾವಿದ್ಯಾಲಯ, ತಾಂತ್ರಿಕ ವಿದ್ಯಾಲಯ ಹಾಗು ಕೈಗಾರಿಕಾ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯು ವಿಜ್ಞಾನ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ವಿಪುಲ ಗ್ರಂಥಗಳು, ವಿಶ್ವಕೋಶಗಳು, ಪತ್ರಿಕೆಗಳಿಂದ ಸಮೃದ್ಧವಾದ ಗ್ರಂಥಾಲಯ, ಸಮರ್ಥ ಹಾಗು ಸಮರ್ಪಿತ ಸಿಬ್ಬಂದಿ, ಸುಸಜ್ಜಿತ ಪ್ರಯೋಗಾಲಯಗಳನ್ನು  ಹೊಂದಿ ಶ್ರೀಸಾಮಾನ್ಯನಿಗೂ ಉನ್ನತ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಆದರ್ಶ ಸಂಸ್ಥೆಯಾಗಿದೆ. ಶಿಕ್ಷಣ ಪ್ರಸಾರದ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿರುವ ಈ ಸಂಸ್ಥೆ ಗಡಿಕನ್ನಡಿಗರಿಗೆ ವರದಾನವಾಗಿದೆ.

ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಶ್ರೀಗಳ ಪಾತ್ರ:

 ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಶಿವಬಸವ ಸ್ವಾಮಿಗಳವರು ನಿರ್ವಹಿಸಿದ ಪಾತ್ರ ಅವಿಸ್ಮರಣೀಯವಾದುದು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ನಿರಂತರ ಅನ್ನ ಆಶ್ರಯಗಳನ್ನು ಕಲ್ಪಿಸಿದ್ದ ಶ್ರೀಗಳು  ಕೆಲವು ಕಾಲ ಭೂಗತರಾಗುವ ಸಂದರ್ಭವೂ ಉಂಟಾಗಿತ್ತು. ೧೯೩೭ರಲ್ಲಿ ಗಾಂಧೀಜಿ ಬೆಳಗಾವಿ-ಹುದಲಿ ಗ್ರಾಮಗಳಿಗೆ ಬಂದ ಸಂದರ್ಭದಲ್ಲಿ ಶ್ರೀಗಳು ಅವರನ್ನು ಕಂಡು ಮಾತನಾಡಿದರು. ಗಾಂಧೀಜಿಯವರ ಆದರ್ಶ-ಹೋರಾಟದ ಬದುಕು ಶ್ರೀಗಳಿಗೆ ಹಿಡಿಸಿತು. ಗಾಂಧೀಜಿಯವರಿಂದಲೇ ಶ್ರೀಗಳು ಖಾದಿ ದೀಕ್ಷೆ ಪಡೆದರು. ಅಂದಿನಿಂದ ಬದುಕಿನ ಕೊನೆಯುಸಿರುವರೆಗೂ ಖಾದಿಧಾರಿಗಳಾಗಿದ್ದರು. ಬೆಳಗಾವಿ ಗಡಿ ಸಮಸ್ಯೆ ಕುರಿತು ಸಮೀಕ್ಷೆಗಾಗಿ ಬಂದ ಫಜಲಿ ಆಯೋಗ, ಮಹಾಜನ ಆಯೋಗಗಳ ಮುಂದೆ ಶ್ರೀಗಳು ಬೆಳಗಾವಿ ಎಂದೆಂದೂ ಕರ್ನಾಟಕದ್ದು ಎಂದು ಬಲವಾಗಿ ಪ್ರತಿಪಾದಿಸಿದರು. ಅವರ ಅವಿಶ್ರಾಂತ ಹೋರಾಟ ಮತ್ತು ಕನ್ನಡ ಕಟ್ಟುವ ಕಾರ್ಯಗಳಿಂದಾಗಿ ಇಂದು ಬೆಳಗಾವಿ ಕರ್ನಾಟಕದಲ್ಲಿ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ.

ಗೌರವ ಸಮ್ಮಾನಗಳು :

 ಸುಮಾರು ಏಳು ದಶಕಗಳ ಕಾಲ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡ ಪೂಜ್ಯ ಶ್ರೀಗಳು ಭಿಕ್ಷೆ ಬೇಡಿ, ನಾಡಿನ ಅಸಂಖ್ಯಾತ ಬಡಮಕ್ಕಳಿಗೆ ಅನ್ನ-ಆಶ್ರಯ ನೀಡಿ ಅವರ ಬಾಳಿಗೆ ಬೆಳಕು ನೀಡಿದ್ದು ಯಾವ ಸ್ವಾರ್ಥಕ್ಕಾಗಿ. ಅವರೆಂದೂ ಪದವಿ-ಪ್ರಶಸ್ತಿಗಳು ದೊರೆಯುತ್ತವೆ ಎಂದು ಆಶೆಗಾಗಿ ಯಾವ ಕಾರ್ಯವನ್ನೂ ಮಾಡಿದವರಲ್ಲ. ಪೂಜ್ಯಶ್ರೀಗಳ ಈ ಬಹುಮುಖ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಗಮನಿಸಿದ ಕರ್ನಾಟಕ ವಿಶ್ವವಿದ್ಯಾಲಯ ೧೯೮೯ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.  ಆದರೆ ಗೌರವ ಡಾಕ್ಟರೇಟ ಎಂಬ ಪದವಿ ಎಂದರೇನು ಎಂಬುದೇ ಶ್ರೀಗಳಿಗೆ ಗೊತ್ತಿರಲಿಲ್ಲ. ವೇದಿಕೆ ಮೇಲೆ ರಾಜ್ಯಪಾಲರು ಕೊಡಮಾಡುವ ಪ್ರಶಸ್ತಿಯನ್ನು ಕರಿಕೋಟು ಹಾಕಿಕೊಂಡು ಸ್ವೀಕರಿಸುವುದು ಅವರಿಗೆ ಬೇಡವಾಗಿತ್ತು. ನೂರು ವರ್ಷದ ಸಂಭ್ರಮದಲ್ಲಿದಾಗ ಈ ಗೌರವ ಡಾಕ್ಟರೇಟ ಪೂಜ್ಯರಿಗೆ ಬಂದಿತ್ತು. ಆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠಾಧೀಶರೊಬ್ಬರು ಈ ಪದವಿಗಾಗಿ ವಿಪರೀತ ಲಾಭಿ ನಡೆಸಿದ್ದರು. ಅವರಿಗೆ ದೊರೆಯದ ಪ್ರಶಸ್ತಿ ಯಾವುದಕ್ಕೂ ಆಸೆಪಡದ ಶಿವಬಸವ ಸ್ವಾಮಿಗಳ ಪದತಲಕ್ಕೆ ಬಂದಿತ್ತು. ಆಗ ಶಿವಬಸವ ಸ್ವಾಮಿಗಳು ಸಹಜವಾಗಿಯೇ ಬಂದ ಭಕ್ತರೆದುರು ‘ನಮಗೇಕೆ ಈ ಪ್ರಶಸ್ತಿ ಕೊಡುತ್ತಾರೋ, ತಿಳಿಯದು, ಬೇಡುವವರಿಗೆ ಈ ಪ್ರಶಸ್ತಿ ಕೊಡಬೇಕಾಗಿತ್ತು’ ಎಂದು ಹೇಳಿದ್ದರು.

 ೧೯೯೨ರಲ್ಲಿ ಕರ್ನಾಟಕ ಘನ ಸರಕಾರದ ‘ರಾಜ್ಯೋತ್ಸವ ಪ್ರಶಸ್ತಿ’ ಪೂಜ್ಯರ ಮಡಿಲಿಗೆ ಬಂದಿತು. ಆದರೆ ಸ್ವೀಕರಿಸಲು ಅವರು ಬೆಂಗಳೂರಿಗೆ ಹೋಗಲಿಲ್ಲ. ಕೊನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಬೆಳಗಾವಿಯಲ್ಲಿ ಒಂದು ಅದ್ದೂರಿ ಸಮಾರಂಭ ನೆರವೇರಿಸಿ, ಪ್ರಶಸ್ತಿ ಕೊಡಮಾಡಿದರು. ಪ್ರಶಸ್ತಿಯನ್ನು ಸ್ವೀಕರಿಸುವಾಗ ಶ್ರೀಗಳ ಮುಖದಲ್ಲಿ ಯಾವ ಬದಲಾವಣೆಗಳು ಆಗಿರಲಿಲ್ಲ. ಪ್ರಶಸ್ತಿ ಬಂದಿತ್ತೆಂಬ ಮಮಕಾರ ಅವರಲ್ಲಿರಲಿಲ್ಲ, ಅಷ್ಟು ನಿರ್ಲಿಪ್ತರಾಗಿ ಪ್ರಶಸ್ತಿಯನ್ನು ತಗೆದುಕೊಂಡರು.

ಜನ್ಮ ಶತಮಾನೋತ್ಸವ

 ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರಿಗೆ ೧೯೮೯ರಲ್ಲಿ  ನೂರು ವರ್ಷಗಳು ತುಂಬಿದವು. ಅವರ ಅಸಂಖ್ಯಾತ ಭಕ್ತಸಮೂಹ ಜನ್ಮಶತಮಾನೋತ್ಸವವನ್ನು ಅದ್ದೂರಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದರು.

 ಹೊಸಪೇಟೆ ಕೊಟ್ಟೂರುಸ್ವಾಮಿಮಠದ ಪೂಜ್ಯ ಜಗದ್ಗುರು ಸಂಗನಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆಯಾಯಿತು. ಅನೇಕ ಸಮಿತಿ-ಉಪಸಮಿತಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಂಡವು. ನಾಗನೂರಿನಲ್ಲಿ ಮೂರುದಿನಗಳ ಕಾಲ ಶತಮಾನೋತ್ಸವ ಸಮಾರಂಭ ನಾಡಿನ ಅನೇಕ ಗಣ್ಯರ-ಮಠಾಧಿಪತಿಗಳ ಸಮ್ಮುಖದಲ್ಲಿ ಸಾಂಗವಾಗಿ ಜರುಗಿತು. ಈ ಸಂದರ್ಭದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂಥ ಗ್ರಂಥಗಳ ಲೋಕಾರ್ಪಣೆಗೊಂಡುದು ವಿಶೇಷವೆನಿಸಿತು. ಗುಬ್ಬಿಯ ಮಲ್ಲಾಣಾರ್ಯ ರಚಿತ ವೀರಶೈವಾಮೃತ ಮಹಾಪುರಾಣ,   ಬಸವಣ್ಣನವರ  ವಚನಗಳ ಮರಾಠಿ ಅನುವಾದ, ಮತ್ತು ‘ಶಿವದೀಪ್ತಿ’ ಶಿವಬಸವ ಸ್ವಾಮಿಗಳ ಶತಮಾನೋತ್ಸವ ಅಭಿನಂದನ ಗ್ರಂಥಗಳು ಬಿಡಗಡೆಯಾದವು.  ಬೆಳಗಾವಿ ಭಕ್ತರಿಗೆ ಪ್ರತ್ಯೇಕ ಶತಮಾನೋತ್ಸವ ಕಾರ್ಯಕ್ರಮ ಆಚರಿಸಬೇಕೆಂದು ನಿರ್ಧರಿಸಿ, ಬೆಳಗಾವಿಯಲ್ಲಿಯೂ ಫೆಬ್ರವರಿ ೧೯೯೦ ರಲ್ಲಿ ಅದ್ದೂರಿಯಿಂದ ಶತಮಾನೋತ್ಸವ ಸಮಾರಂಭ ಆಚರಿಸಿದರು.

ಕನ್ನಡದ ಶಕ್ತಿಕೇಂದ್ರ

ಅಖಿಲ ಭಾರತ ಶಿವಾನುಭವ ಸಮ್ಮೇಳನದ ೧೭ನೇ ಅಧಿವೇಶನವನ್ನು  ದಿನಾಂಕ ೬,೭ ನವೆಂಬರ್ ೬೩ ರಂದು  ಬೆಳಗಾವಿ ಶಹಪೂರ ಭಕ್ತ ಜನರು ಶ್ರೀ ಮಹಾಸ್ವಾಮಿಗಳನ್ನು ಮುಂದೆ ಮಾಡಿಕೊಂಡು ಬೆಳಗಾವಿ ಲಿಂಗರಾಜ ಕಾಲೇಜಿನ ಭವ್ಯ ಮಂಟಪದಲ್ಲಿ ಶ್ರೀ ಸಿದ್ಧಗಂಗಾಮಠಾಧ್ಯಕ್ಷರಾದ ಶ್ರೀ ಶಿವಕುಮಾರ ಸ್ವಾಮಿಗಳವರ ಘನ ಅಧ್ಯಕ್ಷತೆಯಲ್ಲಿ ಧಾರವಾಡದ ಮುರುಘಾಮಠದ ತ್ರಿವಿಧ ದಾಸೋಹ  ಮೂರ್ತಿಗಳಾದ ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳ ಸಮರ್ಥ ನೇತೃತ್ವದಲ್ಲಿ ಏರ್ಪಡಿಸಿದರು. ಬೆಳಗಾವಿಯ ಸಾಮಾಜಿಕ ಇತಿಹಾಸದಲ್ಲಿ ಈ ಸಮಾರಂಭವು ಒಂದು ಸ್ಮರಣಾರ್ಹವಾದ  ಘಟನೆಯಾಗಿದೆ. ಇದರಿಂದ ಬೆಳಗಾವಿಯಲ್ಲಿ ನಮ್ಮ ಸಮಾಜದ ಸಂಘಟನೆ ಹಾಗು ಸ್ಥಾನಮಾನಗಳ ಅರಿವು ಸಾರ್ವಜನಿಕರಿಗಾಯಿತು.

ಪ್ರತಿವರ್ಷವೂ ಗಣೇಶಚವತಿ, (ಗಣೇಶ ಚವತಿ ಎಂದೇ ನಾಗನೂರು ರುದ್ರಾಕ್ಷಿಮಠದಲ್ಲಿ ಸಿದ್ಧರಾಮೇಶ್ವರ ರಥೋತ್ಸವ ಜರುಗುವುದು. ಅಂದೇ ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರು ಅಂದೇ ಲಿಂಗೈಕ್ಯರಾದುದರಿಂದ ಅವರ ಪುಣ್ಯಸ್ಮರಣೆಯು ಜರುಗುವುದು ಒಂದು ಯೋಗಾಯೋಗ) ನಾಡಹಬ್ಬ ಈ ಮೊದಲಾದ ಉತ್ಸವಗಳನ್ನು ಏರ್ಪಡಿಸಿ, ಸಾಹಿತ್ಯ ಸಾಂಸ್ಕೃತಿಕ ಮನೋರಂಜಕ ಕಾರ್ಯಕ್ರಮಗಳನ್ನು ಹಮ್ಮಿ ಆಯಾ ವಿಷಯತಜ್ಞರ ವ್ಯಾಖ್ಯಾನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಜಾಗೃತಿಯನ್ನೂ ನವಚೈತನ್ಯವನ್ನೂ ಹುಟ್ಟಿಸಿ ಅವರಿಗೆಲ್ಲ ಈ ಉತ್ಸವಗಳ ಮೂಲಕ ಜ್ಞಾನ ಪ್ರಸಾದವನ್ನು ಹಂಚುತ್ತ ಕನ್ನಡ ನಾಡನುಡಿಗಳ ಸೇವೆಗೆ ಶ್ರೀಮಠ ಕೇಂದ್ರಶಕ್ತಿಯಾಗಿದೆ.

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಓದುಗ ಶರಣರೇ.

ಒಬ್ಬ ಮಹಾತ್ಮರ ಜೀವನ ಚರಿತ್ರೆಯನ್ನು ವೀಕ್ಷಿಸಿದರೆ ನಮ್ಮ ಅಂತರಂಗದ ವಿಕಾಸದ, ಅವರ ವ್ಯಕ್ತಿತ್ವ ಸಮಾಜದ ಮೇಲೆ ಪ್ರಭಾವ ಬೀರುವ ಘಟನೆಯನ್ನು ಚರಿತ್ರೆಯಲ್ಲಿ ಕಾಣುತ್ತೇವೆ.

ಶ್ರೀ ಗುರು ಕುಮಾರೇಶ್ವರರ ಜೀವನವನ್ನು ವೀಕ್ಷಿಸಿದಾಗ ನಮ್ಮ ಅಂತರಂಗ ಶುದ್ಧವಾಗಲು ಶ್ರೀ ಶಿವಯೋಗ ಮಂದಿರ, ಬಹಿರಂಗದ ಸಮಾಜ ಶುದ್ಧಿಗೊಳ್ಳಲು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ನಿರ್ಮಿಸಿ ಇಡೀ ಭರತ ಖಂಡಕ್ಕೆ ಭವ್ಯ ಕಾಣಿಕೆಯನ್ನು ನೀಡಿರುವರು.

 •   ನಾಡಿನ ಹಲವಾರು ಮಠಗಳು ಅಸ್ತಿತ್ವ ಕಳೆದುಕೊಂಡು ಅವುಗಳೆಲ್ಲಾ ಸಂಸಾರಿಗಳ ಛತ್ರಗಳಾದ ಸಂದರ್ಭದಲ್ಲಿ,

 •  ಗುರುಗಳಾದವರು ತಮ್ಮ ತಮ್ಮ ಧರ್ಮದ ತಿಳುವಳಿಕೆ  ಆಚಾರ ವಿಚಾರಗಳ ನೀತಿ ನಿಯಮಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ,

 •  ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರಗಳ ತಿಳುವಳಿಕೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ,

 •  ಷಟ್ಸ್ಥಲಗಳು, ಪಂಚಾಚಾರಗಳು ಏನು? ಯಾವುವು?  ಎಂಬುವುದನ್ನು ಮರೆಯುತ್ತಿರುವ ಸಂದರ್ಭದಲ್ಲಿ ಜನಿಸಿದವರು, ಹಾನಗಲ್ಲ ಶ್ರೀ ಗುರು ಕುಮಾರ ಮಹಾಶಿವಯೋಗಿಗಳು.

ಎಲ್ಲ ಧರ್ಮಗಳಲ್ಲಿ  ಎರಡು ಕವಲುಗಳಿವೆ, ಜೈನ ಧರ್ಮದಲ್ಲಿ ದಿಗಂಬರ- ಶ್ವೇತಾಂಬರ. ಕ್ರೈಸ್ತ ಧರ್ಮದಲ್ಲಿ ಪ್ರಾಟೆಸ್ಟೆಂಟ್- ಕ್ಯಾಥೋಲಿಕ್. ಬೌದ್ಧಧರ್ಮದಲ್ಲಿ ಹೀನಾಯಾನ-ಮಹಾಯಾನ. ಇಸ್ಲಾಂ ಧರ್ಮದಲ್ಲಿ ಸೂಯಾ- ಸೂನ್ನಿ, ಕವಲುಗಳಿರುವ ಹಾಗೆ ವೀರಶೈವ ಲಿಂಗಾಯತ ಧರ್ಮದಲ್ಲಿ ಗುರು-ವಿರಕ್ತ ಪಂಥಗಳಿವೆ ಆದರೆ ಅವೆರಡು ಒಂದೆ ಎಂದು ಬೋಧಿಸಿದವರು  ಶ್ರೀ ಗುರು ಕುಮಾರ ಮ‌ಹಾಶಿವಯೋಗಿಗಳು.

‘ಅತ್ಕೇ ಚೇತನ್ ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್’.

ಸಮೀಪದಲ್ಲಿ ಜೇನುತುಪ್ಪ ಸಿಗುವದಾದರೇ  ಪರ್ವತದವರೆಗೆ ಏಕೆ ಹೋಗಬೇಕು.      ಎಂಬ ನ್ಯಾಯದಂತೆ.

 ಶಿವಯೋಗ ಮಂದಿರದ ಎಲ್ಲಾ ಮಹಾ ಮಹಾಸ್ವಾಮಿಗಳು, ಶಿವಯೋಗಿಗಳು ಅವರ ವಿದ್ಯೆಯನ್ನು ಶಿವಯೋಗ ಮಂದಿರದಲ್ಲಿಯೇ ಕಲಿತರೇ ವಿನಃ ಮತ್ತೆ ಯಾವ ಕ್ಷೇತ್ರಕ್ಕೆ ಹೋಗಲಿಲ್ಲಾ. ಆ ಶಿವಯೋಗ ಮಂದಿರದಲ್ಲಿ ತಮ್ಮ ಜೀವನದಲ್ಲಿ ಸಾಧಿಸಿರುವ ಸಾಧನೆಯ ಕೆಲವೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಾಶಿವಯೋಗಿಗಳನ್ನು ಈ ಕೆಳಗೆ ತಿಳಿಸಿದೆ.

1  ವಿದ್ವತ್ ಮತ್ತು. ಲೇಖನಕಲೆಯ ಪ್ರತಿಭಾವಂತರು – ಶ್ರೀ ಜ.ಚ.ನಿಯವರು.

2   ಶಿವಯೋಗ  ಮತ್ತು ಕೃಷಿಯಲ್ಲಿ ಬಲ್ಲಿದವರು – ಶ್ರೀ ರುದ್ರಮುನಿ ಶಿವಯೋಗಿಗಳು.

3  ಆಯುರ್ವೇದ ಹಾಗೂ ಭಕ್ತರ ಭವರೋಗನಿವಾರಣೆಯಲ್ಲಿ ತೊಡಗಿದವರು –  ಶ್ರೀ ಚನ್ನಬಸವ ಮಹಾಸ್ವಾಮಿಗಳು.

4 ಕನ್ನಡದ ಗಡಿ ಭಾಗದಲ್ಲಿ ಕನ್ನಡ ಶಿಕ್ಷಣಕ್ಕೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಆಧ್ಯತೆ ಕೊಟ್ಟವರು -ಡಾ. ಶ್ರೀ ಶಿವಬಸವ ಮಹಾಸ್ವಾಮಿಗಳು ಮತ್ತು ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರು.

5 ಕೀರ್ತನೆ ಮತ್ತು ಪುರಾಣಕತೃಗಳಲ್ಲಿ ಶ್ರೀ ಚೆನ್ನಕವಿಗಳು.

6 ಅಂಧರ ತಾಯಿಯಾಗಿ, ಗಾಯನದಲ್ಲಿ ನಿಪುಣರು – ಗಾನಯೋಗಿ ಪಂಚಾಕ್ಷರಿ ಗವಾಯಿಗಳು.

ಕುಮಾರೇಶನ ಸಾಮಿಪ್ಯದಲ್ಲಿ.

1) ಬೈಲಹೊಂಗಲ ತಾಲೂಕಿನ ಅಂಬರಗದ್ದೆಯ ಶಿವಭಕ್ತರಾದ ಹಿರೇಮಠ ಮನೆತನದಲ್ಲಿ ಜನಿಸಿದ ಕೂಸು, ಹನ್ನೆರಡನೆಯ ವಯಸ್ಸಿಗೆ ಶಿವಯೋಗ ಮಂದಿರಕ್ಕೆ ಸೇರಿ ಅಲ್ಲಿನ ನಿಯಮಪಾಲನೆ ಮಾಡುತ್ತಾ , ಪೂಜೆ, ಯೋಗ, ಸಾಹಿತ್ಯ, ವೇದಾಂತ, ಶಿವಯೋಗ, ಅಧ್ಯಾತ್ಮವಿದ್ಯೆಯಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದು ಶ್ರೇಷ್ಠ ಜ್ಞಾನಿಗಳಾದರು.  ಒಮ್ಮೆ ಮಹಾಶಿವಯೋಗಿಗಳು ” ನೀನು ವಿದ್ವತ್ತಿನಲ್ಲಿ ಪ್ರಾವಿಣ್ಯತೆ ಪಡೆದು ಉತ್ತಮ ಲೇಖನ ಕಾರ್ಯ ನಡೆಸುವೆ” ಎಂದು ಆಶೀರ್ವಾದ ಮಾಡಿದ್ದರು. ಅದೇ ರೀತಿಯಲ್ಲಿ ಶಿವಯೋಗ ಮಂದಿರದಲ್ಲಿ ಪ್ರಥಮ ಬಾರಿಗೆ ‘ಸುಕುಮಾರ’ ಪತ್ರಿಕೆಯನ್ನು ಪ್ರಾರಂಭಿಸಿ ಉತ್ತಮ ಲೇಖಕರಾಗಿ ಶಿವಯೋಗ ಮಂದಿರದಿಂದ ಹೊರಬಂದಿರುವರು. ನಿಡುಮಾಮಿಡಿ ಪೀಠದ ಅಧಿಕಾರ ಸ್ವಿಕರಿಸಿ ಶ್ರೀ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯರು ಎಂಬ ಹೆಸರನ್ನು ಪಡೆದರು ಮುಂದೆ ಜ.ಚ.ನಿ ಎಂಬ ಹೆಸರಿನಿಂದ ಪ್ರಖ್ಯಾತರಾಗಿವರು.  ತಾವೇ ಸ್ವತಃ ಪ್ರಬುದ್ಧ ಲೇಖಕರಾದ ಕಾರಣ  ಸಾವಿರಾರು ಪುಸ್ತಕಗಳನ್ನು ಹೊರತಂದಿರುವರು. ವೀರಶೈವರ ಆತ್ಮ ಆಗಿರುವ ಷಟ್ಸ್ಥಲದ ಬಗ್ಗೆ ಜೀವನ ಸಿದ್ಧಾಂತ ಎಂಬ ಮಹಾ ಗ್ರಂಥಗಳನ್ನು ರಚಿಸಿದ್ದಾರೆ. ಅಧ್ಯಾತ್ಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜ.ಚ.ನಿಯವರು ಸಾವಿರಾರು ವಚನಗಳನ್ನು ಸಹ ಬರೆದಿದ್ದಾರೆ. ವಿದ್ವತ್ ಲೋಕದಲ್ಲಿ ಸೈ ಎನ್ನುವ ಹಾಗೆ ಕೆಲಸ ಮಾಡಿರುವ ಲೇಖಕರಲ್ಲಿ ಪ್ರಬುದ್ಧತೆಯೊಂದಿಗೆ ಶಿವಯೋಗ ಮಂದಿರದಿಂದ ಹೊರಹೊಮ್ಮಿದವರು ಶ್ರೀ. ಜ.ಚ.ನಿಯವರು ಕೂಡಾ ಒಬ್ಬರು.

2) ಮಹಾಗುರುಗಳಿಂದ  ‘ಖರೆಮರಿ’ ಎಂದು ಕರೆಸಿಕೊಂಡಿದ್ದ ರುದ್ರಮುನಿ ಸ್ವಾಮಿಗಳು.

ಹಾವೇರಿ ಜಿಲ್ಲಾ ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಎಣ್ಣೆ ಮನೆತನದ ನೀಲಮ್ಮ ಮತ್ತು ವೀರಪ್ಪ ಶಿವಭಕ್ತರ ಮಗು,  ಶಿವಯೋಗ ಮಂದಿರದಲ್ಲಿ ಕಲಿಯಲು ಬಂದಾಗ ಟ್ರಸ್ಟ್ ಬೋರ್ಡಿನ ಆಯ್ಕೆಯಲ್ಲಿ ಬರದಿದ್ದರೂ ಶ್ರೀ ಕುಮಾರ ಶಿವಯೋಗಿಗಳು ಹಾನಗಲ್ಲ ವಿರಕ್ತಮಠದ ವೆಚ್ಚದಿಂದ ವಟುವಿನ  ಅಭ್ಯಾಸಕ್ಕೆ ಅನುವು ಮಾಡುವರು, ಮಂದಿರದ ಗುರುಕುಲ ಶಿಕ್ಷಣದೊಂದಿಗೆ ಸರ್ವಜೀವಿಯಲ್ಲಿ ದಯೆ, ಗೋಪಾಲನೆ ಅಲ್ಲದೆ ಆಚಾರ-ವಿಚಾರದಲ್ಲಿ ಬಲ್ಲಿದರಾಗಿ, ಕೃಷಿ, ಕಾಯಕದಲ್ಲಿ, ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಾಧಕನನ್ನು, ನಯಾ-ವಿನಯದಲ್ಲಿ ಉತ್ತಮಗತಿಯನ್ನು ಪಡೆದ ರುದ್ರಮುನಿ ದೇವರನ್ನು ಶಿಕಾರಿಪುರ ಸಮೀಪದ ಕಪನಳ್ಳಿ ಶಾಖಾ ಮಂದಿರಕ್ಕೆ ತಕ್ಕವನೆಂದು ಶಿವಯೋಗಿಗಳು ತಿಳಿದಿದ್ದರು. ಅದೇ ಸಮಯಕ್ಕೆ ಆ ಭಾಗದ ಭಕ್ತಮಹಾಶಯರು ನಮ್ಮಲ್ಲಿ ಒಬ್ಬ ಶಿವಯೋಗಿಯನ್ನು ಕಳುಹಿಸಿಕೊಡಿ ಎಂದು ಶಿವಯೋಗಿಗಳಲ್ಲಿ ಭಿನ್ನವಿಸಿದಾಗ, ರುದ್ರಮುನಿ ದೇವರನ್ನು ಸೂಚಿಸಿ ಅವರ ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ. “ನಿನ್ನಿಂದ ಆ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ, ಕಾಯಕದೊಂದಿಗೆ ಅಲ್ಲಿ ಸೇವೆ ಮಾಡಿಕೊಂಡಿರು”. ಎಂದು ಶಿವಯೋಗಿಗಳು ಆಶೀರ್ವಾದ ಮಾಡುದರು. ಕಾಡಿನ ಮಧ್ಯದಲ್ಲಿ ಶಿವಯೋಗ ಸಾಧನೆಯ ಮೂಲಕ ಕಾಯಕವನ್ನು ನಡೆಸಿದರು. ಪಂಚಸಿದ್ಧಿಗೊಂಡ ಶಿವಯೋಗಿಗಳು ಸುತ್ತಲಿನ ಭಕ್ತಜನರಿಗೆ ತಮ್ಮ ತಪೋಶಕ್ತಿಯನ್ನು ಧಾರೆ ಎರೆಯುತ್ತಾ ಬಂದರು. ಮಂದಿರದ ಆಚಾರವನ್ನು ಬಿಡದೆ ಶೀಲಾ ಬಳಕೆಯ ಪಕ್ಕಾ ಮಡಿಯನ್ನು ಅಂತ್ಯದವರೆಗೂ ನಡೆಸಿದರು. ಮಹಾಶಿವಯೋಗಿಗಳ ಆಶೀರ್ವಾದದ ಹಾಗೆ ಕಾಯಕ ಯೋಗಿಯಾಗಿ ಶತಾಯುಷಿಗಳಾದರು. ಹಲವಾರು ಪೂಜ್ಯರಿಗೆ ಚಿನ್ಮಯ ದೀಕ್ಷೆ ಹಾಗೂ ನಿರಂಜನ ದೀಕ್ಷೆಯನ್ನು ಕರುಣಿಸಿರುವ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಎಲ್ಲಾ ಭಕ್ತರ ಮನೆ ಮನದಲ್ಲಿ ಪೂಜ್ಯ ಭಾವದಿಂದ ಇರುವವರು.

3) ಶಾಖ ಶಿವಯೋಗ ಮಂದಿರದ ಆಯುರ್ವೇದದ ಖಣಿ.

ಬೈಲಹೊಂಗಲ ತಾಲೂಕಿನ ಮರಡಿನಾಗಲಾಪುರದಲ್ಲಿ ಜನಿಸಿದ ಆರ್ಯ, ಶಿವಯೋಗ ಮಂದಿರಕ್ಕೆ ಬಂದು ಯೋಗ, ಶಿವಯೋಗ, ಅಧ್ಯಾತ್ಮವಿದ್ಯೆ, ಸೇವಾಕಾರ್ಯ, ಆಯುರ್ವೇದದ ಔಷಧಿ, ಕೃಷಿ-ಕಾಯಕ, ದಾಸೋಹದ ಬಗ್ಗೆ ತಿಳಿದುಕೊಂಡಿರುವ ದೇವರು ನಂತರದ ದಿನಗಳಲ್ಲಿ ನಿಡಗುಂದಿ ಕೊಪ್ಪಕ್ಕೆ ಶ್ರೀ ಚೆನ್ನಬಸವ ಮಹಾಸ್ವಾಮಿಗಳಾಗುವರು. ಅವರ ಹತ್ತಿರ ಎಂಥಹ ರೋಗಿಗಳು ಬರುತ್ತಿದ್ದರು ಅಂದರೇ ದೊಡ್ಡ ದೊಡ್ಡ ವೈದ್ಯರು ನಮ್ಮ ಕೈಯಲ್ಲಿ ಈ ರೋಗ ಅಸಾಧ್ಯವೆಂದು ವೈದ್ಯರು ಕೈಚೆಲ್ಲಿದಾಗ , ಕೊನೆಗೆ ಇವರ  ಹತ್ತಿರ ರೋಗಿಗಳು ಬರುತ್ತಿದ್ದರು ಅಂಥಾ ರೋಗವನ್ನು ಇವರು ನಿವಾರಣೆಮಾಡುತ್ತಿದ್ದರು, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶ್ನೆಯಾಗಿ ಇರುವ ರೋಗವನ್ನು ಇವರು ನಿವಾರಿಸುತ್ತಿದ್ದರು, ಇವರು ಕೇವಲ  ಶ್ರೀ ಗುರು ಕುಮಾರೇಶ್ವರರನ್ನು ನೆನೆದು ಶಿವಯೋಗಿಗಳ ಭಾವಚಿತ್ರವನ್ನು ನೋಡುತ್ತಾ ಕೊಡುತ್ತಿದ್ದ ಚೂರ್ಣವು ಕುಷ್ಠರೋಗ-ಕ್ಷಯರೋಗ, ನಾನಾ ವಿಧ ಕಷ್ಟಗಳನ್ನು ಗುಣಪಡಿಸುವ ಶಕ್ತಿ ಇವರದ್ದಾಗಿತ್ತು. ಶ್ರೀ ಗುರು ಕುಮಾರೇಶ್ವರರು ಮೇಲೆ ಅಷ್ಟೊಂದು ನಂಬಿಕೆಯನ್ನು ಇಟ್ಟಿದ್ದ ಮಹಾಸ್ವಾಮಿಗಳು ಎಂಥ ಭಕ್ತರ ಸಮಸ್ಯೆಗಳಿದ್ದರು ಮಹಾಶಿವಯೋಗಿಗಳನ್ನು ನೆನೆಸಿ ಭಕ್ತರ ನೋವಿನ ಮನವನ್ನು ಅವರು ಶಾಂತಚಿತ್ತದಿಂದ ಪ್ರಪುಲ್ಲಗೊಳಿಸುತ್ತಿದ್ದರು. ಆಯುರ್ವೇದದ ಜೊತೆಗೆ ಕೃಷಿ ಕಾಯಕದಲ್ಲಿ ನಿರತರಾಗಿ ಸ್ವತಃ ತಾವೇ ಕಾಯಕಮಾಡುತ್ತಿದ್ದರು. ಸಂಗೀತ, ಶಿವಾನುಭವ ಕಾರ್ಯಕ್ರಮವನ್ನು ಮತ್ತು ಮಹಾದಾಸೋಹವನ್ನು ನಿರಂತರವಾಗಿ ಸಾಗಿಸಿ ಬಂದಿರುವ ಮಠವಾಗಿದೆ. ಈಗಲೂ ಸಹ ಆಯುರ್ವೇದದ ಮೂಲಕ ಭಕ್ತರ ಕಷ್ಟ ಪರಿಹರಿಸುವರು. ಭಕ್ತರ ಆಯುರ್ವೇದ ದಾಸೋಹಿಮೂರ್ತಿಗಳಾಗಿದ್ದವರು ಶ್ರೀ ಚನ್ನಬಸವ ಮಹಾಸ್ವಾಮಿಗಳು.

4) ನಾಗನೂರಿನಲ್ಲಿ ಜನಿಸಿದ ಶಿವಬಸವ ಆರ್ಯರು ನಾಗನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಹನ್ನೆರಡನೇ ವಯಸ್ಸಿಗೆ ಮಂದಿರಕ್ಕೆ ಬಂದು. ಮಂದಿರದ ಆಚಾರ ವಿಚಾರಗಳನ್ನು, ಕನ್ನಡ – ಸಂಸ್ಕೃತ ಭಾಷೆಯನ್ನು ಕರಗತ ಮಾಡಿಕೊಂಡು, ತ್ರಿಕಾಲ ಲಿಂಗಪೂಜೆಯೊಂದಿಗೆ ಶಿವಯೋಗದೊಳಗಿನ ತತ್ವವನ್ನು ಅರಗಿಸಿ ದೇವರಾದರು. ಮುಂದೆ ಶ್ರೀ ಗುರು ಕುಮಾರ ಶಿವಯೋಗಿಗಳ ಸೇವಾ ಕಾರ್ಯಗಳಲ್ಲಿ ಬಹಳ ಕಾಲ ಇರುತ್ತಿದ್ದರಿಂದ “ಮಾನವ ಹುಟ್ಟಿನ ಅರ್ಥವು ಅಧ್ಯಾತ್ಮದಲ್ಲಿ ಮಾತ್ರಾ ತಿಳಿಯುತ್ತೇ, ದೇಹ ಅಳಿದರೂ ಆತ್ಮದ ಆಧಾರದಲ್ಲಿ ನೆಲೆಗೊಳ್ಳುವುದೇ ನಿಜವಾದ ಅಧ್ಯಾತ್ಮ”. ಎಂದು ಬೋಧಿಸುತ್ತಿದ್ದ ಶ್ರೀ ಕುಮಾರ ಶಿವಯೋಗಿಗಳ ವಿಶೇಷ ವ್ಯಕ್ತಿತ್ವ ಹೊಂದಿರುವ ಶಿವಬಸವ ದೇವರಲ್ಲಿ ಮಹತ್ವದ ಕಾಳಜಿ ವಹಿಸಿದ್ದರು, ಮಹಾಗುರುಗಳು ಹೇಳುವ ಯಾವ ಮಾತನ್ನು ಯಾವ ಕಾಲದಲ್ಲಿಯೂ ತಪ್ಪುತ್ತಿರಲಿಲ್ಲಾ. ನಂತರದ ಕಾಲದಲ್ಲಿ ಬೆಳಗಾವಿ ನಾಗನೂರ ಮಠದ ಅಧಿಕಾರವನ್ನು ವಹಿಸಿಕೊಂಡು ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡಿ, ಗಡಿಭಾಗದಲ್ಲಿ ನಶಿಸಿ ಹೋಗುತ್ತಿದ್ದ ಕನ್ನಡಸಂಸ್ಕೃತಿಯನ್ನು ಪುನಃಶ್ಚೇತನ ಮಾಡಿ ಧಾರ್ಮಿಕ ಕಾರ್ಯಗಳ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಂಡು ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಹಾಗೇ ವಿದ್ಯಾರ್ಥಿನಿಲಯ ಸ್ಥಾಪಿಸಿದ್ದಾರೆ. ಮಹತ್ವಪೂರ್ಣ ಗ್ರಂಥಗಳ, ವೀರಶೈವ ಧರ್ಮದ ತಾಡೆಯೋಲೆ – ಕೈಬರಹ ಮೊದಲಾದ ಅಮೂಲ್ಯ ಕೃತಿಗಳನ್ನು ಸಂಗ್ರಹಿಸಿ ಶ್ರೀ ಫ.ಗು.ಹಳಕಟ್ಟಿಯಂತಹ ದೊಡ್ಡ ದೊಡ್ಡ ಸಾಹಿತಿಗಳಿಗೆ, ಲೇಖಕರಿಗೆ, ಸಾಹಿತ್ಯಕ್ಕೆ ನೆರವಾಗಿ ಗ್ರಂಥಾಲಯದ ಮೂಲಕ ಸಹಾಯಹಸ್ತ ನೀಡಿದ್ದಾರೆ. ತಮ್ಮದೇ ಪ್ರಕಟನೆಯಲ್ಲಿ ನೂರಾರು ಅಮೂಲ್ಯ ಕೃತಿಗಳನ್ನು ಹೊರತಂದಿದ್ದಾರೆ. ಶ್ರೀ ಗುರು ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗ ಮಂದಿರದ ಎಲ್ಲ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿ ಸುಧೀರ್ಘ ಅಧ್ಯಕ್ಷರಾಗಿದ್ದಾರೆ. ಪೂಜ್ಯ ಶ್ರೀ ಡಾ.ಶಿವಬಸವ ಮಹಾಸ್ವಾಮಿಗಳು ಶತಾಯುಷಿಗಳಾಗಿ ಮಂದಿರದ ಮೇಲೆ ಅತ್ಯಂತ ನಿಷ್ಠಾವಂತರಾಗಿ ಸೇವಾ ಕೈಂಕರ್ಯ ಪೋರೈಸಿದ್ದಾರೆ.

5) ಬೀದರ್ ಜಿಲ್ಲೆಯ ಕಮಲಾನಗರದಲ್ಲಿ ಜನಿಸಿದ ಚೆನ್ನಬಸವ ವಟು ಶಿವಯೋಗ ಮಂದಿರಕ್ಕೆ ಬಂದು ಅಲ್ಲಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕನ್ನಡ ಮತ್ತು ಸಂಸ್ಕೃತ ಅಧ್ಯಯನ, ಯೋಗ, ಶಿವಾನುಭವ ಅಭ್ಯಾಸ ಮಾಡಿರುವ ಚೆನ್ನಬಸವ ದೇವರು. ಕೆಲವು ವರ್ಷಗಳ ಕಾಲ ಶಿವಯೋಗಿಗಳ ಸೇವೆಯನ್ನು ಮಾಡುವರು, ಶಿವಯೋಗಿಗಳು ಬಿಡುವಿನಲ್ಲಿ ಪಾಠದ ಜೊತೆ ಅನುಭವ ಹೇಳುತ್ತಿದ್ದರು. “ಗುರು ಮತ್ತು ವಿರಕ್ತರು ಸಮಾಜದ ಎರಡು ಕಣ್ಣುಗಳು ಅವರಲ್ಲಿ ಮನಸ್ತಾಪಗಳು ಬರಬಾರದು ಅವರೆಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ತಿದ್ದುವ, ನಮ್ಮ ಧರ್ಮವನ್ನು ಆಚರಿಸಿ ತಿಳಿಹೇಳುವ, ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಬೇಕು” ಎಂದು ತಿಳಿಸುತ್ತಿದ್ದರು. ಅದನೆಲ್ಲಾ ಆಲಿಸಿ, ತಿಳಿದು ಅದರ ಹಾಗೆ ಆಚರಿಸಬೇಕು ಎಂಬ ಹಂಬಲದಿಂದ ಇರುತ್ತಿದ್ದ ಚೆನ್ನಬಸವ ದೇವರು, ಕನ್ನಡದ ಗಡಿಭಾಗದ ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದ  ಕ್ರಿ.ಶ. ೧೯೨೪ರಲ್ಲಿ ಅಧಿಕಾರವನ್ನು ವಹಿಸಿಕೊಂಡು ಚೆನ್ನಬಸವ ಪಟ್ಟಾಧ್ಯಕ್ಷರಾದರೂ. ಅದು ಗುರುಪರಂಪರೆ ಮಠವಾದರೂ ಅಲ್ಲಿ ಬಸವಾದಿ ಶರಣರ ಸಂಸ್ಕ್ರತಿಯನ್ನು, ವಚನಶಾಸ್ತ್ರವನ್ನು ಬಿತ್ತರಿಸಿದರು. ಗಡಿಭಾಗದಲ್ಲಿ ಕನ್ನಡ ಸಂಸ್ಕೃತಿ ಕಡಿಮೆಯಾಗುವ ಅಂಚಿನಲ್ಲಿ ಇದ್ದಾಗ ಹೊರಗಡೆ ಉರ್ದು ಭಾಷೆಯ ಫಲಕಹಾಕಿ ಒಳಗಡೆ ಕನ್ನಡ ಭಾಷೆಯನ್ನು ಬೋಧಿಸಿ ಕನ್ನಡವನ್ನು ಉಳಿಸಿದರು. ಅನೇಕ ಕಡೆ ಶಾಲಾ ಕಾಲೇಜು ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಒಂದು ಕೊಡುಗೆಯನ್ನು ನೀಡಿದ್ದಾರೆ. ಅದರ ಜೊತೆಗೆ ಬಸವಾದಿ ಶರಣರ ತತ್ವದ ದಾಸೋಹ ನಿಲಯವನ್ನು ಸ್ಥಾಪಿಸಿದ್ದಾರೆ.  ಶ್ರೀ ಮಠದ ಜೀರ್ಣೋದ್ಧಾರದೊಂದಿಗೆ ಮಠವನ್ನು ಸುಸ್ಥಿತಿಗೆ ತಂದಿರುವ  ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರು ಗಡಿಭಾಗದ ದೇವರಾಗಿ  ಶಿವಯೋಗ ಮಂದಿರಕ್ಕೆ ಗೌರವದಿಂದ ಬಾಳುತ್ತಿದ್ದ ಮಹಾತ್ಮರು.

6) ಯಲಬುರ್ಗಾ ತಾಲೂಕಿನ ದ್ಯಾಂಪುರ ಗ್ರಾಮಕ್ಕೆ ಮಹಾಶಿವಯೋಗಿಗಳು ಮಂದಿರದ ಭಿಕ್ಷೆಗೆ ದಯಾಮಾಡಿಸಿದಾಗ. ಶ್ರೀಗಳ ಸಮಾಜಸೇವಾಕಾರ್ಯ, ಗುರುಗಳು ದೂರದೃಷ್ಟಿಯುಳ್ಳವರು ಎಂದು ತಿಳಿದಿದ್ದ, ಕಳಕೆ ಒಡೆಯರ್ ಮಠದ ಚನ್ನಯ್ಯನವರು (ಚನ್ನಕವಿ) ಪೂಜ್ಯರನ್ನು ತಮ್ಮ ಮನೆಗೆ ಬರಮಾಡಿಕೊಂಡು ಪಾದಪೂಜೆಯನ್ನು ಮಾಡಿ ಮಂಗಳಾರತಿಯನ್ನು ಹೇಳುವ ಸಂದರ್ಭದಲ್ಲಿ ಅವರೇ ಸ್ವತಃ ಶಿವಯೋಗಿಗಳ ಮೇಲೆ ರಚಿಸಿರುವ ಪದವನ್ನು ಹೇಳಿದಾಗ, ಆಗ ಪೂಜ್ಯ ಶಿವಯೋಗಿಗಳು ಕೋಪದಿಂದ ” ನಮ್ಮನ್ನು ಹೊಗಳುವಿರಾ ನಾವೇನು ಬಸವಾಲ್ಲಮರಂತೆ ಘನವಂತರೆ? ಅಥಣಿ ಶಿವಯೋಗಿಗಳಂತೇ ತಪೋನಿಧಿಗಳೇ? ವಿಜಯ ಮಹಾಂತ ಯತಿಗಳ, ಅನಂತಪುರದ ಗುರುಬಸವ ಶಿವಯೋಗಿಗಳ ಸುಚರಿತ್ರೆಗಳನ್ನು ಬರೆಯಿರಿ, ಬಿಡದೆ ಬರೆಯಿರಿ” ಎಂದು ನಮ್ಮ ನಾಡಿನಲ್ಲಿ ಅನೇಕ ಮಹಾಶಿವಯೋಗಿಗಳು ಆಗಿಹೋಗಿದ್ದಾರೆ ಅವರ ಪುರಾಣವನ್ನು ರಚಿಸಿ ಎಂದು ಅಪ್ಪಣೆ ಮಾಡಿದರು.

ಶಿವಯೋಗಿಗಳ ಸತ್ಯ ಸಂಕಲ್ಪದಂತೆ ಚನ್ನಕವಿಗಳು ಒಂಭತ್ತು ಪುರಾಣವನ್ನು ರಚಿಸಿದರು.

1- ಹಾಲಕೇರಿ ಅನ್ನದಾನಿಶ್ವರ ಪುರಾಣ.

2- ಹೇಮರೆಡ್ಡಿ ಮಲ್ಲಮ್ಮನ ಪುರಾಣ.

3-ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಪುರಾಣ.

4-ಶಿರಹಟ್ಟಿ ಶ್ರೀ ಫಕ್ಕೀರೇಶ್ವರ ಚರಿತ್ರೆ.

5-ನಾಲವತ್ವಾಡ ಶ್ರೀ ವೀರೇಶ್ವರ ಪುರಾಣ.

6-ಕಂಬಳಿಹಾಳ ಶ್ರೀ ದೊಡ್ಡ ಬಸವೇಶ್ವರ ಪುರಾಣ.

7-ಬಾಲಲೀಲ ಮಹಾಂತ ಸ್ವಾಮಿಗಳ ಪುರಾಣ.

8-ಕಮತಗಿ ಶ್ರೀ ಹುಚ್ಚೇಶ್ವರ ಪುರಾಣ.

9- ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ.

ಒಮ್ಮೆ ಮಹಾ ಶಿವಯೋಗಿಗಳು ” ಜನನಾದಿಯಿಂದ ಲಿಂಗೈಕ್ಯಾಂತಮಾಗಿ ಸಮಸ್ತ ವೀರಶೈವರಿಗೆ ಬೇಕಾಗುವ ಸಂಸ್ಕಾರ, ಆಚಾರ, ಷಟಸ್ಥಲ ವಿಚಾರಕ್ರಮಗಳೆಲ್ಲ ಸಪ್ರಮಾಣವಾಗಿ ಬೇರೆ ಗ್ರಂಥಗಳನ್ನು ನೋಡುವ ಅವಶ್ಯವಿಲ್ಲದೇ ಇದೇ ಪುರಾಣದಲ್ಲಿ ಬರುವಂತೆ ಮಾಡಿದರೇ ಇದೊಂದು ದೊಡ್ಡಕೆಲಸವೆನಿಸುವುದು. ಆದ್ದರಿಂದ ನಾವು ಶಿವಮಂದಿರದಲ್ಲಿದ್ದಾಗ ನೀನು ಬಂದು ಕೆಲವು ದಿವಸದಲ್ಲಿ ನಿಂತು, ತಕ್ಕ ಪ್ರಮಾಣಗಳನ್ನು ಸೋಮನಾಥ ಶಾಸ್ತ್ರಿಗಳ ಸಹಾಯದಿಂದ ಹುಡುಕಿಕೊಂಡು ಬರೆ” ಎಂದಿರುವುನ್ನು ಚನ್ನಕವಿಗಳೂ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಪುರಾಣದ ಮುನ್ನುಡಿಯಲ್ಲಿ ಸ್ಮರಿಸಿದ್ದಾರೆ. ಹೀಗೆ ಶಿವಯೋಗಿಗಳು ಚನ್ನಕವಿಗಳ ಕವಿತ್ವವನ್ನು ಕಂಡು ಉನ್ನತ ಮಟ್ಟಕ್ಕೆ ಏರಲು ಪ್ರೇರಣಾದಾಯಕವಾಗಿ ಆಶೀರ್ವದಿಸಿರುವರು.

ಈಗಿನ ಕಾಲದಲ್ಲಿ  ಪುರಾಣ ಪ್ರವಚನಗಳಿಗೆ ಆಧಾರವೆಂದರೆ ಚನ್ನಕವಿಗಳು ರಚಿಸಿರುವ ಒಂಬತ್ತು ಪುರಾಣಗಳೇ ಎಲ್ಲಕ್ಕೂ  ಮೂಲಗಳು ಎಂದರೇ ಅತಿಶಯೋಕ್ತಿಯಲ್ಲ ಎನಿಸುತ್ತದೆ ಅಂತಾ ಮೌಲ್ಯಯುತವಾದ ಪುರಾಣಗಳನ್ನು ಶಿವಯೋಗಿಗಳ ಆಶೀರ್ವಾದದಿಂದ ರಚಿಸಿರುವವರು ಚೆನ್ನಕವಿಗಳು.

7) ಸಂಗೀತದ ದೇವರ ಪುರುಷರು.

ಕಾಡಶೆಟ್ಟಿಗೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಹಕ್ಕಲ ಬಸವೇಶ್ವರರ ಜಾತ್ರೆಗೆ ದಯಮಾಡಿಸಿದಾಗ ಅಲ್ಲಿ ಎಳೆಯ ಕಂಠದಿಂದ ಹಾಡುತ್ತಿದ್ದ ಎರಡು ಅಂಧ ಮಕ್ಕಳನ್ನು ದತ್ತು ಪಡೆದು ಹಾನಗಲ್ಲಿನಲ್ಲಿ ಪ್ರಾಥಮಿಕ ಸಂಗೀತ ಶಿಕ್ಷಣ ಕೊಡಿಸಿ. ಕೆಲ ವರ್ಷಗಳ ನಂತರ ಇವರನ್ನು ಹೆಚ್ಚಿನ ಅಭ್ಯಾಸಕ್ಕೆ ಮೈಸೂರಿಗೆ ಕಳುಹಿಸಬೇಕು ಎಂದು ಯೋಚಿಸುತ್ತಿರುವಾಗ ಕಾಲರಾ ರೋಗ ಬಂದು ಹಿರಿಯ ಗುರುಬಸಯ್ಯ ತೀರಿಕೊಳ್ಳುವನು, ಗದುಗಯ್ಯನನ್ನು ಸಮಾಧಾನಿಸಿ ಮೈಸೂರಿಗೆ ಕಳುಹಿಸಿ ಸಂಗೀತ ಶಿಕ್ಷಣ ಕೊಡಿಸುವರು,  ಅದರ ಜೊತೆ ದೇಶದ ಹಿರಿಯ ಸಂಗೀತಗಾರರಿಂದ ಕರ್ನಾಟಕ ಸಂಗೀತ ಹಾಗೂ ಲಾಹೋರ್ ನ ಉಸ್ತಾದ ವಹೀದಖಾನರಿಗೆ ತಿಂಗಳಿಗೆ ನೂರೈವತ್ತು ರೂಪಾಯಿ ಸಂಭಾವನೆ ಕೊಟ್ಟು ಹಿಂದೂಸ್ತಾನಿ ಸಂಗೀತ,  ಪಿಟೀಲು, ವಿಶೇಷವಾಗಿ ಬಲಗೈಯಿಂದ ಡಗ್ಗಾ ಎಡಗೈಯಿಂದ ತಬಲಾ ಬಾರಿಸುವುದು, ಸಾರಂಗಿ, ಕೊಳಲು, ಹಾರ್ಮೋನಿಯಂ, ಶಹನಾಯಿ ಹೀಗೆ ಹಲವು ವಾದ್ಯಗಳ ವಿದ್ಯೆಯನ್ನು ಕೊಡಿಸಿದರು.  ಮುಂದೆ ಇವರು ಪಂಚಾಕ್ಷರಿಗವಾಯಿ ಎಂಬ ಹೆಸರನ್ನು ಪಡೆಯುವರು.  ಬಾಗಲಕೋಟೆಯಲ್ಲಿ ನಡೆದ ಮಹಾಸಭೆಯಲ್ಲಿ ತಮ್ಮ ಸುಮಧುರವಾದ ಸಿರಿಕಂಠದಿಂದ ಸಂಗೀತವನ್ನು ನುಡಿದು ಪಂಚಾಕ್ಷರಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಾಗೆ ಅವರು ಎಂದೂ ತ್ರಿಕಾಲ ಲಿಂಗಪೂಜೆ ಬಿಡುತ್ತಿರಲಿಲ್ಲ.

ಮುಂದೆ ಮಂದಿರವು ಸ್ಥಾಪನೆ ಆದ ನಂತರ, ಶಿವಯೋಗಿಗಳು “ಪಂಚಾಕ್ಷರಿ, ನಿನ್ನ ಶಿಷ್ಯರೊಂದಿಗೆ ಸಂಗೀತಯಾತ್ರೆ ಆರಂಭಿಸು . ನಿನ್ನ ಸಂಗೀತ ಹಾಗೂ ಸಂಗೀತ ಶಿಕ್ಷಣ ಲೋಕಾರ್ಪಣೆಯಾಗಲಿ. ಯಾವುದಕ್ಕೂ ಧೃತಿಗೆಡದೆ ಸಂಚಾರಿಶಾಲೆಯಾಗಿ ಸಂಗೀತ ಶಿಕ್ಷಣ ಮುನ್ನೆಡೆಸು‌. ನಿನ್ನ ಶಾಲೆಯ ಕೀರ್ತಿ ನಾಡಿನಲ್ಲೆಲ್ಲಾ ಹರಡಲಿ, ಶಿವ ಕೃಪೆಯಿಂದ ಎಲ್ಲವೂ ಸೌಖ್ಯವಾಗುವುದು‌.” ಎಂದು ಶ್ರೀ ಗುರು ಕುಮಾರ ಶಿವಯೋಗಿಗಳು ಆಶೀರ್ವದಿಸುವರು. ಅಲ್ಲಲ್ಲಿ ಸಂಗೀತ ಶಿಕ್ಷಣ, ಭಜನೆ, ಕೀರ್ತನೆ ನಡೆಸುತ್ತಾ, ಶ್ರೀ ಸಿದ್ಧರಾಮೇಶ್ವರ – ಶ್ರೀ ಹೇಮರೆಡ್ಡಿ ಮಲ್ಲಮ್ಮನ ನಾಟಕವನ್ನು ಪ್ರದರ್ಶಿಸುತ್ತಾ ಗದುಗಿಗೆ ಬಂದು ಶ್ರೀ ಕುಮಾರ ಶಿವಯೋಗಿಗಳ ಸದಿಚ್ಛೆಯಂತೆ ಬಸರೀಗಿಡದ ವೀರಪ್ಪನವರ ಸಹಕಾರದಿಂದ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿದರು. ಮುಂದೆ ಇದು ದೇಶದ ಅಪರೂಪದ ಸಂಗೀತ ಗುರುಕುಲವಾಗಿ ಬೆಳೆಯಿತು. ಜಾತಿ – ಕುಲರಹಿತ ಶಿಕ್ಷಣದಿಂದ ಸಾವಿರಾರು ಸಂಗೀತಗಾರರು, ಕೀರ್ತನಕಾರರು, ದೇಶದಾದ್ಯಂತ ಬೆಳೆದಿರುವರು. ಹೀಗೆ ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿ ಪಂಚಾಕ್ಷರಿ ಗವಾಯಿಗಳು ಖ್ಯಾತಿ ಪಡೆಯುವಲ್ಲಿ ಶ್ರೀ ಕುಮಾರ ಶಿವಯೋಗಿಗಳು ವಹಿಸಿದ ಕಾರ್ಯ ಅವಿಸ್ಮರಣೀಯವಾದುದು.

ಶ್ರೀಗಂಧದ ಸಂಪರ್ಕದಲ್ಲಿ ಇರುವ ಸಾಣಿಕಲ್ಲು ಸದಾ ಸುಗಂಧಯುಕ್ತವಾದಂತೇ ಶ್ರೀ ಗುರು ಕುಮಾರ ಮಹಾಶಿವಯೋಗಿಗಳ ಸಾಮಿಪ್ಯದಲ್ಲಿ ಇರುತಿದ್ದ ಮಹಾ ಸಾಧಕರು ತಮ್ಮ ಬದುಕನ್ನು ಸವಿಸಿ  ಶಿವಯೋಗಿಗಳಾದರು.

ಕಲ್ಲು, ಕಂಬವೇ ದೇವರೆಂದು ಪೂಜಿಸುವ ಮುಗ್ಧ ಭಕ್ತರಿಗೆ ನಡೆದಾಡುತ್ತಾ ಮಾತನಾಡುವ ದೇವರನ್ನು ತೋರಿಸಿರುವವರು. ಸಮಾಜದಲ್ಲಿ ಕುದೃಷ್ಟಿಗೆ ಗುರಿಯಾಗಿದ್ದ ಅಂಧರು-ಅನಾಥರು ಸಂಗೀತದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವವರು. ವಚನ ಪಿತಾಮಹ ಫ.ಗು.ಹಳಕಟ್ಟಿಯವರಿಗೆ ಸಹಾಯಹಸ್ತನೀಡಿ ಪ್ರೇರೇಪಿಸಿದವರು. ಸಂಶೋಧನಾ ಕಾರ್ಯದಲ್ಲಿ ಮಹಾನುಭಾವಿ ಚೆನ್ನಮಲ್ಲಿಕಾರ್ಜುನನವರಿಗೆ ಅನುಗ್ರಹ ನೀಡಿರುವವರು. ಶಿರಸಂಗಿ ಲಿಂಗರಾಜರಿಗೆ ಆಶೀರ್ವದಿಸಿ ಕೆ.ಎಲ್.ಇ. ಸಂಸ್ಥೆಗೆ ಪ್ರೇರಣೆಯಿತ್ತವರು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿರುವರು. ವಿಜಯಪುರದ ಬಿ.ಎಲ್.ಡಿ. ಸಂಸ್ಥೆಗೆ ಪ್ರೇರಣೆಯಿತ್ತವರು. ಸಾಹಿತ್ಯದಲ್ಲಿ ಜ.ಚ.ನಿಯವರನ್ನು, ಯೋಗದಲ್ಲಿ ಕಂಚುಗಲ್ಲ ಬಿದರಿ ಪ್ರಭುಕುಮಾರ ಪಟ್ಟಾಧ್ಯಕ್ಷರನ್ನು, ವಿದ್ವತ್-ಭಾಷಣದಲ್ಲಿ ನವಲಗುಂದದ ಶ್ರೀ ಬಸವಲಿಂಗ ಸ್ವಾಮಿಗಳನ್ನು, ಕಾಯಕದಲ್ಲಿ ಕಪನಳ್ಳಿ ರುದ್ರಮುನಿ ಶಿವಯೋಗಿಗಳನ್ನು, ವೈದಿಕ ಶಿವಪೂಜೆಯಲ್ಲಿ ಸಿಂಧಗಿಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಮತ್ತು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಭಾಷ್ಯಕಾರರಾದ ಸಖರಾಯಪಟ್ಟಣದ  ಶ್ರೀ ಸದಾಶಿವ ಶಿವಾಚಾರ್ಯರನ್ನು, ಆಯುರ್ವೇದದಲ್ಲಿ ತುಪ್ಪದ ಕುರಹಟ್ಟಿಯ ಶ್ರೀ ಸಂಗಮೇಶ್ವರ ಶಿವಾಚಾರ್ಯರನ್ನು ಮತ್ತು ನಿಡಗುಂದಿ ಕೊಪ್ಪದ ಶ್ರೀ ಚೆನ್ನಬಸವ ಮಹಾಸ್ವಾಮಿಗಳನ್ನು, ಶಿಕ್ಷಣ ವಿದ್ಯಾಸಂಸ್ಥೆ-ಮಹಾದಾಸೋಹದಲ್ಲಿ ಶ್ರೀ ಶಿವಬಸವ ಮಹಾಸ್ವಾಮಿಗಳನ್ನು ಹಾಗೂ ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರನ್ನು, ಸಂಗೀತ ಕ್ಷೇತ್ರದಲ್ಲಿ ಶ್ರೀ ಪಂಚಾಕ್ಷರಿ ಗವಾಯಿಗಳು ಹಾಗೂ ಶ್ರೀ ಪುಟ್ಟರಾಜ ಗವಾಯಿಗಳನ್ನು, ಹೀಗೆ ವಾಕ್ ಸಿದ್ಧಿ, ಹಸ್ತಶುದ್ಧಿ, ಮನಶುದ್ಧಿ, ಭಾವಶುದ್ಧಿ, ದೃಷ್ಟಿಶುದ್ಧಿ ಇಂತಿ ಸಮಾಜ ಸೇವಾ ಸಮೂಹವನ್ನು, ಮಹಿಳೆಯರ ವಿದ್ಯಾಭ್ಯಾಸಕ್ಕೆ ಪಾಠ ಶಾಲೆಯನ್ನು, ದೇಶಿಗೋವುಗಳನ್ನು ಸಂರಕ್ಷಿಸಿದವರು ಅದರ ಗೋಮಯದಿಂದ ಪರಿಶುದ್ಧ ವಿಭೂತಿಯನ್ನು ತಯಾರಿಸಲು ಕಲಿಸಿದವರು. ಹೀಗೆ ಸರ್ವ ಕಾರ್ಯಗಳಲ್ಲಿಯು ಸಮಾಜಕ್ಕೆ ಕೊಟ್ಟ ಕಾಣಿಕೆಯನ್ನು ನೀಡಿರುವ ಹಾನಗಲ್ಲ ಶ್ರೀ ಗುರು ಕುಮಾರ ಮ‌ಹಾಶಿವಯೋಗಿಗಳನ್ನು ನಮ್ಮ ಸಮಾಜವು ಸದಾ ಸ್ಮರಿಸಬೇಕು.