ಲೇಖಕರು: ಪ್ರಕಾಶ ಗಿರಿಮಲ್ಲನವರ
ನಾಗನೂರು ರುದ್ರಾಕ್ಷಿಮಠದ ೭ನೆಯ ಅಧಿಪತಿಗಳಾಗಿ ಬಂದ ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳ ಕಾಲ ಸುವರ್ಣಕಾಲವೆಂದೇ ಹೇಳಬೇಕು. ಗಡಿಭಾಗದಲ್ಲಿ ಶ್ರೀಗಳು ಮಾಡಿದ ಧಾರ್ಮಿಕ-ಶೈಕ್ಷಣಿಕ ಕ್ರಾಂತಿ ಅಭೂತಪೂರ್ವವಾದುದು. ೧೯೨೨ ರಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳವರ ಆಶೀರ್ವಾದದಿಂದ ಶ್ರೀಮಠದ ಕರ್ಣಧಾರತ್ವವನ್ನು ವಹಿಸಿಕೊಂಡು ಪೂಜ್ಯರು “ಶಿಕ್ಷಣವೇ ಶಕ್ತಿ” ಎಂಬುದನ್ನರಿತು ಶೈಕ್ಷಣಿಕ ಸಂಸ್ಥೆಗಳ ಮೂಲಕ ನಮ್ಮ ನಾಡವರ ಬಡತನ ಹಾಗು ಅಜ್ಞಾನ ನಿವಾರಣೆಗೆ ಹಗಲಿರುಳೂ ಶ್ರಮಿಸಿದವರು ಲಿಂ. ಡಾ|| ಶಿವಬಸವ ಮಹಾಸ್ವಾಮಿಗಳು.
ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರ ಶೈಕ್ಷಣಿಕ ಕ್ರಾಂತಿ:
ಕ್ರಿ.ಶ. ೧೯೩೨ರಲ್ಲಿಯೇ ಪ್ರಸಾದ ನಿಲಯ ಸ್ಥಾಪಿಸಿ ಜಾತಿ ಮತ ಪಂಥಗಳ ಭೇದವಿಲ್ಲದೆ ನಾಡ ಬಡಮಕ್ಕಳಿಗೆ ಅನ್ನ-ಆಶ್ರಯಗಳನ್ನಿತ್ತು ಸಲುಹಿದ ಅವರು ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯನ್ನು ಕ್ರಿ.ಶ. ೧೯೭೫ ರಲ್ಲಿ ಸ್ಥಾಪಿಸುವ ಮೂಲಕ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹದ ಕೈಂಕರ್ಯವನ್ನು ಪ್ರಾರಂಭಿಸಿದರು. ಅವರು ಸ್ಥಾಪಿಸಿದ ಪ್ರಸಾದ ನಿಲಯವು ಸಾರ್ಥಕ ೭೮ ವಸಂತಗಳನ್ನು ಪೂರೈಸಿದೆ. ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯು ಕಳೆದ ಮೂರು ದಶಕಗಳ ಅವಧಿಯಲ್ಲಿ ಹಲವಾರು ಅಂಗಸಂಸ್ಥೆಗಳನ್ನು ಹೊಂದಿ ಹೂವು-ಹಣ್ಣುಗಳಿಂದ ಕೂಡಿದ ಸುಂದರ ವೃಕ್ಷದಂತೆ ಕಂಗೊಳಿಸುತ್ತಿದೆ.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಿತ್ಯ ೫-೬ ಸಾವಿರ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಉತ್ತರ ಕರ್ನಾಟಕದ ಬೀದರ, ಗುಲಬರ್ಗಾ, ರಾಯಚೂರು, ಬಳ್ಳಾರಿ, ವಿಜಾಪುರ ಮುಂತಾದ ಜಿಲ್ಲೆಗಳ ಗ್ರಾಮಾಂತರ ಪ್ರದೇಶದ ಸಾವಿರಾರು ಬಡಮಕ್ಕಳು ಪ್ರಸಾದದ ಜೊತೆಗೆ ಸಂಸ್ಕಾರಯುಕ್ತ ಶಿಕ್ಷಣವನ್ನು ಪಡೆದು ನಾಡು-ನುಡಿಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ನಗರ ಮಧ್ಯದಲ್ಲಿ ೧೬ ಎಕರೆ ವಿಸ್ತಾರದ ಪ್ರಶಾಂತ, ಸುಂದರ ಹಾಗು ಅಧ್ಯಾತ್ಮಿಕ ಪರಿಸರದಲ್ಲಿ ಪ್ರಾಚೀನ ಆದರ್ಶಗಳ ಜೊತೆಗೆ ಆಧುನಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಶಿಸ್ತು, ಸಹನೆ, ಧೈರ್ಯ, ಸಾಹಸ ಮತ್ತು ಆತ್ಮವಿಶ್ವಾಸಗಳನ್ನು ರೂಢಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಹಲವಾರು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಮಹಾವಿದ್ಯಾಲಯ, ಡಿ.ಇಡಿ; ಬಿ.ಇಡಿ ಮಹಾವಿದ್ಯಾಲಯ, ತಾಂತ್ರಿಕ ವಿದ್ಯಾಲಯ ಹಾಗು ಕೈಗಾರಿಕಾ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯು ವಿಜ್ಞಾನ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ವಿಪುಲ ಗ್ರಂಥಗಳು, ವಿಶ್ವಕೋಶಗಳು, ಪತ್ರಿಕೆಗಳಿಂದ ಸಮೃದ್ಧವಾದ ಗ್ರಂಥಾಲಯ, ಸಮರ್ಥ ಹಾಗು ಸಮರ್ಪಿತ ಸಿಬ್ಬಂದಿ, ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿ ಶ್ರೀಸಾಮಾನ್ಯನಿಗೂ ಉನ್ನತ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಆದರ್ಶ ಸಂಸ್ಥೆಯಾಗಿದೆ. ಶಿಕ್ಷಣ ಪ್ರಸಾರದ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿರುವ ಈ ಸಂಸ್ಥೆ ಗಡಿಕನ್ನಡಿಗರಿಗೆ ವರದಾನವಾಗಿದೆ.
ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಶ್ರೀಗಳ ಪಾತ್ರ:
ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಶಿವಬಸವ ಸ್ವಾಮಿಗಳವರು ನಿರ್ವಹಿಸಿದ ಪಾತ್ರ ಅವಿಸ್ಮರಣೀಯವಾದುದು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ನಿರಂತರ ಅನ್ನ ಆಶ್ರಯಗಳನ್ನು ಕಲ್ಪಿಸಿದ್ದ ಶ್ರೀಗಳು ಕೆಲವು ಕಾಲ ಭೂಗತರಾಗುವ ಸಂದರ್ಭವೂ ಉಂಟಾಗಿತ್ತು. ೧೯೩೭ರಲ್ಲಿ ಗಾಂಧೀಜಿ ಬೆಳಗಾವಿ-ಹುದಲಿ ಗ್ರಾಮಗಳಿಗೆ ಬಂದ ಸಂದರ್ಭದಲ್ಲಿ ಶ್ರೀಗಳು ಅವರನ್ನು ಕಂಡು ಮಾತನಾಡಿದರು. ಗಾಂಧೀಜಿಯವರ ಆದರ್ಶ-ಹೋರಾಟದ ಬದುಕು ಶ್ರೀಗಳಿಗೆ ಹಿಡಿಸಿತು. ಗಾಂಧೀಜಿಯವರಿಂದಲೇ ಶ್ರೀಗಳು ಖಾದಿ ದೀಕ್ಷೆ ಪಡೆದರು. ಅಂದಿನಿಂದ ಬದುಕಿನ ಕೊನೆಯುಸಿರುವರೆಗೂ ಖಾದಿಧಾರಿಗಳಾಗಿದ್ದರು. ಬೆಳಗಾವಿ ಗಡಿ ಸಮಸ್ಯೆ ಕುರಿತು ಸಮೀಕ್ಷೆಗಾಗಿ ಬಂದ ಫಜಲಿ ಆಯೋಗ, ಮಹಾಜನ ಆಯೋಗಗಳ ಮುಂದೆ ಶ್ರೀಗಳು ಬೆಳಗಾವಿ ಎಂದೆಂದೂ ಕರ್ನಾಟಕದ್ದು ಎಂದು ಬಲವಾಗಿ ಪ್ರತಿಪಾದಿಸಿದರು. ಅವರ ಅವಿಶ್ರಾಂತ ಹೋರಾಟ ಮತ್ತು ಕನ್ನಡ ಕಟ್ಟುವ ಕಾರ್ಯಗಳಿಂದಾಗಿ ಇಂದು ಬೆಳಗಾವಿ ಕರ್ನಾಟಕದಲ್ಲಿ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ.
ಗೌರವ ಸಮ್ಮಾನಗಳು :
ಸುಮಾರು ಏಳು ದಶಕಗಳ ಕಾಲ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡ ಪೂಜ್ಯ ಶ್ರೀಗಳು ಭಿಕ್ಷೆ ಬೇಡಿ, ನಾಡಿನ ಅಸಂಖ್ಯಾತ ಬಡಮಕ್ಕಳಿಗೆ ಅನ್ನ-ಆಶ್ರಯ ನೀಡಿ ಅವರ ಬಾಳಿಗೆ ಬೆಳಕು ನೀಡಿದ್ದು ಯಾವ ಸ್ವಾರ್ಥಕ್ಕಾಗಿ. ಅವರೆಂದೂ ಪದವಿ-ಪ್ರಶಸ್ತಿಗಳು ದೊರೆಯುತ್ತವೆ ಎಂದು ಆಶೆಗಾಗಿ ಯಾವ ಕಾರ್ಯವನ್ನೂ ಮಾಡಿದವರಲ್ಲ. ಪೂಜ್ಯಶ್ರೀಗಳ ಈ ಬಹುಮುಖ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಗಮನಿಸಿದ ಕರ್ನಾಟಕ ವಿಶ್ವವಿದ್ಯಾಲಯ ೧೯೮೯ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಆದರೆ ಗೌರವ ಡಾಕ್ಟರೇಟ ಎಂಬ ಪದವಿ ಎಂದರೇನು ಎಂಬುದೇ ಶ್ರೀಗಳಿಗೆ ಗೊತ್ತಿರಲಿಲ್ಲ. ವೇದಿಕೆ ಮೇಲೆ ರಾಜ್ಯಪಾಲರು ಕೊಡಮಾಡುವ ಪ್ರಶಸ್ತಿಯನ್ನು ಕರಿಕೋಟು ಹಾಕಿಕೊಂಡು ಸ್ವೀಕರಿಸುವುದು ಅವರಿಗೆ ಬೇಡವಾಗಿತ್ತು. ನೂರು ವರ್ಷದ ಸಂಭ್ರಮದಲ್ಲಿದಾಗ ಈ ಗೌರವ ಡಾಕ್ಟರೇಟ ಪೂಜ್ಯರಿಗೆ ಬಂದಿತ್ತು. ಆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠಾಧೀಶರೊಬ್ಬರು ಈ ಪದವಿಗಾಗಿ ವಿಪರೀತ ಲಾಭಿ ನಡೆಸಿದ್ದರು. ಅವರಿಗೆ ದೊರೆಯದ ಪ್ರಶಸ್ತಿ ಯಾವುದಕ್ಕೂ ಆಸೆಪಡದ ಶಿವಬಸವ ಸ್ವಾಮಿಗಳ ಪದತಲಕ್ಕೆ ಬಂದಿತ್ತು. ಆಗ ಶಿವಬಸವ ಸ್ವಾಮಿಗಳು ಸಹಜವಾಗಿಯೇ ಬಂದ ಭಕ್ತರೆದುರು ‘ನಮಗೇಕೆ ಈ ಪ್ರಶಸ್ತಿ ಕೊಡುತ್ತಾರೋ, ತಿಳಿಯದು, ಬೇಡುವವರಿಗೆ ಈ ಪ್ರಶಸ್ತಿ ಕೊಡಬೇಕಾಗಿತ್ತು’ ಎಂದು ಹೇಳಿದ್ದರು.
೧೯೯೨ರಲ್ಲಿ ಕರ್ನಾಟಕ ಘನ ಸರಕಾರದ ‘ರಾಜ್ಯೋತ್ಸವ ಪ್ರಶಸ್ತಿ’ ಪೂಜ್ಯರ ಮಡಿಲಿಗೆ ಬಂದಿತು. ಆದರೆ ಸ್ವೀಕರಿಸಲು ಅವರು ಬೆಂಗಳೂರಿಗೆ ಹೋಗಲಿಲ್ಲ. ಕೊನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಬೆಳಗಾವಿಯಲ್ಲಿ ಒಂದು ಅದ್ದೂರಿ ಸಮಾರಂಭ ನೆರವೇರಿಸಿ, ಪ್ರಶಸ್ತಿ ಕೊಡಮಾಡಿದರು. ಪ್ರಶಸ್ತಿಯನ್ನು ಸ್ವೀಕರಿಸುವಾಗ ಶ್ರೀಗಳ ಮುಖದಲ್ಲಿ ಯಾವ ಬದಲಾವಣೆಗಳು ಆಗಿರಲಿಲ್ಲ. ಪ್ರಶಸ್ತಿ ಬಂದಿತ್ತೆಂಬ ಮಮಕಾರ ಅವರಲ್ಲಿರಲಿಲ್ಲ, ಅಷ್ಟು ನಿರ್ಲಿಪ್ತರಾಗಿ ಪ್ರಶಸ್ತಿಯನ್ನು ತಗೆದುಕೊಂಡರು.
ಜನ್ಮ ಶತಮಾನೋತ್ಸವ
ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರಿಗೆ ೧೯೮೯ರಲ್ಲಿ ನೂರು ವರ್ಷಗಳು ತುಂಬಿದವು. ಅವರ ಅಸಂಖ್ಯಾತ ಭಕ್ತಸಮೂಹ ಜನ್ಮಶತಮಾನೋತ್ಸವವನ್ನು ಅದ್ದೂರಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದರು.
ಹೊಸಪೇಟೆ ಕೊಟ್ಟೂರುಸ್ವಾಮಿಮಠದ ಪೂಜ್ಯ ಜಗದ್ಗುರು ಸಂಗನಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆಯಾಯಿತು. ಅನೇಕ ಸಮಿತಿ-ಉಪಸಮಿತಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಂಡವು. ನಾಗನೂರಿನಲ್ಲಿ ಮೂರುದಿನಗಳ ಕಾಲ ಶತಮಾನೋತ್ಸವ ಸಮಾರಂಭ ನಾಡಿನ ಅನೇಕ ಗಣ್ಯರ-ಮಠಾಧಿಪತಿಗಳ ಸಮ್ಮುಖದಲ್ಲಿ ಸಾಂಗವಾಗಿ ಜರುಗಿತು. ಈ ಸಂದರ್ಭದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂಥ ಗ್ರಂಥಗಳ ಲೋಕಾರ್ಪಣೆಗೊಂಡುದು ವಿಶೇಷವೆನಿಸಿತು. ಗುಬ್ಬಿಯ ಮಲ್ಲಾಣಾರ್ಯ ರಚಿತ ವೀರಶೈವಾಮೃತ ಮಹಾಪುರಾಣ, ಬಸವಣ್ಣನವರ ವಚನಗಳ ಮರಾಠಿ ಅನುವಾದ, ಮತ್ತು ‘ಶಿವದೀಪ್ತಿ’ ಶಿವಬಸವ ಸ್ವಾಮಿಗಳ ಶತಮಾನೋತ್ಸವ ಅಭಿನಂದನ ಗ್ರಂಥಗಳು ಬಿಡಗಡೆಯಾದವು. ಬೆಳಗಾವಿ ಭಕ್ತರಿಗೆ ಪ್ರತ್ಯೇಕ ಶತಮಾನೋತ್ಸವ ಕಾರ್ಯಕ್ರಮ ಆಚರಿಸಬೇಕೆಂದು ನಿರ್ಧರಿಸಿ, ಬೆಳಗಾವಿಯಲ್ಲಿಯೂ ಫೆಬ್ರವರಿ ೧೯೯೦ ರಲ್ಲಿ ಅದ್ದೂರಿಯಿಂದ ಶತಮಾನೋತ್ಸವ ಸಮಾರಂಭ ಆಚರಿಸಿದರು.
ಕನ್ನಡದ ಶಕ್ತಿಕೇಂದ್ರ
ಅಖಿಲ ಭಾರತ ಶಿವಾನುಭವ ಸಮ್ಮೇಳನದ ೧೭ನೇ ಅಧಿವೇಶನವನ್ನು ದಿನಾಂಕ ೬,೭ ನವೆಂಬರ್ ೬೩ ರಂದು ಬೆಳಗಾವಿ ಶಹಪೂರ ಭಕ್ತ ಜನರು ಶ್ರೀ ಮಹಾಸ್ವಾಮಿಗಳನ್ನು ಮುಂದೆ ಮಾಡಿಕೊಂಡು ಬೆಳಗಾವಿ ಲಿಂಗರಾಜ ಕಾಲೇಜಿನ ಭವ್ಯ ಮಂಟಪದಲ್ಲಿ ಶ್ರೀ ಸಿದ್ಧಗಂಗಾಮಠಾಧ್ಯಕ್ಷರಾದ ಶ್ರೀ ಶಿವಕುಮಾರ ಸ್ವಾಮಿಗಳವರ ಘನ ಅಧ್ಯಕ್ಷತೆಯಲ್ಲಿ ಧಾರವಾಡದ ಮುರುಘಾಮಠದ ತ್ರಿವಿಧ ದಾಸೋಹ ಮೂರ್ತಿಗಳಾದ ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳ ಸಮರ್ಥ ನೇತೃತ್ವದಲ್ಲಿ ಏರ್ಪಡಿಸಿದರು. ಬೆಳಗಾವಿಯ ಸಾಮಾಜಿಕ ಇತಿಹಾಸದಲ್ಲಿ ಈ ಸಮಾರಂಭವು ಒಂದು ಸ್ಮರಣಾರ್ಹವಾದ ಘಟನೆಯಾಗಿದೆ. ಇದರಿಂದ ಬೆಳಗಾವಿಯಲ್ಲಿ ನಮ್ಮ ಸಮಾಜದ ಸಂಘಟನೆ ಹಾಗು ಸ್ಥಾನಮಾನಗಳ ಅರಿವು ಸಾರ್ವಜನಿಕರಿಗಾಯಿತು.
ಪ್ರತಿವರ್ಷವೂ ಗಣೇಶಚವತಿ, (ಗಣೇಶ ಚವತಿ ಎಂದೇ ನಾಗನೂರು ರುದ್ರಾಕ್ಷಿಮಠದಲ್ಲಿ ಸಿದ್ಧರಾಮೇಶ್ವರ ರಥೋತ್ಸವ ಜರುಗುವುದು. ಅಂದೇ ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರು ಅಂದೇ ಲಿಂಗೈಕ್ಯರಾದುದರಿಂದ ಅವರ ಪುಣ್ಯಸ್ಮರಣೆಯು ಜರುಗುವುದು ಒಂದು ಯೋಗಾಯೋಗ) ನಾಡಹಬ್ಬ ಈ ಮೊದಲಾದ ಉತ್ಸವಗಳನ್ನು ಏರ್ಪಡಿಸಿ, ಸಾಹಿತ್ಯ ಸಾಂಸ್ಕೃತಿಕ ಮನೋರಂಜಕ ಕಾರ್ಯಕ್ರಮಗಳನ್ನು ಹಮ್ಮಿ ಆಯಾ ವಿಷಯತಜ್ಞರ ವ್ಯಾಖ್ಯಾನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಜಾಗೃತಿಯನ್ನೂ ನವಚೈತನ್ಯವನ್ನೂ ಹುಟ್ಟಿಸಿ ಅವರಿಗೆಲ್ಲ ಈ ಉತ್ಸವಗಳ ಮೂಲಕ ಜ್ಞಾನ ಪ್ರಸಾದವನ್ನು ಹಂಚುತ್ತ ಕನ್ನಡ ನಾಡನುಡಿಗಳ ಸೇವೆಗೆ ಶ್ರೀಮಠ ಕೇಂದ್ರಶಕ್ತಿಯಾಗಿದೆ.