ಪೂಜ್ಯ ನಾಗನಾಥ ದೇವರು ಸೋಮಸಮುದ್ರ
ಓದುಗ ಶರಣರೇ.
ಒಬ್ಬ ಮಹಾತ್ಮರ ಜೀವನ ಚರಿತ್ರೆಯನ್ನು ವೀಕ್ಷಿಸಿದರೆ ನಮ್ಮ ಅಂತರಂಗದ ವಿಕಾಸದ, ಅವರ ವ್ಯಕ್ತಿತ್ವ ಸಮಾಜದ ಮೇಲೆ ಪ್ರಭಾವ ಬೀರುವ ಘಟನೆಯನ್ನು ಚರಿತ್ರೆಯಲ್ಲಿ ಕಾಣುತ್ತೇವೆ.
ಶ್ರೀ ಗುರು ಕುಮಾರೇಶ್ವರರ ಜೀವನವನ್ನು ವೀಕ್ಷಿಸಿದಾಗ ನಮ್ಮ ಅಂತರಂಗ ಶುದ್ಧವಾಗಲು ಶ್ರೀ ಶಿವಯೋಗ ಮಂದಿರ, ಬಹಿರಂಗದ ಸಮಾಜ ಶುದ್ಧಿಗೊಳ್ಳಲು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ನಿರ್ಮಿಸಿ ಇಡೀ ಭರತ ಖಂಡಕ್ಕೆ ಭವ್ಯ ಕಾಣಿಕೆಯನ್ನು ನೀಡಿರುವರು.
• ನಾಡಿನ ಹಲವಾರು ಮಠಗಳು ಅಸ್ತಿತ್ವ ಕಳೆದುಕೊಂಡು ಅವುಗಳೆಲ್ಲಾ ಸಂಸಾರಿಗಳ ಛತ್ರಗಳಾದ ಸಂದರ್ಭದಲ್ಲಿ,
• ಗುರುಗಳಾದವರು ತಮ್ಮ ತಮ್ಮ ಧರ್ಮದ ತಿಳುವಳಿಕೆ ಆಚಾರ ವಿಚಾರಗಳ ನೀತಿ ನಿಯಮಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ,
• ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರಗಳ ತಿಳುವಳಿಕೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ,
• ಷಟ್ಸ್ಥಲಗಳು, ಪಂಚಾಚಾರಗಳು ಏನು? ಯಾವುವು? ಎಂಬುವುದನ್ನು ಮರೆಯುತ್ತಿರುವ ಸಂದರ್ಭದಲ್ಲಿ ಜನಿಸಿದವರು, ಹಾನಗಲ್ಲ ಶ್ರೀ ಗುರು ಕುಮಾರ ಮಹಾಶಿವಯೋಗಿಗಳು.
ಎಲ್ಲ ಧರ್ಮಗಳಲ್ಲಿ ಎರಡು ಕವಲುಗಳಿವೆ, ಜೈನ ಧರ್ಮದಲ್ಲಿ ದಿಗಂಬರ- ಶ್ವೇತಾಂಬರ. ಕ್ರೈಸ್ತ ಧರ್ಮದಲ್ಲಿ ಪ್ರಾಟೆಸ್ಟೆಂಟ್- ಕ್ಯಾಥೋಲಿಕ್. ಬೌದ್ಧಧರ್ಮದಲ್ಲಿ ಹೀನಾಯಾನ-ಮಹಾಯಾನ. ಇಸ್ಲಾಂ ಧರ್ಮದಲ್ಲಿ ಸೂಯಾ- ಸೂನ್ನಿ, ಕವಲುಗಳಿರುವ ಹಾಗೆ ವೀರಶೈವ ಲಿಂಗಾಯತ ಧರ್ಮದಲ್ಲಿ ಗುರು-ವಿರಕ್ತ ಪಂಥಗಳಿವೆ ಆದರೆ ಅವೆರಡು ಒಂದೆ ಎಂದು ಬೋಧಿಸಿದವರು ಶ್ರೀ ಗುರು ಕುಮಾರ ಮಹಾಶಿವಯೋಗಿಗಳು.
‘ಅತ್ಕೇ ಚೇತನ್ ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್’.
ಸಮೀಪದಲ್ಲಿ ಜೇನುತುಪ್ಪ ಸಿಗುವದಾದರೇ ಪರ್ವತದವರೆಗೆ ಏಕೆ ಹೋಗಬೇಕು. ಎಂಬ ನ್ಯಾಯದಂತೆ.
ಶಿವಯೋಗ ಮಂದಿರದ ಎಲ್ಲಾ ಮಹಾ ಮಹಾಸ್ವಾಮಿಗಳು, ಶಿವಯೋಗಿಗಳು ಅವರ ವಿದ್ಯೆಯನ್ನು ಶಿವಯೋಗ ಮಂದಿರದಲ್ಲಿಯೇ ಕಲಿತರೇ ವಿನಃ ಮತ್ತೆ ಯಾವ ಕ್ಷೇತ್ರಕ್ಕೆ ಹೋಗಲಿಲ್ಲಾ. ಆ ಶಿವಯೋಗ ಮಂದಿರದಲ್ಲಿ ತಮ್ಮ ಜೀವನದಲ್ಲಿ ಸಾಧಿಸಿರುವ ಸಾಧನೆಯ ಕೆಲವೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಾಶಿವಯೋಗಿಗಳನ್ನು ಈ ಕೆಳಗೆ ತಿಳಿಸಿದೆ.
1 ವಿದ್ವತ್ ಮತ್ತು. ಲೇಖನಕಲೆಯ ಪ್ರತಿಭಾವಂತರು – ಶ್ರೀ ಜ.ಚ.ನಿಯವರು.
2 ಶಿವಯೋಗ ಮತ್ತು ಕೃಷಿಯಲ್ಲಿ ಬಲ್ಲಿದವರು – ಶ್ರೀ ರುದ್ರಮುನಿ ಶಿವಯೋಗಿಗಳು.
3 ಆಯುರ್ವೇದ ಹಾಗೂ ಭಕ್ತರ ಭವರೋಗನಿವಾರಣೆಯಲ್ಲಿ ತೊಡಗಿದವರು – ಶ್ರೀ ಚನ್ನಬಸವ ಮಹಾಸ್ವಾಮಿಗಳು.
4 ಕನ್ನಡದ ಗಡಿ ಭಾಗದಲ್ಲಿ ಕನ್ನಡ ಶಿಕ್ಷಣಕ್ಕೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಆಧ್ಯತೆ ಕೊಟ್ಟವರು -ಡಾ. ಶ್ರೀ ಶಿವಬಸವ ಮಹಾಸ್ವಾಮಿಗಳು ಮತ್ತು ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರು.
5 ಕೀರ್ತನೆ ಮತ್ತು ಪುರಾಣಕತೃಗಳಲ್ಲಿ ಶ್ರೀ ಚೆನ್ನಕವಿಗಳು.
6 ಅಂಧರ ತಾಯಿಯಾಗಿ, ಗಾಯನದಲ್ಲಿ ನಿಪುಣರು – ಗಾನಯೋಗಿ ಪಂಚಾಕ್ಷರಿ ಗವಾಯಿಗಳು.
ಕುಮಾರೇಶನ ಸಾಮಿಪ್ಯದಲ್ಲಿ.
1) ಬೈಲಹೊಂಗಲ ತಾಲೂಕಿನ ಅಂಬರಗದ್ದೆಯ ಶಿವಭಕ್ತರಾದ ಹಿರೇಮಠ ಮನೆತನದಲ್ಲಿ ಜನಿಸಿದ ಕೂಸು, ಹನ್ನೆರಡನೆಯ ವಯಸ್ಸಿಗೆ ಶಿವಯೋಗ ಮಂದಿರಕ್ಕೆ ಸೇರಿ ಅಲ್ಲಿನ ನಿಯಮಪಾಲನೆ ಮಾಡುತ್ತಾ , ಪೂಜೆ, ಯೋಗ, ಸಾಹಿತ್ಯ, ವೇದಾಂತ, ಶಿವಯೋಗ, ಅಧ್ಯಾತ್ಮವಿದ್ಯೆಯಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದು ಶ್ರೇಷ್ಠ ಜ್ಞಾನಿಗಳಾದರು. ಒಮ್ಮೆ ಮಹಾಶಿವಯೋಗಿಗಳು ” ನೀನು ವಿದ್ವತ್ತಿನಲ್ಲಿ ಪ್ರಾವಿಣ್ಯತೆ ಪಡೆದು ಉತ್ತಮ ಲೇಖನ ಕಾರ್ಯ ನಡೆಸುವೆ” ಎಂದು ಆಶೀರ್ವಾದ ಮಾಡಿದ್ದರು. ಅದೇ ರೀತಿಯಲ್ಲಿ ಶಿವಯೋಗ ಮಂದಿರದಲ್ಲಿ ಪ್ರಥಮ ಬಾರಿಗೆ ‘ಸುಕುಮಾರ’ ಪತ್ರಿಕೆಯನ್ನು ಪ್ರಾರಂಭಿಸಿ ಉತ್ತಮ ಲೇಖಕರಾಗಿ ಶಿವಯೋಗ ಮಂದಿರದಿಂದ ಹೊರಬಂದಿರುವರು. ನಿಡುಮಾಮಿಡಿ ಪೀಠದ ಅಧಿಕಾರ ಸ್ವಿಕರಿಸಿ ಶ್ರೀ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯರು ಎಂಬ ಹೆಸರನ್ನು ಪಡೆದರು ಮುಂದೆ ಜ.ಚ.ನಿ ಎಂಬ ಹೆಸರಿನಿಂದ ಪ್ರಖ್ಯಾತರಾಗಿವರು. ತಾವೇ ಸ್ವತಃ ಪ್ರಬುದ್ಧ ಲೇಖಕರಾದ ಕಾರಣ ಸಾವಿರಾರು ಪುಸ್ತಕಗಳನ್ನು ಹೊರತಂದಿರುವರು. ವೀರಶೈವರ ಆತ್ಮ ಆಗಿರುವ ಷಟ್ಸ್ಥಲದ ಬಗ್ಗೆ ಜೀವನ ಸಿದ್ಧಾಂತ ಎಂಬ ಮಹಾ ಗ್ರಂಥಗಳನ್ನು ರಚಿಸಿದ್ದಾರೆ. ಅಧ್ಯಾತ್ಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜ.ಚ.ನಿಯವರು ಸಾವಿರಾರು ವಚನಗಳನ್ನು ಸಹ ಬರೆದಿದ್ದಾರೆ. ವಿದ್ವತ್ ಲೋಕದಲ್ಲಿ ಸೈ ಎನ್ನುವ ಹಾಗೆ ಕೆಲಸ ಮಾಡಿರುವ ಲೇಖಕರಲ್ಲಿ ಪ್ರಬುದ್ಧತೆಯೊಂದಿಗೆ ಶಿವಯೋಗ ಮಂದಿರದಿಂದ ಹೊರಹೊಮ್ಮಿದವರು ಶ್ರೀ. ಜ.ಚ.ನಿಯವರು ಕೂಡಾ ಒಬ್ಬರು.
2) ಮಹಾಗುರುಗಳಿಂದ ‘ಖರೆಮರಿ’ ಎಂದು ಕರೆಸಿಕೊಂಡಿದ್ದ ರುದ್ರಮುನಿ ಸ್ವಾಮಿಗಳು.
ಹಾವೇರಿ ಜಿಲ್ಲಾ ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಎಣ್ಣೆ ಮನೆತನದ ನೀಲಮ್ಮ ಮತ್ತು ವೀರಪ್ಪ ಶಿವಭಕ್ತರ ಮಗು, ಶಿವಯೋಗ ಮಂದಿರದಲ್ಲಿ ಕಲಿಯಲು ಬಂದಾಗ ಟ್ರಸ್ಟ್ ಬೋರ್ಡಿನ ಆಯ್ಕೆಯಲ್ಲಿ ಬರದಿದ್ದರೂ ಶ್ರೀ ಕುಮಾರ ಶಿವಯೋಗಿಗಳು ಹಾನಗಲ್ಲ ವಿರಕ್ತಮಠದ ವೆಚ್ಚದಿಂದ ವಟುವಿನ ಅಭ್ಯಾಸಕ್ಕೆ ಅನುವು ಮಾಡುವರು, ಮಂದಿರದ ಗುರುಕುಲ ಶಿಕ್ಷಣದೊಂದಿಗೆ ಸರ್ವಜೀವಿಯಲ್ಲಿ ದಯೆ, ಗೋಪಾಲನೆ ಅಲ್ಲದೆ ಆಚಾರ-ವಿಚಾರದಲ್ಲಿ ಬಲ್ಲಿದರಾಗಿ, ಕೃಷಿ, ಕಾಯಕದಲ್ಲಿ, ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಾಧಕನನ್ನು, ನಯಾ-ವಿನಯದಲ್ಲಿ ಉತ್ತಮಗತಿಯನ್ನು ಪಡೆದ ರುದ್ರಮುನಿ ದೇವರನ್ನು ಶಿಕಾರಿಪುರ ಸಮೀಪದ ಕಪನಳ್ಳಿ ಶಾಖಾ ಮಂದಿರಕ್ಕೆ ತಕ್ಕವನೆಂದು ಶಿವಯೋಗಿಗಳು ತಿಳಿದಿದ್ದರು. ಅದೇ ಸಮಯಕ್ಕೆ ಆ ಭಾಗದ ಭಕ್ತಮಹಾಶಯರು ನಮ್ಮಲ್ಲಿ ಒಬ್ಬ ಶಿವಯೋಗಿಯನ್ನು ಕಳುಹಿಸಿಕೊಡಿ ಎಂದು ಶಿವಯೋಗಿಗಳಲ್ಲಿ ಭಿನ್ನವಿಸಿದಾಗ, ರುದ್ರಮುನಿ ದೇವರನ್ನು ಸೂಚಿಸಿ ಅವರ ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ. “ನಿನ್ನಿಂದ ಆ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ, ಕಾಯಕದೊಂದಿಗೆ ಅಲ್ಲಿ ಸೇವೆ ಮಾಡಿಕೊಂಡಿರು”. ಎಂದು ಶಿವಯೋಗಿಗಳು ಆಶೀರ್ವಾದ ಮಾಡುದರು. ಕಾಡಿನ ಮಧ್ಯದಲ್ಲಿ ಶಿವಯೋಗ ಸಾಧನೆಯ ಮೂಲಕ ಕಾಯಕವನ್ನು ನಡೆಸಿದರು. ಪಂಚಸಿದ್ಧಿಗೊಂಡ ಶಿವಯೋಗಿಗಳು ಸುತ್ತಲಿನ ಭಕ್ತಜನರಿಗೆ ತಮ್ಮ ತಪೋಶಕ್ತಿಯನ್ನು ಧಾರೆ ಎರೆಯುತ್ತಾ ಬಂದರು. ಮಂದಿರದ ಆಚಾರವನ್ನು ಬಿಡದೆ ಶೀಲಾ ಬಳಕೆಯ ಪಕ್ಕಾ ಮಡಿಯನ್ನು ಅಂತ್ಯದವರೆಗೂ ನಡೆಸಿದರು. ಮಹಾಶಿವಯೋಗಿಗಳ ಆಶೀರ್ವಾದದ ಹಾಗೆ ಕಾಯಕ ಯೋಗಿಯಾಗಿ ಶತಾಯುಷಿಗಳಾದರು. ಹಲವಾರು ಪೂಜ್ಯರಿಗೆ ಚಿನ್ಮಯ ದೀಕ್ಷೆ ಹಾಗೂ ನಿರಂಜನ ದೀಕ್ಷೆಯನ್ನು ಕರುಣಿಸಿರುವ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಎಲ್ಲಾ ಭಕ್ತರ ಮನೆ ಮನದಲ್ಲಿ ಪೂಜ್ಯ ಭಾವದಿಂದ ಇರುವವರು.
3) ಶಾಖ ಶಿವಯೋಗ ಮಂದಿರದ ಆಯುರ್ವೇದದ ಖಣಿ.
ಬೈಲಹೊಂಗಲ ತಾಲೂಕಿನ ಮರಡಿನಾಗಲಾಪುರದಲ್ಲಿ ಜನಿಸಿದ ಆರ್ಯ, ಶಿವಯೋಗ ಮಂದಿರಕ್ಕೆ ಬಂದು ಯೋಗ, ಶಿವಯೋಗ, ಅಧ್ಯಾತ್ಮವಿದ್ಯೆ, ಸೇವಾಕಾರ್ಯ, ಆಯುರ್ವೇದದ ಔಷಧಿ, ಕೃಷಿ-ಕಾಯಕ, ದಾಸೋಹದ ಬಗ್ಗೆ ತಿಳಿದುಕೊಂಡಿರುವ ದೇವರು ನಂತರದ ದಿನಗಳಲ್ಲಿ ನಿಡಗುಂದಿ ಕೊಪ್ಪಕ್ಕೆ ಶ್ರೀ ಚೆನ್ನಬಸವ ಮಹಾಸ್ವಾಮಿಗಳಾಗುವರು. ಅವರ ಹತ್ತಿರ ಎಂಥಹ ರೋಗಿಗಳು ಬರುತ್ತಿದ್ದರು ಅಂದರೇ ದೊಡ್ಡ ದೊಡ್ಡ ವೈದ್ಯರು ನಮ್ಮ ಕೈಯಲ್ಲಿ ಈ ರೋಗ ಅಸಾಧ್ಯವೆಂದು ವೈದ್ಯರು ಕೈಚೆಲ್ಲಿದಾಗ , ಕೊನೆಗೆ ಇವರ ಹತ್ತಿರ ರೋಗಿಗಳು ಬರುತ್ತಿದ್ದರು ಅಂಥಾ ರೋಗವನ್ನು ಇವರು ನಿವಾರಣೆಮಾಡುತ್ತಿದ್ದರು, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶ್ನೆಯಾಗಿ ಇರುವ ರೋಗವನ್ನು ಇವರು ನಿವಾರಿಸುತ್ತಿದ್ದರು, ಇವರು ಕೇವಲ ಶ್ರೀ ಗುರು ಕುಮಾರೇಶ್ವರರನ್ನು ನೆನೆದು ಶಿವಯೋಗಿಗಳ ಭಾವಚಿತ್ರವನ್ನು ನೋಡುತ್ತಾ ಕೊಡುತ್ತಿದ್ದ ಚೂರ್ಣವು ಕುಷ್ಠರೋಗ-ಕ್ಷಯರೋಗ, ನಾನಾ ವಿಧ ಕಷ್ಟಗಳನ್ನು ಗುಣಪಡಿಸುವ ಶಕ್ತಿ ಇವರದ್ದಾಗಿತ್ತು. ಶ್ರೀ ಗುರು ಕುಮಾರೇಶ್ವರರು ಮೇಲೆ ಅಷ್ಟೊಂದು ನಂಬಿಕೆಯನ್ನು ಇಟ್ಟಿದ್ದ ಮಹಾಸ್ವಾಮಿಗಳು ಎಂಥ ಭಕ್ತರ ಸಮಸ್ಯೆಗಳಿದ್ದರು ಮಹಾಶಿವಯೋಗಿಗಳನ್ನು ನೆನೆಸಿ ಭಕ್ತರ ನೋವಿನ ಮನವನ್ನು ಅವರು ಶಾಂತಚಿತ್ತದಿಂದ ಪ್ರಪುಲ್ಲಗೊಳಿಸುತ್ತಿದ್ದರು. ಆಯುರ್ವೇದದ ಜೊತೆಗೆ ಕೃಷಿ ಕಾಯಕದಲ್ಲಿ ನಿರತರಾಗಿ ಸ್ವತಃ ತಾವೇ ಕಾಯಕಮಾಡುತ್ತಿದ್ದರು. ಸಂಗೀತ, ಶಿವಾನುಭವ ಕಾರ್ಯಕ್ರಮವನ್ನು ಮತ್ತು ಮಹಾದಾಸೋಹವನ್ನು ನಿರಂತರವಾಗಿ ಸಾಗಿಸಿ ಬಂದಿರುವ ಮಠವಾಗಿದೆ. ಈಗಲೂ ಸಹ ಆಯುರ್ವೇದದ ಮೂಲಕ ಭಕ್ತರ ಕಷ್ಟ ಪರಿಹರಿಸುವರು. ಭಕ್ತರ ಆಯುರ್ವೇದ ದಾಸೋಹಿಮೂರ್ತಿಗಳಾಗಿದ್ದವರು ಶ್ರೀ ಚನ್ನಬಸವ ಮಹಾಸ್ವಾಮಿಗಳು.
4) ನಾಗನೂರಿನಲ್ಲಿ ಜನಿಸಿದ ಶಿವಬಸವ ಆರ್ಯರು ನಾಗನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಹನ್ನೆರಡನೇ ವಯಸ್ಸಿಗೆ ಮಂದಿರಕ್ಕೆ ಬಂದು. ಮಂದಿರದ ಆಚಾರ ವಿಚಾರಗಳನ್ನು, ಕನ್ನಡ – ಸಂಸ್ಕೃತ ಭಾಷೆಯನ್ನು ಕರಗತ ಮಾಡಿಕೊಂಡು, ತ್ರಿಕಾಲ ಲಿಂಗಪೂಜೆಯೊಂದಿಗೆ ಶಿವಯೋಗದೊಳಗಿನ ತತ್ವವನ್ನು ಅರಗಿಸಿ ದೇವರಾದರು. ಮುಂದೆ ಶ್ರೀ ಗುರು ಕುಮಾರ ಶಿವಯೋಗಿಗಳ ಸೇವಾ ಕಾರ್ಯಗಳಲ್ಲಿ ಬಹಳ ಕಾಲ ಇರುತ್ತಿದ್ದರಿಂದ “ಮಾನವ ಹುಟ್ಟಿನ ಅರ್ಥವು ಅಧ್ಯಾತ್ಮದಲ್ಲಿ ಮಾತ್ರಾ ತಿಳಿಯುತ್ತೇ, ದೇಹ ಅಳಿದರೂ ಆತ್ಮದ ಆಧಾರದಲ್ಲಿ ನೆಲೆಗೊಳ್ಳುವುದೇ ನಿಜವಾದ ಅಧ್ಯಾತ್ಮ”. ಎಂದು ಬೋಧಿಸುತ್ತಿದ್ದ ಶ್ರೀ ಕುಮಾರ ಶಿವಯೋಗಿಗಳ ವಿಶೇಷ ವ್ಯಕ್ತಿತ್ವ ಹೊಂದಿರುವ ಶಿವಬಸವ ದೇವರಲ್ಲಿ ಮಹತ್ವದ ಕಾಳಜಿ ವಹಿಸಿದ್ದರು, ಮಹಾಗುರುಗಳು ಹೇಳುವ ಯಾವ ಮಾತನ್ನು ಯಾವ ಕಾಲದಲ್ಲಿಯೂ ತಪ್ಪುತ್ತಿರಲಿಲ್ಲಾ. ನಂತರದ ಕಾಲದಲ್ಲಿ ಬೆಳಗಾವಿ ನಾಗನೂರ ಮಠದ ಅಧಿಕಾರವನ್ನು ವಹಿಸಿಕೊಂಡು ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡಿ, ಗಡಿಭಾಗದಲ್ಲಿ ನಶಿಸಿ ಹೋಗುತ್ತಿದ್ದ ಕನ್ನಡಸಂಸ್ಕೃತಿಯನ್ನು ಪುನಃಶ್ಚೇತನ ಮಾಡಿ ಧಾರ್ಮಿಕ ಕಾರ್ಯಗಳ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಂಡು ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಹಾಗೇ ವಿದ್ಯಾರ್ಥಿನಿಲಯ ಸ್ಥಾಪಿಸಿದ್ದಾರೆ. ಮಹತ್ವಪೂರ್ಣ ಗ್ರಂಥಗಳ, ವೀರಶೈವ ಧರ್ಮದ ತಾಡೆಯೋಲೆ – ಕೈಬರಹ ಮೊದಲಾದ ಅಮೂಲ್ಯ ಕೃತಿಗಳನ್ನು ಸಂಗ್ರಹಿಸಿ ಶ್ರೀ ಫ.ಗು.ಹಳಕಟ್ಟಿಯಂತಹ ದೊಡ್ಡ ದೊಡ್ಡ ಸಾಹಿತಿಗಳಿಗೆ, ಲೇಖಕರಿಗೆ, ಸಾಹಿತ್ಯಕ್ಕೆ ನೆರವಾಗಿ ಗ್ರಂಥಾಲಯದ ಮೂಲಕ ಸಹಾಯಹಸ್ತ ನೀಡಿದ್ದಾರೆ. ತಮ್ಮದೇ ಪ್ರಕಟನೆಯಲ್ಲಿ ನೂರಾರು ಅಮೂಲ್ಯ ಕೃತಿಗಳನ್ನು ಹೊರತಂದಿದ್ದಾರೆ. ಶ್ರೀ ಗುರು ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗ ಮಂದಿರದ ಎಲ್ಲ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿ ಸುಧೀರ್ಘ ಅಧ್ಯಕ್ಷರಾಗಿದ್ದಾರೆ. ಪೂಜ್ಯ ಶ್ರೀ ಡಾ.ಶಿವಬಸವ ಮಹಾಸ್ವಾಮಿಗಳು ಶತಾಯುಷಿಗಳಾಗಿ ಮಂದಿರದ ಮೇಲೆ ಅತ್ಯಂತ ನಿಷ್ಠಾವಂತರಾಗಿ ಸೇವಾ ಕೈಂಕರ್ಯ ಪೋರೈಸಿದ್ದಾರೆ.
5) ಬೀದರ್ ಜಿಲ್ಲೆಯ ಕಮಲಾನಗರದಲ್ಲಿ ಜನಿಸಿದ ಚೆನ್ನಬಸವ ವಟು ಶಿವಯೋಗ ಮಂದಿರಕ್ಕೆ ಬಂದು ಅಲ್ಲಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕನ್ನಡ ಮತ್ತು ಸಂಸ್ಕೃತ ಅಧ್ಯಯನ, ಯೋಗ, ಶಿವಾನುಭವ ಅಭ್ಯಾಸ ಮಾಡಿರುವ ಚೆನ್ನಬಸವ ದೇವರು. ಕೆಲವು ವರ್ಷಗಳ ಕಾಲ ಶಿವಯೋಗಿಗಳ ಸೇವೆಯನ್ನು ಮಾಡುವರು, ಶಿವಯೋಗಿಗಳು ಬಿಡುವಿನಲ್ಲಿ ಪಾಠದ ಜೊತೆ ಅನುಭವ ಹೇಳುತ್ತಿದ್ದರು. “ಗುರು ಮತ್ತು ವಿರಕ್ತರು ಸಮಾಜದ ಎರಡು ಕಣ್ಣುಗಳು ಅವರಲ್ಲಿ ಮನಸ್ತಾಪಗಳು ಬರಬಾರದು ಅವರೆಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ತಿದ್ದುವ, ನಮ್ಮ ಧರ್ಮವನ್ನು ಆಚರಿಸಿ ತಿಳಿಹೇಳುವ, ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಬೇಕು” ಎಂದು ತಿಳಿಸುತ್ತಿದ್ದರು. ಅದನೆಲ್ಲಾ ಆಲಿಸಿ, ತಿಳಿದು ಅದರ ಹಾಗೆ ಆಚರಿಸಬೇಕು ಎಂಬ ಹಂಬಲದಿಂದ ಇರುತ್ತಿದ್ದ ಚೆನ್ನಬಸವ ದೇವರು, ಕನ್ನಡದ ಗಡಿಭಾಗದ ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದ ಕ್ರಿ.ಶ. ೧೯೨೪ರಲ್ಲಿ ಅಧಿಕಾರವನ್ನು ವಹಿಸಿಕೊಂಡು ಚೆನ್ನಬಸವ ಪಟ್ಟಾಧ್ಯಕ್ಷರಾದರೂ. ಅದು ಗುರುಪರಂಪರೆ ಮಠವಾದರೂ ಅಲ್ಲಿ ಬಸವಾದಿ ಶರಣರ ಸಂಸ್ಕ್ರತಿಯನ್ನು, ವಚನಶಾಸ್ತ್ರವನ್ನು ಬಿತ್ತರಿಸಿದರು. ಗಡಿಭಾಗದಲ್ಲಿ ಕನ್ನಡ ಸಂಸ್ಕೃತಿ ಕಡಿಮೆಯಾಗುವ ಅಂಚಿನಲ್ಲಿ ಇದ್ದಾಗ ಹೊರಗಡೆ ಉರ್ದು ಭಾಷೆಯ ಫಲಕಹಾಕಿ ಒಳಗಡೆ ಕನ್ನಡ ಭಾಷೆಯನ್ನು ಬೋಧಿಸಿ ಕನ್ನಡವನ್ನು ಉಳಿಸಿದರು. ಅನೇಕ ಕಡೆ ಶಾಲಾ ಕಾಲೇಜು ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಒಂದು ಕೊಡುಗೆಯನ್ನು ನೀಡಿದ್ದಾರೆ. ಅದರ ಜೊತೆಗೆ ಬಸವಾದಿ ಶರಣರ ತತ್ವದ ದಾಸೋಹ ನಿಲಯವನ್ನು ಸ್ಥಾಪಿಸಿದ್ದಾರೆ. ಶ್ರೀ ಮಠದ ಜೀರ್ಣೋದ್ಧಾರದೊಂದಿಗೆ ಮಠವನ್ನು ಸುಸ್ಥಿತಿಗೆ ತಂದಿರುವ ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರು ಗಡಿಭಾಗದ ದೇವರಾಗಿ ಶಿವಯೋಗ ಮಂದಿರಕ್ಕೆ ಗೌರವದಿಂದ ಬಾಳುತ್ತಿದ್ದ ಮಹಾತ್ಮರು.
6) ಯಲಬುರ್ಗಾ ತಾಲೂಕಿನ ದ್ಯಾಂಪುರ ಗ್ರಾಮಕ್ಕೆ ಮಹಾಶಿವಯೋಗಿಗಳು ಮಂದಿರದ ಭಿಕ್ಷೆಗೆ ದಯಾಮಾಡಿಸಿದಾಗ. ಶ್ರೀಗಳ ಸಮಾಜಸೇವಾಕಾರ್ಯ, ಗುರುಗಳು ದೂರದೃಷ್ಟಿಯುಳ್ಳವರು ಎಂದು ತಿಳಿದಿದ್ದ, ಕಳಕೆ ಒಡೆಯರ್ ಮಠದ ಚನ್ನಯ್ಯನವರು (ಚನ್ನಕವಿ) ಪೂಜ್ಯರನ್ನು ತಮ್ಮ ಮನೆಗೆ ಬರಮಾಡಿಕೊಂಡು ಪಾದಪೂಜೆಯನ್ನು ಮಾಡಿ ಮಂಗಳಾರತಿಯನ್ನು ಹೇಳುವ ಸಂದರ್ಭದಲ್ಲಿ ಅವರೇ ಸ್ವತಃ ಶಿವಯೋಗಿಗಳ ಮೇಲೆ ರಚಿಸಿರುವ ಪದವನ್ನು ಹೇಳಿದಾಗ, ಆಗ ಪೂಜ್ಯ ಶಿವಯೋಗಿಗಳು ಕೋಪದಿಂದ ” ನಮ್ಮನ್ನು ಹೊಗಳುವಿರಾ ನಾವೇನು ಬಸವಾಲ್ಲಮರಂತೆ ಘನವಂತರೆ? ಅಥಣಿ ಶಿವಯೋಗಿಗಳಂತೇ ತಪೋನಿಧಿಗಳೇ? ವಿಜಯ ಮಹಾಂತ ಯತಿಗಳ, ಅನಂತಪುರದ ಗುರುಬಸವ ಶಿವಯೋಗಿಗಳ ಸುಚರಿತ್ರೆಗಳನ್ನು ಬರೆಯಿರಿ, ಬಿಡದೆ ಬರೆಯಿರಿ” ಎಂದು ನಮ್ಮ ನಾಡಿನಲ್ಲಿ ಅನೇಕ ಮಹಾಶಿವಯೋಗಿಗಳು ಆಗಿಹೋಗಿದ್ದಾರೆ ಅವರ ಪುರಾಣವನ್ನು ರಚಿಸಿ ಎಂದು ಅಪ್ಪಣೆ ಮಾಡಿದರು.
ಶಿವಯೋಗಿಗಳ ಸತ್ಯ ಸಂಕಲ್ಪದಂತೆ ಚನ್ನಕವಿಗಳು ಒಂಭತ್ತು ಪುರಾಣವನ್ನು ರಚಿಸಿದರು.
1- ಹಾಲಕೇರಿ ಅನ್ನದಾನಿಶ್ವರ ಪುರಾಣ.
2- ಹೇಮರೆಡ್ಡಿ ಮಲ್ಲಮ್ಮನ ಪುರಾಣ.
3-ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಪುರಾಣ.
4-ಶಿರಹಟ್ಟಿ ಶ್ರೀ ಫಕ್ಕೀರೇಶ್ವರ ಚರಿತ್ರೆ.
5-ನಾಲವತ್ವಾಡ ಶ್ರೀ ವೀರೇಶ್ವರ ಪುರಾಣ.
6-ಕಂಬಳಿಹಾಳ ಶ್ರೀ ದೊಡ್ಡ ಬಸವೇಶ್ವರ ಪುರಾಣ.
7-ಬಾಲಲೀಲ ಮಹಾಂತ ಸ್ವಾಮಿಗಳ ಪುರಾಣ.
8-ಕಮತಗಿ ಶ್ರೀ ಹುಚ್ಚೇಶ್ವರ ಪುರಾಣ.
9- ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ.
ಒಮ್ಮೆ ಮಹಾ ಶಿವಯೋಗಿಗಳು ” ಜನನಾದಿಯಿಂದ ಲಿಂಗೈಕ್ಯಾಂತಮಾಗಿ ಸಮಸ್ತ ವೀರಶೈವರಿಗೆ ಬೇಕಾಗುವ ಸಂಸ್ಕಾರ, ಆಚಾರ, ಷಟಸ್ಥಲ ವಿಚಾರಕ್ರಮಗಳೆಲ್ಲ ಸಪ್ರಮಾಣವಾಗಿ ಬೇರೆ ಗ್ರಂಥಗಳನ್ನು ನೋಡುವ ಅವಶ್ಯವಿಲ್ಲದೇ ಇದೇ ಪುರಾಣದಲ್ಲಿ ಬರುವಂತೆ ಮಾಡಿದರೇ ಇದೊಂದು ದೊಡ್ಡಕೆಲಸವೆನಿಸುವುದು. ಆದ್ದರಿಂದ ನಾವು ಶಿವಮಂದಿರದಲ್ಲಿದ್ದಾಗ ನೀನು ಬಂದು ಕೆಲವು ದಿವಸದಲ್ಲಿ ನಿಂತು, ತಕ್ಕ ಪ್ರಮಾಣಗಳನ್ನು ಸೋಮನಾಥ ಶಾಸ್ತ್ರಿಗಳ ಸಹಾಯದಿಂದ ಹುಡುಕಿಕೊಂಡು ಬರೆ” ಎಂದಿರುವುನ್ನು ಚನ್ನಕವಿಗಳೂ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಪುರಾಣದ ಮುನ್ನುಡಿಯಲ್ಲಿ ಸ್ಮರಿಸಿದ್ದಾರೆ. ಹೀಗೆ ಶಿವಯೋಗಿಗಳು ಚನ್ನಕವಿಗಳ ಕವಿತ್ವವನ್ನು ಕಂಡು ಉನ್ನತ ಮಟ್ಟಕ್ಕೆ ಏರಲು ಪ್ರೇರಣಾದಾಯಕವಾಗಿ ಆಶೀರ್ವದಿಸಿರುವರು.
ಈಗಿನ ಕಾಲದಲ್ಲಿ ಪುರಾಣ ಪ್ರವಚನಗಳಿಗೆ ಆಧಾರವೆಂದರೆ ಚನ್ನಕವಿಗಳು ರಚಿಸಿರುವ ಒಂಬತ್ತು ಪುರಾಣಗಳೇ ಎಲ್ಲಕ್ಕೂ ಮೂಲಗಳು ಎಂದರೇ ಅತಿಶಯೋಕ್ತಿಯಲ್ಲ ಎನಿಸುತ್ತದೆ ಅಂತಾ ಮೌಲ್ಯಯುತವಾದ ಪುರಾಣಗಳನ್ನು ಶಿವಯೋಗಿಗಳ ಆಶೀರ್ವಾದದಿಂದ ರಚಿಸಿರುವವರು ಚೆನ್ನಕವಿಗಳು.
7) ಸಂಗೀತದ ದೇವರ ಪುರುಷರು.
ಕಾಡಶೆಟ್ಟಿಗೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಹಕ್ಕಲ ಬಸವೇಶ್ವರರ ಜಾತ್ರೆಗೆ ದಯಮಾಡಿಸಿದಾಗ ಅಲ್ಲಿ ಎಳೆಯ ಕಂಠದಿಂದ ಹಾಡುತ್ತಿದ್ದ ಎರಡು ಅಂಧ ಮಕ್ಕಳನ್ನು ದತ್ತು ಪಡೆದು ಹಾನಗಲ್ಲಿನಲ್ಲಿ ಪ್ರಾಥಮಿಕ ಸಂಗೀತ ಶಿಕ್ಷಣ ಕೊಡಿಸಿ. ಕೆಲ ವರ್ಷಗಳ ನಂತರ ಇವರನ್ನು ಹೆಚ್ಚಿನ ಅಭ್ಯಾಸಕ್ಕೆ ಮೈಸೂರಿಗೆ ಕಳುಹಿಸಬೇಕು ಎಂದು ಯೋಚಿಸುತ್ತಿರುವಾಗ ಕಾಲರಾ ರೋಗ ಬಂದು ಹಿರಿಯ ಗುರುಬಸಯ್ಯ ತೀರಿಕೊಳ್ಳುವನು, ಗದುಗಯ್ಯನನ್ನು ಸಮಾಧಾನಿಸಿ ಮೈಸೂರಿಗೆ ಕಳುಹಿಸಿ ಸಂಗೀತ ಶಿಕ್ಷಣ ಕೊಡಿಸುವರು, ಅದರ ಜೊತೆ ದೇಶದ ಹಿರಿಯ ಸಂಗೀತಗಾರರಿಂದ ಕರ್ನಾಟಕ ಸಂಗೀತ ಹಾಗೂ ಲಾಹೋರ್ ನ ಉಸ್ತಾದ ವಹೀದಖಾನರಿಗೆ ತಿಂಗಳಿಗೆ ನೂರೈವತ್ತು ರೂಪಾಯಿ ಸಂಭಾವನೆ ಕೊಟ್ಟು ಹಿಂದೂಸ್ತಾನಿ ಸಂಗೀತ, ಪಿಟೀಲು, ವಿಶೇಷವಾಗಿ ಬಲಗೈಯಿಂದ ಡಗ್ಗಾ ಎಡಗೈಯಿಂದ ತಬಲಾ ಬಾರಿಸುವುದು, ಸಾರಂಗಿ, ಕೊಳಲು, ಹಾರ್ಮೋನಿಯಂ, ಶಹನಾಯಿ ಹೀಗೆ ಹಲವು ವಾದ್ಯಗಳ ವಿದ್ಯೆಯನ್ನು ಕೊಡಿಸಿದರು. ಮುಂದೆ ಇವರು ಪಂಚಾಕ್ಷರಿಗವಾಯಿ ಎಂಬ ಹೆಸರನ್ನು ಪಡೆಯುವರು. ಬಾಗಲಕೋಟೆಯಲ್ಲಿ ನಡೆದ ಮಹಾಸಭೆಯಲ್ಲಿ ತಮ್ಮ ಸುಮಧುರವಾದ ಸಿರಿಕಂಠದಿಂದ ಸಂಗೀತವನ್ನು ನುಡಿದು ಪಂಚಾಕ್ಷರಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಾಗೆ ಅವರು ಎಂದೂ ತ್ರಿಕಾಲ ಲಿಂಗಪೂಜೆ ಬಿಡುತ್ತಿರಲಿಲ್ಲ.
ಮುಂದೆ ಮಂದಿರವು ಸ್ಥಾಪನೆ ಆದ ನಂತರ, ಶಿವಯೋಗಿಗಳು “ಪಂಚಾಕ್ಷರಿ, ನಿನ್ನ ಶಿಷ್ಯರೊಂದಿಗೆ ಸಂಗೀತಯಾತ್ರೆ ಆರಂಭಿಸು . ನಿನ್ನ ಸಂಗೀತ ಹಾಗೂ ಸಂಗೀತ ಶಿಕ್ಷಣ ಲೋಕಾರ್ಪಣೆಯಾಗಲಿ. ಯಾವುದಕ್ಕೂ ಧೃತಿಗೆಡದೆ ಸಂಚಾರಿಶಾಲೆಯಾಗಿ ಸಂಗೀತ ಶಿಕ್ಷಣ ಮುನ್ನೆಡೆಸು. ನಿನ್ನ ಶಾಲೆಯ ಕೀರ್ತಿ ನಾಡಿನಲ್ಲೆಲ್ಲಾ ಹರಡಲಿ, ಶಿವ ಕೃಪೆಯಿಂದ ಎಲ್ಲವೂ ಸೌಖ್ಯವಾಗುವುದು.” ಎಂದು ಶ್ರೀ ಗುರು ಕುಮಾರ ಶಿವಯೋಗಿಗಳು ಆಶೀರ್ವದಿಸುವರು. ಅಲ್ಲಲ್ಲಿ ಸಂಗೀತ ಶಿಕ್ಷಣ, ಭಜನೆ, ಕೀರ್ತನೆ ನಡೆಸುತ್ತಾ, ಶ್ರೀ ಸಿದ್ಧರಾಮೇಶ್ವರ – ಶ್ರೀ ಹೇಮರೆಡ್ಡಿ ಮಲ್ಲಮ್ಮನ ನಾಟಕವನ್ನು ಪ್ರದರ್ಶಿಸುತ್ತಾ ಗದುಗಿಗೆ ಬಂದು ಶ್ರೀ ಕುಮಾರ ಶಿವಯೋಗಿಗಳ ಸದಿಚ್ಛೆಯಂತೆ ಬಸರೀಗಿಡದ ವೀರಪ್ಪನವರ ಸಹಕಾರದಿಂದ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿದರು. ಮುಂದೆ ಇದು ದೇಶದ ಅಪರೂಪದ ಸಂಗೀತ ಗುರುಕುಲವಾಗಿ ಬೆಳೆಯಿತು. ಜಾತಿ – ಕುಲರಹಿತ ಶಿಕ್ಷಣದಿಂದ ಸಾವಿರಾರು ಸಂಗೀತಗಾರರು, ಕೀರ್ತನಕಾರರು, ದೇಶದಾದ್ಯಂತ ಬೆಳೆದಿರುವರು. ಹೀಗೆ ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿ ಪಂಚಾಕ್ಷರಿ ಗವಾಯಿಗಳು ಖ್ಯಾತಿ ಪಡೆಯುವಲ್ಲಿ ಶ್ರೀ ಕುಮಾರ ಶಿವಯೋಗಿಗಳು ವಹಿಸಿದ ಕಾರ್ಯ ಅವಿಸ್ಮರಣೀಯವಾದುದು.
ಶ್ರೀಗಂಧದ ಸಂಪರ್ಕದಲ್ಲಿ ಇರುವ ಸಾಣಿಕಲ್ಲು ಸದಾ ಸುಗಂಧಯುಕ್ತವಾದಂತೇ ಶ್ರೀ ಗುರು ಕುಮಾರ ಮಹಾಶಿವಯೋಗಿಗಳ ಸಾಮಿಪ್ಯದಲ್ಲಿ ಇರುತಿದ್ದ ಮಹಾ ಸಾಧಕರು ತಮ್ಮ ಬದುಕನ್ನು ಸವಿಸಿ ಶಿವಯೋಗಿಗಳಾದರು.
ಕಲ್ಲು, ಕಂಬವೇ ದೇವರೆಂದು ಪೂಜಿಸುವ ಮುಗ್ಧ ಭಕ್ತರಿಗೆ ನಡೆದಾಡುತ್ತಾ ಮಾತನಾಡುವ ದೇವರನ್ನು ತೋರಿಸಿರುವವರು. ಸಮಾಜದಲ್ಲಿ ಕುದೃಷ್ಟಿಗೆ ಗುರಿಯಾಗಿದ್ದ ಅಂಧರು-ಅನಾಥರು ಸಂಗೀತದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವವರು. ವಚನ ಪಿತಾಮಹ ಫ.ಗು.ಹಳಕಟ್ಟಿಯವರಿಗೆ ಸಹಾಯಹಸ್ತನೀಡಿ ಪ್ರೇರೇಪಿಸಿದವರು. ಸಂಶೋಧನಾ ಕಾರ್ಯದಲ್ಲಿ ಮಹಾನುಭಾವಿ ಚೆನ್ನಮಲ್ಲಿಕಾರ್ಜುನನವರಿಗೆ ಅನುಗ್ರಹ ನೀಡಿರುವವರು. ಶಿರಸಂಗಿ ಲಿಂಗರಾಜರಿಗೆ ಆಶೀರ್ವದಿಸಿ ಕೆ.ಎಲ್.ಇ. ಸಂಸ್ಥೆಗೆ ಪ್ರೇರಣೆಯಿತ್ತವರು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿರುವರು. ವಿಜಯಪುರದ ಬಿ.ಎಲ್.ಡಿ. ಸಂಸ್ಥೆಗೆ ಪ್ರೇರಣೆಯಿತ್ತವರು. ಸಾಹಿತ್ಯದಲ್ಲಿ ಜ.ಚ.ನಿಯವರನ್ನು, ಯೋಗದಲ್ಲಿ ಕಂಚುಗಲ್ಲ ಬಿದರಿ ಪ್ರಭುಕುಮಾರ ಪಟ್ಟಾಧ್ಯಕ್ಷರನ್ನು, ವಿದ್ವತ್-ಭಾಷಣದಲ್ಲಿ ನವಲಗುಂದದ ಶ್ರೀ ಬಸವಲಿಂಗ ಸ್ವಾಮಿಗಳನ್ನು, ಕಾಯಕದಲ್ಲಿ ಕಪನಳ್ಳಿ ರುದ್ರಮುನಿ ಶಿವಯೋಗಿಗಳನ್ನು, ವೈದಿಕ ಶಿವಪೂಜೆಯಲ್ಲಿ ಸಿಂಧಗಿಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಮತ್ತು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಭಾಷ್ಯಕಾರರಾದ ಸಖರಾಯಪಟ್ಟಣದ ಶ್ರೀ ಸದಾಶಿವ ಶಿವಾಚಾರ್ಯರನ್ನು, ಆಯುರ್ವೇದದಲ್ಲಿ ತುಪ್ಪದ ಕುರಹಟ್ಟಿಯ ಶ್ರೀ ಸಂಗಮೇಶ್ವರ ಶಿವಾಚಾರ್ಯರನ್ನು ಮತ್ತು ನಿಡಗುಂದಿ ಕೊಪ್ಪದ ಶ್ರೀ ಚೆನ್ನಬಸವ ಮಹಾಸ್ವಾಮಿಗಳನ್ನು, ಶಿಕ್ಷಣ ವಿದ್ಯಾಸಂಸ್ಥೆ-ಮಹಾದಾಸೋಹದಲ್ಲಿ ಶ್ರೀ ಶಿವಬಸವ ಮಹಾಸ್ವಾಮಿಗಳನ್ನು ಹಾಗೂ ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರನ್ನು, ಸಂಗೀತ ಕ್ಷೇತ್ರದಲ್ಲಿ ಶ್ರೀ ಪಂಚಾಕ್ಷರಿ ಗವಾಯಿಗಳು ಹಾಗೂ ಶ್ರೀ ಪುಟ್ಟರಾಜ ಗವಾಯಿಗಳನ್ನು, ಹೀಗೆ ವಾಕ್ ಸಿದ್ಧಿ, ಹಸ್ತಶುದ್ಧಿ, ಮನಶುದ್ಧಿ, ಭಾವಶುದ್ಧಿ, ದೃಷ್ಟಿಶುದ್ಧಿ ಇಂತಿ ಸಮಾಜ ಸೇವಾ ಸಮೂಹವನ್ನು, ಮಹಿಳೆಯರ ವಿದ್ಯಾಭ್ಯಾಸಕ್ಕೆ ಪಾಠ ಶಾಲೆಯನ್ನು, ದೇಶಿಗೋವುಗಳನ್ನು ಸಂರಕ್ಷಿಸಿದವರು ಅದರ ಗೋಮಯದಿಂದ ಪರಿಶುದ್ಧ ವಿಭೂತಿಯನ್ನು ತಯಾರಿಸಲು ಕಲಿಸಿದವರು. ಹೀಗೆ ಸರ್ವ ಕಾರ್ಯಗಳಲ್ಲಿಯು ಸಮಾಜಕ್ಕೆ ಕೊಟ್ಟ ಕಾಣಿಕೆಯನ್ನು ನೀಡಿರುವ ಹಾನಗಲ್ಲ ಶ್ರೀ ಗುರು ಕುಮಾರ ಮಹಾಶಿವಯೋಗಿಗಳನ್ನು ನಮ್ಮ ಸಮಾಜವು ಸದಾ ಸ್ಮರಿಸಬೇಕು.