ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯ್ಯ ಸಂಸ್ಥಾನಮಠ ಗದಗ
ಆಸೆ-ಆಮಿಷ ಶಬ್ದಗಳೆರಡಾದರೂ ಅರ್ಥ ಒಂದೇ; ಕ್ರಿಯೆಯೂ ಒಂದೇ. ಮನಸ್ಸಿನ ಸಲ್ಲದ ಬಯಕೆ ಹಾಗು ವಿಷಯ ಸುಖದ ಲಾಲಸೆಗಳೇ ಆಸೆ ಆಮಿಷಗಳು. ಇವುಗಳಿಗೆ ಲೋಭವೆಂದೂ ಹೆಸರು. ಈ ಲೋಭ ಮನುಷ್ಯನ ಅವನತಿಗೆ ಕಾರಣವಾಗುವ ಅರಿಷಡ್ವರ್ಗಗಳಲ್ಲಿ ಒಂದು. ಮನುಷ್ಯನ ಎಲ್ಲ ಪಾಪಗಳಿಗೂ ಲೋಭವೇ ಮೂಲ. ಅದು ಪಾಪದ ಜನಕ (ಲೋಭ ಪಾಪಕಾ ಬಾಪ ಹೈ). ಆಶೆಗೆ ಸಮನಾದ ದುರ್ಗುಣ ಇನ್ನೊಂದಿಲ್ಲ. ಆಶೆಯಿಂದ ಎಲ್ಲವೂ ತನಗೆ ಬೇಕೆಂದು ಎಲ್ಲವನ್ನೂ ತನ್ನಲ್ಲೇ ಬಚ್ಚಿಟ್ಟುಕೊಳ್ಳುವ ವ್ಯಕ್ತಿಗೆ ಕೃಪಣ, ಜಿಪುಣ ಅಥವಾ ಲೋಭಿ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ಅವನಂಥ ದುರ್ಗುಣಿ ಮತ್ತೊಬ್ಬನಿಲ್ಲ.
ವ್ಯಕ್ತಿಯ ಅಧ್ಯಾತ್ಮ ಸಾಧನೆಯಲ್ಲಿಯೂ ಆಶೆ ಅನೇಕ ಅಡೆತಡೆಗಳನ್ನುಂಟು ಮಾಡುತ್ತದೆ. ಶರಣರು, ಸಂತರು ಈ ಆಶೆಯನ್ನು ‘ಮಾಯೆ’ ಎಂದು ಕರೆದಿರುವರು. ಮನದ ಮುಂದಣ ಆಶೆಯೆ ಮಹಾ ಮಾಯೆ ಕಾಣಾ ಗುಹೇಶ್ವರ’ ಎಂದು ಹೇಳುವ ಅಲ್ಲಮಪ್ರಭು ಇಹಲೋಕದ ಹೆಣ್ಣು, ಹೊನ್ನು, ಮಣ್ಣು ಅಥವಾ ಬೇರಾವುದೇ ವಸ್ತುಗಳು ವ್ಯಕ್ತಿಯ ಭವಬಂಧನಕ್ಕೆ ಕಾರಣಗಳಲ್ಲ. ಆ ವಸ್ತುಗಳ ಬಗೆಗಿರುವ ಅವನ ಅಲ್ಲಸಲ್ಲದ ಬಯಕೆಗಳೇ ಅವನ ಸಾಂಸಾರಿಕ ಬಂಧನಕ್ಕೆ, ದುಃಖಕ್ಕೆ ಕಾರಣವಾಗುತ್ತವೆ. ಮನುಷ್ಯ ಸಹಜವಾಗಿಯೇ ಸುಖಾಪೇಕ್ಷಿಯಾಗಿದ್ದಾನೆ. ಭೋಗ ವಸ್ತುಗಳಿಂದ ತಾನು ಬಯಸಿದ ಸುಖ ಸಿಗುವದೆಂಬ ಆಶೆಯಿಂದ ಆ ವಸ್ತುಗಳಿಗೆ ಹಾತೊರೆಯುತ್ತಾನೆ. ಭೋಗವಸ್ತುಗಳು ಎಂದೂ ತಾವಾಗಿಯೇ ನಮ್ಮನ್ನು ಆಕರ್ಷಿಸುವುದಿಲ್ಲ. ಕೇವಲ ಅವುಗಳ ತ್ಯಾಗದಿಂದ ಮಾತ್ರವೇ ಪರಮಸುಖ ಸಾಧ್ಯವೂ ಇಲ್ಲ. ಆದ್ದರಿಂದ ಮನವನ್ನೆಲ್ಲ ವ್ಯಾಪಿಸಿರುವ, ವಿಷಯ ವಸ್ತುಗಳನ್ನು ತನ್ನದಾಗಿಸಿಕೊಂಡು ಮನಸಾರೆ ಅನುಭವಿಸಬೇಕೆಂಬ ಹೀನ ಬಯಕೆಯನ್ನು ತ್ಯಾಗ ಮಾಡಬೇಕು. ಆಶೆ ಆಮಿಷ ಅಳಿದವರಿಗಲ್ಲದೆ ಪರಮಸುಖ ತೋರದು.
ಲೌಕಿಕ ವ್ಯವಹಾರದಲ್ಲಿ ಆಶೆ ಎಂಬುದು ಶೂಲವಾಗಿ ಮನುಷ್ಯರನ್ನು ಕಾಡುತ್ತದೆ. ಲೋಕದ ಅಸಮತೋಲನಕ್ಕೆ ಕಾರಣವಾಗುವ ಈ ದುರಾಶೆಗೆ ಎಂದಾವರೂ ಕೊನೆಯುಂಟೆ? ‘ಆಶಾ ನ ಜೀರ್ಣಾ ವಯಮೇವ ಜೀರ್ಣಾ’ ಆಶೆಗೆ ಎಂದು ಕೊನೆ ಎಂಬುದಿಲ್ಲ. ಅದನ್ನು ಹೊಂದಿದ ನಾವೇ ಕೊನೆಕೊಳ್ಳಬೇಕಾಗುತ್ತದೆ. “ಆಶೆಯೇ ದಾಸತ್ವ, ನಿರಾಶೆಯೇ ಈಶತ್ವ” ಸಲ್ಲದ ಆಶೆಗೆ ಒಳಗಾಗುವನು ಕೊಡುವವರ ದಾಸನಾಗಿ ಬದುಕಬೇಕಾಗುತ್ತದೆ. ಲೌಕಿಕ ವಸ್ತುಗಳ ಆಶೆ ಮೀರಿದವ ಈಶನಾಗುತ್ತಾನೆ. ಕಾಣಿಯ ಲೋಭ ಕೋಟಿಯ ಲಾಭವನ್ನು ಕೆಡಿಸಿ ನಮ್ಮ ದುಃಖಕ್ಕೆ ಕಾರಣವಾಗುವುದು. ಒಬ್ಬ ವ್ಯಕ್ತಿಯ ಹತ್ತಿರ ಸುಂದರವಾದ ಕೋಳಿ ಇತ್ತು, ಅದು ಅವನಿಗೆ ಪ್ರತಿದಿನ ಬಂಗಾರದಂತಹ ಮೊಟ್ಟೆಯೊಂದನ್ನು ಕೊಡುತ್ತಿತ್ತು. ಅದನ್ನು ಮಾರಿ ತನ್ನ ಉದರ ಪೋಷಣೆ ಮಾಡಿಕೊಳ್ಳುತ್ತಿದ್ದ. ಒಂದು ದಿನ ಅವನು-‘ಈ ಕೋಳಿ ಪ್ರತಿದಿನ ಒಂದೇ ಮೊಟ್ಟೆಯನ್ನು ಕೊಡುತ್ತಿದೆ. ಇದನ್ನು ಕೊಂದು ಎಲ್ಲ ಮೊಟ್ಟೆಗಳನ್ನು ಒಮ್ಮೆಯೇ ಏಕೆ ತೆಗೆದುಕೊಳ್ಳಬಾರದು’ ಎಂದು ಯೋಚಿಸಿದನು. ಮನಸ್ಸಿನಲ್ಲಿ ಈ ದುರಾಶೆ ಹುಟ್ಟಿದಾಕ್ಷಣವೆ ಅವನು ಕೋಳಿಯನ್ನು ಕೊಂದು ಹಾಕಿದ, ಅವನಿಗೆ ಒಂದು ಮೊಟ್ಟೆಯೂ ಸಿಗಲಿಲ್ಲ. ಮೊದಲು ಒಂದು ಮೊಟ್ಟೆಯಾದರೂ ಪ್ರತಿದಿನ ದೊರೆಯುತ್ತಿತ್ತು. ಈಗ ಅದೂ ಕೊನೆಗೊಂಡಿತು. ಆದ್ದರಿಂದಲೇ ಅತಿ ಆಸೆ ಗತಿಗೆಡಿಸಿತು’ ಎಂಬ ಗಾದೆ ಪ್ರಚಲಿತವಾಗಿರುವುದು. ಅತಿ ಆಶೆ ಮಾಡಬಾರದು, ಅತಿ ಆಶೆಯೆ ನಮ್ಮ ವಿನಾಶಕ್ಕೆ ಹಾಗು ದುಃಖಕ್ಕೆ ಕಾರಣ.