ತಪೋಭೂಮಿ-ತತ್ವಪ್ರೇಮಿ

ಜ.ಚ.ನಿ

 

ಆಮೇಲೆ ಏಕಾಂತದಲ್ಲಿ ಏಕಾಂಗಿಯಾಗಿದ್ದು ಏಕಾಗ್ರಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು, ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಆಗಮಿಸಿದರು. ಬರುತ್ತ ಬೆಟ್ಟದ ಇಕ್ಕಟ್ಟಾದ ಹಾದಿಗಳಲ್ಲಿ ಹಾಯ್ದು ಮುಂದುವರೆಯುತ್ತಿದ್ದರು. ಒಮ್ಮೊಮ್ಮೆ ಹೋಗುವುದನ್ನೇ ಮರೆತು ಚಣಹೊತ್ತು ಸೀಳ್ದಾರಿಯಲ್ಲಿಯೇ ನಿಂತು ಬಿಡುತ್ತಿದ್ದರು. ಚಿಂತಾಮಗ್ನರಾಗಿರುತ್ತಿದ್ದರು. ಎಚ್ಚತ್ತು ಮತ್ತೆ ಹತ್ತಿಪ್ಪತ್ತು ಹೆಜ್ಜೆ ಮುನ್ನಡೆದು ಮತ್ತೇನನ್ನೂ ಯೋಚಿಸುತ್ತನಿಲ್ಲುತ್ತಿದ್ದರು. ಅಂತು ಇಂತು ದಾರಿ ಸಾಗಿತ್ತು. ನಿಶ್ಚಟದ ಗುರಿ ಮಾತ್ರ ತೋರದಾಗಿತ್ತು. ಗುರುವರ್ಯರ

ಗುರುತರವಾದ ಆಶೀರ್ವಾದದ ಪ್ರತಿಯೊಂದು ಮಾತನ್ನು ತಮಗೆ ಒರೆಹಚ್ಚಿಕೊಳ್ಳುತ್ತಿದ್ದರು. ತಮಗೆ ಆ ಶಕ್ತಿ ಎಲ್ಲಿ ? ಆ ಸಾಹಸವೆಲ್ಲಿ? ಸಂಘಶಕ್ತಿಗೂ ಸಾಧ್ಯವಾಗದ ಆ ಕಾರ್ಯ ನನ್ನಿಂದ ನೆರವೇರುವುದೆಂದರೇನು ? ನೆರವೇರಿಸುವದೆಂದರೇನು ಗುರುವಿನಾಜ್ಞೆ ತೊರೆಯುವಂತಿಲ್ಲ. ಮಾಡುವ ಬಗೆ ಹೇಗೆ ? ಮುಂದೋರದು ಎಂದು ಮುಂತಾಗಿ ಅಂತರಂಗದಲ್ಲಿಯೆ ಆಲೋಚಿಸುತ್ತಿದ್ದರು. ಅಷ್ಟರಲ್ಲಿ ನಿಜಗುಣರು ಹಿಂದೆ ನಿವಾಸಿಸಿ ನಿಯಮವ್ರತಗಳಿಂದ ತಪಸಿದ ಆಶ್ರಮ ಕಣ್ಣಿಗೆ ಬಿತ್ತು. ಅಲ್ಲಿನ ಆ ಅನನ್ಯ ಪ್ರಶಾಂತ ವಾತಾವರಣದಿಂದ ಅದೇ ಇರಬಹುದೆಂದು ಭಾವಿಸಿದರು. ಆ ತಪೋಭೂಮಿಗೆ ತಪೋನೇಮಿಯು ತವಕದಿಂದ ಬಂದು ತಲುಪಿದನು. ತತ್ವಪ್ರೇಮಿಯಾಗಿ ತಂಗಿದನು.

 

ಆ ತಪೋಭೂಮಿಯ ಭಾಗಗಳನ್ನು ಅಡ್ಡಾಡಿ ಅವಲೋಕಿಸಿದನು. ಒಂದೆಡೆ ಗವಿಯೊಂದು ಕಂಡಿತು. ವಾಸಕ್ಕೆ ನೆಲೆಸಿಕ್ಕಿತೆಂದು ಆನಂದಿಸಿದನು. ಆ ಆನಂದದ ವನವೈಭವವನ್ನು ನಿಟ್ಟಿಸಿ ನೋಡಿದನು. ಒಂದೆಡೆಗೆ ಬೆಟ್ಟದ ತುತ್ತುದಿ ನಿಶ್ಚಲವಾಗಿ ನಿಶ್ಚಿಂತೆಯಾಗಿ ನಿಂತಿತ್ತು. ಅದರ ಮಡುಲಲ್ಲಿ ಅನಂತ ಗಿಡಮರಗಳು ಬೆಳೆದಿದ್ದವು. ವನಮೃಗಗಳು ವಾಸವಾಗಿದ್ದವು, ಕಿರಿದಾದ ತೊರೆಯೊಂದು ಹರಿದಿತ್ತು. ಹಕ್ಕಿಗಳು ಬಾಳಿದ್ದವು. ಇದನ್ನೆಲ್ಲ ನೋಡಿ ಸ್ವಾಮಿಗಳವರ ಕಲ್ಪನೆ ಕೆರಳಿತು; ಬಯಕೆ ಬೇರೂರಿತು. ನಾನೂ ನಿಶ್ಚಲವಾಗಿ ತಪಸ್ಸನ್ನಾಚರಿಸಿದರೆ ನನ್ನಲ್ಲಿ ಸುಗುಣ ವೃಕ್ಷಗಳು ಶಿವರತಿ ಸಮರತಿ ಲತೆಗಳು ಬೆಳೆಯಬಲ್ಲವು. ಶಾಂತಿಜಲ ಪ್ರವಹಿಸಬಲ್ಲದು. ಸಮಾಜದ ಹಕ್ಕಿಗಳು ಭಯವಿಲ್ಲದೆ ಬಾಳಬಲ್ಲವು. ಇಷ್ಟಾದರು ದುರ್ಜನರೆಂಬ ವನ್ಯಪಶುಗಳು ಇಲ್ಲದಿರಲು ಸಾಧ್ಯವಾಗದು. ಇದ್ದರೂ ಇಲ್ಲಿರುವ ವನಮೃಗಗಳಂತೆ ಅವುಗಳ ಆಟವೂ ನಡೆಯದು.  ಹಾಗಾದಮೇಲೆ ನಾನೇಕೆ ಹೆದರಬೇಕು. ಅಖಂಡವಾದ ಅಚಲವಾದ ಆತ್ಮಶಕ್ತಿಯನ್ನು ಸಂಪಾದಿಸುವುದೇ ಈಗ ನನ್ನ ಆದ್ಯ ಕರ್ತವ್ಯ; ಆಮೇಲೆ ಅದು ಗಂತವ್ಯಗುರಿ ಎಂದು

ಭಾವಿಸಿ ತಪಸ್ಸಿಗೆ ಅಭಿಮುಖರಾದರು; ಮಿಗೆ ಹರುಷಿಸಿದರು.

 

ನಿತ್ಯವು ತಪ್ಪದೆ ತದೇಕ ಚಿತ್ತದಿಂದ ತಪಸ್ಸಾಧನೆ ಸಾಗಿತು. ತಿಳಿಯಾದ ತಣ್ಣೀರಿನಲ್ಲಿ ಮಿಂದು ನೀರ್ಗಾವಿಯ ಮಡಿಯುಟ್ಟು ಹೂವು ಹಣ್ಣುಗಳ ತಂದು ಲಿಂಗ ಪೂಜೆಯಲ್ಲಿ ಲೀನವಾಗುವರು. ಸಂಸಿದ್ಧಿಗೇರುವರು. ಜಪದ ಎಣಿಕೆ ನಿಲ್ಲುವುದು. ಕ್ರಮದ ಪ್ರಮೆ ಅಡಗುವುದು ದೃಕ್‌ ದೃಶ್ಯವೊಂದಾಗುವವು. ಇದಾದ ಮೇಲೆ ದ್ರಷ್ಟಾ ಇನ್ನೆಲ್ಲಿ ? ಹೀಗೆ

ತ್ರಿಪುಟಿಯಳಿದು ತನ್ಮಯರಾಗಿ ಇರುತ್ತಿದ್ದರು. ಹೊತ್ತುಹೋದಂತೆ ಮರಳಿ ದೃಶ್ಯದಿಂದ ದೃಕ್ಕು ಬೇರ್ಪಡುತ್ತಿತ್ತು. ಬಾಹ್ಯಸ್ಮೃತಿ ಬರುತ್ತಿತ್ತು. ಈಶ್ವರನೆ ಸಾಕಾರ ನಿರಾಕಾರನಾಗಿರುವಂತೆ ಸಾಧನ ಸಿದ್ಧಿಗಳಿಂದ ಭಕ್ತಿಮುಕ್ತಿಗಳಿಂದ ತಪಸ್ವಿ ತೇಜಸ್ವಿಯಾದರು. ಬಾಹ್ಯವಿಧಿ ಭಾವಸಮಾಧಿಗಳಿಂದ ಸಮಾಜದ ಭಾವೀ ಭಾಗ್ಯವಿಧಾತರಾದರು.

 

ಆದರೂ ಅವರಿಗೆ ನಂಬುಗೆ ನೆರವಾಗಲಿಲ್ಲ. ಹಂಬಲ ಹರಿಯಲಿಲ್ಲ. ನಿಜಗುಣರು ಶಂಭುಲಿಂಗನ, ವಿದ್ಯಾರಣ್ಯರು ಭುವನೇಶ್ವರಿಯ ಪ್ರಾರ್ಥಿಸಿದಂತೆ ಸದಾಶಿವಸ್ವಾಮಿಗಳು ತಮ್ಮ ಗುರುಗಳಾದ ಬಸವಲಿಂಗಸ್ವಾಮಿಗಳನ್ನು ಪ್ರಾರ್ಥಿಸುವರು. ತಮ್ಮ ವಾಣಿಯಲ್ಲಿ ನೇರವಾಗಿ ಪ್ರಾರ್ಥಿಸುವ ಮೊದಲು ಗುರುಕರುಣವನ್ನೆ ಕೋಗಿಲೆಯನ್ನಾಗಿ ಭಾವಿಸಿ ಹಾಡಿದ ನಿಜಗುಣರ ಈ ಪದ್ಯವು ಸ್ವಾಮಿಗಳ ನೆನಪಿಗೆ ಬರುವುದು. ಸೂಕ್ತವಾದ ಆ ಪದ್ಯದಲ್ಲಿ ಅವರ ಮನಸ್ಸು ಸಂಯುಕ್ತವಾಗಿ ಅವರ ವಾಣಿಯಿಂದ ಹೊರಹೊಮ್ಮುತ್ತದೆ, ಹಾಡತೊಡಗುವರು :

 

ಕೋಗಿಲೆ ದನಿದೋರು ಕರ್ಮವೆಸಿಸುವ ಮಾಗಿ ಪೋದುದಿನ್ನು

ಅನುನಯದಿ ಗುರುಕರುಣವೆಂಬ ಕೋಗಿಲೆ

ಘನವಸಂತವಿದೆನಗೆ ಸೊಗಸು ಮಿಗೆ ಪ್ರಣವರೂಪಿನ

ಚಿತ್ರತರವಾದ ಕೋಗಿಲೆ

 

ಹೀಗೆಂದು ಗುರುಕರುಣೆಗಾಗಿ ಹಾಡಿಹಾರೈಸುವರು, ಸಾಲದೆ

 

ಬಸವಲಿಂಗ ಯೋಗೀಶ್ವರ ! ನಿನ್ನ ಅಪ್ಪಣೆಯಂತೆ ಅನುಷ್ಠಿಸಿದ ನನ್ನ ಈ ಹನ್ನೆರಡು ವರುಷದ ತಪಃಪ್ರಭಾವವನ್ನು ತಾತ್ವಿಕ ಫಲವನ್ನು ಸಮಾಜದ ಉನ್ನತಿಗೆ ಉದ್ಧಾರಕ್ಕೆ ಧಾರೆಯೆರೆವೆನು; ಸೂರೆಗೈವೆನು. ಈ ಲೋಕದಲ್ಲಿ ನನ್ನದೆಂಬುದು ಯಾವುದು ಇಲ್ಲ. ಸಮಾಜದ ಸೇವಾ ಸೌಭಾಗ್ಯವೊಂದೇ ನನ್ನದು. ಸಮಾಜದ ಅಜ್ಞಾನ ವಿಮುಕ್ತಿಯೆ

ನನ್ನ ವಿಮುಕ್ತಿ ಸಮಾಜದ ವಿದ್ಯಾ ಪ್ರಾಪ್ತಿಯೆ ನನ್ನ ಪ್ರಾಪ್ತಿ ಸದ್ಧರ್ಮದ ಉದ್ಧಾರವೆ ನನ್ನ ಉದ್ಧಾರ, ಶಿವಯೋಗದ ಅಭ್ಯುದಯವೆ ನನ್ನ ಅಭ್ಯುದಯ. ನನಗೆ ಇದಕ್ಕಿಂತ ಬೇರೆ ಜೀವಿತ ಲಕ್ಷ್ಯವಿಲ್ಲ. ಇದಕ್ಕೆ ನಿನಗಿಂತ ಬೇರೆ ಸಾಕ್ಷ್ಯವಿಲ್ಲ. ಸಮಾಜಕ್ಕಾಗಿ ಆತ್ಮಶಕ್ತಿಯನ್ನು ಪ್ರಜಾಶಕ್ತಿಯನ್ನು ಕೇಂದ್ರೀಕರಿಸಿ ಕೆಲಸ ಮಾಡುವೆನು. ಸೊಗಸು ನೋಡೆನು. ಸಮಾಜೋನ್ನತಿಯ ಸೊಗಸೆ ನನ್ನ ಸೊಗಸು. ಸಮಾಜದ ಚಿರಾಯುಷವ ನನ್ನ ಆಯುಷ. ಸಮಾಜ ಸೇವೆಗೈದು ಒಂದು ದಿನ ಬದುಕಿದರೆ ಸಾಲದೇನು? ಅದು ಸಾವೇನು ? ಅದುವೆ ಮಹಾನವಮಿಯಾಗದೇನು ?

 

ಯೋಗೀಶ್ವರ ! ನೀನು ಅನುಗ್ರಹಿಸಿದ ಬುದ್ಧಿಶಕ್ತಿಯಿದೆ; ಶುದ್ಧಿ ಸಂಪತಿಯಿದೆ. ಸಮಾಜವನ್ನು ಸಂಯುಕ್ತಗೊಳಿಸುವ ಸಿದ್ಧಿಯೊಂದನು ಆಶೀರ್ವದಿಸು. ಇದೊ ನೀನು ಆಶೀರ್ವದಿಸಿದೆಯಾದರೆ ಈಗಳೆ ಇಲ್ಲಿಂದ ಹೊರಡುವೆನು. ತಪದ ತಳುಮೆ ಸಾಕಿನ್ನು. ಸಮೆದು ಸಣ್ಣಾಗುವ ಸಮಾಜದ ಆರ್ತತೆಯ ಕರೆ ಗಾಳಿಗೂಡಿ ಬರುತಿದೆ. ಇನ್ನಿರಲಾರೆ,  ಹಿಸಲಾರೆ, ಎಲ್ಲಿ ದೇವ, ಆಶ್ವಾಸನವೀಯದೆ ಎಲ್ಲಿ ಅಡಗಿರುವೆ ? ಅಡಗಿದ ಬೆಡಗನುಬಿಟ್ಟು ಬಲುಹನು ತೋರೆಯಾ ? ಬಾರೆಯಾ ?

ಯಾವ ರೂಪದಿಂದ ಬರಲೆಂದು ಚಿಂತಿಸುವಿಯಾ ? ಯಾವ ರೂಪಾದರೇನು ? ಯಾವ ಮುಖವಾದರೇನು | ನಿನ್ನ ಕರುಣೆಯೆ ನನಗೆ ಮುಖ್ಯ. ಅದು ಯಾವ ರೂಪದಿಂದಲಾದರು ಬರಲಿ, ಅದು ನಿನ್ನದೆ, ನೀನಲ್ಲದೆ ಇನ್ನಾರು ಕರುಣಿಸುವರು ? ಇನ್ನಾರ ಕರುಣೆಯೂ ನನಗೆ ಬೇಕಿಲ್ಲ. ನಾನು ನಿನ್ನ ಕಂದ. ನೀನು ನನ್ನ ತಂದೆ, ನಿನ್ನ ಕಂದನ ಮೇಲೆ ನಿನಗೆ ಕರುಣೆಯಿಲ್ಲವೆ ? ನಿನ್ನ ಕಂದನನ್ನು ಕಂಡವರ ಕರುಣೆಗೆ ಒಪ್ಪಿಸುವುದು ನಿನ್ನ ಧರ್ಮವೆ ? ಅದೇ ನನ್ನ ಕರ್ಮವೆ ? ಅಲ್ಲದಿರೆ ಬೇಗ ಬಾ ! ಕರುಣ ಕಿರಣ ಕಾಣಿಸು, ಕರುಳ ಶಂಖೆಯ ಮಾಣಿಸು. ಸಮಾಜ ಸೇವೆಗೆ ಸಾಗಿಸು ಎಂದು

ಆರ್ತತೆಯಲಿ ಆಲಾಪಿಸುವರು; ಆತ್ಮೀಯತೆಯಲ್ಲಿ ಆಹ್ವಾನಿಸುವರು.

 

ಹೀಗಿರಲು ಒಂದು ದಿನ ಹುಣ್ಣಿಮೆ, ಹಾಲು ಚೆಲ್ಲಿದಂತೆ ಬೆಳದಿಂಗಳು ಬಿದ್ದಿತ್ತು. ಸ್ವಾಮಿಗಳವರು ಒಂದು ಎತ್ತರದ ಕಲ್ಲು ಬಂಡೆಯ ಮೇಲೆ ಕುಳಿತು ಜೀವನ ಜಂಜಡಕ್ಕೆ ಪರಿಹಾರವೇನೆಂದು ಯೋಚಿಸುತ್ತಿದ್ದರು. ಮನದ ಮಾಯಾ ಪಟಲ ಹರಿವುದೆಂದಿಗೆ  ಎಂದು ಬೇಗುದಿಗೊಳ್ಳುತ್ತಿದ್ದರು. ಅಜ್ಞ ಸಮಾಜಕ್ಕೆ ಅರಿವು ತರುವ ಶಕ್ತಿ ಮೈಗೂಡಿಬರುವುದಿನ್ನೆಂದಿಗೆ ಎಂದು ಚಿಂತಿಸುತ್ತಿದ್ದರು. ಗುರುವೆ, ಕಲ್ಪದ ತರುವೆ ! ಇನ್ನೂ ನಿನ್ನ ಮನಸ್ಸು ಕರಗಲಿಲ್ಲವೆ ? ಅಂದು ನಿನ್ನ ಕರುಣಾಜನಕ ಕೋಮಲ ಕಂಠದಿಂದ ಕುಮಾರಾ ಎಂದು ಕೂಗಿದೆ. ಕೈವಿಡಿದು ತಲೆದಡವಿ ನೇವರಿಸಿದೆ. ಇಂದೆಲ್ಲಿ? ಕಾಣದಂತೆ ಏಕೆ ಇರುವೆ ? ತಲ್ಲಣಿಸಿದ ಹೃದಯಕ್ಕೆ ತಣ್ಣೀರು ಎರೆಯಲಾರೆಯಾ ? ಕಾಣದ ಕಣ್ಣಿಗೆ ಕಿರಣವ ತೋರಲಾರೆಯಾ ? ಎಂದೆನ್ನುವಷ್ಟರಲ್ಲಿ ಅವರ ಕಣ್ಮುಂದೆ ಕೋಲ್ಮೀಂಚು ಮಿಣುಕಿದಂತಾಯಿತು. ಮೈಜುಮ್ಮೆಂದಿತು. ತೆರೆದ ಕಣ್ಣುಗಳು ತೆರೆದಂತೆಯೆ ಇದ್ದವು. ಅವುಗಳ ಮುಖದಲ್ಲಿ ಆ ಮಿಂಚಿನ ತೇಜಸ್ಸು ಹೊರಟು ಹೋಗಿ ಅಂತರಂಗವನ್ನು ಆವರಿಸಿ ಬಿಟ್ಟಿತ್ತು. ಅಪಾರ ಬೆಳಗ ಮೂಡಿತ್ತು. ಚಂದಿರನು ಹೊರಗಿನ ಸೃಷ್ಟಿಯನ್ನು ಬೆಳಗಿದಂತೆ ಚಿಜ್ಯೋತಿಯು ಚಿತ್ತದ ಪ್ರಪಂಚವನ್ನು ಬೆಳಗಿತು. ವಿಲಕ್ಷಣವಾದ ಶಕ್ತಿ ಮೈಗೂಡಿತು. ಯೋಚಿಸುತ್ತಿರುವ ಯೋಚನೆಗಳೆಲ್ಲ ಬಯಲಾಗಿ ಆತ್ಮಸ್ಪೂರ್ತಿ ಸ್ಫುರಿಸಿತು. ಹಾಗೆಯೆ ಎದ್ದು ಬಂದು ಹರ್ಷಚಿತ್ತದಿಂದ ನಿದ್ದೆ ಹೋದರು.

 

“ನಿಮಿಷವಾಗಲಿ ನಿಮ್ಮ ನೆನಹು ನಿಂದೊಡೆ ಮುಕ್ತಿ”

 

ಬೆಳಗಾಯಿತು. ಬಾಂದಳದಿ ಜಗಚ್ಚಕ್ಷುವು ಹೊಮ್ಮೂಡಿದನು. ಹೊಂಬೆಳಗ ಹರಡಿದನು. ಮರ ಮಣ್ಣುಗಳ ಹೊನ್ನಾಗಿಸಿದನು. ಹಕ್ಕಿಗಳ ಹಾರಾಡಿಸಿದನು; ಹಾಡಿಸಿದನು.  ತಪಸ್ವಿಗಳಾದ ತೇಜಸ್ವಿಗಳಾದ ಸದಾಶಿವ ಸ್ವಾಮಿಗಳವರು ಆ ಹಕ್ಕಿಗಳ ಹಾಡಿನೊಡನೆ ಹೊರಹೊರಟರು. ತಮ್ಮ ತಾತ್ವಿಕ ತೇಜಸ್ಸನ್ನು ಸಮಾಜದಲ್ಲಿ ಚೆಲ್ಲಿ ಆ ಜಗಚ್ಚಕ್ಷುವಿನ ಕಾರ್ಯ ಕಿಂತಲು ಮಿಗಿಲಾದ ಕಾರ್ಯ ನೆರವೇರಿಸಲು ಕಾಡ ಬಿಟ್ಟು ನಾಡ ಬಾಂದಳದಿ ಮೂಡಲು ಸಾಗಿದರು. ಹಾಡುವ ಹಕ್ಕಿಗಳ ಕಲರವವೆ ಭಾವೀ ಚೈತ್ರಯಾತ್ರೆಗೆ ಜಯಮಂಗಳವಾಯಿತು. ಕಾಡಿನ ಕಿಬ್ಬದಿಯಲ್ಲಿ ಹಾಯ್ದು ಹೋಗುತ್ತಿರುವಾಗ ವನಲತೆಗಳ ಬಗೆಬಗೆಯ ಬಣ್ಣದ ನರುಗಂಪಿನ ಹೂಗೊಂಚಲುಗಳು ಸ್ವಾಮಿಗಳವರ ವಿಶಾಲವಾದ ಎದೆಯ ಮೇಲೆ ಬಾಗಿ ತೂಗುತ್ತಿದ್ದುದು ಹಾರಹಾಕಿ ಕೈ ಮುಗಿಯುವಂತಿದ್ದಿತು.

Related Posts