ಮಾತೆಯ ಆಗಮನ, ಮದುವೆಯ ಆಲೋಚನೆ ಭಾಗ ೬:

ಜ.ಚ.ನಿ

ಮಗನು ಬಂದು ಲಿಂಗದಹಳ್ಳಿಯಲ್ಲಿರುವ ಸಮಾಚಾರವು ತಾಯಿಗೆ ತಿಳಿಯಿತು. ಮಗನನ್ನು ನೋಡದೆ ನಾಲೈದು ವರ್ಷಗಳಾಗಿದ್ದವು. ಮಗನಿಗೆ ಮದುವೆಯ ವಯಸ್ಸು ಪ್ರಾಪ್ತವಾಗಿತ್ತು. ಇವನ್ನೆಲ್ಲ ನೆನೆದು ತಾಯಿ ನೀಲಮ್ಮನವರು ತಮ್ಮ  ತವರೂರಾದ ಲಿಂಗದಹಳ್ಳಿಗೆ ಉತ್ಸುಕತೆಯಿಂದ ಬಂದರು. ಓದಿ ಬಂದ ಮಗನನ್ನು ನೋಡಿ ನಲಿದರು. ಮಗನ ಧೈರ್ಯ ಸಾಹಸಗಳನ್ನು ಮನಸಾರೆ ಕೊಂಡಾಡಿದರು. ‘ಮನೆಯಿಂದ ಕುರುಡುಕಾಸನ್ನು ಅಪೇಕ್ಷಿಸದೆ ನಿನ್ನ ಕುಶಲತೆಯಿಂದ ಅನ್ಯರ ಮನಕರಗಿಸಿ ಅವರ ಆಶ್ರಯ ಪಡೆದು ಇಲ್ಲಿಯವರೆವಿಗೂ ಓದಿಬಂದದ್ದೆ ಒಂದು ಹೆಚ್ಚು. ಅದೇ ನನಗೊಂದು ಸಂತೋಷ. ಅದೇ ನನಗೊಂದು ಸಾವಿರ. ಈ ವಿಷಯದಲ್ಲಿ ನಿನ್ನನ್ನು ಎಷ್ಟು ಕೊಂಡಾಡಿದರು ಕಡಿಮೆ ! ಸಾಕು ನಡೆ. ಇನ್ನು ನೀನು ಮಾಸ್ತರನಾಗಿ ಗಳಿಸುವುದು ಬೇಡ. ಮನೆಗೆ ನಡೆ, ವಯಸ್ಸೂ ಆಗಿದೆ. ಮದುವೆ ಮಾಡಲು ಒಂದು ಕನ್ಯೆಯನ್ನು ನೋಡಿ ನಿಶ್ಚಯಿಸಲಾಗಿದೆ, ಲಗ್ನಮಾಡಿಕೊಂಡು ಮನೆಬಾಳಿನ ಭಾರ ನಿರ್ವಹಿಸುವುದು ನಿನ್ನ ಕರ್ತವ್ಯಕೋಟಿಗೆ ಸೇರಿದ ಮಾತಾಗಿದೆ. ಅದಕ್ಕೆ ಮಗನು ‘ತಾಯಿ, ನೀನು ಹೇಳುವುದೆಲ್ಲ ನಿಜ. ಆದರೆ ಇಷ್ಟು ಬೇಗ ಮದುವೆಯಾಗಲು ನನ್ನ ಮನಸ್ಸಿಲ್ಲ: ಮನೆಗೆ ಬಂದಿರಲು ಇಷ್ಟವಿಲ್ಲ. ಒಂದೆರಡು ವರ್ಷ ಕಳೆದು ಬಂದಲ್ಲಿ ಆಗ ಯಾವುದನ್ನು ಖಚಿತವಾಗಿ ಹೇಳುತ್ತೇನೆ. ಈಗ ಸುಮ್ಮನೆ ಬಲವಂತಿಸಬೇಡ.’ ಎಂದು ಹೇಳಿ ತಾಯಿಯನ್ನು ಸಮಾಧಾನ ಮಾಡಿ ಊರಿಗೆ ಕಳುಹಿಸಿದರು.

ಸದಾಶಿವಯ್ಯನವರು ಎಂದಿಗಿಂತ ಊರಿನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ದಕ್ಷತೆಯಿಂದ ಮಾಡಿಸತೊಡಗಿದರು. ಊರಿನವರಿಗೆಲ್ಲ ಅಚ್ಚುಮೆಚ್ಚಿನವರಾಗಿದ್ದರು. ಅಂದಿನ ಅನಾಗರಿಕತೆಯ  ಕಾಲದಲ್ಲಿಯೂ ಸಹ ಹಳ್ಳಿಯ ಹುಡುಗರು  ಪ್ರೇಮೋತ್ಸಾಹಗಳಿಂದ ಶಾಲೆಗೆ ಬರುತ್ತಿದ್ದರೆಂಬುದು ಶಿಕ್ಷಕರಿಗೆ ಶಿಕ್ಷಣದಲ್ಲಿರುವ ವಿಚಕ್ಷಣತೆಯ ಕುರುಹಲ್ಲವೆ ? ಬುದ್ಧಿಬಲ್ಲವರಿಗೆ ವಿದ್ಯೆ ಕಲಿಸುವುದು ಒಂದು ಹೆಚ್ಚಲ್ಲ. ಏನೂ ತಿಳಿಯದ ಎಳೆ ಕಂದರಿಗೆ ವಿದ್ಯಾಭ್ಯಾಸ ಮಾಡಿಸುವುದು ತುಂಬಾ ಕಷ್ಟದ ಕೆಲಸ.  ಮಕ್ಕಳ ಮನಸ್ಸಿನಂತೆ ಹೋಗಿ ಮಕ್ಕಳನ್ನು ಒಲಿಸಿ ಅಕ್ಕರಿಗರನ್ನು ಮಾಡುವ ಹೊಣೆಗಾರಿಕೆಯ ಕೆಲಸವನ್ನು ಮಾಡಿ ಅನುಭವಿಸಿದವರಿಗೆ ಗೊತ್ತು ಅದರ ಕಷ್ಟ- ಕಾರ್ಪಣ್ಯ, ಪ್ರಾಥಮಿಕ ಶಿಕ್ಷಣವು ನಿಜಕ್ಕು ತುಂಬಾ ಪ್ರಯಾಸಕರವಾದುದು. ಮಕ್ಕಳನ್ನು ಮುಂದಿನ ಮಹಾಜನಗಳನ್ನಾಗಿ ಮಾಡುವ ಮೊದಲನೆಯ ಹೊಣೆಗಾರಿಕೆಯದು. ಅದನ್ನು ತೃಪ್ತಿಕರವಾಗಿ ತಾಳ್ಮೆಯಿಂದ ಜಾಣ್ಮೆಯಿಂದ ನೆರವೇರಿಸುವವನೆ ನಿಜವಾದ ಶಿಕ್ಷಕ, ಸದಾಶಿವಯ್ಯನವರು ಅಂತಹ ಸಮರ್ಥರಾಗಿದ್ದರು. ಸೂಕ್ತ ಶಿಕ್ಷಣ ಕೊಡುತ್ತಿದ್ದರು.

ಊರಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಂತೆ, ತಾವೂ ಸಹ ವೇದಾಂತ ವಿದ್ಯಾವಂತರಾಗುತ್ತಿದ್ದರು. ಅದಾಗಳೆ ಅದೆಷ್ಟೋ ಆಗಿದ್ದರು. ಅಷ್ಟಕ್ಕೆ ನಿಲ್ಲಿಸದೆ ವೇದಾಂತ ಜಿಜ್ಞಾಸೆಯನ್ನು ಮುಂದುವರಿಸಿದ್ದರು. ನಿಜಗುಣರ ಗ್ರಂಥಗಳನ್ನು ಬಿಟ್ಟು ನಿಮಿಷವೂ ಇರುತ್ತಿರಲಿಲ್ಲ. ೧. ಕೈವಲ್ಯ ಪದ್ಧತಿ, ೨. ಪರಮಾನುಭವ ಬೋಧೆ, ೩. ಪರಮಾರ್ಥ ಗೀತೆ, ೪. ಪರಮಾರ್ಥ ಪ್ರಕಾಶಿಕೆ, ೫. ಅನುಭವಸಾರ, ೬. ವಿವೇಕ ಚಿಂತಾಮಣಿ ಇವೇ ಅವರ ಸೊತ್ತು. ಇವೇ ಅವರ ಗೊತ್ತು. ಅವುಗಳಿಗಾಗಿ ಅವರ ಮನಸ್ಸು ಮಾರುಹೋಗಿತ್ತು. ಆ ಆರು ಗ್ರಂಥಗಳ ಅವರಿಗೆ ಆರು ಮಂದಿ ಆಪ್ತ ಸ್ನೇಹಿತರಾಗಿದ್ದರು. ಯಾವಾಗಲೂ ಅವುಗಳಡೊನೆಯೆ ಕಾಲ ಕಳೆಯುತ್ತಿದ್ದರು. ರಾತ್ರಿ ಹನ್ನೆರಡು ಹೊಡೆಯುವವರೆವಿಗೂ ಬಿಡದೆ ಅವನ್ನು ಓದುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಸಮಾಳದ ಬಸವಯ್ಯನವರಲ್ಲಿಗೆ ಹೋಗಿ ವಿಚಾರವಿನಿಮಯ ಮಾಡುತ್ತಿದ್ದರು; ವಿಶೇಷ ವಿಷಯಗಳನ್ನು ಪರಿಗ್ರಹಿಸುತ್ತಿದ್ದರು. ಆರು ಗ್ರಂಥಗಳಲ್ಲಿ ಮೊದಲನೆಯದಾದ ಕೈವಲ್ಯ ಪದ್ಧತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಓದುತ್ತಿದ್ದರು. ಪ್ರತಿಪದ್ಯದಲ್ಲಿ ಬುದ್ಧಿ ಮನಸ್ಸುಗಳನ್ನಿಟ್ಟು ಅರ್ಥವಿಸುತ್ತಿದ್ದರು. ಅವುಗಳಲ್ಲಿ ಈ ಪದ್ಯವು ಅವರ ಮನಸ್ಸಿನಲ್ಲಿ ನೇರವಾಗಿ ನಾಟಿತು.

ಸುಮ್ಮನಾಗದು ಅರಿವಿನಿಂದವೆ ಮುಕುತಿ

 ನೆಮ್ಮಿ ಲೇಸೆನಿಸುವ ಗುಣಗಣವಿಲ್ಲದವನಿಗೆ

ಗುರುಪಾದ ಸೇವೆ ಶರಣರ ಸಂಗ ಹರಪೂಜೆ

ಕರುಣ ವಿನಯ ನಿಜಸಮಯ ನಿಷ್ಠೆ

ವಿರತಿ ವಿವೇಕ ವಿದ್ಯೆ ಶಮೆ ದಮೆ ಸತ್ಯ ಧರ್ಮ

ವರಭಕ್ತಿ ನೀತಿಗಳ ಬಲವಿಲ್ಲದವನಿಗೆ

 ನಿಗಮಾಗಮದೊಳು ನಂಬುಗೆ ನಿತ್ಯವಿಧಿಗಳ

 ನಗಲದೆಚ್ಚರು ದೇಹದೊಳು ವಿಮೋಹ

 ಜಗದಪವಾದದೆಡೆಯೊಳು ಭೀತಿ, ಸುಜನರ

ಬಗೆಗೊಳಿಸುವ ನಡೆನುಡಿಯಿಲ್ಲದವನಿಗೆ

ಕಾವನಲರಂಬಿಗೆದೆಗೊಡದ ಬಲುವೆ ಜೀವ

 ಭಾವವೆಳ್ಳನಿತು ದೋರದಮಳಯೋಗ

 ತೀವಿದನುಭವ ಸುಖರೂಪನಾದ ಶಂಭುಲಿಂಗ

ವಾವರಿಸಿ ಕೀಟಭೃಂಗನ್ಯಾಯವಿಲ್ಲದವನಿಗೆ

ಈ ಪದ್ಯದ ಪ್ರತಿಶಬ್ದದ ರೂಪವೆ ತಾವಾಗಲು ಸದಾಶಿವಯ್ಯನವರು ಸಂಪೂರ್ಣ ಮನಸ್ಸು ಮಾಡಿದರು. ಈ ಪದ್ಯಬೀಜವು ಅವರ ಮನೋಭೂಮಿಕೆಯಲ್ಲಿ ಮೊಳಕೆಯಾಗಿ ಮೂಡಿತು. ಒಂದೆರಡು ವರ್ಷಗಳಲ್ಲಿ ಹೆಮ್ಮರವಾಗಿ ಚೆನ್ನಾಗಿ ಬೇರೂರಿತು. ಹೂ ಹಣ್ಣಾಗಿಸುವ ಬಯಕೆ ಹೆಬ್ಬಯಕೆಯಾಗಿ ನೆಲೆನಿಂತಿತ್ತು.

 ಈ ಸಮಯದಲ್ಲಿ ಇತ್ತ ತಾಯಿಯವರು ಮಗನ ಮದುವೆಯ ಮಾತನ್ನು ಮತ್ತೆ ನೆನಪಿಸಿಕೊಂಡರು. ನೆನವಿನೊಡನೆ ಬಡತನದ ಬಾಳಿನ ಚಿತ್ರವೂ ಎದುರು ನಿಂತಿತು. ಅದು ರಕ್ತವಿಲ್ಲದ ಚಿತ್ರ, ಶಕ್ತಿಯಿಲ್ಲದ ಚಿತ್ರ, ನೋಡಲಾಗದು, ನಿತ್ತರಿಸಲಾಗದು. ಬಡತನದ ಆ ಭಯಾನಕ ಚಿತ್ರ ಮದುವೆಯ ಮಾತನ್ನು ನಸುಹಿಂದೂಡಲೆಳಸಿತು. ಆದರೆ ಮಾತೆಯ ಮನಸ್ಸು ಅದಕ್ಕೆ ಒಳಪಡಲಿಲ್ಲ. ಈ ಬಡತನ ನಮಗೆ ಎಂದಿನಿಂದಲು ಇದ್ದದ್ದೆ: ಯಾವ ಕಾಲಕ್ಕು ತೀರದ್ದೆ : ಏನಾದರಾಗಲಿ ಮಗನ ಮದುವೆಯನ್ನು ಈ ಸಲ ನಿಲ್ಲಿಸಬಾರದು. ನೆರವೇರಿಸಿಯೇ ತೀರಬೇಕು.  ಬಡತನಕ್ಕೆ ಮಗನ ಮದುವೆಯನ್ನು ಮಾಡಿದಿರಲು ಸಾಧ್ಯವೆ ? ಅಲ್ಲದೆ ಮಗನು ಸಹ ಆ ದಿನ ಒಂದೆರಡು ವರ್ಷ ಬಿಟ್ಟು ಬಾ’ ಎಂದು ಹೇಳಿದ್ದಾನೆ. ಅದರಂತೆ ಎರಡು ವರ್ಷಗಳು ಕಳೆದವು. ಅಂದು ಕೊಟ್ಟು ಬಂದ ಮಾತನ್ನು ನೆರವೇರಿಸದೆ ಇರುವುದು ಹೇಗೆ ? ಮಗನಾದರೂ ಏನೆಂದುಕೊಂಡಾನು? ಏನಾದರಾಗಲಿ, ಈ ಸಲ ಮದುವೆ ಮಾಡಿಬಿಡುವುದೇ ನಿರ್ಧಾರ ಎಂದು ಆಲೋಚಿಸಿದಳು.

ಆದರೆ ನೀಲಮ್ಮ ತಾಯಿಯವರು ಎಣಿಸಿದಷ್ಟು ಮಗನ ಮದುವೆ ಸುಲಭವಾಗಿರಲಿಲ್ಲ. ಹಣ ಹೇಗಾದರು ಮಾಡಬಹುದಾಗಿತ್ತು. ಮಗನ ಮನಸ್ಸನ್ನು ಒಪ್ಪಿಸುವುದು ಆಗದ ಕೆಲಸವಾಗಿತ್ತು. ಈಚೆಗೆ ಉಂಟಾದ ಮಗನ ಮನದ ಉಪರತಿಯ ವಿಷಯ ಅವರಿಗೇನು ಗೊತ್ತು? ಸರ್ವಸಾಮಾನ್ಯ ಮಕ್ಕಳಂತೆ ತನ್ನ ಮಗನು ಒಪ್ಪಬಹುದೆಂದೆ ಅವರ ತಿಳುವಳಿಕೆ; ಹೃದಯ ಹರಕೆ, ಆ ಮನದ ಬಯಕೆಯಿಂದ ತಾಯಿ ಮಗನ ಬಳಿಗೆ ಬಂದಳು.

ಬಂದು ಮಗನನ್ನು ಕರೆದರು. ಮದುವೆಯ ಮಾತೆತ್ತಿದರು. ಮಗನು ನನಗೆ ಮನೆಯೂ ಬೇಡ, ಮದುವೆಯೂ ಬೇಡ’ ಎಂದನು. ಆ ಮಾತನ್ನು ಕೇಳಿ ಮಾತೆಯ ಮನಸ್ಸು ಕಸಿವಿಸಿಗೊಂಡಿತು ಕಳವಳಗೊಂಡಿತು. ಚಿತ್ತಸ್ಥೈರ್ಯ ತಂದುಕೊಂಡು ಮಗನ ಮನಸ್ಸು ಒಲಿಸಲು ಸಾಹಸ ಮಾಡಿದರು; ಸಾಧ್ಯವಿದ್ದಷ್ಟು ಹೇಳಿದರು. ಮತ್ತೊಬ್ಬರಾದರೆ ಮನಸ್ಸು ಆಗಳೆ ತವಕಿಸುವಷ್ಟರ ಮಟ್ಟಿಗೆ ಹೇಳಿದರು. ಹೇಳಿದರೇನು ಪ್ರಯೋಜನವಾಗಲಿಲ್ಲ. ಪ್ರತಿಯಾಗಿ ಅಮ್ಮಾ! ಅದಾಗದು. ಅಜೀರ್ಣ ಆದವನಿಗೆ ಅಮೃತವು ವಿಷವಾಗುವುದಿಲ್ಲವೇನಮ್ಮ. ಹೀಗಿರುವಾಗ ವಿಷ ಕುಡಿಸಿದರೇ ಬದುಕವರೇನಮ್ಮ ಇರುಳು ಕಂಡ ಬಾವಿಯಲ್ಲಿ ಹಗಲು ಬೀಳುವರೇನಮ್ಮ. ಬೀಳದವರನ್ನು ಬಲವಂತದಿಂದ ನೂಕಿ ಬೀಳಿಸುವರೇನಮ್ಮ! ಅದರಲ್ಲಿಯೂ ತಾಯಿಯಾದವರು ಈ ಹಾಳುಭಾವಿಯಲ್ಲಿ ತಬ್ಬುವರೇನಮ್ಮ! ಬೇಡ, ಅಂತಹ ಅಕರುಣೆಯ ಅಕೃತ್ಯವನ್ನು ಮಾಡಬೇಡ. ಆಲೋಚಿಸದೆ ದುಡುಕಬೇಡ, ನೀನು ಹೇಳುವುದು ಮೂರು ದಿನದ ಸಂಸಾರ, ನಾಲ್ಕನೆಯ ದಿನಕ್ಕೆ ದುಃಖದ ಸಾಗರ. ಇದರಲ್ಲಿಲ್ಲ ಸತ್ಯಸುಖದ ಸಾರ, ಇದರಲ್ಲಿ ನನ್ನನ್ನು ಸರ್ವಥಾ ಕೆಡುವ ಬೇಡ, ಈ ನಶ್ವರವಾದ ಶರೀರದಿಂದ ನಿತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕತ್ತಲೆಯ ಕೋಣೆಯಲ್ಲಿ ಕೊನೆಯಿಲ್ಲದೆ ಕಾಂತಿಯನ್ನು ಹಚ್ಚಬೇಕಾಗಿದೆ. ಆ ಅಚ್ಚಳಿಯದ ಬೆಳಗಿನಲ್ಲಿ ಅನೇಕ ಜೀವರು ಕಣ್ಣರಳಿಸಬೇಕಾಗಿದೆ. ಬಾಳ ಬಗೆಗಳನ್ನು ಕಣ್ಣಾರ ಕಾಣಬೇಕಾಗಿದೆ. ಅದಿರಲಿ ಈಗ ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡಿತವ, ಕಾಮನು ಮತ್ತೇಭವಿ ಕ್ರೀಡಿಗವ ಮಾಡಹತ್ತಿದ್ದಾರೆ. ಇವರನ್ನು ಸೆದೆಬಡೆಯಲು ಕಾಲಾರಿಯು ಕಾಮಾರಿಯು ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯ ಹಂಬಲಿಸುತ್ತಿದೆ; ಹಾತೊರೆಯುತ್ತಿದೆ. ಅದಕ್ಕಾಗಿಯೇ ನಿನ್ನನ್ನು ನಿರೀಕ್ಷಿಸಿಕೊಂಡಿದ್ದೆನು. ನೀನು ಬಂದದ್ದು ಲೇಸಾಯಿತು ಮಾತೆ, ಜನ್ಮದಾತೆ ! ಇಲ್ಲಿಯವರೆವಿಗೂ ನನ್ನ ಸರ್ವಸ್ವ ನೀನಾಗಿದ್ದೆ. ನನ್ನ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಟ್ಟೆ. ನೀನು ಸುಮ್ಮನಿರದೆ ನನ್ನನ್ನು ಊರಿಗೆ ಕರೆಯಿಸಿಕೊಂಡು ಮನೆಯ ಬಾಳಿಗೆ ನೂಕಿದ್ದರೆ ನಾನೆಲ್ಲಿ ಇಷ್ಟಾದರೂ ಓದುತ್ತಿದ್ದೆನು. ಈಗ ಓದಿದ್ದು ನಿನ್ನ ಕೃಪೆ. ಈಗ ಅರಿತಿದ್ದುದು ನಿನ್ನ ಆಶೀರ್ವಾದ. ತಾಯೆ, ತಿರುಗಿ ಆ ಸಂಸ್ಕೃತಿಗೆ ಎಳೆಯಬೇಡ, ಮುನ್ನೋಡುವ ಕಾಲಿಗೆ ತೊಡಕ ಸುತ್ತಬೇಡ. ನಿನಗೆ ಇನ್ನೂ ಒಬ್ಬ ಹಿರಿಯ ಮಗನು ಇದ್ದಾನೆ. ಅವರಿಂದ ಸಂಸಾರ ನಿರ್ವಹಣೆಯಾಗುತ್ತದೆ. ನನ್ನನ್ನು ವೃಥಾ ಆಶಿಸಬೇಡ, ಶೋಕಿಸಬೇಡ, ಎಷ್ಟಾದರು ತಾಯಿ ಋಣ ದೊಡ್ಡದು. ಅದನ್ನು ತೀರಿಸಿದಲ್ಲದೆ ಮುಂದಾರಿಯಿಲ್ಲ. ಅದಕ್ಕಾಗಿ ಈ ಒಂದೆರಡು ವರ್ಷಗಳಲ್ಲಿ ಶಿಕ್ಷಕವೃತ್ತಿಯಿಂದ ಸಂಪಾದಿಸಿದ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ. ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀನು ತಾಯಿಯೆಂಬ ಮಮತೆ ನನ್ನಲ್ಲಿಯು ನಾನು ಮಗನೆಂಬ ಮಮತೆ ನಿನ್ನಲ್ಲಿಯು ಖಂಡಿತವಾಗಿ ಇರಕೂಡದು. ಸಂತೋಷವಾಗಿ ಹರಸು” ಎಂದು ಹೇಳಿ ನಮಸ್ಕರಿಸಿ ಹಾಗೆಯೇ ಹೊರಟು ಬಿಟ್ಟರು; ದೂರ ಹೋದ ಮೇಲೆ ಕಣ್ಣಿಗೆ ಕಾಣದಂತಾದರು. ಜನತಾ ಜನಾರ್ದನನು ಕಡೆಗು ತನ್ನ ಭಿಕ್ಷವನ್ನು ಕೊಂಡೊಯ್ದೆ ಬಿಟ್ಟನು.   

 ತಾಯಿ ನೀಲಮ್ಮನವರಿಗೆ ದಿಕ್ಕು ತೋಚದಂತಾಯಿತು. ತಾನು ಯೋಚಿಸಿದ ಯೋಚನೆಗಳನ್ನೆಲ್ಲ ಕನಸಿನಲ್ಲಿ ಕಂಡಂತಾಯಿತು. ಕಣ್ಣಿಗೆ ಕತ್ತಲು ಕವಿದಂತಾಯಿತು. ತುಂಬು ಹರೆಯದ ಹುಡುಗ ಹೀಗೆಲ್ಲ ಮಾಡುತ್ತಾನೆಂದು ಅವಳು ಬಯಸಿರಲಿಲ್ಲ; ಭಾವಿಸಿರಲಿಲ್ಲ. ಅನಿರೀಕ್ಷಿತವಾಗಿ ಮರಕ್ಕೆ ಸಿಡಿಲು ಬಡಿದಂತಾಯಿತು. ಹೃದಯ ತಳಮಳಿಸಿತು. ಮನಸ್ಸು ಮರಗಿತು. ಕಣ್ಣೀರು ಕಾಲುವೆಯಾಗಿ ಹರಿಯಿತು. ಕಾರ್ಗತ್ತಲೆ ಕವಿದಂತಾಯಿತು. ಮುಂದಾಲೋಚನೆ ಹರಿಯದಂತಾಯಿತು. ಬಾಳಿನ ಭಾಗ್ಯ ಸಾಗಿ ಹೋದಂತಾಯಿತು. ಹರುಷದ ಹೊಳೆ ಹರಿದು ಹೋದಂತಾಯಿತು. ಬೆಳಗುವ ಜ್ಯೋತಿ ನಂದಿದಂತಾಯಿತು. ಕೊನರುವ ಮರ ಕಮರಿದಂತಾಯಿತು. ಈ ದುರ್ದಮ್ಯ ವಾತಾವರಣದಲ್ಲಿ ಕೊಂಚಕಾಲ ಆ ತಾಯಿ ಅಚಲದೆ ಕುಳಿತಳು. ಬಾಹ್ಯಸ್ಮೃತಿಯಿಲ್ಲದಾದಳು. ಆಮೇಲೆ ಎಚ್ಚೆತ್ತು ನಿಡುಸುಯ್ದು ನೋಡುತ್ತಾಳೆ. ಕುಮಾರನಿಲ್ಲ. ಶೂನ್ಯವಾದ ಮನೆ. ಮೌನವಾತಾವರಣ. ಏನನ್ನು ನೋಡುವುದು, ಯಾರನ್ನು ಕೇಳುವುದು? ಸಾಗಿ ಹೋದ ಕುಮಾರನನ್ನು ಅಗಲಿ ಹೋದ ಕುಮಾರನನ್ನು ಕರೆದು ತಂದು ತೋರುವರಾರು ? ತಾನು ಹೆತ್ತ ಕುಮಾರನನ್ನು ತನ್ನ ಕಣ್ಣಮುಂದಿದ್ದ ಕುಮಾರನನ್ನು ಕೊಂಡೊಯ್ದವರಾರು? ಸ್ವಪ್ನದ ಸಾಧುವೆ? ಜಾಗೃತದ ಜೋಗಿಯೆ? ಇದೇನು ಜಾದು ಆಟವೆ? ಮಾಯೆ ಮಾಟವೇ? ಯಾವ ಜಾಯಮಾನವಿದು? ಕಾಲ ಜರಡಿಯಲ್ಲಿ ಪತಿದೇವರು ಮಾವಂದಿರು ಸೋಸಿ ಹೋದರು. ಜನತಾ ಜೋಗಿಯ ಜೋಳಿಗೆಗೆ ಮಗನು ಮಾರುಹೋದನು. ಕಣ್ಣಿನ ಹಬ್ಬ ಕಳೆದುಹೋಯಿತು. ಇಲ್ಲಿದ್ದು ಮಾಡುವುದೇನು ಎಂದು ನಿರ್ವಾಹವಿಲ್ಲದೆ ನಿಧಾನವಾಗಿ

ಎದ್ದು ಊರದಾರಿ ಹಿಡಿದಳು. ದಾರಿಯುದ್ದಕ್ಕೆ ಆ ತಾಯಿಯ ಕೋಮಲ ಹೃದಯದಲ್ಲಿ ಚಿಂತೆ ವ್ಯಥೆ ಕಥೆ ತಾಂಡವಾಡಿದವು. ತೀರದ ನೋವಿನಿಂದ ನೊಂದಳು. ತಾಗದ ಉರಿಯಿಂದ ಬೆಂದಳು. ಹಾಗು ಹೀಗು ಮನೆ ಬಂದು ಸೇರಿದಳು. ಮಕ್ಕಳನ್ನು ನೋಡಿ

ಮತ್ತೆ ದುಃಖ ಇಮ್ಮಿಗಿಲಾಯಿತು. ನಡೆದುದನ್ನೆಲ್ಲ ತೋಡಿದಳು. ತನ್ನ ದೌರ್ಭಾಗ್ಯವನ್ನು ಬಿಚ್ಚಿ ತೋರಿದಳು; ಮಕ್ಕಳನ್ನು ಅತ್ತು ತೋರಿದಳು. ದುಃಖದಲ್ಲಿ ಮುಳುಗಿಸಿದಳು. ಅಂದಿನ ದಿನ ಆ ಮನೆಯೆ ಶೋಕಸಾಗರದಲ್ಲಿ ಮುಳುಗಿದಂತಿತ್ತು. ಅವರಿಗೇನು ಗೊತ್ತು ಹೀಗಾದುದು ಮುಂಬೆಳಸಿನ ಬಿತ್ತು ಎಂಬುದು. ಬಿತ್ತಿದ ಬೀಜ ಕೈ ಬಿಟ್ಟುಹೋಯಿತೆಂದು ಮರುಗಿದಂತಾಯಿತು; ಕೊರಗಿದಂತಾಯಿತು. ಪ್ರೇಮ ಕುರುಡೆಂಬ ಮಾತು ಸಾರ್ಥಕವಾಗಬೇಕಲ್ಲವೆ? ಸಂಭವವಾಗಬೇಕಲ್ಲವೆ?

ಸದಾಶಿವಯ್ಯನವರು ಸತ್ಯ ಸಂಕಲ್ಪದಿಂದ ಕಾಯಕಷ್ಟದಿಂದ ಸಂಪಾದಿಸಿ ಕೊಟ್ಟ ಆ ಸ್ವಲ್ಪ ಸಂಪದವೆ ಮನೆತನದ ಮೂಲನಿಧಿಯಾಯಿತು. ಅದರಿಂದಾಗಿ ಮನೆಯ ಬಾಳು ಯಾವ ತೊಂದರೆಯಿಲ್ಲದೆ ಸಾಗಿತು. ವಿವೇಕಾನಂದರು ತಮ್ಮ ಮನೆಯಲ್ಲಿರುವ ಅನ್ನ ಬಟ್ಟೆಗಳ ಕೊರತೆಯನ್ನು ಗುರು ಮುಖಾಂತರ ಕೇಳಿ ಪಡೆದರು. ನಮ್ಮ ಸದಾಶಿವ ಸ್ವಾಮಿಗಳವರು ತಮ್ಮ ಕಷ್ಟಾರ್ಜಿತವನ್ನೇ ಕೊಟ್ಟು ಹರಿಸಿದರು; ಕಷ್ಟ ಹರಿಸಿದರು. 

 

Related Posts