ವಿಶಿಷ್ಠ ವ್ಯಕ್ತಿತ್ವದ ಶ್ರೀ ಆರ್.ಎಸ್.ಕಲ್ಯಾಣಶೆಟ್ಟರು. (ಮಮದಾಪೂರ) .ಆಯ್.ಪಿ.ಎಸ್.(ನಿ) (೧೯೨೭-೨೦೨೩)

ಲೇಖಕ: ಶ್ರೀಕಂಠ.ಚೌಕೀಮಠ

ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

೨೦೦೭ರಲ್ಲಿ ನಾನು ಬೆಂಗಳೂರಿನಲ್ಲಿದ್ದಾಗ ಬಸವಣ್ಣನವರ ಕುರಿತು ಒಂದು ವಿವಾದಾತ್ಮಕ ಪುಸ್ತಕ “ಆನುದೇವಾ ಹೊರಗಣದವನು” ಪ್ರಕಟಣೆಯ ವಿರುದ್ದ ಹೋರಾಟದಲ್ಲಿ ಭಾಗಿಯಾಗಿದ್ದೆ. ನಾನು ಬರೆದ ಒಂದು ಲೇಖನ “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಲೇಖನದಲ್ಲಿ ನಾನು ತೋಡಿಕೊಂಡ ಅಳಲು ಮತ್ತು ಬಹಿರಂಗದ ಅಕ್ರೋಶಗಳನ್ನು  ಓದಿದವರೆಲ್ಲ ಆ ಲೇಖನದ ಪರ-ವಿರೋದದ ನಿಲುವು ವ್ಯಕ್ತಪಡಿಸಿ ಪ್ರತಿಕ್ರಿಯಿಸಿದರು .ಆ ಸಂದರ್ಭದಲ್ಲಿ ಬಸವಸಮಿತಿಯ ಕಾರ್ಯಗಳಲ್ಲಿ ಸಕ್ರೀಯರಾಗಿದ್ದ ಶ್ರೀಕಲ್ಯಾಣಶೆಟ್ಟರು ನನಗೆ ದೂರವಾಣಿ ಕರೆಮಾಡಿ ನನ್ನ ಲೇಖನಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿ ನನ್ನ ಪೂರ್ವಾಪೂರ್ವಗಳನ್ನು ವಿಚಾರಿಸಿದರು.ಮಾತಿನ ಮಧ್ಯದಲ್ಲಿ ನಾನು ಬಾಗಲಕೋಟ ತಾಲೂಕಿನ ಹಳ್ಳೂರು ಗ್ರಾಮದವನು ಎಂದು ಹೇಳಿದಾಗ ಅವರು ತಕ್ಷಣ ಗುರುಲಿಂಗಯ್ಯಾ ಚೌಕೀಮಠ ನಿಮಗೇನಾಬೇಕು ಅಂದರು.ಆಶ್ಚರ್ಯಗೊಂಡೆ, ನಾನು ಅವರ ಮಗ ಎಂದು ಹೇಳಿದಕೂಡಲೇ ಬಹಳ ಸಂತೋಷಪಟ್ಟರು ಅವರಿಬ್ಬರೂ ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಹಪಾಠಿಗಳಾಗಿದ್ದವರು ಮತ್ತು ಇಬ್ಬರೂ ಹಾಕಿ ಮತ್ತು ಫೂಟ್ಬಾಲ್‌ ಕ್ರೀಡೆಗಳನ್ನು ಕೂಡಿ ಆಡಿದವರಾಗಿದ್ದರು. ಅವರಿಬ್ಬರ ನಡುವೆ ದೂರವಾಣಿ ಸಂಪರ್ಕವನ್ನು ಮಾಡಿಕೊಟ್ಟಾಗ ತಾಸಿಗೂ ಹೆಚ್ಚು ಮಾತನಾಡಿಕೊಂಡಿದ್ದು ಮತ್ತು ಅವರೀರ್ವರ ಬಾಲ್ಯ ಜೀವನವನ್ನು ಮೆಲಕು ಹಾಕಿದ್ದು ನನ್ನ ಕಣ್ಣೆದುರು ಈಗಲೂ ಹಚ್ಚ ಹಸಿರಾಗಿದೆ.

ಈ ಪರಿಚಯದ ನಂತರ ಶ್ರೀಕಲ್ಯಾಣಶೆಟ್ಟರು ನನಗೆ ಬಹಳ ಆತ್ಮೀಯರಾದರು ಮತ್ತು ನಾನು ಕಂಡಾಗಲೆಲ್ಲ ನನ್ನನ್ನು ಅತ್ಯಂತ ಅಂತಃಕರುಣದಿಂದ ಮತ್ತು ವಾತ್ಸಲ್ಯದಿಂದ ಮಾತನಾಡಿಸುತ್ತಿದ್ದರು. ಬೆಂಗಳೂರಿನ ಪುಟ್ಟಣ್ಣಶೆಟ್ಟಿ ಪುರಭವನದ ಎದರು ಅವ್ಯಾಹತವಾಗಿ ವಿವಾದಿತ ಪುಸ್ತಕದ ವಿರುದ್ಧದ ಪ್ರತಿಭಟನೆಯಲ್ಲಿ ಯಾವಾಗಲೂ ತಮ್ಮ ಜೊತೆಯಲ್ಲಿಯೇ ಕರೆದೊಯ್ಯುತ್ತಿದ್ದರು.ಒಂದು ದಿನ ನನ್ನನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ವಿವಾದಿತ ಪುಸ್ತಕ ಕುರಿತಾದ ಚರ್ಚೆಗೆ ಕರೆದೊಯ್ದಿದ್ದರು. ಆ ಚರ್ಚೆಯಲ್ಲಿ ಮಾತನಾಡುತ್ತಿದ್ದ ಕ.ಸಾ.ಪ ಅಂದಿನ ಅಧ್ಯಕ್ಷರೂ ಹಾಗು ಬಂಡಾಯ ಸಾಹಿತಿಗಳಾದ ಶ್ರೀ.ಚಂಪಾ (ಡಾ. ಚಂದ್ರಶೇಖರ ಪಾಟೀಲ) ಅವರು ಮಾತಿನಮಧ್ಯದಲ್ಲಿ ನಾನು ಬರೆದ ವಿಜಯಕರ್ನಾಟಕ ಪತ್ರಿಕೆಯ ಲೇಖನವನ್ನು ಉಲ್ಲೇಖಿಸಿ ಟೀಕೆಮಾಡಿದರು, ಯಾವನೋ ಒಬ್ಬ ಒಂದು ಲೇಖನ ಬರೆದು ಪತ್ರಿಕೆಯಲ್ಲಿ ಬರೆದರೆ ಅದನ್ನು ಸಮಾಜದ ಒಟ್ಟು ಅಭಿಪ್ರಾಯವೆಂದು ಹೇಳಲಿಕ್ಕಾಗುವದಿಲ್ಲ.ಅಂತಹ ಲೇಖನಗಳನ್ನು ಕಸದತೊಟ್ಟಿಗೆ ಬೀಸಾಕಬೇಕು ಎಂದು ವೀರಾವೇಷದಿಂದ ಮಾತನಾಡತೊಡಗಿದರು. ಶ್ರೀಕಲ್ಯಾಣಶೆಟ್ಟರು ತಕ್ಷಣ ಎದ್ದು ನಿಂತು ಚಂಪಾ ಮಾತಿಗೆ ಪ್ರತಿರೋಧವ್ಯಕ್ತಪಡಿಸಿ “ಆ ಲೇಖನಾ ಬರದ ಹುಡುಗ ನನ್ನ ಜೊತಿ ಕುಂತಾನ,ಚರ್ಚೆ ಮಾಡೂದಿದ್ರ ಆರೋಗ್ಯಪೂರ್ಣ ಚರ್ಚಾ ಮಾಡ್ರಿ,ಇಲ್ಲದಿದ್ರ ನಿಲ್ಲಿಸಿರಿ” ಅಂದರು ಅವರು ಹಾಗೆ ಅಂದದ್ದೇ ತಡ ಚರ್ಚೆಯಲ್ಲಿ ಭಾಗವಹಿಸಿದ ಬಸವದಳದ ಶ್ರೀ ದಯಾನಂದಸ್ವಾಮಿಗಳು ವೇದಿಕೆಯತ್ತ ನುಗ್ಗಿ ಕಾಗದಗಳನ್ನು ಹರಿದು ಚಂಪಾ ಅವರ ಮೇಲೆ ತೂರಿ ಪ್ರತಿಭಟಿಸಿದರು.ಸಭೆ ನಿಂತು ಗದ್ದಲ ಶುರುವಾಯಿತು. ತಳ್ಳಾಟ ಮತ್ತು ನೂಕಾಟಗಳ ಸುದ್ದಿತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಚಾಮರಾಜಪೇಟೆಯ ಪೋಲಿಸರು ಗದ್ದಲ ನಿಲ್ಲಿಸಲು ಕ್ರಮಕೈಗೊಂಡರು.ನಿವೃತ್‌ ಪೋಲಿಸ್‌ ವರಿಷ್ಠಾಧಿಕಾರಿಗಳಾಗಿದ್ದ ಶ್ರೀಕಲ್ಯಾಣಶೆಟ್ಟರು ಪೋಲಿಸ್‌ ಜೀಪಿನಲ್ಲಿ ನನ್ನನ್ನು ವಸಂತನಗರದ ತಮ್ಮ ಮನೆಗೆ ಕರೆದೊಯ್ದರು.

ಅನೀರಿಕ್ಷಿತ ಗದ್ದಲಕ್ಕೆ ನಾನು ಬಳಲಿಕೊಂಡಿದ್ದೆ, ಶ್ರೀಕಲ್ಯಾಣಶೆಟ್ಟರು ನನಗೆ ಧೈರ್ಯತುಂಬಿ ಮುಖ ತೊಳಿಸಿ ವಿಭೂತಿ ಹಚ್ಚಿಕೊಳ್ಳಲು ನನ್ನನ್ನು ತಮ್ಮ ದೇವರಕೋಣೆಗೆ ಕರೆದೊಯ್ದರು. ದೇವರಕೋಣೆಯಲ್ಲಿ  ಅವರು ನಿತ್ಯಪೂಜಿಸುತ್ತಿದ್ದ ನನ್ನ ಆರಾಧ್ಯದೈವ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ ನನ್ನ ಗಮನ ಸೆಳೆಯಿತು.ಅಲ್ಲಿಯವರೆಗೆ ನಾನು ನೋಡಿದ ಗುರುಗಳ ಚಿತ್ರಗಳು ವಿವಿದ ಕಲಾವಿದರು ಚಿತ್ರಿಸಿದ ಚಿತ್ರಗಳಾಗಿದ್ದವು.ಆದರೆ ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಗುರುಗಳ ಭಾವಚಿತ್ರ ವಿಭಿನ್ನವಾಗಿತ್ತು ಮತ್ತು ನೈಜವಾಗಿತ್ತು.ನೋಡಿದಷ್ಟೂ ಮತ್ತೆ ನೋಡಿಸಿಕೊಳ್ಳುವ ಚಿತ್ರವನ್ನು ಕಣ್ತುಂಬಿಸಿಕೊಂಡು ಚಿತ್ರದ ವಿಶೇಷತೆಯ ಕುರಿತು ಶ್ರೀಕಲ್ಯಾಣಶೆಟ್ಟರಲ್ಲಿ ಪ್ರಶ್ನಿಸಿದೆ.

(ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ)

 ಅಲ್ಲಿಯವರೆಗೆ ಆತಂಕಕ್ಕೆ ಒಳಗಾಗಿದ್ದ ನನ್ನನ್ನು ಸಂತೈಸಿದ್ದ ಶ್ರೀಕಲ್ಯಾಣಶೆಟ್ಟರು ನನ್ನ ಪ್ರಶ್ನೆಗೆ ಭಾವೊದ್ವೇಗಕ್ಕೊಳಗಾದರು.ಅವರ ಕಣ್ಣಂಚುಗಳು ಮಿಂಚತೊಡಗಿದವು. “೧೯೨೭ ರಲ್ಲಿ ನಾನು ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ ನನ್ನನ್ನು ನನ್ನ ತಂದೆ ಶ್ರೀ ಸಿದ್ದರಾಮಪ್ಪ ಮಮದಾಪೂರ ಅವರು ನನ್ನೂರು ಬದಾಮಿಯ ಶಾಖಾ ಶಿವಯೋಗಮಂದಿರಕ್ಕೆ ದಯಮಾಡಿಸಿದ್ದ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ದರ್ಶನಕ್ಕೆ ಕರೆದುಕೊಂಡು ಹೋಗಿದ್ದರಂತೆ, ಹಸುಗೂಸು ನನ್ನನ್ನು ಪೂಜ್ಯ ಕುಮಾರ ಶಿವಯೋಗಿಗಳು ಎತ್ತಿಕೊಂಡು ಅವರ ಲಿಂಗದಹಸ್ತವನ್ನು ನನ್ನ ಮಸ್ತಕದ ಮೇಲಿಟ್ಟು ಆಶಿರ್ವದಿಸಿದ್ದನ್ನು ನನ್ನ ತಂದೆ ಯಾವಗಲೂ ಹೇಳುತ್ತಿದ್ದರು” ಎಂದು ಹೇಳುತ್ತ ತಮ್ಮ ಎರಡೂ ಕೈಗಳನ್ನು ಕೂಡಿಸಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು. ಕೈಮುಗಿದ ಅವರ ಎರಡೂ ಹಸ್ತಗಳನ್ನು ನನ್ನ ಹಣೆಗೆ ಹಚ್ಚಿಕೊಂಡೆ !. ಕಾರುಣಿಕ ಯುಗಪುರುಷ,ಸಮಾಜ ಸಂಜೀವಿನಿಯಾದ,ವಿಭೂತಿಪುರುಷರ ಪರುಷಹಸ್ತದ ಸ್ಪರ್ಷಆಶೀರ್ವಾದದವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರು ಭಾಗ್ಯಶಾಲಿಗಳೂ,ಪುಣ್ಯವಂತರೂ ಆಗಿದ್ದರು.

ದೆಹಲಿಯ ನಿವೃತ್‌ ಹಿರಿಯ ಕಮಾಂಡ್ಯಂಟ.(ಸಿ.ಆರ್.ಪಿ.ಎಫ್.)‌ , ಮಾಜಿ ಗ್ರುಪ್‌ ಕಮಾಂಡರ್.ಎನ್.ಎಸ್.ಜಿ.(ಬ್ಲ್ಯಾಕ್‌ ಕ್ಯಾಟ್ಸ) ಹಾಗು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತ್ವರಿತ ನ್ಯಾಯಾಲಯದ ನಿವೃತ್‌ ನಾಯಾಧೀಶರಾದ

ಶ್ರೀ.ಬಿ,ಎಸ್.ಕಲ್ಲೂರ ಅವರು ವರ್ಣಿಸಿದಂತೆ “ಶ್ರೀಕಲ್ಯಾಣಶೆಟ್ಟರದು ಕಟ್ಟುಮಸ್ತಾದ ಶರೀರದ ಆಕರ್ಷಕ ವ್ಯಕಿತ್ವವುಳ್ಳವರಾಗಿದ್ದವರು ೧೯೫೦ರ ದಶಕದಲ್ಲಿ ಅವರ ತಂದೆಯವರಾದ ಶ್ರೀ ಎಸ್.ಜಿ.ಕಲ್ಲೂರ ಅವರು ಬೆಳಗಾವಿಯಲ್ಲಿ ಡೆಪ್ಯುಟಿ ಸೂಪರಿಂಟೆಂಡ್ ಆಗಿದ್ದ ಸಂಧರ್ಭದಲ್ಲಿ ಬಾಂಬೆ ಪೋಲಿಸ್‌ ಇಲಾಖೆಯಲ್ಲಿ ಸಬ್‌ ಇನೆಸ್ಪೆಕ್ಟರ್‌ ಆಗಿದ್ದ ಶ್ರೀಕಲ್ಯಾಣಶೆಟ್ಟರು,ಶ್ರೀ ನಾಗನೂರ ಮತ್ತು ಶ್ರೀ ಹಸಬಿಯವರು ಶ್ರೀ.ಬಿ,ಎಸ್.ಕಲ್ಲೂರ ಅವರ ಮನೆಗೆ ಬರುತ್ತಿದ್ದರಂತೆ ಶ್ರೀ ಕಲ್ಲೂರ ಅವರು ಶ್ರೀಕಲ್ಯಾಣಶೆಟ್ಟರನ್ನು “ಕಾಕಾ” ಎಂದು ಸಂಬೋಧಿಸುತ್ತಿದ್ದನ್ನು,ಹಾಗು ಶ್ರೀಕಲ್ಯಾಣಶೆಟ್ಟರು ಕಲ್ಲೂರು ಅವರಿಗೆ ವ್ಯಾಯಾಮಗಳ ಬಗ್ಗೆ ಸಲಹೆ ಕೊಡುತ್ತಿದ್ದನ್ನು ಶ್ರೀ ಕಲ್ಲೂರು ಅವರು ತುಂಬ ಆತ್ಮೀಯವಾಗಿ  ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಶ್ರೀಕಲ್ಯಾಣಶೆಟ್ಟರು ಧರಿಸುತ್ತಿದ್ದ ಪೋಲಿಸ್‌ ಹ್ಯಾಟ್‌ ಆಕರ್ಷಕವಾಗಿಯೂ ಮತ್ತು ಬೇರೆಯವರಿಗಿಂತ ಭಿನ್ನವಾಗಿಯೂ ಇರುತ್ತಿತ್ತು ಎಂದು ಜ್ಷಾಪಿಸಿಕೊಳ್ಳುತ್ತಾರೆ.

ರಾಷ್ರಪತಿಗಳ ಶೌರ್ಯ ಪ್ರಶಸ್ತಿ ಪಡೆದಿದ್ದ ಶ್ರೀಕಲ್ಯಾಣಶೆಟ್ಟರು ಬಾಂಬೆ ಪೋಲಿಸ್‌ ಇಲಾಖೆ,ಮೈಸೂರು ಪೋಲಿಸ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಪೊಲೀಸ್ ತರಬೇತಿ ಕೇಂದ್ರ ಕೆ.ಎಸ್.ಪಿ.ಟಿ.ಎಸ್, ಚನ್ನಪಟ್ಟಣದ ಪ್ರಾಂಶುಪಾಲರಾಗಿ,ಆಯ್.ಪಿ.ಎಸ್.‌ ಭಡ್ತಿ ಪಡೆದು ಬೆಂಗಳೂರು ಗ್ರಾಮೀಣ ಜಿಲ್ಲೆಯ ಪೋಲಿಸ ವರಿಷ್ಠಾಧಿಕಾರಿಗಳಾಗಿ ೧೯೮೫ ರಲ್ಲಿ ನಿವೃತ್ತಿ ಹೊಂದಿದರು.

ಕರ್ನಾಟಕದ ರಾಜ್ಯ ಸರಕಾರದ  ದಕ್ಷ ಆದಿಕಾರಿಗಳಾಗಿ ಸೇವೆಸಲ್ಲಿಸಿದ ನಂತರ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶ್ರೀಕಲ್ಯಾಣಶೆಟ್ಟರು ೯೬ ವರ್ಷಗಳ ತುಂಬು ಜೀವನ ನಡೆಸಿ ೦೧ ಮಾರ್ಚ ೨೦೨೩ ರಂದು ಲಿಂಗೈಕ್ಯರಾಗುವ ಸಂಧರ್ಭವನ್ನು ನೆನಪಿಸಿಕೊಂಡ ಅವರ ಪುತ್ರ ಶ್ರೀ ಅಶೋಕ ಅವರು ಹೇಳಿದ್ದು ವಿಶೇಷ ವಾಗಿತ್ತು.

ಶ್ರೀಕಲ್ಯಾಣಶೆಟ್ಟರ ಧರ್ಮಪತ್ನಿಯವರು ಫೆ.೨೮, ೨೦೨೩ರಂದು ಲಿಂಗದೊಳಗಾದರಂತೆ ,ಅವರ ಅಂತ್ಯಕ್ರಿಯೆ ಸಂಧರ್ಭದಲ್ಲಿ ಶ್ರೀಕಲ್ಯಾಣಶೆಟ್ಟರು ನಿರ್ಲಿಪ್ತ ಭಾವವನ್ನು ಹೊಂದಿದ್ದರಂತೆ, “ಹೋದರಾ ?” ಎಂಬ ಒಂದೇ ಒಂದು ವಾಕ್ಯವನ್ನು ಹೇಳಿ ತಮ್ಮ ದೈನಿಂದಿನ ಚಟುವಟಿಕೆಯಲ್ಲಿದ್ದು ದಿ.೦೧ ಮಾರ್ಚ ೨೦೨೩ ರಂದು ಪುಣ್ಯದ ಸಾವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರನ್ನು ನಾನು ಕೊನೆಯದಾಗಿ ಮಾತನಾಡಿಸಿದ್ದು ೨೦೨೨ ಅಗಸ್ಟ ತಿಂಗಳಲ್ಲಿ. ನಾನು ಅವರನ್ನು ಭೇಟಿಯಾಗಬೇಕಿತ್ತು, ಆಗಲಿಲ್ಲ.

ಶ್ರೀಕಲ್ಯಾಣಶೆಟ್ಟರ ವಿವಾಹ ವಾರ್ಷಿಕೋತ್ಸವದ ವಜ್ರ ಮಹೋತ್ಸವದ ಚಿತ್ರ

“ ಅವರ ಧರ್ಮಪತ್ನಿಯ ಅಗಲಿಕೆಯಿಂದ ಸರ್‌ ಅವರು  ಮಾನಸಿಕವಾಗಿ ನೊಂದುಕೊಂಡಿದ್ದರೇ ?” ಎಂದು ಕೇಳಿದೆ.        ಶ್ರೀ ಅಶೋಕ ಅವರು ತುಂಬ ಮಾರ್ಮಿಕವಾದ ಉತ್ತರ ಕೊಟ್ಟರು “ ಧೀರ್ಘ ಇನ್ನಿಂಗ್ಸ ಆಡಿದ ಆಟಗಾರರಲ್ಲೊಬ್ಬ ಔಟಾದಾಗ, ಜೊತೆಯಾಟಗಾರನೂ ಫೆವಿಲಿಯನ್ನಗೆ ಹೋದಂತೆ “ , “ ನಮ್ಮ ತಂದೆ ಎಂದೂ ಮಾನಸಿಕವಾಗಿ ಕುಗ್ಗಿದವರಲ್ಲ ಅಂತಿಮ ಕ್ಷಣದವರೆಗೂ ಸದೃಡವಾಗಿದ್ದವರು” ಈ ಮಾತುಗಳನ್ನು ಕೇಳುತ್ತ ಆಕರ್ಷಕ ತೇಜಸ್ಸಿನಿಂದ ಕೂಡಿದ ಮಂದಸ್ಮಿತ ಅಂತಃಕರಣದ ಶ್ರೀಕಲ್ಯಾಣಶೆಟ್ಟರ ವ್ಯಕ್ತಿತ್ವ ಜೊತೆಗೆ  ಅಂದು ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದ ಆ ಹಸ್ತಗಳು ನನ್ನ ಕಣ್ಣೆದರು ಬಂದುನಿಂತವು.

ನಮ್ಮ ಸಂಬಂಧಗಳು, ಪೂರ್ವಜನ್ಮದ ಸಂಬಂಧಗಳೆಂಬ ಭಾವನೆ ನನ್ನಲ್ಲಿ ಮೂಡಿತು.

Related Posts