ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಹುಲಿಯಾದರೂ ಹುಲಿಯ ತಿನ್ನುವದಿಲ್ಲ

ಇಲಿಯಾದರೂ ಇಲಿಯ ತಿನ್ನುವದಿಲ್ಲ

ಮಾನವನಾದ ನಾನು

ಮಾನವರ ಹಿಂಸಿಸಿ

ಅವರ ಸರ್ವಸ್ವ ವ ಭಕ್ಷಿಸುತ್ತಲಿದ್ದೇನೆ

ನಿಜ ಮಾನವತ್ವದ ಅರಿವು ನೀಡಿ

ರಕ್ಷಿಸೆನ್ನ

ಗುರುಕುಮಾರ

ಪಂಚಾಕ್ಷರೇಶ್ವರ

* ರಚನೆ ಪೂಜ್ಯ ಪುಟ್ಟರಾಜ ಗವಾಯಿಗಳು

ಕೃಪೆ: ಶ್ರೀಎಸ್. ಸ್ವಾಮಿ  ಜಂಗಮ ಯೋಗಧಾಮ (ಶರಣರ ಬಳಗ)

ಸಂಗೀತ ಗಾಯನ  ಕೃಪೆ :ಶ್ರೀ ಎಸ್. ಎಸ್. ಪಾಟೀಲ ಮಾಜಿ ಸಚಿವರು.ಮುಂಡರಗಿ.

ಈ ವಚನದ ಸಾಲುಗಳು ,ಪರಮ ವಿರಕ್ತರು , ವಿರಾಗಿಗಳು ಮತ್ತು “ಸಮಾಜವೇ ತನ್ನ ಬಂಧು ಬಳಗ ವನ್ನು ಮಾಡಿಕೊಂಡಿದ್ದ

ಪೂಜ್ಯ ಪುಟ್ಟರಾಜ ಗವಾಯಿಗಳ ಲೇಖನಿಯಿಂದ ಹೇಗೆ ಮೂಡಿದವು? ಎಂಬ ಜಿಜ್ಞಾಸೆ ಗೆ ಒಳಗಾದೆ !.

ಸ್ವಾರ್ಥಿ ಮನುಷ್ಯತ್ವ ಒಂದು ವರ್ಗ

ಪೂಜ್ಯ ಪುಟ್ಟರಾಜ ಗವಾಯಿಗಳನ್ನು ನೋವಿಸಿದ್ದನ್ನು ,ಅವರು ಪಟ್ಟುಕೊಂಡ ಯಾತನೆಗಳನ್ನು 80ರ ದಶಕದಲ್ಲಿ ಪೂಜ್ಯರನ್ನು ಹತ್ತಿರದಿಂದ ಕಂಡಿದ್ದ ನನಗೆ ಕಣ್ಣೆದರು ಬಂದವು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ರಕ್ಷಣಾ ಗೋಡೆಯ ಪಕ್ಕದಲ್ಲಿದ್ದ ರೆಡ್ಡಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ನನ್ನ ಇಂಜಿನಿಯರಿಂಗ್ ಶಿಕ್ಷಣ ಆರಂಭಿಸಿದ್ದ ನಾನು  ಹಲವಾರು ಬಾರಿ ಪೂಜ್ಯ ಪಂಚಾಕ್ಷರಿ ಗವಾಯಿಗಳ ಕ್ರಿಯಾಸಮಾಧಿಯ ದರ್ಶನಕ್ಕೆ ಹೋದಾಗ  ಪೂಜ್ಯ ಪುಟ್ಟರಾಜ ಗವಾಯಿಗಳು ಆಶ್ರಮದ ಮಕ್ಕಳ ಉಪಹಾರಕ್ಕೆ ಪಡುತ್ತಿದ್ದ  ವ್ಯವಸ್ಥೆಯ ಹಿಂದಿನ ಕಷ್ಟದ ಅರಿವು ನನಗಿದೆ.ಅಕಸ್ಮಾತ್ ಪೂಜ್ಯರಿಗೆ ನಾನು ಬಂದದ್ದು ಗೊತ್ತಾದರೆ ಆ ಕಷ್ಟದ ವ್ಯವಸ್ಥೆಯಲ್ಲೂ ನನಗೆ ಪ್ರಸಾದ ನೀಡುತ್ತಿದ್ದ ಅಂಥಕರುಣೆಯ ವಾತ್ಸಲ್ಯ ನಾನು ಮರೆಯುವಂತಿಲ್ಲ. ಸೇವಕರಿಂದ ನನ್ನ ಎದೆಯ ಮೇಲೆ ಇಷ್ಟ ಲಿಂಗ ಕಟ್ಟಿಕೊಂಡಿರುವನೋ ಇಲ್ಲವೋ ಎಂಬ ಪರೀಕ್ಷೆಯಂತೂ ನನ್ನನ್ನು ಯಾವಾಗಲೂ ಎಚ್ಚರಗೊಳಿಸುತ್ತಲೇ ಇರುತ್ತದೆ.

ಈ ವಚನ, ಅವರಿಗಾದ ನೋವು ಅಪಮಾನಗಳನ್ನು ತಮ್ಮ ಮೇಲೆಯೇ ಹಾಕಿಕೊಂಡು ಬರೆದ ಸಾಲುಗಳು..

ಅವರೆಂದೂ ಯಾರನ್ನು ಹಿಂಸಿಸಲಿಲ್ಲ.

ಅವರು ಎಂದೂ ಯಾರ ಸರ್ವಸ್ವವನ್ನೂ ಭಕ್ಷಿಸಲಿಲ್ಲ..

ಅವರು ಎಂದೂ ,ಮತ್ತೊಬ್ಬರ ಶ್ರಮವನ್ನು ಜೀವಂತ ಹೂತು ಹಾಕಿ ಆ ಸಮಾಧಿಯ ಮೇಲೆ ರಣಕೇಕೆ ಹಾಕಲಿಲ್ಲ.

ಅವರು ಎಂದೂ ಬಲಿಷ್ಠ, ಬಂಡವಾಳಶಾಹಿ ಭಕ್ತರ ಮೋಹಕ್ಕೆ

ಬಲವಿಲ್ಲದ ಭಕ್ತರ ಸೇವೆಯನ್ನು. ಬಲಿ ಕೊಡಲಿಲ್ಲ.

ಅವರು ಎಂದೂ ಗುರುವಿನ ಮಹಾಗುರುವಿನ ಹೆಸರನ್ನು ಭಕ್ತ ರು ಕೊಟ್ಟ ಋಣ ಕ್ಕೆ ಅಡುವಿಡಲಿಲ್ಲ, ಹರಾಜು ಹಾಕಲಿಲ್ಲ.

ಅವರು ಸ್ವಾಭಿಮಾನಿಗಳಾಗಿದ್ದರು.

ಪದ್ಮಭೂಷಣ ಪ್ರಶಸ್ತಿಗೆ ದೆಹಲಿಗೆ ಬಂದಾಗಲೂ ಸ್ನಾನ ಪೂಜಾದಿ ಗಳಿಗೆ ಭಾವಿ ಇರುವ ಮನೆಯನ್ನೇ ಆಯ್ಕೆಮಾಡಿಕೊಂಡು, ಶ್ರೀಕುಮಾರೇಶ್ವರರ ಕಟ್ಟುನಿಟ್ಟಿನ ಶೀಲಾಚಾರಣೆಮಾಡಿದ್ದು ಅವರ ನಿಷ್ಠುರ ಬದುಕಿಗೆ ಹಿಡಿದ ಕನ್ನಡಿ.

ಬಾಲ್ಯದ

ಆರಂಭದ ದಿನಗಳಲ್ಲಿ ಶ್ರೀ ಶಿವಯೋಗ ಮಂದಿರದ ಪವಿತ್ರ ನೆಲದಲ್ಲಿ ಆಶ್ರಯ ಪಡೆದಿದ್ದ ಪೂಜ್ಯ ಪುಟ್ಟರಾಜ ಗವಾಯಿಗಳು ,ಮೈತುಂಬಾ ಗಾಯಗಳಿಂದ ಅಳುತ್ತ ಕುಳಿತ್ತಿದ್ದರಂತೆ, ಅವರನ್ನು ಮೈದಡವಿ ವಾತ್ಸಲ್ಯದಿಂದ ಎತ್ತಿಕೊಂಡು ಹೋಗಿ ,ರಕ್ತಸಿಕ್ತ ಗಾಯವನ್ನು ತೊಳೆದು ,ಗಿಡಮೂಲಿಕೆ ಯ ಔಷಧ ಹಚ್ಚಿ ಆರೈಕೆ ಮಾಡಿದ ಮಹಾತ್ಮ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಎಂದು ಆ ಕ್ಷಣಕ್ಕೆ  ಪೂಜ್ಯ ಪುಟ್ಟರಾಜ ಗವಾಯಿಗಳಿಗೆ ಗೊತ್ತಾಗಲಿಲ್ಲ ವಂತೆ.  ಬೇರೆಯವರಿಂದ ಕೇಳಿತಿಳಿದುಕೊಂಡ   ಪೂಜ್ಯ ಪುಟ್ಟರಾಜ ಗವಾಯಿಗಳು ಅಂಥ ಮಹಾತ್ಮರ ಕೈಯಲ್ಲಿ ಸೇವೆ ಮಾಡಿಸಿಕೊಂಡೆನೆಲ್ಲ ಎಂಬ ಕೊರಗು ಅವರಲ್ಲಿ ಕೊನೆವರೆಗೂ ಇತ್ತು ಅದನ್ನು ನೆನಪಿಸಿ ಕೊಂಡು ಅವರು ಹಾಕುತ್ತಿದ್ದ ಕಣ್ಣೀರು ಎಂಥವರನ್ನೂ ಸ್ತಂಭೀಭೂತಗೊಳಿಸಿ  ಮಂತ್ರಮುಗ್ಧ ಗೊಳಿಸುತ್ತಿತ್ತು.

ಪೂಜ್ಯರ ನೆನಹು ಇಂದು ಅವರ ವಚನವನ್ನು ಕೇಳುವ ಸಂದರ್ಭದಲ್ಲಿ ಹೃದಯ ಸ್ಪರ್ಶಿಯಾಗಿ ಕಾಡಿತು.

ಅವರ ಬರೆದ ನೋವಿನ ಸಾಲುಗಳು

ಹಲವು ಅರ್ಥಗಳನ್ನು ನೀಡಿತು

ಘಾಸಿಗೊಂಡಿರುವ ನನ್ನ ಹೃದಯದ

ಯಕ್ಷಪ್ರಶ್ನೆ ಗೆ

ಸ್ಪಷ್ಟ ಉತ್ತರವನ್ನೀಯಿತು.

ಶ್ರೀಕುಮಾರ ತರಂಗಿಣಿ  ೨೦೨೩ ಜುಲೈಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ದೇವ  ಪೊರೆಯೊ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಯುಗಪುರುಷ ಧಾರವಾಹಿ : ಭಾಗ ೪: ಬಾಳಿನ ಬವಣೆ-ವಿದ್ಯಾಸ್ಮರಣೆ ಲೇಖಕರು: ಪೂಜ್ಯ ಜ.ಚ.ನಿ
  4. ಅನುಭವ-ಅನುಭಾವ :ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  5. ಗುರುಕರುಣ ಸೌಂಧರ್ಯ ಲಹರಿ: ಲೇಖಕರು : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
  6. ದೇವಸ್ಥಾನ: -ಜಿ. ಎಸ್. ಶಿವರುದ್ರಪ್ಪ
  7. ಆಡಿಯೋ೧ :
  8. ಶ್ರೀಕುಮಾರೇಶ್ವರ ಭಜನ್‌ “ಗುರುದೇವ ದೇವ ಗುರುಕುಮಾರ” ರಚನೆ
  9. ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ಧೇಶ್ವರಮಠ. ಹಂದಿಗುಂದ.
  10. ಆಡಿಯೋ ೨ : ಶ್ರೀಕುಮಾರೇಶ್ವರ ದೊಹೆಗಳು

ರಚನೆ

:ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ಧೇಶ್ವರಮಠ. ಹಂದಿಗುಂದ.

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

Related Posts