ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ಸಪ್ಟಂಬರ ತಿಂಗಳು ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಭುವಿಗೆ ಅವತರಿಸಿದ ಪವಿತ್ರ ಮಾಸ.
೧೫೬ ನೆಯ ಜಯಂತಿ ಮಹೋತ್ಸವ ಸಂಭ್ರಮಾಚರಣೆಯ ಪರ್ವಕಾಲ.
ಈ ಸಂಧರ್ಭದಲ್ಲಿ ಪ್ರಕಟವಾಗುತ್ತಿರವ “ಋಣಮುಕ್ತರು” ಎಂಬ ಲೇಖನದ ಆಯ್ದ ಸಾಲುಗಳು ಹೀಗಿವೆ……
ಅನೀತಿ-ಅನ್ಯಾಯ-ಅನಾಚಾರ ಹಾಗೂ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಸಿಡಿಲಿನಂತೆ ಸ್ಫೋಟಗೊಂಡು ಆವಿರ್ಭವಿಸಿದ ವಿಭೂತಿ ಪುರುಷರು ಅಜ್ಞಾನಾಂಧಕಾರದಲ್ಲಿ ಮುಳುಗಿದ ಜನತೆಯನ್ನು ಮೇಲೆತ್ತಲೆತ್ನಿಸಿ, ನೂತನ ಪ್ರಜ್ಞಾವಂತ ಸಮಾಜವೊಂದರ ರೂವಾರಿಗಳೆನಿಸುತ್ತಾರೆ. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಜನಸಾಮಾನ್ಯರ ನೋವನ್ನು ಕಂಡು, ಮರುಗಿ ಸುಮ್ಮನಾಗದೆ, ಅದರಿಂದ ಕಳವಳಗೊಂಡು, ಸಂತಾಪವನ್ನು ತೋಡಿಕೊಂಡು, ತಮ್ಮ ಸಾತ್ವಿಕ ಶಕ್ತಿಯಿಂದ ಅದಕ್ಕೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ; ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸಿ, ಶೈಕ್ಷಣಿಕ ಕ್ರಾಂತಿಯನ್ನು ಗೈದು ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗುತ್ತಾರೆ.
ಸೈಪಿನ ಆಗರವೆನಿಸಿದ ಭರತಭೂಮಿಯಲ್ಲಿ ಅವತರಿಸಿದಷ್ಟು ವಿಭೂತಿ ಪುರುಷರು ಜಗತ್ತಿನ ಮತ್ತಾವ ದೇಶದಲ್ಲೂ ಕಾಣಸಿಗುವುದಿಲ್ಲ. ಭಾರತಾಂಬೆಯ ಜೇಷ್ಠ ಸುಪುತ್ರಿಯೆನಿಸಿದ ಕನ್ನಡಾಂಬೆಯ ಪುಣ್ಯೋದರದಲ್ಲಂತೂ ಅಸಂಖ್ಯ ಶರಣ-ದಾಸ-ಸಂತ-ಮಹಂತರು ಉದಯಿಸಿದ್ದಾರೆ. ಅವರಲ್ಲಿ ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷರಾದ ಲಿಂ. ಶ್ರೀ ಮ. ನಿ. ಪ್ರ ಕುಮಾರ ಮಹಾಸ್ವಾಮಿಗಳು ಈ ಮಾಲಿಕೆಯೊಳಗಿನ ದಿವ್ಯರತ್ನವೆನ್ನಬೇಕು.
ವೀರವಿರಾಗಿಗಳಾಗಿ ಕೆಲವರು, ಶಾಲೆ-ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರಕೈಕೊಂಡು ವಿದ್ಯಾಪ್ರೇಮಿಗಳಾಗಿ ಮತ್ತೆ ಕೆಲವರು, ತತ್ವಜ್ಞಾನ ತತ್ವೋಪದೇಶದ ಬೋಧನೆಯ ಪುಣ್ಯಕಾರದಿಂದ ಇನ್ನು ಕೆಲವರು, ಪರಧರ್ಮೀಯರೊಂದಿಗೆ ವಾದಕ್ಕಿಳಿದು ಗೆದ್ದು ಪರವಾದಿಗಳೆನಿಸಿ ಹಲವರು, ಸಮಾಜವನ್ನು ಸಮರ್ಪಕವಾಗಿ ಸಂಘಟಿಸಿ ಯಶಸ್ವಿಯಾದ ಕೆಲವರು ನಮ್ಮಲ್ಲಿದ್ದಾರೆ, ಬಿಡಿಬಿಡಿಯಾಗಿ ಈ ಎಲ್ಲ ಕಾರ್ಯಗಳನ್ನು ಕೈಕೊಂಡು, ಇಡಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ದುಡಿದೂ, ಅಪರೂಪವಾದುದನ್ನೇ ಸಾಧಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ವೀರಶೈವ -ಲಿಂಗಾಯತರೆಲ್ಲರಿಗೂ ಪರಮಾರಾಧ್ಯರು. ಅವರು ವಟುವತ್ಸಲರು, ಕಲಾಯೋಗಿಗಳು, ಕಾಯಕಪ್ರೇಮಿಗಳು, ನಮಗೆ ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ತುಂಬ ಮುಖ್ಯ.
ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-
ಋಣವ ತೀರಿಸಬೇಕು ಋಣವ ತೀರಿಸಬೇಕು
ಋಣವ ತೀರಿಸುತ ಜಗದಾದಿ ಸತ್ವವನು
ಜನದಿ ಕಾಣುತ್ತದರೊಳ್ ಒಂದುಗೂಡಬೇಕು.
ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.
ಶ್ರೀಕುಮಾರ ತರಂಗಿಣಿ ೨೦೨೩ ಸಪ್ಟಂಬರ್ ಸಂಚಿಕೆಯ ಲೇಖನಗಳ ವಿವರ
- ಮಂಗಳಾರತಿಯನು ನಾನು ಎತ್ತಿ ಪಾಡುವೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೨೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ೬: ಮಾತೆಯ ಆಗಮನ, ಮದುವೆಯ ಆಲೋಚನೆಲೇಖಕರು: ಪೂಜ್ಯ ಜ.ಚ.ನಿ
- : ಲೇಖಕರು :ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
- ಲೇಖಕರು : ಡಾ. ಬಸವರಾಜ ಜಗಜಂಪಿ
- ಲೇಖಕರು : ಬಿ. ಶಿವಮೂರ್ತಿ ಶಾಸ್ತ್ರಿ
- ಲೇಖಕರು : ಪಂಡಿತ ನಾಗಭೂಷಣ ಶಾಸ್ತ್ರಿಗಳು
- ೨ : ಶ್ರೀಕುಮಾರೇಶ್ವರ ಅಭಂಗ
ಶ್ರೀಕುಮಾರ ತರಂಗಿಣಿ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ