ಲೇಖಕ: ಶ್ರೀಕಂಠ.ಚೌಕೀಮಠ
ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು
(136ನೇ ಜಯಂತ್ಯುತ್ಸವ – 2025)
ಲಿಂ. ಭಾಲ್ಕಿ ಶ್ರೀ ಘ. ಚ. ಚನ್ನಬಸವಸ್ವಾಮಿ ಪಟ್ಟದ್ದೇವರು ಹಿರೇಮಠದ ಅಧ್ಯಕ್ಷರಾಗಿದ್ದ ಮಹಾನ್ ತಪಸ್ವಿ, ಕಮಾಲನಗರ (ಜಿಲ್ಲೆ ಬೀದರ)ದಲ್ಲಿ ಕ್ರಿ.ಶ. 1889ರಲ್ಲಿ ಜನಿಸಿದರು. ಬಾಲ್ಯದಿಂದಲೇ ವಿದ್ಯೆ ಮತ್ತು ಸಂಸ್ಕಾರಗಳತ್ತ ಒಲವುಳ್ಳವರಾಗಿದ್ದ ಅವರು, ಪ್ರಾಥಮಿಕವಾಗಿ ಅವರಾದಿ ಪಾಠಶಾಲೆಯಲ್ಲಿ ಕನ್ನಡ ಕಾವ್ಯಗಳ ಅಭ್ಯಾಸವನ್ನು ಮಾಡಿ, ಶಬ್ದ–ಭಾವಗಳ ಸೌಂದರ್ಯವನ್ನು ಅಳವಡಿಸಿಕೊಂಡರು. ಆ ಅಧ್ಯಯನವೇ ಅವರ ಅಂತರಂಗದಲ್ಲಿ ಆತ್ಮಜ್ಞಾನದ ದೀಪವನ್ನು ಹಚ್ಚಿ, ಆಧ್ಯಾತ್ಮಿಕ ಪಥದತ್ತ ಹೆಜ್ಜೆ ಇಡಲು ಪ್ರೇರಣೆಯಾಯಿತು.
ಆತ್ಮೋನ್ನತಿಯ ಆಕಾಂಕ್ಷೆಯಿಂದ ಅವರು 1920ರಲ್ಲಿ ಶಿವಯೋಗಮಂದಿರದಲ್ಲಿ ಪ್ರವೇಶ ಪಡೆಯಲು ಮುಂದಾದರು. ಆಗ ಅವರ ವಯಸ್ಸು ಮೂವತ್ತು ವರ್ಷಗಳು. ವಯಸ್ಸಿನ ಕಾರಣವನ್ನು ಮುಂದಿಟ್ಟುಕೊಂಡು ಶಿವಯೋಗಮಂದಿರದ ವ್ಯವಸ್ಥಾಪಕರು ಪ್ರವೇಶವನ್ನು ನಿರಾಕರಿಸಿದರು.
ಭಾಲ್ಕಿಗೆ ಮರಳಬೇಕೆಂಬ ಮನೋವ್ಯಥೆಯ ಕ್ಷಣದಲ್ಲಿ, ಅವರ ಜೊತೆಯಲ್ಲಿದ್ದ ಶ್ರೀ ಶಿವಲಿಂಗಪ್ಪ ಖಂಡ್ರೆ (ಶ್ರೀ ಭೀಮಣ್ಣ ಖಂಡ್ರೆಯವರ ತಂದೆ) ಅವರು, ಚನ್ನಬಸವಸ್ವಾಮಿಯವರನ್ನು ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ದರ್ಶನಕ್ಕೆ ಕರೆತಂದರು. ಅದೊಂದು ಕ್ಷಣ; ಆದರೆ ಆ ಕ್ಷಣವೇ ಇತಿಹಾಸವನ್ನು ರೂಪಿಸಿದ ಮಹತ್ವದ ಸಂಧಿಯಾಯಿತು.
ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ವಾತ್ಸಲ್ಯಪೂರ್ಣ ಕೃಪಾದೃಷ್ಟಿ ಚನ್ನಬಸವಸ್ವಾಮಿಯವರ ಜೀವನಕ್ಕೆ ದೈವಿಕ ದಿಕ್ಕನ್ನು ನೀಡಿತು. ಆ ಒಂದೇ ನೋಟ, ಅವರ ಶಿಷ್ಯ ಬಳಗದಲ್ಲಿ ಚನ್ನಬಸವಸ್ವಾಮಿಯವರಿಗೆ ಸ್ಥಾನವನ್ನು ಕಲ್ಪಿಸಿತು. ಈ ಮೂಲಕ ಅವರು ಪೂಜ್ಯ ಹಾನಗಲ್ಲ ಶ್ರೀಗಳ ಸೇವೆ ಮಾಡುವ ಅಪೂರ್ವ ಭಾಗ್ಯವನ್ನು ಪಡೆದರು.
ಗುರುಸಾನ್ನಿಧ್ಯದಲ್ಲಿ ಅವರ ವ್ಯಕ್ತಿತ್ವವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿ ಉನ್ನತಗೊಂಡಿತು. ಪಂ. ಸೋಮಶೇಖರ ಶಾಸ್ತ್ರಿಗಳಿಂದ ಪಂಚಕಾವ್ಯಗಳ ವಿಶೇಷ ಅಧ್ಯಯನವನ್ನು ಮಾಡಿಸಿದ ಹಾನಗಲ್ಲ ಶ್ರೀಗಳು, ಶಿವಾನುಭವಶಾಸ್ತ್ರ ಮತ್ತು ಯೋಗದ ಷಟ್ಕರ್ಮಗಳನ್ನು ಸ್ವತಃ ತಾವೇ ಬೋಧಿಸಿ, ಅವರನ್ನು ಪರಿಪೂರ್ಣ ಸಾಧಕರಾಗಿ ರೂಪಿಸಿದರು.
ಜಾತಿ ಮತ್ತು ಜಂಗಮ ಪ್ರೇಮ ಎಂಬ ವ್ಯಾಧಿಯಿಂದ ಬಳಲುತ್ತಿರುವ ಇಂದಿನ ಸಮಾಜದ ಕಾಮಾಲೆ ಕಣ್ಣುಗಳು, ಈ ಪವಿತ್ರ ಗುರು–ಶಿಷ್ಯ ಅವಿನಾಭಾವ ಸಂಬಂಧವನ್ನು ಪೀತವರ್ಣದಲ್ಲೇ ಕಾಣುತ್ತಿರುವುದು ಸಮಾಜದ ದುರಂತವಾಗಿದೆ.
ಆದರೆ ಸಮುದಾಯ ಹಾಗೂ ವಯಸ್ಸಿನ ಗಡಿಗಳನ್ನು ಮೀರಿ ಬೆಳೆದ ಈ ಗುರು–ಶಿಷ್ಯ ಪರಂಪರೆ, ಸಮಾಜಕ್ಕೆ ಅಪೂರ್ವ ಸೇವೆಯನ್ನು ಸಲ್ಲಿಸಿದ್ದು, ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಮಹತ್ವವನ್ನು ಹೊಂದಿದೆ.
ಕ್ರಿ.ಶ. 1924ರಲ್ಲಿ ಚನ್ನಬಸವಸ್ವಾಮಿಗಳು ಕಾಶೀ ಸಿಂಹಾಸನಾನ್ವಯಾನುಸಾರ ಚರಪಟ್ಟಾಧಿಕಾರದ ಮೂಲಕ ಭಾಲ್ಕಿ ಹಿರೇಮಠದ ಪೀಠಾಧಿಪತಿಗಳಾದರು.
ಪೀಠಾರೋಹಣದ ನಂತರ ಅವರು ಮಠದ ಜೀರ್ಣೋದ್ಧಾರವನ್ನು ಕೈಗೊಂಡು, ಪರಕೀಯರ ಕೈಸೇರಿದ್ದ ಮಠದ ಆಸ್ತಿಗಳನ್ನು ಪುನಃ ಸಂಪಾದಿಸಿ, ಮಠದ ಗೌರವ ಮತ್ತು ವೈಭವವನ್ನು ಪುನರ್ ಸ್ಥಾಪಿಸಿದರು. ಆಡಳಿತದಲ್ಲಿ ದೃಢತೆ, ಸೇವೆಯಲ್ಲಿ ವಿನಯ ಮತ್ತು ತತ್ವದಲ್ಲಿ ನಿಷ್ಠೆ – ಇವರ ಕಾರ್ಯಶೈಲಿಯ ಗುರುತಾಗಿತ್ತು.
ಶತಮಾನಗಳಿಂದ ಬೀದರ ಜಿಲ್ಲೆಯಲ್ಲಿ ಅವನತಿ ಕಂಡಿದ್ದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಪುನರ್ಜನ್ಮ ನೀಡುವ ಸಂಕಲ್ಪದಿಂದ, ಶ್ರೀ ಪಟ್ಟದ್ದೇವರು ‘ಕನ್ನಡ ಶಾಂತಿವರ್ಧಕ ಶಿಕ್ಷಣ ಸಂಸ್ಥೆ’ಯನ್ನು ಸ್ಥಾಪಿಸಿದರು. ಅದರ ಮೂಲಕ ಅನೇಕ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ, ಕನ್ನಡ ನುಡಿಯ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿದರು. ಕಮಾಲನಗರದಲ್ಲಿ ನಡೆಸಿಕೊಂಡು ಬಂದ ಕನ್ನಡ ಶಾಲೆಯನ್ನು ‘ಶಾಂತಿವರ್ಧಕ ಹೈಸ್ಕೂಲ್’ ಮಟ್ಟಕ್ಕೆ ಎತ್ತಿ, ಅದರ ಸಂಚಾಲಕರಾಗಿ ಪ್ರೀ–ಬೋರ್ಡಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳ ಸಮಗ್ರ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಿದರು.
ಮೋರಗಿ, ಕೂಡಲಸಂಗಮ, ಬೀದರ, ಲಾತೂರು, ಹಣೆಗಾವ, ಭಾಲ್ಕಿ ಮೊದಲಾದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಮಾಜಸೇವೆಯನ್ನು ಕೈಗೊಂಡ ಭಾಲ್ಕಿ ಶ್ರೀ ಪಟ್ಟಾಧ್ಯಕ್ಷರು, ಹೈದರಾಬಾದ್‌ನ ಗಡಿನಾಡಿನಲ್ಲಿ ಕನ್ನಡ ನುಡಿಯ ಗೌರವವನ್ನು ಉಳಿಸಿದ ಶ್ರೇಯಸ್ಸಿಗೆ ಪಾತ್ರರಾದರು.
ತಮ್ಮ ಗುರುವಿನ ಸ್ಮರಣಾರ್ಥವಾಗಿ ಭಾಲ್ಕಿಯಲ್ಲಿ ಹಾನಗಲ್ಲ ಶ್ರೀ ಗುರುಕುಮಾರೇಶ್ವರ ಉಚಿತ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದು, ಅದು ಅವರ ಅಚಲ ಗುರುಭಕ್ತಿಗೆ ಮತ್ತು ಕೃತಜ್ಞತೆಗೆ ಶಾಶ್ವತ ಸಾಕ್ಷಿಯಾಗಿ ನಿಂತಿದೆ.
ಇಂತಹ ಮಹಾನ್ ವಿಭೂತಿ ಪುರುಷರಾದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವದ ಈ ಪುಣ್ಯ ಸಂದರ್ಭದಲ್ಲಿ, ಅವರ ತಪೋಮಯ ಜೀವನ, ಸಮಾಜಮುಖಿ ಸೇವೆ ಮತ್ತು ಕನ್ನಡ ನಾಡಿನ ಮೇಲಿನ ಅಪಾರ ಪ್ರೀತಿಯನ್ನು ಸ್ಮರಿಸುತ್ತಾ, ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
— ಶ್ರೀಕಂಠ, ಚೌಕೀಮಠ


























Total views : 23142