ಷಣ್ಮುಖ ಶಿವಯೋಗಿಗಳು; ಇತಿವೃತ್ತ ಮತ್ತು ಕೃತಿಗಳು

ಡಾ||  ಸಿ .ನಾಗಭೂಷಣ

ವಚನಸಾಹಿತ್ಯ ವಾಹಿನಿಯ ಮೂರು ಘಟ್ಟಗಳಲ್ಲಿ ಒಂದಾದ ಬಸವೋತ್ತರ ಯುಗದಲ್ಲಿ ಪ್ರಾತಿನಿಧಿಕ ವಚನಕಾರರಾಗಿದ್ದಾರೆ. | ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ವಚನಗಳಿಂದ ಪ್ರಭಾವಿತರಾಗಿ ವಚನಗಳನ್ನು ರಚಿಸಿರುವುದರ ಜೊತೆಗೆ ಸ್ವಂತಿಕೆಯ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳು ಬಸವಯುಗದ ವಚನ ಸಾಹಿತ್ಯದ ಸಮಗ್ರ ಸ್ವರೂಪ ಲಕ್ಷಣಗಳನ್ನು ಪ್ರತಿನಿಧಿಸುತ್ತವೆ ಮತ್ತು ಪೂರ್ವದ ವಚನಕಾರರ ಪರಂಪರೆಯನ್ನು ಮುಂದುವರಿಸಿವೆ.

ಅಖಂಡೇಶ್ವರ ವಚನಗಳ ಕರ್ತೃತ್ವದ ಬಗೆಗೆ, ಆರ್. ನರಸಿಂಹಾಚಾರ್ಯರು ತಮ್ಮ ಕವಿಚರಿತೆಯಲ್ಲಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ನಿರಾಲಂಬ ಶರಣನ ಕಾಲ ೧೭೦೦. ಇವನು ವೀರಶೈವ ಕವಿ. ಇವನನ್ನು ಶ್ರೀಮತ್ಪರಮಹ೦ಸ ಪರಿವ್ರಾಜಕ ಸದ್ಗುರು ಸಂಪ್ರದಾಯಕ ಸಿದ್ಧಯೋಗಿಂದ್ರರೆಂದು ಹೇಳಿದ್ದಾರೆ. ಕವಿಚರಿತಕಾರರನ್ನು ಅನುಸರಿಸಿ ರಂ. ಶ್ರೀ. ಮುಗಳಿಯವರು ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳೆಂದು ಹೇಳದೆ ನಿರಾಲಂಬ ಶರಣನಿಗೆ ಷಣ್ಮುಖ ಸ್ವಾಮಿಗಳೆಂದು ಕರೆಯುತ್ತ ಬಂದಿದ್ದಾರೆಂದು ಹೇಳಿದ್ದಾರೆ. ‘ನಿರಾಲಂಬಬಶರಣ’ ಎಂಬುದು ಷಣ್ಮುಖ ಸ್ವಾಮಿಗಳ ಹೆಸರನ್ನು ಪರ್ಯಾಯವಾಗಿ ಸೂಚಿಸಿರುವ ವ್ಯಕ್ತಿಸೂಚಕ ಪದವಾಗಿರದೆ ಅಧ್ಯಾತ್ಮದ ಉನ್ನತ ಸ್ಥರವನ್ನು ಸೂಚಿಸುತ್ತದೆ. ಲೋಕದಲ್ಲಿ ತೊಡಗುವ ಭಕ್ತ ಅನುಭಾವ ಮಾರ್ಗದಲ್ಲಿ ನಡೆದು ಅನುಭಾವಿ  ಶರಣನಾಗಿ ವಚನಗಳನ್ನು ಹೇಳುವಂತಹನಾಗುತ್ತಾನೆ.ಅಂತಹ ಭಕ್ತನ ಅನುಭಾವದ ಸ್ಥಿತಿಯನ್ನೇ ʼತೂರ್ಯನಿರಾಲಂಬ ಶರಣʼ ಎಂಬ ಪದವು ಧ್ವನಿಸುತ್ತದೆ.ಹೀಗಾಗಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ಕರ್ತೃ ನಿರಾಲಂಬ ಶರಣ ಎಂಬುದಕ್ಕಿಂತ    ಷಣ್ಮುಖ ಸ್ವಾಮಿಗಳು ಎಂದು ಪರಿಗಣಿಸುವುದೇ ಸೂಕ್ತ. ಷಣ್ಮುಖಸ್ವಾಮಿಗಳು ತನ್ನ ವಚನ ವೊಂದರಲ್ಲಿ ‘ಷಣ್ಮುಖನೆಂಬ ಗಣೇಶ್ವರನ ಹೃದಯ ಕಮಲದಲ್ಲಿ’ ಎಂದು ತಮ್ಮ ಹೆಸರನ್ನು ಹೇಳಿ ಹಂತಹಂತವಾಗಿ ಮುನ್ನಡೆದು ಹೇಗೆ ತಾವು ಐಕ್ಯ ಪದವಿಯನ್ನು ಹೊಂದಿದರೆಂಬಲ್ಲಿ ಅವರು ದಾಟಿದ ಅವಸ್ಥೆಗಳನ್ನು ಗಣೇಶ್ವರರ ಹೆಸರುಗಳಿಗೆ ಸಂಕೇತವಾಗಿಸಿ ಕೊಟ್ಟಿದ್ದಾರೆ. ಈ ಅಂಶವೂ ಸಹ ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳು ಎಂಬುದನ್ನು ಬೆಂಬಲಿಸುತ್ತದೆ.

ಅಖಂಡೇಶ್ವರ ವಚನಗಳು ಹೆಸರಿನ ಬಗೆಗೆ ವಚನಗಳನ್ನು ಸಂಪಾದಿಸಿದ ಸಂಪಾದಕರಲ್ಲಿ ಭಿನ್ನಾಭಿಪ್ರಾಯವಿದೆ. ಎಲ್ಲಾ ತಾಡವೋಲೆ ಮತ್ತು ಕೋರಿ ಕಾಗದಗಳಲ್ಲಿ “ಷಣ್ಮುಖ ಸ್ವಾಮಿಗಳು ನಿರೂಪಿಸಿದ ತೂರ್ಯ ನಿರಾಲಂಬ ಶರಣನ ಅರುಹಿನ ಷಟ್‌ಸ್ಥಲದ ವಚನ” ಎಂದು ಕಂಡುಬರುತ್ತದೆ. ‘ಅಖಂಡೇಶ್ವರ’ ಎಂಬುದು ಷಣ್ಮುಖ  ಶಿವಯೋಗಿಗಳ ವಚನಗಳ  ಅಂಕಿತವಾಗಿದೆ. ತಮ್ಮ ಗುರುವಿನ ಹೆಸರನ್ನೇ ಅಂಕಿತವನ್ನಾಗಿ ಬಳಸಿದ್ದಾರೆ. ಈ ವಚನಗಳನ್ನು ಬಸವಣ್ಣನ ವಚನಗಳು; ಅಲ್ಲಮನ ವಚನಗಳು ಎಂದು ಕರೆಯುವ ಹಾಗೆ ಷಣ್ಮುಖ ಶಿವಯೋಗಿಯ ವಚನಗಳು ಎಂದು ಕರೆಯಬೇಕು. ಆದರೆ ಕೆಲವು ಸಂಪಾದಕರು.

೧. ಶ್ರೀ ಷಣ್ಮುಖ ಶಿವಯೋಗಿ ಕೃತ ಅಖಂಡೇಶ್ವರ ವಚನಗಳು (ಶ್ರೀ ಸಿದ್ಧವೀರದೇವರು, ಹೊಸಮಠ) ೨. ಷಣ್ಮುಖ ಶಿವಯೋಗಿ ವಿರಚಿತ ಅಖಂಡೇಶ್ವರ ವಚನಗಳು (ವಿ. ಶಿವಾನಂದ) ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ. ಈ ಬಗೆಗೆ ಚರ್ಚಿಸಿದ ಹ. ನಂ. ವಿಜಯಕುಮಾರರವರು ಪೂರ್ವದ ವಚನಗಳನ್ನು ಕರ್ತೃಗಳ ಹೆಸರಿನಲ್ಲಿ ಕರೆಯುವ ಹಾಗೆ ‘ಷಣ್ಮುಖ ಸ್ವಾಮಿಗಳ  ವಚನಗಳೆಂದೇ’ ತಾವು ಸಂಪಾದಿಸಿದ ವಚನಗಳಿಗೆ ಹೆಸರಿಟ್ಟಿದ್ದಾರೆ. ಇತ್ತೀಚಿಗೆ ಸಮಗ್ರ ವಚನ ಸಂಪುಟ ಮಾಲಿಕೆಯಲ್ಲಿಯ

ಸಂಕೀರ್ಣ ವಚನ ಸಂಪುಟ ೯ ರಲ್ಲಿ ಷಣ್ಮುಖ ಶಿವಯೋಗಿಯ ವಚನಗಳನ್ನು ‘ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನಗಳು ಎ೦ದು ಕರೆದಿದ್ದಾರೆ. ಹ. ನಂ. ವಿಜಯಕುಮಾರವರು ಸಂಪಾದಿಸಿದ ವಚನಗಳು ಸ್ಥಲ ಕಟ್ಟಿನ ವ್ಯಾಪ್ತಿಯಿಂದ ಹೊರಗುಳಿದಿವೆ. ಉಳಿದ ಸಂಪಾದಕರು ಸ್ಥಲಕಟ್ಟಿಗನುಗುಣವಾಗಿ ವಚನಗಳನ್ನು ಸಂಪಾದಿಸಿದ್ದಾರೆ.

 ವಚನಗಳ ಸಂಪಾದನೆಯ ಇತಿಹಾಸ : ವಚನಗಳಲ್ಲೆಲ್ಲ ಪ್ರಪ್ರಥಮವಾಗಿ ಮುದ್ರಿತಗೊಂಡ ವಚನಗಳು ಷಣ್ಮುಖ ಶಿವಯೋಗಿಯ ಷಟ್‌ಸ್ಥಲ ವಚನಗಳೇ ಆಗಿವೆ. ವಚನ ಸಾಹಿತ್ಯದಲ್ಲಿ ಈ ವಚನಗಳಿಗೆ ತನ್ನದೇ ಆದ ಒಂದು ಐತಿಹಾಸಿಕ ಮಹತ್ವ ಇದೆ. ಆರಂಭದಲ್ಲಿ ಪ್ರಕಟಗೊಂಡ ಈ ವಚನಗಳು ಶಾಸ್ತ್ರೀಯವಾಗಿ ಸಂಪಾದಿಸಲ್ಪಟ್ಟಿರುವುಗಳಾಗಿರದೆ ಪೇಟೆ ಅಥವಾ ಬಾಜಾರು ಪ್ರತಿಯಾಗಿದ್ದವು. ಪ್ರಥಮಬಾರಿಗೆ ‘ಅಖಂಡೇಶ್ವರ ವಚನ’ ಶೀರ್ಷಿಕೆಯಡಿಯಲ್ಲಿ ‘ಉಮಾ ಮಹೇಶ್ವರಿ ಪ್ರೆಸ್’ ಚಿತ್ತೂರು ಇವರು ೧೮೮೪ರಲ್ಲಿ ಪ್ರಕಟಿಸಿದರು. ೧೮೯೦ರಲ್ಲಿ ‘ಗ್ರಂಥರತ್ನಾಕರ’ ಮುದ್ರಣ ಶಾಲೆಯವರು ಅಖಂಡೇಶ್ವರ ವಚನ ಶಾಸ್ತ್ರ ಹೆಸರಿನಲ್ಲಿ ೧೩೨ ವಚನಗಳನ್ನು ಪ್ರಕಟಿಸಿದರು. ೧೯೧೧ರಲ್ಲಿ ಶಿವಲಿಂಗಶೆಟ್ರುರವರು ೧೩೦ ವಚನಗಳನ್ನು ಅಖಂಡೇಶ್ವರ ವಚನಶಾಸ್ತ್ರ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದರು. ೧೯೨೩ರಲ್ಲಿ ಬಳ್ಳಾರಿಯ ವೀರಶೈವ ಬುಕ್ ಡಿಪೋದವರು ೧೬೮ ವಚನಗಳನ್ನು ಅಖಂಡೇಶ್ವರ ವಚನವು ಹೆಸರಿನಲ್ಲಿ ಪ್ರಕಟಿಸಿದರು. ೧೯೫೯ರಲ್ಲಿ ಬಿ. ಜೆ. ಜಾನಕಿರವರು ಷಣ್ಮುಖ ಶಿವಯೋಗಿಗಳ ೮೫ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಇವೆಲ್ಲವೂ ಜನಪ್ರಿಯ ಸ೦ಪಾದನ ಕೃತಿಗಳಾಗಿದ್ದು ಶಾಸ್ತ್ರೀಯ ಮತ್ತು ಶುದ್ಧಾತ್ಮಕವಾಗಿ ಸಂಪಾದಿತಗೊಂಡವುಗಳಲ್ಲ. ೧೯೪೪ರಲ್ಲಿ ಎರಡು ಹಸ್ತ     ಪ್ರತಿಗಳನ್ನುಪಯೋಗಿಸಿಕೊಂಡು ಸಿದ್ಧವೀರದೇವರು ಹೊಸಮಠರವರು ‘ಶ್ರೀ ಷಣ್ಮುಖ ಸ್ವಾಮಿಕೃತ ಅಖಂಡೇಶ್ವರ  ವಚನಗಳು’ ಹೆಸರಿನಲ್ಲಿ ಸಂಪಾದಿಸಿದರು. ಇದನ್ನು ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯ ಎರಡನೆಯ ಕುಸುಮವಾಗಿ ಧಾರವಾಡದ ಮುರುಘಾಮಠದವರು ಪ್ರಕಟಿಸಿದ್ದರು. ೧೯೫೧ರಲ್ಲಿ ಈ ಕೃತಿ ಪುನರ್‌ಮುದ್ರಣ ಪಡೆಯಿತು. ಕೆ. ಎಸ್. ಪಾಟೀಲರವರು ಈ ಆವೃತ್ತಿಯ ಜೊತೆಗೆ ಒಂದು ತಾಳೆಯೋಲೆ ಪ್ರತಿ, ಎರಡು ಕಾಗದದ ಪ್ರತಿ, ಬಳ್ಳಾರಿಯ ಕಲ್ಲಚ್ಚಿನ ಪ್ರತಿಗಳನ್ನುಪಯೋಗಿಸಿಕೊಂಡು ೧೯೫೯ರಲ್ಲಿ ಮುರುಘಾಮಠದ ಮೂಲಕ ಪರಿಷ್ಕರಿಸಿ ಪ್ರಕಟಿಸಿದರು. ಈ ಮೂರು ಆವೃತ್ತಿಯಲ್ಲಿಯ  ಒಟ್ಟು ಪ್ರಕಟವಾದ ವಚನಗಳ ಸಂಖ್ಯೆ ೭೧೭, ಈ ಕೃತಿ ೧೯೮೬ರಲ್ಲಿ ನಾಲ್ಕನೇ ಪರಿಷ್ಕೃತ ಮುದ್ರಣದ ಹೆಸರಿನಲ್ಲಿ ಪ್ರಕಟವಾಗಿದೆ. ಆದರೆ ಮೂರನೆಯ ಮುದ್ರಣದಲ್ಲಿ ಇದ್ದಂತದ ವಿವರಕ್ಕಿಂತ ಯಾವುದೇ ಬದಲಾವಣೆ ಆಗಿಲ್ಲ. ಸಂಪಾದಕರ ಹೆಸರು ಮಾತ್ರ ಶ್ರೀ ನಿ.ಪ್ರ.ಸ್ವ, ಪ್ರಭುಸ್ವಾಮಿಗಳು ಎಂದು ಬದಲಾಗಿದೆ. ಹ. ನಂ. ವಿಜಯಕುಮಾರರವರು ೧೯೫೯ರ  ವೇಳೆಗೆ ಮೂರು ಆವೃತ್ತಿಗಳನ್ನು ಕಂಡಿದ್ದ ೭೧೭ಕ್ಕಿಂತ ಹೆಚ್ಚಿನ ವಚನಗಳು ದೊರೆಯದೆ ಇದ್ದರೂ ಹುಮನಾಬಾದಿನ ವೀರಶೈವ ಕಲ್ಯಾಣ ಪರಿಷತ್ತಿನವರ ಕೋರಿಕೆಯ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಎರಡು ತಾಳೆವೋಲೆ ಪ್ರತಿ ಮತ್ತು ೧ ಕಾಗದದ ಪ್ರತಿ ಹಾಗೂ ಶ್ರೀ ಸಿದ್ಧವೀರ ದೇವರು ಹೊಸಮಠ ಸಂಪಾದಿಸಿದ ಮುದ್ರಿತ ಆವೃತ್ತಿಯನ್ನು ಉಪಯೋಗಿಸಿಕೊಂಡು ೧೯೭೭ರಲ್ಲಿ ಶಾಸ್ತ್ರೀಯವಾಗಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಈ ಸಂಪಾದನೆಯ ವಿಶೇಷ ಎಂದರೆ, ಉಳಿದ ಸಂಪಾದನ ಕೃತಿಗಳಲ್ಲಿಯ ಹಾಗೆ ‘ಶ್ರೀ ಷಣ್ಮುಖ ಸ್ವಾಮಿ ಕೃತ ಅಖಂಡೇಶ್ವರ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗದೆ ‘ಷಣ್ಮುಖ ಸ್ವಾಮಿಗಳ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗಿದೆ. ೧೯೮೦ರಲ್ಲಿ ವಿ. ಶಿವಾನಂದರವರು ಷಣ್ಮುಖ ಶಿವಯೋಗಿಗಳು ಜೀವಿಸಿದ್ದ  ಪರಿಸರದಲ್ಲಿ

 ದೊರೆತ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳಲ್ಲಿಯ ಪ್ರಾದೇಶಿಕ ಮಹತ್ವವಿರುವದನ್ನು ಗುರುತಿಸಿ ಒಟ್ಟು ನಾಲ್ಕು ಕೋರಿ ಕಾಗದ ಪ್ರತಿಗಳು ಮತ್ತು ಈಗಾಗಲೇ ಪ್ರಕಟಗೊಂಡ ಎರಡು ಮುದ್ರಿತ ಪ್ರತಿಗಳನ್ನುಪಯೋಗಿಸಿಕೊಂಡು ಸಂಪಾದಿಸಿ ಕೊಟ್ಟಿದ್ದಾರೆ. ಷಣ್ಮುಖ ಶಿವಯೋಗಿಮಠದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಪ್ರಕಟಿಸಿದ್ದಾರೆ. ಸಮಗ್ರ ವಚನ ಸಂಪುಟದ ಜನಪ್ರಿಯ ಆವೃತ್ತಿಯ ಮಾಲೆಯಲ್ಲಿ ಸಂಕೀರ್ಣ ವಚನ ಸಂಪುಟ – ೯ರಲ್ಲಿ ವೀರಣ್ಣ ರಾಜೂರವರು ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಇದರಲ್ಲಿ ಹೆಚ್ಚಿನ ವಿಶೇಷ ಇಲ್ಲ. ಇದರ ಜೊತೆಗೆ ಅಖಂಡೇಶ್ವರ ಗ್ರಂಥ ಮಾಲೆಯಡಿಯಲ್ಲಿ ಅಖಂಡೇಶ್ವರ ವಚನ ಮಂಜರಿ ಹೆಸರಿನಲ್ಲಿ ೨೦೪ ವಚನಗಳು ಪ್ರಕಟವಾಗಿವೆ.

ಷಣ್ಮುಖ ಶಿವಯೋಗಿಗಳ ಕಾಲ

ಇವರ ಕಾಲದ ಬಗೆಗೆ ಹಲವಾರು ವಿದ್ವಾ೦ಸರು ಚರ್ಚಿಸಿ   ವ್ಯಕ್ತಪಡಿಸಿರುವ ಅಭಿಪ್ರಾಯದಲ್ಲಿ ಅಷ್ಟಾಗಿ ವಿರೋಧ ಕಂಡು ಬರುವುದಿಲ್ಲ. ವಿ. ಶಿವಾನಂದರವರು ಷಣ್ಮುಖ ಶಿವಯೋಗಿ ವಿರಚಿತ ಅಂಡೇಶ್ವರ ವಚನಗಳು, ಪ್ರಸ್ತಾವನೆಯಲ್ಲಿ ಇವರ ಕಾಲದ ಬಗೆಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿಯ ಎರಡು ಆಧಾರಗಳು ಇವರ ಕಾಲದ ಬಗೆಗೆ ಖಚಿತವಾದ ಮಾಹಿತಿಯನ್ನು ಒದಗಿಸುತ್ತವೆ.

೧.ಕಾಡಸಿದ್ಧೇಶ್ವರ ವಚನಗಳ ಟೀಕೆಯೊಂದು ದೊರೆತಿದ್ದು ಅದರಲ್ಲಿ ಷಣ್ಮುಖ ಶಿವಯೋಗಿ ಮತ್ತು ಅವರ ಸಮಕಾಲೀನ ವ್ಯಕ್ತಿಗಳ ಉಲ್ಲೇಖವನ್ನೊಳಗೊಂಡ ವಚನವೊಂದಿದೆ. ‘ನಿನ್ನಿನವರು ಇಂದಿನವರು ಹೋದ ದಾರಿ ಒ೦ದಲ್ಲದೆ ಎರಡಿಲ್ಲ. ನೋಡೆಂದನಯ್ಯಾ ಕಾಡಿನೊಳಗಾದ ಶಂಕರ ಪ್ರಿಯ ಚನ್ನಕದ೦ಬಲಿಂಗ ಪ್ರಭುವೆ. ಈ ವಚನದ ಟೀಕೆಯಲ್ಲಿ (ಕಾಡಸಿದ್ಧೇಶ್ವರ ವಚನ ಸಂ, ಹೊಳಲು ಚಂದ್ರಶೇಖರಶಾಸ್ತ್ರಿ, ಪು. ೪೭೮ ಹುಬ್ಬಳ್ಳಿ) ನಿನ್ನಿನವರು ಯಾರೆಂಬುದನ್ನು ಹೇಳಿ, ಇಂದಿನವರೆಂದಡೆ ತುರ್ತು ಈ ಕಲಿಯುಗದೊಳಗೆ ಸಿದ್ದೇಶ್ವರ ಸ್ವಾಮಿಗಳು. ಸಿಂಗಳಾಪುರದ ಬಸವರಾಜದೇವರು, ಘನಲಿಂಗದೇವರು, ಬೋಳಬಸವೇಶ್ವರ ಸ್ವಾಮಿಗಳು. ಶೀಲವಂತ ಚೆನ್ನಮಲ್ಲ ಸ್ವಾಮಿಗಳು. ಷಣ್ಮುಖಸ್ವಾಮಿಗಳು ಇಂತೀ ಗಣಂಗಳು ಲಿಂಗೈಕ್ಯ ರಾಗಿರುವಲ್ಲಿ ಗುಪ್ತರಾಗಿರುವರು ಎಂದಿದೆ. ಈ  ವ್ಯಾಖ್ಯಾನದಲ್ಲಿಯ ವಿವರದ ಪ್ರಕಾರ ಷಣ್ಮುಖ ಶಿವಯೋಗಿಗಳು ಕಾಡಸಿದ್ಧೇಶ್ವರರಿಗಿಂತ ಪ್ರಾಚೀನರು ಎ೦ಬುದಾಗಿ ತಿಳಿದುಬರುತ್ತದೆ. ಕಾಡಸಿದ್ದೇಶ್ವರರ  ಕಾಲ ೧೭೦೦-೨೫ ಎ೦ದು ಅಂದಾಜು ಮಾಡಲಾಗಿದೆ. ೧೭೦೦ಕ್ಕಿಂತ ಪೂರ್ವದಿಂದಲೂ ಜೀವಿಸಿದ್ದರು ಎಂಬುದಾಗಿ ತಿಳಿದುಬರುತ್ತದೆ.  

೨. ಅಖಂಡೇಶ್ವರ ವಚನಗಳ ಪ್ರಾಚೀನ ಮುದ್ರಿತ ಪ್ರತಿಗಳಲ್ಲಿ ಶ್ರೀ ಷಣ್ಮುಖ ಸ್ವಾಮಿಗಳು ಶ್ರೀ ಬಸವಲಿಂಗದೇವರಿಗೆ ನಿರೂಪಿಸಿದ ಅರುಹಿನ ಷಡುಸ್ಥಲದ ವಚನ ಎಂಬ ಉಲ್ಲೇಖ ಇದ್ದು ಈ ಬಸವಲಿಂಗಸ್ವಾಮಿಗಳು ಕಲಬುರ್ಗಿಯ ಗದ್ದುಗೆ ಮಠದ ಮೂಲ ಸ್ಥಾಪಕರಾಗಿದ್ದು ಜೀವಿಸಿದ್ದ ಕಾಲ ೧೭೨೫ ಎಂದು ತಿಳಿದುಬಂದಿದೆ. ಈ ವೇಳೆ ಗಾಗಲೇ ಷಣ್ಮುಖ ಶಿವಯೋಗಿಗಳು ವೃದ್ಧರಾಗಿರಬೇಕು ಎ೦ದೆನಿಸುತ್ತದೆ.  ಜೇವರ್ಗಿಯ ಷಣ್ಮುಖ ಶಿವಯೋಗಿ ಮಠದ ಇತ್ತೀಚಿನ ಮಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ತಮ್ಮ ಮಠದ ಹಳೆಯ ಕಾಗದಗಳಲ್ಲಿ ದೊರೆತ ಆಧಾರದ ಮೇಲೆ ಇವರ ಕಾಲವನ್ನು ಜನನ ೧೬೩೯ ಶೂನ್ಯ ಪಟ್ಟಕ್ಕೊಡೆಯರಾದ ಕಾಲ ಕ್ರಿ. ಶ. ೧೬೫೯. ಲಿಂಗೈಕ್ಯರಾದ ಕಾಲ ೧೭೧೧ ಎಂದು ನಿರೂಪಿಸಿ ಒಟ್ಟು ೧೬೩೯-೧೭೧೧ರ ವರೆಗೆ ೭೨ ವರ್ಷಗಳ ಕಾಲ ಜೀವಿಸಿದ್ದರು ಎಂಬ ಅಂಶವನ್ನು ಒದಗಿಸಿದ್ದಾರೆ. ಈ ಹೇಳಿಕೆಯನ್ನೇ ಸದ್ಯಕ್ಕೆ ಇಟ್ಟುಕೊಳ್ಳಬಹುದಾಗಿದೆ.

ಜೀವನ ಚರಿತ್ರೆ;

ಷಣ್ಮುಖ ಶಿವಯೋಗಿಗಳು ಜೀವಿಸಿದ್ದ ಕಾಲದಲ್ಲಾಗಲೀ ನಂತರದ ಕಾಲದಲ್ಲಾಗಲೀ ಅವರ ಚರಿತ್ರೆಯನ್ನು ಯಾವ ಕವಿಗಳೂ ಬರೆದ ಹಾಗೆ ಕ೦ಡು ಬರುವುದಿಲ್ಲ. ಅವರ ಚರಿತ್ರೆಯನ್ನು ತಿಳಿಯಲು ಇರುವ ಆಧಾರಗಳು, ಜೇವರ್ಗಿಯ ಮಠದಲ್ಲಿಯ ಕೆಲವು ಕಾಗದಗಳಲ್ಲಿಯ ವಿವರಗಳು ಐತಿಹ್ಯಗಳು ಜನಪ್ರತೀತಿ ಗಳಷ್ಟೇ ಆಗಿವೆ. ಇವುಗಳನ್ನು ಸಮರ್ಥಿಸಲು ಬಲವಾದ ಆಧಾರಗಳಿಲ್ಲವಾದರೂ ಒಪ್ಪಿಕೊಳ್ಳಲು ಅಡ್ಡಿಯಿಲ್ಲ. ಈ ಆಧಾರ ಗಳನ್ನೇ ಉಪಯೋಗಿಸಿಕೊಂಡು ಆಧುನಿಕರಲ್ಲಿ ಗುಂಜಿಹಳ್ಳಿ ಶ್ರೀ ಷಡಕ್ಷರ ಕವಿಯವರು ಶ್ರೀ ಷಣ್ಮುಖ ಶಿವಯೋಗೀಶ್ವರ ಕಾವ್ಯರತ್ನಾಕರ ಎಂಬ ಕಾವ್ಯವನ್ನು ರಚಿಸಿದ್ದಾರೆ. ವಿ. ಸಿದ್ಧ ರಾಮಣ್ಣರವರು ಷಟ್‌ಸ್ಥಲಜ್ಯೋತಿ ಷಣ್ಮುಖಸ್ವಾಮಿ ಎಂಬ ಸಂಗೀತ ಪ್ರಧಾನ ನಾಟಕ ರಚಿಸಿದ್ದಾರೆ. ಎಚ್. ತಿಪ್ಪೇರುದ್ರ ಸ್ವಾಮಿಯವರು ‘ಜಡದಲ್ಲಿ ಜಂಗಮ’ ಎ೦ಬ ಕಾದಂಬರಿಯನ್ನು ರಚಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯʼ ಜೇವರ್ಗಿಯು’ ಇವರ ಜನ್ಮಸ್ಥಳ. ಜೇವರ್ಗಿಯ ಹಿರೇಗೌಡರ ಮನೆತನದಲ್ಲಿಯ ಮಲ್ಲಪ್ಪಶೆಟ್ಟಪ್ಪ ಮತ್ತು ದೊಡ್ಡಮ್ಮ ಎಂಬ ದಂಪತಿಗಳಿಗೆ ಪುತ್ರರಾಗಿ ಜನಿಸಿದರು. ಮು೦ದ ಅಖಂಡೇಶ್ವರ ಗುರುಗಳ ಪರಿಸರದಲ್ಲಿ ಬೆಳೆದರು. ಪ್ರಾರಂಭದಲ್ಲಿ ಚರಜ೦ಗಮರಾಗಿ ಲೋಕ ಸಂಚಾರ ಕೈಗೊಂಡು ಸಮಕಾಲೀನ ಜಡ ಸಮಾಜದಲ್ಲಿ ಜ೦ಗಮತೆಯನ್ನು ಮೂಡಿಸುತ್ತ ಪರ್ಯಟನೆ ಮಾಡುತ್ತ ಕೊನೆಗೆ ಜೇವರ್ಗಿ ಸಮೀಪದ ಕೋಳಕೂರ ಗ್ರಾಮದ ಭೀಮಾನದಿ ತಟಾಕದ ಭೀಮಕೊಳ್ಳದಲ್ಲಿ ನೆಲಸಿ ದೀರ್ಘ ತಪಸ್ಸು ಮಾಡಿ ಯೋಗಸಿದ್ಧಿ ಪಡೆದುಕೊಂಡು ವಚನ ರಚನೆ ಮಾಡಿದರು. ಇವರ ದಿವ್ಯ ಸಾಧನೆಯನ್ನು ಮನಗಂಡ ಅಖಂಡೇಶ್ವರ ಸ್ವಾಮಿಗಳು ಜೋಗಿಕೊಳ್ಳದಿಂದ ಜೇವರ್ಗಿಗೆ  ಬರಮಾಡಿಕೊಂಡು ಕ್ರಿ. ಶ. ೧೬೫೯ರಲ್ಲಿ ತಾವು ಸ್ಥಾಪಿಸಿದ್ದ ವಿರಕ್ತ ಮಠದ ಪಟ್ಟಗಟ್ಟಿದರು. ಹೀಗೆ ಇವರು ಅಖಂಡೇಶ್ವರರು ಸ್ಥಾಪಿಸಿದ ಮಠದ ಅಧಿಪತಿಯಾಗಿ ಧರ್ಮತತ್ತ್ವ ಬೋಧನೆ ಮಾಡುತ್ತ ಅಲ್ಲಿಯೇ ಜೀವಿಸಿದ್ದು ಐಕ್ಯವಾದರು. ಇವರು ಗುರು ಅಖಂಡೇಶ್ವರರ ಅಂಕಿತದಲ್ಲಿ ವಚನಗಳನ್ನು ಬರೆದು ಪ್ರಸಿದ್ಧ ರಾದ್ದರಿಂದ ಮತ್ತು ಅಖಂಡೇಶ್ವರರ ನಂತರ ಪ್ರಸಿದ್ಧವಾದ ಆ ಮಠ ಷಣ್ಮುಖ ಶಿವಯೋಗಿಗಳ ಮಠ ಎಂದೇ ಹೆಸರು ಬಂದಿತು.

ಷಣ್ಮುಖ ಶಿವಯೋಗಿಗಳು ಬಸವಯುಗದ ವಚನಗಳ ಪರಿಭಾಷೆ, ವಸ್ತುಧೋರಣ, ರೀತಿ, ನೀತಿ ಇತ್ಯಾದಿಗಳನ್ನು ಬಸವೋತ್ತರ ಯುಗದಲ್ಲಿ ಪ್ರತಿನಿಧಿಸಿದ ವ್ಯಕ್ತಿ ಮಾತ್ರವಾಗಿರದೆ, ಬಸವಾದಿಗಳ ಪ್ರಗತಿಪರ ಸಮಾಜೋಧಾರ್ಮಿಕ ಸುಧಾರಣಾ ತತ್ತ್ವಗಳನ್ನು, ಜೀವಿಸಿದ್ದ ಯುಗದಲ್ಲಿ ಮುಂದುವರೆಸಿದರು. ಇವರು ಅಂತ್ಯಜರಲ್ಲಿ ಕೆಲವರಿಗೆ ಲಿಂಗದೀಕ್ಷೆ ನೀಡಿದ್ದಲ್ಲದೆ ಸಹಭೋಜನ ಮಾಡಿದರು ಎಂಬ ಹೇಳಿಕೆಯನ್ನು ಸಮರ್ಥಿಸುವಂತೆ ಜೇವರ್ಗಿಯ ಹರಿಜನ ಕೇರಿಯಲ್ಲಿ ಇವರ ಗದ್ದುಗೆಯ ಕುರುಹುಗಳನ್ನು ಕಾಣಬಹುದಾಗಿದೆ. ಅಂತ್ಯಜರು ಇವರನ್ನು ಗುರುವಾಗಿ ಸ್ವೀಕರಿಸಿದ್ದರು. ಒಂದು ಮುದಿ ಎತ್ತು ಅವಸಾನದ  ಸ್ಥಿತಿಯಲ್ಲಿರುವಾಗ ಅದನ್ನು ಆರೈಕೆ ಮಾಡಿ ಅದರಿಂದ ಕಂಥಾಭಿಕ್ಷೆ ಕಾಯಕ ಮಾಡಿಸಿದರೆಂಬ ಐತಿಹ್ಯ ಇದೆ. ಈಗಲೂ ಜೇವರ್ಗಿಯ ಮಠದ ಮುಂದುಗಡೆ ನಂದಿಯ ಸಮಾಧಿ ಇದೆ. ಸುರಪುರದ ದೊರೆ ವೆಂಕಟಪ್ಪನಾಯಕನ ಮಹಾಮಂತ್ರಿ ನಿಷ್ಠೆಯ ವೀರಪ್ಪನವರು ಷಣ್ಮುಖ ಶಿವಯೋಗಿಗಳಿಗೆ ರಾಜಮರ್ಯಾದೆ ನೀಡಿ ಅವರನ್ನು ರಾಜಗುರುಗಳೆಂದು ಸ್ವೀಕರಿಸಿ ಜೇವರ್ಗಿಯಲ್ಲಿ ಅವರಿಗಾಗಿ ಒ೦ದು ಮಠವನ್ನು ಕಟ್ಟಿಸಿದ್ದರು. ಹೀಗೆ ಇವರು ವಿರಕ್ತಮಠದ ಅಧಿಪತಿಯಾಗಿ ಲೋಕೋದ್ಧಾರವನ್ನು ಕೈಗೊಳ್ಳುತ್ತಲೇ ಕ್ರಿ. ಶ. ೧೭೧೧ರಲ್ಲಿ ಶಿವಸಾಯುಜ್ಯ ಪದವಿಯನ್ನು ಪಡೆದರು. ಇವರ ಹೆಸರಿನ ರಥೋತ್ಸವವು ಪ್ರತಿವರುಷ ವೈಶಾಖ ಬಹುಳ ಪಂಚಮಿ ತಿಥಿಗೆ ಜೇವರ್ಗಿಯಲ್ಲಿ ಇಂದಿಗೂ ವೈಭವದಿಂದ ನಡೆಯುತ್ತದೆ.  

 ಕನ್ನಡ ಸಂಸ್ಕೃತಿಯಲ್ಲಿ  ಷಣ್ಮುಖ ಶಿವಯೋಗಿಗಳ ಕುರುಹುಗಳು :

 ಕನ್ನಡ ಸಾಂಸ್ಕೃತಿಕ ಪರಿಸರದಲ್ಲಿ ಷಣ್ಮುಖ ಶಿವಯೋಗಿಗಳ ಕುರುಹುಗಳು ಅಲ್ಲಲ್ಲಿ ಸಿಗುತ್ತವೆ. ಇವರು ಐಕ್ಯವಾದ ಗದ್ದುಗೆ ಜೇವರ್ಗಿಯಲ್ಲಿ ಇಂದಿಗೂ ಇದ್ದು ಪೂಜೆಗೊಳ್ಳುತ್ತಿದೆ. ಅಖಂಡೇಶ್ವರರು ಜೇವರ್ಗಿಯಲ್ಲಿ ಮಠವನ್ನು ಕಟ್ಟಿಸಿದ್ದರೂ ಇ೦ದಿಗೂ ಅದನ್ನು ಷಣ್ಮುಖ ಶಿವಯೋಗಿಗಳ ಮಠ ಎಂದೇ ಕರೆಯುತ್ತಾರೆ, ಜೇವರ್ಗಿಯ ಹರಿಜನ ಕೇರಿಯಲ್ಲಿಯೂ ಇವರ ಗದ್ದುಗೆ ಇದೆ. ಇವರ ಹೆಸರಿನ ಮಠಗಳು ಜೀವರ್ಗಿಯಲ್ಲಿ ಮಾತ್ರವಲ್ಲದೆ ಸುರಪುರ, ನೆಲೋಗಿ ಮತ್ತು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿರ್ಲಗಾ ತಾಲ್ಲೂಕಿನ ತಾಂಬಾಳಗಳಲ್ಲಿಯೂ  ಇವೆ. ಇವರು ಪೂಜೆ, ಅಧ್ಯಯನ ಮತ್ತು ಬರವಣಿಗೆಗೆ ತೊಡಗುತ್ತಿದ್ದ ಕೋಳತೂರ ಗ್ರಾಮದ ಭೀಮಾನದಿ ಹತ್ತಿರದ ಯೋಗಿಕೊಳ್ಳದ ಸುಂದರ ತಾಣವನ್ನು ಈಗಲೂ ಕಾಣಬಹುದು. 

ವಚನಗಳು ಮತ್ತು ಲಘು ಕೃತಿಗಳು:

 ಇವರು ವಚನಗಳನ್ನು ಮತ್ತು ಕೆಲವು ಲಘು ಕೃತಿಗಳನ್ನು ಬರೆದಿದ್ದಾರೆ. ಇವರು ಬರೆದಿರುವ ಅಖಂಡೇಶ್ವರ ಅಂಕಿತದ ೭೧೭ ವಚನಗಳೂ ಉಪಲಬ್ಧತವಾಗಿವೆ. ೪೧ ಚೌಪದಿಗಳುಳ್ಳ ಅಖಂಡೇಶ್ವರ ಜೋಗುಳ ಪದಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಇವರ ಬರೆದಿದ್ದವುಗಳೆಂದು ಹೇಳಲಾದ ಏಳು ಪರಿವರ್ಧಿನಿ ಷಟ್ಪದಿಯುಳ್ಳ ಪ೦ಚಸಂಜ್ಞೆಗಳ ಪದ ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ನಿರಾಳಸದ್ಗುರುಸ್ತೋತ್ರ ದೊರೆತವುಗಳಾಗಿವೆ. ಇವುಗಳ ಜೊತೆಗೆ ಇವರು ಷಣ್ಮುಖ ಶಿವಯೋಗಿಗಳ ನಾಂದ್ಯ, ಪ್ರಾಣಲಿಂಗಸ್ಥಲದ ವ್ಯಾಖ್ಯಾನ ಕಾಲಜ್ಞಾನ ಸಾಹಿತ್ಯಗಳನ್ನು ಬರೆದಿರುವುದಾಗಿ ಜೇವರ್ಗಿಯ ಷಣ್ಮುಖ ಶಿವಯೋಗಿ  ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ  ಮಹಾಸ್ವಾಮಿಗಳು, ಮಠಕ್ಕೆ ನಾನು ಭೇಟಿಕೊಟ್ಟಾಗ ತಿಳಿಸಿದ್ದಾರೆ. ಸದ್ಯಕ್ಕೆ ಇವು ಅನುಪಲಬ್ದವಾಗಿವೆ.

 ಷಣ್ಮುಖ ಶಿವಯೋಗಿಗಳೇ ತಮ್ಮ ವಚನಗಳನ್ನು ಸ್ಥಲಕಟ್ಟಿಗನುಗುಣವಾಗಿ ಜೋಡಿಸಿದ್ದಂತೆ ಕಾಣುತ್ತದೆ. ಈ ವಚನಗಳು ಮುಖ್ಯವಾಗಿ ವೀರಶೈವ ಸಿದ್ಧಾಂತವನ್ನು ನಿರೂಪಿಸುವ ಗ್ರಂಥವಾಗಿ ಕಂಡುಬರುತ್ತದೆಯಾದರೂ , ತನ್ನ ಕಾಲದ ಇತರ  ವಚನಕಾರರಲ್ಲಿ ಇಲ್ಲದ ಸಾಮಾಜಿಕ ವಿಡಂಬನೆ ಕ್ರಾಂತಿಕಾರಿಕ ಆಲೋಚನೆ, ಅನುಭಾವ ತತ್ತ್ವದರ್ಶನಗಳನ್ನು  ಕಾಣಬಹುದಾಗಿದೆ. ಇವರ ವಚನಗಳು ೧೪ ಸ್ಥಲಗಳಲ್ಲಿ ವಿಭಜನೆಗೊಂಡಿವೆ. ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರ ಹೇಯಸ್ಥಲ, ಗುರುಕರುಣ ಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ ಪ೦ಚಾಕ್ಷರಿಸ್ಥಲ, ಭಕ್ತಸ್ಥಲ, ಮಾಹೇಶ್ವರಸ್ಥಲ, ಪ್ರಸಾದಿಸ್ಥಲ ಪ್ರಾಣಿಲಿಂಗಸ್ಥಲ, ಶರಣಸ್ಥಲ, ಐಕ್ಯಸ್ಥಲ.

ಷಣ್ಮುಖ ಶಿವಯೋಗಿಗಳು ಬಸವಾದಿ ಪರಂಪರೆಯ ವಚನಕಾರರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿದ್ದಾರೆ ಮತ್ತು ವಚನಗಳಿಂದ ಪ್ರಭಾವಿತರಾಗಿದ್ದಾರೆ. ಕರಗಳನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ. ಕೆಳಕಂಡ ವಚನಗಳಲ್ಲಿ ತನಗಿಂತ  ಪೂರ್ವದ ಬಸವಾದಿ ಪ್ರಮಥರನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ

ಎನ್ನ ತನುವೆಸವಣ್ಣನು

ಎನ್ನ ಮನವೆ ಚೆನ್ನಬವಣ್ಣನು

ಎನ್ನ ಪ್ರಾಣವೇ ಪ್ರಭುದೇವರು

(ಶರಣಸ್ಥಲ ವ. ಸಂ. ೮೨ ಪು. ೩೩೬)

ಮಾದಾರಚೆನ್ನಯ್ಯನ ಬಾಯಿತಾಂಬೂಲವ ಮೆಲುವೆ

ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನು೦ಬೆ

ಚೋಳಿಯಕ್ಕನ ಊಳಿಗದವನಾಗುವೆ

ಶ್ವಪಚಯ್ಯನ ಆಳಾಗಿರುವೆ

ಇನ್ನುಳಿದ ಸಕಲ ಗಣ೦ಗಳ ತೊತ್ತು ಬಂಟಲೆಂಕನಾಗಿ

ರಾಜಾಂಗಣ ಬಳಿಯುವೆನಯ್ಯಾ

(ಪ್ರಸಾದಿಸ್ಥಲ ವ. ಸಂ. ೪೨ ಪು. ೧೮೮೯)

ಇದೇ ರೀತಿ ಸಿದ್ಧರಾಮ, ಉರಿಲಿಂಗಪೆದ್ದಿ, ನಿಜಗುಣ ಶಿವಯೋಗಿ, ಅಕ್ಕಮಹಾದೇವಿ, ಬಿಬ್ಬಿ ಬಾಚಯ್ಯ, ಬೇಡರಕಣ್ಣಪ್ಪ ಮುಂತಾದ ನೂತನ ಪುರಾತನರನ್ನು ಒಂಭತ್ತು ವಚನಗಳಲ್ಲಿ ಸ್ಮರಿಸಿದ್ದಾನೆ.

ಬಸವಣ್ಣ, ಅಕ್ಕಮಹಾದೇವಿಯವರ ವಚನಗಳ ಪ್ರಭಾವ ಷಣ್ಮುಖ ಶಿವಯೋಗಿಗಳ ಮೇಲೆ ಯಾವ ರೀತಿ ಆಗಿದೆ ಎಂಬುದನ್ನು  ಹ. ನಂ.ವಿಜಯಕುಮಾರರವರು ತಾವು ಸಂಪಾದಿಸಿದ ಷಣ್ಮುಖ ಶಿವಯೋಗಿಗಳ ವಚನಗಳ ಕೃತಿಯ ಪ್ರಸ್ತಾವನೆಯಲ್ಲಿ   ನಿರೂಪಿಸಿದ್ದಾರೆ. ಆದಯ್ಯನ ವಚನಗಳ ಪ್ರಭಾವವೂ ಇವರ ವಚನಗಳ ಮೇಲಾಗಿರುವುದನ್ನು ಈ ಲೇಖನದಲ್ಲಿ ಪ್ರಥಮವಾಗಿ ಗುರುತಿಸಲಾಗಿದೆ.

ನೆರಕೆನ್ನೆಗೆ ತೆರೆಗಲ್ಲಕೆ

ಶರೀರ ಗೂಡುವೋಗದ ಮುನ್ನ…..  

ಲ್ಲುಹೋಗಿ ಬೆನ್ನುಬಾಗಿ

ಅನ್ಯರಿಗೆ ಹ೦ಗಾಗದ ಮುನ್ನ

(ಸ.ವ.ಸಂ. ೧ ವ.ಸಂ. ೧೬೧ ಪು. ೪೨)

ಬಸವಣ್ಣನವರ ಕಿರಿದಾದ ಈ ವಚನದಿಂದ ಪ್ರಭಾವಿತರಾಗಿ ಷಣ್ಮುಖ ಶಿವಯೋಗಿಗಳು ಸು. ಒಂದೂವರೆ ಪುಟದಷ್ಟು  ದೀರ್ಘವಾಗಿ ನಿರೂಪಿಸಿದ್ದಾರೆ.

ದೇಹವು ನಿಸ್ಸಾರವಾಗಿ ಯೌವ್ವನದ ಬಲಗೆಟ್ಟು

ಮುಪ್ಪಾವರಿಸಿ ಅಚೇತನಗೊಂಡು

ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾನಾಗಿ

ಆದಿವ್ಯಾದಿ ವಿಪತ್ತು

ರೋಗ ರುಜೆಗಳಿಂದ ಬಹು ದುಃಖಟ್ಟು

ಎದೆಗೂಡುಗಟ್ಟಿ ಬೆನ್ನು ಬಾಗಿ ಕಣ್ಣು ಒಳನಟ್ಟು

ಶರೀರ ಎಳಿತಾಟಗೊಂಡು ಕಾಲಮೇಲೆ ಕೈಯನೂರಿ

ಕೋಲ ಹಿಡಿದು ಏಳುತ್ತ ನಾನಾತರದ ದುಃಧಾವತಿಯಿಂದ

ರ್ತಕಟ್ಟು ನಷ್ಟವಾಗಿ ಹೋಯಿತು….

(ಸಂಸಾರ ಹೇಯಸ್ಥಲ ವ. ಸಂ. ೭)

ಈ ವಚನವು ಬಸವಣ್ಣನವರ ವಚನವು ಕೊಡುವಷ್ಟು ಸುಂದರವಾಗಿ ಅರ್ಥವಂತಿಕೆಯನ್ನು ಕೊಡಲಾರದು.

ನೀನೊಲಿದಡೆ ಕೊರಡು ಕೊನರುವುದಯ್ಯ

ನೀನೊಲಿದಡೆ ಬರಡು ಹಯನಹುದಯ್ಯ

ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯ

ನೀನೊಲಿದಡೆ ಸಕಲಪಡಿ ಪದಾರ್ಥ ಇದರಲ್ಲಿರ್ಪವು

ಕೂಡಲ ಸಂಗಮದೇವ (ಸ. ವ. ಸಂ. ೧ ವ. ಸಂ. ೬೬)

ಎ೦ಬ ಬಸವಣ್ಣನವರ ವಚನವನ್ನು ಅನುಸರಿಸಿ ಇವರು

ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ

ನೀನೊಲಿದಡೆ ಹುಲ್ಲೆಲ್ಲ ರಾಜಾನ್ನವಯ್ಯ

ನೀನೊಲಿದಡ ಕೊರಡೆಲ್ಲ ಕಲ್ಪವೃಕ್ಷವಯ್ಯ

ನೀನೊಲಿದಡ ಬರಡೆಲ್ಲ ಕಾಮಧೇನುವಯ್ಯ

ನೀನೊಲಿದಡೆ ಏನುಂಟು ಏನಿಲ್ಲವಯ್ಯ ಅಖಂಡೇಶ್ವರಾ

(ಭಕ್ತಸ್ಥಲ ವ. ಸಂ. ೫೮ ಪು. ೮೫)

ಎಂದು ರಚಿಸಿದ್ದಾರೆ. ಈ ವಚನದಲ್ಲಿ ಹೇಳುವ ಧಾಟಿ, ಬಳಸಿರುವ ಭಾಷೆ ಎಲ್ಲವೂ ಬಸವಣ್ಣನಿಂದ ನಿಚ್ಚಳವಾಗಿ ಪ್ರಭಾವಿತವಾಗಿರುವುದನ್ನು ಧ್ವನಿಸುತ್ತದೆ.

ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲಯ್ಯಾ ಕೂಡಲಸಂಗಮದೇವ

(ಸ. ವ. ಸಂ. ೧ ವ. ಸಂ. ೪೮೧)

ಬಸವಣ್ಣನವರ ವಚನ ಪಡಿಯಚ್ಚಿನಂತೆ ಕೆಳಕಂಡ ವಚನವನ್ನು ಶಿವಯೋಗಿಗಳು ರಚಿಸಿದ್ದಾರೆ.

ತಂದನೀನಯ್ಯ ಎನಗೆ ತಾಯಿನೀನಯ್ಯ ಎನಗೆ

ಬ೦ಧು ನೀನಯ್ಯ ಎನಗೆ ಬಳಗನೀನಯ್ಯ ಎನಗೆ

ಗತಿಯು ನೀನಯ್ಯ ಎನಗೆ ಮತಿಯು ನೀನಯ್ಯ ಎನಗೆ

ಸಕಲ ಚೈತನ್ಯವು ನೀನೆ ಅಯ್ಯ ಎನಗೆ

 ಅಖಂಡೇಶ್ವರ ನೀನೆದಿಕ್ಕಲ್ಲದೆ ಎನಗೆ ಮತ್ತಾರು ಇಲ್ಲಯ್ಯ

(ಮ.ಸ್ಥ. ವ. ಸಂ. ೭೭ ಪು. ೧೩೩)

ಷಣ್ಮುಖ ಶಿವಯೋಗಿಗಳು ಅಕ್ಕಮಹಾದೇವಿಯವರ  ವಚನಗಳಿಂದಲೂ ಪ್ರಭಾವಿತರಾಗಿ ವಚನಗಳನ್ನು ರಚಿಸಿದ ಹಾಗೆ ಕಂಡು ಬರುತ್ತದೆ. ನಿದರ್ಶನಕ್ಕೆ,

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಸರವೆತ್ತಿ ಹಾಡುವ ಕೋಗಿಲೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಎರಗಿ ಬ0ದಾಡುವ ತುಂಬಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಕೊಳನತಡಿಯೊಳಾಡುವ ಹ೦ಸೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಗಿರಿಗಹ್ವರದೊಳಗಾಡುವ ನವಿಲುಗಳಿರಾ

ನೀವುಕಾಣಿರೆ ನೀವು ಕಾಣಿರೆ

ಚೆನ್ನಮಲ್ಲಿಕಾರ್ಜುನನಲ್ಲಿದ್ದಹನೆಂದು ಹೇಳಿರೆ

(ಸ. ವ. ಸಂ. ವ. ಸಂ. ೧೭೪ ಪು. ೫೫)

ಎ೦ಬ ಅಕ್ಕಮಹಾದೇವಿಯ ವಚನದೊಂದಿಗೆ ಷಣ್ಮುಖ  ಶಿವಯೋಗಿಗಳ ವಚನವನ್ನು ಹೋಲಿಸಿ ನೋಡಿ.

ಅರಳಿಯ ಮರದೊಳಗಿರುವ ಅರಗಿಳಿಗಳಿರಾ

ನಮ್ಮ ಅಖಂಡೇಶ್ವರನ ಕಂಡಡೆ ಹೇಳಿರೇ

ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ

ನಮ್ಮ ನಾಗಭೂಷಣನ ಕಂಡಡೆ ಹೇಳಿರೇ

ಕೊಳನ ತೀರದೊಳಗಾಡುವ ಕಳ ಹಂಸೆಗಳಿರಾ

ನಮ್ಮ ಎಳೆಯ ಚಂದ್ರನ ಕಂಡಡೆ ಹೇಳಿರೇ

ಮೇಘ ಧ್ವನಿಗೆ ಕುಣಿವ ನವಿಲುಗಳಿರಾ

ನಮ್ಮ ಅಖಂಡೇಶ್ವರನೆಂಬ ಅವಿರಳ

ಪರಶಿವನ ಕಂಡಡೆ ಹೇಳಿರೇ

(ಶರಣಸ್ಥಲ ವ. ಸ. ೩೦ ಪು. ೩೧೫)

ವಚನವು ಭಾವಗೀತಾತ್ಮಕತೆಯಿಂದ ಕೂಡಿದ್ದು, ತೀವ್ರವಾದ ಸ೦ವೇದನೆ ಮತ್ತು ಅರಸುವಿಕೆ ಉಕ್ಕಿಬರುತ್ತದೆ. ಆದರೆ, ಅಕ್ಕಳಿಗಿದ್ದ ಇಷ್ಟದೈವವನ್ನು ಅರಸುವಿಕೆಯ ತುರ್ತು ಇವರಿಗಿತ್ತೆ? ಎಂದೆನಿಸುತ್ತದೆ. ಅಂಬಿಗರ ಚೌಡಯ್ಯನಲ್ಲಿಯ,

ಗಾಳಿಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ

ಗಾಳಿನಿನ್ನಧೀನವಲಯ್ಯ,

(ಸ.ವ.ಸಂ. ೧, ಪು. ೧೨೨)  

 ಎಂಬ ವಚನ ಷಣ್ಮುಖ ಶಿವಯೋಗಿಗಳಲ್ಲಿ ಕೆಳಕಂಡಂತೆ ಸಿಗುತ್ತದೆ.

ಗಾಳಿಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗಬೇಗ

ಗಾಳಿ ನಿರ್ಮಿಚ್ಚೆಯಲ್ಲ ಕೇಳಿರೋ ಜಾಳಮನುಜರಿರಾ

(ಭ.ಸ್ಥ, ವ.ಸಂ. ೨೨)

ಮಡಿವಾಳ ಮಾಚಯ್ಯನ ವಚನದ ಪ್ರಭಾವವೂ ಇವರ ಮೇಲಾಗಿದೆ.

ಮನುಷ್ಯ ಜನ್ಮದಲ್ಲಿ ಬಂದು

ಶಿವಜ್ಞಾನವನರಿಯದಿದ್ದರೆ

ಆ ಕಾಗೆ ಕೋಳಿಗಳಿಂದ ಕರಕಷ್ಟ

ಕಾಣಾ ಕಲಿದೇವರದೇವಾ

ಎ೦ಬ ಮಡಿವಾಳ ಮಾಚಯ್ಯನ ವಚನದ ಜೊತೆ ಷಣ್ಮು ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಬಹುದು.

ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ

ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ

ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ ಅಖಂಡೇಶ್ವರ

(ಭ. ಸ್ಥ, ವ. ಸಂ. ೩೨ ಪು. ೭೨)

ಆದಯ್ಯನಲ್ಲಿ ಬರುವ

ತೀರ್ಥಯಾತ್ರೆಯ ಮಾಡಿ ಪಾಪನ ಕಳೆದಿಹನೆಂಬ

ಯಾತನೆ ಬೇಡ ಕೇಳಿರಣ್ಣಾ

ಅನಂತ ಕರ್ಮವಲ್ಲಾ ಒಬ್ಬ ಶಿವಭಕ್ತನ

ದರುಶನ ಸ್ಪರ್ಶನದಿಂದ ಕೆಡುವವು.

(ಸ. ವ. ಸಂ. ೧, ವ. ಸಂ. ೯೬೯)

ಎಂಬ ವಚನದ ಜೊತೆಗೆ ಷಣ್ಮುಖ ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಿದರೆ ಆದಯ್ಯನ ವಚನದಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು.

ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು

ಸಕಲ ತೀರ್ಥ ಕ್ಷೇತ್ರಂಗಳಿಗೆಡೆಯಾಡಿ

ತೊಟ್ಟನ ತೊಳಲಿಬಳಲಿ ಬೆಂಡಾಗಲೇಕೊ

ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಭತ್ತೆಂಟು ಕೋಟಿ

ಕ್ಷೇತ್ರಂಗಳಿರ್ಪವು

ಆತನದರ್ಶನ ಸ್ಪರ್ಶನವಾದಾತಂಗೆ

ಅನಂತಕೋಟಿ ಭವ ಪಾಕ೦ಗಳು ಪರಿಹರವಪ್ಪುವು ನೋಡಾ

(ಭ.ಸ್ಥ. ವ. ಸಂ. ೮೨, ಪು. ೯

ಆದಯ್ಯನ ವಚನ :

ಮುತ್ತು ನೀರೊಳಗೆ ಹುಟ್ಟಿ ಮರಳಿನೀರಾಗದಂತೆ

ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ

(ಸ.ವ.ಸಂ. ೧ ವ. ಸಂ. ೧೦೭೨)  

ಎ೦ಬ ಉಪಮೆಯು

ಷಣ್ಮುಖ ಶಿವಯೋಗಿಗಳಲ್ಲಿ :

ನೀರು ಘಟ್ಟಿಕೊಂಡು ಮುತ್ತಪ್ಪುದಲ್ಲದೆ ಮುತ್ತುನೀರಪ್ಪುದೇ

ಅಯ್ಯ ?

ಹಾಲು ಹೆಪ್ಪುಗೊ0ಡು ತುಪ್ಪವಪ್ಪುದಲ್ಲದೆ ತುಪ್ಪಹಾಲಪ್ಪುದೇ

ಅಯ್ಯ ?

ಎ೦ದು ನಿರೂಪಿತವಾಗಿದೆ. ಇವರೀರ್ವರ ವಚನದ ವಸ್ತು, ಧಾಟಿ ಒ೦ದೇ ಆಗಿದೆ.

ಆದಯ್ಯನು ತನ್ನ ವಚನಗಳಲ್ಲಿ ಬಳಸಿರುವ ಸಂಸ್ಕೃತದ ಪ್ರಮಾಣ ಗ್ರಂಥಗಳಲ್ಲಿಯ ಸಂಸ್ಕೃತ ಶ್ಲೋಕಗಳಲ್ಲಿ ಕೆಲವನ್ನು ಷಣ್ಮುಖ ಶಿವಯೋಗಿಗಳು ಬಳಸಿದ್ದಾರೆ. ಆದಯ್ಯನು ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವ ಸಲುವಾಗಿ ಬಳಸಿರುವ

ಯಥಾಭೇರುಂಡ ಪಕ್ಷೀತ್ ದ್ವಿ ಮುಖಾತ್ ಪರಿಭುಂಜತೆ |

ತಥಾ ಭುಂಜಾಮಿ ದ್ವಿಮುಖಾಲ್ಲಿಂ

ಜಂಗಮಯೋರಹಂ

(ಸ.ವ.ಸಂ. ೧ ವ. ಸಂ. ೧೧೧೨)

ಎ೦ಬ ಸ೦ಸ್ಕೃತ ಶ್ಲೋಕವನ್ನೇ ಷಣ್ಮುಖ ಶಿವಯೋಗಿಗಳು ಸಹ ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವಲ್ಲಿ ಬಳಸಿದ್ದಾರೆ.

ಯಥಾ ಭೇರುಂಡ ಪಕ್ಷೀತ್ ದ್ವಿಮುಖೇನ ಪ್ರಭುಂಜತೆ |

ತಥಾ ಚ ಉಮಯಾದೇವಿ ಮಮ ತೃಪ್ತಂತು ಜಂಗಮಂ ॥

(ಮ.ಸ್ಥ.ವ.ಸ೦.೮೫)

ಇಷ್ಟಲಿಂಗದ ಮಹತ್ತನ್ನು ಎತ್ತಿ ಹಿಡಿಯುವಲ್ಲಿ ಆದ್ಯಯನು ಬಳಸಿರುವ :

ಇಷ್ಟಲಿಂಗಮ ವಿಶ್ವಸ್ಯ ತೀರ್ಥ ಲಿಂಗಂತು ಯೋ ಭಜೇತ್ |

ಶುನಾಂ ಯೋನಿಶತಂತ್ವಾ ಚಂಡಾಲ ಗೃಹಮಾವಿಶೇತ್ ||

(ಸ.ವ.ಸಂ. ೧ ವ.ಸಂ. ೧೧೪೯)

ಎ೦ಬ ಉಕ್ತಿಯನ್ನೇ ಷಣ್ಮುಖ ಶಿವಯೋಗಿಗಳು ಸಹ ತನ್ನ ದೇಹದ ಮೇಲೆ ಇರುತಿರ್ಪ ಲಿಂಗವ ಸಾಮಾನ್ಯವ ಮಾಡಿ ಕ೦ಡ ಕ೦ಡ ದೇಗುಲದೊಳಗನ ಕಲ್ಲದೇವರೆಂದು ಭಾವಿಸಿ ಪೂಜಿಸುವವರನ್ನು ಹೋಲಿಸಲು ಬಳಸಿದ್ದಾರೆ.

ಇಷ್ಟ ಲಿಂಗಮ ವಿಶ್ವಾಸಂ ಸ್ಥಾವರ ಲಿ೦ಗೇನ ಪೂಜನಂ |

ಶ್ವಾನಯೋನಿ ಶತ೦ಗತ೦ ಚಾಂಡಾಲೋಗೃಹಮಾಚರೇತ್ ||   

(ಮ.ಸ್ಥ.ವ.ಸಂ. ೮೬)

ಷಣ್ಮುಣ ಶಿವಯೋಗಿಗಳ ಪ್ರಾಣಲಿಂಗಿಸ್ಥಲದಲ್ಲಿ ಬರುವ ವಚನಗಳಂತೂ ಆದಯ್ಯನ ವಚನಗಳನ್ನು ನೆನಪು ಮಾಡಿ  ಕೂಡುತ್ತವೆ.

ಪೂರ್ವದ ವಚನ ಸಾಹಿತ್ಯದ ಪ್ರಭಾವ ಷಣ್ಮುಖ ಶಿವಯೋಗಿಗಳ ವಚನಗಳ ಮೇಲೆ ನಿಚ್ಚಳವಾಗಿರುವುದನ್ನು ಮೇಲಿನ ವಿವರಣೆಗಳು ದೃಢೀಕರಿಸುತ್ತವೆ. ಬಸವಣ್ಣ, ಅಕ್ಕಮಹಾದೇವಿ, ಆದಯ್ಯ ಮುಂತಾದ ವಚನಕಾರರ ವಚನಗಳಲ್ಲಿ ಕಾಣಿಸಿಕೊಳ್ಳುವ ಸಂಕ್ಷಿಪ್ತತೆ, ಸೂತ್ರಬದ್ಧತೆ, ಉತ್ಕಟತೆ, ಕಲಾಮಂತಿಕೆ ಅಷ್ಟಾಗಿ ಇವರ ವಚನಗಳಲ್ಲಿ ಕಾಣಬರದೆ ವಾಚ್ಯತೆ, ವಿವರಣಾತ್ಮಕತೆಗೆ ಹೆಚ್ಚಿನ ಅವಕಾಶ ದೊರೆತಿದೆ.

ಒಂದು ಸಾಹಿತ್ಯಕ ಪರಂಪರೆ ತನ್ನ ಎಲ್ಲಾ ಸಾಧ್ಯತೆಗಳನ್ನು ಕಂಡುಕೊಂಡ ಮೇಲೆ ಬರುವ ಕೃತಿಕಾರರು ಆ ಹಿಂದಿನ

ಪರಂಪರೆಯಿಂದ ತಮ್ಮನ್ನು ತಾವು ಬಿಡಿಸಿಕೊಂಡು ಮೌಲಿಕ ರಚನೆ ಮಾಡುವುದು ತ್ರಾಸಿನಕೆಲಸ, ಆದಾಗ್ಯೂ ಪ್ರತಿಭಾಶಾಲಿಗಳು ಆ ಪ್ರಭಾವವನ್ನು ಅರ್ಜಿಸಿಕೊಂಡು ಪರಂಪರೆಯಿಂದ ಬಿಡಿಸಿಕೊಂಡು ಮೌಲಿಕ ಕೃತಿರಚನೆ ಮಾಡುವ ಸಾಧ್ಯತೆ ಇದೆ. ಷಣ್ಮುಖ ಶಿವಯೋಗಿಗಳು ಪೂರ್ವದ ವಚನಕಾರರ ಪರಂಪರೆಯನ್ನು ಗೌರವಿಸಿ ಪ್ರಭಾವಿತರಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೂ ಇವರ ೭೧೭ ವಚನಗಳೆಲ್ಲವೂ ಪೂರ್ವದ ಅನುಸರಣೆಯಿಂದ ಪ್ರೇರಿತವಾಗಿ ರಚಿತವಾದವುಗಳಲ್ಲ. ಸ್ವಂತಿಕೆಯ ವಚನಗಳು ಇವೆ

ಇವರು ತನ್ನ ಕಾಲದಲ್ಲಿ ಇದ್ದ ಸಹಗಮನ ಪದ್ಧತಿಯನ್ನು ಒಪ್ಪಿಕೊಂಡಿದ್ದರು ಎಂಬುದು ಕೆಳಕಂಡ ವಚನದಿಂದ ವಿದಿತವಾಗುತ್ತದೆ.

ಗ೦ಡಸತ್ತನೆ೦ದು ಗ೦ಡನೊಡನೆ ಕೆಂಡವ ಬೀಳುವನೆಂದು

ಪುಂಡ ವೀರಮಾಸ್ತಿ ತಾನುದಂಡೆಯ ಕಟ್ಟಿಕೊಂಡು

ಖಂಡಯವ ಪಿಡಿದು ತಂಡ ತಂಡದ ಜನರ ಮುಂದೆ

ಮೆರೆದು ಕೊಂಡು ಬಂದು

ಕಿಚ್ಚಿನ ಹೂ೦ಡವಕಂಡು ಹೆದರಿ ಹಿಮ್ಮೆಟ್ಟಿದಡೆ

ಅವಳಿಗದೇ ಭ೦ಗವಲ್ಲದೆ ಶೃಂಗಾರ ಮೆರವುದೇ ಅಯ್ಯ ?

(ಮ.ಸ್ಥ.ವ.ಸು. ೧೩೮)

ಪ೦ಚೇಂದ್ರಿಯ, ಅರಿಷಡ್ವರ್ಗ, ಕರಣ ಚತುಷ್ಟಯ ಇತ್ಯಾದಿ ಲೌಕಿಕ ಲೋಕ ವಿಚಾರಗಳಿಂದ ತನ್ನ ತನುಮನಗಳಲ್ಲಿ ಉಂಟಾದ ತುಮುಲ, ದೌರ್ಬಲ್ಯಗಳನ್ನು ಗುರುತಿಸಿ ಅವುಗಳಿಂದ ಪಾರಾಗುವ ನಿರಸನಗೊಳ್ಳುವ, ತನ್ನ ಅಂತರಂಗವನ್ನು ಒರೆಹಚ್ಚಿ ನೋಡುವಂತಹ  ಭಕ್ತನ ಅ೦ತರಂಗದ ನಿರೀಕ್ಷಣೆಯನ್ನು ಸೂಚಿಸುವ ಭಾವತೀವ್ರತೆಯ ಲಕ್ಷಣವನ್ನು, ಇಂತಹ ಸಂದರ್ಭದಲ್ಲಿ ಗುರುವನ್ನು ಮೊರೆ ಹೋಗುವಂತಹ ಅಂಶಗಳನ್ನು ಷಣ್ಮುಖ ಶಿವಯೋಗಿಗಳ ಸಂಸಾರ ಹೇಯಸ್ಥಲದಲ್ಲಿ ಬರುವ ವಚನಗಳಲ್ಲಿ ಕಾಣಬಹುದು.

ನಿದರ್ಶನಕ್ಕೆ,

 ಕೆಟ್ಟೆಕೆಟ್ಟೆನಯ್ಯ, ಒಡಲುಪಾಧಿವಿಡಿದು

ಕೆಟ್ಟೆ ಕೆಟ್ಟೆನಯ್ಯ ಒಡಲುದುರ್ಗುಣದೊಡನಾಡಿ

ಕೆಟ್ಟೆ ಕೆಟ್ಟೆನಯ್ಯ ನಿಮ್ಮಡಿಯ ಶತ್ತಿಯ ಮೆರೆದು

(ಸ.ಹೇ.ಸ್ಥ.ವ.ಸಂ. ೧೦)

ಮನವೆಂಬ ಮರ್ಕಟನು ತನುವೆ೦ಬ ವೃಕ್ಷವನೇರಿ

ಇ೦ದ್ರಿಯಗಳೆಂಬ ಶಾಖೆಗೆ ಹಾರಿ ವಿಷಯಗಳೆಂಬ

ಹಣ್ಣು ಫಲಗಳ ಗ್ರಹಿಸಿ

ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ

ಈ ಮನವೆ೦ಬ ಮರ್ಕಟನ ನಿಮ್ಮನೆನಹೆಂಬ ಪಾಶದಲ್ಲಿ ಕಟ್ಟಿ

ಎನ್ನನುಳುಹಿ ಕೊಳ್ಳಯ್ಯ

(ಅದೇ .ಸಂ.೧೪)

ಕುಸಿವು  ತೈಷಯಂಡಲೆಯಾವರಿಸಿ ಕುಸಿವ

  ದೆಸೆದೆಸೆಗೆ  ತಿರ್ಪದು ನೋಡಾ ತನುವು

ವಿಷಯ ವಿಕಾರದ೦ಡಲೆಯಾವರಿಸಿ

ದೆಸೆದೆಸೆಗೆ ನುಸುಳು ತಿಪ್ಪುದು ನೋಡಾ ಮನವು

ಈತನು ಮನದಲ್ಲಿ ಮುಸುಕಿದ ಮಾಯಾವಾಸನೆಯ ಕಳೆದು

(ಅದೇ ವ. ಸಂ. ೧೭)

ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ

ಸಾಕು ಮಾಡದು ಭವಬ೦ಧನ೦ಗಳ

ನೂಕಿಬಿಡದು ಸಕಲಸ೦ಸಾರವ

ಬೇಕೆ೦ದಳಿಸುವದು ವಿಷಯ ಭೋಗಕ್ಕೆ

(ಅದೇ ವ.ಸಂ. ೧೮)

ಸಕಲ ಲೋಕಾದಿಲೋಕಂಗಳು ಮಾಯಾಬಲೆಯಲ್ಲಿ ಸಿಲ್ಕಿ

ಸೆರೆ ಹೋಗುವುದು ಕಂಡು ನಾನಂಜಿ

ನಿಮ್ಮ ಮೊರೆಹೊಕ್ಕೆ ಕಾಯಯ್ಯ ಕಾರುಣ್ಯನಿಧಿಯೇ

(ಅದೇ ವ.ಸಂ. ೨೦)

ಷಟ್‌ಸ್ಥಲವು ಇವರಲ್ಲಿ ಕೇವಲ ಸಾಧನೆಯ ಮಾರ್ಗವಾಗಿರದೆ ಸಿದ್ಧಾಂತವಾಗಿಯೂ ನಿರೂಪಿಸಲ್ಪಟ್ಟಿದೆ. ಶಾಸ್ತ್ರೀಯ ನಿರೂಪಣೆ ಯನ್ನು ವಚನಗಳಲ್ಲಿ ಕಾಣಬಹುದು. ಪ್ರತಿಯೊಂದು ಸ್ಥಲದ ಸ್ವರೂಪ, ಲಕ್ಷಣ, ವೈಶಿಷ್ಟ್ಯಗಳು, ಅದರೊಳಗೆ ಸೇರುವ ಭಕ್ತಿಜ್ಞಾನ, ವೈರಾಗ್ಯ, ಅನುಭಾವ, ದಾಸೋಹ, ಕಾಯಕ ಶಿವಯೋಗ, ಶೀಲಚಾರಿತ್ರ ನೇಮ ಎಲ್ಲವೂ ಕ್ರಮಬದ್ಧವಾಗಿ ನಿರೂಪಿಸಲ್ಪಟ್ಟಿದೆ. ಕೆಲವೆಡೆ ಹೋಲಿಕೆಯೊಡನೆ ನಿರೂಪಿಸಲ್ಪಟ್ಟಿದೆ.

 ಉದಾ : ಭಕ್ತನಾದವನಿಗೆ ನುಡಿ, ತನು, ಮನ ಭಾವ, ಸರ್ವಕ್ರಿಯೆಯೆಲ್ಲವೂ ಶುದ್ಧವಾಗಿರಬೇಕು. ಲಿಂಗನಿಷ್ಠಾ ಪರನಾಗಿಯೂ, ಜಂಗಮವೇ ಪ್ರಾಣವಾಗಿಯೂ, ಅರ್ಥ ಪ್ರಾಣಾಭಿಮಾನ೦ಗಳು ಶಿವನ ಕೂಡಿರಬೇಕು. ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಾಗಿರುವುದು. ಲಿಂಗಜಂಗಮ ಒಂದೆಯಾಗಿ ಕಾಂಬುದು, ವಿಭೂತಿ, ರುದ್ರಾಕ್ಷಿ ಲಿಂಗಧಾರಣ ಮುಂತಾದ  ಶಿವಲಾಂಛನವುಳ್ಳಂಥ ಶಿವಶರಣರಲ್ಲಿ ಅತಿಭಕ್ತಿ ಯಾಗಿರಬೇಕು ಎಂದು ಭಕ್ತನ ಲಕ್ಷಣವನ್ನು ಹೇಳಿದ್ದಾರೆ. ಪರಸ್ತ್ರೀಯರ ಮುಟ್ಟದಿರುವ, ಪರಧನವ ಅಪಹರಿಸದಿರುವ, ಪರದೈವವ ಪೂಜಿಸದಿರುವ, ಪರಹಿಂಸೆಯ ಮಾಡದಿರುವ ಪರಲೋಕದ ಫಲಪದವ ಬಯಸದಿರುವ, ಇಷ್ಟಲಿಂಗದಲ್ಲಿ ನೈಷ್ಠೆಯನ್ನು ಇಟ್ಟಿರುವವರೇ ವೀರಮಾಹೇಶ್ವರರು ಎಂದು ಹೇಳಿದ್ದಾರೆ.

ಅನುಭಾವಿಯಾದವನು ತಿರುಳುಕರಗಿದ ಹುರಿದ ಬೀಜದಂತಿರಬೇಕು. ದಗ್ಧ ಪಟದಂತಿರಬೇಕು ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು.

ಇವರ ವಚನಗಳಲ್ಲಿ ಯೋಗ ಶಿವಯೋಗಗಳ ಬಗೆಗೂ ಉಲ್ಲೇಖ ಇದೆ. ಪ್ರಾಣಲಿಂಗಿಸ್ಥಲದ ಬಹುತೇಕ ವಚನಗಳು  ಯೋಗದ ವಿವರಣೆಗಾಗಿಯೇ ಮೀಸಲಾಗಿವೆ. ಮಂತ್ರ, ಲಯ ಹಠಯೋಗ, ರಾಜಯೋಗಗಳೆಂಬ ಚತುರ್ವಿಧಯೋಗಗಳ ಸ್ವರೂಪ, ಅವುಗಳಲ್ಲಿಯ ವಿಧಗಳು ಲಕ್ಷಣ ಇತ್ಯಾದಿಗಳ ಪ್ರತ್ಯಕ್ಷ ಅನುಭವಗಳನ್ನು ಸ್ಫುಟವಾಗಿ ನಿರೂಪಿಸಿ ಇವೆಲ್ಲವುಗಳಿಗಿಂತ ಮಿಗಿಲಾದದ್ದು ‘ಶಿವಯೋಗ’ ಎಂದು ಹೇಳಿ ಇದರಿಂದಲೇ ವ್ಯಕ್ತಿಯ ಪರಿಪೂರ್ಣ ಸಿದ್ಧಿಸಾಧ್ಯ ಎಂದು ನಿರೂಪಿಸಿದ್ದಾರೆ. ಅಷ್ಟಾವರಣಗಳ ಮಹತ್ವದ ಬಗೆಗೂ ವಚನಗಳಲ್ಲಿ ವಿವರವಿದೆ. ಅಷ್ಟಾವರಣಗಳಲ್ಲಿ ಒಂದಾದ ವಿಭೂತಿಯ ಬಗೆಗೆ ಒಂದು ಸ್ಥಲವನ್ನೇ ಮೀಸಲಾಗಿರಿಸಿದ್ದಾನೆ. ವಿಭೂತಿಯ ಲಕ್ಷಣ ಪ್ರಕಾರಗಳು ಮಹತ್ವ ಇತ್ಯಾದಿಗಳ ಬಗೆಗೂ ಸವಿವರವಾದ ನಿರೂಪಣೆ ಇದೆ. ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತ ಕೋಟಿ ಪಾತಕ೦ಗಳು  ಪರಿಹಾರವಾಗಿ ಶಿವಸಾಯುಜ್ಯ ಪದವು ದೊರೆಕೊಂಬುದು ಎಂದು ಅದರ ಮಹತ್ವವನ್ನು ವಿವರಿಸಿದ್ದಾರೆ. ಏಳು ವಚನಗಳಲ್ಲಿ ರುದ್ರಾಕ್ಷಿಯ ಬಗೆಗೆ ನಿರೂಪಿಸಲಾಗಿದೆ.

ವ್ಯಕ್ತಿಯ ವ್ಯಕ್ತಿತ್ವದ ಉನ್ನತ ಮೌಲ್ಯಗಳಾದ ಶೀಲ ,ಚಾರಿತ್ರ, ವ್ರತ ನೇಮಗಳ ನಿರೂಪಣೆಯು ಇವರ ವಚನಗಳಲ್ಲಿ ನಿರೂಪಿತವಾಗಿದೆ.

ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ,

ಛಲವಿರಬೇಕು ನಿತ್ಯ ನೇಮದಲ್ಲಿ

ಶೀಲವ್ರತದಲ್ಲಿ ಹಿಡಿದು ಬಿಡನೆಂಬ ಸಟೆಯನಾಡದೆ

ಸತ್ಯವಚನವ ನುಡಿವಾತ

ಕುಟಿಲ ಕುಹಕವ ಮರೆತು ಸದಾಚಾರದಲ್ಲಿ

ನಡೆವಾತನೇ ಸದ್ಭಕ್ತ

ಸುರಚಾಪದಂತೆ ತೋರಿ ಅಡಗುವ ಮನವನಚ್ಚ ಬೇಡ

ಪರಧನ ಪರಸ್ತ್ರೀಯರ ಮುಟ್ಟವೆಂಬುದೆ ಎನ್ನ ಶೀಲ

ಒಡಲುಪಾಧಿಕೆಯ ವಿಡಿದು ಅನ್ಯರ ಅನ್ನ ವಸ್ತ್ರಂಗಳ

ಬಾಯ್ದೆರೆದು ಬೇಡನೆಂಬುದ ಎನ್ನ ವ್ರತ

ಸಕಲ ಪದಾರ್ಥ೦ಗಳ ಲಿಂಗಕ್ಕೆ ಕೊಡದೆ ಅ೦ಗದಿಚ್ಛೆಗೆ

ಕೊಳ್ಳೆನೆ೦ಬುದೇ ನೇಮ

ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ಭಯವಿರಬೇಕು

ಗುರುಲಿಂಗ ಜಂಗಮದಲ್ಲಿ

ನಯವಿರಬೇಕು ಸಕಲ ಗುಣಂಗಳಲ್ಲಿ ಸ್ನೇಹವಿರಬೇಕು

ನುಡಿಗಡಣದಲ್ಲಿ

ಇತ್ಯಾದಿಯಾಗಿ ಆತ್ಮೀಯವಾದ ನುಡಿಗಳಲ್ಲಿ ನವುರಾಗಿ ನೀತಿಬೋಧನೆ ಮಾಡುವುದರ ಮೂಲಕ ವ್ಯಕ್ತಿ ಚಾರಿತ್ರ ಸಂಪನ್ನನಾಗಿ ಸಾರ್ಥಕ ಜೀವನ ಸಾಗಿಸಲು ಪ್ರೇರಣೆ ನೀಡಿದ್ದಾರೆ.

ಸಮಕಾಲೀನ ಸಮಾಜದಲ್ಲಿ ಕಂಡು ಬಂದ ಕುಂದು ಕೊರತೆಗಳು ವೈಪರೀತ್ಯಗಳನ್ನು ನವುರಾಗಿಯೂ, ಕಠೋರವಾಗಿಯೂ ವಿಡಂಬಿಸಿ ಅವುಗಳನ್ನು ನಿವಾರಿಸುವ ಯತ್ನವನ್ನು ವಚನಗಳ ಮೂಲಕ ಪ್ರಯತ್ನಿಸಿದ್ದಾರೆ. ಇಲ್ಲೆಲ್ಲಾ ಉಪಮೆ, ರೂಪಕ, ದೃಷ್ಟಾಂತ ನಾಣ್ಣುಡಿ, ಗಾದೆ ಮಾತುಗಳಿಗೆ ಹೆಚ್ಚಿನ ಆದ್ಯತೆ ತಲುಪಿದೆ.

ಬ೦ಧನಕ್ಕೊಳಗಾದ ಹುಲಿಗೆ ಬಲತ್ಕಾರ ಉಂಟೆ ಅಯ್ಯ ?

ಸ೦ಸಾರದ೦ದುಗದಲ್ಲಿ ತೊಳಲುವ ಜೀವನಿಗೆ

ಮು೦ದೆ ಮುಕ್ತಿಯನರಸುವ ಜ್ಞಾನ ಉ೦ಟೇ ಅಯ್ಯ

ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ

ಸಿರಿಯೆಂಬುದು ಕನಸಿನ ಪರಿಯಂತೆ

ಮಡದಿ ಮಕ್ಕಳು ಪಡೆದ ದ್ರವ್ಯವು ಎನ್ನೊಡವೆ ಎಂದು

ನಚ್ಚಬೇಡಿರೊ ಎಲೆ ಹುಚ್ಚು ಮಾನವರಿರಾ ಎಂದು ಎಚ್ಚರಿಸಿದ್ದಾರೆ.

ಮಹೇಂದ್ರ ಜಾಲದ೦ತೆ ಕಣ್ಣ ಮುಂದೆ ಒಡ್ಡಿದ

ಹುಸಿಯ ಸ೦ಸಾರದಲ್ಲಿಯೇ ಎಡ್ಡಾಗಬೇಡಿರೋ 

ಎಂದು ಕಿವಿಮಾತು ಹೇಳಿದ್ದಾರೆ. ಅನ್ಯರಲ್ಲಿ ಅವಗುಣವ ಅರಸುವವರನ್ನು’ ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನು ಅರಿಯದೆ ಪರರ ಎಡೆಯಲ್ಲಿ ನೊಣವ ಅರಸುವ ಮರಳುಗಳಿಗೆ   ಹೋಲಿಸಿದ್ದಾರೆ. ವೇಷದಾರಿ ಮಹಾಂತರನ್ನು ಹೊರಗೆ ಆಡಂಬರದ ವೇಷವ ತಾಳಿ ಜಡೆಯ ಬಿಟ್ಟರೇನು ಆಲದ ಮರಕ್ಕೆ ಬೇರಿಳಿದಂತೆ ಎಂದು ಮೂದಲಿಸಿದ್ದಾರೆ. ಪರಧನ, ಪರಸ್ತ್ರೀಯರ ಬಿಟ್ಟರೆ ಗುರುಲಿಂಗ ಜಂಗಮವು ಸಾಧ್ಯವು ನೋಡಾ ಎಂದು ಒಂದಡೆ ನಿರೂಪಿಸಿದ್ದಾರೆ. ಕನಕ, ಕಾಮಿನಿ ಭೂಮಿಗಾಗಿ ಹೊಡೆದಾಡಿ ಕಟ್ಟಿತೀ ಜಗವೆಲ್ಲಾ ಎಂದು ನೊಂದಿದ್ದಾರೆ. ತನ್ನ ತಾನರಿಯದೆ ಅನ್ಯರ ಗುಣಾವಗುಣಂಗಳ ಎತ್ತಿ ಹಿಡಿಯುವವರನ್ನು, ಸಜ್ಜನ ಸದ್ಭಾವಿ ಸತ್ಪುರಷರುಗಳ ಮನನೋವಂತೆ ಹಳಿದು ಹಾಸ್ಯವ ಮಾಡಿ ದೂಷಿಸುವವರನ್ನು ಶಿವಶರಣರೆಂದು ಹೇಗೆ ಕರೆಯಲಿ ಎಂದು ಚಿಂತಿಸಿದ್ದಾರೆ. ಹೊನ್ನು, ಹೆಣ್ಣು, ಮಣ್ಣಿಗಾಗಿ ಆಸೆಪಟ್ಟರೆ ಸಂಚಿತ ಪ್ರಾರಬ್ಧ ಆಗಾಮಿಕರ್ಮ ಬಿಡದು ಎಂದು ಎಚ್ಚರಿಸಿದ್ದಾರೆ. ಕೇವಲ ಮಾತಿನಲ್ಲಿ ತಾವು ಶಿವಾನುಭಾವಿಗಳೆಂದು ಗಳಹುತ್ತಿರುವವರನ್ನು ಮಾತುಕಲಿತ ಭೂತನಂತೆ ಆ ಮಾತು ಈ ಮಾತು ಹೋಮಾತುಗಳ ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಲೆಗುಟ್ಟುವ ಒಣಹರಟೆಗಾರರು ಎಂದೂ, ಅ೦ತರ೦ಗದಲ್ಲಿಯ ಅರಿಷಡ್ವರ್ಗ, ಅಷ್ಟಮದ, ಕರಣ ಚತುಷ್ಟಯಗಳನ್ನು ನಿಗ್ರಹಿಸದೆ ಬಹಿರಂಗದಲ್ಲಿ ಹಲವು ವ್ರತಗಳನ್ನು ಪಾಲಿಸುತ್ತ ತಾವು ಶೀಲವಂತರೆಂದು ಹೇಳಿಕೊಳ್ಳುವವರನ್ನು ‘ಹುತ್ತದೊಳಗಣ ಹಾವ ಕೊಲುವನೆಂದು ಮೇಲೆ ಹುತ್ತವ ಬಡಿವ ಅರೆ ಮರುಳರು ಎಂದು ಹರಿತವಾಗಿ ವಿಡಂಬಿಸಿದ್ದಾರೆ. ಭಕ್ತಿಯ ಮರೆತು ಯುಕ್ತಿ ಶೂನ್ಯರಾಗಿ ಮುಕ್ತಿಯ ಹೊಲಬು ತಪ್ಪಿ ಮಲತ್ರಯಂಗಳ ಕಚ್ಚಿ ಮೂತ್ರದ ಕುಳಿಯೊಳ್ ಮುಳು ಗಾಡುತಿರ್ಪ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಎಂದು ಹೀಗಳೆದಿದ್ದಾರೆ. ವೇದಶಾಸ್ತ್ರ ಆಗಮ ಪುರಾಣ ತರ್ಕ ವ್ಯಾಕರಣ ಇತಿಹಾಸ೦ಗಳ ಓದಿ ಹೇಳುವಾತ ಇವರ ಪ್ರಕಾರ ಜಾಣನಲ್ಲ. ಹೊನ್ನೆನ್ನದು, ಮಣ್ಣೆನ್ನದು, ಹೆಣ್ಣೆನ್ನೆದು, ಮನೆಯೆನ್ನದು., ಮಕ್ಕಳೆನ್ನವರೆಂದು ಭಿನ್ನಭಾವದಲ್ಲಿರ್ದು, ಸನ್ನಿಹಿತ ಜಂಗಮರೊಡನೆ ಸಹಭೋಜನ ಮಾಡಿದಡೆ ಕುನ್ನಿ ಕುಕ್ಕಟನ ಬಸುರಲ್ಲಿ ಬರುವುದು ತಪ್ಪದು ಎಂದು ಎಚ್ಚರಿಸಿದ್ದಾರೆ. ಇವರು ಪೂರ್ವದ ವಚನಕಾರರ ತತ್ತ್ವಗಳನ್ನು ಒಪ್ಪಿಕೊಂಡು ಅದರಂತೆ ನಡೆದವರು, ಜನ ಸಾಮಾನ್ಯರಿಗೆ ತಿಳುವಳಿಕೆಯನ್ನು ಹೇಳುವಂತಹ, ಸದಾಚಾರವನ್ನು ಬಯಸುವಂರಹವನ್ನು ಕುರಿತ ವಚನಗಳಲ್ಲಿ ಭಾಷೆಯಲ್ಲಿ ಸರಳತೆ ಇದೆ. ಪ್ರಾಸಬದ್ಧತೆ ಇದೆ. ತನ್ನನ್ನು ಪರೀಕ್ಷಿಸಿಕೊಳ್ಳುವ ಟೀಕಿಸುವ ಗುಣ ಇದೆ.

ಇವರ ವಚನಗಳಲ್ಲಿ ಅನೇಕ ಯೋಗಾಸನಗಳ ಹೆಸರು ,ಆಚರಣೆಗಳು ಕೇಳಿ ಬರುತ್ತವೆ.  ಬಹುಶಃ ಬ್ರಹ್ಮಚಾರಿಗಳಾಗಿದ್ದ ಇವರು ಯೋಗಾಸನಗಳನ್ನು ಕಲಿತಿದ್ದಿರಬಹುದು. ಇವರ ವಚನಗಳಲ್ಲಿ ಹದಿನೈದಕ್ಕೂ ಮೇಲ್ಪಟ್ಟು ಬೆಡಗಿನ ವಚನಗಳನ್ನು ಕಾಣಬಹುದಾಗಿದೆ. ಈ ಬೆಡಗಿನ ವಚನಗಳಲ್ಲಿ ಬಳಸಿರುವ ಭಾಷೆ ಲೌಕಿಕವಾಗಿದ್ದರೂ ತಲೆಕೆಳಕಾಗಿದ್ದು ಆಳವಾದ ಅನುಭಾವ ಮತ್ತು ಪಾಂಡಿತ್ಯದಿಂದ ಅರ್ಥೈಸಬೇಕಾಗುತ್ತದೆ.  ಷಣ್ಮುಖ ಶಿವಯೋಗಿಗಳ ವಚನಗಳು ಧಾರ್ಮಿಕ ತತ್ತ್ವಗಳನ್ನು ಹೊರಸೂಸುತ್ತಿದ್ದರೂ ಅವುಗಳಲ್ಲಿ ಅಲ್ಲಲ್ಲಿ ಸಾಹಿತ್ಯ ಗುಣ ಇಣುಕಿ ಹಾಕಿದೆ. ಕೆಲವು ವಚನಗಳಲ್ಲಿ ತಾನು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಅರ್ಥವಾಗುವಂತೆ ಮಾಡಲು ಉಪಮೆ, ರೂಪಕಗಳು ಗಾದೆಗಳು ನಾಣ್ಣುಡಿಗಳು ಯಥೇಚ್ಛವಾಗಿ ಬಳಸಿದ್ದಾರೆ. ಈ ಪದವಾಕ್ಯಗಳಲ್ಲಿ ಹುದುಗಿರುವ  ಅರ್ಥಗರ್ಭಿತವನ್ನು ಗಮನಿಸಬಹುದು.

ಉದಾ :

ಅಸಲುಕಳೆದ ಬಳಿಕ ಲಾಭ ಉಂಟೆ

ಉಪದೇಶವಿಲ್ಲದ ಲಿಂಗ ಜಡಪಾಷಾಣವೆ೦ದೆನಿಸಿತ್ತು

ಒಡಲಲ್ಲಿ ಕಲ್ಲು ಕಟ್ಟಿಕೊಂಡು ಮಡುವ ಬಿದ್ದಂತಾಯಿತ್ತು

ಕಟ್ಟಿದ ಬುತ್ತಿ ಎಷ್ಟು ದಿನ ಈಡೇರಲಾಪುದು ?

ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ ಅದು ಕಡಿದು ನೋಡಿ

ಕಲ್ಲೊಂದು

ಬಿಸಾಡುವಲ್ಲದೆ ಅದರ ಬೆಳಗನರಿವುದೆ ಅಯ್ಯ ?

ಕಬ್ಬಿನ ಸ್ವಾದ ಮದಗಜ ಬಲ್ಲುದಲ್ಲದೆ ಕುರಿ ಎತ್ತ ಬಲ್ಲುದಯ್ಯ?

ಕ್ಷೀರದ ರುಚಿಯ ಹಂಸ ಬಲ್ಲುದಲ್ಲದೆ ನೀರಗೋಳ ಎತ್ತ

ಬಲ್ಲುದಯ್ಯ ?

ತೊಟ್ಟಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲುದೆ

ಹಗಲ ಕಂಡ ಕಮರಿಯ ಇರುಳೆ ಬೀಳುವರೆ

ಹಂದಿ ಹಡಿಕೆಯ ನೆನಸಿ ಹಾಳುಗೇರಿಗೆ ಹೋಗುವಂತ

ಸಿಂಹದ ಮೊಲೆವಾಲು ಸಿಂಹದ ಮರಿಗಲ್ಲದೆ ಸೀಳುನಾಯಿಗೆ

ಯೋಗ್ಯವೇ ?

ಸುಟ್ಟ ಮಡಕೆಯಲ್ಲಿ ನೀರು ತು0ಬಿದಡೆ ನಿಲುವುದಲ್ಲದೆ

ಹಸಿಯ ಮಡಕೆಯಲ್ಲಿ

ನೀರ ತುಂಬಿದಡ ದಿಟವಾಗಿ ನಿಲ್ಲುವುದೆ

ಇತ್ಯಾದಿ ನಿತ್ಯ ಜೀವನದ ಸೂಕ್ತಿಗಳು ಸಂದರ್ಭೋಚಿತವಾಗಿ ವಚನಗಳಲ್ಲಿ ಬಳಸಲ್ಪಟ್ಟಿವೆ.

ಇವರ ಶಬ್ಧ ಸಂಪತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳ ಪದಗಳನ್ನು ಗುರುತಿಸಬಹುದು. ಒಂದೇ ವಚನದಲ್ಲಿಯೇ ಅಚ್ಚಗನ್ನಡ ಶಬ್ದಗಳು, ಸಂಸ್ಕೃತ ಭೂಯಿಷ್ಠ ಪದಗಳು ಸಮ್ಮಿಳಿತವಾಗಿರುವುದನ್ನು ನೋಡಬಹುದು. ಇವರ ವಚನಗಳಲ್ಲಿಯ ಅದರಲ್ಲೂ ತಾತ್ವಿಕ ವಚನಗಳ ಶೈಲಿಯು ಹೆಚ್ಚು ವಿಸ್ತೃತದಿಂದ ಕೂಡಿದ್ದು ಗದ್ಯ ಲಯವನ್ನು ಪಡೆದಿದೆ. ಇವರ ವಚನಗಳ ಶಿಲ್ಪ ನಾಲ್ಕು ಸಾಲುಗಳ ಬಂಧದಿಂದ ನಾಲ್ಕು ಪುಟದವರೆಗೂ ದೀರ್ಘಾರ್ತಕವಾಗಿದೆ.

ವೀರಶೈವಸಿದ್ಧಾಂತವನ್ನು ತರ್ಕಬದ್ಧವಾಗಿ ನಿರೂಪಿಸಲು ಸಂಸ್ಕೃತ ಪ್ರಮಾಣ ಗ್ರಂಥಗಳಾದ, ಶಿವಧರ್ಮ, ವೀರಶೈವ ಸಂಗ್ರಹ, ವೀರಮಾಹೇಶ್ವರ ಗ್ರಂಥ, ವಾತುಲಾಗಮ, ಶಿವರಹಸ್ಯ, ಸೂಕ್ಷ್ಮಾಗಮ, ಪರಮರಹಸ್ಯ, ಸಿದ್ಧಾಂತ ಶಿಖಾಮಣಿ, ಸ್ಕಾಂದ ಪುರಾಣ, ಪದ್ಮಪುರಾಣ, ಲಿಂಗಪುರಾಣ, ಬ್ರಹ್ಮಾಂಡ ಪುರಾಣ  ಮುಂತಾದ ಕೃತಿಗಳಿಂದ ಸಂಸ್ಕೃತ ಶ್ಲೋಕಗಳನ್ನು ಆಕರಗಳಾಗಿ ಬಳಸಿಕೊಂಡಿದ್ದು, ನಿರೂಪಣೆಯಲ್ಲಿ ಸ೦ದರ್ಭೋಚಿತವಾಗಿ  ಬಳಕೆಯಾಗಿವೆ.

ಒಟ್ಟಾರೆ ಇವರ ವಚನಗಳನ್ನು ಕುರಿತು, ಪ್ರಭುಸ್ವಾವಿಗಳು ಬೂದಿಹಾಳಮಠರವರು ಹೇಳಿರುವ ವೀರಶೈವತತ್ತ್ವಗಳನ್ನು ತಿಳಿಯಾದ ಭಾಷೆಯಲ್ಲಿ ತಿಳಿಸುವುದರಿಂದ ಇದು ಒಂದು  ಉಪದೇಶ ಗ್ರಂಥವೆಂದೂ, ಶಿವಾನುಭವ ಶಾಸ್ತ್ರ ಸಾರವೆಂದು, ಶಿವಾನುಭವ ಶಬ್ದಕೋಶವೆಂದು, ಹೇಳಲು ಅಭ್ಯಂತರವಿಲ್ಲ  ಎಂಬ ವಾಕ್ಯಗಳಲ್ಲಿ ಉತ್ಪ್ರೇಕ್ಷೆ ಇದ್ದರೂ ಸ್ವಲ್ಪ ಮಟ್ಟಿಗೆ ಖಚಿತತೆ ಇದೆ. ವೀರಶೈವ ಸಿದ್ಧಾಂತವನ್ನು ನಿರೂಪಿಸುವಲ್ಲಿ ಚೆನ್ನಬಸವಣ್ಣ ಆದಯ್ಯರನ್ನು ನೆನಪಿಗೆ ತಂದು ಕೊಡುತ್ತಾರೆ. ಇವರ ವಚನಗಳು ರಚನೆಯಾದ ನಂತರದ ಕಾಲದಲ್ಲಿ ತುಂಬ ಜನಪ್ರಿಯತೆಯನ್ನು ಗಳಿಸಿದ್ದವು ಎಂಬುದಕ್ಕೆ ಇಲ್ಲಿಯವರೆಗೂ ಪ್ರಕಟಗೊ0ಡ ಆವೃತ್ತಿಗಳೇ ಸಾಕ್ಷಿ. ಪ್ರಪ್ರಥಮವಾಗಿ ಪ್ರಕಟಗೊಂಡ ವಚನಗಳು ಎಂಬ ಖ್ಯಾತಿ ಇವರ ವಚನಗಳಿಗೆ ಸಲ್ಲುತ್ತದೆ. ಇವರ ವಚನಗಳನ್ನು ವಿಶ್ವಕರ್ಮ ಸಮಾಜದ ಪುರವಂತರು ಗುಗ್ಗಳ ಮೊದಲಾದ ಸಮಾರಂಭಗಳಲ್ಲಿ ಒಡಪುಗಳಾಗಿ ಉಗ್ಗಡಿಸುವುದು ವಿಶಿಷ್ಟವಾಗಿದೆ. ಅದ್ವೈತ ತತ್ವಾವಲಂಬಿಗಳು ಇವರ ವಚನಗಳಲ್ಲಿಯ ಯೋಗ ಅಧ್ಯಾತ್ಮಕ್ಕೆ ಸಂಬಂಧಿಸಿದ ವಚನಗಳನ್ನು ಕೆಲವೆಡೆ ಬಳಸಿಕೊಂಡಿದ್ದಾರೆ.

ಇವರೇ ಬರೆದರೆಂದು ಹೇಳಲಾದ ಅಖಂಡೇಶ್ವರ ಜೋಗುಳು ೪೧ ಪದಗಳು ದೊರೆತಿವೆ. ಜೋಗುಳ ಪದಗಳಲ್ಲಿ ಬರುವ ಬಹಳಷ್ಟು ವಿಷಯಗಳು ಇವರ ಪ್ರಾಣಿಲಿಂಗಿಸ್ಥಲದ ವಚನಗಳುನ್ನು ನೆನಪಿಗೆ ತಂದುಕೊಡುತ್ತವೆ. ಶಿವಾನುಭವವನ್ನು ನಿರೂಪಿಸಿವೆ. ಕಲ್ಯಾಣಪಟ್ಟಣದಲ್ಲಿ ಬಸವಾದಿ ಪ್ರಮಥರು ಶಿವನರೂಪವಾಗಿ ಕೂಡಿದ್ದರು   ಎಂದು ನೂತನ ಶರಣರುಗಳನ್ನು ನಾಲ್ಕು ಪದ್ಯಗಳಲ್ಲಿ  ಸ್ಮರಿಸಿದ್ದಾರೆ.

ನಿದರ್ಶನಕ್ಕೆ,

ಶುದ್ಧ ಪ್ರಸಾದವನು ಗುರುವಿನಿಂ ಪಡೆದು

ಸಿದ್ಧ ಪ್ರಸಾದವನು ಲಿಂಗದಿಂ ಪಡೆದು

ಚಿದ್ಘನ ಪ್ರಸಾದವನು ಚರದೊಳ್ ಪಡೆದು ಮಹಾ

ರುದ್ರಂಗೆ ಜೋಜೋ ಎಂದಳು ಶರಣೆ

ಜೋಜೋ ಎನ್ನಿರಿ ಅಸಮಾಕ್ಷ ಶಿವಗೆ

ಜೋಜೋ ಎನ್ನಿರಿ ಭಸಿತ ಭೂಸಿತಗೆ

ಜೋಜೋ ಎನ್ನಿರಿ ಶಶಿಯ ಸೂಡಿದಗೆ | ಪಾಡಿ |

ಜೋಜೋ ಎನ್ನಿರಿ ವೃಷಭವಾಹನಗೆ

ಇತ್ಯಾದಿಯಾಗಿ ಐದು ಪದಗಳಲ್ಲಿ ಶಿವನನ್ನು ಪರ್ಯಾಯ ನಾಮಗಳಿಂದ ಸ್ತುತಿಸಿದ್ದಾರೆ. ಒಂದು ಪದದಲ್ಲಿಯಂತೂ ಜೋಗುಳದ ಪದಗಳನ್ನು ಕೇಳಿದವರಿಗೆ ಶಿವನೊಲಿಯುವನು. ಸಿದ್ದಿ ದೊರಕುವುದು ಎಂದು ಹೇಳಿದ್ದಾರೆ.

ನಿರಾಳ ಸದ್ಗುರು ಸೋತ್ರ

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿವಿಭಾಗದಲ್ಲಿ ಕೆ. ೧೧೭೫/೧೮ ನಂಬರಿನ ಓಲೆಪ್ರತಿಯಲ್ಲಿಯು, ಷಣ್ಮುಖಸ್ವಾಮಿಯವರು ನಿರೂಪಿಸಿದ ನಿರಾಳ ಗುರುಸ್ತೋತ್ರ ಹೆಸರಿನಡಿಯಲ್ಲಿ ೨೫ ಭಾಮಿನಿ ಷಟ್ಪದಿ ಪದ್ಯಗಳಿವೆ. ಗುರುವನ್ನು, ಗುರುವಿನ ಮಹಿಮೆಯನ್ನು ನಾನಾ ತೆರನಾಗಿ ಸ್ತುತಿಸಲಾಗಿದೆ. ನಿದರ್ಶನಕ್ಕೆ ಕೆಲವು ಪದ್ಯಗಳು.

ಬಡವ ನಡೆನಡೆಯುತ್ತ ಭಾಗ್ಯವ

ನೆಡಹಿ ತಾಕ೦ಡ೦ತೆ ರೋಗಿಯು

ಹುಡುಕುತಿಪ್ಪೌಷಧಿಯ ಲತೆ ಕಾಲ್ದೊರಿ ಕಾಂಬಂತೆ

ಒಡಲಕ್ಷುಧೆಯಿಂದಲೆವವಗೆ ಪಾ

ಲ್ಗಡಲ ನಿಧಿಯೆನೆ ಕ೦ಡತೆರನೆ

ನ್ನೊಡೆಯ ಶ್ರೀ ಗುರುದೇವನ೦ಘ್ರಿಯ ಕ೦ಡು ಬದುಕಿದೆನು.

ಗುರುವೆ ಪರತರ ನಿತ್ಯನಿರುಪಮ

ಗುರುವೆ ಪರತರ ಸತ್ಯನದ್ವಯ

ಗುರುವೆ ಪರಬೊಮ್ಮಸ್ವರೂಪನೆ ಘನತಕೆ ಘನಮಹಿಮಾ

ಗುರುವೆ ಮುಕ್ತಿಗೆ ಮೂಲ ನಿಶ್ಚಲ

ಗುರುವೆ ಸುರಚಿರ ಭೇದ್ಯ ನಿರ್ಮಲ

ಗುರುವ ನಿನಗಿನ್ನಧಿಕಮಿಲ್ಲನುತಿಹುದು ಶೃತಿತತಿಯು

ಉಳಿದ ಲಘು ಕೃತಿಗಳು ಉಪಲಬ್ಧವಿಲ್ಲದೆ ಇರುವುದರಿಂದ ಸದ್ಯಕ್ಕೆ ಆ ಕೃತಿಗಳ ಬಗೆಗೆ ಏನನ್ನೂ ಹೇಳುವಂತಿಲ್ಲ

Related Posts