ತೋಂಟದ ಸಿದ್ಧಲಿಂಗ ಶಿವಯೋಗಿಗಳ ಜೀವನ ಹಾಗೂ ಸಂದೇಶ

ಡಾ. ವಿ. ಜಿ. ಪೂಜಾರ

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಹಾಗೂ ಅವರ ಧೈಯ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರು ನಡೆದ ಮಾರ್ಗದಲ್ಲೇ ನಡೆದ ಒಬ್ಬ ಶ್ರೇಷ್ಠ ವಚನಕಾರರು: ವೀರಶೈವ ಧರ್ಮದ ಇತಿಹಾಸದಲ್ಲಿಯೂ ವಚನ ಸಾಹಿತ್ಯದ ಇತಿಹಾಸದಲ್ಲಿಯೂ ವಿಶಿಷ್ಟ ಸ್ಥಾನವನ್ನು ಪಡೆದವರು. ಎರಡನೇ ಅಲ್ಲಮ  ಪ್ರಭುಗಳೆಂದೇ ಪ್ರಖ್ಯಾತರಾದ ಇವರು ವಚನ ಸಾಹಿತ್ಯದ ದ್ವಿತೀಯ ಘಟ್ಟಕ್ಕೆ ಇವರೇ ಆದ್ಯರು. ಹನ್ನೆರಡನೇ ಶತಮಾನದ ತರುವಾಯ ೧೩-೧೪ ನೇ ಶತಮಾನಗಳಲ್ಲಿ ಮುಸ್ಲಿಂರ ದಾಳಿಯಿಂದಾಗಿ ಕನ್ನಡ ಸಾಹಿತ್ಯಕ್ಕೆ ಕತ್ತಲೆ ಕವಿಯಿತು. ವಚನ ಸಾಹಿತ್ಯವೂ ಇದಕ್ಕೆ ಹೊರತಲ್ಲ. ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯಾದಾಗ ಬಸವಾದಿ ಶರಣರೆಲ್ಲ ಉಳವಿಯತ್ತ ಹೋದರು. ವಚನ ಸಾಹಿತ್ಯದ ಸೃಷ್ಟಿ ಇದರಿಂದಾಗಿ  ಸ್ಥಗಿತಗೊಂಡಿತು. ಮುಂದೆ ಹದಿನೈದನೇ ಶತಮಾನದಲ್ಲಿ ಪ್ರೌಢದೇವರಾಯನ ಕಾಲಕ್ಕೆ ವೀರಶೈವ ಕಾವ್ಯ- ಪುರಾಣಗಳ ಸೃಷ್ಟಿ, ವಚನಗಳ ಸಂಕಲನ, ಸಂಪಾದನ ಹಾಗೂ ಅವುಗಳಿಗೆ ಟೀಕೆ- ವ್ಯಾಖ್ಯಾನ ಬರೆಯುವ ಕಾರ್ಯ ನಡೆಯಿತು. ನೂರೊಂದು ವಿರಕ್ತರು ಆಗ ವೀರಶೈವ ಸಾಹಿತ್ಯ ಸೃಷ್ಟಿಗೆ ಬಹುವಾಗಿ ಶ್ರಮಿಸಿದರು. ಇದಕ್ಕೆ ವಿಜಯನಗರದ ಅರಸನಾದ ಪ್ರೌಢದೇವರಾಯನು ಸಾಕಷ್ಟು ಪ್ರೋತ್ಸಾಹ ನೀಡಿದನು. ಲಕ್ಕಣ್ಣ ದಂಡೆಶ ಚಾಮರಸರಂಥಹ ಉದ್ದಾಮ ಕವಿಗಳು ಉತ್ಕೃಷ್ಟವಾದ ಕಾವ್ಯಗಳನ್ನು ಬರೆದರು. ಇವರ ತರುವಾಯ ಬಂದ ತೋಂಟದ ಸಿದ್ದಲಿಂಗರು ವಚನಗಳನ್ನು ರಚಿಸುವುದರ ಮೂಲಕ ಬತ್ತಿಹೋಗಲಿರುವ ವಚನಗಂಗೆಯನ್ನು ಪುನಃ ಪ್ರವಹಿಸುವಂತೆ  ಮಾಡಿದರು. ವಚನ ಸಾಹಿತ್ಯದ ಪುನಃಸೃಷ್ಟಿಗೆ ಕಾರಣರಾದರು. ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ವಚನ ರಚಿಸಿ ಜನಜಾಗೃತಿ ಮಾಡಿದಂತೆ ಇವರು ತಮ್ಮ ಹಲವಾರು ಶಿಷ್ಯರೊಡಗೂಡಿ ವಚನ ರಚಿಸುತ್ತ, ದಾಸೋಹ ಸಂಸ್ಕೃತಿಯ ಮೂಲಕ ಜನಸೇವೆ ಮಾಡಿದರು.

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಮೈಸೂರ ಜಿಲ್ಲೆಯ ಚಾಮರಾಜನಗರ ತಾಲೂಕಿನಲ್ಲಿರುವ ಹರದನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮಲ್ಲಿಕಾರ್ಜುನ, ತಾಯಿ ಜ್ಞಾನಾಂಬೆ. ಈ ಶಿವಭಕ್ತ ದಂಪತಿಗಳಿಗೆ ಬಹುದಿನ ಮಕ್ಕಳಾಗಲೇ ಇಲ್ಲ. ಈ ಕೊರಗನ್ನು ಆ ಊರಿನ ಮಠಾಧಿಪತಿಗಳಾದ ಗೋಸಲ ಚೆನ್ನಬಸವೇಶ್ವರರ ಬಳಿ ನಿವೇದಿಸಿಕೊಂಡರು. ಗುರುಗಳು ಕರುಣೆಯಿಂದ ಇವರಿಗೆ ಆಶೀರ್ವಾದ ಮಾಡಿ, ಶಿವಪೂಜೆಯಲ್ಲಿ ನಿರತರಾಗುವಂತೆ ಸೂಚಿಸಿದರು. ದಂಪತಿಗಳು ಇಂತಿರಲು ಅವರಿಗೆ ಸಿದ್ದಲಿಂಗರು ಜನಿಸಿದರು. ‘ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು” ಎಂಬಂತೆ ಶಿಶುವಿನ ಮೊಗದಲ್ಲಿ ಶಿವತೇಜಸ್ಸು ಹೊಳೆಯುತ್ತಿತ್ತು. ಕೆಲ ಕಾಲ ಆತ ಶಾಲೆಗೆ ಹೋದ. ಆತ ಉಳಿದ ಮಕ್ಕಳಂತೆ ಇರದೆ ವಿಶಿಷ್ಟ  ರೀತಿಯಲ್ಲಿರುವುದನ್ನು ಗುರುಗಳು ಗುರುತಿಸಿದರು. ಮುಂದೆ ಆತ ಓದಿನಲ್ಲಿ ಅಷ್ಟಾಗಿ ಆಸಕ್ತಿಯನ್ನು ತೋರಲಿಲ್ಲ. ಆತನ ಮನಸ್ಸು ಆಧ್ಯಾತ್ಮದತ್ತ ಹೊರಳಿತು. ಇದನ್ನರಿತ ಆತನ ತಂದೆ-ತಾಯಿಗಳು ಆತನನ್ನು ಶಾಲೆ ಬಿಡಿಸಿ, ಗುರು  ಚೆನ್ನಬಸವೇಶ್ವರರ ಬಳಿಗೆ ಕಳುಹಿಸಿದರು. ಅವರು ಆತನಲ್ಲಿರುವ ಅಧ್ಯಾತ್ಮದ ಹಸಿವನ್ನು ಅರಿತರು. ಆತನನ್ನು ಪ್ರೀತಿಯಿಂದ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಸಿದ್ಧಲಿಂಗರು ಅಲ್ಲಿ ಗುರುವಿನ ಸೇವೆಯಲ್ಲಿ ನಿರತರಾದರು. ಹೂ ಪತ್ರಿ ತಂದು ನಿತ್ಯ ಗುರುವಿನ ಲಿಂಗಪೂಜೆಗೆ ಅಣಿ ಮಾಡಿಕೊಡುತ್ತಿದ್ದ ಸಿದ್ಧಲಿಂಗರಿಗೆ ಒಂದು ದಿನ ಗುರುಗಳು ತಮ್ಮ ಚರ ಪಟ್ಟಾಧಿಕಾರವನ್ನು ವಹಿಸಿಕೋ ಎನ್ನುವರು. ಇವರು ಅದನ್ನೊಪ್ಪಿಕೊಳ್ಳದೆ, ತಾನಿನ್ನೂ ಶಿವಯೋಗ ಸಾಧನೆಯನ್ನು ಮಾಡಬೇಕಾಗಿದೆ. ಪರಮಾತ್ಮನನ್ನು ಕಾಣಬೇಕಾಗಿದೆ. ಇದಕ್ಕಾಗಿ ನಾನು ಲೋಕ ಸಂಚಾರವನ್ನು ಕೈಗೊಳ್ಳುವೆನು. ಆದ್ದರಿಂದ ಈ ಪಟ್ಟಾಧಿಕಾರ ತಮಗೇ ಇರಲೆಂದರು. ಇವರ ಅಧ್ಯಾತ್ಮ ಶಕ್ತಿಗೆ ಮಾರುಹೋಗಿ, ಅನೇಕರು ಇವರ ಶಿಷ್ಯರಾಗಿ, ಇವರೊಡನೆ ಲೋಕ ಸಂಚಾರಕ್ಕೆ ಹೊರಟರು. ಸಿದ್ದಲಿಂಗರು ಗುರುಗಳಿಗೆ ,ತಾಯಿ, ತಂದೆಗಳಿಗೆ ವಂದಿಸಿ ಹೊರಡುವರು. “ಭಕ್ತನು ಭಕ್ತನ ಕಾಂಬುದು ಸದಾಚಾರ” ಎಂದು ಸಿದ್ದಲಿಂಗರು ಭಕ್ತರನ್ನು ಭೇಟಿಯಾಗಲು ಅವರೊಂದಿಗೆ ಕೂಡಿಕೊಂಡು ಸಾಧನೆ ಮಾಡಲು ಹೊರಟರು. ಅವರು ಕನ್ಯಾಕುಮಾರಿಯಿಂದ ಹಿಡಿದು ಹಿಮವತ್ಕೇದಾರ, ತ್ರಿಯಂಬಕ, ಶ್ರೀಶೈಲ, ಗೋಕರ್ಣ, ಮಹಾಬಲೇಶ್ವರ, ಹಂಪೆ, ಶಿವಗಂಗೆ, ಕಾಳಹಸ್ತಿ, ಪೋನ್ನಾಂಬಲ, ಕಂಚಿ, ಚಿದಂಬರಂ, ಅರುಣಾಚಲಂ, ರಾಮೇಶ್ವರ ಮುಂತಾದ ಕ್ಷೇತ್ರಗಳಿಗೆ ಭೇಟಿ ನೀಡಿದರು. ತಮಿಳುನಾಡಿನ ಅರುಣಾಚಲಂದಲ್ಲಿ ಬಹಳ ಕಾಲ ತಪಸ್ಸಿನಲ್ಲಿ ನಿರತರಾಗಿದ್ದರು. ಅಪಾರ ಶಿವಾನುಭವ ಪಡೆದರು.

 ಸಿದ್ಧಲಿಂಗರ ಹೆಸರಿನ ಹಿಂದೆ `ತೋಂಟದ’ ಎಂಬ ವಿಶೇಷಣ ಏಕೆ ಸೇರಿಕೊಂಡಿದೆ ಎಂದರೆ, ಅವರು ಕಗ್ಗೆರೆ ಎಂಬ ಊರಿನ ಬಳಿ ಇರುವ ತೋಟವೊಂದರಲ್ಲಿ ಬಹುಕಾಲ ತಪಸ್ಸು ಮಾಡಿದರು. ಅದಕ್ಕೆ ಈ ವಿಶೇಷಣ ಪ್ರಾಪ್ತವಾಗಿದೆ. ಇದಕ್ಕೆ  ಸಂಬಂಧಿಸಿದ ಘಟನೆಯೊಂದನ್ನಿಲ್ಲಿ ನೋಡಬಹುದು. ಸಿದ್ದಲಿಂಗರು ಲೋಕ ಸಂಚಾರದಲ್ಲಿದ್ದಾಗ  ತುಮಕೂರು ಜಿಲ್ಲೆಯ ಕಗ್ಗೆರೆ ಎಂಬ ಗ್ರಾಮಕ್ಕೆ ದಯಮಾಡಿಸಬೇಕೆಂದು ಇವರನ್ನು ಆ ಊರಿನ ನಿಂಬೆಣ್ಣ ಶೆಟ್ಟರು ಭಿನ್ನವಿಸಿಕೊಂಡರು. ತ್ರಿಕಾಲ ಜ್ಞಾನಿಗಳಾದ ಸಿದ್ದಲಿಂಗರು ಮುಂದಾಗುವುದನ್ನರಿತು ಬೇಡವೆಂದರು. ಆದರೂ ಆ ಭಕ್ತ ಬರಲೇಬೇಕೆಂದು ಹಟ ಹಿಡಿಯಲು, ಒಪ್ಪಿಕೊಂಡು ಊರಿಗೆ ಹೋದರು. ಆ ಊರ ಹೊರವಲಯದ ತೋಟದ ಹತ್ತಿರ ಇರುವ ಮಾವಿನ ಮರದ ಕೆಳಗೆ ಇವರನ್ನು ಕೂಡಿಸಿ, ಆ ಭಕ್ತ ಊರೊಳಗೆ ದೈವದೊಂದಿಗೆ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿ ಹೋಗುವನು. ಅದೇ ವೇಳೆಗೆ ಆ ಊರಿನ ಮೇಲೆ ಬೇಡರ ಪಡೆಯೊಂದು ದಾಳಿ ಮಾಡಲು, ಜನರೆಲ್ಲ ಊರು ಬಿಟ್ಟು ಹೋದರು. ಆ ಭಕ್ತನೂ ಹೋದನು. ಇತ್ತ ಸಿದ್ದಲಿಂಗರು ನಿಂಬೆಣ್ಣ ಶೆಟ್ಟಿಯ ಬಿನ್ನಹ ಪೂರ್ಣವಾಗುವವರೆಗೆ ಅಲ್ಲಿಯೇ ಇರಬೇಕೆಂದು ನಿರ್ಧರಿಸಿ, ಅಲ್ಲಿನ ತೋಟವೊಂದರಲ್ಲಿ ಶಿವಯೋಗದಲ್ಲಿ ತಲ್ಲೀನರಾದರು. ಅಲ್ಲಿಯೇ ಇಷ್ಟ-ಭಾವ-ಪ್ರಾಣಲಿಂಗ ಯೋಗದಲ್ಲಿ ತಲ್ಲೀನರಾದರು. ದಿನಗಳು ಉರುಳಿದವು, ದಿನಗಳಾದಂತೆ ಅವರ ಮೇಲೆ ಹುತ್ತ ಬೆಳೆಯಿತು. ಕೆಲವು ದಿನಗಳ ನಂತರ ಆ ಊರಿನ ಜನ ಮರಳಿ ಬಂದರು. ಈ ಮಧ್ಯೆ ನಿಂಬೆಣ್ಣ ಶೆಟ್ಟಿಯ ಆಕಳೊಂದು ನಿತ್ಯವೂ ಆ ಹುತ್ತದ ಮೇಲೆ ಹಾಲು ಕರೆದು ಬರುತ್ತಿತ್ತು. ಹಗಲೆಲ್ಲ ಮೆಯ್ದು ಮನೆಗೆ  ಹಾಲಿಲ್ಲದೆ ಬರುವ ಹಸುವನ್ನು ಕಂಡು ಮನೆಯವರಿಗೆ ಅಚ್ಚರಿಯಾಯಿತು. ಒಂದು ದಿನ ದನಗಾಹಿ ಅದರ ಹಿಂದೆ ಹೋಗಿ   ನೋಡಿ, ನಿಜಸ್ಥಿತಿಯನ್ನು ನಿಂಬೆಣ್ಣಶೆಟ್ಟರಿಗೆ ತಿಳಿಸಿದನು. ಆಗ ಆತ ಅಲ್ಲಿಗೆ ಹೋಗಿ ಆ ಹುತ್ತವನ್ನು ಅಗೆಸಿದ. ಒಳಗಿದ್ದ  ತೇಜೋಮೂರ್ತಿ ಸಿದ್ದಲಿಂಗರ ದರ್ಶನವಾಯಿತು. ನಿಂಬೆಣ್ಣಶೆಟ್ಟಿ ತನ್ನಿಂದ ಪ್ರಮಾದವಾಯಿತೆಂದು ಕ್ಷಮೆಯಾಚಿಸಿದ. ಆತನನ್ನು ಶಿವಯೋಗಿಗಳು ಕ್ಷಮಿಸಲು, ಅವರನ್ನು ನಿಂಬೆಣ್ಣ ಶೆಟ್ಟಿ ವೈಭವದಿಂದ ತನ್ನ ಮನೆಗೆ ಕರೆದೊಯ್ದು ಸತ್ಕರಿಸಿದ. ಶಿವಯೋಗಿಗಳು ಸಂತುಷ್ಟರಾದರು. ಈ ಹೊತ್ತಿಗೆ ಅವರು ದೊಡ್ಡ ಶಿವಯೋಗಿಗಳೆಂದು ಖ್ಯಾತಿ ಪಡೆದರು. ಅವರ ಬಳಿಗೆ ಅನೇಕ ಶಿವಭಕ್ತರು ಬರತೊಡಗಿದರು. ಬೋಳಬಸವೇಶ್ವರ, ಫನಲಿಂಗಿದೇವ. ಗುಮ್ಮಳಾಪುರದ ಸಿದ್ಧಲಿಂಗಯತಿ, ಸ್ವತಂತ್ರ ಸಿದ್ಧಲಿಂಗರು, ಮುರಿಗೆ ಶಾಂತವೀರರು, ಸಿದ್ಧಮಲ್ಲೇಶ, ಸಂಪಾದನೆಯ ಸಿದ್ಧವೀರ, ಮರುಳಸಿದ್ಧ, ಚಂದ್ರಶೇಖರ, ಚಿಟ್ಟನದೇವ, ಸಪ್ಪೆಯಾರ್ಯ, ರಾಚವಟ್ಟಿ ದೇವ, ಶೀಲವಂತಯ್ಯ ಮುಂತಾದವರು ಅವರ ಶಿಷ್ಯರಾದರು. ಕೆಲವರು ಅಲ್ಲಲ್ಲಿಯೇ ಮಠಗಳನ್ನು ಸ್ಥಾಪಿಸಿಕೊಂಡು ನೆಲೆ ನಿಂತರು. ಇವರ ಕಾಲದಲ್ಲಿಯೇ ವಿರಕ್ತ ಮಠಗಳು ಅಧಿಕವಾಗಿ ಹುಟ್ಟಿಕೊಂಡವು. ಗುರುಪರಂಪರೆಯ ಮಠಗಳಿಗೂ ಇವರು ಪ್ರೋತ್ಸಾಹ ನೀಡಿದರು. ತೋಂಟದ ಸಿದ್ಧಲಿಂಗ ಶಿವಯೋಗಿಗಳಿಂದ ಎಳಂದೂರು, ದನಗೂರು, ಸೋಸಲೆ, ಮಾಗೂರು, ಸುತ್ತೂರು. ಗದಗ, ತಲಕಾಡು, ಹುಲ್ಲಹಳ್ಳಿ ಮೊದಲಾದ ಊರುಗಳಲ್ಲಿರುವ ಮಠಗಳು ವೀರಶೈವ ಧರ್ಮಜ್ಯೋತಿಯನ್ನು ಬೆಳಗಿಸುವ ಅಧ್ಯಾತ್ಮ ಕೇಂದ್ರಗಳಾದವು. ಸಿದ್ಧಲಿಂಗರು ಹರದನಹಳ್ಳಿಯ ಮಠದ ಹದಿನಾರನೇ ಅಧಿಪತಿಗಳಾಗಿ ರಾರಾಜಿಸಿದರು. ಅವರು ಸಂದರ್ಶಿಸಿದ ಕ್ಷೇತ್ರಗಳೆಲ್ಲವೂ ಪಾವನವಾದವು. ಬಸವಣ್ಣನವರಂತೆ  ಸಿದ್ಧಲಿಂಗರು ತುಂಬಾ ಜನಪ್ರಿಯರಾದರು. ಇವರ ತಪಸ್ಸಿನ ಪ್ರಭಾವಕ್ಕೆ ಅನೇಕ ಭಕ್ತರು ಒಳಗಾದರು. ಅನೇಕ ರಾಜರು ಇವರ ಬಳಿ ಬಂದು ಶಿಷ್ಯತ್ವ ವಹಿಸಿ ಶಿವಯೋಗ ಮಾರ್ಗದಲ್ಲಿ ನಡೆದರು.

 ಮರಗಳಲ್ಲಿ ಹಣ್ಣು, ಬಳ್ಳಿಯಲ್ಲಿ ಹೂ ಬಿಡುವುದು ಪರೋಪಕಾರಕ್ಕಾಗಿಯೇ ಮರ ಹಣ್ಣನ್ನು ತಾನೇ ತಿನ್ನದು,ಬಳ್ಳಿ  ತಾನೇ ಹೂವನ್ನು ಮುಡಿಯದು. ಇವು ನಿಸ್ವಾರ್ಥ ಭಾವನೆಯಿಂದ ಲೋಕಸೇವೆ ಮಾಡುವಂತೆ ಸಿದ್ದಲಿಂಗ ಶಿವಯೋಗಿಗಳು ಶಿವಾರ್ಪಣ ಬಾವನೆಯಿಂದ ದಾಸೋಹವನ್ನು ಮಾಡಿದರು. ತಾಯಿ ಹಸು ಕರುವನ್ನು ಹುಡುಕಿಕೊಂಡು ಹೋಗುವಂತೆ ಇವರು ದೀನರನ್ನು, ದುಃಖಿತರನ್ನು ಹುಡುಕಿಕೊಂಡು ಹೋಗಿ ಅವರಿಗೆ ಸಾಂತ್ವನ ಹೇಳಿದರು. ಅವರಲ್ಲಿ ಧೈರ್ಯ ತುಂಬಿ ಧರ್ಮ ಮಾರ್ಗದಲ್ಲಿ ಅವರು ನಡೆಯಂತೆ ಮಾಡಿದರು. ಒಮ್ಮೆ ಇವರ ಬಳಿಗೆ ಕುರುಡ ಜಂಗಮನೊಬ್ಬ ಬಂದು ನನಗೆ ಕಣ್ಣು ದಯಪಾಲಿಸಿರಿ ಎಂದು ಬೇಡಿಕೊಂಡ. ಅವನಿಗೆ ಶಿವಯೋಗಿಗಳು ಆಶೀರ್ವಾದ ಮಾಡಿ -ನೀನು ಬಾಹ್ಯ ಜಗತ್ತನ್ನು ನೋಡಲಾರೆ ಇಷ್ಟಲಿಂಗವನ್ನು ಕಾಣಲಾರೆ ನಿನ್ನ ಬಾಹ್ಯ ಕಣ್ಣೇನೋ ನಿರರ್ಥಕವಾಗಿದೆ. ಕೆಲವರು ಕಣ್ಣಿದ್ದೂ ಕುರುಡರಂತೆಯೇ ಇರುವರು. ಇಂಥವರಿಗೆ ಕಣ್ಣಿದ್ದೂ ಏನು ಪ್ರಯೋಜನ ಕಣ್ಣಿದ್ದೂ ಜಗತ್ತನ್ನು ನೋಡಿ ಶಿವನನ್ನು ನೋಡದಿದ್ದರೆ ಅವರೂ ಕುರುಡರೇ, ನೀನು ಶಿವನಲ್ಲೇ ಅಚಲವಾದ. ಶ್ರದ್ಧೆಯನ್ನಿಡು, ಶಿವಭಕ್ತಿಯೇ ಕಣ್ಣಲ್ಲವೇ? ಎಂದು ಹೇಳಿ ಆತನಿಗೆ ಜ್ಞಾನದ ಕಣ್ಣನ್ನು ದಯಪಾಲಿಸಿದರು. 

ಹೊಳಲುಗುಂದ ಗ್ರಾಮದಲ್ಲಿ ಮಾರಿಕಾಂಬಾ ದೇವತೆಗೆ ಕುರಿ, ಕೋಣಗಳನ್ನು ಬಲಿ ಕೊಡುವ ವಿಷಯ ತಿಳಿದು ಅಲ್ಲಿಗೆ ಸಿದ್ಧಲಿಂಗರು ಹೋಗುವರು. ಅದನ್ನು ತಡೆಯಲು ನಿರ್ಧರಿಸಿ, ಮಧ್ಯೆ ನಿಂತರು. ದೈವಿ ಸ್ವರೂಪಿಗಳಾದ ಪ್ರಾಣಿಗಳನ್ನು ಕೊಲ್ಲುವುದು ಸರಿಯಲ್ಲ. ಪ್ರಾಣಿಗಳನ್ನು ಸೃಷ್ಟಿಸುವ ಶಕ್ತಿ ಶಿವನೊಬ್ಬನಿಗೆ ಇದೆ ಅವನ್ನು ಸೃಷ್ಟಿಸಲಾರದ ನಮಗೆ ಅವನ್ನು ಕೊಲ್ಲಲು ಯಾವ ಅಧಿಕಾರ ಇದೆ ಎಂದು ಜನರನ್ನು ಪ್ರಶ್ನಿಸುತ್ತ, ಅಲ್ಲೇ ನಿಂತಾಗ ವಾದ್ಯಗಳ ಧ್ವನಿಯೂ ನಿಂತಿತು ಜನರೆಲ್ಲರೂ ಬೆರಗಾದರು. ಪ್ರಾಣಿ ಹಿಂಸೆ ಮಾಡುವುದು ಸರಿಯಲ್ಲ. ನಮ್ಮಂತೆ ಅವಕ್ಕೂ ಪ್ರಾಣವಿದೆ. ಕೊಲ್ಲಬಾರದೆಂದು ಅವುಗಳನ್ನು ಬಿಟ್ಟರು. ದೇವತೆ ಪ್ರಾಣಿಗಳ ಬಲಿ ಕೇಳುವುದಿಲ್ಲ. ಅವಳ ಹೆಸರಿನಲ್ಲಿ ಹೀಗೆ ಮಾಡುತ್ತಿರುವುದು ಸರಿಯಲ್ಲವೆಂದು ಜನತೆಗೆ ಮನದಟ್ಟಾಯಿತು. ಅವರೆಲ್ಲರ ಮನಸ್ಸು ಪರಿವರ್ತನೆಯಾಯಿತು. ಅವರ ಮೇಲೆ ಶಿವಯೋಗಿಗಳ ವ್ಯಕ್ತಿತ್ವದ ಪರಿಣಾಮವಾಯಿತು. ಅವರೆಲ್ಲರೂ ಶಿವಭಕ್ತರಾದರು.

ಈ ವೇಳೆಗೆ ಸಿದ್ದಲಿಂಗರಿಗೆ ವಯಸ್ಸಾಗಿತ್ತು. ಅವರು ಅಲ್ಲಿಂದ ಹಂಪೆಗೆ ಬಂದರು. ಅಲ್ಲಿ ಅನೇಕ ಶಿವಭಕ್ತರನ್ನು, ವಿರಕ್ತರನ್ನು, ಕವಿಗಳನ್ನು ಕಂಡು ಆನಂದಪಟ್ಟರು. ಅಲ್ಲಿ ಇವರನ್ನು ನಿರಂಜನ ಜಂಗಮರಂದು ಗೌರವಿಸಿದರು. ಹಂಪೆಯಲ್ಲಿ ಕೆಲಕಾಲ ಇದ್ದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಹರಿಯುವ ನಾಗಿಣಿ ನದಿಯ ದಂಡೆಯಲ್ಲಿರುವ ಎಡೆಯೂರಿಗೆ ಬರುವರು  ಊರ ಬಳಿ ಕದಂಬ ನದಿಯ ಹರಿಯುತ್ತಿತ್ತು. ಈ ಎರಡು ನದಿಗಳ ನಡುವಿರುವ ಎಡೆಯೂರಿನಲ್ಲಿ ಸಿದ್ದಲಿಂಗರು ನೆಲೆಸಿ, ವಚನಗಳನ್ನು ರಚನೆ ಮಾಡುವರು. ಇವರ ಬಳಿ ಅನೇಕ ರಾಜರು, ಶಿವಭಕ್ತರು, ಸಾಧುಸಂತರು ಬರತೊಡಗಿದರು. ಇವರ ತಪಃಪ್ರಭಾವಕ್ಕೆ ಜನ ಒಳಗಾಗತೊಡಗಿದರು. ೭೦೧ ಜನ ವಿರಕ್ತರಿಗೂ ೨೦೦ ಜನ ಜಂಗಮರಿಗೂ ಇವರು ದೀಕ್ಷೆ ನೀಡಿದರು.

  ಸಿದ್ಧಲಿಂಗ ಶಿಷ್ಯರಲ್ಲಿ ಒಬ್ಬರಾದ ಚಿಟ್ಟಿಗದೇವ, ಚೆನ್ನರಾಯದುರ್ಗದ ಚೆನ್ನವೀರಪ್ಪ ಒಡೆಯನ ಕುಲಗುರುವಾಗಿದ್ದ. ಆ ಒಡೆಯನು ತನ್ನ ಗುರುವಿನ ಇಷ್ಟದಂತೆ ಸಿದ್ಧಲಿಂಗರಿಗೆ ಎಡೆಯೂರಿನಲ್ಲಿ ಭವ್ಯವಾದ ಕಲ್ಲಿನ ಮಠವೊಂದನ್ನು ಕಟ್ಟಿಸಿದ. ಶಿವಯೋಗಿಗಳು ಲಿಂಗೈಕ್ಯರಾಗುವವರೆಗೂ ಇದೇ ಮಠದಲ್ಲಿದ್ದರು. ತನ್ನ ಶಿಷ್ಯ ಬೋಳಬಸವನಿಗೆ ತಮ್ಮ ಅಧ್ಯಾತ್ಮ ಶಕ್ತಿಯನ್ನು ಧಾರೆಯೆರೆದು ಲಿಂಗೈಕ್ಯರಾದರು. ಶಿವನೊಡನೆ ಸಮರಸ ಹೊಂದಿ ಸಮಾಧಿಸ್ಥರಾದರು. ವೀರಶೈವರಿಗೆ ಇವರ ಸಮಾಧಿ ಶಿವದ್ವಾರವೇ ಆಗಿದೆ. ಶಿವದ್ವಾರದ ಸಮಾಧಿಯ ಮೇಲೆಯೇ ಈಗ ಎಡೆಯೂರಿನಲ್ಲಿ ಇವರ ಹೆಸರಿನ ಭವ್ಯ ದೇವಾಲಯ  ನಿರ್ಮಾಣಗೊಂಡಿದೆ. ಇಂದು ಎಡೆಯೂರಿನ ಸಿದ್ದಲಿಂಗೇಶ್ವರ ದೇವಾಲಯ ಯಾತ್ರಾರ್ಥಿಗಳಿಗೆ, ಅಧ್ಯಾತ್ಮದ ಹಸಿವು ಉಳ್ಳವರಿಗೆ ಪವಿತ್ರವಾದ ಹಾಗೂ ಪ್ರಮುಖವಾದ ಅಧ್ಯಾತ್ಮದ ಕೇಂದ್ರವಾಗಿದೆ. ಸಿದ್ಧಲಿಂಗೇಶ್ವರ ಧಾರ್ಮಿಕ, ಅಧ್ಯಾತ್ಮಿಕ ಕೇಂದ್ರಗಳು ಕರ್ನಾಟಕದ ಬಹುಭಾಗದಲ್ಲಿವೆ. ತುಮಕೂರಿನಲ್ಲಿ ಇವರ ಹೆಸರಿನ ದೇವಾಲಯವಿದೆ. ಗದುಗಿನಲ್ಲಿ ಇವರ ಹೆಸರಿನ ಪ್ರಸಿದ್ಧವಾದ ಮಠ ಇದೆ. ಇವರ ಪ್ರಭಾವ ಕರ್ನಾಟಕದ ವೀರಶೈವ ಮಠಗಳ ಮೇಲೆ ಉದ್ದಕ್ಕೂ ಆಗುತ್ತ ಬಂದಿದೆ.

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ವಚನಗಳಿಂದ ಪ್ರಭಾವಗೊಂಡಿದ್ದಲ್ಲದೆ ಅವರ ವಚನಗಳಲ್ಲಿನ ಪ್ರಗತಿಪರ ಧೈಯ ಆದರ್ಶಗಳನ್ನು ತಮ್ಮ ವಚನಗಳಲ್ಲಿ ತರಲೆತ್ನಿಸಿದ್ದಾರೆ. ತಾವು ಸಾಧಿಸಿದ ಶಿವಯೋಗ ಸಿದ್ದಿ, ತಪಸ್ಸು ಹಾಗೂ ಅನುಸಂಧಾನಗಳನ್ನೆಲ್ಲ ತಮ್ಮ ವಚನಗಳಲ್ಲಿ ಎರಕ ಹೊಯ್ದಿದ್ದಾರೆ. “ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ” ಎಂಬುದು ಇವರ ವಚನಗಳ ಅಂಕಿತ. ಇವರು ರಚಿಸಿದ ವಚನಗಳಲ್ಲಿ ಷಟಸ್ಥಲದ ವಿವರಣೆ, ವೀರಶೈವ ಧರ್ಮ-ತತ್ವ-ಅನುಭಾವ ಒಡಮೂಡಿ ನಿಂತಿದೆ. ಸಿದ್ದಲಿಂಗರ ಸಾಧಕ ಜೀವನದ ವಿಧವಿಧದ ಅನುಭವಗಳು, ಅಂತರಂಗದ ಹೋರಾಟ, ಸಾಮಾಜಿಕ ಚಿಂತನೆ ಮುಂತಾದವು ಇವರ ವಚನಗಳಲ್ಲಿ ವ್ಯಕ್ತಗೊಂಡಿವೆ. ಷಟ್ ಸ್ಥಲ ಸಾಧನೆಯ ತಿಳುವಳಿಕೆಯನ್ನು ಸಾಮಾನ್ಯ ಜನರಿಗೆ ತಿಳಿಸುವಲ್ಲಿ ಇವರ ವಚನಗಳು ಯಶಸ್ವಿಯಾಗಿವೆ. ಧರ್ಮ-ತತ್ವ-ಅಧ್ಯಾತ್ಮ ವಿಷಯಗಳನ್ನು ಸಮೃದ್ಧವಾಗಿ ಒಳಗೊಂಡ ಇವರ ವಚನಗಳು ಮನುಕುಲಕ್ಕೆ ದಾರಿದೀಪವಾಗಿವೆ. ಅವರ ಸಾಧಕ ಜೀವನಕ್ಕೆ ಹಿಡಿದ ಕನ್ನಡಿಯಂತಿವೆ. ಅವರು ಎಡೆಯೂರನ್ನು ಮತ್ತೊಂದು ಕಲ್ಯಾಣ ಮಾಡಿ, ಮುಂದೆ ಬಂದ ಶರಣ ಕವಿಗಳಿಗೆ ಪೂಜ್ಯರಾದುದನ್ನು, ಗುರುಗಳಾದುದನ್ನು ನೋಡಿದರೆ  ಅವರ ವ್ಯಕ್ತಿತ್ವ ಎಂಥ ಘನವಾದುದು ಎಂಬುದು ವಿದಿತವಾಗುವುದು. ಈ ಕೆಳಗಿನ ಅವರ ವಚನಗಳಲ್ಲಿ ಅವರು ನೀಡಿದ ಸಂದೇಶವನ್ನು ಅರಿಯಬಹುದು

“ಜ್ಯೋತಿಯಿದ್ದ ಮನೆಯಲ್ಲಿ ಕತ್ತಲೆಯುಂಟೆ?

ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೇ?”

“ಸತ್ಯದಲ್ಲಿ ನಡೆವುದು ಶೀಲ, ಸತ್ಯದಲ್ಲಿ ನುಡಿವುದು ಶೀಲ

ಸಜ್ಜನ ಸದಾಚಾರದಲ್ಲಿ ವರ್ತಿಸಿ, ನಿತ್ಯವನರಿವುದೆ ಶೀಲ ಕಾಣಿಭೋʼʼ

“ಕಾಯ ಬತ್ತಲೆಯಿದ್ದರೇನೋ ಮಾಯೆಯಳಿಯದನ್ನಕ್ಕರ

ಮಂಡೆ ಬೋಳಾದರೇನೋ ಸಂಸಾರ ವಿಷಯ ಭೇದಿಸದನ್ನಕ್ಕರʼʼ

ಒಡಲುಪಾಧಿಗೆ ಉಪಚಾರ ನುಡಿವ ವಿರಕ್ತರ ನಾಲಿಗೆ

ನಾಯ ಬಾಲಕ್ಕಿಂತ ಕರಕಷ್ಟ ನೋಡಾ”

`ಹೆಣ್ಣ ಬಿಟ್ಟೆ, ಮಣ್ಣ ಬಿಟ್ಟೆ, ಹೊನ್ನ ಬಿಟ್ಟೆನೆಂದು

ಜಗದ ಕಣ್ಣ ಕಟ್ಟಿ ಮೆರೆವ

ಕಣ್ಣ ಬೇನೆಯ ಬಣ್ಣದ ಅಣ್ಣಗಳು ನೀವು ಕೇಳಿಭೋʼʼ

ಮಾತಿನಲ್ಲಿ ಬಿಟ್ಟಿರಿಯೋ, ಮನದಲ್ಲಿ ಬಿಟ್ಟರಿಯೋ?

ಈ ನೀತಿಯ ಹೇಳಿರಿ ಎನಗೊಮ್ಮೆ

ತನುಮನದ ಮಧ್ಯದಲ್ಲಿ ಇರುವ ನೆನಹು ಕೆಟ್ಟು

ಲಿಂಗದ ನೆನಹಿನ ಆಯತವೇ ಸ್ವಾಯತವಾಗಿರಬಲ್ಲರೆ

ಬಿಟ್ಟರೆಂದೆಂಬೆನಯ್ಯ….ʼʼ

Related Posts