ಪರಮಪೂಜ್ಯ ಶ್ರೀ ಜಗದ್ಗುರು ತೋಂಟದ ಡಾ.ಸಿದ್ಧರಾಮ ಮಹಾಸ್ವಾಮಿಗಳು,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
ಭಾರತೀಯ ಸಂಸ್ಕೃತಿ ‘ಸಮನ್ವಯ ಸಂಸ್ಕೃತಿ’ ಎಂಬ ಖ್ಯಾತಿಯನ್ನು ಪಡೆದಿದೆ. ಧರ್ಮ, ದರ್ಶನ, ಕಲೆ, ಸಾಹಿತ್ಯಗಳಲ್ಲಿ ಸಮನ್ವಯ ಸಾಧಿಸಿದಂತೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿಯೂ ಸಮನ್ವಯ ಸಾಧಿಸಿದೆ. ಅನೇಕತೆಯಲ್ಲಿ ಏಕತೆ’ (Unity in Diversity) ಈ ಸಂಸ್ಕೃತಿಯ ಜೀವಜೀವಾಳ, ಧರ್ಮ, ಅರ್ಥ, ಕಾಮ, ಮೋಕ್ಷಗಳು ಪ್ರತ್ಯೇಕ ಅರ್ಥವ್ಯಾಪ್ತಿಯನ್ನು ಹೊಂದಿದ್ದರೂ ಪ್ರತಿಯೊಬ್ಬ ಮನುಷ್ಯನು ಸಾಧಿಸಲೇಬೇಕಾದ ಅನಿವಾರ್ಯತೆಯಿಂದಾಗಿ ಇವುಗಳನ್ನು ಸೂತ್ರಬದ್ಧಗೊಳಿಸಿ ‘ಪುರುಷಾರ್ಥ ಚತುಷ್ಪಯ’ ಎಂದು ಹೆಸರಿಸಲಾಗಿದೆ. ಧರ್ಮ, ಅರ್ಥ, ಕಾಮ ಇವು ಇಹಲೋಕಕ್ಕೂ, ಮೋಕ್ಷವು ಪರಲೋಕಕ್ಕೂ ಸಂಬಂಧಿಸಿವೆ. ಆದರ್ಶಜೀವನ ದೃಷ್ಟಿಯಿಂದ ಇವುಗಳಲ್ಲಿ ಮೋಕ್ಷಕ್ಕೆ ಪ್ರಮುಖ ಸ್ಥಾನವಿದ್ದರೂ ವ್ಯಕ್ತಿಯ ಜೀವನದಲ್ಲಿ ಉಳಿದವುಗಳಿಗೂ ವಿಶೇಷ ಸ್ಥಾನವಿದೆ.
‘ಯತೋಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧರ್ಮಃ’ ಧರ್ಮವು ವ್ಯಕ್ತಿಯ ಇಹಪರಗಳ ಅಭ್ಯುದಯಕ್ಕೆ ಮತ್ತು ನಿಶ್ರೇಯಸ ಸಿದ್ಧಿ (ಮೋಕ್ಷ)ಗೆ ಕಾರಣವಾಗಿರುವುದರಿಂದ ಪುರುಷಾರ್ಥಗಳಲ್ಲಿ ಅದಕ್ಕೆ ಆದ್ಯ ಸ್ಥಾನ. ಧರ್ಮ ಭಾರತೀಯ ಸಂಸ್ಕೃತಿಯ ಪ್ರಾಣ. ಅದರ ಅರ್ಥವೂ ಅತ್ಯಂತ ವ್ಯಾಪಕವಾದುದು. ನಮ್ಮ ನೆರೆಹೊರೆಯವರನ್ನು ಪ್ರೀತಿಸುವುದು, ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದು, ತನ್ನಂತೆ ಪರರ ಬಗೆವುದು ಹೀಗೆ ವಿವಿಧ ರೂಪದಲ್ಲಿ ಧರ್ಮವು ಹೊರಹೊಮ್ಮುತ್ತದೆ. ಅಧ್ಯಾತ್ಮವೇ ಅದರ ತಿರುಳು. ಅರ್ಥ, ಕಾಮಗಳಿಗೂ ಧರ್ಮವೇ ಆಧಾರ. ಧರ್ಮಾಧಾರಿತ ಅರ್ಥ, ಕಾಮಗಳೇ ಜೀವನದ ಆ ಪರಮ ಗುರಿಯಾದ ಮೋಕ್ಷಕ್ಕೆ ಸಹಕಾರಿಯಾಗಿವೆ.
ಅರ್ಥ ಸಾಧನೆಯೂ ಧರ್ಮಮಾರ್ಗದಿಂದಲೇ ನಡೆಯಬೇಕು. ಅಧರ್ಮದಿಂದ ಅರ್ಜಿತವಾದ ಅರ್ಥ(ಹಣ)ವು ನಮ್ಮ ಹೃದಯ ಮತ್ತು ಆತ್ಮಗಳೆರಡನ್ನೂ ಕಲುಷಿತಗೊಳಿಸುತ್ತದೆ. ಜೀವನದ ಗುರಿ ಆತ್ಯಂತಿಕ ದುಃಖ ನಿವೃತ್ತಿಗೆ ಕಾರಣವಾದ ಮೋಕ್ಷವಾಗಿರುವುದರಿಂದ ಅಧರ್ಮದಿಂದ ಸಂಪಾದಿತವಾದ ಹಣವು ಮೋಕ್ಷ ಸಂಪಾದನೆಯಲ್ಲಿ ಅನೇಕ ಅಡೆತಡೆಗಳನ್ನುಂಟು ಮಾಡುವುದು.ಆದ್ದರಿಂದ ಧರ್ಮದ ಮೂಲಕ ಅರ್ಥ(ಹಣ)ದ ಸಂಪಾದನೆ ಮಾಡಬೇಕಾದುದು ಅನಿವಾರ್ಯ.
ಕಾಮವೆಂದರೆ ಕ್ಷಣಿಕವಾದ ವಿಷಯವಾಸನೆಯಲ್ಲ. ಲೋಕಹಿತವನ್ನೊಳಗೊಂಡ ಉದಾತ್ತ ಬಯಕೆ ಅದು. ಧರ್ಮಾಧಾರಿತ ಕಾಮವೂ ಪುರುಷಾರ್ಥ ಚತುಷ್ಪಯಗಳಲ್ಲಿ ಧರ್ಮದಷ್ಟೇ ಮಹತ್ವಪೂರ್ಣವಾದುದು. ‘ಧರ್ಮಾsವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ’ (ಭಗವದ್ಗೀತೆ) ಶ್ರೀಕೃಷ್ಣನು “ಅರ್ಜುನ! ಧರ್ಮ ವಿರುದ್ಧವಲ್ಲದ ಕಾಮವೂ ನನ್ನ ಸ್ವರೂಪವಾಗಿದೆ’ ಎಂದು ಹೇಳುವ ಮೂಲಕ ಹಿತ, ಮಿತ, ಧರ್ಮಸಮ್ಮತವಾದ ಕಾಮಕ್ಕೆ ದೈವತ್ವದ ಮೆರುಗು ನೀಡಿರುವುದು ಅದರ ಮಹತ್ವಕ್ಕೆ ಹಿಡಿದ ಕನ್ನಡಿ.-
ಮೋಕ್ಷ ಸಂಪಾದನೆ ಮನುಷ್ಯನ ಪರಮಗುರಿ. ಅದನ್ನು ಪಡೆಯಲು ಮಾನವತ್ವದಿಂದ ಮೇಲೇಳಬೇಕಾಗುವುದು. ಮೋಕ್ಷಸ್ಥಿತಿಯಲ್ಲಿ ಪರಮ ಸುಖದ ಅನುಭವವುಂಟಾಗುತ್ತದೆ. ಭವಬಂಧನದಿಂದ ಬಿಡುಗಡೆಯಾಗುತ್ತದೆ.
ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಧರ್ಮ ಮತ್ತು ಮೋಕ್ಷಗಳನ್ನು ತಿರಸ್ಕರಿಸಿ, ಕೇವಲ ಅರ್ಥ ಮತ್ತು ಕಾಮಗಳಿಗೆ ಪ್ರಾಶಸ್ತ್ಯ ನೀಡಿರುವುದರಿಂದ ಸಮಾಜದಲ್ಲಿ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆಯಂತಹ ಮೌಲ್ಯಗಳು ನೆಲಕಚ್ಚುತ್ತಿವೆ. ಮಾನವ ಬದುಕು ದುರ್ಭರವಾಗಿದೆ. ಕಾರಣ ಧರ್ಮ ಮಾರ್ಗದಿಂದ ಅರ್ಥೋಪಾರ್ಜನ ಹಾಗು ಕಾಮೋಪಭೋಗಗಳನ್ನು ಪೂರೈಸುತ್ತ ಮೋಕ್ಷ ಸಂಪಾದನೆ ಮಾಡುವುದೇ ವಿಹಿತ. ಆಗಲೇ ಪರಮಸುಖದ ಪ್ರಾಪ್ತಿ.