ಲೇಖಕರು :ಡಾ . ಸಿದ್ದಣ್ಣ .ಬ . ಉತ್ನಾಳ
(ಗ್ರಂಥ ಋಣ :ಚಿನ್ಮಯ ಚೇತನ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳು)

ಹನ್ನೆರಡನೆಯ ಶತಮಾನದಲ್ಲಿ ಗಟ್ಟಿಗೊಂಡು ೧೯ ನೆಯ ಶತಮಾನದಲ್ಲಿ ಸವಕಲಾದ ವೀರಶೈವ ದಾರ್ಶನಿಕ ಪದಗಳಿಗೆ ಹೊಸ ಶಕ್ತಿ ತುಂಬಿ ; ಜಗಕ್ಕೆಲ್ಲ ಜಂಗಮಜ್ಯೋತಿಯಾಗಿ ಬೆಳಗಿದವರು ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು .
ಜ್ಯೋತಿ ಕತ್ತಲೆಯಲ್ಲಿ ಭಾತಿಯಿಂದುರಿವಂತೆ
ಪ್ರೀತಿಯಿಂದೆಸೆವ ಶಿವಯೋಗಿ ಜಗಕ್ಕೆಲ್ಲ
ಜ್ಯೋತಿ ತಾನಕ್ಕು ಸರ್ವಜ್ಞ
ಜಗವೆಲ್ಲ ಶಿವಾನುಭವ ಸೌರಭದಿಂದ ಹನ್ನೆರಡನೆಯ ಶತಮಾನಶಕ್ತಿ ಮರುಕಳಿಸಿತು . ಶಿವಯೋಗದ ಸ್ವರೂಪವು ಶ್ರೀಮದಥಣಿ ಮುರುಘೇಂದ್ರ ಶಿವಯೋಗಿ ಗಳ ಯೋಗಮಯ ಜೀವನದಲ್ಲಿ ಬೆಳಗುತ್ತಿದ್ದಿತು . ಆ ಬೆಳಕಿನ ಸಹಾಯದಿಂದ ಸಹಸ್ರಾರು ಮಹಾತ್ಮರು ಇಂದು ನಡೆದು ನುಡಿದು ನಾಡ ಪಾವನ ಮಾಡುತ್ತಿ ದ್ದಾರೆ . “ ಶಿವಯೋಗಿಗಳು ಚುಂಬಕವಾಗಿ ಸಮಾಜವನ್ನು ಆಕರ್ಷಿಸಿದರು : ಪರುಷರಾಗಿ ಹಲವರನ್ನು ಪರಿವರ್ತನಗೊಳಿಸಿದರು ; ಪ್ರದೀಪವಾಗಿ ಕೆಲವರನ್ನು ಪ್ರಕಾಶಗೊಳಿಸಿದರು . ಅವರ ಪ್ರಸಾದ ವಾಣಿಯ ಪ್ರಭಾವದಿಂದ , ಅವರ ಕೃಪಾದೃಷ್ಟಿಯ ಬಲದಿಂದ , ಅವರ ಆಶೀರ್ವಾದದ ಪರಿಣಾಮವಾಗಿ ಆತ್ಮ ಶಕ್ತಿಯನ್ನು ಅರಳಿಸಿಕೊಂಡವರ ಸಂಖ್ಯೆ ಅಸಂಖ್ಯ . ಇಂದಿಗೂ ಈ ಪ್ರಕಾಶ ಪರಂಜ್ಯೋತಿ ಸ್ವರೂಪವಾಗಿ ಪ್ರಕಾಶ ಪಸರಿಸುತ್ತಿದೆ ” .
ಈ ಪ್ರಕಾಶದ ಪೂರ್ವದಿಗಂತವೇ ನದಿ ಇಂಗಳಗಾವಿ , ಅಲ್ಲಿ ಶಾಲಿವಾಹನ ಶಕೆ ೧೭೫೮ ರ ವೈಶಾಖ ಮಾಸದ ಶುಕ್ಲಪಕ್ಷ ೧೧ , ಬೆಳಕು ಉದಯವಾಯಿತು . ಈ ಮಹಿಮರಿಗೆ ಜನ್ಮದಾತರಾಗುವ ಪುಣ್ಯ ರಾಚಯ್ಯ – ನೀಲಾಂಬಿಕೆಯರದು .
ಆರಾಜಿಸುವ ಪರಬ್ರಂಹ ತೇಜಃ ಕಲಾ |
ಕೌರವಾರಂಗೊಂಡು ಪುಟ್ಟ ತೆನೆಪದಿನೆಂಟು |
ನೂರ ಮೂವತ್ಪಾದನೆಯ ಶಕ ವರ್ಷದೊಳ್ಗುರುಲಿಂಗ ನಾಮಾಂಕಿತ
ಧಾರಣಿಯೊಳವತರಿಸಿ ಬಾಲಲೀಲೆಗಳಿಂದ
ಮಾರ ಸೌಂದರ್ಯಮಂ ಜರೆಯುವಾ ಕೃತಿಯನುಂ
ಸಾರುತಾಪುತ್ರರೋಳೀತನಧಿಕ ಪ್ರೇಮ ಜೀವಿಯೆನೆ ರಂಜಿಸಿರ್ದಂ ||
ಗುರುಲಿಂಗಯ್ಯನ ಆಚಾರ – ವಿಚಾರ ಸಾಮಾನ್ಯ ಮಕ್ಕಳಂತಿರದೆ ಅಸಾಮಾನ್ಯವಾಗಿ ಕಾಣತೊಡಗಿದವು . ಆಗ ಈ ಬಾಲಕನನ್ನು ಅಥಣಿಯ ಗಚ್ಚಿನಮಠಕ್ಕೆ ಕರೆದುಕೊಂಡು ಬಂದರು . ಪೀಠಾಧಿಪತಿಗಳಾಗಿದ್ದ ಎರಡನೆಯ ಮರುಳ ಶಂಕರಸ್ವಾಮಿಗಳು ಗುರುಲಿಂಗಯ್ಯನನ್ನು ಗುರುದೃಷ್ಟಿಯಿಂದ ಕಂಡು ‘ ಸಾಕ್ಷಾತ್ ಶಿವನೇ ಆಗಮಿಸಿದ’ನೆಂದು ಅಂತಃಕರಣದಿಂದ ಬರಮಾಡಿಕೊಂಡರು . ಅಧ್ಯಯನಕ್ಕಾಗಿ ತೆಲಸಂಗದ ಶಿವಬಸವ ದೇವರಲ್ಲಿ ಹಾಗೂ ಮಮದಾಪುರದ ಮಹಾಯೋಗಿಗಳಲ್ಲಿ ವ್ಯವಸ್ಥೆ ಮಾಡಿದರು . ಅಭ್ಯಾಸ ಮುಗಿಸಿಕೊಂಡು ಮರಳಿ ಅಥಣಿಗೆ ಆಗಮಿಸಿದರು . ಮರುಳಶಂಕರರು ಮುರುಘೇಂದ್ರ ಎಂದು ಹೊಸ ನಾಮಕರಣ ಮಾಡಿದರು . ಗುರುಶಾಂತಸ್ವಾಮಿಗಳಿಂದ ಷಟಸ್ಥಲ ಬ್ರಹ್ಮೋಪದೇಶವನ್ನು ಪಡೆದು ಮುಂದೆ ಸಂಚಾರ ಕೈಕೊಂಡರು . ಹಳ್ಳಿಯಲ್ಲಿ ಏಕರಾತ್ರಿ , ಪಟ್ಟಣದಲ್ಲಿ ಪಂಚರಾತ್ರಿಗಳಂತೆ ವಾಸ್ತವ್ಯ ಮಾಡುತ್ತ ನಡೆದರು , ಚರಜಂಗಮಾಚರಣೆಯ ಪಾಲನೆಗಾಗಿ ಪುಣ್ಯಸ್ಥಳಗಳ ದರ್ಶನ ಕೈಕೊಂಡರು .
ನಂತರ ಅಥಣಿ ತಾಲೂಕಿನ ಶೂರಪಾಲಿ ಗ್ರಾಮದ ಹತ್ತಿರ ” ಗುಹೇಶ್ವರ ಗಡೆ’ಯಲ್ಲಿ ಆರು ವರುಷ ಶಿವಯೋಗಾನುಸಂಧಾನಕ್ಕೋಸ್ಕರ ಏಕಾಂತ ವಾಸ ದಲ್ಲಿದ್ದರು . ಇದೇ ಸಂದರ್ಭದಲ್ಲಿ ಶಿವಯೋಗಿಗಳು ಲಿಂಗಾರ್ಚನೆಗೆ ಕುಳಿತಾಗ ಶಿವಯೋಗ ಸಾಧನೆ ನಾಗರಹಾವೊಂದು ದಿನಾಲು ತೂಗಿ ತೊನೆಯುತ್ತಿತ್ತು .ಶಿವಯೋಗ ಸಾಧನೆ ಯನ್ನು ಮುಗಿಸಿ ಶಿವಯೋಗ ಸಿದ್ದರಾಗಿ ಹೊರಬಿದ್ದರು ಶ್ರೀ ಮುರುಘೇಂದ್ರ ದೇವರು .
ಗಚ್ಚಿನ ಮಠಕ್ಕೆ ಆಗಮಿಸಿದಾಗ ಮಠದ ಅಧಿಕಾರವನ್ನು ವಹಿಸಿಕೊಳ್ಳಲು ಚೆನ್ನಬಸವಸ್ವಾಮಿಗಳು ಹಾಗೂ ಭಕ್ತರು ವಿನಯದಿಂದ ಕೇಳಿಕೊಂಡರು . “ ಈ ಮಠ – ಮಾನ್ಯಗಳ ಅಧಿಕಾರ ಬೇಡ , ಗುರು – ಲಿಂಗ – ಜಂಗಮ ಸೇವೆಯಂತೆ ಶರಣರ ಸೇವೆಯೇ ಸಾಕು . ನಾ ನಿರಾಭಾರಿ ಜಂಗಮ , ನನಗೆ ಲಿಂಗಯ್ಯನ ಸಂಗೊಂದು ಸಾಕು ” . ಶ್ರೀ ಸಿದ್ದಲಿಂಗ ದೇವರನ್ನು ಮಠದ ಅಧಿಪತಿಯನ್ನಾಗಿ ಮಾಡಿದರು . ಶ್ರೀಗಳು ಹಾಗೂ ಭಕ್ತರು ಶ್ರೀ ಮುರುಘಂದ್ರ ಮಹಾಸ್ವಾಮಿ ಗಳಿಗೆ ಈ ಮಠದಲ್ಲಿಯೇ ಇರಲು ಕೇಳಿಕೊಂಡಾಗ ಗಚ್ಚಿನ ಮಠವು ಗಟ್ಟಿ ಯಾಯಿತು , ಯೋಗ ಮಂಟಪವೇ ಶಿವಯೋಗಿಗಳ ಶಿವಾಲಯವಾಯ್ತು .
ಮುಂದೆ ಶ್ರೀ ಮುರುಘಂದ್ರ ಶಿವಯೋಗಿಗಳ ಜೀವನವು “ ಬಿಂದು ನಾದವ ನುಂಗಿ , ಇಂದು ರವಿಯನು ನುಂಗಿ , ಸಂದಿರ್ದ ಮನವ ನಿಜ ನುಂಗಿದಾ ಯೋಗಿ ಇಂದುಧರನಕ್ಕು ” ಎಂಬ ಸರ್ವಜ್ಞನ ಮಾತಿನ ಮೂರ್ತಿಯಾದರು . ಯತಿಗಳಿಗೆ ಶಿವಯೋಗ ಸಾಮ್ರಾಜ್ಯದ ಸಾಮ್ರಾಟರಾದರು .
ಈ ಜೀವ ಶಿವನಾಗುವುದೇ ಶಿವಯೋಗ . ನಿಜಗುಣ ಶಿವಯೋಗಿಗಳು ಕಾಯ ಪಿಡಿದಾತ್ಮರಾಶಿಗೆ ಪರತರ ಮುಕ್ತಿಗುಪಾಯವಿದು ; ನಿಜ ಶಿವ ಮಂತ್ರ ವಣ್ಣ ” ಎಂದು ವಿವರಿಸಿದ್ದಾರೆ . ಪರಶಿವನನ್ನು ಅರಿತು ಅರಿವಿನಲ್ಲಿ ಬೆರೆಯು ವುದೇ ಮುಕ್ತಿ , ಜೀವ ಶಿವನೆಂದು ತಿಳಿದು , ತಳೆದು ತಾನೊಂದಾದಾಗ ಆಗುವ ಆನಂದ ಸ್ವರೂಪವೇ ಶಿವಸ್ವರೂಪ . ಇದೇ ಲಿಂಗಾಂಗ ಸಾಮರಸ್ಯ ಅರ್ಥಾತ್ ಶಿವಯೋಗ ‘ . “ ಶಿವಯೋಗಿ ಶರೀರೇ ಚ ಸದಾ ಸನ್ನಿಹಿತಃ ಶಿವ ” ಸದುಕ್ತಿಯಂತೆ ತಮ್ಮಲ್ಲಿ ಶಿವನನ್ನು ,ಶಿವನಲ್ಲಿ ತಮ್ಮನ್ನು ಕಂಡು ಸದಾಶಿವ ಸ್ವರೂಪದಲ್ಲಿ ಬಾಳುವವರೇ ಶಿವಯೋಗಿಗಳು .
ನೆನಹ ಮನದಲ್ಲಿ ಕಟ್ಟಿ , ಮನವ ಘನದಲ್ಲಿ ಕಟ್ಟಿ
ಮನವನ್ನಪಾನಕೆಳಸದೆ ಯೋಗಿಗೆ
ವನವಾಸವೇಕೆ ಸರ್ವಜ್ಞ .
“ ಲಿಂಗಾಂಗ ಯೋಗಾಚರಣೆಗೆ ಪ್ರಸಾದ ಭೋಗವು , ಅದರಿಂದುಂಟಾಗುವ ತೃಪ್ತಿ ಇವೆರಡೇ ಮುಖ್ಯ ಫಲಗಳೆನಿಸುವವು , ಜಗತ್ತಿನ ಸತ್ಪದಾರ್ಥಗಳೆಲ್ಲವೂ ಶಿವಪ್ರಸಾದವಾಗಿ ಪರಿಣಮಿಸಬೇಕು . ಆತ್ಮನು ಆ ಪ್ರಸಾದಭೋಗಿಯಾಗಿ ತೃಪ್ತನಾಗಬೇಕು . ಆ ತೃಪ್ತಿಯು ನಿತ್ಯವಾದುದು , ಲಿಂಗಾನಂದರೂಪ ವಾದುದು . ಇದೇ ಲಿಂಗೋಪಭೋಗ – ಜನ್ಯವಾದ ಶಿವಸುಖವು . ಇದನ್ನು ಪಡೆದವನು ( ಶಿವಯೋಗಿ ) ಮುಕ್ತ ಜೀವಿಯು , ಶಿವಯೋಗಿಯು ಈ ಸ್ಥಿತಿ ಯನ್ನು ಪಡೆಯುವುದೇ ಲಿಂಗಾಂಗ ಯೋಗದ ಸಹಚಾಚರಣೆಯ ಗುರಿ ” .
ಈ ಮಹಾಲಿಂಗ ( ತೃಪ್ತಿ ) ದಲ್ಲಿ ಬೆರೆತ ಲಿಂಗಾಂಗ ಯೋಗಿಯು ಷಟ್‌ಸ್ಥಲ ಬ್ರಹ್ಮಮೂರ್ತಿಯಾಗಿ ಕಂಗೊಳಿಸುವನು . ಇದೇ ಲಿಂಗಾಂಗ ಯೋಗರೂಪವಾದ ಶಿವಯೋಗದ ನಿಜಸ್ಥಿತಿಯು , ಶ್ರೀ ಮುರುಘೇಂದ್ರ ಶಿವಯೋಗಿಗಳು ಸರ್ವಾಂಗಲಿಂಗ ಸ್ಥಿತಿಯನ್ನು ಪಡೆದವರಾಗಿದ್ದರು .
ಜೀವ ಶಿವನಾಗುವತ್ತ ಮಾಡುವ ಸಾಧನೆಯೇ ಯೋಗ . ಇದರಲ್ಲಿ ಮಂತ್ರ ಯೋಗ , ಲಯಯೋಗ , ಹಠಯೋಗ , ರಾಜಯೋಗ ಹಾಗೂ ಶಿವಯೋಗ ಎಂದು ಐದು ಪ್ರಕಾರಗಳುಂಟು . ‘ ಪರಿಪೂರ್ಣಯೋಗ ‘ ವೆಂದು ಪರಿಪೂರ್ಣ ಯೋಗವೇ ಮುಖ್ಯವೆಂದು ಭಾವಿಸುವವರುಂಟು , ಆದರೆ ” ಶಿವಯೋಗ’ವೇ ಪರಿಪೂರ್ಣ ಅರ್ಥಾತ್ ಪೂರ್ಣ ಯೋಗ .
ಹಲವು ಯೋಗವ ಮಾಡಿ ಫಲವೇನು ಮಗನೆ
ಎಂದೊಲಿದು ಲಿಂಗಾಂಗ ಸುಲಭ ಯೋಗವನೊಡನೆ
ಕಲಿಸಿದ ಗುರುವೇ ಕೃಪೆಯಾಗು ||
ಎಂದು ಮೈಲಾರ ಬಸವಲಿಂಗ ಶರಣರು ಹೇಳಿದ್ದಾರೆ . ಶ್ರೀ ಮುರುಘೇಂದ್ರ ಶಿವಯೋಗಿಗಳು ಷಟಸ್ಥಲಾಚರಣೆಯಲ್ಲಿ ಬಲ್ಲಿದ ರಾಗಿ , ಶಿವಯೋಗಿ ಚಕ್ರವರ್ತಿಗಳೆನಿಸಿಕೊಂಡಿದ್ದರು . ಈ ಷಟ್‌ಸ್ಥಲದಲ್ಲಿ ಇಹ – ಪರ ಶಕ್ತಿ ಒಂದಾಗಿದೆಂದಾಗ ಈ ಶಿವಯೋಗದ ಮುಂದೆ ಮತ್ತಾವ ಯೋಗ ? ಜೀವವೇ ದೇವರಲ್ಲಿ ಒಂದಾಗುವ ಶಕ್ತಿ ಸಮ್ಮಿಳಿತವಾದಾಗ ಮತ್ತಾ ವುದರಲ್ಲಿ ಒಂದಾಗುವುದು ! ದೇಹ ಕಠಿಣದಿಂದ ಮಾಡುವ ಯೋಗ ಶೈವ ಮತದಲ್ಲಿ ಪ್ರಾಮುಖ್ಯತೆಹೊಂದಿದೆ . ವೀರಶೈವದಲ್ಲಿ ‘ ಷಟ್‌ಸ್ಥಲ ಮಾರ್ಗದಿಂದ ಸಾಧಿಸುವ ಲಿಂಗಾಂಗ ಸಂಯೋಗವೇ ವೀರಶೈವದ ಶಿವಯೋಗವಾಗಿರುವುದು , ಲಿಂಗಾಂಗಗಳ ಸಾಮರಸ್ಯವೇ ಸಂಯೋಗವೆನಿಸುವುದು .
ಸಮ್ಯಗೊಗೋ ಹಿ ಸಂಯೋಗೋಭವೇಲ್ಲಿಂಗಾಂಗಯೋಃ
ಸದಾ ಸಂಯೋಗ ಏವ ಸಾಯುಜ್ಯರೂಪ ಮುಕ್ತಿರ್ನ ಚಾಪರಾ
ಎಂದು ಮೊಗ್ಗೆಯ ಮಾಯಿದೇವರು ತಮ್ಮ ಶಿವಾನುಭವ ಸೂತ್ರದಲ್ಲಿ ಹೇಳಿದ್ದಾರೆ ,
ಆ ಪರಶಿವನಲ್ಲಿ ಮನವನ್ನು ಲೀನಗೊಳಿಸಿ ಧ್ಯಾನಿಸುವುದೇ ಮಂತ್ರಯೋಗ , ಕರಣೇಂದ್ರಿಯ ಭೋಗದಿಂದ ಬಿಡುಗಡೆ ಹೊಂದಿ , ಪರಶಿವನಲ್ಲಿ ಚಿತ್ರವನ್ನು ಲಯಗೊಳಿಸುವದೇ ಲಯಯೋಗ – ಸರಾಗವಾಗಿ ಸಂಚರಿಸುತ್ತಿರುವ ಪ್ರಾಣ ವಾಯುವನ್ನು ಮೂಗಿನ ರಂಧ್ರದ ಮೂಲಕ ತಡೆಹಿಡಿದು ತೂಬಿಸಿ ಹಣೆಯಲ್ಲಿ ಹೊಳೆಯುವ ಪ್ರಕಾಶವನ್ನೇ ತದೇಕ ಚಿತ್ತದಿಂದ ನೋಡುವುದೇ ಹಠಯೋಗ . ಈ ಜಗತ್ತಿನಲ್ಲಿ ಒಳ – ಹೊರಗೆಲ್ಲಾ ತುಂಬಿರುವ ಪ್ರಕಾಶವೇ ( ಪರತತ್ವವೆ ) ತಾನೆಂದು ತಿಳಿದು , ಆ ಅರಿವನ್ನೂ ಮೀರಿ ನಿಲ್ಲುವುದೇ ರಾಜಯೋಗ , ಒಂಭತ್ತು ಚಕ್ರಗಳಲ್ಲಿ ಒಂದು ಮಹಾಜ್ಯೋತಿ ಸಂಚರಿಸುವುದು . ಆ ಜ್ಯೋತಿಯೇ ಗುರುಸಿದ್ಧ ಮೂರ್ತಿ : ಗುರುಸಿದ್ಧ ನೇ ಶಿವಸ್ವರೂಪಿ ಎಂದು ಎರಡಿಲ್ಲದೇ ಭಾವಿಸಿ ನಂಬಿ ಧ್ಯಾನಿಸುವುದೇ ಶಿವಯೋಗ . ಪರತತ್ವವು ತನಗೆ ತಾನೇ ಗೋಚರಿಸು ವುದು . ಶರೀರದಲ್ಲಿ ಪರಂಜ್ಯೋತಿಯಿದೆ , ಪರತತ್ವವೂ ಇದೆ . ಆ ಜ್ಯೋತಿಯೇ ಮೂಲಸ್ವರೂಪ ; ಇದನ್ನೇ ಪರಬ್ರಹ್ಮ ಸ್ವರೂಪವೆನ್ನುತ್ತಾರೆ . ಈ ದೇಹದಲ್ಲಿ ಇರುವ ನವಚಕ್ರಗಳನ್ನು ಸಂಧಿಸಿ ಚಿಜ್ಯೋತಿಯನ್ನು ಕಾಣಬಹುದು . ಇದುವೇ ಪರಿಪೂರ್ಣ ಲಿಂಗ , ಪರಶಿವತತ್ವ , ಹೀಗೆ ಪರಶಿವತತ್ವ ಕಂಡು ಶಿವಯೋಗಿ ಗಳಾದರು . ಆಗ ಭಕ್ತರು
ಪರಮಾತ್ಮನಿವನೆಂದು ನಿರುಕಿಸಲ್ಕೆಲರಂತು |
ಪರಮಸದ್ಗುರುವೆಂದು ಪೂಜಿಸಲ್ಕೆಲರಂತು |
ಹರಶರಣನೆಂದು ಸಲೆಪಾಡಲ್ಕೆಲರಂತು ಭೂರಿಸಂತೋಷವಾಂತು |
ಪರವಸ್ತುವೆಂದು ನೆರೆನುತಿಸಲ್ಕೆಲರಂತು |
ಚರಣಸನ್ನಿಧಿ ದರ್ಶನಕ್ಕೆಂದು ಕೆಲರಂತು |
ತರತರಗೊಳ್ಳುತಂ ಬರುತಿರ್ಪರನುದಿನಂ ಭಕ್ತಿಭಾವಾಸಕ್ತರು ||
ನವಚಕ್ರಗತ ತೇಜೋಮಯ ಗುರುಸಿದ್ದನೆ
ಶಿವಲಿಂಗನಾಗಿಹನಿದನೊಂದಿ |
ಅವಿರಳನಾಗಿರಲಪವರ್ಗವಹುದೆಂದು
ಶಿವಯೋಗವನು ಕಾಣಿಸಿದರಿಂದೆ
ಎಂದು ಸರ್ಪಭೂಷಣ ಶಿವಯೋಗಿಗಳು ಶಿವಯೋಗ ಕುರಿತು ಹೇಳಿದ್ದಾರೆ .
ಶಿವಾನುಭವ ದರ್ಪಣದಲ್ಲಿ :
ಶಿವಯೋಗೀಶಂ ಸದಾಪಶ್ಚಿಮವಿತಥ ಪದ್ಮಾಸನಾಸೀನನಾಗು |
ತ್ತವ ನೀಲಜ್ಯೋತಿ ಕಾಂತ್ಯದ್ವಯ ಮಿಡಿದರೆ ಯೋಗಾನುಭವ ಪ್ರಕಾಶಂ |
ತವೆ ಕುಂಡಗ್ನಿಯೊಳ್ ಚಲ್ಲುತಿರೆ ವಿಮಳಷಟ್ಚ್ಕ್ರ ಪದ್ಮಂಗಳೆಲ್ಲಂ |
ರವಿ ಚಂದ್ರಾಗ್ನಿ ಪ್ರಭಾ ಕೋಟಿ ಕಿರಣಮಯವಾಗಲ್
ತ್ರಿಲೋಕಾಂತ ತೇಜಂ |
ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಶಿವಯೋಗ ಸಾಮ್ರಾಜ್ಯದ ಸಾರ್ವಭೌಮರಾದರು . ಅವರ ಜೀವನವೇ ಶಿವಯೋಗ ; ಶಿವಯೋಗವೇ ಅವರ ಜೀವನ .
ಶ್ರೀ ರಮಣ ಮಹರ್ಷಿಗಳು ಹೇಳುತ್ತಾರೆ , ನಾನು ಎಲ್ಲ ಯೋಗಗಳನ್ನು ಅರಿತುಕೊಂಡೆ ಆದರೆ ‘ ನಾದಯೋಗ ‘ ಎಷ್ಟು ಪ್ರಯತ್ನಿಸಿದರೂ ತಿಳಿಯಲಿಲ್ಲ . ಇದರಿಂದ ತಿರುಗಾಟದಲ್ಲಿ ನಿರತನಾದೆ . ಆಗ ಮುಂಬೈಯಲ್ಲಿ ಒಬ್ಬ ವಕೀಲರು ಶ್ರೀಮದಥಣಿಯಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳಿದ್ದಾರೆ . ಅವರನ್ನು ಕಂಡರೆ ಸಾಧ್ಯವಾಗುತ್ತದೆಂದು ಹೇಳಿದಾಗ ರಮಣ ಮಹರ್ಷಿಗಳು ಅಥಣಿಗೆ ಬಂದು ಶ್ರೀ ಮುರುಘಂದ್ರ ಶಿವಯೋಗಿಗಳಿಂದ ನಾದಯೋಗ ( ಕಿವಿಯಲ್ಲಿ ಅರುಹಿದರು ) ವನ್ನು ತಿಳಿಸಿಕೊಟ್ಟರೆಂದು ಹೇಳಿದ್ದಾರೆ . ನಿಜವಾಗಿ ಶಿವಯೋಗದ ರಹಸ್ಯವನ್ನರಿತು ಶಿವಯೋಗ ಸಂಪತ್ತಿನಲ್ಲಿ ಸಾಕ್ಷಾತ್ ಶಿವನೆನಿಸಿಕೊಂಡರು .
ಕರ್ನಾಟಕದ ಗಾಂಧೀಯೆಂದೇ ಖ್ಯಾತರಾಗಿದ್ದ ಲಿಂ . ಹರ್ಡೆಕರ ಮಂಜಪ್ಪ ನವರು , ರಾಷ್ಟ್ರಪುರುಷ ದಿ . ಲೋಕಮಾನ್ಯ ತಿಲಕರು ( ಚಿತ್ರದುರ್ಗದ ಮಠದಲ್ಲಿ ) ಕೂಡಿ ಚರ್ಚಿಸುವಾಗ ಯೋಗಿಯ ಲಕ್ಷಣಗಳೇನು ? ಎಂದು ತಿಲಕರು ಕೇಳಿದಾಗ , ಮಂಜಪ್ಪನವರು ಮಂಡಿಸಿದಾಗ ಇಂಥವರು ಇಂದುಂಟೆ ? ಎಂದು ಶ್ರೀ ತಿಲಕರು ಕೇಳಿದರು , ತಾವುಗಳು ಅಥಣಿಗೆ ಹೋಗಿ ಶ್ರೀ ಮುರುಘೇಂದ್ರ ಸ್ವಾಮಿಗಳನ್ನು ಕಾಣಬಹುದು ಎಂದು ಹೇಳಿದರು , ನಂತರ ಶ್ರೀ ಲೋಕಮಾನ್ಯ ತಿಲಕರು ಅಥಣಿಗೆ ಬಂದು ಮಠಕ್ಕೆ ಹೋಗುವಷ್ಟರಲ್ಲಿ ಶ್ರೀ ಶಿವಯೋಗಿಗಳು ಬಾಗಿಲಿಗೆ ಬಂದು ನಿಂತಿದ್ದರು . ಪಾದದಿಂದ ಮಸ್ತಕದವರೆಗೆ ತದೇಕ ದೃಷ್ಟಿಯಿಂದ ನೋಡಿ ಕಣ್ಣಿಗೆ ಕಾಣದವರ ಕುರಿತು ಜಿಜ್ಞಾಸೆಗೈದು ಟೀಕೆ ಬರೆದೆ ; ನಿಮ್ಮಂತಹ ಮಹಾ ತ್ಮರ ಕುರಿತು ಬರೆಯಬೇಕಾಗಿತ್ತೆನ್ನು ವಷ್ಟರೊಳಗಾಗಿಯೇ ಶ್ರೀ ಶಿವಯೋಗಿ ಗಳು ಅವರು ಮಹಾತ್ಮರಪಾ ! ಶಿವಸ್ವರೂಪಿಗಳ್ರೆಪಾ ಹಾಗ ನುಡಿಬಾರದೆಂದು ಹೇಳಿದಾಗ ಶ್ರೀ ತಿಲಕರು ಆನಂದತುಂದಿಲರಾಗಿ ನಿಂತುಬಿಟ್ಟಿದ್ದರು . ನಂತರ ಶ್ರೀ ಶಿವಮಾರ್ಗ ಸಂದರ್ಶಿಸಿ ದರ್ಶನಾಶೀರ್ವಾದ ಪಡೆದು ಪುನೀತರಾದರು . ಇದೇ ಸಂದರ್ಭದಲ್ಲಿ ಶ್ರೀ ತಿಲಕರು ‘ ನಾನು ಇಟ್ಟುಕೊಂಡ ಗುರಿ ಕಾಣಲು ಎಂದು ಪ್ರಶ್ನೆ [ ಭಾರತ ಸ್ವಾತಂತ್ರ್ಯ ಕುರಿತು ] ಕೇಳಿದಾಗ ಶ್ರೀಗಳು ಸಾವಕಾಶವಾಗಿ ‘ ನಿನ್ನ ಗುರಿ ಸಾಧಿಸುತ್ತದೆ, ನೀನು ಕಾಣುವುದಿಲ್ಲ ‘ ಎಂದು ಹೇಳಿದರು [ ೧೯೪೭ ರಲ್ಲಿ ಸ್ವಾತಂತ್ರ್ಯ ದೊರಕಿತು ; ಪೂರ್ವದಲ್ಲಿಯೇ ಶ್ರೀ ತಿಲಕರು ಸ್ವರ್ಗಸ್ಥರಾದರು ] .
ಅದ್ವೈತ ಸಿದ್ದಾಂತದ ಸಾಕಾರರೂಪಿಗಳಾದ ಶ್ರೀ ಸಿದ್ಧಾರೂಢರು ದೇಶ ಸಂಚಾರ ಕೈಕೊಂಡು ಕಾಶಿಗೆ ಹೋದರು . ಅಲ್ಲಿದ್ದ ಪಂಡಿತರನ್ನು ಕಂಡು ಚರ್ಚಿಸಿ ಅದ್ವೈತ ಸಿದ್ದಾಂತದ ಹಿರಿಮೆಯನ್ನು ಎತ್ತಿ ತೋರಿದರು . ನಂತರ ಹುಬ್ಬಳ್ಳಿಗೆ ಆಗಮಿಸಿದರು . ಅಲ್ಲಿದ್ದ ಪಂಡಿತರಲ್ಲಿ ಇಬ್ಬರು ಊರಿಗೆ ಹೋಗಿದ್ದರು . ಇವರು ಕಾಶಿಗೆ ಬರುವಷ್ಟರಲ್ಲಿ ಶ್ರೀ ಸಿದ್ಧಾರೂಢರ ಸಿದ್ದಾಂತ ಸಾಧನೆ ಕುರಿತು ದಿನನಿತ್ಯ ಚರ್ಚೆ , ಇದನರಿತು ಅದೇ ತಾನೇ ಊರಿಂದ ಬಂದವರು ಗಾಬರಿಯಾಗಿ ಕೇಳಲು ನಡೆದ ವಿಷಯ ವಿಸ್ತರಿಸಿದರು . ನೀವು ಮುಖ್ಯ ಪ್ರಶ್ನೆಯನ್ನೇ ಕೇಳಿಲ್ಲ , ಶಿವಯೋಗಿ ಅಥವಾ ಯತಿಯ ಕುರಿತು ಲಕ್ಷಣವೇನೆಂದು ಕೇಳಬೇಕಾಗಿತ್ತು . ಉತ್ತರ ಹೇಳಿ ನೋಡೋಣವೆಂದು ಹೇಳಿದಾಗ , ಎಲ್ಲರೂ ಗಾಬರಿಯಾಗಿ ನೀವು ಹುಬ್ಬಳ್ಳಿಗೆ ಹೋಗಿ ಈ ಪ್ರಶ್ನೆ ಕೇಳಿ ಬರ್ರಿ ಎಂದು ಹೇಳಿದಾಗ ಇವರಿಬ್ಬರು ಹುಬ್ಬಳ್ಳಿಗೆ ಬಂದರು . ಶ್ರೀ ಸಿದ್ಧಾರೂಢರನ್ನು ಕಂಡು ಪ್ರಶ್ನೆ ಕೇಳಲಾಗಿ ‘ ಪಂಡಿತರೇ ತಮ್ಮಲ್ಲಿಗೆ ಬಂದಾಗ್ಗೆ ಉತ್ತರ ಹೇಳಬಹುದಿತ್ತು . ಆದರೆ ತಾವುಗಳು ಅಥಣಿಗೆ ಹೋಗಿರಿ , ಶ್ರೀ ಮುರಿಗೆಪ್ಪನೆಂಬ ಶಿವಯೋಗಿಗಳಿದ್ದಾರೆ ಈ ಪ್ರಶ್ನೆಗೆ ಸರಿಯಾದ ಉತ್ತರ ತೋರಿಸುತ್ತಾರೆ ‘ ಎಂದು ಹೇಳಿದರು . ಆಗ ಪಂಡಿತರು ಅಥಣಿಗೆ ಆಗಮಿಸಿದರು .
ಸದರದಲ್ಲಿ ಆಸೀನರಾಗಿದ್ದ ಶ್ರೀ ಶಿವಯೋಗಿಗಳು ಈ ಪಂಡಿತರನ್ನು ಕಂಡ ಕೂಡಲೆ ‘ ಬರ್ರೆಪಾ ಬರ್ರಿ ವೇಳೆ ಬಹಳಾಗಿ ದೆ , ಸ್ನಾನ ಮಾಡಿ , ಪೂಜೆ ಮಾಡಿ , ಪ್ರಸಾದ ಸ್ವೀಕರಿಸಬೇಕೆಂದು ಹೇಳಿದರು . ಹೀಗೆ ದಿನಾಲು ` ಎದ್ರೆಪಾ , ಸ್ನಾನ , ಪೂಜೆ , ಪ್ರಸಾದ ಮಾಡ್ರಿ ‘ ಎಂದು ಹೇಳುತ್ತಾ ನಡೆದರು . ಬಂದ ಪಂಡಿತರು ತಮ್ಮಲ್ಲಿಯೇ ಚರ್ಚಿಸಿದರು . ನಾವು ಗಾಡಿಗಟ್ಟಲೆ ಗ್ರಂಥಗಳನ್ನು ಅಭ್ಯಾಸ ಮಾಡಿದರೂ ಈ ಪ್ರಶ್ನೆಗೆ ಉತ್ತರ ದೊರೆತಿಲ್ಲ . ಈತ ಏನೇನು ಓದಿದ್ದಾನೆ ; ಏನೋ ! ಅಪ್ಪನವರ ವಚನಗಳಂತೆ , ತೊಡಿಯ ಮೇಲಿಟ್ಟುಕೊಂಡು ಓದುತಾ ರೆ . ಇವರಿಗೆ ಈ ಪ್ರಶ್ನೆ ಕೇಳಿ ಅವಮಾನ ಮಾಡುವುದರಲ್ಲಿ ಅರ್ಥ ವಿಲ್ಲವೆಂದು ತಿಳಿದು ಮರುದಿನ ಹೋಗಲು ಅಪ್ಪಣೆ ಪಡೆದುಕೊಂಡರು .
ಹುಬ್ಬಳ್ಳಿಗೆ ಬಂದು ಅಪಹಾಸ್ಯದಿಂದ ನುಡಿದರು ‘ ಸ್ವಾಮಿ ನಿಮಗೆ ಉತ್ತರ ಕೊಡದಾಗದಿದ್ದರೆ ಅವರ ಹತ್ತಿರ ನಮ್ಮನ್ನು ಕಳಿಸುವ ಕಾರಣವಿರಲಿಲ್ಲ . ಅವರೇನು ಪಂಡಿತರೇ ? ಶಾಸ್ತ್ರ ಓದಿದವರೇ ? ಅವರಿಗೇನು ಕೇಳುವುದು ? ನಿಮಗೆ ಉತ್ತರ ದೊರೆಯದಿದ್ದರೆ ನಾವು ಕಾಶಿಗೆ ಹೋಗುತ್ತೇವೆ ‘ ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು .
ಶ್ರೀ ಸಿದ್ಧಾರೂಢರು ತಮಗಾದ ಅನುಭವವೇನು ? ಎಂದು ಕೇಳಲು ಬರ್ರೆಪಾ ಬರ್ರಿ , ಸ್ನಾನ ಪೂಜೆ ಪ್ರಸಾದ ಸ್ವೀಕರಿಸಿರಿ ಎಂದು ದಿನನಿತ್ಯ ಕೇಳುತ್ತಾ ಹಾಗೂ ವ್ಯವಸ್ಥೆ ಪೂರೈಸುತ್ತಾ ಸಾಗಿದರು . ನಮ್ಮ ಪರಿಚಯ ಕೂಡ ಅರಿಯಲಿಲ್ಲ . ಆಗ ಶ್ರೀ ಸಿದ್ಧಾರೂಢರು ನಸುನಕ್ಕು ‘ ಹುಚ್ಚಪ್ಪಗಳಿರಾ ! ನಿಮ್ಮ ಪೂರ್ವಾಶ್ರಮ ವಿಚಾರಿಸದೆ ನಿಮಗೆ ಮಾಡಿದ ಈ ಆತಿಥ್ಯವೇ ನಿಜವಾದ ಶಿವಯೋಗಿ ಲಕ್ಷಣ ‘ ಎಂದು ಹೇಳಿದಾಗ ತಬ್ಬಿಬ್ಬಾಗಿ ತಲೆದೂಗಿ ಹೊರಟು ಹೋದರು .
ಶ್ರೀ ಶಿವಯೋಗಿಗಳು ಸದಾ ಶಿವಭಾವದಲ್ಲಿದ್ದವರು . ಬಂದವರೆಲ್ಲರೂ ಶಿವಸ್ವರೂಪಿಗಳೆ . ಇವರಿಗೆ ಮಾಡುವ ಆತಿಥ್ಯ ಶಿವನಿಗೆ ಸಲ್ಲುತ್ತದೆಂದು ಸದಾ ಸರ್ವರನ್ನು ಶಿವಸ್ವರೂಪದಲ್ಲಿ ಕಂಡ ಮಹಾಬೆಳಗು . ಶ್ರೀಗಳ ಜೀವನವೇ ಪವಾಡಮಯವಾಗಿತ್ತು , ಹೊರತು ಅವರು ಎಂದೂ ಪವಾಡಗಳನ್ನು ಮಾಡಲು ಹೋಗಲಿಲ್ಲ .
ವೀರಶೈವ ಧರ್ಮದ ಶ್ರೇಷ್ಟ ಸಿದ್ದಾಂತವೇ ಶಿವಯೋಗ . ತಲುಪಿದಾಗ ಸಮಸ್ತ ಬ್ರಹ್ಮಾಂಡವೇ ಲಿಂಗಮಯ . ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತು ಲಿಂಗಸ್ವರೂಪವಾಗಿ ಕಾಣುತ್ತವೆ . ಇಂತಹ ಸ್ವರೂಪ ಸ್ಥಿತಿಯೇ ಶಿವಯೋಗ ಸ್ಥಿತಿ , ಎಲ್ಲದರ ಸಂಬಂಧವು ಶಿವಸ್ವರೂಪವೇ ಶಿವಯೋಗ ಸ್ವರೂಪ .
ಶ್ರೀ ಶಿವಯೋಗಿಗಳು ಲಿಂಗೈಕ್ಯರಾಗುವುದು ಇನ್ನೂ ಆರು ತಿಂಗಳಿರಲು ಪ್ರಭುದೇವರ ಮಾನಸ ಪೂಜೆ ಪ್ರಾರಂಭವಾಯಿತು . ಹಸ್ತದಲ್ಲಿಯ ಲಿಂಗಯ್ಯ ಶರೀರದಲ್ಲಿ ಒಂದಾಗಿಬಿಡುತ್ತಿದ್ದ . ಶ್ರೀಗಳ ಕೈಯಲ್ಲಿ ಲಿಂಗವೇ ಇರುತ್ತಿರಲಿಲ್ಲ . ಆದರೆ ಪೂಜಾಸ್ಥಿತಿ ಪ್ರಾರಂಭವಾಗಿ ವಿಶ್ವ ಪೂಜೆಗೊಳ್ಳುತ್ತಿತ್ತು . ಇಂತಹ ಸ್ವಲೀಲಾ ಆನಂದಲಿಂಗ ಸ್ವರೂಪರೇ ಆದರೂ ಅದು ಲಿಂಗಪೂಜೆ ತಂತಾನೆ ನೆರವೇರುತ್ತಿತ್ತು . ಸಿದ್ಧಯ್ಯ ಪುರಾಣಿಕರು “ ಶಿವಯೋಗಿಗಳು ಸಂಪೂರ್ಣವಾಗಿ ಅಂತರ್ಮುಖಿಗಳಾದರು . ಆಗಾಗ ಬಾಲಲೀಲೆ , ಮರುಕ್ಷಣ ದಲ್ಲಿ ಯೋಗಲೀಲೆ , ಒಮ್ಮೆ ಪೂರ್ಣ ಪ್ರಜ್ಞಾವಸ್ಥೆ , ಒಮ್ಮೆ ಅರೆ ಪ್ರಜ್ಞಾವಸ್ಥೆ , ಒಮ್ಮೆ ಅಂತಃಪ್ರಜ್ಞಾವಸ್ಥೆ ; ಜಾಗೃತ – ಸ್ವಪ್ನ – ಸುಷುಪ್ತಿಗಳಲ್ಲಿಯೂ ಶಿವಧ್ಯಾನ , ಶಿವಚಿಂತನ , ಶಿವಾನುಭವ ; ಕಾಳರಾತ್ರಿಯಲ್ಲಿ ಕುಳಿತು , ” ಆಹಾ , ಲಿಂಗಪೂಜೆ ಎಷ್ಟು ಚೆನ್ನಾಗಿ ನಡೆದಿದೆ ‘ ಎಂದು ಉದ್ಗರಿಸುತ್ತಿದ್ದರು ; ಪರಿಚಿತರನ್ನೂ ಸಹ “ ನೀವಾರು ಎಲ್ಲಿಂದ ಬಂದಿರಿ ? ‘ ಎಂದು ಕೇಳುತ್ತಿದ್ದರು . ಯೋಗ ಮಂಟಪವನ್ನು ನೋಡಿ ‘ ಇದಾರ ಮನೆ ? ” ಎಂದು ಪ್ರಶ್ನಿಸುತ್ತಿದ್ದರು ; ಹಸ್ತದಲ್ಲಿ ಲಿಂಗದೇವ ನ್ಯಸ್ತವಾಗಿರದಿದ್ದರೂ ಜಲವನೆರೆ ದಂತೆ , ಭಸ್ಮ ಧರಿಸಿದಂತೆ , ಪತ್ರಿ ಪುಷ್ಪಗಳನ್ನರ್ಪಿಸಿದಂತೆ , ನೈವೇದ್ಯವನ್ನು ತೋರಿಸಿದಂತೆ ಲಿಂಗಪೂಜೆ ಮಾಡುತ್ತಿದ್ದರು . ಅದು ಲಿಂಗವೇ ಲಿಂಗಾರ್ಚನೆ ಯನ್ನು ಮಾಡುತ್ತಿದ್ದ ಮಹಾಪೂಜೆ ” ಎಂದು ವಿವರಿಸಿದ್ದಾರೆ .
ಒಂದು ದಿನ ಶ್ರೀ ಶಿವಯೋಗಿಗಳು ಭಕ್ತರಿಗೆ “ ಶಿವರಾತ್ರಿ ಎಂದಿದೆ ? ಕೇಳಿದರು . ಎಲ್ಲರೂ ಸೋಮವಾರ ಎಂದರು . ಶಿವಯೋಗಿಗಳು ಅಂತರ್ಮುಖಿಯಾಗಿ ‘ ಶನಿವಾರ ‘ ಎಂದರು . ಆಗ ಎಲ್ಲರೂ ಗಾಬರಿಯಾದರು ಅಂದೇ ಶಾ.ಶ. ೧೮೪೩ ನೆಯ ದುರ್ಮುಖಿ ಸಂವತ್ಸರದ ಚೈತ್ರ ಮಾಸ ಕೃಷ್ಣ ಪಕ್ಷ ಪ್ರತಿಪದ ಶನಿವಾರ ಹನ್ನೊಂದು ಘಂಟೆಗೆ ಲಿಂಗಾರ್ಚನೆ ಮಾಡುತ್ತಾ ಮಹಾ ಬೆಳಕಿನೊಳಗೆ ಬೆಳಕಾದರು . ನಿಜವಾಗಿ ಅಂದೇ ನಿಜ ಶಿವರಾತ್ರಿ ಆಯಿತು . ಶಿವಯೋಗಿವರೇಣ್ಯರಾದ ಶ್ರೀ ಮುರುಘೇಂದ್ರ ಶಿವಯೋಗಿಗಳ ಜೀವನವೇ ವೀರಶೈವ ಧರ್ಮದ ನಿಜಸ್ವರೂಪ .
“ ವಿಜ್ಞಾನದ ಬಿರುಗಾಳಿಯಲ್ಲಿ ಕಣ್ಣು ಮುಚ್ಚಿದ ಮಾನವರಿಗೆ ಇಂದು ಸುಜ್ಞಾನ ಕಾಣದಂತಾಗಿದೆ . ಅಂತಹವರು ಅನುಭಾವದ ಹಿರಿಮೆಯನ್ನೇ ಅರಿಯದಾಗಿದ್ದಾರೆ . ಇಂದಿನ ವೈಜ್ಞಾನಿಕ ಯುಗದಲ್ಲಿಯೇ ಇಂತಹ ವಿಜ್ಞಾನಿ ಗಳನ್ನು ಬೆರಗುಗೊಳಿಸುವಂತೆ ಶ್ರೀ ಮದಥಣಿಯ ಶಿವಯೋಗಿವರ್ಯರು ದೇಹವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿ ವೀರ , ವೈರಾಗ್ಯ , ಸದ್ಭಕ್ತಿ , ಸತ್ಕ್ರಿಯೆ , ಸದಾಚಾರಗಳೆಂಬ ಸಾಧನ ಸಂಪತ್ತಿನಿಂದ ಸುಜ್ಞಾನದ ಫಲವನ್ನು ಪಡೆದರು . ಇಂತಹ ಮಹಾನುಭಾವರೆದುರು ವಿಜ್ಞಾನವಷ್ಟೇ ಏಕೆ ಸಮಸ್ತ ವಿಶ್ವವೂ ಮಣಿಯಬಲ್ಲದು ” ಎಂದು ವಿದ್ವಾನರಾದ ಡಾ . ಆರ್ . ಸಿ . ಹಿರೇಮಠರು ಅಥಣಿ ಶಿವಯೋಗಿಗಳ ಕುರಿತು ಉದ್ಗಾರವೆತ್ತಿದ್ದಾರೆ .
ಅಥಣಿ ಭೂಕೈಲಾಸವಾಯಿತು . ಶಿವಾನುಭವ ಸೌರವ್ಯೂಹದಲ್ಲಿ ಅನೇಕ ಗ್ರಹಗಳಿದ್ದಂತೆ ಶಿವಯೋಗಿಗಳ ಶಕ್ತಿಯ ಸುತ್ತ ತಿರುಗಿ ಆ ಕಿರಣ ಕಂಡು ಆನಂದಿಸಿದವರ ಸಂಖ್ಯೆ ಅಸಂಖ್ಯಾತವಾದುದು . ಇಂದಿಗೂ ಕರ್ತೃ ಗದ್ದುಗೆಗೆ ಭಕ್ತಿಯಿಂದ ಬಾಗಿದವನಿಗೆ ಬೇಡಿದ್ದನ್ನು ಕೊಡುವ ಕಾಮಧೇನು .