ಲೇಖಕರು: ಲಿಂ. ಡಾ , ಫ . ಗು . ಹಳಕಟ್ಟಿ : ಬಿ.ಎ.ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ : ಶಿವಾನುಭವ ಮಾಸಪತ್ರಿಕೆ ಸಂಪುಟ ೪ ಸಂಚಿಕೆ ೧೧ ಫೆಬ್ರುವರಿ ೧೯೩೦.
ಸಂಗ್ರಹ ಸಹಕಾರ

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,
ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ೧೯-೨-೩೦ ನೇ ದಿವಸ ಸಂಜೆಯ ೬ ವರೆ ಗಂಟೆಗೆ ಶಿವಯೋಗಮಂದಿರದಲ್ಲಿ ಲಿಂಗೈಕ್ಯರಾದದ್ದಕ್ಕೆ ನಾವು ಅತ್ಯಂತ ವಿಷಾದಪಡುತ್ತೇವೆ. ಕರ್ನಾಟಕದಲ್ಲಿ ಆಗಿ ಹೋದ ಮಹಾಪುರುಷರಲ್ಲಿ ಇವರನ್ನು ನಾವು ಅವಶ್ಯವಾಗಿ ಗಣಿಸಬಹುದಾಗಿದೆ. ಇವರು ಜೀವಿತಕಾಲದಲ್ಲಿ ಸಾರ್ವಜನಿಕ ಹಿತಕ್ಕಾಗಿ ಎಡೆಬಿಡದೆ ದುಡಿದರು. ಅವರು ಅನೇಕ ಮಹತ್ವದ ಕಾರ್ಯಗಳನ್ನು ಮಾಡುತ್ತ ಬಂದರು. ಇಡೀ ಕರ್ನಾಟಕವು ಅದರಲ್ಲಿ ವಿಶೇಷವಾಗಿ ವೀರಶೈವ ಸಮಾಜವು ಇವರಿಗೆ ಅತ್ಯಂತ ಋಣಿಯಾಗಿರುವದು.

ಸಮಾಜವು ಹಿಂದೆ ಬಿದ್ದ ಕಾಲಕ್ಕೆ ಅದನ್ನು ಮುಂದಕ್ಕೆ ದೂಡಲು ಒಬ್ಬಾನೊಬ್ಬನು ಮೊದಲು ಪ್ರವೃತ್ತನಾಗುತ್ತಾನೆ. ಅವನು ಈ ಪ್ರಕಾರ ಉದ್ಭವಿಸಿ ಅದಕ್ಕೆ ಯೋಗ್ಯ ದಾರಿಯನ್ನು ತೋರಿಸಿಕೊಡುತ್ತಾನೆ. ಆ ಮೇಲೆ ಅವನ ತರುವಾಯ ಅವನು ಹಾಕಿಕೊಟ್ಟ ಹಾದಿಯಂತೆ ಸಮಾಜವು ಕೆಲದಿವಸ ಹೋದ ಬಳಿಕ ಅದು ಪುನಃ ಸ್ತಬ್ಧವಾಗುವ ಪ್ರಸಂಗವು ಬರಲು ಮತ್ತೊಬ್ಬರು ಉತ್ಪನ್ನರಾಗಿ ಅದರಲ್ಲಿ ಹೊಸ ಚೈತನ್ಯವನ್ನು ಹುಟ್ಟಿಸುತ್ತಾರೆ. ಇಂಥವರೆಲ್ಲರೂ ಮಹಾವಿಭೂತಿಗಳೇಸರಿ. ಇಂಥವರ ವರ್ಗ ದಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಇರುತ್ತಾರೆ. ಹೋದ ಶತಮಾನದ ಮಧ್ಯದಲ್ಲಿ ಬರೇ ಲಿಂಗಾಯತರಿಗಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಯೋಗ್ಯ ಹಾದಿಯನ್ನು ತೋರಿಸಿ ಕೊಟ್ಟವರು ಕೈ ನಾ. ಚನಬಸಪ್ಪ ಧಾರವಾಡ ಇರುತ್ತಾರೆ. ಕರ್ನಾಟಕತ್ವದ ಬೀಜಾರೋಪಣವನ್ನು ಕನ್ನಡ ನಾಡಿನಲ್ಲಿ ಮೊದಲು ಊರಿದವರು ಇವರೇ ಇದ್ದಾರೆ. ಇವರ ಕಾಲಕ್ಕೆ ಅನೇಕ ವಿದ್ವಾಂಸರು ಹುಟ್ಟಿ ಕನ್ನಡವನ್ನು ಬೆಳಕಿಗೆ ತಂದರು.ಆ ಮೇಲೆ ಕೈ. ವಾ. ಗುರುಸಿದ್ಧಪ್ಪ ಗಿಲಗಂಚಿ ಮತ್ತು ರಾ ಬ ರುದ್ರಗೌಡ ಅರಟಾಳ ಇವರು ವೀರಶೈವ ಸಮಾಜದಲ್ಲಿ ಉತ್ಪನ್ನರಾಗಿ ಆಧುನಿಕ ಸಂಸ್ಕೃತಿಯ ಜ್ಞಾನವನ್ನು ಹಬ್ಬಿಸಲಿಕ್ಕೆ ಪ್ರಯತ್ನಿಸಿದರು. ಈ ಮಹನೀಯರು ತಮ್ಮ ಪ್ರಯತ್ನಗಳನ್ನು ೧೫-೨೦ ವರ್ಷ ನಡಿಸುವಷ್ಟರಲ್ಲಿಯೇ ಶ್ರೀ, ಹಾನಗಲ್ಲ ಕುಮಾರ ಸ್ವಾಮಿಗಳು ಮುಂದಕ್ಕೆ ಬಂದು ವೀರಶೈವ ಸಮಾಜದಲ್ಲಿ ಧರ್ಮದ ನಿಜವಾದ ಸಂಸ್ಕೃತಿಯನ್ನು ಹಬ್ಬಿಸಲಿಕ್ಕೆ ಕಾರಣವಾದರು. ಧರ್ಮ ಸಂಸ್ಕೃತಿಯೇ ಸಮಾಜದ ತಳಹದಿಯಾಗಿರುತ್ತದೆಂದು ಭಾವಿಸಿ ಅದಕ್ಕೋಸ್ಕರವೇ ಅವರು ತಮ್ಮ ಇಡೀ ಆಯುಷ್ಯವನ್ನೇ ಅರ್ಪಿಸಿದರು.
ವೀರಶೈವ ಮಹಾಸಭೆಯು ಇರುವ ವರೆಗೆ ವೀರಶೈವ ಜನ ಸಮುದಾಯದಲ್ಲಿ ಅದು ವಿಶೇಷ ಚಳವಳಿಯನ್ನು ಹಬ್ಬಿಸಲಿಕ್ಕೆ ಸಾಧನೀಭೂತವಾಯಿತು. ಅದರ ಮೂಲಕ ಸಾರ್ವಜನಿಕ ಕಾರ್ಯ ಮಾಡಲಿಚ್ಛಿಸುವವರಿಗೆ ತಮ್ಮ ಚಳವಳಿಗಳನ್ನು ಸಾಗಿಸಲಿಕ್ಕೆ ಬಹಳ ಉಪಯೋಗವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಮಹಾಸಭೆಯನ್ನು ಆರಂಭಿಸಿ, ಅದರ ೭-೮ ಅಧಿನಿವೇಶನಗಳಲ್ಲಿ ಪ್ರತ್ಯಕ್ಷ ಕಾರ್ಯ ಮಾಡಿ.ಜನರಲ್ಲಿ ಜಾಗ್ರತೆಯನ್ನು ಹುಟ್ಟಿಸಿದರು. ಇದು ಅವರು ಮಾಡಿದ ಮಹತ್ವದ ಕಾರ್ಯವಾಗಿದೆ. ಶ್ರೀ ಸ್ವಾಮಿಗಳು ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ಉತ್ಸುಕರಾದ್ದರಿಂದ ಮಹಾಸಭೆಯು ಜಾಗ್ರತೆಯ ಮೂಲಕ ಅವರು ಬದಾಮಿ ಮಹಾಕೂಟದಲ್ಲಿ ಶಿವಯೋಗಮಂದಿರವೆಂಬ ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಅವರು ಮಾಡಿದ ಎರಡನೇ ಮಹತ್ವದ ಕಾರ್ಯವಾಗಿದೆ.
ಶಿವಯೋಗವು ವೀರಶೈವ ಧರ್ಮದಲ್ಲಿ ಒಂದು ವಿಶಿಷ್ಟ ಯೋಗಪದ್ಧತಿಯಾಗಿರುತ್ತದೆ. ಇದನ್ನು ಪ್ರಸಾರಗೊಳಸಬೇಕೆಂಬುದೇ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಮುಖ್ಯ ಧ್ಯೇಯವಾಗಿತ್ತು. ಇದಕ್ಕೋಸ್ಕರವಾಗಿಯೇ ಅವರು ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಹೀಗೆ ಶಿವಯೋಗ ಮಂದಿರದಲ್ಲಿ ಶಿಕ್ಷಣಹೊಂದಿ ಮಠಾಧಿಕಾರಿಗಳು ಮಠಗಳಲ್ಲಿ ಪಟ್ಟಾಧ್ಯಕ್ಷರಾಗುವದರಿಂದ ಸಮಾಜದ ಪ್ರಗತಿಯು ಬಹು ಬೇಗನೆ ಆಗುವದೆಂದು ಅವರ ಪೂರ್ಣ ತಿಳುವಳಿಕೆಯಾಗಿತ್ತು. ಈ ದೃಷ್ಟಿಯಿಂದಲೇ ಅವರು ಈ ೨೨ ವರ್ಷಗಳ ವರೆಗೆ ಈ ಸಂಸ್ಥೆಯನ್ನು ನಡೆಸುತ್ತ ಬಂದರು.
ಈ ಶಿವಯೋಗ ಸಾಧನೆಗೋಸ್ಕರ, ಅತ್ಯಂತ ಬಿಗಿತರವಾದ ವರ್ತನೆಯು ಅವಶ್ಯವೆಂದು ಅವರ ಭರವಸೆ ಇದ್ದ ದರಿ೦ದ ಅವರು ಅಲ್ಲಿ ಶಿಕ್ಷಣ ಹೊಂದುವವರಿಗೆ ಬಹು ಕಟ್ಟಾಚರಣೆಗಳನ್ನು ಕಲ್ಪಿಸಿದರುಆ ಪ್ರಕಾರ ಈ ಆಚರಣೆಗೆ ಒಳಗಾಗಿ ಈ ಸಂಸ್ಥೆಯಿಂದ ಅನೇಕರು ಹೊರಬಿದ್ದು ಬಹುಕಡೆಗೆ ಮಠಾಧಿಕಾರಿಗಳಾಗಿದ್ದದ್ದೂ ಅವರು ಅನೇಕ ಬಗೆಯ ಸಮಾಜ ಕಾರ್ಯಗಳಲ್ಲಿ ತೊಡಗಿದ್ದೂ ತೋರಿಬರುತ್ತಿದೆ. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿದ ಈ ಕಾರ್ಯವು ಸಾಮಾನ್ಯವಾದುದಲ್ಲ.
ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಪ್ರಕಾರ ಕೇವಲ ಧಾರ್ಮಿಕ ಭಾವನೆಯುಳ್ಳವರಾಗಿದ್ದರೂ ಅವರು ವ್ಯವಹಾರವನ್ನು ತಿರಸ್ಕರಿಸಿಬಿಡಲಿಲ್ಲ. ಅವರು ಆಧುನಿಕ ಸುಧಾರಣೆಗಳನ್ನು ಕೈಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು. ಅವರು ಅಸಂಖ್ಯ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ದೊರಕಿಸಲು ಬಹಳ ಸಹಾಯ ಮಾಡಿದರು. ಮತ್ತು ತಮ್ಮ ಶಿವಯೋಗಮಂದಿರದಲ್ಲಿಯೇ ಒಂದು ಇಂಗ್ಲಿಷ್ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದರು. ಅವರು ಶಿವಯೋಗಮಂದಿರದ ಹಣದಿಂದಲೇ ಗಿರಣಿಯನ್ನು ಸ್ಥಾಪಿಸಿದ್ದು ಅದು ಯಾವಾಗಲೂ ಊರ್ಜಿತ ಸ್ಥಿತಿಯಲ್ಲಿಯೇ ಇದೆ. ಅವರು ಶಿವಯೋಗಮಂದಿರದ ಜಮೀನುಗಳಲ್ಲಿ ಹೊಸ ತರದ ಒಕ್ಕಲುತನ ಸುಧಾರಣೆಗಳನ್ನು ಕೈಕೊಳ್ಳಲು ಬಹಳ ಆತುರ ಪಡುತ್ತಿದ್ದರು. ಮತ್ತು ಈ ದೃಷ್ಟಿಯಿಂದಲೇ ಅವರು ಅನೇಕ ಕಡೆಗೆ ಶಿವಯೋಗಮಂದಿರಕ್ಕೋಸ್ಕರ ಜಮೀನುಗಳನ್ನು ಸಂಪಾದಿಸಿರುವರು. ಅವರ ಮನಸ್ಸಿನಲ್ಲಿ ಶಿವಯೋಗ ಮಂದಿರದ ಮುಖಾಂತರ ಇಡೀ ದೇಶದಲ್ಲಿ ಧಾರ್ಮಿಕ ಪ್ರಚಾರ ಕಾರ್ಯಮಾಡಬೇಕೆಂದು ಬಹಳ ಇದ್ದ ದರಿಂದ ಅವರು ಅನೇಕ ಕಡೆಗೆ ಕೀರ್ತನಕಾರರೂ ಉಪನ್ಯಾಸಕರೂ ಹೋಗಿ ಉಪದೇಶ ಮಾಡಲು ಬಹಳ ಪ್ರೋತ್ಸಾಹಿಸುತಿದ್ದರು. ಹಾಗೆಯೇ ಅವರು ಗವಾಯಿಗಳಿಗೂ ಉತ್ತೇಜನ ಕೊಡುತ್ತಿದ್ದರು. ಎಲ್ಲಿಯಾದರೂ ಸಭೆಗಳಾಗುತ್ತಿದ್ದರೆ, ಅವರಿಗೆ ಆಮಂತ್ರಣ ಬರುವದೇ ತಡ, ಅವರು ಅವುಗಳಿಗೆ ತಪ್ಪದೇ ಹೋಗುತ್ತಿದ್ದರು. ಮತ್ತು ಅವರು ಹೋದಲ್ಲಿ ಬಂದ ಜನರಿಗೆ ಉಚ್ಚ ತರದ ಸಮಾಜ ಸುಧಾರಣೆಯ ವಿಚಾರಗಳನ್ನೇ ಹೇಳುವರು. ಅವರ ಈ ಶ್ರೇಷ್ಠ ವರ್ತನೆಗೆ ಜನರು ಅತ್ಯಂತ ಪೂಜ್ಯಭಾವವನ್ನು ತಾಳಿದವರಾಗಿ ಅವರ ನುಡಿಗಳನ್ನು ಅತ್ಯಾದರದಿಂದ ಆದರಿಸುವರು. ಅವರ ಸಾನ್ನಿಧ್ಯದಲ್ಲಿ ಯಾವಾಗಲೂ ಉಚ್ಚ ವಿಚಾರತರಂಗಗಳೇ ಹೊರಡುತ್ತಿದ್ದವು. ಕೆಡಕಿಗೆ ಅದರಲ್ಲಿ ಆಸ್ಪದವಿರಲಿಲ್ಲ.
ನಮ್ಮ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಈಗಿನ ಕಾಲಕ್ಕೆ ಒಬ್ಬ ಶ್ರೇಷ್ಠ ಸಮಾಜ ಸುಧಾರಕರಂತೆ ವರ್ತಿಸಿ ಹೋದರು.(ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈಗಿನ ಕಾಲದಲ್ಲಿ ಷಟ್ಸ್ಥಲ ಶಾಸ್ತ್ರದಲ್ಲಿ ಬಹಳ ಪ್ರಾವೀಣ್ಯತೆಯನ್ನು ಹೊಂದಿದವರಾಗಿದ್ದರು.ಅವರ ಮರ್ಮಗಳು ಅವರಿಗೆ ಗೊತ್ತಿದ್ದಷ್ಟು ಬೇರೆ ಯಾರಿಗೂ ಬಹುಶಃ ಗೊತ್ತಿರಲಿಕ್ಕಿಲ್ಲ. ವಚನ ಶಾಸ್ತ್ರದಲ್ಲಿ ಅವರು ಪಾರಂಗತರಾದ್ದರಿಂದಲೇ ಆಗ.ಅವರು ಈ ಸಂಗತಿಗಳು ಅವರಿಗೆ ಪೂರ್ಣ ಮನವರಿಕೆಯಾಗಿದ್ದವು. ಅವರ ಬಗ್ಗೆ ಈ ಸಂಗತಿಯನ್ನು ನಾವು ಸ್ವತಃ ಬಲ್ಲೆನು. ನಾನು ವಚನ ಶಾಸ್ತ್ರಸಾರ ೧ ನೇ ಭಾಗವನ್ನು ರಚಿಸಿದ ಕಾಲಕ್ಕೆ ಈ ಸಂಗತಿಯನ್ನು ಅವರು ಕೇಳಿದ ಕೂಡಲೆ ಅವರು ಕೆಲವು ಶಾಸ್ತ್ರಿಗಳನ್ನು ಕರೆದುಕೊಂಡು ವಿಜಾಪುರಕ್ಕೆ ಸಮಕ್ಷಮ ಬಂದು ಆ ಗ್ರಂಥದ ಬಹು ಭಾಗವನ್ನು ನನ್ನಿಂದ ಓದಿಸಿದರು.ನಾನು ವಿಷಮಜ್ವರದಿಂದ ಅಶಕ್ತನಾಗಿದ್ದ ಕಾರಣ ತಾವೇ ವಿಜಾಪುರಕ್ಕೆ ಹೀಗೆ ಕೇಳಲಿಕ್ಕೆ ಬಂದಿದ್ದರ ಮೇಲಿಂದ ಅವರು ಈ ವಿಷಯದ ಬಗ್ಗೆ ಎಷ್ಟು ಮಹತ್ತರ ಪ್ರೀತಿಯುಳ್ಳವರಾಗಿದ್ದರೆಂಬುದು ಯಾರಾದರೂ ಊಹಿಸಬಹುದಾಗಿದೆ. ಮತ್ತು ಅವರೇ ಈ ಗ್ರಂಥವನ್ನು ಅಚ್ಚುಹಾಕಲು ನನಗೆ ಉತ್ತೇಜನ ಕೊಟ್ಟರು. ಅವರು ಶಿವಯೋಗಮಂದಿರದಲ್ಲಿ ಅಸಂಖ್ಯ ಪುರಾತನ ತಾಡವಾಲೆ ಗ್ರಂಥಗಳನ್ನು ಸಂಗ್ರಹಿಸಿರುವರು. ಅವುಗಳಲ್ಲಿ ಅನೇಕವುಗಳು ಬಹಳ ಬೆಲೆಯುಳ್ಳ ಗ್ರಂಥಗಳಾಗಿವೆ. ನನಗೆ ಬೇಕಾಗುವ ಗ್ರಂಥಗಳ ಬಗ್ಗೆ ಶಿವಯೋಗಮಂದಿರಕ್ಕೆ ನಾನು ಬರೆದ ಕೂಡಲೇ ಅವರು ಅವುಗಳನ್ನ ನನ್ನ ಕಡೆಗೆ ತಪ್ಪದೆ ಕಳಿಸಿ ಕೊಡುವ ವ್ಯವಸ್ಥೆ ಮಾಡಿದ್ದರು. ಇದರ ಮೇಲಿಂದ ಧಾರ್ಮಿಕ ಶೋಧ ಮಾಡುವವರಿಗೆ ಅವರು ಎಷ್ಟು ಪ್ರೋತ್ಸಾಹಿಸುತ್ತಿದ್ದರೆಂಬದು ತಿಳಿದು ಬರುತ್ತದೆ.
ಶ್ರೀ ಸ್ವಾಮಿಗಳು ಸಮಾಜದಲ್ಲಿ ರೂಢವಾಗಿರುವ ಭೇದಗಳನ್ನು ಮುರಿಯಲಿಕ್ಕೆ ಯಾವಾಗಲೂ ಬಹಳ ಪ್ರಯತ್ನಿಸುತ್ತಿದ್ದರು. ಇದಕ್ಕೋಸ್ಕರ ಅವರು ಕರ್ನಾಟಕದಲ್ಲೆಲ್ಲ ಬಹಳ ಸುಚಾರಮಾಡುತ್ತ ಬಂದರು. ಯಾವ ಊರಲ್ಲಾದರೂ ಏನಾದರೂ ತಂಟೆಗಳು ಉತ್ಪನ್ನನಾದರೆ ಸಾಕು, ಅವರನ್ನು ಕರೆಯಲಿಕ್ಕೆ ಯಾರಾದರೂ ಬಂದರೆ ಅವರು ತಟ್ಟನೇ ಅಲ್ಲಿಗೆ ಹೋಗಿಎಲ್ಲ ಜನರಿಗೂ ಸಮಾಧಾನ ಹೇಳಲು ಸಿದ್ಧರಾಗಿರುತ್ತಿದ್ದರು. ಈ ವಿಷಯದಲ್ಲಿ ಅವರು ತೋರಿ ಸುತ್ತಿನ ಚಟುವಟಿಕೆಗಳು ಅವರ್ಣನೀಯವಾಗಿರುತ್ತವೆ. ಇದರಲ್ಲಿ ಅವರು ಜನರು ಸರಿಯಾಗಿ ನಡೆಯಬೇಕೆಂದು ಅಭಿಲಾಷೆಯೇ ಹೊರ್ತು ಬೇರೆ ಯಾವ ಉದ್ದೇಶವೂ ಇರಲಿಲ್ಲ. ಇದರಿಂದ ಅವರು ಎಲ್ಲರಿಗೂ ಬೇಕಾಗಿದ್ದರು. ಅವರು ಮಾಡಿದ ಮತ್ತೊಂದು ಮಹತ್ವದ ಕಾರ್ಯವೆಂದರೆ, ಸಮಯ ಭೇದಗಳನ್ನು ಮುರಿದದ್ದು, ವಿರಕ್ತ ವರ್ಗದವರಲ್ಲಿರುವ ಈ ಭೇದಗಳ ಮೂಲಕ ದೇಶದಲ್ಲಿ ಅನೇಕ ಮನಸ್ತಾಪಗಳು ಬಹು ದಿವಸಗಳಿಂದಲೂ ನಡೆದಿದ್ದವು. ಆದರೆ ಶ್ರೀ ಸ್ವಾಮಿಗಳವರು ಈ ಸಮಯಗಳನ್ನು ಸಂಪೂರ್ಣ ಮುರಿದುಹಾಕಿದರು. ಇದರ ಶ್ರೇಯಸ್ಸು ಇವರಿಗೇ ಇರುತ್ತದೆ. ಇವರಿಂದ ಈಗ ಮುರಿಗೀ, ಕುಮಾರ, ಕೆಂಪಿನ,ಚಿಲ್ಲಾಳ ಎಂಬ ಸಮಯ ಭೇದಗಳು ಬಹಳ ಕಡಿಮೆಯಾಗಿವೆ. ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಈ ಪ್ರಕಾರ ಒಂದು ಮಹತ್ತರವಾದ ಕಾರ್ಯವನ್ನು ಸಮಾಜಕ್ಕೆ ಮಾಡಿರುವರು.
ಶ್ರೀ ಸ್ವಾಮಿಗಳು ದೀರ್ಘೋದ್ಯೋಗಿಗಳು, ಸ್ವಲ್ಪ ತೊಂದರೆ ಬಂದ ಕೂಡಲೇ ಅವರು ಎಂದೂ ಹಿಂದೆಗೆಯುವವರಲ್ಲ. ಮಹಾಕೂಟ ಸ್ಥಾನದಲ್ಲಿ ಮಂದಿರವನ್ನು ಸ್ಥಾಪಿಸಿದ ವರುಷ ಅವರಿಗೆ ಅನೇಕ ತೊಂದರೆಗಳು ಉತ್ಪನವಾದವು. ಈ ಪ್ರದೇಶವು ವನ್ಯಮೃಗಗಳಿ೦ದ ತುಂಬಿದ ಅರಣ್ಯ ಭಾಗವು.ಆಗ ಅಲ್ಲಿ ಇರಲಿಕ್ಕೆ ಸ್ಥಳವಿಲ್ಲ. ಅಲ್ಲಿ ಇದ್ದವರಿಗೆ ಭಯಂಕರ ಮಲೇರಿಯ ಜ್ವರವು ವ್ಯಾಪಿಸಿತು. ಆಗ ಆನೇಕರು ಶ್ರೀ ಸ್ವಾಮಿಗಳಿಗೆ ಈ ಕಾರ್ಯವನ್ನು ಬಿಟ್ಟು ಕೊಡಲು ಉಪದೇಶಿಸಿದರು.ಆದರೆ ಶ್ರೀ ಸ್ವಾಮಿಗಳು ಅಚಲವಾದ ಧೈರ್ಯದಿಂದ ಆ ಸ್ಥಳದಲ್ಲಿಯೇ ಇದ್ದುಕೊಂಡು ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಹಣವನ್ನು ಶೇಖರಿಸಿ ಇರಲಿಕ್ಕೆ ಕಟ್ಟಡ ಗಳನ್ನೂ ಯೋಗ್ಯ ಜಲಾಶಯವನ್ನೂ ಬೇಕಾದ ವ್ಯವಸ್ಥೆಗಾರರನ್ನೂ ಏರ್ಪಡಿಸಿಕೊಂಡು ಆ ನಿರ್ಜನ ಪ್ರದೇಶವನ್ನು ಊರ್ಜಿತಸ್ಥಿತಿಗೆ ತಂದರು. ಒ೦ದುಸಂಸ್ಥೆಯನ್ನು ಸ್ಥಾಪಿಸುವದು ದುಸ್ತರವು. ಆದರೆ ಅದನ್ನು ಕೈಕೊಂಡು ಶಾಶ್ವತ ತಳಹದಿಯ ಮೇಲೆ ಹಾಕುವದು ಎಲ್ಲಕ್ಕೂ ದುಸ್ತರವಾದ ಕೆಲಸವು. ಈ ಕಾರ್ಯವು ಒಬ್ಬ ಯೋಜಕನ ಹೊರ್ತು ಯಾರಿಗೂ ಆಗಲಾರದು. ಇಂಥ ಯೋಜನಾ ಸಾಮರ್ಥ್ಯವನ್ನು ಶ್ರೀ ಹಾನಗಲ್ಲ ಕುಮಾರ ಸ್ವಾಮಿ ಗಳು ಪಡೆದದ್ದರಿಂದಲೇ ಅವರಿ೦ದ ಈ ಮಹತ್ಕಾರ್ಯವು ಸಿದ್ಧಿಸಿತು.) ಶ್ರೀ ಸ್ವಾಮಿಗಳು ಧರ್ಮದ ಮತ್ತು ಸಮಾಜದ ಯೋಗ್ಯತೆಗೆ ಕುಂದು ಬರುವ ಪ್ರಸಂಗಗಳು ಬಂದ ಕೂಡಲೇ ಅವರಲ್ಲಿ ಒಂದು ವಿಲಕ್ಷಣ ಶಕ್ತಿಯೇ ಉತ್ಪನ್ನವಾಗುತ್ತಿತ್ತು. ಅವರ ಆಯುಷ್ಯದಲ್ಲಿ ಈ ಬಗೆಯ ಅನೇಕ ಪ್ರಸಂಗಗಳು ಒದಗಿದವು. ೧೯೦೨ ರಲ್ಲಿ ಹುಬ್ಬಳ್ಳಿಯಲ್ಲಿ ಶ್ರೀಜಗದ್ಗುರು ಗುರುಸಿದ್ಧ ಮಹಾಸ್ವಾಮಿಗಳವರ ಆಂದೋಲನೋತ್ಸವಕೆ ಆತಂಕ ಬರಲು ಅದರಲ್ಲಿ ಅವರು ಬಹಳ ಸಾಹಸಮಾಡಿದರು. ೧೯೧೯ ನೇ ಇಸ್ವಿಯಲ್ಲಿ ಮಹಾಸಭೆಯನ್ನು ಮಾಡುವ ಕಾಲಕ್ಕೆ ಶ್ರೀ ಉಜ್ಜಿನಿ ಮಹಾ ಪೀಠದಲ್ಲಿದ್ದ ವ್ಯಾಜ್ಯಗಳು ಅಡ್ಡ ಬರುವವೆಂದು ತಿಳಿದ ಕೂಡಲೆ ಅವರು ಅನೇಕ ಮಹನೀಯರನ್ನು ಕರೆದುಕೊಂಡು ಹೋಗಿ ಅವುಗಳನ್ನು ಸರಿಪಡಿಸಲು ಪ್ರಯತ್ನಿಸಿದರು. ಪರಳೀವ್ಯಾಜ್ಯದಲ್ಲಿ ಅವರು ಮಾಡಿದ ದೀರ್ಘೋದ್ಯೋಗಗಳು ಎಲ್ಲರಿಗೂ ಗೊತ್ತೇ ಇವೆ. ಆ ಕಾಲಕ್ಕೆ ಅವರು ಅನೇಕ ಶಾಸ್ತ್ರಿಗಳನ್ನು ಬರಮಾಡಿಕೊಂಡು ವ್ಯಾಜ್ಯಕ್ಕೆ ಬೇಕಾಗುವ ಎಲ್ಲ ಸಲಹೆಗಳನ್ನು ಒದಗಿಸಿ ಕೊಟ್ಟರು. ಇಷ್ಟೇ ಅಲ್ಲ, ಅದಕ್ಕೆ ಹಣದ ಅಡಚಣಿಯಾಗಲು ದೇಶ ಮಧ್ಯದಲ್ಲಿ ಹೋಗಿ ಬಹಳ ಶ್ರಮಪಟ್ಟು ಹಣವನ್ನು ಕೂಡಿಸಿ ಕಾರ್ಯಕ್ಕೆ ವಿಶೇಷ ಸಹಾಯವಾದರು. ಈ ಬಗೆಯ ಉದಾಹರಣೆಗಳು ಅವರ ಆಯುಪ್ಯದಲ್ಲಿ ಅಸಂಖ್ಯಾತವಾಗಿರುತ್ತವೆ.
ಈ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ತಮ್ಮ ಆಯುವ್ಯವನ್ನೆಲ್ಲ ಧರ್ಮ ಜಾಗ್ರತಿ, ಸಮಾಜ ಸುಧಾರಣೆಗೋಸ್ಕರ – ವೆಚ್ಚ ಮಾಡಿ ದರು. ಅವರು ೧೮೬ ೭ ನೇ ಇಸ್ವಿಯಲ್ಲಿ ಜನಿಸಿ ತಮ್ಮ ಆಯ ವ್ಯವ ೬೩ ನೇ ವರ್ಷದಲ್ಲಿ ಲಿಂಗೈಕ್ಯರಾದರು. ಅವರು ಸಮಾಜ ಕಾರ್ಯಗಳನ್ನು ತಮ್ಮ ವಯಸ್ಸಿನ ೨೨ ನೇ ವರ್ಷದಲ್ಲಿ ಆರಂಭಿಸಿ ಅವುಗಳಲ್ಲಿಯೇ ತಮ್ಮ ದೇಹವನ್ನು ಸವಿಸಿದರು.ಇಂಥ ಮಹಾನುಭಾವರಿಗೋಸ್ಕರ ಸಮಾಜ ವೆಲ್ಲವು ಚಿರಋಣಿಯಾಗಿರುತ್ತದೆ. ಈಗಿನ ಕಾಲಕ್ಕೆ ಶಿವಯೋಗಮಂದಿರದಲ್ಲಿಯೇ ಶ್ರೀ ಸ್ವಾಮಿಗಳವರು ಲಿಂಗೈಕ್ಯರಾಗಿದ್ದು ಈ ಸಂಸ್ಥೆಯನ್ನು ಅತ್ಯುತ್ಕೃಷ್ಟ ರೀತಿಯಿಂದ ನಡಿಸುವದರಲ್ಲಿಯೇ ಅವರ ನಿಜವಾದ ಸ್ಮಾರಕವಿರುತ್ತದೆ. ಇದು ಉಚ್ಚ ತಮಸ್ಥಿತಿಗೆ ಬರಲಿಕ್ಕೆ ಅವಶ್ಯವಾಗಿರುವ ಎಲ್ಲ ಸಾಮಗ್ರಿಗಳನ್ನು ಅವರು ಏರ್ಪಡಿಸಿರುವರು, ಈ ಸಾಮಗ್ರಿಗಳನ್ನು ಸರಿಯಾಗಿ ಉಪಯೋಗಿಸುವದರಲ್ಲಿಯೇ ಸಮಾಜದ ಉತ್ಕೃಷ್ಟತೆ ಮತ್ತು ಯೋಗ್ಯತೆಯು ಇರುತ್ತದೆ. ಈ ಬಗ್ಗೆ ಅದರ ಟ್ರಸ್ಟಿಗಳು ಜಾಗರೂಕರಾಗಿರಬೇಕೆಂದು ಅವರಿಗೆ ನಮ್ಮ ಸವಿನಯ ಸೂಚನೆಯಿದೆ. ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಸ್ಥಾಪಿಸಿದ ಈ ಮಂದಿರ ವನ್ನು ಈ ಪ್ರಕಾರ ಅತ್ಯುನ್ನತಸ್ಥಿತಿಗೆ ಒಯ್ದು ಅವರ ಕೀರ್ತಿಯನ್ನು ಇನ್ನು ಹೆಚ್ಚಾಗಿ ಬೆಳೆಯುವಂತೆ ಇವರು ಮಾಡಲೆಂದು ಹಾರೈಸಿ ನಾವು ನಮ್ಮ ಲೆಕ್ಕಣಿಕೆಯನ್ನು ಇಲ್ಲಿಯೇ ನಿಲ್ಲಿಸುತ್ತೇವೆ.