ದಾಸೋಹ ಮೂರ್ತಿ ಶ್ರೀ ಕುಮಾರ ಶಿವಯೋಗಿ

ಲೇಖಕರು :ಪೂಜ್ಯ ವಿಜಯಪ್ರಭು ದೇವರು ಬೂದಗುಂಪ

                    ಪ್ರಿಯ ಸಹೃದಯರೆ ಭವ್ಯ ಭಾರತದ ದಿವ್ಯ    ಪರಂಪರೆಯಲ್ಲಿ ಹಲವಾರು ಋಷಿ ಮುನಿಗಳು, ಸಂತ ಮಹಾಂತರು ಉದಯಿಸಿ ಈ ನೆಲವನ್ನು ಪಾವನ ಗೊಳಿಸಿದರು. ಅಂತಹ ಮಹಾತ್ಮರ ಮಾರ್ಗದರ್ಶನ ,  ದೇಶದಸಂಸ್ಕೃತಿ,ಮಾತೃಭಾಷೆಯನ್ನು ಮರೆತು ಆಂಗ್ಲರ ಆಳ್ವಿಕೆಗೆ ಒಳಪಟ್ಟು ಕೇವಲ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ತಮ್ಮನ್ನೇ ತಾವು ಮರೆತಿರುವ ದುರಂತದ ಸನ್ನಿವೇಶ ಅದು 19ನೇ ಶತಮಾನ. ವಿದೇಶಿಯ ಜೀವನ ಕೇವಲ ”ಲರ್ನಿಂಗ್” ಮತ್ತು ”ಅರ್ನಿಂಗ್” ಕಲಿಸುತ್ತೆ. ಆದರೆ ಭಾರತೀಯ ಸಂಸ್ಕೃತಿ ಇವೆರಡರ ಜೊತೆ “ಲಿವಿಂಗ್” ಸಹ ಕಲಿಸುತ್ತೆ.

ಈ ಸಾಂಸ್ಕೃತಿಕ ಶ್ರೀಮಂತ ದೇಶವನ್ನು ಆರ್ಥಿಕವಾಗಿ ಉನ್ನತ ಗೊಳಿಸಬೇಕಾದರೆ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣ, ಧರ್ಮವಂತ, ಸಂಸ್ಕಾರವಂತ, ವಿಚಾರವಂತ ನಾಗಬೇಕು. ಇಲ್ಲಿನ ಬಡತನ ಹಾಗೂ ನಿರಕ್ಷರತೆ ಇವೆರಡನ್ನು ಮುಕ್ತ ಗೊಳಿಸಿದಾಗ ಮತ್ತೆ ಜಗದ್ಗುರು ಭಾರತವನ್ನು ಕಾಣಲು ಸಾಧ್ಯ. ಹೀಗೆ ಸದೃಢ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಸಾಕ್ಷರರಾಗಬೇಕು,ಧರ್ಮವಂತ ರಾಗಬೇಕು, ಅಂತಹ ಮಾರ್ಗದರ್ಶನ ತೋರಲು ಸಮಾಜೋದ್ಧಾರದ ಸತ್ಯ ಸಂಕಲ್ಪವನ್ನು ಹೊತ್ತು ಅವತರಿಸಿದ ಶಿವಾವತಾರಿಗಳೇ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು.                                                                                                                        19ನೇ  ಶತಮಾನ ಉತ್ತರಾರ್ಧದ ಸಮಾಜದ  ಸರ್ವತೋಮುಖ ಅಭಿವೃದ್ಧಿಗೆ   ಹಲವಾರು ಯೋಜನೆಗಳನ್ನು ರೂಪಿಸಲು ಭಕ್ತರ  ಬಾಳಿನ ಸಂಕಷ್ಟ ಪರಿಹರಿಸಲು, ದೀನ-ದಲಿತರಿಗೆ, ಅಂಧ-ಅನಾಥರಿಗೆ ದಾರಿ ತೋರಲು, ಸ್ವಾಮಿತ್ವದ ಘನತೆ ಹೆಚ್ಚಿಸಲು, ನಾಡು-ನುಡಿ-ಭಾಷೆಯ ಮರ್ಮ  ತಿಳಿಯದೆ ಅಂಧಕಾರದಲ್ಲಿ ಮುಳುಗಿ ಬಾಡಿಹೋಗಿರುವ ಸಮಾಜಕ್ಕೆ ಶಿಕ್ಷಣ, ಅಧ್ಯಾತ್ಮ, ಶಿವಯೋಗ  ಎಂಬ ನೀರು ಗೊಬ್ಬರ ಎರೆದು ಮತ್ತೆ  ನವಸಮಾಜವನ್ನು ನಿರ್ಮಿಸಿ ಸಮಾಜಕ್ಕೆ ಚೈತನ್ಯ ತುಂಬಿ,

“ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂಬ ಶರಣರ ವಾಣಿಗೆ ವ್ಯಾಖ್ಯಾನವಾಗಿ ಬಂದವರು ಶ್ರೀ ಕುಮಾರ ಶಿವಯೋಗಿಗಳು.

                ಮುಖ್ಯವಾಗಿ ಶಿವಮತ ಅವನತಿಯತ್ತ ಸಾಗುತ್ತಿರುವಾಗ,   ಲಿಂಗತತ್ವವ ಮರೆತು ಅಲೌಕಿಕ ವ್ಯವಹಾರದಲ್ಲಿ ಮುಳುಗಿ, ಬಸವಾದಿ ಪ್ರಮಥರ ಅನುಭಾವದ ವಚನಗಳು ಹುಳುಹತ್ತಿ ಹಾಳಾಗುತ್ತಿದ್ದ  ಸಂದರ್ಭದಲ್ಲಿ ಅಂತಹ ವಿಚಾರವನ್ನು ಭಕ್ತ ಸಮುದಾಯಕ್ಕೆ ವೀರಶೈವ ಮತದ ಆಚರಣೆಗಳನ್ನು ತಿಳಿಸುತ್ತ , ಪರಮತದ ಪ್ರಭಾವಕ್ಕೆ ಒಳಗಾಗಿ ಶಿವಮತದ ಜನರು ತಮ್ಮ ಮತ-ಧರ್ಮದ ಮಹತ್ತನ್ನ ಗೌಣವಾಗಿಸಿಕೊಂಡು, ವಿದ್ಯೆಯನ್ನು ಕಲಿಯದೆ ವಂಚಿತರಾಗಿ, ಭಕ್ತ ಸಮುದಾಯ ಲಿಂಗಧಾರಣೆ ಹೊರತಾಗುತ್ತ ತಮ್ಮ ಬಾಳನ್ನೇ ಸಂಕಷ್ಟದಲ್ಲಿ ಮುಳುಗಿಸಿಕೊಂಡಿರುವ ಇಂತಹ ಸಮಾಜವನ್ನುದ್ಧರಿಸುವುದು ವೀರಶೈವ ಮತದ ಕೇಂದ್ರಗಳಾದ ಮಠಗಳ ಕಾರ್ಯ ಬಹಳ ಪ್ರಮುಖವಾಗಿದ್ದು ಎಂದು ತಿಳಿದು ಸಮಾಜದ, ಶಿವಮತದ ಏಳಿಗೆಗಾಗಿ ಅವಿರತ ಶ್ರಮಿಸಿದ ಶ್ರೇಯಸ್ಸು ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.

                ಯಾವುದೇ ಒಂದು ಕ್ಷೇತ್ರದಲ್ಲಿ ಅಭಿವೃದ್ಧಿಯ ಕಾರ್ಯ, ಜಾಗೃತಗೊಳಿಸುವ ಕಾರ್ಯದಲ್ಲಿ ನಿಸ್ವಾರ್ಥ ಸೇವೆ, ಲೋಕ ಹಿತದೃಷ್ಠಿ, ಉನ್ನತಾದರ್ಶದ ಮೌಲ್ಯಗಳು ಇದ್ದಾಗ ಮಾತ್ರ ಆ ಕಾರ್ಯ ಫಲಕಾರಿಗುತ್ತದೆ ಎಂದು ಮನಗಂಡ ಶಿವಯೋಗಿಗಳು, ಒಂದು ಸಮಾಜದ ಧಾರ್ಮಿಕತೆ ಬೆಳೆದು ತಲೆಯೆತ್ತಿ ಹೆಮ್ಮರವಾಗ ಬೇಕಾದರೆ ಅಧ್ಯಾತ್ಮಿಕತೆ, ಶಿಕ್ಷಣ,ಧರ್ಮದ ತಿಳುವಳಿಕೆ ಇದ್ದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವೆಂದು ಅರಿತ ಶ್ರೀಗಳು ತಮ್ಮ ಹಾನಗಲ್ಲ ಶ್ರೀ ಮಠದಲ್ಲಿ ಪಾಠಶಾಲೆ ತೆರೆದರು., ಗುಲಾಮಗಿರಿಯಿಂದ ಬದುಕುತ್ತಿದ್ದ ಸಮಾಜವನ್ನು ಜಾಗೃತಗೊಳಿಸುವತ್ತ ಶ್ರೀಗಳು ಗಮನ ಹರಿಸಿದಿದ್ದರು.

               .

              ಶ್ರೀಮಠದಲ್ಲಿ ಬಡಮಕ್ಕಳಿಗೆ, ವಿದ್ಯಾಕಾಂಕ್ಷಿಗಳಿಗೆ ಒಳ್ಳೆಯ ಮಾರ್ಗದರ್ಶನ ಹಾಗೂ ವಿದ್ಯೆಯನ್ನು ನೀಡುವಂತಹ ಉಪಾಧ್ಯಾಯರನ್ನು ನಿಯಮಿಸಿದರು. ಅಷ್ಟೇ ಅಲ್ಲದೇ ಸ್ವತ: ಶ್ರೀಗಳೇ ಆ ಶಿಕ್ಷಕರಿಗೆ ಬೋಧನಾ ವಿಚಾರದ ಮಾರ್ಗದರ್ಶನ ನೀಡುತ್ತಿದ್ದರು.

                ಪ್ರಾಥಮಿಕ ಶಿಕ್ಷಣವಿಲ್ಲದೆ ಪರಕೀಯರ ಆಳ್ವಿಕೆಯ ತೊಳಲಾಟದಲ್ಲಿ ಸಿಲುಕಿ ವಿದೇಶಿ ಕಾಲಮಾನದ ಶಿಕ್ಷಣಕ್ಕೆ ಒಳಗಾಗಿ ನಮ್ಮ ಜನ  ಸಂಸ್ಕೃತಿಯನ್ನು ಮರೆತಿದ್ದಾರೆ. ಇಂತಹ ಮಕ್ಕಳಿಗೆ ಮಾತೃಭಾಷೆ, ದೇವಭಾಷೆಯಾದ ಸಂಸ್ಕೃತ ಶಿಕ್ಷಣ ಮುಖ್ಯವಾಗಿ ನೀಡಿಸಬೇಕು. ವಿದೇಶಿಗರ ದಿನಾಂಕ, ತಿಂಗಳುಗಳನ್ನು ಮರೆಸಿ ಭವ್ಯ ಭಾರತದ ಪರಂಪರೆಯಂತೆ ವಾರ-ತಿಥಿ-ನಕ್ಷತ್ರ-ಯೋಗ-ಕರಣದಂತ ಪಂಚಾಂಗ ಮರ್ಮ ಹಾಗೂ ಸಂವತ್ಸರ-ಮಾಸ-ಋತುಚಕ್ರ-ಪಕ್ಷಗಳ ಬಗ್ಗೆ ಹೀಗೆ ನಮ್ಮ ದೇಶಿ  ಪರಂಪರೆಯ ಶಿಕ್ಷಣ ನೀಡಲು ಶ್ರೀಗಳು ಶ್ರಮಿಸಿದರು. ಅಷ್ಟೇ ಅಲ್ಲದೆ ಒಳ್ಳೆ ವಿದ್ಯಾವಂತರನ್ನು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿ, ಕೊಲ್ಕತ್ತಾ ಇಂತಹ ಬೇರೆ ಬೇರೆ ಕಡೆ ಕಳಿಸಿಕೊಟ್ಟು ಅವರಿಗೆಲ್ಲ ಹಣದ ವ್ಯವಸ್ಥೆಯನ್ನು ಸಹಿತ ಶ್ರೀಗಳೇ ನೋಡಿಕೊಳ್ಳುತ್ತಿದ್ದರು. ಕೇವಲ ಶಿಕ್ಷಣವಲ್ಲದೆ ಸಂಗೀತ, ಕಲೆ ಹೀಗೆ ಮುಂತಾದ ವಿಷಯಗಳ ಕುರಿತು ತಮ್ಮ ಶ್ರೀಮಠದಲ್ಲಿ ಜ್ಞಾನದಾಸೋಹ ಮಾಡುತ್ತಿದ್ದರು.

                  ಒಂದು ದಿನ  ಕಾಡಶೆಟ್ಟಿ ಹಳ್ಳಿಯ ಹಕ್ಕಲ ಬಸವೇಶ್ವರ ಜಾತ್ರೆಗೆ ಭಕ್ತರ ಬಿನ್ನಹದಂತೆ ಕುಮಾರ ಶ್ರೀಗಳು ದಯಮಾಡಿಸಿರುತ್ತಾರೆ. ಅಲ್ಲಿನ ಕಾರ್ಯಕ್ರಮದಲ್ಲಿ ಹಾಡಿದ ಗುರುಬಸವಯ್ಯ ಮತ್ತು ಗದಿಗೆಯ್ಯ ಎಂಬ ಇಬ್ಬರು ಅಂಧ ಮಕ್ಕಳನ್ನು ಕಂಡು ಇಂತಹ ಮಧುರ ಕಂಠದಿಂದ ಹಾಡಿದ ಈ ಮಕ್ಕಳಿಗೆ ಸಂಗೀತ ಶಿಕ್ಷಣ ಕೊಡಿಸಿ ಒಳ್ಳೆಯ ಗಾಯಕರನ್ನಾಗಿಸಬೇಕೆಂದು ಶ್ರೀಗಳು ಇರ್ವರನ್ನು ನಮಗೆ ಕೊಡಿ ಇವರ ಭವಿಷ್ಯವನ್ನು ನಾವು ರೂಪಿಸುತ್ತೇವೆ ಎಂದು ಅಂಧ ಮಕ್ಕಳನ್ನ ತಮ್ಮ ಜೋಳಿಗೆಗೆ ಹಾಕಿಸಿಕೊಂಡು ತಮ್ಮ ಶ್ರೀ ಮಠದಲ್ಲಿಯೇ ಅವರಿಗೆ ಸಂಗೀತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದರು. ಸಂಸ್ಕೃತ, ವೇದ,ಉಪನಿಷತ್ತು,ಶಾಸ್ತ್ರಗಳ ಜೊತೆ ಸಂಗೀತ ಶಿಕ್ಷಣವು ಪ್ರಾರಂಭವಾಯಿತು.

               ಈ ಇರ್ವ ಅಂಧ ಬಾಲಕರಿಗೆ ಕರ್ನಾಟಕ ಸಂಗೀತ ಕಲಿಸಲು ತಂಜಾವೂರು ಗಾಯಕರನ್ನ ನೇಮಿಸಿದರು. ನಂತರ ಹೊಸಪೇಟೆಯ ಭೀಮರಾಯರೆಂಬ ಗಾಯಕರಿಂದ, ಶಿರಾಳಕೊಪ್ಪದಲ್ಲಿದ್ದ ಗದಿಗೆಯ್ಯರೆಂಬ ಗಾಯಕರಿಂದ ತಿಂಗಳಿಗೆ 25 ರುಪಾಯಿ ಬತ್ತೆ ನೀಡಿ ಶಿಕ್ಷಣ ಕೊಡಿಸಿದರು. ಕೇವಲ ಕರ್ನಾಟಕ ಸಂಗೀತವಷ್ಟೇ ಅಲ್ಲ ಭಾರತೀಯ ಸಂಗೀತದ ರಸ ಭಂಡಾರವಾದ ಹಿಂದೂಸ್ತಾನಿ ಸಂಗೀತವನ್ನು ಉಸ್ತಾದ ವಹಿದ್ ಖಾನರಂತ ಸಂಗೀತಗಾರರಿಗೆ ತಿಂಗಳಿಗೆ 150 ರೂಪಾಯಿ ಸಂಭಾವನೆ ಕೊಟ್ಟು ಹೀಗೆ ಹಲವಾರು ಸಂಗೀತ ವಿದ್ವಾಂಸರಿಂದ ಸಂಗೀತ ಶಿಕ್ಷಣ ನೀಡಿಸಿದರು. ಕುಮಾರ ಶ್ರೀಗಳಿಂದ ಆಶೀರ್ವಾದ ಹಾಗೂ ಎಲ್ಲ ವ್ಯವಸ್ಥೆ ಪಡೆದು ಜಗತ್ತಿಗೆ ಉಭಯ ಗಾನವಿಶಾರದ ನೆಂಬ ಅಭಿದಾನವನ್ನು ಪಡೆದು ಸಂಗೀತ ಲೋಕಕ್ಕೆ ಮೆರಗು ತಂದವರೇ ಶ್ರೀ ಪಂಚಾಕ್ಷರ ಗವಾಯಿಗಳು. ಅವರನ್ನು ಹರಸಿ ಆಶೀರ್ವದಿಸಿದವರೇ ಮಾತೃ ಮಮತೆಯ ಹೃದಯವಂತಿಕೆಯ ಮಹಾಶಿವಯೋಗಿಗಳು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಎಂಬುದನ್ನು ಮರೆಯುವಂತಿಲ್ಲ.

               ಹೀಗೆ ಎಲ್ಲದರ ಶಿಕ್ಷಣವನ್ನು ಅನಕ್ಷರಸ್ಥರಿಗೆ ದೀನ-ದಲಿತರಿಗೆ ಅಂಧ-ಅನಾಥರಿಗೆ ನೀಡುವುದರ ಮುಖಾಂತರ, ಕೇವಲ “ಮಠಗಳಿರುವುದು ಸ್ವಾಮಿಗಳ ಆಶ್ರಯತಾಣಕ್ಕಲ್ಲ, ದೇಹಿ ಎಂದು ಬಂದವರ ಕಷ್ಟವನ್ನು ದೂರಮಾಡಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ವಿದ್ಯಾ ಕೇಂದ್ರಗಳಾಗಬೇಕು. ” ಎಂದು ತಿಳಿದು ನಡೆದು ತೋರಿದ ಜಂಗಮ ಪುಂಗವರು.

            ಕೇವಲ ಜ್ಞಾನದಾಸೋಹ ಅಷ್ಟೇ ಅಲ್ಲ ಅನ್ನದಾಸೋಹಕ್ಕೂ ಪ್ರೇರಣೆಯಾದವರು ಶ್ರೀಗಳು. ಭಕ್ತ ಸಮುದಾಯದ ಶ್ರೇಯೋಭಿವೃದ್ಧಿಯತ್ತ ಗಮನಹರಿಸಿದ ಶ್ರೀಗಳು ಕ್ರಿ.ಶ.1896 ರಲ್ಲಿ ಹಾನಗಲ್ಲ ಪೀಠಾಧಿಕಾರಿ ವಹಿಸಿ ಒಂದೇ ವರ್ಷದಲ್ಲಿ ಕ್ರಿ.ಶ. 1897ರಲ್ಲಿ ಪ್ರಕೃತಿ ವಿಕೋಪದಿಂದ ಈ ನಾಡು ಬರಗಾಲದ ಬವಣೆಯಲ್ಲಿ ಸಿಲುಕಿತ್ತು. ತಮ್ಮ ತಮ್ಮ ಹತ್ತಿರವಿದ್ದ ಕಾಳು-ಕಡಿ ಅಂತಹ ದವಸ-ಧಾನ್ಯಗಳನ್ನು ಖಾಲಿಯಾಗಿ ಬಡವರು ಹಸಿವಿನಿಂದ ಕಂಗೆಟ್ಟಿದ್ದರು. ಹಸಿವಿನಿಂದ ಬಳಲುತ್ತಿದ್ದವರ ನೋವು ಕಂಡು ಶ್ರೀಗಳು ತಮ್ಮ ಮಠದಲ್ಲಿ ಅನ್ನ ಸಂತರ್ಪಣೆಗೆ ವ್ಯವಸ್ಥೆಗೊಳಿಸಿದ್ದರು. ಹೀಗೆ ಕೆಲವು ದಿನಗಳು ಉರುಳಿದವು. ಶ್ರೀಮಠದಲ್ಲಿ ಅನ್ನ ದಾಸೋಹಕ್ಕೆ ಹಣದ ಕೊರತೆ ಎದುರಾಗಿತ್ತು ಇಂತಹ ಸಂದರ್ಭದಲ್ಲಿ ಹಳೆಕಾಲದ ಮಠದ ಜೀರ್ಣೋದ್ಧಾರಕ್ಕಾಗಿ ಕೂಡಿಟ್ಟ ಮೂರು ಸಾವಿರ ರೂಪಾಯಿಗಳನ್ನು ಅಂದರೆ ಈಗಿನ ಕಾಲಕ್ಕೆ 3ಕೋಟಿ ಬೆಲೆ ಇಷ್ಟೆಲ್ಲ ಹಣವನ್ನು ಭಕ್ತರ ಹಸಿವನ್ನು ನಿವಾರಿಸಲು ಶ್ರೀಗಳು ವಿನಿಯೋಗಿಸಿದರು. ಅಷ್ಟೇ ಅಲ್ಲದೆ ಮಠದಲ್ಲಿ ಸಂಗ್ರಹವಾಗಿದ್ದ 800 ಚೀಲ ಭತ್ತವು ದಾಸೋಹಕ್ಕಾಗಿ ವಿನಿಯೋಗಿಸಿದ್ದರು. ಮಠದ ಹಣ, ದವಸಧಾನ್ಯಗಳು ಮುಗಿದಿದ್ದವು. ನಾಡಿಗೆಲ್ಲ ದಾಸೋಹ ಮಾಡುವುದು ಸಾಧ್ಯವಾಗದ ಮಾತು ಇದನ್ನು ಇಲ್ಲಿಗೆ ನಿಲ್ಲಿಸೋಣವೆಂದು ಭಕ್ತರು ಶ್ರೀಗಳಿಗೆ ಭಿನ್ನಹವಿರಿಸಿದಾಗ ಆರಂಭಿಸಿದ ಅನ್ನದಾಸೋಹ ನಿಲ್ಲಿಸಬಾರದು, ಹೀಗೆ ಮಧ್ಯದಲ್ಲಿ ನಿಲ್ಲಿಸಿದರೆ ಆ ಶಿವ ಮೆಚ್ಚೋದಿಲ್ಲವೆಂದು ಶ್ರೀಗಳು ಸಮಾಧಾನದಿಂದ ಭಕ್ತರಿಗೆ ಬೋಧಿಸಿದರು. “ಬಡವರು ಹಸಿವಿನಿಂದ ಸಾಯುವುದನ್ನು ನೋಡಿ ಸುಮ್ಮನಿರಬೇಕೆ ? ಹಸಿದವರ ಜೊತೆ ನಾವು ಸಾವಿಗೆ ಸಾಗುವ ತನಕ ಈ ದಾಸೋಹ ನಿಲ್ಲಬಾರದು” ಎಲ್ಲವೂ ಶಿವನಿಚ್ಚೆ ಎಂದು ನುಡಿದ ಶ್ರೀಗಳ ಮಾತು ಒಂದು ಕ್ಷಣ ರೋಮಾಂಚನವಾಗುವಂತಹದ್ದು. ಶಿವನ ಆಶೀರ್ವಾದವೇನು ಅನ್ನುವ ಹಾಗೆ ಶ್ರೀಮಠದ ಪರಮಭಕ್ತರಾದ ಅಣ್ಣಿಗೇರಿ ಶಂಕರಪ್ಪನವರು ತಮ್ಮ ಹೊಲವನ್ನು 7000 ರೂಪಾಯಿಗೆ ಮಾರಿ ದಾಸೋಹ ವ್ಯವಸ್ಥೆಗೆ ಹಣವನ್ನು ನೀಡಿದ್ದರು. ಇದರ ಜೊತೆಗೆ ಶ್ರೀಗಳು ತಮ್ಮ ಮಠದ ಒಂದು ದೊಡ್ಡ ಭಾಗವನ್ನು ಮೂರು ಸಾವಿರ ರೂಪಾಯಿಗೆ ಮಾರಿ ಶ್ರೀಮಠದಲ್ಲಿ ದಾಸೋಹ ನಿಲ್ಲದಂತೆ ಮುಂದುವರಿಸಲಾಗಿತ್ತು. ಹೀಗೆ ಮಠದ ಎಲ್ಲ ಕಾರ್ಯ ನೋಡಿ   ಆ ಶಿವ ಕೃಪೆತೋರಿ ಮರುವರ್ಷವೇ ಭುವಿಗೆ ಮಳೆಗರೆದ, ಹೊಲ-ಗದ್ದೆಗಳು ಬೆಳೆ ತುಂಬಿ ನಿಂತವು, ಬರಗಾಲದ ಬವಣೆ ದೂರಾಗಿ ಎಲ್ಲ ಭಕ್ತರ ಮನದಲ್ಲಿ ನವೋಲ್ಲಾಸ ತುಂಬಿತು.

                   ಇಂತಹ ಸಂಕಷ್ಟದಲ್ಲಿ ಆ ಶಿವರೂಪವೇ ಧರೆಗಿಳಿದು, ಶ್ರೀ ಕುಮಾರ ಶಿವಯೋಗಿಗಳ ರೂಪದಲ್ಲಿ ನಮ್ಮನ್ನು ಕಾಪಾಡಿತು. ಅಂತಹ ಕರುಣಾಳು ಗುರುವರರನ್ನ ಪಡೆದ ನಾವೇ ಧನ್ಯರು, ಎಂದು ಎಲ್ಲ ಭಕ್ತರು ಶ್ರೀಮಠದ ಶಿವಯೋಗಿಗಳ ದರ್ಶನ ಪಡೆದು ಹರ್ಷಭರಿತರಾದರು. ಮರುವರ್ಷ ಶ್ರೀಮಠದ ದಾಸೋಹಕ್ಕೆಂದು ಭಿಕ್ಷೆಗೆ ಹೋದ ಶ್ರೀಗಳಿಗೆ ಎಲ್ಲ ಭಕ್ತರು ಸೇರಿ ಬುದ್ಧಿ ನಾವೇ ನಮಗೆ ಎಷ್ಟೆಷ್ಟು ಸಾಧ್ಯವಾಗುತ್ತೋ ಅಷ್ಟು ದವಸ-ಧಾನ್ಯಗಳನ್ನು ಕೂಡಿಸಿಕೊಂಡು ಮಠಕ್ಕೆ ತಂದು ಅರ್ಪಿಸುತ್ತೇವೆ ಎಂದರು.”ಬೇಡಿಸಿಕೊಂಬಾತ ಭಕ್ತನಲ್ಲ” ಎಂಬ ಶರಣ ವಾಣಿಯಂತೆ ಎಲ್ಲ ಭಕ್ತರು ಶ್ರೀಮಠಕ್ಕೆ ದವಸ-ಧಾನ್ಯಗಳನ್ನು ಅರ್ಪಿಸಿದರು. ಸಂಕಷ್ಟದ ದಿನಗಳಲ್ಲಿ, ಆಪತ್ತಿನ ಕಾಲದಲ್ಲಿ ತಮ್ಮ ಹೊಲವನ್ನು ಮಾರಿ ದಾಸೋಹದ ಸೇವೆಗೆ ಮುಂದಾದ ಅಣ್ಣಿಗೇರಿ ಶಂಕ್ರಪ್ಪನವರಿಗೆ ಮತ್ತೆ ಹೊಲವನ್ನು ಆ ಭಕ್ತರಿಗೆ ಮರಳಿಸಿದ ಭಕ್ತವತ್ಸಲ, ಮಮತಾಮಯಿ ಶ್ರೀ ಕುಮಾರ ಶಿವಯೋಗಿಗಳು. ಜ್ಞಾನ ದಾಸೋಹ, ಅನ್ನ ದಾಸೋಹ ಮಾಡುತ್ತಾ ಸಮಾಜ ಸೇವೆಗೆ ಕಟಿಬದ್ಧರಾಗಿ ನಿಂತರು ಶ್ರೀಗಳು.

                 ಶ್ರೀಗಳ ಪಾಲಿಗೆ ಮತ್ತೊಂದು ಜನಸೇವೆ ಕಾದು ನಿಂತಿತ್ತು. ಹೇಗೆ ಇಂದಿನ ದಿನಮಾನದಲ್ಲಿ ವೈರಸ್ಸಿನ ರೌದ್ರಾವತಾರ ಹೇಗೆ ಎಲ್ಲೆಡೆ ತಾಂಡವವಾಡುತ್ತಿದೆ, ಹಾಗೆ ಅಂದಿನ ಕಾಲದಲ್ಲಿಯೂ ಕೂಡಾ ‘ಕಾಲರಾ’ ರೋಗ ತಾಂಡವವಾಡುತ್ತಾ ಹಾನಗಲ್ಲ ಗ್ರಾಮವನ್ನು ತಲುಪಿತ್ತು. ಇಂತಹ ಸಮಯದಲ್ಲಿ ಆ ರೋಗಕ್ಕೆ ಹಲವಾರು ಜನ ಬಲಿಯಾಗುತ್ತಿರುವುದನ್ನು ನೋಡಿ ಸ್ವತ: ಶ್ರೀಗಳೇ ರೋಗಕ್ಕೆ ಸಿಲುಕಿಕೊಂಡವರ ಮನೆಮನೆಗಳಿಗೆ ಭೇಟಿ ನೀಡಿ, “ಎಲ್ಲಿ ಆ ಸೋಂಕು ತಮಗೆ ಸೋಂಕಿತು ಎನ್ನುವ ಭಯದ ಭಾವವನ್ನು ತೊಡೆದು ಹಾಕಿ” ಸ್ವತ: ತಾವೇ ಔಷಧೋಪಚಾರ ಚಿಕಿತ್ಸೆ ನೀಡಿ, ಗಂಜಿ ಕೇಂದ್ರವನ್ನು ತೆರೆದು ಮನೆಮನೆಗೆ ಗಂಜಿ ನೀಡುವ ಕಾರ್ಯದಲ್ಲಿ ತೊಡಗಿದರು. ಮೈಲಾರದ ಬಸವಲಿಂಗ ಶರಣರ ವಾಣಿಯಂತೆ:-

             ” ಹಲವು ಮಾತೇನು ನೀನೊಲಿದು ಪಾದವನಿಟ್ಟ

           ನೆಲವೆ ಸುಕ್ಷೇತ್ರ ಜಲವೆ ಪಾವನ ತೀರ್ಥ

            ಸುಲಭ ಶ್ರೀ ಗುರುವೇ ಕೃಪೆಯಾಗು”

ಎನ್ನುವಂತೆ ಕುಮಾರ ಶಿವಯೋಗಿಗಳ ಪಾದ ಸ್ಪರ್ಶದಿಂದ ಮನೆಗಳಲ್ಲಿ ಅಡಿಯಿರಿಸಿದ್ದ ಕಾಲರಾ ರೋಗ  ಕಾಲ್ಕಿತ್ತಿತ್ತು. ಸಂಜೀವಿನಿಯಂತ ಶ್ರೀಗಳ ಪಾದಸ್ಪರ್ಶದಿಂದ ಸೋಂಕು ದೂರವಾಗಿತ್ತು.

                 ಮಠದ ಪೀಠಾಧಿಕಾರವನ್ನು ವಹಿಸಿಕೊಂಡು ಸಮಾಜದ ಈಗಿನ ಸ್ಥಿತಿಗತಿಗಳನ್ನು ತಮ್ಮ ಅರಿವಿನಲ್ಲಿ ಕಂಡು ತಾವು ಮಾಡಬೇಕಾದ ಸಮಾಜೋದ್ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.ಒಂದೆಡೆ ಜ್ಞಾನದಾಸೋಹ ಮತ್ತೊಂದೆಡೆ ಅನ್ನದಾಸೋಹ ಹಾಗೂ ಆರೋಗ್ಯ ದಾಸೋಹ ಹೀಗೆ ಬಳಲಿ ಬಂದ ಭಕ್ತರ ಕಣ್ಣೀರನ್ನು ಒರೆಸಿ ಸಾಂತ್ವನ ನೀಡಿದ ದಾಸೋಹ ಮೂರ್ತಿ ಶ್ರೀ ಕುಮಾರ ಶಿವಯೋಗಿಗಳು.

               “ವಿದ್ಯೆ ಕಲಿಸಿದರೆಮಗೆ ಯಾರೋ ಅಕ್ಕರೆಯಿಂದ

           ಅನ್ನವಿತ್ತರು ಯಾರೋ ಅತಿ ಮಮತೆಯಿಂದ

           ಯಾರು ತಿದ್ದಿದರೆಮ್ಮ ದಿನ ದಿನ ನಡೆ ನುಡಿಯ

            ನಮಿಸೊ ಆ ಚೇತನಕೆ – ಮುದ್ದುರಾಮ”

                ಅಂತಹ ಆ ಚೈತನ್ಯ ಶಕ್ತಿ ,ಮಹಾನ್ ಚೇತನ ಶ್ರೀ ಕುಮಾರ ಶಿವಯೋಗಿಗಳಿಗೆ ನೂರು ನಮನ. ಪೂಜ್ಯ ಶ್ರೀ ಕುಮಾರ ಶಿವಯೋಗಿಗಳ  ಆಶೀರ್ವಾದ ಸದಾ ಇರಲೆಂದು ಪ್ರಾರ್ಥಿಸುತ್ತೇನೆ

Related Posts