ಜ್ಞಾನ-ಕ್ರಿಯೆ

ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ’, ‘ನಹಿಜ್ಞಾನೇನ ಸದೃಶ್ಯಂ ಪವಿತ್ರಮಿಹ ವಿದ್ಯತೇ’, ‘ಜ್ಞಾನಾದೇವರು ಕೈವಲ್ಯಂ’ ಇವೆಲ್ಲ ಜ್ಞಾನದ ಹಿರಿಮೆಯನ್ನು ಸಾರುವ ವಾಕ್ಯಗಳು. ಜ್ಞಾನ ವ್ಯಕ್ತಿಯ ಇಹಪರಗಳ ಸುಖಕ್ಕೆ ಕಾರಣವಾಗಿದೆ. ಜ್ಞಾನವೇ ನಿಜವಾದ ಸಂಪತ್ತು. ಅದು ವ್ಯಕ್ತಿಯ ಬಂಧನ ಹಾಗು ದುಃಖಕ್ಕೆ ಕಾರಣವಾದ ಅಜ್ಞಾನವನ್ನು ನಾಶ ಮಾಡುತ್ತದೆ. ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಎಲ್ಲವನ್ನು ಪವಿತ್ರಗೊಳಿಸುವ ಅಪರಿಮಿತ ಶಕ್ತಿ ಇದಕ್ಕಿದೆ. ಮೋಕ್ಷಕ್ಕೆ ಜ್ಞಾನವೇ ದಾರಿದೀಪ ಎಂದೆಲ್ಲ ಹೇಳಲಾಗುತ್ತಿದೆ. ಈ ಜ್ಞಾನದಲ್ಲಿಯೂ ಲೌಕಿಕ ಜ್ಞಾನ ಮತ್ತು ಅಧ್ಯಾತ್ಮಜ್ಞಾನವೆಂದು ಎರಡು ವಿಧ. ಲೌಕಿಕ ಜ್ಞಾನವು ಸಾಮಾನ್ಯ ಹಾಗು ಸಾಧಾರಣ ಜ್ಞಾನವಾಗಿದ್ದು, ಬುದ್ಧಿಯಿಂದ ಪ್ರಾಪ್ತವಾಗುತ್ತದೆ. ಅದಕ್ಕೆ ವಿಜ್ಞಾನವೆಂದೂ ಕರೆಯಲಾಗುತ್ತದೆ. ವಿಜ್ಞಾನದಿಂದ ಪರಮಸತ್ಯದ ಅಥವಾ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಿಲ್ಲ. ಏಕೆಂದರೆ ಬೌದ್ಧಿಕ ಜ್ಞಾನ (ವಿಜ್ಞಾನ)ವು ಇಂದ್ರಿಯಗಳಿಂದ ಪ್ರಾಪ್ತವಾಗಿದೆ. ಇಂದ್ರಿಯಗಳಿಗೆ ಪರಮಸತ್ಯವನ್ನು ಕಾಣುವ ಶಕ್ತಿ ಇಲ್ಲ. ಆದರೆ ಅಧ್ಯಾತ್ಮ ಜ್ಞಾನವುಳ್ಳವರು ಪರಮಾತ್ಮನ ಸಾಕ್ಷಾತ್ಕಾರ ಹೊಂದುತ್ತಾರೆ; ಪರಮಶಾಂತಿಯನ್ನು ಪಡೆದುಕೊಳ್ಳುತ್ತಾರೆ.

 

ಅಧ್ಯಾತ್ಮ ಜ್ಞಾನ ಸುಲಭ ಸಾಧ್ಯವಲ್ಲ. ಅದಕ್ಕಾಗಿ ಚಿತ್ತಶುದ್ಧಿಯ ಆವಶ್ಯಕತೆ ಇದೆ. ಶರೀರ, ಇಂದ್ರಿಯಗಳನ್ನು ಬಾಹ್ಯ ಆಕರ್ಷಣೆಗಳಿಂದ ಮುಕ್ತಗೊಳಿಸಬೇಕಾಗುತ್ತದೆ. ‘ಸಂಸಾರವೆಂಬುದೊಂದು ಗಾಳಿಯ ಸೊಡರು….ಮರೆಯದೇ ಪೂಜಿಸು ಕೂಡಲಸಂಗಮದೇವನ’ ಎಂಬ ಬಸವವಾಣಿಯಂತೆ ಸಂಸಾರದ ಕ್ಷಣಭಂಗುರತೆಯನ್ನು ಅರಿಯಬೇಕಾಗುತ್ತದೆ. ಮನಸ್ಸನ್ನು ವಿಷಯ ವಾಸನೆಗಳಿಂದ ಮುಕ್ತಗೊಳಿಸಿ ಪರಮಾರ್ಥ ಚಿಂತನೆಯಲ್ಲಿರಿಸಬೇಕಾಗುತ್ತದೆ. ಹೀಗೆ ‘ಜೀತೇಂದ್ರಿಯನಾದ ಸಾಧನಪಾರಾಯಣನಾದ ಶ್ರದ್ಧಾವಂತನೆ ಅಧ್ಯಾತ್ಮಜ್ಞಾನಕ್ಕೆ ಅರ್ಹನೆನಿಸುತ್ತಾನೆ ಎಂಬುದು ಗೀತೋಕ್ತಿ.

 

ಅಧ್ಯಾತ್ಮಜ್ಞಾನವು ಎಷ್ಟೇ ಶ್ರೇಷ್ಠವಾಗಿದ್ದರೂ ಸತ್ಕ್ರಿಯಾರಹಿತವಾಗಿದ್ದರೆ ತನ್ನ ಮೌಲ್ಯವನ್ನು ಕಳೆದುಕೊಂಡು ನಿಷ್ಟ್ರಯೋಜಕವೆನಿಸುತ್ತದೆ. ಗುರಿ ತಲುಪಲು ಕಣ್ಣು ಕಾಲುಗಳೆರಡೂ ಆವಶ್ಯವಾಗಿರುವಂತೆ ಮೋಕ್ಷಕ್ಕೆ ಜ್ಞಾನ ಕ್ರಿಯೆಗಳೆರಡೂ ಬೇಕು. ಪರಮಾತ್ಮನೊಡನೆ ಆತ್ಮನನ್ನು ಬೆಸೆಯುವ ತಂತ್ರವೇ ಕ್ರಿಯೆ. ಅದುವೇ ಜ್ಞಾನ. ಕ್ರಿಯೆಯೇ ಜ್ಞಾನ, ಜ್ಞಾನವೇ ಕ್ರಿಯೆ, ಜ್ಞಾನವೆಂದರೆ ತಿಳಿಯುವುದು, ಕ್ರಿಯೆಯೆಂದರೆ ತಿಳಿದಂತೆ ಮಾಡುವುದು. ಪರಸ್ತ್ರೀ ಭೋಗಿಸಬಾರದೆಂಬುದೇ ಜ್ಞಾನ, ಅದರಂತೆ ಆಚರಿಸುವುದೇ ಕ್ರಿಯೆ. ಅಂತು ಆಚರಿಸದಿದ್ದರೆ ಅದೇ ಅಜ್ಞಾನ’ ಎಂದು ಶರಣರು ಸ್ಪಷ್ಟಪಡಿಸುತ್ತಾರೆ. ವ್ಯಕ್ತಿ ಎಂತಹ ಶ್ರೇಷ್ಠಜ್ಞಾನಿಯಾಗಿದ್ದರೂ ಸತ್ಕ್ರಿಯಾಚರಣೆ ಯುಳ್ಳವನಾಗಬೇಕಾಗುತ್ತದೆ. ನೀತಿ ನಿಯಮಗಳಿಗೆ ಒಳಪಡಬೇಕಾಗುತ್ತದೆ. ‘ಜ್ಞಾನವಾಯಿತ್ತೆಂದು ಮನಕ್ಕೆ ಬಂದ ಹಾಗೆ ಮೀರಿ ನುಡಿದು ನಡೆದೆನಾದಡೆ ಶ್ವಾನಗರ್ಭದಲ್ಲಿ ಹುಟ್ಟಿಸದೇ ಬಿಡುವನೇ ಚನ್ನಮಲ್ಲಿಕಾರ್ಜುನಯ್ಯ’ ಎಂದು ಅಕ್ಕಮಹಾದೇವಿ ಪ್ರಶ್ನಿಸುತ್ತಾಳೆ.

 

ಜ್ಞಾನ ಕ್ರಿಯೆಗಳೆರಡೂ ಒಂದಕ್ಕೊಂದು ಪೂರಕ. ಜ್ಞಾನವಿಲ್ಲದ ಕ್ರಿಯೆ ಜಡವಾಗುತ್ತದೆ. ಕ್ರಿಯೆ ಇಲ್ಲದ ಜ್ಞಾನ ಬರೀ ಭ್ರಮೆ ಹಾಗು ವಾಗ್ಜಾಲವೆನಿಸಿಕೊಳ್ಳುತ್ತದೆ. ಅನಂತಾಕಾಶದಲ್ಲಿ ಹಾರುವ ಹಕ್ಕಿಗೆ ಇರುವ ಎರಡು ರೆಕ್ಕೆಗಳಂತೆ ಪರಮಾತ್ಮನೆಡೆಗೆ ಪಯಣಿಸುವ ಜೀವಾತ್ಮನೆಂಬ ಪಕ್ಷಿಗೂ ಜ್ಞಾನ-ಕ್ರಿಯೆಗಳೆಂಬ ರೆಕ್ಕೆಗಳೆರಡರ ಆವಶ್ಯಕತೆ ಇದೆ ಎಂದು ವಚನಕಾರರು ಪ್ರತಿಪಾದಿಸುತ್ತಾರೆ. ಕ್ರಿಯೆ ಇಲ್ಲದ ಜ್ಞಾನಿ ಕಾಲಿಲ್ಲದ ಹೆಳವ (ಕುಂಟ)ನಂತೆ ಗಂತವ್ಯವನ್ನು ತಲುಪಲಾರ. ಸತಿಯೆಗಳಿಂದ ಸದ್ಭಾವ ಸುಜ್ಞಾನಗಳು ಗೋಚರಿಸುತ್ತವೆ. ಸುಜ್ಞಾನದಿಂದ ಇಂದ್ರಿಯ ಶುದ್ಧಿ, ಇಂದ್ರಿಯ ಶುದ್ಧಿಯಿಂದ ಚಿತ್ತಶುದ್ಧಿ. ಚಿತ್ತಶುದ್ಧಿಯಿಂದಲೆ ಪರಮಾತ್ಮನ ನೆಲೆಕಲೆಗಳನ್ನು ಅರಿಯಲು ಸಾಧ್ಯವಾಗುವುದು.

ಅಂತಹ ಜ್ಞಾನಕ್ರಿಯಾಶೀಲರಿಂದಲೇ ಲೋಕಕಲ್ಯಾಣ.

Related Posts