ಶೈವ-ವೀರಶೈವ : ಪರಿಕಲ್ಪನೆ

ಡಾ. ಬಿ. ವ್ಹಿ. ಶಿರೂರ

 ‘ಶಿವ’ ಎಂದರೆ ಮಂಗಲ, ಸತ್ಯ, ಸುಂದರ ಎಂಬರ್ಥಗಳಿವೆ. ಇಂಥ ಶಿವನೇ ಸರ್ವೋತ್ತಮನೆಂದು ನಂಬುವ ಮತ್ತು ಆರಾಧಿಸುವ ಜನರನ್ನು ”ಶೈವ”ರೆಂದು ಕರೆಯುವರು. ಅತೀ ಪ್ರಾಚೀನ ಕಾಲದಿಂದಲೂ ಈ ಶಿವನ ಆರಾಧನೆ ನಡೆಯುತ್ತ ಬಂದಿದೆ ಎಂಬುದಕ್ಕೆ ಹಲವಾರು ಆಧಾರಗಳು ದೊರೆಯುತ್ತಿವೆ.

 ಆರ್ಯರು ಭಾರತಕ್ಕೆ ಬರುವ ಪೂರ್ವದಲ್ಲಿ ಇದ್ದ ದ್ರಾವಿಡರು ಸುಸಂಸ್ಕೃತರಾಗಿದ್ದರು ಎಂಬುದಕ್ಕೆ ಸಿಂಧೂನದಿ ತೀರದ ಹರಪ್ಪಾ ಮಹಂಜೋದಾರೊಗಳಲ್ಲಿ ದೊರೆತಿರುವ ಅವಶೇಷಗಳೇ ಸಾಕ್ಷಿ ಅಲ್ಲಿ ಅಷ್ಟಾಂಗಯೋಗ ಮುದ್ರೆಯ ಶಿವ, ಸ್ವಸ್ತಿಕ, ನಂದಿ ಮೊದಲಾದವು ದೊರೆತಿದ್ದು ಆ ಕಾಲಕ್ಕಾಗಲೆ ಶೈವ ಧರ್ಮ ಪ್ರಚಲಿತದಲ್ಲಿತ್ತು ಎಂಬುದು ಸಾಬೀತಾಗಿದೆ.

ವೇದಗಳಲ್ಲಿ ಅತೀ ಪ್ರಾಚೀನವಾದುದು ಋಗ್ವದ. ಅದರಲ್ಲಿ ಅಗ್ನಿ, ವರುಣ, ಇಂದ್ರ, ಸೂರ್ಯ ಮೊದಲಾದ ದೇವತೆಗಳ ಪ್ರಾರ್ಥನಾ ಮಂತ್ರಗಳಿದ್ದರೂ ರುದ್ರನ ಪರವಾದ ಪ್ರಾರ್ಥನಾ ಮಂತ್ರಗಳು ವಿಶೇಷವಾಗಿವೆ. ಅಲ್ಲಿ ರುದ್ರನನ್ನು ಶಿವ, ಭೇಷಜ, ಕರುಣಿ, ರೌದ್ರ, ಶರ್ವ, ಭವ ಮುಂತಾಗಿ ಕರೆಯಲಾಗಿದೆ. ಯಜುರ್ವೇದದಲ್ಲಿ ಈ ರುದ್ರನ ಸ್ಥಾನ ಮತ್ತಷ್ಟು ಹೆಚ್ಚಾಗಿದೆ.  ಸಾಮವೇದದಲ್ಲಿ ರುದ್ರನ ಸ್ತುತಿಪದವಾದ ಹಲವಾರು ಮಂತ್ರಗಳಿವೆ. ಅಥರ್ವಣವೇದದಲ್ಲಿ ಈ ರುದ್ರನನ್ನು ಶಿವ, ಭವ, ಪಶುಪತಿ, ಎಂದು ಮುಂತಾಗಿ ಕರೆಯಲಾಗಿದೆ. ಈ ಎಲ್ಲ ವೇದಗಳಿಗೆ ಇರುವ ಬ್ರಾಹ್ಮಣ, ಅರಣ್ಯಕಗಳಲ್ಲೂ ಶಿವನ ಪ್ರಾರ್ಥನಾ ಪರವಾದ ಗದ್ಯಗಳಿವೆ. ಉಪನಿಷತ್ ಕಾಲದಲ್ಲಿ ರುದ್ರಶಿವನ ಪ್ರಾರ್ಥನಾ ಪರವಾದ ಗದ್ಯಗಳಿವೆ. ಉಪನಿಷತ್ ಕಾಲದಲ್ಲಿ ರುದ್ರಶಿವನ ಪ್ರತಿಷ್ಠೆ ಕಂಡು ಬರುತ್ತದೆ.

 ಅಲ್ಲಿಂದ ಮುಂದೆ, ರಾಮಾಯಣದಲ್ಲಿ ಶ್ರೀರಾಮನು ರಾವಣನ ಲಂಕಾನಗರಕ್ಕೆ ದಾಳಿ ಇಡುವ ಪೂರ್ವದಲ್ಲಿ ಸಾಗರವನ್ನು ದಾಟುವುದಕ್ಕೆ ಮೊದಲು ಶಿವಲಿಂಗವನ್ನು ಪೂಜಿಸಿದ್ದಂತೆ ಹೇಳಲಾಗಿದೆ. ಹಾಗೆಯೇ ಮಹಾಭಾರತದಲ್ಲಿ ಅರ್ಜುನನು ಪಾಶುಪತಾಸ್ತ್ರವನ್ನು ಪಡೆಯಲು ಶಿವನನ್ನು ಕುರಿತು ತಪಸ್ಸು ಮಾಡಿದ ಸನ್ನಿವೇಶವಿದೆ. ಅಶ್ವತ್ಥಾಮನು ಶಂಕರನನ್ನು ಭಜಿಸಿ ಭೀಕರವಾದ ಖಡ್ಗವನ್ನು ಪಡೆದನಂತೆ. ರಾವಣ, ಹಿರಣ್ಯಕಶಪ, ಬಾಣಾಸುರ ಮೊದಲಾದವರು ಪರಮ ಶಿವಭಕ್ತರಾಗಿದ್ದರು.

ಇವನ್ನು ದಾಟಿ ಚಾರಿತ್ರಿಕ ಕಾಲಕ್ಕೆ ಬಂದರೆ ಬುದ್ಧನು ಮರಣ ಶಯ್ಯೆಯಲ್ಲಿದ್ದಾಗ (ಕ್ರಿ.ಪೂ. ೪೮೩)  ಅಲಾಲಕುಮಾರ ಎಂಬ ಮುನಿಯು ಬಂದು ಅವನಿಂದ ಉಪದೇಶ ಪಡೆದನೆಂದು ಹೇಳಲಾಗುತ್ತಿದೆ. ಹಾಗೆ ಉಪದೇಶ ಪಡೆದ ಮುನಿ ಶೈವನಾಗಿದ್ದನೆಂಬುದು ಸಿದ್ಧವಾಗಿದೆ. ಕುಶಾನರ ಅರಸರು ಶೈವರಾಗಿದ್ದು ತಮ್ಮ ನಾಣ್ಯಗಳ ಒಂದು ಬದಿಗೆ ಪರಮ ಮಹೇಶ್ವರ ಎಂದು ಬರೆದಿದ್ದರೆ ಇನ್ನೊಂದು ಬದಿಗೆ ತ್ರಿಶೂಲಧಾರಿ  ನಂದೀಶ್ವರನ ಚಿತ್ರವಿದೆ. ಇವರಂತೆ ಹೂಣರೂ ಶಿವಭಕ್ತರಾಗಿದ್ದರು. ಈ ವಂಶದ ಮೆಹರನುಲನು ಪರಮ ಶಿವಭಕ್ತನಾಗಿದ್ದನು. ಮಗಧವಂಶದ ಭವನಾಗ ಮನೆತನದ ಅರಸರೂ ಶಿವಭಕ್ತರಾಗಿದ್ದರು. ಶಿವಲಿಂಗವನ್ನು ಪೂಜಿಸಿ ರಾಜ್ಯವನ್ನು ಪಡೆದುದಾಗಿ ಅವರ ಒಂದು ಶಾಸನ ಉಲ್ಲೇಖಿಸುತ್ತಿದೆ. ತತ್ವ ಪ್ರಕಾಶಿಕೆ ಸಂಖ್ಯಾಶಾಸ್ತ್ರವನ್ನು ಬರೆಯಿಸಿದ ಭೋಜರಾಜನು ಶಿವಭಕ್ತನಾಗಿದ್ದನು. ಗಂಗಾನದಿ ದಡದ ಮರ್ತಶಕವಂಶದ ೨ನೆಯ ಪ್ರವರಸೇನನು ಶೈವಧರ್ಮದ ಅನುಯಾಯಿಯಾಗಿದ್ದನು. ಕಲ್ಯಾಣ ಚಾಲುಕ್ಯರಲ್ಲಿ ಖ್ಯಾತಿವೆತ್ತ ೬ನೆಯ ವಿಕ್ರಮಾದಿತ್ಯನು ಪರಮ ಶಿವಭಕ್ತನಾಗಿದ್ದನು. ಅವನ ಕಾಲದ ಬಿಲ್ಹಣ, ಜ್ಞಾನೇಶ್ವರರು ಶೈವಮತಾವಲಂಬಿಗಳಾಗಿದ್ದರು. ಕಲ್ಯಾಣ ವಿಕ್ರಮಾದಿತ್ಯನ ತಂದೆ ಸೋಮೇಶ್ವರನೂ ಜ್ವರ ಪೀಡಿತನಾಗಿ  ಹಂಪೆಯ ವಿರೂಪಾಕ್ಷನನ್ನು ನೆನೆಯುತ್ತ ತುಂಗಭದ್ರಾನದಿಯಲ್ಲಿ ಮುಳುಗಿ ಪ್ರಾಣತೆತ್ತನು.

 ಮಹಾಭಾಷ್ಯಕಾರನಾದ ಪತಂಜಲಿಯು ತ್ರಿಶೂಲಧಾರಿಗಳಾದ  ಶಿವಭಾಗವತರನ್ನು ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಕಾಳಿದಾಸ ,ಬಾಣ, ಭವಭೂತಿ ಮೊದಲಾದ ಕವಿಗಳು ಶಿವನನ್ನು ಬಣ್ಣಿಸಿರುವರು. ನ್ಯಾಯ ವೈಶೇಷಿಕ, ದರ್ಶನಕಾರರಾದ ಗೌತಮ ಮತ್ತು ಕಣಾದ ಮುನಿಗಳು ಶೈವರಿದ್ದರೆಂದು ಪ್ರತೀತಿ. ಚೀನಾಪ್ರವಾಸಿ ಹುಯನ್‌ತ್ಸಾಂಗನು ಮಹೇಶ್ವರನ ಗುಡಿಗಳನ್ನೂ ಶಿವಪಂಥಿಗಳಾದ ಪಾಶುಪತರನ್ನೂ ತಾನು ಕಂಡಿರುವುದಾಗಿ ಹೇಳಿರುವನು.

 ಈ ಶೈವ ಮತವು ಭರತಖಂಡಲ್ಲಿ ಮಾತ್ರವಲ್ಲ ಜಾವಾ, ಬಾಲಿ, ಕಾಂಬೋಡಿಯಾ ಮೊದಲಾದ ದ್ವೀಪಗಳವರೆಗೂ ವ್ಯಾಪಿಸಿದ್ದುದಾಗಿ ತಿಳಿದು ಬರುವುದು. ಈಗಲೂ ಆ ಪ್ರದೇಶಗಳಲ್ಲಿ ಹಾಳುಬಿದ್ದ ಶಿವ  ದೇವಾಲಯಗಳೂ, ಶೈವ ವಿಗ್ರಹಗಳೂ ದೊರೆಯುತ್ತಿವೆ. ಭಾರತದ ತುಂಬ ಶೈವ ಧರ್ಮ ಪಸರಿಸಿತ್ತು ಎಂಬುದಕ್ಕೆ ಹನ್ನೆರಡು ಜ್ಯೋತಿರ್ಲಿಂಗಗಳು ರಾಮೇಶ್ವರದಿಂದ ಕೇದಾರದ ವರೆಗೆ ಇರುವುದೇ ಸಾಕ್ಷಿ.

 ಈ ಬಗೆಯಾಗಿ ಶೈವಧರ್ಮವು ನದಿ ಸಂಸ್ಕೃತಿಯ ಕಾಲದಿಂದ ಹಿಡಿದು ಇಲ್ಲಿಯವರೆಗೆ ಶಾಕ್ತರು, ಗಾಣ ಪತ್ಯರು, ಪಾಂಚನ್ಯರು ಮುಂತಾದ ರೂಪಗಳಲ್ಲಿ ಪ್ರವಹಿಸುತ್ತ ಬಂದಿದೆ. ಚಂದ್ರಜ್ಞಾನಾಗಮವು ಶೈವ, ಆದಿಶೈವ, ಪೂರ್ವಶೈವ, ಮಿಶ್ರಶೈವ, ಶುದ್ಧ ಶೈವ, ಮಾರ್ಗಶೈವ, ಸಾಮಾನ್ಯ ಶೈವ ಹಾಗೂ ವೀರಶೈವ ಎಂಬ ಪ್ರಭೇದಗಳನ್ನು ಹೇಳಿದೆ. ವಚನಕಾರರಲ್ಲಿ ಅಕ್ಕಮಹಾದೇವಿ ‘ಜಾತಿಶೈವರು ಅಜಾತಿ ಶೈವರು ಎಂದು ಎರಡು ಪ್ರಕಾರವಾಗಿ ಇಹರಯ್ಯ’ ಎಂದಿದ್ದರೆ ಪ್ರಸಾದಿ ಭೋಗಣ್ಣʼʼ ಶೈವವಾರು, ವೀರಶೈವ ಮೂರು’ ಎಂದಿದ್ದಾನೆ. ಕಲಕೇತಯ್ಯ, ಪ್ರಭು, ಬಸವಣ್ಣರು ‘ಷಟ್‌ಶೈವ’ಗಳನ್ನು ಪ್ರಸ್ತಾಪಿಸುವರು. ಇವುಗಳಲ್ಲದೆ ಕಾಳಾಮುಖ ಪಾಶುಪತ, ಕಾಪಾಲಿಕ ಶೈವರು ಆಂಧ್ರ ತಮಿಳುನಾಡು ಕರ್ನಾಟಕಗಳಲ್ಲಿ ಪ್ರಸಿದ್ಧರಾಗಿರುವರು. ಕಾಶ್ಮೀರ ಶೈವದ ಪ್ರಸ್ತಾಪವೂ ಇದೆ.

 ಈ ಶೈವ ಸಿದ್ಧಾಂತದಲ್ಲಿ ಪತಿ-ಪಶು-ಪಾಶ ಎಂಬ ತ್ರಿಪದಾರ್ಥಗಳು, ಮಂತ್ರ, ಪದ, ವರ್ಣ, ಭುವನ, ತತ್ವ, ಕಲೆಯೆಂಬ ಷಡ್ವಿಧಗಳು, ಜ್ಞಾನೇಂದ್ರಿಯ, ಕರ್ಮೇಂದ್ರಿಯ, ತನ್ಮಾತ್ರೆಗಳು ಮಹಾಭೂತ ಮೊದಲಾದ ೨೫ ಬುದ್ದಿ ತತ್ವಗಳು ಸೇರಿ ೩೬ ತತ್ವಗಳು ಇವುಗಳ ವಿಚಾರ ಪ್ರಮುಖವಾಗಿರುವದು. ಇವರಿಗೆ ಅತ್ಯುತ್ಕೃಷ್ಟವಾದ ಶಿವನೇ ಸತ್ಯದ ಸ್ವರೂಪ. ಅವನು ಅನಾದಿ, ಅನಂತ, ಸರ್ವವ್ಯಾಪಿ, ಸರ್ವಶಕ್ತ ಸರ್ವಜ್ಞ ,ಬಂಧಮುಕ್ತ, ಕಲ್ಯಾಣಕಾರಕ ಏನೆಲ್ಲ ಆಗಿದ್ದಾನೆ. ಸೃಷ್ಟಿ-ಸ್ಥಿತಿ-ಲಯಗಳಿಗೆ ಅವನೇ ಕಾರಣ.  ಆತ್ಮಗಳ ಪಾಶಗಳನ್ನು ಕಳಚಿ ಬಂಧಮುಕ್ತ ಮಾಡುತ್ತಾನೆ . ಶಕ್ತಿ ಶಿವನ ಅರ್ಧಾಂಗಿ ಚೈತನ್ಯ ಸ್ವರೂಪಿ . ಶಿವನ ಸೃಷ್ಟಿಗೆ

 ಸಹಾಯಕಳು .ಜೀವ-ಶಿವರ ನಡುವಿನ ಸೇತುವೆಯಿದ್ದಂತೆ ಶಿವನ ಪ್ರತಿರೂಪ ಆದರೂ ಸ್ವಂತ ಅಸ್ತಿತ್ವವಿಲ್ಲ., ಲೀಲೆಯಿಂದ ಶಕ್ತಿ,   ಲೀಲೆಯಳಿದಡೆ ಸ್ವಯಂಭೂ .

   ಆತ್ಮಗಳು ಅಸಂಖ್ಯ, ಶಾಶ್ವತ, ಶಿವ ನಿರ್ಮಿತಿಗಳಲ್ಲ. ಆತ್ಮ ದೇಹದಿಂದ ಭಿನ್ನ. ಆತ್ಮ ಚೇತನ, ದೇಹ ಅಚೇತನ, ದೇಹವು ಆತ್ಮನ ವಾಸಸ್ಥಾನ, ಕರ್ಮವು ಶರೀರದಲ್ಲಿ ಆತ್ಮನು ಬಂಧಿತವಾಗಲು ಕಾರಣವಾಗುತ್ತದೆ. ಒಂದೆಡೆ ಶುದ್ಧ ಚೈತನ್ಯ ಸ್ವರೂಪವಾದ ಶಿವ, ಇನ್ನೊಂದಡೆ ಶುದ್ಧ ಅಚೇತನವಾದ ವಸ್ತು ಇವೆರಡನ್ನು ಕೂಡಿಸುವುದೇ ಶಕ್ತಿ. ಶಿವನು ಒಬ್ಬ ಕುಂಬಾರನಿದ್ದಂತೆ ಅವನಿಗೆ ತಿಗರಿ, ಕೋಲುಗಳೆಂಬ ಸಾಮಗ್ರಿಬೇಕು ಅದೇ ಶಕ್ತಿ, ಅರಲು ಮಡಿಕೆ ಮಾಡಲು ಭೌತಿಕಸಾಧನ. ಮಾಯೆಯೇ ಈ ಭೌತಿಕ ಸಾಧನ. ಇಲ್ಲಿ ಎಲ್ಲವೂ ಶಿವನ ಇಚ್ಛೆಯಂತೆಯೆ ನಡೆಯುತ್ತದೆ. ಶಕ್ತಿ ಮಾಯೆಗಳಿಗೆ ಸ್ವಂತ ಅಸ್ತಿತ್ವವಿಲ್ಲ. ಜೀವಿಗಳಿಗೆ ಅಸ್ತಿತ್ವವಿದ್ದರೂ ಶಿವನ ಅನುಜ್ಞೆ ಹೊರತು ಏನೂ ಮಾಡಲು ಸಾಧ್ಯವಿಲ್ಲ, ಜೀವಿಗಳ ಉದ್ಧಾರಕ್ಕೆ ಶಿವನು  ರೂಪಧರಿಸಿ ಬರುತ್ತಾನೆ. ಜೀವನ ಪಾಶ ಜಾಲವನ್ನು ಹರಿಯುತ್ತಾನೆ. ಇದರಿಂದ ಜೀವನು ಮುಕ್ತನಾಗುತ್ತಾನೆ. ಮಹಾಪ್ರಳಯದಲ್ಲಿಯೂ ಪತಿ-ಪಶು ಪಾಶವೆಂಬ ತ್ರಿಪದಾರ್ಥಗಳು ಪರಸ್ಪರ ಭಿನ್ನವಾಗಿಯೇ ಇರುವವು ಶಿವಾರ್ಚನಾದಿ ಸಾಧನಗಳಿಂದ ಶಿವಾನುಗ್ರಹವನ್ನು ಪಡೆದ ಪಶುಗಳು (ಜೀವರು) ಶಿವ ಸಮಾನತಾರೂಪ ಮುಕ್ತಿಯನ್ನು ಪಡೆದೂ ಶಿವಾನಂದಮಯವಾಗಿದ್ದರೂ ಶಿವನಿಗಿಂತ ಭಿನ್ನರಾಗಿರುವರು. ಶಿವನು ಅನಾದಿ ಮುಕ್ತನು. ಪಶುಗಳು ಆದಿ ಮುಕ್ತರು ಆದುದರಿಂದ ಶೈವ ಸಿದ್ಧಾಂತವನ್ನು ದ್ವೈತ್ಯವೆಂದು ಹೇಳುವರು.

ಇವರಿಗೆ ಶಿವನೇ ಮುಖ್ಯ ದೇವತೆಯಾದುದರಿಂದ ಶಿವ ಪಂಚಾಕ್ಷರಿಮಂತ್ರವನ್ನೇ ಜಪಿಸುತ್ತಾರೆ. ಶಿವನನ್ನು ಸ್ಥಾವರ ಲಿಂಗರೂಪದಲ್ಲಿ ಪೂಜಿಸುತ್ತಾರೆ. ಆ ಶಿವನನ್ನು ಒಲಿಸಿಕೊಳ್ಳಲು ಯಜ್ಞ ಯಾಗ ಹವನಗಳನ್ನು ಮಾಡುತ್ತಾರೆ. ಅಗ್ನಿ ಮುಖಾಂತರವಾಗಿ ಸೂರ್ಯ ಚಂದ್ರಾದಿ ದೇವತೆಗಳನ್ನು ತೃಪ್ತಿ ಪಡಿಸುವರು. ಶ್ರಾದ್ಧಾದಿ ಕಾರ್ಯಗಳನ್ನು ಮಾಡುವರು. ಆ ಕಾಲಕ್ಕೆ ಪಿಂಡದಾನ ಕೊಡುವ ಪದ್ಧತಿ ಇದೆ. ಪಂಚ ಸೂತಕಗಳನ್ನು ಇವರು ಮನ್ನಿಸುವರು. 

‘ಶೈವ ಧರ್ಮವನ್ನು ಒಂದು ಮೊಗ್ಗೆಯವಸ್ಥೆಗೆ ಹೋಲಿಸಿದರೆ, ಇಂದು ಬೆಳೆದು ಬಂದಿರುವ ವೀರಶೈವ  ಧರ್ಮವನ್ನು ನಾವು ರಸತುಂಬಿದ ಫಲಕ್ಕೆ ಹೋಲಿಸಬಹುದಾಗಿದೆ. (ಎಸ್. ಸಿ. ನಂದಿಮಠ). ʼ’ವೀರಶೈವʼ’ ಎಂಬ ಪದದ ಮೊದಲಿನ ʼ’ವಿ” ಎಂಬ ಅಕ್ಷರವು ಲಿಂಗಾಂಗ ಸಾಮರಸ್ಯರೂಪವಾದ ವಿದ್ಯೆಯನ್ನು ಬೋಧಿಸುತ್ತದೆ. ಅಂತಹ ವಿದ್ಯೆಯಲ್ಲಿ ಯಾರು ಸತತ ವಿಹರಿಸುತ್ತಾರೋ ಅವರೇ ವೀರಶೈವರೆನ್ನಿಸಿಕೊಳ್ಳುತ್ತಾರೆ. ಯಾವ ಜ್ಞಾನವು  ವೇದಾಂತದಿಂದುತ್ಪನ್ನವಾದುದೋ ಅದು ವಿದ್ಯೆಯೆಂದು ಹೇಳಿಸಿಕೊಳ್ಳುತ್ತದೆ. ಅಂತಹ ವೇದಾಂತ ವಿದ್ಯೆಯಲ್ಲಿ ವಿಹರಿಸುವವರೆಲ್ಲ ವೀರಶೈವರು.

 ಈ ವೀರಶೈವದ ಉಗಮವನ್ನು ಕುರಿತು ಹಲವಾರು ತರ್ಕಗಳಿವೆ. ಪರಮೇಶ್ವರನ ಪಂಚಮುಖಗಳಿಂದುದ್ಭವಿಸಿದ ಪಂಚಾಚಾರ್ಯರಿಂದಲೇ ಈ ಧರ್ಮ ಸ್ಥಾಪನೆಯಾಯಿತೆಂದು ಹೇಳುವವರಿದ್ದಾರೆ. ಆದರೆ ಈ ಆಚಾರ್ಯರ ಪೀಠಾರೂಢರಾದ ಸ್ವಾಮಿಗಳು ಪ್ರಮಾಣ ಬದ್ಧವಾದ ಮತ್ತು ಮನ್ವಂತರದ ಚಿಕಿತ್ಸಕರಿಗೆ ಮನದಟ್ಟಾಗುವಂಥ ಆಧಾರಗಳಿಂದೊಡಗೂಡಿದ ತಮ್ಮ ತಮ್ಮ ಪೀಠಗಳ ಮತ್ತು ಆಚಾರ್ಯದ ಇತಿಹಾಸವನ್ನು ಬೈಲಿಗೆ ತರಲು  ಹವಣಿಸುವರೆಂದೂ ಹಾಗೆ ಮಾಡಿ ವೀರಶೈವಮತದ ಪ್ರಾಚೀನತೆಯ ನಿಜ  ಸ್ವರೂಪವನ್ನು ಕಂಡು ಹಿಡಿಯಲು ಕಾರಣೀಭೂತರಾದ ಶ್ರೇಯಸ್ಸಿಗೆ ಪಾತ್ರರಾಗುವರೆಂದೂ ನಮ್ಮ ಬಲವಾದ ಆಶೆ” (ಎಸ್.ಸಿ. ನಂದಿಮಠ, ಶಿವಾನುಭವ ೬-೩ ಪು. ೧೧೬) ಇನ್ನು ಬಸವಣ್ಣನಿಂದಲೇ ವೀರಶೈವ ಮತದ ಸ್ಥಾಪನೆಯಾಯಿತೆಂಬುದು ಕೆಲವರ ಗ್ರಹಿಕೆ. ಇದಾದರೂ ಸರಿಯಲ್ಲವೆಂದೆನಿಸುವುದು. ಬಸವಣ್ಣನವರ ಚರಿತ್ರೆಯನ್ನು ವಿವರಿಸುವ ಗ್ರಂಥಗಳ ಮೇಲಿಂದ ಅವರು ಮತ ಸ್ಥಾಪಕರಿದ್ದಂತೆ ತೋರುವದಿಲ್ಲ. ಭೀಮ ಕವಿಯಂತೂ ಅವರು ವೀರಶೈವ ದೀಕ್ಷೆಯನ್ನು ಪಡೆದರೆಂದು ಹೇಳುವನು. ಬಸವಣ್ಣನವರ ಭಕ್ತಿ ಮತ್ತು ಧರ್ಮದ ಮೇಲಿನ ಪ್ರೇಮವನ್ನು ಕೇಳಿ ದೇಶದೇಶಗಳಿಂದ ಶರಣರು ಅವರ  ಹತ್ತಿರ ಬರಹತ್ತಿದರೆಂದು ಸ್ಪಷ್ಟವಾಗಿ ಉಲ್ಲೇಖವಿದೆ. ಈ ಎಲ್ಲಾ ಶರಣರಿಗೆ, ಬಸವಣ್ಣನವರೇ ಗುರುಗಳಾಗಿಲ್ಲ, ತಿರುಗಿ ಬಸವಣ್ಣನವರೇ ಅವರೆಲ್ಲರನ್ನು ಪೂಜಿಸುತ್ತಿದ್ದರು. ಬಸವಣ್ಣನವರೇ ಮತಸ್ಥಾಪಕರಾಗಿದ್ದರೆ ಹೀಗಾಗುತ್ತಿದ್ದಿಲ್ಲ’ (ಎಸ್. ಸಿ. ನಂದಿಮಠ ಶಿವಾನುಭಾವ ೯-೭ ಪು. ೧೧೯.)

 ಹಾಗಾದರೆ ಇದರ ಉಗಮದ ಕಾಲವನ್ನು ಕುರಿತು ಮತ್ತೆ ಡಾ. ನಂದಿಮಠ ಅವರೇ ಈ ಮತವು ೧೧ನೆಯ ಶತಮಾನಕ್ಕೆ ಪೂರ್ವದಲ್ಲಿ ಉದಯಸಿತೆಂಬುದನ್ನು ಹೇಳಲು ಸಾಧ್ಯವಿಲ್ಲ’ʼ (ಅಲ್ಲೇ) ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಿದ್ದೂ ಕೆಲವರು ಸುಮಾರು ಐದು ಸಾವಿರ ವರುಷಗಳಷ್ಟು ಪ್ರಾಚೀನವಾದ ವೀರಶೈವ ಧರ್ಮ ಯುಗಧರ್ಮವಾಗಿ ಹಿರಿಮೆಯನ್ನು ಹೊಂದಿದೆ. ವೇದ, ಆಗಮ ಉಪನಿಷತ್ತು, ಶಿಲಾಶಾಸನಗಳು, ತಾಮ್ರಪಟಗಳು ಸೇರಿದಂತೆ ಅನೇಕ ಆಕರಗಳು ಲಭ್ಯವಿವೆ. ಇಂಥ ಪ್ರಮಾಣೀಕೃತ ಆಕರಗಳನ್ನು ಹೊಂದಿರುವ ವೀರಶೈವವು ಬಸವಪೂರ್ವ ಯುಗದಲ್ಲಿ ಇತ್ತು’ ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ಈ ವಾದ ಇನ್ನೂ ಬಗೆಹರಿಯಬೇಕಿದೆ.

‘ವೀರಶೈವ’ ಎಂಬ ಪದವನ್ನು ಉಲ್ಲೇಖಿಸುವ ಕನ್ನಡದ ಮೊಟ್ಟ ಮೊದಲ ಶಾಸನ ʼ’ಮಲಕಾಪುರ ಶಾಸನ” (೧೧ನೆಯ ಶತಮಾನ) ಹಾಗಾದರೆ ಪ್ರಾಚೀನ ಕಾಲದಲ್ಲಿ ಇದಕ್ಕಿದ್ದ ಹೆಸರೇನು ?’ ಎಂಬ ಪ್ರಶ್ನೆಯನ್ನು ಹಾಕಿಕೊಂಡು ಡಾ. ನಂದಿಮಠ ಅವರು ಈಗಿನ ವೀರಶೈವವು ಪ್ರಾಚೀನ ಕಾಲದಲ್ಲಿ  ಪಾಶುಪತಪ೦ಥವಾಗಲೀ ಅಥವಾ ಅದರ ಒಳಭೇದಗಳಲ್ಲೊಂದಾಗಲೀ ಆಗಿರಬಹುದೆಂದು ನಮ್ಮ ತರ್ಕ. ನಿಟ್ಟೂರ ನಂಜಣಾರ್ಯ ಇವರನ್ನು ಮಹಾಪಾಶುಪತರೆಂದು ಕರೆದಿದ್ದಾನೆ. ಮಹಾಭಾರತದಲ್ಲಿದ್ದ ಪಾಶುಪತದ ಆಚಾರ ವಿಚಾರಗಳು ಈಗಲೂ ವೀರಶೈವದಲ್ಲಿ ಕಂಡು ಬರುವವು. ಆದ್ದರಿಂದ ಈಗಿನ ವೀರಶೈವ ಮತವು ಪ್ರಾಚೀನ ಕಾಲದಲ್ಲಿ ಪಾಶುಪತವಾಗಲಿ ಅಥವಾ  ಒಳಭೇದಗಳಲ್ಲೊಂದಾಗಲಿ ಆಗಿರಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ವೀರಶೈವರ ಪ್ರಮುಖ ಲಕ್ಷಣ ಷಟ್‌ಸ್ಥಲ.ʼʼ ಆ ಸಿದ್ಧಾಂತದಲ್ಲಿ ವೀರಶೈವರು ಬಗೆದಿರುವ ಜೀವ ಜಗತ್ತು-ದೇವರು ಇವುಗಳ ಸ್ವರೂಪವೂ ಪರಸ್ಪರ ಸಂಬಂಧವೂ ತಾತ್ವಿಕ ರೀತಿಯಿಂದ ನಿರೂಪಿತವಾಗಿದೆ ಮತ್ತು ಬಂಧಾದಿ ಚತುರ್ವಿಧ ವಿಷಯಗಳೂ ಪ್ರತಿಪಾದಿತವಾಗಿವೆ. ಷಟಸ್ಥಲ ಸಿದ್ಧಾಂತದ ದೃಷ್ಟಿಯಿಂದ ಜೀವನು ಆಣವಾದಿ ಮಲತ್ರಯಗಳಿಂದ ಬಂಧಿತನಾಗಿರುವುದೇ ಬಂಧ. ಬಂಧಕಾರಣಗಳಾದ ಮಲತ್ರಯಗಳನ್ನು ಲಿಂಗೋಪಾಸನೆಯಿಂದ ಕಳೆದು ಮೋಕ್ಷಹೊಂದಿ ಶಿವನಲ್ಲಿ ಬೆರೆಯುವದು. ಇದನ್ನೇ ಲಿಂಗಾಂಗ ಸಾಮರಸ್ಯ ಎಂದು ಕರೆಯುವರು. ಜಗತ್ತಿನ ಭೋಗವನ್ನು ಪ್ರಸಾದ ರೂಪದಿಂದ ಸ್ವೀಕರಿಸಿದರೆ ಲಿಂಗಭೋಗೋಪಭೋಗವಾಗುವದು. ಈ ಭೋಗಕ್ರಮವು ಷಟ್‌ಸ್ಥಲ ಮಾರ್ಗದಲ್ಲಿ ತತ್ವಬದ್ಧವಾಗಿ ಪ್ರತಿಪಾದಿಸಲ್ಪಟ್ಟಿರುವದು. ವೀರಶೈವರು ಷಟ್‌ಸ್ಥಲಕ್ಕನುಸರಿಸಿ ೩೬ ತತ್ವಗಳನ್ನಂಗೀಕರಿಸಿರುವರು. ಅವುಗಳಲ್ಲಿ ೧೧ ಲಿಂಗತತ್ವಗಳು, ೨೫ ಅಂಗತತ್ವಗಳು ೧೧ ಲಿಂಗ ತತ್ವಗಳು ಷಟ್‌ಸ್ಥಲಗಳ ಪಡ್ಲಿಂಗ ಸ್ವರೂಪವನ್ನು ಪಡೆಯುವವು ಹಾಗೆಯೇ ೨೫ ಅಂಗ ತತ್ವಗಳು ಜೀವನಿಗೆ ಷಡಂಗಗಳಾಗಿರುವವು. ಬಿಹಿರಿಂದ್ರಿಯಗಳು ಮುಖಗಳಾಗಿ, ಅಂತರಿಂದ್ರಿಯಗಳು ಹಸ್ತಗಳಾಗಿ ಶಬ್ದಾದಿ ವಿಷಯಗಳು ಭೋಗ್ಯ  ಪದಾರ್ಥಗಳಾಗಿ ಪರಿಣಮಿಸುವವು. ಹೀಗೆ ಈ ೨೫ ತತ್ವಗಳು ಆತ್ಮಾದಿ ಷಡಂಗ ಸ್ವರೂಪವನ್ನು ಹೊಂದುವವು. ಈ ಷಡಂಗಗಳಲ್ಲಿರುವ ಆತ್ಮನಿಗೆ ಕ್ರಮವಾಗಿ ಐಕ್ಯ, ಶರಣ, ಪ್ರಾಣಲಿಂಗಿ, ಪ್ರಸಾದಿ, ಮಹೇಶ, ಭಕ್ತನೆಂಬ ನಾಮಗಳುಂಟಾಗುವವು. ಇವು ಆರು ಅಂಗಷಟ್ ಸ್ಥಲಗಳಾಗಿರುವವು. ಇದು ಶೈವರ ೨೬ ತತ್ವ ವಿಚಾರದಿಂದ ಭಿನ್ನ ಎಂಬುದು ಸ್ಪಷ್ಟವಾಗುವದು. ಈ ೩೬ ಸ್ಥಲಗಳನ್ನು ೧೦೧ ಸ್ಥಲವಾಗಿಯೂ ವಿಭಜಿಸುವದುಂಟು. ಇವುಗಳಿಂದ ಅಂಗನ ದೇಹಿ೦ದ್ರಿಯಗಳು ಲಿಂಗದ ದೇಹಿಂದ್ರಿಯಗಳಾಗಿ   ಪರಿಣಮಿಸುವವು. ಅಂಗನು ಮಾಡುವ ಪ್ರತಿಯೊಂದು ಕ್ರಿಯೆಯೂ ಲಿಂಗ ಕ್ರಿಯೆಯಾಗುವದು ಇದೇ ಲಿಂಗಾಂಗ ಸಾಮರಸ್ಯ ಇದನ್ನು ಕಾರ್ಯರೂಪಕ್ಕೆ ತರಲು ಅಷ್ಟಾವರಣ ಪಂಚಾಚಾರಗಳನ್ನು ವೀರಶೈವರು ಕಲ್ಪಿಸಿಕೊಂಡಿದ್ದಾರೆ. ಇವು ವೀರಶೈವದ ವಿಶಿಷ್ಟ ಲಕ್ಷಣಗಳೇ. ಈಗ ಶೈವಕ್ಕೂ ವೀರಶೈವಕ್ಕೂ ಇರುವ ಸಾಮ್ಯ  ವೈಷಮ್ಯಗಳನ್ನು ಈ ರೀತಿ ಗುರುತಿಸಬಹುದು.

ಶೈವ:

  1.  ಚರ್ಯಾ, ಕ್ರಿಯಾ,ಯೋಗ, ಜ್ಞಾನ ಎಂಬ ನಾಲ್ಕು ಬಗೆಯ ಸಾಧನ ಮಾರ್ಗ
  2. ಸ್ಥಾವರಲಿಂಗ ಆರಾಧನೆ
  3. ಶಿವಪ್ರಸಾದ ಶಿವಜ್ಞಾನಗಳು ದೀಕ್ಷೆಯಿಂದ ಲಭಿಸುತ್ತವೆ. ಸಾಧಾರಾ ಆಧಾರಾವರ್ಜಿತ ದೀಕ್ಷೆಗಳು.
  4. ಯೋಗಕ್ಕಿಂತ ಭಕ್ತಿಗೆ ಪ್ರಾಶಸ್ತ್ಯ.
  5. .ಗುರು-ಲಿಂಗಗಳಿಗೆ ಮಹತ್ವ
  6. ಅಷ್ಟಾವರಣಗಳಲ್ಲಿ ಪಾದೋದಕದ ಬದಲಿಗೆ ಲಿಂಗೋದಕ ತೀರ್ಥಕ್ಕೆ ಮಹತ್ವ ರುದ್ರಾಕ್ಷಿ ಭಸ್ಮ, ಮಂತ್ರಗಳಿಗೆ ಆದ್ಯತೆ.
  7.  ಯಜ್ಞ, ಹೋಮ ಆಚರಣೆಗೆ ಪಂಚಯಜ್ಞ ಮಾರ್ಗ ಸ೦ಧ್ಯಾವ೦ದನೆ ಇತ್ಯಾದಿ ನಿಯಮಗಳು.
  8. .ಶಿವನು ಪಶುಪತಿ ಸಚ್ಚಿದಾನಂದ ಸ್ವರೂಪ ಸಗುಣನು. ಜ್ಯೋತಿರ್ಲಿಂಗ ಮೂರ್ತ ಸಾದಾಖ್ಯ.
  9. ಶಿವಪೂಜೆ ಶಿವಭಕ್ತಿ ಶಿವದರ್ಶನದಿಂದ ಭಕ್ತ ಪುನೀತನಾಗುವನು. ಸಾಧನ ಭಕ್ತಿಗೆ ಪ್ರಾಧಾನ್ಯ.
  10.  ಜಗತ್ ಸೃಷ್ಟಿಯಲ್ಲಿ ಪರಶಿವನ ಅವಸ್ಥೆಗಳು ಮೂರು-ನಿಷ್ಕಲ, ಸಕಲ ನಿಷ್ಕಲ, ಸಕಲ.
  11. ಶಿವನ ಲೀಲೆಗಳ ಗುಣಗಾನಕ್ಕೆ ಪ್ರಾಶಸ್ತ್ಯ
  12. ತಾತ್ವಿಕ ವಿಚಾರಗಳ ಚಿಂತನ ಮಂಥನಕ್ಕೆ ಪ್ರಾಶಸ್ತ್ಯ, ಪಂಡಿತ ಮಾನ್ಯರಿಗೆ ಮಹತ್ವ.
  13. ಜಾತಿಭೇಧ ಮೇಲು ಕೀಳು, ಅಸ್ಪೃಶ್ಯತೆಗಳ ಹಳಿಯುವಿಕೆ ಸ್ತ್ರೀಯರಿಗೆ ಸಮಾನತೆ ಇತ್ಯಾದಿಗಳು ತತ್ವಸಿದ್ಧಾಂತಗಳಲ್ಲಿ  ಮಾತ್ರ.
  14. ಪ್ರಭುತ್ವಕ್ಕೆ ಗೌರವ, ರಾಜಾಶ್ರಯ.
  15.  ಇಂದ್ರಿಯ ನಿಗ್ರಹ ಕಠಿಣಯೋಗ, ದೇಹ ದಂಡನೆ ಮೂಲಕ ಶಿವಭಕ್ತಿ ಆಚರಣೆ.
  16.  ದೇವಾಲಯ ಕೇಂದ್ರಿತ ಶಿವಭಕ್ತಿ ಪಾರಮ್ಯ ಪುರೋಹಿತಶಾಹಿತ್ವ, ಅನ್ಯಮತ ದೂಷಣೆ.
  17.  ಕೈಲಾಸಕ್ಕೆ ಪ್ರಾಶಸ್ತ್ಯ,
  18.  ಕಾಯಕ ದಾಸೋಹ ಕಲ್ಪನೆ ಇಲ್ಲ.
  19. ಕಾಯಕ್ಕೆ ಹೆಚ್ಚು ಮಹತ್ವವಿಲ್ಲ.
  20.  ಜೀವಾತ್ಮ ಪರಮಾತ್ಮ ದ್ವೈತಭಾವ.
  21.  ಗುರು, ಶಿವ, ದೀಕ್ಷೆಗಳಿಗೆ ಪ್ರಾಧಾನ್ಯ.
  22.  ಪಂಚಾಚಾರಗಳ ಆಚರಣೆ.
  23.  ಶಿವಯೋಗ ಸಾಧನೆಗೆ ಮಹತ್ವ.
  24.  ಶಿವಯೋಗ ಶಿವ ದರ್ಶನವೇ ಸದ್ಯೋನ್ಮುಕ್ತಿ
  25. ಧರ್ಮ ತತ್ವ ಸಿದ್ಧಾಂತಗಳು ಸಂಸ್ಕೃತದಲ್ಲಿ ಪಂಡಿತಮಾನ್ಯ.       

ವೀರಶೈವ :

  1. ಪಟಟ್ಸ್ಥಲ ಸಾಧನಮಾರ್ಗ ಸಮ ಸಮುಚ್ಚಯ ರೀತಿ.
  2. ಇಷ್ಟಲಿಂಗ ಆರಾಧನೆ
  3. ಪಂಚಾಕ್ಷರಿ ಮಂತ್ರಯುಕ್ತ ದೀಕ್ಷೆಗೆ ಪ್ರಾಶಸ್ಯ, ಎಲ್ಲ ದೀಕ್ಷೆಗಳ ಸಮನ್ವಯ
  4. ಭಕ್ತಿ ಮತ್ತು ಜ್ಞಾನಕ್ಕೆ ಮಹತ್ವ.
  5. ಗುರು-ಲಿಂಗ- ಜಂಗಮರಿಗೆ, ವಿಶೇಷವಾಗಿ ಜಂಗಮರಿಗೆ ಮಹತ್ವ.
  6. ಎಲ್ಲ ಅಷ್ಟಾವರಣಗಳಿಗೂ ಮಹತ್ವ.
  7. ಹೋಮ ಆಚರಣೆ ಇತ್ಯಾದಿ ವರ್ಜಿತ, ಇಷ್ಟಲಿಂಗ ಪೂಜೆ ಶ್ರೇಷ್ಠ. ಲಿಂಗಾಂಗ ಸಾಮರಸ್ಯ ಪ್ರಾಧಾನ್ಯ.
  8. ಮಲತ್ರಯಗಳನ್ನು ಕಳಚಿಕೊಳ್ಳಲು ಇಷ್ಟಲಿಂಗ ಆರಾಧನೆ ಸರಳಮಾರ್ಗ
  9. ಅಂಗನಲ್ಲಿಯ ಶಕ್ತಿಯೇ ಭಕ್ತಿ, ಸಾಧನ ಭಕ್ತಿಗಿಂತ ಸಾಧ್ಯಭಕ್ತಿಗೆ ಪ್ರಾಶಸ್ತ್ಯ.
  10. ಪರಬ್ರಹ್ಮ ಶಿವನ ಮೂರು ಸೂಕ್ಷ್ಮ ರೂಪಗಳು ಶೂನ್ಯ, ನಿಶೂನ್ಯ, ಬಯಲು
  11. ಶಿವಭಕ್ತಿ ಗುರು-ಲಿಂಗ-ಜಂಗಮ ಗುಣಗಾನಕ್ಕೆ ಪ್ರಾಶಸ್ತ್ಯ.
  12. ಸಾಮಾಜಿಕ ಚಿಂತನ ಮಂಥನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಆಚರಣಾ ಮೂಲ ತತ್ವಕ್ಕೆ ಮಾನ್ಯತೆ. 
  13. ಜಾತಿಭೇದ ಮೇಲುಕೀಳು, ಅಸ್ಪೃಶ್ಯತೆಗಳನ್ನು ಹೋಗಲಾಡಿಸಲು ಆದ್ಯತೆ.
  14. ಪ್ರಭುತ್ವ ನಿರಾಕರಣೆ,ರಾಜಾಶ್ರಯ ತಿರಸ್ಕಾರ ಸಂಘಟನಾತ್ಮಕ ಪ್ರತಿಭಟನೆ
  15. ಇಂದ್ರಿಯ ನಿಗ್ರಹ ವಿರೋಧ. ಪರಸ್ತ್ರಿ ಸಂಗ ಖಂಡನೆ, ಅಂತರಂಗ ಬಹಿರಂಗ ಶುದ್ಧಿಗೆ ಆದ್ಯತೆ.
  16. ಇಷ್ಟಲಿಂಗ ಕೇಂದ್ರಿತ ಭಕ್ತಿ, ವೈದಿಕ ಮತ ವಿರೋಧ.
  17. ಇಹಕ್ಕೆ ಪ್ರಾಶಸ್ತ್ಯ.
  18. ಸತ್ಯಶುದ್ಧ ಕಾಯಕ, ದಾಸೋಹ.
  19. ಕಾಯವನ್ನು ಪ್ರಸಾದ ಕಾಯವಾಗಿಸಬೇಕು.
  20. ಲಿಂಗಾಂಗ ಸಾಮರಸ್ಯ ಭಾವ, ಶಕ್ತಿವಿಶಿಷ್ಟಾದ್ವೈತ ಮುಂದುವರಿಕೆ.
  21. ಜಂಗಮಕ್ಕೆ ಹೆಚ್ಚಿನ ಪ್ರಾಧಾನ್ಯತೆ.
  22. ಪಂಚಾಚಾರಗಳ ಕಟ್ಟುನಿಟ್ಟಿನ ಆಚರಣೆ.
  23. ಅಷ್ಟಾಂಗವನ್ನು ಲಿಂಗಾಂಗಯೋಗವಾಗಿಸಿ  ಶಿವಯೋಗವನ್ನು ವಿಸ್ತರಿಸಿದರು
  24. ಎಲ್ಲ ಯೋಗಗಳಿಗಿಂತ ಭಕ್ತಿಯೋಗವೇ ಶ್ರೇಷ್ಠ
  25. ಧರ್ಮ ತತ್ವ ಸಿದ್ಧಾಂತಗಳು ಜನಸಾಮಾನ್ಯರ ಕನ್ನಡ ನುಡಿಯಲ್ಲಿಯೇ ರಚನೆಗೊಂಡು ಜನ ಸಾಮಾನ್ಯರಿಗೆ ಹತ್ತಿರವಾದವು.*

Related Posts