ಕಾರುಣಿಕ ಕುಮಾರಯೋಗಿ ಧಾರವಾಹಿ: ವ್ಯವಸಾಯ-ವಾಣಿಜ್ಯ

ಲೇಖಕರು-ಜ.ಚ.ನಿ

ವಿದ್ಯಾಪರಿಣತನಾದೊಡ

ಮುದ್ಯಮ ವಿರಹಿತನದೆಂತು ಪಡೆವಂ ಸಿರಿಯಂ

ಉದ್ಯಾನದಲ್ಲಿ ತರುವಿಂ

ಹೃದ್ಯಫಲಂ ಮಂತ್ರಬಲದೆ ಬೀಳ್ವುದೆ ಧರೆಯೊಳ್

ನೀತಿ ಮಂಜರಿ

 

“ಕೋಟಿವಿದ್ಯೆಗಳಿಗಿಂತ ಮೇಟಿ ವಿದ್ಯೆಯು ಮೇಲು’ ‘ಕರ್ಷತೋ ನಾಸ್ತಿ ದುರ್ಭಿಕ್ಷಂ ಎಂಬ ಗೈಮೆಯ ಹಿರಿಮೆಯನ್ನು ಬೆಳಸಿನ ಭಾಗ್ಯವನ್ನು, ಯಥಾರ್ಥವಾಗಿ ಗಮನಿಸಿದ ಸ್ವಾಮಿಗಳು ಅತಿವಿರಳ. ಕುಮಾರಯೋಗಿಗಳು ಕೃಷಿಯ ಮೇಲೆಯು ಕಣ್ಣು ಚೆಲ್ಲಿದ್ದರೆಂದರೆ ಅನೇಕರಿಗೆ ಆಶ್ಚರ್ಯವಾಗಬಹುದು; ಆಗುವಂತಹದೆ.

 

ಸ್ವಾಮಿಗಳವರ ಸಮ್ಯಕ್ ದೃಷ್ಟಿ ಜೀವಸೃಷ್ಟಿಯ ಮೂಲವಾವುದೆಂಬುದನ್ನು ಕಂಡುಕೊಂಡಿತ್ತು. ಜೀವಶಕ್ತಿ ಯಾವುದರಲ್ಲಿದೆಯೆಂಬುದನ್ನು ಅರಿತಿತ್ತು. ಅನ್ನ ದೇವರ ದೇವರು. ಅದಕ್ಕಿನ್ನು ಬೇರೆ ದೇವರಿಲ್ಲ. ಅದನುಳಿದು ಬಾಳುವ ಬಗೆ ಬೇರಿಲ್ಲ. ಬೆಳಗುವ ಜ್ಯೋತಿ ಬೇರೊಂದರಲ್ಲಿಲ್ಲ, ಎಂಬುದನ್ನು ಸ್ವಾಮಿಗಳವರು ಚನ್ನಾಗಿ ಗಮನಿಸಿದ್ದರು. ಅದಕ್ಕಾಗಿ ಅವರು ವ್ಯವಸಾಯದತ್ತ ವಿಶೇಷ ಲಕ್ಷ್ಯವಿಟ್ಟಿದ್ದರು.

 

ಕೃಷಿ ವಿಜ್ಞಾನವು ಕನ್ನಡ ನಾಡಿಗೆ ಬಂದ ಪ್ರಥಮದಲ್ಲಿಯೆ ಅದರ ಉಪಯೋಗವನ್ನು ಪಡೆದವರು ಸ್ವಾಮಿಗಳವರು. ಊಳುವ ಯಂತ್ರದ ನೇಗಿಲ (ಟ್ರ್ಯಾಕ್ಟರ್)ನ್ನು ಹೆಚ್ಚು ಹಣವಿಕ್ಕಿ ತರಿಸಿ ಮೊತ್ತಮೊದಲು ಶಿವಯೋಗಮಂದಿರದಲ್ಲಿ ನೆಲವನ್ನು ಊಳಿಸಿದರು. ಹೀಗೆಯೆ ಬಗೆಬಗೆಯಾಗಿ ನೆಲವನ್ನು ಹದಗೊಳಿಸುವ ಬಲಗೊಳಿಸುವ ಪ್ರಯೋಗಗಳನ್ನು ಮಾಡಿಸುತ್ತಿದ್ದರು. ನೂರಾರು ದನಕರುಗಳನ್ನು ಸಾಕಿ ಗೊಬ್ಬರ ಒದಗಿಸುತ್ತಿದ್ದರು. ನೀರಾವರಿಗಾಗಿ ನೀರೆತ್ತುವ ಯಂತ್ರವನ್ನು ತರಿಸಿ ಹಾಕಿಸಿದ್ದರು. ಮೈಸೂರು ಸಂಸ್ಥಾನದ ಕಪ್ಪನಹಳ್ಳಿಯಲ್ಲಿ ಸ್ಥಾಪಿಸಿದ ಶಾಖಾಮಂದಿರದಲ್ಲಿ ಎಂಜನ ಸಹಾಯದಿಂದ ನೀರೆತ್ತಿ ಕಬ್ಬು ಬೆಳೆವಂತೆ ಮಾಡಿದರು. ಅಲ್ಲದೆ ಶಿವಯೋಗಮಂದಿರದ ಬಳಿ ಹಳೆಯ ಮಾಕೂಟದ ನೀರಿನಿಂದ ಅಲ್ಲಿ ಒಂದು ಬಾಳೆಯ ಬನವನ್ನು ಬೆಳೆಯಿಸಿದ್ದ ಸಂಗತಿಯನ್ನು ಈ ಮೊದಲೆ ಉಲ್ಲೇಖಿಸಲಾಗಿದೆ.

 

ಎಲ್ಲಕ್ಕೂ ವ್ಯವಸಾಯ ಮೂಲೆಂಬ ಮರ್ಮವನ್ನು ಚನ್ನಾಗಿ ಅರಿತಿದ್ದರು. ಅದು ಕಾರಣ ಬಲ್ಲ ವ್ಯವಸಾಯಗಾರರಿಂದ ಬೇಸಾಯದ ರಹಸ್ಯವನ್ನು ಕೇಳಿ ತಿಳಿದು ಕೊಳ್ಳುತ್ತಿದ್ದರು. ಸಂಸ್ಥೆಯ ಒಕ್ಕಲುತನವು ಉತ್ತಮ ಸ್ಥಿತಿಗೆ ಬರಬೇಕೆಂದು ಪಾಟ ಪಡುತ್ತಿದ್ದರು. ವ್ಯವಸಾಯಕ್ಕೆ ಬೇಕಾದ ಎತ್ತು ಎಮ್ಮೆ ಹಸುಗಳ ಮೇಲೆ ಸ್ವಾಮಿಗಳವರಿಗೆ ಹೆಚ್ಚು ಪ್ರೇಮವಿತ್ತು. ಅವುಗಳ ರಕ್ಷಣೆಯತ್ತ ಹೆಚ್ಚು ಲಕ್ಷ್ಯ ಕೊಡುತ್ತಿದ್ದರು. ಅದನ್ನ ಕಾಪಾಡುವವರ ಮೇಲೆ ಅವರ ಕೃಪಾದೃಷ್ಟಿಯಿರುತ್ತಿತ್ತು.

 

ಆಹಾರ ಮುಗ್ಗಟ್ಟಿಲ್ಲದ ಆ ಕಾಲದಲ್ಲಿಯೇ ಸ್ವಾಮಿಗಳವರು ಗೈಮೆಗೆ  ಗಮನಿಸಬೇಕಾದರೆ ಅವರ ದೃಷ್ಟಿ ಎಷ್ಟು ಆಳವಾದದ್ದು. ಅನನ್ಯ ಸಾಧಾರಣವಾದದ್ದು, ಎಂಬುದನ್ನು ವಾಚಕರೆ ಊಹಿಸಿಕೊಳ್ಳಲಿ; ಸ್ವಾಮಿಗಳವರ ಈ ದೂರದೃಷ್ಟಿಗೆ ತಲೆದೂಗಲಿ.

 

ಎರಡನೆಯದಾಗಿ ‘ದ್ರವ್ಯಮೂಲಂ ಜಗತ್’ ಎಂಬುದನ್ನು ಅವರು ಮರೆತಿರಲಿಲ್ಲ. ಯಾವುದಕ್ಕು ದುಡ್ಡುಬೇಕು. ದುಡ್ಡಿದ್ದವನೆ ದೊಡ್ಡಪ್ಪ ಹಣವೇ ಗುಣ, ಅಂತಹ ಹಣ ಬರುವ ದಾರಿ ವಾಣಿಜ್ಯ.

 

ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ

ಹರದ ಕುಳ್ಳಿರ್ದ ನಮ್ಮ ಮಹದೇವಶೆಟ್ಟಿ…

 

ಎಂಬುದಾಗಿ ಹೇಳಿ ಬಸವಣ್ಣನು ಹರನನ್ನೆ ಹಿರಿಯ ಹರದನನ್ನಾಗಿ ಮಾಡಿದ್ದಾನೆ. ಪರಮಾತ್ಮನಿಗೇನೆ ವ್ಯಾಪಾರದ ಅಗತ್ಯ ಇರುವಾಗ ಉಳಿದವರ ಮಾತೇನು ? ಒಂದಿಲ್ಲೊಂದು ರೀತಿಯಲ್ಲಿ ವ್ಯಾಪಾರ ಎಲ್ಲರಿಗೂ ಬೇಕು. ಅದು ಪದಾರ್ಥಕ್ಕೆ ಪದಾರ್ಥ ವಿನಿಮಯವಾಗಿಯಾದರು ಇರಬಹುದು ಇಲ್ಲವೆ ಪದಾರ್ಥಕ್ಕೆ ಪರಮಾರ್ಥ ವಿನಿಮಯವಾಗಿಯಾದರು ಇರಬಹುದು. ಈ ದೃಷ್ಟಿಯಿಂದ ನೋಡುವಲ್ಲಿ ಚತುರಾಶ್ರಮಿಗಳು ವ್ಯಾಪಾರಕ್ಕೆ ಹೊರಗಾಗುವಂತಿಲ್ಲ. ಅಂತೆಯೇ ಅಣ್ಣ ಈ ದೃಷ್ಟಿಯಲ್ಲಿ ಹರನೂ ಹರದನಾಗಿದ್ದಾನೆ.

 

ಈ ತತ್ವಕ್ಕನುಸರಿಸಿ ಸ್ವಾಮಿಗಳವರು ಒಂದು ಅಂಗಡಿಯನಿಕ್ಕಿಸಿದರು. ವ್ಯಾಪಾರ ಸಾಗುತ್ತಿತ್ತು. ‘ವ್ಯಾಪಾರಂ ದ್ರೋಹ ಚಿಂತನ’ ಎಂದು ಜನರು ಹೇಳುವದನ್ನು ಸ್ವಾಮಿಗಳವರು ಒಪ್ಪುತ್ತಿರಲಿಲ್ಲ. ದ್ರೋಹ ಮಾಡುವುದು ವ್ಯಾಪಾರದ ಲಕ್ಷಣವೇ ಅಲ್ಲ. ಪರಸ್ಪರ ಹಿತಚಿಂತನೆಯೆ ವ್ಯಾಪಾರದ ಮೂಲೋದ್ದೇಶ. ಅದು ಹೊರಟು ಹೋಗಿ ಬರುಬರುತ್ತ ದ್ರೋಹ ಚಿಂತನೆಯ ವ್ಯಾಪಾರದ ಮೂಲವೆಂಬ ದುರ್ಭಾವನೆಗೆ ದುರ್ವತ್ತಿಗೆ ಇಳಿದಿದೆ ಜಗತ್ತು ಎಂದು ಅಪ್ಪಣೆ ಕೊಡಿಸುತ್ತಿದ್ದರು. ಸಂಸ್ಥೆಯು ಅಂಗಡಿಯಲ್ಲಿ ಇದು ನಡೆಯಬಾರದೆಂಬುದು ಶ್ರೀಗಳವರ ಘನೋದ್ದೇಶವಾಗಿತ್ತು . ಅಂಗಡಿಯನ್ನು ಈಚಿಗೆ ಕಮೀಟಿಯವರು ತೆಗೆದು ಹಾಕಿದ್ದಾರೆ. ಸ್ವಾಮಿಗಳವರು ಬಾಗಲಕೋಟೆಯಲ್ಲಿ ಜಿನ್ನಿಂಗ್ ಪ್ರೆಸ್ ಒಂದನ್ನು ಸ್ಥಾಪಿಸಿದ್ದಾರೆ. ಅದು ಈವಾಗಲು ಸುವ್ಯವಸ್ಥಿತವಾಗಿ ಸಾಗುತ್ತಿದೆ. ಅದನ್ನು ಮ್ಯಾನೇಜರ್ ಶ್ರೀ ಬಳ್ಳಾರಿ ಬಸಪ್ಪನವರು ನಡೆಯಿಸಿಕೊಂಡು ಬರುತ್ತಿದ್ದಾರೆ. ಅದುವೆ ಈಗ ಶಿವಯೋಗ ಮಂದಿರದ ನಿಜವಾದ ಆಸ್ತಿ ಅದರಿಂದಲೆ ಇದೀಗ ಶಿವಯೋಗಮಂದಿರ ಕಾರ್ಯನಿರ್ವಹಣ, ಅದರ ಆದಾಯದಿಂದಲೇ ಸಂಸ್ಥೆಯು ತನ್ನ ಸಾಲವನ್ನೆಲ್ಲ ತೀರಿಸಿಕೊಂಡು ಈಗ ಸರ್ವಸ್ವತಂತ್ರವಾಗಿ ನಿಂತಿದೆ. ಹೀಗೆ ಸ್ವಾಮಿಗಳವರಲ್ಲಿ ವ್ಯವಸಾಯ ವಾಣಿಜ್ಯ ರೂಪ ಔದ್ಯೋಗಿಕ ಪ್ರೇಮವಿತ್ತು.

Related Posts