ಕಡಕೋಳ ಮಡಿವಾಳಪ್ಪನವರು

ಬಿ.ಮಹಾದೇವಪ್ಪ

ಕ್ರಿ.ಶ. ೧೭೮೦ರಿಂದ ೧೮೫೫ರವರೆಗೆ ಬಾಳಿ ಬದುಕಿದ ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಕ್ರಾಂತಿಕಾರಿ ಕವಿಗಳು, ಬಂಡಾಯ ಕವಿಗಳು ಮತ್ತು ಅನಿಷ್ಟಗಳು ಕಂಡಾಗಲೆಲ್ಲ ಖಂಡತುಂಡವಾಗಿ ಖಂಡಿಸಿದ ಪ್ರಚಂಡಕವಿಗಳು, ಕಲಬುರ್ಗಿ ಜಿಲ್ಲೆ ಅಫ್ಜಲಪುರ ತಾಲೂಕಿನ ಬಿದನೂರು ಗ್ರಾಮದ ವಿಧವೆ ಗಂಗಮ್ಮ ಮತ್ತು ಮಠದ ವಿರೂಪಾಕ್ಷ ಸ್ವಾಮಿಗಳ ಸಂಬಂಧದಿಂದ ಹುಟ್ಟಿದ ಶ್ರೀ ಮಡಿವಾಳಪ್ಪನವರನ್ನು ಸಮಾಜವು ತೀಕ್ಷ್ಣ ದೃಷ್ಟಿಯಿಂದ ನೋಡಿದಾಗ, ಶ್ರೀ ಮಡಿವಾಳಪ್ಪನವರು ಸಮಾಜವನ್ನು ಬಹಳ ತೀಕ್ಷ್ಣ ದೃಷ್ಟಿಯಿಂದ ಅವಲೋಕಿಸಿದರು. ಅವರ ವಿಧವೆಯ ಮಗನಾಗಿ ಎದುರಿಸಿದ ಹತ್ತು ಹಲವು ಕಹಿ ಅನುಭವಗಳೇ ಕಾವ್ಯಮಯವಾಗಿ ಹರಿದು ಬಂದವು. ವಿಧವೆಯ ಮಗನೆಂಬ ಕಾರಣದಿಂದ ಸಂಪ್ರದಾಯಪ್ರಿಯ ಜಂಗಮರಾರೂ ಬಾಲಕ ಮಡಿವಾಳಪ್ಪನವರ ಕೊರಳಿಗೆ ಇಷ್ಟಲಿಂಗ ಕಟ್ಟಲು ಮುಂದೆ ಬರದಿದ್ದಾಗ ಲಿಂಗವಿರಹದ ನೋವೇ ಭಕ್ತಿಯ ಪ್ರವಾಹವಾಗಿ ಹೊರಹೊಮ್ಮಿತು. ಮತ್ತು ಸಂಪ್ರದಾಯನಿಷ್ಠರ ಬಗೆಗಿನ ಕ್ರೋಧವೇ ಬಂಡಾಯಗಾರನಾಗಿ ಕಂಡರಿಸಿತು

.

“ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ, ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಪೂಜಿಸಿ, ವಂದಿಸಿ, ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯʼʼ ಎಂದು ಅಣ್ಣ ಬಸವಣ್ಣನವರು ಹೇಳಿದಾಗ್ಯೂ ಇವರು ಕುಲಛಲದ ಮಾತನಾಡುವರಲ್ಲಾ ಎಂದು ಸಿಟ್ಟಿನಿಂದ ಮಾನವರ ಜನನ ರೀತಿಯನ್ನೆಲ್ಲ ತರ್ಕಬದ್ಧವಾಗಿ ಜಾಲಾಡಿದರು. ಅವರ ಒಂದು ಪದ್ಯ ಹೀಗೆ ಬರುತ್ತದೆ:

ಮುಡುಚೆಟ್ಟಿನೊಳು ಬಂದು ಮುಟ್ಟುತಟ್ಟು ಅನ್ನುತೀರಿ

ಮುಡುಚೆಟ್ಟೆಲ್ಲ್ಯಾದ ಹೇಳಿರಣ್ಣ

ಮುಟ್ಟಾದ ಮೂರುದಿನಕ ಹುಟ್ಟಿಬಂದಿರಿ ನೀವು

ಮುಡುಚೆಟ್ಟೆಲ್ಲ್ಯಾದ ಹೇಳಿರಣ್ಣ

ತೊಗಲೊಳು ತೊಗಲು ಹೊಕ್ಕು ತಗಲಿ ಬಂದೀರಿ. ನೀವು

ಅಗಲ ಮಾತಾಡುವುದೇನಣ್ಣ?

ಬಗೆಯ ತಿಳಿಯದೆ ಇದರ ಬಗದು ಮಾತಾಡಿದರೆ

ನಗೆಗೇಡಿಯಾಗುತಾದಣ್ಣ

ಎಲವಿನಾಲಯದೊಳು ಒಳಗ್ಹೊಕ್ಕು ನೀ ಕುಂತು

ಒಲಿದಂತೆ ಆಡಬೇಡಣ್ಣ

 ಎಲುವು ತೊಗಲು ಮಜ್ಜೆ ಮಲ ಮೂತ್ರ ಮಾಂಸವು

ನಿನ್ನೊಳಗೆ ಕಾಣುತಾದಣ್ಣ

ಹೀಗೆ ಶ್ರೀಮಡಿವಾಳಪ್ಪನವರು ಜಾತಿ ಪಾರಮ್ಯದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಮರವನ್ನೇ ಸಾರಬೇಕಾಗುತ್ತದೆ “ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಂ ದ್ವಿಜಮುಚ್ಚತೇ’ʼ ಎಂಬ ಶಾಸ್ತ್ರೋಕ್ತ ಮಾತನ್ನು ಅಲಕ್ಷಿಸಿ ಉಚ್ಚ ನೀಚ ಎಂದು ಒಣ ಅಭಿಮಾನದಿಂದ ಬೀಗುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಅನೇಕ ಹಾಡುಗಳು ಉಪಲಬ್ದ ಇವೆ.

೧. “ಊಚದ್ಯಾವದೋ ಇದರೊಳು ನೀಚದಾವದೋ?

ನಾಚುವದ್ಯತಕೆ ಎನ್ನಮುಂದೆ ಭೂಚರ್ಯಕೆ ಬಂದಮೇಲೆ ||ಪ||

ತುಲ್ಲು ತುಣ್ಣಿಲಿಂದ ಹುಟ್ಟಿ, ಹೊಲ್ಲಹೊವೆಯ ದೇಹ ತೊಟ್ಟಿ

ಬಲ್ಲೆನಂತೊ ಬಿಂಕದಿಂದೆ, ವಳ್ಲಿವಳ್ಳಿ ಸುಳ್ಳೆ ಕೆಟ್ಟಿ ||೧||

೨.ದಾವದೋ, ಕುಲದಾವದೋ?

ಕುಲದ ವಿವರವ ತಿಳಿದ್ಹೇಳೆಲೋ    ಮೂಢ  || ಪ||

ಒಂಬತ್ತು ತಿಂಗಳು ತಾಯಿಯ ಹಾಟು

ತಂದಿದು ಒಂದಿಷ್ಟು ಅರಗದ್ಯಾಣದಷ್ಟು

ಅದರೊಳು ಕೂಡಿ ಬಂದಾದ ಜೀವ ಒಂದಿಷ್ಟು

ಮೂಬೆರಕಿ ಮೂಳ ನಿನಗ್ಯಾಗಿಷ್ಟು ನೇಟು ||೧||

೩. ಐತಾನದ್ಹಮ್ಮೇನೂ ಚುಮ್ಮಾ| ದೇಹ

ಮೈಥುನದಿಂದ ಆವದಿ ತಾಯಿ-ತುದಿಯ ಸೊಮ್ಮ

ಶ್ರೀ ಕಡಕೋಳ ಮಡಿವಾಳಪ್ಪನವರನ್ನು ಆ ಕಾಲದಲ್ಲಿ ಎಲ್ಲರೂ ತುಚ್ಛ ದೃಷ್ಟಿಯಿಂದಲೇ ನೋಡಲಿಲ್ಲ, ಹೊನ್ನನ್ನು ಚೆನ್ನಾಗಿ ಪರೀಕ್ಷಿಸುವ ಜನರು ಆ ಕಾಲದಲ್ಲಿಯೂ ಇದ್ದರು. ಬಿದನೂರಿನ ಶ್ರೀಮಲ್ಲಿಕಾರ್ಜುನಪ್ಪಗೌಡರು ತಾಯಿ ಗಂಗಮ್ಮ ಮತ್ತು ಮಗ ಮಡಿವಾಳನನ್ನು ಬಹಳ ಮಮತೆ ಕಕ್ಕುಲಾತಿಯಿಂದ ನೋಡಿಕೊಂಡರು. ಶ್ರೀ ಮಡಿವಾಳಪ್ಪನವರ ದೈವಭಕ್ತಿ ಮತ್ತು ಪರಮ ವಿರಕ್ತಿಯನ್ನು ಪರಿಶೀಲಿಸಿದ ಅರಳಗುಂಡಿಗೆ ಶ್ರೀ ಶರಣಬಸವೇಶ್ವರರು ತಮ್ಮ ಗುರು ಮರುಳಾರಾಧ್ಯರ ಮೂಲಕ ಅವರಿಗೆ ಇಷ್ಟಲಿಂಗ ಧಾರಣೆ ಮಾಡಿಸಿದರು. ಚಿಮಣಗೇರಿ ಗುಡ್ಡದ ಮಠಾಧೀಶರು ಅವರ ತಪೋನುಷ್ಠಾನ -ಶಿವಯೋಗ ಪರಾಕಾಷ್ಠೆಯನ್ನು ಅನುಲಕ್ಷಿಸಿ ಜಂಗಮದೀಕ್ಷೆ ನೀಡಿದರು. ಶ್ರೀ ಶರಣಬಸವೇಶ್ವರರ ಜೊತೆಗೆಯೇ ಜೀವನ ಸಾಗಿಸಬೇಕೆಂದಾಗ ಅರಳಗುಂಡಿಗೆಯ ಹಳೇಪ್ಯಾಟಿ ಬಸಯ್ಯನವರಂತಹ ಪಾಖಂಡಿಗಳು ಕುಲನೆಲಿ ಎತ್ತಿ  ಛೇಡಿಸುತ್ತಾ ಇಲ್ಲದ ಅಪವಾದವನ್ನು ಹೊರಿಸಿ ತೊಂದರೆ ಕೊಟ್ಟರು. ಶ್ರೀ ಶರಣಬಸವೇಶ್ವರರಿಗೆ ತೊಂದರೆಯಾಗಬಾರದೆಂದು ಅರಳಗುಂಡಿಗೆಯನ್ನು ತ್ಯಜಿಸಿ ಜಂಬೇರಾಳ ಎಂಬ ಗ್ರಾಮಕ್ಕೆ ಬಂದು, ಅಲ್ಲಿಂದಲೂ ನಿರ್ಗಮಿಸಿ, ಕೋಣ ಸಿರಸಿಗೆಗೆ ಬಂದು, ಅಲ್ಲಿಯೂ ಅಜ್ಞ ಜನರ ಉಪಟಳ ಜಾಸ್ತಿ ಆದಾಗ ಕಡಕೋಳ ಗ್ರಾಮಕ್ಕೆ ಬಂದು ಅಲ್ಲಿಯ ಆಹ್ಲಾದಕರ ಪರಿಸರಕ್ಕೆ ಮನಸೋತು ಒಂದು ಮಠ ಕಟ್ಟಿಕೊಂಡು ವಿರಕ್ತ  ಜಂಗಮರಾಗಿ ನೆಲೆನಿಂತರು. ಅದೇ ಅವರಿಗೆ ಕಡೆಯ ಕೊಳ್ಳವಾಯಿತು. ಅಲ್ಲಿಯೇ ಕ್ರಿ.ಶ. ೧೮೫೫ರಲ್ಲಿ ಸಜೀವ ಸಮಾಧಿ ಹೊಂದಿದರು.

ಮನುಷ್ಯ ಎಲ್ಲಿ ಹುಟ್ಟಿದ ಯಾರಿಗೆ ಹುಟ್ಟಿದ ಎಂಬವುಗಳು ಮುಖ್ಯವಾದವುಗಳು ಅಲ್ಲವೇ ಅಲ್ಲ, ಆತ ಹೇಗೆ ಬಾಳಿದ, ಪರರನ್ನು ಹೇಗೆ ಬಾಳಗೊಟ್ಟ ಎಂಬುವು ಮನುಷ್ಯ ಜೀವನದ ಸಾರ್ಥಕತೆಯನ್ನು ಸಾರಿ ಹೇಳುತ್ತವೆ. ಶ್ರೀ ಮಡಿವಾಳಪ್ಪನವರು ಕಡಕೋಳದಲ್ಲಿ ನೆಲೆನಿಂತ ನಂತರ ತಾವು ನಂಬಿದ ತತ್ವಗಳಿಗೆ ಬದ್ಧರಾಗಿ, ಕಲ್ಯಾಣದ ಶಿವಶರಣರ ಆದರ್ಶ ಮಾರ್ಗ,  ಪಥಿಕರಾಗಿ, ಕಡಕೋಳದಲ್ಲಿಯೇ ಒಂದು ಆಧುನಿಕ ಅನುಭವ ಮಂಟಪ ರಚಿಸಿಕೊಂಡು ಭಕ್ತಿಪಕ್ಷ ರೂಪಿಸಿಕೊಳ್ಳುತ್ತಾರೆ.  ಹನ್ನೆರಡನೆಯಶತಮಾನದ ಅನುಭವ ಮಂಟಪಕ್ಕಾದರೋ ಇಷ್ಟಲಿಂಗ ಕಡ್ಡಾಯವಾಗಿತ್ತು. ಆದರೆ ೧೯ನೆಯ ಶತಮಾನದ ಕಡಕೋಳ ಅನುಭವ ಮಂಟಪದಲ್ಲಿ ಕಾಲಮಾನಕ್ಕನುಸರಿಸಿ ಇಷ್ಟಲಿಂಗ ಐಚ್ಛಿಕವೆನಿಸುತ್ತೆನಿಸುತ್ತದೆ. ಅವರ ಶಿಷ್ಯ ಬಳಗದಲ್ಲಿ ಬ್ರಾಹ್ಮಣ ಬೈನೂರು, ಕೃಷ್ಣಪ್ಪನವರು, ಕಬ್ಬಲಿಗರಜಾತಿಯ ಕಡ್ಲೆವಾಡದ ಸಿದ್ಧಪ್ಪನವರು, ಮುಸಲ್ಮಾನ ಜಾತಿಯ ಚೆನ್ನೂರ ಜಲಾಲ ಸಾಹೇಬರು, ಮೋಟನಹಳ್ಳಿಯ ಹಸನಸಾಹೇಬರು, ಶೀಲವಂತ ಹಂಗರಗಿ ಬಸವಲಿಂಗಪ್ಪನವರು, ರೆಡ್ಡಿಕುಲದ ಕೋಡಿ ರಾಮಲಿಂಗಾರೆಡ್ಡಿಯವರು-ಹೀಗೆ ಅಸಂಖ್ಯಾತ ಜನರು ಅವರ ಸುತ್ತಮುತ್ತ ನೆರೆದು ಅನುಭಾವದ ಅಡಿಗೆಯನ್ನು ಮಾಡಿ ಸವಿಯುತ್ತಿರುತ್ತಾರೆ. “ಎಂಥ ಮಾನವ ಜನ್ಮ ಇದು ಮಾಯಿಗೆ ಸೋತಾದ” ಎಂಬ ವಿಷಾದದೊಡನೆ ಮಾನವ ಜನ್ಮದ  ಸಾರ್ಥಕತೆಯ ಚಿಂತನೆಗಳು ಅಲ್ಲಿ ನಡೆಯುತ್ತವೆ. “ಮಚ್ಚಲಿ ಹೊಡಿರಿವಗ, ಕಚ್ಚೆಗಡುಕ ನಿಜದೆಚ್ಚರ ಅರಿಯದೆ ಹುಚ್ಚು  ನಾಯಾಂಗ ಮನಿ ಮನಿ ತಿರುಗವಗ” ಎಂಬ ರೊಚ್ಚಿನ ನಿರ್ಧಾರಗಳು ಅಲ್ಲಿ ಆಗುತ್ತವೆ. “ಏತರ ಕಟಿಪಿಟಿ ಒಂದಿನ ಹೋಗದು ಲಟಿಪಿಟಿ ಸಂಸಾರ ಮಾಡ್ತೀರಿ ಜಟಿಪಿಟಿ, ಆದರ ಭಕ್ತಿ ಮಾಡುದು ತುಟುಮಿಟಿ’ ಎಂಬಂತಹ ಅನಿತ್ಯ ಸಂಸಾರದ ಬೆತ್ತಲೆ ಚಿತ್ರಗಳು ಅಲ್ಲಿ ಮೂಡಿ ನಿಲ್ಲುತ್ತಿದ್ದವು.

ಮನುಷ್ಯ ಮಾಯೆಯ ಜ್ವಾಲೆಗೆ ಬೀಳುವದಾಗಲಿ, ಹಲವು ಹಗರಣಗಳನ್ನು ಮಾಡುವುದಾಗಲಿ ಸುಳ್ಳು, ಮೋಸ, ವಂಚನೆಗೆ ಒಳಗಾಗುವುದಾಗಲಿ, ರೂಪ ಮನುಷ್ಯನದಿದ್ದರೂ ನಾಯಿ, ಕೋತಿ, ಕತ್ತೆಗಳ ಹಾಗೆ ವರ್ತಿಸುವುದಾಗಲಿ, ಸೃಶ್ಯಾಸೃಶ್ಯ ಆಚರಿಸುವುದಾಗಲಿ ಜ್ಞಾನದ ಕೊರತೆಯೆಂಬ ನಿತ್ಯ ಸತ್ಯವನ್ನು ಕಂಡು ಕೊಂಡ  ಮಡಿವಾಳಪ್ಪನವರು ಮಾನವರ ಜ್ಞಾನಾರ್ಜನೆಗೆ ವಿಶೇಷ ಮಹತ್ವಕೊಟ್ಟರು. “ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ ವೇದ ಶಾಸ್ತ್ರ ಪುರಾಣಾಗಮಗಳೆಂಬ ನೇಣ ಕಟ್ಟಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ, ತೊಟ್ಟಿಲು ಮುರಿದು ನೇಣ ಹರಿದು, ಜೋಗುಳ ನಿಂದಲ್ಲದೆ ಗುಹೇಶ್ವರ ಲಿಂಗವ ಕಾಣಬಾರದು” ಎಂಬ ಅಲ್ಲಮ ಪ್ರಭುಗಳ ಮಾತನ್ನು ಎತ್ತಿ ಹಿಡಿದು ಶ್ರೀ ಮಡಿವಾಳಪ್ಪನವರು ತಮ್ಮ ಹತ್ತಿರ ಬಂದ ಮುಮುಕ್ಷುಗಳಿಗೆಲ್ಲ ಬ್ರಹ್ಮ ಜ್ಞಾನಿಗಳಾಗಬೇಕೆಂದೇ ಬೋಧಿಸುತ್ತಿದ್ದರು. ಜ್ಞಾನವನ್ನು ಆರಾಧಿಸುವದು, ಅಜ್ಞಾನವನ್ನು ನಿಯಂತ್ರಿಸುವದು ಅವರ ಪ್ರಮುಖ ಉಪದೇಶವಾಗಿರುತ್ತಿತ್ತು. ಈ ಕೆಳಗಿನ ಹಾಡಿನಲ್ಲಿ ಬಹಳ ಮಾರ್ಮಿಕವಾಗಿ ತಿಳಿಸಿದ್ದಾರೆ.

ಧನವ ಗಳಿಸಬೇಕು ಇಂಥಾದ್ದು| ಈ ಜನರಿಗೆ ತಿಳಿಯದಂಥಾದ್ದು

ಅನುದಿನ ಅಜಹರಿಮನುಮುನಿಗಳು ಎಲ್ಲ| ಹೌದು, ಹೌದು, ಹೌದೆಂಬಂಥದ್ದು

ಕೊಟ್ಟರೆ ಹೋಗದಂಥಾದ್ದು  |ಅದು ಇಟ್ಟರೆ ಕೊಳೆಯದಂಥಾದ್ದು

ಕಟ್ಟಿದ ಗಂಟು ಬಯಲೊಳಗಿಟ್ಟರೂ | ಮುಟ್ಟಲಿಬಾರದಂಥಾದ್ದು. 

ಜ್ಞಾನ ಸಂಪಾದನೆ ಜತೆಗೆ ಅಜ್ಞಾನದ ಹೋಗಲಾಡಿಸುವಿಕೆಯೂ ಅಷ್ಟೇ ಮಹತ್ವಪೂರ್ಣವಾದುದು. ಅಜ್ಞಾನ ಇರುವವರೆಗೆ ಜ್ಞಾನಕ್ಕೆ ಜಾಗ ಇರುವುದಿಲ್ಲ. ಅಜ್ಞಾನ ತನ್ನಿಂದ ತಾನೇ ಆವರಿಸಿಕೊಂಡು ಬರುವುದರಿಂದ ಅದರ ನಿಯಂತ್ರಣಕ್ಕೆ ನಾವು ಗುರು ಮತ್ತು ಪರಮಾತ್ಮನನ್ನು ಮೊರೆ ಹೋಗಬೇಕಾಗುತ್ತದೆ. ಈ ಕೆಳಗಿನ ಪದ್ಯದಲ್ಲಿ ಅವರು ಅದನ್ನೇ ಮಾಡಿದ್ದಾರೆ.

ನಾನಿತ್ತಲೆಳೆದರೆ ತಾನತ್ತಲೆಳೆಯುವದು! ಇನ್ನೇನಿನ್ನೇನೋ

ಅಜ್ಞಾನೆಂಬುವ ಕೋಣ ಸಾಧ್ಯವಾಗದು ನೋಡಾ| ಇನ್ನೇನಿನ್ನೇನೊ

ಹಸಿ ಹುಲ್ಲ ಕಂಡಲ್ಲಿ ಬಿಸಿಲೊಳು ಮೇಯುವುದು | ಇನ್ನೇನಿನ್ನೇನೊ

ಮುಂದೆ ಸಸಲ ಒಡೆದೀತೆಂದು ಕುಶಲ ತಿಳಿಯದು ಕೋಣ | ಇನ್ನೇನಿನ್ನೇನೂ

ಮುಪ್ಪುರಿಕೂಡಿಸಿಮುಗದಾತರ ಹಾಕಿದ್ದೆ. | ಇನ್ನೇನಿನ್ನೇನೋ

ಜಪ್ಪಿಸಿ ಹಿಡಿದರೆ ತಪ್ಪಿಸಿಕೊಂಡು ಹೋಯಿತು |. ಇನ್ನೇನಿನ್ನೇನೊ

ಮೂರಾರು ಕೋಣನೊಳು ತಾನೆ ತುಂಬಿತೋ ಕೋಣ  |ಇನ್ನೇನಿನ್ನೇನೊ,

ನಮ್ಮ ಧೀರ ಮಹಾಂತೇಶ ಗಮಾರಿಬಿಟ್ಟೆನು ಕೋಣ’ | ಇನ್ನೇನಿನ್ನೇನೊ

ಜನಪದರ ದೈನಂದಿನ ಜೀವನಕ್ಕೆ ಅನ್ವಯಿಸಿ ಅನೇಕ ಬೆಡಗಿನ ಹಾಡುಗಳನ್ನು ಶ್ರೀ ಮಡಿವಾಳಪ್ಪನವರು ಬಹಳ ಅರ್ಥಗರ್ಭಿತವಾಗಿಯೂ ಬಹಳ ತತ್ವಗರ್ಭಿತವಾಗಿಯೂ ಬರೆದಿದ್ದಾರೆ. ನೋಡಲಿಕ್ಕೆ ಅವು ಸಂಸಾರದ ತಾಪತ್ರಯಗಳನ್ನು  ಬಣ್ಣಿಸುವ ಹಾಡುಗಳೆನಿಸಿದರೂ ಗಾಢಾರ್ಥದಲ್ಲಿಯೂ ಗೂಢಾರ್ಥದಲ್ಲಿಯೂ ಅವು ಆಧ್ಯಾತ್ಮಿಕ ಒಲವಿನ ಹಾಡುಗಳಾಗಿರುತ್ತವೆ. ಒಲ್ಲೆನೆಪ್ಪೋ ಹೆಂಡಿರನೊಲ್ಲೆನಪ್ಪೋ! ಇಬ್ಬರ ಹೆಂಡಿರ ಕಾಟಿಗಾಗಿ ಮಗ್ಗದ ಕೋಣೆಯೊಳು ಡೊಗ್ಗದೆನಪ್ರೊ” ಎಂಬುದು ಐಹಿಕ ಮತ್ತು ಪಾರಮಾರ್ಥಿಕವನ್ನು ಸಮನಾಗಿ ತೂಗಿಸುವೆನೆಂಬುವವರ ಸುಂದರ ವಿಡಂಬನೆಯಾಗಿದೆ.

ʼʼ ಅತ್ತಿಯ ಮನಿಗ್ಹೋಗುವಲ್ಲಿ | ಊರಾಗ | ಮತ್ತ್ಯಾವ ನಿಟ್ಟಿದಿ ಇಲ್ಲಿ’ ಎಂಬುದು ಸಂಸಾರಕ್ಕೆ ಜೋತು ಬೀಳುವವರ ಅಪಹಾಸ್ಯವಾಗಿದೆ. ʼʼಮಗನೊಂದು ಹಡದೇನಲ್ಲ! ಮದವಿಗಂಡ ಮನಿಯಾಗಿಲ್ಲ. ಉಂಡು ಉಟ್ಟು ತಿರುಗಲಿಲ್ಲ, ಮಿಂಡಿ ನಾ ಬಸಿರಾಗಲಿಲ್ಲ ಎಂಬುದು ಇಷ್ಟಲಿಂಗವೆಂಬ ಮಗನ ಪಡೆದ ಸಂಕೇತವಾಗಿದೆ. ಹೀಗೆ ಇಂತಹ ನೂರಾರು ಹಾಡುಗಳು ಶ್ರೀ ಮಡಿವಾಳಪ್ಪನವರ ಸಾಹಿತ್ಯದಲ್ಲಿ ನಮಗೆ ದೊರೆಯುತ್ತವೆ.

ಹರಿಯ ಎದೆಯನ್ನು ಮೆಟ್ಟಿದೆನು, ಹರನ ಅರ್ಧಾಂಗದೊಳು ನೆರೆ, ಸುಟಿಗೆಯಾಡಿದೆನು ಬ್ರಹ್ಮನ ಬಾಯ ಮುದ್ರಿಸಿದೆಯೆಂದು ಮಾಯೆಯ ಪ್ರತಾಪವನ್ನು ಬಣ್ಣಿಸಿದ ಚಾಮರಸ ಕವಿಯ ರೀತಿಯಲ್ಲಿಯೇ ಶ್ರೀ ಮಡಿವಾಳಪ್ಪನವರು ಮಾಯೆ  ಎಂಥಾದೆಂಬುದನ್ನು ಗುಲ್ಬರ್ಗಾ ಜಿಲ್ಲೆಯ ಗ್ರಾಮ್ಯ ಭಾಷೆಯಲ್ಲಿ ಅದ್ಭುತವಾಗಿ ಬಣ್ಣಿಸಿದ್ದಾರೆ. ಮಾಯೆಯನ್ನು ಪೋರಿ ಎಂದು ಕರೆದ ಮಡಿವಾಳಪ್ಪನವರ ವೈಶಿಷ್ಟ್ಯವೇ ವೈಶಿಷ್ಟ್ಯ. ಆ ಹಾಡು ಹೀಗಿದೆ.

ಅಜೀಬ ತಮಾಷದ ಪೋರ್ಯಾಳೊ ಅಜಹರಿರುದ್ರಗ  ಮೀರ್ಯಾಳೋ

ಅಜಗಜಮಾತಿಗೆ ದೂರಾಳೊ |ನಿಜಮಹಾಜ್ಞಾನಕ ತೋರ್ಯಾಳೊ

ಪೋರಿ ನೋಡಿದರೆ ತುತ್ತಾಳೋ | ದಾರಿ ತೆಲಿಮ್ಯಾಲ ಹೊತ್ತಾ

ಸೀರಿನಿರಿಗಿ ಮ್ಯಾಲಕ್ಕೆತ್ಯಾಳೊ | ಮೂರೂ ಲೋಕ ಮುರಿದ್ತೊತ್ತ್ಯಾಳೊ

ಈ ಹೆಣ್ಣ ಯಾರಿಗಿ ಕಾಣ್ಯಾಳೊ | ಎಲ್ಲರ ಕಣ್ಣಗ ಹೂಣ್ಯಾಳೊ

ತುಣ್ಣಿಗೆ ಹುಟ್ಟಲ್ದ ಹೆಣ್ಣ ಹಾಳೊ  |ಕಣ್ಣ ಕಟ್ಟಿ ನೋಡಿದ್ರ ಕಾಣಸತಾಳೊ

ತೂಗಲಮ್ಯಾಲ ಬೆಳೆಸ್ಯಾಳಪ್ಪ | ಅವು ಮುಗಿಲಿಗಿ ಮುಟ್ಯಾವ ನೋಡಪ್ಪ

ಅಗಲಾಡಿತು. ಜಗ ಜನರಪ್ಪ | ಈ ಭುಗಲಿನೊಳಗೆ ಮಡಿವಾಳಪ್ಪನಪ್ಪ

ಶ್ರೀ ಮಡಿವಾಳಪ್ಪನವರು ಆಶು ಕವಿಗಳಾಗಿದ್ದರು. ಸಂದರ್ಭಕ್ಕೆ ತಕ್ಕಂತೆ ಹಾಡುಗಳು ಸುರಿಸುತ್ತಿದ್ದವು. ಅವರ ವಿಶೇಷತೆಯೆಂದರೆ ಕಲ್ಬುರ್ಗಿ ಜಿಲ್ಲೆ ಕನ್ನಡ ಅಶುದ್ಧವಾಗಿದೆಯೆಂದು ಇತರರು ಜರಿಯುತ್ತಿದ್ದಾಗ ಈ ಅಶುದ್ಧ ಕನ್ನಡಕ್ಕೂ ಅಧ್ಯಾತ್ಮದ ಶಕ್ತಿಯಿದೆಯೆಂದು ತೋರಿಸಿಕೊಟ್ಟರು. ಜನವಾಣಿ ಅಷ್ಟೇ ಅಲ್ಲ ಜನಪದರ ಮಾತುಗಳಿಗೂ ದೈವಸಾಕ್ಷಾತ್ಕಾರದ ಶಕ್ತಿಯಿದೆಯೆಂಬುದನ್ನು ಮೊದಲಿಗರಾಗಿ ತೋರಿಸಿಕೊಟ್ಟರು.

(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)

Related Posts