ಘನಮಠದಾರ್ಯ

ಡಾ|| ಬಸವರಾಜ ಸಬರದ

ಘನಮಠದಾರ್ಯ ಬಹುಮುಖ ವ್ಯಕ್ತಿತ್ವ ಹೊಂದಿದ ಶಿವಯೋಗಿ, ಈತ ಶರಣನಾಗಿ ತತ್ವಪದಕಾರನಾಗಿ, ನೇಗಿಲಯೋಗಿಯಾಗಿ ಅನುಭಾವಿಯಾಗಿ ಸಾಧಿಸಿದ ಕಾರ್ಯಗಳು ಇಂದಿಗೂ ಮುಖ್ಯವೆನಿಸುತ್ತವೆ. ಶಿವಯೋಗಿಯಾದವನಿಗೆ ಭಾಷೆ, ಪ್ರದೇಶ, ಜಾತಿ, ಲಿಂಗ, ಇವುಗಳ ಭೇದವಿರುವುದಿಲ್ಲವೆಂಬುದನ್ನು ಘನಮಠದಾರ್ಯ ತೋರಿಸಿಕೊಟ್ಟ. ಮಾನವೀಯತೆ ದೊಡ್ಡದೆಂಬುದನ್ನು ತಿಳಿಸಿಕೊಟ್ಟ.

ಕ್ರಿ.ಶ. ೧೮೨೮ರಲ್ಲಿ ಆಂಧ್ರಪ್ರದೇಶದ ಅತ್ರಾಫ್ ಜಿಲ್ಲಾ ಪಡ್ಲೂರ ತಾಲ್ಲೂಕಿನ ದೋರ್ವಾಡ ಗ್ರಾಮದಲ್ಲಿ ಈ ಘನಮಠದಾರ್ಯ ಜನಿಸಿದ. ನಾಗಭೂಷಣ ನೆಂಬುದು ಈತನ ಹೆಸರು. ವೀರಯ್ಯ ವೀರಾಂಬೆ ಈತನ ತಂದೆ-ತಾಯಿಗಳು. ಯೌವನಕ್ಕೆ ಬಂದಾಗ ಮದುವೆಯಾಯಿತು. ಒಂದು ಹೆಣ್ಣು ಮಗುವೂ ಹುಟ್ಟಿತು. ನಂತರ ಕೆಲದಿನಗಳಲ್ಲಿಯೇ ಜೀವನದಲ್ಲಿ ವೈರಾಗ್ಯ ತಾಳಿ ತನ್ನ ಇಪ್ಪತ್ತೆರಡನೆಯ ವಯಸ್ಸಿಗೆ ತನ್ನ ಊರನ್ನೂ, ಸಂಸಾರವನ್ನೂ ತೊರೆದು ಕನ್ನಡ ನಾಡಿಗೆ ಬಂದ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅನೇಕ ಊರುಗಳಲ್ಲಿ ಸಂಚರಿಸಿದ. ಬಸವಕಲ್ಯಾಣದಲ್ಲಿ ಸಂಚರಿಸಿ ಶರಣರ ತತ್ವಗಳನ್ನು ತಿಳಿಯಬೇಕೆಂಬ ಉತ್ಸುಕತೆಯಿಂದ ಘನಮಠಸ್ವಾಮಿಗಳೆಂಬುವರ ಬಳಿ ಕನ್ನಡ ಕಲಿತ ಶರಣರ ತತ್ವಗಳನ್ನು ತಿಳಿದುಕೊಂಡು ಭಕ್ತಿತುಂಬಿ ಹಾಡಿದ. ಹಾಡುಗಳ ರಚಿಸಿದ. ಗುರುವಾದ. ಘನಮಠಾಧೀಶನ ಅಂಕಿತವನ್ನಿಟ್ಟುಕೊಂಡ. ತಾನೇಗುರುವಾದ.  ಘನಮಠದಾರ್ಯನಾದ. ಕ್ರಿ.ಶ. ೧೮೮೦ರಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರ ತಾಲೂಕಿನ ಸಂತೆ ಕಲ್ಲೂರಿನಲ್ಲಿ ಲಿಂಗೈಕ್ಯನಾದ.

ರಾಯಚೂರ ಜಿಲ್ಲೆಯೇ ಘನಮಠದಾರ್ಯನ ಕಾರ್ಯಕ್ಷೇತ್ರವಾಯಿತು. ದೇವದುರ್ಗ ತಾಲೂಕಿನ ಜಾಲಹಳ್ಳಿಯ ವೀರಭದ್ರಕವಿಗೆ, ಅರವತ್ತುಮೂರು ಪುರಾತನರ ಪುರಾಣವನ್ನು ವಾರ್ಧಕ ಷಟ್ಟದಿಯಲ್ಲಿ ಬರೆಯುವಂತೆ ಪ್ರೇರೇಪಿಸಿದ. ನಾರದಗಡ್ಡೆಯ ಚೆನ್ನಬಸವಸ್ವಾಮಿಗಳಿಗೂ ಘನಮಠದಾರ್ಯನಿಗೂ ಕರಣಪ್ರಸಾದದ ಬಗೆಗೆ ವಾದ ನಡೆದಿತ್ತೆಂದು ತಿಳಿದು ಬರುತ್ತದೆ. ವೀರಶೈವ ಸಿದ್ಧಾಂತ ಕುರಿತು, ಅಧ್ಯಾತ್ಮ ಕುರಿತು ಘನಮಠದಾರ್ಯ ಅಧ್ಯಯನ ಮಾಡಿದ, ಚರ್ಚಿಸಿದ, ತನ್ನ ಅನುಭವಕ್ಕೆ ಬಂದ ಸತ್ಯವನ್ನು ಕಂಡುಕೊಂಡ ದೊಡ್ಡ ಅನುಭಾವಿಯಾಗಿ ಬೆಳೆದು ನಿಂತ.

ಹನ್ನೆರಡನೆಯ ಶತಮಾನದ ವಚನಕಾರರ ವಿಚಾರಗಳನ್ನೇ ನಾಗಭೂಷಣ – ಪ್ರಚಾರಮಾಡತೊಡಗಿದ. ವಚನಕಾರರು ಮೂಢನಂಬಿಕೆಗಳ ವಿರುದ್ಧ, ಅಂಧಸಂಪ್ರದಾಯದ ವಿರುದ್ಧ ಹೋರಾಡಿದಂತೆ, ನಾಗಭೂಷಣನೂ ಕೂಡ ಇಂತಹ ಅನಿಷ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದ, ಜನರನ್ನು ಜಾಗೃತಗೊಳಿಸಿದ. ಬಹುದೇವೋಪಾಸನೆಯನ್ನು ಅಲ್ಲಗಳೆದು ಗುಡಿಗುಂಡಾರಗಳಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತಪ್ಪಿಸಿದ. ಇಷ್ಟಲಿಂಗಕ್ಕೆ ಪ್ರಾಧಾನ್ಯತೆಯನ್ನು ನೀಡಿ ಶಿವಯೋಗಿಯೆನಿಸಿಕೊಂಡ. ಮಠ-ಮಾನ್ಯಗಳ ವಿರೋಧಿಯಾದ. ತಾನು ಜೀವಂತವಿದ್ದಾಗ ಯಾವುದೇ ಮಠ ಮಾನ್ಯಗಳನ್ನು ಕಟ್ಟದೆ ಚಲಿಸುವ ಜಂಗಮನಾದ. ತಾನು ಸತ್ತನಂತರ ತನ್ನ ಸಮಾಧಿಯ ಮೇಲೆ ಯಾರಾದರೂ ಗದ್ದುಗೆ ಮಂಟಪವನ್ನು ಕಟ್ಟಿದರೆ ಅವರ ವಂಶ ನಿರ್ವಂಶವಾಗುವುದೆಂದು ಅಭಿಶಾಪವನ್ನಿತ್ತ. ಹೀಗೆ ಶರಣರ ತತ್ವಗಳಿಗೆ ಬದ್ಧನಾಗಿದ್ದ ನಾಗಭೂಷಣ ಬದುಕಿನಲ್ಲಿಯೂ ಅವುಗಳನ್ನು ಆಚರಣೆಗೆ ತಂದ,

ಹೊನ್ನು-ಹೆಣ್ಣು-ಮಣ್ಣುಗಳಿಗಾಗಿ ಪರಿತಪಿಸದೆ, ಜ್ಞಾನ, ಅನುಭಾವ, ಅಂತರಂಗಶುದ್ಧಿಯತ್ತ ಆಸಕ್ತನಾದ ನಾಗಭೂಷಣ ನಿಜವಾದ ಜಂಗಮನಾದ. ಡಂಭಾಚಾರವನ್ನು ಅಲ್ಲಗಳೆದು ಸರಳ ಭಕ್ತಿಯನ್ನು ತಿಳಿಸಿದ. ಭಕ್ತರಲ್ಲಿದ್ದ ಮೌಢ್ಯತೆಯನ್ನಳಿಸಿ, ವೈಚಾರಿಕತೆಯನ್ನು ಬೆಳೆಸಿದಾಗ ಜನಜೀವನದಲ್ಲಿ ಅನೇಕ ಬದಲಾವಣೆಗಳಾದವು. ಇವುಗಳನ್ನೇ ಭಕ್ತರು ಪವಾಡಗಳೆಂದು ಕರೆಯುತ್ತಾರೆ. ಇಂತಹ ಅನೇಕ ಪವಾಡಗಳನ್ನು ನಾಗಭೂಷಣ ಮಾಡಿರುವುದು ತಿಳಿದುಬರುತ್ತದೆ.

ಗುಡಿ ಗುಂಡಾರಗಳಲ್ಲಿ, ಮಠ-ಮಾನ್ಯಗಳಲ್ಲಿ ಕುಳಿತುಕೊಂಡು ದೇವರು-ಧರ್ಮಗಳ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದವರನ್ನು ನೇರವಾಗಿ ವಿರೋಧಿಸಿದ. ನಾಗಭೂಷಣ ಕಾಯಕಕ್ಕೆ ಅತ್ಯಂತ ಪ್ರಾಧಾನ್ಯತೆಯನ್ನು ತಂದುಕೊಟ್ಟ. ದಾನದಂತಹ ಮೌಲ್ಯವನ್ನು ತಿರಸ್ಕರಿಸಿ ದಾಸೋಹದಂತಹ ಉದಾತ್ತ ಮೌಲ್ಯವನ್ನು ಪ್ರಸಾರ ಮಾಡಿದ. ಸದಾಚಾರ-ಸದುವಿನಯಗಳನ್ನು ಹೇಳಿಕೊಟ್ಟ, ನಾಗಭೂಷಣ ಅಹಂಕಾರ-ಅಹಂಭಾವಗಳನ್ನು ತೊರೆಯಲು ತಿಳಿಸಿದ. ಮಾನವನಲ್ಲಿರುವ ಪ್ರೀತಿ-ಅಂತಃಕರಣಗಳೇ ನಿಜವಾದ ಮೌಲ್ಯಗಳೆಂದು ಸಾರಿ ಹೇಳಿದ.

ನಾಗಭೂಷಣ ಕನ್ನಡ ನಾಡಿನ ಪ್ರಮುಖ ತತ್ವಪದಕಾರರಲ್ಲಿ ಒಬ್ಬನಾಗಿದ್ದಾನೆ. ‘ಭಕ್ತಿಸುಧಾಸಾರ’ ವೆಂಬ ಈತನ ಕೃತಿಯಲ್ಲಿ ೧೪೭ ಹಾಡುಗಳಿವೆ. ಈ ಹಾಡುಗಳನ್ನು “ತತ್ವಪದಗಳು” ಎಂಬ ಹೆಸರಿನಲ್ಲಿ ಕ್ರಿ.ಶ. ೧೯೭೦ರಲ್ಲಿ ಸಂತೆಕಲ್ಲೂರಿನ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮಿಗಳು ಪ್ರಕಟಪಡಿಸಿದ್ದಾರೆ.

ಕನ್ನಡದಲ್ಲಿ ತತ್ವಪದ ಸಾಹಿತ್ಯಕ್ಕೆ ದೀರ್ಘವಾದ ಪರಂಪರೆಯಿದೆ. ಈ ಪರಂಪರೆ ಹನ್ನೆರಡನೆಯ ಶತಮಾನದ ವಚನಕಾರರಿಂದ ಪ್ರಾರಂಭವಾಗುತ್ತದೆ. ಹನ್ನೆರಡನೆಯ ಶತಮಾನದ ವಚನಕಾರರು ಸಾವಿರಾರು ಸ್ವರವಚನಗಳನ್ನು ರಚಿಸಿದ್ದಾರೆ. ಇದೇ ಹಾಡುಗಬ್ಬವು ತತ್ವಪದವೆಂಬ ಹೆಸರಿನಲ್ಲಿ ಹದಿನೈದನೆಯ ಶತಮಾನದ ನಿಜಗುಣ ಶಿವಯೋಗಿಗಗಳಿಂದ ಜನಪ್ರಿಯವಾಯಿತು. ಹೀಗಾಗಿ ಈ ತತ್ವಪದ ಸಾಹಿತ್ಯ ಪರಂಪರೆಯನ್ನು ಹುಟ್ಟುಹಾಕಿದವರಲ್ಲಿ ನಿಜಗುಣ ಶಿವಯೋಗಿಗಳು ಮೊದಲಿಗರಾಗುತ್ತಾರೆ.  ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ ಈ ಮುಂತಾದ ಶಿವಯೋಗಿಗಳ ಅನುಭಾವ ಪದಗಳು ಕನ್ನಡ ಸಾಹಿತ್ಯದ ಹೊಸ ಬೆಳವಣಿಗೆಯನ್ನು ತೋರಿಸುತ್ತವೆ.

ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ನಂತರ, ಅದೇ ಎತ್ತರದ ಸಾಧನೆ ಮಾಡಿದವರಲ್ಲಿ ನಾಗಭೂಷಣ ಘನಮಠ ಶಿವಯೋಗಿ ಮುಖ್ಯವಾಗುತ್ತಾನೆ. ಸರ್ಪಭೂಷಣ ಶಿವಯೋಗಿ ಬೆಂಗಳೂರು ಪ್ರದೇಶದಲ್ಲಿ ಹೊಸಬೆಳಕನ್ನು ಮೂಡಿಸಿದರೆ, ಈ ಘನಮಠ ಶಿವಯೋಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ರಾಯಚೂರ ಜಿಲ್ಲೆಯಲ್ಲಿ ತತ್ವಪದಗಳನ್ನು ಹಾಡಿ ಜನಮನದಲ್ಲಿ ಹಸಿರಾಗಿದ್ದಾನೆ.

ಅನೇಕ ಊರುಗಳನ್ನು ಸಂಚರಿಸಿದ ನಾಗಭೂಷಣ ಶಿವಯೋಗಿಯ ತತ್ವಪದಗಳಲ್ಲಿ ವೈವಿಧ್ಯತೆಯಿದೆ. ನೂತನಾಲ್ಲಮಪ್ರಭು ಎಂದೇ ಈತ ಹೆಸರಾಗಿದ್ದಾನೆ. ಪಾದಚಾರಿಯಾಗಿ ತಿರುಗುತ್ತಾ ಅಸಂಖ್ಯಾತ ಭಕ್ತರ ನೋವು-ನಲಿವುಗಳಿಗೆ ಸ್ಪಂದಿಸಿದ ಈ ಶಿವಯೋಗಿ, ಬದುಕಿನಲ್ಲಿ ಸಮಾಜದಲ್ಲಿ ಕಂಡದ್ದನ್ನೇ ತನ್ನ ತತ್ವಪದಗಳ ಮೂಲಕ ಪ್ರಕಟಿಸಿದ್ದಾನೆ. ಭಕ್ತಿ-ವೈರಾಗ್ಯ, ನಿಷ್ಠೆ, ಕಾಯಕ, ದಾಸೋಹ, ಸದಾಚಾರ, ಸದುವಿನಯ ಇಂತಹ ವಿಷಯಗಳನ್ನೇ ಅಭಿವ್ಯಕ್ತಿಸುವ ಈತನ ತತ್ವಪದಗಳಲ್ಲಿ ಅಲ್ಲಲ್ಲಿ ಸಾಮಾಜಿಕ ವಿಡಂಬನೆ ತೀವ್ರತರವಾಗಿದೆ.

ನನ್ನ ಪ್ರಕಾರ ತತ್ವಪದಕಾರರ ಬಹುಮುಖ್ಯವಾದ ಕೊಡುಗೆಯೆಂದರೆ, ವಸಾಹತುಶಾಹಿ ವಿರುದ್ಧ ನಡೆಸಿದ ಹೋರಾಟವಾಗಿದೆ. ಈ ತತ್ವಪದಕಾರರು ಸಾಮಾಜಿಕ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಸಾಂಸ್ಕೃತಿಕವಾಗಿ ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ತೋರಿಸಿದ್ದಾರೆ. ವಸಾಹತುಶಾಹಿಯೆಂಬುದನ್ನು ನಾನಿಲ್ಲಿ ಮೂರು ಹಂತಗಳಲ್ಲಿ ವಿಂಗಡಿಸಲಿಚ್ಛಿಸುತ್ತೇನೆ. ಮೊದಲನೆಯದು ಬ್ರಿಟಿಷರ ರಾಜಕೀಯ ವಸಾಹತುಶಾಹಿ, ಎರಡನೆಯದು ಸಾಂಸ್ಕೃತಿಕ ವಸಾಹತುಶಾಹಿ, ಮೂರನೆಯದು ಮನುಷ್ಯನ ಮನಸ್ಸಿನ ವಸಾಹತುಶಾಹಿ, ಕೈವಾರ ನಾರಾಯಣಪ್ಪ ,ಕಡಕೋಳ ಮಡಿವಾಳಪ್ಪ, ಬೈಲೂರ ಕೃಷ್ಣಪ್ಪನಂತಹ ತತ್ವಪದಕಾರರು ಬ್ರಿಟಿಷರ ರಾಜಕೀಯ ವಸಾಹತುಶಾಹಿಯ ವಿರುದ್ಧ ಇಲ್ಲಿಯ ಪಾಳೆಯಗಾರಿಕೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಸಾಂಸ್ಕೃತಿಕ ವಸಾಹತುಶಾಹಿಯೆಂಬುದು ಕೇವಲ ಬ್ರಿಟೀಷರ ಆಳ್ವಿಕೆಗೆ ಮಾತ್ರ ಸಂಬಂಧಿಸಿರದೆ, ನಮ್ಮ ದೇಶದ ಪುರೋಹಿತಶಾಹಿ ವ್ಯವಸ್ಥೆ ಸ್ಥಾಪಿಸಿದ ಚಾತುರ್ವರ್ಣ ಪದ್ಧತಿಯಾಗಿದೆ. ತತ್ವಪದಕಾರರು ಇಂತಹ ವರ್ಣವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಮನುಷ್ಯನ ಮನಸ್ಸಿನಲ್ಲಡಗಿರುವ ಸ್ವಾರ್ಥ, ಸಣ್ಣತನ, ದ್ವೇಷ, ಕಪಟತನ ಇವುಗಳು ಅತ್ಯಂತ ಅಪಾಯಕಾರಿಯಾದವುಗಳು. ತತ್ವಪದಕಾರರು ಇಂತಹ ಮನಸ್ಸಿನ ವಸಾಹತುಶಾಹಿ ವಿರುದ್ಧ ಹೋರಾಡಿದ್ದಾರೆ. ಹೀಗಾಗಿ ಇವರ ರಚನೆಗಳು ಇಂದಿಗೂ ಅಧ್ಯಯನ ಯೋಗ್ಯವಾಗುತ್ತವೆ.

ನಾಗಭೂಷಣನಂತಹ ತತ್ವಪದಕಾರರು ಮುಖ್ಯವಾಗಿ ಸಾಂಸ್ಕೃತಿಕ ವಸಾಹತುಶಾಹಿ ಹಾಗೂ ಮನಸ್ಸಿನ ವಸಾಹತುಶಾಹಿಗಳ ವಿರುದ್ಧ ದನಿಯೆತ್ತಿದ್ದಾರೆ. ವರ್ಣವ್ಯವಸ್ಥೆಯನ್ನು  ಗಟ್ಟಿಗೊಳಿಸುವಲ್ಲಿ ಅನೇಕ ವೇದ-ಶಾಸ್ತ್ರ-ಪುರಾಣಗಳು ಪರೋಕ್ಷವಾಗಿ ಕಾರಣವಾಗಿವೆ. ಅಂತೆಯೇ ಹನ್ನೆರಡನೆಯ ಶತಮಾನದ ವಚನಕಾರರು, ವೇದ ಶಾಸ್ತ್ರ ಪುರಾಣಗಳನ್ನು ಅಲ್ಲಗಳೆದರು.ಅವರ ಪರಂಪರೆಯಲ್ಲಿಯೇ ಮುಂದುವರೆದ ನಾಗಭೂಷಣ ವೇದ-ಶಾಸ್ತ್ರ-ಪುರಾಣಗಳ ಪೊಳ್ಳುತನಗಳನ್ನು ಬಯಲಿಗೆಳೆಯುವುದರ ಮೂಲಕ ಸಾಂಸ್ಕೃತಿಕ ವಸಾಹತುಶಾಹಿಯ ಕುತಂತ್ರಗಳನ್ನು ಸ್ಪಷ್ಟಪಡಿಸುತ್ತಾನೆ… ಈ ತತ್ವಪದಕಾರನ ಹಾಡೊಂದು ಈ ದಿಸೆಯಲ್ಲಿ ಗಮನಾರ್ಹವಾಗಿದೆ

“ವೇದಶಾಸ್ತ್ರ ಪುರಾಣಗಳೋದಿದ ವೇದಾದಿಗಳೆಲ್ಲ

ಭೇದವನರಿಯದೆ ಭಂಗಬಟ್ಟವರು, ಪೋದವು ನಿಜವಲ್ಲ!!

ಹಲವು ಶಾಸ್ತ್ರ ತಂತ್ರಗಳೋದಿ  ತ್ರೈಮಲವನು ಬಿಡಲಿಲ್ಲ!

ಫಲವೇನೈ ಗಿಳಿಯೋದಿ ಮಲವ ತಿಂದೊಲದಾಯ್ತಲ್ಲ!!

ವೇದಾಂತದೊಳುದ್ಭವಿಸಿದ ಜ್ಞಾನವದಾದಿ ವಿದ್ಯೆಯಲ್ಲ!

ಸಾಧಿಸಿ ಸುಜ್ಞಾನದಿ ಚರಿಸುವವನೇ ದೊರೆ ಜಗಕೆಲ್ಲ!!”

-ಶ್ರೀ ಘನಮಠೇಶ ತತ್ವಪದಗಳು : ಪುಟ ೨

ಎಂಬಂತಹ ನುಡಿಗಳಲ್ಲಿ ವೇದಶಾಸ್ತ್ರ ಪುರಾಣಗಳ ಮೂಲಕ ನಡೆದ ಶೋಷಣೆಯನ್ನು ಘನಮಠದಾರ್ಯ ಖಂಡಿಸಿದ್ದಾನೆ. ಪುರೋಹಿತಶಾಹಿಯೇ ಈ ದೇಶದ ಪ್ರಥಮ ವಸಾಹುತಶಾಹಿ. ಇಂತಹ ಸಾಂಸ್ಕೃತಿಕ ವಸಾಹತುಶಾಹಿಯ ವಿರುದ್ಧ  ಘನಮಠದಾರ್ಯ ಅನೇಕ ತತ್ವಪದಗಳಲ್ಲಿ ಪ್ರತಿಕ್ರಿಯಿಸಿದ್ದಾನೆ.

ಡಾಂಭಿಕ ಭಕ್ತಿಯನ್ನು ಕುರಿತು ಈ ತತ್ವಪದಕಾರ ಬಹುವಿಧವಾಗಿ ವಿಡಂಬಿಸಿದ್ದಾನೆ.

ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ ಈ ಸೊಳೆಮಕ್ಕಳಿ

ಗೆಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ||

ಉಣುವ ಜಂಗಮದೇವರೈತಂದು|    ಹಸಿವೆನಲು ಮುಂದಿನ |

ಮನೆಗೆ ಹೋಗಿಲ್ಲೇಕೆ ನಿಂತೆಂದು   |ಪಳಿಯುತ್ತ ಸಕ್ಕರಿ  |

ಕಣಕ ಮುಂತಾದವನ್ನು ಬಲಿತಂದು  | ತೀರ್ಥಾರ್ಥಿಯೊಳು  ಧಾ |

ರುಣಿಯ ತಿರುಗುತ ಬಳಲಿ ತಾವಂದು| ಪರಿಭ್ರಮಿತರಾಗುತೆ |

ಕುಣಿ ತೆವರ್‌ ಮಣ್ಣುಳ್ಳ ಗರಿಕಾನನಗುಹಂಗಳನರಸಿ ಕಷ್ಟದಿ

ಉಣದ ಕಲ್ಲಿಗೆ ಅಟ್ಟು ನೀಡುವ ಬಣವ ಮಾನವ ಪಶುಗಳಿಗೆ

-(ಶ್ರೀಘನಮಠೇಶ ತತ್ವಪದಗಳ: ಪುಟ: ೭೬)

.

ಈ ನುಡಿಗಳಲ್ಲಿ, ಹನ್ನೆರಡನೆಯ ಶತಮಾನದ ವಚನಕಾರರ ನುಡಿಗಳ ಪ್ರೇರಣೆಯನ್ನು ಕಾಣಬಹುದಾಗಿದೆ. ಘನಮಠದಾರ್ಯ, ಬಸವಣ್ಣನನ್ನು ಆದರ್ಶವನ್ನಾಗಿಟ್ಟುಕೊಂಡ ತತ್ವಪದಕಾರ, ಬಸವನ ಭಕ್ತಿ ಹೀಗಾಗಿ ಬಸವಣ್ಣನ ವಚನಗಳು ನೇರ ಪ್ರಭಾವವನ್ನು  ಈತನ ಹಾಡುಗಳಲ್ಲಿ  ಕಾಣಬಹುದಾಗಿದೆ. ಉಣ್ಣುವ ಜಂಗಮಕ್ಕೆ ನಡೆಯೆಂಬರು,ʼʼ ಉಣ್ಣುವ ಜಂಗಮಕ್ಕೆ ನಡಿಯೆಂಬುವರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು” ಎಂಬ  ವಚನದ ಆಶಯವೇ ಘನಮಠದಾರ್ಯನಲ್ಲಿ ಹಾಡಿನ ಮೂಲಕ ಅಭಿವ್ಯಕ್ತವಾಗಿದೆ. : ಜಾತೀಯತೆಯನ್ನು ನೇರವಾಗಿ ವಿರೋಧಿಸಿದ ಈ ಶರಣ ಇಲ್ಲಿಯ, ಅಸಮಾನತೆಯ ಬದುಕಿಗೆ ಜಾತಿಯೇ ಮುಖ್ಯ ಕಾರಣವೆಂದು ಭಾವಿಸಿದ್ದಾನೆ. ಜಾತಿಗೋತ್ರವನ್ನು ಹಿಡಿದು, ತಾವು ಪ್ರಖ್ಯಾತರೆಂದು ತಿಳಿದುಕೊಂಡವರಿಗೆ  ಘನಮಠದಾರ್ಯ ಮೂಲಭೂತ ಪ್ರಶ್ನೆಗಳನ್ನು ಕೇಳಿದ್ದಾನೆ. ರೀತಿಯ ಹೆಸರಿನಲ್ಲಿ ಒಡೆದಾಳುವಂತಹ ಮನುಜರನ್ನು ಕಂಡು “ಮುಚ್ಚಿಕೊಳ್ಳಿರೊ’ ಎಂದು ಎಚ್ಚರಿಸಿದ್ದಾನೆ.

ಒಳ್ಳೆಯ ಮನುಷ್ಯರದೇ ನಿಜವಾದ ಕುಲ, ಅದೇ ಶಿವನ ಕುಲವೆಂದು ಹೇಳುತ್ತ:

ಕೆಸರೊಳ್ ಕಂಜವದು ಜನಿಸೆ | ಕೆಸರೆನಿಸದ ತೆರನು||

ಅಸಮಪುಣ್ಯದಿಂ ಪಶುಪತಿಭಕ್ತನೆನಿಸಿ ತಾನೆಲ್ಲುದಯಿಸಲಾತನ್‌ಸತ್

ಮುತ್ತುದಯಿಸಿ ಜಲದೊಳ್ ಜಲವದು ಮುತ್ತಾಗಿರದದರೋಳ್ |

ಮರ್ತ್ಯದೊಳಗೆ ತನುವೆತ್ತು ಪೂರ್ವಳಿದುತ್ತಮ ಗುರು

ಸತ್ಪುತ್ರನಾದವನು।।

ಶ್ರೀ ಘನಮಠೇಶ ತತ್ವಪದಗಳು: ಪು: ೮೯).

ಇಂತಹ ಅನೇಕ ನುಡಿಗಳಲ್ಲಿ ಈ ತತ್ವಪದಕಾರ, ಜಾತೀಯತೆಯನ್ನು ಖಂಡಿಸಿದ್ದಾನೆ. ಕೆಸರಿನಲ್ಲಿ ಕಮಲ ಹುಟ್ಟಿದಂತೆ, ಜಲದಲ್ಲಿ ಮುತ್ತು ಹುಟ್ಟಿದಂತೆ, ಹೊಲಗೇರಿಯಲ್ಲಿ ಹುಟ್ಟುವ ಮನುಷ್ಯನೂ ಪವಿತ್ರನೇ ಆಗಿದ್ದಾನೆಂದು ಸ್ಪಷ್ಟಪಡಿಸಿದ್ದಾನೆ.

“ಉಪ್ಪು ಹುಳಿಯ ಬಿಟ್ಟು ನಾನು ಸಪ್ಪೆಯನುಂಡೆನೆಂತೀದಿ

ಉಪ್ಪನರಿಯದ ನಾಯಿನರಿಗಳಿಗಪ್ಪುದೆ ಷಟ್‌ಸ್ಥಲದ ಹಾದಿ?”

ಎಂದು ಕೇಳಿದ ತತ್ವಪದಕಾರ,

“ಬೆಳ್ಳಿ ತಾಮ್ರದೇವರು ಬಹು ಸತ್ಯುಳ್ಳವೆಂದು ಕೂಗುವೆ

ಕಳ್ಳರು ಒಯ್ದು ಕಡಿದು ಕರಗಿದಡೆಲ್ಲಿಗೈದಿದವೋ?”

ಎಂದು ಪ್ರಶ್ನಿಸುತ್ತಾನೆ. ಸ್ಥಾವರವನ್ನು ವಿರೋಧಿಸಿದ ಈ ಅನುಭಾವಿ, ಉಪ್ಪು-ಹುಳಿ ಬಿಟ್ಟು ತಿರುಗುವ ಸಂನ್ಯಾಸಿಗಳನ್ನೂ ವಿಡಂಬಿಸುತ್ತಾನೆ. ವಚನಕಾರರ ಆಶಯಗಳನ್ನೇ ತನ್ನ ತತ್ವಪದಗಳಲ್ಲಿ ಹೇಳಿದ ಘನಮಠದಾರ್ಯನ ಅನುಭಾವ  ಎತ್ತರವಾದುದು. ನಿತ್ಯ ಬದುಕಿನ ನಡೆ-ನುಡಿಗಳಲ್ಲಿಯೇ ಅನುಭಾವವನ್ನು ಕಾಣುವ ಈತನ ತತ್ವಪದಗಳು ಜನಸಾಮಾನ್ಯರಿಗೂ ಅರ್ಥವಾಗುವ ಗೇಯಗೀತೆಗಳಾಗಿವೆ.

“ಹೊತ್ತಿರಲಿಕೆ ಊರಿಗೆ ಸೇರೋ | ದಾರಿ

ಕತ್ತಲೆಯೊಳಗರುಪುವರಾರೊ

ಬೀಜದ ನೆಲ್ಲು ಕುಟ್ಟಿಯು ಕೊಟ್ಟು | ಚಲ್ಲು

ತೋಜೆಯಿಂ  ಶುದ್ಧಭಾಂಡದೊಳಟ್ಟು ||

ಮಾಜದ ಜಂಗಮೇಶನಿಗೆ ಕೊಟ್ಟು | ಘನ

ತೇಜ ಪ್ರಸಾದವನುಂಡುಟ್ಟು ||

-ಶ್ರೀ ಘನಮಠೇಶ ತತ್ವಪದಗಳು: ಪುಟ: ೮೭)

 ಎಂಬಂತಹ ಅನೇಕ ನುಡಿಗಳು ನೀತಿವಿಚಾರವನ್ನು ತಿಳಿಸುತ್ತಲೇ ಅನುಭಾವದೆತ್ತರವನ್ನು ತಲುಪುತ್ತವೆ. ಮನಸರಳ ನಡೆ-ನುಡಿ ಪ್ರಾಮಾಣಿಕತೆ, ಸತ್ಯಶುದ್ಧ ಜೀವನ ಇಷ್ಟಾದರೆ ಸಾರ್ಥಕವೆಂದು ಹೇಳಿದ ಈ ತತ್ವಪದಕಾರ ಡಾಂಭಿಕತೆ, ಜಾತೀಯತೆಯನ್ನು ತಿರಸ್ಕರಿಸಿ ಅಂತಸ್ತು ಅಹಂಭಾವವನ್ನು ಅಲ್ಲಗಳೆದಿದ್ದಾನೆ.

ಮೇಲಿನ ನುಡಿಯಲ್ಲಿ ಬಂದಿರುವ ‘ಬೀಜದ ನೆಲ್ಲು’ ಎಂದರೆ ತೋರಿಕೆಯ ಅರ್ಥ’ಗಟ್ಟಿನೆಲ್ಲು ಯೆಂದಾದರೆ,  ಶಿವಬೀಜವನ್ನೊಳಗೊಂಡಿರುವ ಜೀವಾತ್ಮವೆಂಬುದು ಒಳ ಅರ್ಥವನ್ನು ಸೂಚಿಸುತ್ತದೆ. ಹೊಟ್ಟು’ ಎಂದರೆ ಜೀವಾತ್ಮವನ್ನು ಆವರಿಸಿರುವ ಮಲಾವರಣವೇ ಆಗಿದೆ. ಈ ಮಲಾವರಣವನ್ನು ತೆಗೆಯಲು ಗುರುವಿನ ಅಗತ್ಯವಿದೆಯೆಂದು ಘನಮಠದಾರ್ಯ ಇಲ್ಲಿ ವಿವರಿಸಿದ್ದಾನೆ. ‘ಮೂರು ಬೆಟ್ಟಗಳ ಯುಕ್ತಿಲಿ `ದಾಟೊ ಎಂಬ ನುಡಿ ಸ್ಥೂಲ-ಸೂಕ್ಷ್ಮಕಾರಣ ತನುಗಳನ್ನು ದಾಟುವ ಕ್ರಿಯೆಯೇ ಆಗಿದೆ. ಆಸೆ-ಆಮಿಷಗಳೆಂಬ ಹುಲಿಗಳನ್ನು ಕೊಂದು, ಅರಿಷಡ್ವರ್ಗಗಳೆಂಬ ಕಳ್ಳರಿಂದ ಪಾರಾಗಿ ಊರನ್ನು ಸೇರುವ ಬಗೆಯನ್ನು ತಿಳಿಸಿದ್ದಾನೆ. ಇಂತಹ ಅನೇಕ ಪದಗಳಲ್ಲಿ ಇಹದ ಮೂಲಕ ಪರವನ್ನು ಕಾಣುವ ಪ್ರಯತ್ನವಿದೆ.

ನಾಗಭೂಷಣ ಶಿವಯೋಗಿ ಮಹತ್ವದ ತತ್ವಪದಗಳನ್ನು ನೀಡಿರುವಂತೆ, ಕೃಷಿಗೆ ಸಂಬಂಧಿಸಿದ ‘ಕೃಷಿಜ್ಞಾನ ಪ್ರದೀಪಿಕೆ” ಯೆಂಬ ಕೃತಿಯನ್ನು ಕೊಟ್ಟಿದ್ದಾನೆ. ಹೀಗಾಗಿ ಈತ ಶಿವಯೋಗಿ ಆಗಿರುವುದರ ಜತೆಗೆ ನೇಗಿಲಯೋಗಿಯೂ ಆಗಿದ್ದಾನೆ. ಬಸವಣ್ಣ ಮುಂತಾದ ವಚನಕಾರರ ಕಾಯಕ ತತ್ವದಿಂದ ಪ್ರೇರಣೆ ಪಡೆದ ಈ ಶಿವಯೋಗಿ, ಮನುಷ್ಯರ ಮನದಲ್ಲಿ ಭಕ್ತಿಬೀಜಗಳನ್ನು ಬಿತ್ತುವುದರ ಜತೆಗೆ, ಭೂಮಿಯಲ್ಲಿ ವಿವಿಧ ಬೀಜಗಳನ್ನು ಬಿತ್ತಿ ಬೆಳೆ ತೆಗೆದಿದ್ದಾನೆ. ಹೊರಗಿನ ನೆಲವನ್ನು ಕೃಷಿ ಕಾಯಕದಿಂದ ಹಸಿರುಗೊಳಿಸುವುದರ ಜತೆಗೆ ಒಳಗಿನ ನೆಲವನ್ನು ಅಧ್ಯಾತ್ಮದ ಮೂಲಕ ಹಸಿರಾಗಿರಿಸಿದ್ದಾನೆ. ಹೀಗಾಗಿ ಕೃಷಿಕಾಯಕ ಈ ತತ್ವಪದಕಾರನಲ್ಲಿ ವಿವಿಧ ಅರ್ಥಗಳನ್ನು ಪಡೆದುಕೊಂಡಿದೆ.

“ಕೃಷಿ ಜ್ಞಾನ ಪ್ರದೀಪಿಕೆ” ಎರಡು ಭಾಗಗಳನ್ನು ಮಾಡಲಾಗಿದೆ. ಮೊದಲನೆ ಭಾಗದಲ್ಲಿ ಭೂಮಿ, ಮಳೆ, ಬೆಳೆ ಈ ಮುಂತಾದ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳಿದ್ದರೆ, ಎರಡನೆಯ ಭಾಗದಲ್ಲಿ ವೀರಶೈವ ಧರ್ಮ-ತತ್ವಗಳಿಗೆ ಬಂಧಿಸಿದ ವಿಷಯವಿದೆ. ಭೂಮಿ ಹಾಗೂ ಅದರ ಮಹತ್ವ, ಸಾಗುವಳಿಗಾಗಿ ಸಿದ್ಧತೆಗಳು, ನಟ್ಟುಕಡಿಸುವುದು, ಗೊಬ್ಬರ ಹಾಕುವುದು, ಒಣ ಬೇಸಾಯ, ನೀರಾವರಿ ಬೇಸಾಯ ಈ ಎಲ್ಲ ವಿಷಯವನ್ನು ಕುರಿತಂತೆ ಈ ಕೃತಿಯಲ್ಲಿ ವಿವರವಾಗಿ ಹೇಳಲಾಗಿದೆ. ಹಾಗೆಯೇ ಕೊನೆಯಲ್ಲಿ ಬರುವ ಪಾರಮಾರ್ಥ ಕೃಷಿಯ ಪ್ರತಿಪಾದನೆಯಿಂದ ಈ ಕೃತಿಗೆ ಮತ್ತೊಂದು ಹೊಸ ಆಯಾಮ ದೊರಕುತ್ತದೆ.

ಈ ಘನಮಠದಾರ್ಯ ವಿಶಿಷ್ಟ ತತ್ವಪದಕಾರನಾಗಿದ್ದಾನೆ. ಆಂಧ್ರಪ್ರದೇಶದಿಂದ ಬಂದ ಈತ ಕನ್ನಡ ನಾಡಿನಲ್ಲಿ ಸಂಚರಿಸಿ ಕನ್ನಡಿಗನಾದ, ತೆಲಗು-ಕನ್ನಡಗಳ ಭಾಷಾ ಬಾಂಧವ್ಯವನ್ನಿಲ್ಲಿ ಕಾಣಬಹುದಾಗಿದೆ. ನೆಲದ ಕೃಷಿ, ಮನದ ಕೃಷಿ ಹಾಗೂ ತನುವಿನ ಕೃಷಿಯನ್ನು ಹೇಳುವ ಈ ಅನುಭಾವಿಯ ರಚನೆಗಳಲ್ಲಿ ಬದುಕಿನ ಸಮನ್ವಯವನ್ನು ನೋಡಬಹುದಾಗಿದೆ.

ತತ್ವಪದಕಾರರಲ್ಲಿ ಕೆಲವರು ನೆಲ-ನೆಲೆಗಳನ್ನು ತೊರೆದು, ಸಂಸಾರ-ಸಂಬಂಧಗಳನ್ನು ಬಿಟ್ಟು ಮುಕ್ತಿಯೊಂದೇ ಪರಮ ಶ್ರೇಷ್ಠವೆಂದು ಅಲೆದಾಡಿದವರಿದ್ದಾರೆ. ವ್ಯವಸ್ಥೆ ಬಗೆಗೆ ಆಲೋಚಿಸಿದ, ವ್ಯವಸ್ಥೆಯ ಬದಲಾವಣೆಯ ಬಗೆಗೆ ಚಿಂತಿಸದೆ ಮನುಷ್ಯ ಮಾತ್ರ ಬದಲಾವಣೆ ಬೇಕೆಂದು ಹೇಳಿದವರಿದ್ದಾರೆ. ಇಂತಹ ಅನೇಕ ಹೇಳಿಕೆಗಳು, ಸ್ತ್ರೀಯರನ್ನು ಕುರಿತಂತೆ ಅವರು ತಾಳಿರುವ ನಂಬಿಕೆಗಳು, ಅಧ್ಯಾತ್ಮಿಕ ಹೆಸರಿನಲ್ಲಿ ಇಹದ ಬದುಕನ್ನು ನಿರಾಕರಿಸುವ ಅವರ ಧೋರಣೆಗಳು ನಮಗಿಂದು ಮಿತಿಗಳಾಗಿ ಕಾಣಬಹುದು. ಆದರೆ ಘನಮಠದಾರ್ಯನಂತಹ ತತ್ವಪದಕಾರರು ನೆಲ-ನೆಲೆಯ ಮೂಲಕವೇ ಪಾರಮಾರ್ಥವನ್ನು ಕಂಡುಕೊಂಡದ್ದು, ಸಂಸಾರದ ಸುಖವನ್ನು ಅನುಭವಿಸಿಯೂ ಅಧ್ಯಾತ್ಮದ ಸಾಧನೆ ಮಾಡಿದ್ದು ಮುಖ್ಯವಾಗುತ್ತದೆ. ವಚನಕಾರರಂತೆ ಇಹದ ಮೂಲಕವೇ ಪರವನ್ನು ಕಾಣುವ, ಇಲ್ಲಿ ಸಲ್ಲಿದಾಗಲೇ ಅಲ್ಲಿ ಸಲ್ಲುತ್ತದೆಂದು ಹೇಳುವ  ಸ್ತುನಿಷ್ಠತೆಯನ್ನು ಈ ತತ್ವಪದಕಾರನಲ್ಲಿ ಕಾಣಬಹುದಾಗಿದೆ. ಜನರ ಮೌಢ್ಯತೆಯನ್ನು ಹೋಗಲಾಡಿಸಿ, ಅಂಧಸಂಪ್ರದಾಯಗಳನ್ನು ತೊರೆದು, ವೇದ-ಶಾಸ್ತ್ರ-ಪುರಾಣಗಳ ಪೊಳ್ಳುತನವನ್ನು ಬಯಲಿಗೆಳೆದು ಮನುಷ್ಯರ ಪ್ರಯತ್ನಕ್ಕೆ ಕೃಷಿ ಕಾಯಕಕ್ಕೆ ಮಹತ್ವ ನೀಡಿದ  ಘನಮಠದಾರ್ಯ ಇಂದಿಗೂ ಪ್ರಸ್ತುತನಾಗಿದ್ದಾನೆ. ಈತನ ತತ್ವಪದಗಳನ್ನು, ಕೃಷಿಜ್ಞಾನ ಪ್ರದೀಪಿಕೆಯಂತಹ ಕೃತಿಗಳನ್ನು ಹೊಸ ನೆಲೆಗಳ ಮೂಲಕ ಚರ್ಚಿಸಬೇಕಾಗಿ ಬದುಕಿನ ವಾಸ್ತವತೆಯ ಹಿನ್ನೆಲೆಯಲ್ಲಿ ಚಿತ್ರಿಸಬೇಕಾಗಿದೆ.

(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)

Related Posts