ಡಾ.ಚೆನ್ನಕ್ಕ ಪಾವಟೆ
ಪ್ರಸ್ತಾವನೆ: ಕೈವಲ್ಯ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಪ್ರಕಾರದ ತತ್ವಸಾಹಿತ್ಯ ಅನುಭಾವಿಗಳ ಅನುಭವವಾಣಿಯಾಗಿ ಮಾನವಜೀವನದ ಯೋಗಕ್ಷೇಮಕ್ಕಾಗಿ ಹೊರಹೊಮ್ಮಿದವು ಕೈವಲ್ಯತತ್ವಗಳು. ಸಕಲಜೀವಾತ್ಮರಿಗೆ ಲೇಸನೇ ಬಯಸುವ ಮಣಿಹ ಹೊತ್ತು, ಅವರ ಜೀವನಕ್ಕೆ ಸ್ಪಂದಿಸಿ ಹಸನುಗೊಳಿಸಲು ರೂಪಿತಗೊಂಡ ಸುವರ್ಣಮಾಧ್ಯಮಗಳು. ಗೇಯಪ್ರಧಾನ, ಸ್ವರಪ್ರಧಾನ ಮಾಧ್ಯಮವಾದ ಈ ಕಾವ್ಯಪ್ರಕಾರವನ್ನು ಅನುಭಾವಿಗಳು ತತ್ವಪದಗಳೆಂದು ಕರೆದಿರುವರು. ವಿಭಿನ್ನ ಮಟ್ಟಗಳಲ್ಲಿ ತಾಳ ಲಯ ಭಾವ ಪ್ರಧಾನವಾಗಿ, ಹಾಡಲು ಸರಳವಾಗುವಂತೆ ಜನಸಾಮಾನ್ಯರಿಗೆ ಮನಮುಟ್ಟುವ ನೇರಭಾಷೆಯಲ್ಲಿ ಈ ಹಾಡುಗಬ್ಬಗಳನ್ನು ರಚಿಸಿರುವರು. ಸಂಗೀತ ಸಾಹಿತ್ಯ ಅಧ್ಯಾತ್ಮ ಈ ಮೂರು ದೃಷ್ಟಿಗಳನ್ನೊಳಗೊಂಡ ಮುಪ್ಪುರಿಯ ಪ್ರಕಾರದ ವಿಶಿಷ್ಟ ಸಾಧನ ಇದು. ಶರಣರ ಬದುಕಿನ ಮೌಲ್ಯಗಳನ್ನು ಲೋಕಕ್ಕೆ ಅರುಹಲು ಸಾರ್ಥಕ ಬದುಕಿನ ನಿರ್ಮಾಣಕ್ಕೆ ಅನುಭಾವ ಪದಗಳು ದಾರಿದೀಪವಾಗಿವೆ.
ಶರಣರ ಗದ್ಯಾತ್ಮಕ ಬರವಣಿಗೆಗೂ ಸರ್ವಜ್ಞನ ಪದ್ಯಾತ್ಮಕ ಬರವಣಿಗೆಗೂ ನಾವು ‘ವಚನ’ ವೆಂಬ ಪದವನ್ನು ಬಳಸುತ್ತೇವೆ. ಇದನ್ನು ಗಮನಿಸಿದರೆ ‘ವಚನ’ ವೆಂಬ ಪದ ಗದ್ಯ ಆಕೃತಿಯನ್ನು ಸೂಚಿಸುವದಿಲ್ಲ; ಪದ್ಯ ಆಕೃತಿಯನ್ನೂ ಸೂಚಿಸುವದಿಲ್ಲ, ‘ಪ್ರಾಮಾಣಿಕತೆ’ ಎಂಬ ಆಶಯವನ್ನು ಸೂಚಿಸುತ್ತಿರಬಹುದೆನಿಸುತ್ತದೆ. ಪ್ರಾಮಾಣಿಕತೆ ಅಥವಾ ಪ್ರಮಾಣ ಮಾಡಿ ಹೇಳುವಿಕೆಗೆ ನಾವು ‘ವಚನ’ (Promise) ಎನ್ನುವುದನ್ನು ಇಲ್ಲಿ ನೆನೆಯಬಹುದು. ಆದುದರಿಂದ ವಚನವೆನ್ನುವುದು ಆತ್ಮದೇವತೆಯ ಮೇಲೆ ಆಣೆ ಇಟ್ಟು ಗದ್ಯರೂಪದಲ್ಲಿಯೋ ಪದ್ಯರೂಪದಲ್ಲಿಯೋ ಪ್ರಾಮಾಣಿಕವಾಗಿ ಅಭಿವ್ಯಕ್ತಿಸಿದುದು ಎನ್ನಬೇಕಾಗುತ್ತದೆ.
ಸ್ವರವಚನವೆಂಬುದು ವೀರಶೈವರು ಬಳಸಿದ ಒಂದು ಹೊಸ ಸಾಹಿತ್ಯಕ ಪರಿಭಾಷೆ. ಸ್ವರವಚನ, ಸ್ವರಪದ ಸ್ಥೂಲಅರ್ಥದಲ್ಲಿ ಇದು ಹಾಡುಗಬ್ಬ. ಪ್ರಾರಂಭದಲ್ಲಿ ಪಲ್ಲವಿ ಇಲ್ಲವೆ ಪಲ್ಲವಿ-ಅನುಪಲ್ಲವಿ, ಆಮೇಲೆ ಕೆಲವು ಪದ್ಯಗಳು, ಕೊನೆಗೆ ಕಡ್ಡಾಯವಾಗಿ ಮುದ್ರಿಕೆ, ಇದು ಸ್ವರವಚನದ ರೂಪಮುದ್ರೆ, ಸಾಮಾನ್ಯವಾಗಿ ಪ್ರತಿಯೊಂದು ಅನುಭಾವ ಪದಗಳ ತಲೆಯ ಮೇಲೆ ರಾಗಗಳ, ಕೆಲವೊಮ್ಮೆ ತಾಳಗಳ ನಿರ್ದೇಶನವಿರುತ್ತಿದ್ದು, ಇದು ಅನುಭಾವಿಗಳ ಸಂಗೀತ ಜ್ಞಾನಕ್ಕೆ ಸೂಚನೆ ಎನಿಸಿವೆ. ವೀರಶೈವತತ್ವ, ಲೋಕನೀತಿ ಇದರ ವಸ್ತುಸಂಪತ್ತು.
ಕನ್ನಡ ಅನುಭಾವ ಪದಗಳ ಪರಂಪರೆ ಶಿವಶರಣರಷ್ಟೇ ಪ್ರಾಚೀನವಾದುದು. ಬಸವಾದಿ ಪ್ರಮಥರ ವಚನಮಾಲಿಕೆಯಲ್ಲಿ ನಡೆದು ಬಂದ ಚನ್ನಬಸವಣ್ಣನವರ ‘ಪದಮಂತ್ರಗೋಪ್ಯ’, ಮಹಾದೇವಿಯಕ್ಕನ ಯೋಗಾಂಗತ್ರಿವಿಧಿ’, ಶಿವಯೋಗಿ ಸಿದ್ಧರಾಮನ ‘ಬಸವ ತ್ರಿವಿಧಿ’ಗಳನ್ನು ಗಮನಿಸಿದರೆ ಹನ್ನೆರಡನೆಯ ಶತಮಾನದ ವಚನಕಾರರು ‘ಮರ್ತ್ಯಲೋಕವನ್ನು ಕರ್ತಾರನ ಕಮ್ಮಟ’ವಾಗಿಸುವ ಅನುಭಾವಿಗಳೂ, ಶಿವಾನುಭಾವಿಗಳೂ ವಾಗ್ಗೇಯಕಾರರೂ ಆಗಿದ್ದರೆಂದು ಹೇಳಬೇಕು.
ಕರ್ನಾಟಕದ ಅಧ್ಯಾತ್ಮಿಕ ಚರಿತ್ರೆಯಲ್ಲಿ ಶರಣರ ಬಳಿವಿಡಿದು ಬಂದ ಅನುಭಾವಿಗಳ ಪರಂಪರೆ ತುಂಬ ದೊಡ್ಡದು. ಷಟ್‌ಶಾಸ್ತ್ರಗಳ ರಚನಕಾರರಾಗಿ, ತತ್ವಜ್ಞಾನದ ಮೇರು ಶಿಖರವನ್ನೇರಿದ ನಿಜಗುಣ ಶಿವಯೋಗಿಗಳು ಈ ಪರಂಪರೆಯಲ್ಲಿ ಮೊದಲಿಗರು. ಅವರು ಬಾಳಿ ಬದುಕಿದುದು ಹದಿನೈದನೆಯ ಶತಮಾನದಲ್ಲಿ, ತತ್ವಪದ, ಹಾಡುಗಬ್ಬ ಹಾಗೂ ಅನುಭಾವಗೀತೆಗಳು-ಒಟ್ಟಾರೆ ಕೈವಲ್ಯಸಾಹಿತ್ಯಕ್ಕೆ ಇವರನ್ನು ಆದ್ಯ ಪ್ರವರ್ತಕರೆಂದು ವಿದ್ವಾಂಸರು ಗುರುತಿಸಿದ್ದಾರೆ.
ಇವರ ಸಮಕಾಲೀನರೆಂದು ಸಾರುವ ಮುಪ್ಪಿನ ಷಡಕ್ಷರಿಗಳು, ಸರ್ಪಭೂಷಣ ಶಿವಯೋಗಿಗಳು, ಘನಮಠಾರ್ಯರು, ಬಸವಲಿಂಗಶರಣರು, ಬಾಲಲೀಲಾಮಹಂತ ಶಿವಯೋಗಿಗಳು, ಕಡಕೋಳದ ಮಡಿವಾಳೇಶ್ವರರು, ಶಾಲ್ಯದ ಅರಸರು, ಕರಿಬಸವಸ್ವಾಮಿಗಳು, ಶಂಕರಾನಂದ ನಿಂಬರಗಿ ಮಹಾರಾಜ, ಮತಕೂರು ನಂಜುಡಸ್ವಾಮಿಗಳು ಮೊದಲಾದವರು ಅನುಭಾವ ಪದಗಳ ಪರಂಪರೆಯಲ್ಲಿ ಮಿನುಗಿದ ಅನುಭಾವಿರತ್ನಗಳು.
ಮುಪ್ಪಿನ ಷಡಕ್ಷರಿಗಳ ನೆಲೆ-ಬೆಲೆ:
ಕನ್ನಡ ಅನುಭಾವ ಸಾಹಿತ್ಯ ಕ್ಷೇತ್ರದಲ್ಲಿ ಮುಪ್ಪಿನ ಷಡಕ್ಷರಿಗಳದ್ದು ವಿಶಿಷ್ಟವಾದ ಸ್ಥಾನಮಾನ, ಅಂತರಂಗ ಸಾಧನೆಯ ಆತ್ಮಕಥೆಯನ್ನು ಬಿಂಬಿಸುವ ಸಾಹಿತ್ಯ ಅವರದು. ಭಕ್ತಿಯೆ ಮೈವೆತ್ತು ಬಂದ ಭಾವುಕ ಹೃದಯದ ವ್ಯಕ್ತಿತ್ವ ಷಡಕ್ಷರಿಗಳದು. ಅವರ ಹಾಡುಗಳಲ್ಲಿ ತಾತ್ವಿಕ ಸಿದ್ಧಾಂತ, ಆಚರಣೆಯ ಮಾರ್ಗಗಳೆರಡರ ಸುಂದರ ಸಮನ್ವಯ ಸಾಧಿಸಿದೆ. ಸಾಧಕನ ಅಧ್ಯಾತ್ಮಿಕ ವಿಕಾಸದ ತಳಹದಿಯನ್ನು ವ್ಯಕ್ತಪಡಿಸುವ ಷಟ್‌ಸ್ಥಲ ವೀರಶೈವ ಸಾರಸರ್ವಸ್ವವನ್ನು ಒಳಗೊಂಡಿವೆ. ಶಿವಶರಣರ ಸತಿಪತಿಭಾವದ ಮಧುರಭಕ್ತಿಯ ಪರಾಕಾಷ್ಠೆ ಮಡುಗಟ್ಟಿ ನಿಂತಿದೆ. ಶರಣರ ಆಚಾರ ವಿಚಾರ ಸಂಸ್ಕೃತಿಗಳ ಪ್ರಭಾವ ಪರಿಣಾಮ ಅಚ್ಚಳಿಯದೆ ಅಚ್ಚೊತ್ತಿವೆ.
ಮುಪ್ಪಿನ ಷಡಕ್ಷರಿಗಳ ಜೀವನ ಸಾಧನೆಗಳ ವಿಚಾರವಾಗಿ ಖಚಿತವಾಗಿ ತಿಳಿಯುವ ಆಧಾರಗಳು ಕಡಿಮೆ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು, ಅವರು ತಪಸ್ಸುಗೈದ ಶಂಭುಲಿಂಗನ ಬೆಟ್ಟದಲ್ಲಿಯೆ ಸ್ವಲ್ಪಕಾಲ ವಾಸವಾಗಿದ್ದರು ಎನ್ನುವ ವಿಚಾರವೂ ಇದೆ. ಹೈದರಅಲಿ ಶಾಸನ ಹಾಗೂ ಮಾದೇಶ್ವರ ಸಾಂಗತ್ಯ ಕೃತಿಯ ಮೂಲಕ ತಿಳಿದುಬರುವಂತೆ ಸುತ್ತೂರು, ವಂಡರಬಾಳು, ಕುಂತೂರು, ನಂಜನಗೂಡು ಹಾಗೂ ಎರೆಗಂಬಳಿ ಈ ಐದು ಊರುಗಳಲ್ಲಿ ಇದ್ದ ಐದುಮಠಗಳು ಪಂಚಮಠಗಳೆಂದು ಪ್ರಸಿದ್ಧಿ ಪಡೆದಿದ್ದವು. ಮುಪ್ಪಿನ ಷಡಕ್ಷರಿಗಳು ಎರೆಗಂಬಳಿಮಠದವರೆಂದು ದಿ|| ಬಿ. ಶಿವಮೂರ್ತಿ ಶಾಸ್ತ್ರಿಗಳು ಸೂಚಿಸಿರುವರು.
ಎರೆಗಂಬಳಿಯ ಗುರುಸಿದ್ಧ ಶಿವಯೋಗಿಗಳು ಕ್ರಿಯಾಪುರುಷರು. ಲಿಂಗಭೋಗೋಪ ಭೋಗಿಗಳು. ಹಿಂದೆ ಒಂದು ಬಾರಿ ೧೨ವರ್ಷ ಅನಾವೃಷ್ಟಿಯಿಂದ ಬರಗಾಲ ಎದುರಿಸಬೇಕಾದ ಸಂದರ್ಭ ಬಂದಾಗ ಸಿದ್ದಲಿಂಗ ಶಿವಯೋಗಿಗಳು ತಮ್ಮ ತಪೋಬಲದಿಂದ ಕರಿಯ ಕಂಬಳಿ ಬೀಸಿ ಮಳೆ ತರಿಸಿ ಊರನ್ನು ಸಂತೃಪ್ತಗೊಳಿಸಿದ್ದರಿಂದ ಅವರಿಗೆ ಕರಿಯ ಕಂಬಳಿ > ಎರೆಗಂಬಳಿ ಹೆಸರು ಬಂದುದನ್ನು ಡಾ. ಗದ್ದಗಿಮಠರು ತಮ್ಮ ‘ಜಾನಪದ ಗೀತೆಗಳು’ ಕೃತಿಯಲ್ಲಿ ತಿಳಿಸಿರುವರು. ಆ ಎರೆಗಂಬಳಿಯ ಗುರುಸಿದ್ಧ ಶಿವಯೋಗಿಗಳು ಮುಪ್ಪಿನ ಷಡಕ್ಷರಿಗಳ ದೀಕ್ಷಾಗುರುಗಳು. ತಮ್ಮ ವೈಯಕ್ತಿಕದ ಹಾಗೂ ತಂದೆ ತಾಯಿಗಳ ಪ್ರಸ್ತಾಪ ಮಾಡದ ಷಡಕ್ಷರಿಗಳು ತಮ್ಮ ಒಂದು ಹಾಡಿನಲ್ಲಿ ಗುರು ಸಿದ್ಧಲಿಂಗ ಶಿವಯೋಗಿಗಳವರನ್ನು ಮನದುಂಬಿ ಕೊಂಡಾಡಿರುವರು:
ಎರೆಗಂಬಳಿಯ ಸಿದ್ಧ
ವರಲಿಂಗ ನಾಮದಿಂ
ಹರಣೆ ನೀನೆನಗೆ ದೀಕ್ಷೆಯ ಮಾಡಿದೆ
ವರ ಷಡಕ್ಷರಿಯ ದೇ
ವರ ನಾಮದಿಂದೆನಗೆ
ಅರುಹಿದಿರಿ ಶಿವಶಾಸ್ತ್ರದನುಭವವನು|
ಪ್ರಸ್ತುತ ಪದ್ಯ ಗುರುಶಿಷ್ಯರ ನೇರ ಸಂಬಂಧವನ್ನು ಸ್ಪಷ್ಟವಾಗಿ ಸೂಚಿಸಿದೆ. “ಷಡಕ್ಷರಿಯ ದೇವರ ನಾಮದಿಂದೆನಗೆ ಅರುಹಿದಿರಿ” ಎಂದು ಹೇಳಿರುವದನ್ನು ನೋಡಿದರೆ ಇವರ ಮೊದಲ ಹೆಸರು ಬೇರೆ ಇದ್ದಿರಬೇಕೆಂದೂ ಗುರುಕರುಣೆಯ ನಂತರ ಷಡಕ್ಷರಿ ಎಂಬ ಹೆಸರನ್ನು ಪಡೆದಿರಬೇಕೆಂದೂ ಹೇಳಲು ಅವಕಾಶವಿದೆ.
ಕಾಲಾಂತರದಲ್ಲಿ ಮುಪ್ಪಿನ ಷಡಕ್ಷರಿಗಳು ಎರೆಗಂಬಳಿಯ ಮಠಕ್ಕೆ ಅಧಿಪತಿಗಳಾಗಿದ್ದರೆಂದು ತೋರುತ್ತದೆ. ಎರೆಗಂಬಳಿ ಗ್ರಾಮ ಮೈಸೂರುಜಿಲ್ಲೆ ಯಳಂದೂರು ತಾಲೂಕಿನಲ್ಲಿದೆ. ಇಂದಿಗೂ ಅಲ್ಲಿ ಷಡಕ್ಷರಿಗಳ ಗದ್ದುಗೆ ಇದ್ದು ಭಕ್ತಾದಿಗಳಿಗೆ ಜಾಗ್ರತಸ್ಥಾನವಾಗಿದೆ. ಇದಕ್ಕೆ ತುಸುದೂರದಲ್ಲಿ ಶಂಭುಲಿಂಗನ ಬೆಟ್ಟವಿದೆ. ಇದು ನಿಜಗುಣ ಶಿವಯೋಗಿಗಳು ತಪೋನುಷ್ಠಾನಗೈದ ಪವಿತ್ರಕ್ಷೇತ್ರ. ಮುಪ್ಪಿನ ಷಡಕ್ಷರಿಗಳು ತಪಸ್ಸು ಕೈಕೊಂಡ ಒಂದು ಗವಿ ಅಲ್ಲಿದ್ದು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದಿದ್ದರೂ ಪರಸ್ಪರ ಒಬ್ಬರನ್ನೊಬ್ಬರು ತಮ್ಮ ಕೃತಿಗಳಲ್ಲಿ ಹೆಸರಿಸದೆ ಹೋಗಿದ್ದು ಸಂಶಯಕ್ಕೆ ಅವಕಾಶವನ್ನುಂಟು ಮಾಡಿವೆ.
ಮುಪ್ಪಿನ ಷಡಕ್ಷರಿಗಳ ಕಾವ್ಯ ‘ಷಡಕ್ಷರಿಲಿಂಗ’ ಅಂಕಿತದಲ್ಲಿ ಹಾಡಿರುವ ಅನುಭಾವದ ಪದಗಳು ಶಿವಾಷ್ಟಕ, ಶಿವಯೋಗಾಷ್ಟಕಗಳು ಕ್ರಮವಾಗಿ ಶಿವಪೂಜಾ ವೈಭವ, ಶಿವಯೋಗದ ಐಸಿರಿಗಳನ್ನು ವರ್ಣಿಸುವ ಅಷ್ಟಕಗಳಾಗಿವೆ. ಇವೆಲ್ಲ ಮೂಲತಃ ತತ್ವಪದಗಳೇ ಆಗಿದ್ದು ಒಂದೆಡೆ ಸಂಗ್ರಹಿಸಿರುವ ಸಂಗ್ರಹಕಾರರು ‘ಸುಬೋಧಸಾರ’ ಎಂದು ಹೆಸರಿಸಿರುವರು. ತಾಳೇಗರಿಯ ಪ್ರತಿಗಳಲ್ಲಿ ಮುಪ್ಪಿನ ಷಡಕ್ಷರಿಸ್ವಾಮಿಗಳವರ ‘ಸ್ವರವಚನಗಳು’ ಮುಪ್ಪಿನ ಷಡಕ್ಷರಿಗಳ ‘ಕೈವಲ್ಯಪದಗಳು’ ಎಂದು ಇವೆ.
ಮುಪ್ಪಿನ ಷಡಕ್ಷರಿಗಳವರ ತಾತ್ವಿಕ ಪದಗಳ ಸಂಗ್ರಹವನ್ನು ೧೯೪೦ರಲ್ಲಿ ಹರ್ಡೆಕರ ಮಂಜಪ್ಪನವರ ಪ್ರಾಮಾಣಿಕ ಪ್ರಯತ್ನದಿಂದಾಗಿ ‘ಸುಬೋಧಸಾರ’ ಎಂಬ ಗ್ರಂಥದಲ್ಲಿ ಸಮಗ್ರ ಸಂಗ್ರಹರೂಪದಲ್ಲಿ ಪ್ರಕಟಿಸಿದರು. ಇತ್ತೀಚೆಗೆ ೧೯೮೭ರಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಮೈಸೂರಿನಿಂದ ‘ಮುಪ್ಪಿನ ಷಡಕ್ಷರಿಗಳ ಕೈವಲ್ಯಪದ (ಸುಬೋಧಸಾರ)’ ಎಂಬ ಹೆಸರಿನಿಂದ ಶಾಸ್ತ್ರಶುದ್ಧವಾದ ೮೭ ಪದಗಳ ಸಂಗ್ರಹದೊಂದಿಗೆ ಪ್ರಕಟಿಸಿದೆ. ಧಾರವಾಡದ ಮುರುಘಾಮಠದವರು ಈ ಕೃತಿಯನ್ನು ಹೆಚ್ಚಿನ ಬದಲಾವಣೆ ಇಲ್ಲದೆ ಅಷ್ಟೇ ಪದಗಳಿಂದ ಮತ್ತೊಮ್ಮೆ ಮುದ್ರಿಸಿರುವರು.
ನಿಜಗುಣರದ್ದು ಅದೈತಪ್ರಧಾನ ಜ್ಞಾನಮಾರ್ಗವಾಗಿದ್ದರೆ, ಷಡಕ್ಷರಿಗಳದ್ದು ಶರಣಸತಿ ಲಿಂಗಪತಿ ಭಾವ ಪ್ರಧಾನವಾದ ಭಕ್ತಿಮಾರ್ಗ, ನಿಜಗುಣರ ಹಾಡು ಉಪನಿಷತ್ತು ಆಗಮಾದಿಗಳ ಪ್ರಭಾವದಿಂದ ಕೂಡಿದ್ದು ಸಾಧಕ ಚೇತನವೊಂದರ ಪ್ರಾಮಾಣಿಕ ಪ್ರಯತ್ನವನ್ನು ಪರಿಚಯಿಸಿಕೊಡುತ್ತವೆ. ನಿಜಗುಣರದು ಮುಖ್ಯವಾಗಿ ವೇದಾಂತದರ್ಶನ. ಆದರೆ ಮುಪ್ಪಿನ ಷಡಕ್ಷರಿಗಳದು ಲಿಂಗನಿಷ್ಠೆಯಿಂದ ಒಡಗೂಡಿದ ಅದಮ್ಯ ಚೇತನ, ಗಂಭೀರ ತತ್ವಗಳನ್ನೊಳಗೊಂಡ ಷಡಕ್ಷರಿಯ ಪದಗಳು ಅತ್ಯಂತ ಸುಲಭ, ಸರಳ, ಸುಲಲಿತ ಶೈಲಿಯಿಂದೊಡಗೂಡಿದ ಅನುಭಾವಬಂಧ. ಮಾನವೀಯತೆ, ಅನುಕಂಪ, ಮಾನವಧರ್ಮದ ಹೆಚ್ಚುಗಾರಿಕೆ ಸಾರುವ, ವೈರಾಗ್ಯ ಬೋಧನೆಯಿಂದೊಡಗೂಡಿದ ಮಾನವ ಜೀವಿತ ರಹಸ್ಯ ಚಿಂತನೆಯಂತಹ ಗಹನವಿಷಯಗಳ ಪ್ರಸ್ತಾಪ ಅತ್ಯಂತ ಸುಲಲಿತವಾಗಿ ಹಾಡುಗಳಲ್ಲಿ ಒಡಮೂಡಿ ಬಂದಿವೆ.
ಷಡಕ್ಷರಿಯ ಹಾಡುಗಳಲ್ಲಿ ಅಧ್ಯಾತ್ಮಿಕ ಸೌಂದರ್ಯ:
ಆಡುವುದು ಶಿವರೂಪ
ಹಾಡುವುದು ಶಿವನುಡಿಯು
ಮಾಡುವುದು ನಿತ್ಯ ಶಿವಪೂಜೆ
ಶರಣರಿಗೆ ಈಡು ಜಗದೊಳಗೆ
ಏನುಂಟು ದೊರೆಯೆ?
ಬಹುರೂಪಿ ಚೌಡಯ್ಯಗಳ ಶಿವನುಡಿಯಂತೆ ತಮ್ಮ ಜೀವನವನ್ನು ಅಳವಡಿಸಿಕೊಂಡವರು ಮುಪ್ಪಿನ ಷಡಕ್ಷರಿಗಳು. ಶಿವಾನುಭವಿಗಳು. ಲಿಂಗಾಸಕ್ತರು. ಅವರ ಹಾಡುಗಳ ಗುಣಲಕ್ಷಣವನ್ನು ಗಣನೆಗೆ ತೆಗೆದುಕೊಂಡರೆ ಸಿದ್ಧಯ್ಯ ಪುರಾಣಿಕರು ಮುನ್ನುಡಿಯಲ್ಲಿ ವ್ಯಕ್ತಪಡಿಸಿದಂತೆ ‘ತಾದಾತ್ಮ್ಯ ತನ್ಮಯತೆ, ಪರವಶತೆ, ವಿರಳತೆ ಭಕ್ತಿಯ ಆವೇಶ, ಅತಿಸಲುಗೆ, ಸಮರಸಭಾವ, ಅನನ್ಯಶರಣತೆ, ವೈರಾಗ್ಯದ ಉಜ್ವಲತೆ, ಇವೇ ಮುಪ್ಪಿನಾರ್ಯರ ಹಾಡುಗಳ ಹೆಗ್ಗುರುತು ಹಾಗೂ ವೈಶಿಷ್ಟ್ಯಗಳೆನ್ನಬೇಕು. ಸರಳತೆ, ಸಂಕ್ಷಿಪ್ತತೆ, ತಾತ್ವಿಕದರ್ಶನದಿಂದ ಪ್ರತಿಯೊಬ್ಬ ವ್ಯಕ್ತಿಯ ಹೃದಯ ತಟ್ಟುವ ಮುಟ್ಟುವ ಅವರ ಮನವನ್ನು ಬೆಳಗಿಸುವ ಅಂಶಗಳು ಕಂಡುಬರುತ್ತವೆ. ಸಾಧಕರ ಹೃದಯದ ಶಿವಭಾವದ ಬೆಸುಗೆಯಲ್ಲಿ ಆತ್ಮಾನುಭವದ ರಸವನ್ನು ಉಸಿರಿಸಿದವರು ಮುಪ್ಪಿನ ಷಡಕ್ಷರಿಗಳು.
ಪ್ರಸ್ತುತ ಲೇಖನದ ಪರಿಮಿತಿಯನ್ನು ಗಮಿನಿಸಿ ಕೆಲವು ಹಾಡುಗಳ ಸಮಾಲೋಚನೆಯ ಮೂಲಕ ಷಡಕ್ಷರಿಗಳ ಜೀವನ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಗುರುತಿಸಬಹುದಾಗಿದೆ. ಅವರ ದಿವ್ಯತತ್ವವನ್ನು ಅರುಹುವ ಒಂದು ಹಾಡು:
ಅವರವರ ದರುಶನಕ
ಅವರವರ ವೇಷದಲ್ಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ
ಅವರವರ ಪೂಜೆಗಂ
ಅವರವರಿಗೆಲ್ಲ ಶಿವ ನೀನೊಬ್ಬನೆ||
ಹೋರಾಟವಿಕ್ಕಿಸಲು
ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ನೀನಲ್ಲದೆ
ಆರು ಅರಿಯರು ನೀನು
ಬೇರಾದ ಪರಿಗಳನ್ನು
ಮಾರಾರಿ ಶಿವ ಷಡಕ್ಷರಿಲಿಂಗವೆ||
ಸಕಲ ಜನಮನವನ್ನು ಮುಟ್ಟಿ ಸ್ಪಂದಿಸಬಲ್ಲ ದೈವೀಗುಣ ಮುಪ್ಪಿನ ಷಡಕ್ಷರಿಗಳ ಹಾಡುಗಳಲ್ಲಿವೆ. ಭಾವ ತುಂಬಿ ತುಳುಕುವ ಸರಳ ಸುಂದರ ಅಭಿವ್ಯಕ್ತಿ ಇಲ್ಲಿ ನೆಲೆನಿಂತಿದೆ ಶಿವಕಾರುಣ್ಯಕ್ಕಾಗಿ ಹಂಬಲಿಸಿ ಸಂಸಾರದ ನಶ್ವರತೆಯಲ್ಲಿ ಶಾಶ್ವತವಾದುದನ್ನು ಕಂಡುಕೊಳ್ಳುವ ಸಾಧಕನ ಜೀವ ಎಚ್ಚರಿಕೆಯ ಕಡೆಗೆ ತಿರುಗುವ ಸೂಕ್ಷ್ಮ ದೃಷ್ಟಿಕೋನ ಇಲ್ಲಿ ಒಡಮೂಡಿದೆ.
ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದುದು ಅವರ ಆತ್ಮಶೋಧನೆ, ಮಾನಸಿಕ ಚಿಂತನೆ, ಸ್ವಾಭಿಮಾನ, ವಚನಕಾರರದು ಈ ನಿಟ್ಟಿನಲ್ಲಿ ನವ್ಯಪ್ರಜ್ಞೆ ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ಅವರವರ ದರುಶನ, ವೇಷ,ಭಾವ, ಪೂಜೆಗೆ ಒಲಿಯುವಂತೆ ಎರಡಳಿದು ಒಂದಾದಲ್ಲಿ ಅವನ ದರ್ಶನವೆಂಬ ಸೂಕ್ಷ್ಮ ನುಡಿಮುತ್ತನ್ನು ವ್ಯಕ್ತಪಡಿಸಿರುವರು. ಶರಣರು ತಮ್ಮ ಸಾಧನೆಯ ಮಾರ್ಗದಲ್ಲಿ ಅವಲಂಬಿಸಿದುದು ತಾತ್ವಿಕ ಹಿನ್ನೆಲೆಯನ್ನು ಅದನ್ನು ತಾತ್ವಿಕ ಜಿಜ್ಞಾಸೆಯ ಮಟ್ಟದಲ್ಲಿ ನಿಲ್ಲಿಸದೆ ಅನುಭಾವದಿಂದ ಆನಂದದತ್ತ ಮುನ್ನಡೆಸಿದರು. ಪ್ರಧಾನವಾಗಿ ಅವರು ಅನುಸರಿಸಿದುದು ಅನುಭಾವಮಾರ್ಗ, ಅದರ ಅವಲಂಬನೆಗೆ ಹಂದರವಾಗಿ ವೀರಶೈವ ಸಿದ್ಧಾಂತ ಪರಿಣಮಿಸಿತು. ಅದರಲ್ಲೂ ವೀರಶೈವರ ಷಟ್‌ಸ್ಥಲಮಾರ್ಗ ಅವರಿಗೆ ಹೆಚ್ಚಾಗಿ ಹಿಡಿಸಿತು. ಭಕ್ತಿ ಜ್ಞಾನ ಕ್ರಿಯೆಗಳು ಇಲ್ಲಿ ಮುಪ್ಪುರಿಗೊಂಡು ಸಾಮರಸ್ಯಕ್ಕೇರಿಸುವ ನಿಚ್ಚಣಿಕೆಗಳನ್ನು ನಿರ್ಮಿಸಿವೆ. ಶರಣರ ಸಾಧನೆಯಿಂದ ಷಟ್‌ಸ್ಥಲ ಪರಿಪೂರ್ಣತೆಯೊಂದಿಗೆ ಹೊಸಕ್ರಾಂತಿಯನ್ನು ಪಡೆಯಿತು. ಈ ಚೌಕಟ್ಟಿನಲ್ಲಿ ಮುಪ್ಪಿನ ಷಡಕ್ಷರಿಗಳ ಅನುಭಾವ ಪದಗಳ ಅಧ್ಯಯನ ಇನ್ನೂ ವ್ಯವಸ್ಥಿತವಾಗಿ ನಡೆಯಬೇಕಿದೆ.
ಆರ್ತಭಾವ ಸಾಧಕನ ಆರಂಭದ ಒಂದು ಸ್ಥಿತಿಯೆಂಬುದನ್ನು ಒಂದಲ್ಲ ಒಂದು ರೂಪದಲ್ಲಿ ಜಗತ್ತಿನ ಎಲ್ಲ ಸಾಧಕರ ಜೀವನದಲ್ಲಿಯೂ ಕಾಣಬಹುದು. ಬಸವಣ್ಣನವರ “ಅಯ್ಯಾ ಅಯ್ಯಾ ಎಂದು ಕರೆಯುತ್ತಲಿದ್ದೇನೆ, ಓ ಎನ್ನಲಾಗದೇ ಅಯ್ಯ, ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ, ಪರಲೋಕ ದೂರನ’ ಎಂದು ಮನದ ಹಂಬಲವನ್ನು ವ್ಯಕ್ತಪಡಿಸಿದ್ದು ಇದೇ ಮನಸ್ಥಿತಿಯಲ್ಲಿ, ನಡೆ ಮತ್ತು ನುಡಿಗಳ ಸಮನ್ವಯಕ್ಕೆ ಅನುಭಾವಿಗಳಿತ್ತ ಮಹತ್ವ ಹೆಚ್ಚಿನದು. ನುಡಿದಂತೆ ನಡೆವುದನ್ನೆ ಅವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡು ಬಂದವರು. ದಿಟವ ನುಡಿವುದು ನುಡಿದಂತೆ ನಡೆವುದು’ ಈ ಪರಿಶುದ್ಧ ಸಾಧನೆಗೆ ನೈತಿಕ ನಿಷ್ಠೆಬೇಕು. ಅಂತರಂಗದ ಅರಿವು ಬಹಿರಂಗದ ವ್ಯಾಪಾರಕ್ಕೆ ಕಡಿವಾಣ ಹಾಕುವ ಯಂತ್ರ, ಅಂತರಂಗದ ಆತಶುದ್ಧಿ ಅವರ ಅರಿವಿಗೆ ಪೂರಕವೆನಿಸಿತ್ತು.
ಇಂಥ ಸಂದರ್ಭದಲ್ಲಿ ಸಾಧಕನಿಗೆ ಆತ್ಮಜಾಗೃತಿ ತುಂಬ ಮುಖ್ಯ. ವಿಶ್ವಾಸ ಮತ್ತು ಕ್ರಿಯೆಗಳು ಭಕ್ತಸ್ಥಲದ ಮುಖ್ಯ ಲಕ್ಷಣಗಳು, ಪಾಪಸಮೂಹವನ್ನು ಕಳೆದುಕೊಂಡು ಶುದ್ಧಾಂತಃಕರಣನಾದವನು ಪಿಂಡಸ್ಥಲಯೋಗ್ಯನಾಗುತ್ತಾನೆ. ಅವನಲ್ಲಿ ಶಿವತತ್ವ ಸುಪ್ತವಾಗಿ ಅಡಗಿರುತ್ತದೆ. ತಾನು ಶಿವಸ್ವರೂಪನೆಂದು ಶಿವನಾಗಿಯೆ ಶಿವನನ್ನು ಪೂಜಿಸುವುದು. ಹೀಗೆ ತನ್ನ ಸ್ವಸ್ವರೂಪವನ್ನು ತತ್ವತಃ ತಿಳಿದ ಭಕ್ತನಿಗೆ ವಿಸೃಮತಿಯೊಂದು ಈ ಮರೆವೆಗೆ ಕಾರಣವಾಗಿ ಸಂಸಾರದ ವಿಷಯದಲ್ಲಿ ಜಿಹಾಸೆ ಸಹಜವಾಗಿಯೇ ಹುಟ್ಟುತ್ತದೆ. ಇದರ ಒಂದು ಹಂತವನ್ನು ‘ಸಂಸಾರಹೇಯಸ್ಥಲ’ ಎಂದು ಕರೆದರು ಶರಣರು.ಇದು ಕೇವಲ ತಿರಸ್ಕಾರದ ಮಾರ್ಗವಲ್ಲ: ಹೇಯವಾದ ಸಂಸಾರವನ್ನು ಉಪಾದೇಯವಾಗಿಸಬಹುದಾದ ಜೀವನ ಕೌಶಲವನ್ನು ಕಂಡುಕೊಳ್ಳುವ ಮಾರ್ಗವೂ ಹೌದು, ಶಿವಭಾವವನ್ನು ಆಹ್ವಾನಿಸುತ್ತ ಮನಸ್ಸನ್ನು ಆ ದೈವೀನಿಲುವಿಗೆ ತಂದುಕೊಳ್ಳಬೇಕೆಂಬುದನ್ನು ಹೇಳುವ ಕಳಕಳಿಯ ಅಭಿವ್ಯಕ್ತಿ ಮುಪ್ಪಿನ ಷಡಕ್ಷರಿಗಳದು.
ಹುಟ್ಟು ಸಾವುಗಳ ಭವಚಕ್ರದಲ್ಲಿ ಸಿಲುಕಿಕೊಳ್ಳದೆ ಅದರಿಂದ ಪಾರುಗಾಣುವಲ್ಲಿ
‘ಧರೆಯತ್ತಲೆನ್ನನ್ನು ಬರಿಸದಿರು ಸದ್ಗುರುವೆ ಧರೆಯ ಪಾಪದೊಳು ನಾ ಜನಿಸಲಾರೆ’
ಎಂದು ಸಂಸಾರದ ಜಂಜಡದ ಬಗ್ಗೆ ಜಿಗುಪ್ಸೆ ಪಡುವ ಸಾಧಕ ಇದನ್ನು ಬಿಟ್ಟು ಓಡಿಹೋಗಬೇಕೆಂಬುದಿಲ್ಲ. ಮನುಷ್ಯ ಜೀವನಕ್ಕೆ ಇದು ತ್ಯಾಜ್ಯವೆಂಬ ಭಾವವಲ್ಲ ಇದನ್ನು ಮೀರಿ ಮುನ್ನಡೆಯಬೇಕಾದರೆ ನಿರ್ಲಿಪ್ತ ಮನೋಭಾವ ಅಷ್ಟೇ ಅವಶ್ಯಕ. ಪರಮಾತ್ಮನ ಕಾರುಣ್ಯ ಪಡೆಯುವ ಮಾರ್ಗದಲ್ಲಿ ಮುನ್ನಡೆಯುವಾಗ ಆತ್ಮವೀಕ್ಷಣೆ ಅದರ ಮೊದಲ ಮೆಟ್ಟಿಲು, ಸಾಧಕಲೋಕದ ಆಕರ್ಷಣೆಯಿಂದ ವಿಮುಖವಾಗಿ ಅಂತರ್ ನಿರೀಕ್ಷಣೆಯ ನಿಷ್ಠೆಯನ್ನು ಕೈಗೊಳ್ಳಬೇಕಾಗುತ್ತದೆ
ʼʼ ಮಾಯೆ ನೀನು ಚಲುವೆ, ಕಾಯ ಮುನ್ನವೆ ಚೆಲುವು,
ಹೇಯವಾಯಿತು. ಒಳಗನರಿತ ಬಳಿಕʼʼ
ಎಂದು ಮಾಯೆಯನ್ನು ಕುರಿತು ಚಿಂತಿಸಿ ಅದರ ಹೇಯತನಕ್ಕೆ ನಾಚಿ ಹಿಂದೆ ಸರಿದಿದ್ದಾರೆ. ನಶ್ವರವಾದ ಮೌಲ್ಯಗಳ ತಾತ್ಕಾಲಿಕ ದೃಷ್ಟಿಯಿಂದ ಪರಿಮಿತಗೊಳ್ಳದೆ, ಶಾಶ್ವತ, ಚಿರಕಾಲ ಬಾಳುವ ಮೌಲ್ಯಗಳ ಅದಮ್ಯ ಅಭೀಪ್ಸೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ಮಾಡಿದ್ದೂ ಉಂಟು. ಇದಕ್ಕೆ ಪ್ರೇರಣೆ ಈ ಲೌಕಿಕಸುಖವನ್ನು ಕುರಿತ ಅತೃಪ್ತ ಮನೋಭಾವ. ಇಲ್ಲಿನ ಸುಖಸಾಧನಗಳ ವಿಚಾರದಲ್ಲಿ ಅತೃಪ್ತಿ ಮೂಡದ ಹೊರತು ಇವುಗಳಾಚೆಯ ಸುಖದ ಅಭೀಪ್ಸೆ ತೀವ್ರವಾಗುವುದಿಲ್ಲ. ಆದುದರಿಂದ ಇವುಗಳ ವಿಚಾರದಲ್ಲಿ ಅತೃಪ್ತಿಯನ್ನು ಕಂಡುಕೊಳ್ಳುವಂತಹ ಆತ್ಮಜಾಗೃತಿಯನ್ನು ಪ್ರತಿಜೀವಿಗಳಿಗೆ ಬೋಧಿಸುವ ಪ್ರತಿಜ್ಞೆ ಷಡಕ್ಷರಿಗಳವರ ವಚನಗಳಲ್ಲಿ ನೆಲೆನಿಂತಿವೆ.
ತನ್ನ ಕಾಯವನ್ನೇ ಶಿವನ ಉನ್ನತಾಲಯ ಮಾಡಿ ತನ್ನ ಸರ್ವಾಂಗಗಳನ್ನು ಮನಪ್ರಾಣಗಳನ್ನು ಚನ್ನ ಷಡಕ್ಷರಿಗೆ ಸಮರ್ಪಿಸಿದೆ:
ಎನ್ನ ಕಾಲುಗಳೆರಡು ಉನ್ನತ ಕಂಭವೈ
ಎನ್ನ ಒಡಲೇ ನಿನಗೆ ಶಿವಾಲಯ, ಎನ್ನ ತೋಳುಗಳೆರಡು
ಉನ್ನತದ ವದನಕ್ಕೆ ಎನ್ನ ಶಿರ ಸೌವರ್ಣ ಕಲಶವಯ್ಯ
ಎನ್ನ ಸರ್ವಾಂಗವೆನ್ನ ನಿನ್ನ ಪರಿಣಾಮಕ್ಕೆ ಚೆನ್ನಾಗಿ ಸಲಿಸುವೆನು ಎಲೆ ಲಿಂಗವೆʼ
ತನ್ನ ದೇಹವನ್ನೇ ಇಷ್ಟಲಿಂಗಕ್ಕೆ ಎಡೆಮಾಡುವ ಸರ್ವಸಮರ್ಪಣಾಭಾವ ಇಲ್ಲಿ ಸುವ್ಯಕ್ತವಾಗಿದೆ.
ಶಿವಭಾವ ನೆಲೆಗೊಂಡ ಬಳಿಕ:
ಶಿವಭಾವದ ನೆಲೆಯನ್ನು ಸಾಧಿಸಲು ತಾರುಣ್ಯದಲ್ಲಿಯೆ ತೀವ್ರ ವೈರಾಗ್ಯದಿಂದ ವಿರಕ್ತಾಶ್ರಮ ತಳೆದು ಯೋಗಸಾಧನೆಯಲ್ಲಿ ತೊಡಗಿದವರು ಷಡಕ್ಷರಿಗಳು. ಆಧ್ಯಾತ್ಮದ ಸಕಲ ಹಂತಗಳನ್ನು ಏರಿ ಪ್ರತ್ಯಕ್ಷಾನುಭವವನ್ನು ಪಡೆದವರು. ಆಂತರಿಕ ಸಾಧನೆಯ ಆಧ್ಯಾತ್ಮಿಕ ಬೆಳಸಿನ ಅನುಭಾವದೊಂದಿಗೆ ಸಂಗತಗೊಂಡವರು, ಕುಡಿಯೊಡೆದು ಬೆಳೆಯುವ ಪೈರಿನಂತೆ ಸಹಜವಾಗಿಯೆ ಮೂಡಿ ಬಂದುದು ಅವರ ತತ್ವವಲ್ಲರಿ:
‘ಧರೆಯ ಸುಖದ ಭೋಗವೆನಗೆ ಹರಿದು ಹೋಗಲಿ, ಒಡೆದ ಗಡಿಗೆ
ಹರಕು ಜೋಳಿ ಎಡದ ಕೈಯೊಳು ಮುರಿದ ಕೋಲು ಇಷ್ಟೇ ಸಾಕು’
ಎಂಬ ಅವರ ಒಂದು ಹಾಡು ಷಡಕ್ಷರಿಗಳ ಅಸೀಮ ವೈರಾಗ್ಯಭಾವವನ್ನು ಬಿಂಬಿಸಿದೆ. ಇಲ್ಲಿ ಮುಖ್ಯವಾಗಿ ಕಾಣುವುದು ಅವರ ವೈರಾಗ್ಯದತ್ತ ಒಲಿದ ತೀವ್ರವಾದ ಒಲವು, ಸಾಧನೆಯ ಎಲ್ಲ ಹಂತಗಳಲ್ಲಿ ಇದು ತುಂಬ ಅವಶ್ಯಕ. ‘ತ್ಯಾಗಭೋಗ ಸಮನ್ವಯ’ ಅಥವಾ ‘ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ ಎಂಬ ಘೋಷಣೆಗಳು ದೇಹ ದಂಡನೆಯ ತೀವ್ರ ಸಂಯಮ ನಿಯಮನಿಷ್ಠೆಗಳು ಅಗತ್ಯ.
ದಂಡಿಸದೆ ದೇಹವನು ಖಂಡಿಸದೆ ಕರಣವನು ಉಂಡುಡು ಸ್ವರ್ಗಕೈದಲ್ಕೆ ಅದನೇನು ರಂಡೆಯಾಳುವಳೇ ? ಎಂದು ಸರ್ವಜ್ಞ ಹೇಳಿದ್ದು ಇದೇ ಅರ್ಥದಲ್ಲಿಯೆ. ಶರಣರ ತ್ಯಾಗಭೋಗ ಸಮನ್ವಯ ಸಂಯಮರಹಿತವಾದುದಲ್ಲ, ಆದರೆ ಈ ಸಂಯಮ ಕೃತಕವಾಗದೆ ಅಂತರಂಗದ ಅರಿವಿನಿಂದ ಉಂಟಾದ ಚಿತ್ತಶುದ್ಧಿಯಿಂದ ಬಂದುದು. ಇಲ್ಲಿ ಷಡಕ್ಷರಿಗಳು ಹೇಳುವ ವೈರಾಗ್ಯವೂ ಜೀವನವನ್ನು ಅರಿವಿನತ್ತ ತಿರುಗಿಸುವ ಎಚ್ಚರಿಕೆಯಿಂದ ಕೂಡಿದ್ದು, ಇಡೀ ಸೃಷ್ಟಿವಿನ್ಯಾಸವನ್ನೇ ದೂರದಿಂದ ನಿಂತು ನೋಡುವ ಸಾಕ್ಷಿಪ್ರಜ್ಞೆ ಇಲ್ಲಿ ಎಚ್ಚರಿಕೆಯಿಂದ ಕಾರ್ಯಮಾಡಿದೆ.
“ನಿನ್ನೊಳಗೆ ಕಾಲನಿಹ, ನಿನ್ನೊಳಗೆ ನೇಣು ಕತ್ತರಿಗಳಿಹವು, ನಿನ್ನೊಳಗೆ ವಿಷವಿಹುದು, ನಿನ್ನೊಳಗೆ ನರಕಗಳುಂಟು. ಛೀ ಮಾರಿ ಹೋಗತ್ತ’ ಎಂದು ಸಂಸಾರದ ಮೋಹ ಮಾಯೆಗಳನ್ನು ಹೀಗಳೆದು ಒಳಗನ್ನು ಅರಿಯುವ ಅಂತರ್ದೃಷ್ಟಿಯನ್ನು ತೆರೆಯಬೇಕೆಂದು ಆ ದೇವದೇವನಲ್ಲಿ ಬಿನ್ನವಿಸಿಕೊಂಡಿರುವರು. ಈ ಲೋಕದ ನಾಮರೂಪ ಕ್ರಿಯಾತ್ಮಕವಾದ ಅರ್ಥವತ್ತಾದ ಚಿತ್ರವಿದು. ಇದನ್ನು ಎದುರಿಸುವಲ್ಲಿ ಅನೇಕ ವಿಫಲತೆಗಳನ್ನು ಮನಗಂಡಿದ್ದರೂ ಅದು ನಿರಾಶೆಯಿಂದ ಪ್ರೇರಿತವಾದ ನಿರಸನವಾಗಿರದೆ ಮಹದಾಶೆಯಿಂದ ಕೂಡಿದ ಆತ್ಮಜಾಗೃತಿಯಾಗಿದೆ.
ಸಾಧನೆ ದೃಢಗೊಂಡ ಬಳಿಕ ಒಂದು ನೈತಿಕ ನೆಲೆಗಟ್ಟಿನ ಮೇಲೆ ಅದು ಬೆಳೆಯುತ್ತದೆ. ಹಿಂದಿನ ಎರಡೂ ಸ್ಥಲಗಳಲ್ಲಿ ಕಾಣುವ ತಳಮಳ ಹಂಬಲ ಹಾರೈಕೆಗಳನ್ನು ದಾಟಿ ಗುರಿಯತ್ತ ಮುನ್ನಡೆಯುವ ನೈತಿಕನಿಷ್ಠೆ ಇಲ್ಲಿ ಕಾಣುತ್ತದೆ. ವೈರಾಗ್ಯವೆನ್ನುವುದು ಜೀವನವನ್ನು ಸಾಗಿಸುವ ಹೇಡಿಗಳ ಮುಖವಾಡವಾಗಬಾರದೆನ್ನುವ ಅಭಿಪ್ರಾಯ ಇಲ್ಲಿಯ ಅನೇಕ ಹಾಡುಗಳಲ್ಲಿ ಒಡಮೂಡಿವೆ. ಭಕ್ತಿ ಪರಮಪ್ರೇಮವಾದ ತುಂಬು ಹೃದಯದ ಪ್ರಾರ್ಥನೆಯಿಂದ ಮೊದಲ್ಗೊಂಡು ತತ್ವಚಿಂತನೆಯ ಅಂತರ್ ದೃಷ್ಟಿಯಿಂದ ದೀಪ್ತವಾದ ದರ್ಶನದವರೆಗೂ ಬೆಳೆಯಬೇಕು. ಪೂರ್ಣವಿಕಾಸದೃಷ್ಟಿಯನ್ನು ಪಡೆಯಬೇಕು. ಭಕ್ತಿಯ ಅಭಿವ್ಯಕ್ತಿ ಮೊದಲು ತನುವಿನಲ್ಲಿ, ಅನಂತರ ವಚನದಲ್ಲಿ ಈ ಎರಡಕ್ಕೂ ಹಿನ್ನೆಲೆಯಾಗಿದ್ದ ಮನದಲ್ಲಿಯೆ ಗಟ್ಟಿಗೊಂಡು ಬೆಳೆಯಬೇಕು. ಲಿಂಗಪೂಜೆಯಲ್ಲಿ ಅದು ಸಾಕ್ಷಾತ್ಕಾರಗೊಳ್ಳಬೇಕು:
ಎನ್ನ ಸಮತೆಯ ಜಲವು
ಎನ್ನ ಸದ್ಗುಣ ಗಂಧ
ಎನ್ನ ನಿತ್ಯತ್ವವೇ ಅಕ್ಷತೆಗಳು
ಎನ್ನ ಜ್ಞಾನವೆ ಪುಷ್ಪ
ಎನ್ನ ಭಕ್ತಿಯ ಬೋನ
ಎನ್ನ ಮನವೇ ನಿಮಗೆ ಪೂಜಾರಿಯು||
ಜೀವಭಾವವಳಿದು ಶಿವಭಾವ ನೆಲೆಗೊಂಡು ಶಿವಾನುಭವದ ನಿಲುವಿಗೇರುವ ಅಂತರಂಗದ ದಿವ್ಯಮಾರ್ಗವನ್ನು ಷಡಕ್ಷರಿ ಸಾಧಕರಿಗೆ ತಿಳಿಸಿರುವರು. ಚಿತ್ತಸಮತೆ ಎಂಬ ಜಲ, ಸದ್ಗುಣವೆಂಬ ಗಂಧ, ನಿತ್ಯತ್ವವೆಂಬ ಅಕ್ಷತೆಗಳು, ಜ್ಞಾನವೆಂಬ ಪುಷ್ಪ, ಭಕ್ತಿ ಎಂಬ ಬೋನ, ಮನಸ್ಸೆಂಬ ಪೂಜಾರಿಯಿಂದ ನೈವೇದ್ಯ ಮಾಡಿಸುವ ಶಿವಮಾನಸಪೂಜೆ. ಎಷ್ಟು ಅರ್ಥಪೂರ್ಣವಾಗಿದೆ ಈ ಶಿವಪೂಜೆ!
ಸಾಧಕನಿಗೆ ಶರಣಸ್ಥಲದಲ್ಲಿ ಆನಂದಭಕ್ತಿಯ ಆಚರಣೆಯಿಂದ ಪರಮಾತ್ಮನಲ್ಲಿನಿಶ್ಚಲಭಾವ, ಸತಿಪತಿಭಾವ ನೆಲೆಗೊಂಡು ಶಾಶ್ವತಸ್ಥಿತಿಯ ನಿಲವು ಮೂಡುತ್ತದೆ. ಅಧ್ಯಾತ್ಮಪಥದಲ್ಲಿ ನಡೆವ ಯಾತ್ರಿಕನ ಮನಸ್ಸಿನ ಹೊಯ್ದಾಟದ ಪ್ರತಿಯೊಂದು ನೆಲೆಯು ಇಲ್ಲಿ ಪ್ರಾಮಾಣಿಕ ಅನಿಸಿಕೆಗಳೆಂಬಂತೆ ಚಿತ್ರಿತವಾದುದೂ ಒಂದು ವಿಶೇಷವೆಂದೇ ಹೇಳಬೇಕು. ಮುಪ್ಪಿನ ಷಡಕ್ಷರಿಗಳ ಅಧ್ಯಾತ್ಮಿಕ ಕವನಗಳು ಶಿವಭಾವ ನೆಲೆಗೊಳ್ಳುವ ಸಂದರ್ಭದಲ್ಲಿ ಹೊರಹೊಮ್ಮಿದವು. ಹೀಗಾಗಿ ಮಾನವನ ಮನವನ್ನು ಮಹತ್ತಿಗೆ ತಿರುಗಿಸುವ ಅಲೌಕಿಕ ಸೌಂದರ್ಯ ಪಡೆದವು. ಶಿವಕಾರುಣ್ಯ ಪಡೆದು ನಿರಂತರ ಜಾಗೃತಿಯ ನೈತಿಕಸಾಧನೆಯಿಂದ ಹದಗೊಂಡು ಅಂತರ್ಮುಖ ಯೋಗಸಾಧನೆಯಲ್ಲಿ ಮುಂದುವರೆದಿವೆ. ಇಂಥ ದೃಢವಾದ ಸಾಧನೆ ಇಲ್ಲದೆ ಸಹಜವೈರಾಗ್ಯ ಸಾಧಿಸದೆ ಯಾವುದೋ ಆವೇಶದ ಕ್ಷಣದಲ್ಲಿ ಮೂಡಿ ಮರೆಯಾದರೆ ಅಂಥ ‘ವೈರಾಗ್ಯ ಇಲಿಯನ್ನು ಕಂಡು ಬೆಕ್ಕು ಪುಟನೆಗೆದಂತೆ’. ಇಂಥ ಅಲ್ಪ ಕ್ಷಣಿಕ ವೈರಾಗ್ಯವನ್ನು ಪ್ರಸೂತಿ ವೈರಾಗ್ಯ, ಪುರಾಣವೈರಾಗ್ಯ ಮತ್ತು ಸ್ಮಶಾನವೈರಾಗ್ಯವೆಂದು ಹೇಳಿದವರು ಅನುಭಾವಿ ಸರ್ಪಭೂಷಣ ಶಿವಯೋಗಿಗಳವರು.
ಅವರ ದೃಷ್ಟಿಯಲ್ಲಿ ಭೋಗಜೀವನ ನಶ್ವರ, ಭೋಗಜೀವನದ ಬಿಡುಗಡೆ ಬಯಸಿ ತ್ಯಾಗಮಾರ್ಗದಲ್ಲಿ ಯೋಗ ಸಾಧನೆ ಕೈಕೊಂಡು ಮುಂದುವರೆಯಲು ತಿಳಿಸಿರುವರು:
ಧರೆಯ ಸುಖದ ಭೋಗವೆನಗೆ
ಹರಿದು ಹೋಗಲಯ್ಯ ನಿಮ್ಮ
ಚರಣಕಮಲದಲ್ಲಿ ಮನವು ಮಗ್ನವಾಗಲಿ||
ಎಂದು ಸಾರಿದ ಮುಪ್ಪಿನ ಷಡಕ್ಷರಿಗಳು ಅಲೌಕಿಕ ಪ್ರೇಮಕ್ಕೆ ಮನ `ಮಾರಿ ಕೊಂಡಿರುವರು. ಅಧ್ಯಾತ್ಮಪಥಿಕರಾಗಿ, ಸತ್ಯ ಸಂಶೋಧಕರಾಗಿ ಭೋಗ ಜೀವನ ಅಳಿಸಿ ಸದಾ ಪರಮಾತ್ಮನ ಪಾದಕಮಲದಲ್ಲಿ ಮನವನ್ನು ಮುಡಿಪಾಗಿರಿಸಿ ತಮ್ಮ ಬದುಕನ್ನೇ ಒಂದು ಸಂದೇಶವನ್ನಾಗಿರಿಸಿದ್ದಾರೆ.
ಷಡಕ್ಷರಿಗಳದು ಶಿವಶರಣರ ಸತ್ಯಶುದ್ಧ ಆಚರಣೆಯಲ್ಲಿ ದೃಢನಂಬುಗೆ. ಆ ವಿಶ್ವಾಸವನ್ನು ಯಾರೂ ಅಲುಗಿಸುವಂತಿಲ್ಲ, ಶಿವಶರಣರೇ ಅವರಿಗೆ ತಂದೆತಾಯಿಗಳು, ಅವರೇ ಬಂಧುಬಳಗ, ತವರಿನ ಮಮತೆಯ ಕಣ್ಮಣಿಗಳು. ಆ ಮನೆತನದಲ್ಲಿ ಹುಟ್ಟಿದ ಹಿರಿಯಮಗಳು ತಾನು ಅಮಾವಾಸೆ ಕಳೆದು ಹುಣ್ಣಿಮೆ ಹತ್ತಿರ ಬಂದರೂ ಅವರು ತನ್ನನ್ನು ಕರೆಯ ಬರುವುದು ಬೇಡವೇ ? ಹೆಣ್ಣಿಗೆ ಹೆತ್ತ ತಾಯಿಯ ಮುಂದೆ ತನ್ನ ಸುಖ ದುಃಖಗಳನ್ನು ಹಂಚಿಕೊಳ್ಳುವ ಹೆಬ್ಬಯಕೆಯಂತೆ, ಪರಮಾತ್ಮನೆಂಬ ಮಾತೃಹೃದಯದ ದೇವತೆಯ ಮುಂದೆ ತನ್ನ ಲೌಕಿಕದ ಗಂಟನ್ನು ಬಿಚ್ಚಿಕೊಳ್ಳಬೇಕೆಂಬ ಕಳವಳ ಕಾತುರ ಮಡುಗಟ್ಟಿ ನಿಂತಿವೆ. ಇದೇ ಲೌಕಿಕ ಭಾವನೆ ವಿಕಸಿತಗೊಂಡು ಅಲೌಕಿಕಕ್ಕೆ ಉದಾತ್ತೀಕರಣಗೊಳ್ಳುವಂತೆ ಲೌಕಿಕದಿಂದಲ್ಲವೇ ಪಾರಮಾರ್ಥಿಕ ಸುಖವನ್ನು ಮನಗಾಣುವುದು. ಇದನ್ನೇ ಶರಣರು ಕರೆದುದು ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ವೆಂದು. ಈ ಕಮ್ಮಟದ ಸಾಧನೆಗೆ ಅವರು ಕೈಕೊಂಡ ಅತ್ಯಂತ ಸರಳ ಸಹಜ ಮಾರ್ಗ ಏನಿರಬಹುದೆಂದು ಗಮನಿಸೋಣವೇ ?
“ಅಕ್ಕನಾಗಮ್ಮ ಸತ್ಯಚಂಗಳೆ ಚಲ್ವೆ, ಅಕ್ಕರೆಯ ಮಹಾದೇವಿ ಸುಗ್ಗವ್ವೆಯ ಚಿಕ್ಕಕೊಡಗೂಸಿನವರಕ್ಕರೆಯ ತೊತ್ತಿನ ಮಗ ತಾನೆಂದು ತಿಳಿದು ಅವರು ತಿಂದುಂಡು ಬಿಟ್ಟುದನು ತಿಂದು ಅವರಂಗಳವ ಗುಡಿಸಿ ಬಾಗಿಲ ಕಾಯ್ವೆ’ ಎಂದು ಹೇಳುವಲ್ಲಿ ಆ ತವರುಮನೆಯವರಲ್ಲಿ ಅವರಿಟ್ಟ ಪ್ರೇಮ ಮಮತೆ, ಅತ್ಮೀಯತೆ ಭಾವೈಕ್ಯತೆ, ಪ್ರಾಮಾಣಿಕ ನಿರ್ಮಲ ಅನಿಸಿಕೆ ವ್ಯಕ್ತವಾಗದೇ ಇರದು.
ಶಿವಶರಣರಲ್ಲಿ ಅವರಿಗೆ ಬೆಳೆದ ತಾದಾತ್ಮ್ಯತೆ ಹತ್ತು ಹಲವಾರು ಮುಖಗಳಲ್ಲಿ ಕಾವ್ಯವಾಹಿನಿಯಾಗಿ ಹರಿದು ಬಂದಿದೆ. ಮುಪ್ಪಿನ ಷಡಕ್ಷರಿಗಳವರ ಒಂದು ಹಾಡು ‘ಮಗಳೆ ಎನ್ನಯ ಮಾತು ಕೇಳು’ ಎಂದು ಆರಂಭಗೊಳ್ಳುವಂತಹುದು. ಹೆತ್ತವರು ಪತಿಗೃಹಕ್ಕೆ ತೆರಳುತ್ತಿರುವ ಮಗಳಿಗೆ ಮಾಡುವ ಉಪದೇಶದ ಒಂದು ಸಂದರ್ಭವನ್ನು ನೆನಪಿಗೆ ತಂದು ಕೊಡುವ, ಜೊತೆಗೆ ಅಲೌಕಿಕ ಅಧ್ಯಾತ್ಮ ಸನ್ನಿವೇಶದ ಒಂದು ಚಿತ್ರ ಓದುಗರ ಕಣ್ಮುಂದೆ ಕಟ್ಟುತ್ತದೆ.
ಅಧ್ಯಾತ್ಮಪರ ಸಾಧಕರೆಲ್ಲ ಮನಸ್ಸೆಂಬ ಮಗಳಿಗೆ ಹೇಳುವ ತಿಳಿವು, ಅರಿವು ಶಂಭುಲಿಂಗದ ಬೆಟ್ಟವೇ ಅವರಿಗೆ ಸಿಂಹಾಸನವಾಗಿ, ಸಮಸ್ತ ಲೋಕದ ಜನತೆಗೆ ‘ಶರಣಸತಿ ಲಿಂಗಪತಿ’ ಭಾವದ ತತ್ವವನ್ನು ಧಾರೆಯೆರೆಯುವದನ್ನು ಗಮನಿಸಬೇಕು. ಹಾಡಿನ ಮುಖ್ಯಾಂಶಗಳನ್ನು ಗ್ರಹಿಸುವದಾದರೆ,
“ಮಗಳೆ ಪರಮಾತ್ಮನು (ಇಷ್ಟಲಿಂಗ) ನಿನ್ನ ಪತಿ.
ಅವನಿಗೆ ನಿನ್ನ ಅಂಗಗುಣಗಳನ್ನೆಲ್ಲ ಎಡೆಮಾಡು.
ವಿಷಯಸುಖದ ಕಡೆಗೆ ಮನಸ್ಸನ್ನು ಕೊಡಬೇಡ.
ಪ್ರಾತಃಕಾಲದಲ್ಲಿ ಮನೆಯ (ಮನ) ಕಸವನ್ನು ತೆಗೆದು ಪೂಜೆಗೆ ತೊಡಗು.
ಮನೆಯಲ್ಲಿ (ಮನಸ್ಸಿನಲ್ಲಿ ಕತ್ತಲೆ ಬೀಳದಂತೆ ನೋಡಿಕೋ,
ಮತಿ ಮಸುಳದಂತಿರು; ಉತ್ತಮರ ಸಹವಾಸಮಾಡು.
ಪತಿಯು ಕೋಪಗೊಳ್ಳಲು ಅವಕಾಶ ಕೊಡಬೇಡ.
ಹಗಲು ರಾತ್ರಿ ಅವನ ಧ್ಯಾನದಲ್ಲಿರು; ಬೇಸರ ಪಡಬೇಡ.
ನಿನ್ನ ಪತಿ ಕಾಮಜಿತ; ನೀನು ಅತಿಕಾಮಿ, ಮನಶುದ್ಧಿಯಿಂದಿರು.
ಘನಭೋನವನ್ನು ಇನಿಯಂಗೆ ಎಡೆ ಮಾಡು;
ನೀನು ತಪ್ಪು ಮಾಡಿ ಕಾಲು ಪಿಡಿವಡೆ ಅವನಿಗೆ ಕಾಲಿಲ್ಲ
ನೀ ಹಿಡಿವಡೆ ಅವನಿಗೊಡಲಿಲ್ಲ.
ಎಂದು ಪತಿದೇವನ ಅಲೌಕಿಕ ಸ್ವರೂಪವನ್ನು ಮಗಳಿಗೆ ಸೂಕ್ಷ್ಮವಾಗಿ ಮನದಟ್ಟು ಮಾಡಿಕೊಟ್ಟು ಅವನತ್ತಲೇ ಮನಸ್ಸನ್ನು ಕೇಂದ್ರೀಕರಿಸುವ ಸಾಧನೆಯ ಪರಿಯನ್ನು ಅರುಹುತ್ತಾರೆ.
‘ಮೂರು ಕೋಣೆಗಳೊಳಗೆ (ಸ್ಥೂಲ, ಸೂಕ್ಷ್ಮ, ಕಾರಣತನುಗಳು)ಮೂರು ಜ್ಯೋತಿಯ ಬೆಳಗು (ಇಷ್ಟ ಪ್ರಾಣ ಭಾವಲಿಂಗ ಪೂಜೆ)ಆರೈದು ಇಹವ ಪರವರಿಯದೆ ಮಧ್ಯೆ ಕೋಣೆಯ ಮನೆಯೊಳು ಮಾರಾರಿಯನ್ನು (ಸೂಕ್ಷ್ಮ ಶರೀರದಲ್ಲಿ ಪ್ರಾಣಲಿಂಗೋಪಾಸನೆ) ನೀನಪಾರ ಸುಖದೊಳು ಹೊಂದಿ ,ನಾರಿ ನೀನಿರುʼ ಎಂದು ಅನುಭಾವದ ದೈವೀಸಾಧನೆಯ ನೆಲೆಬೆಲೆಯನ್ನು ವಿವರಿಸಿ,
“ನಿನ್ನವನು ತನ್ನಂತೆ ಮಾಡುವನೊಲಿದು
ಎಂದು ಕೈಕೊಂಡ ದಿವ್ಯಸಾಧನೆಗೆ ಅನುಪಮ ಅಮೂಲ್ಯ ಸತ್ಫಲವನ್ನು ಸೂಚಿಸಿರುವರು. ಇಡೀ ಪದ್ಯ ಷಟ್‌ಸ್ಥಲಸಾಧನೆಯ ಮಾರ್ಗದುದ್ದಕ್ಕೂ ಸಾಧಕನಾದವನು ಭಕ್ತ ಮಹೇಶ್ವರ ಸ್ಥಲದ ಶ್ರದ್ಧಾಭಕ್ತಿ ನೈಷ್ಠಿಕಭಕ್ತಿ ಪ್ರಸಾದಿ-ಪ್ರಾಣಲಿಂಗಿಸ್ಥಲದ ಅವಧಾನಭಕ್ತಿ, ಅನುಭಾವಭಕ್ತಿ, ಶರಣ ಸ್ಥಲದ ಆನಂದಭಕ್ತಿ, ಐಕ್ಯಸ್ಥಲದಲ್ಲಿ ಸಮರಸಗೊಳ್ಳುವಿಕೆಯನ್ನು ಸೂಚಿಸಿದೆ. ಶರಣ ಸ್ಥಲದಲ್ಲಿ ಇಷ್ಟಲಿಂಗವೇ ಪತಿ ತಾನೇ ಸತಿಯಾಗಿ ಸಾಧನೆ ಮಾಡುತ್ತ ಸಾಮರಸ್ಯ ಹೊಂದುವ ನಿಲುವನ್ನು ಷಡಕ್ಷರಿಶಿವಯೋಗಿಗಳು ಸಾಧಕರಿಗೆ, ತಂದೆ ತಾಯಿಗಳು ಮಗಳಿಗೆ ನೀಡುವ ಶಿವಾನುಭವದ ಉಪದೇಶರೂಪದ ಈ ರೂಪಕಪದ್ಯ ಅಧ್ಯಾತ್ಮ ಸಾಧಕರಿಗೆ ಬೆಳಕಿನ ಕಿರಣವಾಗಿದೆ.
ಹೀಗೆ ಸಮಾಜದರ್ಶನದ ಯಾವದೇ ವಿಷಯವನ್ನು ಕೈಗೊಂಡಿರಲಿ, ಅದರಲ್ಲಿ ವಸ್ತುನಿಷ್ಠವಾದ ಆತ್ಮೀಯವಾದ ವಿಚಾರವಿನಿಮಯ ಕೈಗೊಳ್ಳದೆ, ಸಮಾಜಕ್ಕೆ ದಾರಿದೀಪವಾದ ತಾತ್ವಿಕ ತಿಳಿವಳಿಕೆ ಮಾಡಿಕೊಡದೆ, ಮುಪ್ಪಿನ ಷಡಕ್ಷರಿಗಳು ಮುಂದೆ ಹೋದುದೇ ಇಲ್ಲ, ಇಂಥ ಉನ್ನತಮಟ್ಟದ ಅಧ್ಯಾತ್ಮಪರ ಮನೋಭಾವನೆ ಸಮಾಜ ಜಾಗ್ರತಿಯನ್ನುಂಟು ಮಾಡುವ ಧರ್ಮದರ್ಶಿ ಬಸವ ನೇತಾರ, ಅನುಭಾವಿ ಮುಪ್ಪಿನ ಷಡಕ್ಷರಿಗಳಂತಹ ಮಹಾನುಭಾವರು ನಮಗೆ ಇಪ್ಪತ್ತೊಂದನೆಯ ಶತಮಾನಕ್ಕೂ ಪ್ರಸ್ತುತ, ಈ ಲೋಕ ಶಾಶ್ವತವಿರುವವರೆಗೂ ಅವರ ತತ್ವಗಳು ನಮಗೆ ಪ್ರಸ್ತುತ
ಕೈವಲ್ಯ ಪದಗಳ ಚರಮಸತ್ಯ:
ಹುಟ್ಟು ಸಾವಿನ ಭವಚಕ್ರಗಳ ಮಧ್ಯೆ ಸಿಲುಕಿರುವ ಮಾನವ ಬದುಕಿದಷ್ಟು ಕಾಲ ಆತ್ಮತೃಪ್ತನಾಗಿರಬೇಕು. ಸಾರ್ಥಕ ಬದುಕು ಅವನದಾಗಬೇಕು. ‘ಲಿಂಗವಾಗಿ ಲಿಂಗಪೂಜಿಸಬೇಕು; ಲಿಂಗಪೂಜಿಸಿ ಲಿಂಗವೇ ಆಗಬೇಕು’ ಎಂಬುದು ಮುಪ್ಪಿನ ಷಡಕ್ಷರಿಗಳಂತಹ ಅನುಭಾವಿಗಳು ರಚಿಸಿದ ಕೈವಲ್ಯಪದಗಳ ಚರಮಸತ್ಯ; ಅಂತಿಮಸತ್ಯ. ಮುಪ್ಪಿನ ಷಡಕ್ಷರಿಗಳ ಬದುಕಿನ ಪುಟಗಳನ್ನು ಹೊರಳಿಸಿ ನೋಡಿದಾಗ ಷಟ್ಟದಿಯ ಝೇಂಕಾರದ ಓಂಕಾರ ನಿನಾದದಲ್ಲಿ ತನ್ಮಯಗೊಂಡಿರುವುದು ಮನವೇದ್ಯವಾಗುತ್ತದೆ.
ಮುಪ್ಪಿನ ಷಡಕ್ಷರಿಗಳ ಅನುಭಾವ ಪದ್ಯಗಳು ಶ್ರೇಷ್ಠಕಾವ್ಯದ ಸ್ಥಾನವನ್ನು ತುಂಬಬಲ್ಲವು ಅಧ್ಯಾತ್ಮಪಥಿಕನಿಗೆ ಮಹಾತತ್ವದೆಡೆಗೆ ದಿವ್ಯಧ್ವನಿಯಾಗಿ ಸೂಕ್ತ ಮಾರ್ಗದರ್ಶನ ಮಾಡಬಲ್ಲವು. ಛಂದೋಬದ್ಧ ಸಂಗೀತಬದ್ಧ ರಾಗತಾಳರೂಪಬದ್ಧ ವೈಶಿಷ್ಟ್ಯಗಳನ್ನು ಹೊಂದಿ ಓದುಗರ ಮನಸ್ಸನ್ನು ಹಸನುಗೊಳಿಸಿ ಅರಳಿಸಬಲ್ಲವು.
ಪ್ರತಿಪದ್ಯ ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಷಟ್ಟದಿಗಳಲ್ಲಿ ರಚಿತಗೊಂಡವು. ಷಟ್ಟದಿಯ ಪ್ರಮುಖ ಲಕ್ಷಣ ಮಾತ್ರಾಗಣಕ್ಕೆ ತಿರುಗಿದಾಗ ಓದುಗಬ್ಬದ ವಿಸ್ತಾರಕ್ಕೆ ಅಧಿಕ ಪ್ರಾಶಸ್ತ್ಯ ಶೃತಿ, ತಾಳ, ಲಯಬದ್ಧ ಛಂದಸ್ಸು, ರೂಪಕ, ದೃಷ್ಟಾಂತ, ಉಪಮಾನ ಶ್ಲೇಷೆ ಅಲಂಕಾರಗಳ ತೊಡುಗೆ, ಹದವರಿತ ಭಾಷೆ, ಮಧುರಭಕ್ತಿಯ ಕಾವ್ಯದ ಅರ್ಥಗೌರವವನ್ನು ಅಧಿಕಗೊಳಿಸಿವೆ.,
ಅನುಭಾವಸತ್ವ ಅಂತರಂಗದ ಕದ ತಟ್ಟುತ್ತದೆ. ಸತಿಪತಿಭಾವ ಬೆಸೆಯುತ್ತದೆ. ಲೌಕಿಕ ಅಲೌಕಿಕಗಳು ಬೆರೆತು ಬೇರಾಗದ, ಒಡವೆರೆದು ಒಂದಾದ ಸಾಮರಸ್ಯ ಹೊಂದುತ್ತವೆ. ನವನವೀನ ಭಾವಗಳ ಆವಿಷ್ಕಾರ, ಆತ್ಮಾನಂದ, ತನ್ಮೂಲಕ ಅನುಭವಾನಂದ ‘ಶಿವೇತರಕ್ಷತೆಯೆ ಮುಖ್ಯ ಗುರಿಯಾಗುತ್ತದೆ. ಪ್ರತಿಪದ್ಯಗಳ ಮೇಲಿನ ಪೂರ್ವಿ, ಸುರುಟಿ, ಲಹರಿ, ಮಲಹರಿ, ವಸಂತ, ಸಾರಂಗ, ಧನ್ಯಾಸಿ ರಾಗಗಳು ಮುಪ್ಪಿನ ಷಡಕ್ಷರಿಗಳ ರಾಗಜ್ಞಾನವನ್ನು ಸಾರಿ ಸಾರಿ ಹೇಳಿವೆ. ‘ಷಡಕ್ಷರಿಲಿಂಗ’ ಸ್ವರವಚನದ ರೂಪ ಮುದ್ರೆ ಷಡಕ್ಷರಿಗಳನ್ನು ಅನುಭಾವಿ ಸ್ವರವಚನಕಾರರ ಮಾಲಿಕೆಗೆ ಸೇರಿಸಿವೆ. ವೀರಶೈವ ತತ್ವ, ಲೋಕನೀತಿಸಾರಗಳನ್ನು ಬಿತ್ತರಿಸಿವೆ. ‘ಶಿವತತ್ವಗೀತವ ಹಾಡುವುದು ಶಿವನ ಮುಂದೆ ನಲಿನಲಿದಾಡುವುದು ಷಡಕ್ಷರಿಗಳ ಅಂತರಂಗದ ಘನ ಉದ್ದೇಶ. ಇಂಥವರ ದಿವ್ಯವಚನಾಮೃತ ಪ್ರಪಂಚವನ್ನು ಪಾರಮಾರ್ಥಿಕದೆಡೆಗೆ, ಅನುಭಾವದ ಉನ್ನತ ನಿಲುವಿಗೆ ಬೆಸೆಯುತ್ತವೆ.
ಆಧುನಿಕರ ದೃಷ್ಟಿಯಲ್ಲಿ ಮುಪ್ಪಿನ ಷಡಕ್ಷರಿಗಳು:
ಅನುಭಾವಿ ಶಿವಶರಣರ ಬಗ್ಗೆ ಆಳವಾದ ಅಧ್ಯಯನ ಕೈಗೊಂಡ ಕನ್ನಡದ ಖ್ಯಾತ ಸಾಹಿತಿ ತಿಪ್ಪೇರುದ್ರಸ್ವಾಮಿಗಳವರ ಅಭಿಪ್ರಾಯದಲ್ಲಿ,
ʼʼಮುಪ್ಪಿನ ಷಡಕ್ಷರಿಗಳ ಹಾಡುಗಳಲ್ಲಿ ಕಾಣುವುದು ಶಿವನಿಷ್ಠೆಯಿಂದ ಮುಂದುವರೆಯುವ ಸಾಧಕ ಚೇತನವೊಂದರ ಪರಿಶುದ್ಧ ಜೀವನದ ಪ್ರಾಮಾಣಿಕ ಉದ್ಗಾರ. ನಿಜಗುಣರಲ್ಲಿ ಕಾಣುವಂತಹ ಯೌಗಿಕ ತೇಜಸ್ಸಿನ ಸೂರ್ಯಪ್ರಭೆಯನ್ನು ಇಲ್ಲಿ ಕಾಣುವದಿಲ್ಲವಾದರೂ, ಶಾಂತಭಕ್ತಿಯ ತಂಪುಬೆಳಕನ್ನು ಇಲ್ಲಿ ಪಡೆಯಬಹುದಾಗಿದೆ. ನಿಜಗುಣರ ಬಹುಮುಖ ಅನುಭವ ಪಾಂಡಿತ್ಯಗಳಾಗಲೀ, ಅಭಿವ್ಯಕ್ತಿಯ ವೈವಿಧ್ಯವಾಗಲೀ, ಇವರಲಿಲ್ಲ, ಇವರ ಹಾಡುಗಳಲ್ಲಿ ಬಹುಪಾಲು ಶರ ಇಲ್ಲವೆ ಭೋಗ ಷಟ್ಟದಿಗಳಲ್ಲಿ ರಚಿತವಾದವು; ಬಹುಮಟ್ಟಿಗೆ ಏಕಮುಖವಾದವು. ಕೈವಲ್ಯಪದ್ಧತಿಯ ವಿಸ್ತಾರ ಹಿನ್ನೆಲೆಗಳನ್ನಾಗಲಿ ಎತ್ತರ ಬಿತ್ತರಗಳನ್ನಾಗಲೀ ‘ಸುಬೋಧಸಾರ’ದಲ್ಲಿ ನಿರೀಕ್ಷಿಸಲಾಗದು. ಇಲ್ಲಿನ ಹಾಡುಗಳು ತಿಳಿಯಾದ ಮಾಧುರ್ಯ ಮತ್ತು ಆತ್ಮೀಯತೆಗಳಿಂದ ಆಸ್ವಾದವಾಗುತ್ತವೆ. ತಮ್ಮ ಕುಸುಮಕೋಮಲ ದಳಗಳನ್ನು ಅರಳಿಸಿ ನರುಗಂಪನ್ನು ಸೂಸುತ್ತವೆ. ಈ ದೃಷ್ಟಿಯಿಂದ ಕೈವಲ್ಯ ಸಾಹಿತ್ಯದಲ್ಲಿ ಇವುಗಳ ಸ್ಥಾನ ಗಣನೀಯವಾಗಿದೆ. (ಕನ್ನಡದಲ್ಲಿ ಕೈವಲ್ಯ ಸಾಹಿತ್ಯ ಪು.೪೫)
ಕನ್ನಡದ ಹಿರಿಯ ಕವಿ ಚನ್ನವೀರ ಕಣವಿಯವರು,
“ಮುಪ್ಪಿನಾರ್ಯರ ಹಾಡುಗಳಲ್ಲಿ ಹೃದಯಂಗಮ ವರ್ಣನೆ,ವಿಶಾಲ ದರ್ಶನವಿರುವಂತೆಯೇ ನವನವೀನಭಾವಗಳ ಆವಿಷ್ಕಾರವಿದೆ. ಅವು ಅತ್ಯಂತ ಮಧುರವಾಗಿ ನಿರಾಯಾಸವಾಗಿ, ಗಿಡದಿಂದ ಹೂ ಚಿಗುರು ಹೊಮ್ಮುವಂತೆ ಸಹಜವಾಗಿ ಹೊರಹೊಮ್ಮುತ್ತವೆ. (ವೈರಾಗ್ಯದಲರು, ಪು.೨೦೮)
ಮೇಲಿನ ವಿದ್ವಾಂಸರ ವಿಚಾರಗಳನ್ನು ಗಮನಿಸಿದಾಗ ಮುಪ್ಪಿನ ಷಡಕ್ಷರಿಗಳು ವೀರಶೈವ ತತ್ವಪದಗಳ ಮತ್ತು ಹಾಡುಗಬ್ಬಗಳ ಪ್ರಕಾರಕ್ಕೆ ಕೊಟ್ಟ ಅಪಾರ ಅಮೂಲ್ಯ ಕೊಡುಗೆ ವಿದಿತವಾಗುತ್ತವೆ. ಇಂತಹ ಅನುಪಮ ಕೊಡುಗೆ ಅವರ ಎತ್ತರ ಬಿತ್ತರಗಳನ್ನು ಇನ್ನಷ್ಟು ಹೆಚ್ಚಿಸಿವೆಯೆಂದೇ ಹೇಳಬೇಕು.
ವೀರಶೈವ ಅನುಭಾವ ಸಾಹಿತ್ಯ ವಾಹಿನಿಯಲ್ಲಿ ಧಾರ್ಮಿಕ ತಾತ್ವಿಕ ನೈತಿಕ ನೆಲೆಯನ್ನು ಗಟ್ಟಿಗೊಳಿಸಿ ಮುಮುಕ್ಷುಗಳಿಗೆ ವೈರಾಗ್ಯಪರರಿಗೆ, ಶಿವಕಾರುಣ್ಯ, ಅರ್ಚನ, ಪೂಜನೋತ್ಪಾದ ನೀತಿನಿಯಮಾಚಾರ, ಹರಗುರು ಚರಮೂರ್ತಿಗಳಿಗೆ ಸನ್ಮಾರ್ಗದರ್ಶನ ಮಾಡಿಕೊಟ್ಟಿವೆ.ಸಾಹಿತ್ಯ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮುಪ್ಪಿನ ಷಡಕ್ಷರಿಗಳನ್ನು ಅನುಭಾವ ಸಾಹಿತ್ಯ ಪಥದಲ್ಲಿ ಚಿರಂತನಗೊಳಿಸಿವೆ.
(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)