ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
ಶಮೆ, ದಮೆ, ಉಪರತಿ, ತಿತೀಕ್ಷೆ, ಶ್ರದ್ಧೆ ಮತ್ತು ಸಮಾಧಾನ ಇವುಗಳಿಗೆ “ಸಾಧನ ಸಂಪತ್ತಿ’ ಎಂದು ಹೆಸರು. ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್‌ಗಳೆಂಬ ಅಂತರಿಂದ್ರಿಯ (ಅಂತಃಕರಣ)ಗಳ ನಿಗ್ರಹಕ್ಕೆ ‘ಶಮೆ’ ಎಂದೂ, ಕಣ್ಣು, ಕಿವಿ, ನಾಲಿಗೆ ಇತ್ಯಾದಿ ಬಹಿರಿಂದ್ರಿಯಗಳ ನಿಗ್ರಹಕ್ಕೆ ‘ದಮೆ’ ಎಂದೂ ಕರೆಯಲಾಗಿದೆ. ದೇಹ ಭೂಮಿಯಲ್ಲಿ ಪರತತ್ವದ ಬೆಳೆಯನ್ನು ಬೆಳೆಯುವ ಕೃಷಿ ಕಾಯಕದಲ್ಲಿ ‘ಶಮೆ’ ‘ದಮೆ’ಗಳೆರಡನ್ನೂ ಎತ್ತುಗಳನ್ನಾಗಿಸಬೇಕೆಂಬ ಸರ್ಪಭೂಷಣ ಶಿವಯೋಗಿಗಳ ಮಾತು ಇವೆರಡೂ ಸದಾ ಜೊತೆಯಾಗಿರುವ ‘ಸಾಧನ’ಗಳೆಂಬುದರ ಕಡೆಗೆ ನಮ್ಮ ಗಮನ ಸೆಳೆಯುತ್ತದೆ. ಬರೀ ಬಾಹ್ಯ ಇಂದ್ರಿಯಗಳನ್ನು ನಿಗ್ರಹಿಸಿದರೆ ಸಾಲದು. ಅಂತರಂಗದ ಇಂದ್ರಿಯಗಳನ್ನೂ ನಿಯಂತ್ರಿಸಬೇಕು. ‘ಹುತ್ತ ಬಡಿದೊಡೆ ಹಾವು ಸಾಯಬಲ್ಲುದೆ?” ಎಂದು ಬಸವಣ್ಣ ಕೇಳುತ್ತಾನೆ. ‘ಶಮೆ’ ಇಲ್ಲದ ‘ದಮೆ’ ನಿರರ್ಥಕ. ಆದ್ದರಿಂದ ಮೊದಲು ಅಂತರಿಂದ್ರಿಯ (ಅಂತಃಕರಣ)ದ ಮೇಲೆ ಜಯ ಸಾಧಿಸಬೇಕು. ಅಂತರಿಂದ್ರಿಯವಾದ ಮನಸ್ಸು ಅತ್ಯಂತ ಚಂಚಲವಾದುದು ಹಾಗು ಬಲವಾದುದು. ಅದನ್ನು ನಿಲ್ಲಿಸುವುದು ಗಾಳಿಯನ್ನು ತಡೆಯುವಷ್ಟೇ ದುಸ್ಸಾಧ್ಯವಾದುದು. ನಿರಂತರ ಅಭ್ಯಾಸ, ವೈರಾಗ್ಯ ಭಾವ ಹಾಗು ಪರಮಾತ್ಮನ ನಿತ್ಯಸ್ಮರಣೆಯಿಂದ ಇದು ಸಾಧ್ಯ. ವಿವೇಕ ಚೂಡಾಮಣಿಯಲ್ಲಿ ‘ಸ್ವಲಕ್ಷೇ ನಿಯತಾವಸ್ಥಾ ಮನಸಃ ಶಮ ಉಚ್ಯತೇʼ ಅಂದರೆ ವಿಷಯ ವಾಸನೆಯಳಿದು ತನ್ನ ಪರಮಗುರಿಯಲ್ಲಿ (ಪರಮಾತ್ಮ) ಸದಾ ಮನವನ್ನಿರಿಸುವುದೇ ‘ಶಮೆ’ ಎಂದು ಹೇಳಲಾಗಿದೆ.
ಬಾಹ್ಯ ಇಂದ್ರಿಯಗಳನ್ನು ಕೃತಕವಾಗಿ ನಿಗ್ರಹಿಸುವುದೂ ಕೂಡ ಅಪಾಯಕಾರಿ. ನಿಗ್ರಹ ಮಾಡಿದಷ್ಟು ಅವು ಬೃಹದಾಕಾರವಾಗಿ ಬೆಳೆಯುತ್ತವೆ. ‘ಇಂದ್ರಿಯ ನಿಗ್ರಹ ಮಾಡಿದಡೆ, ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಗಳು’ ಎನ್ನುವ ಬಸವಣ್ಣ, ಅಸಹಜವಾದ ಸಂಯಮವನ್ನು ನಿರಾಕರಿಸುತ್ತಾನೆ. ಇಂದ್ರಿಯಗಳು ಬಲಿಷ್ಠವಾಗಿದ್ದು ಅಸಹಜ ಸಂಯಮ ತೋರುವ ಎಂಥ ಬಲಶಾಲಿಯನ್ನು ಅವು ಧೃತಿಗೆಡಿಸದೆ ಬಿಡಲಾರವು. ಒಮ್ಮೆ-ವೇದವ್ಯಾಸರು ಗುರುಕುಲದಲ್ಲಿ ತಮ್ಮ ಶಿಷ್ಯರಿಗೆ ಪಾಠ ಮಾಡುವ ಸಂದರ್ಭದಲ್ಲಿ ‘ಬಲವಾನ್ ಇಂದ್ರಿಯಗ್ರಾಮೋ ವಿದ್ವಾಂಸಮಪ್ಯಪಕರ್ಷತಿ’ ಅಂದರೆ ‘ಇಂದ್ರಿಯಗಳ ಸಮೂಹವು
ಬಲಿಷ್ಠವಾಗಿದ್ದು, ವಿದ್ವಾಂಸರನ್ನೂ, ಜ್ಞಾನಿಗಳನ್ನೂ ಕೂಡ ದಾರಿ ತಪ್ಪಿಸುತ್ತದೆ’ ಎಂದು ಬೋಧೆ ಮಾಡಿದರು. ಆದರೆ ಅವರ ಶಿಷ್ಯ ಮಹಾಜ್ಞಾನಿ ಜೈಮಿನಿ ಈ ಮಾತನ್ನು ಒಪ್ಪಿಕೊಳ್ಳದೆ ‘ಜ್ಞಾನಿಯನ್ನು ಇಂದ್ರಿಯಗಳೆಂದೂ ವಿಚಲಿತಗೊಳಿಸಲಾರವು’ ಎಂದು ಪ್ರತಿಪಾದಿಸಿ ತನ್ನ ಆಶ್ರಮಕ್ಕೆ ಹೊರಟು ಹೋದನು. ಅದೇ ದಿನ ರಾತ್ರಿ ಗುಡುಗು ಸಿಡಿಲುಗಳಿಂದ ಕೂಡಿದ ಭಾರೀ ಮಳೆ ಪ್ರಾರಂಭವಾಯಿತು. ಮಳೆಯಲ್ಲಿ ಸಂಪೂರ್ಣ ತೊಯ್ದ ಬಟ್ಟೆಗಳಿಂದ ನಡುಗುತ್ತಿದ್ದ ಮಹಿಳೆಯೊಬ್ಬಳು ಜೈಮಿನಿಯ ಆಶ್ರಮದ ಬಾಗಿಲನ್ನು ತಟ್ಟಿದಳು. ಬಾಗಿಲು ತೆರೆದ ಜೈಮಿನಿ ಮಹಿಳೆಯ ಸ್ಥಿತಿಗತಿಗಳನ್ನು ನೋಡಿ ಕನಿಕರಪಟ್ಟು ಆಶ್ರಯಕೊಟ್ಟನು. ಉಣ್ಣಲು ಅನ್ನ, ಉಡಲು ಬಟ್ಟೆಗಳನ್ನು ಕೊಟ್ಟು ಉಪಚರಿಸಿದನು. ಆ ಮಹಿಳೆಯ ರೂಪ ಲಾವಣ್ಯಕ್ಕೆ ಮನಸೋತು ತನ್ನ ಆಶ್ರಮ ಧರ್ಮವನ್ನು ತ್ಯಾಗ ಮಾಡಿ ಅವಳನ್ನು ಮದುವೆಯಾಗಲು ಬಯಸಿದನು. ಇದೇ ಸಂದರ್ಭದಲ್ಲಿ ಕಾಯುತ್ತಿದ್ದ ಮಹಿಳಾವೇಷದ ವೇದವ್ಯಾಸರು ನಿಜರೂಪವನ್ನು ಪ್ರಕಟಗೊಳಿಸಿದಾಗ ಜೈಮಿನಿ ನಾಚಿಕೆಯಿಂದ ತಲೆ ತಗ್ಗಿಸಿದ. ಅಲ್ಲದೆ ‘ಇಂದ್ರಿಯಗಳು ದಾರಿ ತಪ್ಪಿಸದೇ ಬಿಡುವುದಿಲ್ಲ’ ಎಂಬ ಗುರುಗಳ ಮಾತನ್ನು ಒಪ್ಪಿಕೊಂಡ.
ಆದ್ದರಿಂದ ಶಮೆ, ದಮೆಗಳನ್ನು ಸಾಧಿಸುವಲ್ಲಿ ಸಹಜ ಸಂಯಮ ತೋರಬೇಕು. ವಿಷಯ ಸುಖದ ಕ್ಷಣಿಕತೆಯನ್ನರಿಯಬೇಕು. ಸಮಾಜ ಸೇವಾ ಕಾರ್ಯಗಳಲ್ಲಿ (ಕಾಯಕ) ಸರ್ವಾರ್ಪಣ ಮನೋಭಾವದಿಂದ ತೊಡಗಬೇಕು. ಹಾಗೆಯೇ ಭಗವಂತನ ನಿರಂತರ ಧ್ಯಾನ ಮಾಡುವುದರಿಂದ ನಾವು ಆಂತರಿಕ ಹಾಗು ಬಾಹ್ಯ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬಹುದು. ಆಗ ನಮ್ಮ ಉದ್ವೇಗಗಳೆಲ್ಲವೂ ದೂರವಾಗಿ ಮನಶ್ಯಾಂತಿ ಲಭಿಸುವುದು.