• ಪಂಡಿತ ನಾಗಭೂಷಣ ಶಾಸ್ತ್ರಿಗಳು
(ಪಂ. ನಾಗಭೂಷಣ ಶಾಸ್ತ್ರಿಗಳು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದವರು. ತಂದೆ ಶಾಸ್ತ್ರೀಮಠದ ಪರ್ವತರಾಯಯ್ಯ ಹಾಗೂ ತಾಯಿ ಲಿಂಗಮ್ಮ . ಸಂಗನಾಳದ ನಾಗನಾಥಗುಡಿಯ ಗಾವಟಿ ಶಾಲೆಯಲ್ಲಿ ಶಿಕ್ಷಣ ಆರಂಭಿಸಿದರು. ಪ್ರಸಿದ್ಧ ಸಾಹಿತಿ-ಕವಿ ಸಿದ್ದಯ್ಯ ಪುರಾಣಿಕರ ತಂದೆ ಕಲ್ಲಯ್ಯ ಪುರಾಣಿಕ ದ್ಯಾಮಪುರ ಅವರು ಇವರ ಮೊದಲ ಗುರುಗಳು. 1-5ನೇ ತರಗತಿಯವರೆಗೆ ರೋಣ ತಾಲ್ಲೂಕಿನ ನಿಡಗುಂದಿಯಲ್ಲಿಪೂರೈಸಿದರು. ಆ ವೇಳೆಗೆ ಸೋದರತ್ತೆಯ ಮಗಳು ಶಿವಗಂಗಾಳೊಂದಿಗೆ ಬಾಲ್ಯ ವಿವಾಹ. ಹಾಲಕೆರೆ ಶ್ರೀ ಅನ್ನದಾತಸ್ವಾಮಿಗಳ ಸಂಸ್ಕೃತ ಪಾಠಶಾಲೆಯಲ್ಲಿ (1924ರವರೆಗೆ) ಸಂಸ್ಕೃತ ಅಭ್ಯಾಸವನ್ನು ಮಾಡಿದರು.
ಶಾಸ್ತ್ರಿಗಳು 37ಕ್ಕೂ ಅಧಿಕ ಪ್ರಾಚೀನ ಗ್ರಂಥಗಳನ್ನು ಸಂಶೋಧಿಸಿ, ಸಂಪಾದನೆ ಮಾಡಿದ್ದಾರೆ. ವೀರಶೈವ ತತ್ವ, ಆಚಾರಗಳನ್ನು ಸರಳ ಸುಲಭ ಶೈಲಿಯಲ್ಲಿ ನಿರೂಪಿಸುವ ಗ್ರಂಥಗಳನ್ನು, ಪುಟ್ಟ ಹೊತ್ತಿಗೆಗಳನ್ನು ಪ್ರಕಟಿಸಿದ್ದಾರೆ. ಅವರು ಸಂಪಾದಿಸಿ ಪ್ರಕಟಿಸಿದ ‘ಶಿವಯೋಗ ಪ್ರದೀಪಿಕಾ’ ಸಂಸ್ಕೃತ ಗ್ರಂಥವು ಈಗ ಪಾಶ್ಚಾತ್ಯ ಶಿವಯೋಗ ಸಾಧಕರಿಗೂ ಮಾರ್ಗದರ್ಶಿಯಾಗಿದೆ. ಗದುಗಿನ ಭಕ್ತರ ನೆರವಿನಿಂದ ಶಾಸ್ತ್ರಿಗಳು ’ಅಖಿಲ ಭಾರತ ವೀರಶೈವ ವಿದ್ಯಾಪೀಠ’ ಸ್ಥಾಪಿಸಿದರು. ವೀರಶೈವಕ್ಕೆ ಸಂಬಂಧಿಸಿದ ಸಾಹಿತ್ಯ ಪ್ರವೇಶ, ಸಾಹಿತ್ಯ ಮಧುಕರ, ಸಾಹಿತ್ಯ ಭೂಷಣ, ಸಾಹಿತ್ಯ ಶಿರೋಮಣಿ ಎಂಬ ತರಗತಿಗಳನ್ನು ಏರ್ಪಡಿಸಿ ಅದಕ್ಕೆ ಬೇಕಿರುವ ಪಠ್ಯಗಳನ್ನು ತಾವೇ ಸಿದ್ಧಪಡಿಸಿದರು.
ಒಟ್ಟು 14 ಮೌಲಿಕ ಗ್ರಂಥಗಳನ್ನು ರಚಿಸಿದರು. ಅಖಿಲ ಭಾರತ ಶಿವಾನುಭವ ಸಂಸ್ಥೆಯ ಮುಖವಾಣಿಯಾಗಿ ಪ್ರಕಟಗೊಳ್ಳುತ್ತಿದ್ದ‘ಸಾವಧಾನ’ ಪತ್ರಿಕೆಯ ಸಂಪಾದಕತ್ವವನ್ನು ನಿರ್ವಹಿಸಿದರು. ಅವರ ‘ಸಾಧಕರಿಗೊಂದು ಕಿವಿಮಾತು’ ಅಂಕಣ ಬರಹಗಳು ಜನಮನದ ಕಣ್ಣು ತೆರಸುವಂತಿತ್ತು. ಅಕ್ಕನ ಆದರ್ಶ ಜೀವನ (1937), ಅಣ್ಣನ ಆದರ್ಶ ಜೀವನ (1937), ಜೀವನ ಯಾತ್ರೆ ಭಾಗ-1 (1954), ವೀರಶೈವ ತತ್ವ ಪ್ರವೇಶ (1959),ನಿಜಗುಣ ಶಿವಯೋಗಿ ಹಾಗೂ ಅವರ ಕೃತಿಗಳನ್ನು ಕುರಿತು ಉಪನ್ಯಾಸ (1963), ವೀರಶೈವ ಧರ್ಮ ವಿವೇಚನೆ(1976) , ಸಂಕ್ಷಿಪ್ತ ಶಿವಪೂಜಾ ವಿಧಿ(1977), ಅಷ್ಟಾವರಣಗಳು(1981), ಪಾದೋದಕ(1981), ಘನಮಠ ನಾಗಭೂಷಣ ಶಿವಯೋಗಿಗಳು(1981), ಜಂಗಮ(1981), ರುದ್ರಾಕ್ಷಿ ಪ್ರಭೆ(1986), ಜ್ಞಾನ ಪ್ರಸಾದ(1986), ಭಾರತೀಯ ದರ್ಶನ ಸಮೀಕ್ಷೆ(1986), ಮುಂತಾದುವು.
ನಾಗಭೂಷಣ ಶಾಸ್ತ್ರಿಗಳ ಸಂಪಾದಕತ್ವದ ಕೃತಿಗಳೆಂದರೆ ಅಷ್ಟಾವರಣ ಮಹತ್ವ(1943), ವಚನ ಮಧು ಭಾಗ-1(1944), ವಚನ ಮಧು ಭಾಗ-2, ವೀರಶೈವ ತತ್ವ ಪ್ರವೇಶ (1950), ಸನ್ಮಾರ್ಗ ದರ್ಶನ ತತ್ವಗೀತೆ (1954), ಗದ್ಯ ಸಂಗ್ರಹ ಭಾಗ-3, ಪಂಚಾಚಾರ, ಸರ್ವಜ್ಞನ ವಚನ ಸಂಗ್ರಹ (1954), ಧರ್ಮಾಚಾರ(1966), ವಚನ ಸುಧೆ (1966),ನಿಜಗುಣ ಶಿವಯೋಗಿಕೃತ ಕೈವಲ್ಯ ಪದ್ಧತಿ(1969), ಷಟಸ್ಥಲ ಚಕ್ರವರ್ತಿ,ಶ್ರೀ ಚನ್ನ ಬಸವಣ್ಣನವರ ನೂರೆಂಟು ವಚನಗಳು (1971), ಮಿಶ್ರಾರ್ಪಣ(1973), ಶ್ರೀ ಸರ್ಪಭೂಷಣ ಶಿವಯೋಗಿಕೃತ ಕೈವಲ್ಯ ಕಲ್ಪವಲ್ಲರಿ (1973), ಪದ ಮಂತ್ರ ಗೋಪ್ಯ (1974), ನೂರೆಂಟು ವಚನಗಳ ಸಂಗ್ರಹ (1986), ಸೊಗಸಿನ ಬಾಳು (1986), ಕರಣ ಹಸಿಗೆ (1972), ಪಂಚಾಚಾರಗಳು(1972), ಶಿವಯೋಗಿ (1962), ಶಂಕರಲಿಂಗನ ಕಂದ(1988), ಸರ್ವಜ್ಞನ ವಚನ ಸಂಗ್ರಹ (1954), ಚನ್ನಬಸವಣ್ಣನವರ ವಚನ ಸಂಗ್ರಹ(1970), ಅನುಭವ ಮುದ್ರೆ(1967), ಹಿರಿಯ ಮಂತ್ರ ಗೋಪ್ಯ(1975), ವಚನಾಮೃತ ಬಿಂದುಗಳು(1984), ಪದ್ಯಸಂಗ್ರಹ(1954), ಗುರು ಬಸವಕೃತ ಮನೋವಿಜಯಂ(1968), ಶಂಕರ ಕವಿ ವಿರಚಿತ ಚೋರ ಬಸವೇಶ್ವರ ಕಾವ್ಯ(1971), ಸ್ವರೂಪಾಮೃತ(1967), ಅವಧೂತ ಗೀತೆ(1967), ಯೋಗಾಂಗ ವಿಭೂಷಣ(1966), ವೃಷಭ ಗೀತೆ ಗುರುಬಸವ ಕೃತ(1966) ಪ್ರಮುಖವಾಗಿವೆ.)
ಭಾರತ ದೇಶದ ಅದರಲ್ಲಿಯೂ ಕನ್ನಡ ನಾಡಿನ ಪುಣ್ಯಭೂಮಿಯಲ್ಲಿ ಅನಾದಿ ಕಾಲದಿಂದಲೂ ಅಸಂಖ್ಯ ಮಹಾಪುರುಷರು ಮೇಲಿಂದ ಮೇಲೆ ಜನ್ಮವೆತ್ತುತ್ತಲೇ ಬಂದಿರುವರೆಂಬ ಬಗೆಗೆ ಪ್ರಾಜ್ಞಭಾರತೀಯರಿಗೆಲ್ಲ ವಿದಿತವಾದ ಸಂಗತಿಯೇ ಆಗಿದೆ. ಶಾಂತಸ್ವಭಾವದ ಆ ಮಹಾಪುರುಷರೆಲ್ಲರೂ ವಸಂತಮಾಸದಂತೆ ಲೋಕ ಹಿತವನ್ನು ಸಾಧಿಸುವಲ್ಲಿಯೇ ತಮ್ಮ ಕೃತಕೃತ್ಯತೆಯನ್ನು ಕಂಡುಕೊಳ್ಳುವಂತಹ ನಿರ್ಮಲ ಹೃದಯದವರು. ಆತ್ಮವಿಸ್ಮೃತಿ ರೂಪ ಮರಣವನ್ನು ಹೊಂದಿದ ಜನಾಂಗದಲ್ಲಿ ಆತ್ಮ ಸಂಸ್ಕೃತಿರೂಪ ಜೀವ ಕಳೆಯನ್ನು ತುಂಬುವ ಮಹಾ ಕಾರ್ಯವು ಮಹಾಪುರುಷೇತರರಿಂದ ಎಂದೆಂದೂ ಸಾಧ್ಯವಾದದ್ದು. ಅವಿಚಾರದ ತಮಸ್ಸು ಮುಸುಕಿದ ಜನಾಂಗದ ಹೃದಯ ಪದ್ಯದಲ್ಲಿ ಸುವಿಚಾರದ ನಂದಾದೀಪವನ್ನು ಹಚ್ಚಿ ಬೆಳಗುವ ಪ್ರಯತ್ನ ಮಾಡುವ ಮಹಾಪುರುಷರ ಜೀವನ ಚರಿತ್ರಗಳು ಭಾರತೀಯ ಧಾರ್ಮಿಕೇತಿಹಾಸಗಳಲ್ಲಿ ತುಂಬ ಕಂಡು ಬರುವವು. ನಿಜವಾಗಿಯೂ ಇಂತಹ ಮಹಾಪುರುಷರ ಇತಿಹಾಸಗಳೇ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯ ಹೆಚ್ಚಳವನ್ನು ನಿಚ್ಚಳವಾಗಿ ತೋರಿಸಿಕೊಡುವವು. ನಡೆಶುಚಿ, ನುಡಿಶುಚಿ, ಮನಶುಚಿ, ತನುಶುಚಿ, ಭಾವಶುಚಿ ಈ ಪಂಚಶುಚಿಗಳನ್ನೊಳಗೊಂಡ ಮಹಾತ್ಮರಲ್ಲಿ ಕಂಡು ಬರುವ ಸಂಪತ್ತೆಂದರೆ ಪಾವಿತ್ರ್ಯ, ಪ್ರೇಮ, ತ್ಯಾಗ ಇಂಥವರ ಬಗೆಗೆ ಧಾರ್ಮಿಕ ಜನತೆ ಇಟ್ಟುಕೊಂಡ ಪ್ರೇಮಾಭಿಮಾನ ಗೌರವಗಳು ಅಸದೃಶವಾದವು. ಕೇವಲ ಜಡಸಂಪತ್ತಿನ ವ್ಯಾಮೊಹದಲ್ಲಿ ಮಗ್ನರಾಗಿದ್ದ ಮಹಾ ಮಹಾ ಚಕ್ರವರ್ತಿಗಳ ಪಲ್ಲಕ್ಕಿಗಳನ್ನು ಹೊರುವ ಪ್ರಸಂಗ ಬಂದಾಗ ಪೂರ್ಣ ಹಿಂಜರಿಯುತ್ತಿದ್ದ ವ್ಯಕ್ತಿಗಳು ಸತ್ಪುರುಷರನ್ನು ಪಲ್ಲಕಿಯಲ್ಲಿ ಕೂಡ್ರಿಸಿ ಹೊತ್ತು ನಡೆಯುವ ಪ್ರಸಂಗವೊದಗಿ ಬಂದಾಗ ಅಹೋಭಾಗ್ಯವೆಂದು ಭಾವಿಸುತ್ತ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ನಾ ಮುಂದೆ ತಾ ಮುಂದೆ ಎಂದು ಧಾವಿಸಿ ಬರುವ ದೃಶ್ಯವು ಅಚ್ಚರಿಯದೇನಲ್ಲ. ನಿಜವಾದ ಧಾರ್ಮಿಕ ಪ್ರಜ್ಞೆಯನ್ನು ಕಳಕೊಂಡು ಅಪಮಾರ್ಗದಲ್ಲಿ ಸಾಗಿ ತೀರ ಅವನತಿಯನ್ನು ಹೊಂದುತ್ತಿದ್ದ ವ್ಯಕ್ತಿಗಳನ್ನು ಕಣ್ಣಾರೆ ಕಂಡ ಮಹಾಪುರುಷರು ಸುಮ್ಮನೆ ಕಣ್ಣು ಬಡಿಯುತ್ತ ಕುಳಿತುಕೊಳ್ಳಲು ಎಂದೂ ಮನಸ್ಸು ಮಾಡರು. ಅವರ ನಿಜವಾದ ಪೂಜೆಯೆಂಬುದು ಪರಹಿತಕಾರ್ಯವೇ ಆಗುವದು.
ಸಂತೋಷಂ ಜನಯೆತ್ ಪ್ರಾಜ್ಞಸ್ಥದೇವೇಶ್ವರ ಪೂಜನಂ ।
‘ಸಕರ್ಮಣಾ ತಮಭ್ಯರ್ಚ್ಯ ಸಿದ್ದಿಂ ವಿಂದತಿ ಮಾನವಃ
ಇವೇ ಮೊದಲಾದ ಸೂಕ್ತಿಗಳು ಸತ್ಪುರುಷರ ನೈಜ ಜೀವನದ ಪರಿಚಾಯಕವಾಗಿರುವವು.
ಇಂತಹ ಮಹಾಪುರುಷರ ಪಂಕ್ತಿಯಲ್ಲಿ ಹಾನಗಲ್ಲ ಕುಮಾರ ಮಹಾಶಿವಯೋಗಿಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಸರ್ವಾತ್ಮನಾ ಪಡೆದುಕೊಂಡವರು. ಇವರು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಅನಾದಿ ಸಂಸಿದ್ಧವಾದ ವೀರಶೈವ ಧರ್ಮದ ಪುನರುತ್ಥಾನ ಮಹಾಕಾರ್ಯವು ನಡೆಯಬೇಕಾದಾಗ ಸಮರ್ಥ ಕಾರಣಿಕ ಮಹಾಪುರುಷ ರೂಪದಲ್ಲಿ ಕಾಣಿಸಿಕೊಂಡರು.
ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ನಡಬಿಗಿದು ನಿಂತುಕೊಂಡದ್ದಷ್ಟೇ ತಡ ಸಮಾಜದ ನಾಡಿನ ಜನರೆಲ್ಲರೂ ಶಿವಯೋಗಿಗಳಿಗೆ ತಮ್ಮ ಹಾರ್ದಿಕ ಭಕ್ತಿ ಭಾವಗಳನ್ನು ಸಮರ್ಪಿಸಲು ಮುಂದಾಗಿಯೇ ಬಿಟ್ಟರು. ಇಂಥ ಪ್ರಸಂಗದಲ್ಲಿಯೂ ಪೂಜ್ಯ ಶಿವಯೋಗಿಗಳು ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳುತ್ತ ಸ್ವಕರ್ತವ್ಯಗಳಲ್ಲಿಯೇ ತನ್ಮಯರಾಗಿ ಬಿಡುತ್ತಿದ್ದರಲ್ಲದೆ ಜನರಿಂದ ಬರುವ ಮಾನಮರ್ಯಾದೆಗಳ ಬಗ್ಗೆ ತಮ್ಮ ಚಿತ್ತವನ್ನು ಎಷ್ಟೋ ಹರಿಸುತ್ತಿರಲಿಲ್ಲ. ಇದು ಶಿವಯೋಗಿಗಳ ಮಹಾವ್ಯಕ್ತಿತ್ವವನ್ನು ಎತ್ತಿ ತೋರಿಸುವದಾಗಿತ್ತು. ಜನರು ನೀಡುವ ಮಾನಮಯ್ಯಾದೆಗಳತ್ತ ತಮ್ಮ ದೃಷ್ಟಿಯನ್ನು ಸದಾ ಹರಿಸುವ ವ್ಯಕ್ತಿಗಳು ಜನತೆಯ ಹಿತವನ್ನು ಸಾಧಿಸುವ ಸಾಮರ್ಥ್ಯವನ್ನು ಕಳೆದುಕೊಂಡವರೇ ಆಗುವರು, ಜನಸೇವೆಯನ್ನು ಜಗದೀಶನ ಸೇವೆಯೆಂದು ನಂಬಿದ್ದ ಬಸವಾದಿ ಪ್ರಮಥರು ಅನ್ಯರ ಹೊಗಳಿಕೆಯನ್ನು ಆತ್ಮಪ್ರಗತಿಯಲ್ಲಿ ದೊಡ್ಡ ವಿಘ್ನಕಾರಿಯೆಂದು ತಿಳಿಯುತ್ತಿದ್ದರೆಂಬುದನ್ನು ಅವರ ವಾಣಿಯಿಂದಲೇ ತಿಳಿದು ಬರುವದು. “ಎನ್ನವರೆನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕಿಕ್ಕಿದರು” ಎಂದು ಹೇಳುವ ಭಾವ ಎಷ್ಟು ಜನ ಪರಹಿತ ಸಾಧಕರೆಂಬವರಲ್ಲಿರುವದೋ ನೋಡಬೇಕು.
ಅನಾದಿ ಸಂಸಿದ್ಧವಾದ ವೀರಶೈವ ಧರ್ಮವನ್ನು ಎತ್ತಿ ಹಿಡಿಯುವ ಮಹಾಕಾರ್ಯಗಳಲ್ಲಿ ತೊಡಗಿದ ಕುಮಾರ ಶಿವಯೋಗಿಗಳಿಗೆ ಸರ್ವಾತ್ಮಭಾವದಿಂದ ವರ್ತಿಸುವದಕ್ಕಿಂತ ಮತ್ತಾವುದೂ ಅವರಿಗೆ ಗೋಚರಿಸುತ್ತಿರಲಿಲ್ಲ. ಧರ್ಮ ಹಾಗೂ ಸಮಾಜದ ಪುನರುತ್ಥಾನ ಕಾರ್ಯದಲ್ಲಿ ಸಮಯ ಕಳೆಯುವಲ್ಲಿ ದೊರೆಯುವ ಆನಂದ ಅಪರಿಮಿತವಾದುದು.
ಪೂಜ್ಯ ಶಿವಯೋಗಿಗಳು ತಾವು ಕೈಕೊಂಡ ಕಾರ್ಯಗಳಲ್ಲಿ ಅತ್ಯಂತ ಮಹತ್ವ ಪಡೆದವೆರಡು. ಅವೇ ಅ – ಭಾ. ವೀರಶೈವ ಮಹಾಸಭೆ, ಮತ್ತು ಶಿವಯೋಗ ಮಂದಿರ, ಮೊದಲನೆಯದು ವೀರಶೈವ ಸಮಾಜ ಪುರುಷನ ಸರ್ವತೋಮುಖವಾದ ಬಾಹ್ಯ ಸುಧಾರಣೆಯ ಸಾಧನಗಳ ಬಗೆಗೆ ಕೂಲಂಕಷವಾಗಿ ವಿಚಾರಿಸಿ ನಿರ್ಣಯಿಸಲು ಉಪಾಯಪೂರಿತವಾಗಿತ್ತು. ಎರಡನೆಯದು ಸಮಾಜ ಪುರುಷನ ಅಂತರಂಗದ ಪಾವನತೆ ಹಾಗೂ ಸ್ಥಿರತೆಯನ್ನುಂಟು ಮಾಡಿ ಆತ್ಮಾನುಭೂತಿಯ ಮಹಾ ಬೆಳಕನ್ನು ಬೆಳಗಲು ಸಾಧನಭೂತವಾಗಿತ್ತು. ಇವೆರಡು ಮಹಾಕಾರ್ಯಗಳನ್ನು ವೀಕ್ಷಿಸುವವರಿಗೆ ಕುಮಾರ ಶಿವಯೋಗಿಗಳು ಎಂಥ ಕರ್ಮಕೌಶಲ್ಯ ಪಡೆದವರಾಗಿದ್ದರೆಂಬ ಕಲ್ಪನೆಯು ಸಹಜವಾಗಿಯೇ ಮೂಡಿ ಬರದಿರಲಾರದು. ಇನ್ನೊಂದು ದೊಡ್ಡ ವ್ಯಕ್ತಿಗಳ ಬಗೆಗೆ ತಿಳಿದುಕೊಳ್ಳುವದು ಅತ್ಯವಶ್ಯವಾಗಿದೆ. ಅವರು ಹೊರಗೆ ನಿರ್ಧನಿಕರಾಗಿ ಕಂಡು ಬಂದರು ಅಂತಸ್ಸತ್ವದ ಬಲದಿಂದ ಎಂಥ ಕಠಿಣ ಕಾರ್ಯಗಳನ್ನೂ ಸುಲಭವಾಗಿಯೇ ಸಾಧಿಸಬಲ್ಲರೆಂಬುವದು.
“ಕ್ರಿಯಾಸಿದ್ದಿಃ:ಸತೇ ವಸತಿ ಮಹಾತಾಂನೋಪಕರಣೇ”
ಎಂಬ ಸೂಕ್ತಿಯು ಮಹಾಪುರುಷರ ದಿವ್ಯವ್ಯಕ್ತಿತ್ವದ ಸುಂದರ ಶಬ್ದ ಚಿತ್ರವೇ ಆಗಿರುವದು. ಬೇಕಾದಷ್ಟು ಉಪಕರಣಗಳ ಅನುಕೂಲವಿದ್ದಾಗಲು ಯಾವ ಮಹಾಕಾರ್ಯವನ್ನು ಸಾಧಿಸದ, ಯಾವ ಉಪಕರಣಗಳ ಅನುಕೂಲವಿಲ್ಲದಿದ್ದಾಗಲೂ ಮಹಾ ಮಹಾ ಕಾರ್ಯಗಳನ್ನು ಸಾಧಿಸುವವರನ್ನು ನಾವು ಕಂಡದ್ದುಂಟು. ಇದಕ್ಕೆಲ್ಲ ಅಂತಸ್ಸತ್ವದ ಇರುವಿಕೆ ಕಾರಣ.
ಕುಮಾರ ಶಿವಯೋಗಿಗಳು ತಮ್ಮ ಅಂತಸ್ಸತ್ವದ ಪ್ರಭಾವದಿಂದಲೇ ಎಲ್ಲ ಮಹಾ ಕಾರ್ಯಗಳನ್ನು ಸುಲಭವಾಗಿಯೇ ನಿರ್ವಹಿಸುವವರಾಗಿದ್ದರು. ಇವತ್ತಿಗೂ ಅವರು ನಿರ್ಮಿಸಿದ ಉಭಯ ಸಂಸ್ಥೆಗಳು ಅವರ ಅಂತಸ್ಸತ್ವದ ಪ್ರತೀಕವಾಗಿ ಉಳಿದುಕೊಂಡಿರುವವು
ಕುಮಾರ ಶಿವಯೋಗಿಗಳು ತಮಗಿಂತ ಪೂರ್ವದಲ್ಲಿ ಆಗಿ ಹೋದ ಬಸವಾದಿ ಪ್ರಮಥರು, ರೇಣುಕಾದ್ಯಾಚಾರ್ಯರು, ಪ್ರಭು ಮೊದಲಾದ ನಿರಂಜನ ಮೂರ್ತಿಗಳು ಯಾವ ಧರ್ಮದ ಏಳೆಗಾಗಿ ಅನವರತ ಪ್ರಯತ್ನಿಸಿದರೊ ಅಂತಹ ವೀರಶೈವ ಧರ್ಮದ ರಕ್ಷಣೆಯೇ ಕುಮಾರ ಶಿವಯೋಗಿಗಳ ಜೀವನದ ಚರಮ-ಪರಮ ಗುರಿಯಾಗಿತ್ತು. ಸಮಾಜದಲ್ಲಿ ಮಠಗಳು, ಮಠಾಧಿಪತಿಗಳು ಇರುವದು ಜನಾಂಗದ ಕಲ್ಯಾಣೈಕ ದೃಷ್ಟಿಯಿಂದಲ್ಲವೇ ! ಅದು ಸಾಧ್ಯವಾಗಬೇಕಾದರೆ ಮಠಾಧಿಕಾರಿಗಳು ಸಚ್ಚರಿತ್ರರೂ, ತತ್ತ್ವವೇತ್ತರೂ ಕಾರ್ಯತತ್ಪರರೂ ಆಗಿರಲೇಬೇಕೆಂಬುದು ನಿರ್ವಿವಾದವಾಗಿರುವದು. ಇಂಥ ಮಹಾ ವ್ಯಕ್ತಿಗಳನ್ನು ಸಿದ್ಧಪಡಿಸುವದಕ್ಕಾಗಿ ಪ್ರಯತ್ನಿಸಿದ್ದು ಕುಮಾರ ಶಿವಯೋಗಿಗಳ ದೂರದರ್ಶಿತ್ವ ಹಾಗೂ ಕಾರಣಿಕ ಮಹಾಪುರುಷತ್ವದ ದ್ಯೋತಕವಲ್ಲದೆ ಮತ್ತೇನು !
ಶಿವಯೋಗ ಮಂದಿರ ಸಂಸ್ಥೆಯು ಭಾರತದ ಆಧ್ಯಾತ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುವದು. ಇಂತಹ ಸಂಸ್ಥೆಯನ್ನು ಕಟ್ಟಿದವರ ಬಗ್ಗೆ ಅವರ ಸಮಕಾಲೀನರಾದ ಅನೇಕ ಪೂಜ್ಯ ಮಹಾಸ್ವಾಮಿಗಳು ಕುಮಾರ ಶಿವಯೋಗಿಗಳ ಬಗೆಗೆ ಗೌರವ ಬುದ್ಧಿಯನ್ನಿಟ್ಟುಕೊಂಡದ್ದೇನೂ ಅಚ್ಚರಿ ಸಂಗತಿಯಲ್ಲ. ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು, ಇಲಕಲ್ಲ ವಿಜಯಮಹಾಂತ ಶಿವಯೋಗಿಗಳು, ಹಾಲಕೆರೆಯ ಶ್ರೀ ಅನ್ನದಾನ ಶಿವಯೋಗಿಗಳು ಮತ್ತು ಸೊಲ್ಲಾಪುರದ ಶ್ರೀ ವೀರೇಶ ಶಿವಶರಣರು ಮೊದಲಾದವರು ಕುಮಾರ ಶಿವಯೋಗಿಗಳ ಬಗೆಗೆ ಹಾರ್ದಿಕ ಪ್ರೇಮಾದರಗಳನ್ನು ತೋರಿಸುತ್ತಲಿದ್ದರೆಂಬುದನ್ನು ಪ್ರತ್ಯಕ್ಷ ನೋಡಿದವರು ಕೆಲವರಿನ್ನೂ ಬದುಕಿಕೊಂಡಿರುವರು.
ನಾವು ೧೯೨೫ನೆಯ ಸಾಲಿನಲ್ಲಿ ಕಾಶೀಕ್ಷೇತ್ರಕ್ಕೆ ಉಚ್ಚ ಶಿಕ್ಷಣಕ್ಕಾಗಿ ಹೊರಡುವ ಪ್ರಸಂಗದಲ್ಲಿ ಹಾಲಕೆರೆಯ ಶ್ರೀಮದನ್ನದಾನಿಮಹಾಸ್ವಾಮಿಗಳು ನಮಗೆ ಅಪ್ಪಣೆಕೊಡಿಸಿದ್ದು ಹೀಗೆ –
‘ಪೂಜ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ದರ್ಶನಾಶೀರ್ವಾದಗಳನ್ನು ಪಡೆದೇ ನೀವು ಕಾಶೀ ಕ್ಷೇತ್ರಕ್ಕೆ ಹೊರಡಬೇಕು’ ಹಾಗೆ ಪೂಜ್ಯರ ಅಪ್ಪಣೆಯಾಗಬೇಕಾದರೆ ಹಾನಗಲ್ಲ ಪೂಜ್ಯ ಮಹಾಸ್ವಾಮಿಗಳಲ್ಲಿ ಅವರಿಗೆ ನಂಬಿಗೆಯಿದ್ದಿತೆಂಬುದು ವ್ಯಕ್ತವಾಗುವದು ಆದರೆ ನಮಗಾಗ ಅನುಕುಲವಾಗದ್ದಕ್ಕೆ ಹಾಗೇ ಹೊರಡುವ ಪ್ರಸಂಗ ಬಂತು. ಪುನಃ ಮಾರನೆಯ ವರ್ಷ ಕಾಶಿಯಿಂದ ಬಂದಾಗ ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ದರ್ಶನ ಪಡೆದುಕೊಂಡದ್ದು ಇಲಕಲ್ಲ ಮಠಕ್ಕೆ ದೋತ್ಯಾಳ ದೇವರನ್ನು ಅಧಿಕಾರಿಗಳನ್ನಾಗಿ ಮಾಡುವ ಶುಭಸನ್ನಿವೇಶದಲ್ಲಿ ಶಿವಯೋಗ ಮಂದಿರದಿಂದ ಒಂದೇ ವಾಹನದಲ್ಲಿ ಕುಮಾರ ಶಿವಯೋಗಿಗಳ ಅನ್ನದಾನಿ ಮಹಾಸ್ವಾಮಿಗಳ ಕೂಡ ಇಲಕಲ್ಲಿಗೆ ಹೋದದ್ದು ನನ್ನ ಅಹೋ ಭಾಗ್ಯವೆಂದು ಭಾವಿಸಿದೆ.
ಶ್ರೀ ಕುಮಾರ ಶಿವಯೋಗಿಗಳಂಥ ಮಹಾವ್ಯಕ್ತಿಗಳಿಗೆ ಜನ್ಮಕೊಡುವಂತಹ ಭಾಗ್ಯ ಪಡೆದ ಕನ್ನಡಮ್ಮನಿಗೆ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಕಡಿಮೆಯೇ! ಮತ್ತೊಮ್ಮೆ ಕುಮಾರಶಿವಯೋಗಿಗಳು ಮೈದೋರಿ ವೀರಶೈವ ಸಮಾಜವನ್ನು ಎತ್ತಿ ಹಿಡಿಯುವ ಮಹಾಕಾರ್ಯವನ್ನೆಸಗುವಂತೆ ಕರುಣಿಸಲೆಂದು ಅನನ್ಯಭಾವದಿಂದ ಜಗಚ್ಚಾಲಕನಾದ ಮಹಾದೇವನನ್ನು ಪ್ರಾರ್ಥಿಸಲಾಗುವದು