ಅಂದಿನ ಬಸವ ಪುರಾಣ ವೈಭವ

ಲೇಖಕರು : ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ

೧೯೦೩ರ ಫೆಬ್ರವರಿಯಲ್ಲಿ ಸವದತ್ತಿಯ ಕಲ್ಮಠದಲ್ಲಿ ಶ್ರೀ ಬಿದರಿ ಕುಮಾರಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಸವಪುರಾಣ ಪ್ರವಚನವನ್ನು ಏರ್ಪಡಿಸಲಾಗಿತ್ತು.

ಎಂಟು ಕಾಂಡಗಳ ಪುರಾಣ ಪ್ರವಚನ; ಪ್ರತಿಕಾಂಡದ ಆರಂಭದ ದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹೆಚ್ಚಿನ ಸಂಖ್ಯೆಯ ಶಿವಗಣಾರಾಧನೆ, ದಾಸೋಹದ ವ್ಯವಸ್ಥೆ ಮಾಡುವುದು. ಬಸವಣ್ಣನ ಜನನ ಸಂದರ್ಭವನ್ನು ದೃಶ್ಯ

ಪೂರ್ವಕವಾಗಿ ಮನವರಿಕೆ ಮಾಡುವ ಉದ್ದೇಶದಿಂದ ತೊಟ್ಟಿಲು, ನಾಮಕರಣ, ಲಿಂಗಧಾರಣ, ವಿವಾಹ ಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳು ಪುರಾಣ ಪ್ರವಚನದ ಅಂಗವಾಗಿದ್ದವು. ಪ್ರವಚನವು ಆರು ತಿಂಗಳವರೆಗೂ ನಡೆದಿತ್ತು. ಈ ಸಮಾರಂಭದ

ಭಾವುಕ ಸಂದರ್ಭವೊಂದನ್ನು ಚಾರಿತ್ರಿಕ ಕಾರಣಕ್ಕಾಗಿ ಇಲ್ಲಿ ಗಮನಿಸಬಹುದು.

“ಮುರಗೋಡದ ಮಹಾನ್ ತಪಸ್ವಿ, ತ್ರಿಕಾಲ ಲಿಂಗಪೂಜಾನಿಷ್ಠೆಯ ಬಲದಿಂದ ಪವಿತ್ರ ಪರುಷಗಳನ್ನು ಹೊಂದಿದ ಶತಾಯುಷಿ, ಜಂಗಮ ಪುಂಗವ, ವೈರಾಗ್ಯವಿಭೂಷಿತ, ಶ್ರೀ ಶ್ರೀ ಮಹಾಂತ ಮಹಾಶಿವಯೋಗಿಗಳವರು (ಹೀಗೆ) ಅಪ್ಪಣೆ ಕೊಡಿಸಿದ್ದರು.

‘ಇದು ಮಹಾತ್ಮ ಬಸವಣ್ಣನವರ ಪುರಾಣ್ರೆಪಾ…. ಇದು ಅಂಥಿಂಥ ಪುರಾಣ ಅಲ್ರೆಪಾ ! ಇದು ಮಹಾಪುರಾಣ್ರೆಪಾ ಮೂರ್ನಾಲ್ಕು ತಿಂಗಳುಗಳ ಕಾಲ ವಿಧಿವತ್ತಾಗಿ ಇದನ್ನು ಪ್ರವಚನ ಮಾಡಬೇಕಾಗತೈತ್ರಪಾ ಕಾಂಡದಿಂದ ಕಾಂಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನ್ನ ದಾಸೋಹ ನಡೆಯಿಸಿಕೊಂಡು ಹೋಗ ಬೇಕಾಗತೈತ್ರಪಾ…. ಒಟ್ಟಿನಲ್ಲಿ ಹೇಳಬೇಕೆಂದರೆ, ಪುರಾಣ ಮಂಗಲ ಕಾರ್ಯಕ್ರಮ ಜರುಗುವ ದಿನದೊಳಗಾಗಿ ಒಂದು ಲಕ್ಷ ತೊಂಭತ್ತಾರು ಸಾವಿರ ಗಣಂಗಳು ಪ್ರಸಾದ ವ್ಯವಸ್ಥೆಯನ್ನು ಭಕ್ತಿಪೂರ್ವಕವಾಗಿ ಮಾಡಬೇಕಾಗತೈತ್ರಪಾ !”- (ಶತಸಂಪದ, ಶಾಂತವೀರಪ್ಪ ಬೆಳ್ಳುಬ್ಬಿಯವರು, ಸ್ಮರಣ ಸಂಚಿಕೆ, ಬೆಳ್ಳುಳ್ಳಿಯವರು, ೧೯೦೭ರಲ್ಲಿ ಲಿಂಗೈಕ್ಯರಾದವರು. ಇವರು ಸ್ವತಃ ಈ ಪ್ರವಚನ ಸಂದರ್ಭದಲ್ಲಿ ಭಾಗವಹಿಸಿದ್ದರು) ಮುರುಗೋಡದ ಮಹಾಂತ ಶಿವಯೋಗಿಗಳ ಈ ಅಪ್ಪಣೆ ಪುರಾಣ ಪ್ರವಚನದ ಆ ಕಾಲದ ಪ್ರಭಾವ ಚಿತ್ರವನ್ನು

ಕೊಡುತ್ತದೆ.

ಈ ಪ್ರವಚನದ ಮತ್ತೊಂದು ವಿಶೇಷವೆಂದರೆ, ಬಸವಣ್ಣನವರ ಲಿಂಗದೀಕ್ಷಾ ಸನ್ನಿವೇಶವು ಪುರಾಣದಲ್ಲಿ ಬಂದಾಗ ಲಿಂಗ ಧರಿಸದೇ ಇರುವ ಲಿಂಗಾಯತರಿಗಾಗಿ ಲಿಂಗದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಮನೆ ಮಂದಿಯೆಲ್ಲಾ ಒಂದೇ

ಲಿಂಗವನ್ನು ಉಪಯೋಗಿಸುವ ಪದ್ಧತಿಹೋಗಿ ಪ್ರತಿಯೊಬ್ಬರೂ ಲಿಂಗಧಾರಣೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆಯನ್ನು ಈ ಮೂಲಕ ತರಲಾಯಿತು. ಅದೇ ರೀತಿಯಾಗಿ ಬಸವಣ್ಣನವರ ವಿವಾಹ ಮಹೋತ್ಸವದ ಸನ್ನಿವೇಶವು ಸಾಮೂಹಿಕ ಉಚಿತವಿವಾಹವನ್ನು

ಏರ್ಪಡಿಸುವುದು ಬಡ, ದೀನದಲಿತ ಸಮುದಾಯಕ್ಕೆ ಈ ಮೂಲಕ ಆರ್ಥಿಕ ನೆರವು ಸಲ್ಲಿಸಿದಂತಾದುದು. ಪುರಾಣ ಪ್ರವಚನ ಶ್ರವಣ ಮಾಡಿದ ಪುಣ್ಯಮಾತ್ರ ದೊರೆಯುವುದಲ್ಲದೆ ಒಂದು ಅತ್ಯುತ್ತಮ ಸಮಾಜ ಕಲ್ಯಾಣಕಾರ್ಯವನ್ನು ಮಾಡಿದ

ಧನ್ಯತಾಭಾವವೂ ಸಂತೋಷವೂ ಇದರಿಂದ ಲಭ್ಯವಾಗುತ್ತಿತ್ತು !

ಸವದತ್ತಿ ಸುತ್ತ ಮುತ್ತಲಿನ ಹತ್ತೆಂಟು ಗ್ರಾಮಗಳ ಜನರು ಪ್ರತಿರಾತ್ರಿ ಮೂರ್ನಾಲ್ಕು ತಿಂಗಳುಗಳ ಕಾಲ ಪ್ರವಚನವನ್ನಾಲಿಸಲು ಬಂಡಿಗಳಲ್ಲಿ ಬರುತ್ತಿದ್ದರು. ದಾಸೋಹಕ್ಕಾಗಿ ತಮ್ಮ ಭಕ್ತಿಸೇವೆಯನ್ನು ಸಲ್ಲಿಸಿ, ಸಂತುಷ್ಟರಾಗಿ ಹೋಗುತ್ತಿದ್ದರು. ಕೊಡುಗೈ ದೊರೆಗಳು ಮಹಾದಾನಿಗಳು, ಧನ ಧಾನ್ಯ ವಸ್ತುಗಳನ್ನು ಭಕ್ತಿಭಾವದಿಂದ ಮಠಕ್ಕೆ ಅರ್ಪಿಸುತ್ತಿದ್ದರು. ಮೂರು ನಾಲ್ಕು ತಿಂಗಳವರೆಗೆ ನಡೆದ ಈ ಮಹಾಪುರಾಣ ಪ್ರವಚನದ ಆರಂಭದಿಂದ ಮಂಗಲ ಮಹೋತ್ಸವದವರೆಗೆ ದಾನ ಶಿಖಾಮಣಿ

ಬೆಳ್ಳುಬ್ಬಿ ಶಾಂತವೀರಪ್ಪನವರು ಪ್ರತಿನಿತ್ಯದ ಪ್ರಸಾದ ವಿತರಣೆಯ ಕಾರ್ಯವನ್ನು ನಿರ್ವಿಘ್ನವಾಗಿ ಸಾಗುವಲ್ಲಿ ವಿಶೇಷ ಲಕ್ಷ್ಯವಹಿಸಿದ್ದರು.

ಪ್ರತಿದಿನ ಭಜನೆ, ಕೀರ್ತನೆ, ವಿದ್ವತ್‌ಪೂರಿತ ಭಾಷಣಗಳು, ಗಾಯನ, ಶಿವಾನುಭವ, ಸಮಾಜ ಸೇವಾ ನಿರತ ಗಣ್ಯರಿಗೆ ಸನ್ಮಾನ ಪ್ರವಚನದ ಮಂಗಲ ಮಹೋತ್ಸವದ ಶುಭ ಸಮಾರಂಭಕ್ಕೆ ಅಥಣಿಯ ಗಚ್ಚಿನಮಠದ ತಪಸ್ವಿ, ವೈರಾಗ್ಯಮೂರ್ತಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಸಾನಿಧ್ಯ- ವಹಿಸಿಲೆಂದು ಆಗಮಿಸಿದ್ದರು. ಈ ಸಮಾರಂಭದ ಸಮ್ಮುಖ ವಹಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗಂಗಾಧರ ಮಹಾಸ್ವಾಮಿಗಳು, ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಮೊದಲಾದ ಅನೇಕ ದೇಶೀಕೋತ್ತಮರು ಆಗಮಿಸಿದ್ದರು.

ಅಭೂತಪೂರ್ವವಾಗಿದ್ದ ಈ ಕಾರ್ಯಕ್ರಮದ ಮಂಗಲ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಬಹುದೆಂದು ನಂಬಲಾಗಿತ್ತು ಆದ್ದರಿಂದ ಮಹಾಪ್ರಸಾದದ ಸಮಗ್ರ ವೆಚ್ಚವನ್ನು ತಾವೇ ಭರಿಸುವುದಾಗಿ ಶ್ರೀಗಳಿಂದ ಅಪ್ಪಣೆ  ಪಡೆದಿದ್ದ ಶಾಂತವೀರಪ್ಪ ಬೆಳ್ಳುಬ್ಬಿಯವರು ೬೦ ಚೀಲ ಸಕ್ಕರೆ ಬಳಸಿ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಈ ಸಮಾರಂಭ ಎಷ್ಟೊಂದು ಅದ್ದೂರಿಯಾಗಿತ್ತೆಂದರೆ ಕಿತ್ತೂರು ಶಾಲೆಯ ಉಪಶಿಕ್ಷಕರಾದ ಚನ್ನಬಸಪ್ಪನವರ ಮಗ ಬಸವ ಕವಿ ಒಂದು ಖಂಡಕಾವ್ಯವನ್ನೇ ಬರೆದಿದ್ದ. ಈ ಖಂಡಕಾವ್ಯ ಆ ಕಾಲದ ಈ ಘಟನೆಯ ಸ್ಥೂಲ ಚಿತ್ರವನ್ನು ಕೊಡುತ್ತದೆ. ಅದರ ಮುಖ್ಯಾಂಶಗಳು ಇಲ್ಲಿವೆ.

|| ಶ್ರೀ ಗುರು ಪ್ರಸನ್ನ ||

ಶ್ರೀಮತ್ ಸಚ್ಚಿದಾನಂದ ಪರಶಿವ ಮೂರ್ತಿಗಳಾದ ಸವದತ್ತಿ ಕಲ್ಮಠಾಧೀಶ

ಶ್ರೀ ಕುಮಾರ ಸ್ವಾಮಿಗಳವರ ಬೆಳೆಯಿಸಿದ ಶ್ರೀ ಬಸವೇಶ್ವರ ಪುರಾಣ

ಸಂಭ್ರಮಾತಿಶಯದ ವರ್ಣನಾ ಪರ-

ಕಂ |

ರುದ್ರಾಕ್ಷ ಭರಿತ ಕಂಠರ್ |

ಭದ್ರಪದ ಭಸ್ಮ ಭಸಿತ ಫಾಲರ್ ಶೀಲರ್ |

ಚಿದ್ರೂಪಮಿತ್ರ ನೇತ್ರನ |

ತದ್ರೂಪದೊಳೀ ಕುಮಾರ ಸ್ವಾಮಿಗಳೆಸೆವರ್ ||

ಸುಕುಮಾರಸ್ವಾಮಿಗಳವರ್

ಪ್ರಕಟಸಲೀ ಧರ್ಮಪಾಲ ಸಜ್ಜನರೆಲ್ಲರ್ |

ಅಕಳಂಕ ಬಸವ ಸಂಭ್ರಮ |

ವಖಿಲರ್ ತಲೆದೂಗುವಂತೆಗೈದರ್ ತ್ವರೆಯಿಂ ||

ಪಟ್ಟಣದೊಳಗಿನ ಧನಿಕರ

ಸೆಟ್ಟರ ಸಜ್ಜನರ ದೇವ ನಿಷ್ಠಾಪರರಾ

ದಿಟ್ಟರ ಸಹಾಯ ದಿಂದಂ

ನೆಟ್ಟಗೆ ಸತ್ಕಾರ್ಯಗೈದು ಪ್ರಕಟಿತರಾದರ್

ವಸುಧೆಯು ಬೆರಗಾಗುವ ತರ |

ಮೆಸೆವಾ ಸವದತ್ತಿ ಕಲ್ಲಮಠದೊಳು ನಿಜದಿಂ |

ದಸಮ ಸುಕುಮಾರ ಕರುಣದೆ |

ಬಸವೇಶ ಪುರಾಣ ಸಂಭ್ರಮಂ ಬೆಳೆಸಿದಪರ್

ಸವದತ್ತಿಯ ಕಡಲೊಡಲೊಳ್ |

ಭಾ |

ಅಥಣಿಯ ಮುರುಘ್ರೇಂದ್ರ ಸ್ವಾಮಿ ಗ

ಳತಿ ವಿಶಾಲ ಭ್ರೂಲತಾಂತ |

ರ್ಗತ ವಿರಕ್ತ ಸ್ತೋಮದಿಂ ಗುರುಸಿದ್ದ ಸ್ವಾಮಿಗಳೂ

ಪ್ರಥಿತ ಬೀಳೂರರ್ಮಠದ ಸ್ವಾಮಿ

ಳತಿ ಸುಶೀಲಾಭರಣ ನಿಷ್ಟಾ |

ಯುತ ಮಹಾ ಯೋಗೀಂದ್ರರಾ ಹಾನ್ಗಲ್ಲ ಸ್ವಾಮಿಗಳೂ

ವ |

ಇಂತುಮಲ್ಲದೆಯುಂ ಕಂತುಹರ ಸ್ವರೂಪಿಗಳಾದ ಕಲ್ಬುರ್ಗಿ

ಶಿರ್ಶಿಯಾದವಾಡ ಗದಗಾದ್ಯನಂತ ಮಠಾಧ್ಯಕ್ಷ

ರಂ ಗಣನಾತೀತ ಪಟ್ಟಚರ ಮೂರ್ತಿಗಳುಂ ವೇದಶ್ರುತಿ

ಸ್ಮೈತಿ ಶಾಸ್ತ್ರ ಪುರಾಣೇತಿಹಾಸ ನ್ಯಾಯ ತರ್ಕ ಮೀಮಾಂ

ಸಾದ್ಯಸಂಖ್ಯ ವಿಷಯವೇತ್ತ ವಿದ್ವನ್ಮುಕುಟ ಮಣಿಗಳುಂ

ಸಮ್ಮಿಳಿತ ಮಹೋದ್ಯೋಗಿವರ್ಯ ಸಂದರ್ಶಾನುಲಾಭೇಚ್ಛೆ

ಯಿಂ ಏತತ್ಪುರಾಣ ಮಹೋತ್ಸವ ದರ್ಶನಾಪೇಕ್ಷೆಯಿಂ

ಮತ್ತ ಮಾತ್ಮೀಯ ಧರ್ಮ ವಿಷಯೋಪನ್ಯಾಸಮಂಗೆಯ್ಯು

ವಾಕಾಂಕ್ಷಿಯಿಂದ ಮೈತಂದು ಅತಿ ಪ್ರಚಂಡ ಸಭಾಸ್ಥಾ

ನಮಂ ಸೇರಿ ಕೊಂಡಾಗಳ್

ಮ |

ಇದು ಸತ್ತಾಪಸವೃಂದವೋ ಪರಿಕಿಸಲ್ ಸನ್ಯಾಸಮು

ಹೃದೋ | ಇದು ಮಾಹೇಶ್ವರ ಸಂಘಮೋ ಮುನಿಜನಂ ಸಂ

ವರ್ತ ಸುಕ್ಷೇತ್ರಮೋ || ಇದು ಋಷ್ಯಾಶ್ರಮ ಮೋ ಮಹ

ತ್ಪ್ರಮಥಾಧರಾದೇದೀಪ್ಯ ಸಮ್ಮೇಳನವೋ | ಇದು ಕೈಲಾಸವೋ

ಯೋಗಿವರ್ಯ ಮಿಳಿತಂ ಸವದತ್ತಿಯೋ ಮಿತ್ರ ಪೇಳ್ ||

ವ |

ಪ್ರತ್ಯಕ್ಷ ಕೈಲಾಸದೊಲ್ ಸಿಂಗರದಿಂ ಕಂಗೊಳಿಪಯೋ

ಗಿಜನ ಸಾಮುಹ್ಯದೊಳ್

ಕಂ |

ವರ ವೀರಶೈವ ಧರ್ಮೊತ್

ಪರಿಷದ್ಬಹು ಭವ್ಯವಾದ ಹೊಸಮಠದೊಳು ತಾಂ |

ಜರುಗಿದುದು ಪಂಡಿತಾಗ್ರೇ

ಸರರ್ಣೆಯ್ಯುವ ಧರ್ಮ ವಿಷಯ ಚರ್ಚೆಗಳಿಂದಂ   

ರ |                 

ಮುತ್ತಿನ ಗುಚ್ಛಂಗಳು ತೂಗುತಿರಲ್ |

ಚಿತ್ರಿತ ಪಲ್ಲಕ್ಕಿಯು ಹೊಳೆಯುತಿರಲ್

 ಉತ್ತಮ ಹೊತ್ತಿಗೆಯದರೊಳ್ ಬೆಳಗಲ್                    

ಸುತ್ತಲುಯುತ್ಸವಮೆಸೆದುದುಮಿರಳೊಳ್ ||

ಬಂದನಿತು ಜನಕೆ ತಪ್ಪದೆ |

ಕುಂದಿನಿತುಂ ಬಾರದಂತೆ ಮುದವೆರ್ಚುವವೊಲ್ |

ಚಂದಾದ ಪ್ರಸ್ಥಮಾದುದು |

ಸುಂದರ ಸುಕುಮಾರ ಕರುಣದಿಂದಂ ನಿಜದಿಂ ||

ಸನ್ನುತ ವಿದ್ವಜ್ಜನರಿಗೆ |

ಮನ್ನಣೆಯಿಂ ಮೆಚ್ಚುಗೊಡುತ ಮಾದರಿಸಿದರಿಂ

ಉನ್ನತ ಕೀರ್ತಿಯ ಪಡೆದರ್ |

ಚಿನ್ಮಯರೀಧರ್ಮ ಕೃತ್ಯಮೇನತಿಶಯಮೋ ||

ಚಂ  |   

ಪರಹಿತ ಚಿಂತನಾತ್ಮ ತವ ವಂಶಲತಾಂಕುರ ಮೇಳುಂ ಸತ್ವರು |

ಸುರಚರ ಪತ್ರಪುಷ್ಟ ಫಲಬಾರದೆ ತೂಗುತೆ ಪೃಥ್ವಿ ಮಂಟಪಾಂ

ತರದೋಳೆ ಪೂರ್ಣ ಪರ್ಬುಗೆ ಯಶೇರ್ಣವ ಮುರ್ಕುಗೆ ಸರ್ವ

ಸಂಭ್ರಮಂ |

ನಿರುತದಿ ತೊಗೆಯಾಯುವತಿವರ್ಧಿಕೆ ಸಂತತ ಸೌಖ್ಯವೆರ್ಚುಗೆ ||

 ಕಂ |  

ನೀರಕ್ಷೀರ ನ್ಯಾಯದೆ

ಸೂರಿಗಳೇ ಪದ್ಯ ಪಠನವವಧರಿಸುತ್ತಂ !  

ದೂರುವ ಮತಿಯಂದೋರದೆ |

ತೋರುವದೈ ದೋಷಮಂ ನಿಜಾಂತರ್ಮಾನದಿಂ

ಇಂತಿಲ್ಲಿಗೆ ಶ್ರೀ ಬಸವಪುರಾಣ ಸಂಭ್ರಮಾತಿಶಯ ವರ್ಣನಾಪರ

ಪದ್ಯತಾರಾವಳಿಯು ಬಸವೇಶ್ವರ ಕಾರುಣ್ಯದಿ…. ಸಂಪೂರ್ಣಮಕ್ಕುಂ

ಇಂಥ ಅಪರೂಪದ ಸಂಧಿ ಸಂದರ್ಭವನ್ನುಂಟು ಮಾಡಿದ್ದ ಸವದತ್ತಿ ಕಲ್ಮಠದ ಬಸವಪುರಾಣ ಪ್ರವಚನವು ಹಲವು ಚಾರಿತ್ರಿಕ ಘಟನೆಗಳಿಗೆ ಕಾರಣವಾಯಿತು. ಕಾಲ ಇಂಥ ಒಂದು ಘಟನೆಯ ನಿರೀಕ್ಷೆಯಲ್ಲಿತ್ತು; ಅದು ಸವದತ್ತಿಯ ಕಲ್ಮಠದಲ್ಲಿ ಜರುಗಿತು.

ಚಿತ್ರದುರ್ಗದ ಬೃಹನ್ಮಠಕ್ಕೆ ಜಯದೇವ ಮಹಾಸ್ವಾಮಿಗಳು ಪೀಠಾಧಿಕಾರಿಯ ಗಳಾಗಲಿದ್ದಾರೆ ಎಂಬ ಸೂಚನೆಯನ್ನು ಅಥಣಿಯ ಮುರುಘ್ರೇಂದ್ರ ಮಹಸ್ವಾಮಿಗಳು ಭವಿಷ್ಯ ನುಡಿದದ್ದು (ಮುಪ್ಪಿನೇಂದ್ರ ಮಹಾಸ್ವಾಮಿಗಳ ಲಿಂಗೈಕ್ಯದಿಂದ ತೆರವಾಗಿದ್ದ

ಚಿತ್ರದುರ್ಗ ಬೃಹನ್ಮಠದ ಪೀಠಾಧಿಕಾರವು ಶಾಲಿವಾಹನ ಶಕೆ ೧೮೨೫ ನೇ ಶೋಭನಕೃತು ನಾಮ ಸಂವತ್ಸರ ಕಾರ್ತಿಕ ಶುದ್ಧ ತ್ರಯೋದಶಿ- ೩-೧೧-೧೯೦೩ ರಂದು ಜಯದೇವ ಮಹಾಸ್ವಾಮಿಗಳವರಿಗೆ ಒಲಿದು ಬಂದಿತು) ಶ್ರೀ ಶಿವಬಸವ ಮಹಾಸ್ವಾಮಿಗಳನ್ನು ಹಾವೇರಿಯ ಹುಕ್ಕೇರಿಮಠದ ಪೀಠಾಧಿಕಾರಕ್ಕೆ ನಿಯುಕ್ತಗೊಳಿಸಬೇಕೆಂಬ ಪ್ರಸ್ತಾಪ ಬಂದದ್ದು ಈ ಪುರಾಣ ಪ್ರವಚನ ಸಂದರ್ಭದಲ್ಲಿ, ಮುಖ್ಯವಾಗಿ ಗಿಲಿಗಿಂಚಿ ಗುರುಸಿದ್ದಪ್ಪ ಮತ್ತು ಅರಟಾಳ ರುದ್ರಗೌಡರಿಂದ ಆರಂಭವಾಗಿದ್ದ ಲಿಂಗಾಯತ ವಿದ್ಯಾಭಿವೃದ್ಧಿ ಫಂಡ್ ಗಮನಾರ್ಹವಾಗಿ ಬೆಳೆಯ ತೊಡಗಿತ್ತು. ಗಿಲಗಂಚಿಯವರ ನಿಧನಾನಂತರ ಅರಟಾಳ ರುದ್ರಗೌಡರು, ಸಿರಸಂಗಿ ಲಿಂಗರಾಜರು, ವಂಟಮುರಿ ದೇಸಾಯಿಯವರು ಫಂಡ್‌ಗೆ ವಿಶೇಷ ಚಾಲನೆ ನೀಡಿದ್ದರು. ಈ ಫಂಡ್ ಅಪ್ರಮಾಣವಾಗಿ ಬೆಳೆಯುತ್ತ ಹೋದಂತೆ, ವೀರಶೈವರಲ್ಲಿ ವಿದ್ಯಾವೈಖರಿಯು ಹೆಚ್ಚಾಗ ತೊಡಗಿತ್ತು.

 ಸಮಾಜದ ಉನ್ನತಿಗೆ ವಿದ್ಯೆಯೇ ಮೊದಲಾಗಬೇಕು ಎಂದು ಸದಾ ಚಿಂತಿಸುತ್ತಿದ್ದ ಹಾನಗಲ್ಲ ಕುಮಾರ ಸ್ವಾಮಿಗಳೂ ಮತ್ತು ಇಂಥ ಅಭಿಪ್ರಾಯವನ್ನೇ ಹೊಂದಿದ್ದ ಸಮಾಜದ ಗಣ್ಯರು ಇಂಥ ಪ್ರಸ್ತಾಪವನ್ನು ಒಂದು ಕ್ಲುಪ್ತ ಸಂದರ್ಭದಲ್ಲಿ ಸಂಧಿಗೆ ಬರಲು ಕಾಲ ಕಾಯುತ್ತಿತ್ತು. ವಿದ್ಯೆಯ ಅನುಕೂಲ ಕನ್ನಡನಾಡಿನ ಒಂದು ಪ್ರಾಂತದ ಸಮಾನಚಿಂತಕರಲ್ಲಿ ತ್ಯಾಗಜೀವಿಗಳಿಂದ ಆಗುತ್ತಿರುವಂತೆಯೇ ಇದು ವಿಸ್ತಾರಗೊಳ್ಳಬೇಕೆಂದು ಅವರ ಮಹದಾಸೆಯಾಗಿತ್ತು. ಹಾನಗಲ್ಲ ಕುಮಾರ ಸ್ವಾಮಿಗಳು ವಿರಕ್ತ ಪಟ್ಟಾಧಿಕಾರ ವಹಿಸಿಕೊಳ್ಳುವವರೆಗಿನ ಅವರ ಬದುಕಿನಲ್ಲಿ ವಿದ್ಯೆಯ ಜೊತೆಗೆ ಸಮಾಜದ ಒಟ್ಟು ಉದ್ದಾರವಾಗುವುದರ ಕಡೆಗೆ ಚಿಂತನೆ ನಡೆಸುತ್ತಿದ್ದರು. ವೀರಶೈವ ಧರ್ಮದ ಉದ್ಧಾರ ದಿಂದ ಸಮಗ್ರ ಸಮಾಜದ ಉದ್ಧಾರವಾಗುವ ವಿಚಾರ ಆಗ ಮೂಡಿದ್ದು ಇಲ್ಲಿ ವಿಶೇಷ.

ಅರಟಾಳ ರುದ್ರಗೌಡರು, ಸಿರಸಂಗಿ ಲಿಂಗರಾಜರು ಈ ಕುರಿತು ಆಲೋಚಿಸಿ, ವಿದ್ಯಾಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ, ಮಾರ್ಗದರ್ಶನ, ಆಶೀರ್ವಾದಕ್ಕಾಗಿ ಹಾನಗಲ್ಲ ಕುಮಾರ ಸ್ವಾಮಿಗಳನ್ನು ಸಂಪರ್ಕಿಸಿದ್ದರು. ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ‘ಭಕ್ತ ಶ್ರೇಷ್ಠರೇ ! ಪರಮಪಾವನಕರವೂ, ಮೋಕ್ಷೈಕ  ಸಾಧನೀಭೂತವೂ ಆದ ನಮ್ಮ ವೀರಶೈವಮತದ ಉತ್ಕರ್ಷವನ್ನು ಚಿಂತಿಸುವ ನಿಮ್ಮ ಆಲೋಚನೆಗಳು ಸರ್ವಜನ ಸಮಂಜಸವಾಗಿರುವವು. ಇದೇ ವಿಚಾರಗಳು ನನ್ನ ಮನೋಬುದ್ಧಿಯಲ್ಲಿಯೂ ತೆರೆಗಳಂತೆ ತೇಲಾಡಹತ್ತಿವೆ. ಮಹನೀಯರ

ಮನಸ್ಸಿನಲ್ಲಿ ತೇಲಾಡುತ್ತಿರುವ ವಿಚಾರ ತರಂಗಗಳನ್ನು ಎತ್ತಿಹಿಡಿಯಲಿಕ್ಕೆ ಮಹೇಶ್ವರನು ತತ್ಪರನಿರುವನು, ನಿಮ್ಮ ಪ್ರಚಂಡ ಸಾಹಸವನ್ನು ಮತ ಸುಧಾರಣಾ ತತ್ಪರತೆಯನ್ನು ಕಂಡು ನನಗೆ ಪರಮಾನಂದ ವಾಗಿರುತ್ತದೆ. ವೈದ್ಯ ಹೇಳಿದ್ದು ಹಾಲೋಗರ ರೋಗಿ ಬಯಸಿದ್ದು ಹಾಲೋಗರ ಎಂಬಂತೆ ಉಭಯತಾಪಿ ವಿಚಾರಗಳು ಒಂದೇ ಆಗಿ, ನಮ್ಮ ಮನೋದಯ ಸಿದ್ದಾರ್ಥಗಳನ್ನೇ ಸೂಚಿಸುತ್ತವೆ. ಪೂರ್ವದಲ್ಲಿ ಅನೇಕ ಮತಗಳು ತೀರ ಮುರಕಳಿಗೆ ಬಂದಿರಲು, ನಿಮ್ಮಂತಹ ಅಸಹಾಯ ಶೂರರಾದ ಕೆಲಮತಾಭಿಮಾನಿಗಳುದಿಸಿ, ರಾಜಾಶ್ರಯವನ್ನು ಸಂಪಾದಿಸಿ ಅಲ್ಲಲ್ಲಿಗೆ ಧರ್ಮ ಸಭೆಗಳನ್ನೇರ್ಪಡಿಸಿ, ತಂತಮ್ಮ ಮತಗಳನ್ನು ಜೀರ್ಣೋದ್ಧಾರ ಮಾಡಿ ಅವುಗಳನ್ನು ಪೂರ್ವದ ಸ್ಥಿತಿಗೆ ತಂದು, ಅಥವಾ ಇನ್ನಿಷ್ಟು ಪ್ರಕಾಶಿಸುವಂತೆ ಮಾಡಿ, ಅಕ್ಷಯಕೀರ್ತಿಯನ್ನು ಸಂಪಾದಿಸಿದರು…. ಮತ ಸುಧಾರಣೆಯ ಉತ್ಕಟೇಚ್ಛಗಳೂ, ಕೇವಲ ಮತೋನ್ನತ ಕಾರ್ಯದಲ್ಲಿಯೇ ತನುಮನಧನದಿಂದ ಸಾಹಸವಂತರಾಗಿ, ಇದಕ್ಕಾಗಿಯೇ ಆಯುಷ್ಯವನ್ನು ಬುದ್ಧಿಯನ್ನು

ವ್ಯಯಮಾಡುತ್ತಿರುವ ನಿಮ್ಮಂತಹ ಕಟ್ಟಭಿಮಾನಿಗಳೂ ಮತೋನ್ನತಿಯ ಕಾರ್ಯಭಾಗದಲ್ಲಿ ಭಾಂಡಾರರನ್ನು ಬಿಚ್ಚಿ ಬಿಡುವ ನಿಮ್ಮಂತಹ ವಿತರಣಶಾಲಿಗಳಾದ ಸಂಸ್ಥಾನಿಕರೂ ಇದ್ದ ಮೇಲೆ ಬೇಕಾದ ಕೆಲಸವನ್ನು ಮಾಡಬಹುದು. ಈ ಪುಣ್ಯ ಕಾರ್ಯವು ಸುಲಭವಾಗಿ ನೆರವೇರುವದಾಗಿ ಗುರ್ವಾಶೀರ್ವಾದವುಂಟು” (ಅರಟಾಳ ರುದ್ರಗೌಡರ ಚರಿತ್ರೆ, ಬಸವಯ್ಯ ಹಿರೇಮಠ) ಬ್ರಿಟಿಶ್ ಆಧಿಪತ್ಯದಿಂದ ಶಿಕ್ಷಣದ ಅನುಕೂಲ  ಪ್ರತಿಕೂಲ ಪರಿಣಾಮವಾಗಿ ಸುರಕ್ಷಿತ ಭಾರತೀಯ ವರ್ತನೆಗಳು ಆತಂಕಕಾರಿಯಾಗೇನೋ ಇದ್ದವು. ! ಆದರೆ, ಸ್ವಾವಲಂಬಿ ಚಿಂತನೆ ಮಾಡಿದ ಕೆಲವು ಸಂಘಟನೆಗಳು ಕೆಲವು ಪ್ರಯತ್ನಗಳನ್ನು ಮಾಡಿದ್ದವು. ಆಂಧ್ರರಾಜ್ಯದ ಗಾಜುಲು ಎನ್ನುವವರು ೧೮೮೪ ರಲ್ಲಿ “ಕ್ರೆಸೆಂಟ್’ ಎಂಬ ಆಂಗ್ಲ ಪತ್ರಿಕೆಯನ್ನು ಹೊರ ತರುವುದರ ಮೂಲಕ ದೇಶೀಯತೆ, ರಾಷ್ಟ್ರಾಭಿಮಾನಕ್ಕೆ ಸಂಬಂಧಿಸಿದ ಲೇಖನ ಬರೆದು ಜಾಗೃತಿಯನ್ನು ಪ್ರಚೋದಿಸಿದ್ದರು. ೧೮೫೨ ರಲ್ಲಿ ಮದ್ರಾಸ್ ದೇಶೀಯ ಸಂಘ’ ವೂ ಸ್ಥಾಪಿತವಾಗಿ ಶಾಲೆಗಳಲ್ಲಿ ಬೈಬಲ್‌ನ್ನು ಪಠ್ಯವಾಗಿಡುವುದನ್ನು ತಪ್ಪಿಸಿದ್ದಲ್ಲದೆ, ಕ್ರೈಸ್ತರಾಗಿ ಮತಾಂತರಗೊಂಡವರಿಗೆ ಅವಿಭಕ್ತ ಕುಟುಂಬದಲ್ಲಿ ಪಾಲು ಬೇಕೆಂಬ ಹಕ್ಕನ್ನು ತಿರಸ್ಕರಿಸುವಂತೆ ಮಾಡಿದ್ದರು. ಜನತೆಯ ಒಲವು ನಿಲುವುಗಳನ್ನು ಅರಿತ ಈ ಮುಖಂಡರು ೧೮೮೪ ರಲ್ಲಿ ಮದ್ರಾಸ್ ಮಹಾಜನ ಸಭೆ’ ಸ್ಥಾಪಿಸಿದ್ದರು. ಮೈಸೂರು ಪ್ರಾಂತದಲ್ಲಿ ದಿವಾನ್ ರಂಗಾಚಾರ್ಯ ಅವರು ೧೮೮೧ ರಲ್ಲಿ ಪ್ರಜಾಪ್ರತಿನಿಧಿ ಸಭೆ’ ಸ್ಥಾಪಿಸಿದ್ದರು. ೧೮೧೬ ರಲ್ಲಿ ಸೋಲಾಪುರದಲ್ಲಿ ಸ್ಥಾಪನೆಯಾಗಿದ್ದ ‘ಸಾರ್ವಜನಿಕ ಸಭೆ’ಯ ಅಧ್ಯಕ್ಷರಾಗಿದ್ದವರು ವಾರದ ಮಲ್ಲಪ್ಪವರು. ೧೯೦೨ ರಲ್ಲಿ ರಾಷ್ಟ್ರೀಯ ಮಹಾಸಭೆಯ ಪ್ರಾಂತೀಕ ಸಭೆ ಕರೆದಾಗಲೂ ವಾರದ ಮಲ್ಲಪ್ಪನವರೇ ಮುಂಚೂಣಿಯ ವ್ಯವಸ್ಥೆ ಮಾಡಿದ್ದರು. ಇಂಥ ಹಲವು ಸಭೆಗಳು ಸ್ಥಾಪಿತವಾಗಿ ಸಾರ್ವತ್ರಿಕವಾಗಿ ತೊಡಗಿಸಿಕೊಂಡಿದ್ದವು.

 ಸಕಾಲಿಕವಾದ ಒಂದು ಒತ್ತಾಯಕ್ಕೆ ಆ ಕಾಲದ ವೀರಶೈವರು ಅತ್ಯವಶ್ಯಕ ಸ್ಪಂದಿಸಬೇಕಾದ ಅವಶ್ಯಕತೆಗಳು ಮುಖ್ಯವಾಗಿ, ಲಿಂಗಾಯತರು ಹಿಂದೂಸಮಾಜದ ಒಂದು ಉಚ್ಚವರ್ಗದವರಿರುತ್ತಾರೆ ಎಂಬುದನ್ನು ಸಿದ್ಧ ಪಡಿಸುವುದು, ಲಿಂಗಾಯತರ

ಮುಖ್ಯ ವಿರಕ್ತ ಸ್ವಾಮಿಗಳ ಮಠಗಳ ಅಧಿಕಾರಿಗಳಿಗೆ ಅಡ್ಡಪಾಲಿಕೆಯಲ್ಲಿ ಸಂಚರಿಸುವ ನಷ್ಟವಾದ ಹಕ್ಕನ್ನು ಪುನಃ ದೊರಕಿಸಿಕೊಡುವುದು ಮತ್ತು ಶ್ರೀಮದ್ವೀರಶೈವ ಮಹಾಸಭೆಯ ಸ್ಥಾಪನೆ.

ಇಂಥ ಅಗತ್ಯ , ಅವಶ್ಯಕ ಕಾರ್ಯಗಳು ಧಾರ್ಮಿಕಸಮಾಜದ ಅಭಿವೃದ್ಧಿಗೆ  ಪ್ರಮುಖವಾಗಿದ್ದವು. ಮುಖ್ಯವಾಗಿ ಶಿಕ್ಷಣದ ಅನುಕೂಲ ಒದಗಿಸುವುದರ ಮೂಲಕ ವೀರಶೈವರನ್ನೂ ಅಭಿವೃದ್ಧಿಗೊಳಿಸಬೇಕೆಂಬ ಅರಟಾಳ ರುದ್ರಗೌಡರಂಥವರ

ಯೋಚನೆಗಳು ಒಟ್ಟು ವೀರಶೈವರ ಸ್ಥಿತಿಗತಿಗಳನ್ನು ಸುಧಾರಿಸಿ ಸಮಗ್ರ ಅಭಿವೃದ್ಧಿಯನ್ನುಂಟು ಮಾಡಿ ಅದಕ್ಕೊಂದು ಸಾಂಸ್ಥಿಕ ಸ್ವರೂಪದ ವೇದಿಕೆಯನ್ನು ಕಲ್ಪಿಸಬೇಕೆಂಬ ಹಾನಗಲ್ಲ ಕುಮಾರ ಸ್ವಾಮಿಗಳ ಯೋಚನೆಗಳು ಸಮ್ಮಿಲನಗೊಂಡವು. ಇದು ಸಾಕಾರಗೊಳ್ಳುವ ಅವಕಾಶ ಸವದತ್ತಿ ಪುರಾಣ ಮಂಗಲೋತ್ಸವದಂದು ನೆರವೇರಿತು.

ಇಂಥ ಹಿನ್ನೆಲೆಯಲ್ಲಿ ಮತ್ತು ಇದೇ ಸಂದರ್ಭದಲ್ಲಿ ಧಾರವಾಡದಲ್ಲಿ ಸ್ಥಾಪನೆಯಾಗಿದ್ದ ‘ವೀರಶೈವ ಮತ ಪ್ರಚಾರಕ ಸಂಘ’ವು ಕೆಲವು ಸ್ಥೂಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು ವಿವಿಧ ಪ್ರಾಂತಗಳಲ್ಲಿದ್ದ ವೀರಶೈವರು ತಮ್ಮ ಸೀಮಿತ ವಲಯಗಳಲ್ಲಿ

ಸಮಾಜೋನ್ನತಿಯ ಕಾರ್ಯಗಳನ್ನು ಪೂರೈಸಿದ್ದರಾದರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಿ ಧಾರ್ಮಿಕ ಮತ್ತು ವ್ಯವಹಾರಿಕ ವಿಷಯಗಳನ್ನು ಕುರಿತು ಪರ್ಯಾಲೋಚಿಸಿ, ಒಮ್ಮನಸ್ಸಿನಿಂದ ವರ್ತಿಸಿದರೆ ಸಮಾಜ ಸುಧಾರಣೆ ಆಗುವುದೆಂದು ಯೋಚಿಸುತ್ತಿದ್ದರು. ಈ ಸಂಬಂಧವಾಗಿ ತುಮಕೂರಿನ ಪಿ. ಮಹಾದೇವಯ್ಯ ಮತ್ತು ಹಾಸನದ ಜಿ. ಶಾಂತವೀರಪ್ಪನವರು ಜನವರಿ ತಿಂಗಳಲ್ಲಿ ಧಾರವಾಡಕ್ಕೆ ಆಗಮಿಸಿದ್ದರು. ಮೇ ತಿಂಗಳಲ್ಲಿ ಸಕಾಲಿಕವಾಗಿ ನಡೆದ ಸವದತ್ತಿ ಪುರಾಣ ಮಂಗಲ ಮಹೋತ್ಸವಕ್ಕೆ ವೀರಶೈವ ಮತ ಪ್ರಚಾರ ಸಂಘದವರು ಹೋಗಬೇಕಾಯಿತು.

ಅಲ್ಲಿ ಸೇರಿದ್ದ ಹಾನಗಲ್ಲ, ಹುಬ್ಬಳ್ಳಿ, ಅಥಣಿ ಮಠಾಧಿಪತಿಗಳು ಮತ್ತು ಮೊದಲಾದ ದೇಶಿಕೋತ್ತಮರು ಸಹಾ ಅಂಥ ಚರ್ಚೆಗೆ ಅಣಿಯಾಗಿದ್ದು, ಸ್ವತಂತ್ರ ಧರ್ಮಬೋಧಕರನ್ನು ನೇಮಿಸಬೇಕು” ಎಂದು ಸಹಾ ಯೋಚಿಸುತ್ತಿದ್ದರು.

ಈ ಕೆಲಸಕ್ಕೆ ಹಾನಗಲ್ಲ ಕುಮಾರ ಸ್ವಾಮಿಗಳು ತಮ್ಮ ತಪೋಮಹಿಮೆಯ ಹಸ್ತದಿಂದ ಒಂದು ನೂರು ರೂಪಾಯಿಗಳನ್ನು ಕೊಟ್ಟರು. ಇದರಿಂದ ಪ್ರೇರಿತವಾದ ಉಳಿದ ವೀರಶೈವ ಸಮಾಜದ ಗಣ್ಯರು ಎರಡು ನೂರು ರೂಪಾಯಿಗಳನ್ನು

ವರ್ಗಣಿಯಿಂದ ಕೂಡಿಸಿದರು. ಇದಾದ ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠದ ಶ್ರೀಗಳವರ ಅಡ್ಡ ಪಲ್ಲಕ್ಕಿಯ ಉತ್ಸವವೂ ಆಯಿತು. ಈ ಉತ್ಸವಕ್ಕೆ ಬೇರೆ ಬೇರೆ ಪ್ರಾಂತಗಳಿಗೆ ಸೇರಿದ ವೀರಶೈವ ಸದ್ಗೃಹಸ್ಥರೂ ಬಂದಿದ್ದರು.

ಇವರೆಲ್ಲರೂ ಕೂಡಿ ಸಮಾಜ ಸುಧಾರಣೆಯ ಪ್ರಸ್ತಾಪವನ್ನು ಮತ್ತಷ್ಟು ತೀವ್ರವಾಗಿ ಚಿಂತನೆ ನಡೆಸಿದರು.

 ಪ್ರವಚನದಂಥ ಪುಣ್ಯ ಸಂದರ್ಭ’ ಹಾಗೂ ಉತ್ಸಾಹದಿಂದ ಸೇರಿದ್ದು ಸಮಾಜದ ಗಣ್ಯರನೇಕರ ಸಮ್ಮುಖದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದ ವೀರಶೈವ ಸಮಾಜ ಸುಧಾರಣೆಯ ಪ್ರಸ್ತಾಪಕ್ಕೆ ಮುಹೂರ್ತ ಕೂಡಿತು, ಪ್ರತಿವರ್ಷವೂ ಸಮಾಜ ಸುಧಾರಣೆಯ ಪ್ರಸ್ತಾಪವನ್ನು ಮುಂದಿರಿಸಿಕೊಂಡು ‘ವೀರಶೈವ ಮಹಾಸಭೆ’ಯನ್ನು ಕರ್ನಾಟಕದ ವಿವಿಧ ಪ್ರಾಂತಗಳ ಪ್ರಸಿದ್ಧ ಪಟ್ಟಣಗಳಲ್ಲಿ ನೆರವೇರಿಸಬೇಕಂತಲೂ ಸಂಕಲ್ಪ ಮಾಡಿದರು. ಇದು ತ್ವರಿತಗತಿಯಲ್ಲಿ ನಡೆಯಬೇಕಾಗಿದ್ದರಿಂದ ಮೊದಲನೆಯ ಮಹಾಸಭೆಯನ್ನು ೧೯೦೩ನೇ ಇಸವಿಯ ಡಿಸೆಂಬರ್

ಕೂಡಿಸಬೇಕೆಂತಲೂ ತೀರ್ಮಾನಿಸಲಾಯಿತು,

ಹಾನಗಲ್ಲ ಕುಮಾರ ಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡು ಅರಟಾಳ ರುದ್ರಗೌಡ, ಸಿರಸಂಗಿ ಲಿಂಗರಾಜ ಅವರು ಮುಂಬಯಿ, ಮೈಸೂರು, ಮದ್ರಾಸ್, ಹೈದರಾಬಾದ್, ವಾಯುವ್ಯ ಪ್ರಾಂತಗಳಲ್ಲಿರುವ ವೀರಶೈವ ಮುಖಂಡರಿಗೂ

ಮತಾಭಿಮಾನಿಗಳಿಗೂ ಪ್ರಸಿದ್ಧ ಪತ್ರಿಕೆಗಳಿಂದಲೂ ಮೈಸೂರ್ ಸ್ಟಾರ್ ಪತ್ರಿಕೆಗಳಿಂದಲೂ ಸ್ವತಂತ್ರ ಲೇಖನಗಳಿಂದಲೂ ತಿಳಿಸಿ ಪಂಚಸಿಂಹಾಸನಾಧಿಪತಿಗಳ ಹಾಗೂ ವಿರಕ್ತ ಪೀಠಾಧಿಪತಿಗಳ ಅನುಮತಿಯನ್ನು ಪಡೆದುಕೊಂಡು ಧರ್ಮಸಭೆಯನ್ನು ಭವ್ಯವಾಗಿ ಸೇರಿಸಬೇಕೆಂದು ಗೊತ್ತು ಮಾಡಿದರು. ಈ ಧರ್ಮಸಭೆಯಲ್ಲಿ ಧಾರ್ಮಿಕ, ಸಾಮಾಜಿಕ, ವ್ಯವಹಾರಿಕ, ಔದ್ಯೋಗಿಕ

ಮೊದಲಾದ ಗಹನ ವಿಷಯಗಳೆಲ್ಲವು ಚರ್ಚಿಸುವ ಮುಖ್ಯ ಉದ್ದೇಶವಿರುವುದರಿಂದ ಈ ಸಭೆಗೆ ‘ಶ್ರೀ ಮದ್ವೀರಶೈವ ಮಹಾಸಭೆ’ ಎಂಬ ಹೆಸರನ್ನಿಡುವಂತೆ ಯುಕ್ತಿಯುಕ್ತವಾಗಿ ನಿರ್ಣಯಿಸಲಾಯಿತು. (ಅರಟಾಳ ರುದ್ರಗೌಡ ಚರಿತ್ರೆ, ಬಸವಯ್ಯ ಹಿರೇಮಠ)

೧೯೦೩ರ ಡಿಸೆಂಬರ್ ತಿಂಗಳು ಮೊದಲ ಮಹಾಸಭೆ ಕೂಡಿಸುವ ನಿಶ್ಚಯವನ್ನು ಹಾನಗಲ್ಲ ಕುಮಾರ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಮಾಡಲಾಯಿತು. ಮಹಾಸ್ವಾಮಿಗಳು ಧಾರವಾಡಕ್ಕೆ ಕೂಡಲೆ ಆಗಮಿಸಿ ಭಕ್ತ ಜನರನ್ನು ಕರೆಸಿ, ಅವರಿಗೆ ಉತ್ತೇಜನ ಕೊಟ್ಟು ನಿಧಿ ಸಂಗ್ರಹಣ ಕಾರ್ಯದಲ್ಲಿ ತೊಡಗಿದರು. ಇದು ಮೇ ಮತ್ತು ಜೂನ್ ಮೊದಲವಾರಗಳಲ್ಲಿ ವ್ಯವಸ್ಥೆ ನಡೆದು ಆದರೆ ೧೯೦೩ ರ ಜೂನ್ ೨೨ ರಂದು ಪ್ರಕಟಣೆಯ ಪತ್ರಗಳನ್ನು ಹೊರಡಿಸಿ ಸಾರ್ವಜನಿಕರ ಗಮನಕ್ಕೆ  ತರಲಾಯಿತು. ಒಂದೆರಡು ತಿಂಗಳುಗಳ ನಂತರ ಮಹಾಸ್ವಾಮಿಗಳು ಪುನಃ ಬಂದು ಈ ಕಾರ್ಯಕ್ಕೆ ಧನ ಸಹಾಯವು ವಿಶೇಷವಾಗಿ ತೊಡಗಿಸಬೇಕಾಗಿದ್ದರಿಂದ ಬ್ಯಾಡಗಿ, ಹುಬ್ಬಳ್ಳಿ, ಮಹಾರಾಜ ಪೇಟೆ, ಸಂಶಿ, ಗರಗ, ಮುಮ್ಮಿಗಟ್ಟಿ, ಮುಂತಾದ ಗ್ರಾಮಗಳ ವೀರಶೈವರನ್ನು ಧನಸಹಾಯಕ್ಕೆ ಪ್ರೋತ್ಸಾಹಿಸಿದರು. ಸ್ವತಃ ಮಹಾಸ್ವಾಮಿಗಳು ಬ್ಯಾಡಗಿ, ಹಾವೇರಿ,

ದೇವಿಹೊಸೂರು, ಆಲೂರು, ಹಾನಗಲ್ಲು ಮುಂತಾದ ಸ್ಥಳಗಳಿಗೆ ಧನ ಸಂಚಯಾರ್ಥವಾಗಿ ತೆರಳಿದರು.

 ಹಿಂದೂಸ್ಥಾನ ಸರಕಾರದಿಂದ ಜನಾಂಗವರ್ಣನೆಯನ್ನು ಸಂಗ್ರಹಿಸುವ ಕೆಲಸಕ್ಕೆ ನೇಮಿಸಲ್ಪಟ್ಟಿದ್ದ ಎಂಥೋವನ್ ಸಾಹೇಬರನ್ನು ಅವಶ್ಯಕವಾದ ವಿವರಣೆಯನ್ನು ಸಂಗ್ರಹಿಸುವ ಕೆಲಸವು ಸುಸೂತ್ರವಾಗಿ ಸಾಗುವಂತೆ ಸರಾಗಗೊಳಿಸಿದರು. ೧೯೦೩ರ ಡಿಸೆಂಬರ್ ತಿಂಗಳಿನಲ್ಲಿ ಪ್ಲೇಗಿನ ಹಾವಳಿಯಿದ್ದುದರಿಂದ ೧೯೦೪ ಮೇ ತಿಂಗಳಲ್ಲಿ ಶ್ರೀ ಮದ್ವೀರಶೈವ ಮಹಾಸಭೆ ಸೇರಿಸುವ ನಿರ್ಣಯವಾಯಿತು.

“ಆರಂಭಕ್ಕೆ ಧಾರವಾಡದ ವೀರಶೈವ ಮತಾಭಿಮಾನಿಗಳು, ತಮ್ಮಲ್ಲಿ ಸಾವಿರಾರು ರೂಪಾಯಿ ಹಣಕೂಡಿಸಿ ಮೊದಲನೇ ಶ್ರೀ ಮದ್ವೀರಶೈವ ಮಹಾಸಭೆಯು ನಮ್ಮ ಧಾರವಾಡದಲ್ಲಿ ಆಗಬೇಕಂತಲೂ, ಅದಕ್ಕೆ ವ್ಯತೆ ಬಾರದೆ ಸರಿಯಾಗಿ ಸಾಗಿಕೊಂಡು

ಹೋಗುವಂತೆ ನಾವೆಲ್ಲರೂ ತನುಮನಧನದಿಂದ ಸಹಾಯ ಮಾಡುವೆವೆಂತಲೂ ನಮ್ಮ ಬಿನ್ನಹವನ್ನು ಮನ್ನಿಸಿ ನಮಗೆ ಅಪ್ಪಣೆಯನ್ನೀಯ ಬೇಕೆಂತಲೂ ಮಹಾಸಭೆಯ ಮೂಲೋತ್ಪಾದಕರಾದ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳವರನ್ನೂ ರಾ. ಬ. ರುದ್ರಗೌಡ ಸಾಹೇಬರನ್ನೂ, ಶಿರಸಂಗಿಯ ಶ್ರೀಮಂತ ಸರ ದೇಸಾಯಿಯವರನ್ನು ಕೇಳಿಕೊಳ್ಳಲು ಮೂವರು ಮಹಾನುಭಾವರು ‘ನಿಮ್ಮ ಅಭಿಮಾನವನ್ನು ಆದರವನ್ನು ನೋಡಿ ಆನಂದಿಸುತ್ತೇವೆ’೦ಬುದಾಗಿ ಧಾರವಾಡದ ಮುಖಂಡರನ್ನು ಅಭಿನಂದಿಸಿ, ಅನುಮೋದನೆಯನ್ನು ಕೊಡಲಾಗಿ, ವೀರಶೈವರ ಈ ವೆಚ್ಚವನ್ನುಳಿಸಿ ಸಭಾಕಾರ್ಯಕ್ಕೆ ಸರಕಾರೀ  ಇಮಾರತಿಯನ್ನು ಕೊಟ್ಟು ಮೆಗಿಬ್ ದೊರೆಗಳವರ  ಧನ್ಯವಾದವನ್ನು ಎಷ್ಟು ಮಾಡಿದರೂ ತೀರದು. ರಾ |ಬ | ರುದ್ರಗೌಡ ಸಾಹೇಬರವರ ಆಳ್ವಿಕೆಯಿಂದಿತ್ತ ವೀರಶೈವ ಜನಾಂಗದವರು ವಿದ್ಯೆಯಲ್ಲಿ ಮೆಲ್ಲಮೆಲ್ಲನೆ ಮುಂದೊರೆಯ ಹತ್ತಿದ್ದರಿಂದ, ಸ್ವಾಭಾವಿಕವಾಗಿ ಸಾತ್ವಿಕ ಸ್ವಭಾವದವರಾದ ಲಿಂಗಾಯತರನ್ನು ಸರಕಾರದವರು ಆದರಿಸಹತ್ತಿದರು. ಅದರಿಂದ ವೀರಶೈವರ ಸಮಾಜಹಿತದ ಕೆಲಸಗಳು ಸುಲಭವಾಗಿ ನೆರವೇರಹತ್ತಿದ್ದವು.” (ಅರಟಾಳ ರುದ್ರಗೌಡರ ಚರಿತ್ರೆ, ಬಸವಯ್ಯ ಹಿರೇಮಠ) ಶ್ರೀ ಮದ್ವೀರಶೈವ ಮೊದಲ ಮಹಾಸಭೆಯು ಧಾರವಾಡದ ‘ದರ್ಬಾರ್‌ ಹಾಲ್’ನಲ್ಲಿ ೧೯೦೪, ಮೇ ೧೩. ೧೪,೧೫ ರ ಅದು ಮೂರು ದಿನಗಳ ಕಾಲ ಸಿರಸಂಗಿ ಲಿಂಗರಾಜ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು.

 ಸವದತ್ತಿಯ ಪುರಾಣ ಪ್ರವಚನ ಸಂದರ್ಭದಲ್ಲಿ ಅಭಿಪ್ರಾಯಗಳ ಮಿಳಿತದಿಂದಾಗಿ ಮಹಾಸಭೆಯ ಸ್ಥಾಪನೆಯ ಸೂಚನೆ ಹೊರಬಂದಂತೆಯೇ ವೀರಶೈವಧರ್ಮದ (ಸ್ವತಂತ್ರ ಧರ್ಮಬೋಧಕರನ್ನು ನೇಮಿಸಬೇಕು’ ಎಂಬ ಹಾನಗಲ್ಲ ಕುಮಾರಸ್ವಾಮಿ

ಗಳಿಂದ ಹೊರಬಂದ ಸ್ಫೂಲವಾದ ಅಭಿಪ್ರಾಯವು ಮುಂದೊಂದುದಿನ ಶಿವಯೋಗ ಮಂದಿರ’ ವೆಂಬ ಸಂಸ್ಥೆಯ ಸ್ಥಾಪನೆಯ ಬೀಜಾಭಿಪ್ರಾಯವೇ ಆಗಿರಬೇಕು !

೧೯೫೧ರಲ್ಲಿ ಸದಾಶಿವ ಹುಕ್ಕೇರಿಯವರು ಸಂಗ್ರಹಿತ ಮಾಹಿತಿಗಳನ್ನಾಧರಿಸಿ “ಬಿದರಿ ಶ್ರೀ ಕುಮಾರೇಶ್ವರ ಪುರಾಣ’ ಕೃತಿಯನ್ನು ರಚಿಸಿದ್ದಾರೆ. ಅದರ ೧೨ನೆಯಸಂಧಿಯಲ್ಲಿ,

ಗಾನಮೊಂದೆಡೆಯಲ್ಲಿ ಧರ್ಮ

ಜ್ಞಾನಮೊಂದೆಸೆಯಲ್ಲಿ ಶಾಸ್ತ್ರವಿ

ಧಾನಮೊಂದೊರಳಿಲ್ಲಿಗಲ್ಲಿಗೆ ಶಿವನ ಭಜನೆಗಳು

ಏನು ಹೇಳಲಿ ತಾಳಮೇಳದ

ಗಾನದೊಡನಾ ಕೀರ್ತನದ ಸಂ

ಧಾನಮಿಹುದಾವಾಗಳುಂ ಕಲ್ಮಠದೊಳಗೆ ಬಿಡದೆ || ೭೨ ||

ಆಗ ಹಾನ್ಗಲ್ ಸ್ವಾಮಿಗಳು ಶಿವ

Related Posts