ಲೇಖಕರು
ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾ
ಪ್ರಿಯ ಸಹೃದಯರೆ ಈ ಹುಟ್ಟು ಸಾವಿನ ಪ್ರಪಂಚದಲ್ಲಿ ನೊಂದು,ಬೆಂದ ಮಾನವರ ಕೂಗು,ಅಜ್ಞಾನ,ಅಂಧಶ್ರದ್ಧೆ,ಆರ್ತನಾದ ಹೀಗೆ ಬಳಲುತ್ತಿರುವ ಮರ್ತ್ಯಲೋಕದ ಮಹಾಮನೆಯ ಪುನರುಜ್ಜೀವನ ಗೊಳಿಸಲು ಪರಮಾತ್ಮ ಮಹಾತ್ಮರನ್ನ ಈ ಭುವಿಗೆ ಕಳಿಸುತ್ತಾನೆ. ಅಂತಹ ಮಹಾತ್ಮರ ಸಾಲಿನಲ್ಲಿ ಯುಗಪುರುಷ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಒಬ್ಬರು.ಇಂತಹ ಮಹಾತ್ಮರ ಪ್ರಭಾವದಿಂದ ಈ ಭೂಮಿಯ ನರ- ಹರನಾದ, ಜೀವ- ಶಿವನಾದ, ಮಾತು- ಮಂತ್ರವಾಯಿತು,ಸಮಾನತೆಯ ಬೆಳಕು ಹರಡಿತು,ನಿರ್ಮಲಭಾವ ಹುಟ್ಟಿತು, ಸ್ವಚ್ಛ ಆಚಾರ- ಉಚ್ಚ ವಿಚಾರ, ಸಕಲಜೀವಾತ್ಮರಿಗೆ ಲೇಸಬಯಸುವ ಮನೋಭಾವ ಹೀಗೆ ಹಲವಾರು ಉಚ್ಚ ವಿಚಾರಗಳ ಸರಮಾಲೆ ಜನ್ಮತಾಳಿತು.
“ಕಾರ್ತಿಕದ ಕಗ್ಗತ್ತಲೆಯಲ್ಲಿ ಆಕಾಶದ ದೀಪವಾಗಿ ನೀ ಬಂದೆ”ಅನ್ನುವ ಕವಿವಾಣಿ ಪೂಜ್ಯರ ಜೀವನದಲ್ಲಿಯೂಕೂಡಾ ಅನ್ವಯವಾಗಿ ಅಕ್ಷರಶಃ ಸತ್ಯವಾಗಿದೆ.
ಶರಣ ವಾಣಿಯಂತೆ:- ಹೋನಿಂಗೆ ಬಂದಾತನಲ್ಲ, ಹೆಣ್ಣಿಂಗೆ ಬಂದಾತನಲ್ಲ, ಮಣ್ಣಿಂಗೆ ಬಂದಾತನಲ್ಲ,ಅಶನಕ್ಕೆ ಬಂದಾತನಲ್ಲ,ವ್ಯಸನಕ್ಕೆ ಬಂದಾತನಲ್ಲ,ಕೂಡಲಚನ್ನಸಂಗಯ್ಯ ಭಕ್ತಿಯ ಪಥವ ತೋರ ಬಂದನಯ್ಯ ನಮ್ಮ ಬಸವಣ್ಣ.
ಅವಿರಳಜ್ಞಾನಿ ಚನ್ನಬಸವೇಶ್ವರರು ತಿಳಿಸಿದಹಾಗೆ ಅಲ್ಲಿ ಬಸವಣ್ಣ ಭಕ್ತಿಯ ಪಥವ ತೋರ ಬಂದವನು,ಇಲ್ಲಿ ಕುಮಾರಶಿವಯೋಗಿಗಳು ಸ್ವಾಮಿತ್ವದ ಶಕ್ತಿಯ ಪಥವ ತೋರ ಬಂದವರು.
ಸ್ವಾಮಿತ್ವದ ಘನತೆ ಹೆಚ್ಚಿಸಲು ಶಿವಯೋಗ ಮಂದಿರವನ್ನು ಸ್ಥಾಪಿಸಿ ಅಲ್ಲಿ ಕರಗಿಹೋಗುವ, ಸೊರಗಿ ಹೋಗುವ, ಕಳೆದು ಹೋಗುವ ಭೌತಿಕ ಸಂಪತ್ತನ್ನು ಸಂಪಾದಿಸಲಿಲ್ಲ, ಸವೆಯದ, ಸಾಕೆನಿಸದಾ, ಕಳೆಗುಂದದ, ಮತ್ತೊಂದು ಬೇಕೆನಿಸದ, ಅಧ್ಯಾತ್ಮಿಕ ಜ್ಞಾನ, ಅರಿವು- ಆಚಾರ, ಯೋಗ- ಶಿವಯೋಗ, ವೇಷ್ಠಿಹಿತಕ್ಕಿಂತ-ಸಮಷ್ಠಿಹಿತ ಮುಖ್ಯ,ಸ್ಥಾನಮಾನಕ್ಕಿಂತ-ಸೇವಾಮನೋಭಾವ ಮುಖ್ಯ,ಜನ ನಾಯಕನಿಗಿಂತ-ಜನಸೇವಕ ಮುಖ್ಯ ಇಂತಹ ಸಂಪತ್ತನ್ನು ಗಳಿಸಿ ಈ ನಾಡಿಗೆ,ನುಡಿಗೆ,ಸಂಸ್ಕೃತಿಗೆ ಕೊಟ್ಟವರು ಕುಮಾರ ಶಿವಯೋಗಿಗಳು. ” “ಉಣಗಲಿಸಿದ ನಮ್ಮ ಕುಮಾರ,
ಉಡಗಲಿಸಿದ ನಮ್ಮ ಕುಮಾರ,
ನುಡಿಗಲಿಸಿದ ನಮ್ಮ ಕುಮಾರ,
ನಡೆಗಲಿಸಿದ ನಮ್ಮ ಕುಮಾರ “ಹೀಗೆ ಎಲ್ಲವನ್ನ ಕಲಿಸಿ ಅದರ ಅರಿವನ್ನ ಪಡೆದು, ಅನುಭವಿಸಿ, ಆಚರಿಸಿ ಅದರಂತೆ ಬಾಳಿಬದುಕಿ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗಿ, ಕೇವಲ ಸಮಾಜದ ವ್ಯಕ್ತಿಗಳಾಗಬೇಡಿ, ಸಮಾಜದ ಶಕ್ತಿಯಾಗಿ ಎನ್ನುವ ಉದಾತ್ತ ವಿಚಾರಗಳನ್ನು ನಾಡಿಗೆ ಬಿತ್ತರಿಸಿದ ಮಹಾಂತರು .
ಇಷ್ಟೆಲ್ಲ ವಿಷಯಗಳನ್ನ ಪೂಜ್ಯರ ಕುರಿತು ಹೇಳುವ ಉದ್ದೇಶ, ಪೂಜ್ಯರು ಶಿವಯೋಗಮಂದಿರ ಸ್ಥಾಪಿಸಿ ಇಲ್ಲಿಗೆ ನನ್ನ ಕೆಲಸ ಮುಗಿಯಿತು ಅಂತ ಕೈಚೆಲ್ಲಿ ಕುಳಿತವರಲ್ಲ, ಮಂದಿರಕ್ಕೆ ಬರುವ ಸಾಧಕ ವಟುಗಳಿಗೆ ವ್ಯವಸ್ಥೆ, ಬಂದ ಭಕ್ತರಿಗೆ ಅನ್ನ, ಅರಿವು, ಆನಂದ, ಆಶ್ರಯ, ಅನುಭವವನ್ನ ಕೊಡುವಂತಹ ಹಲವಾರು ಉದ್ದೇಶವನ್ನರಿಸಿಕೊಂಡು ಶಿವಯೋಗಮಂದಿರ ಸ್ಥಾಪನೆಯಾದ ಪ್ರಥಮ ಭಾಗದಲ್ಲಿ ಸಂಸ್ಥೆಯಲ್ಲಿ ಮುಖ್ಯವಾಗಿ 19 ಸದುದ್ದೇಶಗಳನ್ನ, ಉಪಾಯಗಳನ್ನ ಜಾರಿಗೆ ತಂದರು. ಅವುಗಳು ಈ ಕೆಳಗಿನಂತಿವೆ.
1)ಶಿವಯೋಗ ಮಂದಿರ ಸಂಸ್ಥೆಗೆ ಅಧ್ಯಯನ ಗೈಯಲು ಬಂದು ಉತ್ತಮ ಸಂಸ್ಕಾರಪಡೆದು, ಯೋಗ್ಯ ಮಠಾಧಿಪತಿಗಳಾಗಲು,ಸಮಾಜಸೇವಾ ದೀಕ್ಷೆ ಪಡೆಯಲು ಸಂಸ್ಥೆಗೆ ಸಂಸ್ಥೆಗೆ ಬಂದ 12 ವರ್ಷದವರಿಗೆ ವಟುಗಳೆಂದು, ಮುಂದೆ ಸಂಸ್ಥೆಯ ಸಂಸ್ಕಾರದಲ್ಲಿ ನುರಿತವರ್ಗೆ ಸಾಧಕರೆಂದು ಕರೆಯುವುದು.
ವಟುಗಳು,ಸಾಧಕರು,ವ್ಯಸ್ಥಾಪಕರು,ಅನುಭಾವಿಗಳು,ಸನ್ನುತ ಅಧ್ಯಾಪಕರು,ಗ್ರಂಥ ಶೋಧಕರು, ಬಹುಮನ್ನಣೆಯನ್ನಪಡೆದ ಸೇವಕರನ್ನ ಹೀಗೆ ಏಳು ವರ್ಗಗಳನ್ನ ಪೂಜ್ಯರು ಸಂಸ್ಥೆಯಲ್ಲಿ ತೂಡಕಾಗದಂತೆ ನಿಯಮಿಸಿದರು.
2)ಅಲ್ಲಿ ಅಧ್ಯಯನ ಗೈಯುವಂತಹ ಗುರುಚರವರೇಣ್ಯರು ಸದಾಚಾರ,ಸುಜ್ಞಾನ,ನಿರುಪಮ ವಿರಕ್ತಿಗಳಾಗಿರಬೇಕು, ಸದ್ಭಕ್ತಿ ಷಟ್ಸ್ಥಲಶಾಸ್ತ್ರ ಪರಿಣತೆ ಹೊಂದಿರಬೇಕು, ಸುಭಾಷಣ, ದ್ವೈತಾದಿ ಸಿದ್ಧಾಂತ ಸುವಿಚಾರ, ಯೋಗನೀತಿ,ಕರುಣಾದಿ ಸದ್ಗುಣಗಳಿಂದಕೂಡಿ,ಮುಂದೆ ಶಿವಮತವನುದ್ದರಿಸಬೇಕೆಂಬುದೊಂದು ಪೂಜ್ಯರ ಮಹದೊದ್ದೇಶ.
3)ಸಂಸ್ಥೆಗೆ ಬಂದ ವಟುಗಳನ್ನ ಬಿಡದೆ ಇರಿಸಿಕೊಂಡು ಅವರಿಗೆ ಸರಿಯಾಗಿ ನ್ಯಾಯ,ವ್ಯಾಕರಣ,ವೇದಾಂತ ಶಾಸ್ತ್ರಗಳ ಪರಿಚಯಮಾಡಿಕೊಟ್ಟು,ಧರ್ಮ ಗ್ರಂಥಗಳ ಪರಿಕರಗಳಾದ ಆಗಮ, ಆಮ್ನಾಯ,ಉಪನಿಷತ್ತು, ಸ್ಮೃತಿ,ಇತಿಹಾಸ,ಪುರಾಣ, ಶರಣರ ವಚನವನೋದಿಸಿ, ಜೋತೆಗೆ ಲಿಂಗಾಂಗ ಸಾಮರಸ್ಯ ಜ್ಞಾನವನ್ನ ಕೊಟ್ಟು ಹೀಗೆ ಎಲ್ಲ ವಿಷಯವನ್ನ ಅರಿಯುವತನಕ 25ವರ್ಷ ಅಥವಾ 35,45,ವರ್ಷಗಳವರೆಗೆ ಇದ್ದು,ಬ್ರಹ್ಮಚರ್ಯಾದಿ ಸದ್ಗುಣ ವೃತ್ತಿ ಗಳಿಸಿಕೊಂಡು ಶಿವಯೋಗಿಯಾಗಿ,ಗುರುಜಂಗಮರ ಮಂಗಲಪೀಠಕ್ಕೆ ಅಧಿಕಾರಿಯಾಗಬೇಕೆಂಬುವದೊಂದು ಶ್ರಿಸಂಸ್ಥೆಯ ಉದ್ದೇಶ.
4) ಅಲ್ಲಲ್ಲಿ ಶಿವಯೋಗ ಮಂದಿರದ ಶಾಖೆಗಳು ಸಲ್ಲಲಿತವಾಗಿ, ಶೋಭನಾಶ್ರ ಮವಾಗಿ ನೆಲೆಸಬೇಕು ಅಲ್ಲಿ ಸರ್ವರಿಗೂ ಶಿವಾನುಭವ ಬೋಧೆದೊರೆಯಬೇಕು.
ಮಂದಿರಕ್ಕೆ ಬಂದವರಿಗೆ ಓದಲು ಅನುಕೂಲವಾಗುವ, ಎಲ್ಲ ಧರ್ಮಗ್ರಂಥಗಳುಳ್ಳ
ಸದ್ವಾಚನಾಲಯವನ್ನ ಬಲ್ಲವರು ಮನವಪ್ಪುವಂತೆ ನಿರ್ಮಿಸಬೇಕು .
5)ಮತಾಸುಧಾರಣೆಗೆ ಅವಶ್ಯವೇನಿಸುವ ಸದ್ವಿಷಯಗಳನ್ನೊಳಗೊಂಡ ಕೀರ್ತನೆಗಳನ್ನು ರಚಿಸಿ ಕೇಳುಗರಿಗೆ ಪ್ರಿಯವಾಗಿ ಹೇಳುವ ಪುರಾಣಿಕರನ್ನ, ಪ್ರವಚನಕಾರನ್ನ ಘನವಾಗಿ ಹೆಚ್ಚಿಸುವುದು .
6)ನುತದಾರ್ಮಿಕ,ವ್ಯಾವಹಾರಿಕ,ಮಹಾಶಾಸ್ತ್ರಮತಿಯುಳ್ಳ ಬೋಧಕರನ್ನ ಎಲ್ಲ ಕಡೆಗಳಲ್ಲಿ ಕಳುಹಿಸಿ ಅವರ ಸತತ ಉಪದೇಶದಿಂದ ಜನರನ್ನ,ಸಮಾಜವನ್ನ ಎಚ್ಚರಿಸುವಂತೆ ಮಾಡುವದೊಂದು ಸದುಪಾಯ.
7)ಮಂದಿರದಲ್ಲಿ ಗೋ ಶಾಲೆ ಸ್ಥಾಪಿಸಿ ಆ ಎಲ್ಲ ಗೋವುಗಳ ಗೋಮಯದಿಂದ ತನ್ಮೂಲಕ ವೀರಶೈವರಿಗೆ ಮುಖ್ಯವಾದ ಅಷ್ಟಾವರಣಗಳಲ್ಲಿ ಒಂದಾದ ಭಸ್ಮವನ್ನ ವಿಧ್ಯುಕ್ತವಾಗಿ ರಚಿಸಿ,ಅಷ್ಟೇ ಅಲ್ಲದೆ ಆ ಭಸ್ಮ ರಚನಾಕ್ರಮವನ್ನ ಬೇರೆ ಸ್ಥಳಗಳಲ್ಲಿಯೂ ಪರಿಶುದ್ಧವಾದ ರೀತಿಯಿಂದ ತಯಾರಿಸುವುದಕ್ಕೆ ಮಾರ್ಗದರ್ಶನ ನೀಡುವುದು .
8)ಶಿವಮತಿಯರಿಗೆ ಅತ್ಯಂತ ಅವಶ್ಯವಾಗಿರುವ,ಜೀವನರೂಪವಾಗಿರುವ ಇಷ್ಟಲಿಂಗವನ್ನ ಕ್ರಮತಪ್ಪದೆ ಶಾಸ್ತ್ರೋಕ್ತ ರೀತಿಯಿಂದ ಪಂಚಸೂತ್ರ ಲಿಂಗಗಳನ್ನ ಸುವಿಚಾರವಾಗಿ ಲಿಂಗಗಳನ್ನ ತಯಾರುಮಾಡುವ ಶಾಲೆ ಮಂದಿರದೊಳಗಾಗಬೇಕು ಆ ಕ್ರಮವನ್ನೇ ಸರ್ವತ್ರ ಪ್ರಚಾರದಲ್ಲಿ ತರುವುದೊಂದು ಉಪಾಯ.
9) ಶಿಕ್ಷಕರು, ಸರ್ಕಾರಿ ಉದ್ಯೋಗಸ್ಥರು ವರ್ಷಕ್ಕೆ ಒಂದು ತಿಂಗಳು ರಜೆಯನ್ನ ಪಡೆದು ಅಥವಾ ಅನುಕೂಲವಿದ್ದ ಕಾಲದಲ್ಲಿ ಮಂದಿರಕ್ಕೆ ಬಂದು ಮತತತ್ವ ವಿಚಾರ ಮಾಡಿಕೊಂಡು ಹೋಗಿ ತಾವು ವಾಸಿಸುವ ಗ್ರಾಮದ ಮತ್ತು ನೆರೆಹೊರೆಯ ಗ್ರಾಮ ಗಳ ಭಕ್ತರಿಗೆ ನಮ್ಮ ವೀರಶೈವ ಧರ್ಮದ ಕುರಿತು ಉಪನ್ಯಾಸವನ್ನ ಪ್ರಾಕೃತ ಭಾಷೆಯಲ್ಲಿ ಸುಲಭ ಶೈಲಿಯಿಂದ ಸರ್ವರಿಗೂ ತಿಳಿಯುವಂತೆ ಹೇಳಿ ಶಿವಾನುಭವ ವಿಷಯ ಕುರಿತು ಚಿಕ್ಕ ಚಿಕ್ಕ ಪುಸ್ತಕಗಳನ್ನ ರಚಿಸಿ ಧರ್ಮ ತತ್ವವನ್ನ ಸರ್ವತ್ರ ವ್ಯಾಪಿಸುವಂತೆ ಮಾಡುವುದು.
10) ವೃದ್ಧರಾದ ಭಕ್ತ ಮಾಹೇಶ್ವರರು, ಹಾಗೂ ಮುಮುಕ್ಷುಗಳು ಮಂದಿರಕ್ಕೆ ಬಂದು ಶಿವಾನುಭವ ಶಾಸ್ತ್ರಗಳನ್ನು ಓದಿ, ಕೇಳಿ ತಿಳಿದುಕೊಂಡು ತಮ್ಮ ಬಂಧುಬಳಗದವರಿಗೆ, ಪರಿಚಿತರಿಗೆ ಜೊತೆಗೆ ಸ್ತ್ರೀಯರಿಗೆ ಮತಧರ್ಮ ಜ್ಞಾನವನ್ನು ಪಸರಿಸುವಂತೆ ಮಾಡುವುದು, ಜೊತೆಗೆ ಶಿವಯೋಗ ಸಾಧನಾಸಕ್ತರಿಗೆ ಮಂದಿರದಲ್ಲಿ ಸ್ಥಿರವಾಗಿರಲಿಕ್ಕೆ ಮಂದಿರದ ನಿಯಮಕ್ಕನುಸರಿಸಿ ಅನುಕೂಲ ಪಡಿಸುವುದು.
11) ಧರ್ಮ ಪ್ರಸಾರವನ್ನು ಮಾಡುವುದಕ್ಕೆ ಮುಖ್ಯವಾದ ಶಿವ ಕೀರ್ತನೆ, ಶಿವ ಭಜನೆ, ಶಿವ ಪುರಾಣ ಮುಂತಾದ ಅನೇಕ ಮಾರ್ಗಗಳಿಂದ ಹೆಚ್ಚುಹೆಚ್ಚಾಗಿ ಶೀಘ್ರವಾಗಿ ಧರ್ಮಬೋಧನೆ ಮಾಡಬಹುದು, ಅವುಗಳಿಗೆಲ್ಲ ಸಾಧನವಾದ ಸಂಗೀತ ವಿದ್ಯೆಯನ್ನು ತಕ್ಕವರಿಗೆ ಕಲಿಸುವಂತೆ ಅನುಕೂಲ ಮಾಡಿಕೊಡುವುದು.
12) ಕೃಷಿ ಕಾದಿ ಕಾಯಕ, ಒಕ್ಕಲುತನ, ವ್ಯಾಪಾರ ಮಾಡುವಂತಹ ಜನರು ಅನುಕೂಲ ಕಾಲದಲ್ಲಿ ಶಿವಯೋಗ ಮಂದಿರಕ್ಕೆ ಬಂದು ಸಾಧ್ಯವಾದ ಮಟ್ಟಿಗೆ ಧರ್ಮಜ್ಞಾನ ಮಾಡಿಕೊಳ್ಳುವಂತೆ ಏರ್ಪಡಿಸುವುದು, ಅನುಕೂಲ ಮಾಡುವುದು.
13) ಅನಾದಿಕಾಲದಿಂದ ಬಂದ ವೀರಶೈವ ಮತ ಬೋಧಕ ಕಾರ್ಯವನ್ನು ಕೈಕೊಂಡ ಕಾಯಕದ ಗಣಂಗಳು ತಮ್ಮ ಕರ್ತವ್ಯವನ್ನು ಮರೆತು, ಕೇವಲ ತಮ್ಮ ಹೊಟ್ಟೆ ಹೊರೆದುಕೊಳ್ಳುವುದಕ್ಕೆ ರೂಪದಾರಿಗಳಾಗಿ ಮಾತ್ರ ಸಂಚರಿಸಿ, ದುಡ್ಡು ಸೆಳೆಯುತ್ತಿರುವರು ಇಂತಹ ದುಸ್ತರಪರಿಸ್ಥಿತಿ ನೋಡಿ ಪೂಜ್ಯರು ನಮ್ಮ ಪುರಾತನರು ಈ ಕಾಯಕ ಸ್ಥಾಪನೆಮಾಡಿದ ಉದ್ದೇಶ ಉದಾತ್ತತತ್ವವನ್ನು ಪ್ರಚಾರದಲ್ಲಿ ತರುವುದಕ್ಕಾಗಿ, ಇಂತಹ ವೇಷಧಾರಿಗಳನ್ನು ಶಿವಯೋಗ ಮಂದಿರಕ್ಕೆ ಬರಮಾಡಿಕೊಂಡು, ಅವರಿಗೆ ತಕ್ಕಶಿಕ್ಷಣವನ್ನು ಕೊಟ್ಟು, ಅವರ ಸ್ಥಿತಿಯನ್ನು ಸುಧಾರಿಸಿ ಬಳಿಕ ಅವರವರ ಕಾಯಕಗಳನ್ನು ಮಾಡಲಿಕ್ಕೆ ಅಪ್ಪಣೆಕೊಟ್ಟು ಶಿವ ಧರ್ಮವನ್ನು ಪ್ರಚಾರ ಪಡಿಸುವಂತೆ ಮಾಡುವುದು.
14) ವೀರಶೈವಧರ್ಮ ಜೀವನದ ರೂಪವಾದ ಅತ್ಯಂತ ಮುಖ್ಯವಾದ ಲಿಂಗಧಾರಣೆ, ಲಿಂಗಪೂಜೆ ಮುಂತಾದ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಯೊಂದು ಗ್ರಾಮದ ಗುರು ಸ್ಥಳದ ಮಹೇಶ್ವರರಿಗೆ (ಅಯ್ಯನವರಿಗೆ) ಅಭ್ಯಾಸ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟು ಅವರಿಂದ ಆ ಎಲ್ಲ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪ್ರಚಾರಕ್ಕೆ ತರುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು.
15) ಸಂಸ್ಕೃತ ಭಾಷೆಯಲ್ಲಿರುವ ವೀರಶೈವ ಧರ್ಮಶಾಸ್ತ್ರ ಪ್ರಮಾಣಗ್ರಂಥಗಳನ್ನು, ಎಲ್ಲರೂ ಓದಿ ತಿಳಿದು ನಡೆಯಲಿ ಎಂಬ ದೂರದೃಷ್ಟಿಯಿಂದ ಸಂಸ್ಕೃತ ಪಂಡಿತರಿಂದ ಕನ್ನಡ ಭಾಷೆಗೆ ಪರಿವರ್ತನಗೊಳಿಸಿ, ಮುದ್ರಣವ ಮಾಡಿಸಿ ಆ ಗ್ರಂಥಗಳು ಎಲ್ಲರಿಗೂ ಅಲ್ಪಬೆಲೆಗೆ ಸಿಗುವಂತೆ ಮಾಡುವುದು.
16) ಪೂಜ್ಯರು ಸಂಸ್ಕೃತ ಗ್ರಂಥಗಳನ್ನು ಕೇವಲ ಕನ್ನಡಭಾಷೆಗೆ ಪರಿವರ್ತನೆ ಗೊಳಿಸುವುದು ಅಷ್ಟೇ ಅಲ್ಲ, ಇಂಗ್ಲಿಷ್ ಪಂಡಿತರನ್ನು ಶಿವಯೋಗ ಮಂದಿರಕ್ಕೆ ಕರೆಯಿಸಿಕೊಂಡು, ಮತಶಾಸ್ತ್ರ ಧರ್ಮಗ್ರಂಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯಿಸಿ, ಜೊತೆಗೆ ಆ ಇಂಗ್ಲಿಷ ಪಂಡಿತ ರಿಂದಲೇ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ತಿಳಿಯುವಂತೆ ಉಪನ್ಯಾಸದ ಮೂಲಕ ಧರ್ಮಸಂಬಂಧದ ವ್ಯಾಖ್ಯಾನಗಳನ್ನು ಕೊಡಿಸಿ, ಜೊತೆಗೆ ದೇಶದೆಲ್ಲೆಡೆ ನಡೆಯುವ ಧರ್ಮ ಪರಿಷತ್ತುಗಳಿಗೆ ಕಳುಹಿಸಿ ತತ್ವ ಪ್ರಚಾರ ಮಾಡುತ್ತ, ತಕ್ಕ ಪ್ರಸಂಗಗಳನ್ನು ನೋಡಿ ಇಂಗ್ಲಿಷ್ ಭಾಷೆಯಲ್ಲಿ ಸರ್ಕಾರಕ್ಕೆ ಧರ್ಮರಕ್ಷಣೆಯಬಗ್ಗೆ ಬೇಕಾಗುವ ಯಥಾರ್ಥ ಮಾಹಿತಿಯನ್ನ ಪತ್ರಗಳ ಮೂಲಕ ತಿಳಿಸುವುದು, ಜಗತ್ತಿನಲ್ಲಿ ನಡೆಯುವ ಧರ್ಮ ಸಂಸ್ಥೆಗಳ ಪರಿಚಯವನ್ನು ಮಾಡಿಕೊಂಡು, ಅವರ ಜೊತೆಗೆ ಪತ್ರ ವ್ಯವಹಾರ ನಡೆಸುವಂತೆ ಮಂದಿರದಲ್ಲಿ ವ್ಯವಸ್ಥೆ ಮಾಡುವುದು.
17) ವೀರಶೈವಮತ ಪರವಾದ ಭಾಷೆಗಳು, ಆಗಮಗಳು, ಉಪನಿಷತ್ತುಗಳು, ಜೊತೆಗೆ ಈ ಮತದ ಪೂರ್ವಿಕರಿಂದ ಕ್ರೋಡಿಕರಿಸಲ್ಪಟ್ಟ ಅನೇಕ ಸಂಸ್ಕೃತ, ಕನ್ನಡ ಗ್ರಂಥಗಳನ್ನು, ತಾಡೋಲೆಗಳನ್ನು, ಎಲ್ಲೆಡೆ ಶೋಧಿಸಿ ಸರಿಯಾಗಿ ಮುದ್ರಣ ಗೊಳಿಸಿ ತನ್ಮೂಲಕ ಎಲ್ಲೆಡೆ ಧರ್ಮಸಿದ್ಧಾಂತ ಪ್ರಚಾರ ಮಾಡಿಸುವುದು.
18) ಬರೀಸಂಸಾರದಲ್ಲಿ ಇದ್ದರೆ ಏನಾಯ್ತು ಸಾಧ್ಯವಾದ ಭಕ್ತ ಮಾಹೇಶ್ವರರಲ್ಲಿ ಸಂಸಾರಿಗಳಾದರೂ ಬ್ರಹ್ಮಚರ್ಯ ಪಾಲನೆ ಮಾಡಿದ ಭಕ್ತ ಮಹೇಶ್ವರರಿಗೆ ಮಂದಿರದಲ್ಲಿ ಸಾಧ್ಯವಾದ ಮಟ್ಟಿಗೆ ಶಿವಮತ ತತ್ವಗಳನ್ನು ಅಭ್ಯಾಸ ಮಾಡಲಿಕ್ಕೆ ಅನುಕೂಲ ಮಾಡಿಕೊಡುವುದು, ಜೊತೆಗೆ ವೀರಶೈವಮತ ಧರ್ಮವನ್ನ
ಸೂಕ್ರಮದಿಂದ ಪ್ರಚಾರಕ್ಕೆ ತರಲಿಎಂಬ ಭಾವದಿಂದ, ಧರ್ಮಗ್ರಂಥಗಳ ಅಭ್ಯಾಸದ ಜೊತೆಗೆ ಪರೀಕ್ಷೆಯನ್ನ ಇಟ್ಟು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಂದಿರದಲ್ಲಿ ನಡೆಯುವ ಪ್ರಮುಖ ಸಭೆಯಲ್ಲಿ ತಕ್ಕ ಬಹುಮಾನವನ್ನು ನೀಡಿ, ಧರ್ಮದ ವಿಷಯದಲ್ಲಿ ಅವರಿಗೆ ಉತ್ತೇಜನ ಮಾಡುತ್ತಾ, ಪ್ರೋತ್ಸಾಹಿಸುವುದೊಂದುಪಾಯ.
19) ವರ್ಷಕ್ಕೊಮ್ಮೆ ಶಿವರಾತ್ರಿಯಲ್ಲಿ ಎಲ್ಲ ಜನರನ್ನ ಮಂದಿರಕ್ಕೆ ಬರಮಾಡಿಕೊಂಡು ಧರ್ಮಜ್ಞರಾದ ವಿದ್ಯಾವಂತರಿಂದ, ಪಂಡಿತರಿಂದವ್ಯಾಖ್ಯಾನ, ಕೀರ್ತನ, ಪುರಾಣ, ಶಿವಭಜನೆ, ಪ್ರವಚನ, ಸಂಗೀತಾದಿಗಳಿಂದ ಹೀಗೆ ಮುಂತಾದ ದ್ವಾರಗಳಿಂದ ಶಿವಯೋಗ ಮಂದಿರದಲ್ಲಿ ಪ್ರತಿವರ್ಷ ಧರ್ಮಬೋಧನೆ ಕಾರ್ಯ ನಡೆಯುತ್ತಿರಬೇಕು.
ಹೀಗೆ ಕುಮಾರ ಶಿವಯೋಗಿಗಳು ಕೇವಲ ಮಂದಿರವನ್ನ ಸ್ಥಾಪಿಸಿ ಸುಮ್ಮನೆ ಕುಳಿತವರಲ್ಲ.ಅಲ್ಲಿ ಪ್ರತಿದಿನ ಯಾವೆಲ್ಲ ಕಾರ್ಯಗಳು ನಡೆಯುತ್ತಿರಬೇಕು,ಅಲ್ಲಿನ ವ್ಯವಸ್ಥೆ ಹೇಗಿರಬೇಕು ಎಂಬುವದನ್ನು ಮೊದಲೇ ತಮ್ಮ ಅಂತಃಚಕ್ಷುವಿನಿಂದ ಕಂಡು ಶಿವಯೋಗ ಮಂದಿರದಲ್ಲಿ 19 ಉಪಾಯಗಳನ್ನ, ಧ್ಯೇಯೋದ್ದೇಶಗಳನ್ನ ನಿರ್ಣಯಮಾಡಿದರು ಇದುವೇ ಕುಮಾರಶಿವಯೋಗಿಗಳ ದೂರದೃಷ್ಟಿ . ಇಂತಹ ದೂರದೃಷ್ಟಿಯನ್ನ ಇಟ್ಟುಕೊಂಡು ಮಂದಿರವನ್ನ ಸ್ಥಾಪಿಸಿದ್ದರಿಂದಲೇ ಇಂದಿಗೂ ಒಂದುನೂರಾಹದಿಮೂರು ವಸಂತಗಳನ್ನು ಯಾವುದೇ ವಿಘ್ನವಿಲ್ಲದೆ ಸಾಗಿಬಂದೆದೆ ಅಂದ್ರೆ ಅದು ಕುಮಾರಶಿವಾಯೋಗಿಗಳ ಶಕ್ತಿ, ಇಚ್ಛಾಶಕ್ತಿ, ಸಂಕಲ್ಪಶಕ್ತಿ,ಕ್ರಿಯಾಶಕ್ತಿ, ಈ ಮೂರು ದಿವ್ಯಶಕ್ತಿಗಳ ಪುಣ್ಯ ಸಂಗಮವೇ ಶಿವಯೋಗಮಂದಿರ ಸಂಸ್ಥೆ.. ಈ ಸಂಸ್ಥೆಯನ್ನ ಸ್ಥಾಪಿಸುವಾಗ ಪೂಜ್ಯರು ಹಲವಾರು ಕಷ್ಟ,ನಷ್ಟ,ನೋವನ್ನ ಅನುಭವಿಸುತ್ತಾ,ಯಾರ ಮನಸ್ಸನ್ನು ನೋಯಿಸದೆ ನಗುನಗುತಾ ಬಾಳಿ ಬದುಕಿದ ಮಹಾಚೇತನ,ಕಾವಿ ಲೋಕದ ತಂದೆ ಕುಮಾರ ಶಿವಯೋಗಿಗಳು.
ಸಿದ್ದನೆಂದರೆ ಯಾರು ಮನವನೋಯಿಸದಾತ
ನೂರುನೋವನು ಸಹಿಸಿ ನಗುತಲಿರುವಾತ,
ಒಂದಾದ ನಡೆ-ನುಡಿಗೆ, ದಿಕ್ಕು-ದಶೆ ತೋರ್ವಾತ
ಪರಮಗುರು ಆ ಸಾಧು – ಮುದ್ದುರಾಮ