ಬಾಳಿನ ಬವಣೆ-ವಿದ್ಯಾಸ್ಮರಣೆ:ಧಾರವಾಹಿ- ಭಾಗ-೪

ಜ.ಚ.ನಿ

ಮನೆಯು ಜನಗಳಿಂದ ತುಂಬಿತ್ತು. ಧನಧಾನ್ಯಗಳಿಂದ ಬರಿದಾಗಿತ್ತು. ತಾತ ತಂದೆ ತಾಯಿ ಅಣ್ಣ ಅಕ್ಕ ತಮ್ಮ ತಂಗಿ ಮುಂತಾಗಿ ಮನೆಯಲ್ಲಿ ಹತ್ತು ಹನ್ನೆರಡು ಜನರಿದ್ದರು. ಸಂಪಾದನೆ ಯಾವ ಬಗೆಯಲ್ಲಿಯು ಇರಲಿಲ್ಲ. ಅಜ್ಜಂದಿರು ಓದಿಸುತ್ತಿದ್ದ ಸ್ವತಂತ್ರ ಶಾಲೆಯ ಫಲವಾಗಿ ಜನಗಳಿಂದ ವರ್ಷಕ್ಕೊಮ್ಮೆ ಬರುತ್ತಿದ್ದ ಅಲ್ಪಸ್ವಲ್ಪ ಪ್ರಾಪ್ತಿ.  ಅದೇತಕ್ಕೂ ಸಾಲುತ್ತಿರಲಿಲ್ಲ. ಪ್ರತಿನಿತ್ಯ ಭಿಕ್ಷೆಯ ಮಾಡದೆ ವಿಧಿಯಿರಲಿಲ್ಲ. ಈ ಮಧ್ಯೆ ತಂದೆಯವರು ಹಠಾತ್ತಾಗಿ ಶಿವಾಧೀನರಾದದ್ದು ಒಂದು ತುಂಬಿಬಾರದ ಕೊರತೆ. ಕೆಲಸ

ಮಾಡುವವರ ಸಂಖ್ಯೆ ಕಡಿಮೆಯಾಯಿತು. ೧೦೫ ವರ್ಷ ವಯಸ್ಸಿನ ತಾತಂದಿರು ಸಹ ಹಸುವಿಗೆ ಹುಲ್ಲನ್ನು ಕೊಯ್ದು ಇಲ್ಲವೆ ಕೆತ್ತಿ ತರುವ ಕಾಯಕ ಮಾಡಬೇಕಾಯಿತು. ಅಣ್ಣಂದಿರಾದ ಶಿವಬಸವಯ್ಯನವರು ಒಬ್ಬರೆ ತರುವ ಭಿಕ್ಷೆಯಿಂದ ಚರಿತಾರ್ಥ ಸಾಗದಂತಾಯಿತು. ಸದಾಶಿವಯ್ಯನವರು ಭಿಕ್ಷಕ್ಕೆ ಹೋಗುವ ಸರದಿ ಬಂದಿತು. ಹೋಗದಿದ್ದರೆ ವಿಧಿಯಿಲ್ಲದೆ ಹೋಯಿತು. ಒಪ್ಪೋತಿನ ಶಾಲೆಗೆ ತಿಲಾಂಜಲಿ ಬಿಡಬೇಕಾಯಿತು; ಬಿಟ್ಟಾಯಿತು. ಒಪ್ಪತ್ತಿನ ಓದು ಅವರ ಮನಸ್ಸಿಗೆ ತೃಪ್ತಿತರಲಿಲ್ಲ. ಅದೇ ಅವರಿಗೊಂದು ಚಿಂತೆಯಾಗಿತ್ತು; ಚಿತ್ತಚಪಲತೆಯಾಗಿತ್ತು.

ಒಂದು ದಿನ ಬೆಳಗಿನ ಜಾವ. ಎಂದಿನಂತೆ ಎದ್ದು ಮುಖ ತೊಳೆದು ವಿಭೂತಿ ಧಾರಣೆ ಮಾಡಿಕೊಂಡು ಒಂದು ಹಳ್ಳಿಗೆ ಸದಾಶಿವಯ್ಯನವರು ಭಿಕ್ಷಕ್ಕೆ ಹೋದರು. ನಾಲ್ಕಾರು ಮನೆ ಭಿಕ್ಷವಾಯಿತು. ಮತ್ತೊಂದು ಮನೆಯೊಳಕ್ಕೆ ಹೋಗಲು ಮುಂದುವರಿದರು. ಅಷ್ಟರಲ್ಲಿ ಅದೇ ಮನೆಯ ಕಟ್ಟೆಯ ಮೇಲಿದ್ದ ಮುದುಕನೊಬ್ಬನು, ‘ಏನ ಅಯ್ಯಪ್ಪ, ಭಿಕ್ಷೆ ಬೇಡಲು ನೀನೇನು ಮುದುಕನೆ ? ಹತ್ತು ಹನ್ನೆರಡು ವರ್ಷದ ಸಣ್ಣ ಹುಡುಗ, ಈಗಲೇ ಈ ತಿರುಪೆಗೆ ನಿಂತರೆ ಹೇಗೆ ? ಇನ್ನೂ ನೀನು ಎಷ್ಟು ದಿನ ಬದುಕಬೇಕಾಗಿದೆ ? ಎಷ್ಟು ಜನ ಮಕ್ಕಳು ಮರಿಗಳನ್ನು ಹೆತ್ತು ಸಾಕಬೇಕಾಗಿದೆ ? ಭಿಕ್ಷಾನ್ನದಿಂದಲೇ ಇದೆಲ್ಲ ಹೇಗೆ ಸಾಧ್ಯ ? ವಿದ್ಯೆ ಕಲಿತು ಬುದ್ಧಿವಂತನಾಗದೆ ಸೋಮಾರಿಯಾಗಿ ‘ಭಿಕ್ಷಾಂ ದೇಹಿ’ ಎಂದು ಭಿಕ಼್ಷೆ ಬೇಡುವುದೆ ? ಇನ್ನೊಬ್ಬರಿಗೆ ಹೊರೆಯಾಗಿ ಬಾಳುವುದೊಂದು ಬಾಳೆ ? ಬದುಕುವುದೊಂದು ಬದುಕೆ ? ನೀನು ಜನಿಸದಿದ್ದರೆ ಜಗತ್ತು ಹಾಳಾಗುತಿತ್ತೆ? ಎಂದು ಮುಂತಾಗಿ ಬುದ್ಧಿವಾದ ಬೈಗಳ ಸುರಿಸಿದನು. ಸದಾಶಿವಯ್ಯನವರ ಮೃದುವಾದ ಮನಸ್ಸಿನ ಮೇಲೆ ಆ ಮೊನಚಾದ ಮಾತುಗಳು ಚೆನ್ನಾಗಿ ನಾಟಿದವು. ತಾಳ್ಮೆಗೆಟ್ಟರು. ಅಲ್ಲಿಂದ ಮುಂದಿನ ಮನೆಗೆ ಭಿಕ್ಷಕ್ಕೆ ಹೋಗುವ ಮನಸ್ಸು ಉಳಿಯಲಿಲ್ಲ. ಮೊದಲೆ ವಿದ್ಯಾರ್ಜನೆಗಾಗಿ ತವಕಿಸುತ್ತಿದ್ದ ಮನಸ್ಸು ಮತ್ತಿಷ್ಟು ತವಕಗೊಂಡಿತು. ಹೇಗಾದರೂ ಮಾಡಿ ವಿದ್ಯಾರ್ಜನೆ ಮಾಡಬೇಕೆಂದು ಗಟ್ಟಿಗೊಂಡಿತು. ಹಾಗೆಯೇ ಊರಿಗೆ ಹಿಂದಿರುಗಿದರು. ಬರುತ್ತ ಆ ಮುದುಕನು ಆಡಿದ ಮಾತುಗಳನ್ನು ನೆನೆದು ದುಃಖ ಉಕ್ಕಿತು, ಕಣ್ಣೀರು ಮುನ್ನೀರಾಗಿ ಹರಿಯತೊಡಗಿತು. ಸಮಾಧಾನ ಮಾಡುವರಾರು ? ದಾರಿಯುದ್ದಕ್ಕು ಅತ್ತು ಅತ್ತು ಹೃದಯ ಭಾರವಾಯಿತು. ಬುದ್ಧಿಸಿಮಿತವಿಲ್ಲದಾಯಿತು. ಮನಸಿನ ಮೇಲೆ ಮೂಡಿದ ಮಾತಿನ ಗಾಯ ಮಾಣಲಿಲ್ಲ. ದುಃಖದ ಭರದಲ್ಲಿ ದಾರಿ ಸಾಗಲಿಲ್ಲ. ದಟ್ಟಡಿಯಿಟ್ಟು ನಡೆದಿದ್ದನು. ಹೊತ್ತು ಹೆಚ್ಚಾದರೂ ಅವನಿಗೇನು ಕಾಣಲಿಲ್ಲ. ಚಿಂತೆ ಶೋಕಗಳಲ್ಲಿ ಹೊತ್ತುಗೊತ್ತುಗಳಿಗೆ ಸ್ಥಾನವೆಲ್ಲಿ ? ಅಷ್ಟರಲ್ಲಿ ಊರು ಹತ್ತಿರಕ್ಕೆ ಬಂದಿತು. ಬೆಚ್ಚಿನೋಡಿ ಕಣ್ಣೀರು ಒರಸಿಕೊಂಡು ಬಾಗಿಲ ಬಳಿಗೆ ಬಂದನು. ತಂಗಿಯು ತಂಬಿಗೆಯಲ್ಲಿ ತಂದ ನೀರಿನಿಂದ ಕಾಲುತೊಳೆದು ಒಳಗೆ ಹೋದನು. ಅಕ್ಕನು ಓಡಿ ಬಂದು ಜೋಳಿಗೆಯನ್ನು ನೋಡಿದಳು. ದಿನಕ್ಕಿಂತಲು ಹಿಟ್ಟು ತೀರ ತುಸು ಇದ್ದಿತು. ಅವ್ವಾ, ತಮ್ಮನಿಂದು ಹಿಟ್ಟು ತುಸು ತಂದಿದ್ದಾನೆ ಎಂದು ಕೂಗಿ ಹೇಳಿದಳು. ಆ ಮಾತು ಕೇಳಿ ಅಲ್ಲಿಯೇ ಇದ್ದ ಅಣ್ಣನು, ಅಂಗಡಿಗೆ ಹಾಕಿ ಫಲಾರ (ಫಲಾಹಾರ) ತಿಂದಿರಬೇಕು ಎಂದು ದೂರು ಹೇಳಿದನು.

ತಾಯಿ ನೀಲಾಂಬೆ ಜಳಕ ಮಾಡಿ ಮಡಿಯುಟ್ಟು ಅಡುಗೆಯ ಮನೆಯ ತನ್ನ  ಕೆಲಸದಲ್ಲಿ ತೊಡಗಿದ್ದಳು. ಮಕ್ಕಳ ಮಾತುಗಳ ಕೇಳಿ ಮನಸ್ಸು ತಾಳದೆ ಬಂದು ನೋಡಿದಳು. ಅವರು ಹೇಳಿದಂತೆ ನಿಜವಾಗಿಯೂ ಎಂದಿಗಿಂತ ತೀರ ಕಡಿಮೆಯಾಗಿತ್ತು. ಮಗನ ಮೇಲೆ ತಾಯಿಗೆ ತುಂಬಾ ಮಮತೆಯಿತ್ತಾದರು ಸಂಸಾರ ನಿರ್ವಹಣ ದೃಷ್ಟಿಯಿಂದ ತುಂಬ ಸಿಟ್ಟಿಗೆದ್ದಳು; ಸಾವಿರಾಡಿದಳು. ಗಾಯದ ಮೇಲೆ ಕಾಯ್ದ ಕಂಬಿಯ ಕೀಸಿದಂತಾಯಿತು. ಮೊದಲೆ ಮುದುಕನ ಬಿರಿನುಡಿಗಳಿಂದ ಬೆಂದ ಹೃದಯ ಮತ್ತಿಷ್ಟೂ ನೊಂದಿತು.  ಅಕ್ಕನ ಚಾಡಿ, ಅಣ್ಣನ ಅಪವಾದ, ಅವ್ವನ ಆರ್ಭಟ ಯಾವುದನ್ನು ಸಹಿಸಬೇಕು. ಏನೆಂದು ಸಮಾಧಾನ ಹೇಳಬೇಕು. ಹೇಳಬೇಕೆಂದಿದ್ದರೆ ಬೇಕಾದಷ್ಟಿತ್ತು. ಹೇಳುವ ಮನಸ್ಸು ಮಾಡಲಿಲ್ಲ. ಇದಿರಾಡಲು ಇವನಿಗೆ ಇಷ್ಟವಿಲ್ಲದೆ ಹೋಯಿತು. ಕಷ್ಟವೊದಗಿದಷ್ಟು ಅವನ ಮನ ಪುಟಕ್ಕಿಟ್ಟ ಚಿನ್ನದಂತೆ ಚೊಕ್ಕಟವಾಗ ತೊಡಗಿತ್ತು. ಅಲ್ಲದೆ ಬಾಗಿಲ ಬಳಿ ತಂಗಿ ನೀರು ತಂದು ಕೊಟ್ಟಾಗ ಅವನು ಬರಿ ಕಾಲುಗಳನ್ನೇ ತೊಳೆದಿರಲಿಲ್ಲ. ಜೊತೆಗೆ ಕಾಮಕ್ರೋಧಗಳನ್ನು ತೊಳೆದಿದ್ದನು. ತೊಡೆದು ಹಾಕಿದ್ದನು. ಅದರಿಂದ ಅವನ ಮುಚ್ಚಿದ ತುಟಿ ಎರಡಾಗಲಿಲ್ಲ. ಊಟದ ಆಶೆ ಉಳಿಯಲಿಲ್ಲ. ಏನೂ ತೋಚದಾಯಿತು. ಯಾವುದೂ ಬೇಡವಾಯಿತು. ಸಹಿಸದ ಸಂಕಟದಿಂದ ಮರುಮಾತಾಡದೆ ಮನೆಯ ಒಂದು ಮೂಲೆಯಲ್ಲಿ ಹೋಗಿ ಕುಳಿತನು.ಅವನು ಕುಳಿತರೂ ಅವನ ಮನಸ್ಸು ಸುಮ್ಮನಾಗಲಿಲ್ಲ. ಅದು ಚಿಂತೆಗೊಳಗಾಯಿತು. ಇನ್ನು ನಾನು ಇಲ್ಲಿ ಇರುವುದರಿಂದ, ಹೀಗೆ ಕಾಲಕಳೆವುದರಿಂದ ಯಾವ ಪ್ರಯೋಜನವಿಲ್ಲ. ಮಾನಮರ್ಯಾದೆ ಮತ್ತೂ ಇಲ್ಲ. ಎಲ್ಲಿಗಾದರೂ ಹೋಗಿ ಯಾರ ಆಶ್ರಯವನ್ನಾದರೂ ಬೇಡಿ ಓದಿಕೊಳ್ಳಬೇಕು. ಆದರೆ ಎಲ್ಲಿಗೆ ಹೋಗುವುದು ? ಯಾರನಾಶ್ರಯಿಸುವುದು ? ಎಂದು ಎಷ್ಟೋ ಬಗೆಯಾಗಿ ಯೋಚಿಸತೊಡಗಿತ್ತು. ಅಷ್ಟರಲ್ಲಿ ಅಣ್ಣನ ಕೂಗು. ಹೀಗೆ ಸುಮ್ಮನೆ ಮೂಲೆ ಹಿಡಿದು ಕುಳಿತರೇನು ? ಮನೆಗೆಲಸ ಮಾಡುವರಾರು ? ದನದ ಮನೆ ಕಸಗೂಡಿಸಿಲ್ಲ. ಮೈಲಿಗೆಯ ಬಟ್ಟೆಗಳ ತೊಳೆದಿಲ್ಲ. ಇವುಗಳಲ್ಲಿ ಯಾವುದನ್ನಾದರೂ ಮಾಡ ಏಳು ! ಎನ್ನಲು ಸದಾಶಿವಯ್ಯನು ಬಟ್ಟೆ ತೊಳೆವುದನ್ನೇ ಒಪ್ಪಿಕೊಂಡು ಬಟ್ಟೆಗಳೊಡನೆ ಬಾವಿಯಿದ್ದಲ್ಲಿಗೆ ಬಂದು ಬಟ್ಟೆಗಳನ್ನು ಹಸನಾಗಿ ತೊಳೆದನು. ಆದರೆ ಮರಳಿ ಮನೆಗೆ ಹೋಗಲು ಮನಸ್ಸಿಲ್ಲ. ಬಡತನದ ಬಾಳಿನಲ್ಲಿ ಇಷ್ಟು ದಿನ ತಮ್ಮ ಮನಸ್ಸಿಗೆ ವಿರೋಧವಾಗಿ ಅದೆಷ್ಟೋ ತಗ್ಗಿ ನಡೆದನು; ಅದೆಷ್ಟೋ ಕುಗ್ಗಿ ನಡೆದನು. ಇನ್ನು ಹಾಗೆ ಇರಲು ಸಾಧ್ಯವಿರಲಿಲ್ಲ. ವಿದ್ಯಾಭ್ಯಾಸದ ಕಡೆಗೆ ಅವನ ಮನಸ್ಸು ತೀವ್ರವಾಗಿ ಹರಿಯಿತು. ಬೆಳಗಿನಿಂದ ಊಟವಿಲ್ಲದಿದ್ದರು ಮನೆಗೆ ಹೋಗುವ ಮನಸ್ಸು ಮಾಡಲಿಲ್ಲ. ಬಟ್ಟೆಗಳನ್ನು ಮನೆಗೆ ಕಳಿಸುವ ಬಗೆ ಹೇಗೆ ? ಎಂದು ಯೋಚಿಸುತ್ತಿರುವಾಗ ನೆರೆಮನೆಯವರೊಬ್ಬರು ನೀರಿಗೆಂದು ಅಲ್ಲಿಗೆ ಬಂದರು. ಅವರನ್ನು ನೋಡಿ ಮನ ಹಿಗ್ಗಿತು. ಉಂಡಷ್ಟು ಸಂತಸವಾಯಿತು. ಮನೆಯಲ್ಲಿ ಕೊಡಹೇಳಿ ತೊಳೆದ ಬಟ್ಟೆಗಳನ್ನು ಅವರ ಕೈಯಲ್ಲಿ ಕೊಟ್ಟನು. ನನ್ನನ್ನು ಕೇಳಿದರೆ ಹಳ್ಳಿಗೆ ಹೋದನೆಂದು ಹೇಳಿ ಎಂದು ತಿಳಿಸಿದನು. ಹಾಗೆಯೇ ಹೊರಟುಬಿಟ್ಟನು. ಸ್ವಲ್ಪ ದೂರ ಹೋದಮೇಲೆ ಹಸಿದಿದ್ದರೂ ಹಂಗಿಲ್ಲದೆ ನಿಟ್ಟೋಟದಿಂದ ಓಡಿದನು. ಏಕೆಂದರೆ ಯಾರಾದರು ಬಂದು ಹಿಂದಕ್ಕೆ ಕರೆದೊಯ್ದಾರೆಂಬ ಭಯ ಅವನಿಗೆ. ಅದರಿಂದಾಗಿ ಬೇಗ ಅವನು ಕಜ್ಜರಿ ಗ್ರಾಮವನ್ನು ಸೇರಿದನು; ಕೊಂಚ ಮನ ಸೈರಣೆಗೊಂಡಿತು.

 ಆಗ ಆ ಊರಿನಲ್ಲಿ ಶಾಲೆ ಉತ್ತಮ ರೀತಿಯಲ್ಲಿದ್ದು ಹೆಸರುವಾಸಿಯಾಗಿತ್ತು. ಅದರಿಂದ ಅಲ್ಲಿ ತನ್ನ ಹೆಚ್ಚಿನ ಅಭ್ಯಾಸ ಆಗುತ್ತದೆಂದು ಆಲೋಚಿಸಿ ಅಲ್ಲಿಗೆ ಬಂದಾಯಿತು. ಆದರೆ ಅವನ ಬಳಿ ಬಿಡಿಗಾಸು ಸಹ ಇರಲಿಲ್ಲ. ಅಷ್ಟು ಅಕಿಂಚನನಾಗಿದ್ದನು. ಆಶ್ರಯದ ಮಾತು ಮುಂದೆ ಬಂದಿತು. ಊರಿನಲ್ಲಿ ಯಾರ ಪರಿಚಯವೂ ಇರಲಿಲ್ಲ. ಎಲ್ಲಿ ಯಾರ ಮನೆಗೆ ಹೋಗಿ ಕೇಳುವುದು ? ಸಾಧ್ಯವಾಗದೆ ಹೋಯಿತು. ಹಾಗೆಯೇ ಅದೇ ಊರಿನ ಅರಳಿಕಟ್ಟೆಯ ಮೇಲೆ ಕುಳಿತು ಬಿಟ್ಟನು. ಬೆಳಗಿನಿಂದ ಊಟವಿಲ್ಲ. ಮೈಮೇಲೆ ಸರಿಯಾದ ಬಟ್ಟೆಯಿಲ್ಲ. ಇತ್ತಹಸಿವಿನ ಬಾಧೆ, ಅತ್ತ ಮನಸ್ಸಿನ ವೇಧೆ, ಎರಡನ್ನೂ ಸಹಿಸದೆ ಹೋದನು. ಕಣ್ಣುಗಳಲ್ಲಿ ನೀರೂರಿತು. ಭವಿಷ್ಯತ್ತಿನ ಕಾರ್ಗತ್ತಲೆಯ ಕಪ್ಪುಕಲೆ ಕಂದಿದ ಮುಖದ ಮೇಲೆ ನೆಲೆ ನಿಂತಿತು. ಆ ಸಮಯಕ್ಕೆ ಅದೇ ಊರಿನ ಹಿರಿಯಮಠದ ರಾಚಯ್ಯನವರೆಂಬುವರು ಅಲ್ಲಿಗೆ ಆಕಸ್ಮಿಕವಾಗಿ ಬಂದರು. ಅರಳಿಕಟ್ಟೆಯಲ್ಲಿ ಕುಳಿತು ಅಳುತ್ತಿರುವ ಅಣುಗನ ಮೇಲೆ ಅವರ ದೃಷ್ಟಿ ಹರಿಯಿತು. ಪಡುವ ಅವಸ್ಥೆಯನ್ನು ನೋಡಿ ಆದ್ಯಂತವನ್ನು ಕೇಳಿ ಮನಮರುಗಿ, ಕರಳುಕರಗಿ ಮಠಕ್ಕೆ ಕರೆದೊಯ್ದರು. ಹಸಿದ ಹೊಟ್ಟೆಗೆ ಊಟ ದೊರೆಯಿತು. ಓದಲು ಊರಿನವರಿಂದ ಸಹಾಯ  ಮಾಡಿಸಿಕೊಡುವೆನೆಂಬ ಅಭಯವೂ ಅವರಿಂದ ದೋರೆಯಿತು.  ಕೇಳಿ ಮನಸ್ಸಿಗೆ ನೆಮ್ಮದಿಯಾಯಿತು. ಆ ದಿನ ಸುಖವಾಗಿ ನಿದ್ದೆ ಹೋದನು.

 ಮರುದಿನ ರಾಚಯ್ಯನವರು ಮಾತುಕೊಟ್ಟಂತೆ ಊರಿನಲ್ಲಿ ಹೋಗಿ ಇದ್ದ ಸಂಗತಿಯನ್ನು ಜನರಿಗೆ ಹೇಳಿ ವಿದ್ಯಾಸಹಾಯವೆಂದು ಕೇಳಿ ಹಣ ಶೇಖರಿಸಿದರು. ಬಂದ ಹಣದಲ್ಲಿ ಬಟ್ಟೆ ಓದುವ ಪುಸ್ತಕ ಹಲಗೆ ಬಳಪ ಮುಂತಾದ ಸಾಮಾನುಗಳನ್ನು ತಂದು ಸದಾಶಿವಯ್ಯನವರಿಗೆ ಕೊಟ್ಟು ಶಾಲೆಗೆ ಸೇರಿಸಿದರು. ಅವನ ಧೈರ್ಯದ ಸಾಹಸಕ್ಕೆ ಇಂದು ದಾರಿ ಸಿಕ್ಕಿತು. ಮುಖದ ಮೇಲೆ ಕೃತಜ್ಞತೆಯ ಚಿನ್ಹೆ ಚಿಮ್ಮಿತು. ಸದಾಶಿವಯ್ಯನವರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಅನಿರೀಕ್ಷಿತವಾದ ಈ ಸಹಾಯದಿಂದ ಅವರ ಓದುವ ಉತ್ಸಾಹ ಇಮ್ಮಡಿ ಮುಮ್ಮಡಿಯಾಗಿ ಹೆಮ್ಮಿತು. ಮನಸಿಟ್ಟು ಮತಿಗೊಟ್ಟು ಓದತೊಡಗಿದರು. ಒಂದರಗಳಿಗೆಯನ್ನು ಸಹ ವ್ಯರ್ಥ ಕಳೆಯುತ್ತಿರಲಿಲ್ಲ. ಪಾಠಬರುವವರಿವಿಗೂ ಊಟ ಮಾಡುತ್ತಿರಲಿಲ್ಲ. ಆಟವಾಡುತ್ತಿರಲಿಲ್ಲ. ನೆರವನ್ನು ನಿರರ್ಥಕಮಾಡಿಕೊಳ್ಳಲಿಲ್ಲ. ತನ್ನ ಓದಾಯ್ತು. ತಾನಾಯ್ತು. ಈ ರೀತಿ ಒಮ್ಮನದಿಂದ ಓದಿ ಕೆಲವು ದಿನಗಳಲ್ಲಿಯೆ ಶಾಲೆಯ ಜಾಣ ವಿದ್ಯಾರ್ಥಿಯಾದರು. ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸದ್ಗುಣಗಳಿಂದ ಮಠದವರಿಗೆ ಮುದ್ದು ಹುಡುಗರಾದರು.

 ಈ ಬಗೆಯಾಗಿ ನಾಲ್ಕು ವರ್ಷ ಓದಿದರು. ಏಳನೆಯ ವರ್ಗದ ಅಭ್ಯಾಸವೂ ಕೊನೆಗಂಡಿತು. ಉತ್ತಮವಾಗಿ ಕೊನೆಗಂಡಿತು. ಈ ವರ್ಗದ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎಂದು ಹೆಸರು. ಇದು ಜಿಲ್ಲೆಯ ಕೇಂದ್ರಸ್ಥಳದಲ್ಲಿಯೇ ಜರುಗುತ್ತಿತ್ತು. ಅಲ್ಲಿಗೆ ಹೋಗಿ ಪರೀಕ್ಷೆಗೆ ಕುಳಿತುಕೊಳ್ಳಲು ಸದಾಶಿವಯ್ಯನವರು ಮನಸ್ಸು ಮಾಡಿದರು. ಶಿಕ್ಷಕರ ಅನುಮತಿಯನ್ನು ಪಡೆದರು. ಅಸುಂಡಿ ಶಿವನಗೌಡನೆಂಬ ಸಹಾಧ್ಯಾಯಿಯೊಡನೆ ಕಾಲುನಡಿಗೆಯಿಂದ ಧಾರವಾಡಕ್ಕೆ ಬಂದರು. ಪರೀಕ್ಷೆ ಕಟ್ಟಿ ಆಯಿತು, ಕೊಟ್ಟು ಆಯಿತು. ಆದರೇನು ? ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಉದ್ದೇಶವೆ ಬೇರೆಯಾಯಿತು. ಆದದ್ದೆ ಬೇರೆಯಾಯಿತು. ಮಹಾತ್ಮರ ಚರಿತ್ರೆಯೆ ಮರ್ತ್ಯಕ್ಕೆ ವಿಲಕ್ಷಣವಾದುದು, ಮನುಷ್ಯರಿಗೆ ಮೀರಿದುದು ಎಂಬುದನ್ನು ನಾವಿಲ್ಲಿ ಒಪ್ಪಿಕೊಳ್ಳಲೇಬೇಕು. ಇಲ್ಲವಾದರೆ ಎಲ್ಲರಿಗಿಂತಲು ಬುದ್ಧಿವಂತರಾದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿರುವುದೆಂದರೇನು ? ಮನೋನಿಶ್ಚಯಕ್ಕೆ ವಿಪರೀತವಾದ ಫಲಿತಾಂಶ ಸಿಕ್ಕುವುದೆಂದರೇನು ?

 ಸದಾಶಿವಯ್ಯನವರ ಮನಸ್ಸು ಇದರಿಂದಾಗಿ ವಿಶೇಷ ವ್ಯಥೆಗೊಳಗಾಯಿತು. ಕಜ್ಜರಿಯಲ್ಲಿ ಯಾರಿಗೂ ಮುಖ ತೋರದೆ ಮರೆಯಲ್ಲಿಯೇ ಇದ್ದು ಹೋದರು. ಅನ್ನದ ಆಶೆ ಹರಿದರು. ಆನೆಯೆತ್ತರದ ಆಲೋಚನೆಗಳಿಗೆ ಆಗರವಾದರು. ಸ್ನೇಹಿತರು ಶಿಕ್ಷಕರು ಏನೇನೋ ಸಮಾಧಾನ ಹೇಳಿದರು. ಆದರೆ ಒಂದೂ ಪ್ರಯೋಜನ ವಾಗಲಿಲ್ಲ. ಮರಳಿ ಪ್ರಯತ್ನ ಮಾಡಿನೋಡೆಂದರು.ಮನಸ್ಸು   ಮಾಡಲಿಲ್ಲ. ಪೂರ್ತಿ ಮನಃಪರಿವರ್ತನವಾಗಿ ಹೋಗಿತ್ತು. ಎಲ್ಲರ ಹೇಳಿಕೆಗಳಿಗೂ ಅವರ ಆಲೋಚನೆಗೂ ನೆಲಮುಗಿಲ ಅಂತರವಾಯಿತು. ಒಂದಕ್ಕೊಂದು ಮೇಳೆಸುವ ಬಗೆ ಹೇಗೆ ? ಸಾಧ್ಯವಾಗಲಿಲ್ಲ. ಇನ್ನು ಅಲ್ಲಿರಲು ಅವರ ಮನಸ್ಸು ಒಪ್ಪಲಿಲ್ಲ. ಹಾಗೆಯೇ ಹೊರಟು ಅವರ ತಾಯಿಯ ತವರು ಮನೆಯಿದ್ದ ಲಿಂಗದಹಳ್ಳಿಗೆ ಬಂದರು. ತಾಯಿಯ ತವರುಮನೆಯಲ್ಲಿ ನಿಂತರು.

Related Posts