ಅನುಭವ-ಅನುಭಾವ

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ಇಂದ್ರಿಯಗಳು ಮತ್ತು ಅಂತಃಕರಣಗಳ ಮೂಲಕ ನಾವು ಪಡೆಯುವ ಜ್ಞಾನಕ್ಕೆ ಅನುಭವ ಎಂದು ಸ್ಥೂಲವಾಗಿ ಹೇಳುತ್ತೇವೆ. ಬದುಕಿನಲ್ಲಿ ನಾವು ಹೊಂದುವ ಅನೇಕ ರೀತಿಯ ಅನುಭವಗಳು ವಸ್ತುವಿನ ಪ್ರತ್ಯಕ್ಷ ಸಂಪರ್ಕ ಹಾಗು ಸುಖ-ದುಃಖ, ನೋವು-ನಲಿವು, ಹುಟ್ಟು-ಸಾವು ಮುಂತಾದವುಗಳ ಅನಿವಾರ್ಯತೆಯಿಂದ ಬಂದಂತಹವುಗಳು. ಆಗ ನಾವು ಅವುಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಈ ಅನುಭವಗಳೆಲ್ಲ ಲೌಕಿಕವಾದವು. ಆದರೆ ಅನುಭಾವ ಇವುಗಳಿಂದ ಭಿನ್ನವಾದ ಒಂದು ವಿಶಿಷ್ಟ ಅನುಭವ, ಅದು ಪಾರಲೌಕಿಕವಾದುದು. ಅದು ಆತ್ಮವಿದ್ಯೆ. ತಾನಾರೆಂಬುದನ್ನು ತೋರುವ ವಿದ್ಯೆ. ನಮ್ಮ ಬುದ್ಧಿ, ಇಂದ್ರಿಯಗಳು, ತರ್ಕ ಹಾಗೂ ಪ್ರಯೋಗ ಪರೀಕ್ಷೆಗಳಿಗೆ ಅತೀತವಾಗಿರುವ ದೈವೀಶಕ್ತಿಯನ್ನು ಕುರಿತು ಚಿಂತಿಸುವುದು, ಆ ದೈವೀಶಕ್ತಿಯೇ ಪರಮಸತ್ಯ ಎಂದು ನಂಬುವುದು ಹಾಗು ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಅನುಭಾವ.

 ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಹಿತಂ ಮುಖಂ

 ತತ್ವಂ ಪೂಷನ್ನಪಾವೃಣು ಸತ್ಯ ಧರ್ಮಾಯ ದೃಷ್ಟಯೇ

 ಪರಮಸತ್ಯವು ತೇಜೋಮಯವಾದ ಸುವರ್ಣದ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಇಂಥ ಪರಮಸತ್ಯದ ಸಾಕ್ಷಾತ್ಕಾರಕ್ಕಾಗಿ ಸತ್ಯಧರ್ಮಗಳನ್ನು ಅಳವಡಿಸಿಕೊಂಡ ಸಾಧಕನ ದೃಷ್ಟಿ ಅಂತರ್ಮುಖವಾಗಬೇಕಾಗುತ್ತದೆ. ಆಗ ತನು ಮನ ಭಾವ ನಷ್ಟವಾಗಿ ವಿಶ್ವಾತ್ಮನೇ ತಾನಾಗುವ ಅನುಭಾವ ಸಿದ್ಧಿಸುತ್ತದೆ. ಅನುಭಾವ ಒಂದು ರೀತಿಯಲ್ಲಿ ಪರಮಸತ್ಯದ ಅರಿವನ್ನು ಮಾಡಿಕೊಡುವ ಒಂದು ಅತೀಂದ್ರಿಯ, ಅತಿಬೌದ್ಧಿಕ ಅನುಭವ. ಅದು ಮಾತು, ಮನಸ್ಸುಗಳನ್ನು ಮೀರಿದ ವೈಯಕ್ತಿಕ ಅನುಭವ. ಅದರ ತೀವ್ರತೆ ಪ್ರಖರತೆಯನ್ನಳೆಯಲು ಭಾಷೆ ಅಸಮರ್ಥವಾಗುವುದರಿಂದ ಅದು ಅವರ್ಣನೀಯ ಹಾಗೆಯೇ ಅನಿರ್ವಚನೀಯ. ಅಂತೆಯೇ ಶರಣರು ‘ಅನುಭಾವವೆಂಬುದು ನೆಲದ ಮರೆಯ ನಿಧಾನ, ಅನುಭಾವವೆಂಬುದು ಶಿಶುಕಂಡ ಕನಸು ಕಾಣಿಭೋ’ ಎಂದು ಹೇಳಿರುವುದು.

 ಸಮುದ್ರದ ಆಳವನ್ನು ಅಳೆಯಲು ಹೋದ ಉಪ್ಪಿನ ಬೊಂಬೆಯೊಂದು ಸಮುದ್ರದಲ್ಲಿ ಮುಳುಗಿದಾಗ ಕರಗಿಹೋಯಿತಂತೆ. ಸಮುದ್ರದ ಆಳವನ್ನು ವಿವರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಹಾಗೆಯೇ ಪರಮಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅನುಭಾವಿಯು ತನ್ನ ಯಾವ ಅನುಭವದ ಬಗ್ಗೆಯೂ ಹೇಳಲಾರ. ಆ ಅನುಭವ ಅತ್ಯಂತ ಶುದ್ಧ ಅನುಭವ. ಅದೇ ಅನುಭಾವ. ಅನುಭಾವದಲ್ಲಿ ದೊರೆವ ಆನಂದವೇ ನಿಜವಾದ ಆನಂದ, ಪರಮಾನಂದ. ಅದು ಸ್ವಯಂವೇದ್ಯ ಇಂಥ ಪರಮಾನಂದವನ್ನು ಅನುಭವಿಸುವ ಅನುಭಾವಿ ಅದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡುವುದೆಂದರೆ ಕುರುಡನಿಗೆ ಬಣ್ಣವನ್ನು ಕುರಿತು ಬೋಧಿಸಿದಂತೆ ನಿರರ್ಥಕ. ಆದರೆ ಅನುಭಾವಿಗಳ ಸಂಗ, ಸಾನ್ನಿಧ್ಯ ನಮಗೆ ಸುಖ, ಶಾಂತಿ ಸಮಾಧಾನ ಹಾಗು ನೆಮ್ಮದಿಯನ್ನುಂಟು ಮಾಡುತ್ತದೆ. ಅನುಭಾವಿಗಳು ವಿಶ್ವಕುಟುಂಬಿಗಳಾಗಿರುತ್ತಾರೆ. ಮಾನವ ಕಲ್ಯಾಣವೇ ಅವರ ಜೀವನ ಗುರಿಯಾಗಿರುತ್ತದೆ.

Related Posts